Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣರು ಕಂಡ ಸಹಜಧರ್ಮ
Share:
Articles April 29, 2018 ಡಾ. ಶಶಿಕಾಂತ ಪಟ್ಟಣ

ಶರಣರು ಕಂಡ ಸಹಜಧರ್ಮ

‘ಧರ್ಮ’ ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು ‘ಧಾರಣಾತ್ ಧರ್ಮಃ’ -ಅಂದರೆ ಯಾವುದನ್ನು ಧರಿಸಲು, ಆದರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ. ಜಿಡ್ಡುಗಟ್ಟಿದ ಮೃತಪ್ರಾಯವಾಗಬಹುದಾದ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ವ್ಯವಸ್ಥೆಗೆ ಒಂದು ಬೃಹತ್ ಪರ್ಯಾಯ ವ್ಯವಸ್ಥೆಯನ್ನು ಹನ್ನೆರಡನೆಯ ಶತಮಾನದಲ್ಲಿ ಶರಣರು ಕಲ್ಪಿಸಿದರು. ಧರ್ಮವು ಶೊಷಣೆಯಾದಾಗ, ಮೋಸ ಕಪಟ ಕಳ್ಳತನ ಕಂದಾಚಾರ ಮೂಢನಂಬಿಕೆಗಳ ತಾಣವಾದಾಗ ಬಸವಣ್ಣನವರು, ‘ದಯವಿಲ್ಲದ ಧರ್ಮ ಅದೇವುದಯ್ಯಾ?’ ಎಂದು ಪ್ರಶ್ನಿಸಿ ಧರ್ಮಕ್ಕೆ ದಯೆ ಮತ್ತು ಪ್ರೀತಿಯ ಅಡಿಪಾಯ ಹಾಕಿದರು.

