ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
(ಕನ್ನಡ, ರಾಷ್ಟ್ರೀಯತೆ, ಲಿಂಗಾಯತ ಸಾಹಿತ್ಯ ಮತ್ತು ಕ್ರಿಶ್ಚಿಯಾನಿಟಿ)
(ಈ ಲೇಖನದಲ್ಲಿ ಮಂಡಿಸಲಾಗಿರುವ ವಿಚಾರಗಳನ್ನು ನಾನು ಪ್ರೊ. ಮೃಣಾಲಿನಿ ಸೆಬಾಸ್ಟಿಯನ್ ರವರು ಬರೆದಿರುವ ಇಂಗ್ಲಿಷ್ ಲೇಖನದಿಂದ ತೆಗೆದುಕೊಂಡಿದ್ದೇನೆ.)
ಚೆನ್ನಪ್ಪ ಉತ್ತಂಗಿಯವರು ಕರ್ನಾಟಕ ಕಂಡ ಅತ್ಯಂತ ಅಪರೂಪದ ವ್ಯಕ್ತಿ, ಲೇಖಕ ಮತ್ತು ರಾಷ್ಟ್ರೀಯವಾದಿ. ಫ.ಗು ಹಳಕಟ್ಟಿಯವರ ಸಮಕಾಲೀನರಾಗಿದ್ದ ಅವರು ರಾಷ್ಟ್ರ, ಪ್ರಾದೇಶಿಕತೆ ಮತ್ತು ಧರ್ಮದ ಬಗ್ಗೆ ಅನೇಕ ಗಂಭೀರ ವಿಚಾರಗಳನ್ನು, ಗ್ರಂಥಗಳನ್ನು ಮಂಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ರಾಷ್ಟ್ರೀಯತೆಯ ಪ್ರಭಾವಕ್ಕೆ ಒಳಗಾಗಿದ್ದ ಉತ್ತಂಗಿ ಚೆನ್ನಪ್ಪನವರು ತಮ್ಮ ಲೇಖನಗಳು ಮತ್ತು ವಿಚಾರಗಳನ್ನು ಇದರಡಿಯಲ್ಲಿ ಮಂಡಿಸಿದ್ದಾರೆ. ಕ್ರಿಶ್ಚಿಯನ್ನರಾಗಿದ್ದರೂ ಕನ್ನಡ, ಲಿಂಗಾಯತ ಸಾಹಿತ್ಯ ಮತ್ತು ಧರ್ಮಗಳ ಬಗ್ಗೆ ಪಾಂಡಿತ್ಯವನ್ನು ಸಾದರಪಡಿಸಿದ ಒಬ್ಬ ಧೀಮಂತ ವ್ಯಕ್ತಿ. ಪಾಶ್ಚಾತ್ಯ ಮತ್ತು ಸ್ಥಳೀಯ ಕ್ರಿಶ್ಚಿಯನ್ ಮಿಶಿನರಿಗಳಿಗಿಂತ ಭಿನ್ನವಾಗಿ ಯೋಚಿಸುತ್ತಾ ಕನ್ನಡ ಮತ್ತು ಲಿಂಗಾಯತ ಸಾಹಿತ್ಯಕ್ಕೆ ಒಂದು ಐತಿಹಾಸಿಕ ತಿರುವನ್ನು ಕೊಟ್ಟ ವಿಚಾರವಾದಿ.
ಅವರು ಕನ್ನಡ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಮೂರನೇ ಪೀಳಿಗೆಯ ವಿದ್ಯಾವಂತ ವ್ಯಕ್ತಿ. 1881ರಲ್ಲಿ ಧಾರವಾಡದ ಬೇಟಗೇರಿಯಲ್ಲಿ ಅವರ ಜನ್ಮವಾಯಿತು. ಮಂಗಳೂರಿನ ಬಾಸೆಲ್-ಮಿಶಿನರಿಯವರಿಂದ ನಡೆಸುತ್ತಿದ್ದ ಥಿಯಾಲಾಜಿಕಲ್ ಸೆಮಿನರಿಯಲ್ಲಿ ವಿದ್ಯಾಭ್ಯಾಸ ಕೈಗೊಂಡರು. ನಂತರ ಬಾಸೆಲ್ ಮಿಷಿನ್ ಶಾಲೆಯಲ್ಲಿ ಬೈಬಲ್ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಲೋಕದಲ್ಲಿ ಅವರನ್ನು ಸರ್ವಜ್ಞ ಪಂಡಿತ ಮತ್ತು ಲಿಂಗಾಯತ ತತ್ವದ ಪ್ರಾಜ್ಞ ಎಂದು ಬಣ್ಣಿಸಲಾಗಿದೆ. 1949ರಲ್ಲಿ ನಡೆದ 32ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಕಲ್ಬುರ್ಗಿಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣವನ್ನು ಕೂಡ ಮಾಡಿದರು. ಅವರ ಸಮಗ್ರ ಬರವಣಿಗೆಗಳನ್ನು ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ‘ಚೆನ್ನಪ್ಪ ಉತ್ತಂಗಿ ಸಮಗ್ರ ಸಾಹಿತ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದಾರೆ. ಇವು ಮೂರು-ಸಂಪುಟಗಳನ್ನೊಳಗೊಂಡಿದ್ದು ಅವುಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ:
ಅ) ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕೃತಿಗಳು
ಆ) ಲಿಂಗಾಯತ ಧರ್ಮಕ್ಕೆ ಸೇರಿದ ಕೃತಿಗಳು
ಇ) ಸರ್ವಜ್ಞನ ಮೇಲಿನ ವಿಮರ್ಶಾ ಲೇಖನಗಳು
ಈ ಮೂರು ಸಂಪುಟಗಳು ಉತ್ತಂಗಿಯವರ ವಿಚಾರಗಳನ್ನು ಮತ್ತು ಅವುಗಳ ನಡುವಿನ ಬೌದ್ಧಿಕ ಕ್ಷೋಭೆಯನ್ನು ಪ್ರತಿಬಿಂಬಿಸುತ್ತವೆ. ಈ ಕ್ಷೋಭೆಯನ್ನು ನಾವು ಪ್ರಮುಖವಾಗಿ ಮೂರು ವಿಷಯಗಳ ನಡುವೆ ಕಾಣಬಹುದು:
ಅ) ಪ್ರಾದೇಶಿಕತೆಯ ಜೊತೆಗೆ ಗುರುತಿಸಿಕೊಳ್ಳುವುದು
ಆ) ರಾಷ್ಟ್ರದ ಬಗ್ಗೆ ಇದ್ದ ಆದರ್ಶವಾದ
ಇ) ಕ್ರಿಶ್ಚಿಯನ್ ಧರ್ಮಕ್ಕೆ ಇದ್ದ ವಿಧೇಯತೆ
ಅವರ ರಾಷ್ಟ್ರೀಯತೆಯ ವಿಚಾರ ಅವರನ್ನು ಅತ್ಯಂತ ಸೂಕ್ಷ್ಮಗ್ರಾಹಿಯನ್ನಾಗಿ ಮಾಡಿತು. ಇದರಿಂದ ಕೆಲವು ಮಿಶಿನರಿಗಳು ಇತರ ಧಾರ್ಮಿಕ ಪರಂಪರೆಗಳ ಜೊತೆ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆಂದು ಅರಿಯಲು ಅವರಿಗೆ ಸಹಾಯಕವಾಯಿತು. ಅವರು ಈ ನೆಲ/ಸ್ಥಳದ ಜೊತೆಗೆ ಗುರುತಿಸಿಕೊಳ್ಳುವುದು ಅದರ ಸಂಸ್ಕೃತಿ, ಸಾಹಿತ್ಯ ಹಾಗು ತತ್ವದ ವಿನೂತನ ಲಕ್ಷಣವನ್ನು ವಿಶ್ಲೇಷೀಕರಿಸುವುದರ ಮೂಲಕ. ಅಂದಿನ ರಾಷ್ಟ್ರೀಯತೆಯ ಸನ್ನಿವೇಶದಲ್ಲಿ ಭಾಷೆ, ಪ್ರದೇಶ ಹಾಗು ಧರ್ಮದ ಬಗ್ಗೆ ಮಂಡಿಸಿರುವ ವಿಚಾರಗಳನ್ನು ವಿಶ್ಲೇಷಿಸುವುದರ ಮೂಲಕ ಅವರು ಕನ್ನಡ ನಾಡಿನ ವಿಶಿಷ್ಟತೆಯನ್ನು ಚಿತ್ರಿಸಿದರು.
