ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
(ಇಲ್ಲಿಯವರೆಗೆ: ನಾಗಿಣಿಯಕ್ಕನ ಕಥೆ ಪೂರ್ತಿ ಮಾಡದೇ ಮುದುಕಿ ಮರೆಯಾಗಿ ಹೋದಳು. ವಸೂದೀಪ್ಯ ಬಲಗೈ ರಟ್ಟೆಯಲ್ಲಿ ಕಟ್ಟಿದ್ದ ಲಿಂಗ ತೆಗೆದು ಅಂಗೈ ಮೇಲಿಟ್ಟುಕೊಂಡು ದೃಷ್ಟಿಯೋಗ ನಡೆಸಿದ. ರೆಪ್ಪೆಗಳು ಅಲುಗದಂತೆ ಎಷ್ಟು ದೃಷ್ಟಿಸಿದರೂ ಸಾಧ್ಯವಾಗದೇ ಸೋಲುತ್ತಿದ್ದ… ಮುಂದೆ ಓದಿ-)
ಮಲ್ಲಿಗೆ ಮೊಗ್ಗಿನ ಘಮ ತಂಗಾಳಿಯ ಜೊತೆಗೂಡಿ ಸೂಸಿ ಬಂದು ಒಂದು ಬಗೆಯ ಆಹ್ಲಾದ ಮನಸ್ಸನ್ನು ಮುದಗೊಳಿಸಿದಾಗ ಕತ್ತೆಗಳ ಹೆಜ್ಜೆಯು ಹುಲ್ಲಹಾಸಿನ ಮೇಲೆ ನಡೆದು ಮುಂದೆ ಎಲ್ಲೋ ಮಾಯವಾದವು. ಹೊಳೆಯ ಅಬ್ಬರವಿಳಿದು ಇದೀಗ ಶಾಂತವಾದಂತೆ ತೆರೆತೆರೆಯಾಗಿ ನೀರು ಆಳಕ್ಕಿಳಿಳಿದು ಮಂದವಾಗಿ ಹರಿಯುತ್ತಿದ್ದಳು ವರದೆ… ಆ ಕತ್ತೆಗಳ ಹೆಜ್ಜೆಗಳು ನೀರೊಳಗೆ ಇಳಿದು ಆಚೆ ದಡ ಸೇರಿ ಹೋಗಿರಬಹುದೆಂಬ ಅಂದಾಜಿನಲ್ಲಿ ಅಲ್ಲಿ ಹೊಳೆಯ ಮತ್ತೊಂದು ಬದಿಯಲ್ಲಿ ನೋಡಿದರೆ ಅಲ್ಲಿ ಲಂಗೋಟಿ ತಾತನೊಬ್ಬ ಚೂಪುಗಲ್ಲಿನ ಮೇಲೆ ಒಂಟಿಕಾಲಲ್ಲಿ ತಪಸ್ಸಿಗೆ ನಿಂತಿದ್ದ. ಜೋಳಿಗೆಯನ್ನು ಸೊಂಟಕ್ಕೆ ಕಟ್ಟಿಕೊಂಡು, ಬಾಯೊಳಗೆ ಕೈಕೋಲ ಕಚ್ಚಿಕೊಂಡು ಕಲ್ಲಮಡುಗಳ ನಡುವೆ ತುಂಬಿಹರಿಯುವ ನದಿಯೊಳಗೆ ಈಸುಬಿದ್ದ. ಹರಿಯುವ ನದಿ ಮಂದವಾಗಿದ್ದರೂ ಕೈಗಳನ್ನು ಬೀಸಿ ನೀರೆಳೆದು ಬದಿಗೆ ಸರಿಸಿ ಮುನ್ನುಗ್ಗಿ ಮುಂದೆ ಹೋಗುವ ಧಾವಂತದಲ್ಲಿದ್ದಾಗಲೇ ಬಸವರಸರ ನೆನಪಾಯ್ತು..!
ಇಡೀ ದೇಹವನ್ನು ಹುರಿಯಾಗಿಸಿ ಸುಳಿಯೊಳಗೆ ಧುಮುಕಿ ಹೊರಬರುವ ಆ ಚಮತ್ಕಾರ ನೆನೆದು ಖುಷಿಗೊಂಬುತ್ತಾ ಈ ದಡವ ಸೇರಿದಾಗ ಉಸಿರೆಂಬ ಜೀವತಂತು ಒಳಹೊರಗೆ ಹೋಗಿಬರುವ ಅವಸರ ಹೆಚ್ಚಿತ್ತು. ಎದೆಯಗೂಡು ಢವಗುಡುವ ವಿಚಿತ್ರವಾದೊಂದು ಬಗೆಯ ಮಿಡಿತ ಮಾಡುತ್ತಿತ್ತು. ಇದ್ಯಾವ ಬಗೆಯ ಜೀವಭಯ..?
“ಅದು ಜೀವ ಭಯವಲ್ಲ… ನೀರು ಹೇಳಿಕೊಡುವ ಉಸಿರಾಟದ ಕ್ರಮ.”
