Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದುಡಿಮೆಯೆಲ್ಲವೂ ಕಾಯಕವೇ?
Share:
Articles November 10, 2022 ಡಾ. ಪಂಚಾಕ್ಷರಿ ಹಳೇಬೀಡು

ದುಡಿಮೆಯೆಲ್ಲವೂ ಕಾಯಕವೇ?

‘ಕಾಯಕವೇ ಕೈಲಾಸ’ ಎಂಬ ಜಗತ್ಪ್ರಸಿದ್ದ ನಾಣ್ಣುಡಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಸರಳವಾಗಿ ‘ವರ್ಕ್ ಈಸ್ ವರ್ಷಿಪ್’ ಎಂದು ಹೇಳುವುದನ್ನು ನಾವೆಲ್ಲಾ ನೋಡಿಯೇ/ ಕೇಳಿಯೇ ಇರುತ್ತೇವೆ. ಈ ನಾಣ್ಣುಡಿಯು ಕೇವಲ ನುಡಿಯಲ್ಲ ಅದು ಮಾನವ ಜೀವನದ ಬದುಕನ್ನು ಸಾರ್ಥಕಗೊಳಿಸುವ ಪರಮಪವಿತ್ರ ಮಂತ್ರ. ಇಂಥಾ ಪರಮಪವಿತ್ರ ಸೂಕ್ತಿಯನ್ನು ಮೊಟ್ಟ ಮೊದಲ ಬಾರಿಗೆ ಪ್ರಯೋಗಿಸಿ ಜಗತ್ತಿಗೆ ಪರಿಚಯಿಸಿದವರು ಭಾರತದ, ಕನ್ನಡನಾಡಿನ ಹನ್ನೆರಡನೇ ಶತಮಾನದ ಶಿವಶರಣರು. ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಆರಂಭವಾದ ಲಿಂಗಾಯತ ಚಳುವಳಿ ಅನೇಕ ಹೊಸತುಗಳಿಗೆ ನಾಂದಿ ಹಾಡಿತು. ಈ ನೆಲೆದ ಸಾಂಪ್ರದಾಯಿಕ ಗುಡಿಸಂಸ್ಕೃತಿಯನ್ನು ಮತ್ತು ಅದರ ಫಲಶೃತಿಗಳಾದ ಅನೇಕ ಮೌಢ್ಯ, ಕಂದಾಚಾರ, ಅನಾಚಾರಗಳನ್ನು, ಜಡ್ಡುಗಟ್ಟಿದ್ದ ಸಂಪ್ರದಾಯಗಳನ್ನು ಮೊಟ್ಟಮೊದಲಬಾರಿಗೆ ಗೌತಮಬುದ್ಧ ಪುಡಿಗಟ್ಟಿದರು ಆ ಮೂಲಕ ಈ ನಾಡಿನಲ್ಲಿ ಹಳೆಯ ಕಳೆಯನ್ನು ಕಿತ್ತು ಹುಲುಸಾದ ಹೊಸಬೆಳೆ ಬೆಳೆದರು. ಈ ಮೂಲಕ ನಾಡಿನಾದ್ಯಂತ ಸುಸಂಸ್ಕೃತ ಬೌದ್ಧ ಧರ್ಮ ಪಸರಿಸಿ ದೇಶ ಶಾಂತಿಯ ನೆಲೆವೀಡಾಯಿತು. ಭೂಮಿಯ ಒಳಗೇ ಬೇರುಬಿಟ್ಟು ಮುಂದಿನ ಮಳೆಗಾಗಿ ಕಾಯುವ ಗರಿಕೆ ಕಳೆಯಂತೆ ಬುದ್ಧರ ನಂತರ ಕ್ರಮೇಣ ಗುಡಿ ಸಂಸ್ಕೃತಿ ಮತ್ತೆ ತಲೆಯೆತ್ತಿ ನಿಂತಿತು, ಬೌದ್ಧ ಧರ್ಮವನ್ನು ದೇಶದಿಂದ ಗಡೀಪಾರು ಮಾಡಲಾಯಿತೆಂದೇ ಹೇಳಬೇಕು. ಆದರೆ ಬುದ್ಧರ ಸಂದೇಶಗಳನ್ನು ವಿದೇಶೀಯರು ಅಚ್ಚುಕಟ್ಟಾಗಿ ತಮ್ಮ ಜೀವನದ ಭಾಗವಾಗಿಸಿಕೊಂಡರು. ಇಲ್ಲಿ ಮತ್ತದೇ ಜಡ್ಡುಗಟ್ಟಿದ ತುಕ್ಕುಹಿಡಿದ ಸಂಪ್ರದಾಯಗಳು ನೆಲೆಗೊಂಡವು. ಇದು ಹೀಗೇ ಹನ್ನೆರಡನೇ ಶತಮಾನದವರೆಗೂ ಸಾಗಿ ಬಂತು.

