ನಡುವೆ ಸುಳಿವಾತ್ಮ…
ಮಹಿಳೆ ಎನ್ನುತ್ತಲೇ ದುರ್ಬಲಳು, ಸೌಂದರ್ಯ ದೇವತೆ, ಕಾಮದ ಬೊಂಬೆ, ಮಕ್ಕಳನ್ನು ಹೆರುವ ಯಂತ್ರ, ಅವಳ ಕ್ಷೇತ್ರ ಅಡಿಗೆಮನೆ, ಅವಳು ಬೀದಿಗೆ ಬರಬಾರದು, ತನ್ನ ಎಲ್ಲೆಯನ್ನು ಮೀರಿ ನಡೆದುಕೊಳ್ಳಬಾರದು ಎಂದೆಲ್ಲ ಆಪಾದನೆ ಮಾಡುವುದುಂಟು. ಇದಕ್ಕೆ ಕಾರಣ ಪ್ರಾಚೀನ ಕಾಲದಿಂದಲೂ ಪುರುಷ ಸಮಾಜ ಅವಳನ್ನು ನೋಡುತ್ತ ಬಂದಿರುವ ದೃಷ್ಟಿಕೋನ. ‘ದೃಷ್ಟಿಯಂತೆ ಸೃಷ್ಟಿ.’ ವ್ಯಕ್ತಿಯ ದೃಷ್ಟಿ ಆರೋಗ್ಯಪೂರ್ಣವಾಗಿದ್ದರೆ ಅವನಿಗೆ ಬಾಹ್ಯ ಜಗತ್ತನ್ನು, ಅಲ್ಲಿರುವ ಜನರನ್ನು ಕಾಣುವ ದೃಷ್ಟಿಕೋನ ಬದಲಾಗುವುದು. ಅವನ ದೃಷ್ಟಿಯಲ್ಲೇ ದೋಷವಿದ್ದರೆ ಬಾಹ್ಯ ಜಗತ್ತನ್ನು ಮತ್ತು ಜನರನ್ನು ಯಥಾವತ್ತಾಗಿ ಕಾಣಲು ಖಂಡಿತ ಸಾಧ್ಯವಿಲ್ಲ. ‘ಕಾಮಾಲೆ ಪೀಡಿತರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುತ್ತದೆ’ ಎಂದರೆ ಸತ್ಯವಲ್ಲ. ಆ ವ್ಯಕ್ತಿ ತನ್ನ ಕಾಮಾಲೆ ರೋಗಕ್ಕೆ ಚಿಕಿತ್ಸೆ ಪಡೆಯುವುದು ಅಗತ್ಯ ಮತ್ತು ಅನಿವಾರ್ಯ. ಈ ನೆಲೆಯಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನ-ಮಾನ-ಗೌರವ ತಂದುಕೊಟ್ಟವರು ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರು. ಅದರಲ್ಲೂ ಬಸವಣ್ಣನವರು ಮನೆ ಬಿಟ್ಟದ್ದೇ ಸ್ತ್ರೀಯರ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ.
ಬ್ರಾಹ್ಮಣ ಕುಟುಂಬದಲ್ಲಿ ಗಂಡುಮಕ್ಕಳಿಗೆ ಬಾಲ್ಯದಲ್ಲೇ ಜನಿವಾರ ಸಂಸ್ಕಾರ ನೀಡುವ ಪದ್ಧತಿ. ಅದರಂತೆ ಬಾಲಕ ಬಸವಣ್ಣನಿಗೆ ಸಂಸ್ಕಾರ ಏರ್ಪಡಿಸಿದ ಸಂದರ್ಭದಲ್ಲಿ ಅವನ ಪ್ರಶ್ನೆ- ನನಗೆ ನೀಡುವ ಸಂಸ್ಕಾರ ನನ್ನನ್ನು ಹೆತ್ತ ತಾಯಿಗೆ, ನನ್ನೊಡನೆ ರಕ್ತ ಹಂಚಿಕೊಂಡು ಈ ಭೂಮಿಗೆ ಬಂದ ಸಹೋದರಿಗೆ, ಇತರ ಜನಾಂಗದ ಮಕ್ಕಳಿಗೆ ಏಕಿಲ್ಲ? ಅವರಿಗೆ ಮೊದಲು ಜನಿವಾರ ಸಂಸ್ಕಾರವಾಗಲಿ ಎಂದು ಹಠ ಹಿಡಿಯುವನು. ‘ಕುಲಕ್ಕೆ ಕೊಡಲಿಯ ಕಾವೇ ಮೃತ್ಯು’ ಎಂದರಿತ ವೈದಿಕ ಪುರೋಹಿತರು ಬಾಲ್ಯದಲ್ಲೇ ಇಂಥ ಪ್ರಶ್ನೆಗಳನ್ನು ಕೇಳುವುದು ಉದ್ಧಟತನ; ನಾಳೆ ಇವನು ನಮ್ಮ ಜನಾಂಗಕ್ಕೇ ಮೃತ್ಯುಸ್ವರೂಪನಾಗಬಹುದು ಎಂದು ಬಾಲಕ ಬಸವಣ್ಣನಿಗೆ ಬಹಿಷ್ಕಾರ ಹಾಕುವರು. ಆಗ ಬಹಿಷ್ಕಾರ ಪದ್ಧತಿ ತುಂಬಾ ಕ್ರೂರವಾಗಿತ್ತು. ಬಹಿಷ್ಕೃತನಿಗೆ ಯಾರೂ ಬೆಂಕಿ, ಬಿಸಿನೀರು ಕೊಡುವಂತಿಲ್ಲ, ವ್ಯವಹರಿಸುವಂತಿಲ್ಲ. ಮನೆಯಿಂದ ಹೊರಗೆ ಹಾಕಬೇಕು. ಆಗ ಬಸವಣ್ಣ ನೀವು ನನಗೆ ಬಹಿಷ್ಕಾರ ಹಾಕುವುದೇನು? ನಿಮ್ಮೆಲ್ಲ ಅರ್ಥಹೀನ ಅಂಧ ಸಂಪ್ರದಾಯಗಳಿಗೆ ನಾನೇ ಬಹಿಷ್ಕಾರ ಹಾಕುವೆ ಎಂದು ಆ ಕ್ಷಣವೇ ಮನೆ ಬಿಟ್ಟು ಹೋಗುವನು.
