ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಲಿಂಗಾಯತ ಧರ್ಮದ ಮಾನ್ಯತೆಯ ವಿಷಯ ಈಗ ನಿತ್ಯ ದೃಶ್ಯ ಮಾಧ್ಯಮಗಳ ಆಹಾರ. ಅಲ್ಲಿ ನಡೆಯುತ್ತಿರುವ ಜಗಳ, ರಂಪಾಟ, ವಿಭಿನ್ನ ಹೇಳಿಕೆಗಳು ವಿಷಯವನ್ನು ಮತ್ತಷ್ಟು ಗೋಜಲು ಮಾಡುತ್ತಿವೆ. ಇಡೀ ರಾಜ್ಯವೇ ಇತ್ತ ಅತ್ಯಂತ ಕುತೂಹಲದಿಂದ ನೋಡುತ್ತಿರುವುದು ನಿಜ. ಆದರೆ ನಾಡ ಜನರ ಮುಂದೆ ನಾವೆಲ್ಲಾ ಕೂಡಿ ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ತಿಲಾಂಜಲಿ ಇಡುತ್ತಿದ್ದೇವೆ ಎಂದೆನಿಸುತ್ತಿದೆ.
ಬಸವಣ್ಣನವರು ಜಗವು ಕಂಡ ಬಹು ದೊಡ್ಡ ಕ್ರಾಂತಿಕಾರಿ ಚಿಂತಕ. ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ, ವರ್ಣ, ವರ್ಗ, ಆಶ್ರಮ ಭೇದ ಹೊರತು ಪಡಿಸಿ ಸಾಂಸ್ಥಿಕರಣವಿಲ್ಲದ ಲಿಂಗಾಯತ ಧರ್ಮವನ್ನು ಶರಣರೊಂದಿಗೆ ಸೇರಿ ಹನ್ನೆರಡನೆಯ ಶತಮಾನದಲ್ಲಿ ಸ್ಥಾಪಿಸಿದರು. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎಂಬ ತತ್ವದಡಿ ರೂಪುಗೊಂಡ ಸಿದ್ಧಾಂತವು ಕಾಯಕ ಮತ್ತು ದಾಸೋಹದ ಬಹು ಮೌಲಿಕ ಚಿಂತನೆಗಳನ್ನು ಬಸವಣ್ಣನವರು ನೀಡಿದರು.
ಲಿಂಗಾಯತ ಧರ್ಮದ ಬೇಡಿಕೆ ನಿನ್ನೆ ಮೊನ್ನೆಯದಲ್ಲ. 1891 ರ ಜನಗಣತಿ, 1911 ರ ಜನಗಣತಿ, ಮುಂದೆ 1948ರ ಘಟನಾವಳಿಯ ಸಮಿತಿಯ ಸದಸ್ಯರ ಧಾರ್ಮಿಕ ಸೂಚನೆಗಳು, 1978 ರಲ್ಲಿ ವೀರಶೈವ ಧರ್ಮದ ಪ್ರಸ್ತಾಪ, ಆಮೇಲೆ 2002 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ವೀರಶೈವ ಧರ್ಮದ ಪ್ರಸ್ತಾಪ, 2012 ಮತ್ತು 2013 ರ ವೀರಶೈವ ಮತ್ತು ಲಿಂಗಾಯತ ಧರ್ಮದ ಬೇಡಿಕೆ… ಅಲ್ಲಿಂದ ಇಂದಿನ ಹೋರಾಟದ ತನಕ ಇದು ನಾನಾ ಮಜಲುಗಳನ್ನು ಕಂಡಿದೆ.
ತೀರಾ ಈಚೆಗೆ ನಡೆದ ಪ್ರಯತ್ನಗಳ ವಿಷಯಕ್ಕೆ ಬಂದರೆ, 2012 ಮತ್ತು 2013 ರ ವೀರಶೈವ ಮತ್ತು ಲಿಂಗಾಯತ ಧರ್ಮದ ಬೇಡಿಕೆಯ ದೋಷಪೂರಿತ ಅರ್ಜಿಗಳನ್ನು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಆಫ್ ಇಂಡಿಯಾದವರು ತಿರಸ್ಕರಿಸಿದರು.