ಕಣ್ಣುಮುಚ್ಚಿದಂತಿದ್ದ ಆ ಲಂಗೋಟಿ ತಾತನು ಮನದಲ್ಲಿ ಯೋಚಿಸಿದ ಮಾತಿಗೆ ಉತ್ತರಿಸಿದ್ದ. ದಿನವಿಡೀ ನಡೆದು ಸುಸ್ತಾದ ಜೀವಕ್ಕೆ ಹೊಳೆದಂಡೆಯ ಕಲ್ಲಹಾಸೇ ಹಾಸಿಗೆ ಮಾಡಿಕೊಂಡು ಮಲಗಿಬಿಡುವ ಬಗ್ಗೆ ಯೋಚಿಸುವಾಗ…
“ಇಲ್ಲಿ ಮೊಸಳೆಗಳಿದ್ದಾವೆ… ಹೊಳೆದಂಡೆಯನ್ನೇರಿ ಹೋಗು ಅಲ್ಲೊಂದು ಮೂರುಕೋಲಿನ ಗುಡಿಸಲಿದೆ. ಆ ಗುಡಿಸಲಲ್ಲಿ ತಿನ್ನಲು ಕಂದಫಲಗಳಿದ್ದಾವೆ, ಚಕ್ರಾಂಕ ಸೊಪ್ಪಿನ ರಸವೂ ಉಂಟು, ಜೇನಿನ ಸಿಹಿವುಂಟು. ನಿನ್ನ ಜೀವ ಯಾವುದನ್ನು ಬಯಸುವುದೋ ಅದನ್ನು ತಿಂದು ಮಲಗಿಕೋ…”
ಮನದಲ್ಲಿ ಅಂದುಕೊಳ್ಳುವುದೆಲ್ಲಕೂ ಉತ್ತರಿಸುವನಲಾ ಎಂದು ಚೂಪುಗಲ್ಲಿನ ಮೇಲೆ ನಿಂತಿದ್ದ ಲಂಗೋಟಿ ತಾತನನ್ನು ನೋಡಿದರೆ ಆ ಮುಖದಲ್ಲಿ ಯಾವ ಭಾವಾವೇಶವೂ ಒಂದಿನಿತು ಇದ್ದಿರಲಿಲ್ಲ. ಸಣ್ಣ ನಗು, ಮದ, ತಿಳಿದಿಹೆನೆಂಬ ಚೂರು ಅಹಂಭಾವ ಯಾವುದೂ ಇಲ್ಲದ ನಿಶ್ಚಿಂತ ಸ್ಥಿತಿಯದು. ನಾನ್ಯಾರು, ಎತ್ತಲಿಂದ ಬಂದವನು, ಯಾಕಾಗಿ ಬಂದವನೆಂಬುದು ಎಲ್ಲವೂ ತಿಳಿದಂತಿರಬೇಕು. ಇಲ್ಲವೇ ನನಕಿಂತ ಮುಂದೆ ಹೋದ ಆ ಕುರುಡು ಮುದುಕಿ ಎಲ್ಲವನ್ನೂ ಹೇಳಿರಬೇಕು.
“ನೀನು ಹಣ್ಣಾಗಬೇಕಿದೆ ಇನ್ನು… ಬರೀ ಭ್ರಮಿಸಿಕೊಂಡೋ, ಊಹಿಸಿಕೊಂಡೋ, ಕಲ್ಪಿಸಿಕೊಂಡೋ ಯೋಚಿಸುವುದನ್ನು ನಿಲ್ಲಿಸಬೇಕಿದೆ. ಈಗ ಬೆಳಕು ನೀರೊಳಗೆ ಅಡಗುವ ಹೊತ್ತಾಯ್ತು. ಹೋಗಿ ಉಂಡು ಮಲಗಿಕೋ ಇಲ್ಲ ಕ್ಷಣಕಾಲ ನೀನು ತಂದಿರುವ ಆ ಹೊಳಪುಳ್ಳ ಸಾಧನವನ್ನಾದರೂ ದಿಟ್ಟಿಸು. ನಿನ್ನೊಳಗೆ ಗೂಡುಗಟ್ಟಿರುವ ಗುಂಭ ಜಗತ್ತನ್ನು ನಾಳೆ ಕೊಡವಿಕೊಳ್ಳುವಿಯಂತೆ…”
ವಸೂದೀಪ್ಯನಿಗೆ ಚಕ್ಕನೆ ದೃಷ್ಟಿಯೋಗದ ಸಾಧನ ನೆನಪಾದದ್ದೆ ರಟ್ಟೆಗೆ ಕಟ್ಟಿದ್ದ ಬಟ್ಟೆ ಬಿಚ್ಚಿಕೊಂಡು ಆ ದೃಷ್ಟಿಲಿಂಗವನ್ನು ದಿಟ್ಟಿಸತೊಡಗಿದ. ಸಂಜೆಯೆಂಬುದು ಥಳಥಳ ಹೊಳೆಯುವ ಬಂಗಾರಬಣ್ಣವಾಗಿ ನೀರೊಳಗೂ, ಹಚ್ಚಹಸರಿನ ಮರಗಿಡಗಳ ಮೇಲೆಲ್ಲ ಅಚ್ಚು ಹೊಯ್ದು ಅಂಗೈ ಮೇಲಿದ್ದ ಲಿಂಗವೂ ಫಳಫಳ ಹೊಳೆದು ಆ ಹೊಳಪಿನ ಕಿರಣಗಳು ತನ್ನೊಳಗೆ ಸೇರಿಕೊಳ್ಳುತ್ತಿರುವಂತೆ ಭಾಸವಾಯ್ತು. ಸೂಜಿಮಲ್ಲಿಗೆಯ ಘಮವೂ ಅರಿಯದ ಕಾಡಹೂವಿನ ಪರಿಮಳವೂ ಸೇರಿಕೊಂಡು ಮೈಮರೆಯುವಂಥ ಅನುಭವ ಆ ದಿನ ವಸೂದೀಪ್ಯನ ಸೂಜಿಗಲ್ಲಿನಂತೆ ಸೆಳೆಯಿತು. ದಿಟ್ಟಿಸುತ್ತಿದ್ದ ಕಣ್ಣುಗಳ ಮುಚ್ಚಿ ಒಂದು ಕ್ಷಣ ಆ ಹದವಾದ ಆನಂದವನ್ನು ಒಳಗೇ ಅನುಭವಿಸಬೇಕೆನಿಸಿತು. “ನೀನು ಹಣ್ಣಾಗಬೇಕಿದೆ ಇನ್ನು…” ಎಂಬ ಲಂಗೋಟಿ ತಾತನ ಮಾತು ನೆನಪಾಗಿ ಮತ್ತಷ್ಟು ಕಣ್ಣುಗಳ ಕಠಿಣಗೊಳಿಸಿ ದಿಟ್ಟಿಸತೊಡಗಿದ.
