Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀರಬೊಂಬೆಗೆ ನಿರಾಳದ ಗೆಜ್ಜೆ
Share:
Articles April 29, 2018 ಕೆ.ಆರ್ ಮಂಗಳಾ

ನೀರಬೊಂಬೆಗೆ ನಿರಾಳದ ಗೆಜ್ಜೆ

“ಅನುಭಾವದಡುಗೆಯ ಮಾಡಿ, ಅದಕ್ಕನುಭಾವಿಗಳು ಬಂದು ನೀವೆಲ್ಲ ಕೂಡಿ…” ಚಿಕ್ಕವಳಿದ್ದಾಗಿನಿಂದ ಕೇಳುತ್ತಿದ್ದ ಸರ್ಪಭೂಷಣ ಶಿವಯೋಗಿಗಳ ಈ ಗಾಯನದ ತಂತು ಈಗಲೂ ಪದೇ ಪದೇ ಮನದಲ್ಲಿ ರಿಂಗಣಿಸುತ್ತಿರುತ್ತದೆ. ಈ ಅನುಭಾವಿಗಳು ಯಾರು, ಅನುಭಾವ ಎಂದರೇನು ಎಂಬ ಪ್ರಶ್ನೆಗಳು ಆಗ ಏಳುತ್ತಿದ್ದರೂ ಸುಮ್ಮನೆ ಹಾಡಿನ ರಾಗದಲ್ಲಿ ಮನಸ್ಸು ತೇಲಿಬಿಡುತ್ತಿತ್ತು. ಈಗಲೂ ಆ ಆಳವಾದ ರಾಗ ಎಲ್ಲಿಯೋ ಕರೆದೊಯ್ದಂತೆ ಭಾಸವಾಗುತ್ತದೆ. ಅನುಭಾವ ಪ್ರಪಂಚವೇ ಹಾಗೆ, ಮಾತು ಮನಸ್ಸುಗಳನ್ನು ಮೀರಿದ್ದು. ಅನ್ವೇಷಕನನ್ನು ಅಮೂರ್ತತೆಯ ದಿಕ್ಕಿನತ್ತ ಜಗ್ಗುವ ಶರಣರ ಅನುಭಾವ ಲೋಕ ವಿಶಿಷ್ಟವಾದುದು, ಕುತೂಹಲಕಾರಿಯಾದುದು.

ಅನುಭಾವವನ್ನು ತರ್ಕದ ಗೂಟಕ್ಕೆ ಕಟ್ಟಿ ವಿಮರ್ಶಿಸಲಾಗುವುದಿಲ್ಲ. ಅದು ಅಂತರಾತ್ಮದ ಕಾಣ್ಕೆ. ಈ ಅನಿರ್ವಚನೀಯ ಅನುಭವವನ್ನು ಸತ್ಯ ಸಾಕ್ಷಾತ್ಕಾರ, ನಿರ್ವಾಣ, ಸಾಯುಜ್ಯ, ಮೋಕ್ಷ, ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇಂಗ್ಲಿಷಿನಲ್ಲಿ ಇದಕ್ಕೆ ‘ಮಿಸ್ಟಿಕ್ ಎಕ್ಸಪೀರಿಯನ್ಸ್’ ಎನ್ನುವರು. ‘ಮಿಸ್ಟಿಕ್’ ಎಂಬುದಕ್ಕೆ ಮೂಲ ಗ್ರೀಕನ ಮ್ಯೂಟ್, ಅಂದರೆ ಮೌನವಾಗಿರುವುದು. ಅದ್ವೈತಿಗಳು ಇದನ್ನು ಬ್ರಹ್ಮಜ್ಞಾನವೆಂದರೆ, ಬೌದ್ಧರು ಶೂನ್ಯದ ಅನುಭಾವವೆಂದರು. ಝೆನ್ ನಲ್ಲಿ ದೈವಾನುಭವವನ್ನು ‘ಸಟೊರಿ’ ಎಂದೂ, ಚೀನೀಯರು ‘ವು’ ಎಂದೂ ಕರೆಯುತ್ತಾರೆ. ಅಂದರೆ ಎಲ್ಲ ಬಗೆಯ ಅಂತರ್ ನಿರೀಕ್ಷಣೆಗಳಿಂದ ಭಿನ್ನವಾದ, ಯಾವ ಬಗೆಯ ಪ್ರತಿಮೆಗಳಿಗೂ ನಿಲುಕಲಾಗದ ಅನುಭವ ಎಂದರ್ಥ. ರುಡಾಲ್ಫ್ ಒಟ್ಟೊ, ಜರ್ಮನಿಯ ತತ್ವಜ್ಞಾನಿ, ತನ್ನ “ದಿ ಐಡಿಯಾ ಆಫ್ ದಿ ಹೋಲಿ” ಪುಸ್ತಕದಲ್ಲಿ, ಇದಕ್ಕೆ ‘ನ್ಯುಮಿನಸ್’ ಎಂಬ ಶಬ್ದವನ್ನು ಬಳಸುತ್ತಾನೆ. ಲ್ಯಾಟಿನ್ ಭಾಷೆಯ ಇದರ ಅರ್ಥ ತಲೆದೂಗು, ತಲೆಬಾಗು. ಶರಣರು ಇದಕ್ಕೆ ‘ಅನುಭಾವ’ ಎಂಬ ಸುಂದರ ಶಬ್ದವನ್ನು ಬಳಸಿದ್ದಾರೆ.