ಮುಂದೆ ಬಸವಣ್ಣ ಕೂಡಲಸಂಗಮ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಗಿಸುವ ವೇಳೆಗೆ ಅವನಿಗೆ ಜಾತಿ, ಧರ್ಮ, ದೇವರ ಬಗ್ಗೆ ಹೊಸ ಹೊಳವು ಮೂಡುವುದು. ಸ್ಥಾವರ ದೇವರ ಬದಲಾಗಿ ಇಷ್ಟಲಿಂಗದ ಶೋಧನೆ ಮಾಡಿ ಅದನ್ನೇ ತನ್ನ ಆರಾಧ್ಯ ದೈವ ಎಂದು ಪೂಜಿಸುವನು. ಇಷ್ಟಲಿಂಗವನ್ನು ಮೊದಲು ತನ್ನ ಸಹೋದರಿ ನಾಗಮ್ಮನಿಗೆ ಕರುಣಿಸಿ ಸ್ತ್ರೀಯರಿಗೂ ಧಾರ್ಮಿಕ ಸ್ವಾತಂತ್ರ್ಯ ಇದೆ ಎನ್ನುವ ಸತ್ಯವನ್ನು ಬಹಿರಂಗಗೊಳಿಸುವನು. ಮುಂದೆ ಮಂಗಳವೇಡೆಯಲ್ಲಿ ಬಿಜ್ಜಳನಲ್ಲಿ ಕರಣಿಕನ ಕಾಯಕ ಮಾಡುವಾಗ, ಅಲ್ಲಿಂದ ಕಲ್ಯಾಣಕ್ಕೆ ಬಂದು ಬಿಜ್ಜಳ ಸಾಮ್ರಾಟನ ಪ್ರಧಾನಿ ಮತ್ತು ಅರ್ಥಸಚಿವರಾದಾಗ ಬಸವಣ್ಣ ತನ್ನ ಶೋಧನೆಯ ಸತ್ಫಲವನ್ನು ಜಾತ್ಯತೀತವಾಗಿ ಸರ್ವರಿಗೂ ಕರುಣಿಸುವ ಸದಾಶಯದಿಂದ ಮಹಾಮನೆ, ಅನುಭವ ಮಂಟಪ ಎನ್ನುವ ಅಪರೂಪದ ಸಂಸ್ಥೆಗಳ ಹುಟ್ಟಿಗೆ ಕಾರಣರಾಗುತ್ತಾರೆ. ಅಲ್ಲಿಂದ ಬಸವಣ್ಣನವರ ಬದುಕಿನ ದಿಕ್ಕೇ ಬದಲಾಗುವುದು. ಸಕಲ ಜೀವಾತ್ಮರಿಗೆ ಒಳಿತು ಬಯಸುವ ಕಲ್ಯಾಣಕಾರಿ ಸೇವಾಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು. ಅವರ ಸೇವಾಕಾರ್ಯಗಳಿಗೆ ಶಾಸ್ತ್ರ, ಪಂಚಾಂಗ, ಜ್ಯೋತಿಷ್ಯ, ವೇದ, ಪುರಾಣ, ಆಗಮಾದಿಗಳು ನೆರವಾಗದೆ ಪುರಾತನರ ನುಡಿಗಳೇ ವೇದವಾಕ್ಯವಾಗುವವು.
ಹರನು ಮೂಲಿಗನಾಗಿ, ಪುರಾತನರೊಳಗಾಗಿ,
ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ.
ಕಳೆದ ಹೊಲೆಯನೆಮ್ಮಯ್ಯ, ಜಾತಿ ಸೂತಕ,
ಮಾದಾರನ ಮಗ ನಾನಯ್ಯಾ.
ಪನ್ನಗಭೂಷಣ ಕೂಡಲಸಂಗಯ್ಯಾ,
ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ.
ಇಲ್ಲಿ ಬಸವಣ್ಣನವರ ನೈಜ ವ್ಯಕ್ತಿತ್ವದ ದರ್ಶನವಾಗುವುದು. ಯಾರನ್ನು ಸಮಾಜ ಪೂರ್ವಕಾಲದಿಂದಲೂ ಕೀಳು ಕುಲಜರು, ಬಹಿಷ್ಕೃತರು, ಅಸ್ಪೃಶ್ಯರು ಎಂದು ದೂರ ಇಟ್ಟಿತ್ತೋ ಅಂಥವರ ಮಗ ನಾನು ಎಂದು ಎದೆತಟ್ಟಿ ಹೇಳಿಕೊಳ್ಳುವರು. ಅವರೇ ನನ್ನ ಜಾತಿಸೂತಕ ಕಳೆದರು. ಹಾಗಾಗಿ ನಾನು ಮಾದಾರ ಚೆನ್ನಯ್ಯನ ಮಗ ಎಂದಯ ಹೆಮ್ಮೆಪಡುವರು. ‘ಸನಾತನ’ ಪರಂಪರೆಯನ್ನು ದೂರವಿಟ್ಟು ‘ಪುರಾತನ’ ಪರಂಪರೆಯನ್ನು ಅಪ್ಪಿಕೊಂಡ ಬಸವಣ್ಣನವರು ಹೊಸ ಧರ್ಮದ ಉದಯಕ್ಕೆ ಕಾರಣರಾಗುತ್ತಾರೆ. ಅವರ ಹೊಸ ಧರ್ಮದಲ್ಲಿ ಜಾತಿ, ಲಿಂಗ, ವಯಸ್ಸು ಇತ್ಯಾದಿ ಭೇದವಿಲ್ಲ. ಅರಿವಿಗೆ ಮಾತ್ರ ಮನ್ನಣೆ. ಬಸವಣ್ಣನವರಿಗೆ ಪುರಾತನರ ಸಾಲಿನಲ್ಲಿ ಬರುವ ದಾಸಿಮಯ್ಯನವರ ‘ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ ರಾಮನಾಥ’ ಎನ್ನುವ ವಚನ ಬೆಳಕಿನ ಸೂರ್ಯನಾಗಿ ಕಾಣುವುದು. ಅದನ್ನೇ ಸಮಾಜದಲ್ಲಿ ಜಾರಿಯಲ್ಲಿ ತರುವರು.
