Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೀಗೊಂದು ಹುಣ್ಣಿಮೆ…
Share:
Articles October 19, 2025 ಕೆ.ಆರ್ ಮಂಗಳಾ

ಹೀಗೊಂದು ಹುಣ್ಣಿಮೆ…

ಬೆಳಗಿನ ಚುಮುಚುಮು ಬಿಸಿಲು. ಹಿಂದಿನ ರಾತ್ರಿ ಬೆಂಗಳೂರಿನಲ್ಲಿ ಭಾರೀ ಮಳೆ. ಹುಬ್ಬಾ ಮಳೆಯ ಚಳಿ ಬೆಳಗಿಗೂ ಆವರಿಸಿಕೊಂಡಿತ್ತು. ಒಂದು ವಾರದಿಂದ ಯೋಜನೆ ಹಾಕಿಕೊಂಡ ಹಾಗೇ ನಮ್ಮ ಪ್ರಯಾಣ ಆರಂಭವಾದದ್ದು ಮುಂಜಾನೆ ಹೊತ್ತಿಗೇ. ಮಾಲೂರಿನ ಕೋಡಹಳ್ಳಿ ಗೇಟ್ ಹತ್ತಿರ ‘ಗುರುಪಥ’ದ ಬಳಗವೆಲ್ಲಾ ಜಮಾಯಿಸಿ, ಅಲ್ಲಿಂದ ಬೇರಕೆ, ದೊಡ್ಡಿ ಮಾರ್ಗವಾಗಿ ತಮಿಳುನಾಡಿನ ಹೊಸೂರು ತಾಲೂಕಿಗೆ ಸೇರಿದ ಅತ್ತಿಮುಗಂ ಊರಿನ ಸಮೀಪದ ಆ ‘ತಂಪುದಾಣ’ ತಲುಪಿದಾಗ ಚಳಿ, ಮಳೆಗಳೆಲ್ಲಾ ಮಾಯವಾಗಿ ಸ್ವಚ್ಚ ಆಗಸದಲ್ಲಿ ಸೂರ್ಯ ನಿಚ್ಚಳವಾಗಿದ್ದ.

ಮುಖ್ಯರಸ್ತೆಯಿಂದ ಒಂದೆರಡು ಫರ್ಲಾಂಗು ಒಳದಾರಿಯಲ್ಲಿ ಹೋದಾಗ ಸಿಕ್ಕಿದ್ದೇ ಆ ‘ತಂಪುದಾಣ’. ದೊಡ್ಡ ಬಂಡೆಗಳು, ಕಿರು ಗುಡ್ಡ, ಆ ಗುಡ್ಡದ ಮುಂದೆ, ಅದಕ್ಕೆ ಆತುಕೊಂಡಂತೆ ಮುನೇಶ್ವರ ಸ್ವಾಮಿಯ ಗುಡಿ, ಅದರ ಮುಂದಕ್ಕೆ ಬಿಡು ಬೀಸಾಗಿ ನಿಂತ ಆಲ ಮತ್ತು ಅರಳೆಯ ಬಹುದೊಡ್ಡ ಮರಗಳು. ಕಣ್ಣು ಆ ಹಸಿರುತಂಪನ್ನು, ಬಂಡೆಗಳ ಒರಟು ಚೆಲುವನ್ನು ಕಣ್ತುಂಬಿಕೊಳ್ಳುವಾಗ ದೃಷ್ಟಿಗೆ ಬಿದ್ದದ್ದು ಗುಡಿಗೆ ಹತ್ತುವ ಕೆಳ ಮೆಟ್ಟಿಲಿನ ಎದುರು ಚಿಕ್ಕಕಲ್ಲಿನ ಮೇಲೆ (ಸಣ್ಣದಾದ ಬಲಿಪೀಠ) ಒರಗಿಕೊಂಡ ಕೋಳಿಯೊಂದರ ಕುತ್ತಿಗೆ. ಮೇಕೆ ಮತ್ತು ಕೋಳಿಗಳ ಬಲಿ ಭಾರತದ ನಗರಗಳಲ್ಲಿ, ಹಳ್ಳಿಗಾಡುಗಳಲ್ಲಿ ಸಾಮಾನ್ಯವಾಗಿದ್ದರೂ ಹೀಗೆ ಬಲಿಯೊಂದನ್ನು ನಾನು ಹತ್ತಿರದಿಂದ ನೋಡಿದ್ದು ಇದೇ ಮೊದಲ ಸಲ.

ಹುಣ್ಣಿಮೆ, ಅಮವಾಸ್ಯೆ ದಿನಗಳಲ್ಲಿ ಗುರುಮಾರ್ಗದ ಸಾಧಕರೆಲ್ಲರೂ ಒಂದೆಡೆ ಸೇರಿಕೊಂಡು ಮಾತನಾಡಿಕೊಳ್ಳುವುದು ವಾಡಿಕೆ. ಹಲವು ದಿಕ್ಕಿಗೆ ಹಂಚಿಹೋದ ನಮ್ಮದೂ ಅಂಥದೊಂದು ಪುಟ್ಟ ಸಮುದಾಯ. ಅವಕಾಶ ಸಿಕ್ಕಾಗ ತಲೆಮಾರು ಕುಟೀರದಲ್ಲಿ ಸೇರಿಕೊಳ್ಳುವ ನಾವು ರಾತ್ರಿಯಿಡೀ ಹೊರಗೆ ಬೆಂಕಿಯ ಸುತ್ತ ಕುಳಿತು ಮಾತು, ಧ್ಯಾನ, ಮೌನಗಳಲ್ಲಿ ಇರುತ್ತೇವೆ. ಕಳೆದ ತಿಂಗಳು ಆಯ್ಕೆ ಮಾಡಿಕೊಂಡದ್ದು ಬೆಂಗಳೂರು ಹಾಗೂ ತಮಿಳ್ನಾಡಿನ ಗಡಿಯಲ್ಲಿರುವ ಈ ತಂಪುದಾಣವನ್ನು. ನಗರ ಜೀವನದ ಗಡಿಬಿಡಿಯಲ್ಲಿ ಕಳೆದುಹೋದಂತಿರುವ ನಾವು ಇಂತಹದೊಂದು ಅವಕಾಶಕ್ಕಾಗಿ ಕಾಯುತ್ತಿರುತ್ತೇವೆ. ಅರಳಿ ಮರದ ಸುತ್ತಲಿನ ವಿಶಾಲವಾದ ಕಲ್ಲುಹಾಸಿನ ಮೇಲೆ ಚಾಪೆಗಳನ್ನು ಹರಡಿ ಕುಳಿತು, ತಂದಿದ್ದ ಇಡ್ಲಿ, ಚಿತ್ರಾನ್ನಗಳನ್ನು ಹೊಟ್ಟೆಗಿಳಿಸಿದಾಗ ದೇಹದಲ್ಲಿ ಚೈತನ್ಯ ತುಂಬಿಕೊಂಡಿತ್ತು.

ಏನಿದು ಗುರುಮಾರ್ಗ?
ಎಲ್ಲಿಗೆ ದಾರಿ? ಯಾರಿಗೆ ದಾರಿ? ಈ ದಾರಿಯ ಅಗತ್ಯವೇನು?

