ಧಾರ್ಮಿಕ ಮೌಢ್ಯಗಳು
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ,
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ,
ಬಳ್ಳದ ಬಾಯಂತೆ ಒಂದೆ ಮನ ಮಾಡಿ
ನಿಲ್ಲೆಂದು ನಿಲಿಸಯ್ಯಾ ಕೂಡಲಸಂಗಮದೇವಾ.
ಕೂಲಂಬಿಯಲ್ಲಿ ಜಂಗಮರ ಮನೆಯಲ್ಲಿ ಶಿವಗಣಾರಾಧನಾ ಸಮಾರಂಭ. ಆ ಊರಿಗೆ ಹೋಗುತ್ತಲೇ ಇಡೀ ಊರು ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದು ಅಲ್ಲಲ್ಲೇ ವಿವಿಧ ರೀತಿಯ, ವಿವಿಧ ಭಂಗಿಯ ಫ್ಲೆಕ್ಸಗಳು ಎದ್ದು ತೋರುತ್ತಿದ್ದವು. ಊರಲ್ಲಿ ಏನು ನಡೆಯುತ್ತಿದೆ? ಇಷ್ಟೊಂದು ಸಂಭ್ರಮವೇಕೆ ಎಂದು ಕೇಳಿದೆವು. “ಬುದ್ಧಿ, ಮಾರಿ ಜಾತ್ರೆಯ ಸಿದ್ಧತೆ ನಡೆದಿದೆ” ಎಂದರು. “ಏನು ಮಾಡುತ್ತೀರಿ ಈ ಜಾತ್ರೆಯಲ್ಲಿ?” ಎನ್ನುವ ಪ್ರಶ್ನೆಗೆ “ಅಮ್ಮನಿಗೆ ಬಿಟ್ಟ ಕೋಣವನ್ನು ಕಡಿಯಲಾಗುವುದು” ಎಂದರು. ಅವರ ಮಾತು ಇನ್ನೂ ಮುಂದುವರಿಯಲಿತ್ತು. ಅಷ್ಟಕ್ಕೇ ತಡೆದು, “ನೀವು ಸಹ ಅಮ್ಮನಿಗೆ ಬಿಟ್ಟ ಕೋಣಗಳೇ. ಮೊದಲು ನಿಮ್ಮನ್ನು ಅಮ್ಮನಿಗೆ ಬಲಿ ಕೊಡಬೇಕು” ಎಂದು ಸ್ವಲ್ಪ ಮುಖ ಸಿಂಡರಿಸಿಕೊಂಡು ಖಾರವಾಗಿಯೇ ಹೇಳಿದೆವು. ಅಲ್ಲಿಗೆ ಮಾತು ನಿಂತು ಶಿವಗಣಾರಾಧನಾ ಸ್ಥಳಕ್ಕೆ ಹೆಜ್ಜೆ ಹಾಕಿದೆವು. ಸಭೆಯಲ್ಲಿ ಏನು ಮಾತನಾಡಬೇಕು ಎನ್ನುವ ಚಿಂತನೆ ಮನದೊಳಗೆ ಕಾಡುತ್ತಿತ್ತು. ಕೂಲಂಬಿಯ ಶಿವಲಿಂಗಯ್ಯ ಅವರದು ಅತ್ಯಂತ ಸುಸಂಸ್ಕೃತ ಮನೆತನ. ಶಿವನ ಪಾದ ಸೇರಿದ ಮಹಿಳೆಯ ಹೆಸರು `ಅನಸೂಯ’. ಗಂಡನ ಹೆಸರು ಚಿದಾನಂದಯ್ಯ. ಹಿರಿಯರು ಹೆಸರು ಇಡುವಾಗಲೂ ಅವರ ಸಂಸ್ಕೃತಿ ಎದ್ದು ತೋರುತ್ತಿತ್ತು. ಅಸೂಯೆ ಇಲ್ಲದವಳು ಅನಸೂಯೆ. ಅವಳಿಗೆ ಮತ್ತೊಬ್ಬರ ಮೇಲೆ ಅಸೂಯೆ ಇತ್ತೋ ಇಲ್ಲವೋ ಅದು ಬೇರೆ. ಆದರೆ ಅಸೂಯೆ ಇಲ್ಲದಂತೆ ಎಲ್ಲರನ್ನೂ ಪ್ರೀತಿಸುತ್ತ ಬದುಕಬೇಕು ಎನ್ನುವ ಸದಾಶಯ ಇದೆಯಲ್ಲ ಅದೇ ಮುಖ್ಯ. ಶಿವಲಿಂಗಯ್ಯನವರು ತಮ್ಮ ಮಕ್ಕಳಿಗೆ ಇಟ್ಟಿರುವ ಹೆಸರುಗಳು ವಿವೇಕಾನಂದಯ್ಯ, ಶಿವಾನಂದಯ್ಯ, ಚಿದಾನಂದಯ್ಯ, ಸದಾನಂದಯ್ಯ, ಹೇಮಂತರಾಜ… ನೋಡಿ ಎಷ್ಟು ಅರ್ಥಪೂರ್ಣ! ಇಂದು ಉಚ್ಛಾರ ಮಾಡಲು ನಾಲಗೆ ತೊಡರಿಸುವ ವಿಚಿತ್ರ ಹೆಸರುಗಳನ್ನು ಇಡುವರು. ಮಕ್ಕಳಿಗೆ ಬಸವಣ್ಣ, ಮಹಾದೇವಿಯಕ್ಕ, ಅಲ್ಲಮಪ್ರಭು, ಚೆನ್ನಬಸವಣ್ಣ, ಸತ್ಯಕ್ಕ, ಸಿದ್ಧರಾಮ, ನೀಲಾಂಬಿಕೆ ಈ ರೀತಿಯ ಹೆಸರು ಇಡಲು ಬಹುತೇಕ ತಂದೆ ತಾಯಿಗಳಿಗೆ ಇಷ್ಟವಿಲ್ಲ.