ಕಾಡೆಲ್ಲ ತನ್ನೊಳಗೆ ತಾನು ತನ್ಮಯಗೊಂಡಂತೆ ಬೆಳಕು ನುಂಗಿಕೊಂಡು ಕತ್ತಲು ಕಾಣತೊಡಗಿದಾಗ ತನ್ನ ಅಂಗೈಯೊಳಗಿನ ಲಿಂಗವನ್ನು ಕಾಣುವುದು ದುಸ್ತರವಾಗತೊಡಗಿತ್ತು. ಆಗ ಲಂಗೋಟಿ ತಾತ ನಿಡುದಾದ ನಿಟ್ಟುಸಿರೊಂದನ್ನು ನದಿಯ ಶಾಂತ ಚಲನೆಯ ಜೊತೆಗೆ ತೇಲಿಬಿಟ್ಟ. ಅನಿಮಿಷನ ರೆಪ್ಪೆಗಳು ಅಲುಗದಂತೆ ಸ್ಥಿರಗೊಂಡಿದ್ದಾವೆಂಬ ಆತುಮದ ತೃಪ್ತಿಯ ಅನುಭವಿಸುತ್ತಿರುವಾಗ ಲಂಗೋಟಿ ತಾತ ಭುಜದ ಮೇಲೆ ಕೈಯಿಟ್ಟಿದ್ದು ಗಲಿಬಿಲಿಯಾಯ್ತು. ಭುಜಮುಟ್ಟಿದ ಕೈಯ ಕಡೆಗೆ ಮುಖ ಮೇಲೆತ್ತಿ ನೋಡಿದರೆ ಅಲ್ಲಿ ಆ ಗವ್ವೆಂಬೋ ಗವ್ವಗತ್ತಲಲ್ಲೂ ತಾತನ ಕಣ್ಣುಗಳಲ್ಲಿ ಬೆಳಕಿನ ಹೊಳಪಿತ್ತು. ಇಂಥದೇ ಹೊಳಪನ್ನು ಸಿದ್ಧಸಾಧುವಿನ ಕಣ್ಣಲ್ಲೂ ಕಂಡಿದ್ದೆನಲ್ಲ ಎಂದುಕೊಳ್ಳುತ್ತಿರುವಾಗಲೇ ಆ ಲಂಗೋಟಿ ತಾತ ಹೊಳೆಯ ದಡವನ್ನೇರಿ ಗುಡಿಸಿಲಿನತ್ತ ನಡೆದಿದ್ದವ ಹಿಂದಿರುಗಿ ಕೂಗಿ ಕರೆದ. ‘ಬನ್ನಿರಯ್ಯ.. ಅರ್ತಿಯಾಗುವವರೆಗೆ ಈ ನಡೆಯುವ ನೀರಿಗೂ.. ಉಸಿರಾಡುವ ಗಿಡಮರಗಳಿಗೂ, ಹುಳಹುಪ್ಪಟೆಗಳಿಗೂ, ರಾತ್ರೆ ಬದುಕು ಮಾಡುವ ಜೀವರಾಶಿಗಳಿಗೆ ಅವಕಾಶ ಮಾಡಿಕೊಡಬೇಕು. ಬನ್ನಿ ಬನ್ನಿʼ ತಾತ ನಡೆದತ್ತ.. ತನ್ನ ಜೋಳಿಗೆಯೂ ಕೈಕೋಲು ಹಿಡಿದು ವಸೂದೀಪ್ಯ ಹಿಂಬಾಲಿಸಿದ.
“ಯಾವ ಮೋಹದ ಕಾರಣಕ್ಕಾಗಿ ಬಂದಿರುವೆಯೋ ಆ ಮೋಹವನ್ನು ಬಿಡದನ್ನಕ್ಕ ನಿನಗೆ ದಾರಿ ಸಿಗಲಾರದಯ್ಯ.”
“ತಾತ, ನನ್ನೊಳಗೆ ಯಾವ ಮೋಹವೂ ಉಳಿದಿಲ್ಲ.”
“ಚಕ್ರಾಂಕದ ಅಂಬಲಿ ಉಣ್ಣುವೆಯಾ..?”
“ಬೇಡ ತಾತ…”
ಉಳಿದ ಮಾತುಗಳಿಗೆ ಈ ಕತ್ತಲು ಸೂಕ್ತವಲ್ಲ. ಜಗವೆಲ್ಲ ಮಲಗಿರುವಾಗ ನಾವು ಕಣ್ಣುಮುಚ್ಚಿ ಮಲಗಬೇಕು. ಮಲಗಿಕೋ..
ದೀಪದ ಮುಂದೆ ಕೈಮುಗಿದು, ಶಂಭೋ ಹರಹರ ಮಹಾದೇವ ಎಂದು ಮನಸಾರೆ ದೇವರ ನೆನೆದು, ದೇಹಕ್ಕೆ ಇಂಬುಕೊಡುವಷ್ಟು ನೆಲವನ್ನು ಹೊಂಡ ಮಾಡಿಕೊಂಡ ಜಾಗದಲ್ಲಿಯೇ ಗೂಡುಗಾಲು ಹಾಕಿಕೊಂಡು ಎಚ್ಚರದ ಸ್ಥಿತಿಯಲ್ಲೇ ಇರುವಂತೆ ಲಂಗೋಟಿ ತಾತ ಮಲಗಿದಾಗ ವಸೂದೀಪ್ಯನೂ ಗುಡಿಸಿಲಿನುದ್ದಕ್ಕೆ ಕಾಲು ಚಾಚಿ ಮಲಗಿಕೊಂಡ. ನಾಯಿಗಳು ಮಲಗುವ ಹಾಗೆ ಈ ಸೀಮೆಯ ಜನರು ಮಣ್ಣೊಳಗೆ ಹೊಂಡ ಮಾಡಿಕೊಂಡು ಮಲಗುತ್ತಾರಲ್ಲ..! ಈ ಮಲಗುವ ಸೋಜಿಗದ ಬಗ್ಗೆ, ನಡುದಾರಿಯಲ್ಲೆ ಬಿಟ್ಟುಹೋದ ಮುದುಕಿ ಮಾದೇವಿ ಬಗ್ಗೆ, ಕಣ್ಣೊಳಗೆ ಅಡಗಿದ್ದ ತೇಜಸ್ಸಿನ ಕುರಿತಾಗಿ ಯೋಚಿಸುತ್ತ ಅದೆಷ್ಟೋ ಹೊತ್ತಿಗೆ ಮನಸ್ಸಿನ ಅರಿವಿಗೆ ಬಾರದಂತೆ ನಿದ್ದೆ ಆವರಿಸಿತ್ತು. ಚುಮುಚುಮು ಬೆಳಕಾದಾಗ ಆ ಹೊಂಡದಲ್ಲಿ ಮಲಗಿದ್ದ ಲಂಗೋಟಿ ತಾತ ಇದ್ದಿರಲಿಲ್ಲ, ಎದ್ದು ಹೊಳೆಕಡೆಗೆ ಬಂದು ನೋಡಿದರೆ..! ಅಲ್ಲಿ ಅದೇ ಒಂಟಿಕಾಲಿನ ಭಂಗಿಯಲ್ಲಿ ಲಂಗೋಟಿ ತಾತ ನಿಂತಿದ್ದಾನೆ.
