Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
Share:
Articles April 6, 2023 ಮಹಾದೇವ ಹಡಪದ

ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು

ಜಂಗಮ ಎನ್ನುವುದು ಚಲನಶೀಲವಾದ ಪ್ರಕ್ರಿಯೆ. ಇಂದಿಲ್ಲಿ ಹುಟ್ಟಿದ ಅನುಭವವನ್ನು ನಾಳೆ ಇನ್ನೆಲ್ಲೋ ಅನುಭಾವ ಮಾಡುತ್ತ ಮನುಷ್ಯನೊಳಗಿನ ಕ್ರುದ್ಧ ಭಾವನೆಗಳನ್ನು ಹೋಗಲಾಡಿಸುವ ಮೂಲಕ ಶರಣ ಎಂಬ ನಿಜ ನಾಗರಿಕತೆಯನ್ನ ನೆಲೆಗೊಳಿಸುವ ಒಂದು ಸಂಪ್ರದಾಯ. ಜಂಗಮ ಶಬ್ದದ ಸಾಂಸ್ಕೃತಿಕ ಅರ್ಥವಿವರಣೆಯನ್ನೇ ಇಂದು ತಲೆಕೆಳಗಾಗಿಸಿರುವ ಸಾಧ್ಯತೆ ಹೆಚ್ಚಾಗಿದೆ. ನಿರಂತರ ಚಲಿಸುವ ಸಾಮರ್ಥ್ಯವಿರುವುದು ನಾಗರಿಕ ಬದುಕಿಗೆ ಮಾತ್ರ. ಅಂಥ ನಾಗರಿಕ ಸಮುದಾಯವನ್ನು ಜಂಗಮ ಎನ್ನುವ ಅರ್ಥದಲ್ಲಿ ನಾವು ಗ್ರಹಿಸಿಕೊಳ್ಳಬೇಕು.

ಜಂಗಮ ದಾಸೋಹ ಎಂದರೆ ಅಂದಿನ ಕಾಲದಲ್ಲಿ ಅನೇಕ ಸಮುದಾಯಗಳು ಒಂದೆಡೆ ನಿಲ್ಲುತ್ತಿರಲಿಲ್ಲ. ಭೂಮಿಯ ಯಾವ ಭಾಗಕ್ಕೂ ಕಾಗದಪತ್ರಗಳಿರಲಿಲ್ಲ. ನೀರು, ಗಾಳಿ, ಬೆಳಕು, ಫಲವತ್ತಾದ ಭೂಮಿ ಇರುವ ಜಾಗಕ್ಕೆ ಅಲೆಮಾರಿ ಸಮುದಾಯಗಳು ಚಲಿಸುತ್ತಿದ್ದವು. ಅಂಥ ಎಷ್ಟೋ ಅಲೆಮಾರಿ ಸಮುದಾಯಗಳನ್ನು ನಾಗರಿಕ ಜಗತ್ತಿಗೆ ತಂದು, ಅವರೊಳಗೆ ಕಾಯಕ ಪ್ರಜ್ಞೆಯನ್ನು ಮೂಡಿಸಿದವರು ಬಸವಾದಿ ಶರಣರು. ಹಾಗೆ ಬಂದ ಅಲೆಮಾರಿಗಳು, ನಿರ್ಗತಿಕರು, ಹೆಳವರು(ಅಂಗಹೀನರು) ಮುದು-ತದುಕರು, ದಾರಿಹೋಕರು, ನೆಲ-ಸೆಲೆ ಇಲ್ಲದವರನ್ನ ಜಂಗಮ ಸ್ವರೂಪದಲ್ಲಿ ಶರಣರು ಕಂಡವರು. ಅದು ಬಿಟ್ಟು ಜಂಗಮತ್ವ ಅನ್ನೋದು ಒಂದು ವೃತ್ತಿಯನ್ನಾಗಿಯೋ ಜಾತಿಯನ್ನಾಗಿಯೋ ನೋಡುವ ರೀತಿಯನ್ನು ನಾವು ಪರಶೀಲಿಸಬೇಕಿದೆ. ಈಗಂತೂ ಪ್ರಚಲಿತವಿರುವ ಲಿಂಗಾಯತ ಸಮುದಾಯದಲ್ಲಿ ಜಂಗಮ ಎನ್ನುವುದನ್ನು ತೀರ ಸರಳೀಕರಿಸಿ ಹೊಟ್ಟೆಹೊರೆಯುವ ವೃತ್ತಿಯನ್ನಾಗಿಸಲಾಗಿದೆ. ಇದು ನಮ್ಮ ಧರ್ಮದಲ್ಲಿ ಉದ್ಭವಿಸಿದ ಮೊದಲ ಮೇಲರಿಮೆಯ ಅಪಾಯ. ಇದು ಮುಂದೆ ಕುಲಗಳಾಗಿ ಕವಲೊಡೆದು ಒಂದೊಂದು ವ್ಯವಸ್ಥೆಯಾಗಿ ಆ ವ್ಯವಸ್ಥೆಗೊಬ್ಬ ಸ್ವಾಮಿಯಾಗಿಯೂ, ಪೀಠಗಳು ಜಾತಿ ಕೇಂದ್ರಿತ ಮಠಗಳಾಗಿಯೂ ಬದಲಾದದ್ದು ಬಸವಪರಂಪರೆಯ ಧಾರ್ಮಿಕ ಚರ್ಚೆಯನ್ನೇ ಬುಡಮೇಲು ಮಾಡಿದವು. ಶರಣರ ದೈವ ನಿಧನಿಧಾನಕ್ಕೆ ತನ್ನ ಸಾಮೂಹಿಕ ನಾಯಕತ್ವವನ್ನು ಮಠಾಧೀಶರ ಕೈಗಿತ್ತು ತನ್ನ ಸ್ವಾಸ್ಥ್ಯವನ್ನು ತಾನೇ ಹಾಳುಗೆಡಿಸಿಕೊಂಡಿತೋ ಏನೋ…!

