Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗಾಯತ ಧರ್ಮ ಸಂಸ್ಥಾಪಕರು
Share:
Articles April 6, 2024 ಡಾ. ಎನ್.ಜಿ ಮಹಾದೇವಪ್ಪ

ಲಿಂಗಾಯತ ಧರ್ಮ ಸಂಸ್ಥಾಪಕರು

[ಸೂಚನೆ: ಕಂಸಗಳಲ್ಲಿರುವ ಸಂಖ್ಯೆಗಳಲ್ಲಿ ಮೊದಲನೆಯದು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದ ಸಂಖ್ಯೆಗೂ, ಎರಡನೆಯ ಸಂಖ್ಯೆ ಆ ಸಂಪುಟದ ವಚನ ಕ್ರಮಾಂಕಕ್ಕೂ ಅನ್ವಯಿಸುತ್ತದೆ]

ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲದಿದ್ದರೆ ಅದನ್ನು ಯಾರು ಮತ್ತು ಯಾವಾಗ ಸ್ಥಾಪಿಸಿದರು ಎಂಬ ಪ್ರಶ್ನೆ ಅನಿವಾರ್ಯವಾಗುತ್ತದೆ. 17ನೆಯ ಶತಮಾನಕ್ಕಿಂತ ಮೊದಲು ಲಿಂಗಾಯತ ಧರ್ಮದ ಸಂಸ್ಥಾಪಕರು ಯಾರೆಂಬುದರ ಬಗ್ಗೆ ಯಾರಿಗೂ ಸಂದೇಹವಿರಲಿಲ್ಲ. ವಿರಕ್ತ ಪೀಠದ ಸ್ವಾಮಿಗಳೂ ಗುರುಪೀಠದ ಸ್ವಾಮಿಗಳೂ ಅವರವರ ಅನುಯಾಯಿಗಳೂ 12ನೇ ಶತಮಾನದಲ್ಲಿ ಬಸವಣ್ಣನವರೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆಂಬುದನ್ನು ಒಪ್ಪಿಕೊಂಡಿದ್ದರು. ಈ ಪರಂಪರೆಯವರಿಬ್ಬರೂ ಬರೆದ ಗ್ರಂಥಗಳು ‘ಶ್ರೀ ಗುರುಬಸವ ಲಿಂಗಾಯ ನಮಃ’ ಎಂದೇ ಪ್ರಾರಂಭವಾಗುತ್ತಿದ್ದವು ಎಂಬುದು ಬಸವಣ್ಣನವರೇ ಧರ್ಮಸಂಸ್ಥಾಪಕರು ಎಂಬುದನ್ನು ಅವರು ಒಪ್ಪಿಕೊಂಡಿದ್ದರೆಂಬುದಕ್ಕೆ ಸಾಕ್ಷಿ. ಅನೇಕ ಬಸವೋತ್ತರ ಕಾವ್ಯಗಳು ಬಸವಣ್ಣನವರಿಗೆ ಕಡಿಮೆ ಗೌರವ ಕೊಡಲು ಪ್ರಯತ್ನ ಮಾಡಿದರೂ ಅವರೇ ಸಂಸ್ಥಾಪಕರು ಎಂಬುದನ್ನು ಅಲ್ಲಗಳೆಯಲು ಯಾರೂ ಪ್ರಯತ್ನಿಸಲಿಲ್ಲ. ಆದುದರಿಂದ ಬಸವಣ್ಣನವರು ಲಿಂಗಾಯತ ಧರ್ಮದ ಅಥವಾ ವೀರಶೈವದ ಧರ್ಮದ ಸಂಸ್ಥಾಪಕರೆ? ಎಂಬ ಸಂದೇಹ ಮೂಡಿದುದು ಆಧುನಿಕ ವಿದ್ವಾಂಸರ ಮನಸ್ಸಿನಲ್ಲಿ (ಸದ್ಯಕ್ಕೆ ವೀರಶೈವ ಮತ್ತು ಲಿಂಗಾಯತಗಳಿಗಿರುವ ವ್ಯತ್ಯಾಸವನ್ನು ಕಡೆಗಣಿಸೋಣ). ಇವರಲ್ಲಿ ಕೆಲವರು ಲಿಂಗಾಯತ ಅಥವಾ ವೀರಶೈವ ಧರ್ಮದ ಸಿದ್ಧಾಂತಗಳು ಆಗಲೇ ವೇದ, ಆಗಮ, ಪುರಾಣ ಮತ್ತು ಸಿದ್ಧಾಂತಶಿಖಾಮಣಿ ಮುಂತಾದ ಬಸವಪೂರ್ವ ಯುಗದ ಕೃತಿಗಳಲ್ಲಿಯೇ ಇದ್ದವು ಎಂಬುದನ್ನು ಸಿದ್ಧಪಡಿಸಲು ಪ್ರಯತ್ನಿಸಿದ್ದಾರೆ. ಆದರೆ 1891ರಲ್ಲಿ ಶ್ರೀಕರ ಭಾಷ್ಯದಂತಹ ಕೃತ್ರಿಮ ಗ್ರಂಥಗಳು ಮತ್ತು 1902ರಿಂದೀಚೆಗೆ ಭ್ರಷ್ಟ ಆಗಮಗಳೂ ಪ್ರಕಟವಾಗತೊಡಗಿದಾಗ ಅವುಗಳ ಹಿಂದಿರುವ ಉದ್ದೇಶಗಳ ಅರಿವಾಗಿ ಅನೇಕ ವಿದ್ವಾಂಸರು ಸಮಸ್ಯೆ ಗಂಭೀರವಾಗುತ್ತಿದೆಯೆಂದು ಪರಿಗಣಿಸಿ ಅಂತಹ ಪ್ರಕಟಣೆಗಳನ್ನು ವಿರೋಧಿಸತೊಡಗಿದರು. ಇದರಿಂದಾಗಿ ವಿದ್ವಾಂಸರಲ್ಲಿ ಈಗ ಎರಡು ಬಣಗಳು ಉಂಟಾಗಿವೆ- ಬಸವಣ್ಣನವರೇ ಲಿಂಗಾಯತ ಧರ್ಮದ ಸಂಸ್ಥಾಪಕರು ಎನ್ನುವವರದು ಒಂದು ಬಣ; ಅದನ್ನು ವಿರೋಧಿಸುವವರ ಬಣ ಮತ್ತೊಂದು.

ಈ ಎರಡು ಬಣಗಳ ವಿದ್ವಾಂಸರು ತಮ್ಮ ತಮ್ಮ ನಿಲವುಗಳನ್ನು ಸಮರ್ಥಿಸಿಕೊಳ್ಳಲು ಅನೇಕ ವಾದ ಪ್ರತಿವಾದಗಳನ್ನು ಮಂಡಿಸಿದ್ದಾರೆ. ಹೀಗಾಗಿ ಈ ಸಮಸ್ಯೆ ತೀವ್ರವಾಗಿದೆ, ಜಟಿಲವಾಗಿದೆ ಮತ್ತು ಅಂತಿಮ ತೀರ್ಮಾನರಹಿತವಾಗಿದೆ. ಈ ಕಗ್ಗಂಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ವಿಶ್ಲೇಷಣಾತ್ಮಕ ಬುದ್ಧಿ ಇಲ್ಲದವರು, ಪುರಾಣಗಳನ್ನೇ ಇತಿಹಾಸವೆಂದು ಭ್ರಮಿಸಿರುವವರು ಈ ವಾದವಿವಾದದಲ್ಲಿ ಪಾಲ್ಗೊಂಡಿದ್ದಾರೆ. ಅನೇಕ ವೇಳೆ ಅವರ ವಾದಗಳಲ್ಲಿ ವೈಚಾರಿಕತೆ ಕಡಿಮೆ, ಭಾವನಾತ್ಮಕತೆ ಹೆಚ್ಚು. ಕೆಲವರಿಗೆ ಸತ್ಯ ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳಲು ಸಂಕೋಚ. ಸಂಸ್ಥಾಪನೆ ಎಂಬುದರ ಬಗ್ಗೆ ತಪ್ಪು ಗ್ರಹಿಕೆ ಉಳ್ಳವರೂ ಕೆಲವರು ಈ ವಾದ ವಿವಾದದಲ್ಲಿ ಪಾಲ್ಗೊಂಡಿದ್ದಾರೆ. ಮತ್ತೆ ಕೆಲವರು ತಮ್ಮ ಪಾಂಡಿತ್ಯ ಮತ್ತು ಚಾತುರ್ಯದಿಂದ ಯಾವುದೋ ಶ್ಲೋಕಕ್ಕೆ ಯಾವುದೋ ಒಂದು ಪದವನ್ನು ಸೇರಿಸುವ ಮೂಲಕ ಅಥವಾ ಕೈ ಬಿಡುವ ಮೂಲಕ ಅಥವಾ ವಿಚಿತ್ರ ಅರ್ಥ ಕೊಡುವ ಮೂಲಕ ತಮ್ಮ ವಾದಗಳನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಾರೆ.

ಈ ಸಮಸ್ಯೆಯನ್ನು ಬಿಡಿಸುವುದು ತುಸು ಕಷ್ಟ, ಆದರೆ, ಅಸಾಧ್ಯವಲ್ಲ. ಆದರೆ ಈಗಿನ ವಾದ ವಿವಾದಗಳಿಗೇ ಅಂಟಿಕೊಂಡರೆ ಕಣ್ಣುಕಟ್ಟಿಕೊಂಡು ಕಾಡಿನಲ್ಲಿ ದಾರಿ ಹುಡುಕಾಡಿದಂತಾಗುತ್ತದೆ. ಸಮಸ್ಯೆಯ ಪರಿಹಾರಕ್ಕೆ ಅಡ್ಡಿ ಮಾಡುವ ಅಂಶಗಳನ್ನು ಮೊದಲು ಚರ್ಚಿಸೋಣ. ಈ ಸಲುವಾಗಿ 1. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರಲ್ಲ ಎಂಬ ವಾದಗಳು. 2. ಬಸವಣ್ಣನವರೇ ಲಿಂಗಾಯತಧರ್ಮ ಸಂಸ್ಥಾಪಕರು ಎಂಬ ವಾದಗಳು ಎಂಬ ಎರಡು ಗುಂಪುಗಳಾಗಿ ವಿಭಜಿಸಿ ಅವುಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ, ಅವುಗಳ ಗುಣದೋಷಗಳನ್ನು ಪರಿಶೀಲಿಸೋಣ.