ಬಂದೆಯಾ ಬಾರಯ್ಯ..
ಸನಮಾಡಿ, ಬೆಳಗಿನ ಶೌಚಗಳನ್ನೆಲ್ಲ ಪೂರೈಸಿ ಬಂದು ನದಿಯೊಳಗೆ ಮೀಯುತ್ತಿರುವಾಗ ಹೆಣ್ಣೆಂಗಸೊಬ್ಬಳು ತೆಪ್ಪದ ಮೇಲೆ ಕುಳಿತು ಬಾಗಿ ಎರಡೂ ಬದಿಯ ಹುಟ್ಟನ್ನು ತಿರುಗಿಸಿ ನೀರ ಹಿಮ್ಮೆಟ್ಟಿಸುತ್ತಾ ಈ ದಡಕ್ಕೆ ಬಂದಳು. ಆಕೆಯ ತೆಪ್ಪದ ತುಂಬೆಲ್ಲ ಕಾಳುಕಡಿ, ಹಣ್ಣುಗಳು, ತೊಗಟೆಯ ಚೂರುಗಳು, ಉಪ್ಪು, ಮೆಣಸು, ಒಣಗಿಸಿದ್ದ ರಾಮಫಲ, ಸೀತಾ, ಲಕ್ಷಣ, ಹನುಮಫಲಗಳ ತುಂಡುಗಳನ್ನೂ, ಜೇನು, ಬೆಲ್ಲ, ಮೇಣ, ನಾರಿನ ಗಂಟು, ಒಂದಷ್ಟು ಧೂಪದ ಅಂಟುಗಳನ್ನು ತಂದಿದ್ದಳು. ತೆಪ್ಪದ ಹಗ್ಗವನ್ನು ಬೀಸಿ ದಡಕ್ಕೆ ಎಸೆದಾಗ ತಪಕ್ಕೆ ನಿಂತಿದ್ದ ಲಂಗೋಟಿ ತಾತ ಓಡಿಹೋಗಿ ಹಗ್ಗ ಹಿಡಿದುಕೊಂಡು ತೆಪ್ಪವನ್ನೆಳೆದು ಹಗ್ಗದ ತುದಿಯನ್ನು ಮುತ್ತುಗ ಮರದ ಬೊಡ್ಡೆಗೆ ಕಟ್ಟಿದ. ಹೆಂಗಸು ತೆಪ್ಪದಿಂದ ಒಂದೊಂದೇ ಸರಂಜಾಮನ್ನು ಇಳಿಸುವಾಗ ತಾತ ಸಹಾಯ ಮಾಡಿದ.
ನದಿಯೊಳಗಿದ್ದವನನ್ನು ನೋಡಿ ಆಕೆ ಕಣ್ಣು ಹೊರಳಿಸಿ ಯಾರೆಂದು ಕೇಳಿದಾಗ.. ತಾತ ನಕ್ಕು ಆಕಾಶ ಭೂಮಿಯನ್ನು ಕಣ್ಣಲ್ಲೇ ಅಳತೆ ಮಾಡುವವನ ಹಾಗೆ ಸನ್ನೆಮಾಡಿದಾಗ ಆಕೆಗೆ ಅದೇನು ಅರ್ಥವಾಯ್ತೋ ನಕ್ಕು ವಸೂದೀಪ್ಯನ ಕೈಮಾಡಿ ಕರೆದಳು.
ಮುತ್ತುಗದ ಮರದ ನೆರಳಿಗೆ ಕುಳಿತು ಸಣ್ಣ ಕೈಚೀಲದಿಂದ ಬಾಳೆಯ ದಿಂಡಿನಲ್ಲಿ ಕಟ್ಟಿದ್ದ ಬುತ್ತಿಯನ್ನು ಹೊರತೆಗೆದಳು. ಘಮ್ಮೆನ್ನುವ ಅರಷಿಣ ಪರಿಮಳದ ಕಡುಬಗಳನ್ನು ತೆಗೆದು ಮೂರುಪಾಲು ಮಾಡಿ, ಬಾಳೆಲೆಯಲ್ಲೇ ತಾತನಿಗೂ, ವಸೂದೀಪ್ಯನಿಗೂ ನೀಡಿ, ಆ ಕಡುಬಿನ ಮೇಲೆ ಸಣ್ಣಗಿಂಡಿಯಿಂದ ತುಸು ತುಪ್ಪವ ಎರೆದು ತಿನ್ನಿರೆಂದು ಸನ್ನೆಮಾಡಿ, ತಾನೊಂದು ಪಾಲನ್ನು ಮುಂದಿಟ್ಟುಕೊಂಡು ತಿನ್ನತೊಡಗಿದಳು. ವಸೂದೀಪ್ಯ ತಾತನ ಮುಖ ನೋಡಿದರೆ ಆತ ಕಣ್ಮುಚ್ಚಿ ಸುಮ್ಮನೆ ತಿನ್ನಲು ಸನ್ನೆ ಮಾಡಿದ.