ಯಾವ ಅಲ್ಲಮರು ಕಲ್ಯಾಣದ ಮಹಾಮನೆ ಎದುರು ನಿಂತಾಗ ಎಂಜಲೆಲೆ ಬಿಸಾಡುವ ತೊಟ್ಟಿಯಲ್ಲೂ ಜೀವ ಮಿಸುಕುವುದನ್ನು ಕಂಡು, ಆ ಸಿದ್ಧಪ್ರಸಿದ್ದ ಮರುಳಶಂಕರನನ್ನು ಗುರುತಿಸಿ ಆ ತೊಟ್ಟಿಯಿಂದ ಹಿಡಿದೆತ್ತಿ ಶರಣ ಸಂದೋಹದೊಳಗೆ ಘನತೆಯ ಬದುಕಿಗೆ ದಾರಿಮಾಡಿಕೊಟ್ಟಿತೋ ಆ ಸಂದೋಹದ ಮುಂದಿನ ಪೀಳಿಗೆ ಅನ್ನಾಹಾರದ ವಿಷಯದಲ್ಲಿ ಮುಟ್ಟುಚೆಟ್ಟು ಮಾಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯಾವ ಶರಣ ಸಂದೋಹ ಗಾಣದ ಕನ್ನಪ್ಪನ ಮನೆಯ ಪ್ರಸಾದದ ನಿಲುವನ್ನು ಅನುಮಾನಿಸಿ ತಮ್ಮ ಇಷ್ಟಲಿಂಗಗಳನ್ನೇ ಕಳೆದುಕೊಂಡು ವಿಲವಿಲ ಒದ್ದಾಡಿ ಕಟ್ಟಕಡೆಗೆ ಅವರ ಎದೆಯ ಮೇಲಿನ ಲಿಂಗಗಳೆಲ್ಲ ಕೆರೆಯಲ್ಲಿ ತೇಲಿಬರುವ ಸಂಗತಿಗಳನ್ನು ಪವಾಡದ ರೂಪದಲ್ಲಿ ಕಟ್ಟಿ ಅರ್ಥೈಸಲು ಪ್ರಯತ್ನಿಸಿತೋ ಅದೇ ಸಮುದಾಯದ ಮುಂದಿನ ಪೀಳಿಗೆ ಮೇಲು-ಕೀಳಿನ ವ್ಯವಹಾರದಲ್ಲಿ ತೊಡಗಿರುವುದನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವ ಮಹಾತಾಯಿ ಸತ್ಯಕ್ಕ, ಮಹಾಶರಣ ಮೋಳಿಗೆ ಮಾರಯ್ಯಗಳು ಚಿನ್ನವನ್ನು ಪರರ ವಸ್ತುವೆಂದು ಕಾಯಕದಿಂದ ಬಾರದ ವಸ್ತುವನ್ನು ಹೇಸಿಗೆ ಸಮಾನವೆಂದು ಭಾವಿಸಿದರೋ ಅದೇ ಸಂದೋಹದ ಮುಂದಿನ ಪೀಳಿಗೆ ಕಾಣಿಕೆ ಎತ್ತಲು, ಆಸ್ತಿಪಾಸ್ತಿ ಮಾಡಲು ಸ್ಪರ್ಧೆಗಿಳಿಯುವಷ್ಟು ಬದಲಾದದ್ದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಅಂತೆಲ್ಲ ಜೀವನ ದರ್ಶನ, ಮಹಂತ ಸಿದ್ಧಾಂತವನ್ನು ಶ್ರೇಣೀಕರಣದ ಪದತಲಕ್ಕೆ ಒಪ್ಪಿಸಿ ಭಾರತದ ಹತ್ತರೊಳಗೆ ಹನ್ನೊಂದನೇ ದರ್ಶನದ ಹಾಗೆ ಶರಣರ ಘನ ಸಿದ್ಧಾಂತವನ್ನು ಮೂರ್ತಿಕರಿಸಿದ್ದೇವೆ. ಜಂಗಮತ್ವವನ್ನು ಸ್ಥಾವರಕ್ಕಿಳಿಸಿ ಅದನ್ನೇ ವೈಭವೀಕರಿಸುತ್ತಿದ್ದೇವೆ. ಅರಿವು ಆಚಾರವಾದದ್ದನ್ನು, ಆಚಾರವೇ ಅರಿವಾಗಿಸಿ, ವಿಚಾರವನ್ನು ಕೇವಲ ಭಾಷಣ ಪ್ರವಚನಗಳ ಸೊತ್ತಾಗಿಸಿ, ನಡೆಯನ್ನು ಕೇವಲ ನುಡಿಯಲ್ಲಿರಿಸಿ, ಬೋಧಿಸುವವನು ಮತ್ತು ಭಕ್ತ ಎಂಬೆರಡು ಹೊಸ ವರ್ಗಗಳನ್ನು ಸೃಷ್ಟಿಸಿಡಲಾಗಿದೆ. ಹುಲ್ಲು ಹಸಿವಿನ ಹೊಟ್ಟೆ ಸೇರಿ ಹಾಲಾಗಿ, ಹಾಲು ಕೆನೆಯಾಗಿ, ಮೊಸರು ಮಜ್ಜಿಗೆಯಾಗಿ, ತುಪ್ಪವಾಗಿ, ಆ ತುಪ್ಪದೊಳಗೆ ಜ್ಯೋತಿಯ ಬೆಳಗುವ ಶಕ್ತಿ ಇರುವಂತೆ, ಶರಣರು ತಮ್ಮ ದರ್ಶನದ ರಹದಾರಿಯನ್ನು ಹಲವಾರು ಕಲ್ಪನೆ, ಆಚಾರಗಳ ಸಮೇತ ಷಟಸ್ಥಲದ ಮೂಲಕ ಸಾಧ್ಯವಾಗಿಸಿದ್ದಾರೆ. ಶರಣರು ಹಾಕಿಕೊಟ್ಟ ಮಾರ್ಗ ಇನ್ಯಾರಿಗೋ ಅಲ್ಲ ನಮ್ಮ ಅರಿವಿಗಾಗಿ ಎನ್ನುವುದು ಮರೆವಿಗೆ ಸರಿದು ಇಲ್ಲಸಲ್ಲದ ಆಚರಣೆಗಳು ರೂಢಿಗೆ ಬಂದು ಕೆಕ್ಕರಿಸಿ ನೋಡುತ್ತಿವೆ!

