Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
Share:
Articles April 29, 2018 ಡಾ. ಎಸ್.ಎಮ್ ಜಾಮದಾರ

ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ

ಕಳೆದ ಜುಲೈ ತಿಂಗಳಿಂದ ನಡೆಯುತ್ತಿರುವ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ದಿನೆ ದಿನೆ ಪ್ರಬಲಗೊಳ್ಳುತ್ತಿದೆ. ಬೇರೆ ಪಕ್ಷಗಳವರೂ ಈ ಹೊರಾಟವನ್ನು ಸೇರುತ್ತಿದ್ದರಿಂದ ಇದು “ಕಾಂಗ್ರೆಸ್ಸಿನ ರಾಜಕೀಯ ಸ್ಟಂಟ್” ಎನ್ನುವ ಪ್ರಾರಂಭದ ಟೀಕೆ ಈಗ ನಿಸ್ತೇಜವಾಗಿದೆ. ರ್ಯಾಲಿಗಳಲ್ಲಿ ಸೇರುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ತನ್ನ ಹಳೆಯ ನಿಲುವನ್ನೇ ಸಾಧಿಸುತ್ತಿರುವ ವೀರಶೈವ ಮಹಾಸಭೆಯ ಹಠಮಾರಿತನದಿಂದಾಗಿ ಪ್ರತ್ಯೇಕ ಪರ್ಯಾಯ ಮಹಾಸಭೆಯನ್ನು ಸ್ಥಾಪಿಸಬೇಕಾದ ಅನಿವಾರ್ಯತೆ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗಾಗಿ ಸಾವಿರಾರು ಲಿಂಗಾಯತ ಮಠಗಳ ಮಠಾಧೀಶರು ವಿಶ್ವ ಲಿಂಗಾಯತ ಮಹಾಪರಿಷತ್ತನ್ನು ಬೆಂಬಲಿಸಬೇಕೋ ಅಥವಾ ವೀರಶೈವ ಮಹಾಸಭೆಯನ್ನು ಬೆಂಬಲಿಸಬೇಕೋ ಎಂಬ ಬಗ್ಗೆ ತುಂಬ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಇದು ಒಂದು ರೀತಿಯಲ್ಲಿ ಮಠಾಧೀಶರಲ್ಲಿ ‘ಬಸವಪರ’ ಮತ್ತು ‘ಬಸವ-ವಿರೋಧಿಗಳು ಯಾರು ಎಂಬುದನ್ನೂ ಸ್ಪಷ್ಟಮಾಡುವ ಅಗ್ನಿಪರೀಕ್ಷೆಯ ಕಾಲದಂತೆ ಭಾಸವಾಗುತ್ತಿದೆ! ಅದರ ವಿಶ್ಲೇಷಣೆಯೇ ಈ ಲೇಖನ.

ಲಿಂಗಾಯತ ಧರ್ಮದಲ್ಲಿ ಇರುವಷ್ಟು ಮಠಗಳು ಭಾರತದ ಇತರ ಧರ್ಮಗಳಲ್ಲಿ ಬಹುಶಃ ಇರಲಿಕ್ಕಿಲ್ಲ: ಹಿಂದೆ ಇದ್ದ ಅಂದಾಜು ಮೂರು ಸಾವಿರ ಮಠಗಳಲ್ಲಿ ಈಗ ಸುಮಾರು ಒಂದು ಸಾವಿರದ ಒಂದು ನೂರು ಮಠಗಳು ಸಕ್ರಿಯವಾಗಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿದ್ದರೂ ತಮ್ಮತಮ್ಮೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಐತಿಹಾಸಿಕ ವೈರತ್ವಗಳಿಂದ ಬಹುತೇಕ ಮಠಾಧೀಶರು ತಮ್ಮ ತಮ್ಮ ಮಠದ ಪ್ರಭಾವಲಯಕ್ಕೆ ಸೀಮಿತವಾಗಿದ್ದಾರೆ. ಕೆಲವು ಮಠಗಳಂತೂ ತಮ್ಮ ಉಪಜಾತಿಗೆ ಸೀಮಿತವಾಗಿವೆ. ಹೀಗಾಗಿ, ಸಮಗ್ರ ಸಮುದಾಯದ ಪ್ರಗತಿ, ಭವಿಷ್ಯ ಮತ್ತು ಇಡೀ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಾಮೂಹಿಕ ಸಂಘಟಿತ ಹೋರಾಟ ನಡೆಸುವಷ್ಟು ಶಿಸ್ತು, ಏಕತೆ, ಸಮಗ್ರತೆಗಳ ಕೊರತೆಗಳು ಎದ್ದುಕಾಣುತ್ತಿವೆ.

