Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಜಾತಿಗಳು ಬೆರೆಯದೆ ಸುಖವಿಲ್ಲ
Share:
Articles September 13, 2025 ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ

ಜಾತಿಗಳು ಬೆರೆಯದೆ ಸುಖವಿಲ್ಲ

ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ ..
ಬಲ್ಲವ ಬಲ್ಲವನಲ್ಲಿಯಲ್ಲದೆ ಒಳ್ಳೆಯ ಗುಣವಿಲ್ಲ
ಭಟ ಮುಗ್ಗಿದಡೆ ತಿಳಿದ ಭಟ ಕೈ ಹಿಡಿದೆತ್ತಿ ಇದಿರಾಗೆಂದಡೆ
ಊಣೆಯವೆಲ್ಲಿ ಅಡಗಿತ್ತು ಕೇಳುವ ಬನ್ನಿ ಅರ್ಕೆಶ್ವರಲಿಂಗವ.

[ನಿಹಿತ= ಸರಿಯಾಗಿ ಇರಿಸಿದ, ಪೂರ್ಣವಾದ; ಮುಗ್ಗಿದಡೆ= ಮುಗ್ಗರಿಸು; ಊಣೆಯ= ಕೊರತೆ, ಅಪೂರ್ಣತೆ, ತಪ್ಪು]
ಇದು ಮಧುವಯ್ಯನವರ ವಚನ.
ಒಂದು ಜಾತಿ ಮತ್ತೊಂದು ಜಾತಿಯೊಡನೆ ಬೆರೆಯದಿದ್ದರೆ ಪೂರ್ಣ ಸುಖವಾಗಲಿ, ತೃಪ್ತಿಯಾಗಲಿ ಇಲ್ಲ. ಇದನ್ನು ಬಲ್ಲವರಲ್ಲಿ ಮಾತ್ರ ಒಳ್ಳೆಯ ಗುಣವಿರುತ್ತದೆ. ಎದುರಿಗೆ ನಿಂತು ಕಾದುತ್ತಿರುವ ಭಟ ಮುಗ್ಗರಿಸಿದರೆ ಅವನ ಕೈ ಹಿಡಿದು ಎತ್ತಿ, ಮತ್ತೆ ಹೋರಾಟಕ್ಕೆ ಸಜ್ಜುಗೊಳಿಸಿದರೆ ಅದರಲ್ಲಿ ತಪ್ಪೇನು, ಕೊರತೆಯೇನು? ದೇವರನ್ನೇ ಕೇಳೋಣ ಬನ್ನಿ.

ನಮ್ಮದಲ್ಲದ ಜಾತಿಯ ಬಗ್ಗೆ ದ್ವೇಷವಿದ್ದರೆ, ನಮ್ಮದಲ್ಲದ ಜಾತಿಯೊಡನೆ ಕೂಡಿ, ಬೆರೆತು ಬದುಕದಿದ್ದರೆ ಪೂರ್ತಿಯಾದ ಸುಖವಿರದು. ಇದನ್ನು ಬಲ್ಲವರಲ್ಲಿ ಮಾತ್ರ ಒಳ್ಳೆಯತನವಿರುತ್ತದೆ. ಅದೇನು ಎಂದರೆ, ಹೋರಾಟದಲ್ಲಿ ಎದುರಾಳಿ ಮುಗ್ಗರಿಸಿದಾಗ ಅವನ ಕೈ ಹಿಡಿದು ಎತ್ತಿ, ಸುದಾರಿಸಿಕೊಳ್ಳಲು ಅವಕಾಶ ಕೊಟ್ಟು ಆಮೇಲೆ ಹೋರಾಟ ಮುಂದುವರೆಸಿದರೆ ಅದರಲ್ಲಿ ತಪ್ಪೇನು?

ಈ ವಚನವು ಜಾತಿಗಳ ನಡುವೆ ಇರುವ ಸ್ಪರ್ಧೆಯನ್ನು, ನಡೆವ ಹೋರಾಟವನ್ನು ಅಲ್ಲಗಳೆಯುವುದಿಲ್ಲ. ಆದರೆ ಯುದ್ಧದಲ್ಲಿ ಎದುರಾಳಿ ಮುಗ್ಗರಿಸಿದಾಗ ಅವನನ್ನು ಉಪಚರಿಸುವ ವೀರ ಮೆಚ್ಚುಗೆ ಗಳಿಸುವ ಹಾಗೆಯೇ ಬದುಕಿನ ಹೋರಾಟದಲ್ಲೂ ಮೇಲು ಜಾತಿಗೆ ಎದುರಾದ ದುರ್ಬಲ ಜಾತಿಯನ್ನು ಸದ್ಭಾವದಿಂದ ನಡೆಸಿಕೊಳ್ಳಬೇಕು ಅನ್ನುವ ಸೂಚನೆ ಈ ವಚನದಲ್ಲಿ ಇರುವಂತೆ ತೋರುತ್ತದೆ. ಸಮಾಜದ ಸುಧಾರಣೆಯಲ್ಲಿ ದುರ್ಬಲ ಜಾತಿಗಳ ಜವಾಬ್ದಾರಿಗಿಂತ ಮೇಲು ಜಾತಿಗಳ ಜವಾಬ್ದಾರಿ ದೊಡ್ಡದು. ನಮ್ಮ ಸಮಾಜದ ಈಗಿನ ಪರಿಸ್ಥಿತಿಗೆ ಬರೆದ ಭಾಷ್ಯದಂತಿದೆ ಈ ವಚನ.

ಸುಳ್ಳು, ಹಸಿವೆ, ದೇವರು

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು | ನೀನೆನ್ನ ಜರಿದೊಮ್ಮೆ
ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥ.

ಇದು ಜೇಡರ ದಾಸಿಮಯ್ಯನವರ ವಚನ.
ದೇಹವಿರುವ ಮನುಷ್ಯರಿಗೆ ಹಸಿವಾಗುತ್ತದೆ. ದೇಹವಿರುವ ಮನುಷ್ಯರು ಹಸಿವನ್ನು ನೀಗಿಕೊಳ್ಳಲು ಸುಳ್ಳು ಹೇಳುತ್ತಾರೆ. ದೇಹ ಪಡೆದಿರುವ ಮನುಷ್ಯನೆಂದು ನನ್ನನ್ನು ನಿಂದಿಸದಿರು, ಬೈಯದಿರು. ದೇವರೇ, ನೀನು ನನ್ನ ಹಾಗೆ ಒಂದು ಸಲ ದೇಹವನ್ನು ಪಡೆದುಕೊಂಡು ಬದುಕಿ ನೋಡು.