1. ಬಸವಣ್ಣನವರು ಲಿಂಗಾಯತ ಧರ್ಮ ಸಂಸ್ಥಾಪಕರಲ್ಲ ಎಂಬ ವಾದಗಳು

1.1. ಅಖಿಲ ಭಾರತ ವೀರಶೈವ ಮಹಾಸಭಾ (ಇದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ) ತನ್ನ ಧಾರವಾಡದ 1904ರ ಅಧಿವೇಶನದಲ್ಲಿ ಈ ನಿರ್ಣಯವನ್ನು ಕೈಗೊಂಡಿತು: ವೀರಶೈವ ಮತವು ನಿಗಮಾಗಮೋಪನಿಷದ್ ಭಾಷ್ಯ ಪ್ರತಿಪಾದಿತ ತತ್ವದಿಂದ ಸಂಸಿದ್ಧವೆಂತಲೂ ಶ್ರೀ ಬಸವೇಶ್ವರರು ಈ ಮತವನ್ನು ಪ್ರಚುರಪಡಿಸಿದರೆ ಹೊರ್ತು, ಸ್ಥಾಪಕರಲ್ಲವೆಂಬುದು ಶಿಲಾಲೇಖಾದಿ ಪ್ರಮಾಣಗಳಿಂದ ಸಿದ್ಧವಾಗುತ್ತದೆಂತಲೂ ಈ ಮಹಾಸಭೆಯವರು ಖಂಡಿತವಾಗಿ ಹೇಳುತ್ತಾರೆ [ಜಗದ್ಗುರು ಅನ್ನದಾನಿ ಮಹಾಸ್ವಾಮಿಗಳು, ಮುಂಡರಗಿ: ಷಟ್‍ಸ್ಥಲ- ಒಂದು ಅಧ್ಯಯನ (ಶ್ರೀ ಬಸವೇಶ್ವರ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-2003), ಪು. 2-3]
ಡಾ. ಎಂ.ಚಿದಾನಂದಮೂರ್ತಿಯವರಂತಹ ಅನೇಕ ವಿದ್ವಾಂಸರು ಈ ನಿರ್ಣಯ ಬಸವಪೂರ್ವದಲ್ಲಿ ವೀರಶೈವ ಧರ್ಮ ಇತ್ತು ಎಂಬುದಕ್ಕೆ ನಿಸ್ಸಂದೇಹವಾದ ಸಾಕ್ಷಿ ಎಂದು ತಿಳಿದುಕೊಂಡಿದ್ದಾರೆ [ವೀರಶೈವ ಧರ್ಮ- ಭಾರತೀಯ ಸಂಸ್ಕೃತಿ (ಮಿಂಚು ಪ್ರಕಾಶನ, ಬೆಂಗಳೂರು, 2000) ಪು.401]. ಆದರೆ ಈ ವಾದದಲ್ಲಿ ಅನೇಕ ದೋಷಗಳಿವೆ.
1. ಇಂಥ ಗೊತ್ತುವಳಿಗಳು ಚಾರಿತ್ರಿಕ ಸಾಕ್ಷ್ಯಗಳನ್ನು ಅವಲಂಬಿಸದೆ ಆ ಅಧಿವೇಶನದಲ್ಲಿ ಭಾಗವಹಿಸಿದವರ ಸಂಖ್ಯಾಬಲವನ್ನು ಅವಲಂಬಿಸುತ್ತದೆ. ಇದೇ ಗೊತ್ತುವಳಿಯನ್ನು 1000 ಜನ ಸ್ವೀಕರಿಸಬಹುದು, 1001 ಜನ ತಿರಸ್ಕರಿಸಬಹುದು. ವಾಸ್ತವವಾಗಿ ದಾವಣಗೆರೆಯಲ್ಲಿ 1940ರಲ್ಲಿ ನಡೆದ ಮಹಾಸಭಾದ ಅಧಿವೇಶನದಲ್ಲಿ ಅದನ್ನು ಸಂಖ್ಯಾಬಲದಿಂದಲೇ ತಿರಸ್ಕರಿಸಲಾಯಿತು.
2. ಈ ಗೊತ್ತುವಳಿಯನ್ನು ಸ್ವೀಕರಿಸಿದವರು ಪ್ರಾಮಾಣಿಕ ವಿದ್ವಾಂಸರಾಗಿರದೆ ಜಾತಿವಾದಿಗಳಾಗಿರಬಹುದು ಅಥವಾ ಮೂರ್ಖರಾಗಿರಬಹುದು.
3. ಅಲ್ಲಿ ಪ್ರಸ್ತಾಪಿಸಲಾದ ಶಿಲಾಲೇಖಗಳು ಇನ್ನೂ ಪ್ರಕಟವಾಗಿಲ್ಲ (ಅಂದರೆ, ಅದೊಂದು ಸುಳ್ಳು ಘೋಷಣೆ).
4. ವೀರಶೈವ ಧರ್ಮದ ಸಿದ್ಧಾಂತಗಳು ವೇದ, ಉಪನಿಷತ್ತು, ಆಗಮಗಳಲ್ಲಿವೆ ಎಂಬುದು ಅಸತ್ಯ.
5. ವಚನಗಳೇ ಲಿಂಗಾಯತ ಧರ್ಮದ ಮೂಲ ಆಕರಗಳೆಂಬುದು ನಿರ್ವಿವಾದ. ಈ ಗೊತ್ತುವಳಿಯನ್ನು ಸ್ವೀಕರಿಸಿದಾಗ ಇನ್ನೂ ಎಲ್ಲಾ ವಚನಗಳು ಬೆಳಕಿಗೆ ಬಂದಿರಲಿಲ್ಲ.

1.2. ಪಂಚಾಚಾರ್ಯ ವಾದ: ಕೈಲಾಸದಲ್ಲಿದ್ದ ಶಿವನ ಐದು ಮುಖಗಳಿಂದ ಹುಟ್ಟಿದ ಐದು ಜನ ಪಂಚ ಆಚಾರ್ಯರು ನಾಲ್ಕು ಯುಗಗಳಲ್ಲಿ ಭೂಮಿಗೆ ಅವತರಿಸಿ ಐದು ಕಲ್ಲಿನ ಲಿಂಗಗಳಲ್ಲಿ ಉದ್ಭವವಾಗಿ (ಅಂದರೆ ಒಟ್ಟು 20 ಜನ ಆಚಾರ್ಯರು) ವೀರಶೈವ ಧರ್ಮವನ್ನು ಸ್ಥಾಪಿಸಿದರು ಎಂಬುದು ಪಂಚಾಚಾರ್ಯ ವಾದ. ಯಾವ ಯುಗದಲ್ಲಿ ಯಾವ ಯಾವ ಆಚಾರ್ಯರು ಹುಟ್ಟಿದರು ಎಂಬುದರ ವಿವರ ಈ ಕೆಳಗಿನಂತಿವೆ:
ಕೃತಯುಗದಲ್ಲಿ: ಏಕಾಕ್ಷರ, ದ್ವಯಕ್ಷರ, ತ್ರಯಕ್ಷರ, ಚತುರಕ್ಷರ, ಪಂಚಾಕ್ಷರ;
ತ್ರೇತಾಯುಗದಲ್ಲಿ: ಏಕವಕ್ತ್ರ, ದ್ವಿವಕ್ತ್ರ, ತ್ರಿವಕ್ತ್ರ, ಚತುರಾನನ, ಪಂಚವಕ್ತ್ರ;
ದ್ವಾಪರಯುಗದಲ್ಲಿ: ದಾರುಕ, ರೇಣುಕ, ಧೇನುಕರ್ಣ, ಘಂಟಾಕರ್ಣ, ವಿಶ್ವಕರ್ಣ;
ಕಲಿಯುಗದಲ್ಲಿ: ಮರುಳಸಿದ್ಧ, ರೇವಣಸಿದ್ಧ, ಏಕೋರಾಮ, ಪಂಡಿತಾರಾಧ್ಯ, ವಿಶ್ವರಾಧ್ಯ
[ಎಸ್.ಎಸ್.ಬಸವನಾಳ: ವೀರಶೈವದ ಹುಟ್ಟು ಬೆಳವಣಿಗೆ (ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಧಾರವಾಡ, 1993), ಪು. 10]

