
ಕಾಣದ ಬೆಳಕ ಜಾಡನರಸಿ…
ಮರೆತ ಇಳಿ ಸಂಜೆಯೊಂದು
ಮುಂಜಾನೆಗೆ ಕಾಡುವಾಗ
ಕಾಫಿ ಮುಗಿದ ಕಪ್ಪಿನಲಿ
ತುಂಬಿ ಚೆಲ್ಲಿದೆ ವೈರಾಗ್ಯ
ಶೂನ್ಯ ಹೀರಿದವನೆ ವಶ
ಕಾಲು ಮುರಿದ ಕುರ್ಚಿಯ ಮೇಲು
ಕಾಲಿನ ಮೇಲೆ ಕಾಲು ಹಾಕಿ ಕೂತು
ಕನಿಕರವಿಲ್ಲದೆ
ನೆನಪುಗಳು ಕೂಡಿ ನಗುವಾಗ
ನಿಂತಂತೆ ಶ್ವಾಸ
ಒಲೆಯ ಮೇಲೆ ಅನ್ನ ಕುದಿವ ಸದ್ದಿಗೆ
ಮನಸೆಲ್ಲಾ ಒದ್ದೆ ಮುದ್ದೆ
ಮಳೆಯಿಲ್ಲ ಹೊರಗೆ
ಕಡಲ ಮೊರೆತ ಒಳಗೆ
ನೋವಿನ ಹಿಡಿಯಲ್ಲಿ ನಲುಗಿದಂತೆ ಸಂತಸ
ಕತ್ತಲ ಕೋಣೆಯ ಹಾಡು
ಇಂಪಾಗಿ ಕೇಳುತಿದೆ ಏಕೋ?!
ಎದ್ದು ಹೊರಡಬೇಕು ಇಲ್ಲಿಂದ ಮೊದಲು
ಕಾಣದ ಬೆಳಕ ಜಾಡ ಅರಸಿ
ಬಯಲು ಕರೆದಂತೆ ಭಾಸ.
Comments 2
Padmalaya
Dec 13, 2024ಒಗಟು ಜಿಗಟಿನ ಕಾವ್ಯ ಪಿತಾಮಹ ಜೋತಿಲಿಂಗಪ್ಪನವರ ಕಾವ್ಯ ಒಂದು ಕಣ್ಕಟ್ಟು ವಿದ್ಯೆ ಯಂತೆ ತೋರಿ ಅಡಗುತ್ತದೆ
ಸಂತೋಷ್ ಬಿರಾದಾರ
Dec 18, 2024ಎದ್ದು ಹೊರಡಬೇಕು… ಕುದಿವ ಮನಕೆ ತಂಗಾಳಿ ಹರಿದುಬರುವಲ್ಲಿಗೆ, ಎರಡು-ಮೂರು ಸಲ ಓದಿಸಿಕೊಂಡ ಕವನದ ಅಂತರಾಳಕ್ಕೆ ಒಪ್ಪುವಂತಿದೆ ಚಿತ್ರ 🫡