ಶರಣರಲ್ಲಿ ಅದ್ಭುತವಾದ ಜೀವನ ಕೌಶಲ್ಯವಿತ್ತು. ಎಂತಹುದೇ ಸನ್ನಿವೇಶವಿರಲಿ, ಯಾವುದೇ ಪರಿಸ್ಥಿತಿಯಲ್ಲಿರಲಿ, ಏನೇ ಆರ್ಥಿಕ ಸ್ಥಿತಿಗತಿಗಳಿರಲಿ ಸೊಗಸಾಗಿ, ನೆಮ್ಮದಿಯಿಂದ ನಿರುಮ್ಮಳವಾಗಿ ಜೀವಿಸುವ ಕೌಶಲ್ಯವನ್ನು ಅವರು ಕಂಡುಕೊಂಡಿದ್ದರು. ಇಂತಹ ಜೀವನ ಕಲೆ ಯಾರಿಗೆ ಬೇಡ? ಪ್ರತಿ ಜನಾಂಗಕ್ಕೂ ಇದು ಅವಶ್ಯ ಬೇಕು. ನಮ್ಮ ಬದುಕನ್ನು ನಮ್ಮ ಕೈಯಲ್ಲಿಟ್ಟುಕೊಂಡು ಹೇಗೆ ನೆಮ್ಮದಿಯಿಂದ, ಆರೋಗ್ಯದಿಂದ ಯಾವ ಮಾನಸಿಕ ಹೊರೆಗಳಿಲ್ಲದೆ ಬದುಕಬಹುದೆಂಬುದಕ್ಕೆ ಕೈಗಂಬಿ ಇದು. ಗುರುಮಾರ್ಗಕ್ಕೆ ಸಾವಿರಾರು ವರ್ಷಗಳ ಹಿಂದಿನ ಚರಿತ್ರೆಯಿದೆ. ಬಸವಣ್ಣನವರು ಹೇಳಿದ್ದಾರಲ್ಲಾ, ‘ಶಿವಪಥವನರಿವೊಡೆ ಗುರುಪಥವೇ ಮೊದಲು’ ಅಂತ, ಆ ಗುರುಪಥ!! ಇಂದಿನ ಯುಗಕ್ಕೂ ಹಾಗೂ ಮುಂದೆ ಬರುವ ಎಲ್ಲಾ ತಲೆಮಾರುಗಳಿಗೂ ಸಲ್ಲುವಂತಹ ದಾರಿ.

ಈ ಮಾರ್ಗದ ವಿಶೇಷತೆ ಎಂದರೆ ಯಾರ ಮೇಲೂ ಯಾರೂ ಯಾವ ಸಿದ್ಧಾಂತವನ್ನೂ ಹೇರುವುದಿಲ್ಲಾ. ಹಿಂದೆ ಯಾರೋ ಆದೇಶಿಸಿದ್ದಾರೆ, ಯಾವುದೋ ಶಾಸ್ತ್ರ ಅಪ್ಪಣೆ ಕೊಡಿಸಿದೆ ಎನ್ನುವುದಕ್ಕೆಲ್ಲಾ ಕವಡೆ ಕಿಮ್ಮತ್ತೂ ಇಲ್ಲ. ಪರೀಕ್ಷೆ ಮಾಡದೆ ಏನನ್ನೂ ಒಪ್ಪುವಂತಿಲ್ಲಾ. ಎಲ್ಲವನ್ನೂ ಪ್ರಶ್ನೆ ಮಾಡಿಯೇ ತಿಳಿಯುವುದು. ಅನುಭವಕ್ಕೆ ದಕ್ಕುವುದನ್ನು ಮಾತ್ರವೇ ಒಪ್ಪುವುದು, ಅಪ್ಪುವುದು, ಮಾತನಾಡುವುದು. ಯಾವುದು ಪ್ರಾಕೃತಿಕವಲ್ಲವೋ, ನಾಟಕೀಯವೋ ಅದು ನಿರಾಕರಿಸಲ್ಪಡುತ್ತದೆ. ನಂಬಿಕೆ, ಭಾವನೆಗಳ ರೂಪದಲ್ಲಿ ತಲೆಯನ್ನು ಹೊಕ್ಕಿರುವ ಅಪಾರ್ಥಗಳು ಖಾಲಿಯಾಗುತ್ತವೆ. ಹತಾಶೆ, ಮನಸ್ತಾಪ, ಭಯ, ದುರಾಸೆ, ತಾಕಲಾಟ, ತಲ್ಲಣಗಳಲ್ಲಿ ತಳಮಳಿಸದಂತೆ ಕಾಪಾಡುತ್ತದೆ. ಸಂಬಂಧಗಳಲ್ಲಿ ಜೀವಂತಿಕೆ ತುಂಬಿಕೊಳ್ಳುತ್ತದೆ. ತಾನೂ ನೆಮ್ಮದಿಯಿಂದಿದ್ದು, ತನ್ನನ್ನು ಆಶ್ರಯಿಸಿರುವ ಜೀವಗಳಿಗೂ ಆ ನೆಮ್ಮದಿಯನ್ನು ಹಂಚುವ ಅದಮ್ಯ ಜವಾಬ್ದಾರಿಯನ್ನು ನಗುನಗುತ್ತಾ ನಿಭಾಯಿಸುವ ಶಕ್ತಿ ಒದಗಿಬರುತ್ತದೆ.

ಜೀವ ಜಗತ್ತನ್ನು ವಿಭಜಿಸಿರುವ ಎಲ್ಲಾ ಮನುಷ್ಯ ಸಂರಚನೆಗಳನ್ನು ದಾಟಿಕೊಳ್ಳುವುದಕ್ಕೆ ಇಲ್ಲಿ ಸಾಧ್ಯ. ಭಯ ಮತ್ತು ದುರಾಸೆಗಳನ್ನು ತುಂಬಿಕೊಂಡು ದ್ವಂದ್ವಗಳಲ್ಲಿ ದಿಕ್ಕೆಟ್ಟ ಬದುಕನ್ನೂ, ಸಮಾಜವನ್ನೂ ಸರಿದಾರಿಗೆ ತರುವ ಹಾದಿ ಇಲ್ಲಿದೆ. ಅಂದರೆ ನಮ್ಮನ್ನು, ನಮ್ಮ ಸುತ್ತಲಿನ ಸಮಾಜವನ್ನು, ಪ್ರಕೃತಿಯನ್ನು ಧ್ವಂಸ ಮಾಡುತ್ತಿರುವ ವಿಕೃತಿಗಳನ್ನು ಅನುಭವದಲ್ಲಿ ಕಂಡುಕೊಂಡು ಬಯಲುಗೊಳಿಸುವುದು… ಆ ಮೂಲಕ ಪ್ರಶಾಂತ ಬದುಕನ್ನು ನಡೆಸುವುದು. ಒಂದು ರೀತಿಯಲ್ಲಿ ಜೀವನ ಕುರಿತಾದ ಕ್ರಮಶಿಕ್ಷಣವಿದು. ನಮ್ಮನ್ನು ನಾವು ನೋಡಿಕೊಳ್ಳಲು, ಪರಿಶೀಲಿಸಿಕೊಳ್ಳಲು, ಜಗತ್ತನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಉಪಕರಣಗಳಿವೆ. ಅವುಗಳನ್ನು ಬಳಸಿಕೊಂಡು ಬುದ್ಧಿವಂತಿಕೆಯಿಂದ, ಎಚ್ಚರಿಕೆಯಿಂದ ಒಳಗನ್ನು ಅರಿಯಬೇಕು.

ಇದೊಂದು ಪಾರಂಪರಿಕ ವಿಶಿಷ್ಟ ಗುರುಧರ್ಮ. ಶಿಷ್ಯಂದಿರ ವಿವೇಕದ ಕಣ್ಣು ತೆರೆಸಲು ಗುರು ನಾನಾ ಉಪಾಯಗಳನ್ನು ಹೂಡುತ್ತಾನೆ. ಎಚ್ಚರವನ್ನು ಹೇಳಿಕೊಟ್ಟು ದಾರಿ ತೋರಿಸುತ್ತಾನೆ. ಸಿಕ್ಕಿಕೊಂಡ ಬಂಧನಗಳೆಲ್ಲಾ ಹೇಗೆ ಭ್ರಮೆಗಳೆಂಬುದನ್ನು ಅವರವರ ಅನುಭವದಲ್ಲೇ ಗೊತ್ತುಪಡಿಸಿ, ಅವೆಲ್ಲಾ ವಾಸ್ತವದಲ್ಲಿ ಇಲ್ಲದವು ಎಂದು ಪಕ್ಕಕ್ಕೆ ಸರಿಸುತ್ತಾನೆ. ಶಿಷ್ಯರನ್ನು ಇಲ್ಲಿ ಗುರುಮಕ್ಕಳೆಂದೇ ಕರೆಯುವುದು. ಗುರುಮಕ್ಕಳು ಯಾವ ಸಂಕೋಚವಿಲ್ಲದೆ ತಮ್ಮ ವರ್ತನೆಗಳನ್ನು, ವಿಚಾರಗಳನ್ನು ಗುರುವಿನೆದುರು ತೆರೆದಿಡುತ್ತಾರೆ. ಹೀಗಾಗಿ ಇದೊಂದು ಪರಿಶೀಲನಾ ಮಾರ್ಗ. ಜಂಗಮ ಮಾರ್ಗ. ಪ್ರಶ್ನಿಸುವ ಮಾರ್ಗ. ತರ್ಕಿಸುವ ಮಾರ್ಗ. ವಿಮರ್ಶಿಸುವ ಮಾರ್ಗ. ಬದುಕಿಗೆ ಅನ್ವಯಿಸಿಕೊಂಡು ನಿರುಮ್ಮಳವಾಗಿ ಜೀವಿಸುವ ಮಾರ್ಗ. ಭಾರತ ಇತಿಹಾಸದ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಂಡರಂತೂ ಈ ಮಾರ್ಗದ ಅಗತ್ಯ ಮತ್ತೂ ಸ್ಪಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಗುರುಮಾರ್ಗದ ಕುರಿತು ಇಷ್ಟು ವಿವರಣೆ ಸಾಕು.