ಕಾಲಿಗೆ ನಮಸ್ಕರಿಸುವ ಕ್ರಿಯೆ: ಹಿರಿಯರಿರಲಿ ಕಿರಿಯರಿರಲಿ ಎದೆಯ ಮೇಲೆ ಇಷ್ಟಲಿಂಗ ಕಟ್ಟಿದ್ದಾರೆಂದರೆ ಎಲ್ಲರೂ ಸರಿಸಮಾನರೆಂಬ ಬಗೆಯನ್ನು ಬಸವಾದಿ ಶರಣರಿರುವಾಗಲೇ ಒಂದು ಐತಿಹ್ಯ ಕತೆಯ ಮೂಲಕ ಹೇಳಿದ್ದಾರೆ. (ಬಸವಣ್ಣನವರು ಶರಣು ಹೇಳಿದಾಗ ತಲೆಬಾಗಿ ಶರಣು ಶರಣಾರ್ಥಿ ಹೇಳುವ ಘಟನೆ) ಇಷ್ಟೆಲ್ಲ ಗೊತ್ತಿದ್ದೂ ಶರಣರ ಮುಂದೆ ಕಾಲು ನೀಡಿ ನಮಸ್ಕರಿಸಿಕೊಳ್ಳುವ ವ್ಯವಸ್ಥೆ ಅದು ಹೇಗೆ ಪರಂಪರೆಯೊಳಗೆ ತೂರಿ ಬಂತೋ ಭೂತಗನ್ನಡಿ ಹಿಡಿದು ನೋಡಿಕೊಳ್ಳಬೇಕು.