ಧರ್ಮವು ಬರಿ ಸಿದ್ಧಾಂತವಲ್ಲ, ಅದು ಬದುಕಿನ ಕ್ರಮ ಅಥವಾ ಸಾಧನೆಯ ಹಾದಿ (Religion is a way of life but not a view of life). ಬದುಕನ್ನು ಕೇವಲ ಅವಲೋಕಿಸಿ ವ್ಯಾಖ್ಯಾನ ಮಾಡುವುದು ಧರ್ಮವಲ್ಲ. ಶರಣರು “ಧರ್ಮ ಕೇವಲ ಬದುಕಿನ ಮಾರ್ಗವಲ್ಲ, ಅದು ಬದುಕಿನ ನೀತಿ ಸಂಹಿತೆ, ಸತ್ಯ ಶುದ್ಧ ಆಚರಣೆ” ಎಂಬಂತೆ ಬದುಕಿದರು. ಇಲ್ಲಿ ಸಲ್ಲುವವ ಅಲ್ಲಿಯೂ ಸಲ್ಲುವ, ಇಲ್ಲಿ ಸಲ್ಲದವ ಅಲ್ಲಿಯೂ ಸಲ್ಲ- ಎಂದು ತಮ್ಮ ಮೂಲಕವೇ ತೋರಿಸಿಕೊಟ್ಟರು.
ನಿರ್ಮಲವಾದ ಮನಸ್ಸಿಗೆ ಮನುಷ್ಯ ತನ್ನನ್ನೇ ತಾನು ಆತ್ಮಾವಲೋಕನ ಮಾಡಿಕೊಳ್ಳಬೇಕು. ‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ’’, ‘ಮಾವಿನ ಕಾಯೊಳು ಎಕ್ಕೆ ಕಾಯಿ ನಾನಯ್ಯಾ’, ‘ಮನವೆಂಬ ಮರ್ಕಟ’, ‘ವಿಷಯವೆಂಬ ಹಸುರೆನ್ನ ಮುಂದೆ ಪಸರಿಸಿದಿರಿ’… ಹೀಗೆ ಆತ್ಮಾವಲೋಕನದ ಜೊತೆಗೆ ಭೃತ್ಯಾಚಾರದ ಕಿಂಕರ ಭಾವನೆಯಿಂದ ಬಸವಣ್ಣನವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಕ್ತಿ ಚಳುವಳಿ ಮತ್ತು ಸಮತೆಯ ಸಂಘರ್ಷವನ್ನು ಸಾರಿದರು. ಪರಿಣಾಮವಾಗಿ ಕಕ್ಕಯ್ಯ, ಚೆನ್ನಯ್ಯ, ಹರಳಯ್ಯಾ, ಮಾಚಯ್ಯ, ಚೆಂದಯ್ಯ, ಸತ್ಯಕ್ಕಾ, ಕಾಳವ್ವೆ, ನಿ೦ಬೆಕ್ಕಾ, ಅಂಬಿಗರ ಚೌಡಯ್ಯಾ… ಹೀಗೆ ಕೆಳಸ್ತರದ ಜನರ ಸಂಘಟನೆಯಿಂದ ಲಿಂಗಾಯತ ಎಂಬ ಒಂದು ಹೊಸ ಧರ್ಮವನ್ನು ಬಸವಣ್ಣ ಮತ್ತು ಎಲ್ಲಾ ಶರಣರು ಸ್ಥಾಪಿಸಿದರು.
ವಚನಗಳು ಸಮತೆ ಶಾಂತಿ ಪ್ರೀತಿ ವಿಶ್ವ ಬಂಧುತ್ವ ಸಾರುವ ನಿರ್ವಿವಾದ ಸತ್ಯಗಳು. ಆದರೆ ಯಾವುದೇ ಲಾಂಛನ, ಕಾವಿ, ಮಠಗಳಿರದ ಈ ಧರ್ಮದಲ್ಲಿ ಮತ್ತೆ ಮೌಢ್ಯ ತುಂಬಿಕೊಂಡಿತು. ಇಲ್ಲಿನ ಪಟ್ಟಭದ್ರ ಶಕ್ತಿಗಳು, ಶರಣರ ಮೂಲ ಆಶಯ ಗುರುತಿಸದೆ ಅವುಗಳನ್ನು ತಮ್ಮ ಗ್ರಹಿಕೆಗೆ ತಕ್ಕಂತೆ ವ್ಯಾಖ್ಯಾನ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೆಯತೊಡಗಿದರು.
ಕಾಯಕ ದಾಸೋಹ ತತ್ವವನ್ನು ಮೊಟ್ಟ ಮೊದಲ ಬಾರಿಗೆ ಬದುಕಿ ತೋರಿದ ಧೀರರು ಶರಣರು. ‘ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ’ ಎಂದೆನ್ನುವ ಶರಣರು ಲಿಂಗ ಯೋಗದ (ಪೂಜೆಯಲ್ಲ) ಮೂಲಕ ಅನುಸಂಧಾನ ಮಾಡಿ ಮನುಷ್ಯ ಹೇಗೆ ತಾನೇ ದೇವನಾಗಬಲ್ಲನು ಎಂದು ಸಾಧಿಸಿ ತೋರಿದ್ದಾರೆ. ಅಲ್ಲಿಯವೆರೆಗಿದ್ದ ಸೋಹಂ ಎಂಬ ಭಾವವು ದಾಸೋಹಂ ಎಂಬ ಮಹಾನ್ ತತ್ವದಲ್ಲಿ ಪರಿವರ್ತನೆಗೊಂಡಿತು. ಇಂತಹ ಕ್ರಾಂತಿ ಜಗತ್ತಿನಲ್ಲಿಯೇ ಅಪರೂಪದ್ದು. ವರ್ಗ ವರ್ಣ ಆಶ್ರಮ ಲಿಂಗ ಬೇಧ ಧಿಕ್ಕರಿಸಿದ ಶರಣರು ಸರ್ವಕಾಲಿಕ ಸಮಕಾಲೀನ ಸಮಾನತೆಯ ಸಮಾಜದ ರೂವಾರಿಗಳು.
ಅಂದಿನ ಮೌಢ್ಯ, ಅಂಧಶ್ರದ್ಧೆ, ಕಂದಾಚಾರ, ಪುನರ್ಜನ್ಮ, ಕರ್ಮಸಿದ್ಧಾಂತವನ್ನು ಸಂಪೂರ್ಣ ತಿರಸ್ಕರಿಸಿ ಸಹಜ ಬದುಕಿನ ಹೊಸ ಸಮಾಜವನ್ನು ನಿರ್ಮಿಸಿದರು. ಶರಣರು ಪುನರ್ಜನ್ಮ ಕರ್ಮ ಸಿದ್ಧಾಂತ ವಿರೋಧಿಸಿದರು.

