Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
Share:
Articles May 6, 2021 ಪದ್ಮಾಲಯ ನಾಗರಾಜ್

ಮಿಥ್ಯಾದೃಷ್ಟಿರಹಿತ ಬಯಲ ದರ್ಶನ

(ಮುಂದುವರಿದ ಭಾಗ)

… ಈ ಹಿಂದೆ ಗುರುಗಳು ಹೇಳಿದ ಮಾತುಗಳು ಶಿಷ್ಯನಲ್ಲಿ ವಿಚಿತ್ರ ಬಗೆಯ ದುಗುಡ ದುಮ್ಮಾನಗಳನ್ನು ಸೃಷ್ಟಿಸಿದ್ದವು. ಮುಖ್ಯವಾಗಿ ಬಯಲ ಮಾರ್ಗದಲ್ಲಿ ಬಂಧನದ ದುಃಖವಿಲ್ಲ, ಬಿಡುಗಡೆಯ ಆಶೆಯಿಲ್ಲ; ಶಾಸ್ತ್ರ-ಪುರಾಣಗಳಿಗದು ಎಟುಕುವುದಿಲ್ಲ… ಎಂಬಂತಹ ಮಾತುಗಳನ್ನು ಕೇಳಿ ಶಿಷ್ಯನ ಮನಸ್ಸು ಪೂರ್ತಿ ಉದ್ವಸ್ತಗೊಂಡಿತ್ತು. ಅವನು ಇರುವವರೆವಿಗೂ ನಂಬಿಕೊಂಡು ಬಂದಿದ್ದ ನಂಬಿಕೆಗಳೆಲ್ಲವೂ ಇಲ್ಲಿ ತಲೆಕೆಳಗಾಗಿದ್ದವು. ಅವನು ಪೋಷಿಸಿಕೊಂಡು ಕಟ್ಟಿಕೊಂಡಿದ್ದ ಭಾವನಾ ಲೋಕವು ಅಲ್ಲೋಲ ಕಲ್ಲೋಲವಾಗಿಬಿಟ್ಟಿತ್ತು. ಆದಾಗ್ಯೂ… ಗುರುಗಳ ಮಾತು ಪೂರ್ತಿ ಸುಳ್ಳೆಂದು ನಿರಾಕರಿಸಲಾಗದೇ ಮತ್ತೊಂದು ಕಡೆ ತುಂಬಾ ಕಠಿಣವಾದದ್ದರಿಂದಾದ ವಿಚಿತ್ರ ಅನುಭವ ಮತ್ತೆ ಶಿಷ್ಯನನ್ನು ಗುರುಗಳು ಇರುವಲ್ಲಿಗೆ ಎಳೆದು ತಂದಿತ್ತು. ಸಮುದ್ರದೊಳಗಣ ಉಪ್ಪು, ಬೆಟ್ಟದ ನೆಲ್ಲಿಕಾಯಿಯ ಮಿಶ್ರಣದಂತೆ ಅದೊಂದು ಸುಮಧುರ ಸಂಬಂಧವೂ ಆಗಿತ್ತು. ಆದ್ದರಿಂದ…

ಶಿಷ್ಯ: ಶರಣು ಶರಣಾರ್ಥಿ!!! ನನ್ನ ತಿಳಿಗೇಡಿತನವನ್ನು ಮನ್ನಿಸುತ್ತೀರೆಂದು ಮತ್ತೆ ಬಂದಿದ್ದೇನೆ ಗುರುವೇ! ಬಯಲು ದರ್ಶನಕ್ಕೆ ಅಡ್ಡಿಯಾಗಿರುವ ‘ಮಿಥ್ಯಾದೃಷ್ಟಿ’ಯ ಕುರಿತು ಸರಳವಾಗಿ ತಿಳಿಸುತ್ತೀರಾ?

ಗುರು: (ಸಹಜವಾಗಿ) ಅತ್ಯಮೂಲ್ಯವಾದುದನ್ನೇ ಹೇಳುತ್ತಿದ್ದರೂ ತಿಳಿಯಲರಿಯದೇ ನಿನ್ನೊಳಗೆ ನೀನೇ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದರೆ ನಾನು ಏನು ಮಾಡಲಿ? ಪ್ರತ್ಯಕ್ಷ ಜ್ಞಾನದ ಗ್ರಹಣಾತ್ಮಕ ಮೇಧಸ್ಸನ್ನು ಕಳೆದುಕೊಂಡವರಿಗೆ ಸುಳ್ಳೇ ನಿಜವಾಗಿ ಬಿಡುತ್ತದೆ. ನಿಜವೇ ಸುಳ್ಳೆನಿಸಿ ಬಿಡುತ್ತದೆ. ಈ ಸುಳ್ಳು-ಸತ್ಯಗಳ ಮಿಶ್ರಣದಿಂದಾದ ಭಾವ ಭ್ರಷ್ಟತೆಯಿಂದ ಪಾರಾಗುವುದು ಬಹಳ ಕಷ್ಟ. ಅದಕ್ಕೆ ಅಲ್ಲಮರು ಹೇಳಿದರು-

ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ
ಮಾಯಾ ಸೂತ್ರವಿದೇನೊ!
ಕಂಗಳೊಳಗಣ ಕತ್ತಲೆ ತಿಳಿಯದಲ್ಲಾ!
ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು, ಗುಹೇಶ್ವರಾ.

