ನಲುಗಿದ ಕಲ್ಯಾಣ – ನೊಂದ ಶರಣರು
ಹನ್ನೆರಡನೇ ಶತಮಾನದಲ್ಲಿ ಜರುಗಿದ ಸಮಾಜೋದ್ಧಾರ್ಮಿಕ ಚಳುವಳಿಯಲ್ಲಿ ಎಲ್ಲಾ ರೀತಿಯ ಕಾಯಕಗಳಲ್ಲಿ ತೊಡಗಿಸಿಕೊಂಡಿದ್ದ ಸಾಮಾನ್ಯ ಜನರು ಅಂದು ಆಳವಾಗಿ ಬೇರೂರಿದ್ದ ದೇವರು – ಆಚಾರ ಕುರಿತಾದ ಮೂಢನಂಬಿಕೆ ಕಂದಾಚಾರಗಳು ಸ್ತ್ರೀ ಶೋಷಣೆ ನಿಮ್ನವರ್ಗದವರ ದಮನ ನೀತಿಗಳ ವಿರುದ್ಧ ಒಕ್ಕೊರಲಿನಿಂದ ಒಂದು ಮುಷ್ಠಿ ಎಂಬಂತೆ ಬಸವಣ್ಣನವರ ಒರೆಯೊಳಗೆ ಸೇರಿ ಹೊಸ ಸಮಾಜ ರೂಪಿಸುವಲ್ಲಿ ತಮ್ಮನ್ನು ತಾವು ಅತ್ಯಂತ ಶ್ರದ್ಧೆ ನಿಷ್ಠೆಯಿಂದ ಅರ್ಪಿಸಿಕೊಂಡಿದ್ದರು. ದಿನಗಳೆದಂತೆ ಬಸವಣ್ಣನವರ ಕಲ್ಯಾಣರಾಜ್ಯದಲ್ಲಿ ದೀನದಲಿತರು ನಿಮ್ನವರ್ಗದವರು ಮಹಿಳೆಯರು ಅನಾಚಾರಿಗಳು ಕಳ್ಳರು ಸುಳ್ಳರು ವೇಶ್ಯೆಯರು ಹೀಗೆ ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಅಸಂಖ್ಯಾತ ಜನರು ವಿಚಾರವಂತರಾಗಲಾರಂಭಿಸಿದರು. ಅಂಥವರ ಬಾಯಿಂದ ಸತ್ಯನಿಷ್ಠೆ ಸದಾಚಾರದ ಮಾತುಗಳು ಬರಲಾರಂಭಿಸಿದವು. ಹಾದರದ ಸ್ಥಾನವನ್ನು ನೈತಿಕತೆ ತುಂಬಿತು, ಕಳ್ಳತನ ಸುಳ್ಳು ಸೋಮಾರಿತನಗಳು ಮಾಯವಾಗಿ ಸತ್ಯಶುದ್ಧ ಕಾಯಕ ನೆಲೆನಿಂತಿತು. ಸಮಾಜದಲ್ಲಿ ಕಡೆಗಣಿಸಲ್ಪಟ್ಟವರು ಗುರುತಿಸಲ್ಪಟ್ಟರು. ಅಜ್ಞಾನ ಸಾಗರದಲ್ಲಿ ಮುಳುಗಿದ್ದವರು ಸುಜ್ಞಾನ ನಾವೆಯನ್ನು ಏರಿದರು, ಅಕ್ಷರ ಅರಿಯದವರು ಅನುಭಾವದ ವಚನ ರಚಿಸಿದರು, ಬ್ರಹ್ಮನ ಪಾದದಲ್ಲಿ ಹುಟ್ಟಿದವರೆನಿಸಿ ತುಳಿಸಿಕೊಂಡವರು ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ ಎನ್ನುವ ಮಟ್ಟಕ್ಕೆ ಏರಿದರು.