ಅನುಭವಕ್ಕೂ ಅನುಭಾವಕ್ಕೂ ಏನು ಅಂತರ ಎಂಬುದು ಅನೇಕರ ಸಹಜ ಪ್ರಶ್ನೆ. ಯಾವುದೇ ಅನುಭವವಾಗಲಿ ಅದು ನಮಗೆ ಇಂದ್ರಿಯಗಳಿಂದಲೇ ದೊರೆಯುವುದು. ಆದರೆ ಅನುಭಾವವು ಇಂದ್ರಿಯಾತೀತವಾದದ್ದು, ಬ��ದ್ಧಿ, ತರ್ಕಗಳಿಗೆ ನಿಲುಕಲಾರದ್ದು. ಭಾವನೆಗಳಿಗೂ, ಮನಸ್ಸಿಗೂ ಅತೀತವಾದದ್ದು. ಆದ್ದರಿಂದಲೇ ಯಾವ ಇಂದ್ರಿಯಾನುಭವಗಳಿಗೂ ಇದನ್ನು ಹೋಲಿಸಲಾಗದು. ಒಂದರ್ಥದಲ್ಲಿ ಇಂದ್ರಿಯಗಳೆಲ್ಲ ಸ್ತಬ್ಧವಾದಾಗ ಜೀವಕ್ಕೆ ಗೋಚರಿಸುವ ಅನುಪಮ ಅನುಭವವೇ ಅನುಭಾವ. ಭವವನ್ನು ಅನುಸರಿಸಿ ಬರುವುದು ಅನುಭವವಾದರೆ, ಭಾವವನ್ನು ಎಲ್ಲ ಎಲ್ಲೆಗಳಾಚೆ ಕರೆದೊಯ್ಯುವುದೇ ಅನುಭಾವ. ಅದಕ್ಕೇ “ಭವವ ದಾಟಿದವರಿಗೆ ಬ್ರಹ್ಮಾಂಡದ ಬಯಲು ಕೈವಶವಾಯಿತ್ತು” ಎಂದು ಶರಣ ಮಾರ್ಗವನ್ನು ತೋರುತ್ತಾರೆ ಹಡಪದ ಅಪ್ಪಣ್ಣನವರು.

ಸುಮಾರು ಒಂದನೆಯ ಶತಮಾನದಲ್ಲಿ ಬರುವ ಅಥೆನ್ಸ್ ದೇಶದ ಡಯಾನಿಸಿಯಸ್ ಏರಿಯಾಪಾಜಿಟ್ ಎಂಬ ಕ್ರೈಸ್ತ ಸಂತ, “ಯಾವುದು ಎಲ್ಲ ಯೋಚನೆಗಳಿಗೂ ಅತೀತವಾಗಿರುವುದೋ ಅದನ್ನು ಯಾವ ವಿಚಾರದಿಂದಲೂ ಗ್ರಹಿಸಲಾಗದು” ಎನ್ನುತ್ತಾನೆ. ಶರಣ ಸ್ವತಂತ್ರ ಸಿದ್ಧಲಿಂಗೇಶ್ವರರ ಪ್ರಕಾರ:
ಅನುಭಾವವು ಆತ್ಮವಿದ್ಯೆ,
ಅನುಭಾವವೆಂಬುದು ತಾನಾರೆಂಬುದ ತೋರುವುದು
ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು…

ಜಗತ್ತಿನ ಅನುಭಾವಿಗಳೆಲ್ಲರಲ್ಲಿ ಬಹಳಷ್ಟು ಸಾಮ್ಯತೆ ಇದೆ. ತಮಗೆ ಗೋಚರವಾದ ಆತ್ಯಂತಿಕ ಸತ್ಯವನ್ನು ಅವರು ಅನೇಕ ಹೆಸರುಗಳಿಂದ ಕರೆದಿದ್ದಾರೆ- ಅಲ್ಲಾಹ್, ಬ್ರಹ್ಮನ್, ಬುದ್ಧ ಸ್ವರೂಪಿ, ಎನ್ಸಾಫ್, ತಾವೋ, ಗಾಡ್, ಪರಶಿವ… ಹೀಗೆ. ಆದರೆ ಬುದ್ಧಿಯಿಂದ ಗ್ರಹಿಸಲಾಗದ, ಪದಗಳಲ್ಲಿ ವ್ಯಕ್ತಪಡಿಸಲಾಗದ ಆ ಆತ್ಯಂತಿಕ ಸತ್ಯವನ್ನು ಈ ಯಾವ ಪದಗಳೂ ಸೂಕ್ತವಾಗಿ ವ್ಯಕ್ತಪಡಿಸಲಾರವು ಎಂದೇ ಅಭಿಪ್ರಾಯಪಟ್ಟಿದ್ದಾರೆ. ಆತ್ಯಂತಿಕ ಸತ್ಯದ ಕುರಿತು ಏನನ್ನೇ ಹೇಳ ಹೋದರೂ ಅದರ ಸ್ವರೂಪಕ್ಕೆ ಸಂಕುಚಿತತೆ ಬರುತ್ತದೆ, ಅನಂತತೆಗೆ ಭಂಗವಾಗುತ್ತದೆ. ಅದಕ್ಕೇ ಉಪನಿಷತ್ತಿನ ಯೋಗಿಗಳು ಈ ದಿವ್ಯಾನುಭವವನ್ನು ನೇತಿ ನೇತಿ ಎಂಬ ನೇತ್ಯಾತ್ಮಕ ವರ್ಣನೆಯಲ್ಲಿ ಅಂದರೆ ಅದು ಅದಲ್ಲ, ಇದಲ್ಲ ಎಂಬ ವಿವರಣೆಯಲ್ಲೇ ತೃಪ್ತಿಪಟ್ಟುಕೊಳ್ಳುತ್ತಾರೆ. ತಮಗಾದ ಅನುಭಾವವನ್ನು ಅವರ್ಣನೀಯ, ಅವಾಚ್ಯ ಎಂದಿದ್ದರೂ, ಆ ಅವಾಚ್ಯದ ಅಗಾಧತೆಯನ್ನು ತಮ್ಮದೇ ಆದ ರೀತಿಯಲ್ಲಿ ಅನೇಕರು ಅಭಿವ್ಯಕ್ತಿಸಿದ್ದಾರೆ. ಅಕ್ಷರಗಳಲ್ಲಿ ಅನುಭಾವವನ್ನು ಸೀಮಿತಗೊಳಿಸುವ ಅಪಾಯವಿದೆ ಎಂಬ ಹಿಂಜರಿಕೆಯಲ್ಲಿಯೇ ಪ್ರತಿಮೆ, ರೂಪಕಗಳಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹದಿನಾಲ್ಕನೆಯ ಶತಮಾನದ ತತ್ವಜ್ಞಾನಿ ಮತ್ತು ಅನುಭಾವಿ ಮಾಯಿಸ್ಟರ್ ಎಖಾರ್ಟ್, “ದೇವರು ಎನ್ನುವವನು ಅಸ್ತಿತ್ವದಲ್ಲೇ ಇಲ್ಲ. ಏಕೆಂದರೆ ಆತನಿಗೆ ಸೀಮಿತ ಅಸ್ತಿತ್ವದ ಯಾವ ಲಕ್ಷಣಗಳೂ ಇಲ್ಲ…” ಎನ್ನುತ್ತಾ, “ದೇವರು ಎಂದರೆ ಪರಿಪೂರ್ಣ…” ಎಂಬ ವೈರುಧ್ಯದ ಹೇಳಿಕೆಗಳನ್ನು ಬಳಸುತ್ತಾನೆ. ಚೆನ್ನಬಸವಣ್ಣನವರು ಸ್ವಾನುಭಾವಿಗಳ ಅನುಭಾವವನ್ನು ಹೀಗೆ ವರ್ಣಿಸುತ್ತಾರೆ:
… ಮತ್ಸ್ಯನುಂಗಿದ ಮಾಣಿಕ್ಯದಂತೆ
ಹೊಸ್ತಿಲಲೆತ್ತಿದ ಜ್ಯೋತಿಯಂತೆ
ಸ್ಫಟಿಕದ ಘಟದಂತೆ, ಮುತ್ತು ನುಂಗಿದ ನೀರಿನಂತೆ
ಕಣ್ಣಾಲೆ ನುಂಗಿದ ನೋಟದಂತೆ
ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ ಹಾಗೆ
ಸ್ವಾನುಭಾವಿಗಳ ಅನುಭಾವ…