ಗುರು ನಿರ್ಣಯಿಸಲ್ಪಟ್ಟಿರುವ ನಿಜ ಅರಿಯದಾ ಮನಕ್ಕೆ ದುಗುಡವೇ ಆಹಾರ!! ಮಾಯಾ ಸೂತ್ರದಲ್ಲಿ ತಗುಲಿಕೊಳ್ಳುವ ವಿಧಾನವಿದು. ಆದಾಗ್ಯೂ ಆ ಗುರು ಮಹಾಂತನು ನಿನ್ನಲ್ಲಿ ಪ್ರಜ್ಞಾ ಚೈತನ್ಯವನ್ನು ಬೆಳಗಿಸಲಿ ಎಂಬ ಆಶೆಯಿಂದ ನಿನಗೆ ನಾನು ‘ಮಿಥ್ಯಾದೃಷ್ಟಿ’ ಎಂದರೆ ಏನೆಂದು ಹೇಳಲು ಪ್ರಯತ್ನಿಸುತ್ತೇನೆ.
ಮಿಥ್ಯಾ ದೃಷ್ಟಿ ಎಂದರೆ ತಪ್ಪು ಗ್ರಹಿಕೆ! ಒಂದನ್ನು ನೋಡಿ ಮತ್ತೊಂದಾಗಿ ಗ್ರಹಿಸುವುದು!! ಮಿಸ್ ರೀಡಿಂಗ್!!! ಹಗ್ಗವನ್ನು ನೋಡಿ ಹಾವೆಂದು ಗ್ರಹಿಸಿಕೊಂಡರೆ ಭಯ ಖಂಡಿತಾ ಬಿಡದು. ಇದನ್ನೇ ನಮ್ಮ ಅಲ್ಲಮರು “ಕಂಗಳೊಳಗಣ ಕತ್ತಲೆ” ಎಂದದ್ದು!!! ಈ ಕಂಗಳ ಕತ್ತಲೆ ಆವರಿಸಿಕೊಂಡರೆ ಬೆಳಕಿನಲ್ಲೇ ಇರುವ ಬಯಲ ಶೃಂಗಾರ ತನ್ನನ್ನು ನೋಡುವವರಿಲ್ಲದೆ ಬಳಲಿ ಬಿಡುತ್ತದೆ!!!! ಬಯಲೆಂಬುದು ಬೆಳಗಿನೊಳಗಣ ಶೃಂಗಾರ ಕಣಯ್ಯಾ…
ನಮ್ಮ ಶರಣರು ಮಿಥ್ಯಾದೃಷ್ಟಿಗೆ ಸರಿಸಮವಾದ ಅನೇಕ ಅಚ್ಚಕನ್ನಡದ ಶಬ್ದಗಳನ್ನು ಕಟ್ಟಿ ತೋರಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೇಳುವುದಾದರೆ- ಕಂಗಳೊಳಗಣ ಕತ್ತಲೆ, ಮನದ ಮುಂದಣ ಕತ್ತಲೆ, ಬ್ರಹ್ಮಪಾಶ, ವಿಷ್ಣು ಮಾಯೆ (ಹೆಣ್ಣು, ಹೊನ್ನು, ಮಣ್ಣು), ಕಾಲಗಾಹಿ, ಕೋಡುಗ, ರಕ್ಕಸಿ, ಕಾಮಲತೆ, ಪವನ, ಮಗನ ಕೈಯ್ಯ ಅರಗಿಳಿ, ಸಕ್ಕರೆ ಗೊಂಬೆ, ಮುಗಿಲ ಪಕ್ಷಿ, ಉದಯಾಸ್ತಮಾನ, ಘಟಸರ್ಪ ಇತ್ಯಾದಿ.

ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ,
ಹರಹರಾ ಮಾಯೆ ಇದ್ದೆಡೆಯ ನೋಡಾ.
ಶಿವಶಿವಾ ಮಾಯೆ ಇದ್ದೆಡೆಯ ನೋಡಾ.
ಎರಡೆಂಬತ್ತುಕೋಟಿ ಪ್ರಮಥಗಣಂಗಳು, ಅಂಗಾಲ ಕಣ್ಣವರು
ಮೈಯೆಲ್ಲಾ ಕಣ್ಣವರು, ನಂದಿ ವಾಹನ ರುದ್ರರು_ಇವರೆಲ್ಲರು,
ಮಾಯೆಯ ಕಾಲಗಾಹಿನ ಸರಮಾಲೆ ಕಾಣಾ ಗುಹೇಶ್ವರಾ.

ಇಲ್ಲಿ ‘ಮಾಯೆಯ ಕಾಲಗಾಹಿ’ ಎಂದರೆ ಮಾಯೆಯನ್ನು ಕಾಯ್ದುಕೊಂಡವರು ಅಥವಾ ಪೋಷಿಸಿದವರು ಎಂದಾಗುತ್ತದೆ. ದನ ಕಾಯುವವನನ್ನು ದನಗಾಹಿ ಎನ್ನುತ್ತೇವಲ್ಲಾ ಹಾಗೆ! ಅಲ್ಲಮರು ಇನ್ನೂ ಸ್ವಲ್ಪ ಮುಂದೆ ಹೋಗಿ ದೇವಾನುದೇವ ದೇವಿಯರೆಲ್ಲರೂ ಮಾಯೆಯನ್ನು ಹೇಗೆ ಪೋಷಿಸಿದರೋ ಹಾಗೆಯೇ ಮನುಜ ಕುಲವೂ ಮಾಯೆಯನ್ನು ಪೋಷಿಸಿಕೊಂಡು ಹೋಗುತ್ತಿದೆ. ಅಂದರೆ ಇಡೀ ಮನುಷ್ಯ ಕುಲ ಜೀವಂತವಿರುವ ತನಕವೂ ಈ ಮೇಲ್ಕಂಡ ದೇವಾನುದೇವತೆಗಳ ಕೂಡಾಟ ಮತ್ತು ಎರಡೆಂಬತ್ತು ಕೋಟಿ ಪ್ರಮಥ ಗಣಗಳಾದ ಅಂಗಾಲಕಣ್ಣವರು, ಮೈಯೆಲ್ಲಾ ಕಣ್ಣವರು, ನಂದಿವಾಹನ ರುದ್ರರು ಇವರೆಲ್ಲರ ಚರಿತ್ರೆಯೊಳಗಣ ಮಾಯೆಯನ್ನು ಮತ್ತು ಮಾಯಾ ಚರಿತ್ರೆಗಳನ್ನು ಪೋಷಿಸಿಕೊಂಡು ಹೋಗಲಾಗುತ್ತಿದೆಯಾದ್ದರಿಂದ ಇವರೆಲ್ಲರೂ ಮಾಯೆಯ ‘ಕಾಲಗಾಹಿನ ಸರಮಾಲೆ’ ಎಂದು ಜರಿಯುತ್ತಾರೆ ಕಂದಾ…

ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು.
ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು.
ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು.
ಗುಹೇಶ್ವರನೆಂಬ ಲಿಂಗದ ನಿಜವನೆಯ್ದುವಡೆ,
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.

ಭ್ರಾಂತಿಯೆಂಬ ತಾಯಿ ಅಥವಾ ಮಾಯೆಯೆಂಬ ತಾಯಿ ಬಂಜೆಯಾದರೆ ಮಾತ್ರ ತತ್ಪರಿಣಾಮದಿಂದಾದ ಸ್ವಭಾವಗಳ ಶಿಶು ಸಂಪತ್ತಿ ನಶಿಸುತ್ತದೆ. ಮನದ ಮುಂದಣ ಕತ್ತಲೆ ಎಂಬ ಬೀಜ ನಷ್ಟವಾದರೆ ಮಾತ್ರ ಪರಂಪರಾನುಗತವಾಗಿ ಹಸ್ತಾಂತರವಾಗುತ್ತಿರುವ ಅಜ್ಞಾನದಿಂದಾದ ಮನೋಸಂರಚನೆಗಳ ಬೆಳೆ ಗತವಾಗುವವು. ಆಗಮ ಸಂಚಿತ ಪ್ರಾರಬ್ಧಗಳಿಂದ ಕೂಡಿದ ಜ್ಞಾನ ನಷ್ಟವಾದಾಗ ಮಾತ್ರ ಇವುಗಳನ್ನನುಸರಿಸಿದ ಕರ್ಮ ನಷ್ಟವಾಗುತ್ತದೆ. ಹೋದ ಸಾರಿ ನಾನು ಇದನ್ನೇ ‘ಆಗಮ ಜ್ಞಾನ ಕ್ರಿಯಾ ಮಾರಣ ಯೋಗ’ ಎಂದು ಹೇಳಿದ್ದೆ, ನೆನಪಿಸಿಕೋ. ಗುಹೇಶ್ವರನೆಂಬ ಲಿಂಗದ ನಿಜವ ತಿಳಿದು ಪೂಜೆಯ ಫಲ ದಕ್ಕಿದರೆ ಮಾತ್ರ ಭವ ನಾಸ್ತಿಯಾಗುತ್ತದೆ. ಪೂಜೆ ಎಂದಾಕ್ಷಣ ಮತ್ತೆ ಮೂಢನಾಗಬೇಡ. ಏಕೆಂದರೆ ಶರಣರ ಪೂಜೆ ಒಳಗಿನ ಮಾಯೆಯೊಂದಿಗಿನ ಹೋರಾಟವೆಂದು ನೆನಪಿರಲಿ…

ಅಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
ಏನೆಂದರಿಯರು ಎಂತೆಂದರಿಯರು.
ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
ಎಲ್ಲರೂ ಪೂಜಿಸಿ, ಏನನೂ ಕಾಣದೆ,
ಲಯವಾಗಿ ಹೋದರು ಗುಹೇಶ್ವರಾ.

ಅವರ ಪೂಜೆ ಬೇರೆಯದೇ ಇತ್ತು ಕಣಯ್ಯ, ಇಲ್ಲಿ ಮೋಸ ಹೋಗಬಾರದು. ಅವರ ಪೂಜೆ ಎಂತಹುದ್ದೆಂದರೆ ಕಂಗಳ ಕರುಳ ಕೊಯ್ವ ಪೂಜೆ, ಮನದ ತಿರುಳ ಹುರಿವ ಪೂಜೆ, ಮಾತಿನ ಮೂಲ ತಿಳಿಯುವ ಪೂಜೆ. ಕದಳಿಯ ಬನವ ಹೊಕ್ಕು ಹೊಲಬು ತಿಳಿಯುವ ಪೂಜೆಯಿದು. ಬಯಲ ಗಾಳಿಯ ಹಿಡಿದು ಗಟ್ಟಿ ಮಾಡುವ ಪೂಜೆ.

ಶಿವಚಿಂತೆ ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ
ಆಚಾರ ಶಿವಾಚಾರ ತಮತಮಗೆ ಸೂರೆಯೆ?
ಕೂಡಲಸಂಗಮದೇವನ ಪೂಜಿಸಿದವಂಗಲ್ಲದೆ?

ಭ್ರಮೆ ಯಾವುದು? ಸತ್ಯ ಯಾವುದೆಂದು ತಿಳಿದವನಿಗೆ ಮಾತ್ರ ಶಿವಾಚಾರ ತಿಳಿವುದೇ ವಿನಾ ಡಾಂಬಿಕರಿಗದು ತಿಳಿಯುವುದೇ? ಕೂಡಲಸಂಗಮದೇವನ ಪೂಜಿಸಿದವಂಗಲ್ಲದೇ?- ಇಲ್ಲಿ ಕೂಡಲ ಸಂಗಮ ದೇವನ ಪೂಜೆಯೆಂದರೆ ಕೇವಲ ಶಿಲಾಲಿಂಗದ ಪೂಜೆಯಲ್ಲ. ಮಾಯೆಯೆಂಬ ಘಟಸರ್ಪದೊಂದಿಗೆ ತನ್ನೊಡಲೊಳಗೆ ಪ್ರಜ್ಞೆಯಿಂದ ಹೋರಾಡಿ ಗೆಲ್ಲುವ ಅನೂಹ್ಯವಾದ ಚಳುವಳಿಯೇ ಅವರ ಪೂಜೆ. ಅದಕ್ಕೆ ಶರಣ ಕ್ರಾಂತಿಕಾರಿ ಎನಿಸಿದ. ಕ್ರಾಂತಿ ಎಂದರೆ ಬದಲಾವಣೆ ಅಥವಾ ಪುನರುತ್ಥಾನ, Reconstruction. ಇಡೀ ಸಮೂಹವನ್ನು ಸತ್ಯದೆಡೆಗೆ ಕೊಂಡೊಯ್ಯುವ ಸದಭಿಲಾಷೆ.
ಕಂದಾ, ನಿನಗೆ ಅರಿವಾಗಿರಬೇಕೆಂದುಕೊಂಡಿದ್ದೇನೆ. ಈಗ ನಾನು ‘ಬಯಲು’ ಎಂಬುದರ ನಿರ್ವಚನವನ್ನು ಹೇಳುತ್ತೇನೆ. ವಿವೇಕದಿಂದ ಪರಿವೀಕ್ಷಿಸು.
ಈ ದೇಹವಾಗಲಿ, ಮನಸ್ಸಾಗಲಿ, ಕೀರ್ತಿಯಾಗಲಿ, ಈ ವಿಶ್ವವಾಗಲಿ ಅಸ್ಥಿರವಾಗಿರುವುದರಿಂದ ಇಲ್ಲಿ ಯಾವುದೂ ಸತ್ಯವಲ್ಲ. ಎಲ್ಲವೂ ಬದಲಾಗುತ್ತಿರುತ್ತದೆ ಎಂಬ ನಿಜ ಶಿವತತ್ವವನ್ನು ತಿಳಿದು ಯಾವುದಕ್ಕೂ ಅಂಟಿಕೊಳ್ಳದೆ ನಿರಾಳವಾಗಿರುವುದೇ ಬಯಲ ಮಾರ್ಗ…!!!
ಈ ಬಯಲಿನೊಳಗೆ ನಿಂದಾಪನಿಂದೆಗಳ ತಕರಾರಿಲ್ಲ; ಮದಮತ್ಸರಗಳನ್ನ ಹೊಂದದೇ ಸಮರಸವಾಗಿಹುದೀ ಬಯಲು; ಬಯಲಿನೊಳಗೆ ಯೋಗ, ಧ್ಯಾನ, ಧಾರಣ, ಸಮಾಧಿಗಳೆಲ್ಲವೂ ಶೂನ್ಯವಾಗಿಹವು. ಈ ಬಯಲಿನೊಳಗೆ ರಾಗವಿರಾಗಗಳಿಲ್ಲ. ಜ್ಞಾನಜ್ಞಾನಗಳಿಲ್ಲ. ಬ್ರಾಹ್ಮಣ ಶೂದ್ರನಿಲ್ಲ, ಶ್ರೀಮಂತ-ಬಡವನೆಂಬುದಿಲ್ಲ, ಪವಿತ್ರ-ಅಪವಿತ್ರನೆಂಬುದಿಲ್ಲ. ಕ್ಷರ-ಅಕ್ಷರಗಳಿಲ್ಲ, ಜೀವ ಶಿವರಿಲ್ಲ. ಸುರರು ರಾಕ್ಷಸರೆಂಬ ಬೇಧವಿಲ್ಲ, ಜನನ-ಮರಣಗಳೆಂಬ ಭವಚಕ್ರ ಇಲ್ಲವೇ ಇಲ್ಲ. ಕ್ಷೇತ್ರ- ಕ್ಷೇತ್ರಜ್ಞರಿಲ್ಲ, ತಿಳಿಯುವವನು ಮತ್ತು ತಿಳಿಸಲ್ಪಡುವವನೆಂಬ ವರ್ಗೀಕರಣವಿಲ್ಲ, ಮಾನಾಭಿಮಾನಗಳಿಲ್ಲ… ಇಂತಹ ದ್ವಯ ದೋಷರಹಿತವಾದದ್ದು ಈ ಬಯಲು.
ಮನದೊಳಗೆ ಘನ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ

ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ,
ಕಾಲವಿಲ್ಲ ಕರ್ಮವಿಲ್ಲ, ಜನನವಿಲ್ಲ ಮರಣವಿಲ್ಲ.
ಗುಹೇಶ್ವರಾ ನಿಮ್ಮ ಶರಣನು ಘನಮಹಿಮ ನೋಡಯ್ಯಾ.

ಬಯಲೆಂದರೆ ನಾನು ಹೇಳುತ್ತಿರುವುದು ಬಯಲಲ್ಲ, ನೀನು ಕೇಳಿ ತಿಳಿಯುತ್ತಿರುವುದು ಬಯಲಲ್ಲ. ಬಯಲೆಂದರೆ ಕಂಡುಹಿಡಿಯಬೇಕಾದದ್ದು. ಗುರು ವಾಕ್ಯವೆಂಬ ದೋಣಿಯ ಸಹಾಯದಿಂದ ಬಯಲೆಂಬ ದಡವನ್ನು ತಲುಪಬಹುದೇ ವಿನಾ ಅದು ಕೇವಲ ಊಹೆಯಲ್ಲ, ಕನಸಲ್ಲ, ಅರಿವಲ್ಲಾ, ಮರೆವಲ್ಲಾ, ಸಾಕ್ಷಾತ್ಕಾರವಲ್ಲ. ಪೂಜೆ ಮಾಡುವುದರಿಂದ ಒದಗಿ ಬರುವಂತಹದ್ದಲ್ಲ. ಬಗ್ಗಿ ಬಗ್ಗಿ ದಂಡ ಹೊಡೆದರೂ ಇಲ್ಲ. ಉಪವಾಸ ವ್ರತ ಮಾಡಿದರೂ ಇಲ್ಲ, ಧ್ಯಾನವಲ್ಲ, ತಪಸ್ಸು ಮಾಡಿದರೂ ಇಲ್ಲ, ಮೋಕ್ಷ ಸನ್ಯಾಸವಲ್ಲ, ಗೀತೆಯಲ್ಲ, ಉಪನಿಷತ್ ಮಹಾವಾಕ್ಯಗಳಲ್ಲ.
ಬಯಲೆಂದರೆ ನಿನ್ನ ನೀ ತಿಳಿದಾಗ ಅಂತಃಸ್ಪೃಹೆಯಾಗುವ ಸ್ವಯಂ ಪ್ರಕಾಶ ತತ್ವವೇ ವಿನಾ ಬಯಲು ಜಗತ್ಕಾರಣ ಕಾರ್ಯ ಪರಿಣಾಮ ಸಿದ್ಧಾಂತವಲ್ಲ. ಆದ್ದರಿಂದ
ಈ ಎಲ್ಲಾ ಮಿಥ್ಯಾದೃಷ್ಟಿಗಳನ್ನು ಇಲ್ಲವಾಗಿಸಿಕೋ…

ಸರ್ವಮನ್ಯ ಪರಿತ್ಯಜ
ನಿರ್ಮಮ, ನಿರಹಂಕೃತಿಮತಿ ನಿಪುಣನಾರೋ
ಸರ್ವಜ್ಞತ್ವವ ಬಲ್ಲ
ನಿರ್ವಾಣ ನೀ ಬಯಲ ಚರಿತೆಗೆ ಅಧಿಕಾರಿ.
ಭಕ್ತಿ ವೈರಾಗ್ಯ ಯೋಗ ಶಕ್ತಿ ವ್ಯಕ್ತಾದಿ ವ್ಯಕ್ತ ಚರಿತೆ
ಗಳೆಲ್ಲವ ತೊರೆದು
ಮುಕ್ತಿಯೆಂಬೋ ಭ್ರಾಂತಿ ಬಿಟ್ಟು ಮುಕ್ತನಾದವ
ಈ ಚರಿತೆಗೆ ಅಧಿಕಾರಿ.

ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ,
ವಿಷ್ಣುವೆಂಬವ ಸತ್ತು ಬಿದ್ದ, ರುದ್ರನೆಂಬವ ಅಬದ್ಧಅವಿಚಾರಿ!
ಅವಿಚಾರದಲ್ಲಿ ಎಲ್ಲರ ಕೊಂದ ಕೊಲೆ, ನಿಮ್ಮ ತಾಗುವುದು ಗುಹೇಶ್ವರಾ.

ಮನುಷ್ಯ ಕುಲ ಕಾಮಿಸಿ ಕಲ್ಪಿಸುವುದರಿಂದಾದ ಬ್ರಹ್ಮ ಪದವಿ, ವಿಷ್ಣು ಪದವಿ, ರುದ್ರ ಪದವಿಗಳೆಲ್ಲವೂ ಶುದ್ಧ ಅಬದ್ಧ ಅವಿಚಾರಗಳೆಂದು ಬಯಲಿಗರಿಗೆ ಮಾತ್ರ ಗೊತ್ತಾಗುತ್ತದೆ. ಬ್ರಹ್ಮ, ವಿಷ್ಣು, ರುದ್ರರನ್ನು ಕೊಂದ ಪಾಪ ಬಯಲೆಂಬ ಗುಹೇಶ್ವರನಿಗೆ ತಾಗಿತೆಂದು ಅಲ್ಲಮರು ವಿಡಂಬಿಸುತ್ತಾರೆ. ಇದೇ ಪರಿಪೂರ್ಣ ಜ್ಞಾನ ಸಿದ್ಧಿ ಕಂದಾ…
ಆದ್ದರಿಂದ, ಈ ಜಗತ್ತು ಹೇಗಿದೆಯೋ ಹಾಗೆ ನೋಡುವ ಅಂತಃಸ್ಪೃಹೆಯನ್ನು ಹೊಂದು ಕಂದಾ. ಗತವು ಬಯಲಾಗಿಹುದು. ಭವಿಷ್ಯವೂ ಬಯಲಾಗಿಹುದು. ಗತ ಭವಿಷ್ಯಗಳಿಲ್ಲದಾ ವರ್ತಮಾನ ನಿತ್ಯ ನಿರಂತರ… ನಿತ್ಯ ನೂತನ… ಆಳನಿರಾಳ… ಅನುಪಮ ಸುಖ. ಕಂಡುಕೊಳ್ಳಲು ಸಾಧ್ಯವಾದರೆ ಕಂಡುಕೋ… ಇಲ್ಲವಾದರೇ ಸುಮ್ಮನಿರು…!!! ಯಾವುದಕ್ಕೂ ಪರಿತಪಿಸದಿರು..!! ಹಾಯಾಗಿರು…!!!
ಭ್ರಮೆಯೇ ಮರಣಕ್ಕೆ ಮೂಲಕಾರಣ. ಭ್ರಮೆಯೇ ಸಮಸ್ತ ದುಃಖಗಳಿಗೆ ಮೂಲಕಾರಣ. ಸಮಸ್ತ ಅನರ್ಥಗಳಿಗೂ ಭ್ರಮೆಯೇ ಮೂಲಕಾರಣ. ಸಮಸ್ತ ಸುಖಗಳಿಗೂ ಭ್ರಮೆಯೇ ಮೂಲಕಾರಣ. ಸಮಸ್ತ ಸಮಸ್ಯೆಗಳಿಗೂ ಭ್ರಮೆಯೇ ಮೂಲಕಾರಣ. ಮಾನಾಭಿಮಾನಗಳಿಗೂ ಭ್ರಮೆಯೇ ಮೂಲಕಾರಣ. ನನ್ನ ಅಸ್ತಿತ್ವವೆಂಬುದು ಅತಿ ದೊಡ್ಡ ಭ್ರಮೆ. ಭ್ರಮಾ ಮೂಲವಿದಂ ಜಗತ್ ಸರ್ವಂ. ಭ್ರಮಾ ಶೂನ್ಯವೇ ಬಟ್ಟಬಯಲು.