ಹನ್ನೆರಡನೇ ಶತಮಾನದಲ್ಲಿ ಮತ್ತೆ ಗುರುಬಸವಣ್ಣನವರು ಜನಮಾನಸದ ತುಕ್ಕು ತೆಗೆಯುವ ಕಾರ್ಯದಲ್ಲಿ ತೊಡಗುತ್ತಾರೆ. ಅವರು ಜಗತ್ತಿಗೆ ಪ್ರಮುಖವಾಗಿ ಬುದ್ಧರಂತೆಯೇ ಜಗತ್ತು ಬದುಕಲು ವಾಸ್ತವವಾದವನ್ನು ಪುಷ್ಟೀಕರಿಸುತ್ತಾರೆ. ಜಗತ್ತು ಬದುಕಲು ದುಡಿಮೆ ಬೇಕು, ಪೂಜೆಜಪತಪಗಳಲ್ಲ. ಪೂಜೆಜಪತಪಗಳು ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ಸಹಕಾರಿಯಾದರೆ ದುಡಿಮೆಯು ಸಮಷ್ಟಿಯ ಶ್ರೇಯೋಭಿವೃದ್ಧಿಗೆ ಪರಿಣಾಮಕಾರಿಯಾಗಬಲ್ಲುದು. ದುಡಿಮೆ ವ್ಯಕ್ತಿಕೇಂದ್ರಿತವಾಗಬಾರದು, ಅದು ಸಮಷ್ಟಿಕೇಂದ್ರಿತವಾಗಬೇಕು ಎಂಬುದು ಬಸವಾದಿ ಶರಣರ ಸ್ಪಷ್ಟ ಅಭಿಪ್ರಾಯ. ಹಾಗಾಗಿಯೇ ಶರಣರು ದುಡಿಮೆಗೆ ಮಹತ್ವದ ಸ್ಥಾನ ಕಲ್ಪಿಸುತ್ತಾರೆ.

ದುಡಿಮೆ ಹಾಗೂ ಕಾಯಕಗಳ ಕುರಿತು ಸೂಕ್ಷ್ಮವಾಗಿ ಅರಿಯಲು ಪ್ರಯತ್ನಪಡೋಣ: ದುಡಿಮೆ ಹಾಗೂ ಕಾಯಕಗಳ ಕುರಿತು ಅರಿಯಲು ನಾವು ಮೊದಲು ದೇಹ ಹಾಗೂ ಕಾಯ ಎಂದರೇನೆಂದು ಸ್ಪಷ್ಟವಾಗಿ ಅರಿಯಬೇಕು. ಲೋಕಾರೂಢಿಯಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳಿಗೂ ಕಾಯಕ ಎನ್ನುವುದನ್ನು ದಿನನಿತ್ಯ ನೋಡಿರುತ್ತೇವೆ. ಹಾಗಾದರೆ ದುಡಿಮೆ ಮತ್ತು ಕಾಯಕ ಎರಡೂ ಸಮಾನಾರ್ಥಕ ಪದಗಳೋ ಅಥವಾ ಭಿನ್ನಾರ್ಥ ಪದಗಳೋ? ಇವೆರಡಕ್ಕೂ ದೇಹ (ಅಂಗ) ಮತ್ತು ಕಾಯಗಳಿಗಿರುವಷ್ಟು ವ್ಯತ್ಯಾಸವಿದೆ!