ಸಭೆಯಲ್ಲಿ ಮೇಲ್ಕಂಡ ವಿಚಾರಗಳನ್ನು ಸಂಕ್ತಿಪ್ತವಾಗಿ ಹೇಳಿ ಮೌಢ್ಯದ ಕಡೆ ಮಾತುಗಳು ಹೊರಳಿದವು. ನಾವೆಲ್ಲರೂ ವಿಜ್ಞಾನ ಯುಗದಲ್ಲಿದ್ದೇವೆ. ವೈಚಾರಿಕತೆಯ ತುಟ್ಟ ತುದಿಯಲ್ಲಿ ನಿಂತು ಮಾತನಾಡುತ್ತೇವೆ. ಬುದ್ಧ, ಬಸವರ ಪರಂಪರೆ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ನಮ್ಮ ಪೀಠದ ಮೂಲಪುರುಷ ವಿಶ್ವಬಂಧು ಮರುಳಸಿದ್ಧ, ಆ ಪರಂಪರೆಯಲ್ಲಿ ಬಂದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಎಂದು ಅಭಿಮಾನದಿಂದ ಮಾತನಾಡುತ್ತೇವೆ. ಆದರೆ ಇಂಥ ಪರಂಪರೆಯ ವಾರಸುದಾರರಾದ ನಾವು ಅವರ ಆದರ್ಶಗಳನ್ನು ಪಾಲಿಸುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಮಾಡಿಕೊಳ್ಳಬೇಕಾದ್ದು ಅನಿವಾರ್ಯ. ಬುದ್ಧ ಕರುಣೆಯ ಕಡಲಾಗಿದ್ದವರು. ಏಶಿಯಾದ ಬೆಳಕು ಎನ್ನುವ ಪ್ರಖ್ಯಾತಿ ಪಡೆದಿದ್ದರು. ಅವರು ಕಟುಕನ ಬಗೆಗೂ ಕರುಣೆ ತೋರಿ ಅವನ ಬದುಕನ್ನು ಬದಲಾಯಿಸಿದರು. ಕ್ರೂರಿಯಾಗಿದ್ದ ಅಂಗುಲಿಮಾಲಾನ ಕ್ರೌರ್ಯ ಕಳೆದು ಅವನನ್ನು ಸಹ ಬುದ್ಧನನ್ನಾಗಿ ಪರಿವರ್ತಿಸಿದರು. ಬಸವಣ್ಣ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಸಮಾನತೆಯ ಹರಿಕಾರರು. ಹಿಂಸೆಯ ವಿರೋಧಿಗಳು. ಮರುಳಸಿದ್ಧ `ಅಹಿಂಸೆಯೇ ಪರಮಧರ್ಮ’ ಎಂದು ಬಾಲ್ಯದಲ್ಲೇ ಮಾರಿ ಜಾತ್ರೆಯನ್ನು ತಡೆಗಟ್ಟಿ ಬಲಿಯಾಗುತ್ತಿದ್ದ ಕುರಿ, ಕೋಳಿ, ಕೋಣಗಳಿಗೆ ಮುಕ್ತಿಯನ್ನು ದೊರಕಿಸಿದವರು. ಇಂಥ ಪರಂಪರೆಯಲ್ಲಿ ಬಂದಿರುವ ಜನರ ಇಂದಿನ ವರ್ತನೆ ಕಂಡರೆ ತುಂಬಾ ವೇದನೆಯಾಗುವುದು. ಕರುಣೆಯ ಸ್ಥಾನದಲ್ಲಿ ಕ್ರೌರ್ಯ ವಿಜೃಂಭಿಸುತ್ತಿದೆ. ಸಮಾನತೆಯ ಮರೆಯಲ್ಲಿ ಅಸಮಾನತೆಯ ಹೊಗೆಯಾಡುತ್ತಿದೆ. ಅಹಿಂಸೆಯ ತತ್ವ ಹೇಳುತ್ತಲೇ ಹಿಂಸೆಯನ್ನು ಪ್ರಚೋದಿಸುವ ಹುಂಬತನ ಬಯಲಾಗುತ್ತಿದೆ.
ನಮ್ಮ ಜನರಿಗೆ ಸ್ಥಾವರ ದೇವರ ಬಗ್ಗೆ ಅಪಾರ ನಂಬಿಕೆ ಮತ್ತು ವಿಶ್ವಾಸ. ಆ ದೇವರು ಅಪ್ಪಣೆ ಕೊಡಿಸಿದಂತೆ ನಡೆಯುವುದೇ ಶ್ರೇಯಸ್ಸು ಎಂದು ಭಾವಿಸಿ ಏನೇನೋ ಕರ್ಮಠಗಳಿಗೆ ದಾಸರಾಗುವರು. ನಿಜಕ್ಕೂ ಸ್ಥಾವರ ದೇವರು ಎಂದಾದರೂ ಬಾಯಿ ಬಿಟ್ಟು ಮಾತನಾಡಿದ್ದುಂಟೇ? ಯಾವ ಸ್ಥಾವರ ದೇವರೂ ಮಾತನಾಡಿದ ನಿದರ್ಶನಗಳು ಪ್ರಪಂಚದ ಇತಿಹಾಸದಲ್ಲೇ ಇಲ್ಲ. ದೇವರ ಮರೆಯಲ್ಲಿ ಪೂಜಾರಿ ಪುರೋಹಿತರು ಮಾತನಾಡಿ ಜನರನ್ನು ದಿಕ್ಕು ತಪ್ಪಿಸುವರು. ಸಂತರು, ಶರಣರು, ಅನುಭಾವಿಗಳು ದೇವರ ಸ್ವರೂಪ ಮತ್ತು ಲಕ್ಷಣಗಳನ್ನು ಹೇಳುವುದು: ಸಚ್ಚಿದಾನಂತನಿತ್ಯಪರಿಪೂರ್ಣ (ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣ) ಎಂದು. ಆ ಚೇತನ ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ. ಇಂಥ ಗುಣಗಳು ಗುಡಿಯ ದೇವರ ಮೂರ್ತಿಗಳಿಗೆ ಇವೆಯೇ? ಅವೆಲ್ಲ ಜಡವಾದವು. ಅವುಗಳಿಗೆ ಸ್ವತಂತ್ರವಾಗಿ ಏನನ್ನೂ ಮಾಡಿಕೊಳ್ಳುವ ಶಕ್ತಿ ಇಲ್ಲ. ಪೂಜಾರಿ ಪೂಜಿಸಿದರೆ ಪೂಜಿಸಿಕೊಳ್ಳುತ್ತವೆ. ಅವನು ಮೈ ತೊಳೆದರೆ ತೊಳಸಿಕೊಳ್ಳುತ್ತವೆ. ಅವನು ಶೃಂಗಾರ ಮಾಡಿದರೆ ಮಾಡಿಸಿಕೊಳ್ಳುತ್ತವೆ. ಅವು ಕೇವಲ ಒಂದು ಬೊಂಬೆ ಇದ್ದಂತೆ. ಆದರೂ ಜನರು ಇದನ್ನು ಅರ್ಥ ಮಾಡಿಕೊಳ್ಳದೆ ತಮ್ಮ ದೇವರು ಆ ಪವಾಡ ಮಾಡುವುದು, ಈ ಪವಾಡ ಮಾಡುವುದು ಎಂದು ಸುಳ್ಳು ಸುದ್ದಿ ಹಬ್ಬಿಸುವರು. ನಮ್ಮ ದೇವರ ಶಕ್ತಿ ಪರೀಕ್ಷೆ ಮಾಡಲು ಹೋಗಿ ಆತ ಕಣ್ಣು ಕಳೆದುಕೊಂಡ, ಇನ್ನೊಬ್ಬನ ಪ್ರಾಣವೇ ಹೋಯ್ತು, ಅವನಿಗೆ ಬರಬಾರದ ರೋಗ ಬಂತು ಎಂದೆಲ್ಲ ಕಲ್ಪನೆಯ ಬಿರುಗಾಳಿ ಎಬ್ಬಿಸುವರು. ಇಂಥವರ ಅಜ್ಞಾನ ಕಂಡು ಪ್ರಭುದೇವರು ಹೇಳುತ್ತಾರೆ:
ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾ ದೇವ ಕಾಣಾ ಗುಹೇಶ್ವರಾ!