ಕಲಿಯುಗದ ಪಂಚಾಚಾರ್ಯರ ಹೆಸರುಗಳು ಪರಿಚಿತ ಹೆಸರುಗಳಂತಿರುವುದರಿಂದ ಅವನ್ನು ನಾವು ನಂಬಬಹುದಾಗಿದೆ. ಆದರೆ ಉಳಿದ ಮೂರು ಯುಗಗಳಲ್ಲಿ ಉದ್ಭವಿಸಿದ ಪಂಚಾಚಾರ್ಯರ ಹೆಸರುಗಳು ಸಂಪೂರ್ಣವಾಗಿ ಕಾಲ್ಪನಿಕವಾಗಿವೆ ಮತ್ತು ನಂಬಲನರ್ಹವಾಗಿವೆ (ಉದಾಹರಣೆಗೆ: ಏಕಾಕ್ಷರ, ದ್ವಯಕ್ಷರ, ಇತ್ಯಾದಿ; ಏಕವಕ್ತ್ರ, ದ್ವಿವಕ್ತ್ರ, ಇತ್ಯಾದಿ; ಧೇನುಕರ್ಣ, ಘಂಟಾಕರ್ಣ, ಇತ್ಯಾದಿ). ಈ ಹೆಸರುಗಳನ್ನು ಊಹಿಸಿಕೊಂಡವನ ಬುದ್ಧಿಗೆ ನೈಜ ಮಾನುಷ ಹೆಸರುಗಳು ಹೊಳೆಯಲಿಲ್ಲವೆನಿಸುತ್ತದೆ. ಪಂಚಾಚಾರ್ಯರು ವೀರಶೈವ ಧರ್ಮ ಸ್ಥಾಪಿಸಿದರು ಎಂದು ಹೇಳಲು ವಿದ್ವಾಂಸರು ಹದಿನೈದನೆಯ ಅಥವಾ ಅನಂತರದ ಶತಮಾನದಲ್ಲಿ ರಚಿತವಾದ ಸಿದ್ಧಾಂತ ಶಿಖಾಮಣಿಯನ್ನು ಹೆಸರಿಸುತ್ತಾರೆ. ಈ ಗ್ರಂಥದಲ್ಲಿ ದ್ವಾಪರಯುಗದಲ್ಲಿ ಹುಟ್ಟಿದ ರೇಣುಕರು ರಾಮಾಯಣ ಕಾಲದಲ್ಲಿ, ಅಂದರೆ, ಹಿಂದಿನ ತ್ರೇತಾಯುಗದಲ್ಲಿ ಹುಟ್ಟಿದ ಅಗಸ್ತ್ಯನಿಗೆ ವೀರಶೈವ ಧರ್ಮವನ್ನು ಬೋಧಿಸಲು ಅವತರಿಸಿದರೆಂದು ಹೇಳಲಾಗಿದೆ. ಆದರೆ ವೀರಶೈವ ಧರ್ಮ ರಾಮಾಯಣ ಕಾಲದಲ್ಲಿ ಪ್ರಚಲಿತವಿತ್ತೆಂದು ಸಾಧಿಸಲು ಮಾಡಿರುವ ಈ ಗ್ರಂಥದ ಪ್ರಯತ್ನಗಳು ದೋಷಪೂರಿತವಾಗಿವೆ. ಅವುಗಳಲ್ಲಿ ಮುಖ್ಯವಾದ ಕೆಲವು-
1. ರೇಣುಕರು ಮಾನವ ತಂದೆ ತಾಯಿಗಳಿಂದ ಹುಟ್ಟದೆ ಕೊಲ್ಲಿಪಾಕಿಯ ಕಲ್ಲಿನ ಲಿಂಗದಿಂದ ಉದ್ಭವಿಸುತ್ತಾರೆ.
2. ದ್ವಾಪರ ಯುಗದಲ್ಲಿ ಹುಟ್ಟಿದ ಅವರು ಅನೇಕ ಸಾವಿರ ವರ್ಷಗಳ ಹಿಂದಿನ ತ್ರೇತಾಯುಗದಲ್ಲಿ ಹುಟ್ಟಿದ್ದ ಅಗಸ್ತ್ಯನಿಗೆ ವೀರಶೈವ ಧರ್ಮ ಬೋಧಿಸುತ್ತಾರೆ.
3. ಕೈಲಾಸದಿಂದ ಭೂಮಿಗೆ ಅವತರಿಸಿದ ರೇಣುಕರಿಗೆ ಬೌದ್ಧ ಮತ್ತು ಸಾಂಖ್ಯ ಮತಗಳನ್ನು ಖಂಡಿಸುವ ಉದ್ದೇಶವಿದೆ. ಆದರೆ ಬೌದ್ಧ ಮತ್ತು ಸಾಂಖ್ಯ ಮತಗಳು ಕಲಿಯುಗದಲ್ಲಿ ಹುಟ್ಟಿದವು, ದ್ವಾಪರಯುಗದಲ್ಲಿ ಆಗ ಅಸ್ತಿತ್ವದಲ್ಲಿರಲಿಲ್ಲ. ಒಂದು ವೇಳೆ ರೇಣುಕರು ರಾಮಾಯಣ ಕಾಲದ ವಿಭೀಷಣನ ಆಮಂತ್ರಣದ ಮೇರೆಗೆ ಶ್ರೀಲಂಕೆಗೆ ಹೋದರೆಂಬುದನ್ನು ನಾವು ನಂಬುವುದಾದರೆ ರೇಣುಕರು ಏಕ ಕಾಲದಲ್ಲಿ ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಕ್ಕೆ ಸೇರಿದವರಾಗುತ್ತಾರೆ ಎಂದೂ ನಂಬಬೇಕಾಗುತ್ತದೆ. ಹಾಗೆ ನಂಬುವುದೂ ಒಂದೇ ಅವರು ಅನೇಕ ಸಾವಿರ ವರ್ಷಗಳ ಕಾಲ ಬದುಕಿದ್ದರು ಎಂದು ನಂಬುವುದೂ ಒಂದೇ. (ಅದರಲ್ಲೆ, ಅಧ್ಯಾಯ 21).
4. ಒಂದು ವೇಳೆ ನಾವು ರೇಣುಕರು ಸಾವಿರ ವರ್ಷಗಳ ಕಾಲ ಬದುಕಿದ್ದಿರಬಹುದು ಎಂದು ನಂಬಲು ಸಾಧ್ಯವಾದರೂ ದ್ವಾಪರ ಯುಗದಲ್ಲಿ ಹುಟ್ಟಿದ ವ್ಯಕ್ತಿಗೆ ರಾಮಾಯಣ ಕಾಲಕ್ಕೆ ಹೋಗಲು ಹೇಗೆ ಸಾಧ್ಯ, ಕಲಿಯುಗದಲ್ಲಿ ಹುಟ್ಟಿದ ಸಾಂಖ್ಯ, ಬೌದ್ಧಮತಗಳನ್ನು ಖಂಡಿಸಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಹಾಗೆ ಉಳಿದುಕೊಳ್ಳುತ್ತವೆ. ಲಂಗುಲಗಾಮಿಲ್ಲದೆ ಕಲ್ಪನೆ ಮಾಡಿಕೊಳ್ಳುವ ಸಿದ್ಧಾಂತ ಶಿಖಾಮಣಿಯ [ಭೂಸನೂರುಮಠ, ಎಸ್.ಎಸ್. ಮತ್ತು ಘಿವಾರಿ, ಎಸ್.ಜಿ. (ಸಂ): ವೀರಶೈವ ಸಿದ್ಧಾಂತಶಿಖಾಮಣಿ (ಶ್ರೀಮದ್‍ಶಿವಯೋಗಮಂದಿರ, 1992)] ಕರ್ತೃವಿನ ಈ ವಾದವನ್ನು ಒಪ್ಪುವವರು ಈ ಕಾಲದಲ್ಲಿಯೂ ಇದ್ದಾರೆ ಎಂಬುದು ವಿಷಾದಕರ.
ರೇಣುಕರು ಹೆಚ್ಚೆಂದರೆ ವೀರಶೈವ ಧರ್ಮದ ಬೋಧಕರಾಗಬಹುದೇ ಹೊರತು ಸಂಸ್ಥಾಪಕರಾಗಿರಲು ಸಾಧ್ಯವಿಲ್ಲ ಎಂಬುದಕ್ಕೆ ಸಿದ್ಧಾಂತ ಶಿಖಾಮಣಿಯ ಕೆಲವು ಶ್ಲೋಕಗಳೆ ಸಾಕ್ಷಿಯಾಗಿವೆ.
5. ರೇಣುಕರು (ಸಿ.ಶಿ.4/14) ವೀರಶೈವ ಧರ್ಮವು ಕಾಮಿಕಾದಿ ಆಗಮಗಳ ಉತ್ತರ ಭಾಗಗಳಲ್ಲಿವೆ ಎನ್ನುತ್ತಾರೆ; ಮತ್ತೊಮ್ಮೆ (ಸಿ.ಶಿ. 1/28, 29) ಶಿವನು ಹಿಂದೆಯೇ ಬೋಧಿಸಿದ್ದ ವೀರಶೈವ ಧರ್ಮದ ಸಿದ್ಧಾಂತಗಳು ಆಗಮ ಪುರಾಣ ಇತ್ಯಾದಿಗಳಲ್ಲಿವೆ ಎನ್ನುತ್ತಾರೆ. ಅಂದರೆ, ಅವರು ವೀರಶೈವ ಧರ್ಮವನ್ನು ಬೋಧಿಸಿದರೇ ಹೊರತು ಸ್ಥಾಪಿಸಲಿಲ್ಲವೆಂಬುದು ಖಚಿತವಾಗುತ್ತದೆ.

ಯೇಸು, ಮೊಹಮ್ಮದ್, ಬುದ್ಧ, ಬಸವಣ್ಣ, ಮುಂತಾದವರೆಲ್ಲ ಐತಿಹಾಸಿಕ ವ್ಯಕ್ತಿಗಳು. ಅವರು ತಮ್ಮ ಧರ್ಮವನ್ನು ತಮ್ಮ ನಾಡಿನಲ್ಲಿ ಮತ್ತು ತಮ್ಮ ತಾಯ್ನುಡಿಯಲ್ಲಿ ಬೋಧಿಸಿದರು. ಆದರೆ ರೇಣುಕರು ಕಲ್ಲಿನ ಲಿಂಗದಲ್ಲಿ ಉದ್ಭವಿಸುವ ಪೌರಾಣಿಕ ವ್ಯಕ್ತಿ. ತೆಲುಗರ ನಾಡಾದ ಆಂಧ್ರದಲ್ಲಿ ಹುಟ್ಟಿದ ಅವರು ತಮ್ಮ ಧರ್ಮವನ್ನು ತಮ್ಮ ಜನರಿಗೆ ತೆಲುಗಿನಲ್ಲಿ ಬೋಧಿಸದೆ ಕರ್ನಾಟಕದ ಅಗಸ್ತ್ಯನಿಗೆ – ತೆಲುಗಿನಲ್ಲಿ ಅಲ್ಲ, ಕನ್ನಡದಲ್ಲಿ ಅಲ್ಲ, ಸಂಸ್ಕೃತದಲ್ಲಿ – ಬೋಧಿಸುತ್ತಾರೆ. ಈ ಅಗಸ್ತ್ಯ ರೇಣುಕರು ಬೋಧಿಸುವ ಮೊದಲೇ ಶಿವಾದ್ವೈತದಲ್ಲಿ ಅಂದರೆ ವೀರಶೈವ ಧರ್ಮದ ದರ್ಶನದಲ್ಲಿ ಪರಿಣಿತನಾಗಿದ್ದ. ಚರಿತ್ರೆಗೂ ಪುರಾಣಕ್ಕೂ ಭೇದ ಮಾಡದವರಿಗೆ ರೇಣುಕ ವೃತ್ತಾಂತ ಬಹಳ ಪ್ರಿಯವಾಗುತ್ತದೆ.

