Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪ್ರಕೃತಿಯೊಂದಿಗೆ ಬಾಳಿದವರು…
Share:
Articles June 14, 2024 Bayalu

ಪ್ರಕೃತಿಯೊಂದಿಗೆ ಬಾಳಿದವರು…

-ಕಾವ್ಯಶ್ರೀ ಮಹಾಗಾಂವಕರ

ಆಧುನಿಕ ಜೀವನ ಶೈಲಿಯನ್ನು ರೂಢಿಸಿಕೊಂಡಿರುವ ನಾವು ಅಂತರಂಗಕ್ಕೆ ಕೆಲವು ಪ್ರಶ್ನೆಗಳನ್ನು ಹಾಕಿಕೊಂಡರೆ ಮನುಷ್ಯ ಮತ್ತು ಪ್ರಕೃತಿ ಎರಡು ಭಿನ್ನ ಆಯಾಮಗಳಾಗಿ ಕಾಣುತ್ತವೆ. ಅವಾಸ್ತವ ಎನಿಸುವ ಇದು ಪ್ರಸ್ತುತ ಬದುಕಿನ ವಾಸ್ತವ ನೆಲೆಯಾಗಿರುವುದು ನಮ್ಮ ಕಾಲದ ಒಂದು ವ್ಯಂಗ್ಯ. ಇದು ವಿಜ್ಞಾನ, ತಂತ್ರಜ್ಞಾನಗಳಿಂದ ಅತ್ಯಂತ ಮುಂದುವರಿದ ಮಾನವನ ಅಭಿವೃದ್ಧಿಗೊಂಡ ಜೀವನದ ದುರಂತವೂ ಹೌದು. ಪ್ರಕೃತಿಯ ತತ್ವಗಳಿಂದಲೇ ಮನುಷ್ಯನ ಸೃಷ್ಟಿಯಾಗಿರುವ ಸತ್ಯವು ಮರೆವಿನಂಚಿಗೆ ಸರಿದು, ಭ್ರಮೆಗೊಳಗಾಗಿದೆ. ಈ ಮರೆವು ಭವಿಷ್ಯದಲ್ಲಿ ಇಡೀ ಮಾನವಕುಲವನ್ನೇ ಸರ್ವನಾಶಗೊಳಿಸುವಲ್ಲಿ ಯಾವ ಸಂಶಯವಿಲ್ಲ. ನಾವು ಬಳಸುತ್ತಿರುವ ವೈಜ್ಞಾನಿಕ, ತಾಂತ್ರಿಕ ಉಪಕರಣಗಳು ನಮ್ಮ ಬದುಕನ್ನು ಇಡಿಯಾಗಿ ಅವರಿಸಿರುವುದರಿಂದ ನಿಸರ್ಗದಿಂದ ವಿಮುಖರಾಗಿದ್ದೇವೆ ಮಾತ್ರವಲ್ಲಾ ನಿಸರ್ಗದ ಸಮತೋಲನಕ್ಕೆ ಕಂಟಕರಾಗಿದ್ದೇವೆ. ಆದ್ದರಿಂದ ಮನುಷ್ಯ ಮತ್ತು ಪ್ರಕೃತಿ ಒಂದೇ ಎನ್ನುವ ನಿಜವನ್ನರಿತು, ಪ್ರಕೃತಿಯೊಂದಿಗಿನ ಸಂಬಂಧವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ತುರ್ತು ಇಂದಿನದು.

‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಲುಬಾರದು’