ರಾಷ್ಟ್ರ ಹಾಗು ಧರ್ಮ ಎಂಬ ವಿಚಾರಗಳ ಬಗ್ಗೆ ಕೆಲವು ಕ್ರಿಶ್ಚಿಯನ್ ಮಿಷಿನರಿಗಳು ಹೊಂದಿದ್ದ ನಿಲುವಿನ ಪರಿಧಿಯಲ್ಲಿ ಉತ್ತಂಗಿಯವರು ಈ ಪ್ರದೇಶದ ಇತಿಹಾಸ ಬರೆಯಲಿಲ್ಲ. ಅವರ ಗುರುತನ್ನು/ಐಡೆಂಟಿಟಿಯನ್ನು ರಾಷ್ಟ್ರ ಮತ್ತು ಧರ್ಮದ ವಿಚಾರಗಳು ಅಷ್ಟೇನು ಪ್ರಭಾವಿಸಲಿಲ್ಲ ಎಂಬುದು ಗಮನೀಯ. ಉತ್ತಂಗಿಯವರ ತಾತಂದಿರು ಯಾವ ಸಮುದಾಯದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದರೋ ಅದೇ ಧರ್ಮಕ್ಕೆ ಮತ್ತೆ ಮತಾಂತರ ಹೊಂದುವಂತೆ ಅವರು ವಾದಿಸಲಿಲ್ಲ. ಉತ್ತಂಗಿಯವರು ನೀಡುವ ಉದಾಹರಣೆಗಳು ಸ್ಥಳೀಯ ಭಕ್ತಿ ಸಂಪ್ರದಾಯದ ಜಗತ್ತಿಗೆ ಸಂಬಂಧಿಸಿವೆ. ಅವರ ತಾತ್ವಿಕ ವಿಚಾರಗಳು ಲಿಂಗಾಯತ ಮೂಲದಿಂದ ರೂಪಿಸಲ್ಪಟ್ಟಿವೆ. ಕನ್ನಡಿಗರ ಭೌಗೋಳಿಕ ನೆಲವನ್ನು ಅವರು ಸಾಹಿತ್ಯದ ಮೂಲಕ ಗುರುತಿಸಲು ಪ್ರಯತ್ನಿಸಿದ್ದಾರೆ. ಅವರಿಗೆ ತಿರುಳ್ಗನ್ನಡದ ಬಗ್ಗೆ ಆಸಕ್ತಿ ಇತ್ತೇ ಹೊರತು ‘ಪಾದ್ರಿ’ ಕನ್ನಡದ ಬಗ್ಗೆ ಅಲ್ಲ. ಈ ಆಸಕ್ತಿಯು ಅವರನ್ನು ಸರ್ವಜ್ಞನ ಕಡೆಗೆ ಒಲವು ತೋರಲು ಪ್ರೇರೇಪಿಸಿತು. ಸರ್ವಜ್ಞನು ಕ್ರಾಂತಿಕಾರನೆಂದು ಅವರು ತಿಳಿದಿದ್ದರು. ಅಂತರ್-ಧಾರ್ಮಿಕ ಸಂಭಾಷಣೆ, ಈ ಪ್ರದೇಶದ ಜೊತೆಗೆ ಇರುವ ಅಸ್ತಿತ್ವ; ಧರ್ಮ ಹಾಗು ಸಮುದಾಯಗಳ ನಡುವೆ ಒಂದು ಆರೋಗ್ಯಕರ ಸಂಭಾಷಣೆ ಮಾಡಲು ಸರ್ವಜ್ಞನ ತ್ರಿಪದಿಗಳಲ್ಲಿ ಕಾಣುವ ಮೌಲ್ಯಗಳನ್ನು ಉತ್ತಂಗಿಯವರು ವಿಶೇಷಿಕರಿಸುತ್ತಾರೆ. ಸರ್ವಜ್ಞನ ಅನೇಕ ವಿಚಾರಗಳು ಉತ್ತಂಗಿಯವರಿಗೆ ಪ್ರೇರಕ ಅಂಶಗಳಾಗಿದ್ದವು.
ತಿರುಳ್ಗನ್ನಡದ ತಿರುಕ
ಕರ್ನಾಟಕದಲ್ಲಿ ಕಾಣುವ ಭಿನ್ನತೆ/ವೈವಿಧ್ಯತೆಗಳ ಕಾರಣದಿಂದ ಉತ್ತಂಗಿಯವರಿಗೆ ಕರ್ನಾಟಕ ಪ್ರದೇಶದ ಬಗ್ಗೆ ವಿಶೇಷ ಒಲವಿತ್ತು. ಈ ಪ್ರದೇಶವು ಉತ್ತರ ಭಾರತಕ್ಕಿಂತ ಭಿನ್ನ ಮತ್ತು ವಿನೂತನವಾದದ್ದು ಎಂಬುದು ಅವರ ನಂಬಿಕೆ. ಈ ನಂಬಿಕೆಗೆ ಅವರು ಕೆಲವೊಂದು ಅಂಶಗಳನ್ನು ಆಧಾರವಾಗಿರಿಸಿಕೊಂಡಿದ್ದರು. ಒಂದು ಕಡೆ ಅವು ಆರ್ಯ ಮತ್ತು ದ್ರಾವಿಡ ಸಂಸ್ಕೃತಿಗಳ ನಡುವಿನ ವ್ಯತ್ಯಾಸಗಳಿಗೆ ಸಂಬಂಧಿಸಿದ್ದರೆ, ಮತ್ತೊಂದು ಕಡೆ ಅವು ಸಂಸ್ಕೃತ ಹಾಗು ಕನ್ನಡಗಳ ನಡುವೆ ಇರುವ ಭಾಷಿಕ ಮತ್ತು ಸಾಹಿತ್ಯಕ ವ್ಯತ್ಯಾಸಗಳಿಗೆ ಸಂಬಂಧಿಸಿದ್ದವು. ಅವರ ಪ್ರಕಾರ ಕನ್ನಡದ ನಿಜವಾದ ಸತ್ವವು ಅದರ ಜಾನಪದ ಸಾಹಿತ್ಯದಲ್ಲಿ ಅಡಗಿದೆ; ಅದರ ತತ್ವವು ಶರಣರ ಬರವಣಿಗೆಗಳಲ್ಲಿ ಘನೀಕೃತಗೊಂಡಿದೆ.
ಕನ್ನಡ ಭಾಷೆಯ ವಿಶಿಷ್ಟತೆಯ ಬಗ್ಗೆ ಅವರು ಮಂಡಿಸಿರುವ ವಿಚಾರಗಳೇನು?
ಕನ್ನಡ ಗುರುತಿನ ಬಗ್ಗೆ ಉತ್ತಂಗಿಯವರ ವಿಚಾರಗಳು ಮಾತೃಭಾಷೆಯನ್ನು ಕಂಠೋಕ್ತವಾಗಿ ಅಂಗೀಕರಿಸುವುದರ ಮೂಲಕ ಸಾಗುತ್ತವೆ. ಇದು 19ನೇ ಶತಮಾನದ ಪ್ರೊಟೆಸ್ಟೆಂಟ್ ಮಿಷಿನರಿಗಳು ಅಭಿವೃದ್ಧಿಪಡಿಸಿದ ‘ಆಧುನಿಕ’ ಕನ್ನಡಕ್ಕೆ ವ್ಯತಿರಿಕ್ತವಾಗಿತ್ತು. ತಮ್ಮ ಆತ್ಮಚರಿತ್ರೆಯಲ್ಲಿ ಅವರು ತಾವು ಜನ್ಮತಃ ಕನ್ನಡಿಗರು; ಮನೆಯೊಳಗೆ ಒಂದು ಮಾದರಿ ಕನ್ನಡ ಮಾತನಾಡುವ ನಾನು ಹೊರಗಡೆ ‘ಪಾದ್ರಿ’ ಕನ್ನಡ ಕಲಿತೆ ಎಂದು ಬರೆದಿದ್ದಾರೆ. ಅವರು ತಮ್ಮನ್ನು ತಾವು ‘ತಿರುಳ್ಗನ್ನಡದ ತಿರುಕ’ ಎಂದು ಕರೆದುಕೊಂಡರು. ಈ ತಿರುಕ ಸಂಸ್ಕೃತ ಭಾಷೆಯಿಂದ ಹೊರತಾದ ಕನ್ನಡದ ಸತ್ವಕ್ಕಾಗಿ ತಿರುಗಾಡುವವನು.
ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ 1944ರಲ್ಲಿ ರಬಕವಿಯಲ್ಲಿ ಜರುಗಿದ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಂಗಿಯವರು ಜಾನಪದ ಸಾಹಿತ್ಯದ ಬಗ್ಗೆ ಮಾತನಾಡುವಂತೆ ಕೇಳಿಕೊಳ್ಳಲಾಯಿತು. ತಮ್ಮ ಆತ್ಮ ಚರಿತ್ರೆಯಲ್ಲಿ ಅವರು ತಮ್ಮ ಕನ್ನಡ ಪ್ರೇಮ ಪ್ರತ್ಯೇಕವಾದುದಲ್ಲ ಎಂದು ಹೇಳಿದ್ದಾರೆ. ಯಂತ್ರ, ಸ್ವಾತಂತ್ರ್ಯ, ತತ್ವ, ಕ್ರಿಸ್ತ ಮತ್ತು ಕೊನೆಯದಾಗಿ ಕನ್ನಡದ ಬಗ್ಗೆ ಅವರಿಗಿದ್ದ ಪ್ರೇಮ/ಒಲವು ಗಮನೀಯವಾದದ್ದು. ಅವರು ಇದ್ದ ಸಂದರ್ಭ ಮತ್ತು ಸನ್ನಿವೇಶವು ಎಷ್ಟೊಂದು ಸಂದಿಗ್ಧತೆಯಿಂದ ಕೂಡಿತ್ತೆಂದರೆ ಅವರ ಎಲ್ಲಾ ಬೌದ್ಧಿಕ ವಿಚಾರಗಳನ್ನು, ಆಸಕ್ತಿಗಳನ್ನು ಸದಾ ಕಾಲ ಜಾಗೃತಗೊಳಿಸಿಕೊಂಡು ಹೋಗುವುದು ಉತ್ತಂಗಿಯವರಿಗೆ ಒಂದು ದೊಡ್ಡ ಹೋರಾಟವೇ ಆಗಿತ್ತು.
ಕನ್ನಡ ಸಾಂಸ್ಕೃತಿಕ ಜಗತ್ತಿನ ಬಗ್ಗೆ ಉತ್ತಂಗಿಯವರಿಗೆ ಒಲವಿತ್ತೇ ಹೊರತು ಆ ಭಾಷೆಯ ಅಪೂರ್ವತೆಯ ಬಗ್ಗೆ ಅಲ್ಲ. ಕನ್ನಡ ಭಾಷೆಯ ವಿಶಿಷ್ಟತೆಯ ಬಗ್ಗೆ ಮಾತನಾಡುವಾಗ ಉತ್ತಂಗಿಯವರು ಕನ್ನಡ ಜಾನಪದದಲ್ಲಿರುವ ಅನೇಕ ಭಿನ್ನ, ಭಿನ್ನ ಪ್ರಕಾರಗಳು ಹಾಗು ಮಾದರಿಗಳನ್ನು ಹೆಚ್ಚು ಗಮನಿಸುತ್ತಾರೆ. ಸಂಸ್ಕೃತದಿಂದ ಹೊರತಾದ ಕನ್ನಡ ಜಾನಪದ ಬೇರುಗಳ ಬಗ್ಗೆ ಅವರಿಗೆ ತೀವ್ರ ಆಸಕ್ತಿ. ಜೊತೆಗೆ ಕನ್ನಡಿಗರಿಗೆ ತಮ್ಮದೇ ಆದ ಸ್ವತಂತ್ರ್ಯ ರಾಜ್ಯದ ಅವಶ್ಯಕತೆ ಇದೆ ಎಂದು ಅವರು ನಂಬಿದ್ದರು. ಕನ್ನಡದ ಮೂಲವನ್ನು ಹುಡುಕುವಾಗ ಅವರು ಬಹಳ ಮುಖ್ಯವಾಗಿ ಕನ್ನಡ ಹಾಗು ಸಂಸ್ಕೃತದ ನಡುವೆ ಇರುವ ವ್ಯತ್ಯಾಸಗಳನ್ನು ಎತ್ತಿ ಹಿಡಿಯುತ್ತಾರೆ. ಅವರ ದೃಷ್ಟಿಯಲ್ಲಿ ಕನ್ನಡದ ಜಾನಪದವು ದ್ರಾವಿಡ ಸಂಸ್ಕೃತಿಯಿಂದ ಉದ್ಭವಿಸಿರುವಂತದ್ದು. ಆರ್ಯ ಸಂಸ್ಕೃತಿಯ ಜೊತೆಗೆ ಒಡನಾಟಕ್ಕೊಳಗಾದರೂ, ಅದು ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಂಡಿರುವಂತದ್ದು. ನೀರು ಮತ್ತು ಎಣ್ಣೆ ಮಿಶ್ರಣವಾದರೂ ಹೇಗೆ ಎರಡೂ ತಮ್ಮ ವಿಶಿಷ್ಟತೆಯನ್ನು/ಪ್ರತ್ಯೇಕತೆಯನ್ನು ಉಳಿಸಿಕೊಳ್ಳುತ್ತವೆಯೋ ಹಾಗೆ ಆರ್ಯ ಮತ್ತು ದ್ರಾವಿಡ ಸಂಸ್ಕೃತಿಗಳ ಮಿಶ್ರಣವಾಗಿದ್ದರು ಕೂಡ ಕನ್ನಡ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ ಎಂದು ಅವರು ವಾದಿಸುತ್ತಿದ್ದರು.
ಉತ್ತಂಗಿ ಮತ್ತು ಲಿಂಗಾಯತ ಸಂಸ್ಕೃತಿ
ಉತ್ತಂಗಿಯವರ ವಾದದ ಪ್ರಕಾರ ಲಿಂಗಾಯತ ಸಾಹಿತ್ಯವು ಬಯಲು ಪ್ರದೇಶದ ಸಂಸ್ಕೃತಿ ಹಾಗು ಅನುಭಾವದ ಸಂಸ್ಕೃತಿ ನಡುವಿನ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ. ಅನುಭಾವ ತತ್ವ ಬಯಲಿನ ತತ್ವ. ಬಾಹ್ಯ ಬಯಲು ಅಂತರಂಗ ಬಯಲಿನ ಚಿತ್ರಣ. ಹೀಗಾಗಿ ಕನ್ನಡ ಸಾಹಿತ್ಯ, ಕನ್ನಡ ಧರ್ಮ, ಕನ್ನಡ ತತ್ವ, ಕನ್ನಡದ ಕಲೆ, ಕನ್ನಡ ಪದಗಳು, ಕನ್ನಡ ಅಕ್ಷರಮಾಲೆ ಎಲ್ಲವೂ ಬಯಲು ಪ್ರದೇಶದ ಅಭಿವ್ಯಕ್ತ ಅಂಶಗಳು ಹಾಗು ಅನುಭಾವದ ತತ್ವಗಳು. ಅನುಭಾವ ಸಂಸ್ಕೃತಿಯು ಕನ್ನಡ ಸಂಸ್ಕೃತಿಯು ಹೌದು.ಇತರ ಸಂಸ್ಕೃತಿಗಳಿಗಿಂತ ಇದು ಹೇಗೆ ಭಿನ್ನ ಎಂದು ಅವರು ಅನೇಕ ಕಡೆ ವಿವರಿಸಿದ್ದಾರೆ.