ಬಾಹ್ಯ ಅಂಗಾಂಗ ರಚನೆಯಿಂದ ಒಬ್ಬರನ್ನು ಹೆಣ್ಣೆಂದು ಮತ್ತೊಬ್ಬರನ್ನು ಗಂಡೆಂದು ಗುರುತಿಸಬಹುದೇ ಹೊರತು ಅವರ ಒಳಗಿರುವ ಚೈತನ್ಯ ಹೆಣ್ಣೂ ಅಲ್ಲ, ಗಂಡೂ ಅಲ್ಲ; ಇಬ್ಬರೂ ಸಮಾನರು ಎನ್ನುವ ತತ್ವವನ್ನು ಎಲ್ಲ ಶರಣರೂ ಅನುಭವ ಮಂಟಪದ ಮೂಲಕ ಎತ್ತಿಹಿಡಿಯುವರು. ಈ ನೆಲೆಯಲ್ಲಿ ಅಂಬಿಗರ ಚೌಡಯ್ಯನವರು ‘ಮೊಲೆಮುಡಿ ಬಂದರೆ ಆ ಪಿಂಡವನು ಹೆಣ್ಣೆಂಬರು, ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು. ಆ ಇಬ್ಬರ ನಡುವೆ ಸುಳಿದ ಆತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ’ ಎಂದಿದ್ದಾರೆ. ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ದೊರೆತ ಸ್ವಾತಂತ್ರ್ಯದ ಫಲವೆಂಬಂತೆ ಗೊಗ್ಗವ್ವೆ ‘ಮೊಲೆ ಮುಡಿ ಬಂದಡೆ ಹೆಣ್ಣೆಂಬರು, ಮೀಸೆಕಾಸೆ ಬಂದಡೆ ಗಂಡೆಂಬರು. ಈ ಉಭಯದ ಜ್ಞಾನ ಹೆಣ್ಣೊ ಗಂಡೊ?’ ಎಂದು ಪ್ರಶ್ನಿಸುವರು. ಅಂದು ಅತ್ಯಂತ ತಳಸಮುದಾಯದ ಉಪೇಕ್ಷಿತ ಮಹಿಳೆಯರು ಸಹ ಅನುಭವ ಮಂಟಪದ ಸದಸ್ಯರಾಗಿದ್ದು ಸಾಮಾನ್ಯ ಸಂಗತಿ ಏನಲ್ಲ. ಅವರು ತಮ್ಮ ಬದುಕಿನ ವಿಧಾನವನ್ನೇ ಬದಲಾಯಿಸಿಕೊಂಡು ಶರಣೆಯರಾಗಿದ್ದು, ಅನುಭಾವಿಗಳಾಗಿದ್ದು, ವಚನ ರಚನೆ ಮಾಡಿದ್ದು ವಿಶ್ವದ ಇತಿಹಾಸದಲ್ಲಿ ಅವಿಸ್ಮರಣೀಯ ಸಂಗತಿ. ಅದಕ್ಕಾಗಿ ಅವರೆಲ್ಲರೂ ಬಸವಣ್ಣನವರಿಗೆ ಅತ್ಯಂತ ಕೃತಜ್ಞತೆ ಮತ್ತು ಗೌರವ ತೋರಿದ್ದು, ಬಸವಣ್ಣನವರನ್ನು ಗುರು ಸ್ಥಾನದಲ್ಲಿ ಕಂಡದ್ದು ಅವರ ವಚನಗಳಿಂದ ವೇದ್ಯವಾಗುವುದು. ಹಡಪದ ಅಪ್ಪಣ್ಣನವರ ಪತ್ನಿ ಲಿಂಗಮ್ಮನವರು ತಮ್ಮ ಭಾವನೆಯನ್ನು ವಚನದಲ್ಲಿ ಹಂಚಿಕೊಂಡಿರುವುದನ್ನು ಗಮನಿಸಿ:
ಕನಿಷ್ಟದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ,
ಸತ್ಯಶರಣರ ಪಾದವಿಡಿದೆ.
ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು.
ಕಂಗಳ ಮುಂದಣ ಕತ್ತಲೆ ಹರಿಯಲೊಡನೆ,
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಲಿಂಗಮ್ಮ ಹುಟ್ಟಿದ್ದು ತುಂಬಾ ನಿಕೃಷ್ಠ, ಕನಿಷ್ಟ ಜನಾಂಗದಲ್ಲಿ. ಮೊದಲಿಗೆ ವೇಶ್ಯಾವೃತ್ತಿಯಲ್ಲಿದ್ದವರು ಎನ್ನುವ ಪ್ರತೀತಿ ಇದೆ. ಶರಣರ ಸಂಪರ್ಕದಿಂದ ಆ ವೃತ್ತಿಯಿಂದ ಹೊರಬಂದು ಅಪ್ಪಣ್ಣನವರ ಧರ್ಮಪತ್ನಿ ಆದವರು. ಹಾಗಾಗಿಯೇ ಅವರಿಗೆ ‘ಪುಣ್ಯಸ್ತ್ರೀ’ ಎನ್ನುವ ವಿಶೇಷಣ ಹೆಸರಿನ ಹಿಂದೆ ಸೇರಿದೆ. ಅನುಭವ ಮಂಟಪದ ಸಂಪರ್ಕದಿಂದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಕಂಡೆ ಎನ್ನುವ ಕೃತಜ್ಞತಾ ಮನೋಭಾವ ವಚನದಲ್ಲಿದೆ. ಕನಿಷ್ಟಕುಲದಲ್ಲಿ ಹುಟ್ಟಿದ್ದರೂ ಉತ್ತಮರ ಸಹವಾಸದಲ್ಲಿ ಬೆಳೆದು ಸತ್ಯಶರಣರ ಪಾದವಿಡಿದ ಕಾರಣದಿಂದ ಕತ್ತಲೆ ಕಳೆದುಕೊಂಡು ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದ ಪರಿಯನ್ನು ಪರಿಣಾಮಕಾರಿಯಾಗಿ ಹೇಳಿಕೊಂಡಿದ್ದಾರೆ. ಇಂಥದೇ ಭಾವನೆ ಅನೇಕ ತಾಯಂದಿರದು. ಅವರ ಬದುಕಿಗೆ ಬೆಳಕು ನೀಡಿದವರು ಬಸವಣ್ಣ ಹಾಗೂ ಅನುಭವ ಮಂಟಪದ ಶರಣರು. ಹೀಗಾಗಿ ಸ್ತ್ರೀಯರಿಗೆ ಸರ್ವಸಮಾನತೆ ನೀಡಿ ಆಧ್ಯಾತ್ಮಿಕ ಔನ್ಯತ್ಯಕ್ಕೆ ತಲುಪುವಂತೆ ಮಾಡಿದ್ದು 12ನೆಯ ಶತಮಾನ. ಅದುವರಿಗೆ ಸ್ತ್ರೀಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ, ಸಮಾನತೆ, ಹಕ್ಕು, ಗೌರವಗಳಿರಲಿಲ್ಲ. ಮಹಾದೇವಿಯಕ್ಕನವರ ಬದುಕನ್ನೇ ಗಮನಿಸಿದರೆ ಅವಳೊಬ್ಬ ಸುಂದರ ತರುಣಿ. ಆದರೆ ಅವರು ಏರಿದ ಆಧ್ಯಾತ್ಮಿಕ ಎತ್ತರ ಅಲ್ಲಮ ಪ್ರಭುದೇವರಂಥವರು ಸಹ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂದು ತಲೆಬಾಗುವಂತೆ ಮಾಡುವುದು. ಒಬ್ಬ ಸುಂದರ ತರುಣಿ ಮದುವೆಯನ್ನು ತಿರಸ್ಕರಿಸಿ ಅಥವಾ ಗಂಡನನ್ನು ನಿರಾಕರಿಸಿ ಸಮಾಜದಲ್ಲಿ ಬದುಕುವುದು ಇಂದಿನ ದಿನಮಾನಗಳಲ್ಲೇ ತುಂಬಾ ಸಾಹಸದ ಕಾರ್ಯ. ಸಮಾಜ ಅವಳನ್ನು ಹೇಗೆ ನೋಡುತ್ತದೆ ಎಂದು ವಿವರಿಸಬೇಕಾಗಿಲ್ಲ. ಇಂತಿರುವಾಗ ಹನ್ನೆರಡನೆಯ ಶತಮಾನದಲ್ಲಿ ಮಹಾದೇವಿಯಕ್ಕ ರಾಜ ಕೌಶಿಕನನ್ನು ತಿರಸ್ಕರಿಸಿ ಹೊರಬಂದಾಗ ಅನೇಕ ಕಾಮುಕರು ಅವರನ್ನು ಕಾಡಿದ್ದು, ಪೀಡಿಸಿದ್ದು ಅಕ್ಕನ ವಚನಗಳಿಂದಲೇ ವೇದ್ಯವಾಗುವುದು. ಅಂಥ ಕಾಮುಕರ ಕಣ್ಣು ತೆರೆಸಲು ಅಕ್ಕ ಹೇಳುವುದು: ಈ ದೇಹದಲ್ಲಿ ಯಾವ ಸೌಂದರ್ಯವಿದೆ ಎಂದು ಮರುಳಾಗಿ ಬಂದಿರಣ್ಣಾ! ಈ ದೇಹ ಹೇಸಿಗೆಯ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ ಎಂದು ದೇಹದ ನಿಜಸ್ವರೂಪವನ್ನು ಮನದಟ್ಟು ಮಾಡಿದ್ದಾರೆ. ನನಗೆ ನನ್ನ ಪತಿ ಚೆನ್ನಮಲ್ಲಿಕಾರ್ಜುನ ಒಲಿವನೋ, ಒಲಿಯನೋ ಎನ್ನುವ ಚಿಂತೆ. ನಿಮಗೆ ನಿಮ್ಮ ಕಾಮದ ಚಿಂತೆ ಎನ್ನುವ ಮೂಲಕವೇ ಕಾಮುಕರ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.
ಕಲ್ಯಾಣದ ಅನುಭವ ಮಂಟಪಕ್ಕೆ ಬಂದಾಗಲೂ ಅಕ್ಕನ ಸತ್ವಪರೀಕ್ಷೆ ನಿಲ್ಲಲಿಲ್ಲ. ಅಲ್ಲಿ ಬೆಂಕಿಯುಗುಳುವಂತಹ ಪ್ರಶ್ನೆಗಳನ್ನು ಪ್ರಭುದೇವರೇ ಹಾಕುವರು. ‘ಉದಮದದ ಯೌವನವನೊಳಕೊಂಡ ಸತಿ, ನೀನು ಇತ್ತಲೇಕೆ ಬಂದೆಯವ್ವಾ, ಸತಿ ಎಂದಡೆ ಮುನಿವರು ನಮ್ಮ ಶರಣರು. ನಿನ್ನ ಪತಿಯ ಕುರುಹು ಹೇಳಿದಡೆ ಬಂದು ಕುಳ್ಳಿರು. ಅಲ್ಲದಡೆ ತೊಲಗು ತಾಯೆ’. ಅಕ್ಕ ಮತ್ತು ಅಲ್ಲಮರ ನಡುವೆ ಸಾಕಷ್ಟು ಸಂವಾದ ನಡೆದ ನಂತರ ದೇಹ ಮೋಹ ಇಲ್ಲವೆಂದಮೇಲೆ ಈ ದೇಹಕ್ಕೆ ಕೂದಲ ಮರೆಯನ್ನೇಕೆ ಮಾಡಿಕೊಂಡಿರುವೆ ಎನ್ನುವ ಪ್ರಶ್ನೆ ಪ್ರಭುದೇವರದು. ಅದಕ್ಕೆ ಅಕ್ಕ ದಿಗಿಲುಗೊಳ್ಳದೆ ಕೊಡುವ ಉತ್ತರ ಪ್ರಭುದೇವರನ್ನೂ ಬೆರಗುಗೊಳಿಸುವಂತಹುದು. ‘ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ’ ಎನ್ನುವಲ್ಲಿ ಅಕ್ಕನ ಎದೆಗಾರಿಕೆಯನ್ನು ಗಮನಿಸಬೇಕು. ನಿಮ್ಮಂಥ ಹಿರಿಯರು ನಿಮ್ಮ ಮಗಳಂತಿರುವ ನನ್ನಲ್ಲಿ ಉದಮದದ ಯೌವನ ಕಾಣುವಾಗ, ನಿಮ್ಮ ಶರಣರು ಸತಿ ಎಂದರೆ ಮುನಿವರು ಎನ್ನುವಾಗ ನನ್ನ ಕಾಮನ ಮುದ್ರೆಯ ಕಂಡು ನಿಮಗೆ ನೋವಾಗಬಾರದು ಎನ್ನುವ ಸದ್ಭಾವದಿಂದ ದೇಹಕ್ಕೆ ಕೂದಲ ಮರೆಮಾಡಿರುವೆ ಎನ್ನುವ ದಿಟ್ಟ ಉತ್ತರ ಅಕ್ಕನ ಅರಿವಿನ ಸಂಕೇತ. ಇಂಥ ಅರಿವನ್ನು ಇಂದು ನಮ್ಮ ತಾಯಂದಿರು ಪಡೆದುಕೊಳ್ಳಬೇಕಿದೆ.