Previous post ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
Next post ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…

Related Posts

ಧರ್ಮವನ್ನು ಒಡೆಯುವುದು – ಹಾಗೆಂದರೇನು?
Share:
Articles

ಧರ್ಮವನ್ನು ಒಡೆಯುವುದು – ಹಾಗೆಂದರೇನು?

October 2, 2018 ಡಾ. ಎನ್.ಜಿ ಮಹಾದೇವಪ್ಪ
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂಬ ಚಳುವಳಿಯು ಮೊದಲು ಕೇವಲ ಗಾಳಿಯಾಗಿದ್ದು ಇತ್ತೀಚೆಗೆ ಬಿರುಗಾಳಿಯ ಸ್ವರೂಪ ಪಡೆದಿರುವುದು ಕೆಲವು ಸನಾತನಿಗಳಿಗೆ ಹೇಗೋ ಹಾಗೆ...
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
Share:
Articles

ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ

July 10, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ...

Comments 25

  1. Jyothilingappa
    May 7, 2021 Reply

    ಪದ್ಮಾಲಯರ ಗುರು ಶಿಷ್ಯರ ಮಾತುಕತೆ ಎಷ್ಟೊಂದು ರಮ್ಯ! ಸರಳವಾದರೂ ಕಲಿಯುವುದು ಕಷ್ಟ. ಏಕೆಂದರೆ ನಮ್ಮ ಕಣ್ಣೊಳಗಣ ಕತ್ತಲೆ ಕಲಿಯಲು ಬಿಡದು.
    ‘ಬಯಲು’ ಎಂಬುದರ ಸರಳ ನಿರ್ವಚನೆ… ವಚನಗಳ ಓದು ಇಷ್ಟು ಸರಳ ಅಲ್ಲವೇ… ಎಂಬ ಭಾವ ಅರಿಯಲು ಭಾವ ಭ್ರಷ್ಟತೆ ತೊಲಗಿಸಬೇಕು.

  2. Jagannatha Patil
    May 7, 2021 Reply

    ಅಪರೂಪದ ಅಪೂರ್ವ ಗುರು-ಶಿಷ್ಯರ ಸಂಭಾಷಣೆ ತುಂಬಾ ವಿಚಾರಪೂರಕವಾಗಿದೆ. ಗುರುವಿನ ಕಳಕಳಿ, ಶಿಷ್ಯನ ಆಸಕ್ತಿ ಎರಡೂ ಸೇರಿಕೊಂಡಿವೆ. ವಚನಗಳಲ್ಲಿ ಬಯಲ ಮಾರ್ಗ ತೋರಿಸಿದ ಗುರುವಿಗೆ ಶರಣು.

  3. Gurunath Kusthi
    May 8, 2021 Reply

    ಗುರುವು ಶಿಷ್ಯನಿಗೆ ವಚನಗಳನ್ನು ವ್ಯಾಖ್ಯಾನಿಸಿದ ರೀತಿ ಕಂಡು ಬೆರಗಾಗಿ ಹೋದೆ. ಏನೂ ಸ್ಪಷ್ಟವಾಗದೆ ಹೋದರೂ ಲೇಖನ ಬಹಳ ಗಂಭೀರವಾಗಿದೆ.

  4. Harsha Dodderi
    May 10, 2021 Reply

    ಗುರುವಿನ ಮಾತುಗಳು ಸರಳವಾಗಿವೆ, ಆದರೂ ಕಷ್ಟವಾಗಿವೆ. ಸಹಜವಾಗಿರುವ ಮಾತುಗಳಲ್ಲಿ ಅಡಗಿರುವ ಸತ್ಯವನ್ನು ಅರಿಯಲು ನಿಜಕ್ಕೂ ಮಹತ್ವಪೂರ್ಣವಾದ ಸಾಧನೆ ಬೇಕೇ ಬೇಕು, ಮಿಥ್ಯಾದೃಷ್ಟಿಗಳನ್ನು ಹೇಳಿದ ಗುರು, ಅವುಗಳಿಂದ ಹೊರಗೆ ಬರುವ ದಾರಿಯನ್ನ ತೋರದೇ ಹೋದರೆ ಅಡವಿಯೊಳಗೆ ತಪ್ಪಿಸಿಕೊಂಡ ಕರುವಿನಂತಾಗುತ್ತದೆ.

  5. ಸತೀಶ್ ಗುಡ್ಯಾಳ, ಗದಗ
    May 10, 2021 Reply

    ಪದ್ಮಾಲಯ ನಾಗರಾಜ್ ಶರಣರ ಲೇಖನಗಳು ಶರಣ ಧರ್ಮದ ಆಳದತ್ತ ಬೊಟ್ಟು ಮಾಡಿ ತೋರಿಸುವಂತಿರುತ್ತವೆ. ಅವರ ವಿಚಾರಗಳ ಒಳನೋಟಗಳನ್ನು ನೀಡುತ್ತಿರುವ, ಆ ಮೂಲಕ ಆಸಕ್ತ ಓದುಗರ ಬಳಗವನ್ನು ಗಟ್ಟಿಗೊಳಿಸುತ್ತಿರುವ ಬಯಲು ಬ್ಲಾಗಿಗೆ ಧನ್ಯವಾದಗಳು.

