Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
Share:
Articles January 15, 2026 ಮಹಾದೇವ ಹಡಪದ

ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ

ಚಳಿಗಾಲ ಕಳೆದು ಕಡುಬೇಸಿಗೆ ಬಂತು, ಬೇಸಿಗೆಯ ಬೇಗೆಯನ್ನು ಕಟ್ ಕಟೀಲ್ ಎಂದು ಮುಗಿಲಬ್ಬರಸಿ ಸಿಡಿಲು ಹೊಡೆದು ಮಳೆಗಾಲವನ್ನು ತಂದಿತು. ನೋಡನೋಡುತ್ತಿದ್ದಂತೆ ಬರಿದಾದ ಹೊಳೆ ಮೈದುಂಬಿ ಹರಿಯತೊಡಗಿತು. ಸದೋದಿತ ಸುರಿವ ಮಳೆಯದ್ದೊಂದು ಸ್ವರಾಲಾಪ, ಮಳೆಯನ್ನು ಆವಾಹಿಸಿಕೊಂಡ ಗಾಳಿಗೆ ಗಿಡಮರಗಳ ರೊಂಯ್ಯನೆಂಬ ಹೊಯ್ದಾಟ, ಕೆರೆತೊರೆ ಹಳ್ಳಹೊಳೆಗಳ ಭೋರ್ಗರೆತ, ಇರುವೆ ಎಂಬತ್ತನಾಲ್ಕು ಜೀವರಾಶಿಗಳ ಜುಂಜಿರ್.. ಕೊಟ್ಟರ್ ಕೊಟ್… ಬಗೆಬಗೆಯ ಸದ್ದುಗಳು. ಎಲ್ಲ ಎಲ್ಲದನ್ನೂ ವಸೂದೀಪ್ಯ ಕಿವಿಯಾರೆ ಕೇಳಿಸಿಕೊಂಡ, ಕಣ್ಣಾರೆ ಕಂಡ, ಹೊಸಬಗೆಯ ಪರಿಮಳಗಳನ್ನು ಮೂಸಿದ, ಕೆಲ ಸ್ವಾದಗಳನ್ನು ಚಪ್ಪರಿಸಿದ. ಅರಿವಿನ ದಾರಿಗೊಬ್ಬ ಗುರು ಸಿಕ್ಕಿರಲಾಗಿ ಎಲ್ಲವೂ ಇದ್ದೂ ಏನೇನೂ ಇಲ್ಲದ ಹೊರಗಿನ ಬಯಲನ್ನು ನಿಧನಿಧಾನಕ್ಕೆ ಒಳಗೂ ಇಳಿಸಿಕೊಳ್ಳುತ್ತ ಲಿಂಗದೊಂದಿಗೆ ದೃಷ್ಟಿಯೋಗವನ್ನು ನಡೆಸಿದ್ದ.

ಉಸಿರೆಂದರೆ ಪ್ರಾಣ. ಈ ಪ್ರಾಣವನ್ನು ಅರಿಯುವುದಕ್ಕಾಗಿ ಪ್ರತಿಕ್ಷಣವೂ ಎಚ್ಚರದಿಂದ ಇರಬೇಕಾಗಿತ್ತು. ಹಸಿವು, ತೃಷೆ, ನಿದ್ರೆ. ವಿಷಯಂಗಳೆಲ್ಲವೂ ಮರೆತು ಮನದೊಳಗೆ ಗುಹಾಂತರವಾಸಿ ಇದ್ದಾನೋ ಇಲ್ಲವೋ ಎಂಬ ಸಂದೇಹವನ್ನು ಇಟ್ಟುಕೊಳ್ಳದೆ ಬರೀ ಗಮನಿಸುತ್ತಿದ್ದ. ಗಮನಕ್ಕೆ ಬಂದ ಸಂಗತಿಯೊಂದಿಗೆ ತನ್ನ ತನು-ಮನ ಹಾಸುಹೊಯ್ಯುತ್ತಿದ್ದ. ಮೊದಲಿಗೆ ಬಸವರಸ ಆರು ದಿನಗಳ ಕಾಲ ಆರು ಬಗೆಯಲ್ಲಿ ತನ್ನೊಳಗೆ ತಾನು ಕಾಣಿಸುವ ಪರಿ ಹೇಳಿದ್ದನಲ್ಲ, ಅದೇ ಸಂಗತಿಗಳೊಟ್ಟಿಗೆ ಲಂಗೋಟಿ ತಾತ ಸೂಚಿಸುತ್ತಿದ್ದ ಲೋಕದ ಬೆರಗುಗಳನ್ನು ಬೆರೆಸುತ್ತ ನೋಡುವ ನೋಟದಲ್ಲೇ ಅನಿಮಿಷ ತತ್ವವನ್ನು ಕಂಡುಕೊಂಡ. ಅದರೊಟ್ಟಿಗೆ ಉಸಿರಾಟದ ಗತಿ-ಲಯದೊಟ್ಟಿಗೆ ಮಂದ್ರ ಸ್ವರವೂ ಸೇರಿಕೊಂಡು ಆಹಾ..! ಸಿದ್ಧಸಾಧು ಕಿರುನಾಲಗೆಯಲ್ಲಿ ಹೊರಡಿಸುತ್ತಿದ್ದ ಓಂಕಾರನಾದವು..! ಅದೇ ಪಡಿಯಚ್ಚು ಸ್ವರ ವಸೂದೀಪ್ಯನೆಂಬ ಅನಿಮಿಷ ಸಾಧಕನ ಗಂಟಲಾಳದ ಕಿರುನಾಲಗೆಯ ಸುತ್ತ ಗಗ್ಗಡಿಸುತ್ತ ಹೊರಬರತೊಡಗಿತು. ಅಂದು ಈಶಾನ್ಯಗುರುಗಳೂ ಅನಿಮಿಷದೇವ ಎಂದು ಹೆಸರಿಟ್ಟು ಕರೆದಿದ್ದರಲ್ಲ…! ಅದೇ ವಸೂದೀಪ್ಯ ಇಂದು ಎಲ್ಲ ಮೋಹಕ ವಿಷಯಾಸಕ್ತಿಗಳನ್ನು ತೊರೆದು ಅನಿಮಿಷಯೋಗಿ ಆಗುವ ದಾರಿಯಲ್ಲಿ ನಡೆದಿದ್ದ.

ಬಯಲಿನ ಸ್ವರೂಪ ಅರಿಯಲು ಹೊರಟವನಿಗೆ ದಿನ ವಾರ ತಿಥಿಗಳ ಲೆಖ್ಖ ಯಾಕೆ… ಮಳೆಗಾಲಗಳು ಎರಡು ಕಳೆದು ಎಲೆಗುಳುದುರುವ ಚಳಿಗಾಲ ಬಂದಾಗ, ಮತ್ತದೇ ಮುತ್ತುಗದ ಹೂಗಳು ಅರಳುವ ಸಮಯಕ್ಕೆ ಸರಿಯಾಗಿ ಅದೇ ಆ ಹೆಂಗಸು ಸುಜ್ಞಾನವ್ವ ತೆಪ್ಪದಲ್ಲಿ ಮತ್ತೆ ಬಂದಳು. ಹೊಳೆಯ ಮಧ್ಯದಲ್ಲಿಯೇ ತೆಪ್ಪ ತೇಲುತ್ತ ಬರುತ್ತಿರುವಾಗಲೇ ‘ಮಧುಕೇಶಾ’ ಎಂದು ಕೂಗಿ ಕರೆದಳು. ಆಕೆಯೊಂದಿಗೆ ಒಬ್ಬ ಗಂಡಸು, ಒಂದು ಮಗುವೂ ಇತ್ತು. ಯಥಾ ಪ್ರಕಾರ ಲಂಗೋಟಿ ತಾತ ತೆಪ್ಪವನ್ನೆಳೆಯಲು ಹೋದಾಗ ಅನಿಮಿಷದೇವನು ಕೈಜೋಡಿಸಿದ.