ಅಟ್ಟೆ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,
ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ?
ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ.

ಇಲ್ಲಿ ಅಟ್ಟೆ ಎಂದರೆ ತಲೆಯಿಲ್ಲದ ದೇಹ ಎಂದರ್ಥ. ಬಸವಣ್ಣನವರು ಸಂಶೋಧಿಸಿದ
ಇಷ್ಟಲಿಂಗ ಬಯಲಿನ ಕುರುಹು. ಲಿಂಗವನರಿಯದೆ ಏನನ್ನು ಅರಿತರೂ ಫಲವಿಲ್ಲಾ, ಲಿಂಗವನರಿತ ಬಳಿಕ ಮತ್ತೆನನ್ನು ಅರಿತರೂ ಫಲವಿಲ್ಲಾ, ಅದಕ್ಕೆ ಇಂತಹ ಸ್ಥಲ ಮುಟ್ಟಿದ ಬಳಿಕ ಅಂದರೆ ಭಕ್ತನಾಗಿ ಮತ್ತೆ ಭವಿಯಾಗುವುದು ಸಾಧ್ಯವಿಲ್ಲ. ಇಂತಹ ಸುಂದರ ಲಿಂಗ ತತ್ವ ತಿಳಿದ ಬಳಿಕ ಮರಳಿ ಹುಟ್ಟಲು ಸಾಧ್ಯವೇ? ಭವಿ ಒಂದು ಜನ್ಮ, ಅದು ಪರಿವರ್ತಿತಗೊಂಡ ಇನ್ನೊಂದು ಸ್ಥಲವೇ ‘ಭಕ್ತ’, ಇನ್ನೊಂದು ಜನ್ಮ. ಇಂತಹ ನಿಜವನರಿದ ಬಳಿಕ ಮರಳಿ ಹುಟ್ಟು ಸಾಧ್ಯವಿಲ್ಲ. ಇದು ಅಲ್ಲಮರ ಅಭಿಮತ.

ಇದೇ ರೀತಿ ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರು ಈ ಕೆಳಗಿನಂತೆ ಪ್ರಶ್ನಿಸಿದ್ದಾರೆ:

ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ ?
ನೀರಿನಿಂದಾದ ಮುತ್ತು ನೀರಪ್ಪುದೇ ?
ಮೀರಿ ಪೂರ್ವಕರ್ಮವನು ಹರಿದ ಭಕ್ತಂಗೆ
ಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ?
ಕಟ್ಟಿಹೆ ಬಿಟ್ಟಿಹೆವೆಂಬ ದಂದುಗ ನಿಮಗೇಕೆ?
ತೆರನನರಿಯದೆ ಹಲವು ತೊಪ್ಪಲ ತರಿತಂದು ಮೇಲೊಟ್ಟಲೇಕೊ?
ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ಶಿವ ತೆರಹಿಲ್ಲದಿಪ್ಪನೆಂದಾತನಂಬಿಗರಚೌಡಯ್ಯ.