ಮಾತು-ಮಾತು ಮಥಿಸಿದಾಗ
ಶರಣರು ಸತ್ಯದ ಕುರಿತಾಗಿ ಮಾತನಾಡಲಿಲ್ಲ, ಸತ್ಯವನ್ನು ಮಾತನಾಡಿದರು.

ನಾವೆಲ್ಲಾ ಆ ತಂಪುದಾಣದಲ್ಲಿ ಸೇರಿದ್ದು ಕಳೆದ ತಿಂಗಳ ಏಳನೆಯ ತಾರೀಖು, ಹುಣ್ಣಿಮೆಯ ದಿನ. ಅದೊಂದು ಅನುಭವದ ಪುಟ್ಟ ಕೂಟ. ಬುದ್ಧನ ಮಾತುಗಳ, ಬಸವಾದಿ ಶರಣರ ವಿಚಾರಗಳ, ತತ್ವಪದಕಾರರ ಹೆಜ್ಜೆಗಳ, ಅಚಲ ಪರಂಪರೆಯ ತತ್ವಗಳ ಸಮನ್ವಯ. ಬದುಕಿಗೆ ಸಂಬಂಧಿಸಿದ ಮಾತು- ವಿಚಾರ- ಚಿಂತನೆಗಳ ಪರಿಶೀಲನೆ. ಪರಿಶೀಲನೆಯಲ್ಲಿ ಪರಿಷ್ಕಾರವೂ ಅಡಕವಾಗಿರುತ್ತದೆ.

ಅಲ್ಲಿದ್ದ ನಮ್ಮೆಲ್ಲರ ಸಾಮಾಜಿಕ ಹಿನ್ನೆಲೆ ಬೇರೆಬೇರೆ. ವಯೋಮಾನಗಳು ಬೇರೆಬೇರೆ. ವೃತ್ತಿಗಳು, ಪ್ರವೃತ್ತಿಗಳು ಬೇರೆ ಬೇರೆ. ಬದುಕಿನ ಇಕ್ಕಟ್ಟುಗಳು ಬೇರೆ ಬೇರೆ. ಆದರೆ ಎಲ್ಲರಲ್ಲೂ ಗುರುಮಾರ್ಗದಲ್ಲಿ ನಡೆಯುವ ಅದಮ್ಯ ಉತ್ಸಾಹ. ಆ ಹಾದಿಯಲ್ಲಿಟ್ಟ ಒಂದೆರಡು ಹೆಜ್ಜೆಗಳು ತಂದ ಬದಲಾವಣೆಗಳನ್ನು ಎಲ್ಲರೂ ಕಂಡುಂಡದ್ದರಿಂದ ತಮ್ಮನ್ನು ಮತ್ತಷ್ಟು ನಿಕಃಶಕ್ಕೊಡ್ಡಿಕೊಳ್ಳುವ ಹಂಬಲ. ಕಪಟಗಳಿಲ್ಲದೆ, ತೋರಿಕೆಗಳಿಲ್ಲದೆ ಅಂತರಂಗ ತೆರೆದು ಮಾತನಾಡುತ್ತಿದ್ದರು. ಗುರುಗಳಾದ ಪದ್ಮಾಲಯ ನಾಗರಾಜ್ ಅವತ್ತು ಎಂದಿನಂತೆ ಪ್ರತಿಯೊಬ್ಬರ ಹೃದಯ ಮುಟ್ಟಿ ಮಾತನಾಡುತ್ತಾ, ಗುರುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂದೇಹಗಳನ್ನೂ, ಸಮಸ್ಯೆಗಳನ್ನೂ ನಿವಾರಿಸುತ್ತಿದ್ದರು. ಅವತ್ತು ನಮ್ಮೆಲ್ಲರ ನಡುವೆ ನಡೆದ ಅನುಸಂಧಾನದ ಒಂದೆಳೆಯನ್ನು ಅದದೇ ಮಾತುಗಳಲ್ಲಿ ಬರೆಯಲು ನಡೆಸಿದ ಪ್ರಯತ್ನ ಇದು.

ಬದುಕು ದೊಡ್ಡದಾ, ಆಸೆ ದೊಡ್ಡದಾ?-
ಈ ಒಂದು ಪ್ರಶ್ನೆಯ ಮೇಲೆನೇ ಇಡೀ ಭಾರತದ ಸಂಸ್ಕೃತಿಯ ಸಂಘರ್ಷ ಇರೋದು… ಹೇಗೆ ಗೊತ್ತಾ?

ಬದುಕಿಗೆ ದುಡ್ಡು ಬೇಕು, ಮನೆ ಬೇಕು, ಉದ್ಯೋಗ ಬೇಕು… ಆದರೆ ಈಗ ನಾವೇನು ಮಾಡುತ್ತಿದ್ದೇವೆ ಅಂದರೆ ಬದುಕಿನ ಪ್ರಾಮುಖ್ಯತೆಯನ್ನ ಕೆಳಗಿಳಿಸಿ ಯಾವುಗಳನ್ನು ಬೇಕೇ ಬೇಕೆಂದು ಊಹಿಸಿಕೊಂಡಿದ್ದೇವೆಯೋ ಅವುಗಳನ್ನೇ ತಲೆಯ ಮೇಲೆ ಹೊತ್ತುಕೊಂಡಿದ್ದೇವೆ. ಅದಕ್ಕಾಗಿಯೇ ನಮ್ಮ ಜೀವನ ಭಾರವಾಗಿರೋದು. ಜೀವನಕ್ಕಾಗಿ ಇವೆಲ್ಲಾ ಬೇಕು, ನಿಜವೇ. ಆದರೆ ಇವುಗಳಿಗಾಗಿ ಜೀವನ ಅಲ್ಲಾ ಎನ್ನುವುದನ್ನು ನಾವ್ಯಾರೂ ಗಮನಕ್ಕೇ ತೆಗೆದುಕೊಳ್ಳುತ್ತಿಲ್ಲಾ. ಭಾವನಾವಾದಿಗಳ ಸಾಂಸ್ಕೃತಿಕ ರಾಜಕಾರಣವು ಆಸೆಯ ಮೇಲೆ ಕಟ್ಟಿದ್ದು. ಮನುಷ್ಯನಲ್ಲಿ ಆಸೆಗಳನ್ನ, ಸುಖದ ಕಲ್ಪನೆಗಳನ್ನ ತುಂಬಿ ಅವುಗಳ ಈಡೇರಿಕೆಗೆ ಪೂಜೆ- ಪುನಸ್ಕಾರಗಳನ್ನು, ವ್ರತಗಳನ್ನು, ನೇಮಗಳನ್ನು, ಹರಕೆಗಳನ್ನು ಜೋಡಿಸುತ್ತಾರೆ. ಯಜ್ಞ ಮಾಡುವಾಗ- “ಓ ಇಂದ್ರ, ಓ ಕುಬೇರ ನಾನು ನಿನಗೆ ಯಜ್ಞದ ಮೂಲಕ ನಿನಗೆ ಪ್ರಿಯವಾದ ಹವಿಸ್ಸನ್ನು ಕೊಡ್ತಾ ಇದೀನಿ, ಇದನ್ನ ತಗೋ, ನನ್ನ ಶತೃಗಳನ್ನು ನಾಶ ಮಾಡು, ನನ್ನ ಸಂಪತ್ತನ್ನು ಹೆಚ್ಚಿಸು… ನಮ್ಮ ಕುಟುಂಬದ ಎಲ್ಲರ ಆರೋಗ್ಯ ಕಾಪಾಡು…” ಇದು ಯಜ್ಞದ ಉದ್ದೇಶ. ಪ್ರಪಂಚ ಏನಾದರೂ ಆಗಲಿ, ನಾನು ಚೆನ್ನಾಗಿರಬೇಕು ಎನ್ನುವ ಸ್ವಕೇಂದ್ರಿತ ದೃಷ್ಟಿಕೋನವು ಆಸೆಗಳನ್ನು ಪೋಷಿಸುತ್ತಿರುತ್ತದೆ.

