Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
Share:
Articles June 17, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು

ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು,
ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು,
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ.
ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವರು.

ಬಸವಾದಿ ಶಿವಶರಣರು ವೇದ, ಪುರಾಣ, ಶಾಸ್ತ್ರ ಕುರಿತಂತೆ ನೂರಾರು ವಚನಗಳಲ್ಲಿ ವಿಡಂಬನೆ ಮಾಡಿದ್ದಾರೆ. ಅವುಗಳನ್ನು ಬಲ್ಲವರು ಅಥವಾ ಬಲ್ಲಂತೆ ನಟಿಸುವವರು ತಾವೇ ಶ್ರೇಷ್ಠರೆಂದು ಅವುಗಳ ಮರೆಯಲ್ಲಿ ಮಾಡಬಾರದ ಅನಾಹುತ, ಅನಾಚಾರಗಳನ್ನು ಮಾಡುತ್ತಿದ್ದುದನ್ನು ಕಂಡ ಬಸವಣ್ಣನವರು ಅಂಥವರೆಲ್ಲ ಹಿರಿಯರಲ್ಲ; ಅಹಂಕಾರವನ್ನು ಅಳಿಸಿ, ದಾಸೋಹಂಭಾವ ಬೆಳೆಸಿಕೊಂಡು, ಶಿವಪಥದಲ್ಲಿ ನಡೆಯುವವರು ನಿಜವಾದ ಹಿರಿಯರು ಎನ್ನುವರು. `ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ ಪಂಚಾಕ್ಷರದ ಸ್ವರೂಪವನರಿಯದೆ ನಿಂದವು’ ಎಂದು ಆದಯ್ಯನವರು ಅವುಗಳ ಬಗ್ಗೆ ತಮಗಿರುವ ಭಾವನೆಯನ್ನು ಹೊರಹಾಕಿದ್ದಾರೆ. `ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ ಶ್ರುತಿ ಸ್ಮøತಿಗಳಲ್ಲಿ ನುಡಿವುದು ಪುಸಿ’ ಎಂದು ಅಮುಗೆ ರಾಯಮ್ಮ ಹೇಳುವಳು. ಶಿವಯೋಗಿ ಸಿದ್ಧರಾಮೇಶ್ವರರು `ಎಮ್ಮ ವಚನದೊಂದು ಪಾರಾಯಣಕ್ಕೆ ವ್ಯಾಸನದೊಂದು ಪುರಾಣ ಸಮಬಾರದಯ್ಯಾ’ ಎಂದು ವಚನಗಳ ಹಿರಿಮೆ, ಗರಿಮೆಗಳನ್ನು ಪ್ರತಿಪಾದಿಸಿದ್ದಾರೆ.
ಬಸವಣ್ಣನವರು `ಆದಿಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ…’ ಎಂದು ಪುರಾಣಗಳ ಹೂರಣವನ್ನು ಬಿಚ್ಚಿಟ್ಟಿದ್ದಾರೆ. ಉರಿಲಿಂಗಪೆದ್ದಿಗಳು `ಓಂ ನಮಃ ಶಿವಾಯ ಎಂಬುದೇ ವೇದ, ಶಾಸ್ತ್ರ, ಪುರಾಣ, ಆಗಮ…’ ಎಂದು ಷಡಕ್ಷರಿ ಮಂತ್ರದ ಮಹಿಮೆಯನ್ನು ವರ್ಣಿಸಿದ್ದಾರೆ. ಅಂಬಿಗರ ಚೌಡಯ್ಯನವರು ವೇದ, ಶಾಸ್ತ್ರ, ಆಗಮ, ಪುರಾಣಗಳು ಯಾರ ಯಾರ ಎಂಜಲು ಎಂದು ಲೇವಡಿ ಮಾಡುತ್ತ ಕೊನೆಗೆ `ಇಂತಿವೆಲ್ಲವ ಹೇಳುವರು ಕೇಳುವರು ಪುಣ್ಯ ಪಾಪಂಗಳೆಂಜಲೆಂದು’ ಹೀಗಳೆವರು. ಅಲ್ಲಮಪ್ರಭುದೇವರು `ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ’ ಎನ್ನುವ ಮೂಲಕ ವಾಸ್ತವ ಸತ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ಅಕ್ಕಮಹಾದೇವಿಯವರು `ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ. ಇವ ಕುಟ್ಟಲೇಕೆ ಕುಸುಕಲೇಕೆ?’ ಎಂದು ಪ್ರಶ್ನಿಸಿದ್ದಾರೆ.
ಇವತ್ತಿಗೂ ವೇದ, ಪುರಾಣ, ಶಾಸ್ತ್ರಗಳ ಮರೆಯಲ್ಲಿ ಅನೇಕರು ಹೊಟ್ಟೆ ಹೊರೆಯುತ್ತಿರುವುದು ಸುಳ್ಳೇನಲ್ಲ. ಬಸವತತ್ವವನ್ನೇ ಉಸಿರಾಗಿಸಿಕೊಂಡಿದ್ದೇವೆ ಎನ್ನುವ ಕೆಲವು ಬಸವಾಯತ ಮಠಗಳು ಸಹ ವೇದ, ಪುರಾಣ, ಶಾಸ್ತ್ರಗಳ ಗುಂಗಿನಿಂದ ಹೊರಬಂದಿಲ್ಲ. `ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ’ ಎನ್ನುವಂತಾಗಿದೆ. ಈ ನಿಟ್ಟಿನಲ್ಲಿ 20ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಚಾರ, ವಿಚಾರಗಳು ಎಷ್ಟೊಂದು ವೈಚಾರಿಕ ಮತ್ತು ವೈಜ್ಞಾನಿಕವಾಗಿದ್ದವು ಮತ್ತು ಬಸವತತ್ವಕ್ಕೆ ಅನುಗುಣವಾಗಿದ್ದವು ಎನ್ನುವುದು ಅವರನ್ನು ಬಲ್ಲವರಿಗೆ ಮಾತ್ರ ಗೊತ್ತು. ಅವರ ಪರಿಚಯ ಇಲ್ಲದವರು ಪೂಜ್ಯರೇ ತಮ್ಮ ತಾರುಣ್ಯದಲ್ಲಿ ಬರೆದ ದಿನಚರಿ `ಆತ್ಮನಿವೇದನೆ’ ಮತ್ತು ತಮ್ಮ ಅಂತಿಮ ದಿನಗಳಲ್ಲಿ ಬರೆಸಿದ `ದಿಟ್ಟ ಹೆಜ್ಜೆ ಧೀರ ಕ್ರಮ’ ಪುಸ್ತಕ ಓದಿದರೆ ಅವರ ನೈಜ ವ್ಯಕ್ತಿತ್ವದ ದರ್ಶನವಾಗುವುದು. ಒಬ್ಬ ಸ್ವಾಮಿಗಳು ಹೇಗಿರಬೇಕು ಎನ್ನುವುದಕ್ಕೆ ಈ ಎರಡೂ ಕೃತಿಗಳು ದಿಕ್ಸೂಚಿಯಂತಿವೆ. ಸದರಿ ಕೃತಿಗಳಲ್ಲಿ ಪೂಜ್ಯರ ವೈಚಾರಿಕ ಚಿಂತನೆಯ ಪ್ರಖರತೆ, ಪುರಾಣ ಪುರುಷರ ಬಗೆಗಿದ್ದ ಅವರ ಧೋರಣೆ ವ್ಯಕ್ತವಾಗುವುದು.