ದೇಹ ಪದಕ್ಕೆ ಶರೀರ, ಅಂಗ, ತನು ಮುಂತಾದವು ಸಮಾನಾರ್ಥಕ ಪದಗಳು. ದೇಹವು ಪಂಚಭೂತಾತ್ಮಕ ತತ್ವ-ಗುಣಗಳಿಂದಾಗಿದ್ದು ಇದರಲ್ಲಿ ದೇಹೋಹಂ (ದೇಹವೇ ನಾನು ಎಂಬ ಭಾವ) ಭಾವ ನೆಲೆಯಾಗಿದೆ, ದೈವೀ ಚೈತನ್ಯದ ಭಾವ ಇಲ್ಲಿ ನಗಣ್ಯ. ಇಂಥಾ ದೇಹವು ಮಾಯೆಗೆ ಒಳಗು, ಮರೆವಿಗೆ ಒಳಗು, ಸಕಲ ದೇಹೇಂದ್ರಿಯಾದಿ ವಿಷಯ ವಿಕಾರಗಳಿಗೆ ಒಳಗು. ಹಾಗಾಗಿ ಈ ದೇಹವು ಭವಕ್ಕೆ ಒಳಗು. ಇಂಥಾ ದೇಹವಿಡಿದು, ದೇಹೋಹಂಭಾವದಿಂದ ಮಾಡುವ ಕಾರ್ಯಗಳೆಲ್ಲವೂ ಕೇವಲ ದುಡಿಮೆ ಎನಿಸಿಕೊಳ್ಳುತ್ತವೆ.
ಕಾಯವೆಂದರೆ ಪಂಚಭೂತಾತ್ಮಕ ಶರೀರದಲ್ಲಿ ದೇವ (ಆತ್ಮ) ಚೈತನ್ಯದ ಇರವನ್ನು ಗುರುತಿಸಿ, ನಾನೆಂಬ ಅಹಂ ಅಳಿದು ಶಿವೋಹಂಭಾವ (ಸಾಕ್ಷಾತ್ ದೇವ ಚೈತನ್ಯವು ನನ್ನೊಳಗೆ ಸದಾ ಇರುವುದರ ಜೊತೆಗೆ ನನ್ನೆಲ್ಲಾ ಸುಖ ದುಖಗಳನ್ನೂ ಶಿವನೇ ಅನುಭವಿಸುವನಾಗಿ ನನಗಾವ ಭಯವಿಲ್ಲ, ಭವವಿಲ್ಲ ಎಂಬ ಪರಿಶುದ್ಧ ಭಾವದೊಡನೆ ನಿರಾತಂಕವಾಗಿ ವ್ಯವಹರಿಸುವುದು) ಬಲಿತು ಬಂಧ – ಮೋಕ್ಷ, ಅರಿವು – ಮರೆವು, ಶಿವ – ಜೀವ ಭೇದವಳಿದು ದೈವೀಕರಣಗೊಂಡ ತನುವೇ ಕಾಯವೆನಿಸುವುದು. ಇದಕ್ಕೆ ಲಿಂಗತನು, ಲಿಂಗಶರೀರ, ಲಿಂಗಾಂಗವೆಂದೂ ಹೆಸರುಂಟು. ಇಂಥಾ ಪರಮ ಪವಿತ್ರ ಕಾಯವೇ ಶಿವಾಲಯ, ಕೈಲಾಸ. ಆ ಪರಮ ಪವಿತ್ರ ಕಾಯದಿಂದ ದೇವಸಾಕ್ಷಿ ಪ್ರಜ್ಞೆಯೊಡಗೂಡಿ ಮಾಡುವ ಕೃತ್ಯಗಳೆಲ್ಲವೂ ಕಾಯಕವೆನಿಸುವುದು. ಅಂಥಾ ಕಾಯ ಮತ್ತು ಕಾಯಕಗಳು ಕೈಲಾಸವೆನಿಸುವುದರ ಜೊತೆಗೆ, ಆ ಪರಮಪವಿತ್ರ ಕಾಯ ಎಲ್ಲಿ ನೆಲೆಸಿರುವುದೋ ಅದೇ ವಾರಣಾಸಿ, ಸುಕ್ಷೇತ್ರ. ಇಲ್ಲಿ ಘಟಿಸುವ ಪ್ರತಿಯೊಂದು ಕ್ರಿಯೆಯೂ ಸತ್ಯ, ಶುದ್ಧ ಗುಣಗಳ ಫಲಿತವೇ ಆಗಿರುತ್ತದೆ. ಕಾಯ ಮತ್ತು ಕಾಯಕದಲ್ಲಿ ಗುರು, ಲಿಂಗ ಜಂಗಮ ಎಲ್ಲವೂ ಒಂದಕ್ಕೊಂದು ಬೆರೆಸಿ ಬೇರಿಲ್ಲದ ಬೇಧರಹಿತವಾಗಿರುವ ಕಾರಣ ಕಾಯಕದಲ್ಲಿ ನಿರತನಾದಲ್ಲಿ ಅವುಗಳ ಹಂಗು ಹರಿದು ಕಾಯಕವನ್ನು ಪೂರ್ಣಗೊಳಿಸಬೇಕು. ಸಾಧಕನ ಇಂಥಾ ಸ್ಥಿತಿ, ಸಿದ್ಧಿಯೇ ಶರಣತ್ವ. ಶರಣನು ಮಾಯೆಗೆ, ಕಾಲ ಕಾಮರಿಗೆ, ಮರೆವಿಗೆ, ಇಂದ್ರಿಯ ವಿಷಯ ವಿಕಾರಗಳಿಗೆ ಒಳಗಾಗದ ಕಾರಣ ಅವನು ಭವಮುಕ್ತ, ಸದಾ ನಿರಾಳ, ನಿಶ್ಚಿಂತ! ಇಂಥಾ ಲಿಂಗಶರೀರಿ ನಡೆದುದುದೆಲ್ಲವೂ ಶಿವಪಥ, ನುಡಿದುದೆಲ್ಲವೂ ಶಿವಮಂತ್ರ.

