ಬೆಳಕಿನೆಡೆಗೆ- 2
-ಡಾ.ಡಿ.ಶೀಲಾಕುಮಾರಿ
ಫಾದರ್ ಆಂಥೋನಿ ಡಿ.ಮೆಲ್ಲೋ ಎಸ್.ಜೆ. ಜಗತ್ತಿನ ಎಲ್ಲ ಆಕರಗಳಿಂದ ಪ್ರಸಿದ್ಧವಾಗಿರುವ ಸಣ್ಣ-ಸಣ್ಣ ಕಥೆಗಳನ್ನು ಸ್ವೀಕರಿಸಿ, ತಮ್ಮ ಕಥೆಗಳೊಂದಿಗೆ ಮೇಳೈಸಿ, ತಮ್ಮದೇ ಅದ ವಿಶಿಷ್ಟ ಶೈಲಿಯಲ್ಲಿ ಸರಳವಾಗಿ, ಅಷ್ಟೇ ಅರ್ಥಗರ್ಭಿತವಾಗಿ ಅನೇಕ ಆಂಗ್ಲ ಕೃತಿಗಳನ್ನು ನೀಡಿದ್ದಾರೆ. ಸರ್ವಧರ್ಮಸಮನ್ವಯಕಾರರಾದ ಫಾದರ್ರವರು ಸಾಧನಾಮಾರ್ಗನಿರತರೂ, ಸನ್ಮಾರ್ಗ ಪ್ರವರ್ತಕರೂ, ಶ್ರೇಷ್ಠ ಮಾನವತಾವಾದಿಯೂ ಆಗಿದ್ದವರು. ಝೆನ್ ಮಾದರಿಯ ಕತೆಗಳನ್ನು ಹೋಲುವ ಈ ಚುಟುಕುಗಳು ಮೊದಲ ಓದಿಗೆ ಮನರಂಜನೆಯೆಂದು ತೋರಿದರೂ, ಆಲೋಚಿಸಿದಷ್ಟೂ ಅರ್ಥಗಳನ್ನು ಕೊಡುತ್ತವೆ. ಅವು ಧ್ವನಿಸುವ ವಿಚಾರಗಳು ನಿಮ್ಮ ಗ್ರಹಿಕೆಗೆ ಬಿಟ್ಟದ್ದು.
ಅವುಗಳಲ್ಲಿ ಕೆಲವನ್ನು ಬಯಲು ಓದುಗರಿಗಾಗಿ ಕನ್ನಡಿಸಿ ಕೊಟ್ಟಿದ್ದಾರೆ ಮೈಸೂರಿನ ಡಾ.ಡಿ.ಶೀಲಾಕುಮಾರಿಯವರು.
ತಂತಿ ಬೇಲಿ
ಯುವ ವಿಜ್ಞಾನಿಯು ಗುರುವಿನೆದುರು ಆಧುನಿಕ ವಿಜ್ಞಾನದ ಸಾಧನೆಗಳ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದನು. ‘ನಾವು ಹಕ್ಕಿಗಳ ಹಾಗೆಯೇ ಹಾರಬಲ್ಲೆವು. ಹಕ್ಕಿಗಳು ಮಾಡುವ ಹಾಗೆ ಮಾಡಬಲ್ಲೆವು!’
‘ಚೂಪಾದ ತಂತಿ ಬೇಲಿಯ ಮೇಲೆ ಕೂರುವುದನ್ನು ಬಿಟ್ಟು’, ಗುರು ನುಡಿದನು.
ಮಾರುಕಟ್ಟೆಯಲ್ಲಿ ಸಾಕ್ರಟೀಸ್
ವಿವೇಕಿಯು ಸಹಜವಾಗಿಯೇ ಮಿತವ್ಯಯದ ಜೀವನವನ್ನು ನಡೆಸುತ್ತಾನೆ ಎಂದು ನಂಬಿದ್ದ ಸಾಕ್ರಟೀಸ್ ನಿಜವಾದ ತತ್ತ್ವಜ್ಞಾನಿ. ಅವನು ಸ್ವತಃ ಪಾದರಕ್ಷೆಗಳನ್ನೂ ಧರಿಸುತ್ತಿರಲಿಲ್ಲ; ಆದರೆ ಮಾರುಕಟ್ಟೆಯ ಆಕರ್ಷಣೆಗೆ ಒಳಗಾಗಿ ಅಲ್ಲಿ ಪ್ರದರ್ಶನಕ್ಕಿಟ್ಟಿದ್ದ ಎಲ್ಲ ಪದಾರ್ಥಗಳನ್ನು ಕಾಣಲು ಆಗಾಗ್ಗೆ ತಪ್ಪದೆ ಹೋಗುತ್ತಿದ್ದ.ಅದೇಕೆ ಹೋಗುತ್ತೀಯೆಂದು ಸಾಕ್ರಟೀಸನ ಗೆಳೆಯನೊಬ್ಬನೊಬ್ಬ ಕೇಳಿದನು. ಆಗ ಸಾಕ್ರಟೀಸ್, ‘ಎಷ್ಟು ವಸ್ತುಗಳಿಲ್ಲದೆ ನಾನು ಸಂಪೂರ್ಣವಾಗಿ ಸಂತೋಷವಾಗಿರಬಲ್ಲೆ ಎನ್ನುವುದನ್ನು ಅರಿಯಲು ಅಲ್ಲಿಗೆ ಹೋಗಲು ಇಚ್ಛಿಸುತ್ತೇನೆ’ ಎಂದ.
ಅಧ್ಯಾತ್ಮಿಕತೆ ಎಂದರೆ-
ನಿನಗೇನು ಬೇಕೆಂದು ತಿಳಿಯುವುದಲ್ಲ,
ಏನು ಬೇಕಿಲ್ಲವೆಂದು ಅರ್ಥೈಸುವುದು.
ಪ್ರಾರ್ಥನೆಯ ಪ್ರದರ್ಶನ
ಒಂದು ದಿನ ಬಸ್ರಾದ ಹಸನ್ ನದಿಯ ಬಳಿ ರಬಿಯ ಅಲ್ ಅದಾವಿಯಾಳನ್ನು ಕಂಡನು. ತನ್ನ ಪ್ರಾರ್ಥನಾ ಚಾಪೆಯನ್ನು ನೀರಿನ ಮೇಲೆ ಹಾಸಿ, ಅದರಲ್ಲಿ ಹೆಜ್ಜೆಯಿಡುತ್ತಾ, ‘ಓ ರಬಿಯಾ, ಬಾ, ನಾವು ಒಟ್ಟಾಗಿ ಪ್ರಾರ್ಥಿಸೋಣ’ ಎಂದನು.
ರಬಿಯಾ, ‘ಓ ಹಸನ್, ಈ ಜಗತ್ತಿನ ಸಂತೆಯಲ್ಲಿ ಮಾರಾಟಗಾರನಂತೆ ಏಕೆ ಪ್ರದರ್ಶನದಲ್ಲಿ ತೊಡಗಿರುವೆ? ನಿನ್ನ ದೌರ್ಬಲ್ಯದಿಂದ ನೀನು ಹೀಗೆ ಮಾಡುತ್ತಿರುವೆ’, ಎಂದಳು.
ಹಾಗೆ ಹೇಳುತ್ತಾ ತನ್ನ ಪ್ರಾರ್ಥನಾ ಚಾಪೆಯನ್ನು ಗಾಳಿಗೆಸೆದು, ಹಾರಿ ಅದರ ಮೇಲೆ ಕುಳಿತು, ‘ಹಸನ್, ಇಲ್ಲಿ ಹತ್ತಿ ಬಾ. ಇದರಿಂದ ಜನ ನಮ್ಮನ್ನು ನೋಡಬಹುದು’ ಎಂದಳು.