ಇಂದಿನ ಭೂಮಿಯ ತಾಪಮಾನದ ಹಿನ್ನೆಲೆಯಲ್ಲಿ ಬಸವಣ್ಣನವರ ಈ ವಚನದ ಸಾಲನ್ನು ಗಮನಿಸೋಣ. ಇಂದು ಪ್ರಚಲಿತದಲ್ಲಿರುವ ಪರಿಸರ ಹಾಗೂ ಪ್ರಜ್ಞೆ ಶಬ್ದಗಳು, ವೈಜ್ಞಾನಿಕವಾದ ಹೊಸ ಅನ್ವೇಷಣೆಯಿಂದ ಹುಟ್ಟಿಕೊಂಡವು. ವಿಶ್ವವ್ಯಾಪಿಯಾಗಿ ಹೇಳಲಾಗುವ ‘ಗ್ಲೋಬಲ್ ವಾರ್ಮಿಂಗ್’ (ಜಾಗತಿಕ ತಾಪಮಾನ)ಅನ್ನು ವಿಜ್ಞಾನಿಗಳು ಇವತ್ತು ಸಂಶೋಧನೆಯ ಮೂಲಕ ಕಂಡುಕೊಂಡ ಸತ್ಯ. ಆದರೆ ‘ಪರಿಸರ ವಿಜ್ಞಾನ’ ಮತ್ತು ‘ಪರಿಸರ ಪ್ರಜ್ಞೆ’ ಎಂಬಂತಹ ಇವತ್ತಿನ ಕಾಳಜಿಗಳು ಅಂದು ಹನ್ನೆರಡನೇ ಶತಮಾನದಲ್ಲಿ ಪರಿಸರವೇ ಪ್ರಕೃತಿಯಾಗಿ ಜೀವಿಸಿದ ಶರಣರ ಬದುಕನ್ನು ವ್ಯಾಪಿಸಿಕೊಂಡಿದ್ದವು.
ವಿಜ್ಞಾನಲೋಕದಲ್ಲಿ ಮತ್ತೆ ಮತ್ತೆ ನಡೆಯುತ್ತಿರುವ ಪ್ರಯೋಗಗಳ ಫಲಿತಾಂಶ ನಮ್ಮ ಮುಂದಿದೆ. ಭೂಮಿಯ ವಾತಾವರಣ ಮತ್ತು ಸಸ್ಯ ಜೀವನದ ಮೇಲೆ ಇಂಗಾಲದ ಡೈಆಕ್ಸೈಡ್‌ನ ಹೆಚ್ಚುತ್ತಿರುವ ಸಾಂದ್ರತೆಯ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ಭೂಮಿಯ ಹವಾಮಾನವನ್ನು ಮಾರ್ಪಡಿಸುವಲ್ಲಿ ಹಸಿರುಮನೆ ಅನಿಲಗಳ ಪಾತ್ರದ ಮಹತ್ವವನ್ನು ಜನಜನಿತಗೊಳಿಸಲಾಗಿದೆ. ಜಾಗತಿಕ ತಾಪಮಾನದ ಏರಿಕೆ, ಸರಾಸರಿ ಗಾಳಿಯನ್ನು ಹೆಚ್ಚಿಸುವ ವಿದ್ಯಮಾನ, ಕಳೆದ ಒಂದರಿಂದ ಎರಡು ಶತಮಾನಗಳಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ಭೂಮಿಯ ಹವಾಮಾನವನ್ನು ಅವರು ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ವಿವಿಧ ಹವಾಮಾನ ವಿದ್ಯಮಾನಗಳ (ಉದಾಹರಣೆಗೆ ತಾಪಮಾನ, ಮಳೆ ಮತ್ತು ಬಿರುಗಾಳಿಗಳು) ಮತ್ತು ಸಂಬಂಧಿತ ಪ್ರಭಾವಗಳಿಂದ ವಿವರವಾದ ಅವಲೋಕನಗಳನ್ನು ಸಂಗ್ರಹಿಸಿದ್ದಾರೆ. ಈ ಡೇಟಾ ಭೂಮಿಯ ಹವಾಮಾನವು ಬಹುತೇಕ ಎಲ್ಲಾ ಕಾಲಾವಧಿಯಲ್ಲಿ ಬದಲಾಗಿದೆ ಎಂದು ಸೂಚಿಸುತ್ತದೆ. ಜಾಗತಿಕ ತಾಪಮಾನ ನಿಯಂತ್ರಿಸಲು ಮೂಡಿಸುವ ಅರಿವು ಪರಿಸರ ಪ್ರಜ್ಞೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಪ್ರಕೃತಿ ಸಂರಕ್ಷಣೆಯೇ ಮನುಷ್ಯನಿಗಿರಬೇಕಾದ ಪರಿಸರ ಪ್ರಜ್ಞೆ. ನಿಸರ್ಗದಲ್ಲಿರುವ ಭೂಮಿ, ಆಕಾಶ, ಅಗ್ನಿ, ವಾಯು, ಜಲ ಎಲ್ಲವೂ ಕೂಡಿದ ಒಟ್ಟು ಅಂಶವೇ ಪ್ರಕೃತಿಯಲ್ಲವೇ?

ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಪ್ರಕೃತಿ ಶಬ್ದದ ಹಿನ್ನೆಲೆಯಲ್ಲಿ ಗ್ರಹಿಸುವ ಚಿಕ್ಕ ಪ್ರಯತ್ನ ಈ ಬರಹ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧ ಹೇಳುವ ಅನೇಕ ವಚನಗಳು ಲಭಿಸುತ್ತವೆ. ಅವುಗಳ ವಿಭಿನ್ನ ಆಯಾಮಗಳು ಕಾಣಸಿಗುತ್ತವೆ. ಶರಣರ ಚಿಂತನಾ ಕ್ರಮದಲ್ಲಿ ಪ್ರಜ್ಞೆ ಎನ್ನುವುದು ಮನುಷ್ಯನಲ್ಲಿ ಆಂತರಿಕವಾಗಿ ನಡೆಯುವ ಕ್ರಿಯೆ. ಪ್ರಜ್ಞೆ ಇಲ್ಲಿ ಅಂತರಂಗದ ದನಿ. ಪರಿಸರ- ಮನುಷ್ಯನ ಸುತ್ತಮುತ್ತಲಿನ ಹೊರಲೋಕ. ಜೀವಜಾಲವನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ಬಾಹ್ಯ ಲೋಕ. ಒಂದು ಅಂತರಂಗದ ಅರಿವು ಆದರೆ, ಇನ್ನೊಂದು ಜೀವಲೋಕವನ್ನು ಹೊರಗಿನಿಂದ ಪೊರೆಯುವಂತಹುದು.

ಶರಣರು ತಮ್ಮ ವಚನಗಳಲ್ಲಿ ಪ್ರಮುಖವಾಗಿ ಹೇಳಿದ್ದು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ. ಮನಸ್ಸಿನ ಶುದ್ಧಿ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಬಸವಣ್ಣನವರ ಈ ವಚನದಲ್ಲಿ ಮನುಷ್ಯನ ಆಂತರ್ಯದ ಶುಚಿತ್ವ ಬಾಹ್ಯ ಶುಚಿತ್ವಕ್ಕೆ ದಾರಿಯಾಗುವ ಪರಿಯ ಸೂಕ್ಷ್ಮತೆ ಗಮನೀಯ:

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ.

ಇದೇ ಮಾತನ್ನು ಕೃಷಿ ಕಾಯಕದ ಮುದ್ದಣ್ಣನ ವಚನದಲ್ಲೂ ಕಾಣಬಹುದು.

ಅಂಗವೇ ಭೂಮಿಯಾಗಿ ಲಿಂಗವೇ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಬಲಿದು ಉಂಡು
ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ.