ಆಸೆಗಳೇ ದುಃಖಕ್ಕೆ ಕಾರಣ. ಎಲ್ಲಿ ಆಸೆ ಇರುತ್ತೋ ಅಲ್ಲಿ ಬುದ್ಧ ಇರೋದಿಲ್ಲಾ, ಬಸವ ಇರೋದಿಲ್ಲಾ, ಶರಣರು ಇರೋದಿಲ್ಲಾ. ಹಾಗೆಂದು ಬುದ್ಧ ನಿರಾಸೆಯ ಜೀವನವನ್ನು ಹೇಳಲಿಲ್ಲಾ, ಆಸೆಯನ್ನ ಖಂಡಿಸಿದ, ಯಾಕೆಂದರೆ ಅದು ದುಃಖವನ್ನು ಉತ್ಪಾದನೆ ಮಾಡುತ್ತದೆ. ಆಸೆ ಎಷ್ಟು ಟೊಳ್ಳು ಅಂತ ಹೇಳಲಿಕ್ಕೆ ಆರ್ಯ ಅಷ್ಟಾಂಗ ಮಾರ್ಗ, ಪ್ರತೀತ್ಯ ಸಮುತ್ಪಾದ ಹುಟ್ಟಿದವು, ಷಟಸ್ಥಲಗಳು ಹುಟ್ಟಿದವು.

ಯಾವ ಸಂತರು ಏನೇ ಹೇಳಿರಲಿ ಇವತ್ತು ಮನುಷ್ಯ ಆಸೆಯನ್ನೇ ಹಿಂಬಾಲಿಸಿಕೊಂಡು ಹೋಗುತ್ತಿದ್ದಾನೆ. ಯುದ್ಧಗಳು, ಆಕ್ರಮಣಶೀಲತೆ, ಕೊಲೆ, ಹಿಂಸೆ, ದಗಾಕೋರತನ, ಮೋಸ, ವಂಚನೆ ಎಲ್ಲವೂ ಅದರಿಂದಲೇ ಹುಟ್ಟುತ್ತಿರೋದು. ಆಸೆ ಇದ್ದಲ್ಲಿ ದುರಾಸೆ ಹತ್ತಿರವಾಗುತ್ತದೆ. ಎಲ್ಲಿ ದುರಾಸೆ ಇರುತ್ತೋ ಅಲ್ಲಿ ಹಿಂಸೆ ಹೊಗೆಯಾಡಲು ಶುರುವಾಗುತ್ತದೆ. ಎಲ್ಲಿ ಹಿಂಸೆ ಇರುತ್ತೋ ಅಲ್ಲಿ ಅತೃಪ್ತಿ ಕಾಣಿಸಿಕೊಳ್ಳುತ್ತದೆ… ಜೀವನ ನರಕ ಆಗಲಿಕ್ಕೆ ಇಷ್ಟು ಸಾಕಲ್ಲವೇ?

ನಾವು ಹತ್ತು ಕನಸು ಕಂಡ್ರೆ ಎಲ್ಲವೂ ನೆರವೇರೋದಿಲ್ಲಾ. ಜೊತೆಗೆ ನಮ್ಮ ಕನಸುಗಳೂ ಸದಾ update ಆಗುತ್ತಲೇ ಇರುತ್ತವೆ. ಈ ವರ್ಷ ಲಕ್ಷದ ಕನಸು ಕಂಡರೆ, ಮುಂದಿನ ವರ್ಷ ಕೋಟಿಯ ಕನಸು ಕಾಣುತ್ತೇವೆ, ಅದಕ್ಕೂ ಮುಂದೆ ಹತ್ತು ಕೋಟಿ… ಹೀಗೆ ಹೋಗುತ್ತಾ ಇರುತ್ತದೆ, ಆಸೆಗೆ ಯಾವತ್ತೂ ಮಿತಿ ಇರೋದಿಲ್ಲಾ… ಹಾಗಾದರೆ ಯಾವಯಾವ ರೂಪದಲ್ಲಿ ಆಸೆ ನಮ್ಮೊಳಗೆ ಸೇರಿಕೊಂಡಿರುತ್ತದೆ… ಅದರ ಛದ್ಮವೇಷಗಳು ಯಾವುವು, ಅವು ಹೇಗೆ ನಮ್ಮೊಳಗೆ ಕೆಲಸ ಮಾಡುತ್ತಿರುತ್ತವೆ…

ಭಯ, ಸಂಶಯ, ದ್ವೇಷ, ಅಸೂಯೆ, ಪೂಜೆ- ಇವೆಲ್ಲವೂ ಆಸೆಯ ಛದ್ಮವೇಷಗಳು. ಭಯ- ಅಯ್ಯೋ ನನಗೇನೋ ಆಗಿಬಿಡುತ್ತೆ ಅಂತ ಹೆದರೋದು ಏನೇನೂ ಆಗದೇ ಬದುಕಬೇಕೆನ್ನುವ ಆಸೆ. ಹೊಟ್ಟೆಕಿಚ್ಚು ಯಾಕೆ ಬರುತ್ತದೆ? ನನಗಿಂತ ಒಳ್ಳೆಯ ಅವಕಾಶ ಬೇರೆಯವರಿಗೆ ಸಿಗ್ತಲ್ಲಾ ಎನ್ನುವ ಅಸಹನೆಯಿಂದ… ದ್ವೇಷ ಯಾಕೆ ಇಣುಕುತ್ತಿರುತ್ತದೆ? ಶ್ರೇಷ್ಠ-ಕನಿಷ್ಠತೆಯ ಮೇಲಾಟಗಳಿಂದಾಗಿ, ಮನೆತನಗಳ ನಡುವೆ, ದೇಶಗಳ ನಡುವೆ, ಸಾಮ್ರಾಜ್ಯಗಳ ನಡುವೆ, ಧರ್ಮ-ಧರ್ಮಗಳ ನಡುವೆ ಎಷ್ಟು ವ್ಯಾಜ್ಯಗಳಾದವು, ಎಷ್ಟು ರಕ್ತಪಾತಗಳಾದವು… ಇನ್ನು ನಾವು ಮಾಡುವ ಪೂಜೆಗಳನ್ನ ನೋಡಿಕೊಳ್ಳಿ- ನಾನು ಯಾವ ಪ್ರಯತ್ನಾನೂ ಮಾಡಲ್ಲಾ, ಜಾಸ್ತಿ ಶ್ರಮಾನೂ ಹಾಕಲ್ಲಾ, ನೀನೇ ಏನಾರ ಮಾಡಿ ನನ್ನ ಬಯಕೆಗಳನ್ನ ಈಡೇರಿಸು ಅಂತ ಮಾಡೋ ನಾನಾ ದೇವರುಗಳ ಪೂಜೆ ಆಸೆಯಲ್ಲವೇ? ಲಾಟರಿ ಟಿಕೇಟು ತಗೊಂಡು ದೇವರ ಮುಂದಿಟ್ಟು ದಿಢೀರ್ ಹಣಕ್ಕಾಗಿ ಪೂಜಿಸುವುದು, ಓದದೇ ಪಾಸಾಗಬೇಕೆಂದು ಹವಣಿಸುವುದು… ನನಗೆ ಇಂತಿಂಥ ಬಯಕೆ ಈಡೇರಿಸು ಅಂತ ಹರಕೆ ಹೊತ್ತುಕೊಳ್ಳೋದು ಆಸೆಯೇ. ಜನ ಕಷ್ಟಪಟ್ಟು ದುಡಿದ ಹಣವನ್ನು ಹುಂಡಿಗೆ ಯಾಕೆ ಹಾಕುತ್ತಾರೆ? ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿರುವಷ್ಟು ಮಣಿರತ್ನಗಳು, ಚಿನ್ನ, ವಜ್ರ-ವೈಢೂರ್ಯ ಇಡೀ ಜಗತ್ತಲ್ಲಿ ಎಲ್ಲೂ ಇಲ್ಲಾ. ಯಾಕೆ ಸಂಪತ್ತು ಅಲ್ಲಿ ಸ್ಟಾಕ್ ಆಯ್ತು ಅಂದ್ರೆ ಆಸೆನೇ. ಕೂಲಿ ಮಾಡೋನೂ 50 ರೂಪಾಯಿ ತಗೊಂಡು ಹೋಗಿ ಹುಂಡಿಗೆ ಹಾಕ್ತಾನೆ… ಕೋರ್ಟಲ್ಲಿ ಕೇಸು ಓಡ್ತಾ ಇರುತ್ತೆ, ಹೇಗಾದರೂ ಗೆಲ್ಲಿಸಿಬಿಡು ಅಂತ ಅಂದ್ಕೊಳ್ಳೋದು… ಎಲ್ಲರೂ ಆಸೆಯ ಹಿಂದೇ ಓಡುತ್ತಿದ್ದಾರೆ. ಆಸೆ, ಕಾಮ, ಕ್ರೋಧ, ಮೋಹ… ಇವುಗಳಿಗೆಲ್ಲಾ ವಸ್ತುರೂಪ ಇದೆಯಾ? ಅವು ಪೂರ್ತಿ ಕಾಲ್ಪನಿಕ. ಕಲ್ಪನೆ ಇದ್ದರೆ ಮಾತ್ರ ಇರುತ್ತವೆ. ಕಲ್ಪನೆಯ ಜಗತ್ತನ್ನು ಎಲ್ಲಿಯವರೆಗೆ ಬಿಡಲು ಆಗುವುದಿಲ್ಲವೋ ಅಲ್ಲಿಯವರೆಗೆ ಗುರುಪಥಕ್ಕೆ ಬರಲು ಸಾಧ್ಯವಿಲ್ಲಾ. ಅಂಬಿಗರ ಚೌಡಯ್ಯನವರು ಇದಕ್ಕೆ ‘ಗತಿಪಥ’ ಎಂದೂ ಕರೆದಿದ್ದಾರೆ: “ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು ನೀಗಿರೊ ನಿಮ್ಮ ಭವಬಂಧನದ ಸಾಗರವನು.”

