Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗಾಚಾರ
Share:
Articles May 6, 2021 ಡಾ. ಪಂಚಾಕ್ಷರಿ ಹಳೇಬೀಡು

ಲಿಂಗಾಚಾರ

ಈ ಹಿಂದಿನ ಎರಡು ಸಂಚಿಕೆಗಳಲ್ಲಿ ಸದಾಚಾರ ಮತ್ತು ಶಿವಾಚಾರ ಕುರಿತು ಚಿಂತನೆ ಮಾಡಿದ್ದೇವೆ. ಪ್ರಸ್ತುತ ಸಂಚಿಕೆಯಲ್ಲಿ ಲಿಂಗಾಚಾರವನ್ನು ಸ್ವಲ್ಪ ವಿವರವಾಗಿ ಅರಿತು ಸಂಬಂಧಿಸಿದ ವಚನಗಳನ್ನು ಅಧ್ಯಯನ ಮಾಡೋಣ.
ಮತ್ತೊಮ್ಮೆ ಚನ್ನಬಸವಣ್ಣನವರ ಈ ವಚನವನ್ನು ಮನನ ಮಾಡೋಣ. “ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ_ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.”
ಈ ವಚನದಲ್ಲಿ ಎಲ್ಲಾ ಐದು ಆಚಾರಗಳ ಸ್ಥೂಲ ವಿವರಣೆಯನ್ನು ಚಿನ್ಮಯಜ್ಞಾನಿ ಚನ್ನಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ.
೧. ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
೨. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ.
೩. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ.
೪. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ.
೫. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ
ಲಿಂಗಾಚಾರವೆಂದರೆ ಲಿಂಗವನಲ್ಲದೆ ಅನ್ಯದೇವತೆಗಳನ್ನು ಆರಾಧಿಸುವುದಿರಲಿ, ಮನದಲ್ಲಿ ನೆನೆಯಲೂಕೂಡದು. ಸಾಮಾನ್ಯವಾಗಿ ಈ ತರಹದ ವಚನಗಳನ್ನು ಓದಿದಾಗ ಈ ಕೆಳಗಿನ ಅನೇಕ ಪ್ರಶ್ನೆಗಳು ನಮ್ಮ ಮುಂದೆ ಧುತ್ತೆಂದು ಸುಳಿಯುತ್ತವೆ ಮತ್ತು ಮನವನ್ನು ಇನ್ನಿಲ್ಲದಂತೆ ಚಿಂತನೆಗೆ ಹಚ್ಚುತ್ತದೆ:
೧. ಅನ್ಯದೈವದ ಕುರಿತು ಶರಣರ ನಿಷ್ಠುರತೆ ಇಷ್ಟೊಂದು ಯಾಕೆ?
೨. ಶರಣರು ಯಾತಕ್ಕಾಗಿ ಈ ಆಚಾರವನ್ನು ಬೋಧಿಸಿದ್ದಾರೆ?
೩. ಅನ್ಯದೇವತೆಗಳನ್ನು ನೆನೆಯುವುದರಲ್ಲಿ ತಪ್ಪೇನಿದೆ?
೪. ಶರಣರು ಕೋಮುವಾದಿಗಳಾಗಿದ್ದರೇ?
ಶರಣರ ಇತಿಹಾಸವನ್ನೊಮ್ಮೆ ಸೂಕ್ಷ್ಮವಾಗಿ ಮತ್ತು ಆಳವಾಗಿ ಅವಲೋಕಿಸಿದರೆ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಸಮಂಜಸವಾದ ಉತ್ತರ ದೊರೆಯುವುದು. ಈ ವಿಚಾರಗಳು ಅರಿವಾಗಬೇಕಾದರೆ ನಾವು ಈ ಕೆಳಗಿನ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು ನಂತರ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅವಶ್ಯಕತೆಯೇ ಬಾರದು.
೧. ಲಿಂಗ ಎಂದರೇನು?
೨. ಸೃಷ್ಟಿಗೆ ಕಾರಣವಾದ ತತ್ವಗಳಾವುವು