“ಕಳೆದ ಸಲದ ಕಾರ್ತಿಕ ಮುಗಿಸಿ ಊರಿಗೆ ಹೊರಟಿದ್ದಾಗ ಧ್ಯಾನದೊಳಗೆ ಮಗ್ನನಾಗಿದ್ದೆ ಮಧುಕೇಶ. ನಾ ಕೊಟ್ಟ ಅಡುಗೆಯನ್ನು ತಿನ್ನಲಿಲ್ಲ. ನೀ ಹುಡುಕುತ್ತಿದ್ದ ಮಹತ್ ಏನಾದರೂ ಅರಿವಿಗೆ ಬಂತೇನಪಾ?”
“ತಾಯಿ ಅನಿಮಿಷ ತತ್ವದೊಳಗೆ ಮನಸ್ಸಿಟ್ಟಿದ್ದರು ಅಯ್ಯಾ…”
“ಹಾಗಾದರೆ ಇವರು ಮಧುಕೇಶನಲ್ಲ, ಅನಿಮಿಷದೇವ ಅಂತಾಯ್ತು. ಅಪ್ಪಾ ಲಂಗೋಟೆಪ್ಪ… ಈತ ನನ್ನ ಮಗ ಅಲ್ಲಮ… ಇವರು…”
“ತಿಳಿಯಿತು ತಾಯಿ ಇವರು ಮಧುಕೇಶ್ವರನ ಸನ್ನಿಧಾನದಲ್ಲಿ ಮದ್ದಳೆ ನುಡಿಸುವ ನಿರಹಂಕಾರದೇವ.”

ತಲೆಬಾಗಿ ವಂದಿಸಿದರು. ಆ ಅಲ್ಲಮನೆಂಬ ಆ ಹುಡುಗನ ಕಣ್ಣಲ್ಲಿ ಅದೇನೋ ಒಂದು ಬಗೆಯ ಸೂಜಿಗಲ್ಲಿನ ಸೆಳೆತವಿತ್ತು. ಗುಂಗುರುಂಗುರಾದ ಕೂದಲಿನ ಜಡೆಕಟ್ಟಿ, ಜಡೆಗೆ ಚಂದದ ಸೂಜಿಮಲ್ಲಿಗೆಯ ಮುಡಿದಿದ್ದ. ಮೈಕೈ ತುಂಬಿಕೊಂಡಿದ್ದ ಆ ಸುಂದರಾಂಗನ ಕೆನ್ನೆಗಳು ಹಾಲಿನಂತೆ ನುಣುಪಾಗಿದ್ದವು. ಆ ತಾಯಿ ಸುಜ್ಞಾನವ್ವ ಈ ಸಲ ಬಾಳೆಕಡುಬು, ಬಿದಿರಕ್ಕಿ ಅನ್ನ ತಂದಿದ್ದಳು. ಮುತ್ತುಗದ ಎಲೆಯಲ್ಲಿ ಆ ತಾಯಿ ತನ್ನ ಕೈಯಾರೆ ಮಾಡಿ ತಂದಿದ್ದ ಅಡುಗೆಯನ್ನು ಬಡಿಸುವಾಗ ತನ್ನ ತಾಯ ಮಹಾಲೇಖೆಯದ್ದೇ ಮುಖಭಾವ ಕಂಡಿತು.

“ಯಾಕಪ್ಪಾ ಅನಿಮಿಷಯ್ಯ ನಿನ್ನ ತಾಯಿ ನೆನಪಾಯ್ತೇನು? ಸಾಧಕನಾದವನು ಎಲ್ಲ ತೊರೆದು ಸಾಧಿಸುವಂತದ್ದೇನಿಲ್ಲ. ಎಲ್ಲದರೊಳಗಿದ್ದು ಎಲ್ಲದನ್ನ ಮೀರಿದಂತಿರಬೇಕು. ನಮ್ಮ ಮಹಾರಜರ ಊರಲ್ಲೊಬ್ಬ ಕರಣಿಕ ಇದ್ದಾನಂತೆ, ನಿನ್ನದೇ ಪ್ರಾಯದವನಂತೆ, ಅವನ ಹೆಸರು…”
“ಬಸವರಸ!”
ತಟ್ಟನೇ ಉಸುರಿದ ಅಲ್ಲಮ ಬಾಯ್ದೆರೆದು.

“ನೋಡು ನನಗೆ ಮರತೆಹೋಗಿತ್ತು ಆ ಕರಣಿಕ ಬಸವರಸನ ಹೆಸರು. ಹ್ಞೂ… ಆ ಬಸವರಸ ಎಲ್ಲ ಜಂಜಡಗಳ ನಡುವೆ ತಾನು ಕಪ್ಪಡಿ ಸಂಗಮದಿಂದ ತಂದಿರುವ ಪುಟ್ಟ ಲಿಂಗದೊಳಗೆ ಸಂಗಮನಾಥನಿದ್ದಾನೆಂದು ನಂಬಿದ್ದಾನಂತೆ. ಅವನು ಮಾತನಾಡಿದರೆ ಇಡೀ ನಮ್ಮ ರಾಜರ ಪಟ್ಟಣವಾದ ಕಲ್ಯಾಣದ ಮಂದಿಯೇ ಬೆರಗಾಗತಾರಂತೆ. ಅಕ್ಕ, ಸೋದರಮಾವ, ಸೋದರಮಾವನ ಮಕ್ಕಳು, ಹೆಂಡತಿ ಎಲ್ಲಾ ಇದ್ದೂ ತನ್ನರಿವಿನ ಲಿಂಗದೊಟ್ಟಿಗೆ ಸಾಧನಾ ಮಾಡತಾನಂತೆ.”
ಅನಿಮಿಷಯ್ಯನ ಕಿವಿಗೆ ಬಸವರಸನ ಹೆಸರು ಬಿದ್ದದ್ದೆ ತನ್ನ ರಟ್ಟೆಗೆ ಕಟ್ಟಿಕೊಂಡಿದ್ದ ದೃಷ್ಟಿಯೋಗದ ಲಿಂಗ ನೆನಪಾಯ್ತು. ತನಗೆ ಅರಿವಿಲ್ಲದಂತೆ ಅವನ ಕೈ ರಟ್ಟೆಗೆ ಹೋಯಿತು. ಬಸವರಸರ ತೇಜಸ್ಸು ಆ ಸೀಮೆಯಿಂದ ನದಿಗಳ ದಾಟಿಕೊಂಡು ಬನವಸೆಗೆ ಬಂದು ಮುಟ್ಟಿತಲ್ಲ ಎಂಬ ಅಭಿಮಾನ ಮೂಡಿತು.