ಶರಣರು ಮಡಿಯುಟ್ಟು ಕುಳಿತು ವಚನಗಳನ್ನ ಬರೆದವರಲ್ಲ… ಕಾಯಕನಿರತರಾದಾಗ ಹಾಡಾಗಿ ಹಾಡಿದ ಬಗೆಯೇ ಹೆಚ್ಚಿನ ಪಾಲು ರಚನೆಗಳಾಗಿವೆ. ಅನುಭಾವದ ನುಡಿ ಹಾಡಾಗತದೆ, ಕತೆಯಾಗತದೆ, ಆಟವಾಗತದೆ ನಾಟಕವಾಗತದೆ. ಈ ಬಗೆಯಲ್ಲಿ ವಚನಗಳನ್ನು ಮತ್ತೊಮ್ಮೆ ಓದಿಕೊಂಡಾಗ ಎಲ್ಲ ವಚನಗಳಿಗೂ ಒಂದೊಂದು ಧಾಟಿ, ಲಯ ಇರುವುದನ್ನು ಗಮನಿಸಬಹುದು. ಇಡೀ ದೇಹದ ಅವಸ್ಥೆಗಳನ್ನು ಬಿಡಿಬಿಡಿಯಾಗಿ ಹಲಸಿನ ತೊಳೆಯಾಗಿ ಬಿಡಿಸಿಟ್ಟು ಅದರೊಳಗೆ ಯಾವುದು ಸತ್ಯ ಮತ್ತು ಷಟಸ್ಥಲಗಳಿಗೆ ರಹದಾರಿಯಾಗಬಲ್ಲದು ಎಂಬಂಥ ಮಾಂತ್ರಿಕ ಯೋಗದ ಮಾದರಿಯ ವಚನಗಳೂ ಇದ್ದಾವೆ. ಬಹಳಷ್ಟು ವಚನಗಳನ್ನು ತಮತಮಗೆ ಅನೂಕೂಲಕರವಾಗುವ ಹಾಗೆ ವಚನಗಳನ್ನ ತಾಳೆಗರಿಗಳ ಮೇಲೆ ನಕಲು ಮಾಡಿ ಹಂಚುವವರು ಹಲವು ಶಬ್ದಗಳನ್ನು ತೆಗೆದು ಹಾಕಿ ಕೆಲವನ್ನು ಸೇರಿಸಿರುವ ಸಾಧ್ಯತೆಯೇ ಹೆಚ್ಚಿರುವುದನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕಿದೆ. ಶೂನ್ಯ ಸಂಪಾದನೆಯ ಸಂಪಾದನೆ ಇದೆಯಲ್ಲ ಅದು ನಿಜವಾಗಿಯೂ ಇಡೀ ಕಲ್ಯಾಣದ ಕತೆಯನ್ನ, ಅನುಭವ ಮಂಟಪದಲ್ಲಿ ನಡೆದಿರುವ ಸಂಗತಿಗಳನ್ನು ವಚನಗಳ ಆಧಾರದಲ್ಲಿ ಸಣ್ಣಪುಟ್ಟ ಮಾರ್ಪಾಟುಗಳಿಂದ ಮಾಡಿರುವ ಬಗ್ಗೆ ಕೂಲಂಕಶವಾಗಿ ಅಧ್ಯಯನವಾಗಬೇಕಿದೆ. ಇವತ್ತಿಗೂ ಅನುಭವ ಮಂಟಪದಲ್ಲಿ ಅನುಭಾವ ಗೋಷ್ಠಿ ಹೇಗೆ ನಡೆಯುತ್ತಿತ್ತು…? ಎಂಬ ಪ್ರಶ್ನೆಗೆ ಕೇವಲ ಶೂನ್ಯ ಸಂಪಾದನೆಯ ಮಾದರಿಯೊಂದೇ ಉದಾಹರಣೆಯಾಗಿದೆ. ಬಹುಶಃ ಶರಣರ ಕಲ್ಪನೆ ಇದಷ್ಟೆ ಅಲ್ಲದಿರಬಹುದು. ಇನ್ನೂ ಭಿನ್ನ ಮಾದರಿಯ ಅನುಭವ ಮಂಟಪದ ಪರಿಕಲ್ಪನೆ ಇದ್ದಿರಬಹುದಲ್ಲವೆ…!

