Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮತ್ರ್ಯಲೋಕದ ಮಹಾಮನೆ
Share:
Articles January 15, 2026 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮತ್ರ್ಯಲೋಕದ ಮಹಾಮನೆ

ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮವ ಕಂಡೆ.
ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.
-ಅಕ್ಕಮಹಾದೇವಿ

12ಯ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಸ್ಮರಣೀಯವಾದುದು. ಇದಕ್ಕೆ ಕಾರಣವಾದದ್ದು ಇಂದಿನ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆಯುತ್ತಿದ್ದ ‘ಅನುಭವ ಮಂಟಪ’ದ ಚರ್ಚೆ, ಸಂವಾದಗಳು. ಇದಕ್ಕೆ ಕಾರಣ, ಪ್ರೇರಣೆ ಕಲ್ಯಾಣ ರಾಜ್ಯದ ಅರಸ ಬಿಜ್ಜಳನ ಅಧಿಕಾರವಧಿಯಲ್ಲಿ ಪ್ರಧಾನಿ ಮತ್ತು ಅರ್ಥಸಚಿವರಾಗಿದ್ದ ಬಸವಣ್ಣನವರು. ಅವರು ಸಮಾಜೋ-ಧಾರ್ಮಿಕವಾಗಿ ಮಾಡಿದ ಕ್ರಾಂತಿಕಾರಿ ಬದಲಾವಣೆಗಳು ಬಿಜ್ಜಳನ ಭಂಡಾರ ಸದಾ ತುಂಬಿ ತುಳುಕುವಂತೆ ಮಾಡಿದ್ದವು. ಕಾಯಕ, ದಾಸೋಹ ಮತ್ತು ಶಿವಯೋಗ ಈ ಮೂರು ಮಹತ್ವದ ತತ್ವಗಳನ್ನು ಬಸವಣ್ಣನವರು ‘ಅನುಭವ ಮಂಟಪ’ದ ಮೂಲಕ ಜಾರಿಯಲ್ಲಿ ತಂದದ್ದರಿಂದ ಅಂದಿನ ಜನರ ಮತ್ತು ರಾಜ್ಯದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಏನೆಲ್ಲ ಸುಧಾರಣೆ ತರಲು ಸಾಧ್ಯವಾಯಿತು. ಇದಕ್ಕೆಲ್ಲ ಸ್ಪೂರ್ತಿಯ ಕೇಂದ್ರವಾಗಿದ್ದು ಅನುಭವ ಮಂಟಪ. ಇದನ್ನು ‘ವಿಶ್ವದ ಮೊಟ್ಟಮೊದಲ ಸಂಸತ್ತು’ ಎಂದು ಇಂದು ವಿಶ್ವದ ನಾಯಕರೇ ಪ್ರೀತಿಯಿಂದ ಹೇಳುತ್ತಿದ್ದಾರೆ. ಅನುಭವ ಮಂಟಪ ಕೇವಲ ಒಂದು ಸುಂದರವಾದ ಬೃಹತ್ ಕಟ್ಟಡವಲ್ಲ. ಅಲ್ಲಿ ಧಾರ್ಮಿಕ, ವೈಚಾರಿಕ, ಆರ್ಥಿಕ, ಸಾಮಾಜಿಕ, ಸಾಹಿತ್ಯಕ, ನೈತಿಕ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಮುಕ್ತ ಚರ್ಚೆ, ಸಂವಾದ ನಡೆಯುತ್ತಿತ್ತು. ಅಲ್ಲಿ ಹೆಣ್ಣು-ಗಂಡು, ಚಿಕ್ಕವರು-ದೊಡ್ಡವರು, ಆ ಜಾತಿ-ಈ ಜಾತಿ ಎನ್ನದೆ ಸರ್ವರೂ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲಿ ಜಾತಿ ಭೇದ, ಲಿಂಗ ಭೇದ, ವಯೋ ಭೇದವಿಲ್ಲದೆ ಸರ್ವಸಮಾನತೆಗೆ ಒತ್ತು ಕೊಡಲಾಗುತ್ತಿತ್ತು. ಅನುಭವ ಮಂಟಪದ ಸಂಸ್ಥಾಪಕರು ವಿಶ್ವಗುರು ಎಂದೇ ಗೌರವಿಸಲಾಗಿರುವ ಭಕ್ತಿಭಂಡಾರಿ ಬಸವಣ್ಣನವರು ಎನ್ನುವುದು ನಿರ್ವಿವಾದ.

