Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗಾಯತರ ಅವೈದಿಕ ನಂಬಿಕೆಗಳು
Share:
Articles April 29, 2018 ಡಾ. ಎನ್.ಜಿ ಮಹಾದೇವಪ್ಪ

ಲಿಂಗಾಯತರ ಅವೈದಿಕ ನಂಬಿಕೆಗಳು

ಭಾರತಕ್ಕೆ ಬಂದ ಆರ್ಯರು ತಮ್ಮ ತೋಳ್ಬಲದಿಂದ ಮೂಲನಿವಾಸಿಗಳನ್ನು ಸೋಲಿಸಿದರಷ್ಟೇ ಅಲ್ಲ, ಅವರನ್ನು ದಾಸರನ್ನಾಗಿ ಮಾಡಿಕೊಂಡರು. ಈ ಮೂಲನಿವಾಸಿಗಳು ಯಾವಾಗ ಬೇಕಾದರೂ ತಿರುಗಿ ಬೀಳಬಹುದೆಂಬ ಭೀತಿ ಅವರನ್ನು ಕಾಡುತ್ತಿತ್ತು ಎಂಬುದಕ್ಕೆ ಅವರನ್ನು ಕೊಲ್ಲಿರಿ, ಅವರನ್ನು ದುರ್ಬಲರನ್ನಾಗಿ ಮಾಡಿರಿ, ಅವರಿಗೆ ಹಿಂಸೆಯನ್ನುಂಟು ಮಾಡಿರಿ ಎಂದು ತಮ್ಮ ದೇವತೆಗಳನ್ನು ಅವರು ಪ್ರಾರ್ಥಿಸಿರುವುದೇ ಸಾಕ್ಷಿ. ಆದುದರಿಂದ ಅವರನ್ನು ಆದಷ್ಟು ರೀತಿಯಲ್ಲಿ ಶೋಷಣೆ ಮಾಡುತ್ತಾ ಅವರು ಬಲಿಷ್ಠರಾಗದಂತೆ, ವಿರೋಧ ವ್ಯಕ್ತಪಡಿಸದಂತೆ, ದಮನ ಮಾಡುವುದು ಅವರ ಕರ್ತವ್ಯಗಳಲ್ಲೊಂದಾಗಿತ್ತು. ಆರ್ಯರು ತಮ್ಮನ್ನು ಪ್ರವೃತ್ತಿಗಳಿಗನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂದು ವಿಂಗಡಿಸಿಕೊಂಡು, ದ್ವಿಜರೆಂದು ಕರೆದುಕೊಂಡು, ದಾಸರನ್ನು ಶೂದ್ರರೆಂದು ಕರೆದು ಅವರಿಗೆ ದ್ವಿಜತ್ವವನ್ನು ನಿರಾಕರಿಸಿದರು. ಅಷ್ಟೇ ಅಲ್ಲ, ಬ್ರಾಹ್ಮಣ ಎಲ್ಲರಿಗಿಂತ ಶ್ರೇಷ್ಠ, ಕ್ಷತ್ರಿಯ ಉಳಿದ ಇಬ್ಬರಲ್ಲಿ ಶ್ರೇಷ್ಠ ಮತ್ತು ವೈಶ್ಯ ಕೊನೆಯ ಶ್ರೇಷ್ಠ, ಶೂದ್ರ ಇವರೆಲ್ಲರಿಗೂ ಕನಿಷ್ಠ ಎಂದು ನಿರ್ಧರಿಸಿದರು. ಹೊಲೆಯ, ಮಾದಿಗ ಮುಂತಾದವರು ಈ ವ್ಯವಸ್ಥೆಯಿಂದ ಹೊರಗೆ ಮತ್ತು ಶೂದ್ರರಿಗಿಂತ ಕೆಳಗೆ. ಅವರು ಅಸ್ಪೃಶ್ಯರು. ಆಗಿನ ಕಾಲದಲ್ಲಿ ಬ್ರಾಹ್ಮಣರೇ ಸಂಸ್ಕೃತದಲ್ಲಿ ಬರೆಯುತ್ತಿದ್ದುದರಿಂದ, ತಮ್ಮ ಏಳ್ಗೆಗೆ ಅನುಕೂಲವಾಗುವ ಶೂದ್ರರನ್ನು ದಮನ ಮತ್ತು ಶೋಷಣೆ ಮಾಡುವ ಗ್ರಂಥಗಳನ್ನು ಬರೆದು, ಅವುಗಳು ದೈವ ನಿರ್ಮಿತವೆಂದು ಸುಳ್ಳು ಹೇಳಿದರು. ಅವರು ಶೂದ್ರರನ್ನು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಹೇಗೆ ಹಿಂಡಿದರು ಎಂಬುದನ್ನು ಸಂಕ್ಷಿಪ್ತವಾಗಿ ಹೇಳೋಣ.

ಸಾಮಾಜಿಕ ಶೋಷಣೆ: ಶೂದ್ರರಿಗೆ ತಮ್ಮ ಉದ್ಯೋಗವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಮನುವಿನ ಧರ್ಮಶಾಸ್ತ್ರದ ಪ್ರಕಾರ ಅವರು ಹುಟ್ಟಿರುವುದೇ ಬ್ರಾಹ್ಮಣರ ಸೇವೆ ಮಾಡಲು. “ಬ್ರಾಹ್ಮಣನಿಗೆ ಶೂದ್ರರಿಂದ ಸೇವೆಯನ್ನು ಪಡೆಯುವ ಅಧಿಕಾರವಿದೆ, ಒಬ್ಬ ಬ್ರಾಹ್ಮಣ ಶೂದ್ರನನ್ನು ಕೆಲಸದಿಂದ ಮುಕ್ತಗೊಳಿಸಬಹುದು, ಆದರೆ ಯಾರೂ ಶೂದ್ರರನ್ನು ದಾಸ್ಯದಿಂದ ಮುಕ್ತಗೊಳಿಸಲಾರರು(1). “ಶೂದ್ರನಿಗೆ ಸ್ವಂತ ಆಸ್ತಿ ಮಾಡಿಕೊಳ್ಳುವ ಹಕ್ಕಿಲ್ಲ; ಬ್ರಾಹ್ಮಣನಿಗೆ ತನ್ನ ಶೂದ್ರ ಗುಲಾಮರಿಂದ ತನಗೆ ತೋಚಿದ ವಸ್ತುಗಳನ್ನು ಕಿತ್ತುಕೊಳ್ಳುವ ಅಧಿಕಾರವಿದೆ(2). “ಬ್ರಾಹ್ಮಣರ ಸೇವೆ ಮಾಡುವುದೇ ಶೂದ್ರನಿಗೆ ಶ್ರೇಷ್ಠವಾದ ಉದ್ಯೋಗ, ಬ್ರಾಹ್ಮಣರನ್ನು ಸೇವೆಗೈದ ಶೂದ್ರನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. (ಅದರಲ್ಲೇ).