ಡಾ.ಚಿದಾನಂದ ಮೂರ್ತಿಯವರು ಪಂಚಾಚಾರ್ಯ ವಾದವನ್ನು ಸ್ಪಷ್ಟವಾಗಿ, ಯಾರೂ ಆಕ್ಷೇಪಿಸದಂತೆ, ತಮ್ಮ ಎರಡು ಲೇಖನಗಳಲ್ಲಿ ತಿರಸ್ಕರಿಸಿದ್ದಾರೆ [ವಚನ ಶೋಧ-2 (ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, 1998) ಪು. 23-62]. ಅವರ ವಾದಗಳ ಕೆಲವು ಮುಖ್ಯ ಅಂಶಗಳು ಹೀಗಿವೆ:
1. ರೇಣುಕರು ಪೌರಾಣಿಕ ವ್ಯಕ್ತಿಯೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ. ಅವರು ಐತಿಹಾಸಿಕ ವ್ಯಕ್ತಿ ಎಂದು ಸಿದ್ಧಪಡಿಸ ಬೇಕೆನ್ನುವವರು ಶಿವಪಾರ್ವತಿಯರ ಐತಿಹಾಸಿಕತೆಯನ್ನೂ ಅವರು ಕೈಲಾಸದಿಂದ ಭೂಮಿಗೆ ಇಳಿದು ಬಂದುದರ ಐತಿಹಾಸಿಕತೆಯನ್ನೂ ಸಿದ್ಧಪಡಿಸಬೇಕಾಗುತ್ತದೆ.
2. ರೇಣುಕರ ಅವತಾರವೆಂದು ನಂಬಲಾಗಿರುವ ರೇವಣ ಅಥವಾ ರೇವಣಸಿದ್ಧ ಎಂಬ ವ್ಯಕ್ತಿ ಇದ್ದ. ಆತ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ ಮುಂತಾದ 12ನೇ ಶತಮಾನದಲ್ಲಿ ಇದ್ದವರ ಸಮಕಾಲೀನ. ಆದರೆ ಅವನು ವೀರಶೈವ ಧರ್ಮ ಸಂಸ್ಥಾಪಕನೆಂದು ಯಾವ ಗ್ರಂಥ ಅಥವಾ ವಚನವೂ ಹೇಳುವುದಿಲ್ಲ.
3. ವಚನಕಾರರು ಕೆಳಜಾತಿಯ ಶಿವಭಕ್ತರಾದ ಮಾದಾರ ಚೆನ್ನಯ್ಯ, ಕಕ್ಕಯ್ಯ, ಬೇಡರ ಕಣ್ಣಪ್ಪ, ಕುಂಬಾರ ಗುಂಡಯ್ಯ, ಮುಂತಾದವರನ್ನು ಬಹಳ ಪ್ರೀತಿಯಿಂದ ಸ್ಮರಿಸುತ್ತಾರೆ; ರೇವಣ, ಮರುಳಸಿದ್ಧ, ಏಕೋ ರಾಮ, ಪಂಡಿತರಾಧ್ಯರನ್ನೂ ನೆನೆಯುತ್ತಾರೆ; ಆದರೆ ಅವರಾರೂ ರೇವಣ, ಮರುಳ ಸಿದ್ಧ ಮುಂತಾದವರು ಚೆನ್ನಬಸವಣ್ಣ ಅಲ್ಲಮಪ್ರಭುವಿಗಿಂತ ಶ್ರೇಷ್ಠ ಎಂದಾಗಲಿ, ಅವರು ವೀರಶೈವ ಧರ್ಮ ಸಂಸ್ಥಾಪಕರು ಎಂದಾಗಲಿ ಹೇಳುವುದಿಲ್ಲ.
4. ಎಲ್ಲಕ್ಕಿಂತ ಮುಖ್ಯವಾದುದೆಂದರೆ, ಪಂಚಾಚಾರ್ಯ ಕಲ್ಪನೆಯೇ 17ನೆಯ ಶತಮಾನದಿಂದ ಈಚಿನದು. 1698ರಲ್ಲಿ ಸಂಪಾದನೆಯ ಪರ್ವತೇಶ ರಚಿಸಿದ ಚತುರಾಚಾರ್ಯ ಚಾರಿತ್ರದಲ್ಲಿ ಪಂಡಿತ, ಏಕೋರಾಮ, ಮರುಳಸಿದ್ಧ ಮತ್ತು ರೇವಣ ಎಂಬ ನಾಲ್ವರ ಹೆಸರುಗಳು ಮಾತ್ರ ಇವೆ. ವಿಶ್ವಾರಾಧ್ಯನೆಂಬ ಐದನೇ ಹೆಸರನ್ನು ಈ ಗ್ರಂಥಕ್ಕೆ ಆಮೇಲೆ ಸೇರಿಸಲಾಯಿತು. 12ನೇ ಶತಮಾನದ ವಚನಕಾರರು ಪಂಚಾಚಾರ್ಯ ಪದವನ್ನು ಬಳಸಿಲ್ಲ. ಆದುದರಿಂದ ಪಂಚಾಚಾರ್ಯರು ವೀರಶೈವ ಧರ್ಮದ ಸ್ಥಾಪಕರೆಂಬ ವಾದ ಬಿದ್ದು ಹೋಗುತ್ತದೆ.

1.3. ಋಗ್‍ ವೈದಿಕ ಮೂಲ ವಾದ: ವೀರಶೈವ ಧರ್ಮ ಋಗ್ವೇದದಷ್ಟು ಹಳೆಯದು ಎಂದು ಸಿದ್ಧ ಮಾಡಲು ಇಚ್ಚಿಸುವವರು ಈ ಕೆಳಗಿನ ಎರಡು ವಾದಗಳನ್ನು ಮಂಡಿಸುತ್ತಾರೆ. 1. ಋಗ್ವೇದದಲ್ಲಿ ರುದ್ರನ ವರ್ಣನೆ ಇದೆ. ಬಸವಣ್ಣನವರೂ ‘ರುದ್ರೇನೇಕೋ ದೇವ’ ಎನ್ನುತ್ತಾರೆ (1/528). ಆದುದರಿಂದ ವೀರಶೈವ ಧರ್ಮವು ಋಗ್ವೇದದಷ್ಟು ಹಳೆಯದು ಎಂಬುದು ಕೆಲವು ವಿದ್ವಾಂಸರ ವಾದ. ಈ ವಾದದಲ್ಲಿ ಬಳಸಲಾಗಿರುವ ಆಧಾರಗಳು (premises) ಸತ್ಯವಾದವು, ಆದರೆ ಅವುಗಳಿಂದ ಪಡೆದ ಅನುಮಿತಿ (conclusion) ಅಸತ್ಯವಾದದ್ದು. ಏಕೆಂದರೆ ಋಗ್ವೇದದಲ್ಲಿ ಬರುವ ರುದ್ರನೇ ಬೇರೆ, ವಚನಗಳಲ್ಲಿ ಬರುವ ರುದ್ರ ಅಥವಾ ಶಿವನೇ ಬೇರೆ. ಋಗ್ವೇದದಲ್ಲಿ ರುದ್ರನನ್ನು ಭಯಂಕರ ಕ್ರೂರ ಮೃಗ, ವಿನಾಶಕಾರಿ, ಬಿರುಗಾಳಿಯಂತೆ ವೇಗವಾಗಿ ಚಲಿಸುವವನು, ಹಸುಗಳನ್ನು ಮತ್ತು ಮನುಷ್ಯರನ್ನು ಕೊಲ್ಲುವವನು ಎಂದು ವರ್ಣಿಸಲಾಗಿದೆ. ಅವನು ತಾಮ್ರವರ್ಣದವನು, ಕಾಂತಿಯುಳ್ಳವನು, ಚಿನ್ನದ ಒಡವೆಗಳನ್ನು ಧರಿಸಿರುವವನು, ವಿವೇಕಿ, ಉದಾರಿ, ಒಳ್ಳೆಯ ವೈದ್ಯ ಎಂದೂ ವರ್ಣಿಸಲಾಗಿದೆ. ಈ ವರ್ಣನೆಯನ್ನು ಗಮನಿಸಿದರೆ ಋಗ್ವೇದದ ರುದ್ರನೇ ಬೇರೆ, ವಚನೋಕ್ತ ರುದ್ರ ಅಥವಾ ಶಿವನೇ ಬೇರೆ, ಎಂಬುದು ಸ್ಪಷ್ಟವಾಗುತ್ತದೆ. ಋಗ್ವೇದದ ವರ್ಣನೆಗಳೆಲ್ಲ ಮಾನವನಿಗೆ ಆರೋಪಿಸಬಹುದಾದ ವರ್ಣನೆಗಳು ಮತ್ತು ಅವು ಭಕ್ತಿಗಿಂತ ಹೆಚ್ಚಾಗಿ ಭಯವನ್ನೇ ಹುಟ್ಟಿಸುತ್ತವೆ. ಆದುದರಿಂದಲೇ ವೈದಿಕರು ಅವನನ್ನು ಶಾಂತಗೊಳಿಸಲು ಅವನ ಹೆಸರಿನಲ್ಲಿ ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರು. ಆ ರುದ್ರನು ಅನೇಕ ದೇವತೆಗಳಲ್ಲಿ ಒಬ್ಬ. ಅವನು ಸೃಷ್ಟಿಸ್ಥಿತಿಲಯಕರ್ತನಲ್ಲ. ಆದರೆ ವಚನೋಕ್ತ ಶಿವ ಅಥವಾ ರುದ್ರನು ಸೃಷ್ಟಿಸ್ಥಿತಿಲಯಗಳನ್ನು ಮಾಡುವವನು, ಅವನಿಗೆ ದಯೆ ಮುಂತಾದ ಕಲ್ಯಾಣ ಗುಣಗಳಿವೆ; ಅವನ ವರ್ಣನೆಗಳು ನಮ್ಮನ್ನು ಸ್ತುತಿಸುವಂತೆ, ಕೃತಜ್ಞತೆ ತೋರಿಸುವಂತೆ ಮಾಡುವುದಲ್ಲದೆ ನಮ್ಮಲ್ಲಿ ಭಕ್ತಿಯನ್ನು ಪ್ರಚೋದಿಸುತ್ತವೆ. ಅವನು ಏಕೈಕದೇವ.