“ನಿನ್ನ ಮುಂಗೈಗೆ ಕಟ್ಟಿರುವ ದಾರ ಈ ನೆಲದ ಗುರುತಿನದ್ದು ಅನಿಮಿಷಯ್ಯಾ. ನೀನು ಈ ಸೀಮೆಯಲ್ಲಿ ಯಾರ ಬಳಿ ಹೋದರೂ ನಮ್ಮವನೆಂದು ಕರೆದು ಮಾತಾಡಿಸುತ್ತಾರೆ. ಈ ದಾರದ ಗುರುತು ಕುಲಮದದ ಗುರುತಲ್ಲ, ಅರಿವಿನ ಯಾತ್ರಿಕರ ಗುರುತು ನನ್ನಪ್ಪಾ… ನೀನು ಸಾಧಿಸ ಬಂದ ಕಾರ್ಯ ಮುಗಿದ ಮೇಲೆ ಮತ್ತೆ ನಿನ್ನ ಸೀಮೆಗೆ ಹೋಗು, ಹೆತ್ತಬ್ಬೆಯ ಮಡಿಲಲ್ಲಿ ಕುಳಿತು ಇದೇ ಸಾಧನೆಯನ್ನು ಸಾಧಿಸಿ ನೋಡು. ಆಗ ಬಯಲಿನ ಅರಿವಾಗುತ್ತದೆ. ಯಾವ ಸೀಮೆ ನಿನ್ನದು?”
“ಶಿವನಕೊಳ್ಳ…”
“ರಣಕಲ್ಲು, ಅಯ್ಯಾಹೊಳೆಯ ಸೀಮೆ…”

ತಾಯಿ ಸುಜ್ಞಾನವ್ವ ಕೊಟ್ಟ ಕಡುಬು ಬಿದಿರಕ್ಕಿ ಅನ್ನ ತಿಂದು ಮುಗಿಸುವುದರೊಳಗೆ ಬಳ್ಳಿಗಾವಿಯಿಂದ ಮತ್ತದೆ ಬಂಡಿಗಳೆರಡು ಬಂದವು. ಯಥಾಪ್ರಕಾರ ತಂದಿದ್ದ ಸರಂಜಾಮುಗಳನ್ನು ತುಂಬಿಕೊಂಡು ಹೊರಟುಹೋದವು. ಆದರೆ ತಾಯಿ ಕಂದಫಲಗಳ ಗಂಟು ಕೊಡದೇ ಹೊರಟಳು. ಹಿಂದಿನಿಂದ ಬಂದ ಲಂಗೋಟಿ ತಾತ ತನ್ನ ಕೈಕೋಲಿನಂದ ಅನಿಮಿಷನ ಬೆನ್ನಿಗೆ ತಿವಿದಾಗ ಮತ್ತೆ ಕಣ್ಣೊಳಗೆ ಲೋಕದ ಬೆರಗಿನ ಬೆಳಕು ತುಂಬಿಕೊಳ್ಳುವ ಸಾಧನೆಗೆ ಹೊರಟ. ಕಿರುನಾಲಗೆ ಗಗ್ಗಡಿಸುತ್ತ ಹೊಂಡುವ ಓಂಕಾರ ನಾದದ ಜೊತೆಜೊತೆಗೆ ಕಣ್ಣುಗಳ ರೆಪ್ಪೆ ಅಲುಗದಂತೆ ನಿಶ್ಚಲಗೊಳ್ಳುವುದಕ್ಕಾಗಿ ಚಿಂತಿಸಿದ. ಕವಲು ಮುಳ್ಳಿನ ತುದಿಗಳನ್ನು ಮುರಿದು ನೋವಾಗದಂತೆ ಆ ಕಣ್ಣಿನ ಹುಬ್ಬಿಗೂ ಕೆಳಗಿನ ತೆಳುವಾದ ರೆಪ್ಪೆಗೂ ಸಿಕ್ಕಿಸಿಕೊಂಡು ತಾತ ನಿಲ್ಲುತ್ತಿದ್ದ ಬಂಡೆಯನ್ನೇರಿ ಕುಳಿತ… ಎಡ ಮೊಣಕೈಗಂಟಿಗೆ ಟಿಸಿಲೊಡೆದ ಟೊಂಗೆಯನ್ನು ಆಸರೆಗಾಗಿ ಇಟ್ಟುಕೊಂಡು ಎಡದ ಕೈ ಅಂಗೈ ಮೇಲೆ ಆ ಬಸವರಸ ಹೊಳೆಯೊಳಗೆ ಮುಳುಗಿ ತೆಗೆದುಕೊಟ್ಟ ಲಿಂಗವನ್ನಿಟ್ಟುಕೊಂಡು, ಎರಡೂ ಕಂಗಳು ಬಂದು ಸೇರುವ ಎತ್ತರದಲ್ಲಿ ಎಡಗೈ ಮುಂದೆಚಾಚಿ, ಉಸಿರೆಂಬ ಗುಹೇಶ್ವರನ ಪ್ರಾಣದ ಲಯ ಲಿಂಗಕ್ಕೂ ತಾಕುವ ಅಂತರದಲ್ಲಿ ಅಂಗೈ ಇಟ್ಟುಕೊಂಡು, ಆ ಅಂಗೈಯ ಅಂಗಳದಲ್ಲಿ ಲಿಂಗವನ್ನು ಸ್ಥಾಪಿಸಿದ. ಸಹಜ ಉಸಿರಾಡುತ್ತ, ಸಹಜ ದೃಷ್ಟಿಯನ್ನು ಕೇಂದ್ರೀಕರಿಸಿ, ಓಂಕಾರದ ಸ್ವರ ಹೊಂಡಿಸತೊಡಗಿದ. ಎಲ್ಲದೂ ಸ್ತಬ್ದಗೊಂಡ ಹಾಗೆ… ಭೂಮಿ, ಆಕಾಶ, ನೀರು, ಬೆಂಕಿ ಗಾಳಿಗಳೆಲ್ಲವೂ… ಏನೊಂದೂ ಇಲ್ಲದ ಜಡತೆಯನ್ನು ಕಂಡಂತೆ, ಆದಿಗಾಧಾರವಿಲ್ಲದ ಸ್ಥಿತಿಯೊಳಗೆ ಓಂಕಾರ ನಾದವು ದೇಹದ ತುಂಬೆಲ್ಲ ಹರಿಯತೊಡಗಿತು. ನೆತ್ತಿಯಿಂದ ಅಂಗುಷ್ಠದವರೆಗೆ ಮೈ ಕಂಪಿಸುತ್ತ ಓಂಕಾರವೂ ಗುಹೇಶ್ವರನಲ್ಲಿಗೆ ತಲುಪಿದಾಗ ಇಡೀ ಮೈಯೇ ಜಾಗೃತಾವಸ್ಥೆಯನ್ನು ಅನುಭವಿಸತೊಡಗಿತು.