ಅನುಭವ ಮಂಟಪದ ಮೊದಲ ಅಧ್ಯಕ್ಷರಾಗಿದ್ದವರು ಅಲೆಮಾರಿಯಂತಿದ್ದ ಅನುಭಾವಿ, ವಯೋವೃದ್ಧ, ಜ್ಞಾನವೃದ್ಧ ಅಲ್ಲಮಪ್ರಭು. ಕಾರ್ಯದರ್ಶಿಯಾಗಿದ್ದವರು ‘ಅವಿರಳಜ್ಞಾನಿ’, ‘ಚಿನ್ಮಯಜ್ಞಾನಿ’ ಎಂದೇ ಪ್ರಖ್ಯಾತರಾಗಿದ್ದ ಚೆನ್ನಬಸವಣ್ಣ. ಅವರು ವಯಸ್ಸಿನಲ್ಲಿ ಅನುಭವ ಮಂಟಪದ ಎಲ್ಲ ಸದಸ್ಯರಿಗಿಂತ ಕಿರಿಯರು. ಆದರೆ ಅರಿವಿಂಗೆ ಹಿರಿದು, ಕಿರಿದು ಎನ್ನುವ ತಾರತಮ್ಯ ಅಲ್ಲಿರಲಿಲ್ಲ. ಇವತ್ತಿನ ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಇರುವಂತೆ ಅಂದು ಏಳನೂರ ಎಪ್ಪತ್ತು ಅಮರಗಣಂಗಳು ಅನುಭವ ಮಂಟಪದ ಸದಸ್ಯರಾಗಿದ್ದುದು ತಿಳಿದುಬರುತ್ತದೆ. ಅವರೆಲ್ಲರ ನೇತಾರರಾಗಿದ್ದವರು ಬಸವಣ್ಣನವರು. ಆದರೂ ಅವರು ತಾವು ನೇತಾರರು ಎಂದು ಹೇಳಿಕೊಳ್ಳುತ್ತಿರಲಿಲ್ಲ. ಬದಲಾಗಿ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಭೃತ್ಯಾಚಾರಿಗಳಾಗಿದ್ದರು. ಆ ಧಾರ್ಮಿಕ ಸಂಸತ್ತಿನಲ್ಲಿ ಸ್ತ್ರೀ ಸಮಾನತೆಯ ಕಿರೀಟದಂತಿದ್ದ ಶರಣೆ ಅಕ್ಕಮಹಾದೇವಿ, ಸತ್ಯವನ್ನೇ ಬದುಕಿನ ಬಂಡವಾಳ ಮಾಡಿಕೊಂಡಿದ್ದ ಸತ್ಯಕ್ಕ, ಅಕ್ಕಿಯನ್ನು ಆಯುವ ಕಾಯಕ ಜೀವಿ ಲಕ್ಕಮ್ಮ, ಸೂಳೆಯ ವೃತ್ತಿಯನ್ನು ತ್ಯಜಿಸಿ ಶರಣೆಯಾಗಿದ್ದ ಸಂಕವ್ವೆ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಬಸವಣ್ಣನವರ ಧರ್ಮಪತ್ನಿಯರಾಗಿದ್ದ ಗಂಗಾಂಬಿಕೆ, ನೀಲಾಂಬಿಕೆ, ಮಧುವರಸ, ಸಮಗಾರ ಹರಳಯ್ಯ, ಅಕ್ಕಮ್ಮ, ಅಮುಗೆ ರಾಯಮ್ಮ, ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಕದಿರೆ ಕಾಯಕದ ರೆಮ್ಮವ್ವೆ, ಗೊಗ್ಗವ್ವೆ, ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ, ಮೋಳಿಗೆ ಮಹಾದೇವಮ್ಮ, ಬೊಂತಾದೇವಿ, ನಾಗಮ್ಮ ಮತ್ತಿತರ ಶರಣೆಯರು, ಶಿವಯೋಗಿ ಸಿದ್ಧರಾಮೇಶ್ವರ, ಸಕಳೇಶ ಮಾದರಸ, ಹಾವಿನಹಾಳ ಕಲ್ಲಯ್ಯ, ಕಿನ್ನರಿ ಬ್ರಹ್ಮಯ್ಯ, ಮಾದಾರ ಚೆನ್ನಯ್ಯ ಮತ್ತಿತರ ಶರಣರು ಅನುಭವ ಮಂಟಪದ ಮುತ್ತು-ರತ್ನಗಳಂತಿದ್ದರು.

