Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯುದ್ದವೋ, ಶಾಂತಿಯೋ…
Share:
Articles April 5, 2026 ಕೆ.ಆರ್ ಮಂಗಳಾ

ಯುದ್ದವೋ, ಶಾಂತಿಯೋ…

ಹಿಮಾಲಯದ ಶಿಖರದಂತೆ ಎತ್ತರದಲ್ಲಿ ನಿಂತು, ಲಿಯೋ ಟಾಲಸ್ಟಾಯ್ ಒಂದು ಶತಮಾನದ ಹಿಂದೆಯೇ ಕೇಳಿದ್ದರು: “ಯುದ್ಧವೆಂದರೆ ಏನು? ಅದು ಒಂದು ದೊಡ್ಡ ಕೊಲೆಯಲ್ಲವೇ?” ಅವರ ‘ಯುದ್ಧ ಮತ್ತು ಶಾಂತಿ’ ಕಾದಂಬರಿಯಲ್ಲಿ ನೆಪೋಲಿಯನ್‌ನ ಯುದ್ಧಗಳು ಕೇವಲ ರಕ್ತದ ನದಿಗಳಲ್ಲ; ಅವು ಮಾನವನ ದುರಾಸೆ, ಭಯ ಮತ್ತು ಭ್ರಮೆಯ ದೊಡ್ಡ ನಾಟಕದ ರಕ್ತಹೀರುವ ಆಟಗಳು! ಈ ಕಾದಂಬರಿ ಬರೆದ 25 ವರ್ಷಗಳ ನಂತರದ ಜೀವನಾನುಭವದಲ್ಲಿ ಅವರು ಬರೆದ, ‘ದೇವರ ರಾಜ್ಯವು ನಿಮ್ಮ ಒಳಗಿದೆ’ ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ: “ಯುದ್ಧವು ನಮ್ಮ ಒಳಗಿನ ಕತ್ತಲೆ, ಅದು ಹೊರಗಿನ ಶತ್ರುವಿಗೆ ವಿರುದ್ಧವಲ್ಲ. ಅದು ಸರ್ಕಾರ, ಸಂಪತ್ತು, ರಾಷ್ಟ್ರೀಯತೆಯ ಭ್ರಮೆಗಳಿಂದ ಹುಟ್ಟುವ ಕ್ರೂರ ಕ್ರಿಯೆ. ನಿಜವಾದ ಶಾಂತಿ ಬರುವುದು ಕೇವಲ ಒಪ್ಪಂದಗಳಿಂದಲ್ಲ, ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಹುಟ್ಟುವ ಪ್ರೀತಿ ಮತ್ತು ಅಹಿಂಸೆಯಿಂದ.”

ಏಪ್ರಿಲ್ 2026. ಇಂದು, ಈ ಹೊತ್ತು, ಟಾಲಸ್ಟಾಯ್‌ ಅವರ ಆ ಧ್ವನಿಯನ್ನು ಮತ್ತೆ ಕೇಳಿಸಿಕೊಳ್ಳಬೇಕಿದೆ. ಇವತ್ತಿನ ನಮ್ಮ ಜಗತ್ತು ಹೇಗಿದೆ? ಸದ್ಯದ ಸನ್ನಿವೇಶದಲ್ಲಿ 120 ಕ್ಕೂ ಹೆಚ್ಚು ಸಕ್ರಿಯವಾಗಿರುವ ಸಶಸ್ತ್ರ ಸಂಘರ್ಷಗಳಿಂದ ನಮ್ಮ ಪ್ರಪಂಚ ರಕ್ತ ಸುರಿಸುತ್ತಿದೆ – ಕೇವಲ ಹದಿನೈದು ವರ್ಷಗಳಲ್ಲೇ ದುಪ್ಪಟ್ಟಾದ ಸಂಖ್ಯೆ ಇದು. ರಷ್ಯಾ ಉಕ್ರೇನ್‌ನಲ್ಲಿ ತೀವ್ರ ಹೋರಾಟದೊಂದಿಗೆ ವಾಯುದಾಳಿ ಮುಂದುವರೆಸಿದೆ. ಸುಡಾನ್‌ನ ಕ್ರೂರ ಅಂತರ್ಯುದ್ಧವು ಲಕ್ಷಾಂತರ ಜನರನ್ನು ಕ್ಷಾಮದತ್ತ ತಳ್ಳಿದೆ, ಎರಡೂವರೆ ವರ್ಷಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ವ್ಯಾಪಕ ಹಿಂಸಾಚಾರದೊಂದಿಗೆ ಸಂಘರ್ಷ ತೀವ್ರಗೊಳ್ಳುತ್ತಿದೆ. ಗಾಜಾದ 90% ನಾಗರಿಕ ಮೂಲಸೌಕರ್ಯಗಳು ನಾಶವಾಗಿವೆ, ಅಗತ್ಯ ಸೇವೆಗಳು ಅಸ್ತವ್ಯಸ್ತಗೊಂಡಿವೆ. ನೆಪಮಾತ್ರದ ಕದನ ವಿರಾಮವು ಅಲ್ಲಿ ಅಸ್ತಿತ್ವದಲ್ಲಿದ್ದು ಯಾವುದೇ ಸಮಯ ಆಕ್ರಮಣಗಳು ಸ್ಫೋಟಗೊಳ್ಳುವ ಸೂಚನೆಗಳಿವೆ. ಇಸ್ರೇಲ್, ಅಮೆರಿಕ ಮತ್ತು ಇರಾನುಗಳ ನಡುವೆ ನರಮೇಧಗಳು ಹೆಚ್ಚುತ್ತಿದ್ದು, ಉದ್ವಿಗ್ನತೆಗಳು ಮಧ್ಯಪ್ರಾಚ್ಯದ ಘರ್ಷಣೆಗೆ ಬೆದರಿಕೆ ಹಾಕಿವೆ. ಮ್ಯಾನ್ಮಾರ್‌ನ ಅಂತ್ಯವಿಲ್ಲದ ನಾಗರಿಕ ಕಲಹದಿಂದ ಹಿಡಿದು ಹೈಟಿಯ ಗ್ಯಾಂಗ್ ಯುದ್ಧ ಮತ್ತು ವೆನೆಜುವೆಲಾ-ಯುಎಸ್ ಘರ್ಷಣೆಗಳವರೆಗೆ, ಹಿಂಸಾಚಾರವು ನಮ್ಮ ಯುಗದ ಸಾಮಾನ್ಯ ಆಯ್ಕೆಯೇನೋ ಎನ್ನುವಂತೆ ಗಾಬರಿ ಹುಟ್ಟಿಸಿದೆ! ಉಕ್ರೇನ್‌ನಲ್ಲಿ ರಕ್ತದ ಮಳೆ ಸುರಿಯುತ್ತಿರುವಾಗ, ಗಾಜಾದಲ್ಲಿ ಮಕ್ಕಳ ಕಣ್ಣುಗಳು ಭಯದಿಂದ ತುಂಬಿರುವಾಗ, ಸುಡಾನ್‌ನಲ್ಲಿ ಅವರವರೇ ಒಬ್ಬರನ್ನೊಬ್ಬರು ಕೊಂದುಕೊಳ್ಳುತ್ತಿರುವಾಗ, ಇರಾನಿನಲ್ಲಿ ಮಕ್ಕಳು ಬಾಂಬ್ ದಾಳಿಯಿಂದ ತತ್ತರಿಸುತ್ತಾ ಕಿವಿಮುಚ್ಚಿಕೊಂಡು ಕಿರುಚುತ್ತಿರುವಾಗ – ನಾವು ಇನ್ನೂ ಅದೇ ಹಳೆಯ ಕ್ರೂರ ನಾಟಕವನ್ನು ಆಡುತ್ತಿದ್ದೇವೆ.

ಟಾಲಸ್ಟಾಯ್ ಹೇಳುತ್ತಾರೆ: “ಯುದ್ಧವು ಒಂದು ದೊಡ್ಡ ಸುಳ್ಳು. ಅದು ನಮ್ಮನ್ನು ಒಂದುಗೂಡಿಸುತ್ತದೆ ಎಂದು ನಂಬಿಸುತ್ತದೆ, ಆದರೆ ಅದು ನಮ್ಮನ್ನು ನಾಶಮಾಡುತ್ತದೆ.” ಇಂದಿನ ಡ್ರೋನ್‌ಗಳು, ಎಐ ಕ್ಷಿಪಣಿಗಳು, ಕ್ಲಸ್ಟರ್ ಬಾಂಬುಗಳು, ಆ ಯುದ್ಧವೆಂಬೋ ಸುಳ್ಳನ್ನು ಇನ್ನಷ್ಟು ಭಯಂಕರವಾಗಿ ಮಾಡಿವೆ. ನಾವು ಹೆಮ್ಮೆಪಟ್ಟುಕೊಳ್ಳುವ ನಮ್ಮ ತಂತ್ರಜ್ಞಾನವು ಯುದ್ಧನಾಶವನ್ನು ಮತ್ತಷ್ಟು ನಿಖರವಾಗಿಸಿದೆ, ಕೊಲ್ಲುವಿಕೆಯನ್ನು ತೀರಾ ಅಗ್ಗವಾಗಿಸಿದೆ. ಯುದ್ಧವು ನಮ್ಮ ಮನಸ್ಸನ್ನು, ನಮ್ಮ ಪ್ರಕೃತಿಯನ್ನು, ನಮ್ಮ ಮಕ್ಕಳ ಭವಿಷ್ಯವನ್ನು, ಅಷ್ಟೇ ಯಾಕೆ ಇಡೀ ಭೂಮಿಯನ್ನೇ ಹೊಸಕಿ ಹಾಕಲು ಸಜ್ಜಾಗಿ ನಿಂತಿದೆ! ಯುದ್ಧದ ಅಮಲೇ ಅಂಥದ್ದು! ಅದು ಭೂಮಿಯ ಜೀವವ್ಯವಸ್ಥೆಯನ್ನೇ (ecosystems, biodiversity, climate) ಧ್ವಂಸಮಾಡುತ್ತದೆ. ಊಹಿಸಲಾಗದ ವಿನಾಶಕಾರಿ ಪರಿಣಾಮಗಳು ಪರಿಸರದ ಮೇಲಾಗುತ್ತಿವೆ. ಸೇನೆಗಳು ಬಳಸುವ ರಾಸಾಯನಿಕಗಳು ಲಕ್ಷಾಂತರ ಹೆಕ್ಟೇರ್ ಅರಣ್ಯಗಳನ್ನು, ಕೃಷಿ ಭೂಮಿಗಳನ್ನು ನಾಶಮಾಡಿವೆ. ಗಲ್ಫ್ ಯುದ್ಧದ ಸಮಯದಲ್ಲಿ ತೈಲ ಬಾವಿಗಳಿಗೆ ಬೆಂಕಿ ಹಾಕಿದ್ದರಿಂದ ಸಮುದ್ರದಲ್ಲಿ ತೈಲ ಸೋರಿಕೆಯಾಗಿ ಸಹಸ್ರಾರು ಸಂಖ್ಯೆಯಲ್ಲಿ ಸಮುದ್ರ ಪಕ್ಷಿಗಳು, ಜಲಜೀವಿಗಳು ದಾರುಣ ಅಂತ್ಯ ಕಂಡವು. ಸಮುದ್ರ ಸಸ್ತನಿಗಳ ಸಾವು ಈಗ ಎರಡುಪಟ್ಟು ಹೆಚ್ಚಿದೆ. ಯುದ್ಧದ ತ್ಯಾಜ್ಯಗಳು ಮಣ್ಣು, ನದಿ ಮತ್ತು ಭೂಗರ್ಭ ಜಲವನ್ನು ಕಲುಷಿತಗೊಳಿಸಿವೆ. ಉಕ್ರೇನ್‌ನಿಂದ ಸುಡಾನ್‌ವರೆಗೆ, ಸಹೇಲ್‌ನಿಂದ ಮ್ಯಾನ್ಮಾರ್‌ವರೆಗೆ ಹಬ್ಬಿರುವ ಯುದ್ಧಗಳಿಂದ ಸುತ್ತಣ ಪರಿಸರ ಕಣ್ಣೆದುರೇ ಭಸ್ಮವಾಗುತ್ತಿದೆ. ಜೀವವೈವಿಧ್ಯ ಮರೆಯಾಗುತ್ತಿದೆ. ಅಮೆರಿಕ-ವೆನೆಜುವೆಲಾದ ಉದ್ವಿಗ್ನತೆಗಳು, ಇರಾನಿನಲ್ಲಿ ಉಲ್ಬಣಿಸುತ್ತಿರುವ ಬಂದೂಕಿನ ಜ್ವಾಲೆಗಳು, ಮತ್ತಷ್ಟು ಕಡೆ ಯುದ್ಧ ಸ್ಫೋಟಿಸುವ ಲಕ್ಷಣಗಳನ್ನು ತೋರಿಸುತ್ತಿರುವ ಜಾಗತಿಕ ನಾಯಕರ ಮಾತುಗಳು, ಕೊನೆಯಿಲ್ಲದ ಹಿಂಸಾಚಾರದ ಚಕ್ರಗಳಲ್ಲಿ ಇಡೀ ಜೀವ ಜಗತ್ತು ಸಿಲುಕಿಕೊಂಡು ನರಳುತ್ತಿರುವಂತೆ ಭಾಸವಾಗುತ್ತಿದೆ.

ಶಾಂತಿ ಈಗಲೂ ಸಾಧ್ಯವೇ?

