
ಹಾದಿಯ ಹಣತೆ…
ಕೈಯಲಿ ಹಿಡಿದು
ಅಲೆಯುತಲಿದ್ದೆ
ಕಣ್ಣಿಗೊತ್ತಿಕೊಂಡು
ಕರಗುತಲಿದ್ದೆ
ಎದೆಗವುಚಿಕೊಂಡು
ಮುದ್ದಾಡುತಲಿದ್ದೆ
ತಲೆಯ ಮೇಲೆ ಹೊತ್ತು
ಬೀಗುತಲಿದ್ದೆ…
ವಚನ ರಾಶಿಯಲಿ
ಅರಸುತಲಿದ್ದೆ
ಹಿರಿಯರ ಮಾತಲಿ
ಹುಡುಕುತಲಿದ್ದೆ
ಯೋಗಸಿದ್ದಿಗಳಿಗೆ
ತವಕಿಸುತಿದ್ದೆ
ಪೂಜೆ-ಪ್ರಾರ್ಥನೆಯಲಿ
ಪರಿತಪಿಸುತಿದ್ದೆ…
ಅಲ್ಲೆಲ್ಲೋ ಮಿಂಚಿದಂತೆ
ಇಲ್ಲೇನೋ ಹೊಳೆದಂತೆ
ಮತ್ತೆಲ್ಲೋ ಸುಳಿದಂತೆ
ಸಿಕ್ಕು ಸಿಗದ
ಬಿಸಿಲ್ಗುದುರೆಯಂತೆ…
ನೀರು ಹಿಡಿದು
ಬಾಯಾರಿ ಬಳಲುವ
ಬುತ್ತಿ ಹಿಡಿದು
ಹಸಿವಿಗೆ ಹಲಬುವ
ಬೆಪ್ಪುತನಕೆ ಮರುಗಿ
ಬಂದ ನೋಡವ್ವಾ… ನನ್ನ ಗುರು
ಕಣ್ಣೊಳಿತ್ತು
ಕಾರುಣ್ಯದ ಕಡಲು
ಹೃದಯವೋ
ವಾತ್ಸಲ್ಯದ ಒಡಲು
ಮಾತುಗಳೋ
ಚಾಟಿಯ ಏಟು
ಜ್ಞಾನದ ಬಣವೆಗೆ
ಕಿಚ್ಚನು ಹಚ್ಚಿದ
ಭಾವುಕ ಭ್ರಮೆಗೆ
ಬೆಂಕಿಯ ಹಾಕಿದ
ಕಳೆ-ಕೊಳೆ ತುಂಬಿದ
ಮನವ ತೊಳೆಸಿದ
ಕಣ್ಣಿಗೆ ಮೆತ್ತಿದ
ಪೊರೆಗಳ ಹರಿಸಿದ
ಅವಿತಿಹ ಅಹಮಿನ
ಆಟವ ತೋರಿಸಿ
ನಿಜನೆಲೆ ಅರಿಯಲು
ದಾರಿಯ ಮಾಡಿದ
ಹಿಂದಣ ಹಂಗಿನ
ಸಂಗವ ಬಿಡಿಸಿದ
ಮುಂದಣ ಮಾಯೆಯ
ತೆರೆಯನು ಸರಿಸಿದ
ಮಂತ್ರವ ಮರೆಸಿದ
ಮಾತನು ಬಿಡಿಸಿದ
ಮೌನದ ಬಯಲಿಗೆ
ಮಾರ್ಗವ ತೋರಿದ
Comments 3
Dr. K.S.Mallesh, Mysuru
Jun 12, 2025ನಿಮ್ಮ ಕವನ “ಹಾದಿಯ ಹಣತೆ” ( ಅರಿವಿನ ಹಣತೆ ಅಲ್ಲ) ಸರಳ ಭಾಷೆ ಚಿಕ್ಕ ಸಾಲುಗಳಲ್ಲಿ ನಿಮ್ಮ ನಿರಂತರ ಹುಡುಕಾಟದ ದಾರಿಯಲ್ಲಿ ಸಿಕ್ಕ ಗುರುವಿನ ಬಗ್ಗೆ ಹೃದ್ಯವಾಗಿ ಮೂಡಿದೆ.
ಶೋಭಾದೇವಿ, ಧಾರವಾಡ
Jun 19, 2025ಗುರುವು ನಿಜವಾದ ಆಧ್ಯಾತ್ಮದ ದಾರಿ ತೋರಿದ ಹಾದಿಯ ಹಣತೆ. ಕವನ ತುಂಬಾ ಚೆನ್ನಾಗಿದೆ.
Mate Kasturidevi
Jun 19, 2025ಹಾದಿಯ ಹಣತೆಯ ಬೆಳಕಲ್ಲಿ ನಿಮ್ಮ ಮನದ ಅಳಲು ಜತೆಗೆ ಅರಸುವ ಧಾವಂತ ನಿಚ್ಚಳವಾಗಿ ಕಾಣಬರುತ್ತಿದೆ