ಬಿಸಿಲಿಗೆ ಗಡಿಗಳುಂಟೆ?…
“ನೀವು ಹೋಗಿದ್ದು ಆಫ್ರಿಕಾಕ್ಕೋ, ಯೂರೋಪಿಗೋ?”
ಒಂದು ತಿಂಗಳ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದಾಗ ನಮ್ಮನ್ನು ಕಂಡ ಸ್ನೇಹಿತರು, ನೆರೆಯವರು ಕೇಳಿದ ಪ್ರಶ್ನೆ. ಹಾಗೆ ಕರಕಲಾಗಿದ್ದವು ನಮ್ಮೆಲ್ಲರ ಮುಖಗಳು!
ಇಂಗ್ಲೆಂಡಿಗೆ ಹೋಗುವಾಗ ಮನಸ್ಸಿನ ಮೂಲೆಯಲ್ಲೊಂದು ಸಣ್ಣ ನಿರೀಕ್ಷೆ ಇತ್ತು—”ಅಲ್ಲಿ ತಂಪಿರುತ್ತದೆ, ಈ ಸಲದ ಬೇಸಿಗೆಯ ಕಡು ಬಿಸಿಲಿನ ಝಳದ ನೆನಪುಗಳಿಂದ ಹೊರಬರಬಹುದು, ಬೆಚ್ಚನೆಯ ರಗ್ಗಿನಲ್ಲಿ ತೂರಿಕೊಳ್ಳಬಹುದು” ಎಂದು. ಆದರೆ ವಿಮಾನ ಲಂಡನ್ನಿನಲ್ಲಿ ಇಳಿದ ಕೆಲವೇ ಹೊತ್ತಿನಲ್ಲಿ ಆ ಭ್ರಮೆ ಕರಗಿ ಹೋಯಿತು. ನಮ್ಮ ನೆಲಕ್ಕೆ ಸ್ಪರ್ಧೆ ನೀಡುವಂತಿತ್ತು ಅಲ್ಲಿನ ಬಿಸಿಲ ಧಗೆ. ಭಾರತಕ್ಕೆ ಮರಳಿ ಬಂದಾಗಲೂ ಮಳೆಯ ಚಳಿಯಿಲ್ಲಾ, ನೆಲ ತಂಪಾಗಿಲ್ಲಾ, ಮಳೆಗಾಲದ ಆ ಧೋ ಎಂದು ಸುರಿವ ಮಳೆಯ ಸದ್ದೂ ಇಲ್ಲಾ!!
ಆ ಕ್ಷಣದಲ್ಲಿ ಕಾಡಿದ ಪ್ರಶ್ನೆ- ಬಿಸಿಲಿಗೆ ದೇಶದ ಗಡಿಗಳಿವೆಯೇ?
ಒಮ್ಮೆ ಹವಾಮಾನ ಎನ್ನುವುದು ಒಂದು ಪ್ರದೇಶದ ಗುರುತಾಗಿತ್ತು. ಮಲೆನಾಡು ಎಂದರೆ ಮಂಜು, ಕರಾವಳಿ ಎಂದರೆ ತೇವ, ಇಂಗ್ಲೆಂಡ್ ಎಂದರೆ ಮೋಡ, ಭಾರತ ಎಂದರೆ ಬಿಸಿ. ಆದರೆ ಇಂದು ಪ್ರಕೃತಿ ತನ್ನ ಹಳೆಯ ಚಹರೆಗಳನ್ನು ಒಂದೊಂದಾಗಿ ಬದಲಾಯಿಸಿಕೊಳ್ಳುತ್ತಿದೆ. ನಕ್ಷೆಗಳು ಹಾಗೆಯೇ ಇವೆ; ಋತುಗಳ ಸ್ವಭಾವ ಮಾತ್ರ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಹವಾಮಾನ ವೈಪರೀತ್ಯವು ಬಡ-ಶ್ರೀಮಂತ, ಪೂರ್ವ-ಪಶ್ಚಿಮ, ಅಭಿವೃದ್ಧಿ ಹೊಂದಿದ-ಅಭಿವೃದ್ಧಿಶೀಲ ದೇಶಗಳು ಎಂಬ ಯಾವ ಭೇದವನ್ನೂ ಒಪ್ಪುವುದಿಲ್ಲ. ದಾಖಲೆಯ ಕಡಿಮೆ ಮಳೆ ಮತ್ತು ತೀವ್ರ ಶಾಖದ ಅಲೆಗಳನ್ನು ಅನುಭವಿಸಿದ ಇಂಗ್ಲೆಂಡಿನ ಬಹುತೇಕ ಪ್ರದೇಶಗಳಲ್ಲಿ ಈ ವರ್ಷ ಅಧಿಕೃತವಾಗಿ ಬರಗಾಲ ಘೋಷಿಸಲಾಗಿದೆ. ಇದು ಕೇವಲ ಒಂದು ದೇಶದ ಕಥೆಯಲ್ಲ; ಧ್ರುವಪ್ರದೇಶದ ತಂಪಿಗೆ ಹೆಸರಾದ ಸ್ಕಾಟ್‌ಲ್ಯಾಂಡ್‌ನ ಹಸಿರು ಕಾಡುಗಳು ಇಂದು ಕಾಡ್ಗಿಚ್ಚಿನ ಜ್ವಾಲೆಗೆ ಕರಕಲಾಗುತ್ತಿದ್ದರೆ, ಹಿಮಾಲಯದ ಮಡಿಲಲ್ಲಿರುವ ನೇಪಾಳದ ಊರುಗಳು ಕೆಸರಿನ ಘೋರ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿವೆ. ಹಿಮದ ನಾಡಿನಲ್ಲಿ ಬೆಂಕಿ, ಪರ್ವತದ ತುದಿಯಲ್ಲಿ ಪ್ರವಾಹ! ಪ್ರಕೃತಿ ತನ್ನ ಸಮತೋಲನವನ್ನು ಕಳೆದುಕೊಂಡಾಗ ಸೃಷ್ಟಿಯಾಗುವ ಈ ರೌದ್ರರೂಪಕ್ಕೆ ಯಾವುದೇ ದೇಶದ ನಕ್ಷೆ ಅಡ್ಡಿಯಾಗುವುದಿಲ್ಲ… ಇಂಗ್ಲೆಂಡಿನ ಬಿಸಿಲು ಮತ್ತು ಭಾರತದ ಬಿಸಿಲು ಬೇರೆ ಬೇರೆ ಭಾಷೆ ಮಾತನಾಡುವುದಿಲ್ಲ… ಭೂಮಿ ನಮಗಿರುವ ಒಂದೇ ಮನೆ. ಅದರ ಗೋಡೆಗಳಿಗೆ ರಾಷ್ಟ್ರಗಳ ಹೆಸರುಗಳಿರಬಹುದು; ಆದರೆ ಅದರ ಮೇಲ್ಛಾವಣಿಗೆ ಒಂದೇ ಆಕಾಶ. ಆ ಆಕಾಶ ಸುಡುತ್ತಿದ್ದರೆ, ನಾವು ಯಾರೂ ನೆರಳಿನಲ್ಲಿ ಇರುವುದಿಲ್ಲ…
ವಿಶ್ವದಲ್ಲಿ ಒಂದು ಕ್ರಮವಿದೆ, ಅಂತರ್ಗತ ಲಯವಿದೆ. ಮಳೆ, ಚಳಿ, ವಸಂತ, ಬೇಸಿಗೆ, ಹಕ್ಕಿಗಳ ವಲಸೆ… ಇದನ್ನು ನಮ್ಮ ಹಿರೀಕರು ಋತ ಎಂದು ಕರೆದರು. ಈಗಲೂ ಹೊರನೋಟಕ್ಕೆ ಎಲ್ಲವೂ ಮೊದಲಿನಂತೇ ಇದೆ- ಸೂರ್ಯ ಹುಟ್ಟುತ್ತಾನೆ, ರಾತ್ರಿ ಚಂದ್ರ ಕಾಣುತ್ತಾನೆ, ಬೇಸಿಗೆ ಬರುತ್ತದೆ, ಮಳೆ ಸುರಿಯುತ್ತದೆ, ಚಳಿಗಾಲ ತೋರುತ್ತದೆ… ಆದರೆ ಒಳಗಿನ ಲಯ ತಪ್ಪಿದೆ. ದಟ್ಟವಾಗಿ ಕತ್ತಲೆ ಕವಿದು ಇನ್ನೇನು ಮಳೆ ಬರುತ್ತದೆಂದುಕೊಳ್ಳುವಾಗ ಮೋಡಗಳು ಚದುರಿ ಆಕಾಶ ಖಾಲಿಯಾಗುತ್ತದೆ. ಕೆಲವು ಕಡೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಷ್ಟು ಮಳೆ ಸುರಿಯುತ್ತದೆ. ಚಳಿಗಾಲ ನಾಚಿಕೆಯ ಅತಿಥಿಯಂತೆ ತಡವಾಗಿ ಬಂದು ಬೇಗ ಹೊರಟು ಹೋಗುತ್ತದೆ. ಬೇಸಿಗೆ ಮಾತ್ರ ತಾನೇ ಭೂಮಿಯ ಅಧಿಪತಿ ಎನ್ನುವಂತೆ ತಳ ಊರುತ್ತದೆ. ಮನುಷ್ಯ ಭೂಮಿಯ ತಾಪಮಾನವನ್ನು ದಾಖಲಿಸಲು ಶುರುಮಾಡಿದಾಗಿನಿಂದ ಕಳೆದ ವರ್ಷ, 2024ನ್ನು ಅತ್ಯಂತ ಬಿಸಿ ವರ್ಷವೆಂದು ನಾಸಾ (NASA) ಮತ್ತು ನೋಆ (NOAA) ಹೇಳಿದ್ದವು. ಈ ವರ್ಷವೂ ಭೂಮಿ ಆ ದಾಖಲೆಯನ್ನು ಸರಿಗಟ್ಟಿತು. ಇದು ಕೇವಲ ಉಷ್ಣಾಂಶದ ಏರಿಕೆಯ ಕಥೆಯಲ್ಲ. ಮನುಷ್ಯನ ಮಹತ್ವಾಕಾಂಕ್ಷೆ ಮತ್ತು ಪ್ರಕೃತಿಯ ಸಹನೆಯ ನಡುವಿನ ಸಂಘರ್ಷದ ವ್ಯಥೆ.
ಈ ಶತಮಾನದ ಮೊದಲಾರ್ಧದಲ್ಲೇ ಜಾಗತಿಕ ಸರಾಸರಿ ತಾಪಮಾನವು ಕೈಗಾರಿಕಾ ಯುಗದ ಹಿಂದಿನ ಮಟ್ಟಕ್ಕಿಂತ ಸುಮಾರು 1.3–1.5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. “ಕೇವಲ ಒಂದೂವರೆ ಡಿಗ್ರಿ!” ಎಂದು ಯಾರಾದರೂ ಅಸಡ್ಡೆ ತೋರಬಹುದು. ಆದರೆ ಮನುಷ್ಯನ ದೇಹದಲ್ಲಿ ಒಂದೂವರೆ ಡಿಗ್ರಿ ಜ್ವರವೇ ವೈದ್ಯನ ಬಳಿಗೆ ಓಡಿಸುತ್ತದೆ. ಹಾಗಿದ್ದರೆ ಭೂಮಿಯ ದೇಹದಲ್ಲಿ ಒಂದೂವರೆ ಡಿಗ್ರಿ ಜ್ವರ ಬಂದಾಗ ನಾವೇಕೆ ನಿರ್ಲಕ್ಷಿಸುತ್ತಿದ್ದೇವೆ? “ಒಂದೂವರೆ ಡಿಗ್ರಿ” ಎನ್ನುವುದು ಅಳತೆ ಅಲ್ಲ. ಅದು ಭೂಮಿಯ ನೆತ್ತಿಯ ಮೇಲಿನ ಜ್ವರದ ಉಷ್ಣ. ಪ್ರತಿ ವರ್ಷ ಜಗತ್ತು ಕೋಟ್ಯಂತರ ಟನ್ ಹಿಮವನ್ನು ಕಳೆದುಕೊಳ್ಳುತ್ತಿದೆ. ಕಾಡುಗಳು ಮರೆಯಾಗುತ್ತಿವೆ. ಸಮುದ್ರಗಳ ಮಟ್ಟ ಏರುತ್ತಿದೆ. ಆದರೆ ಕರಗುತ್ತಿರುವುದು ಕೇವಲ ಹಿಮವಲ್ಲ. ಕರಗುತ್ತಿರುವುದು ಋತುಗಳ ನೆನಪು. ಕರಗುತ್ತಿರುವುದು ರೈತನ ಕ್ಯಾಲೆಂಡರ್. ಕರಗುತ್ತಿರುವುದು ಪಕ್ಷಿಗಳ ವಲಸೆ ಮಾರ್ಗ. ಕರಗುತ್ತಿರುವುದು ಮಕ್ಕಳ ಬಾಲ್ಯದ ಚಳಿಗಾಲ. ಪ್ರಕೃತಿಯಲ್ಲಿ ಯಾವುದೂ ಒಂಟಿಯಾಗಿ ಸಾಯುವುದಿಲ್ಲ. ಒಂದು ಹಿಮನದಿ ಕಣ್ಮರೆಯಾದರೆ ಅದರ ಜೊತೆ ಒಂದು ನದಿಯ ನೆನಪೂ ಕರಗುತ್ತದೆ. ಒಂದು ಮರ ಕಡಿದಾಗ ಮರವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಒಂದು ಸಣ್ಣ ಮೋಡದ ಸಾಧ್ಯತೆಯನ್ನೂ ಕಳೆದುಕೊಳ್ಳುತ್ತೇವೆ, ಒಂದು ಪಕ್ಷಿಯ ವಿಳಾಸವನ್ನೂ ಕಳೆದುಕೊಳ್ಳುತ್ತೇವೆ, ಒಂದು ಮಗುವಿನ ಭವಿಷ್ಯದ ನೆರಳನ್ನೂ ಕಳೆದುಕೊಳ್ಳುತ್ತೇವೆ.