ಇದುವರೆಗಿನ ವೈಫಲ್ಯಕ್ಕೆ ಕಾರಣಗಳು-
1) ವೀರಶೈವ ಒಂದು ಪ್ರತ್ಯೇಕ ಧರ್ಮದ ಮಾನ್ಯತೆ ಪಡೆಯದೇ ಇರೋದು ಅದು ಶೈವ ಧರ್ಮದ ಭಾಗವಾಗಿರುವ ಕಾರಣ.
2) ಮನವಿಯು ಅತ್ಯಂತ ದೋಷಪೂರಿತವಾಗಿದ್ದು ಬೇಡಿಕೆಗಳ ಸ್ಪಷ್ಟತೆ ಹಾಗೂ ಬದ್ಧತೆ ಅಲ್ಲಿರದೆ ತೀರಾ ಒಂದು ಸಾದಾ ಅರ್ಜಿಯಂತಿದೆ.
3) ಮನವಿಯು ಇಂಗ್ಲಿಷ್ ನಲ್ಲಿದ್ದು ವ್ಯಾಕರಣದ ದೋಷಗಳಿವೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಅರ್ಜಿಯನ್ನು ಬರೆದಿರುವುದಿಲ್ಲ.
4) ಮನವಿಯು ತಿರಸ್ಕಾರಗೊಂಡರೂ ಅದನ್ನು ಸಮರ್ಪಕವಾಗಿ ತಿದ್ದಿ, ಮತ್ತೆ ಮರು ಉತ್ತರಿಸಿ ಮೇಲ್ಮನವಿಯನ್ನು ಸಲ್ಲಿಸಲಾಗಿಲ್ಲ.
5) ಅಖಿಲ ಭಾರತ ವೀರಶೈವ ಮಹಾಸಭೆಯೇ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ ಎಂದು ನಂಬಿ ಮೋಸ ಹೋಗಿರುವುದು ಲಿಂಗಾಯತ ಜನರ ಅರಿವಿಗೆ ಬಂದಿಲ್ಲ.
ನಮ್ಮ ಹೋರಾಟವು ವೈದಿಕೇತರ ಹಿಂದುಯೇತರ ಚಳುವಳಿಯಾಗಿದ್ದು, ಮೂಲನಿವಾಸಿಗಳ ದಲಿತರ ಬಡವರ ಹೋರಾಟ. ಜೊತೆಗೆ ಸನಾತನ ಸಮಾಜದಿಂದ ಮುಕ್ತಿ ಪಡೆಯುವ ಸ್ಪಷ್ಟವಾದ ನಿಲುವನ್ನು ಹೊಂದಿರಬೇಕಾಗುತ್ತದೆ.
ಬೌದ್ಧ, ಜೈನ, ಸಿಖ್ ಧರ್ಮಗಳೂ ಭಾರತದ ನೆಲದಲ್ಲಿ ಹಿಂದೂ ಆಚರಣೆಗೆ ಭಿನ್ನವಾಗಿ ಉದಯಿಸಿದ ಧರ್ಮಗಳು. ಇವುಗಳಿಗಿಂತ ಅತ್ಯಂತ ವೈಚಾರಿಕವಾಗಿ ಉಗ್ರವಾಗಿ ಸನಾತನ ವ್ಯವಸ್ಥೆಯನ್ನು ವಿರೋಧಿಸಿದ ಬಸವಣ್ಣನವರು ತಮ್ಮ ವಿಚಾರಗಳಲ್ಲಿ ಹಿಂದುಯೇತರ ಅವೈದಿಕ ನಿಲುವು, ತತ್ವಗಳನ್ನು ಸ್ಪಷ್ಟಪಡಿಸಿದ್ದಾರೆ. ಯಾವುದೇ ಮಹಾತ್ಮನು ತಾನು ಧರ್ಮ ಸ್ಥಾಪಿಸಿದ್ದೇನೆ ಎಂದು ಎಲ್ಲಿಯೂ ಹೇಳುವುದಿಲ್ಲ. ಮೊಹಮ್ಮದ್, ಯೇಸು, ಬುದ್ಧ, ಮಹಾವೀರ ಮುಂತಾದ ದಾರ್ಶನಿಕರು ತಾವೇ ಆಯಾ ಧರ್ಮಗಳನ್ನು ಸ್ಥಾಪಿಸಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ. ಧರ್ಮ ಸ್ಥಾಪನೆಯು ಚಾರಿತ್ರಿಕವಾಗಿರಬೇಕು, ಕಟ್ಟು ಕಥೆ ಪೌರಾಣಿಕ ಕಲ್ಪನೆಗಳಲ್ಲಿ ಮುಳುಗಿರಬಾರದು.