ಪೂಜ್ಯರೇ ನಮಗೆ ದೀಕ್ಷೆ ಕರುಣಿಸಿ ಬೆಳಕಿನತ್ತ ಮುಖ ಮಾಡುವಂತೆ ಪ್ರೇರೇಪಿಸಿದ ದಿವ್ಯ ಚೇತನ. ಅವರು ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರು. ಕಾಶಿಯಲ್ಲಿದ್ದು ವೇದೋಪನಿಷತ್ತು, ಪುರಾಣಗಳ ಅಧ್ಯಯನ ಮಾಡಿದವರು. ಆದರೂ ಅವರು ಬಸವತತ್ವಕ್ಕೆ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡವರು. ಅವರು ಕೇಳುತ್ತಾರೆ: “ನಾರಿಯ ಸೀರೆ ಕದಿಯುವುದು ದೇವರ ಕೆಲಸವೇ?” ಎಂದು. “ಭಗವದ್ಗೀತೆಯಲ್ಲಿ ಹೇಳುವಂತೆ ಶ್ರೀಕೃಷ್ಣನು ಸಾಕ್ಷಾತ್ ದೇವರು. ಆದರೆ ಆ ದೇವರನ್ನು ಒಬ್ಬ ಬೇಡನು ಬಾಣದಿಂದ ಕೊಂದ. ತನ್ನನ್ನು ತಾನು ಕಾಪಾಡಿಕೊಳ್ಳಲಾರದ ಈ ಭಗವಂತ ಜನರನ್ನೇನು ಕಾಪಾಡಬಲ್ಲನು? ಇದೇ ಶ್ರೀಕೃಷ್ಣ ಪರಮಾತ್ಮನು ಚಿಕ್ಕಂದಿನಲ್ಲಿ ಬೆಣ್ಣೆ ಕದ್ದ; ಯೌವನದಲ್ಲಿ ನಾರಿಯರ ಸೀರೆ ಕದ್ದ. ಇದೆಲ್ಲವೂ ದೇವರ ಕೆಲಸವೇ? ಇಂತಹ ದೇವರು ಯುಗಯುಗಕ್ಕೂ ಹುಟ್ಟುತ್ತಾ ಬಂದಲ್ಲಿ ಸಮಾಜದ ನೀತಿಯ ಮಟ್ಟವೇನಾದೀತು? ಆಗ ಹುಟ್ಟಿದ. ಈಗಲಂತೂ ಧರ್ಮವೆಂಬುದೇ ಇಲ್ಲ. ಅಧರ್ಮದ ತುಟ್ಟತುದಿಯನ್ನು ಮುಟ್ಟಿದ್ದೇವೆ. ಸತ್ಪುರುಷರ ಸುಳಿವೇ ಇಲ್ಲ. ಎಲ್ಲೆಲ್ಲೂ ದುಷ್ಟರ ಹಾವಳಿಯೇ ಹಾವಳಿ. ಇಂತಹ ಕಾಲದಲ್ಲಿ ಏಕೆ ಅವತರಿಸಿ ಬರಲಿಲ್ಲ?” ಎಂದು ಕೇಳುವ ಮಾತು ಎಷ್ಟೊಂದು ಮೊನಚಾಗಿದೆ, ತಾರ್ಕಿಕತೆಯಿಂದ ಕೂಡಿದೆ ಮತ್ತು ವೈಚಾರಿಕವಾಗಿದೆ.
ನಮ್ಮ ಗುರುಗಳ ದೃಷ್ಟಿಯಲ್ಲಿ `ಧರ್ಮವೆಂದರೆ ನರನಿಗೆ ಹರನನ್ನು ತೊರಿಸುವ ಮಾರ್ಗ. ಧರ್ಮವನ್ನು ಗಳಿಸಿಕೊಳ್ಳುವವನು ನರನೇ ವಿನಾ ಹರನಲ್ಲ. ಹೀಗಿರುವಾಗ ದೇವರು ಮತ್ತೇಕೆ ಅವತರಿಸುತ್ತಾನೆ? ಧರ್ಮವನ್ನು ತಿಳಿಯಲು ಈವರೆಗೆ ಸೃಷ್ಟಿಯಾಗಿರುವ ಗ್ರಂಥಗಳೇ ಅಸಂಖ್ಯಾತವಾಗಿವೆ. ಮತ್ತೆ ಒಂದು ಹೊಸ ಗ್ರಂಥಗಳನ್ನು ಸೃಷ್ಟಿಸುವ ಅವಶ್ಯಕತೆಯಿದೆಯೇ? ಇಂತಹ ಪ್ರಸಂಗಗಳೇ ಸೋಗಿನ ದೇವರುಗಳ ಸೃಷ್ಟಿಗೆ ಕಾರಣವಾಗಿವೆ. ಇದರಿಂದ ಧರ್ಮಸಂಸ್ಥಾಪನೆಯಾದೀತೇ? ಜನರು ಧರ್ಮಜ್ಞರಾಗಿದ್ದಾರೆಯೇ? ಧರ್ಮವನ್ನು ಪಾಲಿಸಬೇಕಾದವರು ಜನರೋ? ದೇವರೋ? ಒಂದು ಅರ್ಥದಲ್ಲಿ ಹೇಳುವುದಾದರೆ ಧರ್ಮವನ್ನು ಸರಿಪಡಿಸುವವನು ದೇವರು. ಅವನು ಹೇಗಿದ್ದರೂ ಅವತರಿಸಿಯೇ ಅವತರಿಸುತ್ತಾನೆ. ನಮ್ಮ ಕರ್ತವ್ಯ ಧರ್ಮವನ್ನು ಕೆಡಿಸುವುದೊಂದೇ ಎಂದು ಆಗುವುದಿಲ್ಲವೇ? ದೇವರ ಸುತ್ತಲೂ ಈ ಪಂಡಿತರು ಹೆಣೆದಿರುವ ಮೌಢ್ಯವಿದು’ ಎಂದು ಹೇಳುವಲ್ಲಿ ಎಷ್ಟೊಂದು ವಿವೇಕ ಅವರಿಗಿತ್ತು ಎನ್ನುವುದು ಮನವರಿಕೆಯಾಗುವುದು.
`ಕೈಲಾಸ ವೈಕುಂಠಗಳ ಕತೆ, ಗಣಪತಿ ಷಣ್ಮುಖರ ಜನ್ಮಕತೆ, ಪರನಾರೀ ಸಹೋದರತೆಯನ್ನು ಬಿಟ್ಟು ಪರನಾರೀ ಭೋಗಪ್ರಿಯನಾದ ಶ್ರೀಕೃಷ್ಣನ ಕತೆ, ಸೀತೆಯನ್ನು ಕಳೆದುಕೊಂಡ ಶ್ರೀರಾಮನು ಸದ್ಭಕ್ತ ರಾವಣನನ್ನು ಕೊಲೆಮಾಡುವ ಕತೆ ಇವೆಲ್ಲವೂ ದೇವರ ಕೆಲಸವಲ್ಲ’ ಎಂದು ಖಂಡಿಸಿದ್ದಾರೆ. ಸೀತೆ, ರಾವಣ, ಲಕ್ಷ್ಮಣ, ಶೂರ್ಪನಖಿ ಮುಂತಾದವರ ಬಗ್ಗೆ ಶ್ರೀಗಳವರು ಹೇಳಿರುವ ಅಂಶಗಳು ಸತ್ಯಕ್ಕೆ ತುಂಬಾ ಹತ್ತಿರ ಇರುವಂತಿವೆ. ಲಕ್ಷ್ಮಣನು ಶೂರ್ಪನಖಿಯ ಬಗ್ಗೆ ನಡೆಸಿದ ಅನುಚಿತ ವ್ಯವಹಾರವೇ ಸೀತಾಪಹರಣಕ್ಕೆ ಮೂಲ ಕಾರಣ ಎನ್ನುತ್ತಾರೆ. `ಶೂರ್ಪನಖಿ ಶಬ್ದಕ್ಕೆ ಅರ್ಥ: ಶೂರ್ಪ ಎಂದರೆ ಮೊರ. ಒಂದು ಮೊರದಷ್ಟು ಉದ್ದ ಅಗಲವುಳ್ಳ ಉಗುರುಳ್ಳವಳು.’ ಗುರುಗಳು ಕೇಳುತ್ತಾರೆ: ಹಾಗೆ ಯಾರಿಗಾದರೂ ಇದ್ದೀತೇ? ಆಕೆಯು ರಾವಣನ ತಂಗಿಯಾಗಿರುವಾಗ ಆಕೆಯ ಒಡಹುಟ್ಟಿದವರಾದ ರಾವಣ, ವಿಭೀಷಣರು ಸಹ ಶೂರ್ಪನಖರಾಗಲೇಬೇಕು. ಆದರೆ ಅವರು ಶೂರ್ಪನಖರಲ್ಲ ಎಂದು ವಿವರಿಸುತ್ತ ಹೆಂಡತಿಯನ್ನು ಅಗಲಿರುವ ಯುವಕ ಲಕ್ಷ್ಮಣ ರಾವಣನ ತಂಗಿಯ ಮೇಲೆ ಏನಾದರೂ ದುಷ್ಕೃತ್ಯ ನಡೆಸಲು ಯತ್ನಿಸಿರಬಹುದು. ಆಗ ಆಕೆ ತನ್ನ ರಕ್ಷಣೆಗಾಗಿ ಲಕ್ಷ್ಮಣನನ್ನು ತನ್ನ ಉಗುರಿನಿಂದ ಜೋರಾಗಿ ಪರಚಿರಬಹುದು. ಆ ಪರಚಿದ ಪರಿಣಾಮವೇ ಉಗುರಿಗೆ ಶೂರ್ಪದ ಹೋಲಿಕೆ ಕೊಡಲು ಕಾರಣವಾಗಿರಬೇಕು. ಆಕೆಯ ಹೆಸರೇನೂ ಶೂರ್ಪನಖಿಯಲ್ಲ. ಇದು ರಾಮನು ಕೊಟ್ಟ ಹೆಸರು ಎನ್ನುವುದು ಗುರುಗಳ ಊಹೆ.
ತನ್ನ ಸಹೋದರನ ಮೈ ಕೈ ಪರಚಿದ ಕಾರಣಕ್ಕಾಗಿ ಅವಳ ಮೂಗು ಕೊಯ್ಯಲು ರಾಮನು ಪ್ರಚೋದಿಸಿರಬೇಕು. ಅವನು ತನ್ನ ತಂಗಿಯ ಮೂಗು ಕೊಯ್ದದ್ದರಿಂದ ರಾವಣನು ರಾಮ, ಲಕ್ಷ್ಮಣರಿಗೆ ಬುದ್ಧಿಕಲಿಸಬೇಕೆಂದು ಹೊರಟ ಎಂದು ಗುರುಗಳು ತರ್ಕಿಸುವರು. ದೇವರಾದ ರಾಮನಿಗೆ ಬಂಗಾರದ ಜಿಂಕೆ ಎಲ್ಲಿಯಾದರೂ ಓಡಾಡೀತೇ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ್ದರಿಂದ ಆತ ಆ ಜಿಂಕೆಯ ಬೆನ್ನು ಹತ್ತಿ ಹೋದ. ಅದು ಕೈಗೆ ಸಿಗದೆ ಈ ದೇವರನ್ನು ದೂರ ದೂರಕ್ಕೆ ಎಳೆದೊಯ್ದಿತು. `ಹಾ ಲಕ್ಷ್ಮಣಾ’ ಎಂದು ಕೂಗಿತು. ಸೀತೆಯು ಆ ರೋಧನವನ್ನು ಕೇಳಿ ರಾಮನಿಗೇನೋ ಅಪಾಯವಾಗಿದೆ; ಅದಕ್ಕಾಗಿ ನಿನ್ನನ್ನು ಕರೆಯುತ್ತಿದ್ದಾನೆ. ಜಾಗ್ರತೆ ಹೋಗು ಎಂದು ಲಕ್ಷ್ಮಣನಿಗೆ ಹೇಳಿದಳು. ಅವನು ಅತ್ತ ಹೊರಡುತ್ತಲೇ ಇತ್ತ ರಾವಣ ವೇಷ ಮರೆಸಿಕೊಂಡು ಬರುತ್ತಾನೆ. ಗುರುಗಳ ಪ್ರಶ್ನೆ: ಸೀತೆಯ ಬಗ್ಗೆ ರಾವಣನಿಗೆ ಕೆಟ್ಟ ಕಣ್ಣುಗಳಿದ್ದಲ್ಲಿ ಕಾಮುಕ ವೇಷ ಧರಿಸಿ ಬರುತ್ತಿದ್ದ. ಸೀತೆಗೆ ಕಾಮುಕ ವೇಷದ ಕಾರಣ ಮನಸ್ಸು ವಿಕಾರಕ್ಕೊಳಗಾಗಬಾರದೆಂಬ ಸಜ್ಜನಿಕೆಯಿಂದ ಸನ್ಯಾಸಿ ವೇಷದಲ್ಲಿ ಬಂದು ಮುಂದೆ ನಿಲ್ಲುತ್ತಾನೆ. ಇದು ರಾವಣನ ಸಜ್ಜನಿಕೆಯನ್ನು ವ್ಯಕ್ತಪಡಿಸುತ್ತದೆ. ಗೆರೆ ದಾಟಬಾರದೆಂಬ ಲಕ್ಷ್ಮಣನ ಅಪ್ಪಣೆಯನ್ನು ಮೀರಿ ರಾವಣನ ಒತ್ತಾಯಕ್ಕೆ ಕಟ್ಟುಬಿದ್ದು ಗೆರೆಯನ್ನೇಕೆ ದಾಟಿದಳು?
ರಾವಣ ಕಾಮುಕನೇ ಆಗಿದ್ದರೆ ಅವಳನ್ನು ತನ್ನ ಅಂತಃಪುರದಲ್ಲೇ ಇರಿಸಿಕೊಳ್ಳುತ್ತಿದ್ದನೇ ಹೊರತು ಅಶೋಕವನದಲ್ಲಿಟ್ಟು ಅಂಗರಕ್ಷಕರನ್ನಾಗಿ ಮಹಿಳೆಯರನ್ನಿಡುತ್ತಿದ್ದನೆ ಎನ್ನುವ ಪ್ರಶ್ನೆ ಗುರುಗಳವರದು. ಇಲ್ಲಿಯೂ ರಾವಣನ ಸೌಜನ್ಯ ಕಾಣಬಹುದು ಎನ್ನುತ್ತಾರೆ. ಆದರೆ ದೇವರಾದ ರಾಮ ಮತ್ತು ದೇವರ ತಮ್ಮ ಲಕ್ಷ್ಮಣನಲ್ಲಿ ಈ ಸಾಮಾನ್ಯ ವಿವೇಕವನ್ನೂ ಕಾಣುವುದಿಲ್ಲವೆನ್ನುತ್ತಾರೆ. ಇಂತಹ ಪುರಾಣ ಗ್ರಂಥಗಳು ನಮಗೆ ಆದರ್ಶ ಧಾರ್ಮಿಕ ಗ್ರಂಥಗಳಾಗಿವೆ ಎಂದು ಅವುಗಳ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ. ಇದನ್ನು ವಿವರಿಸುತ್ತ ಗುರುಗಳು ಹೇಳುವುದು: ವಿವೇಚನೆ ಮಾಡಿದಲ್ಲಿ ಆಗಿನ ಸಾಮಾಜಿಕ ಹೋರಾಟದಲ್ಲಿ ಗೆದ್ದವರು ತಮಗೆ ಅನುಕೂಲವಾಗಿ ಬರೆದ ಚರಿತ್ರೆಯೆಂದು ಹೇಳಬಹುದು. ಈ ತೆರನಾದ ಅಜ್ಞಾನ, ಮೌಢ್ಯ, ಅವಿಚಾರತನಗಳ ಪೋಷಕರಾದ ಜನರೂ, ಗ್ರಂಥಗಳೂ ನಮ್ಮಲ್ಲಿರುವಾಗ ಕ್ರಾಂತಿಯ ಉದಯವನ್ನು ನಿರೀಕ್ಷಿಸುವುದೇ ಅಸಾಧ್ಯ ಕೋಟಿಯ ಮಾತು. ರಾವಣ ರಾಕ್ಷಸನಾದರೆ ಅವನ ತಮ್ಮ ವಿಭೀಷಣ ಏಕೆ ರಾಕ್ಷಸನಾಗಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಶ್ರೀಕೃಷ್ಣನು ಯಾದವ, ಪಾಂಡವರು ಮತ್ತು ಕೌರವರು ಕ್ಷತ್ರಿಯರು. ಅವರಿಗೂ ಇವರಿಗೂ ಬಾಂಧವ್ಯ!… ಅಂದಿನ ಸಮಾಜದ ಸನ್ನಿವೇಶವನ್ನು ಗುರುತಿಸಿದಲ್ಲಿ ಅವರು ತಮಗೆ ಅನನುಕೂಲವಾದವರನ್ನೆಲ್ಲಾ ರಾಕ್ಷಸರೆಂದೇ ಕರೆಯುತ್ತಿದ್ದಂತೆ ತೊರುತ್ತದೆ. ಇವರ ಕೈ ಮೇಲಾದಾಗ ತಮ್ಮ ಪ್ರಾಶಸ್ತ್ಯವನ್ನು ಮುಂದಿಟ್ಟುಕೊಂಡು ಗ್ರಂಥಗಳನ್ನು ರಚಿಸಿ ಅದನ್ನು ಮುಂದಿನ ಸಮಾಜದ ಮೇಲೆ ಹೇರಿದ್ದಾರೆ.
`ನಿಜವಾಗಿ ಹೇಳುವುದಾದರೆ ರಾವಣನ ತಂಗಿಯ ಮೇಲೆ ಅಪರಾಧವೆಸಗಿದ ಲಕ್ಷ್ಮಣನು ಸಮಾಜ ಘಾತುಕ. ರಾವಣನ ವಿನಾಶಕ್ಕೆ ಬೆಂಬಲ ಕೊಟ್ಟ ವಿಭೀಷಣನು ವಂಶದೋಷಿ. ಆಂಜನೇಯನು ರಾಮನಿಗಾಗಿ ದುಡಿದ; ಕೋತಿಯೆನಿಸಿಕೊಂಡ. ಏಕೆಂದರೆ ಅವನು ದಕ್ಷಿಣ ಇಂಡಿಯಾದವನು. ಇಂದು ನಮ್ಮ ಭಾರತದ ಚರಿತ್ರೆಯ ತಳಹದಿಯೇ ಕೃತ್ರಿಮ ಸ್ವರೂಪದ್ದಾಗಿದೆ. ಇಂತಹ ಶಾಸ್ತ್ರ ಪುರಾಣಗಳು ನಮ್ಮ ದೇಶಕ್ಕೆ ಆದರ್ಶ ಗ್ರಂಥಗಳಾಗಿರುವವರೆಗೆ ಈ ವರ್ಣವಾದ, ಜಾತಿವಾದಗಳ ಹೋರಾಟ ಎಂದಿಗೂ ತಪ್ಪುವುದಿಲ್ಲ’ ಎನ್ನುವ ಗುರುಗಳ ವಾದ ಚಿಂತನಾರ್ಹವಾಗಿದೆ. ಗುರುಗಳು ಹೇಳುವಂತೆ ಮತ್ತು ನಾವು ಕಂಡಂತೆ ಸಿರಿಗೆರೆ ಮಠ ಸರ್ವಜನಾಂಗ ಬಹಿಷ್ಕೃತ ಮಠವಾಗಿತ್ತು. ಆರ್ಥಿಕವಾಗಿ, ಸಾಮಾಜಿಕವಾಗಿ ತುಂಬಾ ಹಿಂದುಳಿದಿತ್ತು. ಹಾಗಾಗಿ ಸಿರಿಗೆರೆ ಮಠವನ್ನು `ದುಗ್ಗಾಣಿ’ ಮಠ ಎಂದು ಲೇವಡಿ ಮಾಡುತ್ತಿದ್ದುದುಂಟು. ಆದರೆ ಗುರುಗಳ ಕಾಯಕ ಶ್ರದ್ಧೆ, ಸಾಮಾಜಿಕ ಕಳಕಳಿ, ವೈಚಾರಿಕ ಪ್ರಜ್ಞೆ, ಬಸವಪರ ನಡಾವಳಿಕೆ ಶ್ರೀಮಠಕ್ಕೆ ಮನ್ನಣೆ ತಂದುಕೊಟ್ಟಿವೆ. ದುಗ್ಗಾಣಿ ಮಠ ಹೋಗಿ ದುಡಿಯುವ, ಕಾಯಕ ಮಾಡುವ ಮಠವಾಗಿದೆ. ಗುರುಗಳವರದು ಯಾವಾಗಲೂ ದೂರದೃಷ್ಟಿ. ಅದಕ್ಕನುಗುಣವಾಗಿ ಮುಂದಾಲೋಚನೆ ಮಾಡುತ್ತಿದ್ದರು ಎನ್ನುವುದಕ್ಕೆ ಮುಂದಿನ ಬರಹವೇ ಸಾಕ್ಷಿ `ತೈಲ ಮುಗಿದ ಕೂಡಲೆ ದೀಪ ಆರುವಂತೆ ನಮ್ಮ ವಿಚಾರಗಳು ನಮ್ಮೊಂದಿಗೇ ಮುಕ್ತಾಯವಾಗಬಾರದು. ಇತೋಪ್ಯತಿಶಯವಾಗಿ ಬೆಳೆದು ಬರಬೇಕು. ಈ ದೃಷ್ಟಿಯಿಂದಲೇ ಕೆಲವರನ್ನು ತಯಾರು ಮಾಡಬೇಕೆಂದು ಮಠದ, ಸಮಾಜದ ಅನಂತ ಕಾರ್ಯಬಾಹುಳ್ಯದಲ್ಲಿಯೂ ಬಿಡುವು ಮಾಡಿಕೊಂಡು ಕೆಲವು ವಿದ್ಯಾರ್ಥಿಗಳನ್ನು ನಮ್ಮ ಮುಂದಿಟ್ಟುಕೊಂಡು ಪಾಠ ಹೇಳುವ ತಯಾರಿ ಯತ್ನದಲ್ಲಿ ಶ್ರಮವನ್ನು ಲೆಕ್ಕಿಸದೇ ದುಡಿದೆವು…’