ಈ ಪ್ರಶ್ನೆಗೆ ಉತ್ತರವೇನೋ ಎಂಬಂತೆ ಒಂದು ಸಣ್ಣ ಚಲನೆ ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾಯಿತು. ಅದು ಅಬ್ಬರಿಸಲಿಲ್ಲ, ಬಲಪ್ರಯೋಗ ಮಾಡಲಿಲ್ಲ, ಆದರೂ ಅದರ ದನಿ ಪ್ರಪಂಚದಾದ್ಯಂತ ಸದ್ದು ಮಾಡಿತು. ತೀವ್ರ ಆತಂಕದ ಸಾವುನೋವು ಆಕ್ರಂದನಗಳ ನಡುವೆ, ಬೌದ್ಧ ಭಿಕ್ಕುಗಳ ಒಂದು ಪುಟ್ಟ ಗುಂಪು ಅಮೆರಿಕದಲ್ಲಿ ಟೆಕ್ಸಾಸಿನಿಂದ ವಾಷಿಂಗ್ಟನ್ ಡಿ.ಸಿ.ವರೆಗೆ ನಡೆಸಿದ ‘ಶಾಂತಿಗಾಗಿ ನಡಿಗೆ’- ಕೆಲವೇ ವಾರಗಳ ಹಿಂದೆ ಪೂರ್ಣಗೊಂಡಿದ್ದು – ಲಕ್ಷಾಂತರ ಜನರಿಗೆ ಇನ್ನೊಂದು ಮಾರ್ಗವಿದೆ ಎಂದು ನೆನಪಿಸಿತು. ಸಂಘರ್ಷಗಳ ನಡುವೆ ಕರುಣೆಯ ಆಯ್ಕೆಯ ಅಗತ್ಯವನ್ನು ತೋರಿಸಿತು. ಹಿಮ-ಮಳೆ-ಚಳಿಯನ್ನು ಲೆಕ್ಕಿಸದೆ 108 ದಿನಗಳ ಕಾಲ ನಡೆದ ಈ ನಡಿಗೆ ಯಾವುದೇ ಧರ್ಮಪ್ರಚಾರಕ್ಕೆ ಆಯ್ದುಕೊಂಡದ್ದಲ್ಲಾ, ಯಾವುದೇ ಪ್ರತಿಭಟನೆಗಾಗಿ ಯೋಜಿಸಿದ್ದಲ್ಲಾ, ಯಾವುದೊಂದು ಅಭಿಯಾನವೂ, ಮೆರವಣಿಗೆಯೂ ಅದಾಗಿರಲಿಲ್ಲಾ. ಇನ್ನೇನೋ ಬೇಡಿಕೆಗಳ ಪಟ್ಟಿಯೂ ಅಲ್ಲಿರಲಿಲ್ಲ. ಬದಲಾಗಿ ಜನರಲ್ಲಿ ಜಾಗೃತಿ ಮೂಡಿಸುವ ಧ್ಯಾನಸ್ಥ ಕ್ರಿಯೆಯಾಗಿ ಅದನ್ನು ರೂಪಿಸಲಾಗಿತ್ತು. ಏಕತೆ, ಕರುಣೆಯೇ ಅವರ ಬ್ಯಾನರ್ ಆಗಿತ್ತು. ಹಾಗೆಂದು ಅವರು ಬದಲಾವಣೆ ಬೇಡಲು ನಡೆಯಲಿಲ್ಲ ಅಥವಾ ಯಾರನ್ನಾದರೂ ಬದಲಾಯಿಸಬೇಕೆಂದೂ ನಡೆಯಲಿಲ್ಲ. “ನಮ್ಮ ಪ್ರತಿಯೊಬ್ಬರೊಳಗೂ ಈಗಾಗಲೇ ನೆಲೆಸಿರುವ ಶಾಂತಿಯನ್ನು ಜಾಗೃತಗೊಳಿಸಲು ಈ ನಡಿಗೆ”- ಎನ್ನುವ ಸರಳ ಸಂದೇಶ ಹಿಡಿದು ನಡೆದರು. ಶಾಂತಿ ಆರಂಭವಾಗಬೇಕಾಗಿರುವುದು ಹೊರಗಿನಿಂದಲ್ಲಾ, ನಮ್ಮೊಳಗಿಂದ… ವಿಶ್ವಶಾಂತಿಯು ಆಂತರಿಕ ಶಾಂತಿಯಿಂದ ಮಾತ್ರ ಸಾಧ್ಯ- ಎನ್ನುವ ಆಶಯದಿಂದ ನಡೆದರು.

ವಾದ-ಪ್ರತಿವಾದ, ಪರ-ವಿರೋಧಗಳ ಬಣಗಳಲ್ಲಿ ಪ್ರತಿಯೊಬ್ಬರೂ ತಮ್ಮನ್ನು ಗುರುತಿಸಿಕೊಂಡು ಒಬ್ಬರನ್ನೊಬ್ಬರು ಕಂಡರೆ ಆಗದಂತಹ ಕಾಲಘಟ್ಟದಲ್ಲಿ ಕರುಣೆ, ಸಂಯಮ ಮತ್ತು ಮನಮಗ್ನತೆ (ಮೈಂಡಫುಲನೆಸ್= ಪ್ರಸ್ತುತ ಕ್ಷಣದಲ್ಲಿ ಸಂಪೂರ್ಣ ಅರಿವಿನಿಂದಿರುವುದು)ಗಳ ಅಗತ್ಯವನ್ನು ತಮ್ಮ ವರ್ತನೆಗಳಿಂದಲೇ ಆ ಭಿಕ್ಕುಗಳು ತೋರಿಸಿಕೊಟ್ಟರು. . ಅವರದು ಬರಿ ನಡಿಗೆ, ಮೌನ ನಡಿಗೆ. ಅದು ಸಾಮಾನ್ಯ ಮೌನವಲ್ಲ, ಅರಿವಿನ ಹಾದಿ. ಟೆಕ್ಸಾಸಿನ ಬಿಸಿಲು, ಲೂಯಿಸಿಯಾನದ ಮಳೆ, ಮಿಸ್ಸಿಸ್ಸಿಪ್ಪಿಯ ಕೊರೆವ ಚಳಿ… ಬೆಸೆಯಲು ಅಸಾಧ್ಯವಾಗಿರುವ ಅಲ್ಲಿನ ಸಾಮಾಜಿಕ ಬಿರುಕುಗಳ ನಡುವೆ ಪ್ರಶಾಂತವಾಗಿ ಸಾಗಿದ ಆ ಭಿಕ್ಕುಗಳ ನಡೆ ಮತ್ತು ನಡವಳಿಕೆ ಅಲ್ಲಿಯ ಜನರಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದವು. ಸಾವಿರಾರು ಜನ ರಸ್ತೆಗಳಲ್ಲಿ ನಿಂತು ಅವರನ್ನು ಸ್ವಾಗತಿಸಿದರು. ಯಾಕೆ ಕಾಲ್ನಡಿಗೆ, ಯಾಕೆ ಮೌನ, ಯಾಕೆ ಸುಡುವ ನೆಲದ ಮೇಲೆ ಬರಿಗಾಲು… ಯಾಕೆ ಹಿಮದ ಮಳೆಯಲ್ಲೂ ನಿಲ್ಲದ ಹೆಜ್ಜೆಗಳು… ಶಬ್ದ ವ್ಯಸನಿಯಾದ ಜಗತ್ತಿನಲ್ಲಿ ಮೌನದ ದನಿಯೂ ಕೇಳಬಲ್ಲದು ಎನ್ನುವುದಕ್ಕೆ ನಿದರ್ಶನವಾದರು. ಅವರು ಭಾಷಣಗಳ ಮೂಲಕ ಬದಲಾಯಿಸಲಿಲ್ಲ, ಸಣ್ಣಪುಟ್ಟ ಕ್ರಿಯೆಗಳ ಮೂಲಕ ಹೃದಯಗಳನ್ನು ಬದಲಾಯಿಸಿದ್ದರು. ಅಮೆರಿಕದ ಸಾರ್ವಜನಿಕ ಜೀವನದಲ್ಲಿ ಆಗಾಗ ಸಂಘಟಿತ ಚಳುವಳಿಗಳು ಮತ್ತು ನಿರ್ದಿಷ್ಟ ಬೇಡಿಕೆಗಳಿಗಾಗಿ ದೀರ್ಘ ನಡಿಗೆಗಳು ನಡೆದಿವೆ. ಆದರೆ ಈ ನಡಿಗೆ ಆ ಸಂಪ್ರದಾಯಕ್ಕೆ ಸೇರಿರಲಿಲ್ಲಾ. ದ್ವೇಷ ಮತ್ತು ವಿಭಜನೆಯನ್ನು ಅನುಭವಿಸುವ ಜಗತ್ತಿನಲ್ಲಿ ಈ ಕಾಲಘಟ್ಟದ ಬಹುಮುಖ್ಯವಾದ ಕಾಲ್ನಡಿಗೆಯಾಗಿ ಇದನ್ನು ಗುರುತಿಸಲಾಯಿತು.

ಯಾರೀ ಭಿಕ್ಕುಗಳು?

ಥೈಲ್ಯಾಂಡ್, ವಿಯೆಟ್ನಾಂ, ಫ್ರಾನ್ಸ್, ಅಮೆರಿಕ, ಬರ್ಮಾ ಮತ್ತು ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಲ್ಲಿರುವ ಥೇರಾವಾದ ಬೌದ್ಧ ವಿಹಾರಗಳಿಂದ ಬಂದ ಹತ್ತೊಂಬತ್ತು ಬೌದ್ಧ ಭಿಕ್ಕುಗಳ ಕಾಲ್ನಡಿಗೆಯ ಯಾತ್ರೆ ಕಳೆದ ವರ್ಷ ಅಕ್ಟೋಬರ್ 26ರಂದು ಪ್ರಾರಂಭವಾಗಿ, ಈ ವರ್ಷ ಫೆಬ್ರವರಿ 12ರಂದು ವಾಷಿಂಗ್ಟನ್ ಡಿ.ಸಿ. ಬಳಿಯ ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿ ಮುಕ್ತಾಯವಾಯಿತು. ಬುದ್ಧಗುರು ಹುಟ್ಟಿದ, ಜ್ಞಾನೋದಯ ಪಡೆದ ಮತ್ತು ಮಹಾಪರಿನಿರ್ವಾಣ ಹೊಂದಿದ ವೈಸಾಕಿ ದಿನವನ್ನು ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಬೇಕೆನ್ನುವ ನೆಪ ಮಾತ್ರದ ಒಂದು ಪುಟ್ಟ ವಿನಂತಿಯನ್ನು ಹಿಡಿದು ಅವರು ನಡೆದದ್ದು ಒಟ್ಟು 2300 ಮೈಲುಗಳು! ಅವರ ಉದ್ದೇಶ ದೊಡ್ಡದಿತ್ತು. ಈ ಕಾಲ್ನಡಿಗೆ ಆರಂಭವಾಗಿ ಒಂದೆರಡು ವಾರಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಗೊತ್ತಾಗಿ ನಾನೂ ಅವರ live stream ಅನ್ನು ಪ್ರತಿದಿನ ನೋಡತೊಡಗಿದೆ. ಆ ದಿನಗಳಲ್ಲಿ (ಇಂದಿನ ದಿನಗಳೂ ಹೊರತಾಗಿಲ್ಲಾ) ಎಲ್ಲ ಕಡೆಯಿಂದ ಸಾವು, ನೋವು, ಯುದ್ಧ ಸಂಕಟಗಳ ಸಮಾಚಾರಗಳನ್ನೇ ಕೇಳುತ್ತಾ, ಪ್ರಾಣಹಾನಿಯ ಭಯಾನಕ ದೃಶ್ಯಗಳನ್ನು ನೋಡಿ ಕುಗ್ಗಿ ಹೋಗಿದ್ದ ಮನಸ್ಸಿಗೆ ಈ ಬೌದ್ಧ ಭಿಕ್ಕುಗಳ ನಡಿಗೆಯ ಸುದ್ದಿ ಭರವಸೆಯ ಒಂದು ಸಣ್ಣ ಬೆಳಕಿನಂತೆ ಕಂಡಿತು. ಒಬ್ಬರ ಹಿಂದೊಬ್ಬರಂತೆ ಒಂದೇ ಸಾಲಿನಲ್ಲಿ ಹೆದ್ದಾರಿಯ ಮೇಲೆ ಮೌನವಾಗಿ ಹೊರಟಿದ್ದ ಅವರ ನಡಿಗೆಯಲ್ಲಿ ಸಂಯಮವಿತ್ತು. 60, 70 ವರ್ಷದ ಹಿರಿಯ ಭಿಕ್ಕುಗಳೂ ಅಲ್ಲಿದ್ದರು. ಈ ಕಾಲ್ನಡಿಗೆಯ ನೇತೃತ್ವ ವಹಿಸಿದ್ದವರು ವಿಯೆಟ್ನಾಮಿನ ಬೌದ್ಧ ಭಿಕ್ಕು ಪನ್ನಾಕಾರ. ಗಂಭೀರ ತೇಜಸ್ಸಿನ ಈ ಭಿಕ್ಕುವಿನ ಪಕ್ಕ ಬಾಲ ಅಲ್ಲಾಡಿಸುತ್ತಾ ಕುಂಟುತ್ತಾ ಓಡುತ್ತಿದ್ದ ಅಲೋಕ ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿಬಿಟ್ಟಿತ್ತು. ಅಬ್ಬರದ ರ್ಯಾಲಿಗಳು, ಪ್ರತಿಭಟನೆಗಳು, ಮೆರವಣಿಗೆಗಳು ಮತ್ತು ಪರಸ್ಪರ ವಾಗ್ದಾಳಿಗಳ ಇಂದಿನ ಸಂಸ್ಕೃತಿಯಲ್ಲಿ, ಈ ಭಿಕ್ಕುಗಳ ಸಂಯಮದ ಮೌನ ನಡಿಗೆ, ಆಡಂಬರ ಮತ್ತು ಐಷಾರಾಮಿ ಬದುಕುಗಳ ನಡುವೆ ಸರಳತೆಯ ಚಲನೆಯಂತಿತ್ತು.