ಧರ್ಮವು ಬದುಕಿನ ಸನ್ಮಾರ್ಗಕ್ಕೆ ದಾರಿ. ಸೌಹಾರ್ದಯುತವಾದ ಬದುಕಿಗೆ ಸೂತ್ರ. ಸಮಾಜದಲ್ಲಿ ಜಿಡ್ಡುಗಟ್ಟಿ ಕಲುಷಿತವಾದ ವಾತಾವರಣವು ನಿರ್ಮಾಣವಾದಾಗ ಕಾಲಕಾಲಕ್ಕೆ ಇಂತಹ ದಾರ್ಶನಿಕರು ಜನಿಸಿ ಮೌಲ್ಯಗಳ ಮರು ಸ್ಥಾಪನೆ ಮಾಡುತ್ತಾರೆ. ಭೌಗೋಳಿಕವಾಗಿ ನೋಡಿದರೆ ಭಾರತದ ಎಲ್ಲ ಧರ್ಮಗಳೂ ಹಿಂದೂ ಭೂಖಂಡದಲ್ಲಿ ಜನಿಸಿವೆ. ಆದರೆ ಆಚರಣೆ ವಿಚಾರದಲ್ಲಿ ಭಿನ್ನವಾಗಿವೆ. ಲಿಂಗಾಯತ ಎಂಬುದು ಅತ್ಯಂತ ವೈಚಾರಿಕ ವೈಜ್ಞಾನಿಕ ಸಮಾನತೆಯ ತಳಹದಿಯ ಮೇಲೆ ನಿರ್ಮಿತಗೊಂಡ ಸಾರ್ವಕಾಲಿಕ ಧರ್ಮವಾಗಿದೆ.
ಲಿಂಗಾಯತ ಧರ್ಮದ ಹೋರಾಟ ಶತಮಾನಗಳಷ್ಟು ಹಳೆಯದಾಗಿದ್ದರೂ ಅದು ತೀವ್ರಗೊಂಡಿದ್ದು ನವೆಂಬರ್ 2013 ರಲ್ಲಿ, ಜೈನರು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆದ ಮೇಲೆ.
ಆದರೆ ವೀರಶೈವ ಮತ್ತು ಲಿಂಗಾಯತ ಹಗ್ಗ ಜಗ್ಗಾಟ ಮುಗಿಯಲಾರದ ವಿಷಯ. ನಮ್ಮ ಧಾರ್ಮಿಕ ಹಕ್ಕನ್ನು ಚಲಾಯಿಸಲು ಇನ್ನೊಬ್ಬರ ಸಹಾಯ ಬೇಕಿಲ್ಲ ಮತ್ತು ಅದನ್ನು ಅಡ್ಡಿ ಪಡಿಸುವ ಹಕ್ಕು ಅನ್ಯ ಮತೀಯರಿಗೆ, ಧರ್ಮೀಯರಿಗೆ ಇಲ್ಲ.
ನಮ್ಮ ಹೋರಾಟವು ಗುಣಾತ್ಮಕವಾಗಿ ಶಾಂತಿಯುತವಾಗಿ ನಡೆಯಬೇಕು. 2005 ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಎಂ ಎನ್ ವೆಂಕಟಾಚಲಯ್ಯ ಅವರು ಭಾರತದಲ್ಲಿ ಹಲವು ರಾಜ್ಯಗಳಿದ್ದು ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ಧರ್ಮಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸುತ್ತಿದ್ದು, ಆಯಾ ರಾಜ್ಯ ಸರಕಾರವು, ಆಯಾ ರಾಜ್ಯದ ಧರ್ಮಗಳನ್ನು ಅಲ್ಪ ಸಂಖ್ಯಾತ ಮತ್ತು ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಹೀಗಾಗಿ ನಾವು ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ ಮುಂತಾದ ರಾಜ್ಯಗಳಲ್ಲಿ ಲಿಂಗಾಯತ ಧರ್ಮೀಯರಿಂದ ಮನವಿ ಪತ್ರ ಸಂಗ್ರಹಿಸಿ ಆಯಾ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆಗ ಕೇಂದ್ರ ಸರಕಾರವು ಕೈಗೊಳ್ಳುವ ನಿರ್ಧಾರದ ಮೇಲೆ ನಮ್ಮ ಆಂದೋಲನಗಳು ತೀವ್ರಗೊಂಡು ಮಾನ್ಯತೆ ಪಡೆಯುವಲ್ಲಿ ಯಶಸ್ಸನ್ನು ಕಾಣಬಹುದು.