ಎಲಾ..! ದಿನದ ತಪದಂತೆ ಇಂದಿನ ದಿನದ ತಪವೂ ಇಲ್ಲವಲ್ಲ ಎನ್ನುವುದು ಮನಸ್ಸಿಗೆ ಅರಿಕೆಯಾದರೂ, ಒಳಗೆ ದೇಹದೊಳಗಿನ ಗುಹೇಶ್ವರನ ತಲುಪಿರುವ ಸ್ವರವು ಏಕಕಾಲಕ್ಕೆ ಹೊರಗಿನ ಬಯಲನ್ನು ಕೂಡಿಕೊಳ್ಳಬೇಕಲ್ಲಾ..! ಏನನ್ನೋ ಸಾಧಿಸಬೇಕು, ಅರಿವನ್ನು ಅರಿಯಬೇಕು ಎಂಬ ಯಾವ ಹಮ್ಮಿಲ್ಲದ ನಿಲುವು ಆ ಕ್ಷಣದಲ್ಲಿ ಮೂಡಿತು. ಅದೊಂದು ಶೂನ್ಯದ ಸುತ್ತು. ಮಂದ್ರದಲ್ಲಿದ್ದ ಓಂಕಾರವು ಉಸಿರಾಟದೊಡನೆ ಸೇರಿಕೊಂಡು ಹಬ್ಬತೊಡಗಿತು. ಸ್ತಬ್ದಗೊಂಡಿದ್ದ ಎಲ್ಲದೂ – ಭೂಮಿ, ಆಕಾಶ, ನೀರು, ಬೆಂಕಿ ಗಾಳಿಗಳೆಲ್ಲವೂ… ನಿರಂತರ ಚಲಿಸುತ್ತಲಿರುವ ಹಾಗೆ ಒಳಗೂ ಹೊರಗೂ ಏಕಾದವು. ಆನಂದ ಮತ್ತು ದುಃಖ ಈ ಯಾವುದರ ಜಂಜಡವಿಲ್ಲದ ನಿಶ್ಚಲತೆ ಕಣ್ಣೊಳಗೂ, ಮೈಯೊಳಗಿನ ಜೀವದೊಳಗೂ ನೆಲೆಯಾದಾಗ ದಿನಗಳೆಷ್ಟೋ ಕಳೆದಿದ್ದವು.

ಒಂದು ಮುಂಜಾವಿನಲ್ಲಿ-
ಕಣ್ಣರೆಪ್ಪೆಗಳು ಕ್ಷಣ ಮಾತ್ರ ಅದುರಿದಾಗ ಚಿತ್ತವು ಹರಿಯುವ ನದಿಯ ಮೇಲೆ ಹೋಯಿತು.. ಅಲ್ಲಿ ದೇದೀಪ್ಯಮಾನವಾದ ಬೆಳಕಿನ ಪುಂಜವೊಂದು ನದಿಯ ಸೆಳವಿಗೆ ಎದುರಾಗಿ ಹೊರಟಿತ್ತು. ಅದ್ಯಾವ ಮೂಲೆಯಲ್ಲಿ ಅವಿತಿತ್ತೋ ಏನಿದು ಎಂಬ ಚಂಚಲಸ್ವಭಾವ ದಿಗ್ಗನೆದ್ದು ಮುಖದೊಳಗಿನ ನಿಶ್ಚಲತೆಯನ್ನು ಕದಡಿತು. ದೇಹವೂ ಆಯಾಸಗೊಂಡಿತ್ತೋ ಏನೋ ದೃಷ್ಟಿ ಕದಲಿತ್ತು. ಆ ಕ್ಷಣದಲ್ಲಿ ಸಹಜಗೊಂಡಿದ್ದ ಅನಿಮಿಷಯೋಗವು ಮುಕ್ಕಾಗಿ ಮತ್ತೆ ಭೂಮಂಡಲದ ಮದ್ಯದೊಳಗಿನ ಬನವಸೆ ಸೀಮೆಯ ವರದಾ ನದಿ ದಂಡೆಗೆ ಬಂದುಬಿಟ್ಟಿದ್ದ.

ಇಲ್ಲಿ ಈ ಬನವಸೆಯ ಸೀಮೆಯಲ್ಲಿ ಮಳೆಹೋಗಿ ಕ್ಷಾಮ ಬಂದೆರಗಿತ್ತು. ಅದೆಂಥ ಕ್ಷಾಮವೆಂದರೆ ದನಕರುಗಳು, ನರಮನುಷ್ಯರು ನೆರಳಿನಂತೆ ಸೊರಗಿ ಸಣಕಲಾಗಿ, ಆ ಸಣಕಲಾದ ದೇಹದೊಳಗೆ ಇರುವ ನಿತ್ರಾಣವನ್ನು ಕಾಪಾಡಿಕೊಳ್ಳಲು ಮಂದಿ ಗಬಗಬ ಮಣ್ಣು ತಿನ್ನುತ್ತಿದ್ದರು. ಹಚ್ಚಹಸಿರಿನ ತೋರಣ ಕಟ್ಟಿದಂತಿದ್ದ ಸೊಬಗಿಲ್ಲದೆ ಸುತ್ತಲ ಸೀಮೆ ಬೆಂಗಾಡಾಗಿತ್ತು. ಮೂರುಕೋಲಿನ ಗುಡಿಸಿಲಿನೊಳಗೆ ಜಪಕ್ಕೆ ಕುಳಿತಿದ್ದ ಲಂಗೋಟೆಪ್ಪನು ಮಣ್ಣೊಳಗೆ ಆಳುದ್ದದಲ್ಲಿ ಹೊಂಡದ ನಡುವೆ ನಿಶ್ಚಲನಾಗಿ ಕುಳಿತಿದ್ದ. ಆಗೀಗ ಸುಳಿದು ಸೂಸುವ ಗಾಳಿಯ ಮಣ್ಣು ಅವನನ್ನು ಅರ್ಧದಷ್ಟು ಮುಚ್ಚಿತ್ತು. ಓಂಕಾರ ಸ್ವರ ನಿಲ್ಲಿಸಿದಾಗ ಗಂಟಲೊಣಗಿದಂತಾಗಿ ಹೊಳೆಯತ್ತ ನೋಡಿದರೆ ಅಲ್ಲಿ ಹರಿಯುವ ನೀರಿತ್ತೆಂಬ ಕುರುಹೂ ಇಲ್ಲದಂತೆ ಒಣಗಿ ತೊಗಟೆಯಾಗಿತ್ತು. ‘ಅಯ್ಯ ಅನಿಮಿಷದೇವ..ʼ ನೆಲದ ಆಳದಲ್ಲಿ ಕುಳಿತಿದ್ದ ಲಂಗೋಟೆಪ್ಪ ನಿತ್ರಾಣ ದ್ವನಿಯೊಳಗೆ ಕೂಗಿ ಕರೆದ.

“ಅಂದು ಸುಜ್ಞಾನವ್ವ ಬಿದಿರಕ್ಕಿ ಅನ್ನ ಬಡಿಸಿದಾಗಲೇ ಈ ಕ್ಷಾಮ ಬರುವುದೆಂದು ಈ ಕಾಡು ಮುನ್ಸೂಚನೆ ಕೊಟ್ಟಿತ್ತು. ಹಿಡೀ ಈ ನುಣುಪಾದ ಹೊಳೆಕಲ್ಲನ್ನು ನಾಲಗೆಯ ಮೇಲಿಟ್ಟುಕೋ ಬಾಯಾರಿಕೆ ಹಿಂಗುವುದು.
ನುಣುಪುಕಲ್ಲನ್ನು ಬಾಯೊಳಗಿಟ್ಟುಕೊಂಡಾಗ ನೀರಿನ ತಣುವು ನಾಲಗೆಯ ಬುಡದಿಂದ ಜಲವೊಡೆದು ಒಣಗಿದ್ದ ತುಟಿಗಳೆರಡನ್ನು ನಾಲಗೆಯಲ್ಲಿ ಸವರಿಕೊಂಡ. ಕಿರುನಾಲಗೆಯ ಸುತ್ತ ಜುಳುಜುಳು ನೀರಾಡಿತು.

