
ಒಂದಾಗಿ ನಿಂತೆ…
ಆಗೀಗ ನೀರು ಕಾಣುವ
ಮಧುಮಾಲತಿ ಬಳ್ಳಿಯಲಿ
ತೊನೆವ ಕೆಂಪು-ಬಿಳಿ ಹೂಗಳು
ಪಕ್ಕದಲ್ಲೇ ನಸುಗಂಪಿನ
ದುಂಡು ಮಲ್ಲಿಗೆಯ ದಂಡು
ದೇಟಿನ ತುಂಬ ಬಣ್ಣಬಣ್ಣದ ದಾಸವಾಳ,
ಅರೆಬೆತ್ತಲಾದ ಸಂಪಿಗೆ ಮರದಲೂ
ಉಳಿದೆಲೆಗಳ ನಡುವೆ
ನಗುವ ಹಳದಿ ಘಮಲು,
ಎಲೆಯೊಂದಿಗೆ ಹೂಗಳನ್ನೂ
ಉದುರಿಸಿಕೊಳ್ಳುತಿರುವ ಚೆರ್ರಿ ಬ್ಲಾಸಂ
ಹಸಿರುಗಿಣಿಗಳು, ಚಿಟಗುಬ್ಬಿ, ಚಿಟ್ಟೆಗಳು
ನೀರ ಬಾನಿಯಲಿ
ರೆಕ್ಕೆ ಬಿಚ್ಚಿ ಮುಳಿಗೇಳುವ
ಕಾಗೆ, ಗುಬ್ಬಿ, ಪಾರಿವಾಳಗಳು…
ಎಲ್ಲಿಂದಲೋ ಹಾರಿ ಬಂದ
ಜೋಡಿ ಬುಲ್ಬುಲ್ ಹಕ್ಕಿಗಳು
ಇಳಿಬಿದ್ದ ಪೊದೆಯ ಮರೆಯಲಿದ್ದ
ಹಳೇ ಗೂಡ ಪತ್ತೆಹಚ್ಚಿ
ಕಡ್ಡಿ ಸೇರಿಸಿ, ಎಲೆ ಹೆಣೆದು,
ಭದ್ರಗೊಳಿಸಿ, ಒಪ್ಪವಾಗಿಸಿ
ಮೊಟ್ಟೆ ಇಟ್ಟು ಕಾವು ಕೊಡುತಿದ್ದರೆ
ಎಟುಕದ ಗೂಡಿಗೆ ಗೋಣೆತ್ತಿ
ಮಣ್ಣಿಗೆ ಮೈಯಾನಿಸಿ ಮಲಗಿದ
ತುಂಟ ಬೆಕ್ಕು…
ದೂರದಿಂದ ತೇಲಿ ಬರುತಿರುವ
ಕೋಗಿಲೆಯ ಕುಹೂ…ಕುಹೂ…
ಹೊರಗೆ ಸುರಿವ ಬಿಸಿಲು
ಒಳಗೆ ಕುದಿವ ಧಗೆ
ವಸಂತಕೆ ನುಗ್ಗಿದ
ಗ್ರೀಷ್ಮದುರಿಗೆ ಕಾದು
ಹಂಚಾಗಿರುವ ನೆಲಕೊರಗಿದ
ಹಣ್ಣೆಲೆಗಳ-ಹೂಗಳ ಹಾಸುಗೆ
ಭಾಷೆಯೇ ಬೇಕಿಲ್ಲದ
ಮಾತು ಮುಟ್ಟದ
ಅಕ್ಷರಗಳ ಹಂಗಿಲ್ಲದ
ಋತುಗಳ ಗತಿಗೆ
ಜೀವದ ಚಲನೆಗೆ
ನಡೆ ಇದೆ, ಶಬ್ದವೆಲ್ಲಿದೆ?
ನಿಸರ್ಗದ ನಡೆಯ ದನಿಗೆ
ಕಿವಿಯಾಗಿ, ಕಣ್ಣಾಗಿ…
ಒಂದಾಗಿ ನಿಂತೆ ಈ ಗಳಿಗೆ!
Comments 2
Chinmayi
Apr 7, 2024ಸರಳ, ಸುಂದರ
ಶೋಭಾದೇವಿ ಅಮರಶೆಟ್ಟಿ, ಧಾರವಾಡ
Apr 16, 2024ಯುಗಾದಿ ಸಮಯದಲ್ಲಿ ಎಲ್ಲ ಗಿಡ ಮರಗಳು ಚಿಗುರಿದಾಗ ವಿವಿಧ ಬಣ್ಣಗಳ ಬೇರೆ ಬೇರೆ ಹಲವು ಪರಿಮಳಗಳಿಂದ ತುಂಬಿದ ನಿಸರ್ಗದ ಹೊಸತನವು ‘ಒಂದಾಗಿ ನಿಂತೆ’ ಕವನದಲ್ಲಿ ತುಂಬಾ ಸೊಗಸಾಗಿ ಬಂದಿದೆ👌👌👍👍🙂