ಹಾಲಿನಿಂದಾದ ತುಪ್ಪ ಮತ್ತೆ ಹಾಳಾಗುವುದೆ ಕ್ರಿಯೆ ಅಳಿದು? ನೀರಿನಲ್ಲಿ ಹುಟ್ಟಿದ, ನೀರಿನಿಂದಾದ ಮುತ್ತು ಮತ್ತೆ ನೀರಾಗುವುದೆ? ಮೀರಿ ಪೂರ್ವಕರ್ಮವನು ಹರಿದ ಭಕ್ತನಿಗೆ ಮತ್ತೆ ಬೇರೆ ಜನ್ಮ ಉಂಟೆ?
ಕಟ್ಟಿಹೆ ಬಿಟ್ಟಿಹೆನೆ೦ಬ ಆತಂಕ ನಿಮಗೇಕೆ ಭಕ್ತರೆ? ಅರ್ಥವಿಲ್ಲದ ನೆಲೆಯಿಲ್ಲದ ತಪ್ಪಲು ತಂದು ಅನಗತ್ಯ ಒಟ್ಟಲೇಕೊ? ಜಂಗಮ ಬಂದಲ್ಲಿ ತೆರನರಿತು ಅರ್ಪಿಸಿದಡೆ ಶಿವನೊಪ್ಪುವ ಎಂದು ಹೇಳಿದ್ದಾರೆ.
ಶರಣರು ಕರ್ಮಸಿದ್ಧಾಂತವನ್ನು ಪುನರ್ಜನ್ಮವನ್ನು ಒಪ್ಪಲಿಲ್ಲ ಮತ್ತು ಕಟುವಾಗಿ ವಿರೋಧಿಸಿದರು. ಆದರೆ ಪಲ್ಲಟ ಪರಿವರ್ತನೆ ಕುರಿತಾಗಿ ಭವಿ ಭಕ್ತ ವಿವರಣೆ ಕೊಡುವಾಗ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಮಾರ್ಪಾಡಾದಾಗ ಅದನ್ನು ಒಂದು ಜನ್ಮ, ಮತ್ತೊಂದು ಜನ್ಮ ಎಂದು ಕರೆದರು. ಸಾಮಾನ್ಯವಾಗಿ ನಾವೇ ಒಂದು ಅಪಘಾತದಲ್ಲಿ ಸಿಕ್ಕು ಪಾರಾದಾಗ “ನಾವು ಪುನರ್ಜನ್ಮ ಪಡೆದೆವು” ಎಂದು ಹೇಳುವುದಿಲ್ಲವೇ, ಹಾಗೆ. ಕಾರಣ ಶರಣರು ಪುನರ್ಜನ್ಮ ಒಪ್ಪಲಿಲ್ಲ. ಹಿಂದಿನ ಜನ್ಮವಿಲ್ಲ ಮುಂದೆ ಇನ್ನೊಂದು ಜನ್ಮವೂ ಇಲ್ಲ. ‘ನುಡಿದಂತೆ ನಡೆ ಇದೆ ಜನ್ಮ ಕಡೆ’ ಇದು ಶರಣರ ಸ್ಪಷ್ಟವಾಣಿ .