ಪ್ರಸಿದ್ಧ ಚಿಂತಕರಾದ ಶ್ರೀ ಶಂ.ಬಾ. ಜೋಶಿ ಅವರು ತಮ್ಮ ಶಿವರಹಸ್ಯದಲ್ಲಿ (ಪು.4, 5, 35) ಈ ಬಗ್ಗೆ ಮೂರು ಅಂಶಗಳ ವಿಮರ್ಶೆ ಮಾಡಿದ್ದಾರೆ: 1. ಋಗ್ವೇದದಲ್ಲಿ ರುದ್ರನನ್ನು ವರ್ಣಿಸುವಲ್ಲಿ ಶಿವ ಎಂಬ ಪದವನ್ನು ಬಳಸಲಾಗಿದ್ದರೂ ಅದರ ಅರ್ಥ ಶುಭ ಎಂದೇ ಹೊರತು, ಅದು ದಕ್ಷಿಣ ಭಾರತದ ಸೃಷ್ಟಿ, ಸ್ಥಿತಿ ಮತ್ತು ಲಯಕರ್ತನಾದ, ಏಕೈಕ ದೇವನಾದ ಶಿವನಿಗೆ ಅನ್ವಯಿಸುವುದಿಲ್ಲ. 2. ಶಿವನು ಒಬ್ಬ ದ್ರಾವಿಡ ದೈವ, ಆರ್ಯರ ರುದ್ರನಲ್ಲ; ಋಗ್ವೇದದ ಹಲವಾರು ದೇವತೆಗಳಲ್ಲಿ ಒಬ್ಬನಲ್ಲ. 3. ಋಗ್ವೇದದ ರುದ್ರನ ವರ್ಣನೆಯಲ್ಲಿ ಲಿಂಗ ಪದ ಬರುವುದಿಲ್ಲ. ಅವನನ್ನು ಲಿಂಗಾಯತರ ಶಿವ ಅಥವಾ ರುದ್ರನೊಂದಿಗೆ ಸಮೀಕರಿಸುವುದು ತಪ್ಪು. ಇದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ವೇದಗಳಲ್ಲಿ ಲಿಂಗಾಯತ ಧರ್ಮವನ್ನು ಹುಡುಕಲು ಪ್ರಯತ್ನಿಸುವುದು ಮೂರ್ಖತನ (ಎಸ್.ಎಸ್.ಬಸವನಾಳ: ಪೂರ್ವೋಕ್ತ, ಪು.15).
2. ಋಗ್ವೇದದಲ್ಲಿ ಇಷ್ಟಲಿಂಗಾರಾಧನೆಯ ಪ್ರಸ್ತಾಪವಿರುವುದರಿಂದ ಮತ್ತು ಇಷ್ಟಲಿಂಗಾರಾಧನೆಯು ವೀರಶೈವ ಧರ್ಮದ ಬಹು ಮುಖ್ಯ ಲಕ್ಷಣವಾದುದರಿಂದ ವೀರಶೈವ ಧರ್ಮವು ಋಗ್ವೇದದಷ್ಟು ಹಳೆಯದು ಎಂದು ತೀರ್ಮಾನಿಸಬಹುದೆಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಅವರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಈ ಕೆಳಗಿನ ಋಗ್ವೇದ ಮಂತ್ರವನ್ನು ಉದ್ಧರಿಸುತ್ತಾರೆ:

ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ|
ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ||
ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಾಗಮತ್|
ಇದಂ ತವ ಸಮರ್ಪಣಂ ಸುಬಂಧವೇ ನಿರೀಹಿ|| (ಇ.) (10-4-60).

ಇದರ ಸರಿಯಾದ ಅರ್ಥವನ್ನು ಪೂ. ಶ್ರೀ ಡಾ.ಇಮ್ಮಡಿ ಶಿವಬಸವ ಸ್ವಾಮಿಗಳು ಈ ಕೆಳಗಿನಂತೆ ಕೊಟ್ಟಿದ್ದಾರೆ. ಅವರು ಸಂಸ್ಕೃತ ವಿದ್ವಾಂಸರಾದುದರಿಂದ ಅವರ ವ್ಯಾಖ್ಯಾನವನ್ನು ಸಂಶಯ ದೃಷ್ಟಿಯಿಂದ ಕಾಣುವ ಕಾರಣವಿಲ್ಲ:
ಈ ನನ್ನ ಹಸ್ತವೇ ಭಗವಂತ, ಈ ಹಸ್ತವೇ ಪವಿತ್ರವಾದುದು,
ಈ ಹಸ್ತವೇ ಭವರೋಗ ನಿವಾರಕ, ಈ ಹಸ್ತವೇ ಶಿವದರ್ಶನ ನೀಡುವಂತಹದ್ದು,
ಈ ಹಸ್ತವೇ ತಾಯಿ ತಂದೆ, ಈ ಹಸ್ತವೇ ಎಲ್ಲ ಜೀವ ರಾಶಿ,
ಸುಬಂಧುವೇ, ಇದನ್ನು ನಿನಗೆ ಅರ್ಪಿಸುತ್ತಿದ್ದೇನೆ, ಸ್ವೀಕರಿಸು).

ಆದರೆ ಈ ಮಂತ್ರದಲ್ಲಿ ಹಸ್ತ ಎಂಬ ಪದದ ಪ್ರಯೋಗವಿದೆಯೇ ಹೊರತು ‘ಹಸ್ತದಲ್ಲಿರುವ ಭಗವಾನ್’ ಎಂಬುದರ ಪ್ರಸ್ತಾಪವಿಲ್ಲ. ಅಂದರೆ, ಮೊದಲನೆಯ ಸಾಲಿನ ಮೊದಲರ್ಧ ಭಾಗಕ್ಕೆ ದುರುದ್ದೇಶದಿಂದ ತಪ್ಪು ಅರ್ಥ ಕೊಡಲಾಗಿದೆ. ಒಂದು ವೇಳೆ ಅದು ಇಷ್ಟಲಿಂಗಕ್ಕೆ ಅನ್ವಯಿಸಿದರೂ ‘ನಾನು ಇಷ್ಟಲಿಂಗವನ್ನು ಸಮರ್ಪಿಸುತ್ತೇನೆ, ಸ್ವೀಕರಿಸು’ ಎಂದೇಕೆ ಭಕ್ತ ಹೇಳಬೇಕು? ಇದಕ್ಕೆ ವಿಚಿತ್ರವಾದ ಅರ್ಥ ಕೊಡುವವರಿಗೆ ಓದುಗರಲ್ಲಿ ಗೊಂದಲ ಸೃಷ್ಟಿ ಮಾಡುವ ಉದ್ದೇಶವಿರುವಂತೆ ಕಾಣುತ್ತದೆ. [ಡಾ.ಎಸ್.ಸವದತ್ತಿಮಠ (ಸಂ): ವೀರಶೈವ ಆಕರಗಳು (ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು, 2009), ಪು.18].

1.4. ಆಗಮೋಕ್ತ ವೀರಶೈವ ವಾದ: ಬಸವಣ್ಣನವರೇ ಲಿಂಗಾಯತ ಧರ್ಮ ಸಂಸ್ಥಾಪಕರು ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಇಷ್ಟಪಡದ ಕೆಲವರು ಆ ಧರ್ಮದ ಧಾರ್ಮಿಕ ಮತ್ತು ದಾರ್ಶನಿಕ ಸಿದ್ಧಾಂತಗಳು ಆಗಲೇ ಆಗಮಗಳಲ್ಲಿ ಇದ್ದವು, ಬಸವೇಶ್ವರರು 12ನೇ ಶತಮಾನದಲ್ಲಿ ಅವುಗಳನ್ನು ವಚನಗಳ ರೂಪದಲ್ಲಿ ವ್ಯಕ್ತಪಡಿಸಿದರು ಎಂದು ವಾದಿಸುತ್ತಾರೆ. ಅವರ ವಾದವನ್ನು ಪರಿಶೀಲಿಸುವ ಮೊದಲು ಕಾಲಿಕವಾಗಿ ಮೂರು ರೀತಿಯ ಆಗಮಗಳಿರುವುದನ್ನು ನಾವು ಗಮನಿಸಬೇಕಾಗುತ್ತದೆ.
(ಅ) ಸಂಪ್ರದಾಯದ ಪ್ರಕಾರ 28 ಶಿವಾಗಮಗಳಿವೆ. ಅವುಗಳಲ್ಲಿ ಎಲ್ಲವೂ ಲಭ್ಯವಿಲ್ಲ. ಪೂರ್ಣವಾಗಿರುವ ಯಾವ ಆಗಮವೂ ಲಭ್ಯವಿಲ್ಲ. ಚೆನ್ನೈ, ಪಾಂಡಿಚೆರಿ ಮತ್ತು ನೇಪಾಳದಲ್ಲಿ ಲಭ್ಯವಿರುವ ಈ ಮೂಲ ಆಗಮಗಳಲ್ಲಿ ವೀರಶೈವ ಅಥವಾ ಲಿಂಗಾಯತ ಎಂಬ ಪದವಾಗಲಿ ಅಷ್ಟಾವರಣ, ಷಟಸ್ಥಲ, ಕಾಯಕ, ದಾಸೋಹಗಳ ಪ್ರಸ್ತಾಪವಾಗಲಿ ಇಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ. ವೇದ ಮತ್ತು ಆಗಮಗಳಲ್ಲಿನ ವೀರಶೈವ ಸಿದ್ಧಾಂತಗಳ ನಾಸ್ತಿತ್ವವೇ 1430ರಲ್ಲಿದ್ದ ಕಲ್ಲುಮಠದ ಪ್ರಭುದೇವರನ್ನು ವೇದ ಆಗಮಗಳು ಜಡ್ಡು, ಗೊಜಡು ಎಂದು ತೀರ್ಮಾನಿಸಲು ಪ್ರಚೋದಿಸಿದುದು [ಸಂ.ಶಿ.ಭೂಸನೂರುಮಠ (ಸಂ): ಕಲ್ಲುಮಠದ ಪ್ರಭುದೇವರ ಲಿಂಗಲೀಲಾವಿಲಾಸ ಚಾರಿತ್ರ (ಮುರುಘಾಮಠ, ಧಾರವಾಡ, 1976) ಮುನ್ನುಡಿ ಮತ್ತು ಹಿನ್ನುಡಿಯಲ್ಲಿ]. ಕಲ್ಲುಮಠದ ಪ್ರಭುದೇವನು ವೇದಾಗಮಗಳನ್ನು ಬಿಟ್ಟು ಕೇವಲ ಬಸವಣ್ಣ, ಅಲ್ಲಮ, ಚೆನ್ನಬಸವಣ್ಣ ಮುಂತಾದವರ ವಚನಗಳ ಆಧಾರದ ಮೇಲೆ ಲಿಂಗಾಯತ ಧರ್ಮದ ಪ್ರಮುಖ ಸಿದ್ಧಾಂತಗಳನ್ನು ಕುರಿತ ಲಿಂಗಲೀಲಾವಿಲಾಸಚಾರಿತ್ರವನ್ನು ಬರೆದ.

