Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮರೆಯಲಾಗದ ಜನಪರ ಹೋರಾಟಗಾರ
Share:
Articles May 10, 2023 ಪ್ರೊ.ಸಿದ್ದು ಯಾಪಲಪರವಿ

ಮರೆಯಲಾಗದ ಜನಪರ ಹೋರಾಟಗಾರ

ಮಠಾಧೀಶರು ಮಠದ ಕಟ್ಟುಪಾಡುಗಳನ್ನು ಮೀರಿ ಹೊರಬರುವುದು ಸುಲಭವಲ್ಲ. ‘ಮಠದ ಸ್ವಾಮಿಗಳು ಎಂದರೆ ಅತ್ತೆ ಮನೆ ಸೊಸೆ ಇದ್ದಂಗ, ಮೈತುಂಬ ಎಚ್ಚರ ಇರಬೇಕು, ಮನಸಿಗೆ ಬಂದಂಗ ನಡಕೊಳೋ ಹಂಗಿಲ್ಲ’ ಎಂಬ ಎಚ್ಚರ ಪ್ರಜ್ಞೆಯ ಮಧ್ಯೆ ಅನೇಕ ಗಟ್ಟಿ ನಿರ್ಣಯಗಳನ್ನು ತೆಗೆದುಕೊಂಡು ಹೋರಾಟಗಳಲ್ಲಿ ಭಾಗವಹಿಸಿ ನಾಡಿನಲ್ಲಿ ಸಂಚಲನ ಮೂಡಿಸಿದವರು- ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಗಳು.

ಗೋಕಾಕ ಚಳವಳಿ

ಎಂಬತ್ತರ ದಶಕದ ನಾಡು ಕಂಡ ಬಹುದೊಡ್ಡ ಭಾಷಾ ಚಳುವಳಿಯಾದ ಗೋಕಾಕ ಹೋರಾಟದಲ್ಲಿ ಅಜ್ಜಾ ಅವರು ಸಕ್ರಿಯವಾಗಿ ಭಾಗವಹಿಸುವ ನಿರ್ಣಯ ಪ್ರಕಟಿಸಿದಾಗ ನಾಡಿನ ಮಠಾಧೀಶರು ಬೆಚ್ಚಿಬಿದ್ದರು, ಏಕೆಂದರೆ ಅದು ಸರಕಾರದ ವಿರುದ್ಧದ ಹೋರಾಟವಾಗಿತ್ತು. ಏಳು ವರ್ಷಗಳ ಸ್ವಾಮಿತ್ವದ ಕಾಲದಲ್ಲಿ ಪೂಜ್ಯರು ಸಾಕಷ್ಟು ಮಾಗಿ, ಹಲವಾರು ಬದಲಾವಣೆಗಳನ್ನು ಈ ಹಿಂದೆ ಜಾರಿಗೊಳಿಸಿದ್ದರು.

ಸರಕಾರದ ವಿರುದ್ಧದ ಹೋರಾಟಗಳಲ್ಲಿ ಮಠಾಧೀಶರು ಭಾಗವಹಿಸುವುದು ಧರ್ಮಸೂಕ್ಷ್ಮವಾಗಿತ್ತು. ಸಿಂದಗಿ ಕಾರ್ಯಕ್ರಮವೊಂದರಲ್ಲಿ ಪೂಜ್ಯರು ಸರಕಾರದ ವಿಳಂಬ ನೀತಿಯನ್ನು ಕಟುವಾಗಿ ಟೀಕಿಸಿದ್ದು ಮರುದಿನ ಪತ್ರಿಕೆಗಳಲ್ಲಿ ಮಹತ್ವದ ಸುದ್ದಿಯಾಯಿತು. ಈ ಸುದ್ದಿ ಹೋರಾಟದಲ್ಲಿ ನಿರತರಾಗಿದ್ದ ಸಾಹಿತಿಗಳಿಗೆ ಎಲ್ಲಿಲ್ಲದ ಸಡಗರ ತಂದಿತು. ಧಾರವಾಡದ ಕನ್ನಡ ಕ್ರಿಯಾ ಸಮಿತಿ ಮೂಲಕ ಡಾ.ಪಾಟೀಲ ಪುಟ್ಟಪ್ಪ, ಡಾ.ಚೆನ್ನವೀರ ಕಣವಿ,ಪ್ರೊ.ಚಂಪಾ ಹಾಗೂ ಇತರ ಬಹುಪಾಲು ಯುವಕರು ಗೋಕಾಕ ಚಳವಳಿಯ ಕಾವು ಏರಿಸಿದ್ದರು. ಸಿನೆಮಾ ನಟರು ಡಾ.ರಾಜಕುಮಾರ್ ನೇತೃತ್ವದಲ್ಲಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಿರ್ಣಯ ಮಾಡಿದ್ದರು. ಈ ಹಂತದಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಗಳ ಬೆಂಬಲ ಹೋರಾಟಕ್ಕೆ ಆನೆ ಬಲ ತಂದಿತು. ಸ್ವಾಮಿಗಳ ವಿನೂತನ ನಿರ್ಣಯವನ್ನು ಸಾಹಿತಿಗಳು ಮುಕ್ತ ಕಂಠದಿಂದ ಪ್ರಶಂಸೆ ಮಾಡಿದರು. ಅಂದು ತುಂಬಾ ಪ್ರಭಾವಿ ಮಾಧ್ಯಮವಾಗಿದ್ದ ಲಂಕೇಶ್ ಪತ್ರಿಕೆ ಶ್ರೀಗಳ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿತು.

ನಂತರ ಗದುಗಿನ ತಹಶೀಲ್ದಾರ ಕಚೇರಿ ಮುಂದೆ ಸಾಂಕೇತಿಕ ಧರಣಿಯಲ್ಲಿ ಭಾಗವಹಿಸಿದರು. ಇತರ ಮಠಾಧೀಶರಿಗೆ ಇದು ಅಸಮಾಧಾನ ತಂದಿತಾದರೂ ಬಹಿರಂಗವಾಗಿ ಹೇಳದಂತಾಯಿತು. ಅಂದಿನಿಂದ ತೋಂಟದಾರ್ಯ ಮಠ ಗೋಕಾಕ ಚಳುವಳಿಯ ಇನ್ನೊಂದು ಕೇಂದ್ರವಾಯಿತು. ಸಮಸ್ತ ಸಾಹಿತಿಗಳು ಮತ್ತು ಸಿನೆಮಾ ನಟರ ತಂಡ ಮಠಕ್ಕೆ ಆಗಮಿಸಿ ಪೂಜ್ಯರ ಆಶೀರ್ವಾದ ಪಡೆಯಿತು. ಗೋಕಾಕ ಚಳವಳಿಯ ಯಶಸ್ಸಿನಲ್ಲಿ ಪೂಜ್ಯರ ಸಹಭಾಗಿತ್ವ ಕೂಡ ಪ್ರಮುಖ ಕಾರಣವಾಯಿತು. ಮಠಾಧೀಶರು ನಾಡು,ನುಡಿ,ಜಲ ಹಾಗೂ ನೆಲಕ್ಕೆ ಕುತ್ತು ಬಂದಾಗ ಬಹಿರಂಗವಾಗಿ ಹೋರಾಟಗಳಲ್ಲಿ ಭಾಗವಹಿಸಬೇಕು ಎಂದು ಇತರ ಮಠಾಧೀಶರಿಗೆ ಕರೆ ನೀಡಿದರು. ಇಡೀ ರಾಜ್ಯದ ಪ್ರಗತಿಪರ ಮನಸುಗಳಿಗೆ ಪೂಜ್ಯರು ಇನ್ನೂ ಹೆಚ್ಚು ಹತ್ತಿರವಾದರು.