ಆದರೆ ಅದು ಹಸನ್‍ನ ಸಾಧನೆಗಿಂತ ಮಿಗಿಲಾಗಿತ್ತು. ಆದ್ದರಿಂದ ಅವನು ಮೌನಿಯಾದನು. ಅವನ ಹೃದಯವನ್ನು ಗೆಲ್ಲಲು ಬಯಸಿ ರಬಿಯಾ ಹೇಳಿದಳು, ‘ಓ ಹಸನ್, ನೀನು ಮಾಡಿದ್ದನ್ನು ಒಂದು ಮೀನು ಮಾಡಬಲ್ಲದು. ನಾನು ಮಾಡಿದ್ದನ್ನು ಒಂದು ನೊಣ ಮಾಡಬಲ್ಲದು. ನಿಜವಾದ ಸಾಧನೆ ಇವೆರಡನ್ನು ಮೀರಿದ್ದು ಮತ್ತು ನಾವು ಅದರಲ್ಲಿ ತೊಡಗಿಕೊಳ್ಳಬೇಕಾಗಿದೆ.’
ಅದೇ ಧರ್ಮ
ಒಬ್ಬ ಅಮೆರಿಕನ್ ಧರ್ಮಬೋಧಕನು ಬೀಜಿಂಗ್‍ನ ರೆಸ್ಟೊರೆಂಟಿನಲ್ಲಿ ಒಬ್ಬ ಪರಿಚಾರಕನಿಗೆ ‘ಚೀನೀಯರಿಗೆ ಧರ್ಮ ಯಾವುದು?’ ಎಂದು ಕೇಳಿದನು.
ಪರಿಚಾರಕನು ಅವನನ್ನು ಉಪ್ಪರಿಗೆಗೆ ಕರೆದೊಯ್ದು ಕೇಳಿದನು, ‘ಸರ್, ನಿಮಗೇನು ಕಾಣುತ್ತಿದೆ?’
‘ರಸ್ತೆ, ಮನೆಗಳು, ಓಡಾಡುವ ಜನ, ರಭಸದಿಂದ ಹೋಗುವ ಬಸ್‍ಗಳು ಮತ್ತು ಟ್ಯಾಕ್ಸಿಗಳು ಕಾಣುತ್ತಿವೆ.’
‘ಮತ್ತಿನ್ನೇನು?’
‘ಮರಗಳು.’
‘ಮತ್ತಿನ್ನೇನು?’
‘ಗಾಳಿ ಬೀಸುತ್ತಿದೆ.’
ಚೀನಿಯು ತನ್ನ ತೋಳುಗಳನ್ನು ಅಗಲಿಸಿ ಉದ್ಗರಿಸಿದನು, ‘ಸರ್, ಅದೇ ಧರ್ಮ!’
ತೆರೆದ ಕಂಗಳ ಮನುಜನು
ದೃಷ್ಟಿಗೆ ತಡಕಾಡುವ ರೀತಿಯಲಿ
ನೀನದನು ಹುಡುಕುತ್ತಿರುವೆ!
ಅದು ಎಷ್ಟು ಸ್ಪಷ್ಟವಾಗಿದೆಯೆಂದರೆ
ಅದನು ಕಾಣುವುದೇ ಕಠಿಣ.
ತಾವೋ ಪಡೆಯುವುದು ಹೇಗೆ?
ಶಿಷ್ಯ: ‘ತಾವೋ’ ಯಾವುದು?
ಗುರು: ಎಲ್ಲವೂ ‘ತಾವೋ.’
ಶಿಷ್ಯ: ಅದನ್ನು ನಾನು ಹೇಗೆ ಪಡೆಯಬಲ್ಲೆ?
ಗುರು : ನೀನು ಅದನ್ನು ಪಡೆಯಲು ಪ್ರಯತ್ನಿಸಿದರೆ, ಅದನ್ನು ಕಳೆದುಕೊಳ್ಳುವೆ.
ಸಹಜವಾಗಿರಲು ಯತ್ನಿಸುವವರು ಅಥವಾ
ಹಾಗೆ ಯತ್ನಿಸದಿರಲು ಯತ್ನಿಸುವವರು;
ಇವರಾರೂ ಎಂದಿಗೂ ಸಹಜವಾಗಿರುವುದಿಲ್ಲ!
ವೃದ್ಧೆಯ ಕೋಪ
ಚೀನಾದಲ್ಲಿ ಒಬ್ಬ ಮಹಿಳೆ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಒಬ್ಬ ಭಿಕ್ಷುವನ್ನು ಪೋಷಿಸುತ್ತಿದ್ದಳು. ಅವನಿಗಾಗಿ ಸಣ್ಣ ಗುಡಿಸಿಲನ್ನು ಕಟ್ಟಿಸಿ, ಆಹಾರ ನೀಡುತ್ತಿದ್ದಳು. ಅವನು ತನ್ನೆಲ್ಲ ಸಮಯವನ್ನು ಧ್ಯಾನಕ್ಕಾಗಿ ಮುಡಿಪಾಗಿಟ್ಟಿದ್ದನು.
ಈ ಅವಧಿಯ ಕೊನೆಯಲ್ಲಿ ಅವನು ಎಷ್ಟು ಉನ್ನತಿ ಸಾಧಿಸಿರುವನೆಂಬ ಬಗ್ಗೆ ಅವಳಿಗೆ ಕುತೂಹಲವಾಯಿತು. ಕಾಮುಕಿಯೊಬ್ಬಳ ಸಹಾಯದಿಂದ ಅವನನ್ನು ಪರೀಕ್ಷಿಸಲು ನಿರ್ಧರಿಸಿದಳು. ಅವಳಿಗೆ, “ಗುಡಿಸಿಲಿನೊಳಗೆ ಹೋಗಿ ಅವನನ್ನು ಆಲಂಗಿಸಿಕೋ. ಬಳಿಕ ‘ಈಗೇನು ಮಾಡಲಿ?’ ಎಂದು ಕೇಳು” ಎಂದು ಹೇಳಿಕೊಟ್ಟಳು. ಹುಡುಗಿಯು ರಾತ್ರಿಯಲ್ಲಿ ಧ್ಯಾನಮಗ್ನನಾಗಿದ್ದ ಭಿಕ್ಷುವನ್ನು ಕರೆದಳು. ಕೂಡಲೇ ಅವನನ್ನು ಮುದ್ದಿಸಿ ‘ಈಗ ನಾವೇನು ಮಾಡಹೊರಟಿದ್ದೇವೆ?’ ಎಂದಳು. ಈ ಉದ್ಧಟತನಕ್ಕೆ ಭಿಕ್ಷುವು ನಖಶಿಖಾಂತ ಕೋಪಗೊಂಡನು. ಪೊರಕೆಯನ್ನು ತೆಗೆದುಕೊಂಡು ಹುಡುಗಿಯನ್ನು ಗುಡಿಸಿಲಿನಿಂದ ಹೊರತಳ್ಳಿದನು.
ಅವಳು ಹಿಂದಿರುಗಿ ನಡೆದುದನ್ನು ವರದಿ ಮಾಡಿದಾಗ ವೃದ್ಧೆಯು ಕೋಪದಿಂದ, ‘ಆ ವ್ಯಕ್ತಿಗೆ ಇಪ್ಪತ್ತು ವರ್ಷಗಳ ಕಾಲ ಊಟ ಹಾಕಿದೆನೆಂದು ಯೋಚಿಸಿದರೆ ವ್ಯಥೆಯಾಗುತ್ತದೆ. ಅವನು ನಿನ್ನ ಅಗತ್ಯವನ್ನು ಅರ್ಥಮಾಡಿಕೊಳ್ಳುವುದಾಗಲೀ, ನಿನಗೆ ಸರಿದಾರಿ ತೋರುವುದಾಗಲೀ ಮಾಡಲಿಲ್ಲ. ಅವನು ನಿನ್ನ ಕಾಮುಕತೆಗೆ ಬಲಿಯಾಗಬೇಕಿರಲಿಲ್ಲ. ಆದರೆ ಇಷ್ಟೆಲ್ಲ ವರ್ಷಗಳ ಪ್ರಾರ್ಥನೆಯ ಬಳಿಕ ಸ್ವಲ್ಪವಾದರೂ ಅನುಕಂಪವನ್ನು ಬೆಳೆಸಿಕೊಳ್ಳಬೇಕಿತ್ತು.’ ಎಂದು ಉದ್ಗರಿಸಿದಳು.