ಕಲ್ಯಾಣವೆಂಬ ರಾಜ್ಯ ಕಲ್ಪಿತ ಸ್ವರ್ಗವನ್ನು ತಿರಸ್ಕರಿಸಿ, ಸ್ವರ್ಗಕ್ಕೂ ಮಿಗಿಲಾದ ಅನುಭಾವೀ ಸಾಮ್ರಾಜ್ಯವಾಗಿತ್ತು. ಸರೋವರದೊಳಗಣ ಕಮಲದಂತೆ ಸತ್ಯ ಶರಣರಿಂದ ಕಂಗೊಳಿಸುತ್ತಿದ್ದ ಇಂಥಾ ಅದ್ಭುತ ಸಾಮ್ರಾಜ್ಯವನ್ನು ಹಾಳುಗೆಡವಲು ಕುತ್ಸಿತ ಮತಿಗಳು ಕುಟಿಲಿಗಳು ಸದಾ ಹೊಂಚುಹಾಕಿ ಕುಳಿತಿದ್ದಂತೆ ಕಾಣುತ್ತದೆ. ಸತ್ಯಶರಣರ ವಿರುದ್ಧ ಕತ್ತಿಮಸೆಯುತ್ತಿದ್ದ ಸಂಪ್ರದಾಯವಾದಿ ದುರುಳರು ಅವರನ್ನು ಹರಣಮಾಡಲು ಒಂದು ಅವಕಾಶಕ್ಕಾಗಿ ಹೊಂಚುಹಾಕಿ ನರಿಯಂತೆ ಕಾಯುತ್ತಿದ್ದರು. ಸಮಾನ ಮನಸ್ಕರಾದ ಹಾಗೂ ಶರಣ ಸಹಧರ್ಮೀಯರಾದ ಹರಳಯ್ಯ-ಮಧವರಸರ ಮಕ್ಕಳ ವಿವಾಹವು ಕುತ್ಸಿತರಿಗೆ ಅಂಥಾ ಅವಕಾಶ ಒದಗಿಸಿತು. ಈ ವಿವಾಹ ಜರುಗಿದ್ದೇ ತಡ ಕೈಲಾಸದಂತಿದ್ದ ಕಲ್ಯಾಣವನ್ನು ಕಟುಕರ ಕೇರಿ ಮಾಡಿ ಸಂಭ್ರಮಿಸಿದರು. ಅಸಂಖ್ಯಾತ ಶರಣರ ಕಗ್ಗೊಲೆಯಾಯಿತು. ಅಮೂಲ್ಯವಾದ ವಚನಸಾಹಿತ್ಯ ಸಂಪತ್ತು ನೋಡನೋಡುತ್ತಿದ್ದಂತೆ ಅಗ್ನಿಗಾಹುತಿಯಾಯಿತು. ಸಾಲದೆಂಬಂತೆ ಹರಳಯ್ಯ ಮಧುವರಸ ಶೀಲವಂತರ ಕಣ್ಣುಕೀಳಿಸಿ ಆನೆ ಕಾಲಿಗೆ ಕಟ್ಟಿ ಅವರನ್ನು ಬರ್ಬರವಾಗಿ ಅಮಾನುಷವಾಗಿ ನಡುರಸ್ತೆಯಲ್ಲಿ ಕೊಂದು ವಿಕೃತಿ ಮೆರೆದರು ಆ ದುರುಳರು. ಈ ಹೀನ ಕೃತ್ಯಗಳು ಜರುಗುವುದಕ್ಕೂ ಮೊದಲು ಗುರುಬಸವಣ್ಣನವರನ್ನು ಗಡೀಪಾರು ಮಾಡಿ ರಾಜ್ಯದಿಂದ ಹೊರಕಳಿಸಿದರು.