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕೇವಲ ಉಪದೇಶ ಪ್ರವೀಣರಾಗಿರಲಿಲ್ಲ. ಅವರು ಮೊದಲು ಕಾರ್ಯೋನ್ಮುಖರಾಗಿ ನಂತರ ಅದರ ಫಲಾಪಲಗಳ ಬಗ್ಗೆ ಯೋಚನೆ ಮಾಡುತ್ತಿದ್ದರು. ಹಾಗಾಗಿ `ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ’ ಎನ್ನುವ ಬಸವಣ್ಣನವರ ವಚನ ಅವರಿಗೆ ಅತ್ಯಂತ ಅನುಕರಣೀಯವಾಗಿತ್ತು. ಅವರು ಮಾಡಿದ್ದನ್ನು ಮಾತ್ರ ಹೇಳುತ್ತಿದ್ದರು. ವ್ಯಕ್ತಿ ಶಾಶ್ವತವಲ್ಲ. ಯಾವಾಗಬೇಕಾದರೂ ಅವನ ಪ್ರಾಣಪಕ್ಷಿ ಹಾರಿಹೋಗಬಹುದು ಎನ್ನುವ ನೆಲೆಯಲ್ಲಿ ಅವರು ಹೇಳುತ್ತಿದ್ದುದು: 60 ವರ್ಷಕ್ಕೆ ಯಾವ ವ್ಯಕ್ತಿ ಯಾವುದೇ ಸ್ಥಾನದಲ್ಲಿದ್ದರೂ ತ್ಯಾಗ ಮಾಡಿ ಯುವಕರಿಗೆ ಮಾರ್ಗದರ್ಶನ ಮಾಡಬೇಕೆಂದು. ಇದು ಅವರ ಆದರ್ಶ. ಹಾಗಾಗಿ `ಹಿರಿಯರಾದವರು ಕಿರಿಯರಾದವರಿಗೆ ಬೆಳೆಯಲು ಅವಕಾಶ ಮಾಡಿಕೊಡಬೇಕು. 60 ವರ್ಷ ಒಂದು ದೊಡ್ಡ ಮಿತಿ ಅಥವಾ ಅವಧಿ. ತಾವು ಹಿಂದೆ ಸರಿದು ಕಿರಿಯರಿಗೆ ತಮ್ಮ ಅನುಭವ ಮತ್ತು ಬೆಂಬಲ ಕೊಟ್ಟು ಮುಂದೆ ತಂದಲ್ಲಿ ಈ ರಾಷ್ಟ್ರ ಬೆಳೆಯುತ್ತದೆ’ ಎಂದು ಹೇಳುತ್ತಲೇ ತಮ್ಮ 60ನೆಯ ವಯಸ್ಸಿಗೆ ತ್ಯಾಗ ಪತ್ರವನ್ನು ಸಮಾಜಕ್ಕೆ ಸಲ್ಲಿಸಿ ಪೀಠಕ್ಕೆ ಯೋಗ್ಯರಾದವರನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ನಿರ್ಲಿಪ್ತರಾಗಿ ಪೀಠತ್ಯಾಗ ಮಾಡಿದ್ದು ಐತಿಹಾಸಿಕ ದಾಖಲೆ.
ಪುರಾಣಗಳ ಬಗ್ಗೆ ನಮ್ಮ ಗುರುಗಳಂತೆ ಲೇವಡಿ ಮಾಡಿದ ಮಠಾಧೀಶರು ತುಂಬಾ ವಿರಳ. ಲೇಖಕರ ಹೆಸರನ್ನು ಮರೆತು ಪೂಜ್ಯರ ಸಾಹಿತ್ಯವನ್ನು ಓದಿದರೆ ಖಂಡಿತ ಇದನ್ನು ಒಬ್ಬ ಬಂಡಾಯ ಸಾಹಿತಿಯೇ ಬರೆದಿರಬೇಕು ಎನ್ನಿಸುವುದರಲ್ಲಿ ಅನುಮಾನವಿಲ್ಲ. `ವಿಶ್ವಾಮಿತ್ರ ಕ್ಷತ್ರಿಯ. ಬ್ರಾಹ್ಮಣನಾಗುವ ಆಸಕ್ತಿ ಅವನಿಗಿತ್ತು. ವಶಿಷ್ಠನು ಕೂಡ ಒಂದು ಕಾಲದಲ್ಲಿ ಬೇರೆಯವನಾಗಿದ್ದರೂ ಬ್ರಾಹ್ಮಣನಾದನು. ತನ್ನಂತೆಯೇ ಮತ್ತೊಬ್ಬನೂ ಆಗಲಿ ಎಂಬ ಬುದ್ಧಿ ಅವನಿಗೆ ಇರಲಿಲ್ಲ. ಅದಕ್ಕಾಗಿಯೇ ಅವನು ವಿಶ್ವಾಮಿತ್ರನನ್ನು ದ್ವೇಷಿಸಹತ್ತಿದನು. ಅವರಿಬ್ಬರ ಕದನ ಕಲಹದ ಪರಿಣಾಮವೇ ಸತ್ಯವಂತನಾದ ಹರಿಶ್ಚಂದ್ರನು ರಾಜ್ಯ ಕಳೆದುಕೊಂಡದ್ದು; ಹೆಂಡತಿ, ಮಕ್ಕಳನ್ನು ಜೀತಕ್ಕೆ ಗುರಿ ಮಾಡಿದುದು; ತಾನು ವೀರಬಾಹುಕನ ಜೀತದಾಳಾಗಿದ್ದುದ್ದು. ಇವರಿಬ್ಬರ ಜಾತಿಕಲಹದ ಕಾರಣ ಇಡೀ ರಾಷ್ಟ್ರವೇ ತಲ್ಲಣಿಸಿತು. ವಿಶ್ವಾಮಿತ್ರ ಬಹಳ ಗಟ್ಟಿಗ. ಹಠಮಾರಿಯೆಂದು ತೋರುತ್ತದೆ. 25 ಸಹಸ್ರ ವರ್ಷಗಳವರೆಗೆ ಬ್ರಾಹ್ಮಣ್ಯಕ್ಕಾಗಿ ತಪಸ್ಸು ಮಾಡಿದನು ಎಂದರೆ ಹೋರಾಡಿದನು… ನಮ್ಮ ಪುರಾಣಗಳಲ್ಲಿ ಇಂತಹ ನೂರಾರು ಪ್ರಸಂಗಗಳು ದೊರೆಯುತ್ತವೆ. ಈ ರೋಗವು ನಮ್ಮ ರಾಷ್ಟ್ರದಲ್ಲಿ ಸಹಸ್ರಾರು ವರ್ಷಗಳಿಂದ ಜಾತಿಯ ಬೆಳವಣಿಗೆಗೆ ಬುನಾದಿಯಾಗಿ ಬಂದಿದೆ’ ಎಂದು ವಿಷಾದದಿಂದ ದಾಖಲಿಸಿದ್ದಾರೆ.
ಪುರಾಣಗಳಿಗೆ ಪರ್ಯಾಯವಾಗಿ ಪೂಜ್ಯರು ಶರಣರ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು. ಯಾವಾಗಲೂ ಜಾತ್ಯತೀತ ಕನಸನ್ನು ಕಾಣುತ್ತಿದ್ದರು. ಆ ಕನಸನ್ನು ತಮ್ಮ ವಲಯದಲ್ಲಿ ನನಸು ಮಾಡಿಕೊಂಡಿದ್ದರು. ವಿದ್ಯಾರ್ಥಿನಿಲಯ, ಮಠ, ವಿದ್ಯಾಸಂಸ್ಥೆಗಳಲ್ಲಿ ಜಾತ್ಯತೀತ ನಿಲವನ್ನು ಜಾರಿಯಲ್ಲಿ ತಂದಿದ್ದರು. ಮಠ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಎಲ್ಲ ಜನಾಂಗದ ವಿದ್ಯಾರ್ಥಿಗಳು ಜೊತೆಯಲ್ಲಿ ಕೂತು ಪ್ರಸಾದ ಸ್ವೀಕರಿಸುವುದು, ಒಟ್ಟಾಗಿ ರೂಮಿನಲ್ಲಿ ಬಾಳುವುದು ಸಮಾಜದ ಹಲವು ಮುಖಂಡರಿಗೆ ಇಷ್ಟವಾಗುತ್ತಿರಲಿಲ್ಲ. ಲಿಂಗಾಯತರು, ಜಂಗಮರು, ಮಾದಿಗರು, ನಾಯಕರು, ಅಗಸರು ಅದೂ ಗುರುಗಳ ನೇತೃತ್ವದಲ್ಲೇ ಕೂತು ಉಣ್ಣುವುದೆಂದರೆ ಸರಿಯಲ್ಲ. ಲಿಂಗಾಯತರಿಗೇ ಬೇರೆ ಪ್ರಸಾದನಿಲಯ ನಡೆಸಲಿ. ಇಲ್ಲವಾದರೆ ನಿಲ್ಲಿಸಲಿ ಎಂದು ಗುರುಗಳಲ್ಲಿಗೆ ಧಮಕಿ ಹಾಕಲು ಒಂದು ನಿಯೋಗ ಬಂದಿತ್ತಂತೆ. ಆಗ ಗುರುಗಳು `ನಾವು ಪ್ರತ್ಯೇಕ ವ್ಯವಸ್ಥೆ ಮಾಡುವುದಕ್ಕಿಂತ ಜಂಗಮರ ವಿದ್ಯಾರ್ಥಿಗಳು ಇಲ್ಲಿಗೆ ಬರದಿರುವುದೇ ಲೇಸಲ್ಲವೇ? ನಾವು ಜಾತೀಯತೆಯನ್ನು ಬೆಳೆಸುವುದಾಗಲಿ, ಮೇಲು ಕೀಳುಗಳನ್ನು ಕಲ್ಪಿಸುವುದಾಗಲಿ ಎಂದಿಗೂ ಆಗುವುದಿಲ್ಲ. ಜಂಗಮ ಎಂದರೆ ಇಂದಿನ ವಾಡಿಕೆಯ ಅರ್ಥದಲ್ಲಿ ಪುರೋಹಿತ; ಅದೊಂದು ಜಾತಿಯಲ್ಲ. ಮಾದಿಗನೂ ಪೌರೋಹಿತ್ಯ ಕಲಿತು ಪುರೋಹಿತನಾಗಬಹುದು’ ಎಂದು ಹೇಳಿ ಬಸವಣ್ಣನವರ ತತ್ವಗಳನ್ನು ಮನವರಿಕೆ ಮಾಡಿಕೊಟ್ಟರಂತೆ.
ಉಂಬಲ್ಲಿ [ಊ]ಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ?
ಎಂತಯ್ಯಾ ಅವರ ಯುಕ್ತರೆಂತೆಂಬೆ?
ಕೂಡಲಸಂಗಮದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ.