  6. ಸಿದ್ದೇಶ ಜಿ, ಬೆಳಗಾವಿ
    May 10, 2021 Reply

    ಹಗ್ಗವನ್ನು ನೋಡಿ ಹಾವೆಂದು ತಿಳಿಯುವ ಭ್ರಮೆಯೇ ಮಾಯೆಯೆಂಬುದು ಅದ್ವೈತದಲ್ಲಿ ಬರುತ್ತದೆ. ‘ಲಿಂಗಯ್ಯ ನಿನ್ನ ಎದೆಯೊಳಗೇ ಇದ್ದಾನೆ’ ಅಂತ ನಮ್ಮೂರಿನ ಹಿರಿಯ ಅಜ್ಜಾರು ಹೇಳುತ್ತಿದ್ದರು. ಹಾಗಾದರೆ ಶರಣರೂ ಅದ್ವೈತಿಗಳೇ?

  7. Basavaraj Shabadi
    May 11, 2021 Reply

    Post artical excellent

  8. SIDDHALINGAIAH TUMKUR
    May 12, 2021 Reply

    ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ,
    ಹರಹರಾ ಮಾಯೆ ಇದ್ದೆಡೆಯ ನೋಡಾ… ಇಲ್ಲಿ ‘ಮಾಯೆಯ ಕಾಲಗಾಹಿ’ ಎಂಬುದರ ಬೆಡಗನ್ನು ಬಹಳ ಅದ್ಭುತವಾಗಿ ವಿವರಿಸಿದ್ದಾರೆ. ನಾಗರಾಜ ಶರಣರ ಆಳವಾದ ವಚನ ಅಧ್ಯಯನ ನಮಗೆ ಸೂಕ್ತ ಬೋಧನೆಯನ್ನು ನೀಡುತ್ತದೆ. ಶರಣಾರ್ಥಿ ಸರ್.

  9. Vishwa Kumute
    May 12, 2021 Reply

    ಭ್ರಮೆ ಯಾವುದು? ಸತ್ಯ ಯಾವುದು? ತಿಳಿಸಿಕೊಡಿ ಸರ್. ಬದುಕಿನಲ್ಲಿ ಭ್ರಮೆಗಳನ್ನು ಬೆನ್ನು ಹತ್ತಿದ ನಮಗೆ ಸತ್ಯ ಗೊತ್ತಾಗುವುದೇ?

  10. ಯತೀಶ ಕುಮಾರ್, ಹುಬ್ಬಳ್ಳಿ
    May 16, 2021 Reply

    ಬಯಲೆಂಬುದು ಬೆಳಗಿನೊಳಗಣ ಶೃಂಗಾರ… ಅದ್ಭುತ! ಬಯಲನ್ನ ಪರಬ್ರಹ್ಮವೆಂದು, ಪರಶಿವನೆಂದು ವ್ಯಾಖ್ಯಾನ ಮಾಡುವ ಲೇಖನಗಳನ್ನ ಓದಿದ್ದೆ. ಶಿವಯೋಗ, ತ್ರಾಟಕಯೋಗದಂತಹ ಕಠಿಣ ಯೋಗಗಳಿಂದ ಮಾತ್ರವೇ ಬಯಲ ದರ್ಶನವೆಂದು ತಿಳಿದಿದ್ದೆ. ಆದರೆ ಇಲ್ಲಿ ನೀವು ಹೇಳುತ್ತಿರುವುದು ಬೇರೇನೋ ಇದೆ. ಮಿಥ್ಯಾದೃಷ್ಟಿಗಳು ಕಳಚಿಕೊಂಡರೆ ಸಿಗುವ ಬೆಳಕು ಎಂದು ಹೇಳಿದ್ದು ಬಹಳ ಆಪ್ಯಾಯವಾಗಿದೆ…

  11. ರಾಧಾ ನಿರಂಜನ, ಚಾಮರಾಜನಗರ
    May 16, 2021 Reply

    ಬಯಲ ದರ್ಶನ ದ ಬಗ್ಗೆ ಚೆನ್ನಾಗಿ ಸರಳೀಕರಿಸಿ
    ಸಾಮಾನ್ಯರಿಗೂ ಅರಿಯುವಹಾಗೆ ಲೇಖನ ಅರ್ಥ ಪೂರ್ಣವಾಗಿದ್ದು, ಭ್ರಮೆಯಿಂದ ಹೊರಬಂದು
    ಆರಾಮವಾಗಿ ಬದುಕು ಅನ್ನುವುದನ್ನು ಚೆನ್ನಾಗಿ ತಿಳಿಸಿರುವ ಪದ್ಮಾಲಯ ನಾಗರಾಜು ಶರಣರಿಗೆ
    ಭಕ್ತಿಯ ಶರಣು🙏🏼

  12. ಶ್ರದ್ಧಾನಂದ ಸ್ವಾಮೀಜಿ, ವಿಜಯಪುರ
    May 16, 2021 Reply

    Very good article.

  13. Vinay Adihalli
    May 16, 2021 Reply

    ಬಯಲನ್ನು ಅರಸುವ ಸುಲಭ ಮಾರ್ಗವನ್ನು ಲೇಖಕರಾದ ಪದ್ಮಾಲಯ ನಾಗರಾಜುರವರು ಅತ್ಯಂತ ಸುಲಲಿತವಾಗಿಸಿದ್ದಾರೆ

  14. Panchakshari
    May 16, 2021 Reply

    ಸಕಲ ಸಮಸ್ಯೆಗಳಿಗೂ ಭ್ರಮೆಯೇ ಮೂಲಕಾರಣ. ಮಾನಾಭಿಮಾನಗಳಿಗೂ ಭ್ರಮೆಯೇ ಮೂಲಕಾರಣ. ನನ್ನ ಅಸ್ತಿತ್ವವೆಂಬುದು ಅತಿ ದೊಡ್ಡ ಭ್ರಮೆ. ಭ್ರಮಾ ಮೂಲವಿದಂ ಜಗತ್ ಸರ್ವಂ. ಭ್ರಮಾ ಶೂನ್ಯವೇ ಬಟ್ಟಬಯಲು.
    ಬಯಲನ್ನು ಬಯಲಾಗಿಸುವ ಲೇಖನ.
    ಧನ್ಯವಾದಗಳು.

  15. Pro. Siddhaiah
    May 16, 2021 Reply

    ನಮ್ಮೊಳಗೆ ನಮ್ಮನ್ನೇ ಕಟ್ಟಿಹಾಕಿರುವ ಮಿಥ್ಯಾದೃಷ್ಟಿಗಳೇ ಕಂಗಳೊಳಗಣ ಕತ್ತಲೆ ಎನ್ನುವುದನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದೀರಿ. ಭಾವ ಭ್ರಷ್ಟತೆಯಲ್ಲಿ ಮುಳುಗಿದ ಮನುಷ್ಯನಿಗೆ ಬಯಲ ದರ್ಶನ ಸಾಧ್ಯವೇ ಇಲ್ಲ! ಮನದ ಮುಂದಣ ಕತ್ತಲೆ ಕರಗಿದಲ್ಲದೇ ಮನದ ಮುಂದಣ ಬೆಳಕು ಕಾಣಲಾರದು!! ಅಬ್ಬಾ ಎಂಥ ದರ್ಶನ!!!