ಸ್ಥಾವರ ದೇವರನ್ನು ಕುರಿತ ವಿಡಂಬನಾತ್ಮಕ ನುಡಿಗಳು ಚಿಂತನಾರ್ಹವಾಗಿವೆ. ಪ್ರಭುದೇವರ ಪ್ರಶ್ನೆ ಪ್ರತಿಯೊಬ್ಬರ ಪ್ರಶ್ನೆಯೂ ಆಗಬೇಕಾಗಿದೆ. ಅವರು ಕೇಳುವುದು: ನಾ ದೇವನಲ್ಲದೆ ನೀ ದೇವನೇ ಎಂದು. ನೀನು ದೇವನಾದರೆ ಎನ್ನನ್ನೇಕೆ ಸಲಹೆ ಎಂದು ಪ್ರಶ್ನಿಸುವರು. ಬದಲಾಗಿ ನಿನಗೆ ಬಾಯಾರಿಕೆಯಾದಾಗ ನೀರನ್ನು ಕೊಡುವೆ. ಹಸಿವಾದಾಗ ಆಹಾರವನಿಕ್ಕುವೆ. ಆದುದರಿಂದ ನಾನು ದೇವರು, ನೀನಲ್ಲ ಎಂದು ಸ್ಪಷ್ಟಪಡಿಸುವರು. ಇದು ಕಾರಣವೇ `ಮಣ್ಣ ಬಿಟ್ಟು ಮಡಕೆಯಿಲ್ಲ, ತನ್ನ ಬಿಟ್ಟು ದೇವರಿಲ್ಲ’ ಎನ್ನುವ ಗಾದೆ ಹುಟ್ಟಿಕೊಂಡಿರಬೇಕು. ಮಣ್ಣಿಗೆ ಸಂಸ್ಕಾರ ಕೊಟ್ಟಾಗ ಸುಂದರವಾದ ಮಡಕೆ, ಕುಡಿಕೆ ಇತ್ಯಾದಿ ಪರಿಕರಗಳು ತಯಾರಾಗುವವು. ಅದೇ ರೀತಿ ಮಾನವನಿಗೆ ಸಂಸ್ಕಾರ ಸಿಕ್ಕರೆ ಆತ ಮಾನವತ್ವದಿಂದ ದೈವತ್ವಕ್ಕೇರುವನು. ಜನರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಶರಣರು ಇನ್ನೂ ಒಂದು ಹೆಜ್ಜೆ ಮುಂದುವರಿದು ದೇವರ ದರ್ಶನ, ಸ್ಪರ್ಶನ, ಅನುಭಾವಕ್ಕಾಗಿ ಇಷ್ಟಲಿಂಗ ದೀಕ್ಷೆಯನ್ನು ಜಾರಿಯಲ್ಲಿ ತಂದರು. ದೇವರು, ದೇವರು ಎಂದು ಕಂಡ ಕಂಡ ತೀರ್ಥಕ್ಷೇತ್ರಗಳನ್ನು, ದೇವಾಲಯಗಳನ್ನು ಹುಡುಕಿಕೊಂಡು ಹೋಗುವುದು, ಅಲ್ಲಿ ಪೂಜಾರಿ ಪುರೋಹಿತರ ಕಪಿಮುಷ್ಠಿಗೆ ಬಲಿಯಾಗಿ ಬದುಕಿನ ಸತ್ವ ಕಳೆದುಕೊಂಡು ಮತಿಗೇಡಿಗಳಾಗುವುದು ಬೇಡ ಎನ್ನುವ ದೂರದೃಷ್ಠಿ ಬಸವಾದಿ ಶಿವಶರಣರದಾಗಿತ್ತು. ಹಾಗಾಗಿ ನಿನ್ನ ದೇವರನ್ನು ನೀನೇ ಮುಟ್ಟಿ ಪೂಜಿಸಬೇಕೆಂಬ ಅರಿವು ಮೂಡಿಸಿದರು. ಅದಕ್ಕೆ ಬಸವಣ್ಣನವರು ಕೊಡುವ ನಿದರ್ಶನ ಮುಖಕ್ಕೆ ಹಿಡಿದ ಕನ್ನಡಿಯಂತಿದೆ.
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.
ವಚನದ ವಿವರಣೆ ಬೇಕಿಲ್ಲವೆನಿಸುವುದು. ತನ್ನ ದೇವರನ್ನು ತಾನೇ ಪೂಜಿಸಬೇಕೆಂಬ ಭಾವ ಇಲ್ಲಿ ಅಡಕವಾಗಿದೆ. ಶರಣರ ವಿಚಾರಗಳನ್ನು ಅರಿತವರು ಸಹ ಇಷ್ಟಲಿಂಗ ಮರೆತು ಸ್ಥಾವರದ ಬೆನ್ನು ಬಿದ್ದಿರುವುದು ನಿಜಕ್ಕೂ ವಿಷಾದನೀಯ. ಚಿಕ್ಕ ಚಿಕ್ಕ ಊರುಗಳಲ್ಲಿ ಹತ್ತಾರು ದೇವಸ್ಥಾನಗಳಿವೆ. ಆ ಊರಲ್ಲಿ ಒಂದು ಉತ್ತಮ ಪ್ರಾಥಮಿಕ ಶಾಲಾ ಕಟ್ಟಡ ಇಲ್ಲದಿದ್ದರೂ ದೇವಸ್ಥಾನಗಳಿಗೆ ಕೊರತೆ ಇಲ್ಲ. ಹೊಸ ಹೊಸ ದೇವಸ್ಥಾನಗಳು ಮೈದಾಳುತ್ತಲೇ ಇವೆ. ಯಾವ ದೇವಸ್ಥಾನದ ದೇವರೂ ವರ ನೀಡಿದ, ಶಾಪ ವಿಧಿಸಿದ ನಿದರ್ಶನಗಳಿಲ್ಲ. ಗುಡಿಯಲ್ಲಿದ್ದ ದೇವರ ಆಭರಣಗಳು ಕಳುವಾದರೆ ಕದ್ದ ವ್ಯಕ್ತಿಗೆ ಶಿಕ್ಷೆ ನೀಡುವ ಶಕ್ತಿ ಖಂಡಿತ ಆ ದೇವರಿಗೆ ಇಲ್ಲ. ಬದಲಾಗಿ ದೇವಸ್ಥಾನ ಸಮಿತಿಯವರು ಇಲ್ಲವೇ ಪೂಜಾರಿ ಪೊಲೀಸ್ ಸ್ಟೇಷನ್‍ಗೆ ಹೋಗಿ ನಮ್ಮ ದೇವರ ಆಭರಣ ಹುಡುಕಿಕೊಡಿ ಎಂದು ಅರ್ಜಿ ಸಲ್ಲಿಸುವರು. ಅಲ್ಲಿಗೆ ಅವರ ದೇವರಿಗೆ ಸ್ವಸಾಮರ್ಥ್ಯ ಇಲ್ಲವೆಂದಾಯಿತು. ಆದರೂ ಈ ಅರಿವು ಜನರಿಗಿಲ್ಲ. ವಾಸ್ತವವಾಗಿ `ದೇವನೊಬ್ಬ ನಾಮ ಹಲವು’ ಎಂಬಂತೆ ಇರುವ ಒಬ್ಬ ದೇವರಿಗೆ ಬೇರೆ ಬೇರೆ ಹೆಸರುಗಳು ಬಂದಿವೆ. ಈ ದೇವರುಗಳಲ್ಲಿಯೂ ಮಾನವರಂತೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂದು ವಿಭಾಗ ಮಾಡಿದ್ದಾರೆ. ಮಾನವ ತನ್ನ ಬಯಕೆಗಳನ್ನು ನೆರವೇರಿಸಿಕೊಳ್ಳಲು ಸುಲಭವಾಗಿ ದೇವರ ಮೇಲೆ ಭಾರ ಹೊರಿಸುವನು. ಹಾಗಾಗಿ ಕುಡಿಯುವ ದೇವರು, ಮಾಂಸ ತಿನ್ನುವ ದೇವರು, ಸೂಳೆಮನೆಗೆ ಹೋಗುವ ದೇವರು, ಎರಡು ಮದುವೆ ಆದ ದೇವರು, ಹೆಂಡತಿಯ ಮೇಲೆ ಮುನಿಸಿಕೊಂಡ ದೇವರು ಹುಟ್ಟುತ್ತ ಬಂದವು.