ಅನ್ಯರಂತೆ ತಾನಾಗುವುದೇ ಅನುಭಾವ. ಅನ್ಯರು ಅನುಭವಿಸುವ ನೋವು-ನಲಿವುಗಳನ್ನು ತನ್ನದೆಂದು ಅನುಭವಿಸುವ ಸಾಮರ್ಥ್ಯ. ಇದನ್ನು ವಿವರಿಸುವುದಕ್ಕೆ ಅವರು ಹುಮಾಯೂನನ ಉದಾಹರಣೆಯನ್ನು ಕೊಡುತ್ತಾರೆ. ತನ್ನ ಮಗನು ಜ್ವರದಿಂದ ಬಳಲುತ್ತಿರುವುದನ್ನು ನೋಡಲಾಗದೆ ಅವನ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಾನೆಂದರೆ, ಹುಮಾಯೂನನಿಗೂ ಸಹ ಜ್ವರ ಬರುತ್ತದೆ. ಅನುಭಾವ ಸಂಸ್ಕೃತಿಯಾದ ಕನ್ನಡ ಸಂಸ್ಕೃತಿಯು ಭಾವನೆಯ ಸಂಸ್ಕೃತಿ. ಅದು ಬೌದ್ಧಿಕ ಸಂಸ್ಕೃತಿಗೆ ವಿರುದ್ಧವಾದುದು. ಅದು ಭಕ್ತಿ ಮತ್ತು ಪ್ರೀತಿಯ ಸಂಸ್ಕೃತಿ. ಸಂಸ್ಕೃತ ಪರಂಪರೆಯ ಮತ್ತು ತಾತ್ವಿಕ ಸಂಸ್ಕೃತಿಯ ತರಹ ಅಲ್ಲ. ಇಲ್ಲಿ ನಮಗೆ ಕಾಣುವುದೇನೆಂದರೆ ಒಂದು ಭೌಗೋಳಿಕ ಪ್ರದೇಶದ ಜೊತೆ ದ್ರಾವಿಡರು/ಕನ್ನಡಿಗರನ್ನು ಭಾಷೆ, ಸಾಹಿತ್ಯ ಹಾಗು ಜನರ ತತ್ವಗಳ ಜೊತೆಗೆ ಬೆಸೆದಿರುವುದು. ಒಂದು ಪ್ರದೇಶದ ಭೂಗೋಳ ಹಾಗು ಅಲ್ಲಿನ ಜನರ ತತ್ವದ ನಡುವೆ ಇರುವ ಸಂಬಂಧದ ಮೇಲೆ ಒಂದು ಸಂಸ್ಕೃತಿಯ ನಿರ್ದಿಷ್ಟತೆ ಅವಲಂಬಿತವಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ. ಅವರ ಪ್ರಕಾರ ಅನುಭಾವಿಗಳಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದವರು ಗಾಂಧಿ. ಸರ್ವಜ್ಞನ ಹಾಗೆ ಅವರ ವಿಚಾರಗಳು ಸಹ ಉನ್ನತವಾಗಿರುವಂತವು.
ಸ್ವತಂತ್ರ ಭಾರತ ಮತ್ತು ಅಖಂಡ ಭಾರತ
ಗಾಂಧಿಯನ್ನು ಅನುಭಾವಿ ಎಂದು ಉತ್ತಂಗಿಯವರು ಬಣ್ಣಿಸಿದ್ದಾರೆ. ಹೀಗೆ ಅವರು ವಾದಿಸುವುದಕ್ಕೆ ಎರಡು ಉದ್ದೇಶಗಳಿದ್ದವು. ಒಂದು, ಅವರಲ್ಲಿದ್ದ ರಾಷ್ಟ್ರ-ವಿಧೇಯತೆ. ಮತ್ತೊಂದು ಕರ್ನಾಟಕದ ಏಕೀಕರಣಕ್ಕೆ ಇದ್ದ ಅವರ ಬಾಧ್ಯತೆ. ಗಾಂಧೀಯ ರಾಷ್ಟ್ರೀಯತೆ ಮತ್ತು ಉತ್ತಂಗಿಯವರ ಪ್ರಾದೇಶಿಕತೆ ಅನುಭಾವದ ಸಂಸ್ಕೃತಿಯನ್ನು ಸೂಚಿಸುತ್ತದೆ. ಇದು ಕನ್ನಡಿಗರ ಸಂಸ್ಕೃತಿಯೂ ಹೌದು. ಕನ್ನಡ ಸಂಸ್ಕೃತಿಯು ತನ್ನ ಕಸುವನ್ನು ಕಳೆದುಕೊಂಡು ನಿರ್ಬಲವಾಗಿದೆ. ಆದರೆ ಸಾಂಸ್ಕೃತಿಕ ಏಕೀಕರಣದಿಂದ ಕನ್ನಡದ ವಿಶಿಷ್ಟತೆಯನ್ನು ಎತ್ತಿ ಹಿಡಿದು, ರಾಜಕೀಯವಾಗಿ ಏಕೀಕೃತಗೊಳ್ಳಬಹುದೆಂಬುದು ಉತ್ತಂಗಿಯವರ ನಂಬಿಕೆ. ಉತ್ತಂಗಿಯವರಲ್ಲಿ ಈ ಪ್ರಾದೇಶಿಕ ಏಕೀಕರಣವು ರಾಷ್ಟ್ರದ ಕಲ್ಪನೆಗೆ ವಿರೋಧವಲ್ಲ. ಉತ್ತರದ ಸಂಸ್ಕೃತಿಗಿಂತ ಪುರಾತನವಾದ ಅನುಭಾವದ ಸಂಸ್ಕೃತಿಯು ಈ ರಾಷ್ಟ್ರವನ್ನು ಹಿಡಿದಿಡುತ್ತದೆ. ಅನುಭಾವಿ ಗಾಂಧಿಯ ಸಾಮಾಜಿಕ ಪರಿವರ್ತನೆಯು ಬಸವಣ್ಣನ ವಿಚಾರಗಳಿಗೆ ಸಮೀಪ. ಹೀಗಾಗಿ ಕರ್ನಾಟಕದ ಏಕೀಕರಣ ಸ್ವತಂತ್ರ ದೇಶದ ವಿಚಾರಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದಿಲ್ಲ. ಬದಲಾಗಿ ಅದು ಸ್ವಾತಂತ್ರ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.
ಈ ದೇಶದ ಸ್ವಾತಂತ್ರ್ಯದ ಅರ್ಥ ಎಲ್ಲರ ಸ್ವಾತಂತ್ರ್ಯದಲ್ಲಿ ಅಡಗಿದೆ ಎಂದು ಅವರು ನಂಬಿದ್ದರು. ಇದರಲ್ಲಿ ಹಿಂದು ಸಮಾಜದ ‘ಅಸ್ಪೃಶ್ಯರು’ ಸಹ ಸೇರಿದ್ದಾರೆ. ಬಸವೇಶ್ವರನೂ, ಕರ್ನಾಟಕದ ಅಭ್ಯುದಯವು ಮತ್ತು ಬಸವೇಶ್ವರನೂ ಅಸ್ಪೃಶ್ಯತೆಯ ಉದ್ಧಾರವು ಎಂಬ ಎರಡು ಕೃತಿಗಳಲ್ಲಿ ಕರ್ನಾಟಕ ಏಕೀಕರಣದ ಮಾರ್ಗವನ್ನು ಬಸವಣ್ಣನು ಅದಾಗಲೇ ತೋರಿಸಿರುವನೆಂದು ಅವರು ನಂಬಿದ್ದರು. ತಮ್ಮ ಚರ್ಚೆಗಳ ಮೂಲಕ ಈ ಕೃತಿಗಳಲ್ಲಿ ಬಸವಣ್ಣನು ತೋರಿಸಿದ ಮಾರ್ಗದ ಹಿರಿಮೆಯನ್ನು ಬಣ್ಣಿಸಿದ್ದಾರೆ.