ವಿಚಿತ್ರವೆಂದರೆ, ಬಸವ ಸ್ಥಾಪಿತ ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗದ ಪರಿಕಲ್ಪನೆಯಿಂದಾಗಿ ದೇವರ ಮತ್ತು ಭಕ್ತನ ನಡುವಿನ ಸಂಬಂಧ ನೇರ ಮತ್ತು ��ಿರಂತರ. ಅವರಿಬ್ಬರ ನಡುವೆ ಪುರೋಹಿತನಿಗೆ/ಜಂಗಮನಿಗೆ/ಪೂಜಾರಿಗೆ ಸ್ಥಾನವೇ ಇಲ್ಲ. ಸ್ಥಾವರಲಿಂಗ ಪೂಜೆ ನಿಷಿದ್ಧವಾದ್ದರಿಂದ ದೇವಾಲಯ ಸಂಸ್ಕೃತಿಗೂ ಅವಕಾಶವಿಲ್ಲ. ಹೀಗಾಗಿ ಲಿಂಗಾಯತ ಧರ್ಮದಲ್ಲಿ ಮಠಗಳಿಗೆ ಅವಕಾಶವೇ ಇಲ್ಲ. ಬಸವಣ್ಣನವರು ಯಾವುದೇ ಮಠ ಸ್ಥಾಪಿಸಲಿಲ್ಲ, ಯಾವುದೇ ಮಠಾಧೀಶರೂ ಅವರಲ್ಲ. ಇದೇ ಲಿಂಗಾಯತ ಧರ್ಮದ ವಿಶೇಷತೆ!

ಆ ವಿಶೇಷತೆಯೇ ಲಿಂಗಾಯತ ಧರ್ಮದ ಅಶಕ್ತಿಯಾಗಿ ಪರಿಣಮಿಸಿದೆ. ಬುದ್ಧನು ಬೌದ್ಧಭಿಕ್ಕುಗಳ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ತಾನು ಸ್ಥಾಪಿಸಿದ ಧರ್ಮವು ಶಾಶ್ವತವಾಗಿ ಉಳಿಯುವಂತೆ ಮಾಡಿದನು. ಬಸವಣ್ಣನು ಬುದ್ಧನ ಹಾಗೆ ಎಂಬತ್ತು ವರ್ಷ ಬಾಳಲಿಲ್ಲ. ಲಿಂಗಾಯತ ಧರ್ಮ ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ನಡೆದ ಕ್ರಾಂತಿಯಿಂದ ಬಸವಣ್ಣನವರು ಕಾಲವಶವಾದರು. ಅವರ ಕ್ರಾಂತಿಕಾರಿ ಆಚಾರಗಳಿಗೆ-ವಿಚಾರಗಳಿಗೆ ಸಾಂಸ್ಥಿಕ ರೂಪವೇ ಸಿಗಲಿಲ್ಲ. ಆ ಕೊರತೆ, ಶೂನ್ಯ, ನಿರ್ವಾತವೆ ಇಂದಿನ ಗೊಂದಲಗಳಿಗೆ ಕಾರಣವೆಂದರೂ ಸರಿಯೇ!