“ನಾನು ಬನವಸೆಯ ಮಧುಕೇಶ್ವರನ ಸನ್ನಿಧಾನದ ಚಾಕರಿಯ ಮಾಡುವಾಕೆ. ಬಳ್ಳಗಾವಿ ನನ್ನೂರು. ನನ್ನ ಯಜಮಾನರು ಈ ಸೀಮೆಯಲ್ಲೇ ಒಳ್ಳೆ ನಾದದ ಕೈವುಳ್ಳ ಮದ್ದಳೆಕಾರ. ನನಗೊಬ್ಬ ಮಗನಿದ್ದಾನೆ. ತಂದೆಮಕ್ಕಳಿಬ್ಬರೂ ಬನವಸೆಯಲ್ಲಿರುತ್ತಾರೆ. ನಾನು ಬಳ್ಳಗಾವಿಗೆ ಬಂದು ನನ್ನ ತವರು ದೇವರ ಕಾರ್ತಿಕಕ್ಕೆ ಬಂದು ತಿಂಗಳೊಪ್ಪತ್ತು ಇದ್ದು ಸೇವೆ ಮಾಡಿ ಮತ್ತೆ ಬನವಸೆಗೆ ಹೋಗುತ್ತೇನೆ… ಯಾವೂರು ತಾತಪ್ಪ ಈ ಹೊಸಮುಖದ ಮಧುಕೇಶನದ್ದು?”
“ತಾಯೇ ನಾನು ಕೇಳಲಿಲ್ಲ. ಅವನು ಹೇಳಲಿಲ್ಲ. ನೆನ್ನೆ ಸೂರ್ಯ ಮುಳಗುವಾಗ ಬಂದ, ಧ್ಯಾನಕ್ಕೆ ಕುಳಿತ. ಅವನು ಹಿಡಿದಿದ್ದ ಕೋಲಿನ ತುದಿಯಲ್ಲಿ ಸಿದ್ಧಸಾಧುವಿನ ಗುರುತಿನ ದಾರವಿತ್ತು. ಹಾಗಾಗಿ ನೆಚ್ಚಿದೆ.”
“ಅರಿಷಿಣ ಎಲೆಯಲ್ಲಿ ಬೇಯಿಸಿದ ಕಡುಬು ಹಿಡಿಸಿತೇನಪ್ಪಾ ಮಧುಕೇಶಾ…”
“ನನಗೆ ಹೊಸ ರುಚಿ.”
“ಸಾಧಕನ ನಾಲಗೆಗೆ ರುಚಿ ತಗುಲಬಾರದು, ಸುಖದ ಬಯಕೆಯೂ, ಮೋಹದ ಒಲವು, ಹಿತದ ಹೊದಿಕೆ, ಹಿಂದಣ ಜೀವನದ
ನೆನಪುಗಳು, ಮುಂದಣ ಜೀವನದ ಕುತೂಹಲವೂ, ಮಾತಿನ ಚಪಲದಲ್ಲೇ ಅರಿಯುವ ಹಂಬಲವೂ, ಕೆಟ್ಟಕಲ್ಪನೆಯ ಕತೆಗಳೂ ತುಸು ಸತ್ಯದ ದಾರಿಯಿಂದ ದಿಕ್ಕುತಪ್ಪಿಸುತ್ತಾವೆ.”
ಉಂಡು ಕೈತೊಳೆಯಲೆದ್ದಾಗ ಜೋಡೆತ್ತಿನ ಬಂಡಿಗಳೆರಡು ಗುಳುಗುಳುಕ್ ಚಕ್ರದ ಕೀಲಿಗೆ ಕಟ್ಟಿದ್ದ ಗಂಟೆಗಳ ಸದ್ದು ಮಾಡುತ್ತ ಹೊಳೆದಂಡೆಗೆ ಬಂದು ನಿಂತವು. ಬಂಡಿಯವರೂ ಮುತ್ತುಗದ ನೆರಳಿಗೆ ಬಂದು ಕುಳಿತು ಕಡುಬು ತಿಂದು, ಹೊಳೆನೀರು ಕುಡಿದೆದ್ದಾಗ ಅಲ್ಲಿದ್ದ ಸಾಮಾನು ಸರಂಜಾಮುಗಳನ್ನು ವಸೂದೀಪ್ಯ-ತಾತಪ್ಪನು ಬಂಡಿಗಳಿಗೆ ತುಂಬಿಕೊಟ್ಟರು. ಆ ಸುಜ್ಞಾನವ್ವ ತಾತನಿಗೆ ಸನಮಾಡಿ ಕೈಯಲ್ಲಿದ್ದ ಕಂದಫಲಗಳ ಗಂಟೊಂದನ್ನು ತಾತನ ಕೈಗೆ ಕೊಟ್ಟು ಬಂಡಿಯೇರಿ ಹೊರಟಳು.