ವಾಸ್ತವಕ್ಕೆ ಸರಿಹೊಂದದ ಪುರಾಣಗಳ ಕಲ್ಪನೆಯಂತೂ ಶರಣರ ಕಥನ ಸಾಹಿತ್ಯದಲ್ಲಿ ಹೇರಳವಾಗಿ ಸೃಷ್ಟಿಯಾಗಿದೆ. ಮೊದಲಿಗೆ ಅಲ್ಲಮನ ಗುರು ಅನಿಮಿಷ ಗಾಳಿಬೆಳಕು ಇಲ್ಲದ ನೆಲದಲ್ಲಿ ಹೂತುಹೋಗಿದ್ದ ಗುಹಾಂತರ ದೇವಾಲಯದಲ್ಲಿ ಅದೆಷ್ಟೋ ಕಾಲದಿಂದ ಬದುಕಿದ್ದನು ಮತ್ತು ಆತನಿಗೆ ರೆಪ್ಪೆಗಳೇ ಇರಲಿಲ್ಲವೆಂದು, ಮೈಯೆಲ್ಲಾ ಬೆಳಕಾಗಿ ಹೊಳೆಯುತ್ತಿದ್ದನೆಂದೂ ಭಾವಿಸಿ ಅನಿಮಿಷನನ್ನು ಅತಿಮಾನಷ ವ್ಯಕ್ತಿಯನ್ನಾಗಿ ಪುರಾಣಗಳು ನಿರೂಪಿಸುತ್ತವೆ. ಆ ಸಾಮಾನ್ಯರು ಸಹಜ ರೂಢಿಸಿಕೊಂಡಿರುವ ಶರಣರ ತತ್ವದಲ್ಲಿ ಈ ಬಗೆಯ ಕಲ್ಪನೆ ಹೇಗೆ ಬಂದು ಸೇರಿಕೊಂಡಿತೋ ಆ ಕೂಡಲಸಂಗಮನೇ ಬಲ್ಲ! ಬಹುಶಃ ತಮಿಳುನಾಡಿನ ಶೈವ ಪುರಾತನರ ಕತೆಗಳಂತೆ ಶರಣರ ಕತೆಗಳನ್ನು ಅತಿಮಾನಷ ಸಂಗತಿಗಳ ಜೊತೆ ಜೋಡಿಸಿ, ಒಂದಷ್ಟು ಹೂರಣ ಸೇರಿಸಿ ಕತೆ ಕಟ್ಟಿರಬಹುದು. ಮನುಷ್ಯನ ಇರುವಿಕೆ ಮತ್ತು ಅರಿಯುವಿಕೆ ಬಗ್ಗೆ ಅಲ್ಲಮರಷ್ಟು ನಿಖರವಾಗಿ ಮತ್ತಾರೂ ಮಾತಾಡಲಾರರು. ಅಂಥ ಮಹಾತ್ಮನ ಕತೆಯೊಳಗೆ ಇರುವಿಕೆಗೂ ಅಸಾಧ್ಯವಾದ ವಾಸ್ತವಕ್ಕೆ ಸಂಬಂಧಿಸದ ಈ ಬಗೆಯ ಕಲ್ಪನೆ ಸೇರಿಸಿದ್ದು ಮುಜುಗರದ ಸಂಗತಿಯೇ ಸೈ. ಕಣ್ಣರೆಪ್ಪೆ ಆಡಿಸದವನು ಎಂದರೆ ಅವನ ವಿವೇಕವೂ ಯಾವ ಕಾಲಕ್ಕೂ ಕಣ್ಮುಚ್ಚಲಾರದಷ್ಟು ತೀಕ್ಷ್ಣವಾದದ್ದು ಎಂದೇ ಭಾವಿಸಬೇಕು. ಹಾಗಂತ ರೆಪ್ಪೆನೇ ಇಲ್ಲದವನು ಎನ್ನುವುದು ಸರಿಯೇ…! ಲೋಕರೂಢಿಯ ಹಲವು ಐತಿಹ್ಯಗಳಲ್ಲಿ ಕೈಲಾಸದ ಶಿವನೇ ಸಹಜ ಮಾನುಷರ ರೂಪ ಧರಿಸಿ ಬರುವ ಸಂಗತಿಗಳು ಹಲವು ಶರಣರ ಜೀವನ ಕತೆಗಳಲ್ಲಿ ದೊರೆತಿವೆ (ಉದಾ- ದೋಸೆ ಪಿಟ್ಟವ್ವನ ಕತೆ). ಶಿವ ಪ್ರತ್ಯಕ್ಷನಾಗುವ ಯಾವ ಕತೆಯೂ ಅತಿಮಾನುಷ ಕತೆ ಸೃಷ್ಟಿಸಿಲ್ಲ. ಆದರೆ ಶರಣರ ಜೀವನ ವೃತ್ತಾಂತ ನಿರೂಪಣೆಯಲ್ಲಿ ಹಲವು ಅತಿಮಾನುಷ ಪಾತ್ರಗಳು ನುಸುಳಿಕೊಂಡಿವೆ. ಅದರಲ್ಲೂ ಅಲ್ಲಮಪ್ರಭುವಿನ ವಿಷಯದಲ್ಲಿ ತುಸು ಹೆಚ್ಚೆ ಎನಿಸುವಷ್ಟು ವಾಸ್ತವದ ನೆಲೆಗಟ್ಟನ್ನು ಮೀರಿ ವ್ಯಕ್ತಿತ್ವ ರೂಪಿಸಿದ್ದಾರೆ. ಇಂತಹ ಎಲ್ಲ ಅತಿ ಕಲ್ಪನೆಗಳ ಸೃಷ್ಟಿ ಆರಂಭವಾದದ್ದೆ ಶೂನ್ಯಸಂಪಾದನೆ ನಂತರದ ರಚನೆಗಳಲ್ಲಿ ಅನಿಸುತ್ತದೆ. ಹಾಗಾಗಿ ಆ ಕಲ್ಪನೆಯನ್ನು ಮೀರದಿದ್ದರೆ ಬಸವಾದಿ ಶರಣರ ಸಹಜ ಶಿವಯೋಗ ನಮಗೆ ಅರ್ಥವಾಗುವುದು ತುಸು ತೊಡಕಿನ ಕೆಲಸವೆನಿಸುತ್ತದೆ.