“ತಾತಾ ಇದು ನನ್ನ ಅನುಭವಕ್ಕೆ ಬರುತ್ತಿರುವ ಕ್ಷಾಮ ಭ್ರಮೆಯಲ್ಲವಲ್ಲ”
“ನಾಗಿಣಿಯಕ್ಕ ಚಂದ್ರಗಿರಿಯಲ್ಲಿ ಭೂಮಿಯ ಸೀಳಿಕೊಂಡು ಬಯಲಾದಳು. ಅದನ್ನು ನಿನಗೆ ಹೇಳಲು ಬಯಸಿ ಕಾದು ಕುಳಿತೆ.”
“ನಾನು ಕೇಳುತ್ತಿರುವುದು… ಈಗ ಇಲ್ಲಿ ನಾನು ಕಣ್ಣಾರೆ ಕಾಣುತ್ತಿರುವುದು ಭ್ರಮೆಯೇ..?”
“ಅನಿಮಿಷದೇವ ನೀನು ಭ್ರಮಿಸಿಕೊಂಡರೇ ಕ್ಷಾಮ ಇನ್ನೂ ಭಯಂಕರವಾಗಿ ತೋರುತ್ತದೆ. ಅರಿವನ್ನು ಹುಸಿ ಎನ್ನಲಾಗದು.”
“ತಾತ ನನಗೆ ಲೋಕದ ಒಳಗೂ ಹೊರಗೂ ಒಂದೇ ಆದ ಅನುಭವವಾಯ್ತು.”

ಲಂಗೋಟೆಪ್ಪ ಇದು ತನ್ನ ಕಟ್ಟಕಡೆಯ ಮಾತೆಂಬಂತೆ ಬಲಗೈಯನ್ನು ಮೇಲಕ್ಕೆತ್ತಿ ಸನ್ನೆ ಮಾಡಿ ಕರೆದ. ಅನಿಮಿಷದೇವ ಆ ಹೊಂಡದಲ್ಲಿ ಬಾಗಿ ಅವನ ಮಾತಿಗೆ ಕಿವಿಗೊಟ್ಟ. “ಆಹಾ ನಿನ್ನ ಅನಿಮಿಷಯೋಗ ನನ್ನ ಮನಸ್ಸನ್ನು ಸೂರೆಗೊಂಡಿತಪ್ಪಾ…! ಇಡೀ ಲೋಕದ ಒಳ-ಹೊರಗಿನ ಬೆರಗನ್ನು ನಿನ್ನ ಕಂಗಳಲ್ಲಿ ಕಂಡು ಧನ್ಯನಾದೆ” ಸೋತ ಊಸಿರಿನೊಟ್ಟಿಗೆ ಕ್ಷೀಣ ಸ್ವರದಲ್ಲಿ ತನ್ನ ಕೊನೆಯ ಮಾತನ್ನು ಹೇಳಿ ಲಂಗೋಟಿತಾತ ಬಯಲಾದ. ಆನಂದ ಅತಿರೇಕ, ದುಃಖ ದುಮ್ಮಾನಗಳ ಗೊಡವೆಯನ್ನು ಮೀರಿ ಲೋಕದ ನಿರಂತರತೆಯನ್ನು ಅರಿತಿದ್ದ ನಿಶ್ಚಲತೆಯಲ್ಲಿದ್ದ ಅನಿಮಿಷದೇವ ದಿನದ ಬೆಳಕು ಅಡಗುವ ಹೊತ್ತಿಗೆ ಲಂಗೋಟೆಪ್ಪ ಕುಳಿತಿದ್ದ ಹೊಂಡವನ್ನು ಮಣ್ಣು ತುಂಬಿಸಿ ಸಮಾಧಿ ಮಾಡಿದ.

ಹಗಲು ರಾತ್ರಿಗಳು ಯಾವುದಾದರೇನು ಎಚ್ಚರಗೊಂಡ ಮನಸ್ಸಿಗೆ ಗುಹೇಶ್ವರನ ನಿರಂತರ ಚಲನೆಯೊಂದೆ ಸಾಕ್ಷಿಯಾಗಿತ್ತು. ನಾಗಿಣಿಯಕ್ಕ ತೋರುವ ದಾರಿ ಹಂಬಲಿಸಿ ಬಂದ ಜೀವಕ್ಕೀಗ ಯಾವ ಅವಸ್ಥೆಯೂ ಉಳಿದಿರಲಿಲ್ಲವಾಗಿ ಬನವಸೆಯ ದಿಕ್ಕಿಗೆ ಬತ್ತಿದ್ದ ಹೊಳೆಯ ದಾರಿಮಾಡಿಕೊಂಡು ಹೊರಟ. ಬೆಳಗಾಗೆ ಅರ್ತಿಯೊಳಗೆ ಮಧುಕೇಶ್ವರನ ಸನ್ನಿಧಾನದಲ್ಲಿ ಅಂಬಲಿ ಕಾಯಿಸುತ್ತಿದ್ದರು. ಆ ಅಂಬಲಿಯ ಪರಿಮಳ ಪಟ್ಟಣದ ಬಡಪಾಯಿಗಳ ಮನೆಗಳಿಗೆ ಹೊಕ್ಕು, ಆ ಎಲುಬಿನ ಗೂಡಾಗಿದ್ದ ಜೀವಗಳು ಒಬ್ಬೊಬ್ಬರಾಗಿ ಎದ್ದು ಬಂದು ಮಣ್ಣಿನ ಪಾತ್ರೆಗಳನ್ನು ಹಿಡಿದುಕೊಂಡು ಸಾಲುಗಟ್ಟಿ ನಿಂತಿದ್ದರು. ಕ್ಷಾಮ ಹಗಲೂ ರಾತ್ರಿಗಳ ಹಂಗಿಲ್ಲದಂತೆ ಆ ಜನಗಳ ಹಿಂಡಿ ಹಿಪ್ಪೆ ಮಾಡಿತ್ತು.

