ದಂಪತಿಗಳಲ್ಲಿ ಅನುಭಾವ ಚಿಂತನ
ಎಲ್ಲಾ ಸಾಂಸ್ಥಿಕ ಧರ್ಮಗಳಲ್ಲೂ ಬಹಳ ಹಿಂದಿನಿಂದಲೂ ಹೆಣ್ಣು ಅನಾದರಣೆಗೆ ಒಳಗಾಗಿರುವುದನ್ನು ನೋಡಿದ್ದೇವೆ. ಬಹುತೇಕ ಧರ್ಮಗಳು ಸ್ತ್ರೀಗೆ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ರಾಜಕೀಯ ಹೀಗೆ ಯಾವುದೇ ರಂಗದಲ್ಲೂ ಗುರುತರವಾದ ಸ್ಥಾನಮಾನ ನೀಡಿರುವುದು ವಿರಳಾತಿ ವಿರಳ. ಭಾರತದಲ್ಲಂತೂ ಹೆಣ್ಣು ಶೂದ್ರಳು, ಯಾವುದೇ ಸಂಸ್ಕಾರಕ್ಕೆ ಅನರ್ಹಳು ಎಂದು ಅತ್ಯಂತ ಶೋಚನೀಯವಾಗಿ ನಡೆಸಿಕೊಂಡು ಬರಲಾಗಿದೆ. ಇದಕ್ಕೆ ಅಪವಾದವೆಂಬಂತೆ ಹನ್ನೆರಡನೇ ಶತಮಾನದಲ್ಲಿ ಕನ್ನಡನಾಡಿನಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಶರಣ ಚಳುವಳಿಯು ಲಿಂಗತಾರತಮ್ಯವನ್ನು ಸಂಪೂರ್ಣ ಕಿತ್ತೆಸೆಯುವುದರ ಜೊತೆಗೆ ಸ್ತ್ರೀಯರಿಗೆ ಹಿಂದೆಂದೂ ಸಿಗದಂಥಾ ಅಭೂತಪೂರ್ವ ಸ್ಥಾನಮಾನ ಕಲ್ಪಿಸಿಕೊಟ್ಟಿತು. ಇದರ ಪರಿಣಾಮವೇ ಅಕ್ಕಮಹಾದೇವಿ, ನೀಲಮ್ಮ, ನಾಗಲಾಂಬಿಕೆ ಮೊದಲುಗೊಂಡು ಮುವ್ವತ್ತುಮೂರು ಸ್ತ್ರೀಯರು ಶರಣೆಯರಾಗಿ ಅರಳಿದರು, ಸ್ವಾನುಭಾವದ ವಚನಗಳನ್ನು ರಚಿಸಿ ಅವುಗಳ ಪರಿಮಳ ಎಲ್ಲೆಡೆ ಸೂಸುವಂತಾಯಿತು.
ಬಹುತೇಕ ಶರಣರು ದಾಂಪತ್ಯ ಜೀವನ ನಡೆಸಿದವರೇ ಆಗಿದ್ದಾರೆ. ಅನೇಕ ಶರಣೆಯರು ತಮ್ಮ ಪತಿಗೆ ಮಾರ್ಗದರ್ಶಕರಾಗಿರುವುದನ್ನು ಅವರ ವಚನಗಳಲ್ಲೇ ಕಾಣುತ್ತೇವೆ. ಉದಾಹರಣೆಗೆ ಆಯ್ದಕ್ಕಿ ಲಕ್ಕಮ್ಮ ತಮ್ಮ ಪತಿ ಆಯ್ದಕ್ಕಿ ಮಾರಯ್ಯನವರಿಗೆ ನೀಡಿದ ಕಾಯಕದ ಮಹತ್ವದ ಕುರಿತಾದ ಮಾರ್ಗದರ್ಶನ ಅನುಕರಣೀಯವಾದುದು. ಇನ್ನು ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದವರು ಮಹಾದೇವ ಭೂಪಾಲ. ಅವರು ಕಟ್ಟಿಗೆ ಒಡೆದು ಶರಣರ ಮನೆಗಳಿಗೆ ಮಾರಿ ಸಂಪಾದಿಸಿದ ಧನದಲ್ಲಿ ದಾಸೋಹ ಮಾಡುತ್ತಿದ್ದುದರಿಂದ ಮೋಳಿಗೆ ಮಾರಯ್ಯನಾಗುತ್ತಾರೆ, ಅವರ ಪತ್ನಿ ಪತಿಯ ಜೊತೆಯಲ್ಲೇ ಸಾಗಿ, ಕಲ್ಯಾಣದಲ್ಲಿ ಮೋಳಿಗೆ ಮಹಾದೇವಿಯಾಗುತ್ತಾರೆ. ಅರಸೊತ್ತಿಗೆಯನ್ನು ಕಸದಂತೆ ಕಂಡು ಶರಣರ ಸಂಗಕ್ಕಾಗಿ ಹಾತೊರೆದು ಸಾವಿರಾರು ಕಿಲೋಮೀಟರ್ ಕಲ್ಲುಮುಳ್ಳಿನ ಹಾದಿ ಸವೆಸಿ ಕಟ್ಟಿಗೆ ಮಾರುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಶರಣರ ಸಂಗದಲ್ಲಿ ತಮ್ಮನ್ನೇ ತಾವು ಮರೆತು ನಿತ್ಯ ಅನುಭಾವ ಗೋಷ್ಠಿಯಲ್ಲಿ ಪಾಲ್ಗೊಂಡು ಸ್ವಯಾನುಭಾವಿಗಳಾಗಿ ಅಮೃತಕ್ಕೂ ಮಿಗಿಲೆನಿಸುವ ವಚನಸುಧೆಯನ್ನು ಅನುಭವ ಮಂಟಪಕ್ಕೆ ಅರ್ಪಿಸುತ್ತಾರೆ. ವಿಶೇಷವೆಂದರೆ ಕಾಶ್ಮೀರದಿಂದ ಬಂದ ಇವರು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಕಲಿತು ಉನ್ನತ ಅನುಭಾವದ ವಚನಗಳನ್ನು ಕನ್ನಡದಲ್ಲಿ ರಚಿಸುತ್ತಾರೆ. ಅವರ ಕನ್ನಡಭಾಷಾ ಪಾಂಡಿತ್ಯ ಎಷ್ಟರಮಟ್ಟಿಗೆ ಇತ್ತೆಂದರೆ ಅದನ್ನು ನನ್ನಂಥಾ ಸಾಮಾನ್ಯನಿಂದ ವರ್ಣಿಸುವುದು ಸಾಧ್ಯವಿಲ್ಲ. ಅವರ ವಚನಗಳನ್ನು ಓದಿ ಸ್ವತಃ ಅನುಭವಿಸಿದರೆ ಅವರಿಗಿದ್ದ ಭಾಷೆಯ ಮೇಲಿನ ಪ್ರೌಢಿಮೆ, ಹಿಡಿತಗಳ ಅರಿವಾಗುವುದು.
ಎಲ್ಲವೂ ಸಾಂಗವಾಗಿ ನಡೆಯುವಾಗ ಹರಳಯ್ಯನವರ ಮಗ ಶೀಲವಂತ ಹಾಗೂ ಮಧುವರಸರ ಮಗಳು ಲಾವಣ್ಯವತಿಯರ ವಿವಾಹದಿಂದಾಗಿ ಕಲ್ಯಾಣಕ್ರಾಂತಿ ಘಟಿಸುತ್ತದೆ. ಆಗ ಉಂಟಾದ ದಂಗೆಯ ಪ್ರಕ್ಷುಬ್ಧತೆಯಲ್ಲಿ ಶರಣರ ಅನುಭಾವದ ವಚನಗಳು ಸುಟ್ಟುಬೂದಿಯಾಗುತ್ತವೆ, ಅಮಾಯಕ ಸತ್ಯ ಶರಣರ ಕಗ್ಗೊಲೆಯಾಗುತ್ತದೆ. ಕಲ್ಯಾಣ ಸೂರೆಯಾಗಿ ನಲುಗುತ್ತದೆ.
