Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಲ- ಕಲ್ಪಿತವೇ?
Share:
Articles April 11, 2025 ಕೆ.ಆರ್ ಮಂಗಳಾ

ಕಾಲ- ಕಲ್ಪಿತವೇ?

ಹಿಂದಣ ಶಂಕೆಯ ಹರಿದು, ಮುಂದಣ ಭವವ ಮರೆದು,
ಉಭಯ ಸಂದುಗಡಿದು, ಅಖಂಡಬ್ರಹ್ಮವೆ ತಾನಾದ ಶರಣಂಗೆ
ಜನನವಿಲ್ಲ, ಮರಣವಿಲ್ಲ; ಕಾಲವಿಲ್ಲ, ಕಲ್ಪಿತವಿಲ್ಲ ;
ಸುಖವಿಲ್ಲ, ದುಃಖವಿಲ್ಲ; ಪುಣ್ಯವಿಲ್ಲ, ಪಾಪವಿಲ್ಲ ;
ಪ್ರಳಯ ಮಹಾಪ್ರಳಯಂಗಳು ಮುನ್ನವೇ ಇಲ್ಲ.
ಇದು ಕಾರಣವಾಗಿ,
ಅನಂತಕೋಟಿ ಅಜಾಂಡಂಗಳು ಅಳಿದುಹೋದಡೆಯೂ
ಅಖಂಡೇಶ್ವರಾ, ನಿಮ್ಮ ಶರಣ ನಿತ್ಯನಾಗಿ ಉಳಿದಿಹನು.
-ಷಣ್ಮಖಸ್ವಾಮಿ

“ಕಾಲ ಒಂದೇ ಥರ ಇರಲ್ಲ… ನನಗೂ ಸುಖ ಪಡೋ ಸಮಯ ಬರ್ತದೆ…”
“ಇಷ್ಟು ವರ್ಷ ಬೇರೆಯವರ ಇಚ್ಛೆಯಂತೇ ಬದುಕಿಬಿಟ್ಟೆ. ನನ್ನ ಇಷ್ಟದಂತೆ ಇರೋ ಧೈರ್ಯ ಬರಲೇ ಇಲ್ಲ… ಈಗ ಕಾಲ ಎಲ್ಲಿದೆ?”
“ನಾಳೆಗೆ ಅಂತ ಪೈಸಾಪೈಸಾನೂ ಕೂಡಿಟ್ಟು, ಇರೋ ಕಾಯಿಲೆನೂ ತೋರಿಸದೆ ಸತ್ತೇ ಹೋದ…”
“ಅವನ ಮೇಲಿನ ದ್ವೇಷಕ್ಕೆ ಒಂದು ಜನ್ಮಾನೂ ಸಾಕಾಗೊಲ್ಲಾ…”
“ಗ್ರಹ, ನಕ್ಷತ್ರ ಎಲ್ಲಾ ಬಲಾನೂ ಲೆಕ್ಕ ಹಾಕಿ, ಒಳ್ಳೆ ಮಹೂರ್ತದಲ್ಲೇ ಮದ್ವೆ ಮಾಡಿದ್ದು, ಏನ್ಮಾಡೋದು ನಮ್ಮ ಟೈಂ ಸುಮಾರಿತ್ತು…”
“ನಮ್ಮ ಕಾಲ ಮುಗೀತು, ಇನ್ನೇನಿದ್ರೂ ನಿಮ್ದು…”
“ಯಾವ ಕಾಲಕ್ಕೆ ಏನಾಗ್ಬೇಕೋ ಅದಾಗುತ್ತೆ ಬಿಡಿ, ನಮ್ಮ ಕೈಲಿ ಏನೂ ಇಲ್ಲ…”
“ಕಾಯ್ತಾ ಇದೀನಿ, ನೀ ನನಗೆ ಮಾಡಿದ್ದ ಮೋಸಗಳೆಲ್ಲಾ ಒಂದೊಂದೂ ನೆನಪಿದೆ, ಇವತ್ತಲ್ಲಾ ನಾಳೆ ಬಡ್ಡೀ ಸಮೇತ ತೀರಸ್ತೀನಿ…”
“ಎಲ್ರೂ ಹೋಗ್ಲೇ ಬೇಕಲ್ಲಾ, ಗೂಟಾ ಹೊಡ್ಕೊಂಡು ಇಲ್ಲೇ ಕೂರೋಕಾಗ್ತದಾ? ನಾವು ಹೋಗಲ್ಲಾ ಅಂದ್ರು ಕಾಲ ಅನ್ನೋದು ನಮ್ಮನ್ನ ಗುಡಿಸಿಹಾಕ್ತದೆ…”
“ಕಾಲ ಕೆಟ್ಹೋಯ್ತು ಕಣ್ರಿ, ಯಾರು ಯಾರನ್ನೂ ನಂಬದ ಸ್ಥಿತಿಗೆ ಬಂದ್ಬಿಟ್ಟಿದೀವಿ”

ಎಲ್ಲಾ ಕಾಲದ ಮಹಿಮೆ… ಯಾವುದಕ್ಕೂ ಸಮಯಾನೇ ಸಿಗ್ತಾ ಇಲ್ಲಾ… ಅಯ್ಯೋ, ಕಾಲ ಕಳೆಯೋದೇ ಕಷ್ಟ… ಕಾಲ ಓಡ್ತಾ ಇದೆ… ಇಲ್ಲ, ಇಲ್ಲಾ, ಕಾಲ ಹಾರ್ತಾ ಇದೆ… ಹೀಗೆ ಕಾಲ ಅಥವಾ ಸಮಯ ನಮ್ಮ ಸುತ್ತಲೂ ಇದೆ: ನಾವು ಬಳಸುವ ಭಾಷೆಯಲ್ಲಿ, ಪದೇಪದೇ ಮಾಡಿಕೊಳ್ಳುವ ನೆನಪುಗಳಲ್ಲಿ, ಒಳಗಿನ ಸ್ವಗತಗಳಲ್ಲಿ, ನಾಳಿನ ಲೆಕ್ಕಾಚಾರಗಳಲ್ಲಿ, ಕಾಣುವ ಕನಸುಗಳಲ್ಲಿ, ಹಾಕಿಕೊಳ್ಳುವ ಯೋಜನೆಗಳಲ್ಲಿ, ಬರೆದುಕೊಳ್ಳುವ ಆತ್ಮಕತೆಗಳಲ್ಲಿ! ಕಾಲದ ಬಗ್ಗೆ ಮಾತನಾಡದವರೇ ಇಲ್ಲ… ಒಂದಲ್ಲಾ ಒಂದು ರೀತಿ, ಈ ಕಾಲ ಅನ್ನೋದು, ಎಲ್ಲರ ಬಾಯಲ್ಲೂ ‘ಎಲ್ಲಾ ಕಾಲದಲ್ಲೂ’ ಹರಿದಾಡುತ್ತಿರುತ್ತದೆ. ಈ ದೃಷ್ಟಿಯಲ್ಲಿ ಸಮಯವು ಸರ್ವವ್ಯಾಪಿ! ಜಗತ್ತಿನಲ್ಲಿ ಎಲ್ಲವೂ ಸಮಯದ ಹುಕುಂನಲ್ಲಿ ನಡೆಯುವುದು ಎನ್ನುವಾಗ ಸಮಯ ಸರ್ವಶಕ್ತ!!

ಎಲ್ಲವೂ, ಎಲ್ಲರೂ ಕಾಲದ ಅಡಿಯಾಳುಗಳೆಂದೇ ಭಾವಿಸಿ, ಕಾಲದ ಅನೂಹ್ಯ ಶಕ್ತಿಯ ಬಗ್ಗೆ ಭಯಮಿಶ್ರಿತ ಅಚ್ಚರಿ ಇಟ್ಟುಕೊಂಡಿದ್ದರೆ, ಶರಣರು ಕಾಲದ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳಲಿಲ್ಲ, ಬದಲಿಗೆ ಕಾಲಕ್ಕೆ ಯಾವುದೇ ಅಸ್ತಿತ್ವ ಇಲ್ಲವೆನ್ನುತ್ತಾರೆ. ಅದು ಕೇವಲ ನಮ್ಮ ಅಹಂಕಾರವನ್ನು ಉತ್ತೇಜಿಸುವ, ಚಿಂತೆಯಲ್ಲಿ ಸಿಲುಕಿಸುವ ಮತ್ತು ಸಂಘರ್ಷವನ್ನು ಸೃಷ್ಟಿಸುವ ಮಾನಸಿಕ ರಚನೆ ಎನ್ನುತ್ತಾರೆ.‘ಕಾಲ ಕಲ್ಪಿತ’ ಎನ್ನುವ ಮಾತು ಅನೇಕ ವಚನಗಳಲ್ಲಿ ಕಂಡುಬರುತ್ತದೆ. ಷಣ್ಮುಖ ಶಿವಯೋಗಿಗಳು ಮೇಲಿನ ವಚನದಲ್ಲಿ ಹೇಳಿದ- ‘ಅನಂತಕೋಟಿ ಅಜಾಂಡಂಗಳು ಅಳಿದುಹೋದಡೆಯೂ ಶರಣ ನಿತ್ಯನಾಗಿ ಉಳಿದಿಹನು’- ಸಾಲನ್ನು ಗಮನಿಸಿ. ಎಷ್ಟೇ ಕೋಟಿಕೋಟಿ ವಿಶ್ವಗಳು ಹುಟ್ಟಿ ಹೇಳಹೆಸರಿಲ್ಲದೆ ಮರೆಯಾಗಿ ಹೋದರೂ ಶರಣರಾದವರನ್ನು ಕಾಲ ಅಳಿಸಿ ಹಾಕುವುದಿರಲಿ, ಮುಟ್ಟುವುದಕ್ಕೂ ಸಾಧ್ಯವಿಲ್ಲಾ… ಯಾಕೆಂದರೆ ಕಾಲಾತೀತನಾದ ಶರಣ ಸದಾ ನಿತ್ಯನಾಗಿ ಇರುತ್ತಾನೆ!!!

ಅದ್ಹೇಗೆ ಸಾಧ್ಯ? ನಾವೆಲ್ಲರೂ ಕಾಲವನ್ನು ಅನುಭವಿಸುತ್ತೇವೆ, ಅಳೆಯುತ್ತೇವೆ ಮತ್ತು ಅದರ ಸುತ್ತ ನಮ್ಮ ಜೀವನವನ್ನು ಯೋಜಿಸುತ್ತೇವೆ. ಅಕ್ಷರಶಃ ಗಡಿಯಾರದ ಮುಳ್ಳುಗಳೇ ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿರುತ್ತವೆ. ನಮ್ಮ ಕೆಲಸ ಕಾರ್ಯಗಳು, ಜೀವನ… ಅಷ್ಟೇ ಏಕೆ ಇಡೀ ಜಗತ್ತೇ ಕಾಲದ ಸುತ್ತ ಸುತ್ತುವಾಗ ಶರಣರು ಕಾಲವನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲವೆಂದರೆ ಹೇಗೆ? ಮೇಲಾಗಿ ಶರಣನಿಗೆ ಕಾಲವಿಲ್ಲ, ಕಲ್ಪಿತವಿಲ್ಲ, ಕಾಲದ ಮೋಸಗಳಿಲ್ಲ… ಶರಣ ಕಾಲಾತೀತ ಎಂದೆಲ್ಲಾ ಕೊಂಡಾಡುತ್ತಾರೆ. ಹಾಗಾದರೆ ಸಮಯವು-ನಾವು ಗ್ರಹಿಸಿದಂತೆ-ನಿಜವಲ್ಲವೇ? ಕಾಲದ ಅಸ್ತಿತ್ವ ಇರೋದು ಕೇವಲ ನಮ್ಮ ತಲೆಯಲ್ಲಿಯೇ??!!!