ಹೋರಾಟಗಾರರಿಗೆ ಶ್ರೀಗಳ ಕಂಚಿನ ಕಂಠದ ಭಾಷಣ, ಎತ್ತರದ ನಿಲುವು, ಆಕರ್ಷಕ ವ್ಯಕ್ತಿತ್ವದ ಹಿರಿಮೆಯನ್ನು ಹತ್ತಿರದಿಂದ ನೋಡುವ ಅವಕಾಶ ಲಭಿಸಿತು. ಶ್ರೀಗಳು ಅಷ್ಟೊತ್ತಿಗಾಗಲೇ ಅನೇಕ ಪ್ರಗತಿಪರ ನಿಲುವುಗಳ ಮೂಲಕ ಬಹುದೊಡ್ಡ ಸೆಲೆಬ್ರಿಟಿ ಎನಿಸಿಕೊಂಡಿದ್ದರು. ಆಗ ಸಿನೆಮಾ ಕಲಾವಿದರು, ಕ್ರಿಕೆಟ್ ಆಟಗಾರರು, ಖ್ಯಾತ ಸಾಹಿತಿಗಳು ಮತ್ತು ರಾಜಕೀಯ ನಾಯಕರನ್ನು ಮಾತ್ರ ಸೆಲೆಬ್ರಿಟಿಗಳು ಎಂದು ಪರಿಗಣಿಸಲಾಗುತ್ತಿತ್ತು. ಈ ಸಾಲಿನಲ್ಲಿ ಧರ್ಮ ಗುರುಗಳು ಸೇರಿಕೊಳ್ಳಲು ಪೂಜ್ಯರ ವ್ಯಕ್ತಿತ್ವ ಕಾರಣವಾಯಿತು. ಭಕ್ತರ ಭಕ್ತಿಯ ಜೊತೆಗೆ, ಪ್ರಗತಿಪರರ ಪ್ರೀತಿ, ವಿಶ್ವಾಸ ಗಳಿಸಿಕೊಂಡು, ಮಾಧ್ಯಮಗಳ ದೃಷ್ಟಿಯಲ್ಲಿ ಪೂಜ್ಯರೂ ಸೆಲೆಬ್ರಿಟಿ ಸ್ಥಾನ ಪಡೆದುಕೊಂಡರು. ಧಾರ್ಮಿಕ ಗುರುಗಳೊಬ್ಬರು ಮೊದಲ ಬಾರಿಗೆ ಪಡೆದುಕೊಂಡ ಗರಿಷ್ಠ ಸಂಮಾನವಿದು. ಆದರೆ ಪೂಜ್ಯರು ಇದಾವುದನ್ನು ನಿರೀಕ್ಷೆ ಮಾಡದೆ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಚಳುವಳಿಯಲ್ಲಿ ಭಾಗವಹಿಸಿದ್ದರು. ಅವರಿಗೆ ಕನ್ನಡವೆಂದರೆ ಶರಣರ ವಚನದಷ್ಟೇ ಪವಿತ್ರ ಎಂಬ ಭಾವನೆಯಿತ್ತು. ಕನ್ನಡ ಮಾಧ್ಯಮದ ಶಿಕ್ಷಣದ ಮಹತ್ವವನ್ನು ತಮ್ಮ ಶಾಲೆಗಳ ಮೂಲಕ ಸಾಬೀತು ಮಾಡಿದ ನೈತಿಕ ಹಿರಿಮೆ ಶ್ರೀಗಳ ಬೆನ್ನಿಗಿತ್ತು. ಇಂಗ್ಲಿಷ್ ಮಾಧ್ಯಮದ ಹುಚ್ಚು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿನಾಶ ಮಾಡುವ ಅಪಾಯವನ್ನು ಮನದಟ್ಟು ಮಾಡಿಕೊಟ್ಟ ಹೆಗ್ಗಳಿಕೆ ಪೂಜ್ಯರಿಗೆ ಸಲ್ಲುತ್ತದೆ.

ಗೋಕಾಕ ಚಳವಳಿ ಯಶಸ್ಸಿನ ನಂತರ ಪೂಜ್ಯರ ಸಾರ್ವಜನಿಕ ಜೀವನದ ಪ್ರತಿಸ್ಪಂದನಾ ರೀತಿ ಇನ್ನೂ ವಿಭಿನ್ನವಾಗಿ ಬೆಳೆಯಿತು. ಸಾಹಿತಿಗಳು ಮತ್ತು ಕಲಾವಿದರಿಗೆ ಶ್ರೀಮಠದ ಬಾಗಿಲು ಮುಕ್ತವಾಗಿ ತೆರೆದುಕೊಂಡಿತು. ಸ್ವಾಮಿಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಎಂಬ ಸೀಮಿತ ಆಲೋಚನೆ ದೂರಾಯಿತು. ನಂತರ ಶಿವಾನುಭವ ವಿಷಯಗಳ ಆಯ್ಕೆ ಕೂಡ ಸಮಾಜಮುಖಿಯಾಯಿತು. ಜಾತ್ಯಾತೀತ ಮನೋಭಾವದ ಜೊತೆಗೆ ಸಾಮಾಜಿಕ ಆಯಾಮ ಸೇರಿಕೊಂಡು ಅಜ್ಜಾ ಅವರು ಹೆಚ್ಚು ಮುಕ್ತರಾದರು.

ಕೋಮು ಸೌಹಾರ್ದ

ಕೋಮು ಸೌಹಾರ್ದತೆ ಭಾಷಣಗಳಿಗೆ ಮೀಸಲಾಗಿ ಉಳಿದದ್ದು ಶ್ರೀಗಳಿಗೆ ಸರಿ ಬರಲಿಲ್ಲ. ಮುಂದೆ ಜಾತ್ರಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಲಿಂಗಾಯತರನ್ನು ಹೊರತುಪಡಿಸಿ ಇತರ ಜಾತಿಯವರನ್ನು ಪದಾಧಿಕಾರಿಗಳಾಗಿ ನೇಮಿಸಿ ವಿನೂತನ ವಾತಾವರಣ ನಿರ್ಮಿಸಿದರು. ತೋಂಟದಾರ್ಯ ಮಠ ಕೇವಲ ಲಿಂಗಾಯತ ಮಠ ಎಂಬ ಭಾವನೆ ದೂರಾಗಿ ಜಾತ್ರೆ ತನ್ನ ವಿಶಾಲತೆಯನ್ನು ಹೆಚ್ಚಿಸಿಕೊಂಡಿತು. ಲಿಂಗಾಯತರೇತರು ಅಧ್ಯಕ್ಷರಾದಾಗ ಜಾತ್ರೆ ಅತಿ ಹೆಚ್ಚು ಯಶಸ್ಸು ಗಳಿಸಲು ಇತರ ಸಮುದಾಯದವರ ಪಾಲ್ಗೊಳ್ಳುವಿಕೆ ಕಾರಣವಾಯಿತು. ದಮನಿತ, ಶೋಷಿತ ಸಮುದಾಯದವರಲ್ಲದೆ ದಲಿತರು ಕೂಡ ಜಾತ್ರಾ ಸಮಿತಿ ಅಧ್ಯಕ್ಷರಾದದ್ದು ಪೂಜ್ಯರಿಗೆ ಸಮಾಧಾನ ತಂದು ಅಪರಿಮಿತ ಸಂಭ್ರಮವೆನಿಸಿತು. ಇದು ಅವರ ಮೌಲ್ಯ ಪ್ರತಿಪಾದನೆಗೆ ದೊರೆತ ಶ್ರೇಷ್ಠ ಗೆಲುವು. ಇತರ ಜಾತಿಯವರಲ್ಲದೆ ಇತರ ಧರ್ಮೀಯರು ಜಾತ್ರೆಯಲ್ಲಿ ಮುಕ್ತವಾಗಿ ಭಾಗವಹಿಸಲಾರಂಭಿಸಿದರು. ತೋಂಟದಾರ್ಯ ಮಠದ ಮುಕ್ತ ಪ್ರವೇಶದ ಜೊತೆಗೆ ಜಾತ್ರಾ ಕಾರ್ಯಕ್ರಮಗಳಲ್ಲಿ ಕೋಮು ಸೌಹಾರ್ದತೆಯ ಕುರಿತು ಚಿಂತನೆಗಳು ಸಾಗಿದವು.