ಕಲ್ಯಾಣದ ಹೊಸಮಂತ್ರಿಗಳು ಪುಣ್ಯಾತ್ಮರು
ಅರಸರಿಗಿಲ್ಲದ ಕಾಳಜಿ ಮಂತ್ರಿಗಳಿಗೆ ಬರೋದಂದರೆ ಸಾಮಾನ್ಯವೇನು. ಅವರು ಸಾಕ್ಷಾತ್ ಅವತಾರ ಪುರುಷ.
ದನಕರುಗಳಿಗೆ ದೂರ ತೆಲಂಗರ ನಾಡಿನಿಂದ ಹುಲ್ಲುಹೊರೆ ಕಳಿಸಿದರು, ಹಸಿವಿಗೆ ಒಂದು ಹೊತ್ತಿನ ನುಚ್ಚಂಬಲಿಗೆ ವ್ಯವಸ್ಥೆ ಮಾಡಿದರು.
ಬಿಜ್ಜಳರಾಜರಿಗೆ ಇದೆಲ್ಲ ಮಾಡುವುದರಲ್ಲಿ ಆಸಕ್ತಿಯೇ ಇದ್ದಿಲ್ಲವಂತೆ. ಭಂಡಾರದ ಕೀಲಿ ಕೊಡೋದಿಲ್ಲ ಅಂದರಂತೆ.
ಸ್ವತಃ ಬಸವಣ್ಣನ ಮುಖ ನೋಡಿದ ಕೂಡಲೇ ಆ ಕಠೋರಿ ಬಿಜ್ಜಳನ ಮನಸ್ಸು ಕರಗಿ ನೀರಾಯ್ತಂತೆ.
ಮಹಾಕರುಣಿ, ದಾಸೋಹಿ ನಮ್ಮಪ್ಪ ಬಸವಣ್ಣ…
ಇದೇನು ಬಸವಣ್ಣ ಹಾಕಿದ ಅನ್ನವೇನು..? ನಮ್ಮ ಮಾರಾಜರ ಭಂಡಾರದಿಂದ ಬಂದ ನುಚ್ಚಂಬಲಿ.
ಎತ್ತುಗಳು ನೊಗಹೊತ್ತು ಭೂಮಿ ಹದ ಮಾಡಿ ಮನೆಮಂದಿಯೆಲ್ಲರ ಹೊಟ್ಟೆ ತುಂಬಿಸಿದಂಗೆ ಬಸವಣ್ಣನವರು ನಮ್ಮೆಲ್ಲರ ಹೊಟ್ಟೆ ತುಂಬಿಸತಿದ್ದಾರೆ. ಇಂಥ ತಂಪುಹೊತ್ತಿನಲ್ಲಿ ಅವರ ಬಗ್ಗೆ ಒಳ್ಳೆದು ಮಾತಾಡೋ ತಮ್ಮಾ..

ಕೂಡಿದವರು ತಲೆಗೊಂದೊಂದು ಪಿಸುಪಿಸು ಮಾತಾಡುತ್ತಿದ್ದರು. ಮಧುಕೇಶ್ವರನ ಪೂಜೆ ಪೂರೈಸಿದಾಗ ನೆರೆದಂತವರಿಗೆ ನುಚ್ಚಂಬಲಿ ಬಡಿಸಲಾಯ್ತು. ಕಟ್ಟಕಡೆಯಲ್ಲಿ ಕಣ್ದೆರೆದು ಕಂಬಕ್ಕೊರಗಿ ಕುಳಿತಿದ್ದ ಅನಿಮಿಷದೇವನ ಮುಂದೆ ಕಲ್ಲಿನಲ್ಲಿ ಮಾಡಿದ್ದ ದೊಣ್ಣೆಯಲ್ಲಿ ಅಂಬಲಿ ಸುರುವಿ ಹೋದರು. “ಅಪ್ಪಾ ಪುಣ್ಯಾತ್ಮ, ಅಂಬಲಿ ಬಿಸಿಬಿಸಿ ಹಬೆಯಾಡುವಾಗಲೇ ನುಂಗಬೇಕು. ತಡಮಾಡಿದರೆ ಸ್ವಾದ ಸಿಗುವುದಿಲ್ಲಪ್ಪಾ” ಹತ್ತಿರದಲ್ಲೇ ಕುಳಿತು ತುಟಿಗಳೆರಡನ್ನು ಪರ್ಯಾಣದ ತುದಿಗಿಟ್ಟು ಸೊರ್ರೆಂದು ಆ ಸ್ವಾದವನ್ನು ಸವಿಯುತ್ತಿದ್ದವ ಗಟ್ಟಿಯಾಗಿ ಹೇಳಿದ. ನಿಶ್ಚಿಂತನಾದವನ ಕಿವಿಗಳು ಆ ಚಣದಲ್ಲಿ ಅಲ್ಲಿ ಚಪ್ಪರಿಸುತ್ತಿದ್ದ ಬಾಯಿಗಳ ಸದ್ದನ್ನು ಕೇಳುತ್ತಲೂ, ಅಂಬಲಿಯ ಕಂಪನ್ನು ಮೂಗು ಆಹ್ಲಾದಿಸುತ್ತಲೂ ಇರುವಾಗ ಅನಿಮಿಷನ ಕೈಗಳು ಆ ಕಲ್ಲಪಡಿಹಾಸಿನ ಮೇಲೆ ಹಾಕಿದ್ದ ಅಂಬಲಿಯನ್ನು ಬಳಿದು ತಿನ್ನತೊಡಗಿದವು.

“ಆ ನಾಗಿಣಿಯಕ್ಕ ಹೋದದ್ದೆ ಇದೆಲ್ಲ ಬಂದೆರಗಿತು ನೋಡು, ಆ ತಾಯಿ ಅದೆಷ್ಟು ಸಂತಾಪ ಪಟ್ಟುಕೊಂಡು ಭೂಮಿ ಹೊಕ್ಕಳೋ ಏನೋ..?”
“ಅಲ್ಲ ಸ್ವಾಮೇರ ಆ ಚಂದ್ರಗಿರಿ ಮೊದಲೇ ಗುತ್ತೆವ್ವಾ ಇರುವಂಥ ಜಾಗ, ಆಕೆ ಎಂಥ ತಾಯ್ತನದ ಹೆಣಮಗಳು. ಅಂಥಾಕೆ ಮಗಳು ಭೂಮಿ ಅಗೆದು ಗದ್ದುಗೆ ಮಾಡಿಕೊಂಡು ತಪಸ್ಸು ಮಾಡುತ್ತಲೇ ಮಣ್ಣಾಗುವುದು ಅಂದರೆ ಸಾಮಾನ್ಯವಾ..!”
“ಹಂಗೇನಿಲ್ಲ ಬುದ್ಯೋರಾ… ಆಕೆ ಮಣ್ಣಗವಿ ಹೊಕ್ಕಾಗಿನಿಂದ ದಿನವೂ ಒಂದು ತೊಟ್ಟು ನೀರು, ಅಂಬಲಿ ಕೊಡಲಿಕ್ಕೆ ಜಾಗವೊಂದು ಮಾಡಕೊಂಡಿದ್ದಳಂತೆ. ಹಾಗೆ ದಿನದಿನವೂ ಜೀವ ಸವೆಸುತ್ತಾ ದೇವರೊಲುಮೆ ಪಡೆದು ಐಕ್ಯಳಾದಳಂತೆ. ಅದೇನೋ ಜೀವ ಬಿಡುವ ಮೊದಲು ಅನುಷ್ಠಾನ ಕೂರೋದಂತಪಾ. ಮೊದಲು ಆ ಚಂದ್ರಗಿರಿ ಅಂದರೆ ಗಿಡಮೂಲಿಕೆಗಳ ಗುಡ್ಡ ಆಗಿತ್ತು. ಈಗ ಬೆಂಗಾಡಾಗಿದೆಯಂತೆ. ಗುಡ್ಡ ಏರಿ ಹೋದವರ ಜೀವಕ್ಕೆ ಒಂದು ಹನಿ ನೀರು ಸಿಗಲಾರದೆ ಅಲ್ಲೇ ಗುತ್ತೆವ್ವನ ಗುಡ್ಡದ ಮೇಲೆ ಎಷ್ಟೋ ಜನ ಸತ್ತಿದ್ದಾರಂತೆ.”
“ಆ ಮಧುಕೇಶ ಇಂದಿಲ್ಲ ನಾಳೆ ಮಳೆ ತರತಾನೆ. ದನಕರುಗಳಿಗೆ ಅಂಟಿರೋ ಜಾಡ್ಯ ತೊಲಗಿ ಮತ್ತೆ ನಾವು ಮೊದಲಿನಂಗ ಆಗತೇವರೀ ಸ್ವಾಮೇರಾ…”
“ಹೌದರೀ ಬುದ್ಯೋರ ಅದೊಂದು ಆಶೆಯಿಂದಾನೇ ಜೀವ ಹಿಡಕೊಂಡಿದೀವಲ್ಲ.”