ಇಂಥಾ ವಿಷಮ ಗಳಿಗೆಯಲ್ಲಿ ಮೋಳಿಗೆಮಾರಯ್ಯನವರು “ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷ್ಯಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.” ಎಂದು ಬರೆಯುತ್ತಾರೆ. ಸನಾತನಿಗಳ ಕ್ರೌರ್ಯಕ್ಕೆ ಇಡೀ ಕಲ್ಯಾಣ ಸೂರೆಯಾಗಿದೆ, ಶರಣರನ್ನು ಕೊಂದು ಎಲ್ಲೆಂದರಲ್ಲಿ ಎಸೆದಿದ್ದಾರೆ, ಹದ್ದು ಕಾಗೆಗಳು ಹೆಣಗಳನ್ನು ಹರಿದು ತಿನ್ನುತ್ತಿವೆ, ಕಲ್ಯಾಣದಲ್ಲಿಯೇ ಇದ್ದು ಇದನ್ನೆಲ್ಲಾ ಕಣ್ಣಾರೆಕಂಡ ಮೋಳಿಗೆಮಾರಯ್ಯನವರು ತೀವ್ರವಾಗಿ ನೊಂದುಕೊಳ್ಳುತ್ತಾರೆ, ಕಣ್ಣೀರನ್ನು ಒರೆಸಿಕೊಳ್ಳುತ್ತಾ ಪತ್ನಿ ಮಹಾದೇವಿಯ ಬಳಿ ಕಲ್ಯಾಣದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಚರ್ಚಿಸುತ್ತಿದ್ದಾರೆ. ಬಸವಣ್ಣ ಕೂಡಲಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಅಲ್ಲಮಪ್ರಭು ಕದಳಿಗೆ ಹೋಗಿ ಅಲ್ಲಿ ಲಿಂಗೈಕ್ಯರಾಗಿ ನಿರ್ವಯಲಾದರು, ಇನ್ನುಳಿದ ಶರಣರೆಲ್ಲರೂ ತಮತಮಗೆ ತಿಳಿದ ಸ್ಥಳಗಳಲ್ಲಿ ಬಯಲನ್ನು ಅಪ್ಪಿಕೊಂಡರು, ನನಗೂ ಅದೇ ಬಯಕೆಯಾಗುತ್ತಿದೆ, ನಾನೂ ನಿರ್ವಯಲ ಪದವನ್ನು ಹೊಂದಬೇಕು, ಬಯಲಲ್ಲಿ ಬಯಲಾಗಬೇಕು ಎಂದು ಹೇಳಿಕೊಳ್ಳುತ್ತಿದ್ದಾರೆ.
“ಓ ಎಂದಲ್ಲಿ ನಿರಾಕಾರವಸ್ತುವಾದೆಯಲ್ಲಾ, ಓಂ ಎಂದಲ್ಲಿ ಸಾಕಾರವಸ್ತುವಾದೆಯಲ್ಲಾ. ತತ್ವಮಸಿಯೆಂದಲ್ಲಿ ತತ್ವರೂಪಾಗಿ, ಜಗವ ರಕ್ಷಿಸಿಹೆನೆಂದು ಕರ್ತೃರೂಪಾದೆಯಲ್ಲಾ. ನಿಮಗೆ ಮರ್ತ್ಯದ ಮಣಿಹ ಎಲ್ಲಿಯ ಪರಿಯಂತರ, ಎನಗೆ ಕಟ್ಟುಗುತ್ತಗೆಯೆ? ನಾ ಕಟ್ಟಿಗೆಯ ಹೊತ್ತೆ, ಶಿವಭಕ್ತರ ಮನೆಗೆ. ನೀವು ಕೊಟ್ಟ ಕಾಯಕದ ಕೃತ್ಯ, ಇನ್ನೆಷ್ಟುದಿನ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ” ನಾನು ಕಾಶ್ಮೀರದದಿಂದ ಅರಸೊತ್ತಿಗೆಯನ್ನು ಕಾಲಿನಿಂದ ಸರಿಸಿ ಇಲ್ಲಿಗೆಬಂದು ನಿಮ್ಮ ನಿರೂಪದಂತೆ ಶರಣರ ಮನೆಗಳಿಗೆ ಕಟ್ಟಿಗೆ ಮಾರಿ ದಾಸೋಹ ಸಲ್ಲಿಸಿ ಇದುವರೆಗೆ ಸಾರ್ಥಕ ಜೀವನ ಸವೆಸಿದ್ದೇನೆ ಇನ್ನೂ ಎಷ್ಟುದಿನ ಹೀಗೆಯೇ ಬದುಕುವುದು? ಇದ್ದು ಏನು ಮಾಡುವುದು ನಾನೂ ಬಯಲಲ್ಲಿ ಬಯಲಾಗಬೇಕು ಎಂಬ ಮನದಿಂಗಿತವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.
“ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಗೆ ನಿಲ್ಲೆ, ಕೈಲಾಸವೆಂಬ ಭವಸಾಗರವನೊಲ್ಲೆ. ನೀ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ, ನಿನ್ನಲ್ಲಿಗೆ ಕೂಟಸ್ಥವ ಮಾಡು, ನಿಃಕಳಂಕ ಮಲ್ಲಿಕಾರ್ಜುನಾ.” “ನಿನ್ನನರಿವುದಕ್ಕೆ ಹೊನ್ನು ಹೆಣ್ಣು ಮಣ್ಣೆಂಬ ಸನ್ನೆಯ ತೊರೆಯ ಹಾಯಬೇಕು. ಆ ಮೂರನರಿವಲ್ಲಿ, ಮರೆದು ಹಿಡಿವಲ್ಲಿ, ಅರಿದು ಬಿಡುವಲ್ಲಿ, ಆ ಉಭಯದ ಒಡಲು ಹರಿದು, ತೋರಿಕೆ ನಷ್ಟವಾಗಿ ನಿಂದವಂಗಲ್ಲದೆ, ನಿನ್ನ ಚರಣದ ಬಾಗಿಲ ಬಾದಳವನೇರಬಾರದು. ಅದಕ್ಕೆ ಸನ್ನೆಗಟ್ಟಿಗೆಯೆ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.” ಶರಣ ಮಾರಯ್ಯನವರು ಕೈಲಾಸವೆಂಬುದು ಭವಸಾಗರ ಅಂಥಾ ಕೈಲಾಸ ನನಗೆ ಬೇಡ, ಹೇ ಪರಮಾತ್ಮಾ ನಿನ್ನಲ್ಲಿ ನನ್ನನ್ನು ಒಂದು ಮಾಡಿಕೋ ಎಂದು ಬೇಡುತ್ತಿದ್ದಾರೆ.
