
ನಾನು ಯಾರು?
ಕನ್ನಡಿ ಪ್ರತಿಬಿಂಬದಲ್ಲಿ ಕಂಡ
ಕರಿಮೈಯ ಕವಚ ನೋಡಿ
ಊಹಿಸಿಕೊಂಡದ್ದು
ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ
ಹೋದವರನು ಕಂಡು
ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು ಯಾರು?
ನಿನ್ನ ನೀ ತಿಳಿಯೆಂದು ಹೊರಟು
ಗೀತೆ-ಭಾಷ್ಯಗಳಲಿ, ಗಾಹೆ-ದೋಹೆಗಳಲಿ
ಅಹಂಬ್ರಹ್ಮನೆಂದು ಏಕಾತ್ಮವಾಗಿ
ಅನಾತ್ಮವ ನೋಡಿ
ಪಾಂಡಿತ್ಯದ ಸೊಕ್ಕಿನಿಂದ ಹೊರಬಿದ್ದವನು ಕೇಳಿದ ನಾನು ಯಾರು?
ನಾನೆಂಬುದೇ ಅಹಂಕಾರ
ನೀನೆಂಬುದೇ ಮಾಯೆ!
ಮನಸಿಜನ ಮಾಯೆ ವಿಧಿ ವಿಳಸನದಲ್ಲಿ ನೆರಂಬಡೆ
ಕೊಂದು ಕೂಗದೇ ನರರುಂ!
ಮನಸಿಜನ ಮೋಸವನರಿತ ಅಮನಸ್ಕ ಕೇಳಿದ ನಾನು ಯಾರು?
ಮೇಲೆ ಮಂಟಪದಾ ವಸ್ತು
ಬ್ರಹ್ಮಾಂಡ ಪಿಂಡಾಂಡವಾಗಿರಲು
ಪಿಂಡವನಳಿಸಿ ಬ್ರಹ್ಮಾಂಡ ಬಯಲಾಗಿ
ಧಮ್ಮ ಪವತ್ತನವ ಹಿಡಿದಾತ ಕೇಳಿದ ನಾನು ಯಾರು?
ನಾನು ಯಾರು ಕೊಟ್ಟ ಕುದುರೆಯನು ಏರಲರಿಯದವನ
ಪ್ರಶ್ನೆ ಮತ್ತು ಉತ್ತರ
ನಾನು ಇಲ್ಲವೆಂದು ಹೊರಟ ವೆಂಕಟಗಿರಿಯಪ್ಪ
ಬುಟ್ಟಪ್ಪ ಹುಟ್ಲಪ್ಪ
ಕಾಯಕ ಕೇವಲಿಗಳು, ನಿಜಯೋಗಿಗಳು…
-ಕೇಶವಮೂರ್ತಿ ಹೆಚ್.ಎನ್
(‘ನಾನು ಯಾರು? ಎಂಬ ಆಳ-ನಿರಾಳ’ ಪುಸ್ತಕದ ಪ್ರೇರಣೆ)
Comments 3
K.S. Shivashankar
Dec 14, 2021ನಾನು ಯಾರು? ಪುಸ್ತಕವನ್ನು ನಾನೂ ಓದಿದೆ. ಇಲ್ಲಿನ ಕವಿಗಳು ಪುಸ್ತಕದ ಸದಾಶಯವನ್ನು ಕಾವ್ಯದಲ್ಲಿ ಸೊಗಸಾಗಿ ಮೂಡಿಸಿದ್ದಾರೆ.
ಅಹ್ಮದ್
Jul 21, 2022ಚೆನ್ನಾಗಿದೆ
ವೀರೇಶ್
Sep 15, 2024ನಾನೆಂಬುದೇ ಅಹಂಕಾರ ನೀನೆಂಬುದೇ ಮಾಯೆ! ✍🏻👌🏻