ತನ್ನ ವ್ಯವಸಾಯದ ಕೆಲಸದಲ್ಲಿ ಭೂಮಿಯನ್ನು ಹದಗೊಳಿಸಿದಂತೆ, ಮೊದಲು ದೇಹವನ್ನೂ ಹದಗೊಳಿಸಬೇಕೆನ್ನುವ ಮಾತಿದೆ. ಅಂಗ ಮತ್ತು ಲಿಂಗದ ಸಾಮರಸ್ಯವಿದ್ದರೆ, ಫಲ ಸಿಗುವುದರೊಂದಿಗೆ, ವಿಶ್ವಾಸ ಮೂಡಿ, ಸುಖ ಲಭಿಸುತ್ತದೆನ್ನುವ ತಿಳಿವು ನೀಡುತ್ತಾರೆ ಮುದ್ದಣ್ಣ.

ಹೊತ್ತಾರೆ ಎದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯ
ಎದ್ದೊಂದು ಗಳಿಗೆ ನೆನದೇನ.

ಈ ಭೂಮಿಯನ್ನು ತಾಯಿಯೆಂದು ಆರಾಧಿಸುವ ಜನಪದೀಯರಲ್ಲಿರುವುದು ಪ್ರಕೃತಿ ಭಕ್ತಿ. ಇದನ್ನೇ ನಮ್ಮ ಚೆನ್ನಬಸವಣ್ಣ ಹೀಗೆ ಹೇಳುತ್ತಾರೆ:

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ
ನಾ ನೋಡುತಿಹ ಆಕಾಶದ ಚಂದ್ರಸೂರ್ಯರ
ಭಕ್ತರ ಮಾಡಿದಲ್ಲದೆ ನಾ ನೋಡೆನಯ್ಯಾ
ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ
ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ
ಕೊಳ್ಳೆನು ಕೂಡಲಚೆನ್ನಸಂಗಾ ನಿಮ್ಮಾಣೆ.

ಪ್ರಕೃತಿ ಮನುಷ್ಯನಿಗೆ ಕೊಡುವ ಕೈ, ಉಣಿಸುವ ತಾಯಿ, ಸಲಹುವ ದೈವ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಜೀವನ ಸಾಗಿಸಲು ಬೇಕಾದುದೆಲ್ಲವನ್ನೂ ಪ್ರಕೃತಿಯಿಂದಲೇ ಪಡೆದುಕೊಳ್ಳುತ್ತಾನೆ. ಮೇಲೆ ಉಲ್ಲೇಖಿಸಿದ ಚೆನ್ನಬಸವಣ್ಣನವರ ವಚನದಲ್ಲೂ ಅದೇ ಆಶಯವಿದೆ. ಭೂಮಿ ನೀಡಿ ನೀಡಿ ಭಕ್ತನಾಗಿರುವ ಪರಿಯನ್ನು ಗಮನಿಸಬಹುದು. ಅದರಂತೆಯೇ ನಾವೂ ಭಕ್ತಿ ಭಾವದಿಂದ ಭೂಮಿಯನ್ನು ಕಾಪಿಡಬೇಕು. ಆಕಾಶದಲ್ಲಿರುವ ಸೂರ್ಯ ಚಂದ್ರರು, ಬೇಸಾಯಕ್ಕೆ ಬಳಸುವ ನೀರು, ಬೆಳೆದ ಬೆಳೆ ಕೊಳ್ಳುವ ಬಗೆ, ಎಲ್ಲವನ್ನೂ ಭಕ್ತಿಯಿಂದ ಗೌರವಿಸುವ ಗುಣ ವೇದ್ಯವಾಗುತ್ತದೆ. ಭಕ್ತಿಭಾವ, ಆರಾಧನೆ ಎಂದರೆ ಸಂರಕ್ಷಣೆಯೇ ಅಲ್ಲವೇ? ಇದೇ ಅಂಶವನ್ನು ಅಕ್ಕನ ವಚನದಲ್ಲಿ ವೈಯಕ್ತಿಕ ನೆಲೆಯ ಆಶಯದೊಂದಿಗೆ ಗ್ರಹಿಸಬಹುದು.

ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು
ಗಿಡು ಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಅವು ನೀಡಿದವು ತಮ್ಮ ಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು, ಅವು ನೀಡಿ ಭಕ್ತರಾದವು
ಇನ್ನು ಬೇಡಿದೆನಾದರೆ, ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮಾಣೆ.

ಮನುಷ್ಯನ ದೇಹಕ್ಕೆ ಜೀವಂತವಿರುವ ತನಕ ಹಸಿವು, ನೀರಡಿಕೆ ತಪ್ಪುವುದಿಲ್ಲ. ಹಸಿವಿನ ತಾಪ, ದಾಹ ತಾಳಿಕೊಳ್ಳಲು ಅಸಾಧ್ಯ. ಗಿಡ ಮರಗಳು, ಬೆಳೆ ಫಲಗಳು, ನದಿ- ಕೆರೆಗಳು ಮನುಷ್ಯನನ್ನು ಉಳಿಸುತ್ತವೆ. ಅವು ಭಕ್ತಿಭಾವದಿಂದ ಲಿಂಗಕ್ಕೆಂದು ನೀಡಿ ಭಕ್ತರಾದರೆ, ತಾನು ಬೇಡಿ ಭವಿಯಾದೆನು ಎನ್ನುತ್ತಾಳೆ ಅಕ್ಕ. ಪ್ರಕೃತಿಯಿಂದ ಪಡೆದ ನಾವು ಭವಿ ಎನ್ನುವ ಭಾವನೆ ಅಕ್ಕನಲ್ಲಿದ್ದರೆ, ಜೇಡರ ದಾಸಿಮಯ್ಯ ಸಕಲವೂ ಪ್ರಕೃತಿಗೇ ಅರ್ಪಿತ ಎನ್ನುತ್ತಾರೆ:

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥಾ.