ಗುಪ್ತಗಾಮಿನಿಯಂತಿರುವ ಈ ದೈವತ್ವಕ್ಕೆ ನಾವು ಬಲ್ಲ ಯಾವುದೇ ಗುಣಗಳೂ ಇಲ್ಲ, ಲಕ್ಷಣಗಳೂ ಇಲ್ಲ ಎನ್ನುತ್ತಾರೆ ಯಹೂದಿಗಳ ತತ್ವಜ್ಞಾನಿ ಗೆರ್ಶೋಮ್ ಶೊಲೆಮ್. ಅನುಭಾವಿಗಳ ಪ್ರಕಾರ ಶೂನ್ಯ ರೂಪದ ಈ ಆತ್ಯಂತಿಕ ಸತ್ಯವು ಕೇವಲ ನಿರ್ವಾತವಲ್ಲ, ಇದು ಶುದ್ಧ ಆತ್ಮದ ಬೆಳಕು, ಅದೊಂದು ಬಗೆಯ ಜಾಗೃತಾವಸ್ಥೆ, ಅರಿವು, ಪ್ರಜ್ಞೆ. ಶರಣರ ಪ್ರಕಾರ ಇದು, ಅರಿವಿನ ಅರಿವು.
ತೈತ್ರೀಯಾ ಉಪನಿಷತ್ತಿನಿಂದ ಪ್ರಭಾವಿತರಾಗಿ ಯೋಗದ ಮೂಲಕ ಪ್ರಜ್ಞಾ ವಲಯದಿಂದ ಸುಪ್ತ ಪ್ರಜ್ಞಾ ವಲಯದತ್ತ ಸಾಗಬಹುದಾದ ಮಾರ್ಗವನ್ನು ಅನುಸರಿಸಿ, ಸಾಧನೆಗೈದ ಮಹರ್ಷಿ ಅರವಿಂದರು: “ಸತ್ಯ ದರ್ಶನವನ್ನು ಆಸಕ್ತಿಯುಳ್ಳ ಯಾರು ಬೇಕಾದರೂ, ಯಾವ ಮಾರ್ಗದಲ್ಲಾದರೂ ಪಡೆಯಬಹುದು, ಕೇವಲ ಸನ್ಯಾಸಿಗಳಿಗೆ ಮಾತ್ರ ಇದು ಸೇರಿದ್ದಲ್ಲ” ಎನ್ನುತ್ತಾರೆ. ದಾಂಪತ್ಯ ಜೀವನ ಸ್ವೀಕರಿಸಿದ, ವಿಭಿನ್ನ ಬಗೆಯ ಕಾಯಕದ ಅನೇಕ ಶರಣರ ವಚನಗಳನ್ನು ಗಮನಿಸಿದರೆ ಅವರ ಅನುಭಾವವನ್ನು ಅರಿಯಬಹುದು.

ಬಹಿರಂಗ ಹಾಗೂ ಅಂತರಂಗದ ಎಲ್ಲಾ ವ್ಯವಹಾರಗಳಿಂದ ದೇವರು ಅಥವಾ ಪರಮ ಸತ್ಯವು ದೂರ ಇರುವುದರಿಂದ ಅಷ್ಟವಿಧಾರ್ಚನೆ, ಜಪ-ಸ್ತೋತ್ರ, ಧ್ಯಾನ, ತಪಗಳಿಂದ ಅದು ಪ್ರಾಪ್ತವಾಗುವುದಿಲ್ಲ ಎಂಬುದು ಮಹಾದೇವಿ ಅಕ್ಕನ ಅನುಭವ. ವಚನಗಳನ್ನು, ಮಂತ್ರಗಳನ್ನು ಕಂಠಸ್ಥ ಮಾಡಿಕೊಂಡು, ಆಧ್ಯಾತ್ಮದ ಬಗ್ಗೆ ತಿಳಿದುಕೊಳ್ಳುವುದರಿಂದಲೂ ಅನುಭಾವಿಗಳಾಗುವುದಿಲ್ಲ. ದೇಹ, ಮನಸ್ಸುಗಳು ಅದಕ್ಕೆ ಸಜ್ಜಾಗಬೇಕು. ತಿಪ್ಪೆಯಂತಹ ಒಡಲಿನಲ್ಲಿ ಸೃಷ್ಟಿಕರ್ತನನ್ನು ಅರಸುವವರನ್ನು ಹಡಪದಪ್ಪಣ್ಣಗಳ ಪತ್ನಿಯಾದ ಶರಣೆ ಲಿಂಗಮ್ಮ ತರಾಟೆಗೆ ತೆಗೆದುಕೊಳ್ಳುತ್ತಾರೆ:

ಹೊತ್ತು ಹೊತ್ತಿಗೆ ಮೆತ್ತಹಾಕಿ ತಿಪ್ಪೆಯಲ್ಲಿ ಕರ್ಪೂರವನರಸುವನಂತೆ, 
ತಿಪ್ಪೆಯಂತಹ ಒಡಲೊಳಗೆ ಕರ್ತೃವನರಸಿಹೆನೆಂಬ ಅಣ್ಣಗಳಿರಾ, 
ನೀವು ಕೇಳಿರೊ, ಹೇಳಿಹೆನು. 
ಆ ಕರ್ತೃವನರಸುವುದಕ್ಕೆ ಚಿತ್ತ ಹೇಗಾಗಬೇಕೆಂದಡೆ 
ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು. 
ಮೋಡವಿಲ್ಲದ ಚಂದ್ರಮನಂತಿರಬೇಕು. 
ಬೆಳಗಿನ ದರ್ಪಣದಂತಿರಬೇಕು. 
ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು, 
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
ದುರ್ಗುಣಗಳನ್ನು, ಕಾಮ, ಕ್ರೋಧಾದಿಗಳ ವಿಷಯ ವಾಸನೆಗಳನ್ನು ತುಂಬಿಕೊಂಡು ಮಾಡುವ ಪೂಜೆ, ಪ್ರಾರ್ಥನೆ, ಧ್ಯಾನ, ಯೋಗಗಳೆಲ್ಲ ನಿಷ್ಪ್ರಯೋಜಕ. ಜೀವವು ಕಾಯಗುಣಗಳನ್ನು ಕಳೆದುಕೊಂಡು, ಚಿತ್ತವೃತ್ತಿಗಳನ್ನು ಬಿಡಿಸಿಕೊಳ್ಳದ ತನಕ ಆತ್ಮದ ಇರುವನ್ನು ಅನುಭವಿಸಲಾರದು. ಆಧ್ಯಾತ್ಮದ ಗುಂಗು ಹಿಡಿದ ಸಾಧಕನ ಸ್ಥಿತಿಯ ಬಗ್ಗೆ ಪ್ರಭುದೇವರು ಸೊಗಸಾಗಿ ಹೇಳಿದ್ದಾರೆ. “ಮನದ ಕಾಲತ್ತಲು ತನುವಿನ ಕಾಲಿತ್ತಲು, ಅನುಭಾವದ ಅನುವನು ನೆನೆವುತ್ತ ನೆನೆವುತ್ತ ಗಮನ ಕೆಟ್ಟಿತ್ತು.” ದೇಹದ ಹೆಜ್ಜೆ ಪ್ರಕೃತಿ ಮುಖವಾಗಿ ಚಲಿಸುತ್ತಿದ್ದರೆ, ಮನಸ್ಸಿನ ಕಾಲು ಕಾಲಾತೀತನ ನೆನಹಿನತ್ತ ಹೆಜ್ಜೆ ಹಾಕುತ್ತಿರುತ್ತದೆ.

ಸ್ವಚ್ಛ ಆಗಸದಲ್ಲಿ, ತಿಳಿಯಾದ ಕೊಳದಲ್ಲಿ, ಫಳ ಫಳ ಹೊಳೆಯುವ ದರ್ಪಣದಲ್ಲಿ ಮಾತ್ರವೇ ನಿಚ್ಚಳವಾದ ಪ್ರತಿಬಿಂಬ ಕಾಣಲು ಸಾಧ್ಯ. ಹಾಗೆಯೇ ನಿರ್ಮಲವಾದ ಅಂತರಾತ್ಮದಲ್ಲಿ ಸತ್ಯದ ಇರುವು ವ್ಯಕ್ತವಾಗುತ್ತದೆ. ಇದನ್ನೇ, “ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು.” ಎನ್ನುತ್ತಾರೆ ಅರಿವಿನ ಮಾರಿತಂದೆ. ನಿರಂತರವಾಗಿ ಹೊಯ್ದಾಡುವ, ಹರಿದಾಡುವ ಮನಸ್ಸು ನಿಶ್ಚಲವಾಗಿ ಒಂದೆಡೆ ನಿಂತರೆ ನಿಶ್ಚಿತ��ಾಗಿ ಅಲ್ಲಿ ಸತ್ಯದ ಪ್ರತಿಬಿಂಬ ಗೋಚರಿಸುತ್ತದೆ. ಪ್ರಬಲ ನಂಬಿಕೆಯ ರೂಪದಲ್ಲಿದ್ದ ಆಧ್ಯಾತ್ಮ ಜ್ಞಾನವು ಕ್ರಿಯೆಯಲ್ಲಿ ಅಳವಟ್ಟಾಗಲೇ ಸಾಧಕ ಅನುಭಾವಿಯಾಗುವುದು. ಚೆನ್ನಬಸವಣ್ಣನವರು ಹೇಳುತ್ತಾರೆ:

ಅರಿವಿನ ತೃಪ್ತಿಗೆ ಅನುಭಾವವಾಶ್ರಯ.
ಲಿಂಗದ ಅನುಭಾವದಿಂದ ನಿಮ್ಮ ಕಂಡೆ.
ನಿಮ್ಮ ಕಂಡೆನ್ನ ಮರೆದೆ, ಕೂಡಲಚೆನ್ನಸಂಗಮದೇವಾ.
ಈ ಶುದ್ಧ ಅರಿವು ಹೊರಗೆಲ್ಲೋ ಇಲ್ಲ, ಅದು ನಮ್ಮೊಳಗೇ ಇದೆ ಎಂದುಕೊಂಡರೆ “ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ” ಎಂಬುದು ಶರಣರ ದರ್ಶನ. ಅಲ್ಲಮಪ್ರಭುದೇವರು ಪರಮಸತ್ಯದ ರಹಸ್ಯವನ್ನು ಬಿಚ್ಚಿಡುತ್ತಾರೆ:
ತೆರಹಿಲ್ಲದ ಘನವರಸಿಹೆನೆಂದಡೆ ಕಾಣಬಾರದು
ಅದೇನು ಕಾರಣವೆಂದಡೆ,
ಅರಸುವಾತನು ತಾನೇ ವಸ್ತುವಾದ ಕಾರಣ… ಎಂದು.