ದೇವರನ್ನು ಕರುಣಾಮಯಿ ಎನ್ನುವರು. ಮಾತೃಸ್ವರೂಪಿ ಎಂದು ಸ್ತುತಿಸುವರು. ಆದರೆ ಅಂಥ ದೇವರ ಹೆಸರಿನಲ್ಲೇ ಮಾರಿ ಜಾತ್ರೆ ಮಾಡುವುದು ಅಸಹ್ಯ ಹುಟ್ಟಿಸುವ ಕ್ರಿಯೆ. ಯಾವ ತಾಯಿಯೂ ತನ್ನ ಮಗನಿಗೆ ಕೇಡು ಬಯಸುವುದಿಲ್ಲ. ಮಗನ ಅಥವಾ ಮಗಳ ರಕ್ತ ಮಾಂಸ ಬಯಸುವುದಿಲ್ಲ. ಹಾಗೊಂದು ವೇಳೆ ಬಯಸುತ್ತಾಳೆ ಎಂದಾದರೆ ಅವಳು ತಾಯಿ ಅಲ್ಲ; ರಾಕ್ಷಸಿ. ಪರಂಪರಾಗನುಗತವಾಗಿ ದೇವರಿಗೆ ಬಲಿ ಕೊಡುವ ದುಷ್ಟ ಪದ್ಧತಿ ಬೆಳೆದು ಬಂದಿದೆ. ದೇವರಿಗೆ ಲಿಂಗ, ಜಾತಿ ಯಾವುದೂ ಇಲ್ಲ. ಆದರೂ ಕಾಳವ್ವ, ಕರಿಯವ್ವ, ದ್ಯಾಮವ್ವ, ಚೌಡವ್ವ, ಹುಲಿಗೆಮ್ಮ ಇತ್ಯಾದಿ ಹೆಣ್ಣುದೇವರು ಒಂದೆಡೆಯಾದರೆ ಹನುಮಪ್ಪ, ಬಸವಣ್ಣ, ತಿಮ್ಮಪ್ಪ, ಶ್ರೀಕೃಷ್ಣ, ಗಣಪತಿ, ಅಯ್ಯಪ್ಪ, ಇತ್ಯಾದಿ ಗಂಡು ದೇವರು ಮತ್ತೊಂದೆಡೆ. ಹೆಣ್ಣು ದೇವರಿಗೇ ಬಲಿ ಕೊಡುವ ಸಂಪ್ರದಾಯ ಹೆಚ್ಚು. ಅದಕ್ಕಾಗಿ ಪ್ರತಿವರ್ಷ ಇಲ್ಲವೇ ಮೂರು ವರ್ಷಕ್ಕೊಮ್ಮೆ ಅಥವಾ ಹನ್ನೆರಡು ವರ್ಷಕ್ಕೊಮ್ಮೆ ಮಾರಿ ಜಾತ್ರೆ ಮಾಡುವ ಕೆಟ್ಟ ಪದ್ಧತಿ ಈ ಯಾಂತ್ರಿಕ ಯುಗದಲ್ಲಿ ಮುಂದುವರಿದಿರುವುದು ಆಶ್ಚರ್ಯಕರ ಸಂಗತಿ. ಆ ಜಾತ್ರೆಯ ಸಂದರ್ಭದಲ್ಲಿ ಕುರಿ, ಕೋಳಿ, ಕೋಣಗಳ ಬಲಿ ಕೊಡುವರು. ಕೆಲವೆಡೆ ರಕ್ತದ ಕಾಲುವೆಯೇ ಹರಿಯುವುದುಂಟು. ಕೊಲ್ಲುವುದು ಹಿಂಸೆ ಎನ್ನುವ ಭಾವ ಕೊಲ್ಲುವವನಿಗೂ ಇಲ್ಲ, ಕೊಲ್ಲಿಸುವವರಿಗೂ ಇಲ್ಲ, ಅದನ್ನು ಬೆಂಬಲಿಸುವ ಜನರಿಗೂ ಇಲ್ಲ. ಹಾಗಾಗಿ ಮನುಷ್ಯ ಸಹ ಅನೇಕ ಸಂದರ್ಭಗಳಲ್ಲಿ ರಾಕ್ಷಸನಂತೆ ವರ್ತಿಸುವನು. ಅವನಲ್ಲಿ ಮಾನವೀಯತೆ ಮರೆಯಾಗಿ ಭೂತ ಹೊಕ್ಕವರಂತೆ ಆಡುವನು. ಇಂಥದನ್ನು ಯಾವ ಸಂತರು, ಶರಣರು ಒಪ್ಪಿಲ್ಲ. ಆದರೂ ಅಂಥ ಸಂತರ ಹೆಸರಿನಲ್ಲೇ ಮೌಢ್ಯಗಳು ವಿಜೃಂಭಿಸುತ್ತಿರುವುದು ಆಶ್ಚರ್ಯದ ಸಂಗತಿ.
ಹನ್ನೆರಡನೆಯ ಶತಮಾನದಲ್ಲಿ ವಿಶ್ವಬಂಧು ಮರುಳಸಿದ್ಧರು ಬಾಲಕನಾಗಿದ್ದಾಗಲೇ ಹಿಂಸೆಯ ವಿರುದ್ಧ ಪ್ರತಿಭಟನೆ ನಡೆಸುವರು. 12 ವರ್ಷವಾದರೂ ಮಳೆ ಬಾರದಿರಲು, ಬರಗಾಲ ಆವರಿಸಲು ಮಾರಿ ಜಾತ್ರೆ ಮಾಡದಿರುವುದೇ ಕಾರಣ ಎಂದು ಗುಲ್ಲೆಬ್ಬಿಸಿದ ಪೂಜಾರಿ ಪುರೋಹಿತರು ಮಾರಿ ಹಬ್ಬ ಮಾಡುವಂತೆ ಊರ ಜನರನ್ನು ಹುರಿದುಂಬಿಸುವರು. ಮುಗ್ಧ ಮನಸ್ಸಿನ ಬಾಲಕ ಮರುಳಸಿದ್ಧ ಮಾರಿ ಎಂದರೆ ರಾಕ್ಷಸಿಯೇ ಎಂದು ತಂದೆ ತಾಯಿಗಳನ್ನು ಪ್ರಶ್ನಿಸುವನು. ರಾಕ್ಷಸಿಯಲ್ಲ ಮಗು ಸಾಕ್ಷಾತ್ ದೇವಿ. ಕರುಣಾಮಯಿ ಎಂದೆಲ್ಲ ಅವರು ವರ್ಣಿಸುವರು. ಕರುಣಾಮಯಿ ತಾಯಿ ತನ್ನ ಮಕ್ಕಳ ರಕ್ತ ಮಾಂಸ ಬಯಸುವಳೇ? ಹಾಗೆ ಬಯಸಿದರೆ ಅವಳು ಕರುಣಾಮಯ ತಾಯಿ ಹೇಗಾಗುವಳು? ಇದರಲ್ಲಿ ಮಾಂಸಪ್ರಿಯರ ಸಂಚಿದೆ. ಪಟ್ಟಭದ್ರ ಹಿತಾಸಕ್ತರ ಪಿತೂರಿ ಇದೆ. ಪೂಜಾರಿ ಪುರೊಹಿತರ ದುರ್ಬುದ್ಧಿ ಇದೆ ಎಂದು ಬಾಲಕ ಪ್ರತಿಭಟಿಸುವನು. ಕೋಣವನ್ನು ಕಡಿಯುವ ಸಂದರ್ಭದಲ್ಲಿ ತಾನೇ ಮುಂದಾಗಿ ಕಡಿಯುವವನ ಕೈ ಹಿಡಿದು ಅಣ್ಣ ಕಡಿಯುವುದಾದರೆ ನನ್ನನ್ನು ಮೊದಲು ಕಡಿ ಎಂದು ಘರ್ಜಿಸುವನು. ಇಂಥ ಅನಾಚಾರಗಳಿಂದ ದೇವಿ ಸಂತೃಪ್ತಳಾಗುವ ಬದಲು ಶಾಪ ಹಾಕುವಳು. ಮಾರಿ ಜಾತ್ರೆ ಮಾಡಬೇಕೆನ್ನುವುದು ದೇವಿಯ ಬಯಕೆ ಖಂಡಿತ ಅಲ್ಲ. ಇದರಲ್ಲಿ ಪಟ್ಟಭದ್ರ ಹಿತಾಸಕ್ತರ, ಪೂಜಾರಿ ಪುರೊಹಿತರ ಸ್ವಹಿತ ಅಡಗಿದೆ ಎನ್ನುವ ವಾಸ್ತವ ಸತ್ಯವನ್ನು ಅಲ್ಲಿ ಸೇರಿದ್ದವರಿಗೆಲ್ಲ ಮನವರಿಕೆ ಮಾಡಿ ಬಲಿಯಾಗುವುದನ್ನು ತಪ್ಪಿಸುವನು. ಕಡಿಯಬೇಕಿದ್ದು ಕೋಣ, ಕುರಿಗಳನ್ನಲ್ಲ. ನಮ್ಮಲ್ಲೇ ಮನೆ ಮಾಡಿಕೊಂಡಿರುವ ಅಹಂಕಾರವೆಂಬ ಕೋಣ, ಮದ ಮತ್ಸರಗಳೆಂಬ ದುಷ್ಟ ಜಂತುಗಳನ್ನು. ಅದನ್ನು ಬಿಟ್ಟು ಹೀಗೆ ಅಮಾಯಕ ಪ್ರಾಣಿಗಳನ್ನು ದೇವರ ಹೆಸರಿನಲ್ಲಿ ಕೊಲ್ಲುವುದು ಮಹಾಪಾಪ ಎಂದು ಎಚ್ಚರಿಸುವನು.
