ಗಂಟಿನ ನಂಟು
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ
ನೂಲುವಾಗ ಗೊತ್ತಾಗಲೇ ಇಲ್ಲ
ಎಂಥ ಸಿಕ್ಕುಗಳು ಅಂತೀರಿ!
ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು
ಅಹಮಿಕೆಗೆ ಆಕ್ರೋಶದ ಗಂಟು
ಆಕ್ರೋಶಕೆ ಮದದ ಗಂಟು
ಮದಕೆ ಸೊಕ್ಕಿನ ಗಂಟು
ಸೊಕ್ಕಿಗೆ ತಿರಸ್ಕಾರದ ಗಂಟು
ತಿರಸ್ಕಾರಕ್ಕೆ ಸೇಡಿನ ಗಂಟು
ಸೇಡಿಗೆ ಭಾವದ ಗಂಟು
ಭಾವಕೆ ನಿರೀಕ್ಷೆಯಾ ಗಂಟು
ನಿರೀಕ್ಷೆಗೆ ಪ್ರೇಮದ ಗಂಟು
ಪ್ರೇಮಕೆ ಕಾಮದ ಗಂಟು
ಕಾಮಕ್ಕೆ ಬಯಕೆಯ ಗಂಟು
ಬಯಕೆಗೆ ಆಸೆಯ ಗಂಟು…
ಎಡಕ್ಕೆ ಬಲದ ಗಂಟು
ದ್ವೈತಕ್ಕೆ ಅದ್ವೈತದ ಗಂಟು
ಅಸ್ತಿತ್ವಕೆ ನಾಸ್ತಿತ್ವದ ಗಂಟು
ಮಾತಿಗೆ ಪ್ರತಿಮಾತಿನ ಗಂಟು
ಭಾವಗಳಿಗೆ ನಂಬಿಕೆಯ ಗಂಟು
ನಂಬಿಕೆಗಳಿಗೆ ಅಹಮಿಕೆಯ ಗಂಟು
ನಾನೆಂಬುದಕೆ ನನ್ನದೆಂಬ ಗಂಟು
ಕಾರಣಕ್ಕೆ- ಪ್ರತಿಕಾರಣದ ಗಂಟು…
ಹೀಗೆ ಹಾಕುತ್ತಲೇ ಹೋಗಿದ್ದೇನೆ ಗಂಟಿಗೆ ಗಂಟು
ಈ ಗಂಟುಗಳೇ
ನಡೆವ ದಾರಿಯಲಿ ಮುಳ್ಳಾದವು
ಹೃದಯಗಳ ನಡುವೆ ಬೆಟ್ಟಗಳಾದವು
ಸಂಬಂಧಗಳಲ್ಲಿ ಕಣಿವೆ ಕೊರೆದವು
ಮಾತುಗಳಲ್ಲಿ ವಿಷ ಬಿತ್ತಿದವು
ಗೊಂದಲದಲ್ಲಿ ಮುಳುಗಿಸಿದವು
ಮನದ ತಿಳಿ ಕದಡಿ ಕೊಚ್ಚೆ ಎಬ್ಬಿಸಿದವು…
ಹುಬ್ಬುಗಳ ನಡುವೆ ತೂರಿಕೊಂಡು
ನಗುವ ನುಂಗಿ ಎದೆಯ ಒತ್ತುತ್ತಲೇ ಇದ್ದವು…
ಗುರು ತೋರಿದ ಉಪಾಯದಲಿ
ನೂಲು ಹರಿಯದಂತೆ
ಗಂಟು ಬಿಚ್ಚುವ ಕಲೆ
ಸಿಕ್ಕಾಗದಂತೆ ಎಳೆಯ ನೇಯುವ ಕಲೆ
ಒಂದೊಂದಾಗಿ ತಿಳಿಯತೊಡಗಿತ್ತು
ಕಾರ್ಯ-ಕಾರಣ-ಪರಿಣಾಮಗಳ
ಭವಯಾನದ ಕರ್ಮ ಅರಿವಿಗೆ ನಿಲುಕಿತ್ತು.
Comments 1
Harsha m patil
Nov 11, 2020ಗಂಟಿಗೆ ಗಂಟು ಹಾಕುತ್ತಿರುವ ನಮಗೆ ಬದುಕೇ ಗಂಟಾಗಿ ಹೋಗಿದೆ. ರಿಪೇರಿ ಮಾಡಲು ಸಾಧ್ಯವಿಲ್ಲದಂತೆ ಸಂಬಂಧಗಳನ್ನು ಹಾಳುಮಾಡಿಕೊಂಡಿದ್ದೇವೆ….. ಕಣ್ಣಿಗೆ ಕಟ್ಟುವ ಚಿತ್ರಣ ನೀಡುವ ಕವನ.