ಈ ವಚನವು ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನದ ಬೆನ್ನೆಲುಬಿನ ಹಾಗಿರುವ ವಚನ. ದೇಹ ಇರುವವರೆಗೆ ಹಸಿವು ಇದ್ದೇ ಇರುತ್ತದೆ. ಅದನ್ನು ನೀಗಿಸಿಕೊಳ್ಳಲು ಸುಳ್ಳು ಹೇಳದೆ, ಕಳ್ಳತನ ಮಾಡದೆ, ಅನ್ನ ಸಂಪಾದಿಸಿಕೊಳ್ಳಲು ಈ ಲೋಕದಲ್ಲಿ ಎಲ್ಲ ಮನುಷ್ಯರಿಗೂ ಸಾಧ್ಯವಾಗದು. ಅಂಥ ಪರಿಸ್ಥಿತಿ ಸೃಷ್ಟಿಮಾಡಿಕೊಂಡಿದ್ದೇವೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಸಿವು ಅನ್ನುವುದನ್ನು ನಮ್ಮ ಎಲ್ಲ ಬಯಕೆಗಳಿಗೂ ವಿಸ್ತರಿಸಿ ನೋಡಿ. ಆಗ ಕಾಮ, ಲಾಭ, ಸುಖ ಇತ್ಯಾದಿಗಳೆಲ್ಲವೂ ಹಸಿವೆಯೇ ಆಗುತ್ತವೆ. ಸುಳ್ಳು ಹೇಳದೆ, ಕದಿಯದೆ ಈ ಹಸಿವೆಗಳನ್ನು ನೀಗಿಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಾಗುವಂಥ ಲೋಕದಲ್ಲಿ ನಾವು ಇದ್ದೇವೆಯೇ? ಅಥವಾ ಈ ಹಸಿವುಗಳನ್ನು ನೀಗಿಕೊಳ್ಳದೆ ಬದುಕಲು ಸಾಧ್ಯವೇ? ಹಾಗಾಗಿ ಸುಳ್ಳು ಹೇಳುತ್ತೀಯ, ಕದಿಯುತ್ತೀಯ ಎಂದು ʻನೈತಿಕ ನಿಂದನೆʼಯಲ್ಲಿ ತೊಡಗುವವ ದೇವರಾಗಲು ಸಾಧ್ಯವೇ ಇಲ್ಲ. ಅನೈತಿಕತೆ ವ್ಯಕ್ತಿಯ ಇಚ್ಛೆಯಿಂದ ಹುಟ್ಟುವುದಲ್ಲ, ನಾವೇ ಏರ್ಪಾಟು ಮಾಡಿಕೊಂಡ ಸಮಾಜದ ಕಟ್ಟುಪಾಡುಗಳ ಪರಿಣಾಮ. ಹಾಗಾಗಿಯೇ ಬಸವಣ್ಣನವರ ವಚನ ಹೇಳುವ ಆದರ್ಶಗಳನ್ನು ಪಾಲಿಸುವುದು ಎಷ್ಟು ಕಷ್ಟ ಎಂದು ಈ ವಚನ ಹೇಳುವಂತಿದೆ.

ಕಾಲಕ್ಕೆ, ದೇಶಕ್ಕೆ ಅನುಗುಣವಾಗಿರುವ ನೀತಿಯನ್ನೂ ಮೀರಿದ್ದು ಮನುಷ್ಯರ ಬದುಕು. ಅದನ್ನು ಯಾವ ಕಾರಣಕ್ಕೂ, ಅದರಲ್ಲೂ ವ್ಯಕ್ತಿಗಳ ಗುಣ ಸ್ವಭಾವಗಳ ಕಾರಣಕ್ಕೆ ನಿಂದಿಸಬಾರದು ಅನ್ನುವುದು ಈ ವಚನದ ಆಶಯವೆಂದು ತೋರುತ್ತದೆ.

ಮಾದಾರ ಚೆನ್ನಯ್ಯ ಮನ್ನಿಸುವುದಿಲ್ಲ

ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ
ದಾಸಯ್ಯ ಶಿವದಾನವನೆರೆಯ ನೋಡಯ್ಯಾ
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ
ಉನ್ನತ ಮಹಿಮ ಕೂಡಲಸಂಗಮದೇವಾ ಶಿವಧೋ ಶಿವಧೋ.

[ಕಕ್ಕಯ್ಯ= ಡೋಹರ [ಚಾಂಡಾಲ] ಕಕ್ಕಯ್ಯ; ಒಕ್ಕು= ಹಸನು ಮಾಡು; ದಾಸಯ್ಯ= ಜೇಡರ ದಾಸಿಮಯ್ಯ; ಶಿವದಾನ= ಮಜ್ಜಿಗೆ; ಚನ್ನಯ್ಯ= ಮಾದಾರ ಚನ್ನಯ್ಯ]
ಇದು ಬಸವಣ್ಣನವರ ವಚನ.
ಉತ್ತಮ ಜಾತಿಯಲ್ಲಿ ಹುಟ್ಟಿದೆ ಅನ್ನುವ ಹೊರೆಯನ್ನು ನನ್ನ ಮೇಲೆ ಹೊರಿಸಬೇಡ, ದೇವರೇ. ನಾನು ಉತ್ತಮ ಜಾತಿಯವನು ಅಂದುಕೊಂಡರೆ ನನಗಿಂತ ಹಿರಿಯರಾದ ಚಾಂಡಾಲ ಕಕ್ಕಯ್ಯನ ಹಸನು ಮಾಡಿದ ಧಾನ್ಯದ ಭಿಕ್ಷೆ ಇಕ್ಕುವುದಿಲ್ಲ, ಜೇಡರ ದಾಸಿಮಯ್ಯ ಕುಡಿಯಲು ಮಜ್ಜಿಗೆ ಕೊಡುವುದಿಲ್ಲ; ಶಿವನಿಗೆ ಊಟವಿಕ್ಕಿದ ಖ್ಯಾತಿಯ ಮಾದಾರ ಚನ್ನಯ್ಯ ನನ್ನ ತಪ್ಪುಗಳನ್ನು ಕ್ಷಮಿಸುವುದಿಲ್ಲ. ಇಂಥ ಹಿರೀಕರ ಕರುಣೆಯಿಲ್ಲದೆ ಬದುಕುವುದಕ್ಕಾಗದು. ಮಹಿಮಾವಂತನಾದ ಕೂಡಲಸಂಗಮಾ ನನ್ನನ್ನು ದಯವಿಟ್ಟು ಇಂಥ ಮೇಲುತನದಿಂದ ಕಾಪಾಡು.