ಇದು ಬಸವಣ್ಣನವರ ಆದೇಶ. ಉಣ್ಣುವಾಗ, ಉಡುವಾಗ, ಏಳುವಾಗ, ಬೀಳುವಾಗ, ಮಲಗುವಾಗ, ಮುಗ್ಗರಿಸುವಾಗ `ಬಸವಾ ಬಸವಾ’ ಎನ್ನುವ ನೀವು ಬಸವಣ್ಣನವರ ವಿಚಾರಗಳಿಗೆ ಬೆಲೆ ಕೊಡುವುದಿಲ್ಲವೆಂದರೆ ನಿಮ್ಮ ಭಕ್ತತನಕ್ಕಾದರೂ ಬೆಲೆಯೇನುಂಟು? ಸರ್ವ ಜೀವಾತ್ಮರುಗಳಿಗೆ ಲೇಸನೇ ಬಯಸುವುದೇ ಬಸವಣ್ಣನ ಧರ್ಮದ ಗುರಿ. ಇಂತಿರುವಾಗ ನಿಮ್ಮ ಅಂಧ ಸಂಪ್ರದಾಯಗಳನ್ನೂ, ಅವಿಚಾರಿತನವನ್ನೂ ನಾವು ಎಂದಿಗೂ ಪುರಸ್ಕರಿಸುವವರಲ್ಲ. ನಾವು ಮಠದ ಬಲದ ಮೇಲೆ ಈ ಕಾರ್ಯ ಮಾಡುತ್ತಿಲ್ಲ; ಬಸವಣ್ಣನ ತತ್ವದ ಬಲದ ಮೇಲೆ ಮುನ್ನುಗ್ಗುತ್ತಿದ್ದೇವೆ. ಧರ್ಮವಿರುವುದು ಜನರನ್ನು ಜನರನ್ನಾಗಿ ಮಾಡುವುದಕ್ಕೇ ವಿನಾ ಜನರನ್ನು ದನವನ್ನಾಗಿ ಮಾಡಲು ಅಲ್ಲ ಎಂದು ಕಟುವಾಗಿ ಹೇಳಿ ಅವರ ಮನಸ್ಸನ್ನು ಪರಿವರ್ತನೆ ಮಾಡುವರು. ಅವರು `ಮಠಗಳಿಗೆ ಅಂತಃಶಕ್ತಿಯೇ ಇಲ್ಲ’ ಎನ್ನುವರು. `ಧರ್ಮಾಚರಣೆಯ ಬಗ್ಗೆ ಮಠಗಳು ದಿಟ್ಟ ನಿಲವನ್ನು ತೆಗೆದುಕೊಳ್ಳಬೇಕು’ ಎಂದು ಹೇಳುತ್ತಿದ್ದರು. `ಜಾತೀಯತೆ ಅಳಿದರೆ ಮಾತ್ರ ಧರ್ಮ ಉಳಿಯುತ್ತದೆ’ ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು. ಹಾಗಾಗಿ ಅವರು ತಮ್ಮ ಬದುಕಿನುದ್ದಕ್ಕೂ ಜಾತಿಯ ಸಂಕೋಲೆಗೆ ಬಲಿಯಾಗಲಿಲ್ಲ. ಬಸವಣ್ಣನವರ ಹಲವಾರು ವಚನಗಳು ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು.
ಕೋಣನ ಹೇರಿಂಗೆ ಕುನ್ನಿ ಬುಸುಕುತ್ತ ಬಡುವಂತೆ
ತಾವೂ ನಂಬರು, ನಂಬುವರನೂ ನಂಬಲೀಯರು.
ತಾವೂ ಮಾಡರು, ಮಾಡುವರನೂ ಮಾಡಲೀಯರು.
ಮಾಡುವ ಭಕ್ತರ ಕಂಡು ಸೈರಿಸಲಾರದವರ,
ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವ.