ಲಿಂಗಾಯತ ಧರ್ಮವು ಮಠಗಳ ಸಂಸ್ಕೃತಿಯದ್ದಲ್ಲ, ಅದು ಮಹಾಮನೆಯ ಸಂಸ್ಕೃತಿ. ಲಿಂಗಾಯತ ಧರ್ಮವು ಬ್ರಹ್ಮಚರ್ಯೆ ವಿರೋಧಿಸುತ್ತದೆ. ಅದು ಪ್ರಾಪಂಚಿಕ ಸಾಂಸಾರಿಕ ತತ್ವವನ್ನು ಬೋಧಿಸುತ್ತದೆ. ಇಂದ್ರಿಯ ನಿಗ್ರಹ ಮಹಾಪಾಪ.
ಲಿಂಗಾಯತ ಧರ್ಮವು ಬಾಹ್ಯದಲ್ಲಿ ದೇವರನ್ನು ಕಾಣುವುದಿಲ್ಲ. ತನ್ನ ಅಂತರೊಳಗೆ ದೇವರನ್ನು ಕಾಣುವುದು. ಮಾನವ ಮಹದೇವನಾಗುವದು.
ಲಿಂಗಾಯತ ಧರ್ಮವು ದಾನ ವಿರೋಧಿಸುತ್ತುದೆ, ಆದರೆ ದಾಸೋಹವನ್ನು ಪ್ರೋತ್ಸಾಹಿಸುತ್ತದೆ.
ಲಿಂಗಾಯತ ಧರ್ಮವು ವೇದ ಶಾಸ್ತ್ರ ಆಗಮ ವಿರೋಧಿಸುತ್ತದೆ. ಆದರೆ ವಚನಗಳೇ ಶಾಸನವೆನ್ನುತ್ತದೆ. ವಚನಗಳು ಬದುಕಿನ ಅನುಭವ ಚಿಂತನ.
ಲಿಂಗಾಯತ ಧರ್ಮವು ಮಾಟ ಮಂತ್ರ ಮೂಢನಂಬಿಕೆ ಖಂಡಿಸುತ್ತದೆ. ವೈಜ್ಞಾನಿಕತೆ ವೈಚಾರಿಕತೆ ಬೆಳೆಸುತ್ತದೆ. ತರ್ಕವನ್ನು ನಂಬುತ್ತದೆ.
ಲಿಂಗಾಯತ ಧರ್ಮವು ಪಂಚಾಂಗ ಮುಹೂರ್ತ ಘಳಿಗೆ ಒಪ್ಪುವದಿಲ್ಲ. ಸರ್ವಕಾಲವೂ ಸುಮಂಗಲ, ನಾಳೆ ಬರುವುದು ನಮಗಿಂದೇ ಬರಲೆನ್ನುವ ದಿಟ್ಟ ಧ್ಯೇಯ.
ಲಿಂಗಾಯತ ಧರ್ಮದಲ್ಲಿ ಗುಲಾಮಗಿರಿ ದಾಸ್ಯತ್ವವಿಲ್ಲ. ಭಕ್ತನಲ್ಲಿ ಸ್ವಾಭಿಮಾನ ಸ್ವತಂತ್ರತೆಯಿದೆ, ದುಡಿದರೆ ತನಗುಂಟು, ತನ್ನ ಪ್ರಮಥರಿಗುಂಟು.
ಲಿಂಗಾಯತ ಧರ್ಮವು ಆಡಂಬರ ಮೆರವಣಿಗೆ ಒಪ್ಪುವದಿಲ್ಲ. ಸರಳ ಸತ್ಯ ಶುದ್ಧ ಮೌಲ್ಯಯುತ ತತ್ವಗಳ ಆಚರಣೆಯನ್ನು ಬೆಂಬಲಿಸುತ್ತದೆ.
ಲಿಂಗಾಯತ ಧರ್ಮವು ಸ್ಥಾವರ ಮೂರ್ತಿ ವಿರೋಧಿಸುತ್ತದೆ. ಲಿಂಗಯೋಗ ನಿರಾಕಾರ ನಿರುಪಾದಿತ ಲಿಂಗ ತತ್ವವನ್ನು ಒಪ್ಪುತ್ತದೆ.
ಲಿಂಗಾಯತ ಧರ್ಮವು ಜಡ ವಿರೋಧಿ, ಪ್ರಕೃತಿದತ್ತ ನಿಸರ್ಗ ಜಂಗಮಪ್ರೇಮಿ ಚೈತನ್ಯದಾಯಕ ಕ್ರಿಯಾಶೀಲತೆಯಲ್ಲಿ ಭಕ್ತ ಆನಂದ ಅನುಭವಿಸುತ್ತಾನೆ.
ಲಿಂಗಾಯತ ಧರ್ಮವು ಪ್ರಾಣಿ ಬಲಿ ಸುಲಿಗೆ ಶೋಷಣೆ ಖಂಡಿಸುತ್ತದೆ. ಕಾಯಕ ದಾಸೋಹ ಕಡ್ಡಾಯ ಸಕಲ ಜೀವಿಗಳನ್ನು ಪ್ರೀತಿಸುವ ಸಿದ್ಧಾಂತ ಇದಾಗಿದೆ.
ಲಿಂಗಾಯತ ಧರ್ಮವು ಸೂತಕ ವಿರೋಧಿಸುತ್ತದೆ, ಇದು ಹುಟ್ಟು ಸಾವು ಸಹಜ ಕ್ರಿಯೆಗಳ ಧರ್ಮ.
ಲಿಂಗಾಯತ ಧರ್ಮವು ಜಗತ್ತಿನಲ್ಲಿ ಸಾಂಸ್ಥಿಕರಣ ವಿರೋಧಿಸಿದ ಏಕಮೇವ ಧರ್ಮ. ಚರ್ಚು ಗುಡಿ ಮಠ ಆಶ್ರಮ ಬಸದಿ ಮಸೀದಿ, ಗುರುದ್ವಾರ, ಬಸದಿಗಳಿಲ್ಲದ ಮುಕ್ತ ಸಮಾಜವನ್ನು ಕಟ್ಟಿದ ಶರಣರು ಜಗತ್ತಿನ ಸಮತೆಯ ಶಾಂತಿಯ ರಾಯಭಾರಿಗಳು.