“ಭೂಮಿ ಸುಡುತ್ತಿದೆ, ಹಿಮ ಕರಗುತ್ತಿದೆ, ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ ಖಚಿತ” ಎಂದು ಈಗಷ್ಟೇ ವಿಶ್ವಸಂಸ್ಥೆ ಕೊನೆಯ ಎಚ್ಚರಿಕೆ ಕೊಟ್ಟಿದೆ. ಈ ನಿರ್ಣಾಯಕ ಸಂದರ್ಭದಲ್ಲಿ ಹವಾಮಾನ ವೈಪರೀತ್ಯವನ್ನು ಕೇವಲ ಪರಿಸರದ ಸಮಸ್ಯೆಯೆಂದು ನೋಡಲಿಕ್ಕಾಗದು. ಯಾಕೆಂದರೆ ಅದು ಪ್ರಕೃತಿಯ ವೈಫಲ್ಯವಲ್ಲ, ನಾಗರಿಕತೆಯ ಆತ್ಮಪರೀಕ್ಷೆ. ಪ್ರತಿ ಯುಗವೂ ತನ್ನನ್ನು ಒಂದು ಪ್ರಶ್ನೆಯಿಂದ ಗುರುತಿಸಿಕೊಳ್ಳುತ್ತದೆ. ನಮ್ಮ ಯುಗವನ್ನು ಗುರುತಿಸುವ ಪ್ರಶ್ನೆ ಇದೇ: ನಾವು ಭೂಮಿಯನ್ನು ನಮ್ಮ ಆಸ್ತಿಯೆಂದು ಭಾವಿಸಿ ಬದುಕುತ್ತೇವೆಯೇ? ಅಥವಾ— ನಾವು ಭೂಮಿಯ ಅತಿಥಿಗಳೆಂದು ಅರಿತು ಬದುಕುತ್ತೇವೆಯೇ? ಈ ಪ್ರಶ್ನೆಗೆ ನಾವು ಕೊಡುವ ಉತ್ತರವೇ ಮುಂದಿನ ತಲೆಮಾರುಗಳ ಭವಿಷ್ಯವಾಗಲಿದೆ. ಏಕೆಂದರೆ ಭವಿಷ್ಯವು ಎಲ್ಲೋ ಬಂದು ಸೇರುವ ಸ್ಥಳವಲ್ಲ. ಇಂದು ನಮ್ಮ ಕೈಗಳಿಂದ ಬರೆಯಲ್ಪಡುತ್ತಿರುವ ಹವಾಮಾನಕ್ಕೆ ಅದು ಇನ್ನೊಂದು ಹೆಸರು.
ಏನಾಗುತ್ತಿದೆ ನಮ್ಮ ನೆಲದಲ್ಲಿ?
ಯುರೋಪ್‌ನ ಬರಗಾಲ, ಏಷ್ಯಾದ ಪ್ರವಾಹಗಳು, ಆರ್ಕ್ಟಿಕ್‌ನ ಹಿಮ ಕರಗುವುದು… ಈಗ ನಿತ್ಯದ ಸುದ್ದಿಗಳಾಗಿವೆ. ನಮ್ಮ ರಾಜ್ಯದ ಪರಿಸ್ಥಿತಿಯನ್ನೇ ನೋಡೋಣ… ಮಲೆನಾಡಿನಲ್ಲಿ ಒಂದು ಕಾಲದಲ್ಲಿ ಮಂಜು ಮತ್ತು ಮಳೆ ಒಂದೇ ಉಸಿರಾಗಿ ಬರುತ್ತಿದ್ದವು. ಕಾಫಿ ಹೂವು ಬಿಡುವುದು, ಅಡಿಕೆ ಕಾಯಿ ತುಂಬುವುದು – ಎಲ್ಲವೂ ಋತುವಿಗೆ ಬದ್ಧವಾಗಿದ್ದವು. ಈಗ ಆ ಲಯ ಮಾಯವಾಗಿದೆ- ಒಂದು ವರ್ಷ ಅಕಾಲಿಕವಾಗಿ ಸುರಿದ ಮಳೆ ತೋಟಗಳನ್ನು ಮುಳುಗಿಸುತ್ತದೆ; ಮತ್ತೊಂದು ವರ್ಷ ಬಿಸಿಲು ೩೬ ಡಿಗ್ರಿ ಮೀರಿ ಎಲೆಗಳನ್ನು ಸುಡುತ್ತದೆ. ಕರಾವಳಿಯಲ್ಲಿ ಸಮುದ್ರ ಮತ್ತು ಮಳೆ ಒಂದೇ ಭಾಷೆ ಮಾತನಾಡುತ್ತಿದ್ದವು. ಈಗ ಆ ಭಾಷೆಯೂ ತೊದಲುತ್ತಿದೆ. ಜೂನ್‌ನಲ್ಲಿ ನಾಟಿ ಮಾಡಬೇಕಾದ ಭತ್ತದ ಹೊಲಗಳು ಒಣಗಿ ನಿಂತಿವೆ. ನರ್ಸರಿಯಲ್ಲಿನ ಸಸಿಗಳು ಬಿಸಿಲಿಗೆ ಬಾಡುತ್ತಿವೆ. ಭೂಮಿ ಮತ್ತು ನೀರಿನ ನಡುವಿನ ಹಳೆಯ ಒಪ್ಪಂದ ಮುರಿದು ಹೋಗಿ, ಕರಾವಳಿಯ ಮಣ್ಣು ನಿಧಾನವಾಗಿ ಸಮುದ್ರಕ್ಕೆ ಸೇರುತ್ತಿದೆ. ಇನ್ನು ಉತ್ತರ ಕರ್ನಾಟಕದ ಬಯಲುಸೀಮೆಯಲ್ಲಿ ಬೇಸಿಗೆ ತನ್ನ ಅಧಿಕಾರವನ್ನು ದೀರ್ಘಕಾಲ ಉಳಿಸಿಕೊಂಡಿದೆ. ತೊಗರಿ, ಹತ್ತಿ, ಜೋಳ ಬಿತ್ತಬೇಕಾದ ಹೊಲಗಳು ಒಣಗಿ ನಿಂತಿವೆ. ಬೀಜ ಹಾಕಿದರೂ ಮೊಳಕೆಯಾಗುವುದಿಲ್ಲ, ಮೊಳಕೆಯಾದರೂ ಬೇರು ತೇವವನ್ನು ಹುಡುಕುತ್ತಾ ಸೋತು ಹೋಗುತ್ತದೆ. ರಾಯಚೂರು–ಕೊಪ್ಪಳದ ಅಕ್ಕಿ ಹೊಲಗಳಲ್ಲಿ ನಾಟಿ ತಡವಾಗುತ್ತಿದೆ. ಅನೇಕ ಕುಟುಂಬಗಳು ಹೊಲಗಳನ್ನು ಬಿಟ್ಟು ನಗರಗಳತ್ತ ವಲಸೆ ಬರುತ್ತಿವೆ… ನಮ್ಮ ಕಾಲದ ದೊಡ್ಡ ದುರಂತವೆಂದರೆ, ನಾವು ಹವಾಮಾನವನ್ನು ಅಂಕಿ-ಅಂಶಗಳಲ್ಲಿ ದಾಖಲಿಸುತ್ತಿದ್ದೇವೆ, ಆದರೆ ಋತುಗಳನ್ನು ಅನುಭವಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದೇವೆ, ಪ್ರಕೃತಿ ಜೀವನಷ್ಟ ತೋರಿಸುವುದನ್ನು ಉದಾಸೀನ ಮಾಡುತ್ತಿದ್ದೇವೆ… ಒಂದು ಕಾಲದಲ್ಲಿ ಬೇಸಿಗೆ ಒಂದು ಋತುವಾಗಿತ್ತು. ಇಂದು ಅದು ಎಚ್ಚರಿಕೆ. ಒಂದು ಕಾಲದಲ್ಲಿ ಮಳೆ ಹಬ್ಬವಾಗಿತ್ತು. ಇಂದು ಅದು ಭಯ. ಒಂದು ಕಾಲದಲ್ಲಿ ಚಳಿಗಾಲ ವಿರಾಮವಾಗಿತ್ತು. ಇಂದು ಅದು ನೆನಪು.
ಇದೆಲ್ಲಾ ಪ್ರಕೃತಿಯ ವಿಕೋಪ ಎನ್ನುವಿರಾ? ಊಹುಂ, ಪ್ರಕೃತಿ ನಮ್ಮನ್ನು ದ್ವೇಷಿಸುವುದಿಲ್ಲ. ದ್ವೇಷ ಗೊತ್ತಿಲ್ಲದ ಅದಕ್ಕೆ ಪ್ರತೀಕಾರದ ಭಾಷೆಯೂ ತಿಳಿಯದು. ಅದು ಕೇವಲ ಸಮತೋಲನವನ್ನು ಅರಿತಿದೆ. ನಾವು ಆ ಸಮತೋಲನ ಮುರಿದಾಗ, ಪರಿಣಾಮವನ್ನು ಅನುಭವಿಸಲೇ ಬೇಕಾಗುತ್ತದೆ.
ಭೂಮಿಯ ಬದಲಾವಣೆಗೆ ಕಾರಣಗಳೇನು?
ಋತು ತಪ್ಪಿದಾಗ ನಾವು ಆಕಾಶದ ಕಡೆಗೆ ನೋಡುತ್ತೇವೆ. ಮೋಡಗಳು ಎಲ್ಲಿ ಹೋದವು? ಮಳೆ ಯಾಕೆ ತಡವಾಯಿತು… ಮಂಜು ಯಾಕೆ ಕಾಣುತ್ತಲೇ ಇಲ್ಲಾ… ಬಿಸಿಲು ಯಾಕೆ ಇಷ್ಟು ಹಠಮಾರಿಯಾಯಿತು?
ಆದರೆ ಉತ್ತರ ಆಕಾಶದಲ್ಲಿಲ್ಲ. ಅದು ನಮ್ಮೊಳಗಿದೆ…
ಭೂಮಿಯ ಉಸಿರು ಒಂದೇ. ಅದರ ಜ್ವರಕ್ಕೂ ಒಂದೇ ಕಾರಣ. ಕೈಗಾರಿಕಾ ಕ್ರಾಂತಿಯ ಮೊದಲು ಭೂಮಿಯ ಉಸಿರಿನಲ್ಲಿ ಕಾರ್ಬನ್ ಡೈಆಕ್ಸೈಡ್ ಸುಮಾರು 280 ಪಿಪಿಎಂ (ppm) ಇತ್ತು. ಇಂದು ಅದು 430 ಪಿಪಿಎಂ ದಾಟಿದೆ. ಸಂಖ್ಯೆಯ ದೃಷ್ಟಿಯಲ್ಲಿ ಕೇವಲ 150ರಷ್ಟು ಏರಿಕೆ. ಆದರೆ ಪ್ರತಿ ಹೆಚ್ಚುವರಿ ಪಿಪಿಎಂ ಎಂದರೆ ಆಕಾಶದ ಪಾರದರ್ಶಕತೆಯಲ್ಲಿ ಒಂದು ಮಸುಕು ತೆರೆ ಹಾಕಿದಂತೆ. ಜೀವಜಗತ್ತಿನ ದೃಷ್ಟಿಯಲ್ಲಿ ಅದು ಸಾವಿರಾರು ವರ್ಷಗಳ ಸಮತೋಲನಕ್ಕೆ ಬಿದ್ದ ದೊಡ್ಡ ಬಿರುಕು. ಬಾವಿಗೆ ತೊಟ್ಟು ವಿಷ ಬಿದ್ದರೆ ಬಾವಿಯೇ ವಿಷವಾಗುತ್ತದೆ. ವಾತಾವರಣವೂ ಹಾಗೆಯೇ. ಪ್ರತಿಯೊಂದು ಹೊಗೆಕೊಳವೆ, ಪ್ರತಿಯೊಂದು ಕಾರಿನ ಸೈಲೆನ್ಸರ್, ಪ್ರತಿಯೊಂದು ಕಡಿದು ಬಿದ್ದ ಮರ- ಭೂಮಿಯ ಉಸಿರಿನೊಳಗೆ ಒಂದೊಂದು ಹನಿ ವಿಷವನ್ನು ಸೇರಿಸುತ್ತಿವೆ.
ಭೂಮಿ ಈಗ ಬೆಂಕಿಯಲ್ಲಿ ಉರಿಯುತ್ತಿಲ್ಲ; ನಿಧಾನವಾಗಿ ಕುದಿಯುತ್ತಿದೆ. ಕುದಿಯುತ್ತಿರುವ ನೀರಿನ ಪಾತ್ರೆಯೊಳಗಿನ ಕಪ್ಪೆಗೆ ಮೊದಲ ಕ್ಷಣದಲ್ಲಿ ಅಪಾಯ ಗೊತ್ತಾಗುವುದಿಲ್ಲ. ತಾಪಮಾನ ನಿಧಾನವಾಗಿ ಏರುತ್ತಾ ಹೋದಂತೆ ಅದು ತನ್ನ ಸಾವಿನತ್ತ ತಾನೇ ಹೊಂದಿಕೊಳ್ಳುತ್ತದೆ. ನನ್ನನ್ನು ಹೆಚ್ಚು ಹೆದರಿಸಿದ್ದು ಬಿಸಿಲಲ್ಲ, ಬಿಸಿಲಿಗೆ ಹೊಂದಿಕೊಳ್ಳುತ್ತಿರುವ ಮನುಷ್ಯ. ನಾವು ಹೊಸ ಏರ್ ಕಂಡೀಷನರ್‌ಗಳನ್ನು ತಯಾರಿಸಿ, ಮನೆಯೊಳಗಿನ ತಾಪಮಾನವನ್ನು ಕಡಿಮೆ ಮಾಡುತ್ತಿದ್ದೇವೆ. ಭೂಮಿಯ ತಾಪಮಾನವನ್ನು ಲಕ್ಷಿಸುತ್ತಿಲ್ಲಾ. ನಮ್ಮ ಪರಿಹಾರಗಳು ಲಕ್ಷಣಗಳಿಗೆ ಇವೆಯೇ ಹೊರತು ರೋಗಕ್ಕಲ್ಲ. ಏರ್‌ಕಂಡೀಷನರ್ ತಂಪನ್ನು ಕೊಡಬಹುದು, ಆದರೆ ನೆರಳನ್ನು ಕೊಡುವುದಿಲ್ಲ. ನೆರಳು ಎನ್ನುವುದು ಕೇವಲ ತಾಪಮಾನವಲ್ಲ. ಅದು ಸಂಬಂಧ. ಒಂದು ಮರದ ನೆರಳಿನಲ್ಲಿ ಮನುಷ್ಯ ಮಾತ್ರ ವಿಶ್ರಾಂತಿ ಪಡೆಯುವುದಿಲ್ಲ. ಪಕ್ಷಿಯೂ ಕುಳಿತುಕೊಳ್ಳುತ್ತದೆ. ಇರುವೆಯೂ ಸಾಗುತ್ತದೆ. ಗಾಳಿಯೂ ತನ್ನ ಸ್ವರವನ್ನು ಬದಲಾಯಿಸುತ್ತದೆ. ಪ್ರಕೃತಿಯಲ್ಲಿ ಯಾವುದೂ ಒಂಟಿಯಾಗಿ ಬದುಕುವುದಿಲ್ಲ. ಒಂಟಿಯಾಗಿ ಬದುಕಲು ಹೊರಟವನು ಮನುಷ್ಯ ಮಾತ್ರ!