ಜೀವನದ ಅನೂಹ್ಯ, ಅವಿಭಾಜ್ಯ ಘಟಕವಾಗಿ ಮನಸ್ಸಿನಲ್ಲಿ ಸೇರಿಹೋದ ಕಾಲದ ಜಟಿಲತೆಯನ್ನು ಅರಿಯಲು ಕಾಲದ ಆಳಕ್ಕೇ ಇಳಿಯಬೇಕು… ಕಾಲ ಕಲ್ಪಿತವೆಂದರೆ ಗಡಿಯಾರ ತೋರಿಸುವ ಸಮಯದ ನಿರಾಕರಣೆ ಎಂದಲ್ಲ. ಸಮಯಕ್ಕೆ ಸರಿಯಾಗಿ ನಾವು ಬಸ್ ನಿಲ್ದಾಣಕ್ಕೆ ಹೋಗದಿದ್ದರೆ, ಶಾಲೆ ತಲುಪದಿದ್ದರೆ, ಕಚೇರಿ ಮುಟ್ಟದಿದ್ದರೆ ಫಜೀತಿ ಪಡಬೇಕಾಗುತ್ತದೆ. ಗಂಟೆ ನಿಮಿಷಗಳನ್ನು ಹೇಳುವ ಸಮಯವನ್ನು ಇಲ್ಲಿ ಅಲ್ಲಗಳೆಯುತ್ತಿಲ್ಲ. ಕಾಲಾನುಕ್ರಮದ ಸಮಯವನ್ನು ಹೊರತುಪಡಿಸಿ ನಮ್ಮೊಳಗೆ ಅಂತರ್ಗತವಾದ ಕಾಲವೊಂದಿದೆಯಲ್ಲಾ… ಅದು ಹೇಗೆ ತನ್ನ ವಿವಿಧ ಛಾಯೆಗಳಲ್ಲಿ ನಮ್ಮ ನಿತ್ಯ ಬದುಕಿನಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ ಎಂದು ಕಂಡುಕೊಳ್ಳುವುದು. ಅಂದರೆ ಗಡಿಯಾರದ ಟಿಕ್ ಟಿಕ್ ಸದ್ದಿನಾಚೆಗೆ ಕಾಲ ಹೇಗೆ ನಮ್ಮ ಬೇಕು-ಬೇಡಗಳನ್ನು, ಆಗು-ಹೋಗುಗಳನ್ನು ಪ್ರಭಾವಿಸಿದೆ; ನಾವು ಬೆನ್ನು ತಟ್ಟಿಕೊಳ್ಳುತ್ತಿರುವ ನಮ್ಮ ಈ ನಾಗರಿಕ ಸಮಾಜ ಎಷ್ಟರ ಮಟ್ಟಿಗೆ ಕಾಲದ ಅದೃಶ್ಯ ಸರಪಳಿಯಲ್ಲಿ ಸಿಲುಕಿಕೊಂಡಿದೆ; ಮುಂಬರುವ ಪೀಳಿಗೆಯೂ ಹೇಗೆ ಈಗಾಗಲೇ ಆ ಕಾಲಕ್ಕೆ ಒತ್ತೆಯಾಳಾಗಿ ತನ್ನ ಭವಿಷ್ಯವನ್ನು ಬರೆದುಕೊಂಡಿದೆ ಎನ್ನುವುದನ್ನು ತಿಳಿದುಕೊಳ್ಳದೇ ಶರಣರ ಮಾತುಗಳ ಅಂತರಾಳ ನಮಗೆ ಗೊತ್ತಾಗಲಾರದು. ಏಕೆಂದರೆ ಸಮಯವನ್ನು ಗಂಟೆ, ದಿನ, ವರ್ಷಗಳಲ್ಲಿ ಅಳೆಯುವ ಮತ್ತು ಟ್ರ್ಯಾಕ್ ಮಾಡುವ ನಮ್ಮ ಸಾಮರ್ಥ್ಯದ ಹೊರತಾಗಿ, ಅದರ ಮೂಲಭೂತ ಸ್ವರೂಪ ಮತ್ತು ಬ್ರಹ್ಮಾಂಡದೊಂದಿಗಿನ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದಿದ್ದರೆ ಕಾಲವು ನಮ್ಮ ತಿಳುವಳಿಕೆಗೆ ಸವಾಲು ಹಾಕುತ್ತಾ ನಿಗೂಢವಾಗಿಯೇ ಉಳಿಯುತ್ತದೆ. ಸಮಯದ ಸಮಗ್ರ ಸ್ವರೂಪವನ್ನು ನಿಜವಾಗಿಯೂ, ಮನಸ್ಸಿನ ಆಳಕ್ಕಿಳಿದು ಹೃದಯಪೂರ್ಣವಾಗಿ ಅರ್ಥಮಾಡಿಕೊಂಡರೆ, ಶರಣರು ಯಾಕೆ ಕಾಲ ಕಲ್ಪಿತವೆಂದು ಅದನ್ನು ಸಂಪೂರ್ಣವಾಗಿ ನಿರಾಕರಿಸಿದರು ಮತ್ತು ಹೇಗೆ ಅವರು ಕಾಲಾತೀತರು ಎನ್ನುವ ಮಹಾಸತ್ಯ ಅನುಭವಕ್ಕೆ ಗೋಚರಿಸುತ್ತದೆ!!!

ಆಧುನಿಕ ಕಾಲದ ಮಹಾಚಿಂತಕರಾದ ಜಿಡ್ಡು ಕೃಷ್ಣಮೂರ್ತಿಯವರು ಕಾಲ ತಂದೊಡ್ಡಿದ ತೊಡಕನ್ನು ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ: “ಕಾಲಾತೀತವಾದ ಸತ್ಯದ ಸೌಂದರ್ಯ, ಸಮೃದ್ಧಿ ಮತ್ತು ಮಹತ್ವವನ್ನು ನಾವು ಸಮಯದ ಸಂಪೂರ್ಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ಅನುಭವಿಸಬಹುದು. ಅಷ್ಟಕ್ಕೂ ನಾವು ಪ್ರತಿಯೊಬ್ಬರೂ ನಮ್ಮದೇ ಆದ ರೀತಿಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಭಾವವನ್ನು ಹುಡುಕುತ್ತಿದ್ದೇವೆ. ಮಹತ್ವಪೂರ್ಣವಾದ, ನಿಜವಾದ ಸಂತೋಷದ ಸಂಪತ್ತುಳ್ಳ ಜೀವನವು ಸಮಯಕ್ಕೆ ಸೇರಿದ್ದಲ್ಲ. ಪ್ರೀತಿಯಂತೆ, ಅಂತಹ ಜೀವನವು ಕಾಲಾತೀತವಾಗಿದೆ; ಮತ್ತು ಕಾಲಾತೀತವಾದದ್ದನ್ನು ಅರ್ಥಮಾಡಿಕೊಳ್ಳಲು, ನಾವು ಅದನ್ನು ಸಮಯದ ಮೂಲಕ ಸಮೀಪಿಸಬಾರದು, ಬದಲಾಗಿ ಸಮಯವನ್ನು ಅರ್ಥಮಾಡಿಕೊಳ್ಳಬೇಕು. ಕಾಲಾತೀತವನ್ನು ಸಾಧಿಸುವ, ಅರಿತುಕೊಳ್ಳುವ ಅಥವಾ ಗ್ರಹಿಸುವ ಸಾಧನವಾಗಿ ನಾವು ಸಮಯವನ್ನು ಬಳಸಿಕೊಳ್ಳಬಾರದು. ಆದರೆ ನಮ್ಮ ಜೀವನದ ಬಹುಪಾಲು ನಾವು ಮಾಡುತ್ತಿರುವುದು ಅದನ್ನೇ: ಕಾಲಾತೀತವಾದದ್ದನ್ನು ಗ್ರಹಿಸಲು ಪ್ರಯತ್ನಿಸುತ್ತಾ ಸಮಯವನ್ನು ಕಳೆಯುವುದು. ಆದ್ದರಿಂದ, ನಾವು ಸಮಯವೆಂದರೆ ಏನೆಂದು ಅಂದುಕೊಂಡಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ, ಏಕೆಂದರೆ ಹಾಗೆ ಮಾಡುವುದರಿಂದ ಸಮಯದಿಂದ ಮುಕ್ತರಾಗಲು ಸಾಧ್ಯ. ಸಮಯವನ್ನು ಭಾಗಶಃ ಅಲ್ಲ, ಒಟ್ಟಾರೆಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.”

ಕಾಲದ ಗೊಂದಲ:

ಮನುಷ್ಯರನ್ನು ಹೊರತುಪಡಿಸಿ ಎಲ್ಲಾ ಪ್ರಾಣಿ, ಪಕ್ಷಿಗಳು ನಿರಂತರ ವರ್ತಮಾನದಲ್ಲಿ ವಾಸಿಸುವುದರಿಂದ ಭೂತ, ವರ್ತಮಾನ ಮತ್ತು ಭವಿಷ್ಯದ ಅರ್ಥ ವ್ಯತ್ಯಾಸಗಳು ಅವುಗಳಿಗಿಲ್ಲ. ಆದ್ದರಿಂದ ಕಾಲದ ಕುರಿತಾಗಿನ ತನ್ನ ಜ್ಞಾನವನ್ನು ಹಿರಿಮೆಯೆಂದೇ ಮನುಷ್ಯ ಭಾವಿಸಿದ್ದಾನೆ. ಪ್ರಾಣಿಗಳಿಂದ ತನ್ನನ್ನು ನಿಜವಾಗಿಯೂ ಪ್ರತ್ಯೇಕಿಸುವ ವಿಷಯಗಳಲ್ಲಿ ಇದೂ ಒಂದೆಂಬ ಹೆಮ್ಮೆಯಲ್ಲಿದ್ದಾನೆ. ಆದರೆ ವಿವರಿಸಲು ಕೈಗೆ ಸಿಗದ ಒಂದು ಅಸ್ಪಷ್ಟ ಪರಿಕಲ್ಪನೆಯಾಗಿ ಸಮಯವು ಅನಾದಿ ಕಾಲದಿಂದ ಮನುಷ್ಯನನ್ನು ಕಾಡಿದೆ… ಸಮಯದ ಬಗ್ಗೆ ಸಂತ ಆಗಸ್ಟೀನ್ ಹೇಳಿದ ಮಾತೊಂದಿದೆ, “ಯಾರೂ ನನ್ನನ್ನು ಕೇಳದಿದ್ದರೆ, ಅದು ಏನೆಂದು ನಾನು ಬಲ್ಲೆ. ಯಾರಾದರೂ ಕೇಳಿಬಿಟ್ಟರೆ ನಿಜಕ್ಕೂ ಸಮಯವನ್ನು ವಿವರಿಸಲು ನನಗಂತೂ ಅದು ಏನಂತಲೇ ಗೊತ್ತಿಲ್ಲ” ಸಮಯದ ಸ್ವರೂಪವು ಮನುಷ್ಯನನ್ನು ದಿಕ್ಕುತಪ್ಪಿಸುತ್ತಲೇ ಇರುತ್ತದೆ. ಎಲ್ಲವನ್ನೂ, ಎಲ್ಲರನ್ನೂ ತನ್ನ ಅಗೋಚರ ಮುಷ್ಠಿಯಲ್ಲಿ ಇಟ್ಟುಕೊಂಡಂತೆ ತೋರುವ ಈ ಕಾಲ ಅನ್ನೋದು ನಿಖರವಾಗಿ ಏನು? ಹೇಗಿದೆ, ಯಾವುದರಿಂದ ಮಾಡಲ್ಪಟ್ಟಿದೆ? ಅದು ದ್ರವ್ಯ ಅಥವಾ ಯಾವುದಾದರೂ ಭೌತಿಕ ಪದಾರ್ಥವೆ? ನಿಜವಾಗಿಯೂ ಸಮಯ ಅಸ್ತಿತ್ವದಲ್ಲಿದೆ ಎಂದು ಹೇಗೆ ಗೊತ್ತುಮಾಡಿಕೊಳ್ಳುವುದು? ಸಮಯಕ್ಕೆ ಆರಂಭ ಮತ್ತು ಅಂತ್ಯವಿದೆಯೇ? ಕಾಲವು ಯಾವುದೋ ದಿಕ್ಕಿನಲ್ಲಿ ಬದಲಾಯಿಸಲಾಗದ ರೀತಿಯಲ್ಲಿ ಮುಂದುವರಿಯುತ್ತಿದೆಯೇ ಅಥವಾ ಮತ್ತೆ ಮತ್ತೆ ಪುನರಾವರ್ತಿತವಾಗುತ್ತಿದೆಯೇ? ಅದು ಯಾವಾಗ ಅಸ್ತಿತ್ವಕ್ಕೆ ಬಂದಿತು? ಬಿಗ್ ಬ್ಯಾಂಗ್‌ನ ಕ್ಷಣದಿಂದ ಶುರುವಾಯಿತೇ ಅಥವಾ ಬ್ರಹ್ಮಾಂಡವು ವಿಕಸನಗೊಂಡಂತೆ ಅದೂ ಹೊರಹೊಮ್ಮಿದೆಯೇ? ಇದು ಬ್ರಹ್ಮಾಂಡದ ಮೂಲಭೂತ ಘಟಕವೋ ಅಥವಾ ನಮ್ಮ ಮನಸ್ಸಿನಲ್ಲಿ ರೂಪು ಪಡೆದ ಭ್ರಮೆಯೋ… ಸಾವಿರಾರು ವರ್ಷಗಳ ಈ ಪುರಾತನ ಪ್ರಶ್ನೆಗಳಿಗೆ ತತ್ವಜ್ಞಾನಿಗಳು, ಉಪಾಧ್ಯಾಯರು, ಕಲಾವಿದರು ಮತ್ತು ವಿಜ್ಞಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಆ ಹುಡುಕಾಟದಲ್ಲಿ ಅನನ್ಯ ಮತ್ತು ಅದ್ಭುತ ಉತ್ತರಗಳನ್ನು ಕಂಡುಕೊಂಡಿದ್ದಾರೆ.

ಸಮಯದ ಆರಂಭದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ಸಮಯವು ಬಿಗ್ ಬ್ಯಾಂಗ್‌ನೊಂದಿಗೆ ಪ್ರಾರಂಭವಾಯಿತೆಂದು ಕೆಲವರು ಹೇಳುತ್ತಿದ್ದರೆ, ನಿರಂತರವಾಗಿ ಹಿಗ್ಗುತ್ತಿರುವ ಬ್ರಹ್ಮಾಂಡವು ಒಂದೇ ಬಿಗ್ ಬ್ಯಾಂಗ್‌ನೊಂದಿಗೆ ಪ್ರಾರಂಭವಾಗಿಲ್ಲ ಆದರೆ ವಿಕಸನ ಮತ್ತು ಸಂಕೋಚನಗಳ ಅನಂತ ಚಕ್ರದಲ್ಲಿ ಅಸ್ತಿತ್ವದಲ್ಲಿದೆ ಎಂದು ಇನ್ನೂ ಕೆಲವು ವಿಜ್ಞಾನಿಗಳು ಸೂಚಿಸುತ್ತಿದ್ದಾರೆ. ಬಿಗ್ ಬ್ಯಾಂಗ್ ವಿಶ್ವದ ಸಂಪೂರ್ಣ ಆರಂಭವಲ್ಲವಾದ್ದರಿಂದ ನಾವು ಸಮಯದ ಪ್ರಾರಂಭದ ಬಗ್ಗೆ ಸುಸಂಬದ್ಧವಾಗಿ ಮಾತನಾಡಲು ಸಾಧ್ಯವಿಲ್ಲ ಎನ್ನುತ್ತವೆ ಮತ್ತಷ್ಟು ಆಧುನಿಕ ವೈಜ್ಞಾನಿಕ ಸಂಶೋಧನೆಗಳು. ಎಲ್ಲದರ ಸಂಪೂರ್ಣ ಆರಂಭವನ್ನು ಊಹಿಸಲು ಅಥವಾ ಅಂತಹ ಆರಂಭದ ಬಗ್ಗೆ ತರ್ಕಬದ್ಧವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನಮ್ಮ ಪೂರ್ವಜರು ಸಮಯದ ಕಲ್ಪನೆಗೆ ಹೇಗೆ ಬಂದರು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.

ಮನುಷ್ಯ ಎಣಿಕೆಯ ಸಾಮರ್ಥ್ಯವನ್ನು ಪಡೆದ ನಂತರ, ದಿನಗಳು, ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಮರದ ತುಂಡಿನ ಮೇಲೆ ಗುರುತು ಹಾಕುತ್ತಾ ಲೆಕ್ಕ ಮಾಡಲು ಪ್ರಾರಂಭಿಸಿದ. ಹಗಲು-ರಾತ್ರಿಯ ಈ ಎಣಿಕೆ ಸಮಯದ ಮೊದಲ ಅಳತೆಗೋಲಾಗಿದ್ದು, ಆವರ್ತಕ ಸಮಯದ ಕಲ್ಪನೆಗೆ ಕಾರಣವಾಯಿತು. ಆದಾಗ್ಯೂ ದಿನಗಳು ಬದಲಾದವು, ಉದಾಹರಣೆಗೆ, ದಿಗಂತದಲ್ಲಿ ಸೂರ್ಯನು ಅದೇ ಸ್ಥಳಗಳಲ್ಲಿ ಉದಯಿಸಲಿಲ್ಲ ಮತ್ತು ಅಸ್ತಮಿಸಲಿಲ್ಲ, ಆದರೆ ಅದೇ ಸ್ಥಳಗಳ ಅನುಕ್ರಮವು ಮುಂದಿನ ವರ್ಷ ಪುನರಾವರ್ತನೆಯಾಯಿತು, ಇದನ್ನು ದೀರ್ಘವಾದ ಚಕ್ರವೆಂದು ಗುರುತಿಸಿಕೊಂಡ. ಸಮಯದ ಮತ್ತೊಂದು ಅಳತೆ ಎಂದರೆ ಸೂರ್ಯನು ಆಕಾಶದಲ್ಲಿ ಚಲಿಸುವಾಗ ಬದಲಾಗುವ ಅವನ ಸ್ಥಾನ ಮತ್ತು ಇರುಳಲ್ಲಿ ಚಂದ್ರನ ಚಲನೆಯಲ್ಲಾಗುವ ವ್ಯತ್ಯಾಸ. ಅದು ಯಾವಾಗ ಕತ್ತಲಾಗುತ್ತದೆಂದು, ಮತ್ತೆ ಯಾವಾಗ ಬೆಳಕು ಮೂಡುತ್ತದೆಂದು ಊಹಿಸಲು ಪ್ರಾಚೀನ ಮಾನವನಿಗೆ ಉಪಯುಕ್ತವಾಯಿತು, ಹೀಗೆ ಈ ಭೂಮಿಯ ಮೇಲೆ ಬದುಕುಳಿಯಲು ಅತ್ಯಗತ್ಯವಾಗಿರಬೇಕಾದ ಕೌಶಲ್ಯವನ್ನು ಮನುಷ್ಯ ಕ್ರಮೇಣ ರೂಢಿಸಿಕೊಂಡ. ಸಮಯವು ಕೇವಲ ಆವರ್ತವಾಗಿರಲಿಲ್ಲ. ವರ್ಷದಿಂದ ವರ್ಷಕ್ಕೆ, ದೇಹ ಮುದುಡುತ್ತದೆ, ವಯಸ್ಸಾಗುತ್ತದೆ ಮತ್ತು ಅಂತಿಮವಾಗಿ ಸಾವು ಸಂಭವಿಸುತ್ತದೆ. ಇನ್ನೂ ದೀರ್ಘಾವಧಿಯಲ್ಲಿ ಪ್ರಾಚೀನ ಸಮಾಜಗಳು ನೆಲಸಮವಾದವು, ಹಿರಿಯರು ಕಂಡಿದ್ದ ಜಲಮೂಲಗಳು ಬತ್ತಿಹೋದವು ಮತ್ತು ಪರಿಚಿತ ಪ್ರಾಣಿಗಳು ಕಣ್ಮರೆಯಾದವು. ಆದ್ದರಿಂದ ನಮ್ಮ ಆರಂಭಿಕ ಪೂರ್ವಜರಿಗೆ ಸಮಯದ ಕಲ್ಪನೆಯು ಮುಂಚಲನೆಯ ಮತ್ತು ಆವರ್ತಕ (ಸಮಯದ ಚಕ್ರ) ವಿದ್ಯಮಾನಗಳ ಸಂಯೋಜನೆಯಾಗಿ ತೋರಿತು. ಈ ಉದಾಹರಣೆಗಳಿಂದ ಸಮಯದ ಅಳತೆ ನೇರವಾಗಿ ಬದಲಾವಣೆಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಯಿತು. ಘಟನೆಗಳು ಸಂಭವಿಸುತ್ತವೆ, ಹಾಗೆ ಜರುಗುವ ಘಟನೆಗಳನ್ನು ಕ್ರಮವಾಗಿ ನೋಡುವ ಮಾರ್ಗವಾಗಿ ಸಮಯದ ಪರಿಕಲ್ಪನೆ ವಿಸ್ತಾರ ಪಡೆಯಿತು.