ಅರಿವು ಸಾಮಾನ್ಯ ಸಂಗತಿ ಅಲ್ಲ. ಅದನ್ನೇ ಅಲ್ಲಮ ‘ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ? ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎಂದಿದ್ದಾರೆ. 12ನೆಯ ಶತಮಾನದ ತಳಸಮುದಾಯದ ಮಹಿಳೆಯರು ಸಹ ಇಂತಹ ಅರಿವನ್ನು ಪಡೆದದ್ದಕ್ಕೆ ಅವರ ವಚನಗಳೇ ಸಾಕ್ಷಿ ನುಡಿಯುತ್ತವೆ. ಲಕ್ಕಮ್ಮ-ಮಾರಯ್ಯ ದಂಪತಿ, ಅಕ್ಕಿಯನ್ನು ಆಯ್ದು ಜೀವನ ಮಾಡುವ ಕಾಯಕ ಜೀವಿಗಳು. ಹಾಗಾಗಿ ಅವರಿಗೆ ಆಯ್ದಕ್ಕಿ ಲಕ್ಕಮ್ಮ, ಆಯ್ದಕ್ಕಿ ಮಾರಯ್ಯ ಎಂದೇ ಕರೆಯಲಾಗುವುದು. ಒಮ್ಮೆ ಮಾರಯ್ಯ ಅಗತ್ಯಕ್ಕಿಂತ ಹೆಚ್ಚು ಅಕ್ಕಿಯನ್ನು ಮನೆಗೆ ತರುವರು. ಇಂದಿನ ದಿನಮಾನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯನ್ನು ಗಂಡ ಮನೆಗೆ ತಂದರೆ ಯಾವ ಹೆಂಡತಿಗೆ ತಾನೆ ಸಂತೋಷವಾಗುವುದಿಲ್ಲ? ಆದರೆ ಲಕ್ಕಮ್ಮ ಸಂತೋಷಪಡದೆ ಮನದಲ್ಲೇ ಮರುಗಿ ಆಕೆ ಪ್ರಶ್ನಿಸುವ ಪರಿ ನೋಡಿ- ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ರೋಷವೆಂಬುದು ಯಮದೂತರಿಗಲ್ಲದೆ, ಅಜಾತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ಎನ್ನುವರು.
ದೇಶದ ಜವಾಬ್ದಾರಿ ಹೊತ್ತ ಅರಸರಿಗೆ ಆಸೆ ಇರಬೇಕಾದ್ದು ಸಹಜ. ನಾವು ಶರಣರು. ಕಾಯಕ, ದಾಸೋಹ ತತ್ವ ಒಪ್ಪಿಕೊಂಡವರು. ಹೀಗಿರುವಾಗ ನಿಮಗೇಕೆ ಹೆಚ್ಚಿನ ಅಕ್ಕಿಯ ಆಸೆ ಹುಟ್ಟಿತು? ಇದು ಶಿವ ಒಪ್ಪುವ ಕಾರ್ಯವಲ್ಲ ಎಂದು ಛೇಡಿಸಿ ಈ ಅಕ್ಕಿ ಎಲ್ಲಿಂದ ತಂದಿರೋ ಅಲ್ಲೇ ಸುರಿದು ಅಲ್ಲಿರುವ ಶರಣರನ್ನು ಪ್ರಸಾದಕ್ಕೆ ಕರೆದುಕೊಂಡು ಬನ್ನಿ ಎನ್ನುವರು. ಮಾರಯ್ಯ ತಪ್ಪು ಮಾಡಿದ್ದರಿಂದ ಮರುಮಾತನಾಡದೆ ಹೆಂಡತಿಯ ಆದೇಶವನ್ನು ಮನ್ನಿಸುತ್ತಾರೆ. ಮುಂದೆ ಮನೆಗೆ ಬಂದ ಶರಣರಿಗೆ ಅವರು ಬಯಸಿದ ಪ್ರಸಾದವನ್ನು ಆ ತಾಯಿ ಮಾಡಿ ನೀಡಿದರು ಎನ್ನುವ ಪ್ರತೀತಿ ಇದೆ. ಮೊದಲೇ ಅಕ್ಕಿ ಆಯ್ದು ಜೀವನ ನಡೆಸುವವರು ಇದ್ದ ಅಕ್ಕಿಯನ್ನೂ ವಾಪಸ್ಸು ಕಳಿಸಿ ಬಂದ ಶರಣರಿಗೆ ಹೇಗೆ ತೃಪ್ತಿಪಡಿಸಲು ಸಾಧ್ಯ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಈ ಪ್ರಶ್ನೆಗೆ ಲಕ್ಕಮ್ಮನವರ ವಚನವೇ ಉತ್ತರ ಕೊಡುವುದು:
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
ಬಡತನಕ್ಕೂ ಮನಶುದ್ಧಿಗೂ ಸಂಬಂಧವಿದೆ. ಮನಶುದ್ಧಿ ಇದ್ದು ಚಿತ್ತ ಶುದ್ಧಿಯಿಂದ ಕಾಯಕ ಮಾಡುತ್ತಿದ್ದರೆ ಸಂಪತ್ತು ತನ್ನಷ್ಟಕ್ಕೆ ತಾನೇ ಹರಿದು ಬರುತ್ತದೆ ಎನ್ನುವ ವಿಶ್ವಾಸ ಲಕ್ಕಮ್ಮನವರದು. ಈ ವಿಶ್ವಾಸದಿಂದಲೇ ಎಲ್ಲ ಶರಣ ಶರಣೆಯರು ಬಾಳಿದವರು. ಅವರೆಂದೂ ಅತಿಯಾಸೆಗೆ ಬಲಿಯಾದವರಲ್ಲ. ಬಸವಣ್ಣನವರೇ ವಸ್ತ್ರದೊಳಗೆ ಒಂದೆಳೆಯನ್ನು, ಚಿನ್ನದೊಳಗೆ ಒಂದೊರೆಯನ್ನು ಇಂದಿಂಗೆ ನಾಳಿಂಗೆ ಬೇಕೆಂದರೆ ತಲೆದಂಡ ಎನ್ನುವರು. ಶರಣರ ಜೀವನ ಅಷ್ಟೊಂದು ಪರಿಶುದ್ಧವಾಗಿತ್ತು. ಕಾಯಕದ ಜೊತೆಗೆ ದಾಸೋಹ ಪ್ರಜ್ಞೆಯನ್ನೂ ಬೆಳೆಸಿಕೊಂಡ ಕಾರಣದಿಂದ ಅವರಿಗೆ ಕೂಡಿಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹಾಗಾಗಿ ಲಂಚ ರುಷುವತ್ತಿಗೆ ಅವರೆಂದೂ ಬಲಿಯಾಗುತ್ತಿರಲಿಲ್ಲ. ಇದಕ್ಕೆ ಸತ್ಯಕ್ಕನ ವಚನ ಸಾಕ್ಷಿ ನುಡಿಯುವಂತಿದೆ. ಸತ್ಯಕ್ಕ ಬೀದಿಯ ಕಸ ಗುಡಿಸುವ ಒಬ್ಬ ಜಾಡಮಾಲಿ. ಆದರೆ ಆಕೆಯ ಕಾಯಕ ನಿಷ್ಠೆಯನ್ನು ಮೆಚ್ಚಲೇ ಬೇಕು. ತನ್ನ ಕಾಯಕ ತನಗೆ ಎಂಥ ಸಂತೃಪ್ತಿ ಕೊಟ್ಟಿದೆ ಎನ್ನುವುದು ಅವರ ಒಂದು ವಚನದಿಂದ ವೇದ್ಯವಾಗುವುದು.