ಸ್ವತಂತ್ರ ಭಾರತದಲ್ಲಿ ನಡೆಯುವ ಹೋರಾಟವು ವರ್ಗ ಮತ್ತು ಜಾತಿಯ ಸಮಾನತೆಗಾಗಿ ನಡೆಯುವ ಹೋರಾಟವಾಗಿದೆ ಎಂದು ಅವರು ನಂಬಿದ್ದರು. ಈ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಬಸವಣ್ಣನವರನ್ನು ನೆನೆಯುತ್ತಾ, ಗಾಂಧಿ ಹುಟ್ಟುವ ಅನೇಕ ಶತಮಾನಗಳ ಮೊದಲೇ ಬಸವಣ್ಣನವರು ಅಸಮಾನತೆಯ ವಿರುದ್ಧ ಹೋರಾಡಿದ್ದನ್ನು ಜ್ಞಾಪಿಸಿಕೊಳ್ಳುತ್ತಾರೆ. ‘ಬಸವೇಶ್ವರನೂ ಅಸ್ಪೃಶ್ಯರ ಉದ್ಧಾರವು’ ಕೃತಿಯಲ್ಲಿ ಬ್ರಾಹ್ಮಣ ಹುಡುಗಿಗೂ, ಪಂಚಮ ಹುಡುಗನಿಗೂ ನಡೆಯುವ ಮದುವೆಯನ್ನು ಒಳಗೊಂಡಿರುವ ಹರಳಯ್ಯ-ಮಧುವರಸರ ಕಥೆಯನ್ನು ತಮ್ಮದೇ ಆದ ಮಾತಿನಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಏಕತೆಗೆ ಸವರ್ಣೀಯರು ಮತ್ತು ಅಸ್ಪೃಶ್ಯರ ನಡುವೆ ಒಳ್ಳೆಯ ಭಾವನೆ ಮೂಡಬೇಕೆಂದು ಈ ಕಥೆಯ ಮೂಲಕ ಅವರು ಹೇಳಲು ಬಯಸುತ್ತಾರೆ. ಹರಳಯ್ಯ-ಮಧುವರಸರ ಕಥೆಯನ್ನು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಅವರು ಸರಳ ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಓದುಗರ ಮನಃಪರಿವರ್ತನೆಯಾಗುವಂತೆ ಕಥೆಯನ್ನು ಹೆಣೆಯಲಾಗಿದೆ. ಅನೇಕ ಶತಮಾನಗಳ ಮೊದಲು ಬಸವೇಶ್ವರರು ಸಾಧಿಸಿದ ಸಾಧನೆಯನ್ನು ಮೇಲ್ಜಾತಿಯವರು ಅನುಕರಿಸುವಂತೆ ಪ್ರೇರೇಪಿಸಲು ಹಾಗು ಕೆಳಜಾತಿಯವರಲ್ಲಿ ವಿಶ್ವಾಸವನ್ನು ಮೂಡಿಸಲು ಈ ಕಥೆಯ ಬಳಕೆಯಾಗಿರುವುದು ಗಮನೀಯ. ಈ ಕಥೆಯಿಂದ ಉತ್ತಂಗಿಯವರು ಐದು ಪಾಠಗಳನ್ನು ಗುರುತಿಸುತ್ತಾರೆ. ಮೊದಲನೆಯದು ಬಸವಣ್ಣನು ಅಸ್ಪೃಶ್ಯರ ಜೊತೆಗೆ ಒಡನಾಟವನ್ನು ಬಯಸಿದ್ದು.
ಎರಡನೆಯದು ಬಸವಣ್ಣನ ಅನುಯಾಯಿಗಳು ಬಸವಣ್ಣನಂತೆ ನಮ್ರತೆಯನ್ನು ಮೈಗೂಡಿಸಿಕೊಂಡು ನಿಗರ್ವಿಗಳಾಗುವ ಅವಶ್ಯಕತೆ. ಮೂರನೆಯದು ಬಸವಣ್ಣನು ಎಲ್ಲಾ ಅನುಯಾಯಿಗಳಲ್ಲಿ (ಹೆಂಗಸರಿರಬಹುದು ಅಥವಾ ಗಂಡಸಿರಬಹುದು) ಭೋದಿಸಿರುವ ಸಮಾನತೆಯ ಭಾವ. ನಾಲ್ಕನೇಯದಾಗಿ ಇಂತಹ ಧರ್ಮವನ್ನು (ಸಮಾನತೆಯ ಧರ್ಮ) ಎಲ್ಲಾ ಲಿಂಗಾಯತ ಗಂಡಸರು ಹಾಗು ಹೆಂಗಸರು ಪ್ರಚಾರ ಮಾಡಬೇಕಾದ ಅಂಶ. ಕೊನೆಯದಾಗಿ ಸಮಾಜದಲ್ಲಿ ಏಕತೆಯನ್ನು ಸಾಧಿಸಲು ಸ್ವಾರ್ಥವನ್ನು ತ್ಯಜಿಸುವ ಅವಶ್ಯಕತೆ.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಐಕ್ಯತೆ, ರಾಷ್ಟ್ರ ಹಾಗು ಜಾತಿಯ ಬಗ್ಗೆ ಇರುವ ವಿಚಾರಗಳಲ್ಲಿ ಬಸವಣ್ಣನವರು ಮಾದರಿಯಾಗಿ ಎದ್ದು ಕಾಣುತ್ತಾರೆ. ವ್ಯತ್ಯಾಸ-ರಹಿತ ಸಮಾಜಕ್ಕೆ ಬಸವಣ್ಣನವರು ಹಾಕಿಕೊಟ್ಟ ದಾರಿಯನ್ನು ಉತ್ತಂಗಿಯವರು ಒತ್ತಿ, ಒತ್ತಿ ತೋರಿಸುತ್ತಾರೆ. ಬಸವನು ಉತ್ತಮ ಕುಲದಲ್ಲಿ ಹುಟ್ಟಿ, ಶ್ರೀಮಂತನಾಗಿದ್ದರೂ ಸತ್ಯದ ಹಿಂಬಾಲಕನಾಗಿ ಎಲ್ಲವನ್ನೂ ತ್ಯಜಿಸಿರುವುದು ಅತ್ಯುತ್ತಮ ಉದಾಹರಣೆಯೆಂದು ಉತ್ತಂಗಿ ಘೋಷಿಸುತ್ತಾರೆ.
ಐಕ್ಯತೆಯ ಬಗ್ಗೆ ಇರುವ ಮೂರನೇ ಲೇಖನದಲ್ಲಿ ರಾಷ್ಟ್ರದ ಬಗ್ಗೆ ಯೋಚಿಸುವಾಗ, ಅವರು ಮತ್ತೊಮ್ಮೆ ಜಾತಿ ವಿಷಯದ ಬಗ್ಗೆ ಮಾತನಾಡುತ್ತಾರೆ. ಈ ಸಲ ಅದು ಜಾತಿಪದ್ಧತಿಯ ಶುದ್ಧ-ಸ್ವಚ್ಛತೆಯ ಭಾವನೆಯ ವಿರುದ್ಧ ಇರುವಂತದ್ದು. ಒಂದು ಕಡೆ ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿದು ಮತ್ತೊಂದು ಕಡೆ ಸಮುದಾಯಗಳ ಏಕತೆಯನ್ನೂ ಪ್ರತಿಪಾದಿಸುತ್ತಾರೆ. ಜಾತಿಯತೆಯ ನಿರ್ಮೂಲನವು, ರಾಷ್ಟ್ರೀಯ ಭಾವೈಕ್ಯವು ಎಂಬ ತಮ್ಮ ಮತ್ತೊಂದು ಕೃತಿಯಲ್ಲಿ ರಾಷ್ಟ್ರದ ಭವ್ಯ ಗತದ ಬಗ್ಗೆ ಮಾತನಾಡುವವರು ಆ ಗತದ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿರುವುದನ್ನು ಟೀಕೆಯ ಮೂಲಕ ನಿರೂಪಿಸುತ್ತಾರೆ.