೩. ಇಷ್ಟಲಿಂಗವೆಂದರೇನು?
೪. ನಮಗೂ ಲಿಂಗಕ್ಕೂ ಇರುವ ಸಂಬಂಧವೇನು?
೫. ನಮಗೂ ಇಷ್ಟಲಿಂಗಕ್ಕಿರುವ ಸಂಬಂಧವೇನು?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸೋಣ.
ಲಿಂಗಕ್ಕೆ ವಚನಗಳಲ್ಲಿ ಹಲವಾರು ಅರ್ಥವ್ಯಾಪ್ತಿಯ ವ್ಯಾಖ್ಯಾನಗಳಿವೆ. ಲಿಂಗತತ್ವವನ್ನು ಸರಿಯಾಗಿ ಅರಿತು, ಆಚರಿಸುವುದೇ ಲಿಂಗಾಚಾರ. ಪ್ರಭುದೇವರು ಈ ಅನಂತ ಸೃಷ್ಟಿಯು ಮುವತ್ತಾರು ತತ್ವಗಳನ್ನೊಳಗೊಂಡು ನಿರ್ಮಿಸಿದೆ. ಆ ಮುವತ್ತಾರು ತತ್ವಗಳಾವುವೆಂದರೆ, ಫ್ರಭುದೇವರು ನಿರೂಪಿಸಿದ ವಚನದನ್ವಯ “ಆತ್ಮನೆಂಬಂಗಸ್ಥಲ: ಅಂತಾದ ಜೀವಾತ್ಮನೆಂಬ ಅಂಗಸ್ಥಲಕ್ಕೆ ಸೇರಿದ ತತ್ವಂಗಳಿಪ್ಪತ್ತೈದು. ಅವಾವುವಯ್ಯಾ ಎಂದಡೆ: ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು, ವಾಗಾದಿ ಕರ್ಮೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ಪ್ರಾಣಾದಿ ವಿಷಯಂಗಳೈದು, ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು. ಅಂತು ಅಂಗ ತತ್ವಂಗಳಿಪ್ಪತ್ತೈದು. ಇಂತು ಅಂಗತತ್ವ ಇಪ್ಪತ್ತೈದು ತನ್ನೊಳಗೆ ಸಮರಸತ್ವನೆಯ್ದಿಸಲೋಸುಗ, ಭಕ್ತಿ ತದರ್ಥವಾಗಿ, ಆ ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು ಹನ್ನೊಂದು ತತ್ವವಾಯಿತ್ತು. ಇಂತೀ ಹನ್ನೊಂದು ತತ್ವದ ಪರಿಕ್ರಮವೆಂತೆಂದೊಡೆ: ಶಾಂತ್ಯಾದಿ ಶಕ್ತಿಗಳೈದು, ಶಿವಾದಿ ಸಾದಾಖ್ಯಗಳೈದು, ಪರಶಿವತತ್ವವೊಂದು. ಇಂತೀ ಲಿಂಗತತ್ತ್ವ ಹನ್ನೊಂದು. ಆ ಅಂಗತತ್ತ್ವ ಲಿಂಗತತ್ತ್ವವೆಂಬ ಉಭಯತತ್ತ್ವ ಮೂವತ್ತಾರು.” (೨೫ ಅಂಗತತ್ವಗಳು: ಕಣ್ಣು ಕಿವಿ ಮೂಗು ನಾಲಗೆ ಚರ್ಮ ಕೈ ಕಾಲು ಬಾಯಿ ಗುದ ಗುಹ್ಯ ಶಬ್ಧ ಸ್ಪರ್ಷ ರೂಪ ರಸ ಗಂಧ ಪ್ರಾಣ ಅಪಾನ ವ್ಯಾನ ಉದಾನ ಸಮಾನ (೫ ವಾಯುಗಳು) ಚಿತ್ತ ಮನ ಬುದ್ಧಿ ಅಹಂಕಾರ, ೫ ಶಿವತತ್ವಗಳು: ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧ ವಿದ್ಯೆ, ೭ ವಿದ್ಯಾತತ್ವಗಳು: ಕಲೆ, ಕಾಲ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ. ಹೀಗೆ ಒಟ್ಟು ಮುವತ್ತಾರು ತತ್ವಗಳು (ಸಿದ್ಧರಾಮೇಶ್ವರ ವಚನ, ಸಮಗ್ರ ವಚನ ಸಂಪುಟ: 4 ವಚನದ ಸಂಖ್ಯೆ: 1005) ಈ ಎಲ್ಲಾ ತತ್ವಗಳೂ ಸೃಷ್ಟಿಯ ವಿಕಾಸವೇ ಆಗಿದೆ.
ಇಷ್ಟಲಿಂಗವೆನ್ನುವುದು ಸೃಷ್ಟಿಯ ಪ್ರತೀಕ. ಲಿಂಗತತ್ವದ ಸಂಕೇತ. ಇದರ ಪ್ರಜ್ಞೆ ಮೂಡುವುದೇ ಸ್ವಸ್ವರೂಪ ಜ್ಞಾನ. ತನ್ನ ತಾನರಿಯುವ ಹಾದಿ. ಇದೊಂದು ಸಂಪೂರ್ಣವಾಗಿ ಸಾಧನೆಯ ಪಥ.