ಯಾವುದೇ ತತ್ವಾದರ್ಶಗಳು ಜಾರಿಯಲ್ಲಿ ಬರಬೇಕಾದರೂ ಅವುಗಳ ಬಗ್ಗೆ ಅನುಭವ ಮಂಟಪದಲ್ಲಿ ಸಮಗ್ರ ಚರ್ಚೆಯಾಗುತ್ತಿತ್ತು. ಆ ಚರ್ಚೆಯ ಫಲಶೃತಿಯಾಗಿ ವಚನಗಳು ಹೊರಹೊಮ್ಮುತ್ತಿದ್ದವು. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಭಾರತ ಸಂವಿಧಾನ ಇಂದು ಆಡಳಿತ ಮಾಡುವವರಿಗೆ, ಅಷ್ಟೇ ಏಕೆ ಭಾರತೀಯ ಎಲ್ಲ ನಾಗರಿಕರಿಗೆ ಆದರ್ಶ ಬದುಕಿನ ಧರ್ಮಗ್ರಂಥವಾಗಿರುವಂತೆ ಅಂದು ವಚನಗಳೇ ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಧಾರ್ಮಿಕ ಸಂಸತ್ತಿನ ‘ಸಂವಿಧಾನ’ವಾಗಿದ್ದುದು ಗಮನಾರ್ಹ. ಇಂದಿಗೂ ಅವು ಎಲ್ಲ ಕ್ಷೇತ್ರದ ಜನರ ಬದುಕಿನ ಜೀವನಾಡಿಯಂತಿವೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ’ ಎನ್ನುವ ಸಪ್ತಶೀಲಗಳು ಅನುಭವ ಮಂಟಪದ ಸದಸ್ಯರ ಆದರ್ಶ ಬದುಕಿನ ಆಧಾರ ಸ್ತಂಭಗಳಾಗಿದ್ದವು. ಅಲ್ಲಿ ಮೌಢ್ಯ, ಕಂದಾಚಾರ, ಅತಾರ್ಕಿಕ ವಿಚಾರಗಳಿಗೆ ಮಾನ್ಯತೆ ಇರಲಿಲ್ಲ. ‘ಕಾಯಕವೆ ಕೈಲಾಸ’ ಎನ್ನುವ ತತ್ವ ಅನುಭವ ಮಂಟಪದ ಪ್ರಮುಖ ಧ್ಯೇಯವಾಕ್ಯವಾಗಿತ್ತು. ಜೊತೆಗೆ ‘ಕಾಯವೆ ಕೈಲಾಸ’ ಎನ್ನುವ ತತ್ವ ಆದರ್ಶ ಬದುಕಿಗೆ ತಳಹದಿಯಾಗಿತ್ತು. ಅನುಭವ ಮಂಟಪದ ಪ್ರತಿಯೊಬ್ಬ ಸದಸ್ಯರೂ ಕಾಯಶುದ್ಧಿಯ ಜೊತೆಗೆ ಕಡ್ಡಾಯವಾಗಿ ಕಾಯಕ ಮಾಡಲೇಬೇಕಿತ್ತು. ಕಾಯಕದಿಂದ ಯಾರಿಗೂ ವಿನಾಯತಿ ಇರಲಿಲ್ಲ. ಗುರು, ಲಿಂಗ, ಜಂಗಮ ಯಾರೇ ಆಗಿದ್ದರೂ ಕಾಯಕ ಮಾಡಲೇಬೇಕು ಎನ್ನುವುದು ಅನುಭವ ಮಂಟಪದ ಕಟ್ಟಳೆಯಾಗಿತ್ತು. ಕಾಯಕದಲ್ಲಿ ಮೇಲು-ಕೀಳು ಎನ್ನುವ ತಾರತಮ್ಯ ಇರಲಿಲ್ಲ. ಎಲ್ಲ ಕಾಯಕವೂ ಸಮಾನ. ಕಾಯಕದಿಂದ ವ್ಯಕ್ತಿಯ ಜಾತಿ, ಲಿಂಗ ಇತ್ಯಾದಿ ಅಳೆಯುವ ಅವಕಾಶವಿರಲಿಲ್ಲ. ಕಾಯಕ ಜೀವಿಗಳೆಲ್ಲರೂ ಸಮಾನರು. ಅನುಭವ ಮಂಟಪ ಜಾರಿಯಲ್ಲಿ ತಂದ ಮತ್ತೊಂದು ಮಹತ್ವದ ತತ್ವವೆಂದರೆ ‘ದಾಸೋಹ’. ಕಾಯಕ ಮತ್ತು ದಾಸೋಹ ತತ್ವಕ್ಕೆ ಅವಿನಾಭಾವ ಸಂಬಂಧವಿದೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ಕಾಯಕದಿಂದ ಬಂದ ಆದಾಯದಲ್ಲಿ ತನಗೆ ಬೇಕಾದಷ್ಟನ್ನು ಮಾತ್ರ ಬಳಸಿಕೊಂಡು ಉಳಿದದ್ದನ್ನು ಸಮಾಜದ ಸತ್ಕಾರ್ಯಗಳಿಗೆ ಕೊಡಬೇಕು ಎನ್ನುವ ಸದ್ವಿಚಾರವೇ ದಾಸೋಹ. ಇಲ್ಲಿ ನಾಳೆಗೆ, ಮಡದಿ ಮಕ್ಕಳಿಗೆ ಎಂದು ಕೂಡಿಡುವ ಪದ್ಧತಿಗೆ ಅವಕಾಶವೇ ಇರಲಿಲ್ಲ. ಹೀಗಾಗಿ ಬಡವ, ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಸರ್ವಸಮಾನತೆಯಿಂದ ಬಾಳಲು ಅವಕಾಶವಿತ್ತು. ಅಗತ್ಯಕ್ಕಿಂತ ಹೆಚ್ಚು ಕೂಡಿಡುವುದು ಪಾಪದ ಕಾರ್ಯ, ಶರಣ ತತ್ವಕ್ಕೆ ಅಪಚಾರ ಬಗೆದಂತೆ ಎನ್ನುವ ಎಚ್ಚರ ಪ್ರತಿಯೊಬ್ಬ ಶರಣರಲ್ಲೂ ಇತ್ತು. ಹಾಗಾಗಿ ಸಮಾನ ದುಡಿಮೆ, ಸಮಾನ ಹಂಚಿಕೆಗೆ ಒತ್ತು ಕೊಡಲಾಗಿತ್ತು. ಕಾಯಕವು ಗಳಿಕೆಯ ವಿಧಾನ ತಿಳಿಸಿದರೆ ದಾಸೋಹ ವಿತರಣೆಯ ತತ್ವ ಹೇಳುತ್ತಿತ್ತು.

‘ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲರನೊಂದೆ ಎಂಬೆ. ಹಾರುವ ಮೊದಲು, ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂದೆ ಎಂಬೆ’ ಎನ್ನುವ ಬಸವಣ್ಣನವರ ಆದರ್ಶವನ್ನು ಎಲ್ಲ ಶರಣ ಶರಣೆಯರೂ ಪರಿಪಾಲಿಸುತ್ತಿದ್ದರು. ಅಲ್ಲಿ ಬ್ರಾಹ್ಮಣ-ಅಂತ್ಯಜ, ಹಾರುವ- ಶ್ವಪಚ ಎನ್ನುವ ಅಂತರವಿರಲಿಲ್ಲ. ಬದಲಾಗಿ ಭಕ್ತ ಮತ್ತು ಭವಿ ಎನ್ನುವ ವರ್ಗ ಮಾತ್ರ ಇತ್ತು. ಭಕ್ತ ಎಂದರೆ ಸರಳವಾಗಿ ಹೇಳಬೇಕೆಂದರೆ ಸದಾಚಾರಿ, ಭವಿ ಎಂದರೆ ದುರಾಚಾರಿ. ಅರಿವು ಆಚಾರ ಒಂದಾದವರು ಭಕ್ತರು. ಅವು ಬೇರೆ ಬೇರೆಯಾಗಿದ್ದವರು ಭವಿಗಳು. ಅನುಭವ ಮಂಟಪದ ಸದಸ್ಯರಾದ ಮೇಲೆ ಒಬ್ಬ ಬ್ರಾಹ್ಮಣ ಎನ್ನುವ ಮೇಲ್ಜಾತಿಯವನಾಗಲಿ ಮತ್ತೊಬ್ಬ ಅಂತ್ಯಜ ಎನ್ನುವ ಕೀಳ್ಜಾತಿಯವನಾಗಲಿ ಅಲ್ಲ. ಅವರಿಬ್ಬರೂ ಸಮಾನರು. ಹಾಗಾಗಿ ಬಸವಣ್ಣನವರೇ ತಮ್ಮ ಅನೇಕ ವಚನಗಳಲ್ಲಿ ಅಂದಿನ ಅನುಭವ ಮಂಟಪದ ತತ್ವಾದರ್ಶಗಳನ್ನು ಎತ್ತಿಹಿಡಿದಿದ್ದಾರೆ.