ಸಮಯದ ವೈಜ್ಞಾನಿಕ ತಿಳುವಳಿಕೆ ಮತ್ತು ಸಮಯದ ನಮ್ಮ ದೈನಂದಿನ ತಿಳುವಳಿಕೆ ನಡುವಿನ ಅಂತರವು ಇತಿಹಾಸದುದ್ದಕ್ಕೂ ಚಿಂತಕರನ್ನು ಗೊಂದಲಕ್ಕೆ ದೂಡುತ್ತಲೇ ಬಂದಿದೆ. ಹುಟ್ಟಿದ್ದೇವೆ; ಈಗ ಬದುಕುತ್ತಿದ್ದೇವೆ; ಮುಂದೊಂದು ದಿನ ಸಾಯುತ್ತೇವೆ… ಎಲ್ಲರಿಗೂ ಸಮಯ ಕಳೆದುಹೋಗುವ ಅರಿವಿದೆ. ಹಗಲು- ರಾತ್ರಿಯ ಪಲ್ಲಟಗಳು, ಹುಣ್ಣಿಮೆ- ಅಮವಾಸ್ಯಗಳ ಆವರ್ತನಗಳು, ಋತುಗಳ ಬದಲಾವಣೆ, ಮಕ್ಕಳು ಕಣ್ಮುಂದೆ ಬೆಳೆಯುತ್ತಿರುವುದು, ಹಿರಿಯರು ಮುಪ್ಪಾಗಿ ಮರಣಿಸುವುದು, ತನ್ನಲ್ಲೂ ದಿನದಿಂದ ದಿನಕ್ಕೆ ವಯಸ್ಸಾಗುತ್ತಿರುವ ಸೂಚನೆಗಳು… ಇವೆಲ್ಲವೂ ಮನುಷ್ಯನಲ್ಲಿ ತನ್ನ ಅಸ್ತಿತ್ವವು ಸಮಯದಿಂದ ಸೀಮಿತವಾಗಿದೆ ಎಂಬ ಭಾವನೆ ಹುಟ್ಟಿಸಿತು. ಸಮಯವು ಹೆಚ್ಚು ಸಂಕೀರ್ಣ ಮತ್ತು ನಿಗೂಢವಾಗಿ ಕಾಣತೊಡಗಿತು. ಪಾಶ್ಚಾತ್ಯ ಚಿಂತನೆಯು ಸಮಯವನ್ನು ಒಂದೇ ದಿಕ್ಕಿನಲ್ಲಿ ಚಲಿಸುವ ಬಾಣದಂತೆ ನೋಡಿದರೆ, ಪೂರ್ವದ ತತ್ತ್ವಚಿಂತನೆಗಳು ಸಮಯವನ್ನು ಪುನರಾವರ್ತಿತ ಮಾದರಿಗಳ ಅನುಕ್ರಮದ ಚಕ್ರದಂತೆ ನೋಡುತ್ತವೆ – ಋತುಗಳು, ಹಗಲು ರಾತ್ರಿ, ಹುಟ್ಟು ಸಾವು ಎಲ್ಲವೂ ಮತ್ತೆ ಮತ್ತೆ ಮರಳುತ್ತವೆ. ಈ ಆವರ್ತಕ ವಿಶ್ವ ದೃಷ್ಟಿಕೋನದಲ್ಲಿ, ಅಂತಿಮ ಗಮ್ಯಸ್ಥಾನವೆಂಬುದಿಲ್ಲ. ಅಲ್ಲಿರುವುದು ನಿರಂತರ ರೂಪಾಂತರ ಮಾತ್ರ.

ಋತುಗಳ ಹಾದುಹೋಗುವಿಕೆ ಮತ್ತು ಆಕಾಶ ಕಾಯಗಳ ಚಲನೆಗಳೊಂದಿಗೆ ಸಮಯದ ಸಂಬಂಧವಿದೆ. ಅನೇಕ ಶತಮಾನಗಳವರೆಗೆ, ಬ್ರಹ್ಮಾಂಡದ ಪ್ರಗತಿಯು ಒಂದೇ ಗಡಿಯಾರದಿಂದ ನಿಯಂತ್ರಿಸಲ್ಪಡುತ್ತದೆ ಎಂಬಂತೆ ಸಮಯವನ್ನು ನಿರಂತರ, ಸ್ವತಂತ್ರ ಶಕ್ತಿ ಎಂದು ನಂಬಲಾಗಿತ್ತು. ಅದೊಂದು ಹಿಡಿದು ನಿಲ್ಲಿಸಲಾಗದ, ಒಂದೇ ನಿಟ್ಟಿನಲ್ಲಿ ಚಲಿಸುವ ಮಾನದಂಡವೆನ್ನುವ ತಿಳುವಳಿಕೆಯು ಮುಖ್ಯವಾಗಿ ಭೌತವಿಜ್ಞಾನಿಗಳಿಗೆ ಮತ್ತು ಇತರೆ ವಿಜ್ಞಾನಿಗಳಿಗೆ ನಿಗೂಢವಾದ ಬ್ರಹ್ಮಾಂಡವನ್ನು ಭಾಗಶಃ ಬಿಚ್ಚಿಡಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಆದಾಗ್ಯೂ, ಒಂದು ಮಾನದಂಡವಾಗಿ ಅದರ ಪಾತ್ರವನ್ನು ಮೀರಿ ಸಮಯವನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನಿಗಳಿಗೆ ಕಷ್ಟಕರವಾಗಿದ್ದರೆ, ಸಮಯದ ನೈಜ ಸ್ವರೂಪದ ಪ್ರಶ್ನೆಯು ತತ್ವಜ್ಞಾನಿಗಳಿಗೆ ಇನ್ನಿಲ್ಲದಂತೆ ಬಾಧಿಸಿದೆ! ರಂಗಭೂಮಿಯ ವೇದಿಕೆಯಂತೆ ಮತ್ತು ಭೌತಿಕ ವಿದ್ಯಮಾನಗಳು ಅದರ ಮೇಲೆ ನಟಿಸುವ ನಟರು ಎಂಬುದು ಐಸಾಕ್ ನ್ಯೂಟನ್ನನ ಅನಿಸಿಕೆಯಾಗಿತ್ತು. ಇದೇ ನಂಬಿಕೆಯು ಮೂರು ಶತಮಾನಗಳಿಗೂ ಹೆಚ್ಚು ಕಾಲ ಉಳಿದುಕೊಂಡಿತ್ತು. ನಂತರ, 1905 ರಲ್ಲಿ, ಆಲ್ಬರ್ಟ್ ಐನ್‌ಸ್ಟೈನನ ವಿಶೇಷ ಸಾಪೇಕ್ಷತಾ ಸಿದ್ಧಾಂತವು ಸಮಯದ ಬಗ್ಗೆ ಯೋಚಿಸುವ ವಿಧಾನವನ್ನು ಸಂಪೂರ್ಣ ಬದಲಾಯಿಸಿತು. ಸಮಯದ ಸರಿಯುವಿಕೆಯು ಬಾಹ್ಯಾಕಾಶಕ್ಕೆ ನಿಕಟ ಸಂಪರ್ಕ ಹೊಂದಿದೆ ಎಂದು ಈಗಾಗಲೇ ತಿಳಿದಿದ್ದರೂ, ಐನ್‌ಸ್ಟೈನ್ ಸಿದ್ಧಾಂತವು ಬಾಹ್ಯಾಕಾಶ ಮತ್ತು ಸಮಯವನ್ನು ಒಂದೇ ಕ್ಷೇತ್ರಕ್ಕೆ ಸಂಯೋಜಿಸಿತು. ಐನ್‌ಸ್ಟೈನ್ ಪ್ರತಿಪಾದಿಸಿದ ವಿಶೇಷ ಸಾಪೇಕ್ಷತಾ ಸಿದ್ಧಾಂತವು (special theory of relativity) ಸಮಯವು ವ್ಯಕ್ತಿಯಿಂದ ವ್ಯಕ್ತಿಗೆ ಅವರ ಚಲನೆಯನ್ನು ಅವಲಂಬಿಸಿ ವಿಭಿನ್ನವಾಗಿ ಬದಲಾಗುತ್ತದೆ ಎಂದು ಸೂಚಿಸಿತು. ಐನ್‌ಸ್ಟೈನ್ ಅವರ ಇನ್ನೊಂದು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವು (general theory of relativity), ಒಂದು ಹೆಜ್ಜೆ ಮುಂದೆ ಹೋಗಿ, ಸಮುದ್ರ ಮಟ್ಟದ ನೆಲದ ಮೇಲಿರುವ ವ್ಯಕ್ತಿಯ ಸಮಯದ ಹರಿವು ಎತ್ತರದ ಪರ್ವತದ ತುದಿಯಲ್ಲಿರುವ ವ್ಯಕ್ತಿಗಿಂತ ಭಿನ್ನವಾಗಿದೆ ಎಂದು ತೋರಿಸಿತು. ಅಂದರೆ ಸಮಯವು ಸಾರ್ವತ್ರಿಕವಾಗಿ ಒಂದೇ ಆಗಿರುವುದಿಲ್ಲ ಎನ್ನುವ ಸತ್ಯವು ಸಮಯವು ಸಾರ್ವತ್ರಿಕವಾಗಿ ಒಂದೇ ಎಂಬ ವಾದವನ್ನು ತಳ್ಳಿ ಹಾಕಿತು. ನಾವು ನಮ್ಮ ಅನುಭವದಲ್ಲಿಯೇ ಸಮಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸರಳವಾಗಿ ನೋಡಿಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರೂ ಈ ಮೂರು ಸ್ಥಿತಿಗಳನ್ನು ಅನುಭವಿಸುತ್ತಾರೆ: ನಾವು ಎಚ್ಚರವಾಗಿರುವಾಗ ಗೊತ್ತಾಗುವ ಗಡಿಯಾರದ ಟಿಕ್ ಟಿಕ್ ಸಮಯ, ಕನಸು ಕಾಣುವ ಭ್ರಮೆಯ ಭಾಗವಾಗಿ ಸಮಯ ಮತ್ತು ನಾವು ಕನಸಿಲ್ಲದೆ ಗಾಢ ನಿದ್ರೆಯಲ್ಲಿರುವಾಗಿನ ಸಮಯದ ಅನುಪಸ್ಥಿತಿ. ಇದು ಸಮಯವು ನಮ್ಮ ಪ್ರಜ್ಞೆಯ ಸ್ಥಿತಿಗೆ ಸಂಬಂಧಿಸಿದೆ ಎಂದು ತೋರಿಸುತ್ತದೆ.

ಸಮಯ ಹರಿಯುತ್ತಿದೆಯೇ?