ಭಾರತದ ಎಲ್ಲಾ ಜಾತಿಗಳು ಆರ್ಯ ಮೂಲದಿಂದ ಉದ್ಭವಿಸಿರುವುದು ಎಂಬ ಕಲ್ಪನೆ ಗತ ವೈಭವದ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಗೋಚರಿಸುವ ಅಂಶ ಎಂದು ಉತ್ತಂಗಿಯವರು ಮೂದಲಿಸಿದ್ದಾರೆ. ಅನೇಕ ಕೃತಿಗಳಲ್ಲಿ ಕಾಣಸಿಗುವ ರಾಜರು ಹಾಗು ಚಕ್ರವರ್ತಿಗಳೆಲ್ಲರೂ ಆರ್ಯರ ಮೂಲದವರೆಂದು ಈ ಕಲ್ಪನೆಯ ಮತ್ತೊಂದು ಅಂಶ. ಆದರೆ ಈ ರೀತಿಯಾಗಿ ಕಲ್ಪಿಸುವ ಜನಗಳ ಹತ್ತಿರ ಯಾವುದೇ ಸಮರ್ಥನೀಯ ಸಾಕ್ಷ್ಯಾಧಾರಗಳಿಲ್ಲವೆಂದು ಉತ್ತಂಗಿಯವರ ವಾದ. ಅನೇಕ ಜನಾಂಗಗಳ ಮಿಶ್ರಣದ ಬಗ್ಗೆ ‘ಸಾಕ್ಷ್ಯ’ಗಳನ್ನು ಒದಗಿಸುತ್ತಾ, ದ್ರಾವಿಡರು ನಾಗರೀಕತೆಯಲ್ಲಿ ಆರ್ಯರಿಗಿಂತ ಮಿಗಿಲಾದ ಪ್ರಗತಿ ಸಾಧಿಸಿಲ್ಲ ಎಂಬ ನಂಬಿಕೆಯನ್ನು ಖಂಡಿಸುತ್ತಾರೆ. ಹಿಂದೂ ಸಮಾಜದ ಅಡಿಪಾಯವು ಈ ನೆಲದ ಮೂಲನಿವಾಸಿಗಳಿಂದ ರೂಪಿಸಲ್ಪಟ್ಟಿದ್ದರೆ, ಅದರ ಮೊದಲ ಹಂತದಲ್ಲಿ ಅನಾರ್ಯರನ್ನು ಕಾಣುತ್ತೇವೆ. ಈ ಅನಾರ್ಯರು ದ್ರಾವಿಡರಾಗಿದ್ದು ಅವರು ಆರ್ಯರಿಗಿಂತ ಪುರಾತನ ಹಾಗು ದೊಡ್ಡ ಗುಂಪಿನವರು ಎಂದು ಅವರು ನಂಬಿದ್ದಾರೆ. ಕೃತಿಯನ್ನು ಬರೆಯುವ ಸಂದರ್ಭದಲ್ಲಿ ರಾಷ್ಟ್ರೀಯತೆಯ ನೇತಾರರು ಜಾತಿ-ರಹಿತ ಸಮಾಜವನ್ನು ಸ್ಥಾಪಿಸಲು ಕರೆಕೊಡುತ್ತಿದ್ದರು. ಉತ್ತಂಗಿಯವರ ಬರವಣಿಗೆ ಈ ರಾಷ್ಟ್ರೀಯ ಕರೆಗೆ ಪ್ರತಿಕ್ರಿಯೆಯಾಗಿತ್ತು. ಆದಾಗ್ಯೂ, ರಾಷ್ಟ್ರೀಯ ನೇತಾರರು ಭಾರತದ ನಾಗರಿಕತೆಯ ಬಗ್ಗೆ ಇರಿಸಿಕೊಂಡಿದ್ದ ಭಾವನೆಗಳಿಗಿಂತ ಭಿನ್ನವಾಗಿ ಉತ್ತಂಗಿಯವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಗಮನೀಯ ಅಂಶ. ದ್ರಾವಿಡ ಸಂಸ್ಕೃತಿಯ ಪ್ರಾಚೀನತೆ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿದರೂ, ಅವರು ‘ಶುದ್ಧ’ ಜಾತಿಯ ಸಿದ್ಧಾಂತವನ್ನು ನಿರಾಕರಿಸುತ್ತಾರೆ.
ಆರ್ಯರು ಜನಾಂಗೀಯ ಮಿಶ್ರಣವನ್ನು ಯಶಸ್ವಿಯಾಗಿ ತಪ್ಪಿಸಿ ತಮ್ಮ ಜಾತಿಗಳ ಶುದ್ಧತೆಯನ್ನು ಕಾಪಾಡಿಕೊಂಡರು ಎಂಬ ನಂಬಿಕೆಯನ್ನು ಅವರು ಬಲವಾಗಿ ವಿರೋಧಿಸುತ್ತಾರೆ. ದ್ರಾವಿಡ ಪ್ರಾಚೀನತೆಯ ಸಿದ್ಧಾಂತವನ್ನು ಎತ್ತಿಹಿಡಿಯುವುದರ ಮೂಲಕ ರಾಷ್ಟ್ರದ ಬಗ್ಗೆ ಇರುವ ವಿಧೇಯತೆ ಮತ್ತು ಪ್ರಾದೇಶಿಕ-ವಿಧೇಯತೆ ಹಾಗೂ ಅದರ ವಿಶಿಷ್ಟ ಸಂಸ್ಕೃತಿ ನಡುವಿನ ಘರ್ಷಣಾತ್ಮಕ ಸನ್ನಿವೇಶವನ್ನು ಅವರು ಸುಲಭವಾಗಿ ನಿವಾರಿಸುವ ಮಾರ್ಗವನ್ನು ತೋರಿಸುತ್ತಾರೆ. ಅನುಭಾವ ಸಂಸ್ಕೃತಿಯ ವಿಚಾರವೆ ಈ ಮಾರ್ಗ ಎಂದು ಪ್ರತಿಪಾದಿಸುತ್ತಾರೆ. ಅನುಭಾವ ಸಂಸ್ಕೃತಿಯು ಈ ನೆಲದ ಜನರ ಪ್ರತಿನಿಧಿ. ಕನ್ನಡಿಗರ ನೆಲಕ್ಕೆ ಸೇರದ, ಪರಕೀಯವಾಗಿರುವ ಧರ್ಮಕ್ಕೆ (ತಮ್ಮ ಕ್ರಿಶ್ಚಿಯನ್ ಧರ್ಮ) ತಮ್ಮ ಬದ್ಧತೆಯ ಸಮಸ್ಯೆಯನ್ನು ಪರಿಹರಿಸಲು ಈ ನಂಬಿಕೆ ಸಹಾಯ ಮಾಡುತ್ತದೆ. ಅವರ ನಂಬಿಕೆಯ ಪ್ರಕಾರ ಗಾಂಧಿಯ ಹಾಗೆ ಜೀಸಸ್ ಅವರೂ ಅನುಭಾವಿಗಳೇ. ಹೀಗಾಗಿ ಕನ್ನಡ ಕ್ರೈಸ್ತರು ದ್ವಿಗುಣ ಪ್ರಮಾಣದಲ್ಲಿ ಈ ಅನುಭಾವದ ವಾರಸುದಾರರು. ಉತ್ತಂಗಿಯವರು ನಂಬುವ ಹಾಗೆ ಕನ್ನಡ ನೆಲ ಹಾಗು ಕನ್ನಡ ಭಾಷೆಯನ್ನು ಬಳಸುವಲ್ಲಿ/ಕಾಪಾಡುವಲ್ಲಿ ಕನ್ನಡ ಕ್ರೈಸ್ತರ ಜವಾಬ್ದಾರಿ ಮಹತ್ತರವಾದುದು. ಕ್ರಿಸ್ತನ ಸೇವೆ, ಕನ್ನಡ ಭಾಷೆಯ ಸೇವೆ ಹಾಗು ರಾಷ್ಟ್ರದ ಸೇವೆಯ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಕನ್ನಡ ಕ್ರೈಸ್ತರ ಗುರಿಯಾಗಿರಬೇಕೆಂದು ಅವರು ಬಲವಾಗಿ ನಂಬಿದ್ದರು.