ಟೆಕ್ಸಾಸಿನ ಫೋರ್ಟವರ್ತ್‌ನಲ್ಲಿರುವ ಹಂಗ್ ದಾವೊ ವಿಪಶ್ಶನ ಕೇಂದ್ರದಿಂದ ಭಿಕ್ಕುಗಳ ಈ ಗುಂಪು ಹೆಗಲಿಗೆ ಜೋಳಿಗೆ ಏರಿಸಿಕೊಂಡು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ಹೊರಟಿದ್ದು ನಾಲ್ಕು ತಿಂಗಳವರೆಗೆ ನಿಲ್ಲಲೇ ಇಲ್ಲಾ. ಹಿಂದಣ ರಸ್ತೆಗಳ (back roads) ಮೂಲಕ ಅವರು ಸಣ್ಣ ಸಣ್ಣ ನಗರಗಳನ್ನು ಹಾಯ್ದು, ಮುಖ್ಯರಸ್ತೆ, ಚರ್ಚಿನ ಪಾರ್ಕಿಂಗ್ ಸ್ಥಳಗಳು, ದಿನಸಿ ಅಂಗಡಿಗಳ ಪಾದಚಾರಿ ಮಾರ್ಗಗಳು, ಪೆಟ್ರೋಲ್ ಬಂಕುಗಳು, ಗ್ರಾಮೀಣ ಭಾಗದ ದ್ವಿಪಥ ರಸ್ತೆಗಳು ಮತ್ತು ನಗರದ ಸೇತುವೆಗಳು, ಕಾರಿಡಾರ್‌ಗಳು ಮತ್ತು ರಾಜ್ಯ ರಾಜಧಾನಿಗಳಿಗೆ ಹೋಗುವ ಮಾರ್ಗಗಳಿರುವ ಪಟ್ಟಣಗಳ ಮೂಲಕ ಅಮೆರಿಕದ ಹತ್ತು ರಾಜ್ಯಗಳಲ್ಲಿ ಸಂಚರಿಸಿದರು. ಅವರ ಹೆಗಲ ಜೋಳಿಗೆಯಲ್ಲಿ ಇರುತ್ತಿದ್ದುದು ದಿನಕ್ಕೆ ಅಗತ್ಯವಿರುವಷ್ಟೇ ವಸ್ತುಗಳು. ಪ್ರತಿದಿನ ಸರಾಸರಿ 20-25 ಮೈಲಿ ನಡೆಯುತ್ತಿದ್ದರು. ಕೆಲವರು ಬರಿಗಾಲಲ್ಲಿ ನಡೆದರು. ದುತಾಂಗವನ್ನು ಪಾಲಿಸಿದರು. ದುತಾಂಗ ಎಂದರೆ- ಪಾಲಿ ಭಾಷೆಯಲ್ಲಿ ಸೌಕರ್ಯಗಳನ್ನು ದೂರ ಮಾಡುವುದು, ಬಂಧನಗಳನ್ನು ದೂರ ಮಾಡುವುದು, ಮಾತ್ರವಲ್ಲಾ ಅಗತ್ಯವಿಲ್ಲದ ಎಲ್ಲವನ್ನೂ ದೂರ ಮಾಡುವುದು. ದಿನಕ್ಕೊಂದೇ ಊಟ. ಕೆಲವೊಮ್ಮೆ ಚರ್ಚುಗಳ ಮುಂಬದಿಯ ಹಾಸುಗಲ್ಲಿನ ಮೇಲೆ, ಕೆಲವೊಮ್ಮೆ ಸಮುದಾಯ ಕೇಂದ್ರಗಳಲ್ಲಿ, ಕೆಲವೊಮ್ಮೆ ಮರದ ಅಡಿಗಳಲ್ಲಿ ನಿದ್ದೆ, ಕೆಲವರು ಚಾಪೆಯ ಮೇಲೆ, ಕೆಲವರು ನೆಲದ ಮೇಲೆ. ಮಳೆ ಇದ್ದಾಗ, ಹಿಮ ಬೀಳುವಾಗ ಜನರು ಮಲಗಲು ಜಾಗ ಕೊಡುತ್ತಿದ್ದರು. ರಸ್ತೆಯೇ ವಿಹಾರವಾಗಿತ್ತು, ಆಗಸವೇ ಚಪ್ಪರವಾಗಿತ್ತು. ಎಷ್ಟೇ ಸೌಕರ್ಯಗಳಿದ್ದರೂ, ಸಿರಿವಂತಿಕೆಯಿದ್ದರೂ ಮತ್ತೆ ಮತ್ತೆ ಸುಖದ ಬೆನ್ನು ಹತ್ತಿರುವ ಶ್ರೀಮಂತ ದೇಶದಲ್ಲಿ ಅವರು ಸರಳತೆಯನ್ನು ಬೋಧಿಸಲಿಲ್ಲಾ, ಸರಳತೆಯ ಸಾಕಾರದಂತೆ ನಡೆದು ಅಮೆರಿಕದ ಜನರ ಹೃದಯ ತಟ್ಟುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದರು.

ಸೂರ್ಯೋದಯಕ್ಕೂ ಮುನ್ನವೇ ನಾಲ್ಕು ಗಂಟೆಗೆ ಏಳುತ್ತಿದ್ದ ಭಿಕ್ಕುಗಳು ವಿಪಶ್ಶನ ಧ್ಯಾನದ ಬಳಿಕ ನಡಿಗೆ ಆರಂಭಿಸುತ್ತಿದ್ದರು. ದಾರಿಯುದ್ದಕ್ಕೂ ಗಂಟೆಗಟ್ಟಲೆ ಮೌನ ನಡಿಗೆ (noble silence). ಕೆಲವೊಮ್ಮೆ ಎಂಟು ಗಂಟೆ, ಹತ್ತು ಗಂಟೆ ಒಂದೇ ಸಮನೆ ನಡೆಯುತ್ತಿದ್ದರು. ಪಕ್ಕದಲ್ಲಿ ಗಂಟೆಗೆ 70 ಮೈಲಿ ವೇಗದಲ್ಲಿ ವಾಹನಗಳು ಭರ್ರೆಂದು ಸರಿದು ಹೋಗುತ್ತಿದ್ದವು. ಜನನಿಬಿಡ ರಸ್ತೆಯಲ್ಲಿ ಹೋಗುತ್ತಿದ್ದರೆ, ಅನೇಕರು ಅಚ್ಚರಿ, ಅನುಮಾನಗಳಿಂದ ನೋಡುತ್ತಿದ್ದರು. ಕೆಲವರು ಕೈಬೀಸಿ ಶುಭಕೋರುತ್ತಿದ್ದರು. ಅವತ್ತು ನವೆಂಬರ್ 19, 2025, ಸಾಯಂಕಾಲ, ಟೆಕ್ಸಾಸಿನ ಡೇಟನ್ ಹತ್ತಿರ ಟ್ರಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಭಿಕ್ಕುಗಳಿಗೆ ಗಂಭೀರ ಗಾಯಗಳಾದವು. ಓರ್ವ ಭಿಕ್ಕು ತನ್ನ ಎಡಗಾಲನ್ನೇ ಕಳೆದುಕೊಂಡರು. ಆ ಸಂದರ್ಭದಲ್ಲಿ ಭಿಕ್ಕುಗಳು ತೋರಿದ ಸಂಯಮ, ಸಹನೆ ಮತ್ತು ಕರುಣೆ ಅಮೆರಿಕನ್ನರ ಅನುಮಾನದ ದೃಷ್ಟಿಕೋನವನ್ನೇ ಬದಲಿಸಿತು. ಅನೇಕರು ಭಿಕ್ಕುಗಳಿಂದ ಆಕ್ರಂದನ, ಕೋಪ, ತಾಪವನ್ನು ನಿರೀಕ್ಷಿಸಿದ್ದರು. ಆದರೆ ತನಗಾದ ಸ್ಥಿತಿಯನ್ನು ಸಮತೆಯಿಂದ ಸ್ವೀಕರಿಸಿದ ಆ ಭಂತೆ ಕೋಪಗೊಳ್ಳಲಿಲ್ಲಾ, ಯಾರನ್ನೂ ದೂಷಿಸಲಿಲ್ಲಾ, ಮೊಕದ್ದಮೆ ಹಾಕಲಿಲ್ಲಾ, ನ್ಯಾಯಕ್ಕಾಗಿ ಪತ್ರಿಕಾಗೋಷ್ಠಿ ಕರೆದು ಟ್ರಕ್ ಚಾಲಕನಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಲಿಲ್ಲಾ. ಇದು ಕರುಣೆ, ದಯೆ. ರಾಜಕೀಯ ಉದ್ವಿಗ್ನತೆ, ಬಳಲಿಕೆ ಮತ್ತು ವಿಭಜನೆಯಿಂದ ವಿಹ್ವಲವಾಗಿದ್ದ ರಾಷ್ಟ್ರದಲ್ಲಿ ಶಾಂತವಾದ ಸ್ಥಿರ ಉಪಸ್ಥಿತಿಯನ್ನು ಪ್ರತ್ಯಕ್ಷವಾಗಿ ಕಾಣುತ್ತಿರುವಂತೆ ಅಮೆರಿಕದ ಜನ ಉತ್ಸಾಹಗೊಂಡರು. ಅಲ್ಲಿಂದ ಮುಂದೆ ‘ಶಾಂತಿಗಾಗಿ ನಡಿಗೆ’ ವ್ಯಾಪಕವಾಗಿ ಹರಡಿತು. ಅಮೆರಿಕದ ಜನ ಅವರನ್ನು ಹೋದಲ್ಲೆಲ್ಲಾ ಬೆಂಬಲಿಸತೊಡಗಿದರು. ಅನುಮಾನದಿಂದ ಆರಂಭವಾದದ್ದು ನಂಬಿಕೆಯಾಗಿ ಬದಲಾಯಿತು. ಭಿಕ್ಕುಗಳು ನಗರಗಳ ಮೂಲಕ ಹಾದು ಹೋಗುವಾಗ ಸ್ಥಳೀಯ ಪೊಲೀಸರು ಬೆಂಗಾವಲು ಒದಗಿಸಿದರು. ಗಸ್ತು ಕಾರುಗಳು ಮೆಲ್ಲನೆ ಹಿಂಬಾಲಿಸಿದವು.

ದಿನಗಳು ಸರಿದಂತೆ ಭಿಕ್ಕುಗಳನ್ನು ಸ್ವಾಗತಿಸಲು, ನೋಡಲು ಜನ ಆಸಕ್ತಿ ತೋರತೊಡಗಿದರು. ಆರಂಭದಲ್ಲಿ ಹತ್ತಾರು ಜನರಿದ್ದವರು, ದಿನಗಳೆದಂತೆ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಸೇರಿದರು. ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದೂಗಳು, ವಲಸಿಗರು, ನಾಸ್ತಿಕರು, ರಿಪಬ್ಲಿಕನ್ನರು, ಡೆಮಾಕ್ರಟರು, ವೃದ್ಧರು, ಯುವಕರು, ವಿಕಲ ಚೇತನರು… ವಯಸ್ಸಿನ ಬೇಧವಿಲ್ಲದೆ ಸೇರುತ್ತಿದ್ದರು. ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧಗುರು ತನ್ನ ಶಿಷ್ಯರೊಟ್ಟಿಗೆ ಧಮ್ಮವನ್ನು ಹರಡಲು ಹೀಗೆ ಭಿಕ್ಷಾಪಾತ್ರೆ ಹಿಡಿದೇ ಸಂಚರಿಸಿದರು. ಆ ಪರಂಪರೆಯ ಈ ಭಿಕ್ಕುಗಳು ಅಮೆರಿಕದಲ್ಲಿ ಹೀಗೆ ಭಿಕ್ಷಾಪಾತ್ರೆ ಹಿಡಿದೇ ಸಂಚರಿಸಿದರು. ಅವರೆಲ್ಲರೂ ಸಂಪೂರ್ಣವಾಗಿ ಜನರ ಉದಾರತೆಯನ್ನೇ ಅವಲಂಬಿಸಿದ್ದರು. ಅಮೆರಿಕನ್ನರಿಗೆ ಇದು ಸಂಪೂರ್ಣ ಹೊಸದು. ಕೆಲವರು ಆಹಾರ ಹಂಚಿಕೊಂಡರು, ಕೆಲವರು ಹಣ್ಣು, ನೀರುಗಳನ್ನಿತ್ತು ತಮ್ಮ ಕಾಳಜಿ ವ್ಯಕ್ತಪಡಿಸಿದರು. ಕೆಲವರು ಮೌನವಾಗಿ ಬೆಂಬಲಿಸಿದರೆ, ಕೆಲವರು ಈ ಕಾಲ್ನಡಿಗೆಯಲ್ಲಿ ಜೊತೆಯಾಗಲು ದೂರದೂರುಗಳಿಂದ, ಕೆಲವೊಮ್ಮೆ ರಾಜ್ಯಗಳ ಗಡಿಗಳನ್ನು ದಾಟಿ ಬಂದರು. ಕೆಲವರು ಒಂದಷ್ಟು ದೂರ ನಡೆದರೆ, ಇನ್ನೂ ಕೆಲವರು ಇಡೀ ದಿನ ಅವರೊಂದಿಗೆ ಹೆಜ್ಜೆ ಹಾಕಿದರು. ಕುಟುಂಬ ಸಮೇತ, ಮಕ್ಕಳೊಂದಿಗೆ ಬಂದವರು, ಒಂಟಿಯಾಗಿ ಧನ್ಯತೆಯಿಂದ ನಿಂತವರು, ವ್ಹೀಲ್ ಚೇರಿನಲ್ಲಿ ಕುಳಿತು ಕಣ್ತುಂಬಿಕೊಂಡವರು, ಎಲ್ಲ ಬಗೆಯ ಜನರನ್ನೂ ಅಲ್ಲಿ ಕಾಣಬಹುದಿತ್ತು. ಭಿಕ್ಕುಗಳು ಹಾದುಹೋಗುವುದನ್ನು ನೋಡಲು ಜನ ಪಾದಚಾರಿ ಮಾರ್ಗಗಳಲ್ಲಿ ಮತ್ತು ರಸ್ತೆಬದಿಗಳಲ್ಲಿ ಸಾಲುಗಟ್ಟಿ ಉತ್ಸಾಹದಿಂದ ಗಂಟೆಗಟ್ಟಲೆ ಕಾಯುತ್ತಿದ್ದುದನ್ನು ನೋಡಿದರೆ ಅವರ ಮೇಲಾದ ಪರಿಣಾಮವನ್ನು ಸುಲಭವಾಗಿ ಊಹಿಸಬಹುದಿತ್ತು. ರಾಷ್ಟ್ರೀಯ ಹಾಗೂ ಸ್ಥಳೀಯ ದೂರದರ್ಶನ ಚಾನೆಲ್ಲುಗಳು, ಯೂಟ್ಯೂಬರ್ ಗಳು ನೆರೆದ ಜನರನ್ನು ಸಂದರ್ಶಿಸಿದಾಗ ಅವರು ವ್ಯಕ್ತಪಡಿಸಿದ ಧನ್ಯತೆಯ ಮಾತುಗಳಿಂದ ಅಮೆರಿಕನ್ನರ ಮನಸ್ಸು ಇಂತಹ ಶಾಂತ ಉಪಸ್ಥಿತಿಗೆ ಎಷ್ಟೊಂದು ಹಂಬಲಿಸುತ್ತಿದೆ ಎಂಬುದು ಗೊತ್ತಾಗುತ್ತಿತ್ತು… ಅವರ ಮಾತುಗಳಲ್ಲಿ, ತಮ್ಮ ಜೀವನಕ್ಕೆ ಏನಾದರೂ ಬೆಳಕು ಕಂಡೀತೇನೋ… ಒತ್ತಡ ಮತ್ತು ವೇಗದ ದಿನಚರಿಗಳಿಂದ ಉದ್ವಿಗ್ನದಲ್ಲಿರುವ ಮನಸ್ಸಿಗೆ ಶಾಂತಿ, ಸಹಾನುಭೂತಿಯ ಸ್ಪರ್ಶ ಸಿಕ್ಕೀತೇನೋ ಎನ್ನುವ ನಿರೀಕ್ಷೆಗಳಿದ್ದವು…