  16. ಅಂಬಾರಾಯ ಬಿರಾದಾರ
    May 17, 2021 Reply

    ಬ್ರಹ್ಮ ಸತ್ಯ ಜಗನ್ಮಿಥ್ಯವೆಂದರು ಶಾಸ್ತ್ರಕಾರರು. ಬ್ರಹ್ಮನೂ ಸತ್ಯ ಜಗತ್ತೂ ಸತ್ಯವೆಂದರು ಶರಣರು (ಪ್ರಕೃತಿ-ಪುರುಷ). ಬಯಲ ದರ್ಶನವೆಂಬುದು ಭ್ರಮೆಯಲ್ಲ. ಶರಣರು ಅದನ್ನು ಅನುಭಾವಿಕ ಸತ್ಯವೆಂದು ಕರೆದರು. ಲೇಖನ ಒಳ್ಳೆಯದಾಗಿ ಮೂಡಿಬಂದಿದೆ. ಮಿಥ್ಯಾ ಪದ ಬರಕೂಡದು. ದೃಷ್ಟಿರಹಿತ ಅಥವಾ ದೃಷ್ಟಿಸಹಿತ ಬಯಲ ದರ್ಶನ. ಅಂತದೃಷ್ಟಿಯಿಂದ ಬಯಲು, ಅತೀಂದ್ರಿಯದಿಂದ ಬಯಲ ದರ್ಶನ. ಲೇಖನವು ಒಂದು ಹೊಸ ಆಯಾಮವನ್ನು ನೀಡುತ್ತದೆ.

  17. Prasanna Kumar
    May 19, 2021 Reply

    ಬಯಲೆಂದರೆ ನಾನು ಹೇಳುತ್ತಿರುವುದು ಬಯಲಲ್ಲ, ನೀನು ಕೇಳಿ ತಿಳಿಯುತ್ತಿರುವುದು ಬಯಲಲ್ಲ. ಬಯಲೆಂದರೆ ಕಂಡುಹಿಡಿಯಬೇಕಾದದ್ದು… ಬಯಲೆಂದರೆ ಸಾಕ್ಷಾತ್ಕಾರವೂ ಅಲ್ಲ- ಈ ಎಲ್ಲ ಮಾತುಗಳೂ ನನಗೆ ಹೊಸತು ಹೊಸತು… ಶರಣರ ಬಯಲು ಯಾವುದೆಂದು ನಾನು ಬಹಳ ತಲೆಕೆಡಿಸಿಕೊಂಡಿದ್ದೆ. ಅದರ ಗುಟ್ಟನ್ನು ಗುಟ್ಟಾಗಿಯೇ ಹೇಳಿದ ರೀತಿ ಬಹಳ ಆಕರ್ಷಕವಾಗಿದೆ. ಜೊತೆಗೆ ಅರ್ಥಮಾಡಿಕೊಳ್ಳಲು ಸವಾಲಿನದೂ ಆಗಿದೆ.

  18. ರೇಣುಕಯ್ಯಾ ಕಲ್ಬುರ್ಗಿ
    May 24, 2021 Reply

    ಈ ಲೇಖನ ಓದಿದ ಮೇಲೆ ನಾವು ಮಿಥ್ಯಾ ದೃಷ್ಟಿಗಳಲ್ಲೇ ಮುಳುಗಿಹೋಗಿದ್ದೇವೆ ಎಂದು ಮನವರಿಕೆಯಾಯಿತು. ಹಾಗಾದರೆ ಮಾಯೆಯೆಂದರೆ ಶರಣರ ದೃಷ್ಟಿಯಲ್ಲಿ ಈ ಮಿಥ್ಯಾದೃಷ್ಟಿಗಳೇ!! Worth reading Bayalu… ಬಯಲಿನೆಡೆಗೆ ಸಾಗಬೇಕಾದರೆ ಏನು ಮಾಡಬೇಕೆಂದು ಸೂಕ್ಷ್ಮವಾಗಿ ತಿಳಿಸಿದ ವೈಚಾರಿಕ, ಅನುಭಾವಾತ್ಮಕ ಲೇಖನ. ಶರಣು ಸರ್.

  19. Veeranna G.P
    May 24, 2021 Reply

    ಗುರು-ಶಿಷ್ಯ ಸಂವಾದವನ್ನು ಮುಂದುವರಿಸಿ. ಶರಣ ತತ್ವಗಳನ್ನು ಹೊಸ ರೀತಿಯಲ್ಲಿ ಜನಮನಕ್ಕೆ ವೇದ್ಯಪಡಿಸುತ್ತಿರುವ ವಿಚಾರಗಳು ಹೀಗೇ ಮುಂದುವರಿಯಲಿ.

  20. Virupaksha
    May 26, 2021 Reply

    ಸತ್ಯ ಯಾವುದೆಂದು ತಿಳಿದವನಿಗೆ ಮಾತ್ರ ಶಿವಾಚಾರ ತಿಳಿವುದೇ ವಿನಾ ಡಾಂಬಿಕರಿಗದು ತಿಳಿಯುವುದೇ? – ಎಂದಿದ್ದೀರಿ. ನಿಜಕ್ಕೂ ಶಿವಾಚಾರ ಎಂದರೇನು ಸರ್?

  21. Bharath Jodettu
    May 27, 2021 Reply

    ಶರಣರು ಮಾಯೆಯೆಂದು ಯಾವುದನ್ನು ಕರೆದರು ಎಂಬುದು ಇವತ್ತೇ ನನಗೆ ಅರ್ಥವಾದದ್ದು. ನಮ್ಮಲ್ಲಿರುವ ತಪ್ಪು ಕಲ್ಪನೆಗಳೇ ಮಾಯೆಗಳು… ವಂಡರಫುಲ್

  22. Dr. Jagadeesh Pavate
    May 31, 2021 Reply

    ಸ್ವಭಾವಗಳನ್ನು ಹುಟ್ಟಿಸುವುದು ಪೂರ್ವಜನ್ಮವಲ್ಲಾ ಅದು ಭ್ರಾಂತಿ. ಅಲ್ಲಮಪ್ರಭುದೇವರ ವಚನ ಭ್ರಾಂತಿ ಎಂಬ ತಾಯಿ ಜ್ಞಾನದ ಕೂಸಿಗೆ ಜೋಗುಳ ಹಾಡಿ ಎಂದೆಂದಿಗೂ ಏಳದಂತೆ ಮಲಗಿಸುತ್ತಲೇ ಇದ್ದಾಳೆ ಎನ್ನುವ ವಚನವನ್ನು ಇಲ್ಲಿ ನೆನೆಯಬಹುದು. ಇಲ್ಲಿನ ವಿಚಾರಗಳು ಮನನ ಯೋಗ್ಯವಾಗಿದ್ದು, ವಚನಗಳನ್ನು ಮುಕ್ತವಾಗಿ ನೋಡಲು ಪ್ರೇರೇಪಿಸುತ್ತವೆ. ಉತ್ತಮ ವೈಚಾರಿಕ ಲೇಖನವನ್ನು ಕಳಿಸಿದ್ದಕ್ಕೆ ಮತ್ತು ಓದಲು ಒತ್ತಾಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.