ಯಾವ ದೇವರಾದರೂ ಇದುವರೆಗೆ ಹುಲಿ, ಸಿಂಹ, ಕರಡಿ ಇತ್ಯಾದಿ ಕ್ರೂರ ಪ್ರಾಣಿಗಳ ಬಲಿ ಬೇಡಿದ ನಿದರ್ಶನಗಳಿವೆಯೇ? ದೇವರು ಸಹ ದುರ್ಬಲರ ಮೇಲೇ ಸವಾರಿ ಮಾಡುವುದು ಎನ್ನುವ ಪರಿಸ್ಥಿತಿ. ಈ ನೆಲೆಯಲ್ಲಿ 12ನೆಯ ಶತಮಾನದಿಂದ ಇಂದಿನವರೆಗೂ ಜನರ ಮೌಢ್ಯ, ಅಜ್ಞಾನ ನಿವಾರಣೆ ಮಾಡಲು ಸಾಧ್ಯವಾಗದಿರುವುದು ನಿಜಕ್ಕೂ ವಿಷಾದನೀಯ. ಇತ್ತೀಚೆಗಂತೂ ಧಾರ್ಮಿಕ ಮೌಢ್ಯಗಳು ಮಿತಿಮೀರುತ್ತಲಿವೆ. ಅವುಗಳಲ್ಲಿ ಯಾವ ಹುರುಳಿಲ್ಲದಿದ್ದರೂ ದೃಶ್ಯಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಭವಿಷ್ಯಕಾರರು ಜನರ ಅಜ್ಞಾನವನ್ನು ದುರುಪಯೋಗ ಮಾಡಿಕೊಂಡು ಏನೆಲ್ಲ ಅನಾಚಾರಗಳಿಗೆ ಪ್ರೋತ್ಸಾಹ ನೀಡುತ್ತಲೇ ಇದ್ದಾರೆ. ಅವರಿಗೆ ಬಸವಣ್ಣನವರ `ಶಿರ ಹೊನ್ನ ಕಳಸ’ ಎನ್ನುವ ಹಿತೋಕ್ತಿಗಳು ಖಂಡಿತ ಹಿಡಿಸುವುದಿಲ್ಲ. ಸುಜ್ಞಾನಕ್ಕಿಂತ ಅಜ್ಞಾನವೇ ಪರಮ ಮಿತ್ರ ಎಂದು ಭಾವಿಸಿರುವ ಸಂಪ್ರದಾಯ ಶರಣರು ಜನರನ್ನು ಮತ್ತಷ್ಟು ಅಜ್ಞಾನದ ಕೂಪಕ್ಕೆ ತಳ್ಳುವಲ್ಲಿ ಸ್ಪರ್ಧೆಯನ್ನೇ ನಡೆಸಿದ್ದಾರೆ. ಶರಣರು ಬಲಿ ಪದ್ಧತಿಯನ್ನೇ ವಿರೋಧಿಸಿದವರು. ಯಜ್ಞದ ನೆಪದಲ್ಲಿ ಬಲಿ ಕೊಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ಅದನ್ನು ಕಂಡು ಬಸವಣ್ಣನವರು ಮರುಗಿ ಹೇಳುವ ಮಾತು ಹೃದಯ ಹಿಂಡುವಂತಿವೆ.
ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು
ಎಲೆ ಹೋತೆ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
ವೇದ ಓದಿದವರು, ಶಾಸ್ತ್ರ ಬಲ್ಲಿದರು ಯಜ್ಞದ ನೆಪದಲ್ಲಿ ಹೋತಿನ ಮರಿಯನ್ನು ಬಲಿ ಕೊಡುವುದನ್ನು ಕಂಡು ಎಲೆ ಹೋತೇ ಅಳು ಎಂದು ಹೇಳುವರು. ಅದೂ ಯಾರ ಮುಂದೆ? ವೇದ ಓದಿದವರ, ಶಾಸ್ತ್ರ ಕೇಳಿದವರ ಮುಂದೆ. ನೀನತ್ತುತಕ್ಕೆ ತಕ್ಕ ಶಿಕ್ಷೆಯನ್ನು ಶಿವ ಅವರಿಗೆ ಖಂಡಿತ ಮಾಡುವನು ಎನ್ನುವ ಬಸವಣ್ಣನವರ ಈ ನುಡಿಗಳನ್ನು ವೇದ ಓದಿದವರು, ಶಾಸ್ತ್ರ ಕೇಳಿದವರು ಅರ್ಥ ಮಾಡಿಕೊಂಡಿದ್ದರೆ ಈ ನಾಡಿನಲ್ಲಿ ದೇವರ ಹೆಸರಿನಲ್ಲಿ ಯಾವ ಹಿಂಸೆಯೂ ನಡೆಯುತ್ತಿರಲಿಲ್ಲ. ಜನರು ನೀತಿವಂತರಾಗಿ, ವಿಚಾರವಂತರಾಗಿ, ವಿವೇಕವಂತರಾಗಿ ನಡೆಯುವ ಸಂಕಲ್ಪ ಮಾಡಿದರೆ ಖಂಡಿತ ಮಾರಿ ಜಾತ್ರೆಯಂತಹ ಅಮಾನುಷ, ಹಿಂಸಾತ್ಮಕ ಹಬ್ಬಗಳನ್ನು ಆಚರಿಸಲು ಸಾಧ್ಯವಿಲ್ಲ. ಈಗಲಾದರೂ ಜನರು ತಮ್ಮ ವಿವೇಕವನ್ನು ಮಾರಿಕೊಳ್ಳದೆ ಜಾಗೃತರಾಗಿ ಮಾರಿ ಜಾತ್ರೆ ಮಾಡುವುದನ್ನು ನಿಲ್ಲಿಸುವ ಹೃದಯ ಶ್ರೀಮಂತಿಕೆ ತೋರಬೇಕು. ಈಗೀಗಲಂತೂ ವಿಚಾರವಂತರು, ಬಸವ ಬಸವ ಎಂದು ಬಾಯಲ್ಲಿ ಬಡಬಡಿಸುವವರು ಸಹ ತಾವೇ ಮುಂದೆ ನಿಂತು ಮಾರಿ ಜಾತ್ರೆಗಳನ್ನು ಮಾಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾವು ಸಿರಿಗೆರೆ ಮಠದ ಶಿಷ್ಯರು, ಮರುಳಸಿದ್ಧನ ಪರಂಪರೆಯವರು ಎಂದು ಮಾತು ಮಾತಿಗೂ ಹೇಳಿಕೊಳ್ಳುವ ಹುಂಬರು ಮಾರಿ ಜಾತ್ರೆ ಮಾಡಿದಲ್ಲಿ ಖಂಡಿತ ಅವರು ಸಿರಿಗೆರೆ ಮಠದ ಶಿಷ್ಯರಾಗಲು, ಮರುಳಸಿದ್ಧನ ಪರಂಪರೆಯವರೆಂದು ಹೇಳಿಕೊಳ್ಳಲು ಅನರ್ಹರು. ಹಾಗೆ ಹೇಳಿಕೊಂಡರೆ ಮಠಕ್ಕೆ ಮತ್ತು ಮರುಳಸಿದ್ಧರಿಗೆ ಅವಮಾನ ಮಾಡಿದಂತೆ.