ಪವಿತ್ರ ಮಂತ್ರದ ಪುನರಾವರ್ತನೆ
ಭಕ್ತನು ಶಿಷ್ಯತ್ವಕ್ಕಾಗಿ ಹಂಬಲಿಸಿ ಮಂಡಿಯೂರಿ ಕುಳಿತಿದ್ದನು. ಗುರುವು ಪವಿತ್ರ ಮಂತ್ರವನ್ನು ಅವನ ಕಿವಿಯಲ್ಲಿ ಉಸುರಿ, ಅದನ್ನು ಯಾರಿಗೂ ಬಹಿರಂಗಪಡಿಸಬಾರದೆಂದು ಎಚ್ಚರಿಸಿದನು.
‘ಹಾಗೆ ಮಾಡಿದರೆ ಏನಾಗುವುದು?’ ಭಕ್ತನು ಕೇಳಿದನು.
‘ನೀನು ಮಂತ್ರವನ್ನು ಯಾರಿಗೆ ಬಹಿರಂಗಪಡಿಸುವೆಯೋ, ಅವನು ಅಜ್ಞಾನ ಮತ್ತು ದುಃಖಗಳ ಬಂಧನದಿಂದ ಮುಕ್ತಿ ಹೊಂದುವನು. ಆದರೆ ನೀನಾದರೋ ಶಿಷ್ಯತ್ವವನ್ನು ಕಳೆದುಕೊಳ್ಳುವೆ ಮತ್ತು ನಿತ್ಯನರಕವಾಸದಿಂದ ನರಳುವೆ’ ಎಂದ ಗುರು.
ಆ ಮಾತುಗಳನ್ನು ಕೇಳಿದ ಕ್ಷಣವೇ ಭಕ್ತನು ಮಾರುಕಟ್ಟೆಗೆ ಧಾವಿಸಿದನು. ತನ್ನ ಸುತ್ತಲೂ ದೊಡ್ಡ ಗುಂಪನ್ನು ಸೇರಿಸಿ ಪವಿತ್ರ ಮಂತ್ರವನ್ನು ಎಲ್ಲರೂ ಕೇಳುವಂತೆ ಜೋರಾಗಿ ಉಚ್ಚರಿಸಿದನು.
ಅನಂತರ ಶಿಷ್ಯರು ಗುರುವಿಗೆ ಇದನ್ನು ವರದಿ ಮಾಡಿದರು. ಅವನ ಅವಿಧೇಯತೆಗಾಗಿ ಅವನನ್ನು ಗುರುಕುಲದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದರು.
ಮುಗುಳ್ನಕ್ಕ ಗುರುವು ಹೇಳಿದನು, ‘ನಾನು ಬೋಧಿಸಬಲ್ಲ ಯಾವುದೂ ಅವನಿಗೆ ಅಗತ್ಯವಿಲ್ಲ. ಅವನೀಗ ಸ್ವತಂತ್ರವಾಗಿ ಗುರುವಾಗಬಲ್ಲ ಎಂದು ಅವನ ಈ ಕೆಲಸ ಸಾಬೀತುಪಡಿಸಿದೆ.’
ಮಧ್ಯಮಮಾರ್ಗ
ಬುದ್ಧನು ಮೊದಲು ತನ್ನ ಅಧ್ಯಾತ್ಮಿಕ ಶೋಧನೆ ಕೈಗೊಂಡಾಗ ಅನೇಕ ವ್ರತಗಳನ್ನು ಪಾಲಿಸುತ್ತಿದ್ದನು. ಒಂದು ದಿನ ಅವನು ಮರದ ಕೆಳಗೆ ಧ್ಯಾನಿಸುತ್ತಾ ಕುಳಿತಿದ್ದಾಗ, ಇಬ್ಬರು ಸಂಗೀತಗಾರರು ಹಾದು ಹೋಗುತ್ತಿದ್ದರು. ಒಬ್ಬನು ಮತ್ತೊಬ್ಬನಿಗೆ, ‘ನಿನ್ನ ಸಿತಾರಿನ ತಂತಿಗಳನ್ನು ತುಂಬಾ ಬಿಗಿ ಮಾಡಬೇಡ. ಅದರಿಂದ ಅವು ತುಂಡಾಗುತ್ತವೆ. ಅವುಗಳನ್ನು ತುಂಬಾ ಸಡಿಲ ಮಾಡಬೇಡ. ಆಗ ಅವುಗಳಿಂದ ಸರಿಯಾದ ನಾದವೇ ಹೊಮ್ಮುವುದಿಲ್ಲ. ಮಧ್ಯದ ಮಾರ್ಗದಲ್ಲಿಡು’ ಎಂದು ಹೇಳುತ್ತಿದ್ದನು.
ಆ ಮಾತುಗಳು ಬುದ್ಧನ ಮೇಲೆ ಅದೆಷ್ಟು ಪ್ರಭಾವ ಬೀರಿದವು ಎಂದರೆ ಅವು ಅವನ ಅಧ್ಯಾತ್ಮದ ಹಾದಿಯನ್ನು ಆಮೂಲಾಗ್ರವಾಗಿ ಬದಲಾಯಿಸಿದವು. ಅವರು ಅವನಿಗಾಗಿಯೇ ಆ ಮಾತುಗಳನ್ನಾಡಿದರು ಎಂದು ನಂಬಿದನು. ಆ ಕ್ಷಣದಿಂದ ಅವನು ತನ್ನ ಎಲ್ಲ ಕಠೋರ ವ್ರತಗಳನ್ನು ತ್ಯಜಿಸಿದನು. ಸುಲಭ ಹಾಗೂ ಸರಳವಾದ ಮಧ್ಯಸ್ಥ ಮಾರ್ಗವನ್ನು ಅನುಸರಿಸಲು ಪ್ರಾರಂಭಿಸಿದನು. ನಿಜಕ್ಕೂ ಜ್ಞಾನೋದಯದ ಅವನ ಮಾರ್ಗವು ‘ಮಧ್ಯಮಮಾರ್ಗ’ ಎಂದು ಹೆಸರಾಗಿದೆ.
ಪರ್ವತದ ಶಿಖರದಲ್ಲಿ ನಕ್ಷತ್ರ
ಹಿಂದೆ ಒಬ್ಬ ಆಸ್ತಿಕನಿದ್ದನು. ಅವನು ಹಗಲಿನಲ್ಲಿ ಆಹಾರವನ್ನಾಗಲೀ, ಪಾನೀಯವನ್ನಾಗಲೀ ತುಟಿಗೂ ಸೋಕಿಸುತ್ತಿರಲಿಲ್ಲ. ಅವನ ನೇಮನಿಷ್ಠೆಗೆ ದೈವದ ಒಪ್ಪಿಗೆಯಿದೆಯೆಂಬಂತೆ ಸಮೀಪದಲ್ಲಿದ್ದ ಪರ್ವತದ ಶಿಖರದ ಮೇಲೆ ಒಂದು ಮಿನುಗುವ ನಕ್ಷತ್ರ ಕಂಗೊಳಿಸಿತು. ಅದು ದಿನದ ಪ್ರಖರ ಬೆಳಕಿನಲ್ಲಿಯೂ ಎಲ್ಲರಿಗೂ ಕಾಣುತ್ತಿತ್ತು. ನಕ್ಷತ್ರವು ಅಲ್ಲಿಗೆ ಹೇಗೆ ಬಂದಿತೆಂಬುದು ಮಾತ್ರ ಯಾರಿಗೂ ತಿಳಿಯಲಿಲ್ಲ.