ಈ ಎರಡು ವ್ಯಾಖ್ಯಾನಗಳನ್ನು ಮುಂದಿಟ್ಟು ನೋಡಿದಲ್ಲಿ ದುಡಿಮೆಗೂ ಕಾಯಕಕ್ಕೂ ಅಜಗಜಾಂತರ ವ್ಯತ್ಯಾಸವಿರುವುದನ್ನು ನಾವು ಮನಗಾಣಬಹುದು. ಆದರೆ ಲೋಕಾರೂಢಿಯಲ್ಲಿ ಸಾಮಾನ್ಯ ದುಡಿಮೆಗೂ, ದುರಾಸೆಯ ದುಡಿಮೆಗೂ, ಮೋಸದಿಂದ ಕೂಡಿದ ದುಡಿಮೆಗೂ, ಹಾದರಕ್ಕೂ, ಕಳ್ಳತನಕ್ಕೂ ಕಾಯಕವೆನ್ನುವುದು ಕಾಯಕ ಪದಕ್ಕೆ ನಾವು ಬಗೆವ ದ್ರೋಹ, ತನ್ಮೂಲಕ ಇಂಥಾ ತತ್ವವನ್ನು ಜಗತ್ತಿಗೆ ಕೊಡಮಾಡಿದ ಶರಣರಿಗು ಕೂಡ ಬಗೆವ ದ್ರೋಹಬಗೆದಂತಾಗುತ್ತದೆ ಎಂಬುದನ್ನು ನಾವು ಸದಾ ನೆನೆಪಿನಲ್ಲಿಟ್ಟುಕೊಳ್ಳಬೇಕು!