ಸರಳ ಮಾತುಗಳು:

ಸಾಮಾನ್ಯವಾಗಿ ಭಿಕ್ಕುಗಳು ದಾರಿಯ ನಡುವೆ ನಿಲ್ಲುತ್ತಿದ್ದುದು ತೀರಾ ಕಡಿಮೆ. ಅವರು ಒಟ್ಟಿಗೆ ನಡೆಯುತ್ತಿದ್ದರು, ಒಟ್ಟಿಗೆ ಆಹಾರ ಸೇವಿಸುತ್ತಿದ್ದರು, ಒಟ್ಟಿಗೆ ಧ್ಯಾನ ಮಾಡುತ್ತಿದ್ದರು. ಯಾರೂ ತಂಡಗಳಾಗಿ ಭಾಗವಾಗಲಿಲ್ಲಾ. ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ರಸ್ತೆಯ ಪಕ್ಕ ವಿಶ್ರಾಂತಿ ಪಡೆಯುತ್ತಿದ್ದರು. ಕೆಲವು ಸ್ಥಳಗಳಲ್ಲಿ, ಅಲ್ಲಿನ ಸಮುದಾಯಗಳು ಸಣ್ಣ ವೇದಿಕೆಗಳನ್ನು ಏರ್ಪಡಿಸಿ ಭಿಕ್ಕುಗಳಿಗೆ ಮಾತನಾಡಲು ಕೇಳಿಕೊಳ್ಳುತ್ತಿದ್ದರು. ಆಗ ಅವರಾಡುತ್ತಿದ್ದ ಮಾತುಗಳು ಸರಳವಾಗಿದ್ದವು: “ಸಹಾನುಭೂತಿಯನ್ನು ಬೆಳೆಸಿಕೊಳ್ಳಿ, ಹಾನಿಯನ್ನು ಕಡಿಮೆ ಮಾಡಿ, ಮಾನವೀಯತೆಯನ್ನು ನೆನಪಿಡಿ. ಪ್ರತಿದಿನ, ಜಾಗರೂಕರಾಗಿರಿ: ತಕ್ಷಣಕ್ಕೆ ಪ್ರತಿಕ್ರಿಯಿಸಬೇಡಿ. ಒಂದು ಕ್ಷಣ ನಿಲ್ಲಿ. ಸರಿಯಾದ ಪದವನ್ನು ಆರಿಸಿ, ಮಾತನಾಡಿ. ಸರಿಯಾದ ವಿಷಯವನ್ನು ಆರಿಸಿ, ಕಾರ್ಯನಿರ್ವಹಿಸಿ…” ದಾರಿಯುದ್ದಕ್ಕೂ ಭಿಕ್ಕುಗಳು ಆಂತರಿಕ ಶಾಂತಿ, ಪ್ರೀತಿಯ ದಯೆ (ಮೆತ್ತಾ) ಮತ್ತು ಸಹಾನುಭೂತಿಯ ಸಂದೇಶಗಳನ್ನು ಹಂಚಿಕೊಂಡರು.

ಅಷ್ಟು ದಿನಗಳಲ್ಲಿ ಒಮ್ಮೆಯೂ ಅವರು ಯಾವ ತಾತ್ವಿಕ ಚಿಂತನೆಗಳನ್ನೂ ಬೋಧಿಸಲಿಲ್ಲಾ. ರಾಜಕೀಯದ ಬಗ್ಗೆ ಮಾತನಾಡಲಿಲ್ಲಾ. ಸಿದ್ಧಾಂತ ಹಿಡಿದು ವಾದಕ್ಕೆ ಇಳಿಯುತ್ತಿರಲಿಲ್ಲಾ. ವರ್ತಮಾನ ಕ್ಷಣದಲ್ಲಿ ಆಳವಾದ ಸಂತೋಷವಿದೆ, ಅದನ್ನು ಕಂಡುಕೊಳ್ಳುವುದು ಹೇಗೆಂದು ಸರಳ ಅಭ್ಯಾಸಗಳ ಮೂಲಕ ತಿಳಿಸುತ್ತಿದ್ದರು: “ಎಂಟು ಗಂಟೆ ಕಾಲ ನಿದ್ದೆ ಮಾಡಿ, ಆರೋಗ್ಯಕರ ಆಹಾರವನ್ನು ಸೇವಿಸಿ. ನಿಮ್ಮ ದೇಹವನ್ನು ಚಲನೆಯಲ್ಲಿರಿಸಿ, ಪ್ರಸ್ತುತ ಕ್ಷಣದಲ್ಲಿ ಬದುಕಿರಿ… ಉದ್ವೇಗಕ್ಕೊಳಗಾದಾಗ ಉಸಿರಾಟವನ್ನು ಗಮನಿಸಿ…” ಎಂದು ವಿನಮ್ರ ಹೃದಯದಿಂದ ಹೇಳುತ್ತಿದ್ದರು. “ನಮ್ಮ ನಡಿಗೆಯು ಅಭಿಯಾನವಲ್ಲಾ, ಅದೊಂದು ಅಭ್ಯಾಸ, ಶಾಂತಿಯು ಎಲ್ಲರೂ ಸೇರಿ ಸಾಧ್ಯವಾಗಿಸಬೇಕಾದ ಜವಾಬ್ದಾರಿ” ಎನ್ನುತ್ತಿದ್ದರು. ಅವರು ಹೇಳಿಕೊಟ್ಟಿದ್ದು ಸರಳ ಸಂಗತಿಗಳಾಗಿದ್ದವು. ಆದರೆ ನಡೆಯುವುದನ್ನು, ಉಸಿರಾಡುವುದನ್ನು, ಜವಾಬ್ದಾರಿಯನ್ನು ಮರೆತೇ ಹೋಗಿದ್ದೆವೇನೋ ಎನ್ನುವಂತೆ ಅವರ ಮಾತುಗಳನ್ನು ಜನ ಲಕ್ಷ್ಯವಿಟ್ಟು ಕೇಳಿದರು… ನಿಸರ್ಗಕ್ಕೆ ದೂರವಾಗಿ ಏನಾಗಿದ್ದೇವೆ, ಕಣ್ಣಿಗೆ ಬಟ್ಟೆಕಟ್ಟಿಕೊಂಡವರಂತೆ ಎತ್ತ ಧಾವಿಸುತ್ತಿದ್ದೇವೆ, ಧಾವಂತದಲ್ಲಿ ಗೊತ್ತುಗುರಿಯಿಲ್ಲದೆ ಅಲೆಯುತ್ತಿದ್ದೇವೆ ಎನ್ನುವ ತಮ್ಮ ಪರಿಸ್ಥಿತಿಯತ್ತ ಗಮನ ಹರಿಸಲು ಇದೊಂದು ಸದವಕಾಶವಾಗಿ ಅವರಿಗೆ ಒದಗಿ ಬಂದಿತ್ತು. ನಿವೃತ್ತ ಸೈನಿಕರು ಅನೇಕರು ಗಾಜಾ, ಡಾರ್ಫರ್, ಕಾಂಗೋ ಮತ್ತು ಮ್ಯಾನ್ಮಾರ್‌ನಲ್ಲಿನ ಸಂಘರ್ಷಗಳನ್ನು ಉಲ್ಲೇಖಿಸುತ್ತಾ, ಯುದ್ಧ, ವಲಸೆ ಮತ್ತು ಸಾವುನೋವಿನಿಂದ ಕೂಡಿದ ತಮ್ಮ ವೈಯಕ್ತಿಕ ಅನುಭವಗಳನ್ನು ಭಿಕ್ಕುಗಳೊಂದಿಗೆ ಹಂಚಿಕೊಂಡು ಕಣ್ಣೀರು ಸುರಿಸಿದರು.

ಈ ಎಲ್ಲದರ ನಡುವೆ ಶಾಂತಿಗೆ ಭಾಷೆ ಮತ್ತು ವಿವರಣೆಯ ಅಗತ್ಯವಿಲ್ಲ ಎಂದು ಜಗತ್ತಿಗೆ ನೆನಪಿಸುವಂತಿತ್ತು ಅಲೋಕನ ಸದ್ದಿಲ್ಲದ ನಡಿಗೆ. ಭಿಕ್ಕುಗಳ ಪಕ್ಕದಲ್ಲಿ ಬಾಲ ಅಲ್ಲಾಡಿಸುತ್ತಾ ಕುಂಟುತ್ತಾ ನಡೆಯುತ್ತಿದ್ದ, ಅಮೆರಿಕದ ಜನರನ್ನು ಸೂಜಿಗಲ್ಲಿನಂತೆ ಸೆಳೆದ ಅಲೋಕನದು ಕುತೂಹಲಕಾರಿ ಕತೆ. ನಾಲ್ಕು ವರ್ಷಗಳ ಹಿಂದೆ ಬೌದ್ಧ ಭಿಕ್ಕುಗಳು ಭಾರತದಲ್ಲಿ ಯಾತ್ರೆಯಲ್ಲಿದ್ದಾಗ ಕೊಲ್ಕತ್ತಾದ ಬೀದಿಯೊಂದರಲ್ಲಿ ಅವರನ್ನು ಬೆನ್ನತ್ತಿ ಬಂದವನು ಅಲೋಕ. ಆಗ ಅವನು ಸಣ್ಣ ಮರಿ. ದಾರಿಯ ಅಪಾಯಗಳಿಗೆ ಕುಗ್ಗದೆ, ಒಂದಲ್ಲ, ಎರಡಲ್ಲಾ ನೂರು ದಿನ ಪುಟ್ಟಪುಟ್ಟ ಹೆಜ್ಜೆ ಹಾಕುತ್ತಾ ಅವರೊಂದಿಗೆ ನಡೆದಿದ್ದ. ದಾರಿಯಲ್ಲಿ ದೊಡ್ಡ ನಾಯಿಗಳು ಕಚ್ಚಿ ಗಾಯಗೊಳಿಸಿದಾಗ, ಸೋಂಕು ತಗುಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಗಲೂ ತಮ್ಮ ಸಂಗ ಬಿಡದ ಆ ನಾಯಿಮರಿಯನ್ನು ಭಿಕ್ಕು ಪನ್ನಾಕರ ಆರೈಕೆ ಮಾಡಿ, ಅದಕ್ಕೆ ‘ಅಲೋಕ’ ಎಂದು ಹೆಸರಿಟ್ಟರು. ಪಾಲಿಯಲ್ಲಿ ‘ಅಲೋಕ’ ಎಂದರೆ ಬೆಳಕು. ಭಿಕ್ಕುಗಳೊಂದಿಗೆ ನಡೆಯುವುದೆಂದರೆ ಅಲೋಕನಿಗೆ ಎಲ್ಲಿಲ್ಲದ ಉತ್ಸಾಹ. ತಮ್ಮನ್ನು ಅಗಲದ ಅಲೋಕನನ್ನು ಭಿಕ್ಕುಗಳು ಅಮೆರಿಕಕ್ಕೂ ಕರೆ ತಂದರು. ಈಗ ಅಲೋಕ ಶಾಂತಿದೂತನೆಂದೇ ಅಮೆರಿಕದ ಮನೆಮನೆಯ ಮಾತಾದನು.

ಏನಿದು ಶಾಂತಿಯ ನಡಿಗೆ?