ಅತ್ಯಂತ ಪ್ರೀತಿಯಿಂದ ಮಾನವನ ಜೀವನವನ್ನು ಅಜ್ಞಾನವೆಂಬ ಪ್ರಪಾತದಿಂದ ಮೇಲೆತ್ತಿ, ಅಂಟಿದ್ದ ಅವಿದ್ಯೆಯ ಕೆಸರನ್ನು ತೊಳೆದು ಶುಭ್ರರನ್ನಾಗಿ ಮಾಡಿ ಪ್ರತಿಯೊಬ್ಬರನ್ನೂ ಸದಾಚಾರದ ಶರಣರನ್ನಾಗಿ ಮಾಡಿ ಸಾರ್ಥಕ ಬದುಕಿನ ನೆಮ್ಮದಿಯಲ್ಲಿ ಇರಬೇಕಾದರೆ ಇಂಥಾ ಕೆಡುಕು ಉಂಟಾದುದು ಎಲ್ಲಾ ಶರಣರಲ್ಲಿ ಅತ್ಯಂತ ವಿಷಾದವನ್ನು ಉಂಟುಮಾಡಿತು. ಇಂಥಾ ವಿಷಮ ಸಂದರ್ಭದಲ್ಲಿ ಸೃಷ್ಟಿಯಾಗಿರಬಹುದಾದ ಶರಣರು ನೋವನ್ನು ತೋಡಿಕೊಂಡು ಬರೆದ ವಚನಗಳನ್ನು ಇಲ್ಲಿ ಒದಗಿಸಿಕೊಡಲು ಪ್ರಯತ್ನಿಸಿದ್ದೇನೆ. ಕಾರಣವಿಷ್ಟೇ, ಇಂದಿನ ಕೆಲವು ವಚನಾಸಕ್ತರು ಶರಣರು ದೇವಮಾನವರು, ಆದ್ದರಿಂದ ಅವರಿಗೆ ಯಾವುದೇ ದೈಹಿಕ ಮಾನಸಿಕ ನೋವುಂಟಾಗಿಲ್ಲ, ಹರಳಯ್ಯ ಮಧುವಯ್ಯ ಶೀಲವಂತರ ಎಳೆಹೂಟೆ ಶಿಕ್ಷೆ ಸಮಯದಲ್ಲೂ ಅವರು ದೈಹಿಕ ಮಾನಸಿಕ ನೋವುಗಳಿಗೆ ಒಳಗಾಗಲಿಲ್ಲ, ಅವರು ಮಾಯಾವಿಯಂತೆ ನಿಶ್ಯರೀರಿಗಳಾಗಿ ಸಂಚರಿಸುತ್ತಿದ್ದರು ಎಂದು ಪುಂಖಾನುಪುಂಖವಾಗಿ ಪುರಾಣದ ಕಥೆಗಳ ರೀತಿ ಹೇಳುವುದನ್ನು ನೋಡಿ ಈ ವಿಚಾರವಾಗಿ ಬರೆಯಬೇಕೆನಿಸಿ ಇದನ್ನು ತಮ್ಮ ಮುಂದೆ ಪ್ರಸ್ತುತಪಡಿಸ ಬಯಸುತ್ತೇನೆ. ಈ ವಚನಗಳು ಅತ್ಯಂತ ಸರಳಭಾಷೆಯಲ್ಲಿದ್ದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವುದರಿಂದ ಅವುಗಳಿಗೆ ವಿವರಣೆ ಕೊಡುವ ಪ್ರಯತ್ನ ಮಾಡಲಾಗಿಲ್ಲ.
ಶರಣರು ಕಲ್ಯಾಣ ತೊರೆದು ಹೋಗುವ ಹಾಗೂ ಕಲ್ಯಾಣದಲ್ಲಿ ಕ್ರಾಂತಿ ಘಟಿಸುವ ಸಂದರ್ಭದ ವಚನಗಳು:
೧. ನಾನೊಂದು ಕಾರಣ ಮರ್ತ್ಯಕ್ಕೆ ಬಂದೆನು, ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚೆನ್ನಬಸವಣ್ಣ ಬಂದನು, ಇನ್ನು ಬಾರದಂತೆ ಪ್ರಭುದೇವರು ಬಂದರು, ಇದಕ್ಕೆ ಆಜ್ಞಾ ಕರ್ತೃ ಮಡಿವಾಳ ಮಾಚಿತಂದೆ ಬಂದನು. ನಾನಿನ್ನಾರಿಗಂಜೆನು, ಬದುಕಿದೆನು
ಕಾಣಾ ಕೂಡಲಸಂಗಮದೇವಾ. – ಬಸವಣ್ಣ
೨. ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯ
ನಾನು ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾ/ ಕಲ್ಯಾಣವೆಂಬುದು ಪ್ರಣತೆಯಾಗಿತ್ತು ನಾನು ತೈಲವಾದೆನು ನೀವು ಬತ್ತಿಯಾದಿರಿ
ಪ್ರಭುದೇವರು ಜ್ಯೋತಿಯಾದರು ಪ್ರಣತೆ ಒಡೆದಿತ್ತು ತೈಲ ಚೆಲ್ಲಿತ್ತು ಬತ್ತಿ ಬಿದ್ದಿತ್ತು ಜ್ಯೋತಿ ನಂದಿತ್ತಯ್ಯಾ ನಮ್ಮ ಕೂಡಲಸಂಗನ ಶರಣರ ಮನ ನೊಂದಿತ್ತಯ್ಯಾ. – ಬಸವಣ್ಣ
೩. ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ. ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ. ಒಬ್ಬ ಜಂಗಮದ ಅಭಿಮಾನದಿಂದ ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು, ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ. – ಬಸವಣ್ಣ