“ಮಧುಕೇಶ.. ಯಾವ ಹಂಬಲಗಳನ್ನಿಟ್ಟುಕೊಳ್ಳಬೇಡ… ಅರಿತ ಅರಿವನ್ನು ತಲೆದಿಂಬಾಗಿಸಿಕೊಳ್ಳದೆ ಈ ನದಿ ಎಲ್ಲಿಂದಲೋ ಹೊರಟು ಇಲ್ಲಿಗೆ ಬಂದು ಇಲ್ಲಿಂದ ಮುಂದೆ ಹೋಗುವ ಹಾಗೆ ಅರಿವಿನ ನೀರಾಗು. ನಿರಂತರ ಚಲಿಸುವ ಅರಿವಾಗು…”
“ಆಗಲಿ ತಾಯೇ…”
ವಸೂದೀಪ್ಯ ತಲೆಬಾಗಿ ವಂದಿಸಿದ. ಬಂಡಿಗಳೆರಡೂ ಬಂದ ದಾರಿಯಲ್ಲೆ ಗುಳುಗುಳುಕ್ ಚಕ್ರದ ಕೀಲಿಗೆ ಕಟ್ಟಿದ್ದ ಗಂಟೆಗಳ ಸದ್ದಿನೊಂದಿಗೆ ಹಿಂದಿರುಗಿದವು. ತಾತ ಮುತ್ತುಗದ ಮರದ ಬುಡವನ್ನು ಗಟ್ಟಿಯಾಗಿ ತಬ್ಬಿಕೊಂಡು ಮರದ ಕಾಂಡಕ್ಕೆ ಕಿವಿಗೊಟ್ಟು ಏನನ್ನೋ ಆಲಿಸುವುದಕ್ಕಾಗಿ ಕಾತರನಾಗಿದ್ದ. ವಸೂದೀಪ್ಯನ ಮನದಲ್ಲಿ ಏನನ್ನೋ ಕೇಳುವ ಪ್ರಶ್ನೆಯೊಂದಿದ್ದರೂ ತಾತನನ್ನು ಮಾತನಾಡಿಸಲಾಗದೆ ತುಸು ಹೊತ್ತು ಕಾದುಕುಳಿತ. ಆ ಕಾಯುವಿಕೆಗೆ ದಿನ ಕಳೆದು ದಿನ ಮೂಡಿದರೂ ತಾತಪ್ಪ ತಬ್ಬಿಕೊಂಡಿದ್ದ ಮರ ಬಿಟ್ಟು ಅಲುಗಾಡಲಿಲ್ಲ. ಆ ಅಂಗೈಯಗಲದ ಎಲೆಗಳ ಮರೆಯಲ್ಲಿ ಮುತ್ತುಗದ ಮೊಗ್ಗುಗಳಾದದ್ದೆ ಆ ಮರದ ಬುಡದಲ್ಲಿ ಕಟ್ಟಿರುವೆಗಳೆದ್ದವು… ಸುತ್ತಲೂ ಮಣ್ಣು ಪೇರಿಸಿ ಕೋಟೆ ಕಟ್ಟಿಕೊಂಡವು. ಮತ್ತೊಂದು ದಿನಕಳೆದಾಗ ಆ ಮೊಗ್ಗುಗಳು ಬಿಡಿಬಿಡಿ ಹೂವಾದವು. ಆಗ ಬುಡದಲ್ಲಿದ್ದ ಕಟ್ಟಿರುವೆಗಳು ಮರನೇರಿ ಹೂವಿನೊಳಗಿದ್ದ ದ್ರವದ ಉಂಡೆ ಕಟ್ಟಿಕೊಂಡು ಮರನಿಳಿದು ಗೂಡು ಸೇರಿದವು. ಲಂಗೋಟಿ ಹೊರತಾಗಿ ಏನನ್ನೂ ಹಾಕಿಕೊಳ್ಳದ ತಾತಪ್ಪನ ಮೈಯೆನ್ನುವುದು ಮರದಂತಾಗಿತ್ತು. ಎರಡು ಹಗಲು ಒಂದು ರಾತ್ರಿ ತಾತಪ್ಪನಿಗೆ ಕೇಳಬೇಕೆಂದಿದ್ದ ಪ್ರಶ್ನೆಯನ್ನು ಗಂಟಲಲ್ಲಿಟ್ಟುಕೊಂಡು ಕಾದಿದ್ದ ವಸೂದೀಪ್ಯನಿಗೆ ಮಗದೊಂದು ರಾತ್ರಿಯ ತಣುಗಾಳಿ ಕಣ್ಣರೆಪ್ಪೆಗೆ ತಾಗಿ, ತಾಗಿದ ರೆಪ್ಪೆ ಕಣ್ಣಗುಡ್ಡಗೆ ಮುಟ್ಟಿದಾಗ ಆಯಾಸದ ನಿದ್ದೆ ಬಂದು ಮಲಗಿಬಿಟ್ಟ.
ಮಾರನೇ ದಿನ ಎಚ್ಚರಾದಾಗ ಅಲ್ಲಿ ಗೂಡುಕಟ್ಟಿದ್ದ ಇರವೆಗಳು ಇವನ ಮೇಲೆ ಹಾಯ್ದು ಮತ್ತೊಂದು ಮನೆಯತ್ತ ಹೊರಟಿದ್ದವು. ಕಣ್ಣುಬಿಟ್ಟರೆ ತಾತಪ್ಪ ಇವನ ಮುಂದೆ ತುದಿಗಾಲಲ್ಲಿ ಕುಳಿತು… ಎದ್ದೇಳಬೇಡ, ಅಲುಗಾಡಬೇಡ ಎಂಬಂತೆ ಸನ್ನೆ ಮಾಡುತ್ತಿದ್ದಾನೆ.