  23. ರಾಜೇಶ್ ಮೇರ್ವಾಡಿ, ಗಿರಿನಗರ
    May 31, 2021 Reply

    ಬಯಲೆಂದರೇನೆಂದು ನನಗೆ ಗೊತ್ತಿಲ್ಲ. ಏನಿರಬಹುದೆಂಬ ಕುತೂಹಲವಂತೂ ಇತ್ತು. ಆ ಕುತೂಹಲ ಮತ್ತೂ ಹೆಚ್ಚಾಯಿತು. ಬಯಲು ನಿತ್ಯನೂತನ, ಆಳನಿರಾಳವೆಂಬುದು…. ವಚನಗಳ ಶೋಧ. ಬಯಲ ಕುರಿತಾಗಿ ಬಯಲಿನಲ್ಲಿ ಓದಲೇ ಬೇಕಾದ ಲೇಖನ!!! ತುಂಬಾ ಚೆನ್ನಾಗಿದೆ, ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.

  24. Srikanth M
    Jun 4, 2021 Reply

    ಇಲ್ಲಿ ಶಿಷ್ಯನ ಪ್ರಶ್ನೆಗೆ ಗುರುಗಳ ಉತ್ತರ ಓದಲಿಕ್ಕೆ ಸರಳವೆನಿಸಿದರೂ ಹೇಗೆಂದು ತಿಳಿಯುವುದಿಲ್ಲ. ಎಲ್ಲೋ ಮಿಸ್ ಹೊಡೆಯುವಂತೆ ಭಾಸವಾಗುತ್ತದೆ. ನಮ್ಮ ಗ್ರಹಿಕೆಯಲ್ಲಿ ದೋಷವಿದೆಯೋ ಅಥವಾ ಅರ್ಥಮಾಡಿಕೊಳ್ಳುವಲ್ಲಿ ಮಿತಿ ಇದೆಯೋ ಗೊತ್ತಾಗದೇ ಚಡಪಡಿಸಿದ್ದೇನೆ. ಅದಕ್ಕೆ ಗುರುವೇ ದಾರಿ ತೋರಿಸಬೇಕು.

  25. ಬಸವರಾಜ ಹಂಡಿ
    Jun 5, 2021 Reply

    ಬುದ್ಧ, ಬಸವಣ್ಣ ಹಾಗೂ ಬಸವಾದಿ ಶರಣರು ಮತ್ತುಳಿದ ಎಲ್ಲ ತತ್ವಜ್ಞಾನಿಗಳು ಹೇಳಿದ್ದು ಒಂದೇ- ಮಿತ್ಯಾದೃಷ್ಟಿರಹಿತ ಜೀವನವನ್ನು ಹೇಗೆ ಜೀವಿಸುವುದು. ನಮ್ಮ ಮನಸ್ಸು ಮಿತ್ಯಾದೃಷ್ಟಿ ಹಾಗೂ ತಪ್ಪು ಗ್ರಹಿಕೆಗಳಿಂದ ತುಂಬಿ ತುಳುಕುತ್ತಿದೆ. ಪದ್ಮಾಲಯ ನಾಗರಾಜ ಶರಣರು ಪ್ರಶ್ನೆ ಉತ್ತರಗಳ ರೂಪದಲ್ಲಿ ಬರೆದ ಈ ಲೇಖನದಲ್ಲಿ ಮಿತ್ಯಾದೃಷ್ಟಿಯನ್ನು ಹೇಗೆ ತೊಡೆದು ಹಾಕಬೇಕು ಎಂಬದನ್ನು ಬಹಳ ಸುಂದರವಾಗಿ ಮನ ಮುಟ್ಟುವಂತೆ ವಚನಗಳ ಮುಖಾಂತರ ವಿವರಿಸಿದ್ದಾರೆ. ಲೇಖನದಲ್ಲಿ ಬರೆದ ಈ ಕೆಳಗಿನ ಸಾಲುಗಳನ್ನು ನೋಡಿ. ಎಷ್ಟು ಅರ್ಥಪೂರ್ಣವಾಗಿವೆ!
    “ಪ್ರತ್ಯಕ್ಷ ಜ್ಞಾನದ ಗ್ರಹಣಾತ್ಮಕ ಮೇಧಸ್ಸನ್ನು ಕಳೆದುಕೊಂಡವರಿಗೆ ಸುಳ್ಳೇ ನಿಜವಾಗಿ ಬಿಡುತ್ತದೆ. ನಿಜವೇ ಸುಳ್ಳೆನಿಸಿ ಬಿಡುತ್ತದೆ”
    “ಶರಣರ ಪೂಜೆ ಒಳಗಿನ ಮಾಯೆಯೊಂದಿಗಿನ ಹೋರಾಟವೆಂದು ನೆನಪಿರಲಿ…”
    ಪ್ರತ್ಯಕ್ಷ ಜ್ಞಾನವೆ ಮಿತ್ಯಾದೃಷ್ಟಿ ಎಂಬ ರೋಗಕ್ಕೆ ಔಷಧ. ಪ್ರತಿಕ್ಷಣದಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭವಿಸುವ ಪ್ರತಿಯೊಂದು ವಿಚಾರ/ಭಾವ/ಕಲ್ಪನೆಗೆ ಭೌತಿಕ ಜಗತ್ತಿನಲ್ಲಿ ಅದಕ್ಕೆ ವಸ್ತುರೂಪ ಇದೆ ಅಥವಾ ಇಲ್ಲ ಎಂಬ ಪ್ರಶ್ನೆ ಕೇಳುವ ಮುಖಾಂತರ ನಾವು ಮಿತ್ಯಾದೃಷ್ಟಿಯನ್ನೂ ತೊಡೆದು ಹಾಕಬಹುದು. ಈ ಅದ್ಬುತ ಜ್ಞಾನ ದಾಸೋಹಕ್ಕೆ ನಾವೆಲ್ಲರೂ ನಾಗರಾಜ ಶರಣರಗೆ ಚಿರಋಣಿ.
    ಶರಣು ಶರಣಾರ್ಥಿ

Leave a Reply to Vinay Adihalli Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
July 10, 2025
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
February 6, 2025
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ನನ್ನ ಶರಣರು…
ನನ್ನ ಶರಣರು…
April 9, 2021
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
Copyright © 2025 Bayalu