ಜನ ಶಕ್ತಿ, ಜನಾಂದೋಲನ ಮೆರವಣಿಗೆ, ಪ್ರತಿಭಟನೆಯನ್ನು ಆರಂಭಿಸಿ ನಮ್ಮ ಸಾಂಘಿಕ ಹೋರಾಟವನ್ನು ವ್ಯರ್ಥಗೊಳಿಸಬಾರದು. ತಜ್ಞರ, ಸಂಶೋಧಕರ ತಂಡ ರಚಿಸಿ ಲಿಂಗಾಯತ ಧರ್ಮಕ್ಕೆ ಬೇಕಾದ ದಾಖಲೆ ಸಾಕ್ಷಿ ಪುರಾವೆಗಳನ್ನು ಕಲೆ ಹಾಕುವಲ್ಲಿ ಮುಂದಾಗಬೇಕು.
ಕೋರ್ಟ್ ಆದೇಶ, ಗ್ಯಾಜೆಟ್, ಸರಕಾರಿ ಸುತ್ತೋಲೆ, ಜನಗಣತಿ ವರದಿ ಹೀಗೆ ಮುಂತಾದ ದಾಖಲೆಗಳನ್ನು ಸಂಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮನವರಿಕೆ ಮಾಡಿಕೊಡಬೇಕು.
ವೀರಶೈವರು ಶೈವ ಧರ್ಮದ ಸಪ್ತ ಶೈವಗಳ ಒಂದು ಭಾಗವೆಂದು ಹೇಳಿದ್ದು ಕೂಡ ಹದಿನಾರನೆಯ ಶತಮಾನದಲ್ಲಿ ಮಾತ್ರ.
ವೀರಶೈವರು ಲಿಂಗಾಯತರು. ಆದರೆ ಲಿಂಗಾಯತರು ವೀರಶೈವರಲ್ಲ. ಲಿಂಗಾಯತರ ಆಚರಣೆಗಳನ್ನೇ ಅನುಸರಿಸಿ ಸದ್ಯ ಅದರ ಪ್ರಾಯೋಜಕತ್ವ ಮತ್ತು ಮಾಲೀಕತ್ವವನ್ನು ಸಾಧಿಸಿದೆ. ಲಿಂಗಾಯತದಲ್ಲಿ ವೀರಶೈವ ವ್ರತವು ನುಸುಳಿಕೊಂಡು ಬಂದ ಪಂಥ. ಆದರೆ ಮುಂದೆ ಅದೇ ವೈಚಾರಿಕವಾದ ಧರ್ಮವನ್ನು ನಿರಾಶ್ರಿತಗೊಳಿಸಿತು. ಅದರ ಫಲವೇ ಇಂದಿನ ಗೋಜು- ಗೊಂದಲ.
ಲಿಂಗಾಯತ ಮತ್ತು ವೀರಶೈವ: ಸತ್ಯಾ ಸತ್ಯತೆ
1) ಇತಿಹಾಸ ಪುರುಷ ಬಸವಣ್ಣನವರೇ ಲಿಂಗಾಯತಕ್ಕೆ ಧರ್ಮಗುರು. ಸ್ಥಾವರಲಿಂಗೋದ್ಭವರು ಎನ್ನಲಾದ ಕಾಲ್ಪನಿಕ ಪೌರಾಣಿಕ ರೇಣುಕಾಚಾರ್ಯರೇ ವೀರಶೈವಕ್ಕೆ ಧರ್ಮಗುರು.