ಸುಮಾರು 15ನೇ ಶತಮಾನದವರೆಗೂ ಆಗಮಗಳನ್ನು ಯಾರೂ ಭ್ರಷ್ಟಗೊಳಿಸಿರಲಿಲ್ಲ- ಅಂದರೆ ಅವುಗಳಿಗೆ ಲಿಂಗಾಯತ ಅಥವಾ ವೀರಶೈವ ಧರ್ಮದ ಸಿದ್ಧಾಂತಗಳನ್ನು ಸೇರಿಸಿರಲಿಲ್ಲ. ಸುಮಾರು 1460 ರಲ್ಲಿದ್ದ ತೋಂಟದ ಸಿದ್ಧಲಿಂಗ ಶಿವಯೋಗಿ ಆಗಮಗಳಿಂದ ಲಿಂಗಾಯತ ಸಿದ್ಧಾಂತ ಮತ್ತು ಆಚರಣೆಗಳನ್ನು ಕಲಿಯಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
1. ಅವರ ಪ್ರಕಾರ ಲಿಂಗವೇ ಅಂಗವಾಗಿದೆ, ಅಂಗಲಿಂಗಗಳಲ್ಲಿ ಭೇದವಿಲ್ಲ, ಅವುಗಳಲ್ಲಿರುವ ಅಭೇದ ಅಥವಾ ಐಕ್ಯತೆಯನ್ನು ನಾವು ಸ್ವಾನುಭವ ವಿವೇಕದಿಂದ ಅರಿಯಬಹುದೇ ಹೊರತು ಆಗಮಗಳಿಂದಲ್ಲ (11/38) ಎಂದು ತೀರ್ಮಾನಿಸಿದರು. ಅವರು ತಮ್ಮ ಹೇಳಿಕೆಗೆ ಸಮರ್ಥನೆ ನೀಡುತ್ತಾ, ಹೀಗೆನ್ನುತ್ತಾರೆ: “ಲಿಂಗದೊಂದಿಗೆ ಐಕ್ಯವಾಗಬೇಕೆಂಬ ನಮ್ಮ ಬಯಕೆ ಶಾಸ್ತ್ರ ಮತ್ತು ಆಗಮಗಳನ್ನು ಅವಲಂಬಿಸಿದರೆ ಕೈಗೂಡುವುದಿಲ್ಲ” (11/39).
2. ಲಿಂಗಾಯತ ಧರ್ಮದ ಮೋಕ್ಷಪರಿಕಲ್ಪನೆಯನ್ನು ಪ್ರಸ್ತಾಪಿಸುವಾಗ ಮತ್ತೊಮ್ಮೆ ಅವರು ಶ್ರುತಿ ಮತ್ತು ಆಗಮಗಳನ್ನು ಖಂಡಿಸುತ್ತಾರೆ. ತಮ್ಮನ್ನು ತಾವರಿದವರಿಗೆ ಆಗಮಗಳ ಬೋಧನೆ ಅನಾವಶ್ಯಕ, ತಮ್ಮನ್ನು ತಾವರಿಯಬೇಕೆನ್ನುವವರಿಗೆ (ಸ್ವಾನುಭಾವವನ್ನು ಬಯಸುವವರಿಗೆ) ಶಾಸ್ತ್ರ ಮತ್ತು ಆಗಮಗಳು ಸಹಾಯ ಮಾಡುವುದಿಲ್ಲ, ಏಕೆಂದರೆ ಅವು ಪ್ರಸಾದದ ಅಗತ್ಯವನ್ನು ಬೋಧಿಸುವುದಿಲ್ಲ (11/57). ಕೇವಲ ವಚನಗಳೇ ಪ್ರಮಾಣ, ಆಗಮಗಳು ವಚನಗಳಲ್ಲ. ವಚನಗಳೇ ವೀರಶೈವಾಗಮಗಳು ಅಥವಾ ಪುರಾತನರ ಮಹಾವಾಕ್ಯಗಳು. ವಚನಗಳನ್ನು ಅನುಸರಿಸುವ ಶರಣರ ವರ್ತನೆಯು ವೇದಾಂತ ಮತ್ತು ಸಿದ್ಧಾಂತಗಳನ್ನು (ಆಗಮಗಳನ್ನು) ಅನುಸರಿಸುವವರ ವರ್ತನೆಗಿಂತ ಭಿನ್ನ.

(ಆ). ಸಿದ್ಧಾಂತ ಶಿಖಾಮಣಿಯು (ಪರಿಚ್ಛೇದ 4, ಶ್ಲೋಕ 14) ಕಾಮಿಕ, ವಾತುಲ ಮುಂತಾದ ಆಗಮಗಳ ಉತ್ತರ ಭಾಗಗಳಲ್ಲಿ ವೀರಶೈವ ಧರ್ಮದ ಪ್ರಸ್ತಾಪವಿದೆ ಎನ್ನುತ್ತದೆ. ಮೊದಲನೆಯದಾಗಿ, ಈ ಆಗಮಗಳ ಉತ್ತರ ಭಾಗಗಳು ಮೂಲ ಆಗಮಗಳಲ್ಲಿ ಇಲ್ಲ ಎಂಬುದು ಗಮನಾರ್ಹ. ಕಾಮಿಕೋತ್ತರ, ವಾತುಲೋತ್ತರ ಮುಂತಾದ ಹೆಸರುಗಳೇ ಹೇಳುತ್ತವೆ, ಇವು ಮೂಲ ಆಗಮಗಳಲ್ಲ, ಭ್ರಷ್ಟ ಆಗಮಗಳು ಎಂದು. ಸುಮಾರು 16ನೇ ಶತಮಾನದಿಂದ ಈಚೆಗೆ ರಚಿತವಾದ ಸಿದ್ಧಾಂತ ಶಿಖಾಮಣಿಯಲ್ಲಿ ಉತ್ತರ ಭಾಗಗಳ ಪ್ರಸ್ತಾಪ ಬಂದಿರುವುದರಿಂದ ಅವುಗಳ ಉತ್ತರ ಭಾಗಗಳು ಸುಮಾರು 15-16ನೇ ಶತಮಾನದಲ್ಲಿ ಸೇರಿಸಲ್ಪಟ್ಟಿರಬೇಕು. ಎರಡನೆಯದಾಗಿ, ಸುಪ್ರಭೇದಾಗಮದಲ್ಲಿ ವೀರಶೈವ ಸಿದ್ಧಾಂತಗಳನ್ನು ಬೋಧಿಸಿದ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಮುಂತಾದವರ ಹೆಸರುಗಳು ಬರುತ್ತವೆ [ಎಂ.ಆರ್.ಸಾಖರೆ, History and Philosophy of Lingðyat Religion, (ಎಂ.ಆರ್.ಸಾಖರೆ ಬೆಳಗಾವಿ, 1942), ಪು.383].