ಆದಾಗ್ಯೂ ಕ್ರಾಂತಿಯಲ್ಲಿ ಪ್ರಾಣ ಉಳಿಸಿಕೊಂಡು ಕಲ್ಯಾಣದಿಂದ ಚದುರಿ ಹೋದ ಸುಮಾರು ಒಂದು ಲಕ್ಷ ಎಂಬತ್ತು ಸಾವಿರ ಶರಣರು ತಾವು ನೆಲೆನಿಂತ ಸ್ಥಳಗಳಲ್ಲಿ ಅವಿರತವಾಗಿ ಬಸವ ತತ್ವಗಳನ್ನು ಪ್ರಸಾರಮಾಡಿದರು. ಆಗ ಅವರು ಕಟ್ಟಿಕೊಂಡ ಸಂಘಗಳೇ ಮುಂದೆ ಲಿಂಗಾಯತ ಮಠಗಳಾಗಿ ಪರಿವರ್ತನೆಗೊಂಡವು. ಅವುಗಳಿಂದಾಗಿ ಲಿಂಗಾಯತ ಧರ್ಮವು ಶಾಶ್ವತವಾಗಿ ಉಳಿಯಲು ಸಾಧ್ಯವಾಯಿತು. ಅವುಗಳ ಮೂಲಕ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಲಿಂಗಾಯತ ಧರ್ಮವು ವ್ಯಾಪಕವಾಗಿ ಹರಡಿತು. ಹೀಗೆ ಧರ್ಮ ಪ್ರಸಾರ ಕಾಲದಲ್ಲಿ ಶರಣರು ಸ್ಥಾಪಿಸಿಕೊಂಡ ಮಠಗಳೇ ಲಿಂಗಾಯತ ಧರ್ಮಕ್ಕೆ ಸಾಂಘಿಕ ರೂಪವನ್ನು ನೀಡಿವೆ. ಇವು ‘ವಿರಕ್ತ ಮಠ’ಗಳೆಂದು ಜನಪ್ರಿಯವಾಗಿವೆ. ಬಸವಣ್ಣನವರಿಂದ ಆಕರ್ಷಿತಗೊಂಡು ಅಂದು ಅಸ್ತಿತ್ವದಲ್ಲಿದ್ದ ಹಿಂದೂ ಶೈವದ ಕಾಳಾಮುಖಿ, ಲಕುಲೀಶ, ಕಾಶ್ಮೀರಿ ಶೈವದ ಮಠಗಳೂ ಲಿಂಗಾಯತವಾಗಿ ಪರಿವರ್ತನೆಗೊಂಡವು. ಇವುಗಳನ್ನೂ ‘ವಿರಕ್ತ ಮಠಗಳು’ ಎಂದು ಕರೆಯಲಾಗುತ್ತದೆ. ಎಲ್ಲ ವಿರಕ್ತ ಮಠಗಳಿಗೆ ತ್ರಿವಿಧ ದಾಸೋಹ, ಕಾಯಕ ನಿಷ್ಠೆ, ಬಸವ ಧರ್ಮಪ್ರಸಾರ ಮೂಲ ಉದ್ದೇಶಗಳಾಗಿವೆ. ಸುಮಾರು ಒಂದು ಸಾವಿರದಷ್ಟು ವಿರಕ್ತ ಮಠಗಳಿವೆ.

ಆದರೆ ಬಸವಣ್ಣನವರಿಂದ ಆಕರ್ಷಿತರಾಗಿ ಲಿಂಗಾಯತವನ್ನು ಸೇರಿದ ಆಂಧ್ರದ ಆರಾಧ್ಯ ಶೈವ ಬ್ರಾಹ್ಮಣರು ಮುಂದಿನ ಇನ್ನೂರು ವರ್ಷಗಳಲ್ಲಿ ತಮ್ಮ ಮೂಲ ಬ್ರಾಹ್ಮಣ್ಯದ ಆಚರಣೆಗಳನ್ನು ಲಿಂಗಾಯತದಲ್ಲಿ ಸೇರಿಸಲಾರಂಭಿಸಿದರು. ಶರಣರ ವಚನಗಳನ್ನು ತಮಗೆ ಅನುಕೂಲವಾದಂತೆ ತಿದ್ದಿದ್ದಲ್ಲದೆ ಬಹುತೇಕ ವಚನಗಳನ್ನು ನಿರ್ಲಕ್ಷಿಸಿ ಕತ್ತಲೆಗೆ ತಳ್ಳುವಲ್ಲಿ ಯಶಸ್ವಿಯಾದರು. ಈ ಹಿನ್ನೆಲೆಯಲ್ಲಿ ಹದಿನಾಲ್ಕನೆಯ ಶತಮಾನದಲ್ಲಿ ಹುಟ್ಟಿಬಂದದ್ದೇ ‘ವೀರಶೈವ’ ಎಂಬ ಲಿಂಗಾಯತ ಉಪಪಂಗಡ! ಮತ್ತು ‘ಸಿದ್ಧಾಂತ ಶಿಖಾಮಣಿ’ ಎಂಬ ಪುಸ್ತಕ ಅವರ ಧರ್ಮಗ್ರಂಥ.