ಬಸವಣ್ಣ ಮತ್ತು ಶರಣರು ದೇವರುಗಳ ವಿರುದ್ಧ ಬಂಡಾಯ ಏಳಲಿಲ್ಲಾ. ಅವರೆಲ್ಲ ವಿರೋಧಿಸಿದ್ದು ಮನಸ್ಸಿನೊಳಗೆ ಅವಿತು ಕೂತಿರುವ ಆಸೆಯನ್ನು. ಯಾಕೆಂದರೆ ನಮ್ಮ ಸಮಸ್ಯೆಗಳಿಗೆಲ್ಲಾ ಮೂಲ ಕಾರಣ ಇದು. ಅನೇಕ ವಚನಗಳಲ್ಲಿ ಅಂತರಂಗದಲ್ಲಿ ವಿಧವಿಧವಾಗಿ ಇಣುಕುವ ಆಸೆಯನ್ನು ಗುರುತಿಸಿ, ಅದನ್ನು ನೀಗುವ ಮಾರ್ಗವನ್ನು ತೋರಿದ್ದಾರೆ:

ಕಾಯವಿಡಿಹನ್ನಕ್ಕರ ಕಾಮವೆ ಮೂಲ;
ಜೀವವಿಡಿಹನ್ನಕ್ಕರ ಕ್ರೋಧವೆ ಮೂಲ;
ವ್ಯಾಪ್ತಿಯುಳ್ಳನ್ನಕ್ಕರ ಸಕಲ ವಿಷಯಕ್ಕೆ ಆಸೆಯೇ ಮೂಲ.
ಎನ್ನ ಆಸೆ ಘಾಸಿಮಾಡುತ್ತಿದೆ,
ಶಿವಯೋಗದ ಲೇಸಿನ ಠಾವ ತೋರು,
ಕಪಿಲಸಿದ್ಧಮಲ್ಲಿಕಾರ್ಜುನಾ.
-ಸಿದ್ಧರಾಮೇಶ್ವರರು

ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ,
ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲಯ್ಯಾ !
ಕರುಣಾಕರ, ಅಭಯಕರ, ವರದ,
ನೀ ಕರುಣಿಸಯ್ಯಾ.
ಸಂಸಾರಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ,
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,
ಭಕ್ತಜನಮನೋವಲ್ಲಭ ಕೂಡಲಸಂಗಮದೇವಾ.
-ಬಸವಣ್ಣನವರು

ಆಸೆಯನಳಿದು, ರೋಷವ ನಿಲಿಸಿ,
ಜಗದ ಪಾಶವ ಹರಿದು,
ಈಶ್ವರನೆನಿಸಿಕೊಂಬ ಶರಣರ
ಜಗದ ಹೇಸಿಗಳೆತ್ತಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
-ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ

ಸಂಸಾರವೆಂಬ ಅರಣ್ಯದೊಳು ಬಿದ್ದೆನು.
ಆಸೆಯೆಂಬ ಹುಲಿ ಬಂದು ಹಿಡಿಯಿತ್ತಯ್ಯ ಎನ್ನ.
ನಿಮ್ಮ ಮಹಾಜ್ಞಾನ ಶಸ್ತ್ರದಲ್ಲಿ
ಆಸೆಯೆಂಬ ಹುಲಿಯ ಕೊಂದು ನಿಮ್ಮತ್ತ ತೆಗೆದುಕೊಳ್ಳಾ
ಅಪ್ರಮಾಣಕೂಡಲಸಂಗಮದೇವಾ.
-ಬಾಲಸಂಗಯ್ಯ ಅಪ್ರಮಾಣದೇವ

ಶರಣರು ಬದುಕು ಅಮೂಲ್ಯವಾದದ್ದು, ಶರಣರ ಸಂಗ ಅಮೂಲ್ಯವಾದದ್ದು ಎಂದು ಹೇಳಿದರು. ತಮ್ಮ ಬದುಕಿನಲ್ಲಿ ಆಸೆಯನ್ನು ಹೇಗೆ ಇಲ್ಲವಾಗಿಸಿಕೊಂಡು ಪ್ರಕೃತಿಯೊಂದಿಗೆ ಪ್ರಕೃತಿಯಂತೆಯೇ ಬಾಳಿ ಬದುಕಿದರು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿ. ಬದುಕಿನ ಕುರಿತಾದ ಅನುಭವ ದೊಡ್ಡದು, ಅದನ್ನ ಹಂಚಿಕೊಳ್ಳಬೇಕು ಅಂದರು. ಶರಣರದು ತೃಪ್ತ ಜೀವನ. ಆದರೆ ನಾವಾದರೋ ಬೇಕೆನಿಸಿದವುಗಳನ್ನು ಹೇಗಾದರೂ ಸರಿ, ಬೇಗನೇ ಪಡೆದುಕೊಳ್ಳುವ ಧಾವಂತದಲ್ಲಿ ಜೀವನವನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಿರುತ್ತೇವೆ. ಬೇರೆಯವರನ್ನೂ ಅಪಾಯಕ್ಕೆ ತಳ್ಳುತ್ತೇವೆ. ಇದು ಮೂರ್ಖತನವಲ್ಲವೇ?