ಇಂಥಾ ಹೊಯ್ದಾಟದ ಸಮಯದಲ್ಲಿ ಅವರ ಸತಿ ಮಹಾದೇವಿ ಸ್ವಲ್ಪವೂ ಧೃತಿಗೆಡದೆ ಆ ವಿಷಮ ಸಂದರ್ಭದಲ್ಲಿ ಮಾರಯ್ಯನವರಿಗೆ ಮುಸುಕಿದ್ದ ಮರೆವಿನ ಪೊರೆಯನ್ನು ತಮ್ಮ ದಿವ್ಯ ಅನುಭೂತಿಯೆಂಬ ಜ್ಞಾನಾಗ್ನಿಯಿಂದ ಸುಟ್ಟು ಬೂದಿಮಾಡಿ ಉಫ್ ಎಂದು ಉರುವುತ್ತಾರೆ:”ಅದೇತಕೆ ಅಯ್ಯಾ, ಶಿವನೊಳಗೆ ಕೂಟಸ್ಥನಾದೆಹೆನೆಂಬ ಹಲುಬಾಟ? ಇದು ನಿತ್ಯ ಸತ್ಯದ ಆಟವಲ್ಲ; ಇನ್ನಾರಿಗೆ ಕೇಳಿ, ಮತ್ತಿನ್ನಾರಿಗೆ ಹೇಳುವೆ ನೀ ಮಾಡುವ ಮಾಟ? ಮುನ್ನ ನೀನಾರೆಂದಿದ್ದೆ ಹೇಳಾ? ಆ ಭಾವವನರಿದು ನಿನ್ನ ನೀನೆ ತಿಳಿ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.” ಮೋಳಿಗೆ ಮಹಾದೇವಿ ತಾಯಿಗೆ ಪತಿ ಮಾರಯ್ಯನವರ ಮನದಿಂಗಿತ ಅರ್ಥವಾಯ್ತು. ಪತಿ ಇಹಲೋಕದ ಸಹವಾಸದಿಂದ ಬಿಡುಗಡೆಹೊಂದಿ ಪರಶಿವನಲ್ಲಿ ಒಂದಾಗಬಯಸಿದ್ದಾರೆಂದು ಗ್ರಹಿಸಿದರು. ಪರಶಿವನಲ್ಲಿ ಕೂಡುವ ಹಲುಬಾಟ ನಿಮಗೇಕೆ? ಅಂದರೆ ಇದುವರೆಗೆ ನೀವು ಪರಶಿವನಿಂದ ದೂರವಿದ್ದಿರಿ ಎಂದಾಯಿತು! ಇದು ಸತ್ಯವೇ? ಪರಶಿವನಿಲ್ಲದ ತಾಣವಾವುದು ಈ ಜಗದೊಳಗೆ? ಈ ಭಿನ್ನ ಭಾವವಳಿದು ಒಳಗೆ ನೋಡಿದರೆ ತಾನೇ ಶಿವಾಂಶಿಕನು, ಅದುಬಿಟ್ಟು ದೇವನಲ್ಲಿ ಕೂಟಸ್ಥನಾಗಬೇಕು ಎಂಬ ಹಂಬಲ ಶರಣರಿಗೆ ತಕ್ಕುದೇ? ಲೋಕದ ಅಜ್ಞಾನಿಗಳು ಈ ಮಾತು ಹೇಳಿದರೆ ಒಪ್ಪಬಹುದು ಆದರೆ ಶರಣರು ದೇವನೊಂದಿಗೆ ಕೂಟಸ್ಥನಾಗಬೇಕು ಎಂದು ಹಂಬಲಿಸಿದರೆ ಸಾಗರದೊಳಗಿರುವ ಮೀನು ಸಾಗರಕ್ಕೆ ಹೋಗಿ ಅಲ್ಲಿ ನೆಲೆಸಬೇಕೆಂಬ ಬಯಕೆಯಂತಾಯಿತಲ್ಲವೇ? ಎಂದು ಪ್ರಶ್ನಿಸುತ್ತಾರೆ.
“ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ? ಸಕಲ ದೇಶ ಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ, ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ? ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ? ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಭಿನ್ನಭಾವವುಂಟೆ ಅಯ್ಯಾ? ಕರ್ಪೂರದ ಅರಣ್ಯವ ಕಿಚ್ಚುಹತ್ತಿ ಬೆಂದಲ್ಲಿ ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ? ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ. ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ. ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ. ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ, ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ.” ಮಹಾದೇವಿ ತಾಯಿಯವರು ಪತಿ ಮಾರಯ್ಯನವರ ಭಕ್ತಿಯನ್ನೇ ಟೀಕಿಸುತ್ತಾರೆ, ಹೊರಗೆ ಲಿಂಗವ ಕೂಡುವುದೆಂದರೆ ನೀವು ಶರಣತ್ವವನ್ನು ಹೊಂದಿಲ್ಲ ಎಂದರ್ಥವಲ್ಲವೇ? ಎಂದು ಪ್ರಶ್ನಿಸುತ್ತಾರೆ.
“ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ? ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ? ನಿತ್ಯ ಅನಿತ್ಯವ ತಿಳಿದು, ಮತ್ರ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ. ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ, ಆ ಬಚ್ಚಬಯಲ ಬೆಳಗ ನಿನ್ನ ನೀನೆ ನೋಡಿಕೊ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ” ಯಾರಾದರೂ ಕೈಯಲ್ಲಿ ಜ್ಯೋತಿಯನ್ನು ಹಿಡಿದು ಕತ್ತಲೆಗೆ ಹೆದರುತ್ತಾರೆಯೇ, ಕೈಯ್ಯಲ್ಲಿ ಯಾವುದೇ ಲೋಹವನ್ನು ಬಂಗಾರ ಮಾಡುವ ರಸವಿದ್ದರೆ ಬೇರೆಯವರ ಬಳಿ ಕೂಲಿ ಮಾಡಲು ಹೋಗುತ್ತಾರೆಯೇ? ನಿನ್ನಲ್ಲಿ ಬಚ್ಚಬಯಲ ಬೆಳಗು ಅವಿರಳವಾಗಿ ಅಡಗಿದೆ ಅದನ್ನು ಅರಿತು ಕೂಡು ಎಂದು ಪತಿಗೆ ತಿಳಿಸುತ್ತಾರೆ.
“ಕಾಣಿಗೆ ಹೋರಿ ಕಡವರವ ನೀಗಲೇತಕ್ಕೆ? ಅಲುಗಾಡಿ ತುಂಬಿದ ಕೊಡನ ಹೊಡೆಗೆಡಹಲೇತಕ್ಕೆ? ನಿನ್ನಂಗದಲ್ಲಿ ಗುರುಕೊಟ್ಟ ಲಿಂಗವೆಂಬುದೊಂದು ಕುರುಹು ಇರುತ್ತಿರಲಿಕ್ಕೆ ಆ ನಿಜಲಿಂಗದ ಸಂಗವನರಿಯದೆ ಸಂದಿಗೊಂದಿಯಲ್ಲಿ ಹೊಕ್ಕೆಹೆನೆಂಬ ಗೊಂದಣವೇತಕ್ಕೆ? ತಾ ನಿಂದಲ್ಲಿ ಕೆಡಹಿದ ಒಡವೆಯ, ಆಚೆಯಲ್ಲಿ ನೆನೆದು ಅರಸಿದಡಿಲ್ಲ. ಅದು ಮತ್ತೆ ತನಗೆ ಸಂದಿಸುವುದೆ? ಘನಲಿಂಗ ನಿನ್ನಂಗದಲ್ಲಿದ್ದಂತೆ ಕಂಡೆ ಕಾಣೆನೆಂಬ ನಿನ್ನ ನಿಜ ನಿಂದಲ್ಲಿಯೆ ಸಂದೇಹವ ತಿಳಿದುಕೊ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.”
“ತನ್ನ ಕಣ್ಣಿಂದ ಕನ್ನಡಿಯ ನೋಡಿ, ಆ ದೃಷ್ಟಿ ಕಾಣಲಿಕ್ಕೆ ಕಣ್ಣೊ? ಕನ್ನಡಿಯೊ? ಆ ಉಭಯದ ದೃಷ್ಟಿಯಿಂದ ಇಷ್ಟದ ದೃಷ್ಟವ ಕಂಡು, ಉಭಯ ನಿಶ್ಚಯವಾದಲ್ಲಿ ಕೈವಲ್ಯವೆಂಬ ಕರ್ಕಶ ಬೇಡ. ಕೈಯ ಮುದ್ದೆಯ ಕೆಡಹಿದಲ್ಲಿ ಬಾಯಿಗೆ ಬಯಲು, ಅದ ನಿಮ್ಮ ನೀವೇ ತಿಳಿದುಕೊಳ್ಳಿ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ”.
