ನನ್ನೊಳಗಿನ ನೀನು
ನಿನ್ನೆ ನಾಳೆಯ ನಡುವೆ ಜೀವಯಾನ
ಮಾತು-ಮೌನದ ನಡುವೆ ಭಾವಯಾನ…
ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ
ಹರಿದ ಹತ್ತಿಯ ತುಂಡು
ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು
ಕಳವಳದ ಎದೆಯೊಳಗೆ ಶತಮಾನದುಸಿರು
ಗೊಂದಲದ ತಲೆಯೊಳಗೆ ಪ್ರಶ್ನೆಗಳ ಬಸಿರು
ಭೂಮಿ ತಳಮಳಿಸುತಿದೆ…
ಕಾಲದ ತೋಳಿನಲಿ ಜೀವ
ಉರಿವ ಕೈಯಲಿ ಬೆಣ್ಣೆ
ಲಾಲಿ ಹೇಳುವವರಾರು?
ಕೊಳ್ಳಿ ಇಕ್ಕಿದವರಾರು?
ನಿಗಿಮಿಗಿಯ ಕೆಂಡದಲಿ ಇನಿದನಿಯ ಗಾನ
ಬೆಂಕಿ ಹಪಹಪಿಸುತಿದೆ…
ಬೆಂದಷ್ಟು ಪಡೆದಷ್ಟು ನಕ್ಕಷ್ಟು ನಲಿದಷ್ಟು
ನಾಲಿಗೆ ಚಪ್ಪರಿಸಿ ಸವಿದಷ್ಟು
ದಕ್ಕಿದಷ್ಟು ಮಾತ್ರವೇ ಇಲ್ಲಿ
ನಮ್ಮ ನಮ್ಮಯ ಪಾಲು
ಉಳಿದುದೆಲ್ಲ ಮರೀಚಿಕೆಯ ಸಾಲು
ನೀರು ನೀರಡಿಸುತಿದೆ…
ಅಗಣಿತ ಜಗದೊಳಗೆ
ಕಳೆದುಹೋಗಿದೆ ಜೀವ
ದೇಹದ ಒಳಗೆಲ್ಲೋ
ಮರೆಯಾಗಿದೆ ಆತ್ಮ
ಮೌನದಲಿ ಅರಸುತಿದೆ ಮೂಕ ಭಾವ
ನನ್ನ ಹುಡುಕಾಟದಲಿ ಸಿಗಬಹುದೇ ನಿನ್ನ ಅಸ್ತಿತ್ವ?