ಅಂಬಲಿ ಕುಡಿದೆದ್ದ ಮಂದಿಮನಶೇರು ಲೋಕದ ಮಾತುಗಳನ್ನಾಡುತ್ತಲೇ ಬಾವಿಯ ಪಾತಾಳದಲ್ಲಿದ್ದ ನೀರು ಹೊರತೆಗೆಯುವ ಕಪಲಿ ಬಾವಿಗೆ ಬಂದು ಹಿಡಿಯಷ್ಟು ನೀರು ಹನಿಸಿಕೊಂಡು ಕುಡಿದು, ತುಟಿ ಒರೆಸಿಕೊಳ್ಳುತ್ತ ಹೊರಟು ಹೋದರು. ದಯೆ ಎನ್ನುವುದು ಇಂಥ ಕ್ಷಾಮ ಬಂದಾಗ ಮಾತ್ರ ಎಲ್ಲರ ಅರಿವಿಗೆ ಬರುವುದು. ಅನಿಮಿಷದೇವನೂ ಬೊಗಸೆಯೊಡ್ಡಿ ನೀರು ಹನಿಸಿಕೊಂಡ. ಮಧುಕೇಶನನ್ನು ಕಣ್ಣಾರೆ ಕಾಣುವ ಹಂಬಲದಿಂದ ಗುಡಿಯ ಪ್ರಾಂಗಣಕ್ಕೆ ಬಂದಾಗ ಅಲ್ಲಿ ಅದೇ ಆ ಚಂದ್ರಲಾ ದೊಡ್ಡ ದೀಪದ ಮುಂದೆ ಕುಳಿತು ಗೆಜ್ಜೆಯ ಕೋಲನ್ನು ನೆಲಕ್ಕೆ ತಟ್ಟುತ್ತಾ ಶಿವಸ್ತುತಿಯ ಹಾಡು ಆರಂಭಿಸಿದ್ದಳು. ಆ ಹಾಡಿಗೆ ಗುಂಗುರುಂಗುರಾದ ಕೂದಲಿನ ಎಳೆಯ ಹುಡುಗನೊಬ್ಬ ತನ್ಮಯನಾಗಿ ಮದ್ದಳೆ ಬಾರಿಸುತ್ತಿರಲು. ಆ ನವಗ್ರಹ ಮಂಟಪದಲ್ಲಿ ಮಾಯಕಾರತಿಯರು ನೃತ್ಯ ಸೇವೆ ಮಾಡುತ್ತಿದ್ದರು. ಆಗ ಬೆಳಗಿನ ಪೂಜೆ ಮುಗಿಸಿದ್ದರಿಂದ ಮಧುಕೇಶ ಬಾಲವೇಷದಲ್ಲಿ ಸಜ್ಜಾಗಿ ನೃತ್ಯ ಸೇವೆಯನ್ನು ಆಸ್ವಾಧಿಸುವ ಹಾಗೆ ಸಿಂಗಾರಗೊಂಡಿದ್ದ. ಮೂಢಣದಲ್ಲಿ ಚುಮುಚುಮು ಬೆಳಕಿನ ಪುಂಜಗಳನ್ನು ಹೊತ್ತು ಸೂರ್ಯ ಒಡಮೂಡಿದಾಗ ಅನಿಮಿಷದೇವ ಅಲ್ಲಿಂದ ಮತ್ತೆ ಮುಂದೆಲ್ಲೋ ಹೊರಟರಾಯ್ತೆಂದು ಹೊರವೊಂಟ.