ಅವರಿಗೆ ಎಂಥದೇ ಸಂಕಷ್ಟಗಳು, ವಿಪತ್ತುಗಳು ಎದುರಾದಾಗ ಈ ವಚನ ನೆನಪಿಸಿಕೊಳ್ಳುತ್ತಿದ್ದರು. ಅದನ್ನೇ ಜನರಿಗೆ ಹೇಳಿ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ಸೂಚಿಸುತ್ತಿದ್ದರು. ಬಾಯಿಮಾತಿಗೆ ಬಗ್ಗದಾಗ ದಂಡೋಪಾಯಕ್ಕೂ ಹಿಂಜರಿಯುತ್ತಿರಲಿಲ್ಲ. ಒಂದು ಮಠಕ್ಕೆ ಸ್ವಾಮಿಗಳಾಗುವವರು ಹೇಗಿರಬೇಕೆಂದು ಹೇಳುತ್ತಿದ್ದ ಮಾತು: ಸ್ವಾಮಿಗಳಾಗುವವರಿಗೆ ವಿಶಾಲಭಾವನೆ, ದೂರದೃಷ್ಟಿ ಇರಬೇಕು. ಅಖಂಡ ಲೋಕವೇ ತನ್ನ ಕುಟುಂಬವೆಂದು ಅವನು ಭಾವಿಸಬೇಕು. `ಉದಾರ ಚರಿತಾನಾಂತು ವಸುದೈವ ಕುಟುಂಬಕಂ’. ಉದಾರ ಸ್ವಭಾವಿಗಳಿಗೆ ಇಡೀ ಪ್ರಪಂಚವೇ ತನ್ನ ಮನೆ. ಇದು ನಿಜವಾದ ಸನ್ಯಾಸಿಗೆ ಇರಬೇಕಾದ ಗುಣ. ಆದರೆ ಜನರ ಮೌಢ್ಯವನ್ನು ದುರುಪಯೋಗ ಮಾಡಿಕೊಂಡು ತಾನು, ತನ್ನ ಮನೆತನ, ತನ್ನ ದುರ್ನಡವಳಿಕೆ ಇವುಗಳಿಗೆ ಸಮಾಜವನ್ನು ಬಳಸುವುದು ದ್ರೋಹಾತಿ ದ್ರೋಹ ಎನ್ನುತ್ತಿದ್ದರು. ಅವರ ಗುರಿ ಕೇವಲ ಸಾಧುಜನಾಂಗವಾಗಿರಲಿಲ್ಲ. ಅವರೇ ಹೇಳುವಂತೆ ಕನ್ನಡ ನಾಡಿನ, ಭರತ ಖಂಡದ ವ್ಯಾಪ್ತಿಯನ್ನು ಮೀರಿ ವಿಶ್ವಮಾನವ್ಯದ ವ್ಯಾಪ್ತಿಗೊಳಪಟ್ಟುದಾಗಿತ್ತು. ಅದಕ್ಕಾಗಿ `ಕನ್ನಡ, ಹಿಂದಿ, ಸಂಸ್ಕøತ, ಇಂಗ್ಲಿಷ್ ಎಲ್ಲಾ ಭಾಷೆಗಳ ಜ್ಞಾನವಿರಬೇಕು. ಎಷ್ಟೇ ಎತ್ತರವಾದ ಪರ್ವತವಾಗಲಿ ಹತ್ತಿಯೇ ತೀರುತ್ತೇನೆಂಬ ನಿಲುವು ಬೇಕು. ಅಂತಹ ವ್ಯಕ್ತಿಯು ದೊರಕಿದರೆ ನಮ್ಮ ಕನಸು ನನಸಾದೀತು ಎಂದುಕೊಂಡು ದೇವರ ಮೇಲೆ ಭಾರ ಹಾಕಿ ನಮ್ಮ ದಾರಿಯಲ್ಲಿ ನಾವು ನಡೆದೆವು’ ಎನ್ನುವಲ್ಲಿ ಅವರ ಕನಸುಗಳ ಪರಿಚಯವಾಗುವುದು.
ಧರ್ಮಾಧಿಕಾರಿಗಳು ಸರಿಯಾಗಿ ಧರ್ಮವನ್ನು ಜನರಿಗೆ ತಿಳಿಸಿ ಅವರನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಿದ್ದರೆ ಪುರಾಣ, ಶಾಸ್ತ್ರ, ಜೋತಿಷ್ಯ, ಹೊತ್ತಿಗೆಗಳ ಹಿಂದೆ ಜನರಾದರೂ ಏಕೆ ಸುತ್ತುತ್ತಿದ್ದರು? ಅವರು ವಿಚಾರವಂತರಾಗುವುದು, ಮೌಡ್ಯಗಳಿಂದ ಮುಕ್ತರಾಗುವುದು ಎಷ್ಟೋ ಮಠಾಧಿಪತಿಗಳಿಗೇ ಬೇಕಾಗಿಲ್ಲ. ಹಾಗಾಗಿ ಅವರೇ ಅಂಥವುಗಳಿಗೆ ಪ್ರೋತ್ಸಾಹಿಸುತ್ತಾರೆ ಎಂದು ಕಟುವಾಗಿ ಟೀಕಿಸುತ್ತಿದ್ದರು. `ನಿಜವಾದ ದೇವರ ಪರಿಚಯ ಧರ್ಮಾಧಿಕಾರಿಗಳಿಂದ ಜನರಿಗೆ ದೊರೆತಿದ್ದರೆ ಪ್ರಕೃತಿಯ ವಿಕೋಪವನ್ನು ದೈವ ವಿಕೋಪವೆಂದು ಜನರು ನಂಬುತ್ತಿರಲಿಲ್ಲ. ನಮ್ಮ ದೇಶದಲ್ಲಿಯೇ ಅಲ್ಲ; ಯಾವುದೇ ದೇಶದಲ್ಲಾಗಲಿ ಧರ್ಮದ ಬಗ್ಗೆ ಧರ್ಮಾಧಿಕಾರಿಗಳಿಂದ ಆಗಿರುವಷ್ಟು ಕೇಡು ಮತ್ತಾರಿಂದಲೂ ಆಗಿಲ್ಲ. ಈಗಲೀಗ ರಾಷ್ಟ್ರಕ್ಕೆ ರಾಜಕಾರಣಿಗಳಿಂದ ಆಗಿರುವಷ್ಟು ಅನರ್ಥ ಸಾಮಾನ್ಯ ಪ್ರಜೆಗಳಿಂದ ಆಗಿಲ್ಲ. ಅಂದು ಧರ್ಮ ನಮಗೊಂದು ಪಿಡುಗಾಗಿತ್ತು; ಧರ್ಮಾಧಿಕಾರಿಗಳ ಸ್ವಾರ್ಥದೃಷ್ಟಿಯ ಕಾರಣದಿಂದ. ಇಂದು ರಾಜಕೀಯವು ನಮಗೊಂದು ಪಿಡುಗಾಗಿದೆ ರಾಜಕೀಯ ಪುರುಷರ ಕಾರಣದಿಂದ. ಇವರಿಬ್ಬರೂ ಪ್ರತಿ ನಿಮಿಷವೂ ಜನತೆಯ ಹಿತವನ್ನೇ ಬಾಯಲ್ಲಿ ಜಪಿಸುತ್ತಾರೆ. ಆದರೆ ತಮ್ಮ ಹಿತವನ್ನೇ ಇದರ ಮರೆಯಲ್ಲಿ ಸಾಧಿಸಿಕೊಳ್ಳುತ್ತಾರೆ’ ಎಂದು ನಿರ್ಭಿಡೆಯಿಂದ ಹೇಳುತ್ತ ಸಮಾಜ ತಿದ್ದುವ ಕಾರ್ಯ ಮಾಡುತ್ತಿದ್ದರು.
ಈಗ ಧರ್ಮವು ಚಲಾವಣೆ ಕಳೆದುಕೊಂಡಿದೆ. ಧಾರ್ಮಿಕ ಮೌಢ್ಯವು ರಾಜಕೀಯ ಮೌಢ್ಯವನ್ನು ಬೆಳೆಸುತ್ತಲಿದೆ..’ ಎಂದೆಲ್ಲ ನಿಷ್ಠುರವಾಗಿ ದಾಖಲಿಸುವುದನ್ನು ಕಂಡಾಗ ಅವರಿಗಿರುವ ಸಾಮಾಜಿಕ, ಧಾರ್ಮಿಕ ಕಳಕಳಿಯ ಅರಿವಾಗುವುದು. ಇವತ್ತು ಸಮಾಜ ದಿಕ್ಕುತಪ್ಪಿದೆ ಎಂದರೆ ನಿಷ್ಠುರವಾಗಿ ಹೇಳುವವರ ಕೊರತೆ ಇರುವುದು. ಬದಲಾಗಿ ಅವರೂ ಇವರೂ ರಾಜಿಯಾಗಿ ಏನೇನೋ ಆಟ ಆಡುತ್ತಿರುವುದು. ಈ ನೆಲೆಯಲ್ಲಿ ಶರಣರ ವಿಚಾರಗಳನ್ನು ಜನರು ಅರಿತು ಆಚರಣೆಯಲ್ಲಿ ತರುವಪ್ರಯತ್ನ ಮಾಡಬೇಕೆನ್ನುವುದು ನಮ್ಮ ಗುರುಗಳ ಮಂತ್ರಜಪವಾಗಿತ್ತು. ಅವರೆಂದೂ ಶರಣರ ದಾರಿ ಬಿಟ್ಟು ಹೋದವರಲ್ಲ. ಹಾಗಾಗಿ ಪುರಾಣ, ವೇದ, ಶಾಸ್ತ್ರಗಳು ಜನರನ್ನು ದಿಕ್ಕುತಪ್ಪಿಸಿ ದಿಂಡುರುಳಿಸುವ ಸಾಧನಗಳೆಂದು ನೇರವಾಗಿ ಅವುಗಳ ಬಂಡವಾಳವನ್ನು ಬಯಲಿಗಿಡುತ್ತಿದ್ದರು. ಇಂದಂತೂ ಶಾಸ್ತ್ರ, ಪುರಾಣ, ಪೂಜೆಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯ. ಕೊರೊನಾ ಕಾರಣದಿಂದ ದೇವಾಲಯಗಳ ಬಾಗಿಲು ಮುಚ್ಚಿದ್ದರೂ ಆನ್ಲೈನ್ ಮೂಲಕ ಪೂಜೆಯನ್ನು ಜಾರಿಗೆ ತಂದು ಮತ್ತೆ ಜನರ ತಲೆ ಬೋಳಿಸಲು ಜಾಣ ಜನರು ಮುಂದಾಗಿದ್ದಾರೆ. ಈ ನೆಲೆಯಲ್ಲಿ ಶರಣರ ವಿಚಾರಗಳು ಮತ್ತು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರಂತಹ ಗುರುಗಳು ಈ ಜನರಿಗೆ, ಸಮಾಜಕ್ಕೆ ಹಿಂದೆಂದಿಗಿಂತಲೂ ಇಂದು ತುರ್ತಾಗಿ ಬೇಕಾಗಿವೆ.
ಆದಿಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ,
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ.