ಶರಣರು ರೂಪಿಸಿದ ಜಂಗಮ ತತ್ವ

ಜಂಗಮ ಪದ ಶರಣರು ಸಮಾಜವೆಂತಲೂ ತತ್ವ ನಿಷ್ಠ ಸಾಧಕರೆಂತಲೂ ಸಮಷ್ಟಿ ಎಂತಲೂ ಬಳಸಿ ಲಿಂಗವೇ ಜಂಗಮ ಎಂದೆನ್ನುತ್ತಾ ವ್ಯಕ್ತಿ ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದಾರೆ. ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲ ಎಂದು ಹೇಳಿದ್ದಾರೆ. ಬಸುರಿ -ಇದು ಜಂಗಮ ಪರಿಕಲ್ಪನೆ ಶಿಶು ಭಕ್ತನಾಗುತ್ತಾನೆ. ಇದೇ ರೀತಿ “ಮರಕ್ಕೆ ಬಾಯಿ ಬೇರೆಂದು ತಳೆಯಿಂಕೆ ನೀರೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ, ಲಿಂಗದ ಬಾಯಿ ಜಂಗಮವೆಂದು ಪಡಿ ಪದಾರ್ಥವ ನೀಡಿದಡೆ ಮುಂದೆ ಸಕಳಾರ್ಥವನೀವನು. ಆ ಜಂಗಮ ಹರನೆಂದು ಕಂಡು, ನರನೆಂದು ಭಾವಿಸಿದೊಡೆ ನರಕ ತಪ್ಪದು ಕಾಣಾ, ಕೂಡಲಸಂಗಮದೇವ.” ಅತ್ಯಂತ ಸ್ಪಷ್ಟವಾಗಿ ನಿರೂಪಿಸಿದ ಲಿಂಗ ಜಂಗಮ ತತ್ವಗಳನ್ನು ಇಲ್ಲಿ ಕಾಣಬಹುದು. ಹೇಗೆ ಮರಕ್ಕೆ ಬಾಯಿ ಬೇರೋ ಹಾಗೆ ಲಿಂಗದ ಬಾಯಿ ಜಂಗಮ ಅಂದರೆ ಸಮಾಜ. ಸಮಾಜದ ವ್ಯಕ್ತಿಯನ್ನು ಹರನೆಂದು ನಂಬಿ ಪ್ರೀತಿಯಿಂದ ನೋಡಬೇಕಾದವರು ನರನೆಂದು ಕಡೆಗಣಿಸಿದರೆ ಸ್ವರ್ಗವೂ ನರಕವೇ ಎಂದು ಎಚ್ಚರಿಸಿದ್ದಾರೆ. ಜಂಗಮ ಜಾತಿಯಲ್ಲ ಅದು ಸಮಾಜ. ಲಿಂಗ ತತ್ವವನ್ನು ಪ್ರಾಣದಲ್ಲಿ ಇತ್ತು ನಿರುಪಾದಿತವಾಗಿ ಗೌರವಿಸುವ ಸುಂದರ ಸಮತೆಯ ವ್ಯವಸ್ಥೆ- ಇಂತಹ ಸಮತೆಯ ಜಂಗಮ ವ್ಯವಸ್ಥೆಯನ್ನು ಬಸವಣ್ಣ ಮತ್ತು ಶರಣರು ಅರಿತು ಆಚರಿಸಿದರಲ್ಲದೆ ತಾವು ಕಂಡ ಸತ್ಯವನ್ನು ಮುಕ್ತ ವಚನಗಳಲ್ಲಿ ವ್ಯಕ್ತಗೊಳಿಸಿದ್ದಾರೆ. ಅನುಭಾವವೇ ಜಂಗಮ -ಜಂಗಮವೂ ಉಪಾದಿತ ವ್ಯವಸ್ಥೆಯಲ್ಲ. ಶ್ರೇಣೀಕೃತ ವ್ಯವಸ್ಥೆಯನ್ನು ಸರಳಗೊಳಿಸುವ ಜಂಗಮ ನೀತಿಯು ಮುಂದೊಂದು ದಿನ ಜಾತಿ ವ್ಯವಸ್ಥೆಗೆ ಕಾರಣವಾಯಿತು ಎಂದೆನಿಸಿದೆ. ಜಾತಿ ಜಂಗಮವು ಲಿಂಗಾಯತರೊಳಗೆ ಬ್ರಾಹ್ಮಣೀಕರಣವಾಗಿ ಬದಲಾಯಿತು. ಮೇಲು ಕೀಳು ಸೃಷ್ಟಿಸಿದ, ಉಚ್ಚ ನೀಚ ಪದ್ಧತಿಯನ್ನು ಮರು ಸೃಷ್ಟಿಸಿದ ಉಪಕರಣವಾಯಿತು.
ಇನ್ನು ಅಷ್ಟಾವರಣವು ಬಸವ ಪೂರ್ವದಲ್ಲಿದ್ದವು ಎಂದು ಕೆಲ ಶೈವವಾದಿಗಳು ಚರ್ಚಿಸುತ್ತಾರೆ. ಗುರು ಲಿಂಗ ಜಂಗಮ ವಿಭೂತಿ ಮಂತ್ರ ರುದ್ರಾಕ್ಷಿ ಪಾದೋದಕ ಪ್ರಸಾದ -ಇವುಗಳಿಗೆ ವೈಜ್ಞಾನಿಕ ಕಾರಣ ಕೊಟ್ಟು ಪಂಚ ಮಹಾಭೂತಗಳಿಂದ ಪಂಚೇಂದ್ರಿಯ ಅನುಭವಕ್ಕೆ ಬಂದು ಪ್ರಸನ್ನತೆ ಮಾಡುವ ಕಾಯ ಗುಣವಾಗಿವೆ ಎಂದು ಶರಣರು ನಿರೂಪಿಸಿದರು. ಅದನ್ನೇ ಚಾಮರಸ ಹೀಗೆ ಹೇಳಿದ್ದಾನೆ:
ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ (ಪ್ರಭುಲಿಂಗ ಲೀಲೆ)

ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವನ್ನು ವಿಸ್ತಾರಗೊಳಿಸಿ ���ಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ. ಸನಾತನದಲ್ಲಿ ಗುರು ಸರ್ವ ಶ್ರೇಷ್ಠ, ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳನ್ನು ಬಸವಣ್ಣನವರು ಕಿತ್ತೊಗೆದು, ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ತೊಡೆದು ಹಾಕುತ್ತಾನೆ.ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು. ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು, ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರಗೊಳಿಸಿ, ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ.
ಸದಾಚಾರ ,ಶಿವಾಚಾರ ,ಲಿಂಗಾಚಾರ, ಗಣಾಚಾರ, ಭೃತ್ಯಾಚಾರ -ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಕ್ತರಿಗೆ ನೀತಿ ಸಂಹಿತೆಯನ್ನು ಬಸವಣ್ಣ ಮತ್ತು ಇತರ ಶರಣರು ರೂಪಿಸಿದರು. ಇವುಗಳ ವಿಸ್ತೃತ ಚರ್ಚೆಗೆ ಹೋಗದೆ ಭಕ್ತನಾದವನು ಈ ಎಲ್ಲಾ ಅಂಶಗಳನ್ನು ಪಾಲಿಸಿ ತಾನು ಅನನ್ಯತೆಯನ್ನು ಕಾಪಾಡಿಕೊಂಡು ತನ್ನಲ್ಲಿಯೇ ದೈವತ್ವವನ್ನು ಅಥವಾ ತಾನೇ ಲಿಂಗ ಸ್ವರೂಪಿಯಾಗಬೇಕೆನ್ನುವುದು ಶರಣರ ಪರಿಕಲ್ಪನೆ.
ಕಲ್ಯಾಣ ನಾಡಿನ ಅದರಲ್ಲೂ ಬಸವಣ್ಣನವರು ಜಗತ್ತಿಗೆ ನೀಡಿದ ವಿಶೇಷ ಕೊಡುಗೆ ಎಂದರೆ ಷಟಸ್ಥಲಗಳು. ಭಕ್ತ -ಮಹೇಶ -ಪ್ರಸಾದಿ-ಪ್ರಾಣಲಿಂಗಿ -ಶರಣ- ಐಕ್ಯಸ್ಥಲ. ಒಬ್ಬ ಪರಿಪೂರ್ಣ ಭಕ್ತನ ಅಂತರಂಗದ ವಿಕಾಸ ಸ್ಥಿತಿ, ಆಧ್ಯಾತ್ಮಿಕ ಬದುಕಿನ ಉನ್ನತ ಸ್ಥಾನಕ್ಕೊಯ್ಯುವ ಮತ್ತು ಶರಣ ಸತ್ಯ ಪಥದಲ್ಲಿ ಭಕ್ತನ ಶಕ್ತಿಯನ್ನು ಕೇಂದ್ರೀಕರಿಸುವ ಅದರಲ್ಲಿಯೇ ತನ್ನನ್ನು ಕಾಣುವ ಸುಂದರ ಉದಾತ್ತ ಭಾವಗಳ ಅನುಭವವೇ ಷಟಸ್ಥಲ.
ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿ ಜಗತ್ತಿನ ಸರ್ವಶ್ರೇಷ್ಠ ದಾರ್ಶನಿಕರ ಸಾಲಿನಲ್ಲಿ ನಿಂತ ಅಪ್ರತಿಮ ಹೋರಾಟಗಾರ, ಕ್ರಾಂತಿ ಪುರುಷ ಸಮತೆಯ ಶಿಲ್ಪಿ ಜಗತ್ತಿನ ಮೊದಲ ಸಂಸತ್ತನ್ನು ಸ್ಥಾಪಿಸದ ಮೇಧಾವಿ ಬಸವಣ್ಣ ಆಶಿಸಿದ್ದು ವ್ಯಕ್ತಿ ಸ್ವಾವಲಂಬನೆ. ತನ್ನ ದುಡಿಮೆಯ ಮೇಲೆ ತಾನು ಬದುಕಿ ಇನ್ನುಳಿದವರನ್ನೂ ಬದುಕನ್ನು ಹಸನಾಗಿಸಬೇಕೆಂದು.
ಶರಣರ ವಚನ ಚಳುವಳಿ ಸಾರ್ವತ್ರಿಕ ಮತ್ತು ಸರ್ವಕಾಲಿಕ.