ಮೇಲು ಜಾತಿ ಅನ್ನುವುದು ಸಾಮಾನ್ಯವಾಗಿ ಹೆಮ್ಮೆಯ ಸಂಗತಿ. ಆದರೆ ಬಸವಣ್ಣನವರಿಗೆ ಅದು ಕಷ್ಟದ ಹೊರೆ ಅನಿಸುತ್ತಿದೆ. ಯಾಕೆಂದರೆ ಮಹಾಭಕ್ತರಾದ, ಕೀಳು ಅನಿಸಿಕೊಳ್ಳುವ ಜಾತಿಗೆ ಸೇರಿದ ಮಹಾಮಹಿಮರು ಇದ್ದಾರೆ- ಚಾಂಡಾಲ ಕಕ್ಕಯ್ಯ, ಮಾದಾರ ಚೆನ್ನಯ್ಯನಂಥವರು. ನಾನು ಮೇಲು ಅಂದುಕೊಂಡು ಭ್ರಮಿಸಿ ನಡೆದರೆ ಅವರಿಂದ ನನಗೆ ತುತ್ತು ಅನ್ನ, ಗುಟುಕು ಮಜ್ಜಿಗೆ, ನಾನು ಮಾಡುವ ತಪ್ಪಿಗೆ ಕ್ಷಮೆ ದೊರೆಯದು. ನಾನು ಮೇಲು ಜಾತಿಯವನು ಅನ್ನುವುದರಿಂದ ಕಾಪಾಡು.
ಈ ವಚನವು ಈ ಹೊತ್ತಿನ ದಿನದಲ್ಲಿ ಮೇಲು ಜಾತಿಗಳ ಜನ ನಡೆದುಕೊಳ್ಳಬೇಕಾದ ರೀತಿಯ ಪಾಠದಂತಿದೆ. ಮೇಲುತನದ ಅಹಂಕಾರದಲ್ಲಿ ಮಾಡುವ ತಪ್ಪನ್ನು ಮಾದಾರ ಚೆನ್ನಯ್ಯ ಮನ್ನಿಸ ಅನ್ನುವ ಮಾತನ್ನು ನೋಡಿ. ಕೀಳು ಎಂದು ತಿಳಿಯಲಾದ ಜಾತಿಗಳ ಮೌನ ಮೇಲುಜಾತಿಯವರ ತಪ್ಪುಗಳನ್ನು ಅವರು ಕ್ಷಮಿಸುವುದಿಲ್ಲ ಅನ್ನುವುದರ ಸಂಕೇತವಷ್ಟೇ.

ಮನಸಿನ ಸೂತಕ

ಹೆಣ್ಣು ಹೆಣ್ಣಾದಡೆ ಗಂಡಿನಸೂತಕ
ಗಂಡು ಗಂಡಾದಡೆ ಹೆಣ್ಣಿನಸೂತಕ
ಮನದಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ
ಅಯ್ಯಾ ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ.

[ಗರುವ= ಶ್ರೇಷ್ಠ, ಸಮರ್ಥ; ಮೊದಲಿಲ್ಲದ= ಮೊದಲಿಗೇ ಇಲ್ಲದ]
ಇದು ಅಕ್ಕಮಹಾದೇವಿಯ ವಚನ.
ಹೆಣ್ಣು ಹೆಣ್ಣಾಗಿದ್ದರೆ ಗಂಡು ಮುಟ್ಟಬಾರದವನು, ಮೈಲಿಗೆ, ಸೂತಕ. ಹಾಗೆಯೇ ಗಂಡು ಗಂಡಾಗಿದ್ದರೆ ಹೆಣ್ಣು ಸೂತಕ. ಮನಸಿನಲ್ಲಿ ಇರುವ ಸೂತಕ ಅನ್ನುವ ಕಲ್ಪನೆ ಅಳಿದರೆ ದೇಹಕ್ಕೆ ಯಾವ ಮೈಲಿಗೆಯೂ ಸೂತಕವೂ ಇಲ್ಲ. ಹಾಗೆ ನೋಡಿದರೆ ಚೆನ್ನಮಲ್ಲಿಕಾರ್ಜುನ ಒಬ್ಬನೇ ʻಗಂಡುʼ ಇಡೀ ಜಗತ್ತು ಹೆಣ್ಣು.

ಗಂಡು ಹೆಣ್ಣುಗಳ ಮೈಯಲ್ಲಿರುವುದು ನಿಸರ್ಗ ಸಹಜ ವ್ಯತ್ಯಾಸ. ಅದನ್ನು ಹೆಚ್ಚು, ಕಡಿಮೆ, ಮೇಲು ಕೀಳು ಎಂದೆಲ್ಲ ಗುಣವಾಗಿ ಬೆಳೆಸಿದ್ದು ಮನುಷ್ಯ ಬುದ್ಧಿ, ಮನುಷ್ಯರು ಕಟ್ಟಿಕೊಂಡ ಸಮಾಜ. ಗಂಡು ಹೆಣ್ಣು ಬೇರೆ ಬೇರೆ ಅಂತಾದಮೇಲೆ ಪರಸ್ಪರ ಮುಟ್ಟುವುದಕ್ಕೆ, ಮಾತಾಡುವುದಕ್ಕೆ, ಕೂಡಿ ಆಡುವುದಕ್ಕೆ ವಿಧಿನಿಷೇಧಗಳು ಹುಟ್ಟಿಕೊಂಡವು. ಈ ʻಬಾರದುʼಗಳ ಪಟ್ಟಿ ಮನಸಿನ ಸೃಷ್ಟಿ. ಅದನ್ನು ಅಕ್ಕನ ವಚನ ʻಮನದ ಸೂತಕʼ ಅನ್ನುತ್ತದೆ. ಇಲ್ಲವೇ ಇಲ್ಲದ ಸೂತಕವನ್ನು ಕಲ್ಪಿಸಿಕೊಂಡು ಲೋಕವೆಲ್ಲ ಮರುಳಾಯಿತು ಅನ್ನುತ್ತದೆ ಈ ವಚನ. ಗಂಡು ಹೆಣ್ಣುಗಳು ಬೇರೆ ಬೇರೆ, ಹೆಚ್ಚು ಕಡಿಮೆ ಅನ್ನುವ ಮನಸೂತಕ ಇಲ್ಲವಾದ ಮೇಲೆ ಬದುಕಿನಲ್ಲೂ ಹೆಚ್ಚಿನ ನಿರಾಳ ದೊರೆಯುತ್ತದೆ. ಧಾರ್ಮಿಕ ಅನುಭಾವ ದೃಷ್ಟಿಯಿಂದ ನೋಡಿದರೆ ಚೆನ್ನಮಲ್ಲಿಕಾರ್ಜುನ ಮಾತ್ರ ಗರುವ, ಶ್ರೇಷ್ಠ, ಗಂಡು. ಇಡೀ ಲೋಕದ ಎಲ್ಲ ಜನರೂ ಅವನೆದುರು ಹೆಣ್ಣುಗಳು ಮಾತ್ರ. ಮನಸಿನಲ್ಲಿರುವ ಸೂತಕವೆಂಬ ಕಲ್ಪನೆಯನ್ನು ನೀಗಿಕೊಂಡರೆ ನಿಜದ ಬದುಕು ಹೆಚ್ಚು ಸಹನೀಯವಾಗುತ್ತದೆ.