ಆಧಾರ: `ದಿಟ್ಟಹೆಜ್ಜೆ ಧೀರಕ್ರಮ’ ಪುಸ್ತಕ 25-05-2020

Previous post ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
Next post ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)

Related Posts

ವಚನ ಸಾಹಿತ್ಯದಲ್ಲಿ ಆಯಗಾರರು
Share:
Articles

ವಚನ ಸಾಹಿತ್ಯದಲ್ಲಿ ಆಯಗಾರರು

May 10, 2023 ವಿಜಯಕುಮಾರ ಕಮ್ಮಾರ
ನಮ್ಮದು ಕೃಷಿ ಸಂಸ್ಕೃತಿ, ಕೃಷಿ ಎಲ್ಲಾ ಸಂಸ್ಕೃತಿಗಳ ತಾಯಿ. ಎಲ್ಲ ಕಾಯಕಗಳಿಗೂ ಮತ್ತು ಸಂಸ್ಕೃತಿಗಳಿಗೂ ಹೆತ್ತವ್ವನ ಸ್ಥಾನದಲ್ಲಿರುವುದೇ ವ್ಯವಸಾಯ. ಹಾಗೆಯೇ ವ್ಯವಸಾಯ...
ಬಸವ ಸ್ಮರಣೆ ಇಂದಿಗೂ ಏಕೆ?
Share:
Articles

ಬಸವ ಸ್ಮರಣೆ ಇಂದಿಗೂ ಏಕೆ?

