ನನ್ನ ಶರಣರು…
ನನ್ನ ಶರಣರು ಅವರು-
ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು
ಕಕ್ಕುಲತೆಯಿಂದ ಬದುಕ ಕಟ್ಟಿದವರು
ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು
ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು.
ನನ್ನ ಶರಣರು ಅವರು-
ಸತ್ಯದ ಕೂರಲಗ ಕಟ್ಟಿಕೊಂಡವರು
ಅನ್ಯಾಯ ಅಸಮತೆಗೆ ಸಿಡಿದೆದ್ದು ನಿಂತವರು
ಸ್ವರ್ಗ ನರಕಗಳನ್ನು ದೂರ ಅಟ್ಟಿದವರು
ಹೋಮ-ಹವನಗಳಿಗೆ ನೀರು ಬಿಟ್ಟವರು
ನನ್ನ ಶರಣರು ಅವರು-
ಶ್ರೇಷ್ಠ-ಕನಿಷ್ಠಗಳ ಹಿಡಿತಕ್ಕೆ ಸಿಗದವರು
ಸಂಗ್ರಹಣೆಯ ಮೋಹಕ್ಕೆ ಜಾರಿ ಬೀಳದವರು
ಅಹಮ್ಮಿನ ಆಟವನು ಅಡಗಿಸಬಲ್ಲವರು
ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು
ನನ್ನ ಶರಣರು ಅವರು-
ಸಾವ ಲೆಕ್ಕಿಸದೆ ಸಾಹಿತ್ಯ ಉಳಿಸಿದವರು
ನುಡಿಯಲ್ಲಿ ನಡೆ ನಿಲಿಸಿ ನಿರಾಳರಾದವರು
ಬಯಲ ಹೊಲಬಿನಲಿ ಕರಗಿ ಹೋದವರು
ನಿತ್ಯ ಪ್ರಜ್ಞೆಯಾಗಿ ನನ್ನೆದೆಯಲುಳಿದವರು.
Comments 2
Chandrika
Apr 21, 2021very nice poem akka
Sharan
Apr 26, 2023ನನ್ನ ಶರಣರು ಎಂಬ ಅಭಿಮಾನದ ಸಾಲಿನೊಂದಿಗೆ ಶರಣ ದರ್ಶನ ಮಾಡಿಸಿದೆ ಈ ಕವಿತೆ ಶರಣು ಶರಣಾರ್ಥಿ