ಎರಡು ಪೆಟ್ಟಿಗೆ: ಅರಿವು-ಕ್ರಿಯೆ

ಅಂತರಂಗದ ಅರಿವು ಬಹಿರಂಗದ ಕ್ರಿಯೆ
ಈ ಉಭಯಸಂಪುಟ ಒಂದಾದ ಶರಣಂಗೆ
ಹಿಂಗಿತ್ತು ತನುಸೂತಕ ಹಿಂಗಿತ್ತು ಮನಸೂತಕ
ಕೂಡಲಚೆನ್ನಸಂಗಯ್ಯನಲ್ಲಿ ಸಂಗವಾದುದು ಸರ್ವೇಂದ್ರಿಯ.

[ಸಂಪುಟ- ಕೋಶ, ಪೆಟ್ಟಿಗೆ]
ಇದು ಚೆನ್ನಬಸವಣ್ಣನವರ ವಚನ.
ಅಂತರಂಗದಲ್ಲಿರುವ ಅರಿವು, ಬಹಿರಂಗದ ಕ್ರಿಯೆ ಇವೆರಡೂ ಒಂದಾದ ಶರಣನಿಗೆ ಮನಸಿನ ಸೂತಕವೂ ಇಲ್ಲ, ದೇಹದ ಸೂತಕವೂ ಇಲ್ಲ. ಅಂಥ ಶರಣನ ಎಲ್ಲ ಇಂದ್ರಿಯಗಳೂ ಕೂಡಲಚೆನ್ನಸಂಗಯ್ಯನಲ್ಲಿ ಕೂಡಿರುತ್ತವೆ.

ಅರಿವು ಇರುವುದು ನಮ್ಮೊಳಗೆ. ಅದು ಕಾಣುವುದಿಲ್ಲ. ಕ್ರಿಯೆ ಇರುವುದು ಹೊರಗೆ ಕಾಣುವ ದೇಹದಲ್ಲಿ, ಹೊರಗೆ ಕೇಳಿಸುವ ನಮ್ಮ ಮಾತಿನಲ್ಲಿ, ಎಲ್ಲರ ಅರಿವಿಗೆ ಬರುವ ನಮ್ಮ ಕೆಲಸಗಳಲ್ಲಿ. ಅಂದರೆ ಕ್ರಿಯೆಯು ಹೊರಗಿನದ್ದು, ಬಹಿರಂಗವಾದದ್ದು. ಅಂತರಂಗ ಮತ್ತು ಬಹಿರಂಗಗಳ ನಡುವೆ ನಮಗೆ ಗೊತ್ತಿಲ್ಲದೆಯೇ ಒಂದು ಗೋಡೆ ಕಟ್ಟಿಕೊಂಡಿರುತ್ತೇವೆ. ನಮ್ಮ ಒಳಗು ಹೊರಗುಗಳು ಎರಡು ಪ್ರತ್ಯೇಕ ಕೋಶ, ಅಥವ ಸಂಪುಟಗಳಲ್ಲಿ ಇದ್ದಂತಿರುತ್ತವೆ. ಆ ಕಾರಣಕ್ಕೆ ಮನಸಿನ ಒಳಗೆ ಇರುವುದು ಒಂದು ಹೊರಗೆ ನುಡಿಯುವ ಮಾತು ಮಾಡುವ ಕೆಲಸ ಬೇರೊಂದು ಅನ್ನುವ ವ್ಯತ್ಯಾಸವನ್ನು ನಾವು ಅನಿವಾರ್ಯವೆಂದು ಒಪ್ಪಿದ್ದೇವೆ. ನಿಜವಾಗಿ ಇದು ನಾವು ನಮಗೇ ಮಾಡಿಕೊಳ್ಳುವ ಮೋಸ, ಸಮಾಜಕ್ಕೆ ಮಾಡುವ ಮೋಸ. ನಮ್ಮ ಒಳಗಿನ ಅರಿವು ಮತ್ತು ಹೊರಗೆ ಕಾಣುವ ಕ್ರಿಯೆಗಳ ನಡುವೆ ಅಂತರ ಇರದೆ ಎರಡೂ ಒಂದೇ ಆಗಿದ್ದರೆ ಅಂಥ ವ್ಯಕ್ತಿಗಳ ಎಲ್ಲ ಇಂದ್ರಿಯಗಳೂ ದೇವರಲ್ಲಿ ಕೂಡಿದಂತಿರುತ್ತವೆ. ‘ನುಡಿಯೊಳಗಾಗಿ ನಡೆಯುವುದು’ ಎಂಬರ್ಥದ ಬಸವಣ್ಣನವರ ನುಡಿಯೂ ಇದನ್ನೇ ಹೇಳುತ್ತದೆ. ಪ್ರಾಮಾಣಿಕತೆಯಿಂದ ತೊಂದರೆಯಾಗುವುದೆಂಬ ಭಯ, ಆತಂಕಗಳೇ ನಮ್ಮ ದ್ವಂದ್ವ ವ್ಯಕ್ತಿತ್ವಕ್ಕೆ ಕಾರಣವಾಗಿರಬಹುದು ನಮ್ಮ ಒಳಗು ಹೊರಗುಗಳು ಎರಡು ಪ್ರತ್ಯೇಕ ಪೆಟ್ಟಿಗೆಗಳಲ್ಲಿದ್ದಂತೆ ಇರಬಹುದು ಅಲ್ಲವೇ?