ಸೆಟ್ಟಿಯೆಂದೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.

ಸೆಟ್ಟಿ, ಮಡಿವಾಳ, ಡೋಹರ, ಮಾದಾರ, ಹಾರುವ ಎನ್ನುವುದು ಅವರವರ ಕಾಯಕದ ಕುರುಹೇ ಹೊರತು ಜಾತಿಯ ಕುರುಹುಗಳಲ್ಲ. ಹಾಗೊಂದು ವೇಳೆ ಅವು ಜಾತಿ ಎಂದು ಭಾವಿಸಿ ಸಿರಿಯಾಳ, ಮಾಚಯ್ಯ, ಕಕ್ಕಯ್ಯ, ಚೆನ್ನಯ್ಯನವರನ್ನು ಕಂಡರೆ ನನ್ನ ಲಿಂಗಯ್ಯನೇ ನಗುವನು ಎನ್ನುವ ಮೂಲಕ ಜಾತ್ಯತೀತ, ಸರ್ವಸಮಾನತೆಯ ಸಮಾಜ ನೆಲೆಗೊಳ್ಳಲು ಬಸವಾದಿ ಶಿವಶರಣರು ಕಾರಣರಾದರು. ಇದು ಪ್ರಪಂಚದ ಇತಿಹಾಸದಲ್ಲೇ ಬೆರಗುಗೊಳಿಸುವ ಸಂಗತಿ. ಅನುಭವ ಮಂಟಪದಲ್ಲಿ ಸ್ತ್ರೀ-ಪುರುಷ ಎನ್ನುವ ಅಂತರ ಕೂಡ ಇರಲಿಲ್ಲ. ದೇಹರಚನೆಯ ಕಾರಣದಿಂದ ಒಬ್ಬರನ್ನು ಸ್ತ್ರೀ ಎಂದು, ಮತ್ತೊಬ್ಬರನ್ನು ಪುರುಷ ಎಂದು ಗುರುತಿಸುತ್ತಿದ್ದರೇ ಹೊರತು ಇಬ್ಬರೊಳಗೂ ಇರುವ ಚೇತನ ಹೆಣ್ಣು ಅಥವಾ ಗಂಡು ಅಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಸ್ತ್ರೀ ಸಮಾನತೆಯನ್ನು ಎತ್ತಿಹಿಡಿದದ್ದು ಅನುಭವ ಮಂಟಪ.

ಅಂದು ಅನುಭವ ಮಂಟಪದಲ್ಲಿ ಅಚ್ಚ ಕನ್ನಡದಲ್ಲಿ ಚರ್ಚೆಯಾಗುತ್ತಿತ್ತೇ ಹೊರತು ಅದುವರೆಗೂ ಪಂಡಿತರ ಭಾಷೆಯೆಂಬ ಕೀರ್ತಿಗೆ ಪಾತ್ರವಾಗಿದ್ದ ಸಂಸ್ಕೃತದಲ್ಲಿ ಅಲ್ಲ. ಜನರಿಗೆ ಅರ್ಥವಾಗದ ಭಾಷೆಯನ್ನು ಬಸವಾದಿ ಶಿವಶರಣರು ಬಳಸಲಿಲ್ಲ. ಹಾಗಾಗಿಯೇ ‘ವಚನ’ ಎನ್ನುವ ವಿನೂತನ ಸಾಹಿತ್ಯವೊಂದು ಅಂದು ಬೆಳಕಿಗೆ ಬಂತು. ವಚನಗಳು ಕೇವಲ ರಚನೆಗಳಲ್ಲ. ಅವು ಶರಣರ ಅನುಭವ, ಅನುಭಾವದ ರಸಪಾಕ. ವಚನ ಸಂವಿಧಾನದ ಕೆಲವು ಸಂದೇಶಗಳನ್ನು ಸಾಂಕೇತಿಕವಾಗಿ ಗಮನಿಸಬಹುದು: ‘ದಯವೆ ಧರ್ಮದ ಮೂಲ’, ‘ನಡೆ ನುಡಿ ಸಿದ್ಧಾಂತ’, ‘ಉಳ್ಳವರು ಶಿವಾಲಯ ಮಾಡುವರು’, ‘ಮನದ ಮೈಲಿಗೆ ತೊಳೆಯುವಡೆ ಕೂಡಲಚೆನ್ನಸಂಗನ ಶರಣರೊಡನೆ ಅನುಭಾವವ ಮಾಡುವುದು’, ‘ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ’, ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ’, ‘ಉಣ್ಣೆ ಕೆಚ್ಚಲ ಹತ್ತಿದ್ದರೇನು ಕ್ಷೀರವದಕುಂಟೆ’, ‘ಅರಿಯದ ಗುರು ಅರಿಯದ ಶಿಷ್ಯಂಗೆ ಅನುಗ್ರಹವ ಮಾಡಿದಡೇನಪ್ಪುದೆಲವೊ’, ‘ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ’, ‘ರೋಗಿಗೆ ಹಾಲು ಸಿಹಿಯಪ್ಪುದೆ’, ‘ಕಲ್ಲಿಯ ಹಾಕಿ ನೆಲ್ಲವ ತಳಿದು, ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ’, ‘ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಸುದ್ದಿ’, ‘ಧನವ ಗಳಿಸಿದವ ಹೆಣನಾದ, ಧರೆಯ ಗಳಿಸಿದವ ಅರಿಗಳಿಗೆ ಒಡಲಾದ’, ‘ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’, ‘ಅನುಭಾವಿಗೆ ಅಂಗಶೃಂಗಾರವುಂಟೆ?’, ‘ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೆ ಲೇಸು’, ‘ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ’, ‘ಲಿಂಗದ ಹಂಗಿಗಳಲ್ಲ ಬಸವಾ ನಾನು’, ‘ತನು ಬತ್ತಲೆಯಾದಡೇನು, ಮನ ಬತ್ತಲೆಯಾಗದನ್ನಕ್ಕ’, ‘ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ’, ‘ನುಡಿಯಲುಬಾರದು ಕೆಟ್ಟನುಡಿಗಳ, ನಡೆಯಲುಬಾರದು ಕೆಟ್ಟನಡೆಗಳ’, ‘ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೆ ದಿಟದ ಬೀಜದ ವೃಕ್ಷದಂತೆ?’, ‘ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ’ ಇಂಥ ವಚನದ ಸಾಲುಗಳು ಯಾರಿಗೆ ತಾನೇ ಅರ್ಥವಾಗುವುದಿಲ್ಲ? ಹಾಗಾಗಿ ವಚನಗಳ ಮಹತ್ವವನ್ನು ಮನಗಾಣಿಸುವಾಗ ಬಸವಣ್ಣನವರು ಹೇಳಿದ್ದು:

ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು,
ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ.

ವಚನಗಳಲ್ಲಿ ಏನಿಲ್ಲ ಎನ್ನುವವರಿಗೆ ಉತ್ತರ ಇಲ್ಲಿದೆ. ಇವತ್ತು ಮಾನವ ಹಕ್ಕುಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಅನುಭವ ಮಂಟಪದಲ್ಲಿ ಮಾನವ ಹಕ್ಕುಗಳ ಮೊದಲ ಘೋಷಣೆ, ಆಚರಣೆ ಜಾರಿಯಲ್ಲಿದ್ದುದು ಅಚ್ಚರಿಯನ್ನುಂಟುಮಾಡುವುದು. ಅಲ್ಲಿ ಮೂಢನಂಬಿಕೆ, ಜಾತಿ ಪದ್ಧತಿ, ವರ್ಗ-ವರ್ಣ-ಲಿಂಗ ಭೇದಕ್ಕೆ ಅವಕಾಶವೇ ಇರಲಿಲ್ಲ. ಹೀಗೆ ಹೇಳುವ ಅನುಭವ ಮಂಟಪವೇ ಇರಲಿಲ್ಲ ಎಂದು ಕೆಲವು ಭಯಂಕರ ವಿಚಾರವಾದಿಗಳೆನ್ನುವವರು, ಪಟ್ಟಭದ್ರರು ವಾದ ಮಾಡುತ್ತಿದ್ದಾರೆ. ಅವರು ಸಮಗ್ರ ವಚನ ಸಾಹಿತ್ಯದ ಅಧ್ಯಯನ ಮಾಡದಿರುವುದು ಮತ್ತು ಪೂರ್ವಗ್ರಹಪೀಡಿತ ಕಲ್ಪನೆಗಳಿಂದ ಹೊರಬರದಿರುವುದು ಅಂತಹ ಹೇಳಿಕೆಗಳಿಗೆ ಕಾರಣವಾಗಿದೆ. ವಚನ ಸಾಹಿತ್ಯದಲ್ಲಿ ಅನುಭವ ಮಂಟಪಕ್ಕೆ ಪರ್ಯಾಯವಾಗಿ ಮಹಾಮನೆ, ಅನುಭಾವಗೋಷ್ಠಿ, ಶರಣರ ಗೋಷ್ಠಿ, ಸದ್ಗೋಷ್ಠಿ ಇತ್ಯಾದಿ ಪದಗಳನ್ನು ಬಳಸಲಾಗಿದೆ. ಅನುಭವ ಮಂಟಪ ಇತ್ತೆಂಬುದಕ್ಕೆ ನೀಲಮ್ಮನ `ಆದಿಯಾಧಾರವಿಲ್ಲದಂದು’ ಎಂದು ಪ್ರಾರಂಭವಾಗುವ ಸುದೀರ್ಘ ವಚನದಲ್ಲಿ ಬಸವಣ್ಣನವರು ಏನೇನು ಮಾಡಿದರೆಂದು ವಿವರಿಸುತ್ತ ‘ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯ ಬೆಳೆಯ ಬೆಳೆದು, ಪರಮಪ್ರಸಾದವನೊಂದು ರೂಪಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು. ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ, ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು…’ ಎಂದು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಪ್ರಭುದೇವರು ‘ಮತ್ರ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನಬಸವಣ್ಣನು’ ಎಂದರೆ ಬಸವಣ್ಣನವರೇ ‘ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ’ ಎಂದಿದ್ದಾರೆ. ‘ಮಹಾಮನೆಯ ಗಣಂಗಳು ಮೆಚ್ಚಲು’ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ನಾಗಲಾಂಬಿಕೆ ತಾಯಿಯವರು ಬಸವಣ್ಣನವರ ಅಗಲುವಿಕೆಯಿಂದ ನೊಂದು ‘ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತಲ್ಲಾ ಬಸವಣ್ಣಾ’ ಎಂದು ಪರಿತಪಿಸಿದ್ದಾರೆ.