ಧಾರ್ಮಿಕ ಶೋಷಣೆ: ಶೂದ್ರರಿಗೆ ಮೋಕ್ಷವನ್ನು ನಿರಾಕರಿಸುವ ಬ್ರಾಹ್ಮಣರು ಅವರನ್ನು ಧರ್ಮವಂಚಿತರನ್ನಾಗಿ ಮಾಡಿದರು. ಈ ಕೆಳ ಜಾತಿಯವರು ಮಡಕೆ, ಮೊರ ಮುಂತಾದ ನಿರ್ಜೀವ ವಸ್ತುಗಳನ್ನೂ ಮಾರಿ ಮಸಣಿ ಮುಂತಾದ ಕ್ಷುದ್ರ ದೈವಗಳನ್ನೂ ಪೂಜಿಸಬಹುದಿತ್ತು. ಆದರೆ ಇಡೀ ಜಗತ್ತನ್ನು ಸೃಷ್ಟಿಸುವ, ಪಾಲಿಸುವ ಮೋಕ್ಷದಾಯಕನಾದ ಶಿವ, ವಿಷ್ಣು ಮುಂತಾದ ಮೇಲ್ಮಟ್ಟದ ದೇವರನ್ನು ಪೂಜಿಸುವಂತಿರಲಿಲ್ಲ; ಆ ಕ್ಷುದ್ರ ದೈವಗಳನ್ನು ಅವರು ರೋಗನಿವಾರಣೆಗೋ ಆರ್ಥಿಕ ಲಾಭಕ್ಕೂ, ಹೆಚ್ಚು ಫಸಲಿಗೋ ಪೂಜಿಸುತ್ತಿದ್ದರೇ ವಿನಾ, ಮೋಕ್ಷ ಸ್ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲ; ಅವರೆಲ್ಲರೂ ಮೋಕ್ಷ, ಸ್ವರ್ಗ ಎಂಬ ದೃಷ್ಟಿಯಿಂದ ಸನ್ಯಾಸಿಗಳಾದರೆ ಅವರೂ ತಮ್ಮ ಸಮಾನರಾಗುತ್ತಾರೆಂಬ ಭಯದಿಂದಲೋ, ತಮ್ಮ ಸೇವೆ ಮಾಡುವವರು ಇಲ್ಲವಾಗುತ್ತಾರೆಂಬ ಭಯದಿಂದಲೋ, ಬ್ರಾಹ್ಮಣರು ಈ ಎರಡು ಜಾತಿಗಳಿಗೆ ಮೋಕ್ಷ ನಿರಾಕರಿಸಿದರು. “ಬ್ರಾಹ್ಮಣರು ಶೂದ್ರರಿಗೆ ಹವಿಸ್ಸನ್ನು ಕೊಡಬಾರದು, ಪ್ರಸಾದವನ್ನು ಕೊಡಬಾರದು, ಧರ್ಮವನ್ನಾಗಲೀ ತಪಸ್ಸನ್ನಾಗಲಿ ಹೇಳಿಕೊಡಬಾರದು. ಧರ್ಮವನ್ನು ಬೋಧಿಸಿದ ಬ್ರಾಹ್ಮಣನೂ, ಬೋಧಿಸಲ್ಪಟ್ಟ ಶೂದ್ರನೂ ಅಸಂವೃತ ಎಂಬ ನರಕಕ್��ೆ ಬೀಳುತ್ತಾರೆ(3).
ಇದಕ್ಕೆ ಪೂರಕವಾಗಿ ರಾಮಾಯಣದ ಒಂದು ಪ್ರಸಂಗವನ್ನು ಉಲ್ಲೇಖಿಸಬಹುದು, ಒಂದು ದಿನ ಶ್ರೀರಾಮನ ಬಳಿ ಬ್ರಾಹ್ಮಣನೊಬ್ಬ ಬಂದು ತನ್ನ ಮಗ ಅಕಾಲ ಮರಣಕ್ಕೆ ತುತ್ತಾಗಿರುವುದಾಗಿಯೂ, ಇದಕ್ಕೆ ರಾಮರಾಜ್ಯದಲ್ಲಿ ಎಲ್ಲಿಯೋ ಅಧರ್ಮ ನಡೆದಿರುವುದೇ ಕಾರಣವೆಂದೂ ದೂರುತ್ತಾನೆ. ಆಗ ರಾಮ ತನ್ನ ಪುಷ್ಪಕ ವಿಮಾನವೇರಿ ಅಧರ್ಮ ಎಲ್ಲಿ ನಡೆಯುತ್ತಿದೆ ಎಂದು ಹುಡುಕುತ್ತಿರುವಾಗ ಶೂದ್ರನೊಬ್ಬ ತಪಸ್ಸು ಮಾಡುತ್ತಿರುವುದು ಅವನಿಗೆ ಗೋಚರಿಸಿತು. ಧರ್ಮಪರಿಪಾಲಕನಾದ ಶ್ರೀರಾಮನು ತಕ್ಷಣವೇ ಆ ಶೂದ್ರ ತಪಸ್ವಿಯನ್ನು ಕೊಲ್ಲುತ್ತಾನೆ. ತಕ್ಷಣವೇ ಅಕಾಲ ಮರಣಕ್ಕೆ ತುತ್ತಾಗಿದ್ದ ಬ್ರಾಹ್ಮಣನ ಮಗ ಎದ್ದು ಬರುತ್ತಾನೆ. “ಬ್ರಹ್ಮಸೂತ್ರ”ದ ರಚನಾಕಾರನಾದ ಬಾದರಾಯಣ (1. 3. 34-38) ಶೂದ್ರರಿಗೆ ಉಪನಯನ ಸಂಸ್ಕಾರವಿಲ್ಲದ ಕಾರಣ, ಅವರಿಗೆ ವೇದಾಧ್ಯಯನದ ಅಧಿಕಾರವಿಲ್ಲ, ವೇದಾಧ್ಯಯನವಿಲ್ಲದ್ದರಿಂದ, ಬ್ರಹ್ಮವಿದ್ಯೆ ಇಲ್ಲ, ಬ್ರಹ್ಮವಿದ್ಯೆಯಿಲ್ಲದ್ದರಿಂದ ಮೋಕ್ಷವಿಲ್ಲ ಎಂದು ವಾದಿಸುತ್ತಾನೆ. ಅದಕ್ಕೆ ಭಾಷ್ಯ ಬರೆದ ಶಂಕರ, ರಾಮಾನುಜ, ಮಧ್ವರೂ ಅದನ್ನು ತಮ್ಮ ವಿದ್ವತ್ಪೂರ್ಣ ವಾದಗಳಿಂದ ಸಮರ್ಥಿಸುತ್ತಾರೆ. ಇದೇ ಕಾರಣದಿಂದಾಗಿ ಹೆಂಗಸರಿಗೂ, ಅಸ್ಪೃಶ್ಯರಿಗೂ ಮೋಕ್ಷ ನಿರಾಕರಿಸಲಾಯಿತೆಂದು ಬೇರೆ ಹೇಳಬೇಕಾಗಿಲ್ಲ.
ಅರ್ಚಕರು ಗುಡಿಯಲ್ಲಿ ದೇವರನ್ನು ಪೂಜಿಸುವ ಪದ್ಧತಿ ಭಾರತದ ಎಲ್ಲ ಕಡೆ ವ್ಯಾಪಿಸಿದಾಗ ಶೂದ್ರ ಮತ್ತು ಅಸ್ಪೃಶ್ಯರ ಸ್ಥಿತಿ ಬದಲಾಗಲಿಲ್ಲ. ಏಕೆಂದರೆ, ಆಗಲೂ ಅರ್ಚಕರು ಬ್ರಾಹ್ಮಣರೇ ಆಗಿರಬೇಕು, ಗರ್ಭಗುಡಿಯೊಳಗೆ ಶೂದ್ರರು ಬರಬಾರದು, ಅಸ್ಪೃಶ್ಯರು ಪೌಳಿಯಿಂದ ಹೊರಗಿರಬೇಕೇ ಹೊರತು ಒಳಗೆ ಬರಕೂಡದು ಎಂಬ ನಿಯಮಗಳೂ ಶೂದ್ರ ಮತ್ತು ಅಸ್ಪೃಶ್ಯರಿಗೆ ಘಾತಕವಾಗೇ ಇದ್ದವು.
ಇಲ್ಲಿ ಯಾರಿಗೂ ಗೊತ್ತಾಗದಂತೆ ಎರಡು ಸುಳ್ಳುಗಳನ್ನು ಪ್ರತಿಪಾದಿಸಿದರು: ದೇವರು ಗುಡಿಯಲ್ಲಿ ಮಾತ್ರ ಇದ್ದಾನೆ; ದೇವರನ್ನು ತೃಪ್ತಿಗೊಳಿಸುವ ವಿಧಾನ (ಯಜ್ಞ, ಮಂತ್ರಘೋಷ, ಪೂಜೆ, ಇತ್ಯಾದಿ) ಬ್ರಾಹ್ಮಣರಿಗೆ ಮಾತ್ರ ಗೊತ್ತು – ಇವೇ ಆ ಎರಡು ಸುಳ್ಳುಗಳು. ಕ್ಷತ್ರಿಯ ವೈಶ್ಯರಂತಹ ವಿದ್ಯಾವಂತರೇ ಈ ಮೋಸಕ್ಕೆ ಬಲಿಯಾಗಿದ್ದರೆಂದ ಮೇಲೆ ಅವಿದ್ಯಾವಂತ ಮೂಢ ಶೂದ್ರ ಮತ್ತು ಅಸ್ಪೃಶ್ಯರು ಅದಕ್ಕೆ ಬಲಿಯಾದರೆಂಬುದಲ್ಲೇನು ಆಶ್ಚರ್ಯ? ಆದರೆ ಈ ಕೆಳಜಾತಿಯವರು ಅದು ತಮ್ಮ ಕರ್ಮವೆಂದುಕೊಂಡು ಈ ಕ್ರೌರ್ಯವನ್ನು ಮೌನವಾಗಿ ಅನುಭವಿಸಿದರೇ ಹೊರತು, ಅದನ್ನು ಕೃತಿಯಲ್ಲಾಗಲಿ, ಕೊನೆಗೆ ಮಾತಿನಲ್ಲಾಗಲಿ ವಿರೋಧಿಸುವ ಧೈರ್ಯ ತೋರಿಸಲಿಲ್ಲ.