ಉಳಿದ ಕೆಲವು ಸಂಸ್ಥೆಗಳಲ್ಲಿ ಜಾತ್ಯಾತೀತತೆ ಕೇವಲ ತಾತ್ಕಾಲಿಕ ತೋರಿಕೆಗೆ ಇದ್ದಂತೆ ಭಾಸವಾಗುತ್ತಿತ್ತು, ಶುದ್ಧ ಭಾವದ ಆಚರಣೆಯಾಗಿರಲಿಲ್ಲ. ದಲಿತ ಕೇರಿಯನ್ನು ಪ್ರವೇಶಿಸುವುದೇ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ತೋಂಟದಾರ್ಯ ಮಠದ ಆವರಣದಲ್ಲಿ ದಲಿತರ ಜೊತೆಗೆ ವೇದಿಕೆ ಹಂಚಿಕೊಂಡು, ನಂತರ ಸಹ ಭೋಜನ ಮಾಡುವುದು ಯಾರಿಗೂ ಸಂಕೋಚ ಎನಿಸುತ್ತಿರಲಿಲ್ಲ, ಇಂತಹ ಪ್ರಗತಿಪರ ನಿರ್ಧಾರಗಳಲ್ಲಿ ಸತ್ಯದ ವೈಭವೀಕರಣವೂ ಇರುತ್ತಿರಲಿಲ್ಲ. ಜಾತ್ಯಾತೀತತೆ ತೋಂಟದಾರ್ಯ ಮಠದ ಅವಿಭಾಜ್ಯ ಕ್ರಿಯಾಚರಣೆಯಾಯಿತು. ಭಕ್ತರು ಕೂಡ ಅಷ್ಟೇ ಮುಕ್ತವಾಗಿ ಇದಕ್ಕೆ ಒಗ್ಗಿಕೊಂಡು ತಮ್ಮ ಪ್ರಾಮಾಣಿಕತೆ ಮೆರೆದರು. ಹೀಗಾಗಿ ಕೋಮು ಸೌಹಾರ್ದತೆ ಅಜ್ಜಾ ಅವರ ಇನ್ನೊಂದು ಬಹಿರಂಗ ಹೋರಾಟವಾಯಿತು. ನಾಡಿನ ವಿವಿಧ ಮಠಗಳು ಹಂತ ಹಂತವಾಗಿ ಈ ಮನೋಧರ್ಮ ರೂಪಿಸಿಕೊಳ್ಳಲು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲಾರಂಭಿಸಿದರು.

ಪೋಸ್ಕೋ ಚಳುವಳಿ

ಕರ್ನಾಟಕದ ಕೈಗಾರಿಕಾಕರಣದ ಅಭಿವೃದ್ಧಿ ನೆಪದಲ್ಲಿ ಸಾಕಷ್ಟು ಗಣಿಗಾರಿಕೆ ನಡೆದು ಜನ ಅದರ ದುಷ್ಪರಿಣಾಮ ಎದುರಿಸುತ್ತಿದ್ದರು. ಬಳ್ಳಾರಿ ಗಣಿಗಾರಿಕೆ ಇಡೀ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಚಿತ್ರಣವನ್ನು ಬದಲಿಸಿತ್ತು. ಇದೇ ಮಾದರಿಯಲ್ಲಿ ಗದುಗಿನ ಪರಿಸರ ಬಲಿಯಾಗಬಾರದು ಎಂಬುದು ಪೂಜ್ಯರ ಆಶಯವಾಗಿತ್ತು.

ಪೋಸ್ಕೋ ಕಂಪನಿ ಗದಗ ಜಿಲ್ಲೆಯ ಬಂಜರು ಭೂಮಿಯನ್ನು ಹೆಚ್ಚು ಬೆಲೆಗೆ ಖರೀದಿಸಲು ಮುಂದಾದಾಗ ರೈತರು ಸಂಭ್ರಮಿಸಿ ಬಿಟ್ಟರು. ಆದರೆ ಇದರ ಹಿಂದಿನ ಹುನ್ನಾರ ಮತ್ತು ಉದ್ದೇಶವನ್ನು ರೈತರು ಅರ್ಥಮಾಡಿಕೊಳ್ಳಲಿಲ್ಲ. ಪೂಜ್ಯರ ದೂರದೃಷ್ಟಿ ಇದರ ಅಪಾಯವನ್ನು ಸರಿಯಾಗಿ ಗ್ರಹಿಸಿತ್ತು. ರೈತರು ಒಮ್ಮೆ ಭೂಮಿಯನ್ನು ಕಳೆದುಕೊಂಡರೆ ಅನಾಥರಾಗಿ ಬಹುರಾಷ್ಟ್ರೀಯ ಕಂಪನಿಗಳ ದಾಸರಾಗುತ್ತಾರೆ ಎಂಬ ವಾಸ್ತವ ಅವರಿಗೆ ಗೊತ್ತಿತ್ತು. ದೇಶದ ಇತರ ಭಾಗಗಳಲ್ಲಿ ರೈತರು ಹೀಗೆ ಭೂಮಿ ಕಳೆದುಕೊಂಡು ಹುಚ್ಚರಾಗಿದ್ದರು.

ಗದಗ ಭಾಗದ ರೈತರು ಭೂಮಿ ಕಳೆದುಕೊಂಡರೆ ಆಗುವ ಸಂಕಷ್ಟವನ್ನು ಅರಿತವರಾಗಿದ್ದರು. ಬರಡು ಭೂಮಿ, ಅದು ಏನನ್ನೂ ಬೆಳೆಯುವುದಿಲ್ಲ, ಅದರಿಂದ ಒಂದು ಪೈಸೆ ಆದಾಯವಿಲ್ಲ ಎಂಬ ಅಭಿಪ್ರಾಯ ರೂಪಿಸುವ ಷಡ್ಯಂತ್ರ ಸಾಗಿತ್ತು. ಇದಕ್ಕೆ ಬಲಿಯಾಗಿ, ಭೂಮಿ ಮಾರಾಟ ಮಾಡಲು ರೈತರು ಒಪ್ಪಿಕೊಂಡಿದ್ದರು. ಕೆಲವು ರಾಜಕೀಯ ನಾಯಕರು ಮತ್ತು ಮಧ್ಯವರ್ತಿಗಳು ಪೂಜ್ಯರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಪೂಜ್ಯರು ನಿಜವಾದ ಮಣ್ಣಿನ ಮಗ ಅವರು ಸ್ವತಃ ಅಂತಹ ಬಂಜರು ಭೂಮಿಯನ್ನು ಅಗೆದು ನೀರು ಉಕ್ಕಿಸಿದ ಭಗೀರಥ. ಡಂಬಳ ಹೊಲದಲ್ಲಿ ದ್ರಾಕ್ಷಿ ಮತ್ತು ದಾಳಂಬರಿ ಹಣ್ಣು ಬೆಳೆದು ತೋರಿಸಿ ಆದರ್ಶ ಕೃಷಿಕರೆನಿಸಿಕೊಂಡಿದ್ದರು.