ಒಂದು ದಿನ ಅವನು ಪರ್ವತವನ್ನು ಏರಲು ನಿರ್ಧರಿಸಿದನು. ಹಳ್ಳಿಯ ಚಿಕ್ಕ ಹುಡುಗಿ ತಾನೂ ಅವನೊಂದಿಗೆ ಬರುತ್ತೇನೆಂದು ಹಠ ಹಿಡಿದಳು. ಆ ದಿನ ತುಂಬ ಬಿಸಿಲಿದ್ದು, ಅವರಿಬ್ಬರಿಗೆ ಬೇಗನೆ ಬಾಯಾರಿತು. ಅವನು ಬಾಲಕಿಗೆ ನೀರು ಕುಡಿಯಲು ಒತ್ತಾಯಿಸಿದನು. ಆದರೆ ಅವನು ಕುಡಿಯುವವರೆಗೂ ತಾನೂ ಒಲ್ಲೆನೆಂದು ಅವಳು ಹೇಳಿದಳು. ಬಡಪಾಯಿಗೆ ಇಕ್ಕಟ್ಟಾಯಿತು. ಅವನು ತನ್ನ ಉಪವಾಸವನ್ನು ನಿಲ್ಲಿಸುವುದಕ್ಕೆ ಹಿಂಜರಿದನು; ಆದರೆ ಮಗು ಬಾಯಾರಿಕೆಯಿಂದ ಬಳಲುವುದನ್ನು ನೋಡಲು ಹಿಂದೇಟು ಹಾಕಿದನು. ಕೊನೆಗೆ, ಅವನು ಕುಡಿದನು, ಜೊತೆಗೆ ಹುಡುಗಿಯೂ.
ನಕ್ಷತ್ರ ಕಾಣೆಯಾಗಿರಬಹುದೆಂಬ ಭಯದಿಂದ ಅವನಿಗೆ ಆಕಾಶದತ್ತ ನೋಡಲು ಧೈರ್ಯ ಬರಲಿಲ್ಲ. ಕೆಲ ಸಮಯದ ಬಳಿಕ ತಲೆ ಎತ್ತಿದಾಗ, ಪರ್ವತದ ಮೇಲೆ ಎರಡು ನಕ್ಷತ್ರಗಳು ಹೊಳೆಯುತ್ತಿದ್ದುದ ಕಂಡು ಅವನಿಗಾದ ಆಶ್ಚರ್ಯ ಊಹಿಸಿ.
ಆಹಾರವಿಷದ ಕಲ್ಪನೆ
ಮನುಷ್ಯರು ತಮ್ಮ ತಲೆಯಲ್ಲಿನ ಕಲ್ಪನೆಗಳಿಗೆ ಸ್ಪಂದಿಸುತ್ತಾರೇ ಹೊರತು ವಾಸ್ತವಕ್ಕಲ್ಲ…
ಪ್ರವಾಸಿಗಳ ಒಂದು ಗುಂಪು ಹಳ್ಳಿಗಾಡಿನಲ್ಲಿ ಸಿಕ್ಕಿಹಾಕಿಕೊಂಡಿತು. ಅಲ್ಲಿ ಅವರಿಗೆ ತಿನ್ನಲು ಹಳಸಲಾದ ಆಹಾರ ಪದಾರ್ಥಗಳನ್ನು ಕೊಡಲಾಯಿತು. ತಿನ್ನುವ ಮೊದಲು ಅವರು ಒಂದು ಭಾಗವನ್ನು ಒಂದು ನಾಯಿಗೆ ಹಾಕಿ, ಪರೀಕ್ಷಿಸಿದರು. ಅದು ತಿಂದು ಸಂತೋಷಪಟ್ಟಂತೆ ಭಾಸವಾಯಿತು. ಅದು ಮತ್ತಾವ ಅನಂತರದ ಅಡ್ಡಪರಿಣಾಮಗಳಿಂದ ನರಳಲಿಲ್ಲ. ಮಾರನೇ ದಿನ ನಾಯಿ ಸತ್ತುಹೋದ ಬಗ್ಗೆ ಅವರಿಗೆ ತಿಳಿಯಿತು. ಪ್ರತಿಯೊಬ್ಬರೂ ದಿಗಿಲು ಬಿದ್ದರು. ಕೆಲವರಿಗೆ ವಾಂತಿಯಾಯಿತು, ಕೆಲವರು ಜ್ವರ ಹಾಗೂ ಭೇದಿಯೆಂದು ಗೋಳಾಡಿದರು. ಆಹಾರವಿಷಕ್ಕೆ ಬಲಿಯಾದವರ ಚಿಕಿತ್ಸೆಗಾಗಿ ಒಬ್ಬ ವೈದ್ಯನನ್ನು ಕರೆಸಿದರು.
ನಾಯಿಯ ಶರೀರಕ್ಕೆ ಏನಾಗಿತ್ತೆಂದು ವೈದ್ಯನು ವಿಚಾರಿಸಿದನು. ತನಿಖೆಗಳು ನಡೆದವು. ಆ ಊರಿನವನು ಪ್ರಾಸಂಗಿಕವಾಗಿ ಹೇಳಿದನು, ‘ಓಹ್, ಅದಾ, ಅದರ ಮೇಲೆ ಒಂದು ಕಾರು ಹರಿದುಹೋದ ರಭಸಕ್ಕೆ ಅದು ಚರಂಡಿಗೆ ಬಿದ್ದು ಸತ್ತುಹೋಯಿತು.’
* * *
ಜನರು ತಾವು ಸ್ವತಂತ್ರರು ಮತ್ತು ಜವಾಬ್ದಾರಿಯುತರು ಎಂದು ಹೇಳಿಕೊಳ್ಳಲು ಎಷ್ಟು ಸಂತಸಪಡುವರೆಂದು ಪರೀಕ್ಷಿಸಿ. ಅವರ ಕ್ರಿಯೆಯು ಯಾಂತ್ರಿಕ ಚಲನೆಯೆಂದು ತಿಳಿಯುವ ಅವಕಾಶವಿದೆ…
ಅಲೆಕ್ಸಾಂಡ್ರಿಯಾದ ದೊಡ್ಡ ಗ್ರಂಥಾಲಯವು ಸುಟ್ಟುಹೋದಾಗ, ಒಂದೇ ಒಂದು ಪುಸ್ತಕ ಉಳಿಯಿತೆಂದು ಹೇಳುತ್ತಾರೆ. ಅದು ಅತಿ ಅಸ್ಪಷ್ಟ ಮತ್ತು ನೀರಸ ಪುಸ್ತಕವಾಗಿತ್ತು. ಆದ್ದರಿಂದ ಓದಲು ಮಾತ್ರ ಬರುತ್ತಿದ್ದ ಒಬ್ಬ ಬಡವನಿಗೆ ಅದನ್ನು ಕೆಲವು ಪೆನ್ನಿಗಳಿಗೆ ಮಾರಿದರು.