ತುಳಿತಕ್ಕೊಳಗಾದ ಶೂದ್ರ ಮತ್ತು ಅಸ್ಪೃಶ್ಯರಿಗಿಂತ ಹೆಚ್ಚು ನೋವಾದುದು ಇದನ್ನು ಗಮನಿಸಿದ ಬಸವೇಶ್ವರರಿಗೆ. ಅವರೂ ಅವರ ಸಹಚರರೂ ಈ ಮೋಸವನ್ನು ಕೊನೆಗಾಣಿಸಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮವೇ ಶರಣ ಚಳುವಳಿ ಎಂಬ ಹೆಸರು ಪಡೆಯಿತು. ಈ ಚಳುವಳಿಯ ಕೆಲವು ಮುಖ್ಯ ಅಂಶಗಳಿವು.
1)ಶೂದ್ರ-ಅಸ್ಪೃಶ್ಯರನ್ನು ತುಳಿಯುವ ಸಾಹಿತ್ಯವನ್ನು ಬರೆದವರು ದೇವರಲ್ಲ, ಬ್ರಾಹ್ಮಣರೇ ಎಂಬುದು ಸ್ವತಃ ಬ್ರಾಹ್ಮಣರಾಗಿದ್ದ ಬಸವೇಶ್ವರರಿಗೆ ಗೊತ್ತಿತ್ತು. ಆದುದರಿಂದ ಈ ತುಳಿಯಲ್ಪಟ್ಟ ಜನರಿಗೆ ನ್ಯಾಯ ಒದಗಿಸಬೇಕೆಂದರೆ ಮೊದಲು ಅದರ ಜಾಗದಲ್ಲಿ ಹೊಸ ಸಾಹಿತ್ಯವ ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಿದರು. ವೇದಗಳನ್ನು, ಶಾಸ್ತ್ರಪುರಾಣಗಳನ್ನು ವಿರೋಧಿಸುವ ಉದ್ದೇಶದಿಂದ ಅವರೂ, ಅವರ ಸಂಗಡಿಗರೂ ವಚನಗಳನ್ನು ಬರೆದರು. ಇದರಲ್ಲಿ ಪಾಲ್ಗೊಂಡವರು ಬಸವೇಶ್ವರ, ಚೆನ್ನಬಸವಣ್ಣ ಮುಂತಾದ ಮೇಲ್ವರ್ಗದವರಷ್ಟೇ ಅಲ್ಲ, ಕುಂಬಾರರು, ಗಾಣಿಗರು, ನೇಕಾರರು, ಚಮ್ಮಾರರು, ಅಗಸರು ಮುಂತಾದ ಕೆಳವರ್ಗಕ್ಕೆ ಸೇರಿದವರೂ ಇದ್ದರು; ಪುರುಷರಷ್ಟೇ ಅಲ್ಲ, ಸ್ತ್ರೀಯರೂ ಇದ್ದರು. ಒಂದೇ ಉದ್ದೇಶದಿಂದ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಒಮ್ಮೆಗೇ ಹೊಸ ಸಾಹಿತ್ಯ ರಚನೆಯಲ್ಲಿ ತೊಡಗಿದುದು ಪ್ರಪಂಚದ ಚರಿತ್ರೆಯಲ್ಲಿ ಬೇರೆಲ್ಲೂ ಕಾಣುವುದಿಲ್ಲ. ಕೆಲವರು ವೇದಕ್ಕೆ ಒರೆಯ ಕಟ್ಟುವೆ, ವೇದಪುರಾಣಗಳ ಅಭ್ಯಾಸವೆಂದರೆ ತೌಡು ಕುಟ್ಟುವ ಕೆಲಸ ಎಂದು ನಯವಾಗಿ ಖಂಡಿಸಿದರೆ, ಸಿದ್ಧರಾಮ ವೇದಪುರಾಣ ಇತ್ಯಾದಿಗಳನ್ನು ಎಸೆಯಬೇಕು, ಸುಡಬೇಕು ಎನ್ನುತ್ತಾನೆ.
2) ವೇದಶಾಸ್ತ್ರ ಪುರಾಣಗಳನ್ನು ಕೈಬಿಟ್ಟು, ಅವುಗಳ ಬದಲು, ಹೊಸಧರ್ಮದ ಮತ್ತು ಹೊಸ ಸಮಾಜದ ಸಿದ್ಧಾಂತಗಳನ್ನೊಳಗೊಂಡ ಸಾಹಿತ್ಯ ರಚಿಸುವುದು ಅಗತ್ಯವಾಯಿತು. ಆಗ ಬಸವೇಶ್ವರರೂ ಅವರ ಅನುಯಾಯಿಗಳೂ ಈ ಹೊಸ ಸಾಹಿತ್ಯದ ರಚನೆಯಲ್ಲಿ – ವಚನ ರಚನೆಯಲ್ಲಿ – ತೊಡಗಿದರು. ಜಾತಿಭೇದವಿಲ್ಲ, ಎಲ್ಲರೂ ಸಮಾನರೆಂದು ಸಾರುವ, ಎಲ್ಲರೂ ಕಾಯಕ ಮಾಡಬೇಕೆನ್ನುವ, ಕಾಯಕಗಳೆಲ್ಲವೂ ಸಮಾನ ಎನ್ನುವ ವಚನಗಳನ್ನು ಬರೆದರು; ಹೊಸಧರ್ಮವನ್ನು ಎತ್ತಿ ಹಿಡಿಯುವ, ಎಲ್ಲರಿಗೂ ಧಾರ್ಮಿಕ ಸಮಾನತೆ ನೀಡಬೇಕೆನ್ನುವ ವಚನಗಳ ರಚನೆಯಾಗಬೇಕು, ಎಂಬ ಆಶಯದೊಂದಿಗೆ ವಚನಗಳನ್ನು ಬರೆದರು. ಈಗ ನಮಗೆ ಲಭ್ಯವಿರುವ ಸುಮಾರು 21 ಸಾವಿರ ವಚನಗಳಲ್ಲಿ ಸುಮಾರು 15 ಸಾವಿರ ವಚನಗಳನ್ನು 12ನೇ ಶತಮಾನದಲ್ಲಿಯೇ ರಚಿಸಲಾಯಿತು ಎಂದರೆ, ಬಸವೇಶ್ವರರ ಅನುಯಾಯಿಗಳಲ್ಲಿ ಎಷ್ಟು ಉತ್ಸಾಹ ಇರಬೇಕು, ಅವರನ್ನು ಹುರಿದುಂಬಿಸಿದ ಬಸವೇಶ್ವರರ ಚೈತನ್ಯ ಅದೆಷ್ಟು ಅದಮ್ಯವಾಗಿರಬೇಕು, ಅವರನ್ನು ಆಕರ್ಷಿಸಿದ ಅವರ ವ್ಯಕ್ತಿತ್ವ ಅದೆಷ್ಟು ಘನವಾಗಿರಬೇಕು! ವಾಸ್ತವವಾಗಿ, ಸಂಸ್ಕೃತದ ಬದಲು ಕನ್ನಡವನ್ನೇ ಆರಿಸಿಕೊಂಡುದುದೂ ಒಂದು ಕ್ರಾಂತಿಯೇ.