ಹೆಚ್ಚು ಹೆಚ್ಚು ನಾಗರಿಕನಾದಂತೆ ಮನುಷ್ಯ ತನ್ನ ಪ್ರಾಕೃತಿಕ ಸಂಬಂಧದಿಂದ ದೂರವಾದನೇ? ಇದು ವಿಜ್ಞಾನದ ಪ್ರಶ್ನೆಯಲ್ಲ, ನಾಗರಿಕತೆಯ ಪ್ರಶ್ನೆ.
ನಾಗರಿಕತೆ ಎಂದರೆ ಏನು?
ನಾವು ಎತ್ತರದ ಕಟ್ಟಡಗಳನ್ನು ನಾಗರಿಕತೆ ಎನ್ನುತ್ತೇವೆ. ಹೆಚ್ಚಿನ ಉತ್ಪಾದನೆಯನ್ನು ಅಭಿವೃದ್ಧಿ ಎನ್ನುತ್ತೇವೆ. ಹೆಚ್ಚಿನ ಬಳಕೆಯನ್ನು ಸಮೃದ್ಧಿ ಎನ್ನುತ್ತೇವೆ. ಆದರೆ ಪ್ರಕೃತಿಗೆ ನಾಗರಿಕತೆಯ ವ್ಯಾಖ್ಯಾನವೇ ಬೇರೆ. ಒಂದು ನದಿ ತನ್ನ ದಾರಿಯನ್ನು ಮರೆತಿಲ್ಲ. ಒಂದು ಹಕ್ಕಿ ತನ್ನ ವಲಸೆಯನ್ನು ಮರೆತಿಲ್ಲ. ಒಂದು ಬೀಜ ತನ್ನ ಋತುವನ್ನು ಮರೆತಿಲ್ಲ. ತನ್ನ ಸ್ವಭಾವವನ್ನು ಮರೆತದ್ದು ಮನುಷ್ಯ ಮಾತ್ರ.
ಇತಿಹಾಸದಲ್ಲಿ ಮನುಷ್ಯ ಪ್ರಕೃತಿಯಿಂದ ಒಂದು ದಿನದಲ್ಲಿ ಬೇರ್ಪಟ್ಟಿಲ್ಲ. ಅದು ಸಾವಿರಾರು ವರ್ಷಗಳ ನಿಧಾನ ಪ್ರಕ್ರಿಯೆ. ಕೃಷಿ, ನಗರಗಳು, ಕೈಗಾರಿಕಾ ಕ್ರಾಂತಿ, ಆಧುನಿಕ ಬಂಡವಾಳಶಾಹಿ, ಡಿಜಿಟಲ್ ಯುಗ—ಪ್ರತಿ ಹಂತವೂ ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ದುರ್ಬಲವಾಗಿಸುತ್ತಾ ಬಂತು. ನನ್ನನ್ನು ಕಾಡುತ್ತಿರುವ ಪ್ರಶ್ನೆ ಬಿಸಿಲಿನ ಬಗ್ಗೆ ಅಲ್ಲ. ಮನುಷ್ಯನ ಬಗ್ಗೆ. ಪ್ರಕೃತಿಯಿಂದ ಮನುಷ್ಯ ದೂರವಾದದ್ದು ಕಾಡಿನಿಂದ ನಗರಕ್ಕೆ ಬಂದ ದಿನವಲ್ಲ. ತಾನು ಪ್ರಕೃತಿಯ ಭಾಗ ಎಂಬ ಅರಿವನ್ನು ಕಳೆದುಕೊಂಡ ದಿನ. ಅಲ್ಲಿಯವರೆಗೆ ಅವನು ಮಣ್ಣನ್ನು ಸ್ಪರ್ಶಿಸುತ್ತಿದ್ದ, ನದಿಯೊಂದಿಗೆ ಬದುಕುತ್ತಿದ್ದ, ಆಕಾಶವನ್ನು ನೋಡಿ ಕಾಲವನ್ನು ತಿಳಿಯುತ್ತಿದ್ದ. ಯಾವ ದಿನ ಮೊದಲ ಬಾರಿಗೆ ಮನುಷ್ಯ ಪ್ರಕೃತಿಯನ್ನು ನೋಡಿ, “ಇದರಿಂದ ಎಷ್ಟು ಲಾಭ?” ಎಂದು ಕೇಳಲು ಕಲಿತ? ಇತಿಹಾಸವು ಆ ದಿನಾಂಕವನ್ನು ದಾಖಲಿಸಿಲ್ಲ. ಆದರೆ ಅದರ ಪರಿಣಾಮವನ್ನು ಇಂದು ನಮ್ಮ ನೆತ್ತಿಯ ಮೇಲಿನ ಬೆವರಿನಲ್ಲಿ ಕಾಣುತ್ತಿದ್ದೇವೆ…
ಆದಿಮ ಮಾನವನಿಗೆ ಪ್ರಕೃತಿ ದೇವತೆಯೂ ಆಗಿರಲಿಲ್ಲ, ಸಂಪತ್ತೂ ಆಗಿರಲಿಲ್ಲ. ಅದವನ ಬದುಕಿನ ವಿಸ್ತಾರವಾಗಿತ್ತು- “ನಾನು ಕಾಡಿನಲ್ಲಿದ್ದೇನೆ” ಅಲ್ಲ, “ನಾನು ಕಾಡಿನವನು”. ಸುಮಾರು 10–12 ಸಾವಿರ ವರ್ಷಗಳ ಹಿಂದೆ ಕೃಷಿ ಕಲಿತು ಒಂದೆಡೆ ನೆಲೆ ನಿಂತಾಗ, ಮನುಷ್ಯ ಹೇಳಿದ- “ಈ ನದಿ ನನ್ನದು, ಈ ಭೂಮಿ ನನ್ನದು.” ಇಲ್ಲಿಂದಲೇ ಗಡಿಗಳು ಹುಟ್ಟಿದವು. ಸಂಗ್ರಹ ಹುಟ್ಟಿತು. ಸಂಬಂಧ ಸ್ವಾಮ್ಯವಾಯಿತು. ಇದು ಕೇವಲ ಭಾಷೆಯ ಬದಲಾವಣೆ ಅಲ್ಲ. ಸ್ವಾಮ್ಯದ ಮಾತು ಬಂದಾಗ ಬಳಕೆ ಮುಖ್ಯವಾಯಿತು. ಕೃಷಿ ತಪ್ಪಲ್ಲ… ಅದು ಮಾನವ ಇತಿಹಾಸದ ಮೈಲಿಗಲ್ಲು. ಆದರೆ ಮನುಷ್ಯನ ಬದಲಾದ ಮನೋಭಾವವನ್ನು ಗಮನಿಸಬೇಕು. ಬೆಟ್ಟವನ್ನು ನೋಡಿ ಮೌನವಾಗುತ್ತಿದ್ದವನು, ಅದರ ಎತ್ತರ ಅಳೆದ. ಅಳತೆ ಮಾಡಿದ್ದು ತಪ್ಪಲ್ಲ, ಅಳತೆಯೇ ಏಕೈಕ ಮಾನದಂಡವಾದಾಗ ಸಂಬಂಧ ಸತ್ತುಹೋಯಿತು.
ವಿಜ್ಞಾನದ ಉದಯದಿಂದ ನಮಗೆ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ಅದ್ಭುತ ಸಾಧನವೇನೋ ಸಿಕ್ಕಿತು, ಆದರೆ ಅದು ನಿಯಂತ್ರಣದ ಭಾಷೆಯನ್ನೂ ಕಲಿಸಿತು. ವಿಜ್ಞಾನವನ್ನು ಮಾನವ ಮುಕ್ತಿಯ ಸಾಧನವೆಂದು ಕಂಡ, ಆಧುನಿಕ ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ರಾಂತಿಗೆ ಬಲವಾದ ಅಡಿಪಾಯ ಹಾಕಿಕೊಟ್ಟವರು 16ನೆಯ ಶತಮಾನದ ಇಂಗ್ಲಿಷ್ ತತ್ವಜ್ಞಾನಿ ಫ್ರಾನ್ಸಿಸ್ ಬೇಕನ್. ಅವರ ಚಿಂತನೆಗಳು ಮಾನವ ಕೇಂದ್ರಿತವಾಗಿದ್ದು, ಪ್ರಕೃತಿಯನ್ನು ಗೆಲ್ಲಬೇಕೆಂದು ಸೂಚಿಸುತ್ತಿದ್ದವು. ಬೇಕನ್ ಬಳಸಿದ ರೂಪಕಗಳು ಪ್ರಕೃತಿ ನಿಯಮಗಳನ್ನು ತಿಳಿದುಕೊಂಡು ಅದರ ಮೇಲೆ ಹಿಡಿತ ಸಾಧಿಸಲು ಪ್ರೇರೇಪಿಸಿದವು. ಆನಂತರ ವಿಜ್ಞಾನವು ಕೇವಲ ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿರಲಿಲ್ಲ. ಕೈಗಾರಿಕಾ ಯುಗದಲ್ಲಂತೂ ಅದು ನಿಯಂತ್ರಿಸುವುದು, ಉತ್ಪಾದಿಸುವುದು ಎಂಬ ಸರಪಳಿಯಾಯಿತು. 18ನೇ ಶತಮಾನದ ಈ ಹೊಸ ಧರ್ಮದ ದೇವರು ಉತ್ಪಾದನೆ. ಅದರ ಮಂತ್ರ ಬೆಳವಣಿಗೆ. ಅದರ ಆರಾಧನೆ ಬಳಕೆ. ಅದರ ಯಜ್ಞದಲ್ಲಿ ಕಾಡುಗಳು ಹೋಮವಾದವು. ಈ ಹಂತದಲ್ಲಿ ಪ್ರಕೃತಿಯೊಂದಿಗೆ ಮನುಷ್ಯನ ಸಂಬಂಧ ತಾಯಿಯೊಂದಿಗೆ ಇರುವ ಸಂಬಂಧವಾಗಿರಲಿಲ್ಲ. ಅಣೆಕಟ್ಟುಗಳು, ಕಾರ್ಖಾನೆಗಳು, ಗಣಿಗಾರಿಕೆಗಳು ಒಂದೇ ಪ್ರಶ್ನೆಯನ್ನು ಕೇಳಿದವು- “ಪ್ರಕೃತಿಯಿಂದ ಎಲ್ಲೆಲ್ಲಿ, ಏನೇನು, ಎಷ್ಟೆಷ್ಟು ಪಡೆಯಬಹುದು?” ಅಂದರೆ ಜಗತ್ತಿನ ಪ್ರತಿಯೊಂದೂ ಸಿದ್ಧವಾಗಿ ನಿಂತಿರುವ ಸಂಪತ್ತು, ಬೇಡಿಕೆಯ ಮೇರೆಗೆ ಬಳಸಲು ಕಾಯುತ್ತಿರುವ ಸಂಪನ್ಮೂಲ! ಮಾರುಕಟ್ಟೆ ಸಮಾಜದ ಒಂದು ಭಾಗವಾಗಿದ್ದಾಗ ಸಮಸ್ಯೆ ಇರಲಿಲ್ಲ. ಆದರೆ ಸಮಾಜವೇ ಮಾರುಕಟ್ಟೆಯ ಭಾಗವಾದಾಗ ಎಲ್ಲವೂ ಸರಕಾಯಿತು.
ಪ್ರಕೃತಿ ನಮ್ಮನ್ನು ಬಾಳಿಸುತ್ತಿರುವ ಜೀವಂತ ಅಸ್ತಿತ್ವವಲ್ಲ; ನಮ್ಮ ಅಗತ್ಯಗಳನ್ನು ಪೂರೈಸುವ ವಸ್ತು ಎನ್ನುವ ಕಲ್ಪನೆಯೇ ಬಹುಶಃ ನಮ್ಮ ಯುಗದ ಅತ್ಯಂತ ದುಬಾರಿ ಪ್ರಮಾದ. 20ನೇ ಶತಮಾನದಲ್ಲಿ ಜಿಡಿಪಿ (GDP) ಒಂದು ನಾಗರಿಕತೆಯ ಮಾನದಂಡವಾಯಿತು. ಇಲ್ಲಿ ನಡೆದ ವಿಚಿತ್ರ ಬೆಳವಣಿಗೆಯಲ್ಲಿ, ಕಾಡು ನಿಂತಿದ್ದರೆ GDP ಹೆಚ್ಚಾಗುವುದಿಲ್ಲ. ಕಾಡನ್ನು ಕಡಿದರೆ GDP ಹೆಚ್ಚುತ್ತದೆ.ನದಿ ಹಾಗೆಯೇ ಹರಿದರೆ GDPಗೆ ಅಷ್ಟೇನೂ ಕಾಣುವುದಿಲ್ಲ. ಅದರ ಮೇಲೆ ಅಣೆಕಟ್ಟು ಕಟ್ಟಿದರೆ ಬೆಳವಣಿಗೆ. ಬೆಟ್ಟ ನಿಂತಿದ್ದರೆ ಪ್ರಯೋಜನವಿಲ್ಲಾ, ಗಣಿಗಾರಿಕೆ ಆದರೆ ಹಣದ ವಹಿವಾಟು… ಪ್ರಕೃತಿಯ ಮೌನಕ್ಕೆ ಆರ್ಥಿಕ ಲೆಕ್ಕದಲ್ಲಿ ಯಾವುದೇ ಬೆಲೆ ಇಲ್ಲ. ಅದನ್ನು ಸೀಳಿದಾಗ, ಒಡೆದಾಗ ಮಾತ್ರ ಮೌಲ್ಯವಿದೆ. ಇದು ಅಭಿವೃದ್ಧಿಯ ದೊಡ್ಡ ವಿರೋಧಾಭಾಸ!