ಅಸ್ಪಷ್ಟ ಹಾಗೂ ನಿಸ್ಸಾರವಾಗಿ ಕಂಡುಬರುತ್ತಿದ್ದ ಆ ಪುಸ್ತಕವು ಪ್ರಾಯಃ ಜಗತ್ತಿನ ಅತ್ಯಮೂಲ್ಯವಾದ ಪುಸ್ತಕವಾಗಿತ್ತು. ಏಕೆಂದರೆ ಹಿಂಬದಿಯ ರಕ್ಷಾಪುಟದ ಒಳಭಾಗದಲ್ಲಿ ದೊಡ್ಡದಾದ, ದುಂಡಾದ ಅಕ್ಷರಗಳಲ್ಲಿ ಕೆಲವು ವಾಕ್ಯಗಳನ್ನು ಗೀಚಲಾಗಿತ್ತು. ಅದರಲ್ಲಿ ಮುಟ್ಟಿದ್ದೆಲ್ಲವನ್ನೂ ಅಪ್ಪಟ ಚಿನ್ನವನ್ನಾಗಿ ಮಾಡುವ ಪಾರಸಮಣಿಯ ರಹಸ್ಯವಿತ್ತು.
ಆ ಅಮೂಲ್ಯ ಹರಳು ಕಪ್ಪು ಸಮುದ್ರದ ದಂಡೆಯಲ್ಲಿ ಇದೆ ಹಾಗೂ ಅದರಂತೆಯೇ ಇರುವ ಉಳಿದ ಲಕ್ಷಾಂತರ ದುಂಡುಗಲ್ಲುಗಳ ನಡುವೆ ಎಲ್ಲೋ ಅಡಗಿದೆ. ಉಳಿದೆಲ್ಲಾ ಕಲ್ಲು ಹರಳುಗಳು ಮುಟ್ಟಲು ತಣ್ಣಗಿದ್ದರೆ, ಇದೊಂದು ಮಾತ್ರ ಜೀವಂತವಾಗಿದೆಯೋ ಎಂಬಂತೆ ಬೆಚ್ಚಗಿರುವುದು ಎಂದು ಬರಹವು ಹೇಳಿತ್ತು. ಆ ಮನುಷ್ಯನು ತನ್ನ ಅದೃಷ್ಟಕ್ಕಾಗಿ ಸಂತೋಷಪಟ್ಟನು. ತನ್ನಲ್ಲಿದ್ದುದೆಲ್ಲವನ್ನು ಮಾರಿ, ಒಂದು ವರ್ಷಕ್ಕಾಗುವಷ್ಟು ದೊಡ್ಡ ಮೊತ್ತವನ್ನು ಸಾಲ ಮಾಡಿದನು. ಕಪ್ಪು ಸಮುದ್ರಕ್ಕೆ ಹೋಗಿ ಡೇರೆಯನ್ನು ಹಾಕಿಕೊಂಡು ಪಾರಸಮಣಿಯನ್ನು ಹುಡುಕುವ ದುಸ್ಸಾಹಸವನ್ನು ಪ್ರಾರಂಭಿಸಿದನು.
ಅವನು ಅದಕ್ಕಾಗಿ ಹುಡುಕುತ್ತಿದ್ದ ರೀತಿ ಹೀಗಿತ್ತು; ಅವನು ಒಂದು ದುಂಡುಗಲ್ಲನ್ನು ಎತ್ತಿಕೊಂಡು, ಅದು ತಣ್ಣಗಿದ್ದರೆ ಅದನ್ನು ದಡದಲ್ಲಿ ಎಸೆಯುತ್ತಿರಲಿಲ್ಲ. ಹಾಗೆ ಮಾಡಿದರೆ, ಒಂದೇ ದುಂಡುಗಲ್ಲನ್ನು ಹತ್ತಾರು ಬಾರಿ ಎತ್ತಿಕೊಂಡು, ಮುಟ್ಟಬೇಕಾಗುತ್ತಿತ್ತು. ಅದಾಗದು. ಅದಕ್ಕೆ ಅವನು ಅದನ್ನು ಸಮುದ್ರಕ್ಕೆ ಎಸೆಯುತ್ತಿದ್ದನು. ಆದ್ದರಿಂದ ಪ್ರತಿ ದಿನ ಘಂಟೆಗಟ್ಟಲೆ ಅವನು ತನ್ನ ಗುರಿಯತ್ತ ಮುನ್ನಡೆಯುವ ಸಾಹಸವನ್ನು ಸಹನೆಯಿಂದ ಮುಂದುವರೆಸಿದನು. ದುಂಡುಗಲ್ಲನ್ನು ಎತ್ತಿ, ತಣ್ಣಗಿದ್ದರೆ ಸಮುದ್ರಕ್ಕೆ ಎಸೆದು, ಮತ್ತೊಂದನ್ನು ಎತ್ತಿಕೊಂಡು, ಹೀಗೇ…. ಕೊನೆಯಿಲ್ಲದೆ….
ಅವನು ಈ ಕಾರ್ಯದಲ್ಲಿ ಒಂದು ವಾರ, ತಿಂಗಳು, ಹತ್ತು ತಿಂಗಳು, ಇಡೀ ವರ್ಷ ಕಳೆದನು. ಆಮೇಲೆ ಮತ್ತಷ್ಟು ಹಣವನ್ನು ಸಾಲವಾಗಿ ಪಡೆದು, ಇನ್ನೂ ಎರಡು ವರ್ಷಗಳವರೆಗೆ ಬಳಸಿದನು. ಮತ್ತೆ ಮತ್ತೆ ಅವನು ದಂಡೆಗೆ ಹೋಗಿ ಹರಳನ್ನು ಎತ್ತಿ, ಮುಟ್ಟಿ…. ಅದು ತಣ್ಣಗಿರುತ್ತಿತ್ತು, ಸಮುದ್ರಕ್ಕೆ ಎಸೆಯುತ್ತಿದ್ದನು. ಘಂಟೆಗಳು, ದಿನಗಳು, ವಾರಗಳು ಒಂದಾದ ಮೇಲೊಂದು ಉರುಳಿದವು…. ಆದರೆ ಪಾರಸಮಣಿಯಿಲ್ಲ.
ಒಂದು ಸಂಜೆ ಅವನು ಒಂದು ಹರಳನ್ನು ಎತ್ತಿಕೊಂಡನು. ಅದನ್ನು ಮುಟ್ಟಿದಾಗ ಬೆಚ್ಚಗಿತ್ತು. ಕೇವಲ ಅಭ್ಯಾಸ ಬಲದಿಂದ ಅವನು ಅದನ್ನು ಕಪ್ಪು ಸಮುದ್ರಕ್ಕೆ ಎಸೆದನು!
ಪೆಂಡ್ಯುಲಮ್‍ನ ನಲಿವು
ವರ್ತಮಾನದಲ್ಲೇ ನೀವು ಸಂಪೂರ್ಣ ಬದುಕುವುದು ಸಾಧ್ಯವಾದಲ್ಲಿ ವರ್ತಮಾನವು ಎಂದೂ ಅಸಹನೀಯವಲ್ಲ. ನಿಮ್ಮ ಶರೀರ ಇಲ್ಲಿ ಬೆಳಿಗ್ಗೆ ಹತ್ತು ಘಂಟೆಗಿದ್ದು ಮತ್ತು ನಿಮ್ಮ ಮನಸ್ಸು ಸಂಜೆ ಆರು ಘಂಟೆಯಲ್ಲಿದ್ದರೆ; ನಿಮ್ಮ ದೇಹ ಮುಂಬಯಿಯಲ್ಲಿ ಮತ್ತು ನಿಮ್ಮ ಮನಸ್ಸು ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಇದ್ದರೆ ಮಾತ್ರ ಅದು ಅಸಹನೀಯವಾಗುವುದು.