3) ದೈವ : ಬಸವಾದಿ ಶರಣರು ಇಂದ್ರ, ಅಗ್ನಿ, ಯಮ ಮುಂತಾದ ಹಲವಾರು ವೈದಿಕ ದೈವಗಳನ್ನು ಬಿಟ್ಟು, ಲಿಂಗ ಅಥವಾ ಶಿವನನ್ನು ಮಾತ್ರ ಪೂಜಿಸಬೇಕೆಂದು ವಿಧಿಸಿದರು. ಧಾರ್ಮಿಕ ಜನರನ್ನು ಒಗ್ಗೂಡಿಸಲು ಏಕದೇವೋಪಾಸನೆ ಬಹಳ ಅಗತ್ಯ. ಬೇರೆಬೇರೆ ವಚನಕಾರರು ತಮ್ಮ ವಚನಗಳಲ್ಲಿ ಕೂಡಲಸಂಗಮದೇವ, ಗುಹೇಶ್ವರ, ಚೆನ್ನಮಲ್ಲಿಕಾರ್ಜುನ, ಸೋಮೇಶ್ವರ ಮುಂತಾದ ಅಂಕಿತಗಳನ್ನು ಬಳಿಸಿದ್ದರೂ ಅವರೆಲ್ಲರಿಗೂ ಸ್ಪಷ್ಟವಾಗಿ ಗೊತ್ತಿತ್ತು, ಆ ಅಂಕಿತಗಳು ಲಿಂಗ ಅಥವಾ ಶಿವನಿಗೆ ಮಾತ್ರ ಅನ್ವಯವಾಗುತ್ತದೆ ಎಂದು. ಅವರ ಪ್ರಕಾರ ಈ ಲಿಂಗ ಸ್ಥಾವರಲಿಂಗವೂ ಅಲ್ಲ, ಇಷ್ಟಲಿಂಗವೂ ಅಲ್ಲ, ಪರಾತ್ಪರ ವಸ್ತುವಾದ ಶಿವ. ಆದರೆ ಈ ಶಿವ, ಪಾರ್ವತಿ, ಗಣಪತಿ, ಕುಮಾರ, ಪ್ರಮಥರು ಮುಂತಾದವರೊಂದಿಗೆ ಸದಾ ಕೈಲಾಸದಲ್ಲಿದ್ದು ಯಾವಾಗಲಾದರೊಮ್ಮೆ ಮರ್ತ್ಯಲೋಕಕ್ಕೆ ಭೇಟಿಕೊಡುವ ಪೌರಾಣಿಕ ಶಿವನಲ್ಲ. ವಚನಕಾರರ ಶಿವ ನಿರಾಕಾರ ಶಿವ; ಶಿವ ಎಂದರೆ ಶಕ್ತಿಯೊಡಗೂಡಿದ ಅಪರಿಮಿತ ಚಿತ್ತು; ತನ್ನ ಶಕ್ತಿಯನ್ನು ಜಗತ್ತಾಗಿ ಮಾರ್ಪಾಡಿಸುವ, ಅದನ್ನು ರಕ್ಷಿಸುವ, ಅದನ್ನು ಬೇಕೆಂದಾಗ ಮತ್ತೆ ಹಿಂದಕ್ಕೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಇರುವ ಶಿವ; ತನ್ನ ಸದ್ಭಕ್ತರನ್ನು ಅನುಗ್ರಹಿಸುವ, ದುಷ್ಟರನ್ನು ಶಿಕ್ಷಿಸುವ ಶಿವ; ಲಿಂಗ ಅಥವಾ ಶಿವ ಸರ್ವಾಂತರ್ಯಾಮಿ; ಜಗತ್ತಿನಲ್ಲಿಯೂ ಅಲ್ಲದೆ, ಭಕ್ತರಲ್ಲಿಯೂ ಆಚಾರಲಿಂಗ, ಗುರುಲಿಂಗ ಇತ್ಯಾದಿಯಾಗಿ ಆರು ಲಿಂಗಗಳ ರೂಪದಲ್ಲಿ ನೆಲೆಸಿದ್ದಾನೆ. ಕೈಲಾಸದ ಶಿವ ಭಕ್ತರಿಂದ ಅನ್ಯವಾದರೆ, ವಚನಕಾರರ ಶಿವ ಭಕ್ತನೇ (ಅಂಗ) ಆಗಿದ್ದಾನೆ, ಬೇರೆಯವರು ಅರ್ಚಿಸುವಾಗ ದೂರ ನಿಂತು ನೋಡುವ ಭಕ್ತನಿಗೂ ತಾನೇ ಶಿವ ಎಂದು ತಿಳಿದು ತನ್ನ ಲಿಂಗವನ್ನು ತಾನೆ ಪೂಜಿಸುವ ಲಿಂಗಾಯತ ಭಕ್ತನಿಗೂ ಇರುವ ವ್ಯತ್ಯಾಸ ಇಲ್ಲಿ ಸ್ಪಷ್ಟ.
4) ವೈದಿಕ ಧರ್ಮದ ಪ್ರಕಾರ, ಒಬ್ಬ ತಾನು ಹುಟ್ಟಿದ ಜಾತಿ ಅಥವ ಕಸಬನ್ನು ತ್ಯಜಿಸಬಾರದು. ತನ್ನ ಜಾತಿಯನ್ನು ಬಿಟ್ಟು ಅನ್ಯ ಜಾತಿಯನ್ನು ಸ್ವೀಕರಿಸಿದೆ, ಅಂದರೆ ಸ್ವಧರ್ಮ (ಸ್ವಂತ ಕರ್ತವ್ಯ ಅಥವಾ ಉದ್ಯೋಗ)ವನ್ನು ಬಿಟ್ಟು ಅನ್ಯರ ಉದ್ಯೋಗವನ್ನು ಹಿಡಿಯುವುದು ಮಹಾಪಾಪ. ಹೀಗೆ ಬರೆಯುವಲ್ಲಿ ಬ್ರಾಹ್ಮಣೇತರರು ವೇದಾಧ್ಯಯನ, ಯಜ್ಞಯಾಗಾದಿಗಳನ್ನು ಮಾಡಬಾರದು ಎಂಬ ದೂರಾಲೋಚನೆ ಇದೆ. ಬ್ರಾಹ್ಮಣ ಅರ್ಚಕರು ಮಾತ್ರ ಗುಡಿಯಲ್ಲಿ ಪೂಜಿಸಬೇಕು ಇತರರಿಗೆ ಆ ಅಧಿಕಾರವಿಲ್ಲ ಎಂಬುದು ಇದರ ನಿಹಿತಾರ್ಥ. ಆದರೆ ಬಸವೇಶ್ವರರು ಎಲ್ಲ ಜಾತಿಯವರಿಗೆ, ಎಲ್ಲ ಧರ್ಮದವರಿಗೆ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಲಿಂಗ ಪ್ರದಾನ ಮಾಡುವ ಮೂಲಕ ಈ ವೈದಿಕ ಸಂಪ್ರದಾಯವನ್ನು ಮುರಿದರು. ಈ ಕ್ರಾಂತಿಕಾರಕ ಇಷ್ಟಲಿಂಗ ಪ್ರದಾನ ಅನೇಕ ಒಳ್ಳೆಯ ಫಲಗಳನ್ನು ನೀಡಿತು. 