Previous post ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
Next post ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ

Related Posts

ಬೆಳಗಾವಿ ಅಧೀವೇಶನ: 1924
Share:
Articles

ಬೆಳಗಾವಿ ಅಧೀವೇಶನ: 1924

December 13, 2024 ಮಹೇಶ ನೀಲಕಂಠ ಚನ್ನಂಗಿ
“ಹನ್ನೆರಡನೆಯ ಶತಮಾನದಲ್ಲಿ ಆಗಿಹೋದ ಬಸವಣ್ಣನವರು ಈ ಕಾಲದಲ್ಲಿ ಇರುತ್ತಿದ್ದರೆ ಜಗತ್ತಿಗೇ ಪೂಜ್ಯವ್ಯಕ್ತಿಯಾಗಿ ಪರಿಣಮಿಸುತ್ತಿದ್ದರು. ಅವರು ಉಪದೇಶಿಸಿದ ತತ್ವಗಳಲ್ಲಿ...
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
Share:
Articles

ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು

June 14, 2024 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ವಚನದ ಅಂತ್ಯದಲ್ಲಿ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ...

Comments 2

  1. padmalaya nagraj
    Mar 12, 2019 Reply

    good article

  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಗ
    Mar 13, 2021 Reply

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು  ಬಿಂಬ
ನಾನು ಬಿಂಬ
September 13, 2025
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ಭೃತ್ಯಾಚಾರ
ಭೃತ್ಯಾಚಾರ
June 5, 2021
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…
October 19, 2025
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
Copyright © 2025 Bayalu