ಗಡಿಯಾರದ ಒಡೆಯನು ಗಡಿಯಾರದ ಪೆಂಡ್ಯುಲಮ್ಮನ್ನು ಸರಿಯಾಗಿ ಇಡುತ್ತಿದ್ದನು. ಅವನಿಗೆ ಬೆರಗಾಗುವಂತೆ ಪೆಂಡ್ಯುಲಮ್ ಮಾತಾಡುವುದನ್ನು ಕೇಳಿಸಿಕೊಂಡನು, ‘ಸರ್, ದಯವಿಟ್ಟು ನನ್ನನ್ನು ಒಂಟಿಯಾಗಿ ಬಿಟ್ಟುಬಿಡಿ. ಅದೇ ನೀವು ನನಗೆ ತೋರುವ ದಯೆ. ಹಗಲೂ ರಾತ್ರಿ ನಾನು ಟಿಕ್, ಟಿಕ್ ಎಂದು ಹೇಳುವ ಸಂಖ್ಯೆಯ ಬಗ್ಗೆ ಯೋಚಿಸಿ. ಪ್ರತಿ ನಿಮಿಷಕ್ಕೆ ಎಷ್ಟೋ ಬಾರಿ, ಘಂಟೆಗೆ ಅರವತ್ತು ನಿಮಿಷಗಳು, ದಿನಕ್ಕೆ ಇಪ್ಪತ್ತನಾಲ್ಕು ಘಂಟೆಗಳು. ವರ್ಷಕ್ಕೆ ಮುನ್ನೂರ ಅರವತ್ತೈದು ದಿನಗಳು. ವರ್ಷವಾದ ಮೇಲೊಂದು ವರ್ಷ.. .. ದಶಲಕ್ಷಗಟ್ಟಲೆ ಟಿಕ್‍ಗಳು, ನಾನಿದನ್ನು ಮಾಡಲೇ ಆರೆ,’ ಪೆಂಡ್ಯುಲಮ್ ವಿನಂತಿಸಿತು.
ಆದರೆ ಗಡಿಯಾರದ ಒಡೆಯ ಜಾಣತನದಿಂದ ಉತ್ತರಿಸಿದನು, ‘ಭವಿಷ್ಯದ ಬಗ್ಗೆ ಚಿಂತಿಸಬೇಡ. ಒಂದು ಬಾರಿ ಒಂದೇ ಸಲ ಟಿಕ್ ಅನ್ನು. ನಿನ್ನ ಉಳಿದ ಜೀವನದಲ್ಲಿ ಪ್ರತಿ ಟಿಕ್ ಅನ್ನೂ ನೀನು ಸುಖಿಸುವೆ.’
ಅದನ್ನೇ ಮಾಡಲು ಪೆಂಡ್ಯುಲಮ್ ನಿರ್ಧರಿಸಿತು. ಅದು ಇನ್ನೂ ಟಿಕ್ ಎಂದು ನಲಿಯುತ್ತಿದೆ.
ಗುಲಾಮ ಮಾರುಕಟ್ಟೆಯಲ್ಲಿ ಗುರು
ಗ್ರೀಕ್ ತತ್ತ್ವಜ್ಞಾನಿ ಡಿಯೋಜೆನಿಸ್‍ನನ್ನು ಸೆರೆಹಿಡಿದು ಗುಲಾಮ ಮಾರುಕಟ್ಟೆಯಲ್ಲಿ ಮಾರಲು ತಂದಾಗ, ಅವನು ಹರಾಜು ಕೂಗುವವರ ವೇದಿಕೆಯನ್ನು ಹತ್ತಿ ಹೀಗೆ ಗಟ್ಟಿಯಾಗಿ ಕೂಗಿದನೆಂದು ಹೇಳುತ್ತಾರೆ, ‘ಮಾರಾಟಕ್ಕೆಂದು ಒಬ್ಬ ಗುರುವು ಇಲ್ಲಿಗೆ ಬಂದಿದ್ದಾನೆ. ಅವನನ್ನು ಕೊಳ್ಳಲು ಆಶಿಸುವ ಯಾರಾದರೂ ಗುಲಾಮ ನಿಮ್ಮಲ್ಲಿ ಇದ್ದಾನೆಯೆ?’
ಜ್ಞಾನಿಗಳನ್ನು ಸೇವಕರನ್ನಾಗಿ ಮಾಡುವುದು ಅಸಾಧ್ಯ. ಏಕೆಂದರೆ ಅವರು ಗುಲಾಮಸ್ಥಿತಿಯಲ್ಲಿ ಹಾಗೂ ಸ್ವತಂತ್ರ ಸ್ಥಿತಿಯಲ್ಲಿ ಸಮಾನ ಸುಖಿಗಳಾಗಿರುತ್ತಾರೆ.
ಮೂಳೆಗಳಿಗಿರುವ ವ್ಯತ್ಯಾಸ
ಪ್ಲುಟಾರ್ಕ್ ಈ ಕಥೆಯನ್ನು ಹೇಳಿದನು: ಅಲೆಕ್ಸಾಂಡರ್ ಚಕ್ರವರ್ತಿಯು ಮಾನವ ಮೂಳೆಗಳ ರಾಶಿಯನ್ನು ಲಕ್ಷ್ಯವಿಟ್ಟು ನೋಡುತ್ತಿದ್ದ ಡಿಯೋಜಿನಿಸ್‍ನನ್ನು ಕಂಡನು.
‘ಏನನ್ನು ನೋಡುತ್ತಿರುವೆ?’ ಅಲೆಕ್ಸಾಂಡರ್ ಕೇಳಿದನು.
‘ನನಗೆ ಕಾಣಿಸದೇ ಇರುವುದನ್ನು’ ತತ್ತ್ವಜ್ಞಾನಿ ಹೇಳಿದನು.
‘ಅದೇನು?’
‘ನಿನ್ನ ತಂದೆಯ ಮೂಳೆಗಳಿಗೂ ಅವನ ಗುಲಾಮರ ಮೂಳೆಗಳಿಗೂ ಇರುವ ವ್ಯತ್ಯಾಸ.’
ಕೆಳಗಿನವುಗಳಿಗೆ ವ್ಯತ್ಯಾಸ ಕಾಣಿಸದು- ಕ್ಯಾಥೋಲಿಕ್ ಮೂಳೆಗೂ ಪ್ರೊಟೆಸ್ಟೆಂಟ್ ಮೂಳೆಗೂ, ಹಿಂದೂ ಮೂಳೆಗೂ ಮುಸ್ಲಿಂ ಮೂಳೆಗೂ, ಅರಬ್ ಮೂಳೆಗೂ ಇಸ್ರೇಲಿ ಮೂಳೆಗೂ, ರಷ್ಯನ್ ಮೂಳೆಗೂ ಅಮೇರಿಕನ್ ಮೂಳೆಗೂ.
ಮೂಳೆಗಳು ಮಾಂಸದ ಬಟ್ಟೆ ತೊಟ್ಟಾಗಲೂ ಜ್ಞಾನಿಗೆ ಅವುಗಳ ನಡುವೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ!
ನಿಧಿ ಎಲ್ಲಿದೆ?
ಒಂದು ಹಸಿಡಿಕ್ ಕಥೆ ಹೀಗಿದೆ:
ಒಂದು ರಾತ್ರಿ ಯೆಹೂದಿ ಬೋಧಕ ಐಸಾಕ್‍ಗೆ ದೂರದ ಪ್ರಾಗ್‍ಗೆ ಹೋಗಿ, ರಾಜನ ಅರಮನೆಗೆ ದಾರಿ ತೋರುವ ಸೇತುವೆಯ ಕೆಳಗೆ ಹುದುಗಿರುವ ನಿಧಿಗಾಗಿ ಅಗೆಯಬೇಕೆಂಬ ಕನಸು ಬಿತ್ತು. ಅವನು ಕನಸನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಅದೇ ಕನಸು ಐದಾರು ಬಾರಿ ಕಾಣಿಸಿಕೊಂಡಾಗ, ನಿಧಿ ಹುಡುಕಲು ಹೋಗಬೇಕೆಂದು ನಿರ್ಧರಿಸಿದನು.