ಸಮಯದ ಸ್ವರೂಪದ ಬಗ್ಗೆ ಯೋಚಿಸಲು ಪ್ರಾರಂಭಿಸಿದ ಮೊದಲಿಗರಲ್ಲಿ ಒಬ್ಬರಾದ ಪ್ಲೇಟೋ, ಸಮಯವನ್ನು ಅಪೂರ್ಣ ಕ್ರಿಯಾತ್ಮಕ ಪ್ರಪಂಚದ ವಿಶಿಷ್ಟ ಲಕ್ಷಣವಾಗಿ ಗುರುತಿಸುತ್ತಾರೆ. ಇದು ಅರಿಸ್ಟಾಟಲ್‌ಗೆ ಸಮಯ ಮತ್ತು ಚಲನೆಯ ನಡುವಿನ ಸಂಪರ್ಕವನ್ನು ಅಧ್ಯಯನ ಮಾಡಲು ಕಾರಣವಾಗಿ, ಸಮಯವನ್ನು ‘ಚಲನೆಯ ಮಾಪನ’ ಎಂದು ವ್ಯಾಖ್ಯಾನಿಸುತ್ತಾರೆ. ಈ ಹೇಳಿಕೆಯು ನೈಸರ್ಗಿಕ ವಿಜ್ಞಾನಗಳ ಸಮಯದ ತಿಳುವಳಿಕೆಗೆ ಅಡಿಪಾಯ ಹಾಕುತ್ತದೆ. ಸಮಯ ಮತ್ತು ಚಲನೆ ಎರಡೂ ಒಂದೇ ಅಲ್ಲದಿದ್ದರೂ, ಚಲನೆಯಿಂದ ಸಮಯವನ್ನು ಬೇರ್ಪಡಿಸಲಾಗದು ಎಂಬ ನಿರ್ಣಯಕ್ಕೆ ಬರುತ್ತಾರೆ. ಸಂತ ಆಗಸ್ಟೀನ್ ಸಮಯವನ್ನು: ವರ್ತಮಾನ, ಭೂತಕಾಲ ಮತ್ತು ಭವಿಷ್ಯ ಎಂದು ಮೂರು ಭಾಗಗಳಲ್ಲಿ ಪ್ರತ್ಯೇಕಿಸಿ, ಇದು ಬದಲಾಗುವ ಗ್ರಹಿಕೆಗಳ ಮಾನಸಿಕ ವಿದ್ಯಮಾನವೆಂದು ವಿವರಿಸುತ್ತಾರೆ.

ಸಮಯದ ಹರಿಯುವಿಕೆಯ ಸ್ವರೂಪವನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸುವುದು ಅಸಾಧ್ಯವಾದರೂ, ನಾವೆಲ್ಲರೂ ಸಮಯಕ್ಕೆ ಬದ್ಧವಾಗಿರುವ ಅನೇಕ ಸಾಮಾನ್ಯ ಅನುಭವಗಳನ್ನು ಹಂಚಿಕೊಳ್ಳುತ್ತೇವೆ: ಭೂತಕಾಲವನ್ನು ನೆನಪಿಸಿಕೊಳ್ಳುತ್ತೇವೆ, ವರ್ತಮಾನವನ್ನು ಅನುಭವಿಸುತ್ತೇವೆ ಮತ್ತು ಭವಿಷ್ಯವನ್ನು ಊಹಿಸುತ್ತೇವೆ. ಹೀಗೆ ಮೂಲಭೂತವಾಗಿ ಸಮಯವನ್ನು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳೆಂದು ವಿಭಜಿಸಿ ನೋಡಲಾಗುತ್ತದೆ. ಭೂತಕಾಲದಿಂದ ಭವಿಷ್ಯದ ಘಟನೆಗಳತ್ತ ನಡೆಯುವ ಸ್ಪಷ್ಟ ಪ್ರಗತಿಯಂತೆ ಕಾಲದ ನಡಿಗೆ ತೋರುವುದರಿಂದ ಸ್ಥಿರ ಭೂತಕಾಲದಿಂದ ಮೂರ್ತ ವರ್ತಮಾನಕ್ಕೂ ಅಲ್ಲಿಂದ ಅನಿರ್ದಿಷ್ಟ ಭವಿಷ್ಯದವರೆಗೆ, ಸಮಯವು ನಿರ್ದಾಕ್ಷಿಣ್ಯವಾಗಿ ಹರಿಯುತ್ತಿದೆ ಎಂದು ಭಾಸವಾಗುತ್ತದೆ. ಇವತ್ತಿನ ನಾವು ಮತ್ತೆ ನಿನ್ನೆಯ ದಿನಕ್ಕೆ ಹೋಗುವುದಿಲ್ಲವಾದ್ದರಿಂದ ಸಮಯವು ಸದಾ ಮುಂದೆ ಚಲಿಸುವ ಬಾಣದಂತೆ ತೋರುತ್ತದೆ. “ಸಮಯವೂ ನಾವು ಬದುಕಿರುವ ಸ್ಪೇಸ್ ನ ಹಾಗೆ ಒಂದು ಆಯಾಮ. ಆದರೆ ಸ್ಪೇಸಿಗೂ ಇದಕ್ಕೂ ಇರುವ ವ್ಯತ್ಯಾಸವೆಂದರೆ ಸ್ಪೇಸಿನ ಆಯಾಮದಲ್ಲಿ ನಾವು ಬಲ ಮತ್ತು ಎಡಕ್ಕೆ ಹೆಜ್ಜೆ ಹಾಕಲು ಸಾಧ್ಯವಾಗುವಂತೆ, ಕಾಲದ ಆಯಾಮದಲ್ಲಿ ಹಿಂದೆ ಮುಂದೆ ಎರಡೂ ಕಡೆ ಹೋಗಲು ಸಾಧ್ಯವಿಲ್ಲಾ. ಕೇವಲ ಮುಂದಕ್ಕೆ ಒಂದೇ ದಿಕ್ಕಿನಲ್ಲಿ ಹೋಗಬೇಕಾಗುತ್ತದೆ” ಎಂದುಕೊಂಡಿದ್ದ ವಿಜ್ಞಾನಿಗಳು ನಾವು ನಿಜವಾಗಿಯೂ ಸಮಯದ ಮೂಲಕ ಚಲಿಸುತ್ತಿದ್ದೇವೆಯೇ, ಸಮಯ ಅಥವಾ ಅದರ ಬಗೆಗಿನ ನಮ್ಮ ಅನುಭವವು ನಿಜವೋ, ಭ್ರಮೆಯೋ ಎಂದು ಮತ್ತೇ ಕೂಲಂಕಶವಾಗಿ ಪರಿಶೀಲನೆಗೆ ಒಡ್ಡಿದರು. ಅಷ್ಟಕ್ಕೂ ಸಮಯದ ಹರಿವನ್ನು ಗಮನಿಸಲಿಕ್ಕೆ ಆಗುತ್ತದೆಯೇ? ನಮ್ಮ ನೆನಪಿನಲ್ಲಿರುವ ಹಿಂದಿನ ಸ್ಥಿತಿಗಳಿಗಿಂತ ಜಗತ್ತಿನ ಮುಂದಿನ ಸ್ಥಿತಿಗಳು ಭಿನ್ನವಾಗಿವೆ ಎಂಬುದು ನಮ್ಮ ಗಮನಕ್ಕೆ ಬರುತ್ತಿರುತ್ತದೆ. ಇದಕ್ಕೂ, ಸಮಯಕ್ಕೂ ಸಂಬಂಧವಿದೆಯೇ ಎನ್ನುವ ಪ್ರಶ್ನೆಗಳೂ ಎದ್ದವು.