ಲಂಚವಂಚನಕ್ಕೆ ಕೈಯಾನದ ಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.
ಒಬ್ಬ ಜಾಡಮಾಲಿ ಮಹಿಳೆ ಎಂಥ ‘ಭಾಷೆ’ ಸ್ವೀಕರಿಸುತ್ತಾಳೆ! ಭಾಷೆ ಎಂದರೆ ಆಣೆ, ಪ್ರಮಾಣ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. ನಾನು ಬೀದಿಯ ಕಸ ಗುಡಿಸುವಾಗ ಅಲ್ಲೇನಾದರು ಬಂಗಾರ, ವಸ್ತ್ರ ಮತ್ತೇನಾದರೂ ಬಿದ್ದಿದ್ದು ಕಂಡುಬಂದರೆ ನಾನು ಕೈಮುಟ್ಟಿ ಎತ್ತಿದರೆ ಪ್ರಮಥರಾಣೆ ಎನ್ನುವಳು. ಅವಳು ಹಾಗೆ ಆಣೆ ಹಾಕಲು ಕಾರಣ ನನಗೆ ಈ ಕಾಯಕ ಮಾಡುವುದರಿಂದ ಬರುವ ಕೂಲಿಯೇ ಜೀವನಕ್ಕೆ ಸಾಕಷ್ಟಾಗುತ್ತದೆ. ಇಂತಿರುವಾಗ ಚಂಚಲ ಮನದವಳಾಗಿ ಮತ್ತೊಬ್ಬರ ಸಂಪತ್ತಿಗೆ ಆಸೆ ಮಾಡಿದರೆ ಆ ಕ್ಷಣವೇ ನನ್ನನ್ನು ನರಕದಲ್ಲಿ ಅದ್ದಿ ನೀನೆದ್ದು ಹೋಗು ಎಂದು ತನ್ನ ಇಷ್ಟದೈವದಲ್ಲಿ ಕೇಳಿಕೊಳ್ಳುವಳು. ಇಂಥ ಪ್ರಾಮಾಣಿಕತೆಯನ್ನು ತಂದುಕೊಟ್ಟದ್ದು ಶರಣರ ಸಹವಾಸ. ವಿಷಾದದ ಸಂಗತಿ ಎಂದರೆ ಇಂದು ಎಂಥವರ ಸಹವಾಸ ಮಾಡಿದರೂ ಮನುಷ್ಯ ದುರಾಸೆಯಿಂದ ಮುಕ್ತನಾಗದೆ ಪರರ ದ್ರವ್ಯಕ್ಕೆ ಕೈವೊಡ್ಡುವುದು ಪುಣ್ಯ ಎಂದು ಭಾವಿಸಿದಂತಿದೆ. ಇದರಿಂದಾಗಿಯೇ ಇಂದು ಲಂಚ ಮಿತಿಮೀರಿದೆ. ಕೊನೆಯ ಪಕ್ಷ ತಾಯಂದಿರಾದರೂ ಲಕ್ಕಮ್ಮನ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ತಮ್ಮ ಮನೆಯ ಜನರನ್ನು ಪರಿವರ್ತನೆ ಮಾಡಲು ಸಾಧ್ಯ. ವಿಶ್ವಮಹಿಳಾ ದಿನಾಚರಣೆ ಅಥವಾ ಶರಣರ ವಚನಗಳ ಹಾಡುಗಾರಿಕೆ ಮತ್ತೊಬ್ಬರನ್ನು ಮೆಚ್ಚಿಸಲು ಆದರೆ ಪ್ರಯೋಜನವಿಲ್ಲ. ಅಂಥ ಸಂದರ್ಭದಲ್ಲಾದರೂ ಶರಣರ ತತ್ವಗಳು ಮನಸ್ಸನ್ನು ಮುಟ್ಟಿ ತಟ್ಟಿ ಜಾಗೃತಗೊಳಿಸುವಂತಾಗಬೇಕು.