ಅಕ್ಕನ ಭಾವದಲ್ಲಿ ಈ ಪ್ರಕೃತಿಯ ಕಣಕಣವೂ ಜೀವಂತಿಕೆಯಿಂದ ತುಂಬಿದೆ. ಅದಕ್ಕಾಗಿ ತನ್ನ ಚೆನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ ತನ್ನ ಸುತ್ತಮುತ್ತಲು ಆವರಿಸಿರುವ ಇಡೀ ಪ್ರಕೃತಿಯ ಮೊರೆ ಹೋಗುತ್ತಾಳೆ. ವನದಲ್ಲಿರುವ ಪಶು, ಪಕ್ಷಿ, ಗಿಡ, ಮರಗಳನ್ನು ಕರುಳು ಬಗೆದು ನಿವೇದಿಸಿಕೊಳ್ಳುತ್ತಾಳೆ. ಇದು ಮೇಲ್ನೋಟಕ್ಕೆ ಬಾಹ್ಯ ಹುಡುಕಾಟವೆನಿಸಿದರೂ, ಅದರೊಳಗಿನ ಆಂತರಿಕ ಹುಡುಕಾಟವನ್ನೂ ಗಮನಿಸಬಹುದು.

ಅಳಿಸಂಕುಲವೆ ಮಾಮರವೆ
ಬೆಳುದಿಂಗಳೆ ಕೋಗಿಲೆಯೆ
ನಿಮ್ಮನೆಲ್ಲರನೂ ಒಂದ ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ
ಕಂಡಡೆ ಕರೆದು ತೋರಿರೆ.

ಮಧುವಿಗಾಗಿ ಹಾರುತ್ತ, ಝೇಂಕರಿಸುತ್ತ ಸುತ್ತುತ್ತಿರುವ ದುಂಬಿಗಳನು, ಮಾವಿನ ಮರವನು, ಜೀವಜಗತ್ತಿಗೆ ಬೆಳಕು ಕೊಡುವ ಚಂದಿರನನ್ನು, ಮಧುರವಾಗಿ ಹಾಡುವ ಕೋಗಿಲೆಯನು ಅಕ್ಕ ಬೇಡುತ್ತಾಳೆ. ಇದೇ ಭಾವವಿರುವ ಇನ್ನೊಂದು ವಚನದಲ್ಲಿ ನೀವು ಕಾಣಿರೆ? ಎಂದು ಪ್ರತಿ ಸಾಲಿನಲ್ಲೂ ಪುನರುಕ್ತಿಯಾಗಿ ಕೇಳುತ್ತಾಳೆ. ಅಂತ್ಯದಲ್ಲಿ ನೀವು ಹೇಳಿರೇ ಎಂದು ಆಗ್ರಹಿಸುವ ಧಾಟಿ ಅಪ್ಯಾಯಮಾನ.

ಚಿಲಿಮಿಲಿಯೆಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ?
ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ, ನೀವು ಕಾಣಿರೇ?
ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೇ?
ಕೊಳನ ತಡಿಯೊಳಗಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೇ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೇ?
ಚೆನ್ನಮಲ್ಲಿಕಾರ್ಜುನ ಎಲ್ಲಿದ್ದಿಹನೆಂದು ನೀವು ಹೇಳಿರೇ.

ನಮ್ಮ ಮನದ ಇಂಗಿತ ಮತ್ತು ದುಗುಡವನ್ನು ಮನುಷ್ಯರೊಂದಿಗೆ ಹೇಳಿಕೊಂಡರೆ ಸೂಕ್ತ ಸ್ಪಂದನೆ ಸಿಗದೆ ದುರುಪಯೋಗವಾಗುವ ಅಪಾಯವೇ ಹೆಚ್ಚು. ಆದ್ದರಿಂದ ಮನುಷ್ಯರಿಗಿಂತ ಪ್ರಾಣಿ, ಪಕ್ಷಿಗಳು ವಿಶ್ವಾಸಾರ್ಹವು, ಹಾಗೆಯೇ ಪ್ರಕೃತಿ ಹೆಚ್ಚು ಅಪ್ಯಾಯಮಾನವಾಗಿ ಅಕ್ಕನ ಜೊತೆಯಾಗಿದೆ. ಆಕೆಯ ಒಂಟಿ ಪಯಣಕ್ಕೆ ಯಾವುದೇ ರೀತಿಯ ಅಪಾಯ ಪ್ರಕೃತಿಯಿಂದ ಸಂಭವಿಸದೆ, ನೂರೆಂಟು ಕಾಮನೆಗಳಿಂದ ತುಂಬಿದ ಮನುಷ್ಯರಿಂದ ತನ್ನನ್ನು ರಕ್ಷಿಸಿಕೊಳ್ಳಬೇಕಾದ ಸಂದರ್ಭಗಳು ಆಕೆಗೆ ಎದುರಾಗುತ್ತವೆ. ಏಕಾಂಗಿಯಾಗಿ ಹೊರಟ ಅಕ್ಕನಿಗೆ ಪ್ರಕೃತಿಯೇ ಆತ್ಮ ಸಂಗಾತಿ.
ವ್ಯಕ್ತಿ ಅತ್ಯಂತ ಸೂಕ್ಷ್ಮಜೀವಿ, ಭಾವಜೀವಿ, ಪ್ರಕೃತಿ ಪ್ರೇಮಿಯಾಗಿ, ಅಂತಿಮವಾಗಿ ವಾಸ್ತವವಾದಿಯಾದಲ್ಲಿ ಅದ್ಭುತ ಪ್ರತಿಮೆಗಳನ್ನು ಬಳಸಬಹುದು. ಹಾಗೆ ಗಮನಿಸುವಾಗ ಅಲ್ಲಮರ ಈ ವಚನ ಅರ್ಥಪೂರ್ಣ.

ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ?
ಬೆಟ್ಟದ ಮೇಲಣ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರಲಿಂಗಕೆಯೂ ಎಮಗೂ
ಎತ್ತಣಿಂದೆತ್ತ ಸಂಬಂಧವಯ್ಯಾ?

ಮಾವು ಮತ್ತು ಕೋಗಿಲೆ, ನೆಲ್ಲಿಕಾಯಿ ಮತ್ತು ಉಪ್ಪು, ಇವುಗಳ ಸಂಬಂಧ ಹೇಗೆ ಸಹಜವಾಗಿದೆಯೋ ಅಂತೆಯೇ ಗುಹೇಶ್ವರ ಮತ್ತು ನನ್ನ ನಡುವಣ ಸಂಬಂಧ ಎನ್ನುವ ಅಲ್ಲಮರಿಗೆ ಪ್ರಾಕೃತಿಕ ಸಂಬಂಧವೇ ಪಾರಮಾರ್ಥಿಕ ಸಂಬಂಧ. ವಸಂತ ಋತುವಿನಲ್ಲಿ ಬರುವ ಫಲ ಮಾವಿಗೂ, ಕೋಗಿಲೆಯ ಸಂತಸದ ಕುಹೂ ಕುಹೂ ಕೂಗಿಗೂ ಇರುವ ಅವಿನಾಭಾವ ಸಖ್ಯ-ಹಾಗೆಯೇ ಎಲ್ಲೋ ಗುಡ್ಡ, ಬೆಟ್ಟದಲ್ಲಿ ಬೆಳೆಯುವ ನೆಲ್ಲಿಕಾಯಿಗೂ, ಸಮುದ್ರದಲ್ಲಿ ಸಂಸ್ಕರಣೆಗೂ ಮುನ್ನ ಅಡಗಿರುವ ಉಪ್ಪಿಗೂ ಇರುವ ರುಚಿಯ ನಂಟು… ಅದೇ ಮನುಷ್ಯನಿಗೆ ಮತ್ತು ಗುಹೇಶ್ವರನಿಗೆ ಇರುವ ಅವಿನಾಭಾವ ಸಂಬಂಧ. ಅದೇ ಅರಿವಿನ ಪಥ. ಸೃಷ್ಟಿಯ ಆರಂಭದಿಂದಲೂ ಪ್ರಕೃತಿ ತನ್ನ ಕೊಡುಗೆಯನ್ನು ಹೇರಳವಾಗಿ ನೀಡುತ್ತಲೇ ಬಂದಿದೆ. ಅದರೊಳಗಿನ ವಿಸ್ಮಯವನ್ನು ಅಕ್ಕ ಕೌತುಕದಿಂದ ಕಾಣುತ್ತಾಳೆ. ಅದನ್ನೇ ಒಂದೊಂದಾಗಿ ಪ್ರಶ್ನಿಸುತ್ತ ಚೆನ್ನಮಲ್ಲಿಕಾರ್ಜುನನ ಪರಿಯನ್ನು ಕಂಡುಕೊಳ್ಳುತ್ತಾಳೆ.

ಈಳೆ ನಿಂಬೆ ಮಾವು ಮಾದಲಕೆ
ಹುಳಿ ನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿ ನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೇ ನೆಲ ಒಂದೇ ಆಕಾಶ ಒಂದೇ
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು?
ತನ್ನ ಪರಿ ಬೇರೆ!

ಪ್ರಕೃತಿಯಲ್ಲಿ ಅಡಗಿರುವ ರುಚಿಯ ವಿಸ್ಮಯವನ್ನು ಅಕ್ಕನ ವಚನ ಅನಾವರಣ ಮಾಡುತ್ತದೆ. ಆ ಚೆನ್ನಮಲ್ಲಿಕಾರ್ಜುನ ದೇವನೇ ಅಂದರೆ ಪ್ರಕೃತಿ ತತ್ವವೇ ಈ ವಿಶೇಷ, ವಿಭಿನ್ನತೆಗೆ ಕಾರಣ. ಎಲ್ಲವೂ ನೀರು, ಭೂಮಿ, ಆಕಾಶ, ಗಾಳಿ, ಬೆಳಕನ್ನೇ ಅವಲಂಬಿಸಿದ್ದರೂ ವಿವಿಧ ರೂಪದಲ್ಲಿ ಹಣ್ಣು, ಹೂವು ಹೊರಹೊಮ್ಮುವುದು. ಅದೇ ರೀತಿ ಈ ಜಗತ್ತಿನಲ್ಲಿರುವ ಎಲ್ಲಾ ಜೀವ ರಾಶಿಗಳು ಬದುಕು ಸಾಗಿಸುತ್ತಿದ್ದರೂ, ಎಲ್ಲರೂ ಭಿನ್ನ, ವಿಭಿನ್ನವಾಗಿ ತೋರುತ್ತಿದ್ದಾರೆ. ನಿಸರ್ಗದ ವಿಸ್ಮಯ ಅರಿಯುವ ಈ ಪರಿ ಹೃದಯಕ್ಕೆ ಅಮೃತಧಾರೆ ಎರೆದಂತೆ ಭಾಸವಾಗುತ್ತದೆ. ಶರಣ ದಸರಯ್ಯ ತಮ್ಮ ವಚನಗಳಲ್ಲಿ ಮನುಷ್ಯಜೀವಿಯಂತೆ ಪಶು, ಪಕ್ಷಿಗಳೂ ಸೂಕ್ಷ್ಮ ಜೀವಿಗಳು. ಅದೇ ರೀತಿ ಸಸ್ಯಗಳಲ್ಲಿಯೂ ಜೀವವಿದೆಯೆಂಬ ಸತ್ಯವನ್ನು ಹೀಗೆ ಕಂಡಿದ್ದಾರೆ:

ಸರ್ವಮಯ ನಿನ್ನ ಬಿಂದುವಾದಲ್ಲಿ
ಆವುದನಹುದೆಂಬೆ, ಆವುದನಲ್ಲಾಯೆಂಬೆ?
ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ
ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ?
ತರುಲತೆ ಸ್ಥಾವರ ಜೀವಂಗಳೆಲ್ಲಾ
ನಿನ್ನ ಕಾರುಣ್ಯದಿಂದೊಗೆದವು.
ಆರ ಹರಿದು ಇನ್ನಾರಿಗೆ ಅರ್ಪಿಸುವೆ?
ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ
ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.

ಇಲ್ಲಿ ಹಸಿರು ಗಿಡ, ಅವುಗಳ ಎಲೆ, ಅಲ್ಲೇ ಅರಳುವ ಹೂವುಗಳು, ಎಲ್ಲವೂ ಆ ಸೃಷ್ಟಿಯ ಕೃಪೆ. ಅವುಗಳಿಗೂ ಜೀವ ಚೈತನ್ಯವಿರುವುದರಿಂದ ಗಿಡದಿಂದೇ ಕಿತ್ತು ಪಡೆದರೆ ಜೀವಹಾನಿ ಮಾಡಿದಂತೆಯೇ! ಕಾಯುವವನು ತಾನಲ್ಲ, ಕೊಲುವವನು ತಾನಲ್ಲ, ಆದ್ದರಿಂದ ತಾನಾಗಿಯೇ ಉದುರಿದ ಹೂಗಳನ್ನು ಮಾತ್ರ ಪೂಜೆಗೆ ಬಳಸುವುದಾಗಿ ನಿವೇದಿಸಿಕೊಳ್ಳುತ್ತಾರೆ. ಪ್ರಕೃತಿಯೆಡೆಗೆ ಶರಣರು ತೋರಿದ ಅಪಾರ ಕಾಳಜಿ, ಭಕ್ತಿ, ರಕ್ಷಣೆಯ ಪ್ರತೀಕವಾಗಿ ಮೂಡಿ ಬಂದಿವೆ. ಇನ್ನು ಶರಣರು ಪ್ರಕೃತಿ ವಿಕೋಪಗಳನ್ನು ನೋಡುವ ಪರಿ ಕೂಡ ಅನನ್ಯ. ಈ ಸೃಷ್ಟಿ ಸಹಜವಾಗಿ ಎಷ್ಟು ಸುಂದರವಾಗಿ ಕಾಣುತ್ತದೊ, ಅಷ್ಟೇ ಸಹಜವಾಗಿ ಅಲ್ಲೋಲ ಕಲ್ಲೋಲಗಳೂ ಇಲ್ಲಿ ಘಟಿಸುತ್ತವೆ. ಉದಾಹರಣೆಗೆ ಭೂಕಂಪ, ಸುನಾಮಿ, ಅತಿವೃಷ್ಟಿ, ಸುಂಟರಗಾಳಿ ಮುಂತಾದವು. ಇಂತಹ ವಿಕೋಪದ ಸಂದರ್ಭವನ್ನು ಮನುಷ್ಯ ಹೇಗೆ ಧೈರ್ಯದಿಂದ ಎದುರಿಸಬೇಕು ಎನ್ನುವುದನ್ನು ಅಲ್ಲಮಪ್ರಭುಗಳ ಈ ವಚನ ನಿರೂಪಿಸುತ್ತದೆ.

ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು
ಜಗತ್‍ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು.

ಹುಟ್ಟಿನೊಂದಿಗೇ ಹುಟ್ಟುವ ಸಾವನ್ನು ಅಲ್ಲಮರು ಈ ರೀತಿ ವಚನದಲ್ಲಿ ಅನಾವರಣಗೊಳಿಸಿದ್ದಾರೆ. ನಮ್ಮ ಬದುಕಿನಲ್ಲಿ ಕಷ್ಟಗಳು ಯಾವ ರೂಪದಲ್ಲಾದರೂ ಬರಬಹುದು. ಅದನ್ನು ಊಹೆ ಮಾಡಲು ಸಾಧ್ಯವಾಗುವುದಿಲ್ಲ. ಅವು ಮುನ್ಸೂಚನೆ ಇಲ್ಲದೆ ಬಂದು, ಮೈಮೇಲೆ ಎರಗಿ ಬಿಡುತ್ತವೆ. ಆಗ ಆತ್ಮವಿಶ್ವಾಸದಿಂದ ಆಲೋಚಿಸುತ್ತ, ಕೆಂಡದ ಮಳೆಯಾದರೆ, ಸ್ವತಃ ನೀರಾಗಬೇಕು. ಜಲಪ್ರಳಯವಾದರೆ, ವಾಯುವಿನ ಸ್ವರೂಪ ಪಡೆಯಬೇಕು. ಬಿರುಗಾಳಿ ಬೀಸಿದರೆ ಆಕಾಶದಲ್ಲಿ ತೇಲಬೇಕು. ಇಡೀ ಬ್ರಹ್ಮಾಂಡವೇ ಆಪತ್ತಿನಲ್ಲಿದ್ದರೆ ಸಂತೋಷದಿಂದ ತನ್ನ ತಾ ಬಿಟ್ಟು ನಿಸರ್ಗದಲ್ಲಿ ಬೆರೆತು ಬಿಡಬೇಕು. ಇಡೀ ಜಗತ್ತೇ ಪ್ರಳಯದಲ್ಲಿ ತೊಳೆದುಕೊಂಡು ಹೋಗುತ್ತಿದ್ದರೆ, ಮನುಷ್ಯನಾದವನು ಆ ಪರಿಸ್ಥಿತಿಗನುಗುಣವಾಗಿ ತನ್ನ ತಾ ಬಿಡಲು ಹಿಂದೇಟು ಹಾಕಬಾರದು. ಆ ನಿರ್ಧಾರದಲ್ಲಿ ಧೈರ್ಯ ತುಂಬಿರಬೇಕೆ ಹೊರತು ಯಾವುದೇ ಅನುಮಾನ, ವಿಷಾದಗಳಿರಬಾರದು. ಮನುಷ್ಯ ತನ್ನ ಜೀವನದ ನೆಲೆಯನ್ನು ಅರಿವಿನ ಪಥದ ಮೂಲಕ, ಪ್ರಕೃತಿಯ ಸಹಾಯದಿಂದ ಅರಿಯುವ ಪ್ರಯತ್ನ ಮಾಡಿದರೆ, ಆಗ ಬದುಕಿನ ವಿಸ್ಮಯದಲ್ಲಿ ತಾನೂ ವಿಸ್ಮಯವೆಂಬುದನ್ನು ಕಂಡುಕೊಳ್ಳಬಹುದು. ಅಕ್ಕನ ಈ ವಚನದ ಉದಾಹರಣೆ ಮಾನವ ಮತ್ತು ಪ್ರಕೃತಿ ಬೇರೆ ಬೇರೆ ಅಲ್ಲವೇ ಅಲ್ಲ ಎಂದು ನಿರೂಪಿಸುತ್ತದೆ.