ಜನರಿಗೆ ತತ್ವಗಳಿಗಿಂತ ಆಚರಣೆ ಮುಖ್ಯ. ಅದರಲ್ಲೂ ಆದರ್ಶ ವಿಚಾರಗಳನ್ನು ಪ್ರತಿಪಾದಿಸುವ ಆಚರಣೆಗಳಿಗಿಂತ ಜನರನ್ನು ದಿಕ್ಕು ತಪ್ಪಿಸಿ ದಿಂಡುರುಳಿಸುವ ಮೌಢ್ಯಾಚರಣೆಗಳೆ ಬಹು ಇಷ್ಟ. ಹಾಗಂತ ಅಪ್ಪ ಹಾಕಿದ ಆಲದ ಮರ ಎಂದು ಅದಕ್ಕೆ ನೇತು ಹಾಕಿಕೊಳ್ಳಬೇಕಿಲ್ಲ. ಬುದ್ಧಿಯ ಸದ್ಬಳಕೆ ಮಾಡಿಕೊಂಡು ಮೌಢ್ಯಗಳಿಂದ ಅದೂ ಧಾರ್ಮಿಕ ಮೌಢ್ಯಗಳಿಂದ ಮುಕ್ತರಾದರೆ ಬದುಕು ಅತ್ಯಂತ ಫಲಪ್ರದವಾಗಲು ಸಾಧ್ಯ. ಆದರೆ ಇಂಥ ಹಿತೋಕ್ತಿ ಹೇಳುವವರ ಬಗ್ಗೆ ಹಗುರವಾಗಿ ಮಾತನಾಡುವ ಬುದ್ಧಿವಂತ ಜನರೂ ಇದ್ದಾರೆ. ಅವರಿಗೆ ಮಾನ್ಯತೆ ನೀಡದೆ ಮನ ಮೆಚ್ಚುವ, ಮನದೊಡೆಯ ಮಹಾದೇವ ಮೆಚ್ಚುವ ಸದಾಚಾರಗಳನ್ನು ಮಾಡಬೇಕು. ಲಿಂಗಾಯತ ಧರ್ಮದ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಪರಿಜ್ಞಾನ ಇರುವವರು ಎಂದೆಂದೂ ಮೌಢ್ಯಗಳ ದಾಸರಾಗಲು ಸಾಧ್ಯವಿಲ್ಲ. ಸಾವಿರ ಜನ ಸಾವಿರ ಆಡಿಕೊಂಡರೂ ಅವರು ತಮ್ಮ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ. ಅಂಥ ಬದ್ಧತೆಯನ್ನು ಬೆಳೆಸಿಕೊಂಡಾಗಲೇ ವ್ಯಕ್ತಿಯ ಕಲ್ಯಾಣ, ನಾಡಿನ ಕಲ್ಯಾಣ ಸಾಧ್ಯ. ಆಗಲೂ ಹಲವರು ಪ್ರಗತಿಪರ ಕಾರ್ಯಗಳನ್ನು ಮೆಚ್ಚದೆ ಮತ್ಸರ, ಹೊಟ್ಟೆಕಿಚ್ಚು ತೋರಬಹುದು. ಅದಕ್ಕೆ ಕಾಸಿನ ಕಿಮ್ಮತ್ತೂ ಕೊಡಬೇಕಾಗಿಲ್ಲ. ಅಂಥವರಿಗೆ ಬಸವಣ್ಣನವರ ಮುಂದಿನ ವಚನವೇ ಉತ್ತರ ಕೊಡುವುದು.
ಕೋಣನ ಹೇರಿಂಗೆ ಕುನ್ನಿ ಬುಸುಕುತ್ತ ಬಡುವಂತೆ
ತಾವೂ ನಂಬರು, ನಂಬುವರನೂ ನಂಬಲೀಯರು.
ತಾವೂ ಮಾಡರು, ಮಾಡುವರನೂ ಮಾಡಲೀಯರು.
ಮಾಡುವ ಭಕ್ತರ ಕಂಡು ಸೈರಿಸಲಾರದವರ,
ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವ.
ಪೂಜಾರಿ ಪುರೋಹಿತರ ಬಗ್ಗೆ ಬಹು ಎಚ್ಚರದಿಂದ ಇರಬೇಕಾಗಿದೆ. ಅವರು ಧರ್ಮ, ದೇವರ ಹೆಸರಲ್ಲಿ ಏನು ಬೇಕಾದರೂ ಮಾಡಿಸುವ ಕುತಂತ್ರಿಗಳು. ಹಾಗಾಗಿ ಕುವೆಂಪು ಅವರು ಹೇಳಿರುವ ಮಾತುಗಳು ಮನನೀಯವಾಗಿವೆ- “ದೇವಸ್ಥಾನವೊಂದು ಸ್ವಾತಂತ್ರ್ಯದ ಸಮಾಧಿ. ಭಕ್ತಿಯೊಂದು ವಂಚನೆಯ ಜಾಲ. ಪೂಜೆಯೊಂದು ಮಂಗನ ಚೇಷ್ಠೆ. ಶಾಸ್ತ್ರದ ಆಚಾರವೇ ಮಾನವನ ಆತ್ಮದ ಗೋಣಿಗೆ ನೇಣು. ಇವುಗಳ ಲಾಭ ಪೂಜಾರಿ ಪುರೋಹಿತರಿಗೆ”. ಸ್ವಾಮಿ ವಿವೇಕಾನಂದರು “ಓ ಬನ್ನಿ ಮನುಜರೇ; ಬೆಳವಣಿಗೆಗೆ ತೊಡಕಾಗಿರುವ ಪುರೋಹಿತಶಾಹಿಯನ್ನು ಒದ್ದೋಡಿಸಲು ಬನ್ನಿ. ಅವರೆಂದಿಗೂ ರಿಪೇರಿಯಾಗುವುದಿಲ್ಲ. ಅವರ ಹೃದಯವೆಂದಿಗೂ ದೊಡ್ಡದಾಗುವುದಿಲ್ಲ. ಅವರು ಶತಮಾನಗಳ ಮೌಢ್ಯತೆಯ ಹರಿಕಾರರು” ಎಂದು ಕಟುವಾಗಿಯೇ ನುಡಿಯುವರು. ಈ ಮಾತುಗಳನ್ನು ಮತ್ತೆ ಮತ್ತೆ ಜನರು ಮೆಲಕು ಹಾಕಬೇಕು. ಧಾರ್ಮಿಕ ಅಜ್ಞಾನ, ಮೌಢ್ಯಗಳಿಂದ ಹೊರಬರದಿದ್ದರೆ ಖಂಡಿತ ಜನರ ಬದುಕು ನರಕವಾಗುವುದರಲ್ಲಿ ಅನುಮಾನವಿಲ್ಲ. ದೇವರ ಹೆಸರಲ್ಲಿ ಮಂಗಚೇಷ್ಠೆ ಮಾಡುವ ಖದೀಮರ ಗುಟ್ಟನ್ನು ರಟ್ಟು ಮಾಡುವ ವಿವೇಕವನ್ನು ಜನರು ಬೆಳೆಸಿಕೊಳ್ಳಬೇಕು. ಆದರೆ ಇನ್ನೂ ಜನರು ವಾಸ್ತು, ಶಾಸ್ತ್ರ, ಪಂಚಾಂಗ, ಹೊತ್ತಿಗೆ ಇಂಥವುಗಳ ಹಿಂದೆ ಸುತ್ತುತ್ತಿರುವುದು ಅವರ ಅವಿವೇಕ ಮತ್ತು ಅಜ್ಞಾನದ ಪರಮಾವಧಿ. ಅಂಥ ಅಜ್ಞಾನ, ಅವಿವೇಕದ ಕಾರಣವಾಗಿಯೇ ಅವರು ದೇವರಿಗೆ ಬಲಿ ಕೊಡುವುದು. ಬಲಿ ಕೊಡುವ ಜನರಿಗೆ ನಿಜಕ್ಕೂ ಧರ್ಮದ ಅರಿವಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಧರ್ಮ ದಯಾಮೂಲವಾದುದು. ಅದನ್ನೇ ಗುರು ಬಸವಣ್ಣನವರು ಹೇಳಿದ್ದಾರೆ.
ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
Comments 19
SIDDAPPA mulge
Feb 5, 2020ಧಾರ್ಮಿಕ ಮೌಢ್ಯದ ಬಗ್ಗೆ ಪಂಡಿತಾರಾಧ್ಯ ಶ್ರೀಗಳು ತುಂಬಾ ಮಾರ್ಮಿಕವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ.ಧಾರ್ಮಿಕ ಮೌಢ್ಯದ ಜತೆಗೆ ರಾಜಕೀಯ ಮೌಢ್ಯ ಮತ್ತು ಆರ್ಥಿಕ ಮೌಢ್ಯ ಬೆರೆಸಿ ಮಾತಾಡಿದರೆ ಜನಮಾನಸಕ್ಕೆ ಬೇಗ ತಟ್ಟುತ್ತದೆ.
ಪ್ರತಿತಿಂಗಳು ಒಳ್ಳೊಳ್ಳೆ ಲೇಖನಗಳು ಓದಿಸುತ್ತಿರುವದಕ್ಕೆ ಬಯಲು ಬಳಗಕ್ಕೆ ಮನದುಂಬಿ ಅಭಿನಂದನೆಗಳು.
Tejaswi J.P
Feb 6, 2020ನಮ್ಮ ದೇಶಕ್ಕೆ ಏನಾಗಿದೆ? ಎಷ್ಟೊಂದು ಸಂತರು, ದಾರ್ಶನಿಕರು ಬಂದು ಹೋದರು, ತಿಳಿ ಹೇಳಿದರು. ಆದರೂ ಮೌಢ್ಯತೆ ಹೆಚ್ಚುತ್ತಲೇ ಇದೆ. ಪ್ರಾಣಿಬಲಿಗಳನ್ನು ಇಂದಿಗೂ ತಪ್ಪಿಸಲಾಗುತ್ತಿಲ್ಲವೆಂಬುದು ವಿಷಾದದ ಸಂಗತಿ. ಸ್ವಾಮಿಗಳ ನೋವು ಬರಹದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ.
Rashmi Kundagol
Feb 6, 2020ಮನುಷ್ಯನ ದೇವರ ಕಲ್ಪನೆಗಳಿಗೆ ಲೆಕ್ಕವೇ ಇಲ್ಲ. ಬಲಿ ನೀಡುವಂತಹ ಅಮಾನುಷ ಪದ್ದತಿಗಳಿಗೆ ಕ್ಷಮೆಯೇ ಇಲ್ಲ. ಹೀಗೆ ಬಲಿಕೊಡುವವರಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಬೇಕು.
Prasanna Kumar
Feb 9, 2020ತಮ್ಮದು ವಿಶ್ವಬಂಧು ಮರುಳಸಿದ್ಧರ ಪರಂಪರೆಯ ಮಠವೆಂದು ತಿಳಿದು ಬಹಳ ಸಂತೋಷವಾಯಿತು. ಮರುಳಸಿದ್ದರು ವಚನಗಳನ್ನು ಬರೆದಿದ್ದಾರೆಯೇ? ಅವರ ಕುರಿತು ಮತ್ತಷ್ಟು ಮಾಹಿತಿ ನೀಡಿ.
Preethi Ishwar
Feb 9, 2020ಶರಣರ ದೇವರ ಸ್ವರೂಪ ಸಚ್ಚಿದಾನಂತನಿತ್ಯಪರಿಪೂರ್ಣ ಎಂದು ಹೇಳಿದ್ದೀರಿ, ಹಾಗೆಂದರೇನು? ದಯವಿಟ್ಟು ವಿವರಿಸಿ.
Veerabhadrappa, Bangalore
Feb 11, 2020ಅಲ್ಲಮಪ್ರಭುಗಳು “ನಾ ದೇವನಲ್ಲದೆ ನೀ ದೇವನೇ?” ಎಂದು ಕೇಳುತ್ತಾರೆ. “ತನ್ನ ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಿಕೆಯಿಲ್ಲ” ಎಂದು ನೀವು ಅದನ್ನು ಸಮರ್ಥಿಸಿದ್ದೀರಿ. ಹಾಗಾದರೆ ಅದು ಅದ್ವೈತ ಸಿದ್ದಾಂತ ಆಯಿತು. ಶರಣರು ಅದ್ವೈತವನ್ನು ಒಪ್ಪಿಕೊಂಡಿದ್ದರೆ?
Sharada A.M
Feb 13, 2020ಭಾರತದಲ್ಲಿ ಹುಟ್ಟಿದಷ್ಟು ಸಾಧು ಸಂತರು ಪ್ರಪಂಚದಲ್ಲಿ ಇನ್ನೆಲ್ಲಿಯೂ ಇರಲಿಕ್ಕಿಲ್ಲ. ಆದರೂ ಯಾಕಿಷ್ಟು ಮೌಢ್ಯ!!!! ದೇವರ ಹೆಸರಿನಲ್ಲಿ ಪ್ರಾಣಿಬಲಿ ಕಾನೂನು ಬಾಹಿರವಾಗಿದ್ದರೂ ಜನ ಭಕ್ತಿಯ ಅಮಲಿನಲ್ಲಿ ಎಸಗುತ್ತಿರುವ ಕ್ರೌರ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ.
Devaraj B.S
Feb 13, 2020ಶಿವಗಣಾರಾಧನೆಗೆಂದು ಪೂಜ್ಯರು ಕೂಲಂಬಿಗೆ ಹೋಗಿರುವುದಾಗಿ ಬರೆದಿದ್ದಾರೆ. ಶಿವಗಣಾರಾಧನೆಯ ಆಚರಣೆಯು ಲಿಂಗಾಯತರಲ್ಲಿ ಉಂಟೆ?
Giraja H.S
Feb 14, 2020ವಿಚಾರಪೂರ್ಣ ಬರಹ. ಪೂಜ್ಯ ಸ್ವಾಮೀಜಿಯವರ ಮಾತು-ಬರಹ ಎರಡೂ ನೇರಾನೇರ. ಸಮಾಜಕ್ಕೆ ಇಂತಹ ನೇರನಡೆ-ನುಡಿಗಳ ಅವಶ್ಯಕತೆ ಇದೆ.
