
ದಾರಿಯಲ್ಲದ ದಾರಿ…
ಗುರು ತೋರಿದ ದಾರಿಯಲಿ
ಬಂಡೆಗಳ ಸಿಡಿಸಬೇಕು
ಗುಡ್ಡಗಳ ಒಡೆಯಬೇಕು
ಕಮರಿ, ಹೊಳ್ಳ ದಾಟಬೇಕು
ಮುಳ್ಳುಗಂಟಿ ಕಿತ್ತಬೇಕು
ಇಷ್ಟಪಟ್ಟು ನಡೆಯದಿದ್ದರೆ
ಇದು ಬಲು ಕಷ್ಟದ ದಾರಿ
ಧರ್ಮಗ್ರಂಥಗಳ ಹಿಡಿದರೆ
ಎದುರಿದ್ದೂ ಕಾಣದಾ ದಾರಿ
ಮಾತಿನಾಟಕೆ ಸಿಲುಕಿದರೆ
ಮರೆಯಾಗೋ ದಾರಿ
ಅರ್ಥಕ್ಕೆ ಆತುಕೊಂಡರೆ
ಪತ್ತೆಯಾಗದ ದಾರಿ
ಜ್ಞಾನದಾಹಕೆ ಬಾಯ್ತೆರೆದರೆ
ಮರೀಚಿಕೆಯಾಗೋ ದಾರಿ
ಯೋಗದ ಬೆನ್ನ ಬಿದ್ದರೆ
ದೂರ ಉಳಿಯುವ ದಾರಿ
ನಮ್ಮ ಕಗ್ಗಾಡನ್ನು
ನಾವೇ ತರಿಯಬೇಕು
ನಮ್ಮ ಕದಳಿಯ ಹೊಲಬ
ನಾವೇ ಅರಿಯಬೇಕು
ಕೆಚ್ಚಿರಬೇಕು ನಡೆಯುದಕೆ
ಹುಚ್ಚಿರಬೇಕು ಬಿಡೆ ಎನ್ನಲಿಕೆ
ಪಟ್ಟುಹಿಡಿಯಲೇ ಬೇಕು
ಬಾಗದ ಮನಸಿನ ಮುಂದೆ
ಸರಳಾತಿ ಸರಳವಾಗಿದ್ದರೂ
ಸುಲಭದಲಿ ಸಿಗದು
ಹಮ್ಮುಬಿಮ್ಮುಗಳಿಗಂತೂ
ಹತ್ತಿರವೇ ಸುಳಿಯದು
ಅಂತಿಂಥದಲ್ಲ ಈ ಮಹಾದಾರಿ
ಕರುಣೆಯಲಿ ಗುರು ಕೊಟ್ಟ
ಶಿವಪಥಕೊಯ್ಯುವ ಈ ರಹದಾರಿ.
Comments 1
Padmalaya
Oct 11, 2023ಕಿತ್ತಬೇಕು ಅಲ್ಲಮ್ಮಕೀಳಬೇಕು