ಕೃಷಿ ಮತ್ತು ಸಾಹಿತ್ಯ ಕೃಷಿ ಪೂಜ್ಯರ ಆಸಕ್ತ ಕ್ಷೇತ್ರಗಳು. ಅವೆರಡನ್ನೂ ಉಳಿಸಿ ಬೆಳೆಸಿ, ಬದುಕಿನ ಕೊನೆಯ ಕ್ಷಣದವರೆಗೆ ಪೋಷಿಸಿಕೊಂಡು ಬಂದರು. ಅವರು ಎಂತಹ ಕಠಿಣ ಪ್ರಸಂಗ ಬಂದರೂ ತಾವು ನಂಬಿದ ಮೌಲ್ಯಗಳೊಂದಿಗೆ ರಾಜಿಯಾಗುತ್ತಿರಲಿಲ್ಲ. ಆದರೆ ‘ಮಠದ ಆಡಳಿತ ವಿಷಯದಲ್ಲಿ’ ಈ ಗಟ್ಟಿತನ ಇರಲಿಲ್ಲವಾದರೂ ಸಾರ್ವಜನಿಕ ವಿಷಯ ಬಂದಾಗ ತಮ್ಮ ಹಟ ಸಡಿಲಿಸುತ್ತಿರಲಿಲ್ಲ. ರೈತರು ಪೂಜ್ಯರ ನಿರ್ಣಯವನ್ನು ವಿರೋಧಿಸುವ ಧೈರ್ಯ ಮಾಡಿದರೂ ಧೃತಿಗೆಡದೆ ಹೋರಾಟ ಮುಂದುವರೆಸಿದರು. ಮಧ್ಯಮ ವರ್ಗದ ಜನರು ಕೂಡ ಪೂಜ್ಯರ ನಿಲುವನ್ನು ಅಷ್ಟಾಗಿ ಬೆಂಬಲಿಸಲಿಲ್ಲ. ಗದಗ ದೊಡ್ಡ ಉದ್ಯಮ ನಗರವಾಗಿ ಬೆಳೆಯುವುದನ್ನು ಸ್ವಾಮಿಗಳು ಹಾಳು ಮಾಡುತ್ತಿದ್ದಾರೆ ಎಂಬ ಅಪಪ್ರಚಾರವನ್ನು ಶುರು ಮಾಡಿದರು. ಮತ್ತೆ ಕೆಲವರು ಹೋರಾಟದ ನೆಪ ಇಟ್ಟುಕೊಂಡು ರೈತರಿಗೆ ಬರುವ ಲಾಭ ತಪ್ಪಿಸುತ್ತಿದ್ದಾರೆ ಎಂದು ಬೊಬ್ಬೆ ಹೊಡೆದರು. ಈ ಹೋರಾಟವನ್ನು ಅರ್ಧದಲ್ಲಿ ಕೈ ಬಿಟ್ಟು ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಬಹುದೊಡ್ಡ ಮೊತ್ತದ ಹಣ ಹೊಡೆಯುವ ಹೊಂಚು ಹಾಕಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ಹೆಸರು ಹಾಳು ಮಾಡುವ ಪ್ರಯತ್ನ ಮಾಡಿದರು. ಹಣ, ಅಂತಸ್ತಿನ ವ್ಯಾಮೋಹ ಪೂಜ್ಯರ ಬಳಿ ಯಾವತ್ತೂ ಸುಳಿಯುತ್ತಿರಲಿಲ್ಲ.

ಇಂತಹ ಎಲ್ಲಾ ಟೀಕೆಗಳನ್ನು ಅಜ್ಜಾ ಅವರು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಹೋರಾಟದ ಹೆಜ್ಜೆಗಳನ್ನು ತೀವ್ರಗೊಳಿದರು. ಬಹು ದೂರದಿಂದ ಬಂದು ಮೇಧಾ ಪಾಟ್ಕರ್ ನೇರವಾಗಿ ಪೂಜ್ಯರ ಬೆಂಬಲಕ್ಕೆ ನಿಂತರು. ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಪೂಜ್ಯರ ಗಟ್ಟಿ ನಿಲುವುಗಳನ್ನು ಪ್ರಶಂಸೆ ಮಾಡಿದ್ದು ಪೂಜ್ಯರ ನೈತಿಕತೆಯನ್ನು ನೂರ್ಮಡಿಸಿತು. ಹಿಂದಿನ ಹೋರಾಟಗಳಿಗೆ ಸಿಕ್ಕಂತೆ ಮಧ್ಯಮ ವರ್ಗದ ಜನರ ಬೆಂಬಲ ಸಿಗಲಿಲ್ಲ. ಮಧ್ಯಮ ಜನಾಂಗದ ಅಪ್ರಬುದ್ಧ ಮನಸ್ಥಿತಿಯ ಮಿತಿ ಪೂಜ್ಯರಿಗೆ ಚೆನ್ನಾಗಿ ಗೊತ್ತಿತ್ತು. ಯಾರಿಂದ ಏನನ್ನು ನಿರೀಕ್ಷೆ ಮಾಡಬೇಕು, ಮಾಡಬಾರದು ಎಂಬುದು ಗೊತ್ತಿದ್ದರಿಂದ ನಿರಾಶರಾಗದೇ ಏಕಾಂಗಿಯಾಗಿ ಹೋರಾಟ ಮುಂದುವರೆಸಿದರು. ಅನೇಕ ರಾಜಕೀಯ ಮಧ್ಯವರ್ತಿಗಳು ಪೂಜ್ಯರಿಗೆ ಆಪ್ತರಾದ ಕೆಲವರಿಗೆ ಆಮಿಷ ಒಡ್ಡಿ ನೋಡಿದರು. ಆಗ ಅಂತಹ ‘ಸೋ ಕಾಲ್ಡ್’ ಆಪ್ತರ ಕಿವಿ ಹಿಂಡಿ ಬುದ್ಧಿ ಹೇಳಿದರು.

ಭೂಮಿ ಮತ್ತು ಪುಸ್ತಕಗಳ ವಿಷಯಗಳಲ್ಲಿ ಪೂಜ್ಯರ ನಿಲುವು ಅಚಲವಾಗಿ ಉಳಿದದ್ದು ನೆನಪಾದರೆ ಮನಸು ತುಂಬಿ ಬರುತ್ತದೆ. ಈಗ ಬಂಜರು ಭೂಮಿಯ ಬೆಲೆಯೂ ಹೆಚ್ಚಾದ ಹೊತ್ತಿನಲ್ಲಿ ರೈತರು ಪೂಜ್ಯರ ದಿವ್ಯ ದೂರಾಲೋಚನೆಯನ್ನು ಅವರ ಅನುಪಸ್ಥಿತಿಯಲ್ಲಿ ಸ್ಮರಿಸಿಕೊಂಡು ಕೈ ಮುಗಿಯುತ್ತಾರೆ.

ಸರಕಾರ ಬಹಿರಂಗವಾಗಿ ಪೂಜ್ಯರ ನಿಲುವನ್ನು ಖಂಡಿಸುವ ಧೈರ್ಯ ಮಾಡಲಿಲ್ಲವಾದರೂ ಪರೋಕ್ಷ ಪ್ರಯತ್ನ ಮುಂದುವರೆಸಿ ರೈತರ ಸಂಘಟನೆಯನ್ನು ಒಡೆದು ನೋಡಿತು. ಆದರೆ ಪೂಜ್ಯರು ಪೋಸ್ಕೋ ಯೋಜನೆ ಕೈ ಬಿಡುವವರೆಗೆ ಸರ್ಕಾರದ ಪರವಾಗಿ ಮಾತನಾಡುವವರನ್ನು ಭೇಟಿ ಮಾಡುವುದನ್ನು ನಿಲ್ಲಿಸಿಬಿಟ್ಟರು. ಸರಕಾರ ಯೋಜನೆಯನ್ನು ರದ್ದು ಗೊಳಿಸುವವರೆಗೆ ಹೋರಾಟದ ಕಿಚ್ಚು ಉಳಿಸಿಕೊಂಡದ್ದು ಸದಾ ಸ್ಮರಣೀಯ. ಆಳುವ ಸರಕಾರಕ್ಕೆ ಪೂಜ್ಯರ ಗಟ್ಟಿತನ ಅರ್ಥವಾಯಿತು. ಪೋಸ್ಕೋ ಯೋಜನೆಯನ್ನು ಸರಕಾರ ಕೈ ಬಿಟ್ಟಾಗ ಅಜ್ಜಾ ಅವರು ಸಮಾಧಾನದ ನಿಟ್ಟುಸಿರು ಬಿಟ್ಟರು. ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡ ಹೋರಾಟಗಳನ್ನು ಎಂತಹ ಒತ್ತಡ ಬಂದರೂ ಕೈ ಬಿಡುವುದಿಲ್ಲ ಎಂಬ ಸಂದೇಶ ಹೋಯಿತು. ಪೂಜ್ಯರು ಭಾಗವಹಿಸುವ ಹೋರಾಟಗಳು ಖಂಡಿತವಾಗಿ ಯಶಸ್ಸು ಕಾಣುತ್ತವೆ ಎಂಬ ಭರವಸೆ ಹೋರಾಟಗಾರರ ಆತ್ಮವಿಶ್ವಾಸ ಹೆಚ್ಚಿಸಿತು.

