ಕಾಯದೊಳಗಣ ಬಯಲು
ಈ ಬಯಲು ಗುರುತಿಸಲಾರೆ
ನನ್ನ ಕಣ್ಣ ಎದುರು ನಾನು
ಬಯಸುವ ರೂಹು ಇಲ್ಲ
ಕಣ್ಣು ಹೇಳಿದುದು ಸುಳ್ಳೇ
ನೀ ಬಿಟ್ಟ ಉಸಿರಲೊಂದು
ದನಿ ಇದೆ ನಾ ಕೇಳಲಾರೆ
ಉಸಿರು ಒಳಗಣ ದನಿ
ಉಸಿರು ನುಂಗಿತು
ಕಣ್ಣ ಒಳಗಣ ಉಸಿರು
ನೋಟ ನುಂಗಿತು
ಈ ಗೆರೆ ಕೊರೆದು
ಹೋದವರು ಯಾರು ಯಾರು
ಅಳಿಸದಾ ಗೆರೆಯೇ…
ನಾನು ನಾನೇ ಕೊರೆದುದು ಅಳಿಸದುದು
ನಾ ಹೆತ್ತ ಕೂಸು
ತಾಯಿ ಆಗದಿರೆ ಗಂಡನಿಗೆ ಕಳಂಕ
ಕಾಯ ಉಸಿರು, ಉಸಿರು ಕಾಯ
ಪ್ರಾಣ ಇರುವ ದೇಹ
ದೇಹ ಇರುವ ಪ್ರಾಣ
ಉಸಿರ ಒಳಗಣ ಆ ಸದ್ದು
ಏನದು…
ಒಂದೊಂದು ಕಾಯದಲೂ
ಒಂದು ಚೈತನ್ಯ ಎಂಬರಿವು ಈಗ
ಈಗ ಈ ಐನಸ್ಟೈನ್ ಚೈತನ್ಯ
ಸೂತ್ರ ಬಯಲು
ಬಾಗಿಲಿಗೆ ಮೊಳೆ ಜಡಿದು
ಒಳಗೆ ಕಾಲಿಟ್ಟಿರುವೆ.
Comments 2
Umesh Patri
Nov 11, 2020ಕಣ್ಣು ಹೇಳುವುದು ಸುಳ್ಳೋ, ಮನಸ್ಸು ಹೇಳುವುದು ಸುಳ್ಳೋ… ಕೊನೆಗೆ ಈ ಬದುಕೇ ಸುಳ್ಳೋ… ಕವಿಯ ಗೊಂದಲ ಬಿಡುಗಡೆಯಾದರೂ ಓದುಗನ ಗೊಂದಲ ಹಾಗೇ ಉಳಿಯುತ್ತದೆ.
Manikanta Dogila
Nov 11, 2020ಪ್ರಾಣ ಇರುವ ದೇಹ
ದೇಹ ಇರುವ ಪ್ರಾಣ… ಕಾಡುವ ಸಾಲುಗಳು.