(ಇ). ಆದರೆ ಮೂಲ ಆಗಮಗಳನ್ನು ಬಹಳ ಕುಲಗೆಡಿಸಿದವರೆಂದರೆ ಸೊಲ್ಲಾಪುರದ ಲಿಂಗೀಬ್ರಾಹ್ಮಣ ಸಂಸ್ಕೃತ ಗ್ರಂಥಮಾಲೆಯ ಪ್ರಕಾಶಕರು. 1902ರಿಂದೀಚೆಗೆ ಅವರು ಪ್ರಕಟಿಸಿದ ಆಗಮಗಳಿಗೆ ಎಲ್ಲಾ ಬಸವಸಿದ್ಧಾಂತಗಳನ್ನು ವಿರೋಧಿಸುವುದೇ ಮೂಲ ಉದ್ದೇಶವಾಗಿತ್ತು. ಅವುಗಳಲ್ಲಿ ಕೆಲವು ಹೀಗಿವೆ:
1. ಬಸವಣ್ಣನವರು ಶಿವ, ಜಗತ್ತು ಮತ್ತು ಆತ್ಮಗಳ ಅದ್ವೈತವನ್ನು ಬೋಧಿಸುತ್ತಾರೆ. ಆದರೆ ಈ ಭ್ರಷ್ಟ ಆಗಮಗಳು ಯಾವ ಸಂಕೋಚವೂ ಇಲ್ಲದೆ ಬಹುದೇವತಾರಾಧನೆಯನ್ನು ಬೋಧಿಸುತ್ತವೆ. ಅವುಗಳ ಪ್ರಕಾರ ವೀರಶೈವನು ಶಿವ, ಪಾರ್ವತಿ, ಗಣಪತಿ, ಕುಮಾರ, ಇಂದ್ರ, ದಿಕ್ಪಾಲಕರು, ಸ್ವಾಹೆ, ಮುಂತಾದವರನ್ನು ಆರಾಧಿಸಬೇಕು (ಪಾರಮೇಶ್ವರ ಆಗಮ, ವೀರಶೈವ ಅನುಸಂಧಾನ ಸಂಸ್ಥಾನ, ಬೆಂಗಳೂರು, 2000, ನಾಲ್ಕನೆಯ ಪಟಲ).
2. ಈ ಆಗಮಗಳ ಶಿವ ಕೈಲಾಸಕ್ಕೆ ಮಾತ್ರ ಸೀಮಿತವಾಗಿದ್ದಾನೆ. ಅವನಿಗೆ ಅನೇಕ ಮಾನವ ಗುಣಗಳಿವೆ. ಅವನಿಗೆ ಹೆಂಡತಿ, ಮಕ್ಕಳು, ಸೇವಕರು, ಗಣಗಳು ಇದ್ದಾರೆ. ಅವನು ರುಂಡಮಾಲಾಧರ, ತ್ರಿಶೂಲ-ಢಮರುಗಧಾರಿ, ಗಜಚರ್ಮಾಂಬರಧಾರಿ ಇತ್ಯಾದಿ; ಈ ಪೌರಾಣಿಕ ಶಿವ ಸೃಷ್ಟಿಕರ್ತನಲ್ಲ. ಸರ್ವಸಮಾವೇಶಿಯಲ್ಲ. ಪ್ರತಿ ಆಗಮವೂ ಕೈಲಾಸದಲ್ಲಿರುವ ಶಿವ ಮತ್ತು ಅವನ ಹೆಂಡತಿ, ಮಕ್ಕಳು, ಪರಿವಾರದವರ ವರ್ಣನೆಯೊಂದಿಗೆ ಪ್ರಾರಂಭವಾಗುತ್ತದೆ.
ಇದಕ್ಕೆ ವಿರುದ್ಧವಾಗಿ ಬಸವಣ್ಣನವರ ಲಿಂಗಾಯತದಲ್ಲಿ ಶಿವ ಪೂಜ್ಯ. ಅವನೇ ಸೃಷ್ಟಿ ಸ್ಥಿತಿ ಲಯ, ತಿರೋಧಾನ ಮಾಡುವವನು; ಅನುಗ್ರಹಗಳನ್ನು ನೀಡುವವನು; ಪ್ರತಿಯೊಂದು ಜೀವಿಯೂ ಲಿಂಗವೇ ಆಗಿದೆ, ಆದುದರಿಂದ ಶಿವನನ್ನು ಹೊರಗೆ ಹುಡುಕುವುದು ವ್ಯರ್ಥ.
3. ಬಸವಣ್ಣನವರು ಮೊದಮೊದಲು ಕೈಲಾಸವನ್ನು ನಂಬುತ್ತಿದ್ದರು ಎಂದು ಕಾಣುತ್ತದೆ. ಆದರೆ ಅವರ ಐಕ್ಯಸ್ಥಲದ ವಚನಗಳನ್ನು ಪರಿಶೀಲಿಸಿದರೆ ಕೈಲಾಸವು ಶಿವನ ವಾಸಸ್ಥಾನ ಎಂದಾಗಲಿ ಅದು ಆಧ್ಯಾತ್ಮಿಕ ಜೀವನದ ಗುರಿ ಎಂದಾಗಲಿ ಅವರು ನಂಬಲಿಲ್ಲವೆಂಬುದು ಖಚಿತವಾಗುತ್ತದೆ. ಅವರ ಪ್ರಕಾರ ಮನುಷ್ಯ ಜೀವಿಸಿದ್ದಾಗಲೇ ಶಿವನೊಂದಿಗೆ ಸಾಮರಸ್ಯ ಸ್ಥಾಪಿಸಬೇಕು (1/922, 924; 4/1492).
4. ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಜಾತಿತಾರತಮ್ಯವಿಲ್ಲ. ಅವರ ಪ್ರಕಾರ ಲಿಂಗಧಾರಿಯಾದವನಿಗೆ ಜಾತಿ ಇರುವುದಿಲ್ಲ, ಅವನು ಪವಿತ್ರನಾಗುತ್ತಾನೆ ಹಾಗೂ ಇತರ ಲಿಂಗಧಾರಿಗಳಿಗೆ ಸಮನಾಗುತ್ತಾನೆ. ಲಿಂಗಧಾರಿಗಳಲ್ಲದ ಎಲ್ಲರೂ – ಬ್ರಾಹ್ಮಣರೂ ಸೇರಿ – ಅಸ್ಪೃಶ್ಯರಂತಾಗುತ್ತಾರೆ (1/606). ಆದರೆ ಆಗಮಗಳು ಜಾತಿ ತಾರತಮ್ಯ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳುತ್ತವೆ. ಕಾರಣಾಗಮ (iii/71) ವೀರಶೈವನು ಜನಿವಾರ ತೊಡಬೇಕೆಂದು ಹೇಳುತ್ತದೆ. ಶೂದ್ರನು ತಂದ ಹೂವಿನಿಂದ ವೀರಶೈವನು ಲಿಂಗಪೂಜೆ ಮಾಡಿಕೊಳ್ಳಬಾರದು (v/28). ಜಾತಿ ತಾರತಮ್ಯದ ಪ್ರಾಮುಖ್ಯವನ್ನು ಅನುಮೋದಿಸಲು ಚಂದ್ರಜ್ಞಾನ ಆಗಮಕ್ಕೆ ವರ್ಣಾಶ್ರಮ ಧರ್ಮಾವಶ್ಯಕತಾ ಕಥನಂ ಎಂಬ ಹೊಸ ಅಧ್ಯಾಯವನ್ನೇ ಸೇರಿಸಲಾಗಿದೆ.
5. ಬ್ರಾಹ್ಮಣನೇ ಗುರುವಾಗಬೇಕೆಂಬ ಸಾಂಪ್ರದಾಯಿಕ ಸಿದ್ಧಾಂತವನ್ನು ಬಸವಣ್ಣ ತಿರಸ್ಕರಿಸಿ ಅನುಭಾವಿಯಾದ ಯಾರಾದರೂ ಗುರುವಾಗಬಹುದು ಎಂದರು. ಎಲ್ಲರಲ್ಲಿರುವ ಚೈತನ್ಯವು ಒಂದೇ, ಅದನ್ನು ಸಾಕ್ಷಾತ್ಕರಿಸಿಕೊಂಡವರು ಸಾಕ್ಷಾತ್ಕರಿಸಿಕೊಳ್ಳದವರಿಗಿಂತ ಶ್ರೇಷ್ಠರು – ಅವರು ಬ್ರಾಹ್ಮಣರಾಗಿರಲಿ ಶೂದ್ರ ಅಥವಾ ಅಸ್ಪೃಶ್ಯರಾಗಿರಲಿ. ಈ ಕಾರಣದಿಂದಲೇ ಅವರು ಭವದುಃಖಕ್ಕೀಡಾಗಿರುವ ಬ್ರಾಹ್ಮಣನ ಬದಲು ಶ್ರೇಷ್ಠ ಶಿವಭಕ್ತರಾದ ಚೆನ್ನಯ್ಯ, ಕಕ್ಕಯ್ಯ ಮುಂತಾದವರನ್ನೇ ಗುರುಗಳೆಂದು ಆಯ್ದುಕೊಂಡಿದ್ದರು. ಇದಕ್ಕೆ ವಿರುದ್ಧವಾಗಿ ಚಂದ್ರಜ್ಞಾನ ಆಗಮ (ii/49, 61-64, 66,67) ಗುರು ಬ್ರಾಹ್ಮಣನೇ ಆಗಿರಬೇಕೆಂದು ವಿಧಿಸುತ್ತದೆ.
6. ಪ್ರತಿಯೊಬ್ಬ ಸಶಕ್ತನು ಯಾವುದಾದರೂ ಒಂದು ಕಾಯಕ ಮಾಡಬೇಕೆ ಹೊರತು ಭಿಕ್ಷಬೇಡಬಾರದು ಎಂದು ಬಸವಾದಿ ಶರಣರು ಒಕ್ಕೊರಲಿನಿಂದ ಹೇಳಿದರು. ಇದನ್ನು ವಿರೋಧಿಸುವ ಸಲುವಾಗಿ ಪಾರಮೇಶ್ವರ ಆಗಮವು (vii/58-59) ವೀರಶೈವನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನ ವೃತ್ತಿಯನ್ನು ಮಾಡಬಾರದು; ಸುಖಪೂರ್ವಕ ಭೋಜನ ಬೇಕಿದ್ದರೆ ಭಿಕ್ಷೆ ಬೇಡಬೇಕು ಎನ್ನುತ್ತದೆ. ಅದೇ ಆಗಮ (vii/65-67) ವೀರಶೈವನು ತಲೆಯ ಮೇಲೆ ಭಾರ ಹೊರಬಾರದು, ಗಿಡ ಕಡಿಯಬಾರದು, ಭೂಮಿಯನ್ನು ಉಳಬಾರದು ಎಂದು ಭೋಧಿಸುತ್ತದೆ; ಒಂದು ವೇಳೆ ಈ ಬೋಧನೆಯನ್ನು ಒಪ್ಪಿಕೊಂಡರೆ ರೈತರು, ಕುಂಬಾರರು, ಕೂಲಿಗಳು, ವರ್ತಕರು, ಸೈನಿಕರು, ಸೌದೆ ಮಾರುವವರು, ಇವರಾರೂ ವೀರಶೈವರಾಗುವುದಿಲ್ಲ, ಕೇವಲ ಭಿಕ್ಷುಕರು ವೀರಶೈವರಾಗಲು ಅರ್ಹರಾಗುತ್ತಾರೆ.
7. ಬಸವಣ್ಣನವರು ಎಲ್ಲ ಸಶಕ್ತರು ಹೆಚ್ಚು ದುಡಿದು ತಮಗೆ ಆಗುವಷ್ಟು ಇಟ್ಟುಕೊಂಡು ಉಳಿದಿದ್ದನ್ನು ಇಲ್ಲದವರಿಗೆ ದಾಸೋಹ ಮಾಡಬೇಕೆಂದು ಬೋಧಿಸಿದರು. ಇದು ದಯವೇ ಧರ್ಮದ ಮೂಲವಯ್ಯ ಎಂಬ ಅವರ ಸಿದ್ಧಾಂತಕ್ಕೆ ಅನುಗುಣವಾಗಿದೆ. ಆದರೆ ಈ ಮಾನವೀಯ ಆದರ್ಶ ಗುಣವನ್ನು ವಿರೋಧಿಸುವ ಸಲುವಾಗಿ ಪಾರಮೇಶ್ವರ ಆಗಮವು ಯಾವ ವೀರಶೈವನೂ ದಾನ ಮಾಡಬಾರದು ಎಂದು ವಿಧಿಸುತ್ತದೆ (ಅದರಲ್ಲೆ, vii/67).
ಹೀಗೆ ಆಗಮಗಳಲ್ಲಿ ವೀರಶೈವ ಧರ್ಮದ ಪ್ರಸ್ತಾಪವಿದ್ದರೂ ಆ ಧರ್ಮ ಬಸವಣ್ಣನವರ ಲಿಂಗಾಯತ ಧರ್ಮವಲ್ಲ.