ಮನೆಯಲ್ಲಿ ತಾಯಿಯ ಹೊಣೆಗಾರಿಕೆ ತುಂಬಾ ಗುರುತರವಾದುದು. ‘ನೂಲಿನಂತೆ ಸೀರೆ, ತಾಯಿಯಂತೆ ಮಕ್ಕಳು’ ಎನ್ನುವ ಹಾಗೆ ತಾಯಿ ಸುಸಂಸ್ಕೃತಳಾಗಿ ಶರಣ ಮಾರ್ಗದಲ್ಲಿ ನಡೆದರೆ ಮನೆಯ ಜನರನ್ನೂ ಪರಿವರ್ತಿಸಲು ಸಾಧ್ಯ. ಇವತ್ತು ತಾಯಂದಿರು ಅದರಲ್ಲೂ ನಗರಪ್ರದೇಶಗಳಲ್ಲಿ ಹಲವು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾರ್ವಜನಿಕ ಸೇವೆ ಮಾಡುತ್ತಿರುವುದು ಅಭಿನಂದನಾರ್ಹ. ಅವರು ಅಕ್ಕನ ಬಳಗ, ಶರಣೆಯರ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮಹಿಳಾ ಘಟಕ ಎಂದೆಲ್ಲ ಮಾಡಿಕೊಂಡು ವಚನಗಳನ್ನು ಹಾಡುವ, ವಚನ ನೃತ್ಯ ಮಾಡುವ, ವಚನ ಗೋಷ್ಠಿಗಳನ್ನು ಏರ್ಪಡಿಸುವ, ವಚನ ಸಾಹಿತ್ಯದ ಉಪನ್ಯಾಸ ಕೇಳುವ ಕಾರ್ಯವನ್ನು ಮಾಡುತ್ತ ಲಿಂಗಾಯತ ಧರ್ಮದ ಪ್ರಚಾರ, ಪ್ರಸಾರ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಲಿಂಗಾಯತ ಧರ್ಮ ಕೇವಲ ಪ್ರಚಾರ, ಪ್ರಸಾರದಲ್ಲಿ ಉಳಿದರೆ ಬಸವ ಸಂದೇಶ ಹೇಳಿಯೂ ಪ್ರಯೋಜನವಾಗದು.
ಈ ನಿಟ್ಟಿನಲ್ಲಿ ಅಂಥ ತಾಯಂದಿರು ಇಷ್ಟಲಿಂಗ ನಿಷ್ಠೆ, ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆಯನ್ನು ವ್ಯಕ್ತಿಗತ ಜೀವನದಲ್ಲಿ ಆಚರಣೆಯಲ್ಲಿ ತರುವ ಸಂಕಲ್ಪ ಮಾಡಬೇಕು. ಈ ಮಾತನ್ನು ಹೇಳಲು ಕಾರಣ ಇವತ್ತು ತತ್ವ ಹೇಳುವವರಿಗೆ ಕೊರತೆ ಇಲ್ಲ. ತತ್ವ ಬಾಳುವವರ ಕೊರತೆ ಎದ್ದುತೋರುತ್ತಿದೆ. ‘ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎನ್ನುವ ಹಾಗೆ ಮನೆಯಲ್ಲಿರುವ ತಾಯಿ ಮೊದಲ ಗುರುವಾಗಿ ಲಿಂಗಾಯತ ತತ್ವಗಳನ್ನು ತನ್ನ ಬದುಕಿನಲ್ಲಿ ಅನುಷ್ಠಾನಕ್ಕೆ ತರಬೇಕು. ಅರಿವಿಗೆ ಬೆಲೆ ಬರುವುದು ಆಚಾರದಲ್ಲಿ ಅಳವಟ್ಟಾಗ ಮಾತ್ರ. ಈ ನೆಲೆಯಲ್ಲಿ ತಾಯಂದಿರು ಗುಡಿ ಗುಂಡಾರಗಳ, ಜ್ಯೋತಿಷಿಗಳ ಭ್ರಮೆಯಿಂದ ಹೊರಬಂದು ಇಷ್ಟಲಿಂಗ ಧರಿಸಿಕೊಳ್ಳಬೇಕು. ಲಿಂಗಾಯತ ಧರ್ಮ ಪೂಜೆ ಮಾಡಿಸುವುದಲ್ಲ; ಮಾಡಿಕೊಳ್ಳುವುದು. ಅದನ್ನೇ ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವುದನ್ನು ನೋಡಿ:
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.
ಮನೆಯಲ್ಲಿ ಒಬ್ಬ ತಾಯಿ ಶರಣತತ್ವಪ್ರೇಮಿಯಾಗಿ ಅದಕ್ಕನುಗುಣವಾಗಿ ಬಾಳುವಂತಾದರೆ ಇಡೀ ಮನೆಯ ಸದಸ್ಯರನ್ನೇ ಶರಣ ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು. 12ನೆಯ ಶತಮಾನದಲ್ಲಿ ಮಹಿಳೆಯರು ಪುರುಷರನ್ನು ಪ್ರಶ್ನಿಸುವ ಹಕ್ಕನ್ನು ಪಡೆದದ್ದು ತಮ್ಮ ನಡೆ ನುಡಿ ಸಂಯೋಗದಿಂದಲೇ. ಅಂಥ ಶರಣೆಯರ ಪರಂಪರೆ ನಮ್ಮ ತಾಯಂದಿರಿಗೆ ಇದೆಯಾದ್ದರಿಂದ ಆ ಶರಣೆಯರ ಜೀವನ ದರ್ಶನದಿಂದ ಪ್ರೇರಿತರಾಗಿ ತಮ್ಮ ಸಂಘಟನೆಯನ್ನು ನಡೆ ನುಡಿ ಸಿದ್ಧಾತದ ಆಧಾರದ ಮೇಲೆ ಮಾಡಿಕೊಂಡದ್ದೇ ಆದರೆ ಮತ್ತೆ ಕಲ್ಯಾಣದ ಕನಸನ್ನು ನನಸು ಮಾಡಲು ಸಾಧ್ಯ.
Comments 9
ದಾನಮ್ಮ ಜಕ್ಕೂರು
Apr 12, 2024ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ ಇರಲಿ ಎನ್ನುವ 21 ನೇ ಶತಮಾನಕ್ಕೆ ಬಸವಾದಿ ಶರಣರ ದಾರಿ ಇದೇ ಕಾರಣಕ್ಕೆ ಬೇಕೇ ಬೇಕಾಗುತ್ತದೆ.