೪. ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ. ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ. ಹುಟ್ಟಿಲ್ಲದ ಬಂಜೆಗೆ ಮಕ್ಕಳ ಕೊಟ್ಟಿರಿ ಬಸವಯ್ಯಾ. ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ. ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ? – ನೀಲಮ್ಮತಾಯಿ
೫. ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ, ಕರಸ್ಥಲ ಮನಸ್ಥಲವಾಯಿತ್ತು ಬಸವಾ. ಸಂಗಯ್ಯಾ, ಬಸವ ಹೋದನತ್ತ ನಾನಡಗಿದೆನಯ್ಯಾ ನಿಮ್ಮಲಿತ್ತ. – ನೀಲಮ್ಮತಾಯಿ
೬. ಎಲೆ ಅಯ್ಯಗಳಿರಾ, ಎಲೆಗಳೆದ ವೃಕ್ಷವ ಕಂಡಿರೆ ಬಸವನ? ಎಲೆ ಅಯ್ಯಗಳಿರಾ, ರೂಹಿಲ್ಲದ ಚೋಹವ ಕಂಡಿರೆ ಬಸವನ? ಎಲೆ ಸ್ವಾಮಿಗಳಿರಾ, ನಿಮ್ಮ ನಿಲವಿನ ದರ್ಪಣವ ಕಂಡಿರೆ ಬಸವನ? ಸಂಗಯ್ಯನಲ್ಲಿ ಸ್ವಯವಳಿದ ಬಸವನ ಕುರುಹ ಕಂಡಿರೆ? – ನೀಲಮ್ಮತಾಯಿ
೭. ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ. ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ. ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ. ಆ ಕಲ್ಯಾಣವಳಿದು ಕೈಲಾಸವಾದ ಬಳಿಕ, ಬಸವನ ಮೂರ್ತಿಯಿಲ್ಲ. ಬಸವನ ಮೂರ್ತಿಯನರಿಯದ ಕಾರಣ ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ. – ನೀಲಮ್ಮತಾಯಿ
೮. ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ, ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ, ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ, ಇಷ್ಟ ಪ್ರಾಣ ಭಾವವಿದೆಂದು ತೋರಿದ ಗುರುವೆ, ನಿಜದರಿವನರುಹಿಸಿಕೊಟ್ಟ ಗುರುವೆ, ನಿರ್ಮಳಪ್ರಭೆಯ ತೋರಿದ ಗುರುವೆ, ನಿಜವನನುಭವಕ್ಕೆ ತಂದ ಗುರುವೆ ನಿಮ್ಮ ಘನವ ಕಾಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ, ಬಸವನ ಪ್ರಭೆ ಎಲ್ಲಿ ಅಡಗಿತ್ತೊ? – ನೀಲಮ್ಮತಾಯಿ
೯. ಅವಧಿ ಅಳಿಯಿತ್ತು ವ್ಯವಧಾನ ಉಳಿಯಿತ್ತು. ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ. ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ ನಡೆ/ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು. ಉಳುಮೆಯಲ್ಲಿ ನಿಜವನೆಯ್ದು ನಡೆ, ಚೆನ್ನಬಸವಣ್ಣಾ. ಮಹವನೊಡಗೂಡು ಮಡಿವಾಳಯ್ಯ. ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು ನಿಜವನೆಯ್ದುವುದು ನಿರ್ವಯಲ ಸಮಾಧಿಯಲ್ಲಿ. ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ ! ನಡೆಯಿರಿ ಕಾಯವೆರಸಿ ಕೈಲಾಸಕ್ಕೆ, ಕಾಯಸಹಿತ ಎಯ್ದುವುದು. ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು. ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ. ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ. – ಅಲ್ಲಮಪ್ರಭುದೇವರು
೧೦. ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ. -ಮೋಳಿಗೆ ಮಾರಯ್ಯ
೧೧. ಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೆ, ಲಿಂಗಜಂಗಮದ ಚೈತನ್ಯವೆ ನಿಮ್ಮನಗಲಿ ಎಂತು ಸೈರಿಸುವೆನು? ಎಲೆ ಅಯ್ಯಾ ಪರಮಗುರುವೆ, ಆಹಾ ಎನ್ನ ಅಂತರಂಗದ ಜ್ಯೋತಿಯೆ, ನಿಮ್ಮ ಒಕ್ಕ ಶೇಷಪ್ರಸಾದವನಿಕ್ಕಿ ಎನ್ನ ಪಾವನವಮಾಡಿ ಉಳುಹಿದೆಯಯ್ಯಾ. ಲಿಂಗವೆ ಎನಗಿನ್ನಾರು ಹೇಳಯ್ಯಾ ನೀವಲ್ಲದೆ? ಬಸವಣ್ಣಪ್ರಿಯ ಚೆನ್ನಸಂಗಯ್ಯಾ, ನೀವಗಲಿದಡೆ ಎನ್ನ ಪ್ರಾಣ ನಿಮ್ಮೊಳಗಲ್ಲದೆ ಅಗಲಬಲ್ಲುದೆ? – ಅಕ್ಕನಾಗಮ್ಮ
೧೨. ಅಯ್ಯಾ ಗುರುವೆಂಬರ್ಚಕನು ತಂದು, ಎನಗಿಷ್ಟವ ಕಟ್ಟಲಿಕೆ, ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು. ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು, ಲಿಖಿತವ ಲೇಖನವ ಮಾಡಿ ಮಾಡಿ ದಣಿದು, ಹಂಗನೂಲ ಹರಿದು ಹಾಕಿದೆನು. ಇಷ್ಟವನಿಲ್ಲಿಯೇ ಇಟ್ಟೆನು. ಅಯ್ಯಾ ನಾ ಹಿಡಿದ ನೀಲಕಂಠನು ಶಕ್ತಿ ಸಮೇತವ ಬಿಟ್ಟನು, ಕಲ್ಯಾಣ ಹಾಳಾಯಿತ್ತು, ಭಂಡಾರ ಸೂರೆಹೋಯಿತ್ತು, ನಿರ್ವಚನವಾಯಿತ್ತು. ಶಾಂತ ಸಂತೋಷಿಯಾದ, ಅರಸರು ನಿರ್ಮಾಲ್ಯಕ್ಕೊಳಗಾದರು. ಅಲೇಖ ನಾಶವಾಯಿತ್ತು, ಪತ್ರ ಹರಿಯಿತ್ತು, ನಾದ ಶೂನ್ಯವಾಯಿತ್ತು ಒಡೆಯ ಕಲ್ಲಾದ ಕಾರಣ, ಎನ್ನೈವರು ಸ್ತ್ರೀಯರು ಉಳಲಾಟಗೊಂಡೇಳಲಾರದೆ ಹೋದರು ಕಾಣಾ, ಕಲ್ಲಿನಾಥಾ. – ವಚನಭಂಡಾರಿ ಶಾಂತರಸ
ಗುರು ಬಸವಣ್ಣನವರು ಕೂಡಲಸಂಗಮದಲ್ಲಿ ಕಾಯಲಿಂಗೈಕ್ಯ ಹೊಂದಿದ ಸಂದರ್ಭದ ವಚನಗಳು:
೧. ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನ ನಿತ್ಯಭಂಡಾರಕ್ಕೆ ಸಂದಿತ್ತಯ್ಯಾ. ಬೆಟ್ಟಕ್ಕೆ ಬಳ್ಳು ಬಗುಳಿದಂತಾಯಿತ್ತಯ್ಯಾ. ಕರೆದುಕೊಳ್ಳಯ್ಯಾ, ಓ ಎನ್ನಯ್ಯಾ, ಕೂಡಲಸಂಗಮದೇವಾ.
೨. ಎಸಳೆಸಳಹೊಸದು ನೋಡುವ ಯೋಗಿಗಳು ಬಸವನೈಕ್ಯವನು ಕಾಣದಾದರು. ರೂಪ ನಿರೀಕ್ಷಿಸುವ ಯೋಗಿಗಳು ಬಸವನೈಕ್ಯವ ಕಾಣದಾದರು. ಸಂಗಯ್ಯಾ, ನಿಮ್ಮ ಬಸವನೈಕ್ಯವ ಬಲ್ಲಾತ ಚೆನ್ನಬಸವಣ್ಣನು. – ನೀಲಮ್ಮತಾಯಿ
೩. ಲಿಂಗ ಜಂಗಮ, ಜಂಗಮ ಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ! ಪ್ರಸಾದ ಕಾಯ, ಕಾಯ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ!