ತಾನು ಯಾರು ಎನ್ನುವ ಸತ್ಯವು ಅನುಭಾವದಲ್ಲಿಯೇ ಗೋಚರಿಸುತ್ತದೆ. ಆಗ ದೇಹ ಗುಣಗಳು ಮಾಯವಾಗುತ್ತವೆ. ತನಗೂ ವಿಶ್ವಾತ್ಮನಿಗೂ ನಡುವೆ ಯಾವ ಪರದೆಯೂ ಇಲ್ಲದ್ದು ಗಮನಕ್ಕೆ ಬರುತ್ತದೆ. ತನ್ನ ಪರಿಮಿತಿಯನ್ನು ಕಳೆದುಕೊಳ್ಳುವ ಆತ್ಮ ಅಪರಿಮಿತವಾಗುವುದೆಂದರೆ ಸಮಷ್ಟಿಯೇ ತಾನೆಂದು ಅರಿಯುವುದು. ಸಾಮಾನ್ಯವಾಗಿ ಏನನ್ನೇ ಆಗಲಿ ಅರಿತುಕೊಳ್ಳಬೇಕು ಎನ್ನುವ ಕ್ರಿಯೆಯಲ್ಲಿ ಮೂರು ಭಾವಭೇದಗಳಿರುತ್ತವೆ. ಅವು- ಅರಿಯುವವ, ಅರಿತುಕೊಳ್ಳುವ ಮಾರ್ಗ ಹಾಗೂ ಅರುಹಿಸಿಕೊಳ್ಳುವ ವಸ್ತು. ಇವನ್ನು ತ್ರಿಪುಟಿ ಎಂದು ಕರೆಯುತ್ತಾರೆ. ಉದಾಹರಣೆಗೆ ನಾವು ಯೋಗದ ಬಗ್ಗೆ ಅರ್ಥಮಾಡಿಕೊಳ್ಳಬೇಕೆಂದು ಬಯಸಿದರೆ ಅಲ್ಲಿ ನಾನು, ಯೋಗ ಮತ್ತು ಯೋಗವನ್ನು ಪುಸ್ತಕದಿಂದ ತಿಳಿಯ ಹೊರಟರೆ ಓದು ಅಥವಾ ಕ್ರಿಯೆಯ ಮೂಲಕ ಅರಿಯ ಬಯಸಿದರೆ ಅಭ್ಯಾಸದ ಮಾರ್ಗ. ಜಗತ್ತಿನ ಯಾವುದೇ ವಿಷಯದ ಜ್ಞಾನರ್ಜನೆಗೆ ಈ ನಿಯಮ ಅನ್ವಯಿಸುತ್ತದೆ. ಆದರೆ ಜ್ಞಾನೋದಯ, ಸಾಕ್ಷಾತ್ಕಾರ ಅಥವಾ ಅನುಭಾವದ ವಿಷಯದಲ್ಲಿ ಈ ನಿಯಮ ಅನ್ವಯಿಸದು. ನಾನು ಬೇರೆ, ಈ ಸೃಷ್ಟಿ ಚೈತನ್ಯ ಬೇರೆ ಎಂಬ ಭಾವ ಏರ್ಪಟ್ಟಲ್ಲಿ ಪರವಸ್ತುವಿನ ಜ್ಞಾನ ಕೈಗೆಟುಕದು.

ಜೀವನು ತನ್ನ ದೇಹ ಭಾವದ ಆವರಣವನ್ನು ಬಿಡಿಸಿಕೊಂಡಾಗ ಸತ್ಯದ ಮಹಾಬಯಲು ಗೋಚರಿಸುತ್ತದೆ. ಸತ್ಯದ ಏಕತೆಯ, ಸರ್ವವ್ಯಾಪಕತೆಯ ಅನುಭವವಾಗುತ್ತದೆ. ತಾನು, ಈ ಸಮಷ್ಟಿ ಮತ್ತು ಸೃಷ್ಟಿಕರ್ತ ಇವುಗಳ ವ್ಯತ್ಯಾಸವೇ ಮರೆಯಾಗಿ, ಅನುಭಾವಿಯು ಎಲ್ಲದರಲ್ಲೂ ದೈವದ ಇರುವನ್ನು ಅಕ್ಷರಶಃ ಅನುಭವಿಸುತ್ತಿರುತ್ತಾನೆ. ಆಗ ಅನುಭಾವಿಯಲ್ಲಿ ತಾನು ಸಮಷ್ಟಿ, ಅಭಿನ್ನವೆಂಬ ಸತ್ಯ ನೆಲೆಗೊಳ್ಳುತ್ತದೆ. ನಾನು ಎಂಬುದು ಮಾಯವಾಗಿ ಕೇವಲ ಪರಮ ಚೈತನ್ಯವೇ ಜೀವದ ಒಳಗನ್ನು ತುಂಬಿಕೊಳ್ಳುತ್ತದೆ. ಸಾಮಾನ್ಯರಾದ ನಮಗೆ ಈ ಜೀವ, ಜಗತ್ತು ನಮ್ಮ ಮನಸ್ಥಿತಿಯನ್ನು ಅವಲಂಬಿಸಿ ಸುಂದರವೋ, ಆನಂದಮಯವಾಗಿಯೋ ಇಲ್ಲವೇ ದುಃಖದಿಂದ ಕೂಡಿದಂತೆಯೋ ಕಂಡರೆ, ಅನುಭಾವಿಗಳು ಪ್ರತಿಯೊಂದರಲ್ಲೂ ಪರಮ ಚೈತನ್ಯದ ಇರುವನ್ನೇ ಕಾಣುತ್ತಾರೆ, ಅನುಭವಿಸುತ್ತಾರೆ.