ಕಾಲದ ಸರಿಯುವಿಕೆಯ ಗ್ರಹಿಕೆಯು ವ್ಯಕ್ತಿನಿಷ್ಠವಾದದ್ದು. ಕಾಯುವ ಕ್ಷಣ ಅಥವಾ ಹಸಿವಾದಾಗ ಸಮಯ ಸಾಗುತ್ತಲೇ ಇಲ್ಲವೆನ್ನುವ ಭಾವನೆ ಹುಟ್ಟಿಸುತ್ತದೆ. ನಮಗೆ ಆಸಕ್ತಿಯಿರುವ ಮಾತುಗಳಲ್ಲಿ, ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಕಾಲ ಸರಿಯುವುದೇ ಗೊತ್ತಾಗುವುದಿಲ್ಲ. ನಮಗೆ ಖುಷಿ ಕೊಡುವ ಆಹ್ಲಾದಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಯ ವೇಗವಾಗಿ ಹೋಗುತ್ತದೆ, ಅದೇ ಬೇಸರದ ಅವಧಿಗಳಲ್ಲಿ ಅದು ವಿಳಂಬವಾಗುತ್ತದೆ. ಹೀಗೆ ಕಾಲದ ಹರಿಯುವಿಕೆಯು ನಮ್ಮ ಮೆದುಳು ಜಗತ್ತನ್ನು ಹೇಗೆ ಅನುಭವಿಸುತ್ತದೆ ಎಂಬುದಕ್ಕೆ ಸಂಬಂಧಿಸಿರುವಂತಹದು. ತಕ್ಷಣದ ಪ್ರಸ್ತುತ ಮಾತ್ರ ಅಸ್ತಿತ್ವದಲ್ಲಿದೆ ಮತ್ತು ಇದು ಕೇವಲ ಒಂದು ಸೆಕೆಂಡ್ ಅನ್ನು ಮಾತ್ರ ಒಳಗೊಂಡಿದೆ. ನಾವು ಇದನ್ನು ‘ಪ್ರಸ್ತುತ’ ಎಂದು ಕರೆಯುತ್ತೇವೆ, ಆದರೆ ತಾಂತ್ರಿಕವಾಗಿ, ಮನೋವಿಜ್ಞಾನಿಗಳು, ತತ್ವಜ್ಞಾನಿಗಳು, ಭೌತಶಾಸ್ತ್ರಜ್ಞರು ಮತ್ತು ಮೆದುಳಿನ ಸಂಶೋಧಕರು ಇದನ್ನು ‘ಅನುಭವ’ ಎಂದು ಕರೆಯುತ್ತಾರೆ. ಮುಂದಿನ ಕೆಲವು ಸೆಕೆಂಡುಗಳು, ನಿಮಿಷಗಳು ಅಥವಾ ಗಂಟೆಗಳಲ್ಲಿ ಏನಾಗುತ್ತದೆ ಎಂಬುದರ ಕುರಿತು ಭವಿಷ್ಯ ನುಡಿಯುವ ಮೂಲಕ ನಮ್ಮ ಮೆದುಳು ಅದರ ಸಂಗ್ರಹಿತ ನೆನಪುಗಳಿಂದ ಮುಂದಿನ ನಡೆಗಳನ್ನು ಊಹಿಸುತ್ತದೆ. ಹೀಗೆ ಸಮಯದ ಹರಿವು ತಕ್ಷಣದ ನೆನಪುಗಳ ಅನುಕ್ರಮ, ಈಗ ನಮ್ಮ ಅನುಭವ ಮತ್ತು ಮುಂಬರುವ ಸೆಕೆಂಡುಗಳಲ್ಲಿ ನಾವು ಊಹಿಸಬಲ್ಲ ಘಟನೆಗಳ ಅನುಕ್ರಮವನ್ನು ಆಧರಿಸಿದ ಭ್ರಮೆ… ನಾವು ಅನುಭವಿಸುವ ಘಟನೆಗಳು ಸಾಮಾನ್ಯವಾಗಿ ನಮ್ಮ ನೆನಪುಗಳಲ್ಲಿ ಅಚ್ಚೊತ್ತಿದ್ದು, ಅವು ನಮಗೆ ಘಟನೆಗಳ ದಾಖಲೆಗಳನ್ನು ಒದಗಿಸುತ್ತವೆ. ಮುಂಬರುವ ಕ್ಷಣಗಳು ನೆನಪುಗಳ ಸೃಷ್ಟಿಯೊಂದಿಗೆ ಹೊಂದಾಣಿಕೆಯಾಗುತ್ತದೆ, ಅಂದರೆ ಭೂತಕಾಲವನ್ನು ನಮ್ಮ ನೆನಪುಗಳ ಸಂಪೂರ್ಣತೆಯಿಂದ ಗುರುತಿಸಲಾಗುತ್ತದೆ ಮತ್ತು ಭವಿಷ್ಯವು ಆಗಾಗ್ಗೆ ನಿರೀಕ್ಷಿತ ಘಟನೆಗಳಿಗೆ ಅನುರೂಪವಾಗಿ ಹೊಂದಿಕೊಳ್ಳುತ್ತದೆ. ದಾಖಲೆಗಳು ಮಾನವ ನೆನಪುಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಭೌತಿಕ ಘಟನೆಗಳು ದಾಖಲೆಗಳನ್ನು ಉತ್ಪಾದಿಸುತ್ತವೆ, ಉದಾಹರಣೆಗೆ, ಭೂಮಿಯ ಮೇಲ್ಮೈಯಲ್ಲಿ ನಾವು ಕಂಡುಕೊಳ್ಳುವ ಭೂವೈಜ್ಞಾನಿಕ ಮತ್ತು ಪಳೆಯುಳಿಕೆ ದಾಖಲೆಗಳು, ಬಹಳ ಹಿಂದೆಯೇ ಸೂಪರ್ನೋವಾ ಸ್ಫೋಟಗಳ ಖಗೋಳ ದಾಖಲೆಗಳು ಮತ್ತು ಐತಿಹಾಸಿಕ ದಾಖಲೆಗಳ ಲೆಕ್ಕವಿಲ್ಲದಷ್ಟು ಸಂಪುಟಗಳು ಭೂಮಿಯೊಳಡಗಿವೆ. ಸಮಯವು ಹರಿಯುವ ನದಿಯಂತಿದ್ದು, ಭೂತಕಾಲದಿಂದ ಸರಿದು ವರ್ತಮಾನದಲ್ಲಿ ವಾಸಿಸುತ್ತೇವೆಂಬ ಭಾವನೆ ಮೂಡಿಸುತ್ತದೆ. ಈ ರೀತಿಯ ರೂಪಕವು ಸಮಯದ ಹರಿವಿನ ಅನಿಸಿಕೆ ನೀಡುತ್ತದೆ. ಬದಲಾವಣೆಯ ಬಗೆಗಿನ ಮಾಹಿತಿಯನ್ನು ನಾವು ಇಂದ್ರಿಯಗಳ ಮೂಲಕ ಗ್ರಹಿಸುತ್ತೇವಲ್ಲವೇ? ಈ ಮಾಹಿತಿಯು ವಿದ್ಯುತ್ಕಾಂತೀಯ ಸಂಕೇತವಾಗಿ ರೂಪಾಂತರಗೊಂಡು, ನರಗಳ ಮೂಲಕ ಮೆದುಳಿನಲ್ಲಿ ಚಲಿಸುತ್ತದೆ. ನರಕೋಶವು, ‘ಭೂತ – ವರ್ತಮಾನ- ಭವಿಷ್ಯ’ದ ಅನುಕ್ರಮದಲ್ಲಿ ಮಾನಸಿಕ ಸಂವೇದನೆಯನ್ನು ನಿರಂತರವಾಗಿ ಸೃಷ್ಟಿಸುತ್ತದೆ. ಈ ರೇಖೀಯ ಸಮಯದ ನಮ್ಮ ಅನುಭವವು ಮೆದುಳಿನ ನರಕೋಶದ ಕಾರ್ಯದಲ್ಲಿ ತನ್ನ ಮೂಲವನ್ನು ಹೊಂದಿದೆ ಎಂದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದೆ. ಅಂದರೆ ಮಾನಸಿಕ ಸಮಯದ ಚೌಕಟ್ಟಿನಲ್ಲಿ ವಸ್ತು ಬದಲಾವಣೆಯ ಅನುಭವವು ಭೌತಿಕದಲ್ಲಿ ಸಮಯದ ಚಲನೆಯಂತೆ ನಮಗೆ ತೋರಿಸುತ್ತದೆ. ಆದ್ದರಿಂದಲೇ ಸಮಯವನ್ನು ‘ಅದೃಶ್ಯ ನದಿ’ ಎಂದು ಕರೆಯುವರು. ಇಲ್ಲಿ ಸ್ವಲ್ಪ ಜಾಗರೂಕತೆಯಿಂದ ಗಮನಿಸಬೇಕು. ಸಮಯವು ನದಿಯಲ್ಲ ಮತ್ತು ಅದು ಹರಿಯುವುದೂ ಇಲ್ಲ. ವಾಸ್ತವವಾಗಿ ಎಲ್ಲವೂ ಸಂಭವಿಸುವುದು ಭೌತಿಕ ಪ್ರಪಂಚದಲ್ಲಿ. ನಿರಂತರವಾಗಿ ಬದಲಾಗುತ್ತಿರುವುದು ಭೌತಿಕ ವಾಸ್ತವದ ಲಕ್ಷಣ. ಆ ವಾಸ್ತವವು ಮಾನವ ಗ್ರಹಿಕೆಯಲ್ಲಿ ಕಾಲದ ಅಮೂರ್ತ ಕಲ್ಪನೆಗೆ ದಾರಿಮಾಡಿಕೊಟ್ಟಿದೆ. ಹೀಗಾಗಿ ಕಾಲವು ಬದಲಾವಣೆಯ ಅನುಭವದ ಆಧಾರದ ಮೇಲೆ ಮನುಷ್ಯನ ಮನಸ್ಸಿನಿಂದ ರಚಿಸಲ್ಪಟ್ಟ ಅಮೂರ್ತ ಘಟಕ. ಸದಾ ಆಗುವಿಕೆಯಲ್ಲಿರುವ ಭೌತಿಕ ವಾಸ್ತವವು ತೋರುವ ಮತ್ತು ಕಣ್ಮರೆಯಾಗುವ ಪ್ರಕ್ರಿಯೆಯಿಂದ ಕೂಡಿದೆ; ಆದರೆ ಸಮಯವು ಆ ಪ್ರಕ್ರಿಯೆಯ ಭಾಗವಲ್ಲವೆನ್ನುವುದು ಖಾತ್ರಿಯಾಯಿತಲ್ಲವೇ!

ಆಲ್ಬರ್ಟ್ ಐನ್‌ಸ್ಟೈನ್‌ ಅವರಿಗೂ ಈ ಮಾನಸಿಕ ಸಮಯದ ಅರಿವಿತ್ತು; ಭೂತ, ವರ್ತಮಾನ ಮತ್ತು ಭವಿಷ್ಯವು “ಪಟ್ಟುಬಿಡದೆ ಬೆಂಬತ್ತಿದ ನಿರಂತರ ಭ್ರಮೆಗಳು” ಮತ್ತು ಸಮಯವು “ನಾವು ಅದನ್ನು ಅಳೆಯುವ ಘಟನೆಗಳ ಕ್ರಮವನ್ನು ಹೊರತುಪಡಿಸಿ ಯಾವುದೇ ಸ್ವತಂತ್ರ ಅಸ್ತಿತ್ವವನ್ನು ಹೊಂದಿಲ್ಲ” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಭೌತಶಾಸ್ತ್ರವು ಸಮಯದ ಹರಿವಿನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಬದಲಾವಣೆಯ ತೀವ್ರತೆಯ ಬಗ್ಗೆ ಬದಲಿಸಿಕೊಂಡಿತು. ಆದರೆ ಜನರು ತಮ್ಮ ಅಸ್ತಿತ್ವ ಮತ್ತು ಅಶಾಶ್ವತತೆಯನ್ನು ಸೂಚಿಸಲು ಸರಳವಾದ ಹಳೆಯ ಸಮಯವನ್ನೇ ಇಟ್ಟುಕೊಂಡರು.