May 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
`ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು. ಆದರೆ ಕಾಡುಗಲ್ಲಿನಂತಿರುವ ಮನುಷ್ಯರನ್ನು...

Comments 10

  1. Satish Kumar Badadale
    Jun 17, 2020 Reply

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಕ್ಕ .

  2. ಕರಿಬಸಪ್ಪ ಕಲ್ಗುಡಿ
    Jun 21, 2020 Reply

    ದಿಟ್ಟ ಹೆಜ್ಜೆ ಧೀರ ಕ್ರಮ- ಪುಸ್ತಕದ ವಿಚಾರಗಳನ್ನು ಹಂಚಿಕೊಂಡ ಪೂಜ್ಯರಿಗೆ ಶರಣು. ಸಾಣೇಹಳ್ಳಿಯ ಹಿರಿಯ ಸ್ವಾಮಿಗಳ ವಿಚಾರಗಳನ್ನು ಓದಿ ಸಂತೋಷವಾಯಿತು. ನನಗಂತೂ ಲಿಂಗಾನಂದ ಸ್ವಾಮೀಜಿಯವರ ಪ್ರವಚನದ ಪ್ರಖರ ಮಾತುಗಳನ್ನು ಕೇಳಿದಂತೆನಿಸಿತು.

  3. Jayadev Jawali
    Jun 21, 2020 Reply

    ವೇದ, ಪುರಾಣ, ಶಾಸ್ತ್ರಗಳು ನಮ್ಮ ವೈಚಾರಿಕ ಶಕ್ತಿಯನ್ನೇ ಕೊಂದು ಹಾಕಿಬಿಟ್ಟಿವೆ ಎನ್ನುವ ಶ್ರೀಗಳ ನುಡಿಗಳು ಸತ್ಯವಾದವು. ಕಳೆದ ತಿಂಗಳ ನಾನು ಯಾರು? ಲೇಖನದಲ್ಲಿ ಪರಾಚೈತನ್ಯವಸ್ತು ನಾನಾ? ಎನ್ನುವ ಚರ್ಚೆಯಲ್ಲಿ ಇದರ ಬಗ್ಗೆ ಸವಿಸ್ತಾರವಾಗ ಉಲ್ಲೇಖವಿದೆ! ಉಪನಿಷತ್ತುಗಳ ನನ್ನ ಭ್ರಾಂತಿಯನ್ನು ತೊಡೆದ ಆ ವಿಚಾರಗಳನ್ನು ಇಲ್ಲಿಯ ಮಾತುಗಳೂ ಎತ್ತಿ ಹಿಡಿದಿವೆ!!! ಪೂಜ್ಯರಿಗೆ ನಮನಗಳು.

  4. Jagadeesh anekal
    Jun 29, 2020 Reply

    ಪುರಾಣಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ಲೇವಡಿ ಮಾಡುತ್ತಿದ್ದ ಹಿರಿಯ ಶ್ರೀಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆನ್ನುವ ಕುತೂಹಲ ಹುಟ್ಟಿತು.

  5. Lalithamma
    Jun 30, 2020 Reply

    ಪುರಾಣಗಳು ಪುಂಡರ ಗೋಷ್ಠಿಗಳಲ್ಲದೆ ಬೇರೇನೂ ಅಲ್ಲ. ಪ್ರಗತಿಪರ ಗುರುಗಳನ್ನು ಪಡೆದ ಕಾರಣಕ್ಕೆ ತಾವೂ ಅದೇ ಮಾರ್ಗದಲ್ಲಿ ಸಾಗುತ್ತಿರುವುದು ಸಂತಸದ ವಿಷಯ.

  6. sharanappa. B. kerur
    Jul 6, 2020 Reply

    ಧರ್ಮಾಧಿಕಾರಿಗಳು ಸನ್ಮಾರ್ಗದಲ್ಲಿ ನಡೆಯುತ್ತಿಲ್ಲವೆಂಬುದನ್ನು ಪೂಜ್ಯರು ಸೂಚ್ಯವಾಗಿ ತಿಳಿಸಿದ್ದಾರೆ. ನಿಜಕ್ಕೂ ನಮ್ಮ ಲಿಂಗಾಯತ ಸಮಾಜಕ್ಕೆ ಧರ್ಮಾಧಿಕಾರಿಗಳು ಬೇಕೆ ಎನ್ನುವುದು ನನ್ನ ಪ್ರಶ್ನೆ. ದಯವಿಟ್ಟು ಉತ್ತರಿಸಬೇಕು.

  7. Revanasiddhaiah
    Jul 8, 2020 Reply

    ಧಾರ್ಮಿಕ ಮೌಢ್ಯ ಮತ್ತು ರಾಜಕೀಯ ಮೌಢ್ಯ ಎರಡೂ ನಮ್ಮ ಸಮಾಜಕ್ಕಂಟಿಕೊಂಡಿರುವ ಶಾಪಗಳು

  8. ಚಂದ್ರಶೇಖರ ಇಟಗಿ, ಮದ್ದೇಬಿಹಾಳ
    Jul 10, 2020 Reply

    ನಮಸ್ಕಾರ. ……
    ಶ್ರೀ ಗಳ ಲೇಖನ ಅತ್ಯಂತ ಪ್ರಖರ ಹಾಗೂ
    ವಾಸ್ತವ.ಇವರಂತೆ ಉಳಿದ ಪೂಜ್ಯರೂ
    ಈ ಹಾದಿಯಲ್ಲಿ ಸಾಗಿದರೆ ಸಮಾಜ ಸುಭಿಕ್ಷು
    ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ
    ಶರಣುಗಳೊಂದಿಗೆ

  9. ಅಪ್ಪಯ್ಯ ಬಿರಾದಾರ
    Jul 13, 2020 Reply

    ರಾಮಾಯಣ, ಮಹಾಭಾರತಗಳಿಗೆ ಜೋತು ಬಿದ್ದ ಲಿಂಗಾಯತರು ಇದನ್ನು ಓದಲೇ ಬೇಕು. ಗುರೂಜಿಗಳ ಮಾತು ಅಪ್ಪಟ ಸತ್ಯ.

  10. Jayakumar Vijaypur
    Jul 18, 2020 Reply

    ಉತ್ಕೃಷ್ಟವಾದ ಲೇಖನಗಳನ್ನು ತಂದು ಕೊಡುತ್ತಿರುವ ಬಯಲು ನನ್ನ ಮೆಚ್ಚಿನ ಜಾಲತಾಣ. ಲೇಖಕರಿಗೆಲ್ಲ ವಿಶೇಷ ವಂದನೆಗಳು.

Leave a Reply to Lalithamma Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಪೊರೆವ ದನಿ…
ಪೊರೆವ ದನಿ…
August 11, 2025
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಮನವೇ ಮನವೇ…
ಮನವೇ ಮನವೇ…
May 6, 2020
ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
July 10, 2025
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
Copyright © 2025 Bayalu