“ಮೈಮರೆಯಬೇಡ ಅಯ್ಯಾ.. ಉಸಿರಿನ ಗತಿಯನ್ನೂ ಬದಲಿಸಬೇಡ. ಹೇಗೆ ಒಂದು ಲಯದಲ್ಲಿ ಉಸಿರಾಡುತ್ತಿರುವೆಯೋ ಹಾಗೆ ಉಸಿರೆಳೆದುಕೊಂಡು ಬಿಡು. ಸಾಧ್ಯವಾದರೆ ಅರೆ ಎಚ್ಚರಗೊಂಡಿರುವ ಮನಸ್ಸನ್ನು ಪೂರ್ತಿಯಾಗಿ ಎಚ್ಚರಗೊಳಿಸಿಕೋ, ಇರುವೆಯ ಹೆಜ್ಜೆ ಸದ್ದೇನಾದರೂ ಕೇಳುವುದೋ ಆಲಿಸು ನನ್ನಯ್ಯಾ…”
ಏನಾಗುತ್ತಿದೆ ಎಂಬ ಭಯವಿದ್ದರೂ ಲಂಗೋಟಿ ತಾತ ಹೇಳಿದಂತೆ ಕೊರಡಿನ ಹಾಗೆ ಸುಮ್ಮನೇ ಬಿದ್ದುಕೊಂಡಿದ್ದರೂ ಉಸಿರಾಡುವ ಉಸಿರಿನ ಏರಿಳಿತ ತುಸು ಹೆಚ್ಚಾದಂತೆನಿಸಿ ಮಂದವಾಗಿ ಉಸಿರೆಳೆದುಕೊಂಡು ಬಿಡುವುದರ ಕಡೆಗೆ ಲಕ್ಷ್ಯಕೊಟ್ಟ ವಸೂದೀಪ್ಯನಿಗೆ ಆ ಪುಟ್ಟದಾದ ಇರುವೆಯ ಹೆಜ್ಜೆಗಳು ಕಚಗುಳಿಯಿಟ್ಟಂತೆನಿಸಿತು. ಕಿವಿಯ ಮಗ್ಗುಲಲ್ಲಿ ಹತ್ತಿ ಮುಖದಮೇಲೇರಿ, ಎದೆಯ ಮೇಲೆ ಹರಿದು ಎಡಗೈ ಮೂಲಕ ಹೋಗಿಬರುತ್ತಿದ್ದ ಕಟ್ಟಿರುವೆಗಳಿಗೆ, ಅವು ಗುರುತು ಮಾಡಿಕೊಂಡಿದ್ದ ದಾರಿಗೆ ಯಾವ ಅಡ್ಡಿ ಆತಂಕವಾಗದಂತೆ ಸುಮ್ಮನೇ ಮಲಗಿರಲಾಗಿ ಎದುರಿಗೆ ಕುಳಿತಿದ್ದ ತಾತನು ಕುತೂಹಲದಿಂದ ಆ ಇರುವೆಗಳ ಸಾಲನ್ನೆ ದಿಟ್ಟಿಸುತ್ತ ಬಿಟ್ಟಕಣ್ಣ ಅರಿಳಿಸಿ ಕುಳಿತಿದ್ದ. ನಡುನೆತ್ತಿಗೆ ಬಂದ ಸೂರ್ಯ ಬಾಗಿ ಪಡುವಣಕ್ಕೆ ಜಾರುವ ಸರಿಹೊತ್ತಿನವರೆಗೂ ಈತ ಮಲಗಿದಲ್ಲೇ ಮಲಗಿದ್ದ. ಆತ ಕುಳಿತಲ್ಲಿಯೇ ಕುಳಿತಿದ್ದ. ಕಟ್ಟಕಡೆಯ ನಾಲ್ಕೈದು ಇರುವೆಗಳಿಗೆ ದಿಕ್ಕುತಪ್ಪಿತೋ ಏನು ಈರುಳುಗಣ್ಣೋ ಹೊರಟಿದ್ದ ದಾರಿ ಬದಲಿಸಿಕೊಂಡು ಹೊಟ್ಟೆಯ ಮೇಲೆಲ್ಲ ಹರದಾಡಿ ದೇಹದಿಂದ ಉರುಳಿ ನೆಲಕ್ಕೆ ಬಿದ್ದಾಗ.. ಊಫ್ ಎಂದು ಉಸಿರುಗರೆದು ತಾತ ಕಣ್ಮುಚ್ಚಿದ. ವಸೂದೀಪ್ಯನಿಗೂ ಜೀವಗಟ್ಟಿ ಹಿಡಿದು ಉಸಿರಾಡಿದ್ದ ಸುಸ್ತಿನಿಂದ ಚಣಕಾಲ ಹಗೂರಾದಂತೆನಿಸಿ ಎದ್ದು ಕುಳಿತ.
“ತಾತ ಇರುವೆಯ ಹೆಜ್ಜೆ ಸದ್ದು ಕೇಳುವುದೇ..?”
“ಶ್ಶ… ಸುಮ್ಮನಿರು. ಹೂಬಿಟ್ಟ ಕೂಡಲೇ ಹಣ್ಣಿನ ರುಚಿ ತಿಳಿಯಲಾರದು. ಹೂ ಉದುರಿ ಮೊಗ್ಗು ಮಿಡಿಯಾಗುವುದು, ಮಿಡಿ ಬಲಿತು ಕಾಯಾಗುವುದು, ಕಾಯಿ ಹಣ್ಣಾಗುವುದು. ಈ ಭೂಮಿ ಇದೆಯಲ್ಲ ಅಯ್ಯಾ ಇದು ನಾನು ನೀನು ಹುಟ್ಟಿಬೆಳೆದು ಬದುಕಿದಂತೆಯೇ ಹಲವು ಸೋಜಿಗಗಳ ಒಡಲು. ಕಣ್ಣಬಿಟ್ಟು ನೋಡು.. ಇಲ್ಲಿ ಹರಿದಾಡುವ ಜೀವಿಗಳು, ವಾಲಾಡುವ ಗಿಡಮರ ಬಳ್ಳಿಗಳು, ಅದ್ಯಾಕೆ ಗಾಳಿಗೊಡಗೂಡಿ ಎಲ್ಲಿಂದಲೋ ಬಂದು ಬೀಳುವ ಬೀಜಗಳು, ಹಕ್ಕಿ ಹಣ್ಣು ತಿಂದು ಪಿಕ್ಕೆ ಮಾಡುವ ಪಿಕ್ಕೆಯೊಳಗೂ ಸೃಷ್ಟಿಯ ಸೊಬಗಿದೆ, ಉಸಿರಿನ ಜೀವತ್ರಾಣವಿದೆ. ಘಮ್ಮೆನ್ನುವ ಪರಿಮಳವೂ, ಜುಳುಜುಳು ಹರಿಯುವ ನದಿಯ ಓಟವೂ ಎಲ್ಲವೂ.. ಈ ಎಲ್ಲದನ್ನು ಅರಗಿಸಿಕೊಳ್ಳಲು ಸಜ್ಜಾಗು. ನೀನು ಬಂದ ಮೊದಲದಿನ ಕಣ್ಣರೆಪ್ಪೆಯ ತೆರೆದು ನಿನ್ನಿಷ್ಟದ ಶಣ್ಣ ಲಿಂಗುವನ್ನು ನೋಡುತ್ತಿದ್ದೆಯಲ್ಲ ಅಯ್ಯಾ… ಅದು ಅನಿಮಿಷ ತತ್ವ. ಆ ತತ್ವ ಅರಿವಿಗೆ ಬರಬೇಡವೇ..!”