ಲಿಂಗದ ನಿಜವನ್ನು ತನ್ನ ಸ್ವಸ್ವರೂಪವನ್ನರಿವ ಮೂಲಕ ಕಂಡುಕೊಂಡ ಶರಣರು, ಲೋಕದ ಮಾನವರು ದೇವರನ್ನು ತಪ್ಪುತಪ್ಪಾಗಿ ಅರಿತು ಆಚರಿಸುವುದನ್ನು ಕಂಡು ಮನನೊಂದು ಸರಿಯಾದ ಅರಿವನ್ನು ಮೂಡಿಸಲು ನಿಷ್ಠುರವಾಗಿ ನುಡಿದಿದ್ದಾರೆ. ಲಿಂಗವನ್ನು ತಮ್ಮಲ್ಲಿ ನೆಲೆಗೊಳಿಸಿಕೊಂಡ ಬಳಿಕ ಕಲ್ಪಿತ ದೇವತೆಗಳ ಪೂಜೋಪಚಾರಗಳಿಂದೇನು ಪ್ರಯೋಜನ? ಹೀಗಾಗಿ ಅನ್ಯದೈವವೆಂಬುದು ಹಾದರ ಎಂದರು. ತನ್ನಲ್ಲಿರುವ ಸತ್ಯವನ್ನು ಕಂಡುಕೊಳ್ಳಬೇಕೆನ್ನುವ ಲಿಂಗಪಥದಲ್ಲಿ ಕೋಮುಭಾವನೆ ಎಲ್ಲಿದೆ? ಪ್ರಜ್ಞಾಶೂನ್ಯರಲ್ಲಿ ಕೋಮುಭಾವನೆ ಮೂಡುವುದೇ ವಿನಃ ಪ್ರಜ್ಞಾವಂತರಲ್ಲಿ ಅದು ಹೇಗೆ ಮೂಡಲು ಸಾಧ್ಯ?
“ಅಯ್ಯಾ, ಶ್ರೀಗುರು ಕರುಣಿಸಿ ಕೊಟ್ಟ ಲಿಂಗ ಜಂಗಮವಲ್ಲದೆ, ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ.” – ಚೆನ್ನಬಸವಣ್ಣ
“ಪಂಚೇಂದ್ರಿಯಗಳ ಪಂಚಸ್ಥಾನ ಪ್ರವೇಶವಾದ ಮಹಾಲಿಂಗಕ್ಕೆ ಶಬ್ದ ಸ್ಪರ್ಶ ರೂಪ ರಸ ಗಂಧಂಗಳನು ಮನೋವಾಕ್ಕಾಯದಲ್ಲಿ ಭೋಗಿಸುವ ಭೋಗವೆಲ್ಲವನು ಅರ್ಪಿಸುವುದು” – ಚೆನ್ನಬಸವಣ್ಣ
“ಅಂಗಾಶ್ರಯವಳಿದು ಲಿಂಗಾಶ್ರಯವಾದ ಬಳಿಕ ಅಂಗಕ್ಕೆ ಲಿಂಗಾಚಾರವಲ್ಲದೆ ಅಂಗಕ್ರೀಯೆಂಬುದನರಿದಂಗವಿಸರು ನೋಡಾ! ಲಿಂಗದಲ್ಲಿ ನಿಷ್ಠವಂತರಾದ ಬಳಿಕ ಅನ್ಯನಾಮವಿಡಿದು ಬಳಲುವ ಬಳಲಿಕೆ ಇನ್ನೆಲ್ಲಿಯದೋ, ಇದು ಕಾರಣ ಕೂಡಲಚೆನ್ನಸಂಗನ ಶರಣರು ಅನ್ಯವನಾಚರಿಸುವರಲ್ಲ” – ಚೆನ್ನಬಸವಣ್ಣ
“ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ, ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ…” – ಮರುಳಶಂಕರದೇವ
“ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ” – ಅಕ್ಕಮಹಾದೇವಿ
“ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ, ಮತ್ರ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ ಲಿಂಗಾಚಾರ ಭಕ್ತಮಾಹೇಶ್ವರರು ಪಾಣಿಗ್ರಹಣ ಕ್ರಿಯಾಶಕ್ತಿಯರು ಸದಾವಾಸ ಪರಿಯಂತರ ಇಷ್ಟಮಹಾಲಿಂಗವ ತಮ್ಮ ಅಂಗವ ಬಿಟ್ಟು ಅಗಲಿಸಲಾಗದು” – ಮಡಿವಾಳ ಮಾಚಿದೇವ
ಅಂತಿಮವಾಗಿ ಲಿಂಗಾಚಾರವೆಂದರೆ ಇಷ್ಟಲಿಂಗದಲ್ಲಿ ನಿಷ್ಠೆ ನೆಲೆಗೊಂಡು ಅನ್ಯದೈವದ ಪೂಜೆ ಪ್ರಸಾದಗಳನ್ನು ಕಿಂಚಿತ್ ಮಾತ್ರವೂ ನೆನೆಯದೆ ತನ್ನ ಅಂಗವೇ ಲಿಂಗಸ್ವರೂಪವೆಂದು, ತನ್ನ ನಡೆಯೆಲ್ಲವೂ ಲಿಂಗದ ನಡೆಯೆಂದು ನುಡಿವ ನುಡಿಯೆಲ್ಲವೂ ಲಿಂಗದ ನುಡಿಗಳೆಂದು ಚರಿಸುವುದೇ ಲಿಂಗಾಚಾರವೆಂದು ಅರಿಯಬಹುದು.