ಬನಾರಸಗೆ ಬೆತ್ಲೆಹೆಮಿನ ವಿನಂತಿ
1857ರ ನಂತರ ‘ದೇಸಿ’ ಕ್ರಿಶ್ಚಿಯನ್ನರಿಗೆ ಎರಡು ರೀತಿಯ ಒತ್ತಡಗಳಿದ್ದವು. ಒಂದು ಕ್ರಿಶ್ಚಿಯನ್ ಧರ್ಮಕ್ಕೆ ವಿಧೇಯರಾಗಿದ್ದೇವೆಂದು ತೋರಿಸಿಕೊಳ್ಳುವ ಒತ್ತಡ. ಎರಡನೇಯದು ಸ್ವಾತಂತ್ರ್ಯಕ್ಕೆ ಹೋರಾಡುವವರ ಜೊತೆಗೆ ತಾವೂ ಸಹಭಾಗಿಗಳು ಎಂದು ಹೇಳಿಕೊಳ್ಳುವ ಒತ್ತಡ. ಉತ್ತಂಗಿಯವರು ಚರ್ಚ್ ಜೊತೆಗೆ ಇದ್ದ ಸಂಬಂಧದ ಬಗ್ಗೆ, ಮಿಶಿನ್ ಶಾಲೆಗಳು ಹಾಗು ಧಾರ್ಮಿಕ ಶಿಕ್ಷಣಾಲಯಗಳನ್ನು ನಡೆಸುತ್ತಿದ್ದ ಮಿಶಿನರಿಗಳ ಜೊತೆಗಿದ್ದ ಒಡನಾಟದ ಬಗ್ಗೆ ತಮ್ಮ ‘ಆತ್ಮ ಚರಿತ್ರೆ’ಯಲ್ಲಿ ಹೇಳಿಕೊಂಡಿದ್ದಾರೆ. ಇಲ್ಲಿ ಅವರ ಶಿಕ್ಷಣದ ಬಗ್ಗೆಯೂ ವಿವರಗಳಿವೆ. ಅವರು ಸ್ವತಃ ಕ್ರಿಶ್ಚಿಯನ್ ಆಗಿದ್ದಾಗ್ಯು ಚರ್ಚ್ ಜೊತೆಗೆ ಅವರ ಸಂಬಂಧ ಅಷ್ಟೇನು ಸುಗಮವಾಗಿರಲಿಲ್ಲ. ಚರ್ಚಿನ ಮಿಶಿನರಿಗಳ ನಿರೀಕ್ಷೆಯಂತೆ ನಡೆದುಕೊಳ್ಳಲು ಅವರು ಸಂಪೂರ್ಣವಾಗಿ ಬದ್ಧರಾಗಿರಲಿಲ್ಲ. ಮಿಶಿನರಿಗಳು ಮತ್ತು ಅವರ ನಡುವಿನ ಭಿನ್ನಾಭಿಪ್ರಾಯಗಳು ಉತ್ತುಂಗಕ್ಕೇರಿದ್ದು ಅವರು ಲಿಂಗಾಯತ ಧರ್ಮದ ಬಗ್ಗೆ ತೋರಿಸಿದ ಆಸಕ್ತಿಯಿಂದ. ಕ್ರಿಸ್ತನ ವಿಚಾರಗಳನ್ನು ಬೋಧಿಸುವದಕ್ಕಿಂತ ಬಸವಣ್ಣನವರ ಧ್ಯೇಯಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ ಎಂದು ಆಪಾದನೆಗೊಳಗಾದಾಗ ಕ್ರಿಶ್ಚಿಯನ್ ಧರ್ಮಕ್ಕೆ ತಮ್ಮಲ್ಲಿರುವ ಬದ್ಧತೆಯನ್ನು ತೋರಿಸುವದಕ್ಕೋಸ್ಕರ ‘ಬೆತ್ಲೆಹೆಮ್ಸ್ ಪ್ಲೀ ಟು ಬೆನಾರಸ್’ ಎಂಬ ಕೃತಿಯನ್ನು ರಚಿಸುತ್ತಾರೆ. ಟೀಕೆಗಳ ಮಧ್ಯದಲ್ಲಿ ಅವರು ಲಿಂಗಾಯತ ಧರ್ಮ ಹಾಗು ಸರ್ವಜ್ಞನ ಬಗ್ಗೆ ಇಟ್ಟುಕೊಂಡಿದ್ದ ಆಸಕ್ತಿಯನ್ನು ಕುಂಠಿತಗೊಳಿಸಲಿಲ್ಲ. ತಮ್ಮ ಜೀವನದ ಕೊನೆಯವರೆಗೆ ಒಬ್ಬ ಒಳ್ಳೆಯ ಕ್ರಿಶ್ಚಿಯನ್‍ರಾಗಿ ಜೀವನ ಸಾಗಿಸಿದರು. ಅವರ ಆತ್ಮಕಥೆಯು ಭಾರತದಲ್ಲಿ ಬೇಕಾಗಿರುವ ಸ್ವತಂತ್ರ ಚರ್ಚ್‍ಗಾಗಿ ನಡೆಸಿದ ಹೋರಾಟದ ಬಗ್ಗೆ ಸಾಕಷ್ಟು ವಿವರಗಳನ್ನು ನೀಡುತ್ತವೆ. ಅಲ್ಲದೆ ಮಿಶಿನರಿಗಳು ಹಾಗು ‘ದೇಸಿ’ ಕಾರ್ಯಕರ್ತರ ನಡುವೆ ಇದ್ದ ವೇತನ ತಾರತಮ್ಯಗಳನ್ನು ವಿರೋಧಿಸುವ ಅನೇಕ ವಿಚಾರಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ.
ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ ಅಥವಾ ಬೆತ್ಲೆಹೆಮ್ಸ್ ಪ್ಲೀ ಟು ಬನಾರಸ್ ಹಿಂದುಗಳ ಒಂದು ಸಮೂಹಕ್ಕೆ 1918ರ ಡಿಸೆಂಬರ್ 24ರಂದು ಮೂಡಿದ ಭಾಷಣದ ಪಠ್ಯ. ಒಳ್ಳೆಯ ಅಂತರ್-ಧಾರ್ಮಿಕ ಸಂಬಂಧಗಳಿಗೆ ಕ್ರಿಸ್ತನ ಭೋದನೆಗಳನ್ನು ಒಳಗೊಳ್ಳಬೇಕೆಂದು ಇದರಲ್ಲಿ ಅವರು ಒತ್ತಾಯಿಸುತ್ತಾರೆ. ಆದಾಗ್ಯೂ, ತಮ್ಮ ಬರವಣಿಗೆಗಳು ಮತ್ತು ವಿಚಾರಗಳ ಮೂಲಕ ತಾವು ಕ್ರಿಸ್ತನ ವಿಚಾರಗಳನ್ನು ಭೋದಿಸುವ ರೀತಿಗೂ, ಮಿಶಿನರಿಗಳ ರೀತಿಗೂ ಬಹಳಷ್ಟು ವ್ಯತ್ಯಾಸಗಳಿವೆ ಎಂದು ತೋರಿಸುತ್ತಲೇ ಇದ್ದರು. ತಮ್ಮ ಧಾರ್ಮಿಕ ನಂಬಿಕೆಗಳನ್ನು ಎತ್ತಿ ಹಿಡಿಯುತ್ತಾ ಇತರರ ನಂಬಿಕೆಗಳನ್ನು ಜರಿಯುವ ಮಿಶಿನರಿಗಳ ಮಾದರಿಗಿಂತ ತಮ್ಮ ಭೋದನಾ ಕ್ರಮವು ಭಿನ್ನವಾಗಿರಬೇಕೆಂದು ಅವರು ಬಯಸಿದರು. ಬೆತ್ಲೆಹೆಮ್ಸ್ ಪ್ಲೀ ಟು ಬನಾರಸ್ 1921ರಲ್ಲಿ ಪ್ರಕಟವಾಯಿತು. ಇದು ಅಂತರ್-ಧಾರ್ಮಿಕ ಸಂಬಂಧಗಳನ್ನು ಬೆಂಬಲಿಸುವ ಉತ್ತಮ ಉದಾಹರಣೆ. ತಮ್ಮ ಭಾಷಣದ ಪ್ರಾರಂಭದಲ್ಲೆ ‘ಅನ್ಯ’ರನ್ನು ದೂಷಿಸಿ ಹೋಲಿಸುವ ಪದ್ಧತಿಯ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.