ಅಂದು ಇಂದು ಒಂದೇ

ಅಂದಿನವರು ನಡೆದ ದಾರಿ ಇಂದಿನವರು ನಡೆಯರು
ಇಂದಿನವರು ನಡೆದ ದಾರಿ ಅಂದಿನವರು ಕಾಣರು
ಅಂದಿಂದೆಂಬ ದ್ವಂದ್ವ ಭೇದವನೆಂದೆಂದು ಕಾಣೆ
ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.

[ಅಂದಿಂದೆಂಬ- ಅಂದು, ಇಂದು ಅನ್ನುವ]
ಇದು ಸಿದ್ಧರಾಮೇಶ್ವರರ ವಚನ.
ಹಿಂದಿನವರು ನಡೆದ ದಾರಿಯಲ್ಲಿ ಇಂದಿನವರು ನಡೆಯುವುದಿಲ್ಲ, ಇಂದಿನವರ ದಾರಿ ಎಂಥದು ಅನ್ನುವುದನ್ನು ಅಂದಿನವರು ಕಾಣಲು ಸಾಧ್ಯವಿಲ್ಲ. ಆದರೆ ಅಂದು-ಇಂದು ಅನ್ನುವ ಭೇದವನ್ನು ನಾನು ಕಾಣೆ ಎಂದು ಈ ಸಿದ್ಧರಾಮ ವಚನ ಹೇಳುತ್ತಿದೆ.
ಕಾಲ ಬದಲಾಗುತ್ತದೆ ಅನ್ನುವ ಮಾತು ನಿಜವಲ್ಲ. ಹೊರನೋಟಕ್ಕೆ ಕಾಲ ಬದಲಾದಂತೆ ಕಂಡರೂ ಮನುಷ್ಯರ ದೇಹ ಮನಸು ವರ್ತಿಸುವ ರೀತಿ, ಎದುರಿಸುವ ಪ್ರಶ್ನೆಗಳು, ಅವಕ್ಕೆ ಕಂಡುಕೊಳ್ಳುವ ಉತ್ತರಗಳು ಬೇರೆಯಾಗಿಲ್ಲ. ಹುಡುಕಾಟದ ದಾರಿಗಳೂ ಗುರಿಗಳೂ ತೀರ ಬೇರೆ ಆಗಿಲ್ಲ. ಆದ್ದರಿಂದಲೇ ಹಿಂದಿನವರ ಅನುಭವದ ಮಾತು ಇವತ್ತೂ ಕೇಳಲು ಬಯಸುತ್ತೇವೆ. ಯಾವ ಮನುಷ್ಯರೂ ಹೊಸದಾದ ತಪ್ಪು ಮಾಡಲು ಅಥವಾ ಹೊಸ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಅನ್ನುವ ವಿಚಿತ್ರವಾದರೂ ಸತ್ಯವಾದ ನಿಲುವನ್ನು ಈ ವಚನ ಹೇಳುವಂತೆ ತೋರುತ್ತಿದೆ.

ಹಾಗೆಯೇ ಕಾಲವೆನ್ನುವುದು ನಮ್ಮ ಮನಸಿನ ಸೃಷ್ಟಿ. ನಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ಅಳತೆ. ಅದು ನಮ್ಮ ಮನೋಧರ್ಮಕ್ಕೆ ತಕ್ಕ ಹಾಗೆ ವೇಗವೋ ಸಾವಕಾಶವೋ ಆದೀತು. ಕಾಲವೆನ್ನುವುದು ಸದಾ ವರ್ತಮಾನವಷ್ಟೇ, ಪ್ರಶ್ನೆಗಳೂ ಉತ್ತರಗಳೂ ವರ್ತಮಾನದವೇ ಆಗಿರುತ್ತವೆ ಯಾವಾಗಲೂ ಅನ್ನುವಂತಿದೆ ಈ ವಚನ.

ಹಿರಿದು ಕಿರಿದು ಎಂಬುದಿಲ್ಲ

ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ
ಹಿರಿಯರ ಹಿರಿಯತನದಿಂದೇನಾಯಿತ್ತು
ಹಿರಿಕಿರಿದೆಂಬ ಶಬ್ದವಡಗಿದಡೆ ಆತನೆ ಶರಣ ಗುಹೇಶ್ವರ.

ಇದು ಅಲ್ಲಮಪ್ರಭುದೇವರ ವಚನ.
ನಾನು ದೊಡ್ಡವನು, ನಾನು ದೊಡ್ಡವನು ಅನ್ನುವ ಹಿರಿಯರು ಇದ್ದಾರೆಯೇ ಜಗತ್ತಿನಲ್ಲಿ? ಹಾಗೆ ದೊಡ್ಡವರಾದರೆ ಅದರಿಂದೇನಾಯಿತು? ಹಿರಿದು ಕಿರಿದು ಅನ್ನುವ ವ್ಯತ್ಯಾಸವನ್ನು ನೀಗಿಕೊಂಡವರು ಮಾತ್ರ ಶರಣರು ಎಂದು ಅಲ್ಲಮನ ವಚನ ಹೇಳುತ್ತದೆ.
ವಯಸಿನ ಹಿರಿತನ, ಹುದ್ದೆಯ ಹಿರಿತನ, ಸಂಪತ್ತಿನ ಹಿರಿತನ, ಇಂಥ ಹಲವು ಹಿರಿತನಗಳನ್ನು ಹಿರಿಮೆ ಎಂದು ಭಾವಿಸುತ್ತೇವೆ. ಅದರಿಂದ ಲೋಕಕ್ಕೆ ಒಂದಿಷ್ಟೂ ಉಪಯೋಗವಿಲ್ಲ. ಮೇಲು- ಕೀಳು, ದೊಡ್ಡದು- ಚಿಕ್ಕದು, ಹಿರಿದು- ಕಿರಿದು ಇವೆಲ್ಲವೂ ವ್ಯವಹಾರದ ಅನುಕೂಲಕ್ಕೆ ಮಾಡಿಕೊಂಡ ಕಲ್ಪನೆಗಳೇ ಹೊರತು, ಕಾಣುವ ತೋರಿಕೆಗಳೇ ಹೊರತು ಸೃಷ್ಟಿಯಲ್ಲಿರುವ ಸತ್ಯವಲ್ಲ. ಶರಣ ಅನ್ನುವ ಮನಸ್ಥಿತಿ ಬರಬೇಕಾದರೆ ಹಿರಿದು- ಕಿರಿದು, ನಾನು ಹಿರಿಯ ಅನ್ನುವಂಥ ಭಾವವನ್ನು ಕಳೆದುಕೊಂಡಿರುವುದು ಮುಖ್ಯವಾದ ಸಂಗತಿ.

ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿಯ ಆರಂಭದಲ್ಲಿ ಹೇಳುವ ʻಇಲ್ಲಿ ಯಾವುದೂ ಮುಖ್ಯವಲ್ಲ ಯಾವುದೂ ಅಮುಖ್ಯವಲ್ಲ… ಇಲ್ಲಿ ಯಾವುದಕ್ಕೂ ಕೊನೆಯೆಂಬುದಿಲ್ಲʼ ಎಂಬ ಮಾತು ಈ ವಚನವನ್ನು ಓದಿದಾಗ ನೆನಪಾಗುತ್ತದೆ. ಅಂದಿನವರು ಹೇಳಿದ ಮಾತನ್ನೇ ಇಂದಿನವರೂ ಹೇಳುತ್ತಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಗುತ್ತದೆ.

ನಾಯಿಗೆ ಕಾಲು, ತೋಳಕ್ಕೆ ಹೊಟ್ಟೆ
ನಾಯಿಗೆ ಕಾಲು ಕೊಟ್ಟು
ತೋಳಗೆ ಹೊಟ್ಟೆಯ ಕೊಟ್ಟು
ಹುಲಿಗೆ ತಲೆಯ ಕೊಟ್ಟು
ಮೆಲಿಸಿಕೊಂಬವರೆಲ್ಲಕ್ಕು ಬಲವಂತತನವೆ
ಅದರ ಸಲೆ ಬಲುಮೆ
ಅರ್ಕೇಶ್ವರಲಿಂಗವನರಿತವರಿಗಲ್ಲದೆ ಆಗದು.

[ಸಲೆ= ವಿಶೇಷವಾದ; ಬಲುಮೆ= ಬಲ್ಮೆ, ಸಾಮರ್ಥ್ಯ, ಶಕ್ತಿ, ಹಿರಿಮೆ]
ಇದು ಮಧುವಯ್ಯನವರ ವಚನ.
ನಾಯಿಗೆ ವೇಗದ ಕಾಲು, ತೋಳಕ್ಕೆ ಹಸಿವಿನ ಹೊಟ್ಟೆ, ಹುಲಿಗೆ ತಲೆ ಇವೆ. ಇವುಗಳ ಕೈಯಲ್ಲಿ ಮೆಲಿಸಿಕೊಳ್ಳುವ ಜೀವಗಳಿಗೆ ಹಾಗೆ ಆಹಾರವಾಗುವುದೇ ಹಿರಿಮೆ ಅನಿಸುತ್ತದೆ. ಯಾಕೆ ಹೀಗೆ ಅನ್ನುವುದು ಅರ್ಕೇಶ್ವರಲಿಂಗವನ್ನು ಅರಿತವರಿಗಲ್ಲದೆ ಸಾಧ್ಯವಾಗದು.

ಈ ವಚನ ಎಲ್ಲರನ್ನೂ ಕಾಡುವ ಪ್ರಶ್ನೆಯನ್ನು ಕೇಳುತ್ತಿದೆ. ಸೃಷ್ಟಿಯಲ್ಲಿ ಹುಲಿ ಇರುವಂತೆಯೇ ಕುರಿಯೂ ಯಾಕೆ ಇದೆ? ಅಷ್ಟು ಸಶಕ್ತ ಮತ್ತು ದುರ್ಬಲ ಪ್ರಾಣಿಗಳು ಯಾಕೆ ಇವೆ? ನಮಗೆ ಹಿತವಾಗದ್ದೆಲ್ಲವೂ ಅನ್ಯಾಯ, ಅಸತ್ಯ ಅನ್ನುವ ರೀತಿಯ ಯೋಚನೆ ಬೆಳೆಸಿಕೊಂಡರೆ ಬದುಕಿನ ಸಮತೋಲ, ವಿನ್ಯಾಸ ಅರ್ಥವಾಗುವುದಿಲ್ಲ. ಈ ವಚನ ಒಂದೊಂದು ಪ್ರಾಣಿಗೂ ಇದೆ ಎಂದು ಹೇಳುವ ಗುಣ, ಅಥವಾ ವೈಶಿಷ್ಟ್ಯವೇ ಅದರ ಬದುಕಿಗೂ, ಅಪಾಯದಿಂದ ಪಾರಾಗುವುದಕ್ಕೂ, ಕೆಡುಕಿಗೆ ಸಿಲುಕುವುದಕ್ಕೂ ಕಾರಣವಾಗುತ್ತದೆ. ಕೆಡುಕು- ಒಳಿತು, ಪ್ರಬಲ- ದುರ್ಬಲ ಇವೆಲ್ಲವೂ ಯಾಕೆ ಇವೆ ಅನ್ನುವುದನ್ನು ಅರಿಯಲು ಅರ್ಕೇಶ್ವರನನ್ನು ಅರಿಯುವುದು ಅಗತ್ಯ, ಅಂದರೆ ಬದುಕನ್ನು ಕುರಿತು ಆಳವಾಗಿ ಚಿಂತಿಸಿ ನಮ್ಮ ಅರ್ಥವನ್ನು ಕಂಡುಕೊಳ್ಳುವುದು ಮುಖ್ಯ ಎಂದು ವಚನ ಹೇಳುತ್ತಿದೆ.

ಮನಕ್ಕೆ ಮಣ್ಣು, ಕಣ್ಣಿಗೆ ಹೆಣ್ಣು, ಕೈಗೆ ಹೊನ್ನು

ನೆನೆವ ಮನಕ್ಕೆ ಮಣ್ಣನೆ ತೋರಿದೆ.
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ.
ಪೂಜಿಸುವ ಕೈಗೆ ಹೊನ್ನನೆ ತೋರಿದೆ.
ಇಂತೀ ತ್ರಿವಿಧವನೆ ತೋರಿ ಕೊಟ್ಟು
ಮರಹನಿಕ್ಕಿದೆಯಯ್ಯಾ.
ಅಮರಗುಂಡದ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೆರಗಾದೆನು.