Previous post ನನ್ನ ಶರಣರು…
ನನ್ನ ಶರಣರು…
Next post ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ

Related Posts

ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
Share:
Articles

ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ

October 10, 2023 ಕೆ.ಆರ್ ಮಂಗಳಾ
“ಬಹಳ ಜನರ ದೃಷ್ಟಿಯಲ್ಲಿ ನಾನು ಏನಾಗಿದ್ದೇನೆ- ನಗಣ್ಯ, ವಿಲಕ್ಷಣ ಅಥವಾ ಬೇಡದ ಮನುಷ್ಯ – ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲದ ಮತ್ತು ಎಂದಿಗೂ ಅದನ್ನು ಹೊಂದಿರದ...
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
Share:
Articles

ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು

May 8, 2024 Bayalu
ನಾನು ಮೇಲೆ ನೀತಿ ಶಿಕ್ಷಣದ ವಿಷಯಕ್ಕೆ ಹೇಳಿದ್ದರಲ್ಲಿ ಅನೀತಿಯಿಂದ ನಡೆದ ಜನರಿಂದ ಸಮಾಜಕ್ಕೆ ಆಗುವ ಅಪಾಯಗಳನ್ನು ವಿವರಿಸಿದ್ದೇನೆ. ಇಂಥ ಜನರೇ ಸರಕಾರದ ದಂಡನೆಗೆ ಒಳಪಟ್ಟು...

Comments 8

  1. Omkarappa Bellur
    May 8, 2021 Reply

    ಬಯಲಿನಲ್ಲಿ ಪಂಚಾಚಾರಗಳನ್ನು ಒಂದೊಂದಾಗಿ ವಿವರಣೆಗೆ ತೊಡಗಿರುವುದು ನಮಗೆ ಅವಶ್ಯವಾದ ಮಾಹಿತಿ ನೀಡುತ್ತದೆ. ಸದಾಚಾರ, ಶಿವಾಚಾರ ಹಾಗೂ ಲಿಂಗಾಚಾರಗಳನ್ನು ನಿತ್ಯದ ಬದುಕಿನಲ್ಲಿ ಈ ದಿನಮಾನಗಳಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆನ್ನುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರೆ ಬಹಳ ಪ್ರಯೋಜನವಾಗುತ್ತಿತ್ತು.