1) ಇಷ್ಟಲಿಂಗವು ಪ್ರತಿಯೊಬ್ಬನಲ್ಲಿರುವ ಚೈತನ್ಯದ ಕುರುಹಾಗಿರುವುದರಿಂದ, ಪ್ರತಿಯೊಬ್ಬನೂ ಒಂದು ದೇಗುಲವೇ. ಆದ್ದರಿಂದ ಇಷ್ಟಲಿಂಗಧಾರಕರೆಲ್ಲ ದೇಗುಲದಂತೆ ಶ್ರೇಷ್ಠ, ಪವಿತ್ರ. ವೈದಿಕ ನಂಬಿಕೆಗೆ ವಿರುದ್ಧವಾಗಿ, ಬಸವೇಶ್ವರರು ಲಿಂಗಧಾರಿ ಮಾದಿಗರು ಲಿಂಗವಿಲ್ಲದ ಬ್ರಾಹ್ಮಣನಿಗಿಂತ ಶ್ರೇಷ್ಠ ಎನ್ನುವಷ್ಟು ದೂರ ಹೋದರು. ಆದರೆ ಲಿಂಗಧಾರಿಗಳೆಲ್ಲ ಸಮಾನರು; ಅವರಲ್ಲಿ ಜಾತಿತಾರತಮ್ಯವಿಲ್ಲ, ಕಾಯಕ ತಾರತಮ್ಯವಿಲ್ಲ. 2) ವಿವಿಧ ರೀತಿಯ ಯಜ್ಞ-ಯಾಗಾದಿಗಳ ಮೂಲಕ, ಸಂಸ್ಕೃತ ಮಂತ್ರಗಳನ್ನು ಹೇಳುತ್ತಾ ವಿಸ್ತಾರವಾದ ಮತ್ತು ಸಂಕೀರ್ಣವಾದ ಪೂಜೆಗಳ ಮೂಲಕ, ದೇವದೇವತೆಗಳನ್ನು ಒಲಿಸುವ ತಮಗೆ ಮಾತ್ರ ವಿಧಾನ ಗೊತ್ತು ಎಂಬ ಬ್ರಾಹ್ಮಣರ ವಿರುದ್ಧವಾಗಿ ಬಸವೇಶ್ವರರು ಎಲ್ಲರಿಗೂ ತಮ್ಮ ತಮ್ಮ ಇಷ್ಟಲಿಂಗವನ್ನು ಪೂಜೆ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟರು. ಯಜ್ಞ ಅಥವಾ ಪೂಜೆ ಮಾಡುವವನೇ ಬೇರೆ ಅದನ್ನು ನೋಡುವ ಭಕ್ತನೇ ಬೇರೆ. ಇದನ್ನು ಖಂಡಿಸುತ್ತಾ ಬಸವೇಶ್ವರರು ಹಸಿದವನು ತನ್ನ ಪರವಾಗಿ ಬೇರೆಯವರಿಗೆ ಉಣ್ಣಲು ಹೇಳುವುದು ಹಾಸ್ಯಾಸ್ಪದವಾಗಿರುವಂತೆ, ಭಕ್ತನು ತನ್ನ ಪರವಾಗಿ ಬೇರೆಯವರಿಗೆ (ಅರ್ಚಕರಿಗೆ) ಪೂಜಿಸಲು ಹೇಳುವುದೂ ಹಾಸ್ಯಾಸ್ಪದ ಎಂದರು. ಇಷ್ಟಲಿಂಗ ಪೂಜೆ ಈ ಹಾಸ್ಯಾಸ್ಪದ ವೈದಿಕ ಪದ್ಧತಿಗೆ ವಿರುದ್ಧ; ಅಷ್ಟೇ ಅಲ್ಲ, ಅದೇ ಶ್ರೇಷ್ಠ ಏಕೆಂದರೆ, ನಾನೇ ಪೂಜೆ ಮಾಡುವಾಗ ಇರುವಷ್ಟು ಭಕ್ತಿಯ ಗಾಢತೆ ಬೇರೆಯವರು ಮಾಡುವ ಪೂಜೆಯನ್ನು ನೋಡುವಾಗ ಇರುವದಿಲ್ಲ. 3) ಅರ್ಚಕರು ಯಾವಾಗಲೂ ಪೂಜೆ ಮಾಡದೆ ಕೇವಲ ನಿಯಮಿತ ವೇಳೆಯಲ್ಲಿ ಪೂಜಿಸುತ್ತಾರೆ. ಭಕ್ತರು ತಮಗೆ ಬೇಕೆಂದಾಗಲೆಲ್ಲ ಗುಡಿಗೆ ಹೋಗದೆ, ಅರ್ಚಕ ಪೂಜಿಸುವಾಗ ಮಾತ್ರ ಹೋಗಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ ಬಸವೇಶ್ವರರು ಇಷ್ಟಲಿಂಗವನ್ನು ನಮಗೆ ಬೇಕೆನಿಸಿದಾಗ, ನಮಗೆ ಅನುಕೂಲವಾದ ಸ್ಥಳದಲ್ಲಿ ಪೂಜಿಸುವ ಅವಕಾಶವನ್ನು ಕಲ್ಪಿಸಿದರು. ಇದರಿಂದಾಗಿ, ರೈತರಿಗೂ ಕುಂಬಾರ, ನೇಕಾರ ಮುಂತಾದ ಕಸಬುದಾರರಿಗೂ ಬಹಳ ಸಮಯ ಉಳಿತಾಯವಾಗುತ್ತದೆ. ಇದು ಗುಡಿಗೆ ಹೋಗಬಾರದು ಎಂಬ ನಿಷೇಧ ಅಥವಾ ಪ್ರತಿರೋಧ ಅಷ್ಟೇ ಅಲ್ಲ; ಇಲ್ಲಿ ಒಂದು ಗಮನಾರ್ಹ ತತ್ವ ಅಡಗಿದೆ. ಅದೇನೆಂದರೆ, ಪ್ರತಿಯೊಬ್ಬನೂ ತಾನೇ ದೇಗುಲವಾಗಿರುವಾಗ ಕಲ್ಲಿನ ದೇಗುಲಕ್ಕೆ ಹೋಗುವುದು ಅನಾವಶ್ಯಕ. ಇದೇ ತತ್ವದ ಆಧಾರದ ಮೇಲೆ ಶರಣರು ತೀರ್ಥಯಾತ್ರೆ ಹೋಗುವುದನ್ನು ಖಂಡಿಸಿದರು. 