“ಸಕಲದಲ್ಲಿ ಅಳಿದು ನಿಃಕಲದಲ್ಲಿ ಉಳಿದ ಮತ್ತೆ, ಸಕಲವ ಕೂಡಿಹೆನೆಂಬ ನಿಃಕಲವುಂಟೆ ಅಯ್ಯಾ? ನಿಃಕಲದೊಳಗೆ ಸಕಲವಡಗಿ, ಆ ಗುಣ ಉಪದೃಷ್ಟಕ್ಕೆ ಈಡಿಲ್ಲದಲ್ಲಿ, ಅಖಿಲಜಗವೆಂಬುದು ಹೊರಗು. ಆ ಗುಣ ನಿನ್ನ ಸದ್ಭಾವಬೀಜವಾದಲ್ಲಿ ನಿನ್ನಂಗವೆ ಕೈಲಾಸ; ಆ ಲಿಂಗದ ಕೂಟವೆ ನಿರ್ವಾಣ. ಇದು ನಿಸ್ಸಂಗದ ಸಂಗ; ನಿಮ್ಮ ನೀವೇ ತಿಳಿದುಕೊಳ್ಳಿ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.”
“ಅಂಗಕ್ರಿಯೆಯನರಿವಲ್ಲಿ ಸ್ಥಾಣುವಿನ ಬಾಯ ತಿಲದಂತೆ, ಆತ್ಮನ ಕಳೆಯ ತಿಳಿವಲ್ಲಿ ಶಿಲೆಯಲ್ಲಿರ್ದ ಬಿಂದು ಒಲವರದಿಂದ ಜಾರುವಂತೆ, ಆ ಅರಿವು ಮಹದಲ್ಲಿ ಬೆರಸುವಾಗ, ವಾರಿಶಿಲೆ ನೋಡ ನೋಡಲಿಕೆ ನೀರಾದಂತೆ ಇರಬೇಕು. ಕಾಯವಶದಿಂದ ಕರ್ಮವ ಮೀರಿ, ಕರ್ಮವಶದಿಂದ ವರ್ಮವಶಗತನಾದಲ್ಲಿ, ಅದೆ ಕಾಯವೆರಸಿ ಎಯ್ದಿದ ಕೈಲಾಸ. ಆ ಭಾವವ ನಿಮ್ಮಲ್ಲಿ ನೀವೇ ತಿಳಿದುಕೊಳ್ಳಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ”
ನಿನ್ನಂಗದಲ್ಲಿಯೇ ಗುರು ಕೊಟ್ಟ ಲಿಂಗವಿದೆ ಆ ನಿಜಲಿಂಗದ ಸಂಗವ ಬಿಟ್ಟು ಮತ್ತೆ ದೇವನ ಕೂಡಲು ಠಾವು ಹುಡುಕುವುದೇನು? ಕೈಲಾಸ ಕೈವಲ್ಯ ಎಂಬುದು ಕರ್ಕಶ ಅದು ಶರಣರಿಗೆ ಸೂಕ್ತ ಚಿಂತನೆಯಲ್ಲ, ನಿನ್ನ ಅಂಗವೇ ಕೈಲಾಸ, ಅದರೊಳಗಣ ಕೂಟವೇ ನಿರ್ವಾಣ ಅದನ್ನು ಸಾಧಿಸು ಮಾರಯ್ಯ. ಕಾಯವು ಎಲ್ಲಾ ಕರ್ಮಗಳನ್ನು ಮೀರಿ ನಿಂದಲ್ಲಿ ಅದೆ ಶರಣರು ಬೋಧಿಸಿದ ಕಾಯಸಹಿತ ಕೈಲಾಸಕ್ಕೆ ಹೋಗುವ ಪಯಣ. ಇದನ್ನು ಅರಿತು ನಿನ್ನೊಳಗೆ ಲಿಂಗವನ್ನು ಕಾಣು ಮಾರಯ್ಯ ಎಂದು ಪತಿಗೆ ಅರುಹುತ್ತಿದ್ದಾರೆ ಮಹಾದೇವಿ.
ಸತಿಯ ಉಪದೇಶಕ್ಕೆ ಪ್ರತಿಯಾಗಿ ಮಾರಯ್ಯನವರು ಹೇಳುತ್ತಾರೆ- “ಭಕ್ತಿಯುಳ್ಳನ್ನಕ್ಕ ಇಷ್ಟಲಿಂಗದ ಹಂಗು ಬೇಕು. ಆತ್ಮನುಳ್ಳನ್ನಕ್ಕ ಅರಿವೆಂಬುದ ವಿಚಾರಿಸಬೇಕು. ಮರ್ತ್ಯವೆಂಬುದು ನಾ ಬಲ್ಲನ್ನಕ್ಕ ಕರ್ಕಶದ ಜಗ. ಇದು ಕಾರಣದಲ್ಲಿ, ಕೈಲಾಸವೆಂಬ ಬಟ್ಟೆಯನರಸಬೇಕು. ಎನ್ನ ಸತ್ಯಕ್ಕೆ, ಎನ್ನ ಭಕ್ತಿಗೆ, ಎನ್ನ ಮನಕ್ಕೆ ಎನ್ನ ಮುಕ್ತ್ಯಂಗನೆ, ಎನ್ನ ನಿಶ್ಚಯಕ್ಕೆ ಒಂದು ಗೊತ್ತು ತೋರಾ. ನಿಃಕಳಂಕ ಮಲ್ಲಿಕಾರ್ಜುನ ಎಲ್ಲಿ ಇದ್ದಹನು ಹೇಳಾ?” ಕಲ್ಯಾಣದಲ್ಲಿನ ಅಮಾನವೀಯ ವಿದ್ಯಮಾನಗಳು ಮಾರಯ್ಯನವರನ್ನು ಅತ್ಯಂತ ದುಃಖಿತರಾಗುವಂತೆ ಮತ್ತು ಕಂಗೆಡುವಂತೆ ಮಾಡಿತ್ತು, ಆ ಕಾರಣ ಅವರು ಹೇಳುತ್ತಾರೆ: ನನಗೆ ತಿಳಿದಿರುವಂತೆ ಈ ಭೂಲೋಕವೆಂಬುದು ಅತ್ಯಂತ ಕರ್ಕಶವಾದ ಜಗತ್ತು, ಹಾಗಾಗಿ ನಾನು ಕೈಲಾಸವನ್ನು ಅರಸುತ್ತಿದ್ದೇನೆ, ಈ ನನ್ನ ಉದ್ದೇಶಕ್ಕೆ ಒಂದು ಮಾರ್ಗ ತೋರು ಎಂದು ಪತ್ನಿಯನ್ನೇ ಕೇಳುತ್ತಾರೆ. ಅದಕ್ಕೆ ಪ್ರತ್ಯುತ್ತರವಾಗಿ ಸತಿ ಮಹಾದೇವಿ ಹೇಳುತ್ತಾರೆ “ಕಾಲಿದ್ದಂತೆ ತಲೆ ನಡೆದುದುಂಟೆ ಅಯ್ಯಾ? ಕಣ್ಣಿದ್ದಂತೆ ಕರ್ಣ ನೋಡಿದುದುಂಟೆ ಅಯ್ಯಾ? ಬಾಯಿದ್ದಂತೆ ನಾಸಿಕ ಉಂಡುದುಂಟೆ ಅಯ್ಯಾ? ತಾಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ? ನಿಮ್ಮ ಸೇವೆಯ ತೊತ್ತಿನ ಭಾವವ ಕೇಳಲೇತಕ್ಕೆ? ಪಟದೊಳಗಣ ಬಾಲಸರಕ್ಕೆ ಪ್ರತಿಸೂತ್ರ ನೇಣುಂಟೆ? ನಿಮ್ಮಲ್ಲಿಯೆ ಎನ್ನ ಭಾವಲೇಪ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿಯೆ.” ನಿಮ್ಮ ಸೇವೆ ಮಾಡಿಕೊಂಡಿರುವವಳು ನಾನು, ನಾನು ನಿಮಗೆ ದಾರಿ ತೋರಬಲ್ಲೆನೆ ಎಂದು ನುಡಿಯುತ್ತಾರೆ. ದಂಪತಿಗಳಿಬ್ಬರೂ ಮಹಾನುಭಾವಿಗಳು ಆದರೆ ಪರಸ್ಪರ ಚರ್ಚೆಯಲ್ಲಿನ ನಿರಹಂಕಾರ ವಿನೀತಭಾವ ಅತ್ಯಂತ ಪರಿಣಾಮಕಾರಿಯಾದುದು.