ಇವತ್ತು ಮಗು ಮಣ್ಣಿನಲ್ಲಿ ಆಡುವುದಕ್ಕಿಂತ ಮಣ್ಣಿನ ವಿಡಿಯೊ ನೋಡುತ್ತದೆ. ನಕ್ಷತ್ರಗಳನ್ನು ನೋಡುವುದಕ್ಕಿಂತ ವಾಲ್‌ಪೇಪರ್ ನೋಡುತ್ತದೆ. ಗಾಳಿಗಿಂತ ಏರ್‌ಕಂಡೀಷನರ್ ಪರಿಚಯ. ಕಾಡಿಗೆ ಹೋಗುವುದಕ್ಕಿಂತ ಡಾಕ್ಯುಮೆಂಟರಿ ನೋಡುತ್ತದೆ. ಪ್ರಕೃತಿಯ ಮಾಹಿತಿಯನ್ನು ಹೆಚ್ಚಿಸಿಕೊಂಡಿದ್ದೇವೆ. ಪ್ರಕೃತಿಯ ಅನುಭವವನ್ನು ಕಡಿಮೆ ಮಾಡಿಕೊಂಡಿದ್ದೇವೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಯಾಕೆಂದರೆ ನಮಗೆ ಪ್ರಕೃತಿಯನ್ನು ‘ಮಿಸ್’ ಮಾಡಿಕೊಂಡ ನೋವೂ ಕಾಣುವುದಿಲ್ಲ!! ಇದು ಪ್ರಕೃತಿಯ ನಾಶಕ್ಕಿಂತ ಮೊದಲು ಪ್ರಕೃತಿಯ ಅನುಭವವೇ ನಾಶವಾಗುತ್ತಿರುವ ದೊಡ್ಡ ದುರಂತ!!!
ಇಲ್ಲೊಂದು ಎಚ್ಚರಿಕೆಯ ಅಗತ್ಯವಿದೆ. ಒಟ್ಟಾರೆಯಾಗಿ ನಾಗರಿಕತೆಯೇ ಕೆಟ್ಟದ್ದು ಎಂದು ಹೇಳುವುದು ಬಹು ದೊಡ್ಡ ತಪ್ಪಾಗುತ್ತದೆ. ಅದು ಇತಿಹಾಸಕ್ಕೂ ನ್ಯಾಯ ಮಾಡುವುದಿಲ್ಲ. ನಾಗರಿಕತೆಯು ನಮಗೆ ವೈದ್ಯಕೀಯ, ವಿಜ್ಞಾನ, ಕಲೆ, ಮಾನವ ಹಕ್ಕುಗಳು, ಪ್ರಜಾಪ್ರಭುತ್ವದಂತಹ ಅಸಂಖ್ಯಾತ ಸಾಧನೆಗಳನ್ನು ಕೊಟ್ಟಿದೆ. ಸಮಸ್ಯೆ ನಾಗರಿಕತೆಯದ್ದಲ್ಲಾ; ಅದು ಆಯ್ದುಕೊಂಡು ಹೊರಟ ದಿಕ್ಕಿನದು. ಏಕೆಂದರೆ ಆಧುನಿಕ ಮನುಷ್ಯ ‘ಇರುವಿಕೆ’ (being- to be)ಗಿಂತ ‘ಹೊಂದಿರುವುದ’ (having- to have)ರ ಮೂಲಕ ತನ್ನನ್ನು ಅಳೆಯಲಾರಂಭಿಸಿದ. ಇದನ್ನು ಪರಿಸರದ ಭಾಷೆಗೆ ಅನುವಾದಿಸಿಕೊಂಡರೆ, ಕಾಡಿನೊಂದಿಗೆ ಇರುವುದು ಹೋಗಿ, ಕಾಡನ್ನು ಹೊಂದಿರುವುದು; ನದಿಯೊಂದಿಗೆ ಬದುಕುವುದು ಮರೆತು, ನದಿಯನ್ನು ಬಳಸುವುದು; ಭೂಮಿಯ ಭಾಗವಾಗಿರುವುದು ಬದಲಾಗಿ, ಭೂಮಿಯ ಮಾಲೀಕನಾಗುವುದು. ಈ ಒಂದೇ ಪರಿವರ್ತನೆ ಅನೇಕ ಪರಿಸರ ಸಮಸ್ಯೆಗಳ ನೈತಿಕ ಬೇರುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮನುಷ್ಯ ಪ್ರಕೃತಿಯನ್ನು ಗೆಲ್ಲಲು ಹೊರಟ ದಿನ ಸೋತದ್ದು ಪ್ರಕೃತಿಯಲ್ಲ; ಅವನ ಅಸ್ತಿತ್ವದ ಅರಿವು. ಗೆಲುವಿನ ಭಾಷೆಯಲ್ಲಿ ಆರಂಭವಾದ ನಾಗರಿಕತೆಯು, ಕೊನೆಗೆ ತನ್ನ ಬದುಕಿನ ಆಧಾರವನ್ನೇ ದುರ್ಬಲಗೊಳಿಸಿಕೊಂಡ ನೋವಿನ ಕತೆ ಇದು. ಏಕೆಂದರೆ ಆಕಾಶ ಮುಟ್ಟುವ ಕಟ್ಟಡಗಳನ್ನೇನೋ ಕಟ್ಟಿದೆವು, ಆದರೆ ಮರದ ನೆರಳನ್ನು ಮರೆತೆವು. ವೇಗವನ್ನೇನೋ ಸಾಧಿಸಿದೆವು, ಆದರೆ ದಿಕ್ಕನ್ನೇ ಕಳೆದುಕೊಂಡೆವು.
ನಾಗರಿಕತೆ ಹೊರಗಿನಿಂದ ಬೆಳೆಯಿತು. ಒಳಗಿನಿಂದ ಕುಗ್ಗಿತು. ಹವಾಮಾನ ವೈಪರೀತ್ಯವು ಭೂಮಿಯ ಕಥೆಯಷ್ಟೇ ಅಲ್ಲ—ನಾವು ಜಗತ್ತನ್ನು ಹೇಗೆ ನೋಡಲು ಕಲಿತೆವು ಎಂಬ ಕಥೆಯೂ ಹೌದು.
ದೃಷ್ಟಿ ಪಲ್ಲಟ… ಅಸ್ತಿತ್ವದ ಭ್ರಮೆ
ಆಧುನಿಕ ತಂತ್ರಜ್ಞಾನವೆಂದರೆ ಕೇವಲ ಯಂತ್ರಗಳಲ್ಲ, ಅದೊಂದು “ನೋಡುವ ವಿಧಾನ.” ಜರ್ಮನ್ ತತ್ವಜ್ಞಾನಿ ಮಾರ್ಟಿನ್ ಹೈಡೆಗ್ಗರ್ ಒಂದು ಪ್ರಶ್ನೆ ಕೇಳುತ್ತಾರೆ: “ಆಧುನಿಕ ಮನುಷ್ಯ ಜಗತ್ತನ್ನು ಒಂದು ವಿಸ್ಮಯವಾಗಿ ನೋಡುವುದನ್ನು ಬಿಟ್ಟು, ಒಂದು ಗೋದಾಮಾಗಿ ನೋಡಲು ಆರಂಭಿಸಿದನೇ?” ಒಂದು ಮರವನ್ನು ನಾವು ಮೊದಲ ಬಾರಿಗೆ ‘ಮರ’ವಾಗಿ ನೋಡುವುದನ್ನು ನಿಲ್ಲಿಸಿದ ದಿನವೇ ಅದರ ಮರಣ ಪ್ರಾರಂಭವಾಯಿತು. ಅದನ್ನು ಮರದ ದಿಮ್ಮಿ ಎಂದು ಕರೆದಿದ್ದೇವೆ. ನಂತರ ಕಚ್ಚಾ ವಸ್ತು ಎಂದು ಕರೆದಿದ್ದೇವೆ. ಕೊನೆಗೆ ಮಾರುಕಟ್ಟೆ ಮೌಲ್ಯ ಎಂದು ಗುರುತಿಸತೊಡಗಿದೆವು. ಆ ನೋಟ ಜಗತ್ತನ್ನು ಒಂದೇ ಪ್ರಶ್ನೆಯಿಂದ ನೋಡುತ್ತದೆ: “ಇದರಿಂದ ನನಗೆ ಏನು ಉಪಯೋಗ?” ಹಾಗಾಗಿ ನದಿ ಇನ್ನು ನದಿಯಲ್ಲ, ಅದು Hydroelectric potential, ‘ಜಲವಿದ್ಯುತ್’ ಆಯಿತು. ಕಾಡು ಇನ್ನು ಕಾಡಲ್ಲ, Timber reserve ಆಯಿತು. ಗಾಳಿ ಗಾಳಿಯಾಗಿರಲಿಲ್ಲ, ‘ಎನರ್ಜಿ’ ಆಯಿತು. ಭೂಮಿ ಭೂಮಿಯಾಗಿರಲಿಲ್ಲ, ‘ರಿಯಲ್ ಎಸ್ಟೇಟ್’ ಆಯಿತು. ಮನುಷ್ಯ ಇನ್ನು ಮನುಷ್ಯನಲ್ಲ, Human resource. ಇದನ್ನು ಗಮನಿಸಿ… Human Resource ಎಂಬ ಪದವೇ ಎಷ್ಟು ವಿಚಿತ್ರ! ಮನುಷ್ಯನನ್ನೇ “resource” ಮಾಡಿರುವ ನಾಗರಿಕತೆ, ಮರವನ್ನು resource ಮಾಡದೇ ಬಿಡುತ್ತದೆಯೇ? ಇದು ಕೇವಲ ಪದಗಳ ಬದಲಾವಣೆ ಅಲ್ಲ. ಅಸ್ತಿತ್ವದ ಸ್ಥಾನಮಾನ ಬದಲಾವಣೆ. ಹೆಸರು ಬದಲಾದಾಗ ವಸ್ತುವಿನ ಅಂತರಂಗವೂ ಬದಲಾಗುತ್ತದೆ. ಇದನ್ನೇ standing reserve (Bestand) ಎಂದು ಕರೆಯುತ್ತಾರೆ. ಮನುಷ್ಯನು ಪ್ರಕೃತಿಯ ಭಾಷೆಯನ್ನು ಮಾರುಕಟ್ಟೆಯ ಭಾಷೆಗೆ ಅನುವಾದಿಸಿದಾಗ, ಆ ಅನುವಾದದಲ್ಲಿ ಅರಣ್ಯದ ಸಂಗೀತ ಕಳೆದುಹೋಯಿತು…
ನಾವು ನಮ್ಮನ್ನು ಪ್ರಕೃತಿಯಿಂದ ಪ್ರತ್ಯೇಕವೆಂದು ಕಲ್ಪಿಸಿಕೊಂಡ ಕ್ಷಣದಲ್ಲೇ ಈ ದುರಂತ ಆರಂಭವಾಯಿತು. ಪ್ರಕೃತಿ ಸಂಪನ್ಮೂಲವಾದಾಗ ಅದು ಬಳಸಿ ಮುಗಿಸಬಹುದಾದ ವಸ್ತು. ಪ್ರಕೃತಿಯು ಅಳೆಯಬಹುದಾದ ಭೌತಿಕ ವಸ್ತುಗಳ ಸಂಗ್ರಹಗಾರವಲ್ಲಾ. ನಾವು ಭೂಮಿಯನ್ನು “Own” ಮಾಡುತ್ತೇವೆ. ಆದರೆ ಭೂಮಿ ನಮ್ಮನ್ನು “Contain” ಮಾಡುತ್ತದೆ. ಈ ಎರಡು ಕ್ರಿಯಾಪದಗಳ ನಡುವಿನ ವ್ಯತ್ಯಾಸವೇ ನಮ್ಮ ನಾಗರಿಕತೆಯ ದುರಂತ ವಾಸ್ತವದ ಕಥೆ. ಈ ಪ್ರಕ್ರಿಯೆಯಲ್ಲಿ ಕೊನೆಗೆ ಮನುಷ್ಯ ಮನುಷ್ಯನಿಂದಲೇ ದೂರನಾದ. ಯಾಕೆಂದರೆ ಪ್ರಕೃತಿಯಿಂದ ದೂರವಾದ ಜೀವಿ, ತನ್ನಿಂದಲೇ ತಾನು ದೂರವಾಗುತ್ತಾನೆ. ಆಗ ಅಭಿವೃದ್ಧಿ ಒಂದು ಸಾಧನೆಯಾಗಿ ಕಾಣುವುದಿಲ್ಲಾ, ವ್ಯಸನವಾಗುತ್ತದೆ. ನಾಗರಿಕತೆ ಒಂದು ಸಂಸ್ಕೃತಿಯಾಗಿ ಅರಳದೆ, ನಿರಂತರ ವಿಸ್ತರಣೆಯ ಹಸಿವಾಗುತ್ತದೆ. ಆ ಹಸಿವು ಕೊನೆಗೆ ಕಾಡುಗಳನ್ನು ತಿಂದದ್ದು, ನದಿಗಳನ್ನು ಕುಡಿದದ್ದು, ಗಾಳಿಯನ್ನೂ ಮಾರಾಟಕ್ಕೆ ಇಟ್ಟದ್ದನ್ನು ಕಾಣುತ್ತಿದ್ದೇವೆ.