ಲಿಂಗ ಪ್ರಾಣ, ಪ್ರಾಣ ಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಥಾಪ್ಯವ ಮಾಡಿ ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ! ಎನ್ನ ಮನವ ಮಹಾಸ್ಥಲದಲ್ಲಿ ಲಯವ ಮಾಡಿ, ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ! ನಿನ್ನ ಒಕ್ಕುಮಿಕ್ಕ ಶೇಷವನಿಕ್ಕಿ ಆಗು ಮಾಡಿ ನಿನ್ನಂತರಂಗದಲ್ಲಿ ಅವ್ವೆ ನಾಗಾಯಿಯ ಇಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕರಗಿ ಕೊರಗಿತ್ತಯ್ಯಾ, ಸಂಗನಬಸವಣ್ಣಾ! ಕೂಡಲಚೆನ್ನಸಂಗಯ್ಯಂಗೆ ಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನಬಸವಣ್ಣಾ! – ಚನ್ನಬಸವಣ್ಣ
೪. ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ ! ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು? ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ. ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ. ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ. ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ. ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ? – ಅಕ್ಕನಾಗಮ್ಮ
೫. ನಿನ್ನ ಆಕಾರ ನಿರಾಕಾರವಾಯಿತಲ್ಲಾ ಬಸವಣ್ಣ. ನಿನ್ನ ಪ್ರಾಣ ನಿಃಪ್ರಾಣವಾಯಿತಲ್ಲಾ ಬಸವಣ್ಣ. ಲಿಂಗ ಜಂಗಮದ ಮಾಟ ಸಮರ್ಪಿತವಾಯಿತಲ್ಲಾ ಬಸವಣ್ಣ. ನಿಶ್ಶಬ್ದವೇದ್ಯವಾದೆಯಲ್ಲಾ ಬಸವಣ್ಣ. ಕಲಿದೇವರದೇವನ ಹೃದಯಕಮಲವ ಹೊಕ್ಕು,ದೇವರಿಗೆ ದೇವನಾಗಿ ಹೋದೆಯಲ್ಲಾ, ಸಂಗನಬಸವಣ್ಣ. – ಮಡಿವಾಳ ಮಾಚಿದೇವ
೬. ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ. ಮೆಟ್ಟಿದ ಕೆರಹ ಕಳೆದುಹೋದಾತ ನೀನಲಾ ಬಸವಣ್ಣ. ಕಟ್ಟಿದ ಮುಡಿಯ ಬಿಟ್ಟುಹೋದಾತ ನೀನಲಾ ಬಸವಣ್ಣ. ಸೀಮೆಸಂಬಂಧವ ತಪ್ಪಿಸಿಹೋದಾತ ನೀನಲಾ ಬಸವಣ್ಣ. ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ಬಸವಣ್ಣ. ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲಾ ಬಸವಣ್ಣ. ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ. ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ಕಲಿದೇವರದೇವ. – ಮಡಿವಾಳ ಮಾಚಿದೇವ