ಕಪ್ಪತಗುಡ್ಡ ಉಳಿಸಿ

ಅಂದಿನ ಸರಕಾರ ಹೈಕಮಾಂಡ್ ಒತ್ತಡಕ್ಕೆ ಮಣಿದು ಕಪ್ಪತಗುಡ್ಡದ ನೂರಾರು ಎಕರೆ ಭೂಮಿಯನ್ನು ಬಲ್ದೋಟ ಕಂಪನಿಗೆ ನೀಡಲು ಒಪ್ಪಿಕೊಂಡಿತ್ತು. ಕಪ್ಪತಗುಡ್ಡ ಈ ಭಾಗದ ತುಂಬಾ ಪ್ರಸಿದ್ಧ ವನ್ಯಸ್ಪತಿಗಳ ಧಾಮ.
ಅರವತ್ತು ಕಿಲೋಮೀಟರ್ ಪ್ರದೇಶದ ವಿಸ್ತೀರ್ಣದಲ್ಲಿ ಹಬ್ಬಿಕೊಂಡ ಹಸಿರು ಬೆಟ್ಟ. ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿಕೊಂಡ ಕಪ್ಪತಗುಡ್ಡದ ರಕ್ಷಣೆಯನ್ನು ಜನ ಮರೆತು ಬಿಟ್ಟಿದ್ದರು.

ಪರೋಕ್ಷವಾಗಿ ಪರಿಸರ ವಿನಾಶ ಸಾಗಿಯೇ ಇದೆ. ಮೂಢ ನಂಬಿಕೆಗಳ ಕಾರಣದಿಂದ ಆಗಾಗ ಗುಡ್ಡಕ್ಕೆ ಬೆಂಕಿ ಹಚ್ಚುವ ಅನಿಷ್ಟ ಕೆಲಸ ನಡೆಯುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಾಮಾಣಿಕತೆಯಿಂದಾಗಿ ಕಪ್ಪತಗುಡ್ಡ ತನ್ನ ಸಾಮರ್ಥ್ಯ ಕಾಪಾಡಿಕೊಂಡಿದೆ. ‘ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು’ ಎಂಬ ಮಾತನ್ನು ನಾವು ಮರೆತು ಬಿಟ್ಟಿದ್ದೇವೆ. ಈಗ ಕೊರೋನಾ ಅಪ್ಪಳಿಸಿದ ಮೇಲೆ,ಆಕ್ಸಿಜನ್ ಕೊರತೆಗೆ ಬೆಚ್ಚಿದ ಮನುಷ್ಯ ಪ್ರಕೃತಿಯ ಮಹತ್ವವನ್ನು ಅರಿತುಕೊಂಡಿದ್ದಾನೆಂದು ಭಾವಿಸೋಣವೇ? ಆದರೆ ಕಾಲ ಮಿಂಚಿ ಹೋಗಿದೆ, ಮನುಷ್ಯ ನಿರಂತರ ದಾಳಿ ಮಾಡಿ ಪರಿಸರ ಹಾಳು ಮಾಡಿದ್ದಾನೆ.

ನಮ್ಮ ಸರಕಾರಗಳು ಔದ್ಯೋಗಿಕರಣ ಮತ್ತು ಗಣಿಗಾರಿಕೆಯ ನೆಪದಲ್ಲಿ ಭೂಮಿಯನ್ನು ಬಗೆದು ವಿರೂಪಗೊಳಿಸಿವೆ.
ಭೂಮಿತಾಯಿ ಈಗ ತನ್ನ ಸಹನೆ ಕಳೆದುಕೊಳ್ಳುವಷ್ಟು ವಿಕಾರಗೊಳಿಸಿದ ಯೋಜನೆಗಳು ನಮ್ಮ ಅಸ್ಮಿತೆಯನ್ನು ಕೊಂದು ಹಾಕಿವೆ. ಆದರೂ ನಮಗೆ ಬುದ್ಧಿ ಬಂದಿಲ್ಲ. ತೀವ್ರ ಅನಾರೋಗ್ಯ ಮತ್ತು ಹೆಣದ ರಾಶಿಗಳನ್ನು ನೋಡಿದ ಮೇಲಾದರೂ ನಾವು ಪಾಠ ಕಲಿಯದಿದ್ದರೆ ನಮ್ಮ ಮುಂದಿನ ಜನಾಂಗ ನಮ್ಮನ್ನೆಂದು ಕ್ಷಮಿಸುವುದಿಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳು ಆಕ್ಸಿಜನ್ ಕೊರತೆಯಿಂದ ನರಳಿ ಸಾಯುತ್ತಾರೆ ಎಂಬುದನ್ನು ನಾವು ಉಪೇಕ್ಷಿಸಬಾರದು.

ಈ ಹಿನ್ನೆಲೆಯಲ್ಲಿ ಪೂಜ್ಯರ ಅವಿಸ್ಮರಣೀಯ ‘ಕಪ್ಪತಗುಡ್ಡ ರಕ್ಷಿಸಿ’ ಹೋರಾಟವನ್ನು ನಾವು ಎಂದಿಗೂ ಮರೆಯಲಾಗದು, ಮರೆಯಬಾರದು ಕೂಡ! ಸರಕಾರದ ನಿಲುವನ್ನು ಮೊದಲು ಪೂಜ್ಯರು ಶಿವಾನುಭವ ಕಾರ್ಯಕ್ರಮದ ಆಶೀರ್ವಚನದಲ್ಲಿ ಪ್ರಸ್ತಾಪಿಸಿದರು. ಸರಕಾರ ತನ್ನ ಧೋರಣೆ ಬದಲಾಯಿಸುವುದಿಲ್ಲ ಎಂದು ಗೊತ್ತಾದ ಕೂಡಲೇ ಬಹಿರಂಗವಾದ ಹೋರಾಟ ಆರಂಭ ಮಾಡಲು ತೀರ್ಮಾನಿಸಿದರು.

ಆದರೆ ಪೂಜ್ಯರ ಆರೋಗ್ಯ ಈ ಹೊತ್ತಿಗಾಗಲೇ ಕ್ಷೀಣಿಸಿತ್ತು. ಮಂಡಿ ನೋವಿನ ಸರ್ಜರಿಯಾಗಿ ಅಪಾರ ದೈಹಿಕ ನೋವನ್ನು ಅನುಭವಿಸುತ್ತಿದ್ದರು. ಜನರ ಸ್ವಾರ್ಥ ಮನೋಭಾವನೆ ಮತ್ತು ದೂರ ದೃಷ್ಟಿಕೋನದ ಕೊರತೆಯನ್ನು ಪೋಸ್ಕೋ ಹೋರಾಟದ ಸಂದರ್ಭದಲ್ಲಿ ನೋಡಿದ್ದರು. ಆ ನೋವು ಅವರ ಮನಸ್ಸಿನ ಮೂಲೆಯಲ್ಲಿ ಮನೆ ಮಾಡಿತ್ತು. ಅವರನ್ನು ಅಪಾರವಾಗಿ ಗೌರವಿಸುವ ಭಕ್ತರಿಗೆ ಅಜ್ಜಾ ಅವರು ಈ ರೀತಿಯ ಹೋರಾಟಗಳಲ್ಲಿ ಭಾಗವಹಿಸಿ ಆಳುವ ಸರಕಾರದ ನಿಷ್ಠುರ ಕಟ್ಟಿಕೊಳ್ಳುವುದು ಬೇಡವಾಗಿತ್ತು. ಕೆಲವು ಹೋರಾಟಗಾರರು ಕೂಡ ಹೋರಾಟಗಳನ್ನು ಹಣ ಗಳಿಸುವ ‘ಹೊಟ್ಟೆ ಪಾಡಾಗಿ’ ಪರಿವರ್ತಿಸಿಕೊಂಡಿದ್ದರು. ಹೋರಾಟಗಳು ‘ಬ್ಲ್ಯಾಕ್ ಮೇಲ್’ ತಂತ್ರಗಳಾಗಿ ರೂಪಾಂತರಗೊಂಡಿದ್ದವು.

