ನೀನು ನಾನಲ್ಲ…
ಹಿಂದಿನ ಹೆಜ್ಜೆಗಳಲಿ
ತನ್ನನ್ನೇ ಅರಸುವ
ಮುಂದಿನ ದಿನಗಳಲಿ
ತನ್ನನ್ನೇ ಮೆರೆಯಿಸುವ
ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ
ಎಂದೋ ಆದುದನು
ಜತನದಲಿ ಕೂಡಿಟ್ಟು
ಎಲ್ಲವನೂ ಎಲ್ಲರನೂ
ಆ ಅಳತೆಯಲೇ ತೂಗುವ
ತಿಕಲು ಬುದ್ಧಿಯೇ ನೀನು ನಾನಲ್ಲ
ಕಂಗಳಲಿ ಕರುಳಾಗಿ
ರಸದ ದಾಸನಾಗಿ
ವಾಸನೆಯ ಜಾಡಿಗಿಳಿದು
ಸ್ಪರ್ಶಸುಖಕೆ ಬೆನ್ನುಹತ್ತಿ
ಹಿತವಾದುದನೇ ಕೇಳಲೆಳೆಸುವ ನೀನು ನಾನಲ್ಲ
ನೆನಹಿನಲಿ ಅಲೆಯಾಗಿ
ನಡೆಯಲ್ಲಿ ಸೋಗಾಗಿ
ನುಡಿಯಲ್ಲಿ ಕಪಟವಾಗಿ
ಕನಸಿನಲಿ ಬತ್ತಲೆಯಾಗಿ
ಚಿತ್ತದಲಿ ಹೆಪ್ಪುಗಟ್ಟಿದ ನೀನು ನಾನಲ್ಲ
ಆಸೆಗಣ್ಣಾಗಿ ಸುಖಕೆ ಬಾಯಾರಿ
ಸಾಧಿಸುವ ಹುಚ್ಚಾಗಿ
ಕೀರ್ತಿಕಾಮನೆಗೆ ಕಳವಳಿಸಿ
ಗುಪ್ತ ಬಯಕೆಗಳ ದಂಡಾಗಿ
ಒಳಗೊಳಗೆ ಅಂಡಲೆವ ನೀನು ನಾನಲ್ಲ
ಬಿರುಮಾತಿನ ಬಾಣವಾಗಿ
ದೂರುಗಳ ಧಾರೆಯಾಗಿ
ದ್ವೇಷದ ಕೊಂಬಾಗಿ
ಕುದಿವ ಮನವಾಗಿ, ಮೊನಚು ಅಂಬಾಗಿ
ಇದಿರ ಇರಿಯಲು ಕಾಯುವ ನೀನು ನಾನಲ್ಲ
ಮಾತಿಗೆ ಮಾತಾಗಿ
ದ್ವೇಷಕ್ಕೆ ದ್ವೇಷವಾಗಿ
ಕಷ್ಟಗಳಿಗೆ ಕೊಚ್ಚಿಹೋಗಿ
ಬೇಕು ಬೇಡಗಳ ಆಟದಲಿ ಸಿಲುಕಿ
ಕೊರಗಿ ಕಣ್ಣೀರಾಗುವ ನೀನು ನಾನಲ್ಲ
ಮೆಚ್ಚುಗೆಗೆ ಮರುಳಾಗುವ
ಹೊಗಳಿಕೆಗೆ ಹಿರಿಹಿಗ್ಗುವ
ತೆಗಳಿಕೆಗೆ ಮುನಿಸೇಳುವ
ಬೇಕಾದವರ ಅಟ್ಟಕ್ಕೇರಿಸುತಾ
ಬೇಡಾದವರ ನೀಕರಿಸುವ ನೀನು ನಾನಲ್ಲ
ಅಸೂಯೆಯಲಿ ಬೇಯುವ
ಎಡಬಿಡಂಗಿಯಲಿ ತುಯ್ಯುವ
ಆಲಸಕೆ ಮೈಚಾಚುವ
ಜ್ಞಾನಕ್ಕೆ ಮರುಳಾಗುವ
ಚಟಗಳಿಗೆ ಬೆನ್ನು ಬೀಳುವ ನೀನು ನಾನಲ್ಲ.
ಈ ಬಗೆಬಗೆಯ ಹೊಂಡದಲಿ
ಮುಳಿಗೇಳುವ ಮಜದಲಿ
ನಿಜದ ನಾನು ನನಗೆ ಸಿಗಲೇ ಇಲ್ಲ
ಇದೆ-ಇಲ್ಲಗಳ ನಡುವೆ
ಅಲ್ಲದ್ದು ತೂರಿಕೊಂಡು
ಬದುಕು ಲಪಟಾಯಿಸಿದ್ದು ಅರಿವಾಗಲಿಲ್ಲ.