ಧರ್ಮಪಿತ ಗುರುಬಸವಣ್ಣನವರೇ ಇಡೀ ಶರಣ ಸಂಕುಲಕ್ಕೆ ಆದಿಗುರುವಾಗಿ ತಾತ್ವಿಕ ಮತ್ತು ಧಾರ್ಮಿಕ ನೆಲೆಗಟ್ಟನ್ನು ದಯಪಾಲಿಸಿರುವರಾದರೂ ಜಗ ಬದುಕುವ ಪರಮಪವಿತ್ರ ಮಂತ್ರವಾದ ‘ಕಾಯಕವೇ ಕೈಲಾಸ’ ಎಂಬ ಉದ್ಘೋಷವು ಗುರುಬಸವಣ್ಣನವರ ವಚನಗಳಲ್ಲಿ ಕಾಣಬರುವುದಿಲ್ಲ. ಅವರ ವಚನದಲ್ಲಿ ‘ಕಾಯವೇ ಕೈಲಾಸ’ ಎಂಬ ಇನ್ನೊಂದು ಘೋಷಮಂತ್ರ ಮಾತ್ರ ಕಾಣಸಿಗುವುದು. ‘ಕಾಯಕವೇ ಕೈಲಾಸ’ ವೆಂಬ ಘೋಷಮಂತ್ರವು ಆಯ್ದಕ್ಕಿ ಮಾರಯ್ಯ ಶರಣರ ವಚನದಲ್ಲಿ ಉಲ್ಲೇಖವಾಗಿದೆ. ಈ ಎರಡೂ ವಚನಗಳನ್ನು ಈ ಕೆಳಗೆ ಪ್ರಸಾದಿಸಲಾಗಿದೆ.

ಧರ್ಮಪಿತ ಬಸವಣ್ಣನವರ ವಚನ: “ಶರಣ ನಿದ್ರೆಗೈದಡೆ ಜಪ ಕಾಣಿರೊ, ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಶರಣ ನಡೆದುದೆ ಪಾವನ ಕಾಣಿರೊ, ಶರಣ ನುಡಿದುದೆ ಶಿವತತ್ವ ಕಾಣಿರೊ, ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ”.
ಶರಣ ಆಯ್ದಕ್ಕಿ ಮಾರಯ್ಯನವರ ವಚನ: “ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು”
‘ಕಾಯಕವೇ ಕೈಲಾಸ’ ವನ್ನು ಇಂಗ್ಲಿಷ್ ನಲ್ಲಿ ‘ವರ್ಕ್ ಈಸ್ ವರ್ಷಿಪ್’ ಎಂದು ಅನುವಾದಿಸುತ್ತಾರೆ. ಇಲ್ಲಿ ವರ್ಷಿಪ್ ಎಂದರೆ ಪೂಜೆ, ಎಂದರೆ ಕಾಯಕವೇ ಪೂಜೆ ಎಂದಾಯಿತು. ಆದರೆ ಮೂಲದಲ್ಲಿರುವುದು ಕಾಯಕವೆ ಕೈಲಾಸ ಎಂದಿರುವುದು. ಕೈಲಾಸವೆಂದರೆ ಸ್ವರ್ಗ ಎಂದರ್ಥ. ಪುರಾಣಗಳ ಪ್ರಕಾರ ಸ್ವರ್ಗಕ್ಕೆ ಹೋಗಲು ಪೂಜೆ ಅವಶ್ಯ, ಆದರೆ ಪೂಜೆಯೇ ಸ್ವರ್ಗವಲ್ಲ, ಪೂಜೆಯು ಕೈಲಾಸಕ್ಕೆ ಹೋಗಲು ಇರುವ ಪಥ! ಶರಣರ ಪ್ರಕಾರ ಕಾಯಕವೆ ಕೈಲಾಸ, ಕೈಲಾಸದಲ್ಲಿ ಎಲ್ಲರೂ ಶಿವಸ್ವರೂಪಿಗಳೆ! ಆದ್ದರಿಂದ ಕಾಯಕವು ಮಾನವನನ್ನು ಶಿವಸ್ವರೂಪನನ್ನಾಗಿ ಮಾಡುತ್ತದೆ.