4) ನಾವು ದೇಗುಲಗಳಿಗೆ ಭೇಟಿ ಕೊಡುವುದು ಭಕ್ತಿಯನ್ನು ತೋರಿಸಲೂ ಹೌದು, ಪ್ರಸಾದವನ್ನು ತಡೆಯಲೂ ಹೌದು. ಗುಡಿಗಳಲ್ಲಿ ಸಾಮಾನ್ಯವಾಗಿ ಹಣ್ಣು, ಕಾಯಿ, ಭಕ್ಷ್ಯಭೋಜ್ಯಗಳನ್ನೇ ಅರ್ಪಿಸಿ ಪ್ರಸಾದವನ್ನಾಗಿ ಮಾಡಿಕೊಳ್ಳುತ್ತಾರೆ. ಆ ಪ್ರಸಾದವನ್ನು ಅರ್ಚಕ ಮಾತ್ರ ಕೊಡಬೇಕು, ಇದಕ್ಕೆ ವಿರುದ್ಧವಾಗಿ ಬಸವೇಶ್ವರರು, ಭಕ್ಷಭೋಜ್ಯಗಳನ್ನಷ್ಟೇ ಅಲ್ಲ, ದಿನನಿತ್ಯದ ಆಹಾರವೂ ಪ್ರಸಾದವಾಗಬಹುದು, ಹಾಗೂ ಗುರು ಅಥವಾ ಜಂಗಮರಿಲ್ಲದಾಗ ಭಕ್ತ ತಾನೇ ಪ್ರಸಾದ ಮಾಡಿಕೊಳ್ಳಬಹುದು ಎಂದರು. ಅಲ್ಲದೆ, ಲಿಂಗಾಯತ ಧರ್ಮದ ವೈಶಿಷ್ಟ್ಯವೆಂದರೆ, ಆಹಾರ ಪಾನೀಯಗಳಷ್ಟೇ ಅಲ್ಲ, ಗಾಳಿ, ನೀರು, ವಾಸನೆ, ರುಚಿ, ಶಬ್ದಗಳೂ ಶಿವನ ಪ್ರಸಾದ; ನಮ್ಮ ಇಂದ್ರಿಯಗಳೂ ಬುದ್ಧಿ, ಮನಸ್ಸು ಮುಂತಾದ ಅಂತಃಕರಣಗಳೂ, ಕಮೇಂದ್ರಿಯಗಳೂ ಪ್ರಸಾದವೇ; ಹಾಗೆಂದು ತಿಳಿದೇ ಸದ್ಭಕ್ತನು ಅವನ್ನು ಬಳಸಬೇಕು, ಅನುಭವಿಸಬೇಕು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಲಿಂಗಾಯತರಿಗೆ ಪ್ರಸಾದವಲ್ಲದ ವಸ್ತು ಪ್ರಪಂಚದಲ್ಲಿ ಇಲ್ಲವೇ ಇಲ್ಲ. 5) ಪ್ರತಿಯೊಬ್ಬನು/ಳೂ ಇಷ್ಟಲಿಂಗಾನುಸಂಧಾನದ ಮೂಲಕ ಮೋಕ್ಷವನ್ನು ಸಂಪಾದಿಸಿಕೊಳ್ಳಬಹುದು. ಇದಕ್ಕೆ ಶೂದ್ರ-ಬ್ರಾಹ್ಮಣ ಎಂಬ ಭೇದ, ಗಂಡಸು-ಹೆಂಗಸು ಎಂಬ ಭೇದ ಇಲ್ಲ. ಇಷ್ಟಲಿಂಗವು ಮೋಕ್ಷದ ಮೊದಲ ಸೋಪಾನವಾದುದರಿಂದ ಅದು ಎಲ್ಲ ಲಿಂಗಾಯತರಿಗೂ ಆವಶ್ಯಕ.
5) ಅರ್ಚನಾ ವಿಧಾನ: ಬಸವಣ್ಣ ಬೋಧಿಸಿದ ಅರ್ಚನಾ ವಿಧಾನವೂ ಅವೈದಿಕವೇ. ವೈದಿಕ ಧರ್ಮದಲ್ಲಿ ದೇವದೇವತೆಗಳಿಗೆ ಯಜ್ಞಯಾಗಾದಿಗಳ ಮೂಲಕ ಅಗ್ನಿಕುಂಡದಲ್ಲಿ ಹಾಲು, ಮೊಸರು, ತುಪ್ಪ ಮುಂತಾದವುಗಳನ್ನು ಅರ್ಪಿಸುವುದು, ಕೆಲವು ವೇಳೆ ಪ್ರಾಣಿಬಲಿ ಕೊಡುವುದು, ಅರ್ಚನೆ ಎನಿಸಿಕೊಳ್ಳುತ್ತಿತ್ತು. ಬಸವೇಶ್ವರರೂ ಅವರ ಸಹಚರರೂ ಬಹುದೇವತಾರಾಧನೆಯನ್ನೂ ಅಲ್ಲದೆ, ಪ್ರಾಣಿಬಲಿಯನ್ನೂ ಖಂಡಿಸಿದರು. ಒಂದು ಪ್ರಾಣಿಯನ್ನು ಕೊಂದು ಸ್ವರ್ಗಕ್ಕೆ ಹೋಗಬೇಕೆನ್ನುವುದು ಅಧರ್ಮವೇ ಹೊರತು, ಧರ್ಮವಲ್ಲ. ಹಾಲು, ತುಪ್ಪ ಇತ್ಯಾದಿ ವಸ್ತುಗಳನ್ನು ಬೆಂಕಿಯಲ್ಲಿ ಸುರಿಯುವುದು ಸಹ ಧರ್ಮವಲ್ಲ, ಅದರ ಬದಲು ಅವುಗಳನ್ನು ದಯೆಯಿಂದ ದಾಸೋಹ ಮಾಡುವುದು ಧರ್ಮವೆನಿಸಿಕೊಳ್ಳುತ್ತದೆ. ಬಸವೇಶ್ವರರ ಅಭಿಪ್ರಾಯದಲ್ಲಿ ಭಕ್ತಿ ಎಂದರೆ ಕೇವಲ ಇಷ್ಟಲಿಂಗ ಪೂಜೆ, ವಿಭೂತಿ ಧಾರಣೆ, ಮಂತ್ರಪಠನೆ ಅಷ್ಟೇ ಅಲ್ಲ; ಅವು ಬೇಕು, ಆದರೆ ಅವು ಸಾಲದು. ಅದರ ಜೊತೆಗೆ ಜಂಗಮ ದಾಸೋಹ ಮಾಡಬೇಕು. ದಯವೇ ಧರ್ಮದ ಮೂಲವಯ್ಯಾ ಎನ್ನುವಾಗ ದಯೆಯುಳ್ಳವನು ದಾಸೋಹ ಮಾಡೇ ಮಾಡುತ್ತಾನೆ ಎಂಬ ಧ್ವನಿಯಿದೆ.
6) ಸನ್ಯಾಸ ವಿರೋಧ : ಸಾಂಪ್ರದಾಯಿಕ ಹಿ��ದೂ (ವೈದಿಕ) ಧರ್ಮದಲ್ಲಿ ಸನ್ಯಾಸಕ್ಕೆ ಬಹಳ ಮಹತ್ವವಿದೆ. ಮೋಕ್ಷಾರ್ಥಿಯು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಮಾಜಿಕ ಮತ್ತು ಕೌಟುಂಬಿಕ ಹೊಣೆಗಳನ್ನೂ ಎಲ್ಲ ಆಸೆಮೋಹಗಳನ್ನೂ ತ್ಯಜಿಸುವುದೇ ಸನ್ಯಾಸ. ಬಸವೇಶ್ವರರು ಇದರಲ್ಲಿ ದೋಷಗಳನ್ನು ಕಂಡರು, ಅವರು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಕಾಡಿಗೆ ಹೋಗಲೂ ಇಲ್ಲ, ಕೌಟುಂಬಿಕ ಜೀವನ ತ್ಯಜಿಸಲೂ ಇಲ್ಲ, ಅವರಂತೆ ಅವರ ಸಂಗಡಿಗರೆಲ್ಲರೂ ಮದುವೆಯಾದವರು, ಕುಟುಂಬಸ್ಥರೇ ಆಗಿದ್ದರು. ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸಾದಂತೆ, ಸಂಸಾರದ ಬಗೆಗಿನ ಅತಿ ಆಸೆಗಳನ್ನು ಕಳೆದು ಸಂಸಾರದಲ್ಲೇ ಇರುವುದೂ ಲೇಸೇ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಬಾರದು ಹೇಗೋ ಹಾಗೇ ಸಂಸಾರದಲ್ಲಿದ್ದೇವೆಂದ ಮೇಲೆ ಅದಕ್ಕೆ ಅಂಜಿ ಕಾಡಿಗೆ ಏಕೆ ಹೋಗಬೇಕೆಂಬುದು ಶರಣರ ಪ್ರಶ್ನೆ. “ಹೆಣ್ಣನ್ನು ತ್ಯಜಿಸಿ ಶಿವನ ಒಲಿಸಬೇಕೆಂಬರು, ಏಕೆ, ಶಿವನಿಗೂ ಹೆಣ್ಣಿಗೂ ವಿರೋಧವೆ?” ಎಂದು ಕೇಳುತ್ತಾಳೆ ಒಬ್ಬ ಶರಣೆ. ಮತ್ತೊಬ್ಬ ಶರಣ ಹೇಳುವಂತೆ ಹೆಣ್ಣು ಬೇಕೆಂದರೆ ಮದುವೆಯಾಗು, ಸುಖವಾಗಿರು; ಮನೆ ಬೇಕೆಂದರೆ, ನೆಲ ಖರೀದಿಸು, ಮನೆ ಕಟ್ಟು ಸುಖವಾಗಿರು ಎನ್ನುತ್ತಾನೆ. ಆದರೆ ಇಲ್ಲಿ ನಾವು ಅತಿ ಆಸೆಯನ್ನು ತೋರಿಸಬಾರದು. ನಾವಿಚ್ಛೆ ಪಡದೆಯೇ ನಮ್ಮ ಬಳಿ ಬಂದುದನ್ನು ಪ್ರಸಾದವೆಂದು ಸ್ವೀಕರಿಸಬೇಕು, ಬಾರದುದಕ್ಕೆ ಆಸೆ ಪಡಬಾರದು. ಇದು ಸನ್ಯಾಸ ಮತ್ತು ಚಾರ್ವಾಕತನಗಳ ನಡುವಿನ ನಿಜವಾದ ಮಧ್ಯಮ ಮಾರ್ಗ.
7) ಕಾಯಕ: ದ್ವಿಜರು ವ್ಯವಸಾಯ, ಕುಂಬಾರಿಕೆ, ನೇಕಾರಿಕೆ ಮುಂತಾದ ಕೆಲಸಗಳನ್ನು ತಾವು ಮಾಡದೆ ಶೂದ್ರರಿಂದ ಮಾಡಿಸುತ್ತಿದ್ದರು. ಆದರೆ ಬಸವೇಶ್ವರರು ಎಲ್ಲರೂ ಕಾಯಕ ಮಾಡಬೇಕು ಎಂದರು. ಇದು ಬೇಡುವುದನ್ನೇ ಒಂದು ಕಾಯಕ ಮಾಡಿಕೊಂಡಿದ್ದ ಸನ್ಯಾಸಿಗಳಿಗೂ ಅನ್ವಯಿಸಿತು. ಅವರು ‘ಬೇಡಲಾಗದು ಜಂಗಮ’ ಎಂದರಷ್ಟೇ ಅಲ್ಲ, ಎಲ್ಲರೂ ಹೆಚ್ಚು ದುಡಿಯಬೇಕು, ಮತ್ತು ಹೆಚ್ಚಿನದನ್ನು ದುಡಿಯಲಾರದವರಿಗೆ ಕೊಡಬೇಕು, ಕೊಡಬೇಕಾದರೆ ಅಹಂಕಾರ, ಸ್ವಾರ್ಥ, ಕೀರ್ತಿವಾರ್ತೆಗಳು ಇರದೆ, ದಾಸೋಹಂ (ನಾನು ದಾಸ) ಎಂಬ ಭಾವ ಮಾತ್ರ ಇರಬೇಕು, ಎಂದರು.
8) ಧರ್ಮಾಂತರ: ವೇದ ಮತ್ತು ಆಗಮಗಳ ಪ್ರಕಾರ ಯಾವೊಬ್ಬ ವ್ಯಕ್ತಿಯೂ ತನ್ನ ಜಾತಿಯನ್ನೂ ಜಾತಿಯಿಂದ ವೃತ್ತಿ(ಧರ್ಮ)ಯನ್ನೂ ಬದಲಾಯಿಸಬಾರದು, ಇದಕ್ಕೆ ವಿರುದ್ಧವಾಗಿ ಬಸವೇಶ್ವರರು ತಮ್ಮ ಧರ್ಮಕ್ಕೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಜೈನ ಮುಂತಾದವರನ್ನೆಲ್ಲಾ ಸೇರಿಸಿಕೊಂಡರು. ಪ್ರಾಯಶ: ಬುದ್ಧನ ನಂತರ ಧರ್ಮಾಂತರಕ್ಕೆ ಚಾಲನೆ ಸಿಕ್ಕಿದುದು ಬಸವೇಶ್ವರರಿಂದಲೇ. ಇದರಿಂದ ಹೆಚ್ಚು ಲಾಭವಾದುದು ಕೆಳ ಜಾತಿಯವರಿಗೆ. ಕೀಳು ಜಾತಿ, ಶೂದ್ರ ಮುಂತಾಗಿ ಹಣೆಪಟ್ಟಿ ಕಟ್ಟಿಕೊಂಡಿದ್ದವರಿಗೆ ‘ಲಿಂಗಾಯತ’ ಎಂಬ ಹೊಸ ಹೆಸರು ಸಿಕ್ಕಿದ್ದರಿಂದ ಅವರು ಸಾಮಾಜಿಕವಾಗಿ ಮೇಲೇರಿದರು, ಧಾರ್ಮಿಕವಾಗಿ ಇತರರಿಗೆ ಸಮಾನರಾದರು.
ಈ ಮೇಲಿನ ಪರಿಶೀಲನೆಯಿಂದ, ಲಿಂಗಾಯತ ಧರ್ಮವು ಹಿಂದೂ ಧರ್ಮದ (ವೈದಿಕ ಧರ್ಮದ) ಶಾಖೆಯಲ್ಲ, ಅದು ಬೌದ್ಧ, ಜೈನ ಧರ್ಮಗಳಂತೆ ಅವೈದಿಕ, ಸ್ವತಂತ್ರ ಧರ್ಮ ಎಂಬುದು ಸ್ಪಷ್ಟವಾಗುತ್ತದೆ.