  2. Prabhu Hukkeri
    May 10, 2021 Reply

    ಲಿಂಗತತ್ವವನ್ನು ಆಚರಿಸುವ ಲಿಂಗಾಚಾರದ ಕುರಿತಾದ ಲೇಖನ ಚೆನ್ನಾಗಿದೆ ಅಣ್ಣಾ. ಶರಣು.

  3. Girish Mysuru
    May 10, 2021 Reply

    ಇಷ್ಟಲಿಂಗಪೂಜೆಯನ್ನು ನಿಷ್ಠೆಯಿಂದ ಮಾಡುವುದೇ ಲಿಂಗಾಚಾರವಾದರೆ, ಹೇಗೆ ಲಿಂಗವನ್ನು ಪೂಜಿಸಬೇಕೆಂದು ವಿವರಿಸಿ ತಿಳಿಸಿರಿ. ಶರಣರ ಪೂಜಾ ವಿಧಾನ ಯಾವುದು?

  4. H V Jaya
    May 10, 2021 Reply

    ಸೃಷ್ಟಿಯ ರಚನೆಯನ್ನು ತಿಳಿಸುತ್ತಾ ಬಸವಣ್ಣನವರು ಕೊಟ್ಟಂತಹ ಇಷ್ಟಲಿಂಗದ ಪರಿಕಲ್ಪನೆ ಮತ್ತು ಅದರ ಮಹತ್ವವನ್ನು ಪಂಚಾಚಾರಗಳಲ್ಲಿ ಒಂದಾದ ಲಿಂಗಾಚಾರದ ಮೂಲಕ ಬಹಳ ಚನ್ನಾಗಿ ತಿಳಿಸಿದ್ದಾರೆ. ಪಂಚಾಚಾರಗಳ ಅರಿವು ಅತ್ಯಗತ್ಯವಾಗಿ ಬೇಕು. ಈ ಅರಿವನ್ನು ಮೂಡಿಸುತ್ತಿರುವ ತಮಗೆ ಶರಣಾರ್ಥಿಗಳು.

    ಶರಣು ಶರಣಾರ್ಥಿ

  5. Gurunath Kusthi
    May 16, 2021 Reply

    ಅನ್ಯದೈವ ಹಾದರ ಎಂದು ನಿಜವಾದ ದೈವ ಮಾರ್ಗವನ್ನು ತೋರಿಸಿದ ಶರಣರ ತತ್ವವೇ ಲಿಂಗಾಚಾರ. ಪಂಚಾಚಾರಗಳ ಪಾಲನೆ ಪ್ರತಿಯೊಬ್ಬ ಲಿಂಗಾಯತನ ಆದ್ಯ ಕರ್ತವ್ಯ.

  6. Umashankara Bengaluru
    May 17, 2021 Reply

    ಅಂಗಕ್ಕೆ ಲಿಂಗಾಚಾರವ ತೋರಿಸಿದ ಶರಣರ ವಚನಗಳಲ್ಲಿ ಪಂಚಾಚಾರಗಳನ್ನು ಹೆಕ್ಕಿ ತೆಗೆದು ಕೊಟ್ಟ ಪಂಚಾಕ್ಷರಿ ಅಣ್ಣನವರಿಗೆ ಶರಣು.

  7. ಗೌರೀಶ್ ಗೌಡ
    May 24, 2021 Reply

    ತನ್ನ ಸ್ವಸ್ವರೂಪವನ್ನು ಅರಿಯುವ ಮೂಲಕ ಲಿಂಗದ ನಿಜವನ್ನು ತಿಳಿಯಬಹುದೆಂದು ಬರೆದಿದ್ದೀರಿ. ಇದನ್ನು ಮತ್ತಷ್ಟು ವಿವರಿಸುವಿರಾ? ತನ್ನ ಸ್ವರೂಪವನ್ನು ಲಿಂಗದ ಸಹಾಯದಿಂದ ಅರಿಯುವುದು ಹೇಗೆ ಎಂದು ಗೊತ್ತಾಗುತ್ತದೆ.

  8. Jahnavi Naik
    May 31, 2021 Reply

    ಲಿಂಗದ ನಡೆ, ಲಿಂಗದ ನುಡಿಯೇ ಲಿಂಗಾಚಾರ. ವಿವರಣೆ ಕೊಡಿ ಸರ್, ಪ್ಲೀಸ್.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
Copyright © 2025 Bayalu