ದುಡಿಮೆಯು ಕಾಯಕವಾಗಬೇಕಾದರೆ ನಾವೇನು ಮಾಡಬೇಕು?
ದುಡಿಮೆ + ದೇವರು (ಆತ್ಮಸಾಕ್ಷಿ) = ಕಾಯಕ. ದುಡಿಮೆಯನ್ನು ಕಾಯಕವನ್ನಾಗಿಸಲು ಮಾಡಬೇಕಾದ್ದಿಷ್ಟೆ, ನಮ್ಮ ನಿತ್ಯದ ದುಡಿಮೆಯಲ್ಲಿ ನಮ್ಮ ಆತ್ಮಸಾಕ್ಷಿಯನ್ನು ಬೆರೆಸಬೇಕು. ಆಗ ಅದು ದೈವತ್ವಕ್ಕೇರುತ್ತದೆ. ದೈವೀಕರಣಗೊಂಡ ದುಡಿಮೆ ಕಾಯಕವೆನಿಸಿಕೊಳ್ಳುತ್ತದೆ. (ಇಲ್ಲಿ ಸತ್ಯ, ಶುದ್ಧ, ನಿಸ್ವಾರ್ಥ, ನಿರ್ವಂಚಕತ್ವ, ನಿರಹಂಕಾರ ಮುಂತಾದ ಊರ್ಧ್ವಗುಣಗಳು ಮೇಳೈಸುತ್ತವೆ. ಹಾಗೆಯೇ ಸ್ವಾರ್ಥ, ಮೋಸ, ವಂಚನೆ, ಲೋಭ, ಸುಳ್ಳು, ಕಳ್ಳತನ, ಹಾದರ, ಮುಂತಾದ ಅಧೋಗುಣಗಳಿಗೆ ಅವಕಾಶ ಇರುವುದಿಲ್ಲ). ಇಲ್ಲವಾದಲ್ಲಿ ಸ್ವಾರ್ಥ, ಲೋಭ, ವಂಚಕತ್ವಗಳಿಂದ ಕೂಡಿದ ನಮ್ಮ ದುಡಿಮೆಯನ್ನೇ ಕಾಯಕವೆಂದು ಹೇಳಿಕೊಂಡು ಆತ್ಮವಂಚನೆ ಮಾಡಿಕೊಳ್ಳುತ್ತಿರುತ್ತೇವೆ.
ಕೊನೆಯದಾಗಿ, ನಶ್ವರವಾದ ನಮ್ಮ ಜೀವನದಲ್ಲಿ ಶಾಶ್ವತವಾಗಿ ಉಳಿಯುವುದು ನಮ್ಮ ಸದ್ಗುಣಗಳು, ಸಮಾಜಮುಖಿ ನಿಲುವು ಮತ್ತು ಕಾಳಜಿ ಮತ್ತು ನಿರ್ವಂಚಕತ್ವ ನಡೆನುಡಿ. ಈ ಎಲ್ಲಾ ಗುಣಗಳು ಕಾಯಕದಲ್ಲಿ ಮಿಳಿತವಾಗಿರುವ ಕಾರಣ ಕಾಯಕವೆ ಕೈಲಾಸವೆಂಬ ಮಂತ್ರ ಮಾತ್ರ ನಮ್ಮ ಬದುಕನ್ನು ಸಾರ್ಥಕಗೊಳಿಸುವ ಪರಮ ಪವಿತ್ರ ಮಂತ್ರ ಎಂದು ಅರಿತು ಅಳವಡಿಸಿಕೊಳ್ಳೋಣ.

Previous post ಅರಿವಿನ ಬಾಗಿಲು…
ಅರಿವಿನ ಬಾಗಿಲು…
Next post ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)

Related Posts

ದಾಸೋಹ ತತ್ವ
Share:
Articles

ದಾಸೋಹ ತತ್ವ

January 10, 2021 ಡಾ. ಬಸವರಾಜ ಸಬರದ
ಶರಣರ ಸಾಮಾಜಿಕ ಸಿದ್ಧಾಂತಗಳಲ್ಲಿ ಕಾಯಕದಂತೆ ದಾಸೋಹವೂ ಒಂದು ಮಹತ್ವದ ಮೌಲ್ಯ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊಂದು ಪೂರಕವಾಗಿವೆ. ಕಾಯಕಕ್ಕೆ ಹೇಗೆ...
ದೂಷಕರ ಧೂಮಕೇತು
Share:
Articles

ದೂಷಕರ ಧೂಮಕೇತು

August 8, 2021 ಹೆಚ್.ವಿ. ಜಯಾ
“ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ, ಉರಿಯುವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ, ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲೆಯಾಡುವಂತೆ, ಕೂಡಲಸಂಗನ...