೭. ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ. ಅಕ್ಕನಾಗಾಯಿ, ಮಿಂಡ ಮಲ್ಲಿನಾಥ, ಹಡಪದ ಅಪ್ಪಣ್ಣ, ಮೊಗವಾಡದ ಕೇಶಿರಾಜ, ಕೋಲಶಾಂತಯ್ಯ ಮೊದಲಾದ ಶಿವಗಣಂಗಳೆಲ್ಲರೂ ಬಸವರಾಜನ ಬಯಲ ಬೆರಸಿದರು. ಆ ಬಯಲ ಪ್ರಸಾದದಿಂದ, ನಿರುಪಮ ಪ್ರಭುದೇವರು ಕದಳಿಯಲ್ಲಿ ಬಯಲಾದರು. ಆ ಬಯಲ ಪ್ರಸಾದದಿಂದ, ಮೋಳಿಗೆಯ ಮಾರಯ್ಯ ಕಕ್ಕಯ್ಯ ಪಡಿಹಾರಿ ಉತ್ತಣ್ಣ ಕನ್ನದ ಮಾರಣ್ಣ ಕಲಕೇತ ಬೊಮ್ಮಣ್ಣ ನುಲಿಯ ಚಂದಯ್ಯ ಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತ ರಾಮಯ್ಯ ಮೇದರ ಕೇತಯ್ಯ ಮೊದಲಾದ ಏಳುನೂರೆಪ್ಪತ್ತು ಅಮರಗಣಂಗಳ ದಂಡು, ಕೈಲಾಸಕ್ಕೆ ನಡೆಯಿತ್ತು, ಬಂದ ಮಣಿಹ ಪೂರೈಸಿತ್ತು. ಸಂದ ಪುರಾತನರೆಲ್ಲರು ಎನ್ನ ಮನದ ಮೈಲಿಗೆಯ ಕಳೆದ ಕಾರಣ, ಕಲಿದೇವರದೇವಯ್ಯಾ, ಇವರೆಲ್ಲರ ಒಕ್ಕಮಿಕ್ಕಪ್ರಸಾದದ ಬಯಲು ಎನಗಾಯಿತ್ತು. – ಮಡಿವಾಳ ಮಾಚಿದೇವ
೮. ಬಿಂದುವ ಹರಿದೆಯಲ್ಲಾ ಬಸವಣ್ಣ. ನಾದವ ಸಿಂಹಾಸನವ ಮಾಡಿಕೊಂಡು ಇದ್ದೆಯಲ್ಲಾ ಬಸವಣ್ಣ. ಅಷ್ಟಗುಣಂಗಳ ನಷ್ಟವ ಮಾಡಿದೆಯಲ್ಲಾ ನಿಜಲಿಂಗ ಬಸವಣ್ಣ. ಶುಕ್ಲಶೋಣಿತ ಮೇಧಸ್ಸು ಇವರಿಂದಾದ ಕಾಯವೆತ್ತ ಹೋಯಿತ್ತಯ್ಯಾ ಘನಲಿಂಗ ಬಸವಣ್ಣ. ಭಕ್ತಿಯ ರೂಪುಗೆಟ್ಟು ಮತ್ತೊಂದು ರೂಪಾದೆಯಲ್ಲಾ ನಿರೂಪಿ ಬಸವಣ್ಣ. ಶೂನ್ಯಪ್ರಸಾದಿಯಲ್ಲ, ನಿಶ್ಯೂನ್ಯಪ್ರಸಾದಿಯಲ್ಲ. ಆವ ಪ್ರಸಾದವನೂ ಸೋಂಕದ ಪ್ರಸಾದಿ. ಯೋನಿಜನಲ್ಲದ, ಅಯೋನಿಜಲ್ಲದ, ನಿಜಮೂರ್ತಿಯೆನಿಸುವ ಬಸವಣ್ಣ. ಭಕ್ತಿಯ ಹರಹಿ ಹೋದೆಯಲ್ಲಾ ಬಸವಣ್ಣ. ಮೂರ್ತನಲ್ಲದ, ಅಮೂರ್ತನಲ್ಲದ ಲಿಂಗವ ತೋರಿದೆಯಲ್ಲಾ ಬಸವಣ್ಣ. ನಿರವಯವಾಗಿ ಹೋದನು ನಮ್ಮ ಬಸವರಾಜನು. ಬೆಳಗನುಟ್ಟು ಬಯಲಾಗಿ ಹೋದನು ನಮ್ಮ ಬಸವಲಿಂಗನು. ಬಸವಣ್ಣ ಬಸವಣ್ಣ ಬಸವಣ್ಣ ಎನಲಮ್ಮೆನು, ಎನ್ನ ವಾಗ್ಮನಕ್ಕಗೋಚರನಾಗಿ ಬಸವಣ್ಣಂಗೆ ಶರಣೆಂಬ ಪಥವ ತೋರಯ್ಯಾ, ಕಲಿದೇವರದೇವ. – ಮಡಿವಾಳ ಮಾಚಿದೇವ
ಕೆಲವೇ ಕೆಲವು ವಚನಗಳ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ. ಇನ್ನೂ ಹೆಚ್ಚಿನ ವಚನಗಳನ್ನು ಸಂಗ್ರಹಿಸುವ ಪ್ರಯತ್ನದಲ್ಲಿರುವೆ.