ಬುದ್ಧಗುರು ಸಂಚಾರಿ. ಎಲ್ಲಿಯೂ ಸ್ಥಾವರವಾಗಿ ನಿಲ್ಲಲಿಲ್ಲಾ. ಯಾವುದೇ ಮಠ-ಮಂದಿರ ಕಟ್ಟಲಿಲ್ಲಾ, 40 ವರ್ಷ ಕಾಲ ಶಿಷ್ಯರೊಂದಿಗೆ ಊರಿನಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ ಬರಿಗಾಲಿನಲ್ಲಿ ಸಂಚರಿಸುತ್ತಲೇ ದುಃಖದಿಂದ ಬಿಡುಗಡೆಯಾಗುವ ಧಮ್ಮ ಮಾರ್ಗವನ್ನು ಬೋಧಿಸಿದರು. ವಿಯೆಟ್ನಾಮಿನ ಝೆನ್ ಗುರು ಥಾಯ್ ಆ ನಡಿಗೆಯನ್ನು ‘ವಾಕಿಂಗ್ ಮೆಡಿಟೇಶನ್’ ಎಂದು ಆಧುನಿಕ ಪರಿಭಾಷೆಯಲ್ಲಿ ಹೇಳಿಕೊಟ್ಟರು. ಈ ಭಿಕ್ಕುಗಳೂ ಸಂಘರ್ಷಗಳ ಲೋಕದಲ್ಲಿ ಶಾಂತಿಯನ್ನು ಜಾಗೃತಗೊಳಿಸಲು ಅದೇ ಮಾರ್ಗದಲ್ಲಿ ನಡೆಯುತ್ತಿದ್ದರು. ಉಸಿರಾಟವನ್ನು ಗಮನಿಸುವುದು, ದೇಹವನ್ನು ಗಮನಿಸುವುದು, ಹಾಕುವ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ಹಾಕುವುದು, ಒಂದೊಂದೇ ಹೆಜ್ಜೆ… ಈ ಕ್ಷಣದಲ್ಲಿ ಏನು ಕ್ರಿಯೆ ಮಾಡುತ್ತೇವೆಯೋ ಅದರಲ್ಲಿ ಸಂಪೂರ್ಣವಾಗಿ ಜೀವಿಸುವುದು, ಅದೇ ಧ್ಯಾನ. ನಡಿಗೆ ಎಂದರೆ ಸುಮ್ಮನೆ ಯಾಂತ್ರಿಕವಾಗಿ ದಪದಪ ಹೆಜ್ಜೆ ಹಾಕುವುದಲ್ಲಾ. ಬಿರ್ರನೆ ಹೇಗೋ ಹೋಗಿ ಗುರಿ ತಲುಪಿ ಬಿಡುವ ಯಾಂತ್ರಿಕ ಸಾರಿಗೆಯಲ್ಲಾ, ಅದೊಂದು ಪರಿವರ್ತನೆಯ ಮಾರ್ಗ. ಪ್ರತಿ ಪಾದವು ಭೂಮಿಯನ್ನು ಮುಟ್ಟಿ, ಎದ್ದೇಳುವಾಗಿನ ಎಚ್ಚರ… ಹಾಗೆ ಎದ್ದ ಪಾದ ಮತ್ತೆ ನೆಲ ಮುಟ್ಟುವಾಗಿನ ಎಚ್ಚರ… ಎತ್ತಲೋ ಅಲೆಯುವ ಮನಸ್ಸನ್ನು ಗಮನಿಸಿ, ಮತ್ತೆ ಅದನ್ನು ನಡಿಗೆಗೆ ವಾಪಸ್ಸು ತರುವ ಎಚ್ಚರ… ಮತ್ತೆ ನಡಿಗೆಯತ್ತ ನಿಗಾ ಇಡುವ ಎಚ್ಚರ… ಹೆಜ್ಜೆಗಳನ್ನು ಗಮನಿಸುವುದು… ಎತ್ತೆತ್ತಲೋ ಹರಿವ ಮನಸ್ಸನ್ನು ಮತ್ತೆ ಮತ್ತೆ ದೇಹಕ್ಕೆ ಮರಳಿಸುವುದು… ಮನಸ್ಸು-ದೇಹಗಳ ಸಮನ್ವಯ ಸಾಧಿಸುವ ಧ್ಯಾನಕ್ರಿಯೆ. ಪ್ರತಿ ಹೆಜ್ಜೆಯೂ ಒಂದು ಕಾವ್ಯ, ಕಾಲಲ್ಲಿ ಬೊಬ್ಬೆ ಎದ್ದರೆ ಆ ನೋವಿನಲ್ಲೊಂದು ಧರ್ಮೋಪದೇಶ, ಪ್ರತಿ ಉಸಿರೂ ಒಂದು ಬೋಧನೆ. ಬರಿಗಾಲಲ್ಲಿ ನಡೆಯುತ್ತಿದ್ದ ಭಿಕ್ಕುಗಳ ಕಾಲುಗಳಲ್ಲಿ ಬೊಬ್ಬೆಗಳೆದ್ದವು, ಚರ್ಮ ಬಿರುಕು ಬಿಟ್ಟಿತು… ಕಾಲಿಗೆ ಬಟ್ಟೆ ಸುತ್ತಿಕೊಂಡು, ಬ್ಯಾಂಡೇಜ್ ಹಾಕಿಕೊಂಡು ನಡಿಗೆ ಮುಂದುವರಿಸಿದರು. ಬಟ್ಟೆಯ ಮೇಲೆ ರಕ್ತದ ಕಲೆ ಕಾಣುತ್ತಿತ್ತು. ಪ್ರತಿ ಗಾಯದಲ್ಲಿ ಅನಿತ್ಯ ಸತ್ಯದ ಅರಿವು. ಪ್ರತಿ ನೋವಿನಲ್ಲೂ ಸಹನೆಯ ಧ್ಯಾನ. ಪ್ರತಿ ಹೆಜ್ಜೆಯಲ್ಲಿ ಅರ್ಪಣೆಯ ಭಾವ. ಮುಖದಲ್ಲಿ ನೋವಿನೆಳೆ ಇಲ್ಲಾ. ಬಿಸಿಲಲ್ಲಿ, ಮಳೆಯಲ್ಲಿ, ಚಳಿಯ ಮುಂಜಾವುಗಳಲ್ಲಿ, ಬಿರುಗಾಳಿಯಲ್ಲಿ ನಡದೇ ನಡೆದರು. ಇಕ್ಕಟ್ಟಾದ ರಸ್ತೆಯಲ್ಲಿ ಭುಜದ ಹತ್ತಿರವೇ ಹಾದು ಹೋಗುವ ವಾಹನಗಳು, ಪ್ರತಿಕೂಲ ಹವಾಮಾನಗಳು. ಅನಾನುಕೂಲತೆ ಎನ್ನುವುದು ವೈರಿಯಲ್ಲಾ, ಅದೊಂದು ಪಠ್ಯಕ್ರಮ. ಕೈಯಲ್ಲಿನ ಭಿಕ್ಷಾ ಪಾತ್ರೆಯು ತ್ಯಾಗ, ವಿನಮ್ರತೆ, ಪರಸ್ಪರ ಅವಲಂಬನೆಯ ಸಂಕೇತ.

ಬೌದ್ಧ ಭಿಕ್ಕುಗಳು ಇಲ್ಲಿ ಮೌನವಾಗಿ ನಡೆಯುತ್ತಿದ್ದಾಗ ಜಗತ್ತಿನಲ್ಲಿ ಏನೆಲ್ಲಾ ಸಂಭವಿಸುತ್ತಿತ್ತು! ಉಕ್ರೇನ್‌ನಲ್ಲಿ ಚಳಿಗಾಲದ ದಾಳಿಗಳು ಇಂಧನ ಮೂಲ ಸೌಕರ್ಯವನ್ನು ಹೊಡೆದುರುಳಿಸುತ್ತಿದ್ದವು, ನಗರಗಳು ಕಣ್ಣೆದುರೇ ನಾಶವಾಗುತ್ತಿದ್ದವು, ಆಸ್ಪತ್ರೆಗಳು ಬಾಂಬ್ ದಾಳಿಗೊಳಗಾದವು. ಕೆಲವೇ ವಾರಗಳಲ್ಲಿ ನಿಲ್ಲುತ್ತದೆಂದು ಎಲ್ಲರೂ ಊಹಿಸಿದ ಯುದ್ಧವು, ಪರಿಹಾರ ಕಾಣದೆ ನಾಲ್ಕನೇ ವರ್ಷಕ್ಕೆ ಅಡಿಯಿಟ್ಟಿತು. ಇರಾನಿನಲ್ಲಿ ಜನವರಿ ಮಧ್ಯದಲ್ಲಿಯೇ ಪ್ರತಿಭಟನೆಗಳು ಭುಗಿಲೆದ್ದವು, ದೇಶಾದ್ಯಂತ ಅಂತರ್ಜಾಲ ಸಂಪರ್ಕ ಕಡಿತವಾಯಿತು. ಸಾವಿನ ಸಂಖ್ಯೆ ಏರುತ್ತಿದ್ದವು. ನಿರಾಶ್ರಿತರು ಮರಣದಂಡನೆಗೆ ಹೆದರಿ ಟರ್ಕಿಗೆ ಪಲಾಯನ ಮಾಡುತ್ತಿದ್ದರು. ಅತ್ತ ಸೈನ್ಯ ಮುನ್ನುಗ್ಗುತ್ತಿದ್ದರೆ, ಇತ್ತ ಭಿಕ್ಕುಗಳು ಅನ್ನವನ್ನು ಸ್ವೀಕರಿಸುತ್ತಿದ್ದರು. ಅತ್ತ ಜಾಗತಿಕ ನಾಯಕರು ಬೆದರಿಕೆ ಒಡ್ಡುತ್ತಿದ್ದರೆ, ಇತ್ತ ಭಿಕ್ಕುಗಳು ಮೌನವಾಗಿ ನಡೆಯುತ್ತಿದ್ದರು. ಅತ್ತ ರಾಷ್ಟ್ರಗಳು ಒಡೆದು ಹೋಳಾಗುತ್ತಿದ್ದರೆ, ಇತ್ತ ಅಪರಿಚಿತರು ಶಾಂತಿಯ ಕಾಲ್ನಡಿಗೆಗೆ ಜೊತೆಯಾಗಿ, ಸಹಯಾತ್ರಿಕರಾಗುತ್ತಿದ್ದರು.

ಶಾಂತಿಯ ಎರಡು ಮಾದರಿಗಳು ಅಲ್ಲಿದ್ದವು. ಒಂದು ಯುದ್ಧದ ಕವಚದಲ್ಲಿ, ಇನ್ನೊಂದು ಕೇಸರಿಬಣ್ಣದ ಉಡುಗೆಯಲ್ಲಿ. ನಾವು ಶಾಂತಿಗಾಗಿ ಯುದ್ಧ ಆರಂಭಿಸಿದ್ದೇವೆ ಎನ್ನುವ ಸರ್ಕಾರವು ಪ್ರಾಬಲ್ಯದ ಮೂಲಕ, ಹತೋಟಿಯ ಮೂಲಕ, ಕಟ್ಟುಪಾಡುಗಳ ಮೂಲಕ, ಹಿಂಸೆಯ ಮೂಲಕ, ಭಯವಿಡುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಸಾಧ್ಯವೆಂದು ತೋರಿಸಲು ಹೊರಟಿತ್ತು. ಅವರದು ವೇದಿಕೆಗಳಿಂದ ಘೋಷಿಸುವುದು, ಆಯುಧಗಳಿಂದ ರಕ್ಷಿಸುವುದು, ವಿಜಯಗಳಲ್ಲಿ ಅಳೆಯುವುದು ಶಾಂತಿಯ ವ್ಯಾಖ್ಯಾನ. ಇನ್ನೊಂದು ಕಡೆ ಪ್ರತಿಯೊಬ್ಬರಲ್ಲೂ ಶಾಂತಿಯನ್ನು ತರಲು ಪ್ರಯತ್ನಿಸುವುದಾಗಿತ್ತು. ಅದು ಉಸಿರಿನಲ್ಲಿ ಜೊತೆಯಾಗುವ ಶಾಂತಿ, ಡಾಂಬರಿನ ಮೇಲೆ ನಡೆಯುವ ಹೆಜ್ಜೆಗಳಲ್ಲಿ ಅಭ್ಯಾಸ ಮಾಡುವ ಶಾಂತಿ, ಧನ್ಯತೆಯಿಂದ ದಾನ ಸ್ವೀಕರಿಸುವ ಶಾಂತಿ, ತೆರೆದ ಕೈಗಳಿಂದ ನೀಡುವ ಶಾಂತಿ. ಒಂದು ಶಾಂತಿಯನ್ನು ಹಿಡಿದು ತೋರಿಸಲು ಹೊರಟರೆ, ಇನ್ನೊಂದು ನಾವೇ ಶಾಂತಿಯಾಗುವ ಮಾರ್ಗವನ್ನು ತೋರಿಸುವುದು. ಶಾಂತಿ ಎನ್ನುವುದು ಆದರ್ಶವಾದವಲ್ಲ, ಅದು ಉದ್ದೇಶಪೂರ್ವಕ, ದೈನಂದಿನ ಅಭ್ಯಾಸ ಎಂಬುದಕ್ಕೆ ಜೀವಂತ ಪುರಾವೆ ಒದಗಿಸಿದರು. ನಿಜವಾದ ಭದ್ರತೆಯು ಉನ್ನತ ಶಸ್ತ್ರಾಸ್ತ್ರಗಳಲ್ಲಿಲ್ಲ, ಆದರೆ ನಮಗೆ ತೀರಾ ಅಗತ್ಯವಿರುವ ಶಾಂತಿಯನ್ನು ಬೆಳೆಸುವಲ್ಲಿ ಇದೆ.