ಹೊಳೆಹಳ್ಳ-ಊರು ಸೀಮೆಗಳ ಹಂಗಿಲ್ಲದೆ ನಡೆದು ದಣಿವಾದಾಗ ಒಂದು ಬೃಹತ್ತಾದ ಶಿವಲಿಂಗ ಪ್ರತಿಷ್ಠಾಪಿಸಿದ್ದ ಗುಡಿ ಸಿಕ್ಕಿತು. ಆ ಗುಡಿಯ ಗರ್ಭಗೃಹದ ಮುಂದೆ ಎತ್ತರದಲ್ಲಿ ಸ್ಥಾಪಿಸಿದ್ದ ನಂದಿಯ ಮುಂದಿನ ಪೀಠದಲ್ಲಿ ಕುಳಿತು. ರಟ್ಟೆಯಲ್ಲಿ ಕಟ್ಟಿಕೊಂಡಿದ್ದ ಲಿಂಗವನ್ನು ತೆಗೆದು ಎಡ ಅಂಗೈ ಮೇಲಿಟ್ಟುಕೊಂಡು ದೃಷ್ಟಿಯೋಗದಲ್ಲಿ ತೊಡಗಿದ. ಆಗ ಅವನೊಳಗೆ ಎದ್ದಿದ್ದ ನೆನಪಿನ ಬಿರುಗಾಳಿಯೊಳಗೆ ಅಬ್ಬೆಯೂ, ಚಂದ್ರಲಾಳೂ, ಒಕ್ಕಣ್ಣ ತಂದೆಯೂ, ಮಾವನೂ ಗುರು ಸಿದ್ಧಸಾಧುವು, ನಾಗಿಣಿಯಕ್ಕನೂ, ಬಸವರಸನೂ, ಕುರುಡಿ ಮಾದೇವಿಯಕ್ಕನೂ, ಆ ಸೌರಾಷ್ಟದ ವ್ಯಾಪಾರಿಯೂ, ಅವನ ಮಗ ಆದಯ್ಯನೂ.. ಈಗ ಎರಡು ದಿನದ ಹಿಂದೆ ತನ್ನ ಗೋರಿಯೊಳಗೆ ತಾನೇ ಕುಳಿತುಕೊಂಡು ಐಕ್ಯನಾದ ಲಂಗೋಟೆಪ್ಪನೂ.. ಎಲ್ಲರೂ ಒಡಮೂಡಿ ಬಂದು ನೆನಪುಗಳನ್ನು ಕೆದಕಿ ಬಿಟ್ಟಾರು ಎಂಬ ಆತಂಕ ಮೂಡಿತ್ತು. ತನಗೆ ಅನುಭವಕ್ಕೆ ಬಂದ ಆ ಶೂನ್ಯದ ಮೊತ್ತವನ್ನು, ಲಿಂಗವನ್ನೂ ಒಂದಾಗಿಸಿಕೊಂಡು ಮತ್ತೆ ಆಳಕ್ಕೆ ಲೋಕದ ಬೆರಗುಗಳು ಹುಟ್ಟುವ ಮೊದಲಿನ ಬಯಲನ್ನು ಸಾಧಿಸುವ ಛಲದಲ್ಲಿ ತದೇಕ ಚಿತ್ತವಿಟ್ಟಿದ್ದ. ಹಾಗೇ ಕುಳಿತ ಮೇಲೆ ಸೂರ್ಯ-ಚಂದ್ರರ ಲೆಕ್ಕಾಚಾರದ ದಿನಗಳ ಹಂಗಿಲ್ಲದ ದೃಷ್ಟಿಯೋಗವದು. ಅನಿಮಿಷಯೋಗ. ಹೀಗೆ ಎಷ್ಟೋ ಬೆಚ್ಚಗಿನ ಕಾವುಗಳು, ತಂಗಾಳಿಯ ಸೌಖ್ಯವನ್ನು ಜೀವ ಅನುಭವಿಸಿದ ಮೇಲೆ ಒಂದು ದಿನ ಪಡುವಣದ ದಿಕ್ಕಿನಿಂದ ತಣ್ಣನೆಯ ಸೂಸುಗಾಳಿ ಹೊರಟೆದ್ದು ಬಂದು, ಆಕಾಶವೆಂಬ ನಿಚ್ಚಳ ಬೆಳಕನ್ನು ಮೋಡಗಳು ಅಡ್ದಗಟ್ಟಿ, ಆಗ ಭೋರೆಂಬೋ ಮಳೆ ಗುಡುಗು ಸಿಡಿಲುಗಳ ಸಮೇತ ಬೋರ್ಯಾಡಿ ನೆಲ-ಮುಗಿಲುಗಳನ್ನು ಒಂದು ಮಾಡಿಕೊಂಡು ಸುರಿಯತೊಡಗಿತು. ದಿನದ ಮಳೆಯಲ್ಲ ಅದು ತಿಂಗಳಾನುಗಟ್ಟಲೇ…
ನೀರು ನೆಲವನ್ನುಂಡು, ಮೈಬಂದ ಕಡೆಗೆ ನುಗ್ಗಿ ಹೊಳೆಹಳ್ಳಗಳು ದಿಕ್ಕಾಪಾಲಾಗಿ ಹರಿಯತೊಡಗಿದವು. ಗುಡ್ಡಗಳು ಕುಸಿದವು. ಸಮತಟ್ಟಾದ ಜಾಗಗಳು ಮಣ್ಣಿನ ದಿನ್ನೆಗಳಾದವು. ಅನಿಮಿಷಯೋಗಿ ಕುಳಿತಿದ್ದ ಕಲ್ಲಿನ ದೇಗುಲವೂ ಮಣ್ಣಿನಡಿ ಸೇರಿ ಮಣ್ಣುಮಯವಾಯ್ತು. ಮೈದುಂಬ ಬಂದ ವರದಾ ಹೊಳೆಯು ಮೈ ಬದಲಿಸಿ ಮೂಢಣದತ್ತ ಹರಿಯತೊಡಗಿದಳು. ಆ ಯೋಗಿ ತನ್ನೊಡನೇ ತಾನು ಶೇಖರಿಸಿದ್ದ ಬೆಳಕನ್ನು ಕ್ರೂಢಿಕರಿಸಿಕೊಂಡು ಮಣ್ಣದೇಗುಲದಲ್ಲಿ ಅನಿಮಿಷಯೋಗದಲ್ಲಿ ನಿರತನಾದನೆಂಬಲ್ಲಿಗೆ ಹರಹರ ಅನಿಮಿಷಯೋಗಿಯ ಕಥನವು ಮುಕ್ತಾಯವಾದುದು.

ಈ ಕಥೆ ಹೇಳಿಸಿದ ಬಸವಾದಿ ಶರಣರಿಗೂ ಅಷ್ಟೇ ಆಸಕ್ತಿಯಿಂದ ಓದಿದ ತಮಗೆಲ್ಲರಿಗೂ ಶರಣು ಶರಣಾರ್ಥಿಗಳು…

Previous post ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
Next post ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ

Related Posts

ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
Share:
Articles

ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ

July 4, 2022 Bayalu
ಇಂಗ್ಲೀಷಿನಲ್ಲಿ ಕ್ಯಾಲೆಂಡರ್ ಮತ್ತು ಕನ್ನಡದಲ್ಲಿ ಪಂಚಾಂಗವೆಂದು ಕರೆಯಲ್ಪಡುವ ಕಾಲನಿರ್ಣಯ ವ್ಯವಸ್ಥೆಯ ಬಗ್ಗೆ ಎಲ್ಲರಿಗು ತಿಳಿದಿರುವ ವಿಷಯವೇ. ನಮ್ಮ ದಿನ ನಿತ್ಯದ...
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
Share:
Articles

ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ

December 9, 2025 ಮಲ್ಲಿಕಾರ್ಜುನ ಕಡಕೋಳ
ನಮ್ಮೂರು ಕಡಕೋಳದ ಪ್ರತಿಯೊಂದು ಓಣಿಯಲ್ಲೂ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳನ್ನು ಲೋಕ ಸಂವೇದನೆಯ ಜವಾರಿ ದರವು, ದನಿಯಲ್ಲಿ ಹಾಡುವವರಿದ್ದಾರೆ. ಅದೊಂದು ನೈಸರ್ಗಿಕ...

Comments 2

  1. ಕರಿಬಸಪ್ಪ ಹಿಪ್ಪರಗಿ
    Jan 20, 2026 Reply

    ವಸೂದೀಪ್ಯನ ಸುದೀರ್ಘ ಪಯಣದಲ್ಲಿ ನಾವೂ ಜೊತೆಯಾಗಿ, ಅನಿಮಿಷ ಯೋಗಿಯ ಸತ್ಯ ಸಾಕ್ಷಾತ್ಕಾರದಲ್ಲಿ ಧನ್ಯರಾಗಿ ನಿಂತೆವು… ಕತೆಯ ಕೊನೆ ಬಹಳ ಚೆನ್ನಾಗಿದೆ.

  2. Arunkumar Kolar
    Jan 20, 2026 Reply

    ಅಲ್ಲಮಪ್ರಭುಗಳು ಬಸವಣ್ಣನವರಿಗಿಂತಲೂ ವಯಸ್ಸಿನಲ್ಲಿ ಕಿರಿಯರೇ? ಯಾವ ಆಧಾರ ಕೊಡುತ್ತೀರಿ, ದಯಮಾಡಿ ತಿಳಿಸಿ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಿವಾಚಾರ
ಶಿವಾಚಾರ
April 9, 2021
ನೋಟದ ಕೂಟ…
ನೋಟದ ಕೂಟ…
May 10, 2023
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಯಾಕೀ ಗೊಡವೆ?
ಯಾಕೀ ಗೊಡವೆ?
August 10, 2023
ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
December 13, 2024
ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ
January 15, 2026
ಕಣ್ಣ ದೀಪ
ಕಣ್ಣ ದೀಪ
September 7, 2021
Copyright © 2026 Bayalu