ಲಿಂಗಾಯತವನ್ನು ವೈದಿಕ ಧರ್ಮದೊಂದಿಗೆ ಸಮನ್ವಯಗೊಳಿಸಿದ ವೀರಶೈವರು ಹದಿನೈದನೆಯ ಶತಮಾನದಲ್ಲಿ ವಿಜಯನಗರದ ಅರಸರ ರಾಜಾಶ್ರಯ ಪಡೆದರು. ತಮ್ಮ ಪಂಥವನ್ನು ಬೆಳೆಸುವುದರ ಜೊತೆಗೆ ಹನ್ನೆರಡನೆಯ ಶತಮಾನದ ಶರಣರ ವಚನಗಳನ್ನು ‘ಶೂನ್ಯ ಸಂಪಾದನೆ’ ಎಂಬ ಹೆಸರಿನ ನಾಲ್ಕು ಬೇರೆ ಬೇರೆ ಗ್ರಂಥಗಳಲ್ಲಿ ‘ಪರಿಷ್ಕರಿಸಿ’ ಸಂಪಾದಿಸಿದರು. ಲಕ್ಕಣ್ಣ ದಂಡೇಶನ ‘ಶಿವತತ್ವ ಚಿಂತಾಮಣಿ’, ಸಿಂಗೀರಾಜನ ‘ಅಮಲ ಬಸವರಾಜ ಚರಿತೆ’, ಇತ್ಯಾದಿ ನೂರಾರು ಪುಸ್ತಕಗಳು ರಚನೆಯಾದವು. ಹದಿನಾರರಿಂದ ಹದಿನೆಂಟನೆಯ ಶತಮಾನಗಳಲ್ಲಿ ಕೆಳದಿ, ಕೊಡಗು, ಅಂಬತ್ತೂರು, ಪುಂಗನೂರು, ಮೈಸೂರು ಅರಸರ ಆಶ್ರಯದಲ್ಲಿ ‘ಲಿಂಗಾಯತ-ವೀರಶೈವ’ ಸಾಹಿತ್ಯ ಇನ್ನಷ್ಟು ವಿಪುಲವಾಗಿ ಬೆಳೆಯಿತು. ಶಂಕರಾಚಾರ್ಯರನ್ನು ಅನುಕರಿಸಿ ಮೊದಮೊದಲು ನಾಲ್ಕು ನಂತರ ಇನ್ನೊಂದು ಮಠಗಳನ್ನು ಸ್ಥಾಪಿಸಿಕೊಂಡರು. ಇದೇ ಕಾಲಘಟ್ಟದಲ್ಲಿ ತಾವೇ ಲಿಂಗಾಯತ ಧರ್ಮಸ್ಥಾಪಕರೆಂದೂ ಬಸವಣ್ಣ ಕೇವಲ ಅದರ ಸುಧಾರಕನೆಂದೂ ಅಮಾಯಕ ಜನರನ್ನು ನಂಬಿಸತೊಡಗಿದರು. ಇವರೇ ‘ಗುರುವರ್ಗದ’ ಪಂಚಾಚಾರ್ಯರು! ಇವರ ಮಠಗಳು ಕೇವಲ ಐದು, ಶಾಖಾ ಮಠಗಳು ಸುಮಾರು ಇನ್ನೂರು. ಇಲ್ಲಿಂದ (ಹದಿನೇಳನೆಯ ಶತಮಾನ) ಪ್ರಾರಂಭವಾಯಿತು ‘ಗುರು-ವಿರಕ್ತರ’ ಅಂತಃಕಲಹ!