ಸತಿಯ ಭಕ್ತಿಯ ಬೆಳೆಯೇ ತನಗೆ ಸತ್ಯದ ಹಾದಿ ಎಂದು ಮೋಳಿಗೆ ಮಾರಯ್ಯ ಶರಣರು ತಮ್ಮ ಪ್ರೀತಿಯ ಮಡದಿಯನ್ನು ಹೊಗಳಿ ಅವರಿಂದ ಸಾಂತ್ವನದ ನುಡಿಗಳನ್ನು ಬಯಸಿದ್ದಾರೆ. “ತಲೆಯಿಲ್ಲದೆ ಕಾಲು ನಡೆಯಬಲ್ಲುದೆ? ಕುಕ್ಷಿಯಿಲ್ಲದಿರೆ ಬಾಯಿ ಉಣ್ಣಬಲ್ಲುದೆ? ಆತ್ಮನಿಲ್ಲದಿರೆ ಕರಚರಣಾದಿಗಳಿಗೆ ಏತರ ಹೊಲಬು? ನಿನ್ನ ಭಕ್ತಿಯ ಬೆಳೆ ಎನಗೆ ಸತ್ಯದ ಹಾದಿ. ಇದು ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ.” ನೀನೇ ಶಕ್ತಿ ನಾನೇ ಭಕ್ತಿ ಎಂದು ಸತಿಯೊಡನೆ ಪ್ರಲಾಪ ಮಾಡುತ್ತಿರಲು ಆಗ ಮಹಾದೇವಿ ಹೇಳುತ್ತಾರೆ: “ಕೂಟಕ್ಕೆ ಕುರುಹಾದುದನರಿಯದೆ, ಆತ್ಮಕ್ಕೆ ಅರಿವಾದುದನರಿಯದೆ, ಕೈಲಾಸವೆಂಬ ಸೂತ್ರದ ಒಳಗಿಗೆ ಮನಸೋತಿರಲ್ಲಾ? ಅಂಧಕನ ಕೈಯ ರತ್ನದಂತೆ ಆದಿರಲ್ಲಾ? ಪಂಗುಳನ ಕರದ ಶಸ್ತ್ರದಂತೆ ಆದಿರಲ್ಲಾ? ಈ ನಿರಂಗವ ತಿಳಿದು ನಿಂದಲ್ಲಿ ಬೇರೆ ಲಿಂಗವಡಗುವದಕ್ಕೆ ಉಭಯವುಂಟೆಂಬ ದಂದುಗ ಬೇಡ. ತಾ ನಿಂದಲ್ಲಿಯೆ ನಿಜಕೂಟ, ತಿಳಿದಲ್ಲಿಯೆ ನಿರಂಗವೆಂಬುದು. ಉಭಯವಿಲ್ಲ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.” ಇಷ್ಟ ಪ್ರಾಣ ಭಾವಲಿಂಗವೆಂದು ನಿಮ್ಮೊಡನಿದ್ದ ಲಿಂಗವನ್ನು ಮರೆತು ಭ್ರಾಂತಿನ ಕೈಲಾಸಕ್ಕೆ ಮನಸೋತಿರಲ್ಲಾ ಮಾರಯ್ಯಾ? ಕುರುಡನೋರ್ವ ಮಾಣಿಕ್ಯವನ್ನಿಡಿದ ಹಾಗಾಯಿತು ನಿಮ್ಮ ಸ್ಥಿತಿ, ಹೇಡಿಯ ಕೈಯ್ಯಲಿನ ಶಸ್ತ್ರದಂತಾಯಿತ್ತಲ್ಲಾ. ನೀವು ಇದುವರೆಗೆ ಶರಣರ ಸಂಗದಲ್ಲಿದ್ದು ಲಿಂಗವನ್ನು ಅರಿತು ಅಳವಡಿಸಿಕೊಂಡಿದ್ದೇನು? ಸಂಶಯಬೇಡ, ಶರಣರ ಪಥವನ್ನು ಅರಿತು ಲಿಂಗವನ್ನು ಕರ-ಮನ-ಭಾವದಲ್ಲಿ ಅಳವಡಿಸಿಕೊಂಡೆಯಾದರೆ ಈ ಕ್ಷಣವೇ, ಈ ಸ್ಥಳದಲ್ಲೇ ಲಿಂಗೈಕ್ಯ ಎರಡೆಂಬುದಿಲ್ಲ ಎಂದು ಸಾಂದರ್ಭಿಕ ಗಲಭೆಯಿಂದ ಕ್ಷೋಭೆಗೊಳಗಾದ ಪತಿಗೆ ಮಹಾದೇವಿ ತಾಯಿ ಸಮಾಧಾನಪಡಿಸುವ ಈ ವಚನವು ಶರಣರಲ್ಲಿ ಹಾಸುಹೊಕ್ಕಾಗಿದ್ದ ಸತಿ -ಪತಿಯರಲ್ಲಿ ಅಭಿನ್ನತೆ, ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಸಮಾನತೆಯನ್ನು ದೃಢಮಾಡಿ ತೋರಿಸುತ್ತದೆ.
“ನಿಶ್ಚಯ ಉಭಯವ ತಿಳಿದಲ್ಲಿ, ಕಾಯಕ್ಕೆ ಕೈಲಾಸವೆಂಬುದಿಲ್ಲ, ಭಾವಕ್ಕೆ ಬಯಲೆಂಬುದಿಲ್ಲ. ಅನಲನಲ್ಲಿ ಅರತ ದ್ರವ್ಯದಂತೆ ಅದು ಅಮೂರ್ತಭಾವ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.” “ಕಾಯವರಸಿ ಕೈಲಾಸಕ್ಕೆ ಹೋಹೆನೆಂಬರು, ಇದು ಕ್ರಮವಲ್ಲ. ಘನಲಿಂಗ ಕರಸ್ಥಲದೊಳಗಿಪ್ಪ ಅನುವನರಿಯದೆ ಇಲ್ಲಿ ಕರ್ಮ, ಅಲ್ಲಿ ನಿಃಕರ್ಮವೆ? ಹೇಮದ ಮಾಟದ ಒಳಹೊರಗಿನಂತೆ ಮರ್ತ್ಯ ಕೈಲಾಸವೆಂಬ ಕಟ್ಟಳೆಯಿಲ್ಲ. ಆತ್ಮ ನಿಶ್ಚಯವಾದಲ್ಲಿಯೆ ಕೈವಲ್ಯ. ಮತ್ತತ್ವವಾದಲ್ಲಿಯೆ ಮರ್ತ್ಯದೊಳಗು. ಈ ಗುಣ ಸದಮಲಭಕ್ತನ ಯುಕ್ತಿ; ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಿಕ್ಕಿದ ಗೊತ್ತು” ಕಾಯಸಹಿತ ಕೈಲಾಸಕ್ಕೆ ಹೋಗುವೆವೆಂಬರು ಆದರೆ ಇದು ಸತ್ಯವಲ್ಲ! ಆತ್ಮ ನಿಶ್ಚಯವಾದುದೇ ಕೈಲಾಸ ಎಂಬುದು ಮಹಾದೇವಿಯವರ ನಿಲುವು. ಹೀಗೆ ಪತಿಗೆ ಲಿಂಗೈಕ್ಯದ ನಿಜಪಥವನ್ನು ಅರಿಕೆ ಮಾಡಿ ಕೊಡುವ ವಚನಗಳನ್ನು ಇಲ್ಲಿ ಕೊಡಲಾಗಿದೆ. ಅವು ತಿಳಿಗನ್ನಡದಲ್ಲೇ ಇರುವುದರಿಂದ ವಿವರಣೆ ಕೊಟ್ಟಿಲ್ಲ. ಸಹೃದಯಿ ಓದುಗರು ಪ್ರಜ್ಞಾವಂತರಿರುವುದರಿಂದ ವಿವರಣೆ ಅಗತ್ಯ ಬೀಳುವುದಿಲ್ಲ.