ಅವನು ಸೇತುವೆಯ ಬಳಿ ಬಂದಾಗ, ಅವನಿಗೆ ಬೆರಗಾಗುವಂತೆ, ಅದನ್ನು ಹಗಲೂ ರಾತ್ರಿ ಸೈನಿಕರ ಬಿಗಿಪಹರೆ ಕಾಯುತ್ತಿತ್ತು. ಸೇತುವೆಯನ್ನು ದೂರದಿಂದ ನೋಡುವುದಷ್ಟೇ ಅವನಿಗೆ ಸಾಧ್ಯವಾಯಿತು. ಆದರೆ ದಿನಾ ಬೆಳಿಗ್ಗೆ ಹೋಗುತ್ತಿದ್ದರಿಂದ ಒಂದು ದಿನ ಸೈನಿಕರ ಅಧಿಕಾರಿಯು ಅವನು ಏತಕ್ಕಾಗಿ ಬರುತ್ತಿದ್ದಾನೆಂದು ಹತ್ತಿರ ಬಂದು ಕೇಳಿದನು. ತನ್ನ ಕನಸನ್ನು ಇನ್ನೊಬ್ಬರಿಗೆ ಹೇಳಲು ಮುಜುಗರವಾದರೂ ಐಸಾಕ್ ಆ ಕ್ರೈಸ್ತನ ಸಜ್ಜನಿಕೆಗೆ ಮಾರುಹೋಗಿ ಎಲ್ಲವನ್ನು ಹೇಳಿದನು. ಗಹಗಹಿಸಿದ ಅಧಿಕಾರಿ ಹೇಳಿದ, ‘ಅಯ್ಯೋ ದೇವರೇ! ಧರ್ಮಬೋಧಕನಾಗಿ ನೀನು ಕನಸುಗಳನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿದ್ದೀಯಲ್ಲಾ? ನಾನು ನನ್ನ ಕನಸುಗಳಂತೆಯೇ ನಡೆಯುವ ದಡ್ಡನಾಗಿದ್ದರೆ, ಇಂದು ಪೋಲೆಂಡಿನ ಸುತ್ತ ಅಲೆಯುತ್ತಿದ್ದೆ. ನಿನ್ನೆ ರಾತ್ರಿ ಪದೇ ಪದೇ ಬಿದ್ದ ನನ್ನ ಕನಸನ್ನು ಹೇಳುತ್ತೇನೆ ಕೇಳು; ಕ್ರಾಕೋಗೆ ಹೋಗಿ ಎಜಿóಕಿಲ್‍ನ ಮಗ ಐಸಾಕ್‍ನ ಮನೆಯ ಅಡುಗೆಕೋಣೆಯ ಮೂಲೆಯನ್ನು ನಿಧಿಗಾಗಿ ನಾನು ಅಗೆಯಬೇಕೆಂದು ಒಂದು ಧ್ವನಿ ಹೇಳಿತು! ಕ್ರಾಕೋನಲ್ಲಿ ಐಸಾಕ್ ಎಂಬುವವನನ್ನು, ಮತ್ತೊಬ್ಬ ಎಜಿóಕಿಲ್ ಎಂಬುವವನನ್ನು ಹುಡುಕಲು ಸುತ್ತುವುದು ಪ್ರಪಂಚದ ಅತಿ ದೊಡ್ಡ ಮೂರ್ಖತನವಲ್ಲವೇ? ಏಕೆಂದರೆ ಪ್ರಾಯಶಃ ಅಲ್ಲಿನ ಗಂಡಸರ ಅರ್ಧ ಜನಸಂಖ್ಯೆ ಒಂದು ಹೆಸರಲ್ಲೂ, ಇನ್ನರ್ಧ ಇನ್ನೊಂದು ಹೆಸರಲ್ಲೂ ಇದೆ!’
ಬೋಧಕನು ದಿಗ್ಭ್ರಮೆಗೊಂಡನು. ಬುದ್ಧಿವಾದಕ್ಕಾಗಿ ಅಧಿಕಾರಿಗೆ ವಂದಿಸಿ, ಮನೆಗೆ ಆತುರದಿಂದ ಹಿಂದಿರುಗಿದನು. ತನ್ನ ಅಡುಗೆ ಮನೆಯ ಮೂಲೆಯನ್ನು ಅಗೆದನು. ಸಾಯುವವರೆಗೂ ತನ್ನನ್ನು ಸುಖದಲ್ಲಿಡಬಲ್ಲಷ್ಟು ಅಪಾರ ನಿಧಿಯನ್ನು ಪಡೆದನು.
ಅಧ್ಯಾತ್ಮಿಕ ಅನ್ವೇಷಣೆಯು ದೂರವಿರದ ಪ್ರಯಾಣ. ನೀವು ಎಲ್ಲಿರುವಿರೋ ಅಲ್ಲಿಗೇ ಪ್ರಯಾಣ ಮಾಡುತ್ತೀರಿ. ಅಜ್ಞಾನದಿಂದ ಅರಿವಿನತ್ತ, ಏಕೆಂದರೆ ಅಲ್ಲಿ ನೀವು ಯಾವಾಗಲೂ ಏನನ್ನು ನೋಡುತ್ತಿದ್ದಿರೋ, ಅದನ್ನೇ ಮೊದಲ ಬಾರಿಗೆ ನೋಡುತ್ತೀರಿ.
ನಿಮ್ಮನ್ನು ನಿಮ್ಮೆಡೆಗೆ ಒಯ್ಯುವ ದಾರಿ ಯಾವುದೆಂದು ಅಥವಾ ನೀವಿರುವಂತೆಯೇ ನಿಮ್ಮನ್ನು ಮಾಡುವ ವಿಧಾನವಾವುದೆಂದು ಯಾರಾದರೂ ಕೇಳಿದ್ದೀರಾ? ಅಷ್ಟಕ್ಕೂ ಅಧ್ಯಾತ್ಮಿಕತೆಯೆಂದರೆ, ನೀವು ಏನಾಗಿದ್ದೀರೋ ಅದನ್ನೇ ಆಗುವುದಷ್ಟೇ.
ಜ್ಞಾನೋದಯಕ್ಕಾಗಿ ಪರಿತಪನೆ
ಆನಂದನು ಬುದ್ಧನ ಪರಮ ನಿಷ್ಠಾವಂತ ಶಿಷ್ಯನಾಗಿದ್ದನು. ಬುದ್ಧನು ಮರಣ ಹೊಂದಿ ವರ್ಷಗಳಾದ ಮೇಲೆ ಜ್ಞಾನಿಗಳ ಬೃಹತ್ ಸಮಾವೇಶದ ಏರ್ಪಾಡಾಯಿತು. ಶಿಷ್ಯರಲ್ಲಿ ಒಬ್ಬನು ಆನಂದನಿಗೆ ಅದನ್ನು ತಿಳಿಸಲು ಹೋದನು.
ಆ ಸಮಯದಲ್ಲಿ ವರ್ಷಗಟ್ಟಲೆ ಅಪಾರ ಶ್ರಮವಹಿಸಿದ್ದರೂ, ಆನಂದನಿಗೆ ಇನ್ನೂ ಜ್ಞಾನೋದಯವಾಗಿರಲಿಲ್ಲ. ಆದ್ದರಿಂದ ಸಮಾವೇಶದಲ್ಲಿ ಭಾಗವಹಿಸಲು ಅವನಿಗೆ ಅರ್ಹತೆಯಿರಲಿಲ್ಲ.
ಸಮಾವೇಶದ ಹಿಂದಿನ ಸಂಜೆ ಅವನಿಗಿನ್ನೂ ಜ್ಞಾನೋದಯವಾಗಲಿಲ್ಲ. ಆದ್ದರಿಂದ ಅವನು ರಾತ್ರಿಯಿಡೀ ಹುರುಪಿನಿಂದ ಅಭ್ಯಸಿಸಲು, ತನ್ನ ಗುರಿ ಮುಟ್ಟುವವರೆಗೆ ನಿಲ್ಲದಿರಲು ತೀರ್ಮಾನಿಸಿದನು. ಆದರೆ ತಾನು ಬಳಲುವುದರಲ್ಲಿ ಮಾತ್ರ ಅವನು ಸಫಲನಾದನು. ಎಲ್ಲ ಪ್ರಯತ್ನ ಹಾಕಿದರೂ ಅತಿ ಸಣ್ಣ ಪ್ರಗತಿಯನ್ನು ಸಾಧಿಸಲಿಲ್ಲ.