ಪೃಥ್ವಿ ಪೃಥ್ವಿಯ ಕೂಡದ ಮುನ್ನ
ಅಪ್ಪು ಅಪ್ಪುವ ಕೂಡದ ಮುನ್ನ
ತೇಜ ತೇಜವ ಕೂಡದ ಮುನ್ನ
ವಾಯು ವಾಯುವ ಕೂಡದ ಮುನ್ನ
ಆಕಾಶ ಆಕಾಶವ ಕೂಡದ ಮುನ್ನ
ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ
ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ.

ಪೃಥ್ವಿ, ಅಪ್ಪು, ತೇಜ, ವಾಯು ಮತ್ತು ಆಕಾಶ ಇವು ಪಂಚಭೂತಗಳು. ಮನುಷ್ಯನೂ ಈ ಪಂಚಭೂತಗಳಿಂದಲೇ ಆದದ್ದು. ಇದೇ ವಿವರಣೆಯನ್ನು ಗಮನದಲ್ಲಿಟ್ಟುಕೊಂಡು, ಸಮೀಕರಿಸಿದ ವಚನವಿದು. ಸೃಷ್ಟಿ ತತ್ವಗಳಾದ ಪಂಚಭೂತಗಳು ಮತ್ತು ಮನುಷ್ಯನ ಒಳಗಿರುವ ಪಂಚ ಭೂತ ತತ್ವಗಳು, ಎರಡೂ ಒಂದೇ ಎಂದು ಅರಿವಿಗೆ ದಕ್ಕಿದಾಗ ಮೇಲಿನ ವಚನ ಹೆಚ್ಚುಹೆಚ್ಚು ಮನದಾಳಕ್ಕಿಳಿಯುತ್ತದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಅರಿವು/ಪ್ರಜ್ಞೆಯ ಹಿನ್ನೆಲೆಯಲ್ಲಿ ಕಂಡುಕೊಂಡು, ಮನುಷ್ಯನ ಅಸ್ತಿತ್ವವನ್ನು ಪರಾಮರ್ಶಿಸುವುದು ಸೂಕ್ತ. ಪಂಚಭೂತಗಳಿಂದ ಕೂಡಿದ ಈ ಜಗತ್ತಿನೊಂದಿಗೆ, ಪಂಚೇಂದ್ರಿಯಗಳಿಂದ ಕೂಡಿದ ಮಾನವ ಲೀನವಾಗುತ್ತಾನೆ. ಬಸವಾದಿ ಶರಣರು ಇಡೀ ಬ್ರಹ್ಮಾಂಡದ ಅಸ್ತಿತ್ವ, ಅದರ ಪರಿಕಲ್ಪನೆ, ಪ್ರಕೃತಿ ಪ್ರಜ್ಞೆ, ಆಂತರಿಕ ಅರಿವು ಇಟ್ಟುಕೊಂಡೇ ಸಹಜವಾಗಿ ಬದುಕಿದರು. ಇಡೀ ಸೃಷ್ಟಿಯನ್ನು ಒಪ್ಪಿಕೊಳ್ಳುವ, ಸರ್ವರನ್ನೂ ಅಪ್ಪಿಕೊಳ್ಳುವ ಹೃದಯ ವೈಶಾಲ್ಯ ಅವರಲ್ಲಿ ಸಹಜವಾಗಿ ಮೈಗೂಡಿತ್ತು. ಇಂದು ನಾವು ಹೇಳುವ ‘ಗ್ಲೋಬಲೈಸೇಷನ್’ ಪರಿಕಲ್ಪನೆಯನ್ನು ಅಂದಿನ ಶರಣರ ಬದುಕಿನಲ್ಲಿ ಬಹಳ ನಿಚ್ಚಳವಾಗಿ ಕಾಣಬಹುದು.