ಆಳುವ ಸರಕಾರ ಬೀಸುವ ಎಂಜಲಿಗೆ ಹೋರಾಟಗಾರರ ನಾಲಿಗೆ ಒಗ್ಗಿಕೊಂಡಿತ್ತು. ಹೋರಾಟಗಳ ಹಿಂದಿನ ಉದ್ದೇಶ ಮತ್ತು ಮುಖವಾಡವನ್ನು ಜನ ತಿಳಿದುಕೊಂಡು ಹೋರಾಟಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರಲಿಲ್ಲ. ಅವು ಕೂಡ ರಾಜಕೀಯ ಸಭೆಯಂತೆ ಹಣ ಕೊಟ್ಟು ಜನರನ್ನು ಕರೆಸುವ ಪ್ರೀ ಪೇಯ್ಡ್ ಸಭೆಗಳಾಗಿ ಹೋಗಿದ್ದವು. ಹೋರಾಟಗಳ ಮುಖವಾಡ ಕಳಚಿ ನಿಜವಾದ ಮುಖ ಗೊತ್ತಿದ್ದಾಗ ಹೋರಾಟಗಳಲ್ಲಿ ಜನ ನಿರಾಸಕ್ತರಾದ ಸಂಗತಿ ಅಜ್ಜಾ ಅವರಿಗೆ ಗೊತ್ತಿತ್ತು. ಒಮ್ಮೆ ಅವರೊಂದಿಗೆ ಮಾತನಾಡುವಾಗ ಹೋರಾಟಗಳ ಡಾಂಭಿಕತೆ ಮತ್ತು ದುರುದ್ದೇಶದ ಕುರಿತು ಪ್ರಸ್ತಾಪಿಸಿ ನಾನು ಬೈಸಿಕೊಂಡಿದ್ದೆ. ‘ಸ್ವಾಮಿಗಳು ನಿಮ್ಮ ಹಾಗೆ ಸಿನಿಕರಾಗಿ ಆಲೋಚನೆ ಮಾಡಲಾಗದು, ಸನ್ಯಾಸಿಗಳಾದ ನಾವು ಬದುಕಿನ ಭರವಸೆ ಕಳೆದುಕೊಂಡು ಸತ್ಯ ಹೇಳುವುದನ್ನು ಬಿಡಬಾರದು. ಹಾಗೆ ಸಮಾಜಕ್ಕೆ ಹೆದರಿದ್ದರೆ ಬುದ್ಧ, ಏಸು, ಬಸವಣ್ಣ ಮತ್ತು ಗಾಂಧೀಜಿ ತಮ್ಮ ಹೋರಾಟದಲ್ಲಿ ಯಶಸ್ವಿಯಾಗುತ್ತಿರಲಿಲ್ಲ’ ಎಂದಿದ್ದರು.

ಎಂತಹ ಕಠಿಣ ಪ್ರಸಂಗ ಬಂದರೂ ತಾವು ಸತ್ಯದ ನಿಲುವನ್ನು ಬದಲಾಯಿಸುವುದಿಲ್ಲ ಎಂಬುದನ್ನು ತಮ್ಮ ನಿರಂತರ ಹೋರಾಟಗಳ ಮೂಲಕ ಸ್ವಾಮೀಜಿ ನಿರೂಪಿಸಿದರು. ಸತ್ಯ ಹೇಳಿ ಪ್ರಾಣ ಕಳೆದುಕೊಂಡ ಜೀಸಸ್, ಗಾಂಧಿ ಅವರ ಆದರ್ಶ. ಅಷ್ಟೇ ಅಲ್ಲದೆ ಅಂತಹ ನಿಷ್ಠುರ ಸತ್ಯ ಹೇಳಿ ಹತ್ಯೆಯಾದ ತಮ್ಮ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿ ಅವರ ಅಗಲಿಕೆ ಕೂಡ ಅವರ ಮನದಲ್ಲಿ ಪ್ರೇರಣೆಯಾಗಿ ನೆಲೆಗೊಂಡಿತ್ತು; ಭೀತಿಯಾಗಿ ಅಲ್ಲ. ಸಾವಿಗೆ ಹೆದರಿ ಸತ್ಯ ಹೇಳುವುದನ್ನು ಬಿಡುವವರು ಸನ್ಯಾಸಿಗಳಾಗುವ ಅಗತ್ಯವಿಲ್ಲ ಎಂಬ ದೃಢವಾದ ಅಭಿಪ್ರಾಯವಿತ್ತು. ನೂರೆಂಟು ದೈಹಿಕ ಮತ್ತು ಮಾನಸಿಕ ಒತ್ತಡಗಳಿದ್ದರೂ ತಮ್ಮ ಸಾಮಾಜಿಕ ಎಡಪಂಥೀಯ ನಿಲುವಿನಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೇ ಬಾಳಿದರು.

ಅವಕಾಶವಾದಿಯಾಗಿ ಸರ್ಕಾರಗಳನ್ನು ಒಲೈಸುವ ಆಲೋಚನೆಯನ್ನು ಅವರು ಎಂದಿಗೂ ಮಾಡಲೇ ಇಲ್ಲ. ಹಿಂದಿನ ಹೋರಾಟಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು, ಆದರೆ ಈಗ ಸಂಖ್ಯೆ ಕ್ಷೀಣಿಸಿ ನೂರಕ್ಕೆ ಇಳಿದಿತ್ತು.
ಹಿಂದೆ ಮಾಧ್ಯಮಗಳು ಇಂತಹ ಹೋರಾಟಕ್ಕೆ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿ ಬೆಂಬಲ ನೀಡುತ್ತಿದ್ದವು. ಈಗ ಹೋರಾಟದ ಸುದ್ದಿಗಳು ಮೂಲೆ ಹಿಡಿದಿದ್ದವು. ಇಂತಹ ಅನೇಕ ಪಲ್ಲಟಗಳನ್ನು ಪೂಜ್ಯರು ಸಂಪೂರ್ಣವಾಗಿ ಅರಿತಿದ್ದರೂ ಸತ್ಯ ಹೇಳುವುದನ್ನು ನಿಲ್ಲಿಸಲಿಲ್ಲ. ಆಷಾಢಭೂತಿ ಬದುಕು ಅವರಿಗೆ ಬೇಡವಾಗಿ, ಸತ್ಯ ಪ್ರತಿಪಾದಕರಾಗಿಯೇ ಕೊನೆಯವರೆಗೂ ಹೋರಾಡಿದರು. ಹೋರಾಟಗಳಲ್ಲಿ ಸಂಖ್ಯೆಯ ಕ್ವಾಂಟಿಟಿ ಬೇಕಾಗಿರಲಿಲ್ಲ, ಕ್ವಾಲಿಟಿ ಬೇಕಿತ್ತು. ಆದರೆ ಇದ್ದ ಕ್ವಾಲಿಟಿ ಜನ ಭಯದ ಭೀತಿಯಿಂದ ಮರೆಯಾಗಿ ಹೋಗಿದ್ದರು.