Subject–Object Split (ವಿಷಯಿ–ವಸ್ತು ವಿಭಜನೆ) ಎಂಬುದು ಕೇವಲ ತತ್ವಶಾಸ್ತ್ರದ ಪದವಲ್ಲ. ಆಧುನಿಕ ನಾಗರಿಕತೆಯ ಸಂಪೂರ್ಣ ಮನೋವೃತ್ತಿಯನ್ನು ಅರ್ಥಮಾಡಿಕೊಳ್ಳಲು ಬಳಸುವ ಒಂದು ಮೂಲಭೂತ ಪರಿಕಲ್ಪನೆ. ಸರಳವಾಗಿ ಹೇಳುವುದಾದರೆ: Subject (ವಿಷಯಿ) = ನೋಡುವವನು, ತಿಳಿದುಕೊಳ್ಳುವವನು, ನಿರ್ಧಾರ ತೆಗೆದುಕೊಳ್ಳುವವನು. ಅಂದರೆ “ನಾನು”. Object (ವಸ್ತು) = ನೋಡಲ್ಪಡುವುದು, ಅಳೆಯಲ್ಪಡುವುದು, ಬಳಸಲ್ಪಡುವುದು. ಅಂದರೆ “ಅದು”. ಈ ವಿಭಜನೆ ಸಹಜವಾಗಿ ಕಾಣಬಹುದು. ಆದರೆ ಇದರ ಪರಿಣಾಮ ಅತ್ಯಂತ ಆಳವಾಗಿದೆ. ಮೂರು ವರ್ಷದ ಮಗುವನ್ನು ನೋಡಿ, ಅದು ಚಿಟ್ಟೆಯನ್ನು ಕಂಡರೆ ಅದರ ಹಿಂದೆ ಓಡುತ್ತದೆ. ಮರವನ್ನು ಅಪ್ಪಿಕೊಳ್ಳುತ್ತದೆ. ಮಳೆಯೊಂದಿಗೆ ಮಾತನಾಡುತ್ತದೆ. ಅದಕ್ಕೆ ಪ್ರಕೃತಿ ‘ಅದು’ ಅಲ್ಲ. ಅದು ಸಂಬಂಧ. ಅದು ಪ್ರತ್ಯೇಕತೆ ತಿಳಿಯದ ಅನುಭವ. ನಿಧಾನವಾಗಿ ನಾವು ಕಲಿಯುತ್ತೇವೆ. ಮರ ಎಂದರೆ… ಮರದ ದಿಮ್ಮಿ, ಆಮ್ಲಜನಕ, ಆರ್ಥಿಕ ಸಂಪತ್ತು, ಕಾರ್ಬನ್ ಸಿಂಕ್. ನದಿ ಎಂದರೆ… ನೀರಿನ ಮೂಲ, ವಿದ್ಯುತ್, ನೀರಾವರಿ. ಬೆಟ್ಟ ಎಂದರೆ… ಖನಿಜ, ಸಿಮೆಂಟ್, ಪ್ರವಾಸೋದ್ಯಮ. ಅಂದರೆ… ಪ್ರಕೃತಿ ಅಲ್ಲಿ ಸಂಬಂಧವಲ್ಲ. ನಮ್ಮ ಶಿಕ್ಷಣವೂ ದಾರಿತಪ್ಪಿಸಿತು. ಪ್ರಕೃತಿಯ ಪ್ರತಿಯೊಂದು ವಸ್ತುವಿಗೂ ಒಂದು ಉಪಯೋಗವಿದೆ ಎಂದು ಕಲಿಸಿತು. ಆದರೆ ಅದಕ್ಕೂ ಮುಂಚೆ ಅವುಗಳಿಗೆ ಒಂದು ಅಸ್ತಿತ್ವವಿದೆ ಎಂಬುದನ್ನು ಹೇಳಲು ಮರೆಯಿತು. ಪ್ರಕೃತಿಯಿಂದ ಬಹುದೂರ ನಡೆದೆವು… ಈ ದೂರವಾಗುವಿಕೆಯಿಂದ ಒಂದು ದೊಡ್ಡ ಮರೆವು ಹುಟ್ಟಿತು… ಈಗ ಆ ದೂರವೇ ನಮ್ಮನ್ನು ಸುಡುತ್ತಿದೆ…
ಮಾನವ ಇತಿಹಾಸವು ಪ್ರಕೃತಿಯಿಂದ ದೂರ ನಡೆದ ಕಥೆಯಲ್ಲ; ಪ್ರಕೃತಿಯೊಂದಿಗಿನ ಸಂಬಂಧವನ್ನು ಮರೆತುಬಿಟ್ಟ ಕಥೆ ಎಂದರೆ ಸರಿಯಾದೀತು. ಗರ್ಭದಲ್ಲಿರುವ ಮಗು ತನ್ನ ತಾಯಿಯಿಂದ ಪ್ರತ್ಯೇಕವಾಗಿದೆ ಎಂದು ಭಾವಿಸಿದಂತೆ. ಮಾನವ ನಾಗರಿಕತೆಯೂ ಈಗ ಅದೇ ಭ್ರಮೆಯಲ್ಲಿದೆ. ನಾವು ಭೂಮಿಯ ಗರ್ಭದಲ್ಲೇ ಬದುಕುತ್ತಿದ್ದೇವೆ. ಆದರೆ ನಮ್ಮ ಆಯ್ಕೆಗಳು, ವರ್ತನೆಗಳು ಭೂಮಿಗೆ ಅಪಾಯ ಒಡ್ಡುತ್ತಲೇ ಇವೆ. ಇದು ಅಸ್ತಿತ್ವದ ಭ್ರಮೆ. ನನಗೆ ಈ ‘ಅಸ್ತಿತ್ವದ ಭ್ರಮೆ’ (illusion of separateness) ಎಂಬುದು ಪರಿಸರದ ಪ್ರಶ್ನೆ ಮಾತ್ರವಲ್ಲ, ಅದು ಆಧುನಿಕ ನಾಗರಿಕತೆಯ ಕೇಂದ್ರಭ್ರಮೆಯಾಗಿ ಕಾಣಿಸುತ್ತಿದೆ. ಇದನ್ನು ಇನ್ನೂ ನಿಖರವಾಗಿ ಹೇಳಬಹುದಾದರೆ ಪ್ರಕೃತಿಯಿಂದ ಮನುಷ್ಯ ದೂರವಾಗಲಿಲ್ಲ. ತಾನು ಅದರಿಂದ ದೂರವಾಗಿದ್ದೇನೆ ಎಂದು ನಂಬಿದ. ಈ ಎರಡರ ನಡುವೆ ಬಹಳ ವ್ಯತ್ಯಾಸವಿದೆ. ಒಂದು ಮೀನಿಗೆ ಸಮುದ್ರದಿಂದ ಬೇರ್ಪಡುವುದು ಸಾಧ್ಯವಿಲ್ಲ. ಅದು ಸಮುದ್ರದೊಳಗೇ ಇರುತ್ತದೆ. ಆದರೆ ಒಂದು ಕ್ಷಣ ಅದು “ನಾನು ಸಮುದ್ರದಿಂದ ಸ್ವತಂತ್ರ” ಎಂದು ನಂಬಿದರೆ, ಆ ನಂಬಿಕೆಯೇ ಅದರ ಅಂತ್ಯದ ಆರಂಭ. ಮಾನವನ ಕಥೆಯೂ ಹಾಗೆಯೇ. ಬಹುಶಃ ಮಾನವ ನಾಗರಿಕತೆಯ ಮೊದಲ ತಪ್ಪು ಪ್ರಕೃತಿಯನ್ನು ನಾಶಮಾಡಿದ್ದಲ್ಲ. ತಾನು ಪ್ರಕೃತಿಯಿಂದ ಪ್ರತ್ಯೇಕ ಎಂದು ನಂಬಿದ್ದು. ಆ ನಂಬಿಕೆಯೇ ಅವನಿಗೆ “ನಾನು ಪ್ರಕೃತಿಯನ್ನು ಜಯಿಸಬಲ್ಲೆ… ನದಿಯ ದಿಕ್ಕನ್ನು ಬದಲಾಯಿಸಬಲ್ಲೆ… ಬೆಟ್ಟವನ್ನು ಸೀಳಬಲ್ಲೆ… ಋತುಗಳನ್ನು ನಿಯಂತ್ರಿಸಬಲ್ಲೆ…” ಎನ್ನುವ ಒಂದು ವಿಚಿತ್ರವಾದ ಅಧಿಕಾರದ ಭಾವನೆ ಕೊಟ್ಟಿತು. ಗೆಲ್ಲುವ ಭಾಷೆ ಬಂದಾಗ, ಸಂಬಂಧದ ಭಾಷೆ ಮರೆಯಾಗುತ್ತದೆ. ಅಧಿಕಾರದ ಭಾಷೆ ಬೆಳೆದಾಗ, ಕೃತಜ್ಞತೆಯ ಭಾಷೆ ಸೊರಗಿಹೋಗುತ್ತದೆ. ಆ ಭ್ರಮೆಯು ಮನುಷ್ಯನನ್ನು ಕಾಡಿನಿಂದ ನಗರಕ್ಕೆ ಮಾತ್ರ ಕರೆತರಲಿಲ್ಲ. ವಿನಯದಿಂದ ಅಹಂಕಾರಕ್ಕೆ, ಸಹಜೀವನದಿಂದ ಪ್ರಾಬಲ್ಯಕ್ಕೆ, ವಿಸ್ಮಯದಿಂದ ಉಪಯುಕ್ತತೆಗೆ, ಸಾಕು ಎನ್ನುವ ಸಂತೃಪ್ತಿಯಿಂದ ಅಂತ್ಯವಿಲ್ಲದ ಇನ್ನೂ ಬೇಕು, ಬೇಕು ಎನ್ನುವ ಹಪಾಹಪಿತನಕ್ಕೆ ಕರೆದುಕೊಂಡು ಹೋಯಿತು.
ಹಾಗಾಗಿ ಹವಾಮಾನ ವೈಪರೀತ್ಯವು ಕಾರ್ಬನ್‌ನ ಸಂಕಟವಲ್ಲ; ಅದು ದೃಷ್ಟಿಯ ಸಂಕಟ.
ಮಹಾಮರೆವು…
ನನಗೆ ಕೆಲವೊಮ್ಮೆ ಅನಿಸುತ್ತದೆ— ಹವಾಮಾನ ವೈಪರೀತ್ಯವು ಭೂಮಿಯ ಜ್ವರವೇ ಅಲ್ಲ, ಇಂಗಾಲದ ಪ್ರಮಾಣ ಹೆಚ್ಚಿರುವುದರ ಅಥವಾ ತಾಪಮಾನ ಏರಿಕೆಯ ತಾಂತ್ರಿಕ ಸಮಸ್ಯೆಯಲ್ಲ; ಅದು ಮಾನವ ಪ್ರಜ್ಞೆಗೆ ಕವಿದ ಕತ್ತಲು, ಸ್ಮೃತಿಭ್ರಂಶ. ತಾನು ಎಲ್ಲಿಂದ ಬಂದೆ ಎಂಬುದನ್ನು ಮರೆತ ಜೀವಿ, ಎಲ್ಲಿ ಹೋಗಬೇಕು ಎಂಬುದನ್ನೂ ಕಳೆದುಕೊಳ್ಳುತ್ತಾನೆ. ಮಾನವ ನಾಗರಿಕತೆಯ ದೊಡ್ಡ ದುರಂತವೆಂದರೆ ಪ್ರಕೃತಿಯನ್ನು ನಾಶಮಾಡಿದ್ದಲ್ಲಾ, ತನ್ನ ಅಸ್ತಿತ್ವವು ನಿಸರ್ಗದ ಪ್ರತಿಯೊಂದರ ಸಂಬಂಧದಲ್ಲಿ ಹೆಣೆದಿರುವ ಜಾಲ ಎಂಬ ವಾಸ್ತವತೆಯನ್ನು ಮರೆತದ್ದು- ಗಾಳಿ ನಮ್ಮ ಉಸಿರಿನ ವಿಸ್ತರಣೆ, ನೀರು ನಮ್ಮ ರಕ್ತದ ಹರಿವು, ಮಣ್ಣು ನಮ್ಮ ದೇಹದ ಮೂಲ. ಮನುಷ್ಯ ಕೇವಲ ಮಣ್ಣಿನಿಂದ ಬಂದವನಲ್ಲ, ಅವನು ಮಣ್ಣಿನ ಭಾಗವೇ ಆಗಿದ್ದಾನೆ ಎಂಬುದನ್ನು ನೆನಪಿಸಿಕೊಳ್ಳದಿದ್ದರೆ ಈ ನಾಗರಿಕತೆಯು ತನ್ನದೇ ಆದ ಮರೆವಿನ ಸಮಾಧಿಯ ಮೇಲೆ ನಿಲ್ಲಬೇಕಾಗುತ್ತದೆ.