Comments 8
Raju Gubbi
Jan 11, 2021ಕಲ್ಯಾಣದ ಕೊನೆಯ ದಿನಗಳನ್ನು ಇತಿಹಾಸ ಮತ್ತು ವಚನಗಳ ಸಹಾಯದಿಂದ ಮರುಸೃಷ್ಟಿಸುವ ಅಗತ್ಯವಿದೆ. Good Effort sir.
Nagaraju M.P
Jan 13, 2021ಶರಣರ ಹತ್ಯಾಕಾಂಡದ ಇತಿಹಾಸ ಪಠ್ಯಪುಸ್ತಕದಲ್ಲಿ ಲಭ್ಯವಾಗಬೇಕು. ನಮ್ಮ ಮಣ್ಣಿನಲ್ಲಿ ನಡೆದ ಈ ಅದ್ಭುತ ಪ್ರಯೋಗ ನಮ್ಮವರಿಗೇ ತಿಳಿದಿಲ್ಲದಿರುವುದು ಶೋಚನೀಯ. ಶರಣರೂ ನಮ್ಮನಿಮ್ಮಂತೆ ಮನುಜರು. ಲೇಖಕರ ನಿಲುವು ಸ್ವಾಗತಾರ್ಹ.
Devaraj B.S
Jan 14, 2021ಶರಣರು ದೈಹಿಕವಾಗಿಯೂ, ಮಾನಸಿಕವಾಗಿಯೂ ಬಳಲಿದ್ದು ಸುಳ್ಳಲ್ಲ. ಅವರು ತಮ್ಮ ನಡೆ-ನುಡಿಗಳಿಂದ ಕಟ್ಟಿದ ಕಲ್ಯಾಣ ತಮ್ಮ ಕಣ್ಣೆದುರೇ ನಾಶವಾಗುವಾಗ ಅವರು ಎಷ್ಟೊಂದು ನೊಂದಿರಬಹುದು!!!
Paramashivappa Patil
Jan 17, 2021ಶರಣರು ದಿಕ್ಕಾಪಾಲಾಗ ಬೇಕಾದ ಸಂದರ್ಭದಲ್ಲಿ ಬರೆಯಲಾಗಿರುವ ವಚನಗಳು ಹೃದಯವಿದ್ರಾವಕವಾಗಿವೆ. ಅವರ ನೋವು ಊಹಿಸಲೂ ಅಸಾಧ್ಯ. ಇಂತಹ ಅನೇಕ ವಚನಗಳು ಕಳೆದುಹೋಗಿರಲೂಬಹದು. ಇತಿಹಾಸದ ಕರಾಳ ದಿನಗಳು ಅವು.
Murthy
Jan 18, 2021ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯ- ಈ ವಚನ ನನ್ನಲ್ಲಿ ಎಬ್ಬಿಸುವ ತರಂಗಗಳನ್ನು ಹೇಳಲಾರೆ!
ಶಾರದಮ್ಮ ಬಳ್ಳಾರಿ
Jan 18, 2021ಅವತ್ತು ಸನಾತನಿಗಳು ಶರಣರನ್ನು ಕೊಂದರು, ಇವತ್ತು ಲಿಂಗಾಯತರೇ ಶರಣರನ್ನು ಕೊಲ್ಲುತ್ತಿದ್ದಾರೆ.
Mahesh K
Jan 20, 2021I am genuinely delighted to read this webpage posts which includes lots of valuable information… Thank you
Channappa Vali
Jan 21, 2021ಕಲ್ಯಾಣದಲ್ಲಿ ಶರಣರ ಕೊನೆಯ ದಿನಗಳು “ಊರು ಕೆಟ್ಟು ಸೂರೆಯಾಡುವಲ್ಲಿ…” ವಚನದಲ್ಲಿ ಯಾರಿಗಾರೂ ಇಲ್ಲದ ಅನಾಥತೆ ಕಾಣುತ್ತದೆ….. ಕಲ್ಯಾಣದ ಪಣತೆ ಒಡೆದು ಹೋದಾಗ ಹೇಗಿದ್ದೀತು… ಊಹೆ ಮಾಡುತ್ತಿದ್ದರೆ ಎದೆ ಒಡೆದಂತೆ ಭಾಸವಾಗುತ್ತದೆ.