ರಾಜಾಶ್ರಯ ಪಡೆದ ಗುರುವರ್ಗದ ಪ್ರಭಾವದಿಂದ ವಿರಕ್ತ ಮಠಗಳು ಹಿಂದೆ ತಳ್ಳಲ್ಪಟ್ಟವು. ಲಿಂಗಾಯತವನ್ನು ಭ್ರಷ್ಟಗೊಳಿಸಿದ ಪಂಚಾಚಾರ್ಯರೆ ಲಿಂಗಾಯತದ ಸಂಸ್ಥಾಪಕರು ಎನ್ನುವಷ್ಟು ಅತಿರೇಕಕ್ಕೆ ಹೋಯಿತು. ಬಸವಣ್ಣನವರನ್ನು ನಂದಿಯ ರೂಪದ ಎತ್ತು ಎನ್ನುವಷ್ಟು ಹೀಗಳೆಯಲಾಯಿತು. ವಚನಗಳು ನೇಪಥ್ಯಕ್ಕೆ ಸರಿದವು. ಕನ್ನಡದ ಸ್ಥಳದಲ್ಲಿ ಸಂಸ್ಕೃತಕ್ಕೆ ಹೆಚ್ಚು ಪ್ರಾಧಾನ್ಯತೆ ದೊರೆಯಿತು. ಬಸವ ತತ್ವಗಳಿಗೆ ಹೋಲಿಕೆ ಇರುವ ವೇದ, ಆಗಮ, ಪುರಾಣ, ಉಪನಿಷತ್ ಅಂಶಗಳನ್ನು ಪ್ರಚಾರ ಮಾಡಲಾಯಿತು. ಇವರಿಂದಾಗಿಯೇ ಲಿಂಗಾಯತರೆಲ್ಲರೂ ತಾವೂ ಹಿಂದೂಗಳೆಂದು, ಲಿಂಗಾಯತ-ವೀರಶೈವ ಎರಡೂ ಒಂದೇ ಎ0ಬ ವಾದ ಹುಟ್ಟಿಕೊಂಡಿತು. ಲಿಂಗಾಯತರಲ್ಲಿ ಹಿಂದೂ ಅಂದರೆ ವೈದಿಕ ಆಚರಣೆಗಳು ಸಾಮಾನ್ಯವಾದವು.

ಗುರುಮಠದವರು ತಾವು ಶ್ರೇಷ್ಠರೆಂದೂ, ಭಕ್ತರು ತಮ್ಮ ಸೇವೆ ಮಾಡಬೇಕೆಂದು ಬಯಸುತ್ತಾರೆ. ಅಡ್ಡಪಲ್ಲಕ್ಕಿ, ದಸರಾ ದರ್ಬಾರ ಅವರ ಸಂಪ್ರದಾಯಗಳು. ಅವರು ಮಾಡಿದ್ದೆಲ್ಲ ತಮಗಾಗಿ ಮತ್ತು ತಮ್ಮ ಉಪಜಾತಿಗಾಗಿ! ಮೊದ ಮೊದಲು ತಮ್ಮನ್ನು ‘ವೀರಮಾಹೇಶ್ವರ ಬ್ರಾಹ್ಮಣ’ರೆಂದು, 2002ರಿಂದ ತಾವು “ಬೇಡ ಜಂಗಮ”ರೆಂದು ಹೇಳಿಕೊಂಡಿದ್ದಾರೆ! ತದ್ವಿರುದ್ಧವಾಗಿ, ವಿರಕ್ತರು ತಾವು ಭಕ್ತರ ಸೇವೆಗಾಗಿ ಸಮಾಜಕ್ಕಾಗಿ ಇದ್ದೇವೆಂದು ತಿಳಿಯುತ್ತಾರೆ. ಶಿಕ್ಷಣ, ಕನ್ನಡ ಸಾಹಿತ್ಯ, ಸಂಸ್ಕೃತಿ, ಲಿಂಗಾಯತ ಧರ್ಮ ಸ0ಘಟನೆಗೆ ವಿರಕ್ತ ಮಠಗಳ ದೇಣಿಗೆ ಅಗಾಧವಾದದ್ದು.