ಕೋಲಶಾಂತಯ್ಯನವರು ‘ಮಹಾಮನೆಯ ಮಂಟಪದಲ್ಲಿ’ ಎಂದು ಬಳಸಿದ್ದಾರೆ. ಗುರುಸಿದ್ಧದೇವರು ‘ಕಲ್ಯಾಣಪಟ್ಟಣದ ಅನುಭಾವ ಮಂಟಪದ ಶೂನ್ಯಸಿಂಹಾಸನದಲ್ಲಿ’ ಎಂದಿದ್ದಾರೆ. ಅಕ್ಕ ‘ಶರಣರ ಸದ್ಗೋಷ್ಠಿ ಏನು ಮಾಡದಯ್ಯಾ?’ ಎಂದು ಕೇಳಿದ್ದಾರೆ. ಬಸವಣ್ಣನವರು ‘ಶರಣರ ಸಮಗೋಷ್ಠಿಯ ಮಾಡುವುದನುಪಮಿಸಲಮ್ಮೆನಯ್ಯಾ’ ಎಂದಿದ್ದಾರೆ. ಬಸವಾದಿ ಶಿವಶರಣರೆಲ್ಲರೂ ಒಂದೆಡೆ ಸೇರಿ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ಸಮಾನತೆಯ ಬಗ್ಗೆ ಚಿಂತನ ಮಂಥನ ಮಾಡಿದ ತಾಣವೇ ಅನುಭವ ಮಂಟಪ. ಇದೊಂದು ನಿಗದಿತ ಸ್ಥಳವಲ್ಲ. ಬದಲಾಗಿ ಹತ್ತಾರು ಜನ ಶರಣರು ವಿಚಾರ ವಿನಿಮಯ ಮಾಡುತ್ತಿದ್ದರೆ ಅದೇ ಅನುಭವ ಮಂಟಪ. ಇದು ಕಲ್ಯಾಣದಲ್ಲಿದ್ದ ಬಸವಣ್ಣನವರ ಮಹಾಮನೆಯೂ ಆಗಿರಬಹುದು. ಶೂನ್ಯ ಸಂಪಾದನೆ ಕೃತಿಗಳು ಅನುಭವ ಮಂಟಪದಲ್ಲಿ ಹೇಗೆ ಸಂವಾದಗಳು ನಡೆಯುತ್ತಿದ್ದವು ಎನ್ನುವುದನ್ನು ಪ್ರತಿಪಾದಿಸಿವೆ. ಅಲ್ಲಿ ಅಲ್ಲಮ, ಅಕ್ಕ, ಬಸವಣ್ಣ, ಸಿದ್ಧರಾಮೇಶ್ವರ ಮುಂತಾದ ಶರಣರ ನಡುವೆ ಎಂತಹ ಗಮನವಾದ, ಗಂಭೀರವಾದ ತಾತ್ವಿಕ ಚರ್ಚೆಗಳು ನಡೆಯುತ್ತಿದ್ದವು ಎನ್ನುವ ದಾಖಲೆ ದೊರೆಯುವುದು. ಅದರಲ್ಲೂ ಅಲ್ಲಮ ಹೋದಲ್ಲೆಲ್ಲ ಅನುಭವ ಮಂಟಪದ ಕಾರ್ಯಗಳನ್ನು ಮುಂದುವರಿಸಿದ್ದು ಮುಕ್ತಾಯಕ್ಕ, ಸಿದ್ಧರಾಮೇಶ್ವರ, ಗೋರಕ್ಷ ಮತ್ತಿತರರ ನಡುವೆ ಹೇಗೆ ಸಂವಾದ ನಡೆದು ಅವರ ಮನಸ್ಸನ್ನು ಪರಿವರ್ತಿಸಿದರು ಎಂದು ತಿಳಿದುಬರುತ್ತದೆ. ಹಾಗಾಗಿ ಅನುಭವ ಮಂಟಪ ಕೇವಲ ಒಂದು ಸ್ಥಾವರ ಕಟ್ಟಡವಾಗಿತ್ತು ಎಂದು ಭಾವಿಸಬೇಕಿಲ್ಲ. ಇವತ್ತಿನ ಪ್ರಜಾಪ್ರಭುತ್ವದ ಎಲ್ಲ ಆಶಯಗಳು ಅನುಭವ ಮಂಟಪದಲ್ಲಿ ಜಾರಿಯಲ್ಲಿ ಬರುತ್ತಿದ್ದವು ಎನ್ನುವುದಕ್ಕೆ ವಚನಗಳೇ ಸಾಕ್ಷಿ ನುಡಿಯುತ್ತವೆ. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು.