2) ಲಿಂಗಾಯತರಲ್ಲಿ 770 ಅಮರಗಣಂಗಳೆಲ್ಲ ನಾಯಕರು. ವೀರಶೈವರು 770 ಅಮರಗಣಂಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
3) ಲಿಂಗಾಯತರು ಏಕದೇವೋಪಾಸಕರು. ಇಷ್ಟಲಿಂಗ ಯೋಗ ಅವರ ಪೂಜಾ ವಿಧಾನ. ಇಷ್ಟಲಿಂಗವು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣ ಚೈತನ್ಯದ ಕುರುಹು. ಬಹುದೇವೋಪಾಸಕ ವೀರಶೈವರು ಗಣಪತಿ, ನಂದಿ, ವೀರಭದ್ರ, ಶಿವ, ಪಾರ್ವತಿ ಇತ್ಯಾದಿ ದೇವತೆಗಳ ಪೂಜಕರು.
4) ಲಿಂಗಾಯತ ಧರ್ಮದಲ್ಲಿ ಯಜ್ಞ, ಹೋಮ, ಹವನ ಮತ್ತು ವೇದಘೋಷಗಳಿಲ್ಲ. ವೀರಶೈವರಲ್ಲಿ ಇವೆಲ್ಲವೂ ಆಚರಣೆಯಲ್ಲಿವೆ.
5) ಮೂಢನಂಬಿಕೆಯ ಆಗರಗಳಾದ ಜ್ಯೋತಿಷ್ಯ ಮತ್ತು ಪಂಚಾಂಗವನ್ನು ಲಿಂಗಾಯತರು ನಂಬುವುದಿಲ್ಲ. ವೀರಶೈವರು ನಂಬುತ್ತಾರೆ.
6) ಲಿಂಗಾಯತರಿಗೆ ಆಚಾರವೇ ಸ್ವರ್ಗ, ಅನಾಚಾರವೇ ನರಕ. ವೀರಶೈವರು ಸ್ವರ್ಗ, ನರಕಗಳನ್ನು ನಂಬುತ್ತಾರೆ.
7) ಲಿಂಗಾಯತರದು ಅನುಭವಮಂಟಪ ಮಹಾಮನೆಯ ಸಿದ್ಧಾಂತ. ವೀರಶೈವರಿಗೆ ದೇವಾಲಯಗಳು ಬೇಕು.
8) ಲಿಂಗಾಯತರದು ಕಾಯಕ ಸಿದ್ಧಾಂತ. ವೀರಶೈವರದು ಕರ್ಮ ಸಿದ್ಧಾಂತ.
9) ಲಿಂಗಾಯತರ ಧರ್ಮಗ್ರಂಥ ವಚನ ಸಂಪುಟ. ವೀರಶೈವರ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ. (ಕಾಲ ನಿರ್ಣಯದ ಗೊಂದಲ- ಖಂಡಿತವಾಗಿ ಬಸವೋತ್ತರ ಕೃತಿ)
10) ಅವೈದಿಕ ಲಿಂಗಾಯತರಿಗೆ ವಚನವೇ ಸರ್ವಸ್ವ. ವೇದಾಗಮಗಳನ್ನು ನಂಬುವ ವೀರಶೈವರು ವೈದಿಕ ಸಂಪ್ರದಾಯದವರು.
11) ಲಿಂಗಾಯತರಿಗೆ ಅರಿವೇ ಗುರು. ವೀರಶೈವರಲ್ಲಿ ಭಕ್ತರು ಗುರುವಿನ (ಆಚಾರ್ಯರ) ಗುಲಾಮರು.
12) ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ’ ಎಂದು ಹೇಳಿದವರು. ವೀರಶೈವ ಪಂಚಾಚಾರ್ಯರಿಗೆ ವೈಭವಪೂರಿತ ಪಲ್ಲಕ್ಕಿ ಬೇಕು. ಕಿರೀಟ ಸಿಂಹಾಸನಗಳು ಬೇಕು.