Previous post ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
Next post ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು

Related Posts

ಗುರು ಲಿಂಗ ಜಂಗಮ…
Share:
Articles

ಗುರು ಲಿಂಗ ಜಂಗಮ…

February 10, 2023 ಡಾ. ಪಂಚಾಕ್ಷರಿ ಹಳೇಬೀಡು
ಶರಣರ ವಚನಗಳು ಮಾನವನ ಜೀವನದಲ್ಲಿ ಆಕಾಶದ ಚಂದ್ರಮನಂತೆ, ಬೀದಿ ದೀಪದಂತೆ ಅಷ್ಟೇ ಏಕೆ ಸಣ್ಣ ಕೈದೀವಟಿಗೆಯಂತೆ ನಮಗೆ ನಿತ್ಯ ಮಾರ್ಗದರ್ಶನ ಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ...
ಹೆಂಗೂಸೆಂಬ ಭಾವ ತೋರದ ಮುನ್ನ…
Share:
Articles

ಹೆಂಗೂಸೆಂಬ ಭಾವ ತೋರದ ಮುನ್ನ…

June 10, 2023 ಮಹಾದೇವ ಹಡಪದ
ನಮ್ಮದು ರಾಮರಾಜ್ಯದ ಪರಿಕಲ್ಪನೆಯಲ್ಲ ಕಲ್ಯಾಣ ರಾಜ್ಯದ ಸ್ಪಷ್ಟ ನಿದರ್ಶನ, ಯಾವದೋ ಕಾವ್ಯ, ಕತೆ ಕಾದಂಬರಿ, ಪುರಾಣದ ನಿರೂಪಣೆಯ ಅಗತ್ಯ ಕಲ್ಯಾಣ ರಾಜ್ಯಕ್ಕಿಲ್ಲ. ಕಲ್ಯಾಣವೆಂಬುದು...

Comments 8

  1. Honnappa. R. Jaggal
    Jun 16, 2024 Reply

    ಶರಣು ಶರಣಾರ್ಥಿಗಳು

  2. Kamala Jambagi
    Jun 16, 2024 Reply

    ಪ್ರಕೃತಿಯನ್ನು ವಚನಗಳು ತಾಯಿಯಂತೆ, ದೇವರಂತೆ, ಅನುಭಾವದಂತೆ, ಲಿಂಗದಂತೆ ಸ್ವೀಕರಿಸುವೆ. ಲೇಖನ ಇಂತಹ ಕೆಲವಾರು ವಚನಗಳನ್ನು ವಿವರಿಸಿಕೊಟ್ಟಿದೆ.

  3. Dr.SoUmya
    Jun 22, 2024 Reply

    GREAT WRITE UP… PROUD OF YOU MAA…

  4. ಶ್ರೇಯಸ್ ಭದ್ರಣ್ಣ, ಶಿರೂರು
    Jun 22, 2024 Reply

    ಪ್ರಕೃತಿಯನ್ನು ಬೇಕಾಬಿಟ್ಟಿ ನಾಶಮಾಡುತ್ತಿರುವ ನಾವು ಪ್ರಾಣಿಗಳಿಗಿಂತ ಕೀಳು. ಸುಡುವ ಬೇಸಿಗೆ ಈ ಸಲ ಎಚ್ಚರಿಕೆಯ ಗಂಟೆಯಾಗಿ ಎಚ್ಚರಿಕೆ ನೀಡಿದೆ. ಅಕ್ಕನ ವಚನಗಳ ಮೂಲಕ ಶರಣರ ನಿಸರ್ಗ ಜೀವನವನ್ನು ಅನಾವರಣಗೊಳಿಸಿದ ಲೇಖನ ಚೆನ್ನಾಗಿದೆ.

  5. mahalingappa J
    Jun 22, 2024 Reply

    ನಮ್ಮಂತೆ ಶರಣರು ಮನೆಯ ಗೂಡುಗಳಲ್ಲಿ ತಮ್ಮನ್ನು ಬಂಧಿಯಾಗಿಸಲಿಲ್ಲ. ಅವರು ವಿಶಾಲ ಪ್ರಕೃತಿಯ ನಡುವೆ ಪ್ರಕೃತಿಯಾಗಿಯೇ ಬಾಳಿದರು. ಜೂನ್ ತಿಂಗಳ ಪರಿಸರ ಮಾಸಕ್ಕೆ ಹೊಂದುವಂತಹ ಲೇಖನ. ಲೇಖಕಿ ಕಾವ್ಯಶ್ರೀ ಅವರಿಗೆ ವಂದನೆಗಳು.

  6. Prof C A Somashekharappa
    Jun 28, 2024 Reply

    “Prakrutiyondige beledavaru” is a good WRITEUP. So much of vachana content is available that this aspect could be considered for a doctoral thesis.

  7. Manjula jane
    Jun 28, 2024 Reply

    ಮೇಡಂ ತಮ್ಮ ಲೇಖನದಲ್ಲಿ ಸತ್ಯಾಂಶವಿದೆ, ತುಂಬಾ ಅರ್ಥಪೂರ್ಣವಾಗಿದೆ, ಅಭಿನಂದನೆಗಳು

  8. Jyoti B Devanagaanv
    Jun 30, 2024 Reply

    ಪ್ರಕೃತಿಯೊಂದಿಗಿನ ಶರಣರ ಒಡನಾಟವನ್ನು ನೆನೆಯುತ್ತಾ ಪರಿಸರದ ಕಾಳಜಿಯನ್ನು ಬಿಂಬಿಸುವ ಅರ್ಥಪೂರ್ಣ ಲೇಖನ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಣ್ಣ ದೀಪ
ಕಣ್ಣ ದೀಪ
September 7, 2021
ಹಾಯ್ಕುಗಳು
ಹಾಯ್ಕುಗಳು
November 10, 2022
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
Copyright © 2025 Bayalu