“ಪೂಜೆಯಲ್ಲಿ ಲಕ್ಷಿತವಪ್ಪವರು ಪುಣ್ಯದ ಆಗಿಂಗೆ ಒಡಲು. ದಾಸೋಹವೆಂಬ ಸೋಹವನರಿದಲ್ಲಿ ಚತುರ್ವಿಧಫಲಪದದಾಸೆಗೆ ಒಡಲು. ಇಂತೀ ಉಭಯದ ಪ್ರೀತಿಯನರಿತು ತೋರಿದ ತೋರಿಕೆ ಬಂದಂತೆ, ಅವನಾರೈದು ಗುರುವಿಂಗೆ ತನು ಹೋಯಿತ್ತು; ಲಿಂಗಕ್ಕೆ ಮನ ಹೋಯಿತ್ತು; ಜಂಗಮಕ್ಕೆ ಧನ ಹೋಯಿತ್ತು;. ಇಂತೀ ಎಲ್ಲ ಲಕ್ಷ್ಯದಲ್ಲಿ ಲಕ್ಷಿಸಿ, ನೀವು ಕೈಲಾಸಕ್ಕೆ ಹೋದೆಹೆನೆಂಬ ಕಲ್ಲೆದೆಗೆ ನಾನಂಜುವೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.”
“ಕಾಯವುಳ್ಳನ್ನಕ್ಕ ಲಿಂಗಪೂಜೆ, ಆತ್ಮವುಳ್ಳನ್ನಕ್ಕ ಅರಿವಿನ ಭೇದ. ಪುರುಷ ನೀ, ಸತಿ ನಾನೆಂಬಲ್ಲಿ ಉಭಯದ ಬೀಜ ನಾ ನೀನೆಂಬನ್ನಕ್ಕ. ಅಂಗದ ಲಿಂಗದಲ್ಲಿಯೆ ನಿರಂಗವಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.”
“ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದೆಹೆನೆಂಬುದು ಕೈಕೂಲಿ. ಭಾಷೆಗೆ ತಪ್ಪಿ ಓಸರಿಸಿದ ಮತ್ತೆ ಅನಿಹಿತವ ಹೇಳಿದಲ್ಲಿ ಮತ್ತೆ ಘಾತಕತನದಿಂದ ಎಯ್ದಿಹೆನೆಂಬುದು ಭಕ್ತಿಗೆ ವಿಹಿತವಲ್ಲ. ದೃಷ್ಟದಲ್ಲಿ ಕೊಟ್ಟುದ ಲಕ್ಷಿಸಲರಿಯದೆ, ಅಲಕ್ಷ್ಯವ ಲಕ್ಷಿಸಿ ಕಾಂಬುದಕ್ಕೆ ಲಕ್ಷ್ಯವೇನು? ಅದು ನಿರೀಕ್ಷಣೆಯ ಲಕ್ಷ್ಯದಿಂದಲ್ಲದೆ, ಆತ್ಮಂಗೆ ಲಕ್ಷ್ಯವಿಲ್ಲ. ಇಂತೀ ಉಭಯದಲ್ಲಿ ಲಕ್ಷಿತವಾದವಂಗೆ ಮರ್ತ್ಯ ಕೈಲಾಸವೆಂಬುದು; ತನ್ನರಿವು ನಿಶ್ಚಯವಾದಲ್ಲಿ ಅದೆ ಲಕ್ಷ್ಯ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಅಲ್ಲಿ ಇಲ್ಲಿ ಎಲ್ಲಿಯೂ ತಾನೆ.”
“ಕಾಯಭ್ರಮೆಯಿಂದ ಕೈಲಾಸ, ಜೀವಭ್ರಮೆಯಿಂದ ಮಹದ ಕೂಟವೆಂಬುದು. ಕಾಯದ ಜೀವದ ಭೇದವನರಿತಲ್ಲಿ ಅತ್ತಲಿತ್ತಲೆಂದು ಮತ್ತೆ ಹಲುಬಲಿಲ್ಲ. ಇದು ನಿಶ್ಚಯದ ಕೂಟ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.”
“ಸುಮನ ಸುಬುದ್ಧಿ ಭಕ್ತಿಸ್ಥಲ. ಮಲ ಅಮಲ ಮಹೇಶ್ವರಸ್ಥಲ. ಅಜ್ಞಾನ ಸುಜ್ಞಾನ ಪ್ರಸಾದಿಸ್ಥಲ. ಉಭಯ ಕೂಟಸ್ಥವೆಂಬುದ ಪರಿಹರಿಸಿದಲ್ಲಿ ಪ್ರಾಣಲಿಂಗಿಸ್ಥಲ. ಸ್ತುತಿ ನಿಂದ್ಯಾದಿಗಳಲ್ಲಿ ಒಡಲಳಿದುನಿಂದುದು ಶರಣಸ್ಥಲ. ಇಂತೀ ಪಂಚಭೇದಂಗಳ ಸಂಚವನರಿತು ವಿಸಂಚವಿಲ್ಲದೆ, ಪರುಷ ಪಾಷಾಣದಂತೆ ಭಿನ್ನಭಾವವಿಲ್ಲದೆ ಅರಿದರುಹಿಸಿಕೊಂಬ ಕುರುಹು ಏಕವಾದಲ್ಲಿ ಐಕ್ಯಸ್ಥಲ. ಎನ್ನಯ್ಯಾ, ಎನ್ನ ನಿನ್ನ ಷಟ್ಸ್ಥಲ ಇದಕ್ಕೆ ಭಿನ್ನಭಾವವಿಲ್ಲ. ಅದು ಎನ್ನ ನಿನ್ನ ಕೂಟದ ಸುಖದಂತೆ. ಇದ ಚೆನ್ನಾಗಿ ತಿಳಿದು ನೋಡಿಕೊಳ್ಳಿ. ಅಲ್ಲಿ ಇಲ್ಲಿ ಎಂಬ ಗೆಲ್ಲಗೂಳಿತನ ಬೇಡ ಹಾಗೆಂಬಲ್ಲಿಯೆ ಬಯಲಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.”
ಮಹಾದೇವಿಯವರ ಗುರುಪಥದ ನುಡಿಗಳನ್ನು ಕೇಳಿ ಬೆರಗಾದ ಮಾರಯ್ಯನವರು “ಹಲವು ಬಹುರೂಪ ಬರೆದ ಕರದ ಕಡ್ಡಿಯ ಭೇದದಂತೆ, ಮನವರಿದು, ಕಣ್ಣು ನೋಡಿ, ಕೈ ಕಡ್ಡಿಯ ಹಿಡಿದು ಲಕ್ಷಿಸುವಂತೆ, ಸ್ಥಲದಲ್ಲಿ ನಿಂದು, ಅರಿವಿನಲ್ಲಿ ಆಶ್ರಯಿಸಿ, ಇಷ್ಟ ವಿಶ್ವಾಸ ಭಕ್ತಿಯೊಳಗಡಗಿ, ಭಕ್ತಿ ವಸ್ತುವಿನಲ್ಲಿ ಲೇಪವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ನಿರ್ಲೇಪವಾಯಿತ್ತು.” ಲಿಂಗೈಕ್ಯವೆಂಬುದು ಒಂದು ಸಾಹಿತ್ಯ ರಚನೆಯಲ್ಲಿ ತಲ್ಲಿನನಾದ ಸಾಹಿತಿಯ ಕೈಯೊಳಗಣ ಲೇಖನಿ ಮತ್ತು ಆತನ ಕರ (ಲೇಖನಿ ಹಿಡಿದ ಕೈ)ಗಳ ಭೇದದಂತೆ. ಅವೆರಡರ ನಡುವೆ ಯಾವ ಭಿನ್ನವೂ ಇರಲು ಸಾಧ್ಯವಿಲ್ಲ. ಮನಸ್ಸು ಚಿಂತಿಸಿ ಕರಕ್ಕೆ ಬರೆಯಲು ಆದೇಶಿಸುತ್ತದೆ, ಕರ ಮನದ ಆದೇಶದಂತೆ ತನ್ನ ಹಿಡಿತದಲ್ಲಿರುವ ಲೇಖನಿಗೆ ಬರೆಯುವ ಕೆಲಸ ಹಚ್ಚುತ್ತದೆ, ಈ ಮೂರೂ ಕೂಡಿ ಸಾಹಿತ್ಯ ಸೃಷ್ಟಿಯಾಗುವ ಹಾಗೆ ಲಿಂಗೈಕ್ಯವೆಂಬುದು, ಅಂಗ ಮನ ಭಾವಗಳ ಸಮ್ಮಿಳನವೇರ್ಪಟ್ಟಲ್ಲಿಯೇ ಲಿಂಗೈಕ್ಯ, ಅದಕ್ಕೆ ಆಗ ಈಗ ಅಲ್ಲಿ ಇಲ್ಲಿ ಎಂಬ ಹುಡುಕಾಟದ ಹುಚ್ಚು ಶರಣರಿಗೆ ಸಲ್ಲದು.