Previous post ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
Next post ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ

Related Posts

ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
Share:
Articles

ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ

March 9, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಹನ್ನೆರಡನೆಯ ಶತಮಾನ ವಿಶ್ವದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ದಾಖಲಿಸುವಂತಹುದು. ಇದಕ್ಕೆ ಕಾರಣರಾದವರು ಬಸವಾದಿ ಶರಣರು. ಅವರ ಪೂರ್ವದ ಮತ್ತು ಸಮಕಾಲೀನ ಸಮಾಜ ಇಂದಿಗಿಂತ...
ಶರಣರು ಕಂಡ ಸಹಜಧರ್ಮ
Share:
Articles

ಶರಣರು ಕಂಡ ಸಹಜಧರ್ಮ

April 29, 2018 ಡಾ. ಶಶಿಕಾಂತ ಪಟ್ಟಣ
‘ಧರ್ಮ’ ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು ‘ಧಾರಣಾತ್ ಧರ್ಮಃ’ -ಅಂದರೆ ಯಾವುದನ್ನು ಧರಿಸಲು, ಆದರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ...

Comments 1

  1. S R BIRADAR LECTURER PHYSICS GOVT PU COLLEGE FOR GIRLS VIJAYAPURA 586101
    Aug 21, 2024 Reply

    ಇಲ್ಲಿ ಪ್ರಕಟಿಸಲಾಗುವ ಎಲ್ಲ ಲೇಖನಗಳು ಮೌಲಿಕವಾದ ಲೇಖನಗಳು. ಇಂತಹ ಲೇಖನಗಳು ಇನ್ನಷ್ಟು ಬರಲಿ ಎಂದು ಆಶಿಸುತ್ತೇನೆ

Leave a Reply to S R BIRADAR LECTURER PHYSICS GOVT PU COLLEGE FOR GIRLS VIJAYAPURA 586101 Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
Copyright © 2025 Bayalu