“ಅದನ್ನು ಅರಿತು.. ಮೊನ್ನೆ ನಿಮ್ಮ ಕಂಗಳಲ್ಲಿ ಒಡಲುಗೊಂಡ ಮುಸ್ಸಂಜೆಯ ಬೆಳಕಿನ ಮೊತ್ತವನ್ನು ನಾನು ಅರಿಯಬೇಕೆಂದೇ ಬಂದೆ ತಾತ…”
“ಅಯ್ಯಾ ಅನಿಮಿಷಯ್ಯ.. ಇದು ಅನುಭವದ ತತ್ವ. ಅನುಭವಿಸದೆ ಅನುಭವಕ್ಕೆ ಬಂದ ಹಾಗೆ ಮಾತಿನೊಲುಮೆಯಲ್ಲಿ ಅರಿಯಲು ಬಾರದ ಘನತತ್ವ. ಇಡೀ ಮೂಲೋಕವನ್ನೂ ನಮ್ಮೊಳಗೆ ಗರ್ಭೀಕರಿಸಿಕೊಳ್ಳುವ ಸಾಧನ. ಅಗಾ ಅಲ್ಲಿ ನೋಡು ಹರಿಯುವ ನದಿ. ನೀ ಕಂಡ ನೀರು ಹರಿದು ಮುಂದೆಲ್ಲೋ ಹೊರಟಿದೆ. ಹಿಂದಿನಿಂದ ಹರಿದು ಬಂದ ನೀರು… ನೀ ಮೊದಲು ಕಂಡ ನದಿಯಲ್ಲ. ಹಾಗಾಗಿ ಆಗ ಕಂಡ ನದಿಯನ್ನೇ ನದಿಯಂದು ನೀನು ಭ್ರಮಿಸಿರುವೆ. ಈ ಭ್ರಮೆ ಒಮ್ಮೆ ಮನದೊಳಗೆ ಅಚ್ಚಾದರೆ ಆ ಅಚ್ಚೊತ್ತಿದ ಅನುಭವದಲ್ಲೇ ಮಾತುಗಳನ್ನು ಹುಟ್ಟಿಸಿಕೊಂಡು… ಚೀ ಮಾತಿನೆಂಜಲದು.”
“ಮಾತಿನೆಂಜಲು.”
“ಶ್ಶ… ಮಾತನಾಡಬೇಡ. ನೀನು ದನಿ ತೆಗೆದರೆ ಕೇಳುವ ಕಿವಿಗಳು, ನೋಡುವ ಕಣ್ಣುಗಳು, ಮೂಗು, ನಾಲಗೆ, ಚರ್ಮ… ಮೋಹಕವಾದುದನ್ನು ಮಾತ್ರ ಬಯಸುತ್ತವೆ. ಒಳಗಿಳಿಯಬೇಕು ಅನಿಮಿಷಯ್ಯ…”
“ನಾನು ಅನಿಮಿಷಯ್ಯನಲ್ಲ…”
“ಆಗ ನಿನ್ನ ಕಣ್ಣುಗಳಲ್ಲಿ ಯಾವ ಚಲನೆಯೂ ಇದ್ದಿರಲಿಲ್ಲ. ನೋಡು ಒಂದು ಕ್ಷಣ ಹೆಸರು ಹೇಳಿದಾಗ ನಿನ್ನ ಕರೆಯುವ ಹೆಸರು ನೆನಪಾದದ್ದೆ ರೆಪ್ಪೆಗಳು ಪಟಪಟ ಬಡಿದುಕೊಂಡು ಹಿಂದಣ ಬದುಕಿಗೆ ಒಯ್ದವು. ನೆನಪಿನ ಮೋಹ. ಮುಂದಣದ್ದು ಬದುಕಿನ ಭ್ರಮೆ. ಇವೆರಡನ್ನು ಬದಿಗಿಟ್ಟು ಇಂದು ಈ ಕ್ಷಣ ಬದುಕುವ ಅನಿಮಿಷನಾಗು.”
ನಿನ್ನೆ ಮನದಲ್ಲಿ ಉಳಿದಿದ್ದ ಪ್ರಶ್ನೆ ನೆನಪಾಗಿ ತುಟಿತೆರೆಯಬೇಕೆಂದುಕೊಳ್ಳುವಾಗ ಲಂಗೋಟಿತಾತ ತುಟಿಗಳೆರಡನ್ನು ಮುಚ್ಚಿಕೊಂಡು ತೋರುಬೇರಳನ್ನು ತುಟಿಗಳ ಮೇಲಿಟ್ಟುಕೊಂಡ. ಆ ತೆಪ್ಪದೊಳಗೆ ಬಂದಿದ್ದ ಅಬ್ಬೆ ಕೊಟ್ಟ ಕಂದಫಲಗಳನ್ನು ಎತ್ತಿಕೊಂಡು ತಾತ ಗುಡಿಸಿಲಿನತ್ತ ಹೊರಟ. ಅನಿಮಿಷನೆಂಬ ಹೊಸನಾಮಾಂಕಿತನಾದ ನಮ್ಮ ಕತಾನಾಯಕರಾದ ವಸೂದಿಪ್ಯ ಒಂದು ಒಣಗಿದ ಕಟ್ಟಿಗೆಯ ತುಂಡನ್ನು ತೆಗೆದುಕೊಂಡು ಹರಿಯುವ ನೀರಿಗೆ ಎಸೆದ. ಅದು ನೀರಿನ ಸೆಳವಿಗೆ ಸರಿಯಾಗಿ ಹರಿಯುತ್ತ ಮುಂದೆಮುಂದಕೆ ಹೋದುದನ್ನು ನೋಡುತ್ತಾ ನಿಂತಲ್ಲೇ ನಿಂತ.
(ಮುಂದುವರೆಯುವುದು…)