ಯುದ್ದದ ಪ್ರಕ್ಷುಬ್ಧ ವಾತಾವರಣದಲ್ಲಿ ಭಿಕ್ಕುಗಳು ನಡೆಯುವುದು ಇದೇ ಮೊದಲಲ್ಲಾ. ಮೌರ್ಯ ಚಕ್ರವರ್ತಿ ಅಶೋಕನು ಕಳಿಂಗ ಯುದ್ಧದಲ್ಲಿ ಮುಳುಗಿದ್ದಾಗ ಅಂದು ಭಿಕ್ಕುಗಳು ಹೀಗೇ ಶಾಂತಿಗಾಗಿ ಯುದ್ಧ ಭೂಮಿಯ ಪಕ್ಕವೇ ಮೌನವಾಗಿ ನಡೆದು ಹೋಗುತ್ತಿದ್ದರು. ರಣರಂಗದ ಅಪಾರ ಸಾವುನೋವು ನರಳಿಕೆಯ ಭಯಾನಕ ದೃಶ್ಯಗಳಿಂದ ತತ್ತರಿಸಿ ಹೋಗಿದ್ದ ಸಾಮ್ರಾಟನ ಕಣ್ಣಿಗೆ ಮನಮಗ್ನತೆಯಲ್ಲಿ ನಡೆಯುತ್ತಿದ್ದ ಭಿಕ್ಕುಗಳ ಪ್ರಶಾಂತತೆ ಆಯಸ್ಕಾಂತದಂತೆ ಸೆಳೆದಿತ್ತು. ಯುದ್ಧದಾಹಿಯಾಗಿದ್ದ ದೊರೆ ಅಶೋಕ ಬೌದ್ಧ ಧರ್ಮವನ್ನು ಅಪ್ಪಿಕೊಂಡು ಶಸ್ತ್ರಾಸ್ತ್ರ ತ್ಯಜಿಸಿ, ಅಹಿಂಸೆ ಮಾರ್ಗದಲ್ಲಿ ನಡೆದು ದೇವನಾಂಪ್ರಿಯನಾದ ಇತಿಹಾಸ ನಮಗೆಲ್ಲಾ ತಿಳಿದಿದೆ. ಅದು ಬುದ್ಧ ನಡೆಗಿರುವ ಶಕ್ತಿ! ಇನ್ನು ಈ ಕಾಲಮಾನದ ನಿದರ್ಶನಗಳನ್ನೇ ನೋಡುವುದಾದರೆ 1992ರ ಕಾಂಬೋಡಿಯಾದಲ್ಲಿ 20 ಲಕ್ಷ ಜನರ ನರಮೇಧದ ಕ್ರೌರ್ಯ ನಡೆದಾಗ ಮಹಾಘೋಷಾನಂದ ಎನ್ನುವ ಭಿಕ್ಕು “ನಿರಾಯುಧರಾಗಿ, ಸುರಕ್ಷೆಯ ಬೆಂಗಾವಲಿಲ್ಲದೆ ಶಾಂತಿಯುತವಾಗಿ ನಡೆಯೋಣ.” ಎಂದು ಕರೆಕೊಟ್ಟರು. ಶತ್ರುಗಳನ್ನು ಸಮನ್ವಯಗೊಳಿಸಲು, ದೇಶಕ್ಕಾದ ಆಘಾತವನ್ನು ಗುಣಪಡಿಸಲು, ಪರಸ್ಪರರ ಕುಟುಂಬಗಳನ್ನು ಕೊಂದು ಹಾಕುತ್ತಿದ್ದ ಜನರ ನಡುವೆ ವಿಶ್ವಾಸವನ್ನು ಪುನರ್ ನಿರ್ಮಿಸಲು ಅವರು ನೆಲಬಾಂಬುಗಳಿಂದ ಆವೃತವಾಗಿದ್ದ ದೇಶದಲ್ಲಿ ಮೌನದಿಂದ ನಡೆದರು. ಅದಕ್ಕೂ ಮುನ್ನ ವಿಯೆಟ್ನಾಂ ಯುದ್ಧದ ಸಮಯದಲ್ಲಿ ಝೆನ್ ಗುರು ಥಾಯ್, ಬಾಂಬುಗಳು ಬಿದ್ದು ಹತ್ತಿ ಉರಿಯುತ್ತಿದ್ದ ಹಳ್ಳಿಗಳಲ್ಲಿ ಸಾಮ್ರಾಜ್ಯಗಳ ಅಹಂಕಾರಗಳು ಡಿಕ್ಕಿ ಹೊಡೆಯುತ್ತಿದ್ದಾಗ ಗಾಯಾಳುಗಳನ್ನು ರಕ್ಷಿಸುತ್ತಾ ರಣಭೂಮಿಯಾಗಿದ್ದ ನಾಡಿನಲ್ಲಿ ಹೀಗೇ ನಡೆದರು. ಈ ನಡಿಗೆಯ ಪರಂಪರೆಯನ್ನು ಅಮೆರಿಕಾದಾದ್ಯಂತ ಚಲಿಸಿದ ಥೇರಾವಾದ ಭಿಕ್ಕುಗಳ ತಂಡ ಮುಂದುವರಿಸಿತ್ತು. ನಾಲ್ಕು ತಿಂಗಳ ಅವರ ಕಾಲ್ನಡಿಗೆಯು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಗ್ರಾಮೀಣ ವಲಯದ ಉದ್ದನೆಯ ಪ್ರದೇಶಗಳಲ್ಲಿ ಆಶ್ರಯ ಸಿಗುವುದು ಕಷ್ಟವಾಗಿತ್ತು. ಹವಾಮಾನವು ಬೇಗ ಬೇಗ ಬದಲಾಗುತ್ತಿತ್ತು. ಕುಂಟುತ್ತಿದ್ದ ಅಲೋಕ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭ ಬಂದಿತ್ತು. ಟೆಕ್ಸಾಸ್‌ನಲ್ಲಿ ಟ್ರಕ್ ಅಪಘಾತವಾದರೂ, ಓರ್ವ ಭಿಕ್ಕು ಕಾಲು ಕಳೆದುಕೊಂಡರೂ, ಜಾರ್ಜಿಯಾದ ಗುಡ್ ಹೋಪ್ ಬಳಿ ಮೂಲಭೂತವಾದಿ ಕ್ರಿಶ್ಚಿಯನ್ನರು ಭಿಕ್ಕುಗಳ ವಿರುದ್ಧ ಘೋಷಣೆ ಕೂಗಿದರೂ ಭಿಕ್ಕುಗಳ ಮನಶಾಂತಿ ಕದಡಲಿಲ್ಲಾ, ಕಿರಿಕಿರಿ ಮಾಡಿಕೊಳ್ಳಲಿಲ್ಲಾ. ಅಷ್ಟೇ ಪ್ರಶಾಂತತೆಯಿಂದ ನಡೆಯುತ್ತಿದ್ದರು. ಶಾಂತಿ ಎಂದರೆ ಅಡೆತಡೆಗಳ ಅನುಪಸ್ಥಿತಿಯಲ್ಲ. ಶಾಂತಿ ಎಂದರೆ ಎಲ್ಲಾ ದುಸ್ಥಿತಿಗಳಲ್ಲೂ ಹೇಗೆ ನಡೆಯುವುದು ಎಂಬುದು. ಇದು ಬೌದ್ಧ ಧರ್ಮದ ಬದುಕು. ಬೌದ್ಧಧರ್ಮವು ತತ್ವಸಿದ್ಧಾಂತವನ್ನು ಬದುಕಿನಿಂದ ಬೇರ್ಪಡಿಸಿ ನೋಡುವುದಿಲ್ಲ…

ಅಮೆರಿಕವೇ ಯಾಕೆ?

ಅಮೆರಿಕ ತನ್ನ ಅಧಿಕಾರ ವಿಸ್ತರಿಸಲು, ಆರ್ಥಿಕ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು, ಸೇನಾಶಕ್ತಿಯನ್ನು ಬಲಗೊಳಿಸಲು ಸದಾ ಕಾರ್ಯೋನ್ಮುಖವಾಗಿರುತ್ತದೆ. ತಾನು ಆಯ್ದುಕೊಂಡ ಈ ಹಾದಿಯಿಂದ ಅದಕ್ಕೆ ಅಪಾರ ಸಂಪತ್ತು, ಮನ್ನಣೆ ಸಿಕ್ಕಿರಬಹುದು. ಆದರೆ ಬಾಹ್ಯ ಪ್ರಪಂಚದ ಮೇಲೆ ಆಧಿಪತ್ಯ ಸ್ಥಾಪಿಸಲು ಸದಾ ತುದಿಗಾಲಿನಲ್ಲಿ ನಿಂತಿರುವ ಈ ದೇಶವು ತನ್ನ ಆಂತರಿಕ ಪ್ರಪಂಚವನ್ನು ಗಟ್ಟಿಗೊಳಿಸಿಕೊಳ್ಳಲು ವಿಫಲವಾಗಿದೆ. ಅದರ ಪರಿಣಾಮವೇ ಅಲ್ಲಿ ಕಾಣುತ್ತಿರುವ ರಾಜಕೀಯ ಧ್ರುವೀಕರಣ, ಸಾಂಸ್ಕೃತಿಕ ವಿಘಟನೆ ಮತ್ತು ಹೆಚ್ಚುತ್ತಿರುವ ಸಾಮಾಜಿಕ ಅಪನಂಬಿಕೆಗಳು. ಸಮೃದ್ಧಿ ಹೇರಳವಾಗಿದ್ದರೂ ಸಮಾಜದಲ್ಲಿ ನೂರೆಂಟು ಬಿರುಕುಗಳು ಮನೆಮಾಡಿವೆ. ಸಾರ್ವಜನಿಕರಲ್ಲಿ ವಿಶ್ವಾಸ ಕುಸಿದಿದೆ. ಜನಾಂಗೀಯ ಉದ್ವಿಗ್ನತೆ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಸುಡುತ್ತಿದೆ. ಆಂತರಿಕವಾಗಿ ದುರ್ಬಲವಾಗಿರುವ ದೇಶ ದೀರ್ಘಕಾಲೀನ ಯುದ್ಧವನ್ನು ಸಮರ್ಥಿಸಲು ಸಾಧ್ಯವಿಲ್ಲಾ. ಆದ್ದರಿಂದ ಯುದ್ಧವನ್ನು ಆರಿಸಿಕೊಂಡರೂ ಸುಲಭವಾಗಿ ಗೆಲ್ಲಲಾರದು. ಇಂದು ಜಗತ್ತಿನ ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಯುದ್ಧಗಳಲ್ಲಿ ಅಮೆರಿಕ ರಾಷ್ಟ್ರವು ಪ್ರತ್ಯಕ್ಷವಾಗಿ, ಇನ್ನು ಕೆಲವು ಕಡೆ ಪರೋಕ್ಷವಾಗಿ ಭಾಗಿಯಾಗಿರುವುದರಿಂದ ಶಾಂತಿಯ ಸಂದೇಶವನ್ನು ಶಕ್ತಿಯ ಕೇಂದ್ರಕ್ಕೆ ತಲುಪಿಸುವುದು ಅವರ ಆಶಯವಾಗಿತ್ತು.

ಶಾಂತಿ ನಡಿಗೆಗೆ ಭಿಕ್ಕುಗಳು ಅಮೆರಿಕವನ್ನೇ ಯಾಕೆ ಆರಿಸಿಕೊಂಡರು ಎನ್ನುವುದಕ್ಕೆ ಪ್ರಸ್ತುತ ಸಂದರ್ಭದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. 1960ರ ದಶಕದಲ್ಲಿ ವಿಯೆಟ್ನಾಂ ಯುದ್ಧಕ್ಕೆ ಅಮೆರಿಕವು ಮುಖ್ಯ ಪ್ರೇರಕ ಶಕ್ತಿ ಆಗಿದ್ದು, ದಕ್ಷಿಣ ವಿಯೆಟ್ನಾಮ್ ಸರ್ಕಾರಕ್ಕೆ ಸೈನ್ಯ ಬಲದೊಂದಿಗೆ, ಹಣ ಸಹಾಯ ಮತ್ತು ರಾಜಕೀಯ ಬೆಂಬಲ ನೀಡುತ್ತಿತ್ತು. ಯುದ್ಧದ ಬಾಂಬುಗಳು, ರಸಾಯನಿಕ ಆಯುಧಗಳು (Agent Orange) ಮಾತ್ರವಲ್ಲಾ ಸೈನಿಕರನ್ನೂ ಅಮೆರಿಕ ದೇಶವೇ ಕಳಿಸಿತ್ತು. ಆಗ ಬೌದ್ಧ ಭಿಕ್ಕುಗಳು ಯುದ್ಧದ ಎರಡೂ ಪಕ್ಷಗಳನ್ನು ಬೆಂಬಲಿಸದೆ ಶಾಂತಿಯ ಪರ ಚಳುವಳಿ ಆರಂಭಿಸಿದರು. ಝೆನ್ ಗುರು ಥಾಯ್ ಅಮೆರಿಕಕ್ಕೆ ಬಂದು ಮಾರ್ಟಿನ್ ಲೂಥರ್ ಕಿಂಗ್ ಅವರ ಬೆಂಬಲ ಪಡೆದು ಅಮೆರಿಕದ ಜನತೆಗೆ ಯುದ್ಧ ನಿಲ್ಲಿಸಲು ಕೇಳಿಕೊಂಡರು. ಇದು ಅಮೆರಿಕದಲ್ಲಿ ಯುದ್ಧ ವಿರೋಧಿ ಚಳುವಳಿ (anti-war movement) ಬಲವಾಗಿ ಬೆಳೆಯಲು ಸಾಕಷ್ಟು ಸಹಾಯ ಮಾಡಿತು. ಈಗ ಥೇರಾವಾದದ ಭಿಕ್ಕುಗಳು ಅದೇ ಕಾರಣಕ್ಕೆ ಅಮೆರಿಕಕ್ಕೆ ಬಂದಿದ್ದರು.