ಅಸ್ತಿತ್ವದ ನದಿ…

ನಿಜವಾಗಿ ಹೇಳಬೇಕೆಂದರೆ ಭೌತಿಕ ಪ್ರಪಂಚವು ಹರಿಯುವ ನದಿಯಾಗಿದೆ. ಸಮಯವು ಅಮೂರ್ತ ಘಟಕವಾಗಿದ್ದು, ಅದರ ಮೂಲಕ ನಾವು ಈ ಬದಲಾವಣೆಯ ತೀವ್ರತೆ ಮತ್ತು ಪ್ರಮಾಣವನ್ನು ಅಳೆಯುತ್ತೇವೆ. ಹೀಗಾಗಿ ಸದಾ ಬದಲಾವಣೆಯ ಪ್ರಕ್ರಿಯೆಯಲ್ಲಿರುವ ಭೌತಿಕ ವಾಸ್ತವವನ್ನು ‘ಅಸ್ತಿತ್ವದ ನದಿ’ ಎಂದು ಕರೆಯಬಹುದು. ಈ ನದಿಗೆ ಮುಂದಕ್ಕೆ ಸಾಗಲು ಸಮಯ ಅಥವಾ ಅದನ್ನು ಮೀರಿದ ಯಾವುದೇ ಶಕ್ತಿಯ ಅಗತ್ಯವಿಲ್ಲ. ಭೌತಿಕ ಘಟಕಗಳು ಸಮಯದಿಂದ ‘ಮುಂದಕ್ಕೆ ಚಲಿಸುವುದಿಲ್ಲ’: ಅವು ತಮ್ಮದೇ ಆದ ಸ್ವಭಾವದಿಂದ ಬದಲಾಗುತ್ತಿವೆ; ವಸ್ತುಗಳು ಬದಲಾಗುತ್ತವೆ, ಜೀವಿಗಳು ಬದಲಾಗುತ್ತವೆ. ಬದಲಾಗುತ್ತಿರುವ ವಾಸ್ತವದ ಅನುಭವವನ್ನು ವ್ಯಕ್ತಪಡಿಸುವ ಅಮೂರ್ತ ಆಯಾಮವಾಗಿ ಮನಸ್ಸು ಸಮಯಕ್ಕೆ ವಿಶೇಷ ಜಾಗ ನೀಡಿತು. ಮಾನವ ಮನಸ್ಸಿನಿಂದ ರಚಿಸಲ್ಪಟ್ಟ ಸಮಯವು ಭಾಷೆಗೆ ಸೇರಿದ್ದೇ ವಿನಾ ಭೌತಿಕ ವಾಸ್ತವಕ್ಕೆ ಅಲ್ಲ. ಹೀಗಾಗಿ ಸಮಯದ ಮೂಲಕ ನಾವು ಭೌತಿಕ ವಾಸ್ತವತೆ ಮತ್ತು ಅದರ ಬದಲಾವಣೆಯ ಬಗ್ಗೆ ಮಾತನಾಡುತ್ತೇವೆ. ಬದಲಾವಣೆಯ ಅನುಭವವನ್ನು ಭಾಷಾ ವಿಧಾನವಾಗಿ ಸಮಯದ ಪರಿಭಾಷೆಯಲ್ಲಿ ವ್ಯಕ್ತಪಡಿಸುತ್ತೇವೆ. ಸಮಯವು ‘ಬದಲಾವಣೆಯ ಅಳತೆಗೋಲು’, ಅದು ಮಾನವ ಮನಸ್ಸಿನಿಂದ ರಚಿಸಲ್ಪಟ್ಟಿದೆ ಮತ್ತು ಭೌತಿಕ ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲದ ಅಮೂರ್ತ ಘಟಕ. ಬದಲಾವಣೆಯು ಭೌತಿಕ ವಾಸ್ತವದಲ್ಲಿ ಅಂತರ್ಗತವಾಗಿರುವುದರಿಂದ ಎಲ್ಲವೂ ಬದಲಾಗುತ್ತದೆ ಎನ್ನುವುದಕ್ಕೆ ಸಮಯದ ದಾರಿ, ಸಮಯದಲ್ಲಿನ ನಮ್ಮ ಪಯಣ, ಸಮಯದ ಹರಿವು ಎಂಬ ರೂಪಕಗಳಿಂದ ಅಭಿವ್ಯಕ್ತಿಸುತ್ತೇವೆ. ಸಮಯವು ಸರಿದು ಹೋಗುವುದಿಲ್ಲ, ಆದರೆ ನಾವು ಸರಿದು ಹೋಗುತ್ತೇವೆ: ನಾವು ಸಮಯ ಕಳೆದುಹೋಗುವುದನ್ನು ಅಳೆಯುವುದಿಲ್ಲ: ನಮ್ಮದೇ ಹಾದುಹೋಗುವಿಕೆ ಮತ್ತು ಕಣ್ಮರೆಯಾಗುವುದನ್ನು ಅಳೆಯುತ್ತಿರುತ್ತೇವೆ.

ಸಮಯವು ಮನುಷ್ಯನ ಅನುಭವದ ಮೂಲ ಲಕ್ಷಣವಾಗಿದೆ ಎಂದು ಹಲವರು ವಾದಿಸುತ್ತಾರೆ. ಆದರೆ ಆ ಮಾತನ್ನೂ ಒಪ್ಪಲಾಗದು. ಯಾಕೆಂದರೆ ನಾವು ಬದಲಾವಣೆಯನ್ನು ಅನುಭವಿಸುತ್ತೇವೆಯೇ ಹೊರತು ಸಮಯವನ್ನಲ್ಲಾ. ದೃಷ್ಟಿ, ಶ್ರವಣ, ವಾಸನೆ, ಸ್ಪರ್ಶ, ರುಚಿ ಮತ್ತು ವಾಸನೆಯನ್ನು ಗ್ರಹಿಸಲು ನಿರ್ದಿಷ್ಟವಾದ ಅಂಗಗಳಿವೆ. ಆದರೆ ಸಮಯವನ್ನು ಗ್ರಹಿಸುವ ಯಾವ ಅಂಗವೂ ನಮಗಿಲ್ಲ. ಸಮಯವು ಭೌತಿಕ ಪ್ರಪಂಚಕ್ಕೆ ಸಂಬಂಧಿಸಿದ ಅಂಶವಲ್ಲವಾದ್ದರಿಂದ ಅಂತಹ ಅಂಗವೊಂದು ನಮ್ಮೊಳಗೆ ವಿಕಸನಗೊಂಡಿಲ್ಲ. ಬೆಳಕು ಮತ್ತು ಧ್ವನಿಗಳ ರೀತಿಯಲ್ಲಿ ಸಮಯವನ್ನು ಗ್ರಹಿಸಲಾಗುವುದಿಲ್ಲ. ಸಮಯವು ಭೌತಿಕ ಪ್ರಪಂಚದ ಭಾಗವೂ ಅಲ್ಲ ಅಥವಾ ಗುಣಲಕ್ಷಣವೂ ಅಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಸಮಯದ ಬಗ್ಗೆ ಸಾವಿರಾರು ವರ್ಷಗಳವರೆಗೆ ನಡೆದ ಚರ್ಚೆಯ ನಂತರ, ಅದು ವಾಸ್ತವದ ಮೂಲಭೂತ ಘಟಕಾಂಶವಾಗಿ ಅಸ್ತಿತ್ವದಲ್ಲಿಲ್ಲ ಎಂದು ಮನುಷ್ಯ ಅಂತಿಮವಾಗಿ ಕಂಡುಕೊಂಡ. ಸಮಯದ ಸ್ವರೂಪವನ್ನು ಇಲ್ಲಿಯವರೆಗೆ ವಿವರಿಸಲು ಯಾಕೆ ಯಾರಿಗೂ ಸಾಧ್ಯವಾಗಲಿಲ್ಲವೆಂದರೆ ಸಮಯಕ್ಕೆ ವಿಶ್ವದಲ್ಲಿ ವಾಸ್ತವದ ನೆಲೆಗಟ್ಟಿಲ್ಲ. ಇದು ವಿಭಿನ್ನ ವಸ್ತುಗಳ ವಿಕಸನವನ್ನು ಅವುಗಳ ನಡುವೆ ಹೋಲಿಸಲು ಮನುಷ್ಯ ಕಂಡುಹಿಡಿದ ಸಾಧನವಾಗಿದೆ- ದೂರವನ್ನು ಹೇಗೆ ಟೇಪಿನ ಸಹಾಯದಿಂದ ಅಳೆಯಲಾಗುವುದೋ ಹಾಗೆಯೇ ಘಟನೆಗಳ ಅಂತರವನ್ನು ದಾಖಲಿಸಿಕೊಳ್ಳುವ ಸಾಧನವಾಗಿ ಸಮಯವಿದೆ, ಅಷ್ಟೇ! ಸಮಯವು ವಿಶ್ವದಲ್ಲಿ ಚಲಿಸುವ ಭೌತಿಕ ಪ್ರಮಾಣವಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟವಾದ ಪ್ರಾಯೋಗಿಕ ಪುರಾವೆಗಳಿಲ್ಲ. ಬದಲಾವಣೆಯ ಅನುಭವವನ್ನು ಗಮನಿಸಿದರೆ ಅದು ನಿಚ್ಚಳವಾಗಿ ಗೋಚರಿಸುತ್ತದೆ. ಆದ್ದರಿಂದ ಸಮಯವನ್ನು ‘ಬದಲಾವಣೆಯ ನೈಸರ್ಗಿಕ ಮಾಪನ’ ಎಂದು ಕರೆಯುವುದಕ್ಕಿಂತ ‘ಕೃತಕವಾದ ಮಾಪನ’ ಎನ್ನಬಹುದು. ಎಲ್ಲಾ ಮಾಪನಗಳನ್ನು ಸೃಷ್ಟಿಸಿದವನು ಮನುಷ್ಯನೇ ಆಗಿರುವುದರಿಂದ, ಸಮಯವು ಭೌತಿಕ ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲದೆಯೂ ಭೌತಿಕ ವಾಸ್ತವತೆಯ ಬದಲಾವಣೆಯ ಅಳತೆ ಮಾಪನ. ಅದು ಮಾನವ ಮನಸ್ಸಿನ ಸಂರಚನೆ. ಸಮಯವು ಬದಲಾವಣೆಯ ಪ್ರಮಾಣದ ಅಮೂರ್ತ ಅಳತೆಗೋಲು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದು ಸೂರ್ಯನ ಸುತ್ತ ಮತ್ತು ತನ್ನ ಸುತ್ತಲೂ ಭೂಮಿಯ ತಿರುಗುವಿಕೆಯ ಆವರ್ತಕ ಪ್ರಕ್ರಿಯೆಯನ್ನು ಸೂಚಿಸುವ ನಮ್ಮದೇ ಪರಿಭಾಷೆ! ಒಬ್ಬ ವ್ಯಕ್ತಿಗೆ ಐವತ್ತು ವರ್ಷ ಎನ್ನುವಾಗ, ಆ ವ್ಯಕ್ತಿಯು ಭೂಮಿ ಸೂರ್ಯನನ್ನು ಸುತ್ತುವ ಪ್ರಕ್ರಿಯೆಯೊಂದಿಗೆ ಇರುವುದನ್ನು ಸಮೀಕರಿಸಿ ಹೇಳುತ್ತೇವೆ. ಭೌತಿಕ ಪ್ರಕ್ರಿಯೆಗಳನ್ನು ಹೋಲಿಸುತ್ತಿದ್ದಾಗಲೂ ಅದನ್ನು ನಾವು ಪರಿಕಲ್ಪನೆಗಳ ಮೂಲಕ ಮಾತನಾಡುತ್ತೇವೆ (ಅಮೂರ್ತ ಘಟಕಗಳು).