ಹಾಗಾದರೆ ಆಸೆಗಳೇ ಇರಬಾರದಾ?
ನಾವಿರೋದು ಆಧುನಿಕ ಯುಗದಲ್ಲಿ. ಆಸೆಯನ್ನು ಬಿಡೋದು ಅಂದರೆ ನಾವು ಬದುಕಲ್ಲಿ ಮಾಡೋ ಪ್ರಯತ್ನಗಳಿಂದ ಹಿಂದೆಗೆಯುವುದಲ್ಲಾ. ಎಷ್ಟು ಸಾಮರ್ಥ್ಯವಿದೆಯೋ ಅಷ್ಟು ಮುಂದೆ ನಡೆಯಬೇಕು, ಇಷ್ಟುದ್ದದ ಬದುಕಲ್ಲಿ ಏನು ಸಾಧಿಸಬೇಕೋ ಅದನ್ನು ಸಾಧಿಸಬೇಕು. ಆದರೆ ನಾವು ತೋಡಿದ ಬಾವಿಯಲ್ಲಿ ನಾವೇ ಮುಳುಗಿ ಹೋದರೆ ನಮ್ಮನ್ನ ಎತ್ತೋರು ಯಾರು? ಆಸೆ ಅಲ್ಟಿಮೇಟ್ (ಅಂತಿಮ ಸತ್ಯ) ಅಲ್ಲಾ, ಜೀವನ ದೊಡ್ಡದು. ಖುಷಿಯಾಗಿರಬೇಕು, ಖುಷಿಯಿಂದ ಏನಾದರೂ ಮಾಡಬಹುದು. ನಮ್ಮ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣ ಬೇಕು. ಅದರಾಚೆಗೆ ಅದಕ್ಕೆ ಅಸ್ತಿತ್ವವಿಲ್ಲಾ. ನಮ್ಮ ಉದ್ಯೋಗಕ್ಕೂ ಮಿತಿಗಳಿವೆ. ಕಂಡದ್ದನ್ನೆಲ್ಲಾ ಮಾಡೋಕೆ ಸಾಧ್ಯವಿಲ್ಲಾ. ಆಸೆಗಳಿಗಾಗಿ ಬದುಕನ್ನು ಹಾಳುಮಾಡಿಕೊಳ್ಳುವ ಅಗತ್ಯವಿಲ್ಲಾ. ಬದುಕೋಕೆ ಆಸೆಗಳು ಬೇಕು ಅಂತಾನೂ ಇಲ್ಲಾ. ಬದುಕು ಅಮೂಲ್ಯವಾದದ್ದು, ಆಸೆಗಳು ಅಮೂಲ್ಯವಾದದ್ದೇನೂ ಅಲ್ಲಾ.
ಅವಿದ್ಯೆಯ ಮೂಲಕಾರಣವೇ ಆಸೆ. ತೃಷ್ಣೆ ಬೇರೆಯಲ್ಲಾ, ಆಸೆ ಬೇರೆಯಲ್ಲಾ. ಆಸೆ ಜೀವನವನ್ನು ದುರ್ಗತಿಗೆ ಇಳಿಸುತ್ತದೆ. ಹಾಗೆ ದುರ್ಗತಿ ಬಂದ್ಬಿಡುತ್ತೆ ಅನ್ನೋ ಭಯದಿಂದ ಮನುಷ್ಯ ಮತ್ತೆ ಇನ್ನಷ್ಟು ಆಸೆಗಳನ್ನು ಇಟ್ಟುಕೊಂಡೇ ಓಡುತ್ತಿರುತ್ತಾನೆ. ಗೊತ್ತಿದೆ ಮನುಷ್ಯನಿಗೆ. ಆದರೂ ಸುರಕ್ಷಿತ ವಲಯ (safety zone) ಇರುತ್ತೆ, ಅಲ್ಲಿ ತಲುಪಿದರೆ ನಾನು ನೂರಾರು ವರ್ಷ ಸುರಕ್ಷಿತವಾಗಿರ್ತೀನಿ ಅಂದುಕೊಂಡಿರ್ತಾನೆ. ಆದರೆ ಸೇಫ್ಟಿ ಜೋನ್ ಅನ್ನೋದೇ ಇಲ್ಲಾ. ಸದಾ ಬದಲಾವಣೆಯಲ್ಲಿರುವ ಜಗತ್ತಿನ ವಸ್ತುಸ್ಥಿತಿಯಲ್ಲಿ ಸೇಫ್ಟಿ ಝೋನ್ ಗೆ ಯಾವುದೇ ಅಸ್ತಿತ್ವ ಇಲ್ಲಾ. ಇದನ್ನ ಮಾಡಿದ್ರೆ ಸುಖವಾಗಿರುತ್ತೆ ಅಂತ ಅಂದ್ಕೊಂಡಿರ್ತೀವಲ್ಲಾ, ಅದರಲ್ಲೇ ಪ್ರಾಬ್ಲಂ ಇರುತ್ತೆ… ಸುಖ ಸಿಗುತ್ತೆ ಅಂತ ಮಾಡುವ ಕೆಲಸಗಳು ತೊಂದರೆಗಳಿಗೇ ಸಿಲುಕಿಸುತ್ತಾ ಇರುತ್ತವೆ. ಸುಖ ಅನ್ನೋದು ಅಪಾಯಕರ ಶಬ್ದ. ಸೇಫ್ಟಿ ಝೋನ್ ಅನ್ನೋದು ಭ್ರಮೆ, ಇಲ್ಲವೇ ಇಲ್ಲಾ! ಅದಕ್ಕೆ ಸರಹಪಾದ ಹೇಳುತ್ತಾನೆ- ಅಭದ್ರತೆಯಲ್ಲಿ ಸದಾ ಭದ್ರವಾಗಿರು ಅಂತ. ಈ ಮಾತಿನ ಅಂತರಾಳಕ್ಕೆ ಹೋಗಿ ನೋಡಿ…

ಬದುಕಿನ ಕುರಿತಾಗಿ ಇರುವ ಅತಿ ದೊಡ್ಡ ತಿಳುವು ಇದು. ಸರಹಪಾದ, ‘ಅಭದ್ರತೆಯಲ್ಲಿ ಸದಾ ಭದ್ರವಾಗಿರು’ ಎಂದ. ನಮ್ಮ ಶರಣರು ಅಭದ್ರತೆಯಲ್ಲಿ ಒಂದು ಸಾಮಾಜಿಕ ಭದ್ರತೆಯನ್ನು ನಿರೂಪಿಸಿ ತೋರಿಸಿದರು. ಅದು ಒಬ್ಬರಿಗೊಬ್ಬರು ಆಶ್ರಯವಾಗಿರೋದು! ಒಬ್ಬರ ಸಂಕಟಕ್ಕೆ, ನೋವಿಗೆ ಹೆಗಲು ಕೊಡುವುದು. ಎಂತಹ ಅದ್ಭುತ ಸಮಾಜ!! ಒಂದೆಡೆ ಸಮುದಾಯದಲ್ಲಿ ಬದುಕುವವರು ಹೀಗೆ ಹೊಣೆಗಾರಿಕೆಯಿಂದ ಇದ್ದರೆ ಅದಕ್ಕಿಂತ ಕೂಡಿ ಬಾಳುವ ಸೌಂದರ್ಯ ಇನ್ನಾವುದರಲ್ಲಿದೆ? ಮನುಷ್ಯನೊಬ್ಬನಿಗೆ ಮನುಷ್ಯ ಭದ್ರತೆ ಕೊಡಬೇಕು. ಅದಕ್ಕೆ ನಿಜವಾದ ದೊಡ್ಡ ಶಕ್ತಿ ಇದೆ.