ಜೀವಭಾವ ಅಳಿಯದ ತನಕ ಸಾಮರಸ್ಯದ ಅನುಸಂಧಾನ ಸಾಧ್ಯವಾಗದು. ನಾನು ಅರಿಯುತ್ತೇನೆ ಎಂಬ ಸೂಕ್ಷ್ಮಾತಿಸೂಕ್ಷ್ಮ ಅಹಂಭಾವ ಕೂಡ ಅಲ್ಲಿರಬಾರದು. ನಾನು ಎಂಬುದು ಕರಗಿ ಬಿಡಬೇಕು. ನನಗೆ ಸಾಕ್ಷಾತ್ಕಾರವಾಗಿದೆ, ದೈವಜ್ಞಾನ ಪ್ರಾಪ್ತವಾಗಿದೆ ಎಂದು ಯಾರಾದರೂ ಹೇಳಿದರೆ ಅದು ಶುದ್ಧ ಸುಳ್ಳು, ಅನುಭಾವಿಗಳು ಅದನ್ನು ಒಪ್ಪಲಾರರು.

ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ
ಅದು ನಿಮ್ಮ ಮತಕ್ಕೆ ಬಪ್ಪುದೆ?
ಎನ್ನ ನಾನು ಮರೆದು, ನಿಮ್ಮನರಿದಡೆ,
ಅದು ನಿಮ್ಮ ರೂಪೆಂಬೆ.
ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ
ಭಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ

‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. “ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು. ಆಗ ನಾನಲ್ಲದೆ ಬೇರೆ ದೇವರಿಲ್ಲ ಎಂಬ ಸತ್ಯ ಗೋಚರಿಸುತ್ತದೆ. ನೀನು- ನಾನೆಂಬ ವ್ಯತ್ಯಾಸವೇ ಇಲ್ಲದಾಗುತ್ತದೆ. ಲೋಕವೇ ನಾನೆಂಬುದು ಗೊತ್ತಾಗುತ್ತದೆ” ಎನ್ನುತ್ತಾರೆ 14ನೆಯ ಶತಮಾನದ ಕಾಶ್ಮೀರದ ಸಂತಳಾದ ಲಲ್ಲೇಶ್ವರಿ. ಎಲ್ಲಿಯ ತನಕ ನಾನು, ನನ್ನದು ಎಂಬುದು ಇರುತ್ತದೋ ಅಲ್ಲಿಯ ತನಕ ಬಯಕೆಗಳು, ಆಸೆಗಳು ಜೀವವನ್ನು ಆಳುತ್ತವೆ. ಎಲ್ಲ ನೋವು, ದುಃಖಗಳಿಗೆ ಇದೇ ಕಾರಣ. ನನ್ನನ್ನು ನಾನು ಎಂದು ಭಾವಿಸಿರುವ ತನಕ ನರಳಾಟ ತಪ್ಪಿದ್ದಲ್ಲ, ದೌರ್ಬಲ್ಯ ಬೆನ್ನು ಬಿಡುವುದಿಲ್ಲ. ನಿರ್ದಿಷ್ಟ ಆಕಾರದ ಪಾತ್ರೆಯೊಂದು (ಅಂದರೆ ಇಂಥ ಸಣ್ಣತನ ಉಳ್ಳವರು) ಕೊನೆಯೇ ಇಲ್ಲದ ಅನಂತತೆಯನ್ನು ತುಂಬಿಕೊಳ್ಳುವುದಾದರೂ ಹೇಗೆ? ನಾನು ಏನೂ ಅಲ್ಲ, ಏನೇನೂ ಅಲ್ಲ ಎಂಬ ಭಾವ ಗಟ್ಟಿಯಾದಾಗ ಮಾತ್ರ ಪೂರ್ಣತೆಯನ್ನು ತುಂಬಿಕೊಳ್ಳಲಾದೀತು. ಪರಮನ ಹೊರತಾಗಿ ನಾನು ಬೇರೇನೂ ಅಲ್ಲ ಎಂಬ ಅರಿವು ಅನುಭವಕ್ಕೆ ಬಂದಾಗ ಅನಂತತೆಯನ್ನು ಜೀವವು ಗ್ರಹಿಸುತ್ತದೆ. ನಮ್ಮ ಸ್ವಭಾವವೇ ಬುದ್ಧ, ಈ ಪ್ರಕೃತಿಯಿಂದ ಹೊರತಾದ ಬೇರೊಂದು ಬುದ್ಧ ಇಲ್ಲ ಎನ್ನುತ್ತಾರೆ ಝೆನ್ ನ ಹಿರಿಯ ಸಂತ ಹೂಯಿ ನೆಂಗ್. ಸ್ವ ಅಸ್ತಿತ್ವದ ಅರಿವು ಬುದ್ಧಿಯ ಬಲದಿಂದಾಗಲಿ, ತರ್ಕಗಳ ನೆರವಿನಿಂದಾಗಲಿ ಸಾಧ್ಯವಿಲ್ಲ. ಅದು ನಮ್ಮೊಳಗೆ ಸಂಭವಿಸಬೇಕಾದ ಜ್ಞಾನೋದಯ.