Savitri N P
Feb 16, 2020ಸ್ಥಾವರ ದೇವರುಗಳ ಸುತ್ತ ಆರಂಭವಾದ ಬಲಿ ಪದ್ಧತಿಗೆ ವೇದಗಳೇ ಮೂಲ ಎನ್ನುತ್ತಾರೆ. ಬಲಿ ಸಂಪ್ರದಾಯವನ್ನು ಮುಂದುವರಿಸುತ್ತಿರುವವರಿಗೆ ಕಾನೂನಾತ್ಮಕ ಶಿಕ್ಷೆ ಇಲ್ಲವೇ?
Jeevan koppad
Feb 16, 2020ಲೇಖನ ಓದುತ್ತಾ ನನಗೂ ಶ್ರೀಗಳಂತೆ ಕೋಪ ಉಕ್ಕಿ ಬಂತು. ಮೂಕಪ್ರಾಣಿಗಳನ್ನು ಮನುಷ್ಯ ತನ್ನ ಸುಖಕ್ಕಾಗಿ ಹೀಗೆ ಬಳಸಿಕೊಳ್ಳುವುದು ಪರಮ ಅನ್ಯಾಯ.
ಶರಣಪ್ಪ ಗೌಡ, ಹಿರೆಕೆರೂರು
Feb 21, 2020ಅಹಿಂಸೆಯೇ ಪರಮಧರ್ಮ ಎಂದು ಬೋಧಿಸಿದ ನಮ್ಮ ದೇಶದಲ್ಲಿ ಇವತ್ತಿಗೂ ಕೋಣ, ಕುರಿಗಳು ದೇವರಿಗೆ ಬಲಿಯಾಗುತ್ತಿರುವುದು ಅತ್ಯಂತ ನೋವಿನ ವಿಷಯ. ನೀತಿಬೋಧನೆಗಳು ಮನುಷ್ಯನನ್ನು ಬದಲಿಸಲಾರವು ಎನ್ನುವುದನ್ನು ಅಣಕಿಸುವಂತಿವೆ ಈ ಎಲ್ಲ ಆಚರಣೆಗಳು. ಶ್ರೀಗಳ ಬರಹ ಕಣ್ಣು ತೆರೆಸುವಹಾಗಿದೆ.
Hareesh Mysuru
Feb 21, 2020“ಲಿಂಗಾಯತ ಧರ್ಮದ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಪರಿಜ್ಞಾನ ಇರುವವರು ಎಂದೆಂದೂ ಮೌಢ್ಯಗಳ ದಾಸರಾಗಲು ಸಾಧ್ಯವಿಲ್ಲ. ಸಾವಿರ ಜನ ಸಾವಿರ ಆಡಿಕೊಂಡರೂ ಅವರು ತಮ್ಮ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ. ಅಂಥ ಬದ್ಧತೆಯನ್ನು ಬೆಳೆಸಿಕೊಂಡಾಗಲೇ ವ್ಯಕ್ತಿಯ ಕಲ್ಯಾಣ, ನಾಡಿನ ಕಲ್ಯಾಣ ಸಾಧ್ಯ.” –ತಮ್ಮ ಮಾತು ಅಕ್ಷರಶಃ ಸತ್ಯ. ಲೇಖನ ತುಂಬಾ ಚೆನ್ನಾಗಿದೆ.
gowrishankar
Feb 21, 2020ಎಲ್ಲಾ ಧರ್ಮಗಳಲ್ಲಿಯೂ ಮೌಢ್ಯಗಳು ತುಂಬಿಕೊಂಡಿವೆ. ಲಿಂಗಾಯತರಲ್ಲಿಯೂ ಇಷ್ಟಲಿಂಗದ ಸುತ್ತ ಮೂಢತೆಯ ಪೂಜೆಗಳು ಹುಟ್ಟಿಕೊಂಡಿವೆ. ಆದರೆ ಪ್ರಾಣಿಬಲಿ ಕೊಡುವುದು ಅಮಾನುಷ ವರ್ತನೆ, ಅದಕ್ಕೆ ಕ್ಷಮೆಯೇ ಇಲ್ಲ.
Arun Naik
Feb 24, 2020ಕರುಣಾಮಯಿಯಾದ ದೇವರು ಬಲಿ ಕೇಳಲು ಸಾಧ್ಯವೇ? ಅವನಿಗೆ ಹೊಗಳಿಕೆಯೋ ಬೇಡ, ಪೂಜೆಯೂ ಬೇಡ, ಬಲಿಯೂ ಬೇಡ.
ಶ್ರೀದೇವಿ ಕಲಾದಗಿ
Feb 24, 2020ಕುವೆಂಪು, ವಿವೇಕಾನಂದರ ಮಾತುಗಳು ನೇರವಾಗಿವೆ, ಸೂಕ್ತವಾಗಿವೆ. ಶರಣರು ಇಂಥ ಮೂಢರನ್ನು ಅಡಿಗಡಿಗೆ ಎಚ್ಚರಿಸಿದ್ದಾರೆ. ಸ್ವಾಮಿಗಳ ಮಾತುಗಳು ಮೆಲುಕು ಹಾಕುವಂತಿವೆ.
Channappa Vali
Feb 26, 2020ನಮ್ಮ ದೇಶದಲ್ಲಿ ಒಂದೊಂದು ಊರಿನಲ್ಲೂ ಒಂದೊಂದು ಬಗೆಯ ಮೂಢನಂಬಿಕೆಗಳು ಗಾಡವಾಗಿ ಬೇರುಬಿಟ್ಟಿವೆ. ವೈಜ್ಞಾನಿಕ ಮನೋಭಾವವು ವಿಜ್ಞಾನಿಗಳಲ್ಲೇ ಮಾಯವಾಗಿರುವಾಗ ಜನಸಾಮಾನ್ಯರಲ್ಲಿ ಅದನ್ನು ನಿರೀಕ್ಷಿಸುವುದೇ ಸಾಧ್ಯವಿಲ್ಲ. ವಾಸ್ತವ ಸಮಸ್ಯೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಬರೆದ ಉತ್ತಮ ಲೇಖನ.
ಶಿವಪ್ರಭು ಧಾರವಾಡ
Feb 26, 2020ಷಟಸ್ಥಲದ ಸಾಧನೆಯ ಕುರಿತು ಶ್ರೀಗಳವರಿಂದ ಒಂದು ಮಾರ್ಗದರ್ಶಿ ಲೇಖನಮಾಲೆಯನ್ನು ಆರಂಭಿಸಬೇಕೆಂದು ಬಯಲು ಬ್ಲಾಗಿಗೆ ನನ್ನ ಮನವಿ. ಶ್ರೀಗಳ ಭಾಷೆ ಸರಳವಾಗಿದೆ, ನೇರವಾಗಿದೆ. ವಿಷಯಗಳನ್ನು ಸ್ಪಷ್ಟಪಡಿಸುವ ಕೌಶಲ್ಯವಿದೆ. ದಯವಿಟ್ಟು ನಮ್ಮ ಬೇಡಿಕೆಯನ್ನು ಸ್ವಾಮಿಗಳಿಗೆ ತಲುಪಿಸಿರಿ.
Kiran Varad
Mar 1, 2020ಇವತ್ತು ಎಲ್ಲ ಕಡೆ ಕಾಣುತ್ತಿರುವುದು ದಯೆ ಇಲ್ಲದ ಧರ್ಮ. ದಯೆ ಮಾಯವಾದ ಧರ್ಮ. ದಯೆಯನ್ನು ಅರಿಯದವರು ಮಾತ್ರ ಧರ್ಮಿಗಳು ಎನ್ನುವಂತ ಪರಿಸ್ಥಿತಿ ಬಂದಿದೆ. ಸಮಾಜದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಕರಾಳ ದಿನಗಳ ಬಗ್ಗೆ ನೀವು ಬರೆಯಬೇಕು, ಜನರನ್ನು ಸನ್ಮಾರ್ಗಕ್ಕೆ ತರಬೇಕು.