ಈ ಕೃತಿಯಲ್ಲಿ ಬಸವಣ್ಣನವರ ಬಗ್ಗೆ ಉಲ್ಲೇಖವಿಲ್ಲ. ಭಾರತೀಯನಿಗೆ ಬನಾರಸ್ ಅನ್ವಯವಾದರೆ, ಕ್ರೈಸ್ತ ಧರ್ಮಕ್ಕೆ ಬೆತ್ಲೆಹೆಮ್ ಅನ್ವಯವಾಗುತ್ತದೆ ಎಂದು ಅವರು ತೋರಿಸಿದ್ದಾರೆ. ನಂತರ ಬರೆಯಲ್ಪಟ್ಟ ಲಿಂಗಾಯತ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಎಂಬ ಕೃತಿಯಲ್ಲಿ ಮನುಷ್ಯರ ಬಗ್ಗೆ ಇರುವ ದೈವ, ಪ್ರೀತಿ, ದೇವರ ಬಗ್ಗೆ ಇರುವ ಮನುಷ್ಯರ ಪ್ರೀತಿ ಹಾಗು ಒಬ್ಬರಿಗೊಬ್ಬರ ನಡುವೆ ಇರುವ ಮನುಜ ಪ್ರೀತಿ ಇತ್ಯಾದಿಗಳನ್ನು ಬೋಧಿಸುವ ವಚನಗಳನ್ನು ವಿಂಗಡಿಸಿ, ಸಂಕಲಿಸಿದ್ದಾರೆ. ಸಂತ ಯೋಹಾನನ ಸುವಾರ್ತೆಯನ್ನು ವ್ಯಾಖ್ಯಾನಿಸುತ್ತಾ ವಚನಗಳಿಗೂ, ಸುವಾರ್ತೆಗೂ ದೈವ ಶಕ್ತಿ ಹಾಗೂ ಮನುಜ ಪ್ರೀತಿಯ ಅಂಶದ ಬಗ್ಗೆ ಇರುವ ಸಾಮ್ಯತೆಗಳನ್ನು ತೋರಿಸುತ್ತಾರೆ. ಅವರ ಪ್ರಕಾರ ಜೀಸಸ್ ಅನುಸರಿಸುವ ತತ್ವವು ಅನುಭಾವ ಪರಂಪರೆಯ ತತ್ವ. ಕ್ರಿಶ್ಚಿಯನ್ ಮಿಶಿನರಿಗಳ ಜೊತೆಗೆ ಇದ್ದ ಸಂಘರ್ಷವನ್ನು ಜೀಸಸ್‍ನು ಅನುಭಾವಿ ಪರಂಪರೆಗೆ ಸೇರಿದವನು ಎಂದು ಹೇಳುತ್ತಾ ಪರಿಹರಿಸಿಕೊಳ್ಳವ ಮಾರ್ಗವನ್ನು ಅವರು ಅನುಸರಿಸುತ್ತಾರೆ.
20ನೇ ಶತಮಾನದ ಮೊದಲಲ್ಲಿ ಅನೇಕ ಭಾರತೀಯ ಕ್ರಿಶ್ಚಿಯನ್ನರು ಪ್ರಾದೇಶಿಕ ಕ್ರಿಶ್ಚಿಯನ್ ಧರ್ಮದ ವಿಚಾರವನ್ನು ಒತ್ತಿ ಹೇಳಿದ ಹಾಗೆ ಉತ್ತಂಗಿಯವರೂ ಅದರ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ಕ್ರಿಶ್ಚಿಯನ್ ಧರ್ಮವು ಸಪ್ರಮಾಣವಾದುದೆಂದು ನಿರೂಪಿಸುತ್ತಾರೆ. ಈ ನಿರೂಪಣೆಯಲ್ಲಿ ಅವರು ಒಂದು ಅಂಶವನ್ನು ವ್ಯಕ್ತಪಡಿಸದೇ ಇರುವುದಿಲ್ಲ. ಅದೇನೆಂದರೆ ವಚನಗಳಲ್ಲಿ ಹೇಳಿರುವ ಮೌಲ್ಯಗಳನ್ನು ಜೀಸಸ್‍ನ ಬೋಧನೆಗಳು ಈಡೇರಿಸುತ್ತವೆ. ಉತ್ತಂಗಿಯವರ ಈ ನಂಬಿಕೆಯಲ್ಲಿ ಎದ್ದು ಕಾಣಿಸುವ ಅಂಶವೇನೆಂದರೆ ಭಕ್ತಿ ಪರಂಪರೆಯು ಮತ್ತು ಕ್ರಿಶ್ಚಿಯನ್ ಬೋಧನೆಗಳು ಸಮಕಾಲೀನ ಸಮಾಜದ ತಾರತಮ್ಯಗಳನ್ನು ತೊಡೆದು ಹಾಕುವ ಸಾಮರ್ಥ್ಯವನ್ನು ಹೊಂದಿವೆ.





Comments 7
ಸಾ. ದಯಾಶಂಕರ
Oct 25, 2025ಉತ್ತಂಗಿ ಚನ್ನಪ್ಪನವರ ಜೀವನದ ಪ್ರಮುಖ ಮಗ್ಗಲುಗಳನ್ನು ಪರಿಚಯಿಸಿದ ಲೇಖಕರಿಗೆ ವಂದನೆಗಳು.
Ashok P
Oct 27, 2025ಲೇಖನ ಚೆನ್ನಾಗಿದೆ. ಉತ್ತಂಗಿಯವರು ಲಿಂಗಾಯತ ಧರ್ಮದತ್ತ ಒಲಿಯಲು ಕಾರಣವೇನಿರಬಹುದು?
ಮಹೇಶ್ ಕುಮಾರ್
Oct 28, 2025ಚನ್ನಪ್ಪನವರು ಎದುರಿಸಿದ ಸವಾಲುಗಳನ್ನು ಓದಿ ಆಶ್ಚರ್ಯವಾಯಿತು. ಎಂತಹ ಮುತ್ಸದ್ದಿ, ಎಷ್ಟು ಆಳವಾದ ಅಧ್ಯಯನ ಇರುವವರು. ನಿಜಕ್ಕೂ ಅವರು ಜಾತ್ಯತೀತರು.
ಪ್ರಸನ್ನ ಸಿ
Oct 28, 2025ಕನ್ನಡ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಮೂರನೇ ಪೀಳಿಗೆಯ ವಿದ್ಯಾವಂತ ವ್ಯಕ್ತಿಯಾಗಿದ್ದ ಉತ್ತಂಗಿಯವರು ದಿಟ್ಟವಾಗಿ ನಾಡುನುಡಿಯ ಬಗೆಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಮೆಚ್ಚುವಂತಹ ಸಂಗತಿ. ಅವರ ಕೃತಿಗಳು ಓದಲು ಎಲ್ಲಿ ಸಿಗುತ್ತವೆ ಸರ್?
ರವೀಂದ್ರ ನಾಯಕ್
Oct 28, 2025ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ ಅಥವಾ ಬೆತ್ಲೆಹೆಮ್ಸ್ ಪ್ಲೀ ಟು ಬನಾರಸ್- ಕುತೂಹಲಕಾರಿ ಟೈಟಲ್. ಚನ್ನಪ್ಪನವರು ಗಾಂಧೀಜಿ ಮತ್ತು ಬಸವಣ್ಣ ಮತ್ತು ಸರ್ವಜ್ಞರ ಬಗೆಗೆ ವಿಶೇಷ ಆಸಕ್ತಿಯುಳ್ಳವರಾಗಿದ್ದರು. ಅವರ ಬರಹಗಳನ್ನು ಯಾವುದಾದರೂ ವಿಶ್ವವಿದ್ಯಾಲಯ ಪ್ರಕಟ ಮಾಡಿದೆಯಾ?
ಅಂಜಲಿ ಶಿವಕುಮಾರ್
Oct 28, 2025ತಮ್ಮನ್ನು ತಾವು ‘ತಿರುಳ್ಗನ್ನಡದ ತಿರುಕ’ ಎಂದು ಕರೆದುಕೊಂಡ ಉತ್ತಂಗಿಯವರ ಕನ್ನಡಪ್ರೇಮ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಸಂಸ್ಕೃತ ಭಾಷೆಯಿಂದ ಹೊರತಾದ ಕನ್ನಡದ ಸತ್ವಕ್ಕಾಗಿ ಜೀವನ ಸವೆಸಿದ ಅವರ ನಡೆ ಕನ್ನಡಿಗರಿಗೆ ಮಾದರಿಯಾಗಿರಲಿ.
ನಾಗಭೂಷಣ ರಬಕವಿ
Oct 29, 2025“ಕನ್ನಡ ಸಾಂಸ್ಕೃತಿಕ ಜಗತ್ತಿನ ಬಗ್ಗೆ ಉತ್ತಂಗಿಯವರಿಗೆ ಒಲವಿತ್ತೇ ಹೊರತು ಆ ಭಾಷೆಯ ಅಪೂರ್ವತೆಯ ಬಗ್ಗೆ ಅಲ್ಲ” ಎಂದು ಲೇಖನದಲ್ಲಿದೆ. ಹಾಗೆಂದರೇನು ಸ್ಪಷ್ಟವಾಗಲಿಲ್ಲಾ.