[ನೆನೆ- ಧ್ಯಾನಿಸು; ಬಿನ್ನಾಣ- ವಿಜ್ಞಾನ ಎಂಬ ಪದದ ತದ್ಭವ, ಕನ್ನಡದಲ್ಲಿ ವೈಯಾರ ಅನ್ನುವ ಅರ್ಥದಲ್ಲೂ ಬಳಕೆಯಾಗುತ್ತದೆ.]
ಪುರದ ನಾಗಣ್ಣನವರ ವಚನ. ಧ್ಯಾನ ಮಾಡುವ ಮನಸಿಗೆ ಮಣ್ಣು ಅಥವಾ ಭೂಮಿಯ ಆಸೆಯನ್ನು ತೋರಿದೆ. ನೋಡುವ ಕಣ್ಣಿಗೆ ಹೆಣ್ಣನ್ನೆ ಕಾಣಿಸಿದೆ. ಪೂಜಿಸುವ ಕೈಗೆ ಹೊನ್ನನ್ನು ತೋರಿದೆ. ಮಣ್ಣು, ಹೆಣ್ಣು ಹೊನ್ನು ಎಂಬ ಮೂರು ಥರದ ಮರವೆ ಕವಿಯುವ ಹಾಗೆ ಮಾಡಿದೆ. ನಿನ್ನ ಸೃಷ್ಟಿಯ ಈ ಬಿನ್ನಾಣ-ವಿಜ್ಞಾನಕ್ಕೆ, ವೈಯಾರಕ್ಕೆ ನಾನು ಬೆರಗಾದೆ.

ಧ್ಯಾನ ಮಾಡುವ ಮನಸಿಗೆ ಭೂಮಿಯ ಆಸೆ, ನೋಡುವ ಕಣ್ಣಿಗೆ ಹೆಣ್ಣಿನ ವೈಯಾರ, ಮಾಡುವ ಕೈಗೆ ಚಿನ್ನವನ್ನು ಹಿಡಿಯುವ ಹಂಬಲಗಳನ್ನು ಹುಟ್ಟಿಸಿ ಮನುಷ್ಯರ ಮೂರು ಮುಖ್ಯ ಅಂಗಗಳಾದ ಮನಸು, ಕಣ್ಣು, ಕೈಗಳಿಗೆ ಪ್ರಲೋಭನೆ ಒಡ್ಡಿದ್ದೀಯ. ಇದರಿಂದ ನಿನ್ನನ್ನೇ ಮರೆಯುವಂತಾಗಿದೆ. ಇದು ನಿನ್ನ ವೈಯಾರವೋ ವಿಜ್ಞಾನವೋ, ನನಗಂತೂ ಬೆರಗಾಗಿದೆ. ಸೃಷ್ಟಿಯಾದ ಜೀವಕ್ಕೆ ಸೃಷ್ಟಿಯ ತಾನಲ್ಲದ ಮತ್ತೊಂದು ಸಂಗತಿಯ ಸೆಳೆತ ಹುಟ್ಟಿ ದಾರಿ ತಪ್ಪಿದಂತಾಗುವುದು ಆಶ್ಚರ್ಯ. ಯಾಕೆ ಇಂಥ ಮರುಳು ಅರ್ಥವಾಗದು ಅನ್ನುವ ಮಾತು ಇಲ್ಲಿದೆ. ಹೆಣ್ಣು, ಹೊನ್ನು,ಮಣ್ಣು ಮಾಯೆಯಲ್ಲ, ಮನಸಿನೊಳಗಿನ ಆಸೆಯೇ ಅನ್ನುವ ಅಲ್ಲಮನ ಮಾತು ಈ ಪ್ರಶ್ನೆಗೆ ಉತ್ತರದಂತಿದೆ.

ಕುಲವೊಂದೇ

ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ.

[ಶೌಚ= ದೇಹವನ್ನು ಶುದ್ಧಮಾಡಿಕೊಳ್ಳುವುದು; ಆಚಮನ= ಬಾಯಿ ಮುಕ್ಕಳಿಸುವುದು, ನೀರನ್ನು ಹೀರುವುದು; ಷಡುದರುಶನ= ಆರು ದರ್ಶನ, ಸಿದ್ಧಾಂತಗಳು]
ಇದು ಬಸವಣ್ಣನವರ ವಚನ.
ದೇಹವನ್ನು ಶುದ್ಧಮಾಡಿಕೊಳ್ಳಲು ಮತ್ತು ಕುಡಿಯಲು ಬಳಸುವುದು ಒಂದೇ ನೀರನ್ನು. ಊರು, ಹೊಲಗೇರಿ ಎಂದು ಕರೆಯುವ ಸ್ಥಳ ಇರುವ ಭೂಮಿಯೂ ಒಂದೇ. ತನ್ನನ್ನು ತಾನು ಅರಿತವನಿಗೆ ಇರುವುದು ಮನುಷ್ಯಕುಲ ಒಂದೇ. ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ ಎಂಬ ದರ್ಶನ ಸಿದ್ಧಾಂತಗಳು ಆರು ಇದ್ದರೂ ಅವುಗಳ ಫಲವಾಗಿ ದೊರೆಯುವ ಮುಕ್ತಿ ಒಂದೇ. ಕೂಡಲಸಂಗಮನನ್ನು ಅರಿತವರಿಗೆ ಇರುವ ನಿಲುವು ಒಂದೇ.

ಈ ವಚನವು ಒಂದು ಸರಳವಾದ ಸತ್ಯವನ್ನು ನಾವು ಅನಗತ್ಯವಾಗಿ ಸಿಕ್ಕುಮಾಡಿಕೊಂಡಿರುವುದನ್ನು ಹೇಳುತ್ತಿದೆ. ನಾವು ಕುಡಿವ ನೀರು, ಉಸಿರಾಡುವ ಗಾಳಿ, ನಾವಿರುವ ನೆಲ ಎಲ್ಲವೂ ಒಂದೇ. ಅಷ್ಟು ಮಾತ್ರವಲ್ಲ ಯಾವುದೇ ಧಾರ್ಮಿಕ ಸಿದ್ಧಾಂತ ಅನುಸರಿಸಿ ಮುಕ್ತಿಯನ್ನು ಪಡೆದರೂ ಅದು ಕೂಡ ಎಲ್ಲರಿಗೂ ಒಂದೇ. ಹೀಗಿರುವಾಗ ಮೇಲು ಕೀಳುಗಳ ಭೇದ ಯಾಕೆ? ಕೂಡಲಸಂಗಮದೇವರನ್ನು ಅರಿತವರು ಎಲ್ಲವನ್ನು ಒಂದೇ ಎಂದು ಸಮಾನವಾಗಿ ಕಾಣುತ್ತಾರೆಯೇ ಹೊರತು ಮೇಲು ಕೀಳು ಎಣಿಸರು.