ಸಾವು ಮನುಷ್ಯನನ್ನು ಬೆದರಿಸಿ ಬಿಡುತ್ತದೆ, ಸಾವಿಗೆ ಹೆದರುವುದು ಶುರುವಾದರೆ ಮನುಷ್ಯ ಜೀವಂತ ಇದ್ದಾಗಲೇ ಸತ್ತು ಹೋಗುತ್ತಾನೆ.ಅಂತಹ ಹೇಡಿ ಬದುಕು ಪೂಜ್ಯರಿಗೆ ಬೇಡವಾಗಿತ್ತು. ಚಿಂತಕರಾದ ಡಾ.ಕಲಬುರ್ಗಿ ಅವರ ಹತ್ಯೆಯ ನಂತರ ಹತಾಶರಾಗಿ ನೊಂದಿದ್ದರು, ಆದರೆ ಸಾವಿಗೆ ಯಾವತ್ತೂ ಹೆದರಲಿಲ್ಲ, ಹಾಗೆ ಹೆದರಿದ್ದರೆ ಹೋರಾಟಗಳನ್ನು ಅನಾರೋಗ್ಯದ ನೆಪ ಇಟ್ಟುಕೊಂಡು ನಿಲ್ಲಿಸಿ ಬಿಡಬಹುದಾಗಿತ್ತು. ಡಾ.ಕಲಬುರ್ಗಿ ಅವರ ಹತ್ಯೆಯ ನಂತರ ರಾಜ್ಯದ ಜನಪರ ಹೋರಾಟಗಳಿಗೆ ಹಿನ್ನಡೆಯಾಗಿದ್ದೇನೋ ನಿಜ ಆದರೆ ಆ ಹೋರಾಟದ ಕಿಚ್ಚು ಮಾತ್ರ ಸಂಪೂರ್ಣ ತಣ್ಣಗಾಗಿರದೇ ಒಳಗೊಳಗೆ ಪ್ರಜ್ವಲಿಸುತ್ತಲೇ ಇತ್ತು, ಈಗಲೂ ಪ್ರಜ್ವಲಿಸುತ್ತಲೇ ಇದೆ. ಡಾ.ಕಲಬುರ್ಗಿ ಅವರ ಹತ್ಯೆಯ ನಂತರ ಅಜ್ಜಾ ಅವರು ಹೆದರಿಕೊಂಡಿರಬಹುದು ಎಂಬ ಊಹೆಯನ್ನು ಸುಳ್ಳು ಮಾಡಿದ್ದು ಅವರ ‘ಕಪ್ಪತಗುಡ್ಡ ಉಳಿಸಿ’ ಹೋರಾಟ.

ರಾಜ್ಯ ಸರ್ಕಾರ ತೋಂಟದಾರ್ಯ ಸ್ವಾಮಿಗಳು ಹೋರಾಟ ಆರಂಭಿಸಬಹುದು ಎಂದು ನಿರೀಕ್ಷೆ ಮಾಡದೇ ಬಲ್ದೋಟಾ ಕಂಪನಿಗೆ ಕಪ್ಪತಗುಡ್ಡದ ಭೂಮಿ ನೀಡುವ ಕ್ಯಾಬಿನೆಟ್ ನಿರ್ಧಾರ ಪ್ರಕಟಿಸಿತ್ತು. ಲಿಂಗಾಯತ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದರೂ ಸರಕಾರದ ಈ ನಿಲುವನ್ನು ತಾತ್ವಿಕವಾಗಿ ವಿರೋಧಿಸಿದರು. ಪೂಜ್ಯರ ಜನಪರ ನಿಲುವಿಗೆ ಸರಕಾರ ತನ್ನ ಮೆಚ್ಚುಗೆ ಸೂಚಿಸುವುದರ ಜೊತೆಗೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿತು. ಅಂದಿನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಸ್ವತಃ ಪೂಜ್ಯರೊಂದಿಗೆ ಫೋನಿನಲ್ಲಿ ಮಾತನಾಡಿ ಹೋರಾಟ ಕೈ ಬಿಡುವಂತೆ ವಿನಂತಿಸಿಕೊಂಡರು, ಆದರೆ ಒತ್ತಡ ಹಾಕಲಿಲ್ಲ ಎಂಬುದು ಅಷ್ಟೇ ಗಮನಾರ್ಹ ಸಂಗತಿ.

ಶಿರಹಟ್ಟಿ ಮತ್ತು ಇತರ ಕಪ್ಪತಗುಡ್ಡ ಪ್ರದೇಶದ ರೈತರು ಮತ್ತು ಹೋರಾಟಗಾರ ರವಿಕಾಂತ ಅಂಗಡಿ ತಂಡದ ಬೆಂಬಲದೊಂದಿಗೆ ಪೂಜ್ಯರು ಬಹಿರಂಗವಾಗಿ ಹೋರಾಟ ಪ್ರಾರಂಭ ಮಾಡುವ ನಿರ್ಧಾರ ಪ್ರಕಟಿಸಿದರು.
ಸರಕಾರ ತನ್ನ ನಿರ್ಧಾರ ಕೈ ಬಿಡುವುದಿಲ್ಲ ಎಂದು ಗೊತ್ತಾದ ಕೂಡಲೇ ಗದುಗಿನ ಗಾಂಧಿ ವೃತ್ತದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಿದಾಗ ಸರಕಾರ ಬೆಚ್ಚಿ ಬಿದ್ದಿತು. ರಾಜ್ಯದ ಮೂಲೆ ಮೂಲೆಗಳಿಂದ ಜನ ನಿಧಾನವಾಗಿ ಬರಲಾರಂಭಿಸಿದರು. ಹೋರಾಟದ ಕಾವು ದಿನೇ ದಿನೇ ಏರಲಾರಂಭಿಸಿತು. ಅನೇಕ ಪ್ರಗತಿಪರ ಸಂಘಟನೆಗಳಿಗೆ ‘ಕಪ್ಪತಗುಡ್ಡ ಉಳಿಸಿ’ ಹೋರಾಟ ಹೊಸ ಚೈತನ್ಯ ತಂದು ಕೊಟ್ಟಿತು.

ಇಂತಹ ಹೋರಾಟಗಳ ಮೂಲಕ ತನ್ನ ಪ್ರಾಮಾಣಿಕ ಅಸ್ಮಿತೆಗೆ ಹೆಣಗಾಡುತ್ತಿದ್ದ ಸಂಘಟನೆಗಳು ಪ್ರತಿಫಲಾಪೇಕ್ಷೆ ಇಲ್ಲದೆ ಹೋರಾಟದಲ್ಲಿ ಬೆಂಬಲಕ್ಕೆ ಮುಂದಾದದ್ದು ಪೂಜ್ಯರಿಗೆ ಕೊಂಚ ಸಮಾಧಾನವಾಯಿತು. ಪೋಸ್ಕೋ ಹೋರಾಟದಲ್ಲಿ ದೂರ ಉಳಿದಿದ್ದ ರೈತರು ಈ ಹೋರಾಟದಲ್ಲಿ ಮುಕ್ತವಾಗಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆ. ಪೂಜ್ಯರು ತಮ್ಮ ಭೂಮಿಯನ್ನು ಉಳಿಸಿಕೊಟ್ಟರು ಎಂಬ ಕೃತಜ್ಞತೆಯನ್ನು ಹೋರಾಟದಲ್ಲಿ ಭಾಗವಹಿಸುವುದರ ಮೂಲಕ ಅಭಿವ್ಯಕ್ತಗೊಳಿಸಿದರು. ಭ್ರಷ್ಟಾಚಾರದ ವಿರುದ್ಧ ಬಹಿರಂಗ ಹೋರಾಟ ಮಾಡುತ್ತಿದ್ದ ರವಿಕೃಷ್ಣಾ ರೆಡ್ಡಿ ಗದುಗಿಗೆ ಬೆಂಬಲಿಗರೊಂದಿಗೆ ಬಂದು ತಮ್ಮ ಬೆಂಬಲ ಸೂಚಿಸಿದರು. ಹೀಗೆ ಅನೇಕ ಜನಪರ ಸಂಘಟನೆಗಳು ಒಗ್ಗಟ್ಟಾಗಿ ಪೂಜ್ಯರ ಕೈ ಜೋಡಿಸಿದ ಪ್ರತಿಫಲವಾಗಿ ಸರಕಾರ ತನ್ನ ನಿರ್ಣಯ ಕೈ ಬಿಟ್ಟದ್ದು ಹೊಸ ಇತಿಹಾಸ ನಿರ್ಮಾಣ ಮಾಡಿ, ಕಪ್ಪತಗುಡ್ಡದ ನೂರಾರು ಎಕರೆ ಭೂಮಿ ಉಳಿಯಿತು.