ಕೆ.ಪಿ. ಪಾಟೀಲ್
Apr 12, 2024ಹೆಣ್ಣಿನ ಕುರಿತಾದ ನಮ್ಮ ದೃಷ್ಟಿ ಬದಲಾಗೋದು ಯಾವಾಗ? ಅವಳ ಹೊರೆಯನ್ನು ಇಳಿಸಿ ಮನುಷ್ಯಳನ್ನಾಗಿ ಕಾಣೋದು ಯಾವಾಗ? ಲಿಂಗಾಯತ ಮನೆಗಳಲ್ಲೂ ಹೆಣ್ಣಿನ ಸ್ಥಾನಮಾನ ಏನೂ ಉನ್ನತವಾಗಿಲ್ಲ. ಇಲ್ಲೂ ಅವಳು ದುಡಿಯುವ ಎತ್ತೇ!! ಆ ದುಡಿಮೆಯೋ ಕಿಮ್ಮತ್ತಿಲ್ಲದ್ದು, ಅವಳು ಮಾಡಲೇ ಬೇಕಾದ್ದು. ಇದೆಂಥ ತಾರತಮ್ಯ ಗುರುವೇ.
JAyashree C
Apr 12, 2024ಸಮಾನತೆ ಅನ್ನುವುದು ಎಲ್ಲದರಲ್ಲೂ ಇರಬೇಕಾಗುತ್ತದೆ. ಹೆಣ್ಣಿಗೆ ಲಿಂಗ ಕೊಟ್ಟರೆ ಸಮಾನತೆ ಕೊಟ್ಟಂತೆ ಅನ್ನುವುದು ಸರಿಯೇ? ಲಿಂಗ ಕಟ್ಟಿಕೊಂಡ ಹೆಣ್ಣು ಶೋಷಣೆಗೆ ಒಳಗಾಗುತ್ತಿಲ್ಲವೇ?
ಶಿವರುದ್ರಪ್ಪ ಏಣಗಿ
Apr 13, 2024ಮತ್ತೊಬ್ಬರಿಗೆ ಉಪದೇಶಿಲಿಕ್ಕಾಗಿ ಮಾತ್ರವೇ ನೀತಿಗಳನ್ನು ಇಟ್ಟುಕೊಂಡ ವಾತಾವರಣದಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ಮತ್ತೆ ನೈತಿಕ ಹೊಣೆಯನ್ನು ಹೆಣ್ಣಿನ ಭುಜಕ್ಕೆ ಯಾಕೆ ಹೇರಿಸಿ ನಾವು ಕೈತೊಳೆದುಕೊಳ್ಳಬೇಕು? ನಡುವೆ ಸುಳಿವ ಆತ್ಮ ಹೇಗೆ ಗಂಡೂ ಅಲ್ಲ, ಹೆಣ್ಣು ಅಲ್ಲವೋ ಹಾಗೇ ನಮ್ಮೊಳಗೆ ಹೊಕ್ಕ ದುರಾಸೆಗೂ ಲಿಂಗಬೇಧವಿಲ್ಲ. ಎಲ್ಲರೂ ಸಮನಾಗಿ ಈ ಭಾರ ಹೊರಬೇಕಾಗಿದೆ. ತಪ್ಪಿದ್ದರೆ ಕ್ಷಮಿಸಿ ಗುರುಗಳೇ.
Boralinga D
Apr 13, 2024ಶ್ರೀಗಳ ಲೇಖನಗಳು ಸಮಾಜಕ್ಕೆ ದಾರಿತೋರುವಂತೆ ಇರುತ್ತವೆ.
JAgadeesh H
Apr 24, 2024ನಿಜವಾದ ಶ್ರೀಮಂತ ಮತ್ತು ನಿಜವಾದ ಬಡವ ಯಾರೂಂತ ಸರಿಯಾಗಿ ಹೇಳಿದವರು ನಮ್ಮ ಶರಣರು. ಹಣವಿಲ್ಲದ ಸಿರಿವಂತರು, ನೆಮ್ಮದಿಯ ಬದುಕಿನ ಮಾರ್ಗ ತೋರಿದವರು. ಇದ್ದರೆ ಇರಬೇಕು ಶರಣರಂತೆ.
Prabhakara, Chitradurga
Apr 24, 2024ಹೆಣ್ಣು- ಗಂಡು ಮಾತ್ರವಲ್ಲಾ ನ್ಯೂಟ್ರಲ್ ಜೆಂಡರ್ ನಲ್ಲಿಯೂ; ಎಲ್ಲಾ ಪ್ರಾಣಿ-ಪಕ್ಷಿಗಳಲ್ಲಿಯೂ, ಮರಗಿಡಗಳಲ್ಲಿಯೂ ನಡುವೆ ಸುಳಿವ ಆತ್ಮ ಒಂದೇ- ಅದೇ ಪ್ರಾಣ. ಎಲ್ಲರಲ್ಲಿರುವ ಪ್ರಾಣ ಒಂದೇ ಆದ್ದರಿಂದ- ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವವನೇ ಶರಣ ಎನ್ನುತ್ತಾರೆ.
ಗುರುಪ್ರಸಾದ್ ದಾಂಡೇಲಿ
Apr 26, 2024ತಾಯಂದಿರ ಕೆಲಸ ಕಾರ್ಯಗಳು ಕುಟುಂಬವೊಂದರಲ್ಲಿ ದೊಡ್ಡ ಪ್ರಮಾಣದಲ್ಲಿದ್ದರೂ ಅವರ ಪರಿಶ್ರಮವನ್ನು ಗುರುತಿಸದ ಮನಸ್ಥಿತಿ ನಮಗೆ ಬಂದದ್ದಯ ಹೇಗೆನ್ನುವುದು ನನ್ನ ಬಾಲ್ಯದಿಂದ ನನ್ನನ್ನು ಬಾಧಿಸುತ್ತಿರುವ ಪ್ರಶ್ನೆ, ಅದಕ್ಕೆ ಅವ್ವ ಉತ್ತರ ಕೊಡಲಿಲ್ಲ, ಅಪ್ಪ, ಅಜ್ಜ, ಅಮ್ಮ, ಮನೆಯ ಇತರೆ ಹಿರಿಯರು ಯಾರೂ ಉತ್ತರ ಕೊಡಲಿಲ್ಲ. ದಯವಿಟ್ಟು ತಾವು ಉತ್ತರಿಸಿ ಗುರುಗಳೇ…
ಕಲಾವತಿ ಗುಣಶೇಖರ, ಗಜೇಂದ್ರಗಡ
May 1, 2024ತಿಳಿಯಾದ ಮಾತುಗಳಲ್ಲಿ ಆಶೀರ್ವಚನ ನೀಡಿದ ಗುರುಗಳಿಗೆ ವಂದನೆ.