ಮೊನ್ನೆ ಸಿನಿಮಾ ಸಂಬಂಧಿಸಿದ ಕತೆಯೊಂದರ ಚರ್ಚೆಯಲ್ಲಿ ಕುಳಿತಾಗ ಶರಣರು ಉಳವಿಯತ್ತಲೇ ಯಾಕೆ ಹೊರಟರು…? ಎಂಬ ಪ್ರಶ್ನೆ ಮುಂದಿಟ್ಟ ಲೇಖಕರು ಒಂದು ವಿಚಿತ್ರ ಸಂಗತಿಯನ್ನು ಹೇಳಿದರು… ಅದೆಷ್ಟೊಂದು ಜಾಗಗಳು ಶರಣರು ಹೋಗಿ ನೆಲೆಸಲು ಇದ್ದರೂ ಕೂಡ ಅವರು ಗೋವೆಯ ಕದಂಬರ ರಾಜ್ಯದಲ್ಲಿ ಮಾತ್ರ ನಾವು ನೆಮ್ಮದಿಯಿಂದ ಇರಬಹುದೆಂದು ಬಯಸಿದರೆ…? ಅಥವಾ ಕಾಡಿನೊಳಗೆ ಹೋದರೆ ಯಾರಿಂದಲೂ ಶರಣರಿಗೂ ವಚನರಾಶಿಗೂ ಧಕ್ಕೆಯಾಗಲಾರದು ಎಂದು ಭಾವಿಸಿದರೆ…? ಎಂದು ಹಲವು ಮಗ್ಗಲುಗಳನ್ನು ಹೇಳಿ ಕಟ್ಟಕಡೆಯದಾಗಿ ‘ಸಮುದ್ರ ತೀರದಿಂದ ಕೇವಲ 70 ಕಿಲೋಮೀಟರ್ ದೂರವಿರುವ ಉಳವಿಯವರೆಗೂ ಬಂದ ಶರಣರು, ಅವಕಾಶ ಒದಗಿದ್ದರೆ ಅಂದೇ ವಚನಕಾರರು ತಾಂಜೇನಿಯಾದಂಥ ದೇಶದತ್ತ ಹೋಗಿರುತ್ತಿದ್ದರು…’ ಎಂದು ಒಂದು ಸುಳುಹನ್ನು ಬಿಟ್ಟರು. ಅದಕ್ಕೆ ಸಂಬಂಧಿಸಿ ಇವತ್ತಿನ ಕೋಸ್ಟಲ್ ಅಂದು ಯಾವೆಲ್ಲ ಧರ್ಮದವರ ವಶದಲ್ಲಿತ್ತು ಎನ್ನುವ ಬಗ್ಗೆ ವಿಸ್ತಾರವಾದ ವಿವರಗಳನ್ನು ನೀಡಿದಾಗ ನನಗಂತೂ ಅಚ್ಚರಿಯಾಯ್ತು. ನಾವು ಮಾಡಲು ಬಯಸುತ್ತಿರುವ ಸಿನಿಮಾವನ್ನು ಕೇವಲ ಕನ್ನಡಿಗರಿಗೆ ತೋರಿಸಿದರೆ ಮಾತ್ರ ಸಾಲದು, ಜಗತ್ತಿನ ಎಲ್ಲ ಜನರೂ ನೋಡುವ ಹಾಗೆ ಮಾಡಬೇಕು ಎಂದು ಮಾತಾಡಿಕೊಂಡೆವು. ಆದರೆ ಸಿನಿಮಾಗಳು ಕತೆಯಾಗಿ ರೂಪಗೊಂಡಷ್ಟು ಸುಲಭದಲ್ಲಿ ದೃಶ್ಯವಾಗುವುದೇ ಇಲ್ಲ. ಯಾಕೆಂದರೆ ಅದಕ್ಕೆ ಬೇಕಾದ ಆರ್ಥಿಕ ಸಲಕರಣೆಯ ಅಗತ್ಯವೂ ಬಹಳ ಇರುತ್ತದೆ.

Previous post ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
Next post ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?