“ವಿಶ್ವಾಸದ ಹರವರಿಯಲ್ಲಿ ವಿಶ್ವಮಯ ಸ್ಥಲಕುಳಂಗಳಾದವು. ಅದು ನಾನಾ ತಟಾಕಂಗಳಲ್ಲಿ ತೋರುವ ದಿನಕರನಂತೆ, ಹಲವುಮಯ ತೋರುವುದಲ್ಲಿಗಲ್ಲಿಗೆ ಒಲವರವಿಲ್ಲದೆ. ಆ ವರುಣನ ನೆಲೆ ಒಂದೆ ಹಲವು ಜಗಕ್ಕೆ ಹೊಲಬಾದಂತೆ ಸ್ಥಲಜ್ಞನಾದೆಯಲ್ಲಾ. ಸ್ಥಲಲೇಪ ಒಂದೆಂದರಿತಲ್ಲಿ, ಏಕಸ್ಥಲಮೂರ್ತಿ ನೀನೆ. ಏಕವು ಸಾಕೆಂದಲ್ಲಿ ನಿರಾಕಾರನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.” ನಂಬಿಕೆಯ ನೆಲೆಗಟ್ಟಿನ ಮೇಲೆ ಈ ಅಖಂಡ ಸೃಷ್ಟಿಯಲ್ಲಿ ದೇವರ ಬಗ್ಗೆ ಹಲವು ನಂಬಿಕೆಗಳು ಆಚರಣೆಗಳು ಪಂಥಗಳು ಧರ್ಮಗಳು ನೆಲೆಯೂರಿದವು. ಇದು ಒಬ್ಬನೇ ಸೂರ್ಯ ಹಲವು ಜಲ ಮೂಲಗಳಲ್ಲಿ ಪ್ರತಿಬಿಂಬವಾಗಿ ಬೇರೆ ಬೇರೆ ತೋರುವ ರೀತಿ! ಆದರೆ ಮೂಲ ಸೂರ್ಯ ಒಂದೇ ಅಲ್ಲವೇ? ಜಗತ್ತಿನಾದ್ಯಂತ ಸುರಿವ ಮಳೆ ಒಂದೇ, ಯಾವ ಸಮುದ್ರದಿಂದ ಆವಿಯಾಗಿ ಎಲ್ಲಿ ಮಳೆ ಸುರಿದರೂ ಅದರ ಮೂಲ ಪ್ರಕೃತಿ ಒಂದೇ, ಆ ಮಳೆನೀರು ಹೇಗೆ ಜಗದ ದಾಹ ಹಿಂಗಿಸುತ್ತದೋ ಹಾಗೇ ದೇವರು. ನಿರಾಕಾರ ಚೈತನ್ಯ ಸಾಕಾರವಾಗಿಯೂ, ಸಾಕಾರ-ನಿರಾಕಾರವಾಗಿಯೂ ಹಾಗೂ ನಿರಾಕಾರವಾಗಿಯೂ ಪ್ರಕಟಗೊಳ್ಳಬಲ್ಲುದು.
ಅನುಭವಮಂಟಪದಲ್ಲಿ ಜಾತಿ ವರ್ಗ ವರ್ಣ ಲಿಂಗ ತಾರತಮ್ಯಗಳಿಲ್ಲದೇ ಎಲ್ಲರೂ ಒಂದೇ ವೇದಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಹೊಂದಿದ್ದರು. ಆ ಕಾರಣದಿಂದಾಗಿಯೇ ಅಕ್ಕಮಹಾದೇವಿ, ಮೋಳಿಗೆ ಮಹಾದೇವಿಯರಂಥಾ ಅನರ್ಘ್ಯ ಶರಣೆಯರು ರೂಪುಗೊಂಡರು, ಹರಳಯ್ಯ- ಮಧುವಯ್ಯರಂಥಾ ಅನುಭಾವಿ ಶರಣರು ಜಾತಿ ಸಂಕೋಲೆಯ ಭ್ರಾಂತಿ ಹರಿದು ನೀತಿ ಸೂತ್ರ ಹಿಡಿದು ಏಕವಾದದ್ದು, ಹಿರಿಯ ಕಿರಿಯವೆಂಬ ವಯೋಬೇಧ ಅಳಿದು ಅಲ್ಲಮ- ಸಿದ್ಧರಾಮ- ಚನ್ನಬಸವಣ್ಣರಂಥಾ ಮಹಾನುಭಾವಿಗಳು ಅನುಭಾವದ ತವನಿಧಿಯನ್ನು ಲೋಕಕ್ಕೆ ಕೊಡಲು ಸಾಧ್ಯವಾದದ್ದು. ನಾವಿಂದು ಪ್ರಜಾಸತ್ತಾತ್ಮಕ ನಾಡಿನಲ್ಲಿದ್ದೂ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲಾಗದ ಸಂದಿಗ್ಧ ಸನ್ನಿವೇಶವನ್ನು ಎದುರಿಸುತ್ತಿರುವುದು ಬಹಳ ಖೇದವೆನಿಸುತ್ತದೆ.
ಅಂದು ಶರಣರು ತಂತಮ್ಮ ಕಾಯಕಗಳನ್ನು ನಿಷ್ಠೆಯಿಂದ ಮಾಡಿಕೊಂಡು ನಿತ್ಯ ಅನುಭವಮಂಟಪದ ಚಿಂತನೆಗಳಲ್ಲಿ ಭಾಗಿಯಾಗಿ ಅನುಭಾವದ ರಸಪಾಕ ಸವಿದು ತಾವೂ ಆಳಕ್ಕೆ ಆಳ – ಎತ್ತರಕ್ಕೆ ಎತ್ತರ – ಅಗಲಕ್ಕೆ ಅಗಲವೆನಿಸುವಷ್ಟು ಸ್ವಯಾನುಭಾವದ ರಸಪಾಕ ತಯಾರಿಸಿ ಈ ಜಗತ್ತಿನ ಉದ್ದಾರಕ್ಕೆ ಮಹತ್ತಾದ ಕಾಣಿಕೆ ಕೊಟ್ಟು ಹೋಗಿದ್ದಾರೆ, ಅವುಗಳ ಅಧ್ಯಯನ ಮತ್ತು ಅನುಷ್ಠಾನ ನಮ್ಮ ಹೊಣೆ.
(ವಿಸೂ: ವಚನ ಸಂಗ್ರಹ: ಗೂಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಶೂನ್ಯಸಂಪಾದನೆ, ಲೇಖಕರು: ಪ್ರೊ. ಸಂ.ಶಿ. ಭೂಸನೂರುಮಠ)
Comments 9
Gangadhara Murthy
Mar 15, 2022ಶರಣರ ದಾಂಪತ್ಯದ ಅನ್ಯೋನ್ಯತೆಯ ಸೊಗಸಾದ ಚಿತ್ರಣ. ಮೋಳಿಗೆ ಮಾರಯ್ಯ ದಂಪತಿಗಳ ವಚನಗಳನ್ನು ಓದುತ್ತಿದ್ದರೆ ಅವರ ಮೇಲೆ ಅಪಾರ ಗೌರವ ಮತ್ತು ಭಕ್ತಿ ಹುಟ್ಟುತ್ತದೆ.