ವಸ್ತುಸ್ಥಿತಿ ಹೇಗಿದೆ ನೋಡಿ: ಲಿಂಗಾಯತ ಧರ್ಮದ ಸ್ಥಾಪನೆ ಹನ್ನೆರಡನೆಯ ಶತಮಾನದಲ್ಲಿ, ವೀರಶೈವ ಧರ್ಮದ ಸ್ಥಾಪನೆಯ ಕಾಲ ಗೊತ್ತಿಲ್ಲ, ಇತಿಹಾಸವಿಲ್ಲ! ಬಸವಣ್ಣನವರು ಲಿಂಗಾಯತದ ಸ್ಥಾಪಕರಾದರೆ ವೀರಶೈವರಿಗೆ ಪಂಚಾಚಾರ್ಯರು ಸ್ಥಾಪಕರು. ಲಿಂಗಾಯತರಿಗೆ ವಚನಗಳು ಧರ್ಮಗ್ರಂಥವಾದರೆ ವೀರಶೈವರಿಗೆ ಸಿದ್ಧಾಂತ ಶಿಖಾಮಣಿ. ಲಿಂಗಾಯತ ಧರ್ಮಕ್ಕೆ ಆಧಾರವೆಂದರೆ ಶರಣರ ಅನುಭಾವ, ವೈಜ್ಞಾನಿಕ ವಿಚಾರಧಾರೆ ಮತ್ತು ವಾಸ್ತವಿಕ ಸತ್ಯ. ವೀರಶೈವರಿಗೆ ಆಧಾರಗಳು ವೇದ, ಆಗಮ, ಉಪನಿಷತ್ತುಗಳು ಮತ್ತು ಪುರಾಣಗಳು. ಲಿಂಗಾಯತರಿಗೆ ಒಬ್ಬನೇ ದೇವರು, ವೀರಶೈವರಿಗೆ ನೂರಾರು ದೇವರು. ಲಿಂಗಾಯತರಿಗೆ ಜಾತಿ ಭೇದ, ಲಿಂಗಭೇದ, ವರ್ಗಭೇದಗಳಿಲ್ಲ. ವೀರಶೈವರಿಗೆ ಅವೆಲ್ಲ ಇವೆ. ಲಿಂಗಾಯತರು ಸ್ವರ್ಗ-ನರಕ, ಜನ್ಮ-ಪುನರ್ಜನ್ಮಗಳನ್ನು ನಂಬುವುದಿಲ್ಲ, ವೀರಶೈವರು ನಂಬುತ್ತಾರೆ. ಲಿಂಗಾಯತರಿಗೆ ಕಾಯಕವೇ ಮುಖ್ಯ ಮತ್ತು ದಾಸೋಹವೂ ಮುಖ್ಯ, ವೀರಶೈವರಿಗೆ ಕರ್ಮ ಸಿದ್ಧಾಂತ ಮುಖ್ಯ, ದಾಸೋಹ ಅವರಿಗೆ ಗೊತ್ತಿಲ್ಲ. ಲಿಂಗಾಯತರು ಹಿಂದೂಗಳಲ್ಲ, ಆದರೆ ವೀರಶೈವರು ತಾವು ಹಿಂದೂಗಳೆಂದು ನ0ಬುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಲಿಂಗಾಯತ-ವೀರಶೈವ ಎರಡೂ ಒಂದೇ ಎಂದು ಹೇಳಲು ಸಾಧ್ಯವೆ?

ಗುರು-ವಿರಕ್ತರ ನಡುವಿನ ತಿಕ್ಕಾಟವೇ ಲಿಂಗಾಯತ ಸಮಾಜವು ಛಿದ್ರವಿಚ್ಛಿದ್ರವಾಗಿರುವುದಕ್ಕೆ ಕಾರಣವಾಗಿದೆ. ಆ ತಿಕ್ಕಾಟ ನೂರಾರು ವರ್ಷ ಹಳೆಯದು! ಆ ತಿಕ್ಕಾಟದಿಂದ ಬೇಸತ್ತ ಭಕ್ತರೇ ಇಂದು ಎಲ್ಲ ಮಠಾಧೀಶರನ್ನೇ ಬದಿಗಿಟ್ಟು ತಮ್ಮ ಸಮುದಾಯದ ಭವಿಷ್ಯವನ್ನು ತಾವೇ ನಿರ್ಮಾಣ ಮಾಡಿಕೊಳ್ಳುವಷ್ಟರ ಹಂತ ತಲುಪಿದ್ದಾರೆಂದರೂ ಸರಿಯೇ! ಮಠಮಾನ್ಯಗಳು ಇರುವುದೇ ಭಕ್ತರಿಗಾಗಿ. ಭಕ್ತರಿಲ್ಲದ ಮಠ ದೇವರಿಲ್ಲದ ಹಾಳು ಗುಡಿ!!