13) ಲಿಂಗಾಯತರದು ನಿರ್ಜಾತಿ ವ್ಯವಸ್ಥೆ. ಬಸವ ತತ್ತ್ವವನ್ನು ಜನ ಮನದಲ್ಲಿ ಮೂಡಿಸುವ ಲಿಂಗವಂತರು ಶರಣ ಜಂಗಮರಾಗಬಹುದು. ವೀರಶೈವರದು ಜಾತಿ ವ್ಯವಸ್ಥೆ. ಅವರ ಪ್ರಕಾರ ಜಾತಿ ಜಂಗಮರೇ ವೀರ ಮಹೇಶ್ವರದವರೇ ಗುರುಗಳಾಗಬೇಕು.
14) ಲಿಂಗಾಯತರಿಗೆ ಪಂಚಸೂತಕಗಳಿಲ್ಲ. ವೀರಶೈವರಿಗೆ ಪಂಚಸೂತಕಗಳಿವೆ.
15) ಲಿಂಗಾಯತ ಬಸವಾದ್ವೈತ. ಶಿವ, ಗಂಗೆ, ಪಾರ್ವತಿ, ಮತ್ತು ಕೈಲಾಸ ನಂಬುವ ವೀರಶೈವ ದ್ವೈತ.
ವೀರಶೈವ ಪದವನ್ನು ಹರಿಹರ, ರಾಘವಾ೦ಕ, ಕೆರೆ ಪದ್ಮರಸ ಮತ್ತು ಚಾಮರಸರ ಕೃತಿಗಳಲ್ಲಿ ಕಂಡು ಬಂದಿಲ್ಲಾ. ಅದು1384ರಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ವೀರಶೈವರು ಪಂಚಾಚಾರ್ಯ ಸಂಪ್ರದಾಯವನ್ನು ಬಿಟ್ಟು ಬಸವಣ್ಣನವರೇ ಧರ್ಮಗುರು ಮತ್ತು ವಚನಗಳೇ ಧರ್ಮಗ್ರಂಥ ಎಂದು ಒಪ್ಪಿಕೊಂಡಾಗ ಮಾತ್ರ ಲಿಂಗಾಯತ ಸಮಾಜ ಒಂದಾಗಬಲ್ಲುದು. ಅವೈದಿಕ ಲಿಂಗಾಯತ ಮತ್ತು ವೈದಿಕ ವೀರಶೈವ ತದ್ವಿರುದ್ಧ ಸಿದ್ಧಾಂತಗಳ ಮೇಲೆ ನಿಂತಿರುವುದರಿಂದ ಒಂದಾಗುವ ದಾರಿ ದುರ್ಗಮವಾಗಿದೆ. ಆದರೆ ಇರುವುದೊಂದೇ ಮಾರ್ಗ, ಅದು ಬಸವಮಾರ್ಗ. ಬಸವಣ್ಣನವರ ಹೊರತಾಗಿ ಲಿಂಗಾಯತ ಧರ್ಮಕ್ಕೆ ಇನ್ನೊಬ್ಬ ಧರ್ಮಗುರುವಿಲ್ಲ.
ಲಿಂಗಾಯತ ಧರ್ಮದ ಸ್ವತಂತ್ರ ಧರ್ಮದ ಶಾಸನ ಬದ್ಧ ಮಾನ್ಯತೆಯು ನ್ಯಾಯ ಸಮ್ಮತವಾಗಿದೆ ಹಾಗೂ ಕಾನೂನು ಸಮ್ಮತವಾಗಿದೆ. ಆದರೆ ಹೋರಾಟಗಳ ಯೋಜನೆ ಕೈಗೊಳ್ಳುವ ಹಾದಿಯಲ್ಲಿ ಎಲ್ಲಿಯೋ ಎಡುವುತ್ತಿದ್ದೇವೆ ಎಂದೆನಿಸುತ್ತಿದೆ.
ಈ ನೆಲದಲ್ಲಿ ಹುಟ್ಟಿದ ಒಬ್ಬ ಮಹಾದಾರ್ಶನಿಕ ಬಸವಣ್ಣ. ಸತ್ಯ ಸಮತೆ ನ್ಯಾಯಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಶ್ರೇಷ್ಠ ಚಿಂತಕ, ಸಮಾಜವಾದಿ. ಅವರ ಸೈದ್ಧಾಂತಿಕ ತತ್ವಗಳಿಗೆ ಮಾನ್ಯತೆ ಸಿಗಬೇಕಾದರೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆಯಲೇ ಬೇಕು. ಇದು ಹಕ್ಕು.