Related Posts

ಖಾಲಿ ಕೊಡ ತುಳುಕಿದಾಗ…
Share:
Articles

ಖಾಲಿ ಕೊಡ ತುಳುಕಿದಾಗ…

October 5, 2021 ಲಕ್ಷ್ಮೀಪತಿ ಕೋಲಾರ
“Be vacant and you will remain full”- Lao Tsu ತಾವೋನ ‘ಖಾಲಿ’ಯ ಬಗ್ಗೆ ಇತ್ತೀಚೆಗೆ ನನ್ನ ವ್ಯಸನ ಜಾಸ್ತಿಯಾಗುತ್ತಿದೆ. ತಾವೋನ ಖಾಲಿ ಎಷ್ಟು ಖಾಲಿಯಲ್ಲವೆಂದರೆ ಅದು...
ಅಮುಗೆ ರಾಯಮ್ಮ (ಭಾಗ-3)
Share:
Articles

ಅಮುಗೆ ರಾಯಮ್ಮ (ಭಾಗ-3)

November 10, 2022 ಡಾ. ಬಸವರಾಜ ಸಬರದ
ಜಾತ್ಯಾತೀತ ಮನೋಭಾವ ಜಾತಿಯೆಂಬುದು ಈ ದೇಶಕ್ಕಂಟಿದ ದೊಡ್ಡ ರೋಗವಾಗಿದೆ. ಶರಣರು ಹೋರಾಟ ಪ್ರಾಂರಂಭಿಸಿದ್ದೇ ಜಾತಿಯ ಮೂಲಕ. ಜಾತ್ಯಾತೀತ ಮನೋಭಾವವುಳ್ಳ ಶರಣರು ಯಾವ ಜಾತಿಯನ್ನೂ...

Comments 11

  1. VIJAYAKUMAR KAMMAR
    Apr 10, 2023 Reply

    ಶ್ರೀ ಮಹಾದೇವ ಹಡಪದ ಅವರ ಲೇಖನ ಉತ್ತಮ ಚಿಂತನೆಗೆ ಹಚ್ಚುತ್ತದೆ. ಸರಳ ಭಾಷೆ ನೇರ ನಿರೂಪಣೆ.
    ಚಂದದ ಲೇಖನ.🙏🙏

  2. Haraprasad Chitradurga
    Apr 10, 2023 Reply

    ಹೀಗೆ ನಮ್ಮ ದೋಷಗಳನ್ನು ನಾವು ನೋಡಿಕೊಳ್ಳದೆ ಹೋದರೆ ದೇವನೂರು ಮಹಾದೇವ ಅವರು ಹೇಳಿದಂತೆ ಜಾತಿಯ ಬಚ್ಚಲಾಗಿ ಬಿಡುತ್ತದೆ ಮಹಾಸಾಗರದಂತಿರುವ ಬಸವ ಧರ್ಮ!!

  3. ಶ್ರೀಶೈಲಪ್ಪ ಬಾಗಲಕೋಟೆ
    Apr 11, 2023 Reply

    ಅಲೆಮಾರಿ ಸಮುದಾಯದವರು ಶರಣರಲ್ಲಿದ್ದರು ಎಂಬ ಚಿಂತನೆ, ಜಂಗಮದ ವಿಸ್ತರಣೆಯ ವ್ಯಾಖ್ಯಾನ 👌🏽👌🏽

  4. ಜಗದೀಶ ಹೊಸಮಠ
    Apr 14, 2023 Reply

    12 ನೇ ಶತಮಾನ ಜಗತ್ತಿನಲ್ಲಿ ನಡೆದ ಸಾಂಸ್ಕೃತಿಕ ಮಹಾಕ್ರಾಂತಿ!! ಅದು ಸತ್ಯದ ಅರಿವು ಹಾಗೂ ಅನ್ವೇಷಣೆ!! ತಾವು ನಿರೂಪಿಸಿದ ಲೇಖನದಲ್ಲಿ ಅಲ್ಲಮ ಇರಬಹುದು ಬೇರೆ ಶರಣರಿರಬಹುದು, ಯಾವುದೇ ಜಾತಿಗಿಂತ ಅವರ ಜ್ಞಾನದ ಜ್ಯೋತಿ, ಮಿಗಿಲಾಗಿತ್ತು, ಆದ್ದರಿಂದಲೇ ಜಾತಿ ಮತ ಮೇಲು-ಕೀಳು ಎಂಬ ಎಲ್ಲಾ ಸಂಕೋಲೆಯನ್ನು ಕಿತ್ತೆಸೆದು ಸತ್ಯದ ಅರಿವಿನಿಂದ ಅವರೆಲ್ಲರೂ ಮಹಾಶರಣರಾದರು. ಆ ಬೆಳಕಿನ ಸೊಬಗು ಇಂದು ನಿಜ ಶರಣರಿಲ್ಲದೆ ಮಸುಕಾಗಿರುವುದು ನಿಜ. ಸಮಾಜವನ್ನು ಎಚ್ಚರಿಸುವ ಇಂತಹ ಬರವಣಿಗೆಗಳು ನಿಮ್ಮಿಂದ ಬರಲಿ💐💐😌

  5. Srinath Rayasam
    Apr 15, 2023 Reply

    ಅತಿ ಪ್ರಾಜ್ಞ ರೂಪದಿಂದ ಮೂಡಿ ಬಂದಿದೆ ಮಹಾಜ್ಞಾನಿ ಅಲ್ಲಮರ ವಿಚಾರಧಾರೆ! ಲೇಖನ ಇಷ್ಟವಾಯಿತು.