ಅನುಭಾವಿಯು ಎರಡು ವಿಧದ ಆವಸ್ಥೆಗಳನ್ನು ಅನುಭವಿಸುತ್ತಾನೆ. ಮೊದಲ ಹಂತದಲ್ಲಿ ವಿಶ್ವಾತ್ಮನಲ್ಲಿ ತಾನು ಸೇರಿ ಹೋದಂತೆ ಅನುಭವ ಪಡೆಯುತ್ತಾನೆ. ನಂತರ ಆ ಅನುಭವದಲ್ಲಿ ತನ್ನನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾನೆ. ಒಂದು ಝೆನ್ ಕಥೆ ಹೀಗಿದೆ. ಸುಭೂತಿ ಎನ್ನುವ ಬೌದ್ಧ ಭಿಕ್ಕುವಿಗೆ ಜ್ಞಾನೋದಯವಾಯಿತು. ಆತ ಮಹಾವೃಕ್ಷದ ಕೆಳಗೆ ಹಾಗೇ ಕುಳಿತುಕೊಂಡಿದ್ದ. ಕಣ್ಣುಗಳಲ್ಲಿ ಬೆಳಕು, ಮುಖದಲ್ಲಿ ನಿರಾಳತೆ. ವೃಕ್ಷದಿಂದ ಹೂಮಳೆ ಸುರಿಯುತ್ತಿತ್ತು. ಕಿವಿಯ ಹತ್ತಿರ ಸುಳಿಯುತ್ತಿದ್ದ ಅಲೆಯಲ್ಲಿ “ಮಹಾಶೂನ್ಯದ ಬಗೆಗಿನ ನಿನ್ನ ಜ್ಞಾನ ಸಂಪತ್ತು ಅಮೋಘ” ಎನ್ನುವ ಮೆಲು ದನಿ ಕೇಳಿಬರುತ್ತಿತ್ತು. ಅರೆ, ನಾನು ಮಹಾಶೂನ್ಯದ ಬಗೆಗೆ ಮಾತೇ ಆಡಲಿಲ್ಲವಲ್ಲ ಎಂದು ಅಚ್ಚರಿಪಟ್ಟ ಸುಭೂತಿ. ಆಗ, “ನೀನು ಮಾತಾಡಲೂ ಇಲ್ಲ, ನಾವು ಕೇಳಲೂ ಇಲ್ಲ, ಅದೇ ನಿಜವಾದ ಮಹಾಶೂನ್ಯ” ಎಂಬ ಮಾತು ತೇಲಿ ಬಂತು. ವೃಕ್ಷದಿಂದ ಹೂಮಳೆ ಸುರಿಯುತ್ತಿತ್ತು.

“…ಅಪ್ರತಿಮನ ಅರುಹ ತಿಳಿದು, 
ಆ ಅಪ್ರತಿಮನ ಇರವ ತಿಳಿದು, 
ಅಲ್ಲದ ಅನುಭಾವಕ್ಕೆ ಅಲ್ಲದ ವಿವರವ ಕಂಡು ಆನು ಬದುಕಿದೆನಯ್ಯ ಸಂಗಯ್ಯ” ಎನ್ನುತ್ತಾರೆ ನೀಲಮ್ಮ ತಾಯಿಯವರು.
ಅಲ್ಲಮಪ್ರಭುವಿನಿಂದ ಪ್ರಭಾವಿತರಾದ ಕನ್ನಡದ ಸೂಫಿ ಸಂತ ಗುರುಖಾದರಿ ಪೀರಾ ಅವರ “ಬೆಣ್ಣೆ ಹೊಂಟಿತು ತುಪ್ಪದ ಭೆಟ್ಟಿಗೆ ಎಮ್ಮಿ ಮ್ಯಾಲೆ ಕುಂತ” ಎಂಬ ಕಾವ್ಯವು ಇದೇ ಭಾವವನ್ನು ಧ್ವನಿಸುತ್ತದೆ:
…. ಗುರುಪೀರನೆಂಬ ಗಡಗಿಯ ಮನೆಯೊಳು ಬೆಣ್ಣೆ ಬಂದು ನಿಂತ
ಪ್ರೇಮದ ಬೆಂಕಿ ತಾಕಿದಾಕ್ಷಣ ಬೆಣ್ಣೆ ಕರಗಿತಂತ
ತುಪ್ಪದ ರೂಪ ಧರಿಸಿತಂತ
ನಿನ್ನೊಳು ನೀನು ಶೋಧ ಮಾಡಲು ನೀನೆ ನೀನೆ ಸಂತ
ನಿನ್ನ ಬಿಟ್ಟು ಏನಿಲ್ಲಂತ ಇದನು ನೀನು ತಿಳಿಬೇಕಂತ.

ಅನುಭಾವವು ಸಾರ್ವಜನಿಕ ಅನುಭವವಲ್ಲದ್ದರಿಂದ ಕೇವಲ ತಾನು ಕಂಡುಂಡ ಸತ್ಯವನ್ನು ಅನುಭಾವಿ ಮಾತ್ರವೇ ವಿವರಿಸಬಲ್ಲ. ಮುಕ್ತಾಯಕ್ಕ ಸ್ವಾನುಭಾವವನ್ನು ಚಿತ್ರಿಸಿದ ಬಗೆ ವಿಶಿಷ್ಟವಾಗಿದೆ:

ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ, 
ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ. 
ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ, 
ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ, ಎನ್ನ ಅಜಗಣ್ಣನ 
ಯೋಗಕ್ಕೆ.

ಅನುಭಾವವನ್ನು ಕಟ್ಟಿಕೊಡುವ ಅಪೂರ್ವ ವಚನವಿದು. ನೇರ ಮಾತುಗಳಲ್ಲಿ ಅಮೂರ್ತವಾದ ಅಭಿವ್ಯಕ್ತಿ ಶಕ್ತಿಶಾಲಿಯಾಗಿ ಅಡಕವಾಗಿದೆ. ಇಲ್ಲಿನ ಒಂದೊಂದು ಸಾಲೂ ಅನುಭಾವದ ಜೇನು ಸುರಿಸುತ್ತಿದ್ದಂತೆ ಭಾಸವಾಗುತ್ತದೆ. ನೀರಬೊಂಬೆಗೆ ನಿರಾಳದ ಗೆಜ್ಜೆ- ನೀರಬೊಂಬೆಯನ್ನು ಕಲ್ಪಿಸಲಿಕ್ಕೂ ಆಗದು. ಅದಕ್ಕೆ ನಿಶ್ಚಿಂತವಾದ, ನಿರ್ಮಲವಾದ ನಿರಾಳದ ಗೆಜ್ಜೆ. ಹೀಗೆ ಅಲಂಕೃತಗೊಂಡ ಬೊಂಬೆಯು ಬಯಲ ಬೊಂಬೆಯ ಕೈಯಲ್ಲಿ ಮುದ್ದಿಕ್ಕಿಸಿಕೊಳ್ಳುತ್ತಿದೆ! ಎಂಥ ಅದ್ಭುತ ಪ್ರತಿಮೆ!! ಒಂದೊಂದು ಶಬ್ದಕ್ಕೂ ಒಂದೊಂದು ಗ್ರಂಥವನ್ನೇ ಬರೆಯುವಷ್ಟು ಅರ್ಥ ಅಡಕವಾಗಿದೆ. ಆದರೆ ಅಣ್ಣ ಅಜಗಣ್ಣನ ಅನುಭಾವವನ್ನು ವರ್ಣಿಸಲಿಕ್ಕೆ ಮುಕ್ತಾಯಕ್ಕಳಿಗೆ ಇಷ್ಟು ಹೋಲಿಕೆ ಸಮಾಧಾನವಾಗಲಿಲ್ಲ. ಮತ್ತೊಂದು ರೂಪಕವನ್ನು ಕೊಡುತ್ತಾಳೆ. ಅಗ್ನಿಯ ಸಿಂಹಾಸನದ ಮೇಲೆ ಕರ್ಪೂರದ ಬೊಂಬೆಯನ್ನು ಪ್ರತಿಷ್ಟಾಪಿಸಿದರೆ ಹೇಗಿರುತ್ತದೆ, ಏನಾಗುತ್ತದೆ? ಅಗ್ನಿಯೇ ಕರಗಿ, ಕರ್ಪೂರ ಉಳಿದುಕೊಳ್ಳುತ್ತದೆ!