ಇತಿಹಾಸದ ಪ್ರತಿಯೊಂದು ಕಾಲಮಾನದಲ್ಲೂ ಎಲ್ಲಾ ದೇಶದ ವಿಜ್ಞಾನಿಗಳು, ಚಿಂತಕರು, ತತ್ವಜ್ಞಾನಿಗಳು ಪ್ರಕೃತಿಯನ್ನು ಮಾನವನ ಅಸ್ತಿತ್ವದ ಮೂಲ, ಜೀವಜಗತ್ತಿನ ಜೀವನಾಡಿ ಎಂದು ನೆನಪಿಸುತ್ತಲೇ ಬಂದಿದ್ದಾರೆ. ಆದಿಮ ತಿಳುವಳಿಕೆಯಲ್ಲಿ ಪ್ರಕೃತಿ ಮತ್ತು ಮಾನವ ಬೇರೆಬೇರೆಯಾಗಿರಲಿಲ್ಲಾ. ಬೌದ್ಧ ಚಿಂತನೆಯಲ್ಲಿ ಎಲ್ಲವೂ ಪರಸ್ಪರ ಅವಲಂಬಿತ, ಜೀವಜಾಲದ ಒಂದೇ ಹೆಣಿಗೆಯಲ್ಲಿವೆ. ಬಸವಾದಿ ಶರಣರು ಕಾಯಕ- ದಾಸೋಹದ ಪ್ರಾಕೃತಿಕ ಸಂಬಂಧದಲ್ಲಿ ಬದುಕಬೇಕೆಂದರು. ಆಗ ಸಂಗ್ರಹಣೆಯ ವ್ಯಾಧಿ ಅಂಟುವುದಿಲ್ಲ. ಪ್ರಕೃತಿಯ ದುರುಪಯೋಗ ನಡೆಯುವುದಿಲ್ಲಾ. ಲಿಯೊನಾರ್ಡೊ ಡಾ ವಿಂಚಿ: “ಪ್ರಕೃತಿಯೇ ಸತ್ಯಜ್ಞಾನದ ಮೂಲ. ಅದಕ್ಕೆ ತನ್ನದೇ ನಿಯಮಗಳಿವೆ. ಅವುಗಳನ್ನು ಅಲ್ಲಾಡಿಸಿದರೆ ಬದುಕೇ ಅಭದ್ರಗೊಳ್ಳುತ್ತದೆ” ಎಂದರೆ, ರಾಚೆಲ್ ಕಾರ್ಸನ್: “ಮಾನವನು ಪ್ರಕೃತಿಯ ಭಾಗ. ಪ್ರಕೃತಿಯ ವಿರುದ್ಧದ ಅವನ ಯುದ್ಧವು ಅಂತಿಮವಾಗಿ ತನ್ನ ವಿರುದ್ಧದ ಯುದ್ಧವೇ ಆಗಿದೆ.” ಎಂದಿದ್ದಾರೆ. ಅಮೆರಿಕದ ಖಗೋಳ ಶಾಸ್ತ್ರಜ್ಞ ಕಾರ್ಲ್ ಸಾಗನ್ ಹೇಳುತ್ತಿದ್ದರು: “ನಾವು ಒಂದೇ ಗ್ರಹದ ಮೇಲೆ ವಾಸಿಸುತ್ತಿದ್ದೇವೆ. ಇದು ನಮ್ಮ ಏಕೈಕ ಮನೆ. ನಾವು ಅದನ್ನು ನಾಶಮಾಡಿದರೆ, ಎಲ್ಲಿಗೆ ಹೋಗುವುದು?” ಎರಡು ಶತಮಾನಗಳ ಹಿಂದೆಯೇ ಜರ್ಮನಿಯ ಭೂಗೋಳಶಾಸ್ತ್ರಜ್ಞ ಅಲೆಕ್ಸಾಂಡರ್ ವಾನ್ ಹಂಬೋಲ್ಟ್, ಮಾನವನ ಕೃತ್ಯಗಳು ಪರಿಸರವನ್ನು ನಾಶಪಡಿಸಬಹುದು ಎಂದು ಎಚ್ಚರಿಸಿದ್ದರು. “ಯಾವುದಾದರೂ ಪ್ರಾಣಿ ಅಥವಾ ಸಸ್ಯದ ಬಗ್ಗೆ ಇದರಿಂದೇನು ಪ್ರಯೋಜನ? ಎಂದು ಕೇಳುವ ವ್ಯಕ್ತಿಯೇ ಪರಮ ಅಜ್ಞಾನಿ” ಎನ್ನುವ ಭೂವಿಜ್ಞಾನಿ ಆಲ್ಡೊ ಲಿಯೋಪೋಲ್ಡ್, ಭೂಮಿಯನ್ನು ಸರಕಾಗಿ ನೋಡುತ್ತಿರುವುದೇ ಮನುಷ್ಯ ಕುಲದ ದೊಡ್ಡ ದುರಂತವೆಂದು ಬರೆಯುತ್ತಾರೆ. ಬುಡಕಟ್ಟು ಜನಾಂಗದ ನಾಯಕರಾಗಿದ್ದ ಚೀಫ್ ಸಿಯಾಟಲ್: “ಭೂಮಿ ಮಾನವನಿಗೆ ಸೇರಿದ್ದಲ್ಲ. ಮಾನವನು ಭೂಮಿಗೆ ಸೇರಿದವನು. ಎಲ್ಲವೂ ರಕ್ತದಂತೆ ಜೋಡಿಸಲ್ಪಟ್ಟಿದೆ. ಮಾನವ ಜೀವಜಾಲ ನೇಯಲಿಲ್ಲ; ಅವನು ಅದರ ಒಂದು ದಾರ ಮಾತ್ರ. ಅವನು ಜಾಲಕ್ಕೆ ಮಾಡುವುದನ್ನು ತನಗೇ ಮಾಡುತ್ತಾನೆ…” ಮಹಾತ್ಮ ಗಾಂಧೀಜಿ: “ಭೂಮಿ ಎಲ್ಲರ ಅಗತ್ಯಗಳನ್ನು ಪೂರೈಸುತ್ತದೆ, ಆದರೆ ಯಾರ ಲೋಭವನ್ನೂ ಅಲ್ಲ.” ಎಂದು ಪ್ರಕೃತಿಯ ಸರಳತೆಯಲ್ಲಿ ಜೀವಿಸಿ ತೋರಿಸಿದರು. ರವೀಂದ್ರನಾಥ ಟಾಗೋರ್, ಪ್ರಕೃತಿಯೊಂದಿಗಿನ ಆಳವಾದ ಸಂಬಂಧವೇ ನಿಜವಾದ ಸಂತೋಷ. ಮಕ್ಕಳು ಪ್ರಕೃತಿಯ ಮಡಿಲಲ್ಲೇ ಬೆಳೆಯಬೇಕು ಎಂದು ಹೇಳುತ್ತಿದ್ದರು…
ಚಿಂತಕರು ಹೇಳಿದರು. ವಿಜ್ಞಾನಿಗಳು ತೋರಿಸಿದರು. ಇತಿಹಾಸ ಪುನಃ ಪುನಃ ನೆನಪಿಸಿತು. ಆದರೂ ನಾವು ಮರೆಯುತ್ತೇವೆ. ಯಾಕೆಂದರೆ ಮರೆವು ಸುಲಭ, ಎಚ್ಚರಿಕೆ ಕಷ್ಟ. ಆದ್ದರಿಂದ ಮರೆಯುತ್ತೇವೆ. ನಾವು “ಇನ್ನೂ ಸಮಯವಿದೆ” ಎನ್ನುವ ಭ್ರಮೆಯಲ್ಲಿರುವುದರಿಂದ ಋತು ತಪ್ಪಿದಾಗಲೂ, ಬಿಸಿಲು ಸುಟ್ಟಾಗಲೂ, ಮಳೆ ಬಾರದೇ ಹೋದಾಗಲೂ, “ಇದು ತಾತ್ಕಾಲಿಕ. ಮುಂದಿನ ವರ್ಷ ಎಲ್ಲವೂ ಸರಿಹೋಗುತ್ತದೆ” ಎಂದು ಅಂದುಕೊಳ್ಳುತ್ತೇವೆ. ಆ ‘ಮುಂದಿನ ವರ್ಷ’ ಎನ್ನುವ ಭಾವನೆಯೇ ನಮಗೆ ಇನ್ನಷ್ಟು ಕಾಲ ಕೊಡುತ್ತದೆ. ಆ ಕಾಲದಲ್ಲಿ ನಾವು ಮತ್ತೆ ಮರೆಯುತ್ತೇವೆ. ನಾನು ಒಂದು ಪ್ಲಾಸ್ಟಿಕ್ ಕಡಿಮೆ ಮಾಡಿದರೆ ಏನಾಗುತ್ತದೆ? ನಾನು ಕಾರು ಬಿಟ್ಟು ನಡೆದರೆ ಏನಾಗುತ್ತದೆ? ನನ್ನಿಂದಾಗಿ ಏನು ಬದಲಾಗುತ್ತದೆ? ಆ ಪ್ರಶ್ನೆಯೇ ನಮ್ಮನ್ನು ಮರೆಸುತ್ತದೆ. ನಾವು ಸಣ್ಣವರು. ಸಮಸ್ಯೆ ದೊಡ್ಡದು ಅಂದುಕೊಳ್ಳುತ್ತೇವೆ. ಹೀಗೆ ಅಂತರ ಮಾಡಿಕೊಳ್ಳುವುದರಿಂದ ಆ ಅಂತರದಲ್ಲಿ ಮರೆವು ಹೆಚ್ಚುತ್ತದೆ. ಇನ್ನೊಂದು ವಿಚಿತ್ರವೆಂದರೆ ನಾಗರಿಕತೆಯೇ ನಮಗೆ ಮರೆವನ್ನು ಕಲಿಸುತ್ತದೆ. ಕಾಂಪೌಂಡುಗಳನ್ನು ಎಬ್ಬಿಸಿಕೊಂಡು,. ಮನೆಗಳನ್ನು ಗಟ್ಟಿ ಗೋಡೆಗಳಿಂದ, ಕಿಟಕಿಗಳನ್ನು ದಪ್ಪ ಗಾಜಿನಿಂದ, ಬಾಗಿಲುಗಳನ್ನು ದಿಮ್ಮನೆಯ ಮರಗಳಿಂದ ಕಟ್ಟಿಕೊಂಡು, ಗೋಡೆಗಳ ಹಿಂದೆ ಹವಾನಿಯಂತ್ರಣದಲ್ಲಿ ಕುಳಿತು, ಪರದೆ ಮೇಲೆ ಪ್ರಪಂಚ ನೋಡುತ್ತೇವೆ. ಬಿಸಿಲು ಬಂದರೆ ಫ್ಯಾನ್, ಮಳೆ ಬಂದರೆ ಛತ್ರಿ, ಚಳಿ ಬಂದರೆ ಹೀಟರ್. ಋತುಗಳು ಹೊರಗೆ ಸಂಭವಿಸುತ್ತಿದ್ದರೆ, ನಾವು ಒಳಗೆ ಇರುತ್ತೇವೆ. ಪ್ರಕೃತಿಯನ್ನು ‘ನಿಯಂತ್ರಿಸಬಹುದಾದ ವಸ್ತು’ ಎಂದು ಹಗುರವಾಗಿ ಭಾವಿಸುತ್ತೇವೆ. ಈ ದೂರವೇ ಮರೆವಿನ ತವರು. ಅನುಭವಕ್ಕೆ ಬಾರದ ಯಾವುದೂ ನೆನಪಿನಲ್ಲಿ ಉಳಿಯಲಾರದು.
ನೆನಪಿಸಿಕೊಂಡರೆ, ನಾವು ಬದಲಾಗಬೇಕಾಗುತ್ತದೆ. ಬದಲಾವಣೆ ಈಗಿನ ಅನುಕೂಲವನ್ನು, ಸೌಕರ್ಯವನ್ನು, ವೇಗವನ್ನು ಕಡಿಮೆ ಮಾಡಬಹುದು. ನಾವು ಅದಕ್ಕೆ ಆಂತರಿಕವಾಗಿ ಸಿದ್ಧರಿಲ್ಲ. ಆದ್ದರಿಂದ ಮರೆಯುವುದು ಸುಲಭ ದಾರಿ. ಮರೆವು ಕೇವಲ ಅಜ್ಞಾನವಲ್ಲ. ಅದೊಂದು ರಕ್ಷಣಾ ಹೊದಿಕೆ. ನಾವು ನಮ್ಮ ಸುತ್ತ ನಿರ್ಮಿಸಿಕೊಂಡಿರುವ comfort zone ಅನ್ನು ರಕ್ಷಿಸಿಕೊಳ್ಳಲು ಈ ಮರೆವಿನ ಮುಸುಕು. ಆದರೆ ಆ ರಕ್ಷಣೆಯೇ ನಮ್ಮನ್ನು ಅಪಾಯದತ್ತ ಕೊಂಡೊಯ್ಯುತ್ತಿದೆ. ಯಾಕೆಂದರೆ ವಾಸ್ತವದಲ್ಲಿ ಕಂಫರ್ಟ್ ಝೋನ್ ಎನ್ನುವುದೇ ಒಂದು ದೊಡ್ಡ ಭ್ರಮೆ. ಎಷ್ಟು ಕಾಲ ನಾವು ಈ ಜಾಣ ಮರೆವಿನ ಮರೆಯಲ್ಲಿ ಇರಬಹುದು? ಎಷ್ಟು ಕಾಲ ಭೂಮಿ ನಮ್ಮ ಮರೆವನ್ನು ಸಹಿಸಬಹುದು?
ಹಾಗಾದರೆ ಈ ಮರೆವಿನಲ್ಲಿ ನಮ್ಮ ಅಹಂಕಾರ ಅಡಗಿದೆಯೇ?
ಸಮಸ್ಯೆ ಹೊರಗೆ ಇದ್ದಿದ್ದರೆ ಸುಲಭವಿತ್ತು. ಕಾರ್ಖಾನೆಗಳನ್ನು ಮುಚ್ಚಬಹುದು, ಕಾನೂನುಗಳನ್ನು ತರಬಹುದು, ತಂತ್ರಜ್ಞಾನವನ್ನು ಬದಲಾಯಿಸಬಹುದು. ಆದರೆ ಸಮಸ್ಯೆ ನಮ್ಮೊಳಗಿನ ಅಹಂಕಾರದಲ್ಲಿದ್ದರೆ…?
ಹೌದು. ನಮ್ಮ ಮರೆವಿನ ಆಳದಲ್ಲಿ ಅಹಂಕಾರವಿದೆ.
ತಾನು ಪ್ರಕೃತಿಯ ನಿಯಮಗಳಿಗೆ ಬದ್ಧನಾದ ಜೀವಿಯಲ್ಲಾ, ಬದಲಿಗೆ ಪ್ರಕೃತಿಯನ್ನು ಆಳುವ ಯಜಮಾನ ಎಂಬ ಕಲ್ಪನೆಯೇ ಈ ಜಾಣ ಮರೆವಿಗೆ ಮೂಲ.’ಅಹಂಕಾರ’ ಎಂದರೆ ಕೇವಲ ದುರಾಶೆಯಲ್ಲ, ಅದು ‘ತಾನು ಪ್ರಕೃತಿಗಿಂತ ಭಿನ್ನ ಮತ್ತು ಶ್ರೇಷ್ಠ’ ಎಂದು ಭಾವಿಸುವ ಪ್ರತ್ಯೇಕತೆಯ ಭಾವನೆ. ಮಾನವನ ಮನಸ್ಸು ತನ್ನನ್ನು ‘ಸೃಷ್ಟಿಯ ಶಿಖರ’ ಎಂದು ಕರೆದುಕೊಂಡ ದಿನವೇ, ಪ್ರಕೃತಿಯ ಉಳಿದ ಜೀವಜಾಲವನ್ನು ತನ್ನ ಅಡಿಯಾಳಿನಂತೆ ಭಾವಿಸಿತು. ಆದ್ದರಿಂದ ಚಿಂತಕರು ಹೇಳಿದಾಗ, ವಿಜ್ಞಾನಿಗಳು ತೋರಿಸಿದಾಗ, ನಾವು ಕೇಳುತ್ತೇವೆ. ಆದರೆ ಆ ಕ್ಷಣ ಮುಗಿದ ಕೂಡಲೇ ಅಹಂಕಾರ ಮತ್ತೆ ಎದ್ದುನಿಂತು ಹೇಳುತ್ತದೆ– “ಇದೆಲ್ಲ ನಿಜವಿರಬಹುದು. ಆದರೆ ನನಗಿದು ಅನ್ವಯಿಸುವುದಿಲ್ಲಾ… ನನ್ನಿಂದಾಗಿ ಏನೂ ಆಗುವುದಿಲ್ಲ. ನಾನು ಸಣ್ಣವನು” ಅಥವಾ ಇನ್ನೊಂದು ರೂಪದಲ್ಲಿ– “ನಾನು ಎಲ್ಲಕ್ಕಿಂತ ಬುದ್ಧಿವಂತ, ನಾನು ಪರಿಹರಿಸಬಲ್ಲೆ. ನನ್ನಲ್ಲಿ ತಂತ್ರಜ್ಞಾನವಿದೆ, ಬುದ್ಧಿವಂತಿಕೆಯಿದೆ, ಏನಾದರೂ ಮಾಡುತ್ತೇನೆ.” ಈ ಎರಡೂ ಸ್ವಗತಗಳ ಹಿಂದೆ ಅಹಂಕಾರವೇ ಇದೆ. ಒಂದು ತನ್ನನ್ನು ಚಿಕ್ಕದಾಗಿ ತೋರಿಸಿ ಜವಾಬ್ದಾರಿಯಿಂದ ತಪ್ಪಿಸಿಕೊಂಡರೆ, ಇನ್ನೊಂದು ತನ್ನನ್ನು ದೊಡ್ಡದಾಗಿ ತೋರಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತದೆ. ಎರಡರಲ್ಲೂ ಅಹಂಕಾರದ ಹಿಂದೆ ಅಡಗಿದ ಮರವೇ ಉಳಿಯುತ್ತದೆ. ಆ ಮರೆವನ್ನು ಸರಿಸಲು ಸಾಧ್ಯವಾದರೆ, ವಿಶ್ವದಲ್ಲಿ ತಾನು ಕೇವಲ ಒಂದು ಸಣ್ಣ ಜೀವಕೋಶ, ಅತಿ ಸಣ್ಣ ಕಣ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಪರಸ್ಪರಾವಲಂಬನೆಯ ಸತ್ಯ ತಿಳಿದಾಗ ಚಿಕ್ಕವರಾಗುತ್ತೇವೆ. ನಮಗದು ಬೇಡ, ಆದ್ದರಿಂದ ನಾವು ಸತ್ಯವನ್ನು ಅಲಕ್ಷಿಸಿ ಮರೆವಿನ ಆಟ ಮುಂದುವರಿಸುತ್ತೇವೆ. ಅಹಂಕಾರವನ್ನು ಬದಲಾಯಿಸುವುದೆಂದರೆ ‘ನಾನು’ ಬದಲಾಗುವುದು. ಅದಕ್ಕೆ ಯಾರೂ ತಯಾರಿಲ್ಲಾ… ಅಹಂಕಾರ ಹೇಳುತ್ತದೆ– “ನಾನು ಮುಖ್ಯ. ನನ್ನ ಅನುಕೂಲ ಮುಖ್ಯ. ನನ್ನ ವೇಗ ಮುಖ್ಯ. ನನ್ನ ಸುಖ ಮುಖ್ಯ.” ಈ ಕಲ್ಪನೆಗಳನ್ನು ಬಿಡುವುದು ಸುಲಭವಲ್ಲ. ಏಕೆಂದರೆ ಆ ಮಾತುಗಳೇ ನಮ್ಮನ್ನು “ನಾವು” ಎಂದು ಭಾವಿಸುವಂತೆ ಮಾಡುತ್ತವೆ. ಅವುಗಳನ್ನು ಬಿಟ್ಟರೆ, ನಾವು ಯಾರು ಎನ್ನುವ ಪ್ರಶ್ನೆ ಉಳಿಯುತ್ತದೆ. ಆ ಪ್ರಶ್ನೆ ಹಾಕಿಕೊಳ್ಳಲು ನಾವು ತಯಾರಿಲ್ಲಾ.