  6. ರಾಜಶೇಖರ ಪಾಟೀಲ
    Apr 16, 2023 Reply

    ತಳ ಸಮುದಾಯದ ಧರ್ಮವೊಂದು ತನ್ನ ಮಾನವತೆಯ ನೆಲೆಯಿಂದ ದೂರವಾದದ್ದು ನಿಜಕ್ಕೂ ಖೇದದ ವಿಷಯ… ಬಸವ ಬಳ್ಳಿಗಳ ನಿಮ್ಮದೊಂದು ಕಳಕಳಿಯ ಪುಟ್ಟ ಪ್ರಯತ್ನವು ಬಸವಾದಿ ಶರಣರ ಆಶಯಗಳನ್ನು ಎತ್ತಿ ಹಿಡಿಯುವ ಮಹತ್ವದ ಕಾರ್ಯವಾಗಿದೆ ಅಣ್ಣಾ…

  7. ಆನಂದ ಗುರಳಿ
    Apr 19, 2023 Reply

    ಕಾಯಕ ನಿರತ ಶರಣರ ಅನುಭವವೇ ಅನುಭಾವಿಕ ವಚನಗಳಾಗಿ ಜಗವನ್ನು ಬೆಳಗುವ ದೀಪಗಳಾಗಿವೆ… ಎಲ್ಲಾ ಕಾಲಕ್ಕೂ ಸಲ್ಲುವ ಅವರನ್ನು ಅವರ ಪರಂಪರೆಯವರೇ ಅನುಸರಿಸದೇ ಇದ್ದದ್ದು ಇತಿಹಾಸದ ಚೋದ್ಯವೇ ಸರಿ.

  8. S. S. Patil, Raichur
    Apr 20, 2023 Reply

    ಬಯಲುನಲ್ಲಿ ಬರುವ ಲೇಖನಗಳು ಉತ್ಕೃಷ್ಟವಾಗಿದ್ದು ನನ್ನ ಸ್ನೇಹಿತರ ಹಾಗೂ ಬಂಧುಗಳ ಗುಂಪುಗಳಿಗೆಲ್ಲಾ ಕಳಿಸಿಕೊಡುತ್ತೇನೆ….

  9. gangadhara M
    Apr 27, 2023 Reply

    ಹೀಗೆ ದಿಟ್ಟವಾಗಿ ಮಾತನಾಡುವ ಯುವ ಪಡೆಯು ಸಿದ್ದವಾಗಬೇಕು. ನೇರವಾಗಿ ತಪ್ಪುಗಳನ್ನು ತೋರಿಸಬೇಕು, ಒಪ್ಪುಗಳನ್ನು ಅಪ್ಪಿಕೊಳ್ಳಬೇಕು… ಬಸವಬಳ್ಳಿ ನಮ್ಮೂರ ಹೊಸಿಲನ್ನೂ ದಾಟಿ ಬರಲಿ… ವಚನಗಳ ತೇರ ಎಳೆಯಲು ನಿಮ್ಮೊಂದಿಗೆ ನನ್ನ ಕೈಗಳೂ ಸೇರಲಿ.

  10. Sureshkumar D
    Apr 30, 2023 Reply

    ಭೂಮಿಯ ಯಾವ ಭಾಗಕ್ಕೂ ಕಾಗದಪತ್ರಗಳಿರಲಿಲ್ಲದ ಸಂದರ್ಭದಲ್ಲಿ ಕಲ್ಯಾಣದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದೇ ಒಂದು ಅದ್ಭುತ ಸಂಗತಿ. ಆ ಚಳವಳಿಯನ್ನು ಅದರದೇ ಶಕ್ತಿ ಸಮೇತ ಉಳಿಸಿಕೊಳ್ಳುವಲ್ಲಿ ನಾವು ಹೀನಾಯವಾಗಿ ಸೋತಿದ್ದೇವೆ… ಲೇಖನ ಶಕ್ತಿಯುತವಾಗಿದೆ.

  11. Jeevan C
    May 9, 2023 Reply

    This piece af writing is priceless

Leave a Reply to ಆನಂದ ಗುರಳಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಶಿವಯೋಗ
ಶಿವಯೋಗ
July 4, 2021
ಆಸರೆ
ಆಸರೆ
August 6, 2022
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
Copyright © 2025 Bayalu