ಅನುಭವ ಮಂಟಪದ ಬಗ್ಗೆ ವಿವರವಾದ ಮಾಹಿತಿಗಳನ್ನು ಹೊರಹಾಕಿದವರು ಡಾ.ಫ ಗು ಹಳಕಟ್ಟಿಯವರು ಮತ್ತು ಉತ್ತಂಗಿ ಚೆನ್ನಪ್ಪನವರು. ಅವರ ನಂತರ ಡಾ.ಎಂ ಎಂ ಕಲಬುರ್ಗಿ, ಡಾ.ವೀರಣ್ಣ ರಾಜೂರು ಮತ್ತಿತರರು ಲೇಖನಗಳನ್ನು ಬರೆದಿದ್ದಾರೆ, ಉಪನ್ಯಾಸ ನೀಡಿದ್ದಾರೆ. ಅವರು ವಚನ ಸಾಹಿತ್ಯದ ಆಳವಾದ ಅಧ್ಯಯನ ಮಾಡಿ ಅಲ್ಲಿಯ ಮುತ್ತು ರತ್ನಗಳನ್ನು ಬಯಲಿಗೆ ತಂದಿದ್ದಾರೆ. ಅನುಭವ ಮಂಟಪ ಒಂದು ಅರಿವಿನ ಕೇಂದ್ರ. ಅದರ ಕಾರಣದಿಂದಾಗಿಯೇ ಸುಮಾರು 33 ಶರಣೆಯರು, 218ಕ್ಕಿಂತ ಹೆಚ್ಚು ಶರಣರು 20000ಕ್ಕೂ ಹೆಚ್ಚು ವಚನಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಬಸವಾದಿ ಶಿವಶರಣರ ಅನುಭವ, ಅನುಭಾವದಿಂದ ಹೊರಹೊಮ್ಮಿದ ವಚನಗಳು ಲಕ್ಷ ಲಕ್ಷ. ಆದರೆ ಕಲ್ಯಾಣದಲ್ಲಿ ನಡೆದ ರಕ್ತಕ್ರಾಂತಿಯಿಂದಾಗಿ ಎಷ್ಟೋ ವಚನಗಳನ್ನು ಸುಟ್ಟುಹಾಕಿದ ನಿದರ್ಶನಗಳಿವೆ. ಪಟ್ಟಭದ್ರರು ಈಗಲೂ ವಚನಗಳ ಆಶಯಗಳಿಗೆ ಧಕ್ಕೆ ತರುವ ಕಾರ್ಯವನ್ನು ಶರಣರ ಹೆಸರಿನಲ್ಲೇ ಮಾಡುತ್ತಿರುವುದು ಸೂರ್ಯನಷ್ಟೇ ಸತ್ಯ. ಈ ನೆಲೆಯಲ್ಲಿ ಮತ್ತೆ ಮತ್ತೆ ವಚನಗಳ ಅಧ್ಯಯನ, ಅನುಷ್ಠಾನ ಒಂದು ನಿತ್ಯ ಜಪದಂತೆ, ಕಾಯಕದಂತೆ ಮನೆ-ಮಠ-ಶಾಲಾ ಕಾಲೇಜುಗಳಲ್ಲಿ ನಡೆಯಬೇಕಿದೆ. ಅದರಿಂದ ವ್ಯಕ್ತಿಯ ಆತ್ಮಶಕ್ತಿ ಹೆಚ್ಚುವುದು. ಧಾರ್ಮಿಕ ಒಲವು ಮೂಡುವುದು. ಸಂಘಟನೆಗೆ ಶಕ್ತಿ ಬರುವುದು. ಕಾಯಕ, ದಾಸೋಹ, ಶಿವಯೋಗ ಇಂಥ ತತ್ವಗಳ ಪ್ರಚಾರ, ಪ್ರಸಾರ, ಅನುಷ್ಠಾನದಿಂದ ಸಮಾಜೋ-ಧಾರ್ಮಿಕ ಸೇವಾಕಾರ್ಯಗಳು ನಡೆದು ಎಲ್ಲೆಡೆ ಶಾಂತಿ, ಸಮಾಧಾನ ನೆಲೆಗೊಳ್ಳುವುದು. ಆತ್ಮಕಲ್ಯಾಣದ ಜೊತೆ ಲೋಕಕಲ್ಯಾಣವೂ ಸಾಧಿತವಾಗುವುದು.