Previous post ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
Next post ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)

Related Posts

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
Share:
Articles

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ

December 3, 2018 ಡಾ. ಪಂಚಾಕ್ಷರಿ ಹಳೇಬೀಡು
ಇಂದಿನ ದಿನಮಾನಗಳಲ್ಲಿ ಒಬ್ಬ ವ್ಯಕ್ತಿ ಭಕ್ತನೆನಿಸಿಕೊಳ್ಳುವುದೆಂದರೆ ಆತ/ಆಕೆ ಮಡಿವಂತನಾಗಿ, ದೇಗುಲಕ್ಕೆ ಹೋಗಿ, ಅಥವಾ ಮನೆಯ ದೇವರ ಕೋಣೆಯಲ್ಲಿ ದೇವ ನಾಮ ಸ್ಮರಣೆ ಮಾಡುವುದು,...
ಬೆಳಗಾವಿ ಅಧೀವೇಶನ: 1924
Share:
Articles

ಬೆಳಗಾವಿ ಅಧೀವೇಶನ: 1924

December 13, 2024 ಮಹೇಶ ನೀಲಕಂಠ ಚನ್ನಂಗಿ
“ಹನ್ನೆರಡನೆಯ ಶತಮಾನದಲ್ಲಿ ಆಗಿಹೋದ ಬಸವಣ್ಣನವರು ಈ ಕಾಲದಲ್ಲಿ ಇರುತ್ತಿದ್ದರೆ ಜಗತ್ತಿಗೇ ಪೂಜ್ಯವ್ಯಕ್ತಿಯಾಗಿ ಪರಿಣಮಿಸುತ್ತಿದ್ದರು. ಅವರು ಉಪದೇಶಿಸಿದ ತತ್ವಗಳಲ್ಲಿ...

Comments 7

  1. ಪ್ರೊ. ಕೆ ಎಸ್ ಮಲ್ಲೇಶ್
    May 12, 2023 Reply

    ಪ್ರೊ. ಸಿದ್ದು ಯಾಪಲಪರವಿ ಅವರ “ಮರೆಯಲಾಗದ ಜನಪರ ಹೋರಾಟಗಾರ” ಲೇಖನ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಗಳಿಗಿದ್ದ ದೂರದರ್ಶಿತ್ವ, ಸಾಮಾಜಿಕ ಕಳಕಳಿ, ಸತ್ಯನಿಷ್ಠ ಹೋರಾಟದಲ್ಲಿ ಅಚಲ ವಿಶ್ವಾಸ ಮತ್ತು ಧರ್ಮಗುರುವಿಗಿರಬೇಕಾದ ನಿಜವಾದ ಕರ್ತವ್ಯ ಪ್ರಜ್ಞೆ ಇವೆಲ್ಲವುಗಳನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸಿದೆ. ಎಲ್ಲ ಮಠದ ಸ್ವಾಮಿಗಳು ಹೀಗೆ ತಮ್ಮನ್ನು ಸಮಾಜಕ್ಕೆ ಒಡ್ಡಿಕೊಳ್ಳಬೇಕೆಂಬುದೇ ಆ ಸ್ಥಾನಗಳಿಗೆ ಅವರನ್ನು ನೇಮಕ ಮಾಡಿರುವ ನಿಜ ಉದ್ದೇಶ. ಆ ರೀತಿ ನಡೆದುಕೊಳ್ಳುವುದೇ ಅವರ ಕಾಯಕವಾಗಬೇಕಿತ್ತು. ಆದರೆ ವಸ್ತು ಸ್ಥಿತಿ ಹಾಗಿಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ ಬಹಳಷ್ಟು ಮಠಗಳ ಸ್ವಾಮಿಗಳು ಈ ಸಚ್ಚಾರಿತ್ರ್ಯದ ಹಾದಿಯಿಂದ ವಿಮುಖರಾಗಿದ್ದಾರೆ. ಈ ಲೇಖನ ಅವರನ್ನೂ ಅವರ ಭಕ್ತರನ್ನೂ ಎಚ್ಚರಿಸಬಹುದು.
    ತೋಂಟದಾರ್ಯ ಮಠದ ಸಿದ್ದಲಿಂಗ ಯತಿಗಳು ಸಾಗಿದ ಹಾದಿಯಲ್ಲಿ ಎಲ್ಲ ಮಠಗಳ ಪೂಜ್ಯರುಗಳು ಸಾಗುವಂತಾಗಲಿ. ಅವರೊಡನೆ ನಾವೂ ಕೈಜೋಡಿಸೋಣ. ನಾಡಿನ ಅಸ್ಮಿತೆಯನ್ನು ನೆಲ ಜಲ ಸಸ್ಯ ಸಂಪತ್ತನ್ನು ಜೀವವೈವಿಧ್ಯತೆಯನ್ನು ರಕ್ಷಿಸೋಣ. ಲೇಖಕರಿಗೆ ನನ್ನ ಪ್ರಣಾಮಗಳು

  2. Prof. C.A.Somashekharappa
    May 17, 2023 Reply

    A good write up by Yapalaparvi on the Dambala mathaadeesha gadugina tontada siddarama guruji.
    I shall recommend students to take it up as a topic for doctoral research.

  3. ಗಿರೀಶ್ ತೋಂಟದ
    May 29, 2023 Reply

    ಗದುಗಿನ ಹಿಂದಿನ ಶ್ರೀಗಳು ಈಗ ಇರಬೇಕಾಗಿತ್ತು ಅಂತ ನನಗೆ ಸಾವಿರ ಸಾವಿರ ಸಲ ಅನಿಸಿದೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಅವರಿಂದ ಆನೆಯ ಬಲ ಬರುತ್ತಿತ್ತು.

  4. Channabasavanna Belgam
    May 29, 2023 Reply

    ನಮ್ಮ ಸಮಾಜಕ್ಕೆ ಬೇಕಾಗಿದ್ದು ಇಂತಹ ದಿಟ್ಟ ಸ್ವಾಮಿಗಳು. ಅವರ ಒಂದೊಂದು ಹೋರಾಟಗಳೂ ಅವಿಸ್ಮರಣೀಯ. ಲೇಖಕರಿಗೆ ವಂದನೆಗಳು.

  5. ಜಗದೀಶ ಹೊಸಮಠ
    May 29, 2023 Reply

    ತೋಂಟದಾರ್ಯ ಸ್ವಾಮಿಗಳ ಸಾಹಸಗಾತೆ ರೋಚಕವಾಗಿದೆ…

  6. ಬಸವಪ್ರಭು ಬೀದರ
    May 30, 2023 Reply

    ಮಠದ ಸ್ವಾಮಿಗಳೆಂದರೆ ಅಸಡ್ಡೆ, ಅಗೌರವ ಮೂಡುತ್ತಿರುವ ಈ ದಿನಗಳಲ್ಲಿ ಇಂತಹ ಗುರುಗಳ ನೆನಪು ತಂಗಾಳಿಗೆ ಮೈಯೊಡ್ಡಿದ ಅನುಭವ ನೀಡಿತು.👌🏽👌🏽

  7. ದೇವೀರಯ್ಯ ಗುಬ್ಬಿ
    Jun 1, 2023 Reply

    ಕೇವಲ ಹಣ ಮತ್ತು ಹೆಸರಿಗಾಗಿ ಗುದ್ದಾಡುವ ಜಾತಿ ಜಗದ್ಗುರುಗಳಿಂದ ಬಸವ ತತ್ವ ಪ್ರಚಾರಕ್ಕೆ ಎಳ್ಳಷ್ಟೂ ಪ್ರಯೋಜನ ಇಲ್ಲ. ತೋಂಟದ ಸ್ವಾಮಿಗಳು ನಿಜಾರ್ಥದಲ್ಲಿ ಜಂಗಮರು.

Leave a Reply to ಗಿರೀಶ್ ತೋಂಟದ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
Copyright © 2025 Bayalu