ಅಮೆರಿಕದ ಮೀಡಿಯಾಗಳು ಮುಖ್ಯವಾಹಿನಿಯ ಮೂಲಕ ಲಕ್ಷಾಂತರ ಜನರಿಗೆ ಭಿಕ್ಕುಗಳ ಶಾಂತಿ ಮತ್ತು ಏಕತೆಯ ಸಂದೇಶವನ್ನು ತಲುಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ‘ಶಾಂತಿ ಎಂದರೇನು?’ ಎನ್ನುವ ಚಿಂತನೆಯನ್ನು ಜನರ ಮುಂದಿಟ್ಟು ಚರ್ಚೆಗಳನ್ನು ಹುಟ್ಟುಹಾಕಿದವು. ದೂರದರ್ಶನ ಮತ್ತು ನ್ಯೂಸ್ ಚಾನೆಲ್ಗಳು ವ್ಯಾಪಕ ಕವರೇಜ್ ಕೊಟ್ಟವು. ಲೈವ್ ವರದಿಗಳನ್ನು ನೀಡಿದವು. ಸಂದರ್ಶನಗಳನ್ನು ಬಿತ್ತರಿಸಿದವು. ಪ್ರಮುಖ ಪತ್ರಿಕೆಗಳು, ಆನ್ ಲೈನ್ ಮೀಡಿಯಾಗಳು ವಿಶೇಷ ಲೇಖನಗಳನ್ನು ಪ್ರಕಟಿಸಿದವು. ಭಿಕ್ಕುಗಳು ಹಾದು ಹೋದ ರಾಜ್ಯಗಳಲ್ಲಿ ಸ್ಥಳೀಯ ಟಿವಿಗಳು ಬಿತ್ತರಿಸಿದ ಸುದ್ದಿಗಳನ್ನು ರಾಷ್ಟ್ರೀಯ ಮೀಡಿಯಾ ದೇಶಾದ್ಯಂತ ಹರಡಿತು. ಇದರಿಂದಾಗಿ ರಾಜಕೀಯ ವಿಘಟನೆಯ ಸಮಯದಲ್ಲಿ ಶಾಂತಿ ಸಂದೇಶವು ವಿವಿಧ ವಯಸ್ಸು, ಧರ್ಮ ಮತ್ತು ಸಮುದಾಯಗಳ ಜನರನ್ನು ಒಂದುಗೂಡಿಸಿತು. ಲಕ್ಷಾಂತರ ಜನರು ಅವರ ಯಾತ್ರೆಯನ್ನು ಆನ್‌ಲೈನ್‌ನಲ್ಲಿ ಅನುಸರಿಸುತ್ತಿದ್ದರು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು, ಉತ್ತೇಜನ ನೀಡುತ್ತಿದ್ದರು… ಭಿಕ್ಕುಗಳ ಯಾತ್ರೆಯು ಹೀಗೆ ರಾಷ್ಟ್ರವನ್ನು ಒಂದುಗೂಡಿಸಿತು, ಯುದ್ಧದ ಆಯಾಸದಿಂದ ಬಳಲಿದ ಮನಸ್ಸುಗಳಿಗೆ ಆಶಾಕಿರಣವಾಯಿತು. ಆದರೆ ಈ ಬದಲಾವಣೆ ಮುಂದುವರಿಯುವುದೇ ಎಂಬುದನ್ನು ಕಾದು ನೋಡಬೇಕಿದೆ. ಅವರ ನಡಿಗೆಯು ಲಕ್ಷಾಂತರ ಜನರಲ್ಲಿ ಪ್ರೇರಣೆ ಮೂಡಿಸಿರುವುದಂತೂ ಸ್ಪಷ್ಟ. ಅಮೆರಿಕದ ಆಡಳಿತ ಶಕ್ತಿಗಳು ಅವರನ್ನು ಕೇಳಿಸಿಕೊಂಡವೇ ಎನ್ನುವುದು ಪ್ರಶ್ನೆಯಲ್ಲಾ, ಅಮೆರಿಕದ ಜನ, ಲೋಕದ ಜನ ಭಿಕ್ಕುಗಳ ಹೆಜ್ಜೆಯ ದನಿ ಕೇಳಿಸಿಕೊಂಡರು ಎನ್ನುವುದು ಸದ್ಯದ ಸಮಾಧಾನದ ಸಂಗತಿ.

ಆಯ್ಕೆ ಯಾವುದು?

ಯುದ್ಧದ ಕರಾಳ ನೆರಳುಗಳು ಮತ್ತು ಶಾಂತಿಯ ಮೃದು ಬೆಳಕಿನ ನಡುವೆ ಮನುಷ್ಯನ ಅಸ್ತಿತ್ವದ ಪ್ರಶ್ನೆ ತೂಗಾಡುತ್ತಿದೆ.

ಟಾಲಸ್ಟಾಯ್‌ ಅವರ ದೃಷ್ಟಿಯಲ್ಲಿ ಯುದ್ಧವು ಒಂದು ದೊಡ್ಡ ಭ್ರಮೆ – ಅಧಿಕಾರದ ಭ್ರಮೆ, ಸಂಪತ್ತಿನ ಭ್ರಮೆ, ರಾಷ್ಟ್ರದ ಭ್ರಮೆ. ಇಂದು ನಮ್ಮ ಜಗತ್ತು ಈ ಭ್ರಮೆಯಲ್ಲಿ ಸುತ್ತುತ್ತಿದೆಯಾದರೂ, ಆ ಬರಿಗಾಲಿನ ಹೆಜ್ಜೆಗಳು: “ನಿಮ್ಮ ಮನಸ್ಸನ್ನು ಬದಲಾಯಿಸಿ, ಜಗತ್ತು ಬದಲಾಗುತ್ತದೆ.” ಎಂದು ಜ್ಞಾಪಿಸುತ್ತವೆ. ಯುದ್ಧವು ಆರ್ಥಿಕವಾಗಿ ತಾತ್ಕಾಲಿಕ ಲಾಭವನ್ನು ತೋರಿಸಿದರೂ ಅದು ಮಾನವೀಯತೆಯನ್ನು ಸಂಪೂರ್ಣ ನಾಶಮಾಡುತ್ತದೆ. ಶಾಂತಿಯು ದೀರ್ಘಕಾಲೀನ ಸಮೃದ್ಧಿ ಮತ್ತು ಸೃಜನಶೀಲತೆಯ ಬೀಜವನ್ನು ಬಿತ್ತುತ್ತದೆ. ಈ ಶಾಶ್ವತ ದ್ವಂದ್ವದಲ್ಲಿ ನಾವು ಯಾವ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ?

ಪಶ್ಚಿಮ ಏಷ್ಯಾ ಸಂಘರ್ಷವನ್ನು ಇಸ್ರೇಲ್, ಅಮೆರಿಕಾ ಮತ್ತು ಇರಾನಿನ ಮುಖಂಡರು ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಂಡಿದ್ದಾರೆ. ಸೇನಾ ಶಕ್ತಿಯಿಂದ ಶತೃ ರಾಷ್ಟ್ರವನ್ನು ಮಣಿಸಲು ಯತ್ನಿಸುತ್ತಿರುವ ಕ್ರಿಶ್ಚಿಯನ್ ದೇಶ ತಾನೆಂದು ಅಮೆರಿಕ ಹೆಮ್ಮೆಯಿಂದ ಹೇಳಿಕೊಂಡಿದೆ. ರಷ್ಯಾದ ಆರ್ಥೋಡೆಕ್ಸ್ ಚರ್ಚ್ ಉಕ್ರೇನ್ ವಿರುದ್ಧದ ಯುದ್ಧವನ್ನು ‘ಪವಿತ್ರ ಯುದ್ಧ’ ಎಂದಿದೆ. ಯುದ್ಧವನ್ನು ರಾಷ್ಟ್ರ ರಕ್ಷಣೆಯ ರೂಪವಾಗಿ ಅಥವಾ ಶಾಂತಿಯನ್ನು ಸ್ಥಾಪಿಸುವ ಸಾಧನವಾಗಿ ಸಮರ್ಥಿಸಲು ಸಾಧ್ಯವಿಲ್ಲಾ. ಶಾಂತಿಯು ನಂಬಿಕೆಯ ಸಂಬಂಧವಾಗಿರುವುದರಿಂದ ಅದನ್ನು ಬಲದಿಂದ ಅಥವಾ ಬಲದ ಬೆದರಿಕೆಯಿಂದ ಸುರಕ್ಷಿತಗೊಳಿಸಲಾಗುವುದಿಲ್ಲಾ. ಶಾಂತಿಯನ್ನು ಅಗಾಧ ಶಕ್ತಿಯ ಉತ್ಪನ್ನ (peace through strength) ವೆಂದು ಮರು ವ್ಯಾಖ್ಯಾನಿಸುವ ಮೂಲಕ, ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ದೇಶಗಳು ಸ್ಪರ್ಧೆಗೆ ಬಿದ್ದಿವೆ. ಇಷ್ಟೊಂದು ಹಿಂಸೆ, ಅನುಮಾನ ಮತ್ತು ಭಯದಿಂದ ತಲ್ಲಣಿಸುತ್ತಿರುವ ಜಗತ್ತಿನಲ್ಲಿ, ನಾವು ಯುದ್ಧದಿಂದ ದೂರ ಸರಿದು ಶಾಂತಿಯತ್ತ ಹೇಗೆ ತಿರುಗಬಹುದು? ಯಾವುದೇ ಯುದ್ಧವು ನೈತಿಕ ಸಮಸ್ಯೆಯನ್ನು ಯಾವತ್ತಿಗೂ ಪರಿಹರಿಸಿಲ್ಲ. ಅದು ಪರಿಹಾರವನ್ನು ಹೇರಬಹುದು, ಆದರೆ ಅದೂ ನ್ಯಾಯಯುತವಾದ ಪರಿಹಾರವಾಗಿರುತ್ತದೆಂದು ಖಚಿತವಾಗಿ ಹೇಳಲಾಗುವುದಿಲ್ಲಾ. ವಿರೋಧಿಗಳನ್ನು ಅಳಿಸಿಹಾಕಬಹುದು. ಆದರೆ ಅದಕ್ಕೂ ತಕ್ಕ ಬೆಲೆ ತೆರಬೇಕಾಗುತ್ತದೆ. ಆಕ್ರಮಣಕಾರಿ ಯುದ್ಧವು ಮಾನವತೆಯ ವಿರುದ್ಧದ ದೊಡ್ಡ ಅಪರಾಧ.

ಭಿಕ್ಕುಗಳ ಈ ಕಾಲ್ನಡಿಗೆ ಮುಗಿದ ಕೆಲವೇ ವಾರಗಳಲ್ಲಿ, ಜಗತ್ತು ಇನ್ನೂ ಯುದ್ಧದ ಕಿಚ್ಚಿನಲ್ಲಿ ದಿನೇ ದಿನೇ ಸುಟ್ಟುಕೊಳ್ಳುತ್ತಿದೆ –ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಜ್ವಾಲೆಗಳು ವ್ಯಾಪಕವಾಗುತ್ತಿವೆ. ದೇಶ-ದೇಶಗಳು ಹೊತ್ತಿ ಉರಿಯುತ್ತಿವೆ… ಮಧ್ಯಪ್ರಾಚ್ಯದಲ್ಲಿ ಮನೆಗಳು ಕಲ್ಲು-ಕಾಂಕ್ರೀಟಿನ ಕುಪ್ಪೆಗಳಾಗಿ, ತಾಯಂದಿರು ತಮ್ಮ ಮಕ್ಕಳ ಶವಗಳನ್ನು ತೋಳುಗಳಲ್ಲಿ ಹೊತ್ತುಕೊಂಡು ರೋಧಿಸುತ್ತಿದ್ದಾರೆ; ಮ್ಯಾನ್ಮಾರ್‌ನಲ್ಲಿ ಗ್ರಾಮಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಾ, ನಿರಾಶ್ರಿತರ ಕಣ್ಣುಗಳಲ್ಲಿ ಭಯದ ನೆರಳುಗಳು ಆಳವಾಗಿವೆ, ಇರಾನಿನಲ್ಲಿ ಶಾಲೆಗೆ ಬಾಂಬ್ ಬಿದ್ದು ಪುಟ್ಟ ಬಾಲಕಿಯರು ಕ್ಷಣಾರ್ಧದಲ್ಲಿ ಕರಕಲಾಗಿದ್ದಾರೆ, ದಿನಬೆಳಗಾದರೆ ಸೈರನ್ನಿನ ಸದ್ದು ಕೇಳಿ ಮಕ್ಕಳು ಕಿವಿಮುಚ್ಚಿಕೊಂಡು ಚೀತ್ಕರಿಸುತ್ತಿವೆ, ಅಡಗಿಕೊಳ್ಳಲು ಜಾಗವಿಲ್ಲದೆ ಪರಿತಪಿಸುತ್ತಿವೆ… ಇವುಗಳು ತೋರಿಸುವುದೇನು? ರಾಜಕೀಯ-ಆರ್ಥಿಕ ಶಕ್ತಿಗಳು ಯುದ್ಧದ ಚಕ್ರವನ್ನು ತಿರುಗಿಸುತ್ತಲೇ ಇವೆ… ಹಾಗಾದರೆ ಶಾಂತಿಯು ಜಾಗತಿಕ ನೀತಿಯ ಆಧಾರವಾಗಿ ಬೆಳೆಯುವುದಾದರೂ ಹೇಗೆ?

ನಾವು ವಾಸಿಸುವ ಜಗತ್ತು ಅಪನಂಬಿಕೆ, ಅನುಮಾನ, ದ್ವೇಷ ಮತ್ತು ಅಸಂಖ್ಯಾತ ವಿಭಜನೆಗಳಿಂದ ಛಿದ್ರಗೊಂಡಿದೆ. ಇದರ ಕಾರ್ಯಾಗಾರ ಇನ್ನೆಲ್ಲೋ ಇಲ್ಲಾ- ಅದು ನಮ್ಮ ಮನಸ್ಸೇ. ನಮ್ಮ ಮನಸ್ಸಿನ ಪ್ರತಿಬಿಂಬವೇ ನಮ್ಮ ಸಮಾಜ. ಮನಸ್ಸು ಕೋಪ, ದ್ವೇಷ, ಅತಿಯಾಸೆ ಮತ್ತು ಗೊಂದಲಗಳಿಂದ ತುಂಬಿ ಹೋಗಿರುವಾಗ ಜಗತ್ತು ಶಾಂತಿಯುತವಾಗಿರಲು ಹೇಗೆ ಸಾಧ್ಯ? ದ್ವೇಷಕ್ಕೆ ದ್ವೇಷ ಇಡೀ ಜಗತ್ತನ್ನೇ ಹಗೆಯ ಬೇಗೆಯಲ್ಲಿ ಬೇಯಿಸಿದರೆ, ಕಣ್ಣಿಗೆ ಕಣ್ಣು ಎನ್ನುವ ಪ್ರತೀಕಾರವು ಇಡೀ ಮಾನವ ಕುಲವನ್ನೇ ಕುರುಡಾಗಿಸುತ್ತದೆ. ಯುದ್ಧವು ಪರಾಕ್ರಮದ ಸಂಕೇತವಲ್ಲಾ, ಅದು ಮಾನವನ ಸ್ವಭಾವದ ದೌರ್ಬಲ್ಯವೆಂದ ಗಾಂಧೀಜಿ ಯುದ್ಧದ ಬದಲು ಸತ್ಯಾಗ್ರಹ ಮತ್ತು ಪ್ರೇಮದ ಶಕ್ತಿಯತ್ತ ನಮ್ಮ ಗಮನ ಸೆಳೆದರು.. ಶಾಂತಿಯು ದೂರದ ಸ್ವಪ್ನವಲ್ಲ; ಅದು ಪ್ರತಿ ವ್ಯಕ್ತಿಯ ಆಂತರಿಕ ಪಯಣದಿಂದ ಪ್ರಾರಂಭವಾಗುವ ಮಾರ್ಗ. ಶಾಂತಿಯು ಶಬ್ದಗಳಲ್ಲಲ್ಲ, ಹೆಜ್ಜೆಗಳಲ್ಲಿದೆ ಎಂದು ಶಾಂತಿಯಾತ್ರೆಯು ಅಂತರಂಗವನ್ನು ಜಾಗೃತಗೊಳಿಸಲು ನಡೆಯಿತು… ಆದರೆ “ದ್ವೇಷವನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ; ಅದನ್ನು ಕರುಣೆಯಿಂದಲೇ ಗೆಲ್ಲಬೇಕು… ನಿಮ್ಮನ್ನು ನೀವು ಗೆಲ್ಲುವುದೇ ಅತಿ ದೊಡ್ಡ ಗೆಲುವು” ಎನ್ನುವ ಬುದ್ಧಗುರುವಿನ ಮಾತುಗಳು ಬಂದೂಕುಗಳ ಸದ್ದಿಗೆ ಕಿವುಡಾದ ನಮ್ಮ ಕಿವಿಗೆ ಕೇಳಿಸುತ್ತವೆಯೇ?