ಬಹುಶಃ ಈ ಶತಮಾನದ ಅತ್ಯಂತ ದೊಡ್ಡ ಪ್ರಶ್ನೆ—”ಭೂಮಿಯನ್ನು ಹೇಗೆ ಉಳಿಸಬೇಕು?” ಎನ್ನುವುದಲ್ಲ. “ಮನುಷ್ಯನು ತನ್ನ ಅಹಂಕಾರದಿಂದ ಹೇಗೆ ಹೊರಬರಬೇಕು?” ಎನ್ನುವುದು.
ಅಹಂಕಾರವು ತನ್ನ ಅಸ್ತಿತ್ವವನ್ನು ಸಂಗ್ರಹಣೆಯ ಮೂಲಕ, ವೇಗದ ಮೂಲಕ ಸ್ಥಿರಗೊಳಿಸಿಕೊಳ್ಳುತ್ತಿರುತ್ತದೆ. ಮಣ್ಣು, ಮರ, ನೀರು, ಖನಿಜ—ಎಲ್ಲವನ್ನೂ ವಸ್ತುವಾಗಿಸಿ ತನ್ನ ‘ಒಡೆತನ’ವನ್ನು ಪ್ರದರ್ಶಿಸುವುದರಲ್ಲೇ ಅದರ ತೃಪ್ತಿಯಿದೆ. ಅಹಂಕಾರಕ್ಕೆ ನಿರಂತರವಾಗಿ ಆಹಾರ ಬೇಕು; ಆ ಆಹಾರವೇ ‘ಸಂಗ್ರಹಣೆಯ ವ್ಯಸನ’. ಆರಂಭದಲ್ಲಿ ಸಂಗ್ರಹಣೆ ಅಗತ್ಯವಾಗಿತ್ತು. ಹಸಿವಾದಾಗ ತಿನ್ನಲು, ಚಳಿಯಾದಾಗ ಹೊದೆಯಲು, ಮಳೆ ಬಂದಾಗ ಆಶ್ರಯಿಸಲು. ಆಗ ಸಂಗ್ರಹಣೆ ಜೀವನದ ಭಾಗವಾಗಿತ್ತು. ಪ್ರಕೃತಿಯಲ್ಲೂ ಸಂಗ್ರಹಣೆ ಇದೆ. ಇರುವೆಗಳು ಸಂಗ್ರಹಿಸುತ್ತವೆ. ಅಳಿಲುಗಳು ಸಂಗ್ರಹಿಸುತ್ತವೆ. ಆದರೆ ಅವುಗಳಿಗೆ “ಸಾಕು” ಎನ್ನುವುದು ಗೊತ್ತು. ನಾವು “ಸಾಕು” ಎನ್ನುವುದನ್ನು ಮರೆತಾಗ, ಭಯವನ್ನು ಸಂಗ್ರಹಣೆಯಿಂದ ಮುಚ್ಚತೊಡಗಿದಾಗ, “ನನ್ನದು” ಎನ್ನುವುದನ್ನು ಗಟ್ಟಿ ಮಾಡತೊಡಗಿದಾಗ, ಹೋಲಿಕೆಯಲ್ಲಿ ಸೋಲದಿರಲು ಹೆಚ್ಚು ಹೆಚ್ಚು ಕೂಡಿಹಾಕತೊಡಗಿದಾಗ ಸಂಗ್ರಹಣೆ ಅಗತ್ಯದಿಂದ ಹೊರಬಂದು, ವ್ಯಸನವಾಯಿತು… ಆಗ ಸಂಗ್ರಹಿಸುವುದೇ ಒಂದು ರುಚಿಯಾಗುತ್ತದೆ. ಆಗ ಅಹಂಕಾರವನ್ನು ಮೀರಿ, ಸಂಗ್ರಹಣೆಯೇ ನಮ್ಮನ್ನು ಓಡಿಸುತ್ತದೆ. ಈ ಓಟವು ಕೇವಲ ತಂತ್ರಜ್ಞಾನದ್ದಲ್ಲ, ನಮ್ಮ ಜೀವನಶೈಲಿಯದ್ದು. ಪ್ರಕೃತಿಯ ಗಡಿಯಾರದಲ್ಲಿ ನಿಮಿಷದ ಮುಳ್ಳನ್ನು ಮನುಷ್ಯನು ಗಂಟೆಯ ವೇಗದಲ್ಲಿ ಓಡಿಸಿದ್ದಾನೆ. ವೇಗದ ಕುದುರೆ ಏರಿದ ನಮಗೆ ಋತುವಿನಲ್ಲಿ ನಡೆಯುವ ಪ್ರಕೃತಿ ನಿಧಾನವೆನಿಸುತ್ತದೆ…
ನಾವೇಕೆ ಇಷ್ಟು ವೇಗವಾಗಿ ಓಡುತ್ತಿದ್ದೇವೆ ಗೊತ್ತೇ? ಏಕೆಂದರೆ, ಒಂದಿಷ್ಟು ಕ್ಷಣ ನಿಂತುಬಿಟ್ಟರೆ, ನಿಶ್ಶಬ್ದತೆ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ಆ ನಿಶ್ಶಬ್ದತೆಯಲ್ಲಿ ನಮಗೆ ಮಣ್ಣಿನ ವಾಸನೆ ಗೊತ್ತಾಗುತ್ತದೆ, ನದಿಯ ಧ್ವನಿ ಹೃದಯಕ್ಕೆ ಹತ್ತಿರವಾಗುತ್ತದೆ, ಗಾಳಿಯ ಹಳಹಳಿ ಕಿವಿಗೆ ಬೀಳುತ್ತದೆ. ನಮ್ಮ ಮರೆವು ಮತ್ತು ಅಹಂಕಾರಗಳು ಬೆತ್ತಲಾಗುತ್ತವೆ. ಆ ಸತ್ಯವನ್ನು ಎದುರಿಸುವ ಧೈರ್ಯವಿಲ್ಲದೆ, ನಾವು ‘ವೇಗ’ವನ್ನು ಸೃಷ್ಟಿಸಿಕೊಂಡು ಅದರ ಮರೆಯಲ್ಲಿ ಅಡಗಿ ಕುಳಿತಿದ್ದೇವೆ. ಈ ಅತಿಯಾದ ವೇಗವು ನಮಗೆ ಆಲೋಚಿಸಲು ಸಮಯವನ್ನೇ ನೀಡುವುದಿಲ್ಲ; ಅದು ನಮ್ಮನ್ನು ಯಾಂತ್ರಿಕವಾಗಿಸಿ ವಾಸ್ತವ ಸತ್ಯವನ್ನು ನೋಡಲು ಸಾಧ್ಯವಾಗದಂತೆ ಓಡಿಸುತ್ತಲೇ ಇರುತ್ತದೆ. ಗಮ್ಯವಿಲ್ಲದ ಈ ಓಟದಲ್ಲಿ ನಮಗೆ ನಿಸರ್ಗದ ಸೌಂದರ್ಯ ಸವಿಯುವ, ಅದರ ಋಣವನ್ನು ನೆನಪಿಸಿಕೊಳ್ಳುವ ವ್ಯವಧಾನವಾದರೂ ಎಲ್ಲಿದೆ?
ಇಂಗ್ಲೆಂಡಿನ ಆ ಅಸಹಜ ಬಿಸಿಲು ನನ್ನನ್ನು ಬೆಚ್ಚಿಬೀಳಿಸಿದ್ದು ಮಾತ್ರವಲ್ಲ. ಅದು ಒಂದು ಕ್ರೂರ ಸತ್ಯವನ್ನು ಎದೆಗೆ ನಾಟುವಂತೆ ಮಾಡಿತು— ಹವಾಮಾನ ವೈಪರೀತ್ಯವು ಭೂಗೋಳದ ಸಮಸ್ಯೆಯಲ್ಲ. ಅದು ನಮ್ಮ ಬದುಕಿನ ಸಮಸ್ಯೆ. ನಮ್ಮ ರಾಜಕೀಯದ ಸಮಸ್ಯೆ. ನಮ್ಮ ಆರ್ಥಿಕತೆಯ ಸಮಸ್ಯೆ. ನಮ್ಮ ನೈತಿಕತೆಯ ಸಮಸ್ಯೆ. ಅದಕ್ಕಿಂತಲೂ ಆಳವಾಗಿ—ನಮ್ಮ ಅಹಂಕಾರದ ಸಮಸ್ಯೆ.
ಮುಂದೇನು? ಬದಲಾವಣೆ ಎಲ್ಲಿಂದ?
“ಪ್ರಕೃತಿಯನ್ನು ಹೇಗೆ ಉಳಿಸಬೇಕು?” ಎನ್ನುವುದಕ್ಕೂ ಮುನ್ನ “ಪ್ರಕೃತಿಯಿಂದ ನಾವೆಷ್ಟು ದೂರ ಹೋಗಿದ್ದೇವೆ?” ಎನ್ನುವುದನ್ನು ಪರಾಮರ್ಶಿಸಿದರೆ ಮುಂದಿನ ನಡೆ ಸ್ಪಷ್ಟವಾಗಿ ಕಂಡೀತು.
ನನಗೆ “ಪ್ರಕೃತಿಗೆ ಹಿಂದಿರುಗುವುದು” ಎಂಬ ಮಾತು ಅಷ್ಟಾಗಿ ಸರಿಕಾಣುವುದಿಲ್ಲ. ನಾವು ಶಿಲಾಯುಗಕ್ಕೆ ಹಿಂದಿರುಗಲು ಸಾಧ್ಯವಿಲ್ಲ; ಹಿಂದಿರುಗಬೇಕಾದ ಅಗತ್ಯವೂ ಇಲ್ಲ. ವಿಜ್ಞಾನ ಇರಲಿ. ತಂತ್ರಜ್ಞಾನ ಇರಲಿ. ನಗರಗಳಿರಲಿ. ಆದರೆ ಇವೆಲ್ಲವೂ ಜೀವಜಾಲದೊಳಗೆ ತಮ್ಮ ಸ್ಥಾನವನ್ನೂ, ತಮ್ಮ ಇತಿಮಿತಿಯನ್ನೂ ಅರಿತುಕೊಳ್ಳುವಂತಾಗಲಿ. ತಂತ್ರಜ್ಞಾನ ನಮ್ಮ ಶತ್ರುವಲ್ಲ. ಮಾನವ ಬುದ್ಧಿಯ ಸುಂದರ ಸಾಧನೆಗಳಲ್ಲಿ ಅದೂ ಒಂದು. ಆದರೆ ತಂತ್ರಜ್ಞಾನ ನಮ್ಮ ಕಲ್ಪನೆಯನ್ನು ಒಂದು ವಿಚಿತ್ರ ನಂಬಿಕೆಯ ಕಡೆಗೆ ಕರೆದೊಯ್ದಿದೆ— ಯಾವ ಸಮಸ್ಯೆಯಾದರೂ, ಇನ್ನೊಂದು ಹೊಸ ತಂತ್ರಜ್ಞಾನ ಅದನ್ನು ಪರಿಹರಿಸುತ್ತದೆ. ಕೆಲವು ಚಿಂತಕರು ಇದನ್ನು technological solutionism ಎಂದು ಕರೆಯುತ್ತಾರೆ. ಆದರೆ ನಮ್ಮ ಸಮಸ್ಯೆಯ ಮೂಲ ಕಾರ್ಬನ್‌ಗಿಂತ ಆಳದಲ್ಲಿದ್ದು, ಅದು ಅಹಂಕಾರವಾಗಿದೆ…
ಒಬ್ಬ ಮನುಷ್ಯ ಕನ್ನಡಿಯ ಮೇಲೆ ಧೂಳು ಕುಳಿತಿದೆ ಎಂದುಕೊಂಡು ಪ್ರತಿದಿನ ಹೊಸ ಕನ್ನಡಿ ಕೊಂಡುಕೊಳ್ಳುತ್ತಾನೆ. ಆದರೆ ಧೂಳು ಕನ್ನಡಿಯ ಮೇಲಿಲ್ಲ, ಅವನ ಕಣ್ಣಿನಲ್ಲಿದ್ದರೆ? ತಂತ್ರಜ್ಞಾನ ಹೊಸ ಕನ್ನಡಿಯನ್ನು ಕೊಡಬಹುದು. ದೃಷ್ಟಿಯನ್ನು ಕೊಡಲಾರದು.ಆದ್ದರಿಂದ ಇಂದಿನ ದೊಡ್ಡ ಪ್ರಶ್ನೆ ಹವಾಮಾನದ ಬಗ್ಗೆ ಮಾತ್ರವಲ್ಲ. ಅದು ಪ್ರಜ್ಞೆಯ ಬಗ್ಗೆ. ಮನುಷ್ಯ ಮತ್ತೆ ಭೂಮಿಯ ಮಗನೆಂದು ತನ್ನನ್ನು ಅರಿಯುವನೆ? ಅಥವಾ ಭೂಮಿಯ ಮಾಲೀಕನೆಂಬ ಭ್ರಮೆಯಲ್ಲಿಯೇ ಉಳಿಯುವನೆ? ಈ ಪ್ರಶ್ನೆಗೆ ವಿಜ್ಞಾನ ಮಾತ್ರ ಉತ್ತರ ಕೊಡಲಾರದು. ರಾಜಕೀಯವೂ ಅಲ್ಲ. ಆರ್ಥಿಕತೆಯೂ ಅಲ್ಲ. ಉತ್ತರಿಸಬೇಕಾಗಿರುವುದು ಮನುಷ್ಯನ ಒಳಗಿನ ಮನುಷ್ಯನೇ. ಆದ್ದರಿಂದ ಹವಾಮಾನ ವೈಪರೀತ್ಯವನ್ನು ಕೇವಲ Climate Crisis ಎಂದು ನೋಡುವುದಕ್ಕಿಂತ, ಒಂದು Consciousness Crisis ಎಂದು ನೋಡುವ ಕ್ಷಣದಿಂದಲೇ ಬಹುಶಃ ನಿಜವಾದ ಬದಲಾವಣೆ ಆರಂಭವಾಗಬಲ್ಲದು.