(ಮುಂದುವರಿಯುವುದು)

Previous post ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
Next post ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ

Related Posts

ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
Share:
Articles

ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ

December 6, 2020 ಡಾ. ಎನ್.ಜಿ ಮಹಾದೇವಪ್ಪ
ಆಧುನಿಕ ಕವಿಚರಿತ್ರೆಕಾರರು ಹರಿಹರ, ರಾಘವಾಂಕರು ಶೈವರೋ ವೀರಶೈವರೋ ಎಂದು ನಿರ್ಧರಿಸಲು ಹಿಂಜರಿಯುತ್ತಾರೆ. ಅದಕ್ಕೆ ಕಾರಣಗಳಿಲ್ಲದಿಲ್ಲ. ರಾಘವಾಂಕ ಮಹಾದೇವ ಭಟ್ಟ ಮತ್ತು...
ಧರೆಗೆ ಸೂತಕವುಂಟೆ?
Share:
Articles

ಧರೆಗೆ ಸೂತಕವುಂಟೆ?

August 11, 2025 ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ
ಧರೆಗೆ ಸೂತಕವುಂಟೆ ? ವಾರಿಧಿಗೆ ಹೊಲೆಯುಂಟೆ? ಉರಿವ ಅನಲಂಗೆ ಜಾತಿಭೇದವುಂಟೆ? ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ? ಆಕಾಶಕ್ಕೆ ದಾರಿ ಮೇರೆಯುಂಟೆ? [ಇನಿತ]ರಿಂದಲೊದಗಿದ ಘಟವನು...

Comments 10

  1. Santhosh
    Apr 7, 2024 Reply

    ಈ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮುಂದಿನ ಭಗಕ್ಕಾಗಿ ಕಾಯುತ್ತಿದ್ದೇನೆ. ನಿಮ್ಮ ಬಸವಪರ ಕಾಯಕ ಅತ್ಯಮೂಲ್ಯ.

  2. Pradeep Shetti
    Apr 12, 2024 Reply

    ಲಿಂಗಾಯತ ಧರ್ಮ ಇತಿಹಾಸದಲ್ಲಿ ಎಲ್ಲೆಲ್ಲಿ ಕಗ್ಗಂಟಾಗಿದೆ ಎಂಬುದನ್ನ ತಮ್ಮ ಲೇಖನ ದಾಖಲೆ ಸಹಿತ ತೋರಿಸಿಕೊಡುತ್ತದೆ, ಥ್ಯಾಂಕ್ಯೂ ಸರ್.

  3. ಪರಮೇಶಪ್ಪ ಬಾಗಲಕೋಟ
    Apr 13, 2024 Reply

    ಬಸವಣ್ಣನವರನ್ನು ಧರ್ಮಗುರುವಾಗಿ ಒಪ್ಪದ ಬಣದವರ ಆಕರ ಗ್ರಂಥಗಳನ್ನ ನೋಡಿದರೆ ಪೂರಾ ಪುರಾಣಗಳು. ಇಲ್ಲಿ ವೈಚಾರಿಕತೆಗೆ ಜಾಗವೇ ಇಲ್ಲ. ಇವರಿಂದ ಇನ್ನೇನು ನಿರೀಕ್ಷಿಸಬಹುದು? ಇಂತಹ ಸರಕಿಟ್ಟುಕೊಂಡವರಿಗೆ ಬಸವಣ್ಣ ಗೊತ್ತಾಗುವುದು ಸಾಧ್ಯವೇ ಇಲ್ಲ.

  4. ಕಲಾವತಿ ಜಗಳೂರು
    Apr 15, 2024 Reply

    ವೇದಾಗಮಗಳಿಗೂ, ಬಸವಾದಿ ಶರಣರ ವಚನಗಳಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

  5. ಅಮರೇಶ
    Apr 15, 2024 Reply

    ಒಳ್ಳೆಯ ಲೇಖನ ಸರ್ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇವೆ.

  6. ಬಸವರಾಜ ಸಿಂಧಗಿ
    Apr 17, 2024 Reply

    ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಪಂಚಾಚಾರ್ಯ ವಾದಗಳನ್ನು ಓದುತ್ತಿದ್ದರೆ ನಗು ಬರುತ್ತದೆ. ಇಂತಹ ಬಾಲಿಶ ವಿಷಯಗಳೇ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಹೇಗೆ ಅಡ್ಡಿಯಾದವು ಎಂದು ಖೇದವಾಗುತ್ತದೆ.

  7. ಶ್ರೀಕಾಂತ ಬಿ. ಮ
    Apr 20, 2024 Reply

    ವೀರಶೈವ ಪದದಲ್ಲಿಯೇ ದೊಡ್ಡ ಸಮಸ್ಯೆ ಇದೆ. ಲಿಂಗಾಯತಕ್ಕೂ ವೀರಶೈವಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ ಎನ್ನುವುದು ಲೇಖನ ಓದುತ್ತಿದ್ದರೆ ಮತ್ತೆ ಮತ್ತೆ ದಿಟವಾಗಿ ತೋರುತ್ತದೆ.

  8. Sharanappa Tipatur
    Apr 22, 2024 Reply

    ಆಗಮಗಳಲ್ಲಿ ವೀರಶೈವ ಧರ್ಮದ ಪ್ರಸ್ತಾಪವಿದ್ದರೂ ಅದು ಶರಣ ಧರ್ಮಕ್ಕೆ ಸಂಪೂರ್ಣ ಭಿನ್ನವಾದದ್ದೆಂದು ಶಾಸ್ತ್ರ ಆಧಾರ ಸಹಿತ ಬರೆದ ತಮ್ಮ ವಿದ್ವಾಂಸಪೂರ್ಣ ಲೇಖನಕ್ಕೆ ಶರಣುಗಳು.

  9. Mahantesha Indi
    Apr 24, 2024 Reply

    ಲಿಂಗಾಯತ ಧರ್ಮ ಸ್ಥಾಪನೆಯಾಗಿ 900 ವರ್ಷಗಳಾದರೂ ಇನ್ನೂ ಲಿಂಗಾಯತ ಧರ್ಮ ಸ್ಥಾಪಕ ಯಾರೆಂದು ಕಚ್ಚಾಡುತ್ತಿದ್ದೇವಲ್ಲಾ, ನಮ್ಮನ್ನ ನೋಡಿ ನಾವೇ ಮರುಕಪಡುವಂತಾಗಿದೆ. ಅಂಬಿಗರ ಚೌಡಯ್ಯನವರು ಇದ್ದಿದ್ದರೆ ಪಾದರಕ್ಷೆ ತಗೊಂಡು ಲಟಲಟ ಅಂತ ಬಾರಿಸುತ್ತಿದ್ದರು!!

  10. Veerabhadraiah K.V
    May 1, 2024 Reply

    ವೀರಶೈವರ ನಡೆ-ನುಡಿಗಳಲ್ಲಿ ಯಾವತ್ತೂ ವಚನಗಳ ಆಶಯವನ್ನು ಕಾಣಲು ಸಾಧ್ಯವೇ ಇಲ್ಲ. ಮೇಲ್ನೋಟದಲ್ಲೇ, ಅವರ ಹಾವಭಾವ, ಜೀವನ ಕ್ರಮಗಳಲ್ಲೇ ಅವರು ಲಿಂಗಾಯತರಲ್ಲವೆಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಮತ್ತೆ ಅವರು ಬಂದು ಬಂದು ಲಿಂಗಾಯತಕ್ಕೆ ಅಂಟಿಕೊಳ್ಳುತ್ತಿರುವುದೇಕೆ? ತಮ್ಮ ಆಚಾರ ವಿಚಾರಗಳನ್ನು ಅವರು ಮುಂದುವರಿಸಲಿ, ಬೇಕಾದರೆ ಲಿಂಗವನ್ನೂ ಧರಿಸಲಿ, ಆದರೆ ತಮ್ಮ ಕಾಯಿಲೆಯನ್ನು ನಮಗೆ ಅಂಟಿಸುವ ಹುನ್ನಾರಕ್ಕೆ ಏನನ್ನೋಣ ಸರ್?

Leave a Reply to ಕಲಾವತಿ ಜಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
Copyright © 2025 Bayalu