ಭಿಕ್ಕುಗಳೇ ಹೇಳಿದಂತೆ- “”ನಮ್ಮ ನಡಿಗೆಯು ಜಗತ್ತಿಗೆ ಶಾಂತಿಯನ್ನು ತರಬಹುದೇ ಎಂದು ಕೆಲವರು ಅನುಮಾನಿಸಬಹುದು ಮತ್ತು ನಾವು ಆ ಅನುಮಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ನಡಿಗೆಯೇ ಶಾಂತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದರೆ ಯಾರಾದರೂ ನಮ್ಮನ್ನು ಸಂಧಿಸಿದಾಗ, ನಮ್ಮ ಸಂದೇಶವು ಅವರೊಳಗಿನ ಆಳವಾದದ್ದನ್ನು ಮುಟ್ಟಿದಾಗ, ಅದು ಅವರ ಹೃದಯದಲ್ಲೇ ಸದ್ದಿಲ್ಲದೆ ಸದಾ ನೆಲೆಗೊಂಡ ಶಾಂತಿಯನ್ನು ಜಾಗೃತಗೊಳಿಸಿದಾಗ, ಪವಿತ್ರವಾದ ಪ್ರಜ್ಞೆ ತೆರೆದುಕೊಳ್ಳಲು ಪ್ರಾರಂಭಿಸುತ್ತದೆ, ಅದುವರೆಗೆ ಅವರಿಗೆ ಅನುಭವಕ್ಕೆ ಬಂದಿರದ ಆ ಸದ್ಭಾವವನ್ನು ಅವರು ಮುಂದಕ್ಕೆ ಕೊಂಡೊಯ್ಯುತ್ತಾರೆ. ತಮ್ಮ ದೈನಂದಿನ ಜೀವನದಲ್ಲಿ ಅವರು ಹೆಚ್ಚು ಜಾಗರೂಕರಾಗುತ್ತಾರೆ, ಪ್ರತಿ ಉಸಿರಿನೊಂದಿಗೆ ಹೆಚ್ಚು ಪ್ರಸ್ತುತದಲ್ಲಿ ಜೀವಿಸುತ್ತಾರೆ, ತಮ್ಮ ಮಗುವಿನೊಂದಿಗೆ ಹೆಚ್ಚು ಮೃದುವಾಗಿ ಮಾತನಾಡುತ್ತಾರೆ. ತಮ್ಮ ಸಂಗಾತಿಯ ಮಾತುಗಳನ್ನು ಹೆಚ್ಚು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ದಯೆಯ ಅಗತ್ಯವಿರುವ ಅಪರಿಚಿತರಿಗೆ ಅದನ್ನು ವಿಸ್ತರಿಸುತ್ತಾರೆ. ಇಂತಹ ಅನಿರೀಕ್ಷಿತ ಸಹಾನುಭೂತಿಯ ಸ್ಪರ್ಶದಿಂದ ಆ ಅಪರಿಚಿತ ವ್ಯಕ್ತಿ, ಅದನ್ನು ಬೇರೆಯವರಿಗೆ ಕೊಂಡೊಯ್ಯುತ್ತಾರೆ, ಹೀಗೆ ಅಲೆಯಿಂದ ಅಲೆಗೆ, ಹೃದಯದಿಂದ ಹೃದಯಕ್ಕೆ, ಕ್ಷಣದಿಂದ ಕ್ಷಣಕ್ಕೆ ಕರುಣೆಯ ಮಹಾಸತ್ಯವು ಮುಂದುವರಿಯುತ್ತದೆ”

ಝೆನ್ ಗುರು ಥಾಯ್ ಹೇಳುತ್ತಿದ್ದರು: “ಯುದ್ಧದ ಬೇರುಗಳು ನಾವು ನಮ್ಮ ದೈನಂದಿನ ಜೀವನವನ್ನು ನಡೆಸುವ ವಿಧಾನದಲ್ಲಿವೆ. ಅಂದರೆ ನಾವು ನಮ್ಮ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ, ನಮ್ಮ ಸಮಾಜವನ್ನು ನಿರ್ಮಿಸುವ ಮತ್ತು ಸರಕುಗಳನ್ನು ಬಳಸುವ ವಿಧಾನದಲ್ಲಿವೆ. ನಾವು ಯಾವಾಗಲೂ ಓಡುತ್ತಿರುತ್ತೇವೆ, ಮತ್ತು ಓಡುವುದೇ ಅಭ್ಯಾಸವಾಗಿದೆ. ನಾವು ಯಾವಾಗಲೂ ಚಡಪಡಿಸುತ್ತಿರುತ್ತೇವೆ, ನಿದ್ದೆ ಮಾಡುವಾಗಲೂ ಸಹ. ನಾವು ನಮ್ಮೊಂದಿಗೆ ಯುದ್ಧದಲ್ಲಿದ್ದೇವೆ ಮತ್ತು ನಾವು ಇತರರೊಂದಿಗೆ ಸುಲಭವಾಗಿ ಯುದ್ಧವನ್ನು ಪ್ರಾರಂಭಿಸಬಹುದು. ನಮ್ಮ ಎದುರಿನ ವ್ಯಕ್ತಿಗೆ ತನ್ನ ಬಗ್ಗೆ ಮತ್ತು ನಮ್ಮ ಬಗ್ಗೆ ತಪ್ಪು ಗ್ರಹಿಕೆಗಳಿವೆ. ಮತ್ತು ನಮಗೂ ನಮ್ಮ ಬಗ್ಗೆ ಮತ್ತು ಎದುರಿನ ವ್ಯಕ್ತಿಯ ಬಗ್ಗೆ ತಪ್ಪು ಗ್ರಹಿಕೆಗಳಿವೆ. ಅದೇ ಹಿಂಸೆ, ಸಂಘರ್ಷ ಮತ್ತು ಯುದ್ಧಕ್ಕೆ ಅಡಿಪಾಯ.” ಶಾಂತತೆ ಮತ್ತು ಸಾವಧಾನತೆಗಳ ಅಭ್ಯಾಸದ ಮೂಲಕ ವಿಪರೀತಗಳನ್ನು ಬಿಟ್ಟು ಸಮತೆಗೆ ಮರಳುವ ದಾರಿಯನ್ನು ಭಿಕ್ಕುಗಳು ತೋರಿಸಿದ್ದಾರೆ.

ಬುದ್ಧಗುರು ಎಂದಿಗೂ ಶಾಂತಿಯುತ ಜಗತ್ತನ್ನು ಭರವಸೆ ನೀಡಲಿಲ್ಲ, ಅದನ್ನು ಸಾಕಾರಗೊಳಿಸುವ ಒಂದು ಮಾರ್ಗವನ್ನು ತೋರಿದರು, ಅದು ಮನಸ್ಸಿನಲ್ಲಿ ಪ್ರಾರಂಭವಾಗುವ, ಹೃದಯವನ್ನು ತರಬೇತಿಗೊಳಿಸುವ, ಆಸೆಯ ಮಿತಿಯನ್ನು ತೋರಿಸುವ, ದ್ವೇಷವನ್ನು ಅದರ ಮೂಲದಲ್ಲಿ ಕರಗಿಸುವ ಮಾರ್ಗ. ಇದು ಆಂತರಿಕ ಯುದ್ಧವನ್ನು ಕೊನೆಗಾಣಿಸುವ ಮಾರ್ಗ. ಹಾಗೆ ಆಂತರಿಕ ಯುದ್ಧ ಕೊನೆಗೊಂಡಾಗ, ದುಷ್ಟತನದ ಆಲೋಚನೆಗಳು ಮಸುಕಾಗುತ್ತವೆ, ಆಸೆ, ಕೋಪ, ಗೊಂದಲಗಳು ನಿಧಾನವಾಗಿ ಕಣ್ಮರೆಯಾಗುತ್ತವೆ. ಆಗ ಮಾತ್ರ ಜಗತ್ತಿನಲ್ಲಿ ಶಾಂತಿಯ ಬೆಳಕು ಕಾಣತೊಡಗುತ್ತದೆ.

ನಾವಿಡುವ ಪ್ರತಿ ಹೆಜ್ಜೆ ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ, ನಮ್ಮ ಜಗತ್ತಿನಲ್ಲಿ ಶಾಂತಿಯನ್ನಾದರೂ ಸೃಷ್ಟಿಸಬಹುದು, ಹಿಂಸೆಯನ್ನಾದರೂ ಸೃಷ್ಟಿಸಬಹುದು… ಪ್ರತಿ ಒಂದು ಹೆಜ್ಜೆಯಲ್ಲಿ, ಪ್ರತಿ ಒಂದು ಉಸಿರಿನಲ್ಲಿ, ಪ್ರತಿ ಒಂದು ಪ್ರೀತಿಯ ಕ್ರಿಯೆಯಲ್ಲಿ ಶಾಂತಿಯನ್ನು ಆಯ್ಕೆ ಮಾಡುವುದನ್ನು ತಮ್ಮ ವರ್ತನೆಗಳ ಮೂಲಕವೇ ಭಿಕ್ಕುಗಳು ತೋರಿಸಿಕೊಟ್ಟರು. ಅವರು 2300 ಮೈಲಿಗಳನ್ನು ನಡೆದರು, ನಾವು ಒಂದು ಮೈಲಿ ಮೌನವಾಗಿ ನಡೆಯಬಲ್ಲೆವೆ? ಅವರು ದಿನಕ್ಕೆ ಒಂದೇ ಊಟವನ್ನು ಪ್ರಜ್ಞಾಪೂಋವಕವಾಗಿ ಮಾಡುತ್ತಿದ್ದರು. ನಾವು ಫೋನಿಲ್ಲದೆ ಒಂದು ಹೊತ್ತಿನ ಊಟವನ್ನಾದರೂ ಮಾಡಬಲ್ಲೆವೆ? ಯಾವ ನಿರೀಕ್ಷೆಯಿಲ್ಲದೆ ದಾನ ಕೊಡುವ ಅಭ್ಯಾಸ ಅವರದಾಗಿತ್ತು, ನಾವು ಪ್ರತಿಫಲದ ಬಯಕೆಯಿಲ್ಲದೆ ಸಹಾಯಮಾಡಬಲ್ಲೆವಾ?… ನಾವು ಬದಲಾಗದೆ ಯಾವ ಬದಲಾವಣೆಯನ್ನೂ ಯಾರಿಂದಲೂ ನಿರೀಕ್ಷಿಸುವುದು ಸಾಧ್ಯವಿಲ್ಲಾ.

ಯುದ್ಧದ ಕರಾಳ ನೆರಳುಗಳು ಇನ್ನೂ ದಟ್ಟವಾಗಿದ್ದರೂ, ಬೆಳಕಿನ ಹೆಜ್ಜೆಗಳು ನಮ್ಮ ಮುಂದೆ ಇವೆ. ಅವುಗಳನ್ನು ಅನುಸರಿಸಿದರೆ ಮಾತ್ರ, ಶಾಂತಿಯ ಕನಸು ನಮ್ಮ ಜೀವನದ ಸತ್ಯವಾಗುತ್ತದೆ. ಈ ಹೆಜ್ಜೆಗಳು ನಿಮ್ಮಲ್ಲಿಯೂ, ನನ್ನಲ್ಲಿಯೂ, ನಮ್ಮೆಲ್ಲರಲ್ಲಿಯೂ ಮುಂದುವರಿಯಲಿ.
ಶಾಂತಿ ಪ್ರಾರಂಭವಾಗುವುದು ಇಂದು, ಈ ಕ್ಷಣದಲ್ಲಿ – ಒಂದು ಪ್ರೀತಿಯ ಹೆಜ್ಜೆಯಿಂದ.

Previous post ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
Next post ಅರ್ಥ – ವ್ಯರ್ಥ
ಅರ್ಥ – ವ್ಯರ್ಥ

Related Posts

ಸಾವಿನ ಸುತ್ತ…
Share:
Articles

ಸಾವಿನ ಸುತ್ತ…

January 8, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ? ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ? ಅಕಟಕಟಾ, ಎನ್ನವನೆನ್ನವನೆನ್ನಯ್ಯಾ ಕೂಡಲಸಂಗಮದೇವಯ್ಯಾ....
ಶರಣರು ತೋರಿದ ಆಚಾರಗಳು
Share:
Articles

ಶರಣರು ತೋರಿದ ಆಚಾರಗಳು

March 17, 2021 ಡಾ. ಪಂಚಾಕ್ಷರಿ ಹಳೇಬೀಡು
೧. ಸದಾಚಾರ ಶರಣ ಪಥದಲ್ಲಿ ಸಾಗುವ ಪಥಿಕನು ಶೂನ್ಯವನ್ನು ಗುರಿಯಾಗಿರಿಸಿಕೊಂಡು ಷಟ್ಸ್ಥಲವೆಂಬ ಆರು ಹಂತಗಳ ಪಥವಿಡಿದು ಗಮ್ಯದೆಡೆಗೆ ಪಯಣಿಸುತ್ತಾನೆ. ಹೀಗೆ ಸಾಧಕಜೀವಿ ಸಾಗುವ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?
April 5, 2026
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
Copyright © 2026 Bayalu