ಈಗ ನಡೆಯುತ್ತಿರುವ ಹೋರಾಟ ಯಶಸ್ವಿಯಾದರೆ ಗುರುವರ್ಗದ ಬಣ ತನ್ನ ಸ್ಥಾನವನ್ನು ಕಳೆದುಕೊಂಡು ನೇಪಥ್ಯಕ್ಕೆ ಸರಿಯುತ್ತದೆ. ಬಸವ ಧರ್ಮ ಮೇಲ್ಗೈ ಸಾಧಿಸುತ್ತದೆ. ಆದ್ದರಿಂದ ಗುರುವರ್ಗದ ಮಠಾಧೀಶರು ಈ ಹೋರಾಟವನ್ನು ನೇರವಾಗಿಯೇ ವಿರೋಧಿಸುತ್ತಿದ್ದರೆ ವಿರಕ್ತ ಮಠಗಳ ಬಹುತೇಕ ಮಠಾಧೀಶರು ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಇವೆರಡರ ನಡುವೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಾಗದ ಕಾರಣಗಳಿಗಾಗಿ ವಿರಕ್ತ ಮಠಗಳ ಅನೇಕ ಮಠಾಧೀಶರು ಅಡ್ಡಗೋಡೆಯ ಮೇಲೆ ಕುಳಿತಿದ್ದಾರೆ.

ಎಲ್ಲಿಯವರೆಗೆ ಲಿಂಗಾಯತ ಮಠಾಧೀಶರು ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗವೆಂದು ಹೇಳುತ್ತಾರೋ ಅಲ್ಲಿಯವರೆಗೆ ಲಿಂಗಾಯತವು ಸ್ವತಂತ್ರ ಧರ್ಮವಾಗಲಾರದು. ಬಸವ ಸ್ಥಾಪಿತ ಲಿಂಗಾಯತ ಧರ್ಮಕ್ಕೆ ಮಾತ್ರ ತಾನು ಸ್ವತಂತ್ರ ಧರ್ಮವೆಂದು ಸಿದ್ಧಪಡಿಸುವ ಸಾಮರ್ಥ್ಯವಿದೆ. ಆದ್ದರಿಂದ “ವೀರಶೈವ-ಲಿಂಗಾಯತ ಎರಡೂ ಒಂದೇ” ಎಂಬ ಎಡಬಿಡಂಗಿತನವು ಎಳ್ಳಷ್ಟೂ ಸಮರ್ಥನೀಯವಲ್ಲ. ಸ್ವತ0ತ್ರ ಧರ್ಮವೆಂದು ಸಿದ್ಧಮಾಡಿದರೆ ಮಾತ್ರ ಅಲ್ಪಸಂಖ್ಯಾತರೆಂಬ ಮಾನ್ಯತೆ ದೊರೆಯಬಹುದು.

ಇಪ್ಪತ್ತನೆಯ ಶತಮಾನದಲ್ಲಿ ಇಪ್ಪತ್ತೆರಡು ಸಾವಿರ ವಚನಗಳ ಆವಿಷ್ಕಾರ ಆಗುವವರೆಗೆ ಬಸವ ಧರ್ಮಕ್ಕೆ ಹಿಡಿದ ‘ವೀರಶೈವವೆಂಬ ಗ್ರಹಣ’ವು ಅನೇಕ ಅಧ್ವಾನಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭೆ’ಯ ಸ್ಥಾಪನೆಯು ಒಂದು, ಶಿವಯೋಗ ಮಂದಿರದ ಸ್ಥಾಪನೆಯು ಇನ್ನೊಂದು ಹಾಗೂ “ವೀರಶೈವ-ಲಿಂಗಾಯತ ಒಂದೇ” ಎಂಬ ಎಡಬಿಡಂಗಿತನವು ಮೂರನೆಯದ್ದು. ಈ ಮೂರೂ ಬದಲಾಗುವ ಕಾಲ ಈಗ ಕೂಡಿಬಂದಿದೆ.