ಹವಾಮಾನ ವೈಪರೀತ್ಯವನ್ನು ತಡೆಯುವುದೆಂದರೆ ಕೇವಲ ಇಂಧನವನ್ನು ಬದಲಿಸುವುದಲ್ಲ. ನಮ್ಮ ಸಂಗ್ರಹಣೆಯ ದುರಾಸೆಯನ್ನು ಪ್ರಶ್ನಿಸುವುದು. ನಮ್ಮ ಓಟದ ವೇಗವನ್ನು ತಗ್ಗಿಸುವುದು. “ಇನ್ನಷ್ಟು” ಎಂಬ ಹಸಿವಿಗೆ ಒಂದು ಮಿತಿ ಹಾಕುವುದು ಮತ್ತು ಸೃಷ್ಟಿಯ ಮುಂದೆ ಮತ್ತೆ ವಿನಮ್ರವಾಗಿ ನಿಲ್ಲುವುದನ್ನು ಕಲಿಯುವುದು. ಏಕೆಂದರೆ ಅಹಂಕಾರ ನಮ್ಮನ್ನು ರಕ್ಷಿಸುತ್ತದೆ ಎಂಬುದು ನಮ್ಮ ದೊಡ್ಡ ಭ್ರಮೆ. ಋತು ತಪ್ಪಿದಾಗ, ಸುಡು ಬಿಸಿಲಲ್ಲಿ ಬೇಯುವಾಗ, ಮಳೆ ಬಾರದಾಗ ಅದು ನಮ್ಮನ್ನು ರಕ್ಷಿಸುವುದಿಲ್ಲ. ಒಣಗುತ್ತಿರುವ ನದಿಯ ಮುಂದೆ, ಬಿಸಿಯಾಗುತ್ತಿರುವ ಮಣ್ಣಿನ ಮುಂದೆ, ಕಳೆದುಹೋಗುತ್ತಿರುವ ಜೀವಿಗಳ ಮುಂದೆ—ನಮ್ಮ ಅಧಿಕಾರದ ಎಲ್ಲಾ ಭ್ರಮೆಗಳೂ ನಿಧಾನವಾಗಿ ಕರಗುತ್ತವೆ.
ಪ್ರಕೃತಿಯ ಸಾಂಗತ್ಯದಲ್ಲಿ ಬದುಕುವುದು ಎಂದರೆ ಕೇವಲ ಕಾಡು ಉಳಿಸುವುದಲ್ಲ. ನಿಧಾನವಾಗುವುದನ್ನು ಕಲಿಯುವುದು. ಋತು ನಿಧಾನ. ಮರ ಬೆಳೆಯುವುದು ನಿಧಾನ. ಮಣ್ಣು ಬೀಜವನ್ನು ಹಿಡಿದುಕೊಳ್ಳುವುದೂ ನಿಧಾನ. ನದಿ ತನ್ನ ದಾರಿಯನ್ನು ಕಂಡುಕೊಳ್ಳುವುದೂ ನಿಧಾನ. ನಾವು ಮಾತ್ರ ಎಲ್ಲವನ್ನೂ ವೇಗಗೊಳಿಸಲು ಹೊರಟಿದ್ದೇವೆ. ಒಂದು ಊಟವನ್ನು ನಿಧಾನವಾಗಿ ತಿನ್ನುವುದು. ಒಂದು ದಾರಿಯನ್ನು ನಿಧಾನವಾಗಿ ನಡೆಯುವುದು. ಒಬ್ಬ ಮನುಷ್ಯನ ಮಾತನ್ನು ಮಧ್ಯೆ ಅಡ್ಡಿಪಡಿಸದೆ ಆಲಿಸುವುದು. ನಮ್ಮ ನೆಲದಲ್ಲಿ ಬೆಳೆದ ಆಹಾರವನ್ನು ತಿನ್ನುವುದು. ನಾವು ಎಷ್ಟು ಹೆಚ್ಚು ಹೊಂದಿದ್ದೇವೆ ಎನ್ನುವುದಕ್ಕಿಂತ, ನಮಗೆ ನಿಜವಾಗಿ ಎಷ್ಟು ಬೇಕು ಎಂದು ಕೇಳಿಕೊಳ್ಳುವುದು. ನಾವು ಎಷ್ಟು ವೇಗವಾಗಿ ಓಡುತ್ತಿದ್ದೇವೆ ಎನ್ನುವುದಕ್ಕಿಂತ, ಓಟದ ಕೊನೆಯಲ್ಲಿ ನಾವು ಎಲ್ಲಿಗೆ ತಲುಪುತ್ತಿದ್ದೇವೆ ಎಂದು ಒಮ್ಮೆ ಹಿಂದಿರುಗಿ ನೋಡುವುದು… ಇವೆಲ್ಲವೂ ಸಣ್ಣ ಸಂಗತಿಗಳಂತೆ ಕಾಣಬಹುದು. ಆದರೆ ಬಹುಶಃ ನಾಗರಿಕತೆಗಳ ದೊಡ್ಡ ಬದಲಾವಣೆಗಳು ಯಾವಾಗಲೂ ಸಣ್ಣ ಅಭ್ಯಾಸಗಳಲ್ಲಿಯೇ ಆರಂಭವಾಗುತ್ತವೆ. ಬಹುಶಃ ಭೂಮಿಗೆ ನಮ್ಮಿಂದ ಬೇಕಿರುವುದು ಇನ್ನೊಂದು ಮಹಾನ್ ಆವಿಷ್ಕಾರವಲ್ಲ. ಸ್ವಲ್ಪ ವಿನಮ್ರತೆ. ಸ್ವಲ್ಪ ನಿಧಾನ. ಸ್ವಲ್ಪ ಮಿತಿ. ಮತ್ತು ಮತ್ತೆ ನೆನಪಿಸಿಕೊಳ್ಳುವ ಒಂದು ಸರಳ ಸತ್ಯ- ನಾವು ಭೂಮಿಯ ಮೇಲೆ ಬದುಕುತ್ತಿಲ್ಲ. ನಾವು ಭೂಮಿಯೊಳಗೇ ಬದುಕುತ್ತಿದ್ದೇವೆ. ನಮ್ಮ ಉಸಿರಿನಲ್ಲಿ ಮರಗಳಿವೆ. ನಮ್ಮ ರಕ್ತದಲ್ಲಿ ಸಮುದ್ರಗಳಿವೆ. ನಮ್ಮ ದೇಹದಲ್ಲಿ ಮಣ್ಣಿನ ನೆನಪುಗಳಿವೆ…
ಬೆಂಗಳೂರಿನಿಂದ ಲಂಡನ್ನಿಗೆ ಹಾರುವಾಗ, ವಿಮಾನದ ಕಿಟಕಿಯಿಂದ ಕೆಳಗೆ ನೋಡುತ್ತಾ ಖಂಡಗಳನ್ನು ದಾಟುತ್ತಿದ್ದೇನೆ ಎಂದು ಪುಳಕಗೊಂಡಿದ್ದೆ. ದೇಶಗಳು ಒಂದರ ಹಿಂದೆ ಒಂದಾಗಿ ಕೆಳಗೆ ಸರಿಯುತ್ತಿದ್ದವು. ಸಮುದ್ರಗಳು, ಪರ್ವತಗಳು, ನಗರಗಳು—ಎಲ್ಲವೂ ಒಂದೇ ಭೂಮಿಯ ಮೇಲೆ ಹರಡಿಕೊಂಡಿದ್ದವು. ಆಗ ನನಗೆ ಗೊತ್ತಿರಲಿಲ್ಲ- ನಾನು ಖಂಡಗಳನ್ನು ದಾಟುತ್ತಿದ್ದರೂ, ಮಾನವ ನಾಗರಿಕತೆಯ ಒಂದೇ ಕಥೆಯೊಳಗೇ ಸಂಚರಿಸುತ್ತಿದ್ದೆ.
ಈಗ ಮನುಷ್ಯ ತನ್ನ ಬಗ್ಗೆ ಕಟ್ಟಿಕೊಂಡಿರುವ ಕಥೆಯನ್ನು ಬದಲಾಯಿಸಲೇ ಬೇಕಾದ ಸಮಯ ಬಂದಿದೆ…
ನಾಗರಿಕತೆಗಳು ಮೊದಲು ಕಲ್ಪನೆಗಳಲ್ಲಿ ಬದಲಾಗುತ್ತವೆ. ನಂತರವೇ ರಾಜಕೀಯ, ಆರ್ಥಿಕತೆ ಮತ್ತು ತಂತ್ರಜ್ಞಾನಗಳು ಅವುಗಳನ್ನು ಅನುಸರಿಸುತ್ತವೆ. ಇತಿಹಾಸ ನಮಗೆ ಮತ್ತೊಂದು ಸಂಗತಿಯನ್ನೂ ನೆನಪಿಸುತ್ತದೆ—ಮನುಷ್ಯ ಸಾಮಾನ್ಯವಾಗಿ ಸಂಕಟಕ್ಕೂ ಮುನ್ನ ಬದಲಾಗುವುದಿಲ್ಲ. ಸಂಕಟದ ಮೂಲಕವೇ ಬದಲಾಗುತ್ತಾನೆ. ಗುಲಾಮಗಿರಿಯ ವಿರುದ್ಧದ ನೈತಿಕ ಅರಿವು, ಮಹಿಳೆಯರ ಹಕ್ಕುಗಳು, ಕಾರ್ಮಿಕರ ಹಕ್ಕುಗಳು, ವಸಾಹತುಶಾಹಿಯ ವಿರುದ್ಧದ ಹೋರಾಟ, ಪ್ರಜಾಪ್ರಭುತ್ವದ ಅಗತ್ಯ—ಇವೆಲ್ಲವೂ ದೀರ್ಘ ಹೋರಾಟಗಳು ಮತ್ತು ಸಂಕಟಗಳ ನಂತರ ಸಾಮಾಜಿಕ ಪ್ರಜ್ಞೆಯಾಗಿ ಬೆಳೆದವು. ಬಹುಶಃ ಪರಿಸರವೂ ಅಂತಹ ಒಂದು ನೈತಿಕ ತಿರುವಿನ ಎದುರು ನಿಂತಿದೆ. ಹಿಂದಿನ ಅನೇಕ ಸಂಕಟಗಳು ಮನುಷ್ಯರ ನಡುವೆ ಇದ್ದವು. ಆದರೆ ಈ ಬಾರಿ ಈ ಸಂಕಟ ಮನುಷ್ಯ ಮತ್ತು ಜೀವವಲಯದ ನಡುವೆ ಇದೆ.
ಇಲ್ಲಿ ನಾವೊಂದು ಸತ್ಯವನ್ನು ನೆನಪಿಡಲೇ ಬೇಕಾಗುತ್ತದೆ- ನಾವು ಭೂಮಿಯನ್ನು ಉಳಿಸುತ್ತಿದ್ದೇವೆ ಎನ್ನುವುದೂ ನಮ್ಮ ಅಹಂಕಾರದ ಮತ್ತೊಂದು ರೂಪವೇ ಇರಬಹುದು. ಏಕೆಂದರೆ ಭೂಮಿಗೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಶಕ್ತಿಯಿದೆ; ಪ್ರಕೃತಿಗೆ ಮನುಷ್ಯನ ಅಗತ್ಯವಿಲ್ಲ, ಆದರೆ ಮನುಷ್ಯನಿಗೆ ಪ್ರಕೃತಿಯ ಅಗತ್ಯವಿದೆ. ಹೀಗಾಗಿ, ಮುಂದಿನ ಹೆಜ್ಜೆ ಹೊಸ ತಂತ್ರಜ್ಞಾನದ ವೈಭವದಲ್ಲೂ ಇಲ್ಲ, ಬೃಹತ್ ರಾಜಕೀಯ ಒಪ್ಪಂದಗಳಲ್ಲೂ ಇಲ್ಲ. ಅದು ನಮ್ಮ ದಿನನಿತ್ಯದ ಸಣ್ಣ ನಿಧಾನಗಳಲ್ಲಿ, ವಿನಮ್ರತೆಯ ಪಾತಳಿಯಲ್ಲಿ ಅಡಗಿದೆ. ನಾವು ಮಣ್ಣಿನಿಂದ ಬಂದವರು, ಮಣ್ಣಿನಲ್ಲೇ ಬೆರೆಯುವವರು ಎನ್ನುವ ಸರಳ ಸತ್ಯಕ್ಕೆ ಮರಳುವುದೇ ನಮ್ಮಲ್ಲಿ ಆಗಲೇಬೇಕಾದ ಪರಿವರ್ತನೆ. ಅಹಂಕಾರದ ವೇಗವನ್ನು ತೊರೆದು, ಸೃಷ್ಟಿಯ ಸಹಜ ಲಯಕ್ಕೆ ಬರುವುದೇ ಇಂದಿನ ಹಸಿರು ಪಯಣ. ನಮ್ಮ ಒಳಗಣ್ಣು ತೆರೆದರೆ ಸಾಕು, ಭೂಮಿಯ ಜ್ವರ ಇಳಿಯಲು ಬೇರೆ ಯಾವ ಮದ್ದೂ ಬೇಕಿಲ್ಲ. ಬಹುಶಃ ಈ ಶತಮಾನದ ನಿಜವಾದ ಕ್ರಾಂತಿ ಹೊರಗೆಲ್ಲೋ ನಡೆಯಬೇಕಿಲ್ಲ. ಅದು ನಮ್ಮೊಳಗೇ ಆರಂಭವಾಗಬೇಕು… ಅಲ್ಲವೆ?