Comments 9

  1. ಮಹಾದೇವಪ್ಪ ಕವಳಿ
    Nov 13, 2022 Reply

    ಹಾಗಾದರೆ ಆತ್ಮಸಾಕ್ಷಿಯಾಗಿ ಮಾಡುವ ಎಲ್ಲ ಕೆಲಸಗಳೂ ಕಾಯಕವೆಂದಾಯಿತು! ಕಾಯಕದಲ್ಲಿ ಶಾರೀರಿಕ ದುಡಿಮೆಗೆ ಮೊದಲ ಆದ್ಯತೆ ಎನ್ನುವುದು ನನ್ನ ಅಭಿಮತವಾಗಿದೆ ಅಣ್ಣಾ.

  2. Jayaraj P.S
    Nov 14, 2022 Reply

    ಜಗತ್ತಿಗೆ ಶರಣರು ದಯಪಾಲಿಸಿದ ಅತ್ಯಂತ ಶ್ರೇಷ್ಠ ಮಂತ್ರ ಕಾಯಕ. ಅತ್ಯಂತ ಶ್ರೇಷ್ಠವಾದ ಬದುಕುವ ದಾರಿ ದಾಸೋಹ.

  3. veerabhadrappa Bangalore
    Nov 17, 2022 Reply

    ಈಗಂತೂ ಕಾಯಕ ಎನ್ನುವ ಶಬ್ದವನ್ನು ಬೇಕಾಬಿಟ್ಟಿಯಾಗಿ ಬಳಸುವ ಜನರೇ ಹೆಚ್ಚು. ಹೀಗಾಗಿ ಅದರ ಮಹತ್ವದ ತಿಳುವಳಿಕೆಯೇ ಕಳೆದುಹೋಗಿದೆ ಎಂಬುದು ನನ್ನ ಅಭಿಪ್ರಾಯ. ಸಿನೆಮಾಗಳಲ್ಲಿ, ಹಾಸ್ಯಸಂಚಿಕೆಗಳಲ್ಲಿ ಕಾಯಕದ ಶಬ್ದವನ್ನು ಅಪಹಾಸ್ಯ ಮಾಡಲಾಗುತ್ತಿರುವುದು ನಿಜಕ್ಕೂ ಖೇದಕರ.

  4. ಸೂರ್ಯಪ್ರಕಾಶ್
    Nov 17, 2022 Reply

    ಅಣ್ಣಾ, ನೀವು ಹೇಳುವುದಕ್ಕೆ ನನ್ನದೊಂದು ಮಾತು- ಕಾಯಕವೆ ಕೈಲಾಸವೆಂಬ ಮಂತ್ರ ಮಾತ್ರ ನಮ್ಮ ಬದುಕನ್ನು ಸಾರ್ಥಕಗೊಳಿಸುವ ಪರಮ ಪವಿತ್ರ ಮಂತ್ರ ಜೊತೆಗೆ ಇದೇ ನಮ್ಮ ದೇಶದ ಧ್ಯೇಯ ವಾಕ್ಯವಾಗಲಿ… ಆಗ ಬಡತನ ಎನ್ನುವುದು ಕೊಚ್ಚಿಕೊಂಡು ಹೋಗುತ್ತದೆ, ಸಂದೇಹವೇ ಇಲ್ಲ.

  5. ಪ್ರತೀಕ್ ಬೆಂಗಳೂರು
    Nov 23, 2022 Reply

    ದೇಹೋಹಂಭಾವದಲ್ಲಿ ಮಾಡುವುದು ದುಡಿಮೆ, ಮತ್ತು ಶಿವೋಹಂಭಾವದಲ್ಲಿ ಮಾಡುವುದು ಕಾಯಕ ಎನ್ನುವುದು ನಿಜವಾಗಿಯೂ ಒಪ್ಪತಕ್ಕ ಮಾತು. ಶರಣರು ಶಿವಯೋಗಿಗಳು, ಅವರು ಮಾಡಿದ್ದೆಲ್ಲವೂ ಕಾಯಕವಾಯಿತು. ಅಣ್ಣಾ ಶರಣುಗಳು.