ಅನೈತಿಕತೆ ಮತ್ತು ಭ್ರಷ್ಟಾಚಾರ ಇರುವ ಸಮಾಜ ಹೆಚ್ಚು ಅಭದ್ರವಾಗಿರುತ್ತದೆ. ಅನೈತಿಕತೆಯ ರೋಗ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿರುತ್ತದೆ. ಒಬ್ಬ ಮನುಷ್ಯ ತಪ್ಪು ದಾರಿ ತುಳಿದು ಶ್ರೀಮಂತನಾದರೆ, ದೊಡ್ಡ ಹುದ್ದೆಗೇರಿದರೆ ಮತ್ತೊಬ್ಬ ಅದನ್ನೇ ಮಾಡಲು ತವಕಿಸುತ್ತಾನೆ. ನೈತಿಕತೆ ಅಲ್ಲಿ ಮಣ್ಣಾಗಿ ಹೋಗಿರುತ್ತದೆ. ಅದರತ್ತ ಯಾರೂ ಕೇರ್ ಮಾಡೋದಿಲ್ಲಾ. ಇನ್ನೊಬ್ಬ ಮನುಷ್ಯನಿಗೆ ಭದ್ರತೆ ಒದಗಿಸುವುದೆಂದರೆ ತಾನು ನೈತಿಕವಾಗಿರೋದು ಅಂತ. ಯಾಕೆ ನೈತಿಕವಾಗಿರಬೇಕು ಅಂದರೆ ಮತ್ತೊಬ್ಬರ ಸುರಕ್ಷತೆಗಾಗಿ, ಅದರಲ್ಲಿ ತನ್ನ ಸುರಕ್ಷತೆಯೂ ಅಡಕವಾಗಿರುತ್ತದೆ. ಇಂತಹ ಸಾಮುದಾಯಿಕ ಜವಾಬ್ದಾರಿಯನ್ನು ತೋರಿಸಿದ ಶರಣರ ಸಮಾಜ ನಿಜಕ್ಕೂ ಗ್ರೇಟ್!! ಅಂತಹ ನಡೆಗಾರರಾದ ಶರಣರ ವಚನಗಳನ್ನು ಕೇವಲ ಮಾತಿಗೆ, ಉಪದೇಶಕ್ಕೆ ಇಳಿಸಿಬಿಟ್ಟರೆ ಆ ಘನತೆಯೇ ಹೋಗಿಬಿಡುತ್ತದೆ…

*** *** ***
ಅಲ್ಲಿ ಮಾತಿದ್ದರೂ ಮೌನ ಹಾಸಿತ್ತು. ಬಾನೆತ್ತರಕೆ ಹರಡಿದ ಆಲದ ಮರದ ಎಲೆಯ ಚಪ್ಪರ ಮಧ್ಯಾನ್ಹದ ಬಿಸಿಲು ನಮ್ಮ ನೆತ್ತಿಯನ್ನು ಸುಡದಂತೆ ನೋಡಿಕೊಳ್ಳುತ್ತಿತ್ತು. ಆಗಾಗ ಆಗಸದಲ್ಲಿ ಚಾಪೆಯಂತೆ ಹಾಸಿಕೊಳ್ಳುವ ಮೋಡಗಳು ವಾತಾವರಣವನ್ನು ಹದವಾಗಿರಿಸಿದ್ದವು. ಆ ತಂಗುದಾಣದಲ್ಲೇ ಏಕಾಂಗಿಯಾಗಿ ವಾಸಿಸುತ್ತಿರುವ ಎಂಬತ್ತು ವರ್ಷ ದಾಟಿದ ಮುನಿಯಪ್ಪಾ ಎನ್ನುವ ಸಾಧುವೊಬ್ಬರು ನಮ್ಮೆಲ್ಲರೊಂದಿಗೆ ಕುಳಿತಿದ್ದರು. ಮಾತನಾಡಲು ಕನ್ನಡ ಬಾರದಿದ್ದರೂ ಅರ್ಥವಾಗುತ್ತಿತ್ತು. ಆತನ ಕತೆ ಕೇಳಲು ನಾವು ಉತ್ಸುಕರಾಗಿದ್ದೆವು. ಸಂಬಂಧಗಳೆಲ್ಲಾ ಬಿಟ್ಟುಹೋದ ಬಳಿಕ ಏಕಾಂಗಿಯಾದ ಆತ ಜೋಳಿಗೆ ಹಾಕಿಕೊಂಡು ಸಾಧುವಾಗಿ ಹೊರಟ ತನ್ನ ಕತೆಯನ್ನು ನಾಲ್ಕೇ ಮಾತುಗಳಲ್ಲಿ ಹೇಳಿ ಮುಗಿಸಿದ. ಎಲ್ಲಿ ಕತ್ತಲಾಗುತ್ತೋ ಅಲ್ಲಿ ಮಲಗುತ್ತಾ, ಎಚ್ಚರಾದಾಗ ನಡೆದು ಇಲ್ಲಿಗೆ ಬಂದು ಸೇರಿದನಂತೆ. ಬದುಕಿನಲ್ಲಿ ಎಲ್ಲವನ್ನೂ ಖಾಲಿ ಮಾಡಿಕೊಂಡ ಆತನ ದನಿಯಲ್ಲಿ ಯಾವ ಭಾರಗಳೂ ಇರಲಿಲ್ಲಾ. ಕಲ್ಪನೆ- ಸಂಕಲ್ಪಗಳಿಲ್ಲದೆ ನಡೆವ ಬದುಕಿನಲ್ಲಿ ಹೊರೆಗಳೂ ಇರುವುದಿಲ್ಲಾ. ಯಾವ ಮತ-ಪಂಥವೂ ತನ್ನದಲ್ಲವೆನ್ನುವ ಆ ಸಾಧುವಿನ ಕಣ್ಣಲ್ಲಿ ಏನೋ ಕಾಂತಿ. ರೋಗಗಳು ಅಂಟದ ಚಕ್ಕಳ ಮೈ. ನಿಷ್ಕಲ್ಮಶ ನಗು. “ದೊಡ್ಡವರ ಹತ್ತಿರ ಚಿಕ್ಕಮಕ್ಕಳ ಥರ ಇರಿ, ಸಣ್ಣವರ ಹತ್ತಿರ ಸೋದರರಂತಿರಿ” ಎನ್ನುತ್ತಾ ಆ ಸಾಧು ಅಲ್ಲಿಂದ ಎದ್ದು ನಡೆದ.

ನಾವೂ ಸುತ್ತಣ ಪರಿಸರದಲ್ಲಿ ಓಡಾಡುತ್ತಾ ಪಕ್ಕದಲ್ಲೇ ಇದ್ದ ಸಣ್ಣ ಗುಡ್ಡವನ್ನೇರಿದೆವು. ಮೇಲುಮೇಲಕ್ಕೆ ಹೋದಂತೆ ಮೈತಾಕುವ ಆ ಹಿತವಾದ ಗಾಳಿ, ಕಣ್ಣು ಹಾಯಿಸಿದಷ್ಟೂ ಕಾಣುವ ಹಸಿರು ಹೊಲಗದ್ದೆಗಳು, ಒಂದಕ್ಕೊಂದು ಆತು ನಿಂತತಿದ್ದ ದೂರದ ಬೆಟ್ಟಗಳು… ಏರು ದಿಬ್ಬದಲ್ಲಿ ಅಲ್ಲಲ್ಲೇ ಸಿಕ್ಕ ಬಂಡೆಗಲ್ಲುಗಳ ಮೇಲೆ ಕೆಲ ಹೊತ್ತು ಮೌನವಾಗಿ ಪ್ರಕೃತಿಯೊಂದಿಗೆ ಧ್ಯಾನಕ್ಕಿಳಿದೆವು…

ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಳಿದು ಬಂದಾಗ, ಅಲ್ಲೇ ಒಲೆ ಉರಿ ಹಾಕಿ ಆರಿಸಿ ತಂದಿದ್ದ ಸೊಪ್ಪುಗಳನ್ನು ಕುದಿಸಿ ಮಂಜು ಕೊಟ್ಟ ಬಿಸಿಬಿಸಿ ಕಷಾಯ ಕುಡಿದೆವು. ವಿದ್ಯಾ ಅವರು ಕಟ್ಟಿಕೊಂಡು ಬಂದಿದ್ದ ಚಪಾತಿ ಬುತ್ತಿ ಊಟ ರುಚಿಕರವಾಗಿತ್ತು. ಮತ್ತೊಂದು ಸುತ್ತಿನ ಮಾತುಕತೆಗೆ ಮನಸ್ಸು ಸಿದ್ಧವಾಯಿತು. ಜೀವನ ಎಂದರೇನು, ಇಲ್ಲಿ ನಮ್ಮ ಜವಾಬ್ದಾರಿಗಳೇನು? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಬಿಡಿಸಿಕೊಳ್ಳುತ್ತಾ, ನಿಜವೆಂದೇ ನಂಬಿಸಿ ಅಟ್ಟಾಡಿಸುವ ಭ್ರಮೆಗಳಿಂದ ಪಾರಾಗಲಿಕ್ಕೆ ಇರುವ ಉಪಾಯವೊಂದರ ಕುರಿತು ಆಳವಾದ ಚಿಂತನೆಗಳು ನಡೆದವು. ‘ಕಲ್ಪನೆ- ಸಂಕಲ್ಪ- ಕರ್ಮ’ ಎನ್ನುವ ತ್ರಿಚಕ್ರದಲ್ಲಿ ಬದುಕು ಹೇಗೆ ಪಲ್ಟಿ ಹೊಡೆಯುತ್ತಿದೆ ಎಂಬುದನ್ನು ನೋಡಿಕೊಳ್ಳುವ ಅವಕಾಶ ಎಲ್ಲರಿಗೂ ಒದಗಿತ್ತು. ವಚನಗಳನ್ನು, ತತ್ವಗಳನ್ನು ಬದುಕಿಗೆ ಅನ್ವಯಿಸಿಕೊಂಡು ನೋಡುವ ಆ ಪರಿಯೇ ಅನನ್ಯವಾದುದು. ಹೊರಡುವ ಮುನ್ನ ನನ್ನ ಕಣ್ಣು ಬಲಿಪೀಠದತ್ತ ಹೊರಳಿದವು. ಕೋಳಿಯ ಕುತ್ತಿಗೆ ಮಾಯವಾಗಿತ್ತು. ಪಕ್ಕದಲ್ಲಿ ನಾಯಿಯೊಂದು ಮಲಗಿತ್ತು.

ಸೂರ್ಯಾಸ್ತಕ್ಕೂ ಮುನ್ನ ಅಲ್ಲಿಂದ ಅತ್ತಿಮುಗಂನಲ್ಲಿರುವ ಅಳಗೇಶ್ವರ ದೇವಸ್ಥಾನದತ್ತ ನಮ್ಮ ಪ್ರಯಾಣ ಸಾಗಿತು. ಅದು ಸುಮಾರು ಒಂದೂವರೆ ಸಾವಿರ ವರ್ಷಕ್ಕೂ ಹಿಂದಿನ ಹಳೆಯದಾದ ದೇವಾಲಯ. ಅನೇಕ ಕೌತುಕಗಳಿರುವ ಈ ದೇವಾಲಯ ಕಾಲಕಾಲಕ್ಕೆ ವಜ್ರಾಯಾನದಿಂದ ಶೈವತಾಂತ್ರಿಕ ಅಲ್ಲಿಂದ ಶೈವ… ಹೀಗೆ ರೂಪಾಂತರಗೊಂಡ ಇತಿಹಾಸವನ್ನು ಮತ್ತು ದಕ್ಷಿಣಾ ಪಥೇಶ್ವರದಂತಹ ದಟ್ಟ ಹಿನ್ನೆಲೆಯನ್ನು ತನ್ನೊಳಗೆ ದಾಖಲಿಸಿ ಇಟ್ಟುಕೊಂಡ ರೀತಿಯೇ ಅದ್ಭುತವಾಗಿದೆ. ಅದೇ ಪ್ರಾಂಗಣದಲ್ಲಿ ಬಿಡಿಬಿಡಿಯಾಗಿ ಅಕ್ಕಪಕ್ಕದಲ್ಲಿ ಸಾಲಾಗಿರುವ ಪಂಚಲಿಂಗಗಳು ಸಂಕೇತಿಸುವ ತಾತ್ವಿಕತೆ ಬೆರಗು ಹುಟ್ಟಿಸುತ್ತದೆ.

ಚರಿತ್ರೆಯ ಆ ಶಿಲಾಪುಟಗಳನ್ನು ನೋಡಿ, ಕಣ್ಮನಗಳು ದಂಗಾಗಿ ಹೋಗಿದ್ದವು. ತುಂತುರುಮಳೆ ಶುರುವಾಗಿತ್ತು. ಬೆಂಗಳೂರಿನತ್ತ ಹೊರಟಾಗ ಮಳೆಮೋಡಗಳ ನಡುವೆ ಆಗಾಗ ಇಣುಕುತ್ತಾ ಕೆಂಪನೆಯ ದುಂಡನೆಯ ಚಂದಿರ ನಮ್ಮೊಂದಿಗೆ ಒಲ್ಲದ ಮನಸ್ಸಿನಿಂದಲೇ ಕಾಂಕ್ರೀಟ್ ಕಾಡಿಗೆ ಬರುತ್ತಿದ್ದ.

Previous post ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
Next post ಮಾಯದ ಗಾಯ
ಮಾಯದ ಗಾಯ

Related Posts

ಕಾಲ- ಕಲ್ಪಿತವೇ?
Share:
Articles

ಕಾಲ- ಕಲ್ಪಿತವೇ?

April 11, 2025 ಕೆ.ಆರ್ ಮಂಗಳಾ
ಹಿಂದಣ ಶಂಕೆಯ ಹರಿದು, ಮುಂದಣ ಭವವ ಮರೆದು, ಉಭಯ ಸಂದುಗಡಿದು, ಅಖಂಡಬ್ರಹ್ಮವೆ ತಾನಾದ ಶರಣಂಗೆ ಜನನವಿಲ್ಲ, ಮರಣವಿಲ್ಲ; ಕಾಲವಿಲ್ಲ, ಕಲ್ಪಿತವಿಲ್ಲ ; ಸುಖವಿಲ್ಲ, ದುಃಖವಿಲ್ಲ;...
ಬಯಲಾದ ಬಸವಯೋಗಿಗಳು
Share:
Articles

ಬಯಲಾದ ಬಸವಯೋಗಿಗಳು

April 3, 2019 ಕೆ.ಆರ್ ಮಂಗಳಾ
“ಅವರು ಗುಣಮುಖರಾಗೋದು ಯಾವಾಗ?” ಮಾತಾಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕೇಳುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಸಣ್ಣ ಭರವಸೆ. ನನ್ನ ನೇರ...

Comments 1

  1. ಬಸವರಾಜ ಹಂಡಿ
    Oct 25, 2025 Reply

    ಶರಣೆ ಮಂಗಳಾ ಅವರ “ಹೀಗೊಂದು ಹುಣ್ಣಿಮೆ…” ತುಂಬಾ ಮನಸಿಗೆ ಹತ್ತಿದ ಬರಹ. ಯಾತ್ರೆಯ ವರ್ಣನೆ ತುಂಬ ಜೀವಂತವಾಗಿದೆ, ಓದಿದ್ರೆ ನಾವೂ ಆ ಸ್ಥಳದಲ್ಲಿದ್ದೇವೆ ಅನ್ನಿಸುತ್ತದೆ. ಗುರುಮಾರ್ಗದ ವಿವರಣೆ ಸ್ಪಷ್ಟವಾಗಿಯೂ ಆಳವಾಗಿಯೂ ಇದೆ. ಆಶೆಯ ಕುರಿತು ಮಾಡಿದ ಚಿಂತನೆ ತುಂಬ ತಾತ್ವಿಕವಾಗಿದ್ದು, ವಚನಗಳ ಉಲ್ಲೇಖ ಅದಕ್ಕೆ ಜೀವ ತುಂಬಿದೆ. ಕೊನೆಯ ಭಾಗದ ತಂಪುದಾಣ, ಮುನಿಯಪ್ಪನ ಕಥೆ, ದೇವಾಲಯದ ವರ್ಣನೆ — ಇವೆಲ್ಲವೂ ತುಂಬ ಶಾಂತವಾದ ಭಾವನೆ ಕೊಡುತ್ತವೆ. ಒಟ್ಟಿನಲ್ಲಿ ತುಂಬಾ ಅರ್ಥಪೂರ್ಣ ಮತ್ತು ಮನಸ್ಸಿಗೆ ಹತ್ತಿದ ಲೇಖನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ನೆಮ್ಮದಿ
ನೆಮ್ಮದಿ
April 6, 2020
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
Copyright © 2025 Bayalu