ನೂರು ಜನ ಲಿಂಗಾಯತರಲ್ಲಿ ವೀರಶೈವರ ಸಂಖ್ಯೆ ಕೇವಲ ಎರಡು ಪ್ರತಿಶತ! 1881ರಿಂದ ಈವರೆಗೆ ನಡೆದ ಎಲ್ಲ ಜನಗಣತಿಗಳಲ್ಲಿ ಮತ್ತು ಕರ್ನಾಟಕದ ಐದು ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳಲ್ಲಿ ಈ ಸಮುದಾಯವನ್ನು ‘ಲಿಂಗಾಯತ’ವೆಂದೇ ಕರೆಯಲಾಗಿದೆ. ವೀರಶೈವವು ಲಿಂಗಾಯತದ 99 ಉಪಪಂಗಡಗಳಲ್ಲಿ ಒಂದು ಮಾತ್ರ! ಲಿಂಗಾಯತವು ಅಲ್ಪಸಂಖ್ಯಾತ ಧರ್ಮವೆಂಬ ಪರಿಗಣನೆಯಿಂದ ದೊರೆಯುವ ಆರ್ಥಿಕ, ಶೈಕ್ಷಣಿಕ, ರಾಜಕೀಯ ಸವಲತ್ತುಗಳು ಗಣನೀಯ. ಈ ಹಿನ್ನೆಲೆಯಲ್ಲಿ ಸಮಗ್ರ ಲಿಂಗಾಯತರ ಸಮಷ್ಟಿಯ ಕ್ಷೇಮ ದೊಡ್ಡದೋ ಅಥವಾ ಕೆಲವೇ ಕೆಲವರ ವೈಯಕ್ತಿಕ ಹುಸಿ ಪ್ರತಿಷ್ಠೆ ಮತ್ತು ಒಂದು ಉಪಜಾತಿಯ ದುರಭಿಮಾನ ದೊಡ್ಡದೋ? ಹಾಗಾದರೆ, ಅಡ್ಡಗೋಡೆಯ ಮೇಲೆ ಕುಳಿತಿರುವ ಮಠಾಧೀಶರೆ ನೀವು ಯಾವುದನ್ನು ಆಯ್ದುಕೊಳ್ಳುತ್ತೀರಿ: ಲಿಂಗಾಯತವೋ ಅಥವಾ ವೀರಶೈವವೋ? ಎರಡೂ ಒಂದೇ ಎಂಬುದು ಹುಸಿ ನಂಬಿಕೆ!

Previous post ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
Next post ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ

Related Posts

ಲಿಂಗಾಯತ ಮಠಗಳು ಮತ್ತು ಬಸವತತ್ವ
Share:
Articles

ಲಿಂಗಾಯತ ಮಠಗಳು ಮತ್ತು ಬಸವತತ್ವ

July 21, 2024 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಅನ್ನ, ಅರಿವೆ, ಆಶ್ರಯ, ಔಷಧಿ ಮತ್ತು ಅರಿವು ಪ್ರತಿಯೊಬ್ಬ ಮಾನವನ ಮೂಲಭೂತ ಅವಶ್ಯಕತೆಗಳು. ಇವು ದೊರೆತಾಗ ಒಬ್ಬ ವ್ಯಕ್ತಿ ಆದರ್ಶದ ದಾರಿಯಲ್ಲಿ ನಡೆಯಲು ಸಾಧ್ಯ. ಈ...
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
Share:
Articles

ತುಮ್ಹಾರೆ ಸಿವಾ ಔರ್ ಕೋಯಿ ನಹಿ…

July 10, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು. ನೀನಲ್ಲದೆ ಮತ್ತಾರೂ ಇಲ್ಲಯ್ಯಾ, ಕೂಡಲಸಂಗಮದೇವಾ, ಹಾಲಲದ್ದು ನೀರಲದ್ದು. 2023 ಜುಲೈ 2 ರಿಂದ ಸೆಪ್ಟೆಂಬರ್ 2ರವರೆಗೆ `ದೇಶದ...

Comments 2

  1. Shashidhar bidar
    May 4, 2018 Reply

    Wonderful article sir. your thoughts are crystal clear, they cleared all my doubts.

  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಚಡ್ಯ ಜಿಲ್ಲೆ
    Nov 20, 2022 Reply

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಾಸೋಹ ತತ್ವ
ದಾಸೋಹ ತತ್ವ
January 10, 2021
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ನೀನು ನಾನಲ್ಲ…
ನೀನು ನಾನಲ್ಲ…
July 21, 2024
Copyright © 2025 Bayalu