Savitri Gubbi
Mar 15, 2022ಕಲ್ಯಾಣ ಕ್ರಾಂತಿಯ ಬಳಿಕ ಮೋಳಿಗೆಯ ಮಾರಯ್ಯನವರು ಕಲ್ಯಾಣದಲ್ಲೇ ಉಳಿದಾಗ ಅವರಿಗೆ ಎಂಥ ನೋವು, ಆಘಾತ ಆಗಿರಬಹುದು! ಛಿದ್ರಛಿದ್ರವಾದ ಕಲ್ಯಾಣದ ವೈಭವ ಕಣ್ಣೆದುರೇ ಕುಸಿದು ಹೋಗುವಾಗ ಆ ಜೀವಗಳು ಎಷ್ಟು ಸಂಕಟಪಟ್ಟಿರಬಹುದು!! ಕಾಶ್ಮೀರ ಫೈಲ್ ಸಿನೆಮಾಗಿಂತಲೂ ಹೃದಯವಿದ್ರಾವಕವೆನಿಸುವ ಆ ಘಟನೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ನಿರ್ದೇಶಕರು ಯಾರಾದರೂ ಕರ್ನಾಟಕದಲ್ಲಿ ಇದ್ದಾರೆಯೇ?
B.K. Biradar
Mar 16, 2022ಮಹಾದೇವಿ ತಾಯಿಯವರ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಕೈಲಾಸದ ವಿಷಯದಲ್ಲಿ ಪತಿ ಮಾರಯ್ಯನವರಿಗಿದ್ದ ಗೊಂದಲಗಳನ್ನು ನಿವಾರಿಸುತ್ತಿರುವಂತೆ ತೋರುತ್ತದೆ. ಕೈಲಾಸಕ್ಕೆ ಹೋಗಬೇಕೆನ್ನುವ ಅವರ ಬಯಕೆ ತುಂಬಾ ಗಾಢವಾಗಿದ್ದಿರಬಹುದು. ಕಲ್ಯಾಣ ಕ್ರಾಂತಿಯ ಬಳಿಕವೂ ಅವರಲ್ಲಿ ಈ ಗೊಂದಲ ಉಳಿದಿತ್ತೇ? ಬಹುಶಃ ಇದು ಆರಂಭದ ದಿನಗಳಲ್ಲಿ ನಡೆದ ಮಾತುಕತೆ ಇರಬಹುದು.
Radha Niranjan
Mar 18, 2022ದಂಪತಿಗಳಲ್ಲಿ ಅನುಭಾವ ಚಿಂತನ ಲೇಖನ ಬಹಳ ಚೆಂದ ಮೂಡಿ ಬಂದಿದೆ, ಅದಕ್ಕಾಗಿಯೇ ಬಸವಾದಿ ಶರಣರು ಗೃಹಸ್ಥ ಜೀವನದಲ್ಲೇ ಸಾಧನೆಯ ಪಥವ ಹಿಡಿದು
ಅಧ್ಯಾತ್ಮಿಕ ಸಾರ್ಥಕ ಬದುಕನ್ನ ಕಂಡು ಅನುಭವಿಸಿದವರು. ಆದ ಕಾರಣ ಸಾವಿರಾರು ವಚನಗಳನ್ನ ಶರಣೆಯರು ರಚಿಸಿ, ಅನುಭಾವ ಮಂಟಪದಲ್ಲಿ ಭಾಗವಹಿಸಿದ್ದೆ ಸಾಕ್ಷಿ, ಸತಿ ಪತಿಗಳು ಒಂದಾದ ಭಕ್ತಿಯೆ ನಿಜ ಸಾಧನೆಯ ಮಾರ್ಗ
ಲೇಖನ ಬಹಳ ಸುಂದರವಾಗಿದೆ.
ಹಾಲಪ್ಪ ಪಿ.
Mar 20, 2022ಶರಣ ದಂಪತಿಗಳ ವಚನಗಳನ್ನು ಹೀಗೆ ಎದುರುಬದರು ಇಟ್ಟು ನೋಡುವುದರಿಂದ ಅವರ ಜೀವನದ ಬಹುಮುಖ್ಯ ಅಂಶಗಳು ಬೆಳಕಿಗೆ ಬರುತ್ತವೆ ಎನಿಸುತ್ತದೆ. ಆ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನವೆನ್ನಬಹುದು. ದಂಪತಿಗಳ ಆಂತರ್ಯವನ್ನು ತೆಗೆದು ತೋರಿಸುವ ವಿಚಾರಗಳು ಬೆಳಕಿಗೆ ಬರಲಿ.
Omkaraiah, Dharwad
Mar 20, 2022ಜಗತ್ತಿನಲ್ಲೇ ಕಲ್ಯಾಣ ಕ್ರಾಂತಿಯಂತಹ ಸಂದರ್ಭ ಯಾವ ದೇಶದಲ್ಲೂ, ಯಾವ ಕಾಲದಲ್ಲೂ ಕಾಣಲಾಗದು. ಭಾರತ, ಅದರಲ್ಲೂ ಕರ್ನಾಟಕದ ಭಾಗ್ಯ. ವಚನಗಳು ಕನ್ನಡದಲ್ಲಿರುವುದು ನಮ್ಮಪುಣ್ಯ.
ಸುರೇಶ್ ಆರ್
Mar 23, 2022ಶರಣೆ ಮಹಾದೇವಮ್ಮನವರು ತಮ್ಮ ಪತಿ ಮಾರಯ್ಯನವರಿಗಿಂತಲೂ ಮೊದಲೇ ಆಧ್ಯಾತ್ಮದಲ್ಲಿ ಉತ್ತುಂಗತೆಯನ್ನು ಪಡೆದಿರುವುದನ್ನು ಗಮನಿಸಿದರೆ ಬಹಳ ಆಶ್ಚರ್ಯ ಹಾಗೂ ಆನಂದವಾಗುತ್ತದೆ. ಪತಿಗೆ ದಾರಿ ತೋರಿಸುವ ಇಂತಹ ವೈಚಾರಿಕ ಪತ್ನಿಯರು ಇತಿಹಾಸದಲ್ಲಿ ತೀರಾ ಅಪರೂಪ. ಲೇಖನ ಓದುತ್ತಾ ನಾನು ಮಹಾದೇವಿ ತಾಯಿಯವರ ಅಭಿಮಾನಿಯಾಗಿ ಬಿಟ್ಟೆ.
ಶಶಿಧರ ನಾಗನೂರು
Mar 28, 2022ಮೋಳಿಗೆ ಮಾರಯ್ಯ ದಂಪತಿಗಳ ಬದುಕು ಎಷ್ಟೊಂದು ಸಾಹಸಮಯವಾಗಿತ್ತು ಎಂದು ನೆನೆದರೆ ರೋಮಾಂಚನವಾಗುತ್ತದೆ! ಲೇಖನದ ಆಂತರ್ಯದಲ್ಲಿನ ವಚನಗಳು ಮನನಯೋಗ್ಯವಾಗಿವೆ.
Mahadeva S
Mar 30, 2022ಸತಿಯ ಉಪದೇಶ, ಪತಿಯ ಪ್ರತ್ಯುತ್ತರ- ವಚನಗಳ ಸಂವಾದ ರೂಪ, ದಂಪತಿಗಳ ಘನತೆಯನ್ನು ಹೆಚ್ಚಿಸುವಂತಹ ಕಲ್ಯಾಣದ ವಾತಾವರಣ, ಮುಂದೆ ರಕ್ತಪಾತ… ಎಲ್ಲವೂ ಕಣ್ಣಿಗೆ ಕಟ್ಟುವಂತಾಯಿತು.