ಅಮೂರ್ತವಾದ ಆಧ್ಯಾತ್ಮಿಕ ಅನುಭವಗಳನ್ನು ತಮ್ಮ ಆಡುಮಾತಿನ ಶಬ್ದಕಲ್ಪಕ್ಕೆ ಹೊಂದಿಸಿಕೊಂಡು ಹೇಳಿದ್ದಾರೆ ಶರಣರು. ಆದ್ದರಿಂದ ವಚನಗಳಲ್ಲಿ ಶಬ್ದಗಳ ಅನುಸಂಧಾನವಿದೆ. ಅನುಭಾವದ ಮೌನವೂ ಅಡಗಿದೆ. ಓದುಗರ ಸಾಮರ್ಥ್ಯದ ಮೇಲೆ ಎರಡನ್ನೂ ಇಲ್ಲಿ ಅನುಭವಿಸಬಹುದು. ದೇವರು ಒಂದು ಅನೂಹ್ಯ ಶಕ್ತಿ. ಅನಂತ ವಿಶ್ವವೇ ಆತನ ದೇಹ. ಜೀವ ಚೈತನ್ಯವೇ ಆತನ ಎದೆಬಡಿತ. ಪಂಚಭೂತಗಳೇ ಆತನ ಚಲನೆ. ಇಂಥ ಬ್ರಹ್ಮಾಂಡ ರೂಪಿ ಪರಮಾ��್ಮನ ಇರುವಿಕೆಯನ್ನು ತಮ್ಮಲ್ಲೇ ಕಂಡುಕೊಂಡ ಶರಣರು, ಆ ಇರುವಿಕೆಯಲ್ಲಿಯೇ ಪ್ರೀತಿಯನ್ನೂ, ಜವಾಬ್ದಾರಿಯನ್ನೂ, ನಿರ್ಭೀತಿಯನ್ನೂ ಅನುಭವಿಸಿದರು. ಆದ್ದರಿಂದಲೇ ವಚನಗಳ ಸಾಲುಗಳಲ್ಲಿ ಇಳಿದಾಗ, ಬೆಳಕಿನ ಕಿರಣಗಳೊಳಗೆ ನಡೆದಂತೆ, ಅಲ್ಲಿ ಹೊಳೆವ ರೇಖುಗಳನ್ನು ಸವರಿದಂತೆ, ಕಣ್ಣರಳಿಸಿ ಬಾಯಿ ಕಳೆದುಕೊಂಡಂತೆ, ಅದೊಂದು ಅಭಿವ್ಯಕ್ತಿಸಲಾಗದ ಅನೂಹ್ಯ ಅನುಭವ!

Previous post ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
Next post ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ

Related Posts

ನೂರನೋದಿ ನೂರಕೇಳಿ…
Share:
Articles

ನೂರನೋದಿ ನೂರಕೇಳಿ…

April 29, 2018 ಕೆ.ಆರ್ ಮಂಗಳಾ
“ನ್ಯೂ ಇಯರ್, ನ್ಯೂ ಮಿ”- ಹೊಸ ವರುಷದ ಉತ್ಸಾಹದಲ್ಲಿ ಬಹುತೇಕ ನಾವೆಲ್ಲರು ಮಾಡಿಕೊಳ್ಳುವ ಒಂದು ಸಾರ್ವಕಾಲಿಕ ಸಂಕಲ್ಪ. ಹಾಗೆ ಬದಲಾಗುವೆನೆಂಬ ಸ್ವಪ್ರತಿಜ್ಞೆ ಮಾತ್ರ ಮೊದಲ...
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
Share:
Articles

ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ

February 10, 2023 ಮಲ್ಲಿಕಾರ್ಜುನ ಕಡಕೋಳ
ಮಾಡಿ ಉಣ್ಣೋ ಬೇಕಾದಷ್ಟು/ ಬೇಡಿ ಉಣ್ಣೋ ನೀಡಿದಷ್ಟು ಮಾಡಿದವಗ ಮಡಿಗಡಬ/ ಮಾಡದವಗ ಬರೀಲಡಬ// ಇವು ಕಡಕೋಳ ಮಡಿವಾಳಪ್ಪನವರ ತತ್ವಪದವೊಂದರ ಆಯ್ದ ಸಾಲುಗಳು. ಈ ಇಡೀ ತತ್ವಪದ...

Comments 1

  1. Shubha
    May 2, 2020 Reply

    ಅನುಭವ ಮತ್ತು ಅನುಭಾವ ಕ್ಕೆ ಕೇವಲ ಒಂದು ದೀರ್ಘ ಮಾತ್ರ ವ್ಯತ್ಯಾಸ ,, ಆ ದೀರ್ಘ ಸುದೀರ್ಘವಾದುದು ಎಂಬುದು ಈ ಲೇಖನದಿಂದ ಸುಸ್ಪಷ್ಟ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಈ ಬಳ್ಳಿ…
ಈ ಬಳ್ಳಿ…
October 21, 2024
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಇದ್ದಷ್ಟೇ…
ಇದ್ದಷ್ಟೇ…
January 10, 2021
ವೀರ
ವೀರ
April 29, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
Copyright © 2025 Bayalu