ಆದ್ದರಿಂದ ಮುಂಜಾವಿನಲ್ಲಿ ಅವನು ಇದನ್ನು ಬಿಟ್ಟು, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ನಿಶ್ಚಯಿಸಿದ. ಆ ಸ್ಥಿತಿಯಲ್ಲಿ ಅವನು ಎಲ್ಲ ದುರಾಸೆಯಿರಲಿ, ಜ್ಞಾನೋದಯದ ಆಸೆಯನ್ನು ಕೂಡ ಬಿಟ್ಟನು. ತನ್ನ ತಲೆಯನ್ನು ದಿಂಬಿಗೆ ಒರಗಿಸಿದನು, ಅಷ್ಟೇ, ಥಟ್ಟನೆ ಅವನಿಗೆ ಜ್ಞಾನೋದಯವಾಯಿತು!
ನದಿಯು ಅನ್ವೇಷಕನಿಗೆ ಹೇಳಿತು, ‘ಯಾರಾದರೂ ಜ್ಞಾನೋದಯಕ್ಕಾಗಿ ಪರಿತಪಿಸಬೇಕೇ? ಯಾವ ದಾರಿಯಲ್ಲಿ ನಾನು ತಿರುಗಿದರೂ, ನನ್ನ ಓಟ ಮನೆಯತ್ತಲೇ.’
Comments 10
RAjeshwari Garag
Aug 16, 2023ಓದುತ್ತಾ ಹೋದಂತೆ ಕತೆಗಳು ನಮ್ಮೊಳಗೆ ಅರ್ಥಗಳನ್ನು ಹರಡುತ್ತಾ ಹೋದವು. ಥ್ಯಾಂಕ್ಯೂ ಮೇಡಂ.
Sarvamangala D
Aug 16, 2023ತಾವೋ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ. ತಾವೋ ಪಡೆಯುವುದು ಹೇಗೆ ಎನ್ನುವ ಕತೆ ಮಾರ್ಮಿಕವಾಗಿತ್ತು. ಆನಂದನಿಗಾದ ಜ್ಞಾನೋದಯದ ಸಂದರ್ಭ ಇದನ್ನೇ ಬೇರೊಂದು ದಾರಿಯಲ್ಲಿ ಹೇಳುತ್ತದೆ. ಸುಂದರ ಕತೆಗಳನ್ನು ಅನುವಾದಿಸಿ ಕೊಟ್ಟ ಶೀಲಾಕುಮಾರಿಯವರಿಗೆ ಧನ್ಯವಾದಗಳು.
Vishwanath S
Aug 16, 2023ನಾವು ಹುಡುಕುವ ನಿಧಿ ನಮ್ಮಡಿಯಲ್ಲೇ ಇರುತ್ತದೆ. ಎಲ್ಲೆಲ್ಲೋ ಸುತ್ತಿ, ಅಲೆದು ಮರಳಿ ತನ್ನ ಮನೆಗೇ ಬರುವ ಐಸಾಕನ ಕತೆ ನಮ್ಮ ಕತೆಯೇ ಎನಿಸುತ್ತದೆ. ಸುಂದರ ಪುಟಾಣಿ ಕತೆಗಳಿಗೆ ವಂದನೆಗಳು.
ಚಂದ್ರಮೌಳಿ, ಬಿಲಾವರ್
Aug 19, 2023ಕತೆಗಳು ಸೊಗಸಾಗಿವೆ, ಲೇಖಕರಿಗೂ, ಅನುವಾದಕರಿಗೂ ಥ್ಯಾಂಕ್ಸ್
Rajashekhar S
Aug 22, 2023ಮನುಷ್ಯ ಹಕ್ಕಿಯಂತೆ ಹಾರಬಲ್ಲ ಎಂದು ಎಷ್ಟು ಸುಲಭವಾಗಿ ಜಂಭ ಕೊಚ್ಚಿ ಕೊಳ್ಳುತ್ತಾನೆ, ತಂತಿಯ ಮೇಲೆ ನಿರಾಯಾಸವಾಗಿ ಕೂರಬಲ್ಲನೇ?… thanks for wonderful stories
Jayashree P
Aug 22, 2023ಮನುಷ್ಯನ ಬುದ್ಧಿ, ಹುಡುಕಾಟಗಳು ಯಾವ ಕಾಲಕ್ಕೂ ಒಂದೇ ಆಗಿವೆ ಎನ್ನುವುದನ್ನು ಇಲ್ಲಿನ ಕತೆಗಳು ತೋರಿಸುತ್ತವೆ. They kindle the thoughts to ponder over.
Channabasava Bengaluru
Aug 22, 2023I am extremely inspired with your stories and the layout on the weblog.
ಬಸವರಾಜ ಹಂಡಿ
Aug 25, 2023ಲೇಖನ ಬಹಳ ಅದ್ಬುತವಾಗಿ ಮೂಡಿ ಬಂದಿದೆ.
ಪ್ರತಿಯೊಂದು ಕಥೆ ಓದುಗರಲ್ಲಿ ಒಂದು ಒಳ ನೋಟವನ್ನು ಉಂಟು ಮಾಡುತ್ತದೆ.
ಈ ಕೆಳಗಿನ ವಾಕ್ಯ ನನ್ನ ಮನಸನ್ನು ಬಹಳ ಆವರಿಸಿಕೊಂಡಿತು.
“ಮನುಷ್ಯರು ತಮ್ಮ ತಲೆಯಲ್ಲಿನ ಕಲ್ಪನೆಗಳಿಗೆ ಸ್ಪಂದಿಸುತ್ತಾರೇ ಹೊರತು ವಾಸ್ತವಕ್ಕಲ್ಲ”
ಶೀಲಕುಮಾರಿ ಶರಣಿಯರಿಗೆ ಮತ್ತು ಬಯಲು ತಂಡಕ್ಕೆ ದನ್ಯವಾದಗಳು.
Lakshmi J
Aug 29, 2023ಯಾವುದು ತಾವೋ, ಯಾವುದು ಧರ್ಮ, ಯಾವುದು ಸಾಧನೆ… ಚುಟುಕು ಕತೆಗಳಲ್ಲಿ ಮನಮುಟ್ಟುವಂತ ಸಂದೇಶಗಳಿವೆ.
Sunil D.B
Aug 29, 2023ಭಿಕ್ಕುವಿನ ಸಾಧನೆಯನ್ನು ವಿಶ್ಲೇಷಣೆ ಮಾಡುವ ಆ ಮುದುಕಿಯೇ ನಿಜವಾದ ಸಿದ್ಧಳು. ಪರ್ವತ ಶಿಖರದಲ್ಲಿ ನಕ್ಷತ್ರ ಹೊಳೆಯುವ ಸನ್ನಿವೇಶ ಮನಕಲಕುವಂತಿತ್ತು. “ವರ್ತಮಾನದಲ್ಲೇ ನೀವು ಸಂಪೂರ್ಣ ಬದುಕುವುದು ಸಾಧ್ಯವಾದಲ್ಲಿ ವರ್ತಮಾನವು ಎಂದೂ ಅಸಹನೀಯವಲ್ಲ. “ ಎಂಬ ವಾಸ್ತವ ಸತ್ಯ ತಿಳಿಸುವ ಪೆಂಡ್ಯೂಲಮ್… wonderful stories, good narration.