ಎಲ್ಲರಿಗೂ ಒಂದೇ ನಿಜ

ಅಂಬುವಿಲ್ಲದಿರ್ದಡೆ ಅಂಬುಜವನಾರು ಬಲ್ಲರು
ನೀರಿಲ್ಲದಿರ್ದಡೆ ಹಾಲನಾರು ಬಲ್ಲರು
ನಾನಿಲ್ಲದಿರ್ದಡೆ ನಿನ್ನನಾರು ಬಲ್ಲರು
ನಿನಗೆ ನಾ ನನಗೆ ನೀ
ನಿನಗೂ ನನಗೂ ಬೇರೊಂದು ನಿಜವುಂಟೆ ನಿಃಕಳಂಕ ಮಲ್ಲಿಕಾರ್ಜುನಾ.

[ಅಂಬು- ನೀರು;ಅಂಬುಜ- ನೀರಿನಲ್ಲಿ ಹುಟ್ಟಿದ್ದು, ಕಮಲ; ನಾನಿಲ್ಲದಿರ್ದಡೆ- ನಾನಿಲ್ಲದಿದ್ದರೆ]
ಇದು ಸಕಲೇಶ ಮಾದರಸರ ವಚನ.
ನೀರು ಇರದಿದ್ದರೆ ನೀರಿನಿಂದ ಹುಟ್ಟಿದ ಕಮಲ ಎಲ್ಲಿರುತ್ತದೆ? ನೀರು ಇರದಿದ್ದರೆ ಹಾಲು ಅನ್ನುವುದು ಹೇಗೆ ತಿಳಿಯುತ್ತದೆ? ನಾನು ಇರದಿದ್ದರೆ ನೀನು ಇರಲು ಹೇಗೆ ಸಾಧ್ಯ? ನಾನಿದ್ದರೆ ನೀನು, ನೀನಿದ್ದರೆ ನಾನು. ನನ್ನ ನಿಜ ಬೇರೆ, ನಿನ್ನ ನಿಜ ಬೇರೆ ಅನ್ನುವುದು ಇಲ್ಲ.

ನಾವು ಬಳಸುವ ಭಾಷೆಯಲ್ಲಿ ಅರ್ಥವೆನ್ನುವುದು ಅದಕ್ಕೆದುರಾಗಿರುವ ಇನ್ನೊಂದು ಸಂಗತಿಯನ್ನು ಆಧರಿಸಿಯೇ ರೂಪುಗೊಳ್ಳುತ್ತದೆ. ಹ್ರಸ್ವ ಇದ್ದರೆ ಮಾತ್ರ ದೀರ್ಘ ಎಂಬುದಕ್ಕೆ ಅರ್ಥ; ವ್ಯಂಜನ ಅನ್ನುವುದು ಸ್ವರಕ್ಕೆ ಎದುರಾದ್ದು ಎಂದೇ ಅದಕ್ಕೆ ಅರ್ಥ. ಹಾಗೆಯೇ ನೀರು ಇರದಿದ್ದರೆ ತಾವರೆ ಎಲ್ಲಿರುತ್ತದೆ? ನೀರು ಇರುವುದರಿಂದಲೇ ಅದಕ್ಕಿಂತ ಭಿನ್ನವಾದ ಹಾಲು ಅನ್ನುವುದಕ್ಕೆ ಅರ್ಥ. ಹಾಗೆಯೇ ನಾನು ಇದ್ದರೆ ಮಾತ್ರ ನೀನು, ನೀನು ಇದ್ದರೆ ಮಾತ್ರ ನಾನು ಅನ್ನುವುದಕ್ಕೆ ಅರ್ಥ. ಮನುಷ್ಯ ಇದ್ದರೆ ಮಾತ್ರ ದೇವರು ಅಥವಾ ದೆವ್ವ, ಅಲ್ಲವೇ! ಹಾಗಾಗಿ ಈ ಎಲ್ಲ ದ್ವಂದ್ವಗಳು ಇದ್ದರೂ ಆ ಜೋಡಿಗಳ ಎರಡೂ ಸಂಗತಿಗಳಿಗೆ ಸಮಾನವಾದ ನಿಜ ಮಾತ್ರ ಒಂದೇ. ಅದು ವಾಸ್ತವ ಸತ್ಯ.

ನಾನು ಮೇಲು/ಗಂಡು/ಸಿರಿವಂತ, ನೀನು ಕೀಳು/ಹೆಣ್ಣು/ಬಡವ ಎಂದೆಲ್ಲ ಎಷ್ಟು ವಿರೋಧಗಳನ್ನಾದರೂ ವಿಂಗಡಿಸ ಬಹುದಾದರೂ ಅವೆಲ್ಲಕ್ಕೂ ಇರುವ ಸಮಾನ ಸತ್ಯವೆಂದರೆ ಅವನ್ನೆಲ್ಲ ಒಳಗೊಂಡಿರುವ ಸಮಾಜ ಮಾತ್ರ, ಅಲ್ಲವೇ?

Previous post ಕಾಲ ಮತ್ತು ದೇಶ
ಕಾಲ ಮತ್ತು ದೇಶ
Next post ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ

Related Posts

ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
Share:
Articles

ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ

February 7, 2021 ಡಾ. ಎನ್.ಜಿ ಮಹಾದೇವಪ್ಪ
ಹಿಂದೆ ಬಹಳಷ್ಟು ಕಾಯಕಗಳು (ಉದಾಹರಣೆಗೆ, ಒಕ್ಕಲುತನ, ಕುಂಬಾರಿಕೆ, ನೇಕಾರಿಕೆ, ಇತ್ಯಾದಿ) ಶ್ರಮದಾಯಕವಾಗೇ ಇದ್ದವು. ಅವುಗಳ ಸಂಖ್ಯೆ ಸಹಾ ಸಣ್ಣದಾಗಿತ್ತು ಮತ್ತು...
ಅನುಭವ ಮಂಟಪ
Share:
Articles

ಅನುಭವ ಮಂಟಪ

April 11, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ನಾರಾಯಣ ತನ್ನ ಲೋಕದಲ್ಲಿ ಮಾಡಿದ ಮಂಟಪದಂತಲ್ಲ, ಇಂದ್ರ ನಿಜವನದಲ್ಲಿ ಮಾಡಿದ ಮಂಟಪದಂತಲ್ಲ, ವೀರಭದ್ರ ಭೀಮಾದ್ರಿಯಲ್ಲಿ ರಚಿಸಿದ ಪೂಜಾಮಂಟಪದಂತಲ್ಲ. ಇಲ್ಲಿರ್ಪ ಮಂಟಪದ ಉದಯವ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಪೊರೆವ ದನಿ…
ಪೊರೆವ ದನಿ…
August 11, 2025
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
Copyright © 2025 Bayalu