  6. Shivaraj G
    Nov 23, 2022 Reply

    ನನಗೊಂದು ಸಂದೇಹ, ಕಾಯ ಹಿಡಿದು ಕಾಯಕ ಸಾಧ್ಯ. ದೇಹ ಮತ್ತು ಕಾಯ ಎರಡಕ್ಕೂ ಯಾವ ವ್ಯತ್ಯಾಸವಿದೆ? ಎರಡೂ ಒಂದೇ ಅಲ್ಲವೇ? ಬೆವರು ಹರಿಸಿ ಹೊಟ್ಟೆಪಾಡಿಗಾಗಿ ಮಾಡುವಾಗ ಶಿವನ ಧ್ಯಾನ ಎಲ್ಲಿ ಇರುತ್ತದೆ? ಅದು ಕೇವಲ ದುಡಿಮೆ, ಕಾಯಕವಲ್ಲ ಎಂದರೆ ಶ್ರಮಜೀವಿಗಳಿಗೆ ಮಾಡಿದ ಅವಮಾನವಾಗುವುದಲ್ಲವೇ?

    • Panchakshari h v
      Nov 24, 2022 Reply

      ಶಿವನ ಧ್ಯಾನವೆಂದರೆ ತನ್ನ ಆತ್ಮಸಾಕ್ಷಿ ಒಡಗೂಡುವುದು. ಮಾಡುವ ಎಲ್ಲ ಕಾರ್ಯಗಳೂ ಆತ್ಮಸಾಕ್ಷಿಯುಕ್ತವಾಗಿದ್ದಾಗ ಅದು ಕಾಯಕವಾಗುವುದು.

  7. ಹರಪ್ರಸಾದ್ ಬೆಳಗಾಂ
    Nov 25, 2022 Reply

    ಶಾಲೆಯಲ್ಲಿ ಓದಿ ಪಾಸಾಗಿ ಡಿಗ್ರಿ ತೆಗೆದುಕೊಳ್ಳುವ ಹರಸಾಹಸ ಒಂದು ಕಡೆ ಇರಲಿ, ಕೆಲಸಕ್ಕೆ ಅಲೆದಾಟ, ಲಂಚ ಕೊಡಲೇ ಬೇಕಾದ ಅನಿವಾರ್ಯತೆಯಿಂದ ಗಿಟ್ಟಿಸಿಕೊಂಡ ಉದ್ಯೋಗದಲ್ಲಿ ಕಾಯಕದ ಲಕ್ಷಣಗಳನ್ನು ಅರಸುತ್ತಾ ಕೂರುವುದು ಪ್ರ್ಯಾಕ್ಟಿಕಲ್ಲೇ ಎನ್ನುವುದನ್ನು ನೀವೇ ಹೇಳಬೇಕು. ಮೂರು ಹೊತ್ತು ಊಟಕ್ಕಾಗಿ ಪರದಾಡುವ ಜನರ ಮಧ್ಯೆ ಕಾಯಕದ ಗೌರವವನ್ನು ಕಾಣುವುದಾದೂ ಹೇಗೆ ನೀವೇ ಉತ್ತರಿಸಬೇಕು. ಹಿಂದೆ ಜಾತಿಗಳಲ್ಲಿ ಹಂಚಿಹೋದಂತೆ ಇವತ್ತಿನ ಸಮಾಜ ನೂರಾರು ಸ್ತಲಗಳಲ್ಲಿ ಛಿದ್ರಛಿದ್ರವಾಗಿ ಹಂಚಿಹೋಗಿದೆ. ಇಂದಿನ ಪರಿಸ್ಥಿತಿಗೆ ಹೊಂದಿಕೊಂಡು ಕಾಯಕ ಮತ್ತು ದಾಸೋಹಗಳನ್ನು ವ್ಯಾಖ್ಯಾನಿಸಿದರೆ ಎಲ್ಲರಿಗೂ ಅನ್ವಯವಾಗುತ್ತದೆನ್ನುವುದು ನನ್ನ ಕಾಳಜಿ.

  8. Vivek Patil, USA
    Dec 10, 2022 Reply

    Hello, excellent website! Mind opening articles, many thanks to Bayalu…..

Leave a Reply to Panchakshari h v Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಶಿವನ ಕುದುರೆ…
ಶಿವನ ಕುದುರೆ…
May 1, 2019
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
WHO AM I?
WHO AM I?
June 17, 2020
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
Copyright © 2025 Bayalu