ಕಲ್ಯಾಣದಲ್ಲಿ ಬಸವಣ್ಣನವರ ಮಹಾಮನೆಯೇ ಎಲ್ಲ ಶರಣರ ಸಂವಾದದ ಕೇಂದ್ರವೂ ಆಗಿತ್ತು. ಹಾಗಾಗಿಯೇ ಬಸವಣ್ಣನವರು ‘ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ’ ಎಂದದ್ದು. ಅದೇ ಅನುಭವ ಮಂಟಪವೂ ಹೌದು. ಅಲ್ಲಿ ಆದರ್ಶ ಬದುಕಿಗೆ ಬೇಕಾದ ಸತ್ಚಿಂತನೆಗಳು ನಡೆದು ಅವು ವಚನಗಳ ರೂಪದಲ್ಲಿ ಹೊರಹೊಮ್ಮಿವೆ. ಅವೇ ಶರಣರ ಆದರ್ಶ ಬದುಕಿನ ಬೀಜಮಂತ್ರಗಳು. ಅವುಗಳ ತಳಹದಿಯ ಮೇಲೆ ಇಂದು ನಮ್ಮ ಜನ ಮತ್ತು ಜನಪ್ರತಿನಿಧಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕಿದೆ. ಈಗ ಸರ್ಕಾರ ಬಸವಕಲ್ಯಾಣದಲ್ಲಿ ಸುಮಾರು ಆರುನೂರು ಕೋಟಿ ಹಣದಲ್ಲಿ ಅದ್ಭುತ ಅನುಭವ ಮಂಟಪ ಕಟ್ಟಡದ ನಿರ್ಮಾಣ ಮಾಡುತ್ತಿದೆ. ಮುಂದೆ ಅದೊಂದು ಸ್ಥಾವರ ಕಟ್ಟಡವಾಗಿ, ಪ್ರವಾಸಿ ತಾಣವಾಗಿ, ಆದಾಯ ತರುವ ಸ್ಮಾರಕವಾಗದಿರಲಿ. ಅಲ್ಲಿ ಶರಣರ ಕಾಯಕಗಳ ಬಗ್ಗೆ ತರಬೇತಿ ನಡೆಯಬೇಕು. ಶಿವಯೋಗ ಸಾಧಕರಿಗೆ ಮಾರ್ಗದರ್ಶನ ಮಾಡುವಂತಾಗಬೇಕು. ಅದೊಂದು ವಚನ ವಿಶ್ವವಿದ್ಯಾಲಯವಾಗಿ ಅರಿವು-ಆಚಾರಗಳ ಸಂಗಮವಾಗಬೇಕು. ವಿಶ್ವದ ಅನೇಕ ಧರ್ಮಗಳ ತೌಲನಿಕ ಅಧ್ಯಯನಕ್ಕೆ ಅವಕಾಶವೀಯಬೇಕು. ಶರಣರ ಆದರ್ಶ ಬದುಕಿನ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಅದಕ್ಕಾಗಿ ಶರಣರ ಆದರ್ಶಗಳನ್ನು ಕ್ರಿಯಾಶೀಲಗೊಳಿಸುವ ಶರಣ ತತ್ವಪ್ರೇಮಿಗಳ ಕಾರ್ಯಕಾರಿ ಸಮಿತಿಯ ನೇಮಕವಾಗಬೇಕು. ಅದು ಸರ್ಕಾರದ ಹತೋಟಿಯಲ್ಲಿದ್ದರೂ ಅಲ್ಲಿ ಶರಣರ ಆದರ್ಶಗಳನ್ನು ಪ್ರಚಾರ, ಪ್ರಸಾರ, ಅನುಷ್ಠಾನಗೊಳಿಸುವಲ್ಲಿ ಸಮಿತಿಗೆ ಪೂರ್ಣ ಸ್ವಾತಂತ್ರವಿರಬೇಕು. 12ನೆಯ ಶತಮಾನದಲ್ಲಿ ಅನುಭವ ಮಂಟಪ ಹೇಗೆ ಜನಜಾಗೃತಿಗೆ ಕಾರಣವಾಗಿತ್ತೋ ಅಂಥ ಕಾರ್ಯ ಇಂದು ಕಟ್ಟುತ್ತಿರುವ ಅನುಭವ ಮಂಟಪದಲ್ಲಿ ಮುಂದುವರಿಯಬೇಕು. ಆಗ ಆ ಕಟ್ಟಡ ಸ್ಥಾವರವಾಗದೆ ಜಂಗಮವಾಗಿ ಶರಣರ ಆದರ್ಶಗಳ ಅನುಷ್ಠಾನದ ಅರ್ಥಪೂರ್ಣ ಕೇಂದ್ರವಾಗುವುದು.

ಮನೆಯ ನೋಡಿ ಮನ ಹೊಗುವಂತಾಗಬೇಕು.
ಜನ ನೋಡಿದಡೆ ಕೀರ್ತಿವಂತರಾಗಬೇಕು.
ನಮ್ಮ ಸಂಗನ ಮನೆ ಹೊಕ್ಕಡೆ,
ಮನವಳಿದು ಮನೋರಥ ಬಸವಣ್ಣನಂತಾಗಬೇಕು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.(ಸಿದ್ಧರಾಮೇಶ್ವರ)

Previous post ಬೆಳಕಿನ ಹುಳು
ಬೆಳಕಿನ ಹುಳು
Next post ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ

Related Posts

ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
Share:
Articles

ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ

January 15, 2026 ಮಹಾದೇವ ಹಡಪದ
ಚಳಿಗಾಲ ಕಳೆದು ಕಡುಬೇಸಿಗೆ ಬಂತು, ಬೇಸಿಗೆಯ ಬೇಗೆಯನ್ನು ಕಟ್ ಕಟೀಲ್ ಎಂದು ಮುಗಿಲಬ್ಬರಸಿ ಸಿಡಿಲು ಹೊಡೆದು ಮಳೆಗಾಲವನ್ನು ತಂದಿತು. ನೋಡನೋಡುತ್ತಿದ್ದಂತೆ ಬರಿದಾದ ಹೊಳೆ ಮೈದುಂಬಿ...
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
Share:
Articles

ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ

March 9, 2023 ಮಹಾದೇವ ಹಡಪದ
ತಾನು ವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದು… ಇದು ಸ್ವಾನುಭಾವ ಸುಖಿ ಲಿಂಗಮ್ಮ ತಾಯಿಯ ಮಾತು. ಜಗತ್ತಿಗೆ ವಿವೇಕದ ಬಗ್ಗೆ ಹೇಳುವ ಕಲೆ ಬಹಿರ್ಮುಖ ವ್ಯಾಪಾರದ ಸರಕು...

Comments 1

  1. ಗಂಗಾಧರ ಶಿಡ್ಲಘಟ್ಟ
    Jan 20, 2026 Reply

    ಮಹಾಮನೆಯ ಬಗ್ಗೆ ಮಾತಾಡುವವರು ಅದರ ಆಶಯಗಳನ್ನು ಅರಿತುಕೊಂಡಿದ್ದಾರೆಯೇ? ನನಗೇನೋ ಅನುಮಾನ ಗುರುಗಳೇ🙏🙏🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಈ ಬಳ್ಳಿ…
ಈ ಬಳ್ಳಿ…
October 21, 2024
ಪಾದಕೂ ನೆಲಕೂ…
ಪಾದಕೂ ನೆಲಕೂ…
June 14, 2024
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಶಿವನ ಕುದುರೆ…
ಶಿವನ ಕುದುರೆ…
May 1, 2019
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಗಂಟಿನ ನಂಟು
ಗಂಟಿನ ನಂಟು
November 7, 2020
ವಚನ – ಚಿಂತನ
ವಚನ – ಚಿಂತನ
October 10, 2023
Copyright © 2026 Bayalu