ಸಮಯವು ಅವಾಸ್ತವವಾಗಿದೆ ಎಂಬ ನಿಜದರಿವು ಹೊಸ ಕಲ್ಪನೆಯಲ್ಲ. ತತ್ತ್ವಶಾಸ್ತ್ರದ ಇತಿಹಾಸದಲ್ಲಿ ಶತಮಾನಗಳುದ್ದಕ್ಕೂ ಕಾಲಾತೀತ ಕಲ್ಪನೆಯನ್ನು ಹೊಂದಿರುವ ಚಿಂತಕರಲ್ಲಿ ಬುದ್ಧ, ನಾಗಾರ್ಜುನ, ಸರಹಪಾದ, ಸ್ಪಿನೋಜಾ, ಕಾಂಟ್, ಹೆಗೆಲ್, ಸ್ಕೋಪೆನ್‌ಹೌರ್, ಬರ್ಗ್‌ಸನ್… ಸೇರಿದ್ದಾರೆ. ಕಾಂಟ್‌ಗೆ, ಸಮಯವು ನಮ್ಮ ಗ್ರಹಿಕೆಯ ಒಂದು ರೂಪಕ್ಕಿಂತ ಹೆಚ್ಚೇನೂ ಆಗಿರಲಿಲ್ಲ – ಜಗತ್ತನ್ನು ಗ್ರಹಿಸುವ ವಿಧಾನ. ಇದು ಗ್ರಹಿಸುವವರಿಂದ ನೈಜವೂ ಅಲ್ಲ, ಅಥವಾ ಸ್ವತಂತ್ರವೂ ಅಲ್ಲ. ಸ್ವತಃ ಸಮಯ ಮತ್ತು ಸ್ಥಳವು ನಮ್ಮ ಗ್ರಹಿಕೆಗಳನ್ನು ಅರ್ಥಮಾಡಿಕೊಳ್ಳಲು ನಾವು ಬಳಸುವ ಖಾಲಿ ಚೌಕಟ್ಟುಗಳು ಎನ್ನುತ್ತಿದ್ದ. ಸ್ಕೋಪೆನ್‌ಹೌರ್‌ನಲ್ಲಿಯೂ ಇದೇ ರೀತಿಯ ಮಾತುಗಳು ಬರುತ್ತವೆ: ಸಮಯದಲ್ಲಿ ಪ್ರತಿ ಕ್ಷಣವು, ತನ್ನ ಹಿಂದಿನ ಕ್ಷಣವನ್ನು ಎಷ್ಟು ತೆರವುಗೊಳಿಸುವುದೋ, ಅದು ಅಷ್ಟೇ ತ್ವರಿತವಾಗಿ ಹಿಂದಕ್ಕೆ ದೂಡಲ್ಪಡುತ್ತದೆ. ಭೂತ ಮತ್ತು ಭವಿಷ್ಯವು (ಅವುಗಳ ಪರಿಣಾಮಗಳನ್ನು ಹೊರತುಪಡಿಸಿ) ಯಾವುದೇ ಕನಸಿನಂತೆ ಖಾಲಿ ಮತ್ತು ಅವಾಸ್ತವವಾಗಿವೆ; ಪ್ರಸ್ತುತವು ಎರಡರ ನಡುವಿನ ಗಡಿಯಾಗಿದ್ದು ಅದಕ್ಕೆ ವಿಸ್ತರಣೆಯ ಅವಕಾಶವೂ ಇಲ್ಲವೆಂದು ಹೇಳಿದ್ದ.

ಸಮಯದ ಬಗ್ಗೆ ಶರಣರಲ್ಲಿ ಈ ಸ್ಪಷ್ಟತೆ ಇತ್ತು. ಆದ್ದರಿಂದಲೇ ಅವರು ಗಡಿಯಾರದ ಮುಳ್ಳುಗಳು ಸೂಚಿಸುವ ಗಂಟೆ, ನಿಮಿಷ, ಸೆಕೆಂಡುಗಳಲ್ಲಿಯೂ; ಸೂರ್ಯೋದಯ, ಸೂರ್ಯಾಸ್ತಗಳ ಅವಧಿಯಲ್ಲಿಯೂ, ಬೆಳಕು ಮತ್ತು ಕತ್ತಲೆಯ ಹೊತ್ತಿನಲ್ಲಿಯೂ ಒಳಿತು, ಕೆಡುಕುಗಳ ಲೆಕ್ಕಾಚಾರ ಹಾಕಿ, ಶುಭ, ಅಶುಭ ಗಳಿಗೆಗಳೆಂದು ಜೀವನವನ್ನು ಜಟಿಲ ಮಾಡಿಕೊಂಡಿರುವವರಿಗೆ ಅವೆಲ್ಲವೂ ಮನೋಭ್ರಾಂತಿಗಳೆಂದು ಎಚ್ಚರಿಸಿದರು. ತನ್ನ ಎಲ್ಲಾ ಕೇಡುಗಳಿಗೆ, ಒಳಿತುಗಳಿಗೆ, ವರ್ತನೆಗಳಿಗೆ, ಆಗು-ಹೋಗುಗಳಿಗೆ ಕಾಲವೇ ಕಾರಣವೆಂದು ನಂಬಿ ಕಾಲಕ್ಕೆ ಗುಲಾಮನಾದ ಮನಸ್ಸಿನ ನಂಬಿಕೆಯನ್ನು ನಾನಾ ರೀತಿಯಲ್ಲಿ ಪ್ರಶ್ನಿಸಿ, ವಾಸ್ತವದ ಸತ್ಯವನ್ನು ತಿಳಿಸಲು ಪ್ರಯತ್ನಿಸಿದರು…

ಸತ್ಯಸದಾಚಾರವುಳ್ಳ ಶಿವಶರಣರವರಹುದೆಂದುದೆ
ಶುಭ ಮುಹೂರ್ತ [ಶುಭ ಘಳಿಗೆ] ಸಕಲ ಬಲ, ಸಕಲ ಜಯ,
ಅವರಲ್ಲವೆಂಬುದೇ ವಿಘ್ನ ವಿಷಗಳಿಗೆ ನಿರ್ಬಲ ಅಪಜಯ.
-ಚನ್ನಬಸವಣ್ಣ

ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.
-ಬಸವಣ್ಣ

ಚಂದ್ರಬಲ ತಾರಾಬಲವೆಂಬಿರಿ ಎಲೆ ಅಣ್ಣಗಳಿರಾ !
ಚಂದ್ರಂಗೆ ಯಾರ ಬಲ ? ಇಂದ್ರಂಗೆ ಯಾರ ಬಲ ?
ಇಂದ್ರಂಗೆ, ಮುಕುಂದಂಗೆ, ಬ್ರಹ್ಮಂಗೆ,
ಚಂದ್ರಶೇಖರ ದೇವಸೊಡ್ಡಳನ ಬಲವು, ಕೇಳಿರಣ್ಣಾ
-ಸೊಡ್ಡಳ ಬಾಚಿದೇವ

ಹಾಗಾದರೆ ಬದಲಾವಣೆಯ ಅಳತೆಗೋಲಾದ ಸಮಯವು ಮನುಷ್ಯನ ಮನಸ್ಸನ್ನು, ಅವನ ಆಗು-ಹೋಗುಗಳನ್ನು ನಿರ್ಧರಿಸುವ ಒಂದು ದೊಡ್ಡ ಮೆಟಾಫರ್ ಆಗಿ ಬೆಳೆದದ್ದು ಹೇಗೆ? ಈ ಮೆಟಾಫರ್ ಅನ್ನು ಶರಣರು ಬೇಧಿಸಿದ್ದು ಹೇಗೆ?

ಕಾಲಗಳು ಮೂರು ಎಂಬುದು ಬಾಲ್ಯದಲ್ಲಿಯೇ ನಾವು ಕಲಿತ ಪಾಠ. ಕಾಲವನ್ನು ಹೀಗೆ ವಿಭಾಗಿಸಿದ ಕಲ್ಪನೆಯಲ್ಲಿ ಬಹುದೊಡ್ಡ ದೋಷ ಅಡಗಿದೆ, ಏಕೆಂದರೆ ‘ಭೂತ-ವರ್ತಮಾನ-ಭವಿಷ್ಯ’ದ ಅನುಕ್ರಮದಲ್ಲಿನ ರೇಖೀಯ ಸಮಯವು ಮೆದುಳಿನಲ್ಲಿ ಮಾತ್ರ ಇರುತ್ತದೆ. ನಮ್ಮೆಲ್ಲಾ ಆಲೋಚನೆಗಳು ಈ ಅನುಕ್ರಮದ ಮೂಲಕವೇ ನಡೆಯುವುದರಿಂದಾಗಿ, ನಮ್ಮ ಬದುಕೂ ಇದನ್ನೇ ಅನುಸರಿಸುತ್ತಿರುತ್ತದೆ. ಅದರಲ್ಲೂ ವರ್ತಮಾನಕ್ಕೆ ಗಮನ ಕೊಡುವ ಬದಲು ಕಳೆದು ಹೋದ ದಿನಗಳನ್ನೇ ನೆನಪಿಸಿಕೊಳ್ಳುವುದರಲ್ಲಿ ಮತ್ತು ನಾಳಿನ ದಿನಗಳನ್ನು ಆಸೆ, ನಿರೀಕ್ಷೆಯಿಂದ ಎದುರು ನೋಡುವುದರಲ್ಲಿ ನಮ್ಮ ಬದುಕು ಸೀಮಿತಗೊಳ್ಳುತ್ತಾ ಹೋಗುತ್ತದೆ! ಇದನ್ನು ಮತ್ತಷ್ಟು ಸವಿಸ್ತಾರವಾಗಿ ನೋಡಿಕೊಂಡರೆ ಸಮಯ ಸೃಷ್ಟಿಸಿದ ಸಮಸ್ಯೆಯ ಮೂಲಕ್ಕೆ ಬಂದು ನಿಲ್ಲುತ್ತೇವೆ.

ಸಂಪೂರ್ಣವಾಗಿ ಸಮಯದ ಭ್ರಮೆಯಿಂದ ಸಂಮೋಹನಕ್ಕೊಳಗಾದ ಸಂಸ್ಕೃತಿಯಲ್ಲಿ ನಾವು ವಾಸಿಸುತ್ತಿದ್ದೇವೆ. ಇದರಲ್ಲಿ ಪ್ರಸ್ತುತ ಕ್ಷಣ ಎನ್ನುವ ವರ್ತಮಾನವು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಹಿಂದಿನ ನೆನಪು ಮತ್ತು ನಾಳೆಯ ನಿರೀಕ್ಷೆಗಳು ಸಂಪೂರ್ಣವಾಗಿ ನಮ್ಮ ಮನಸ್ಸನ್ನು ಆಕ್ರಮಿಸಿಬಿಟ್ಟಿರುವುದರಿಂದ ವರ್ತಮಾನದ ವಾಸ್ತವ ಸಂಪರ್ಕದಿಂದ ವಂಚಿತರಾಗುತ್ತಿರುತ್ತೇವೆ. ಶರಣರು ತಮಗೆ “ಹಿಂದಣ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ” ಎನ್ನುವ ಮೂಲಕ ಭೂತ ಮತ್ತು ಭವಿಷ್ಯತ್ಕಾಲಗಳ ಕಲ್ಪನೆಯನ್ನು ಹೊಡೆದು ಹಾಕಿದ್ದಾರೆ. ಹಿಂದಣ- ಮುಂದಣಗಳೆರಡೂ ಇಲ್ಲದವುಗಳೇ. ಅಸ್ತಿತ್ವವೇ ಇಲ್ಲದ ಅವುಗಳಲ್ಲೇ ನಮ್ಮ ಮನಸ್ಸು ತಲ್ಲೀನವಾಗುವುದರಿಂದ ವರ್ತಮಾನದ ಸೊಬಗನ್ನು, ಮಹತ್ತರ ಜವಾಬ್ದಾರಿಯನ್ನು ‘ಮಿಸ್’ ಮಾಡಿಕೊಳ್ಳುತ್ತಿರುತ್ತೇವೆ. ಶರಣನಿಗೆ ಹಿಂದು-ಮುಂದುಗಳಿಲ್ಲ ಎನ್ನುತ್ತಾರೆ ಅಲ್ಲಮಪ್ರಭುದೇವರು. “ಎನ್ನ ಹಿಂದು-ಮುಂದುವ ಕೆಡಿಸಾ” ಎಂದು ಸಿದ್ಧರಾಮಯ್ಯ, ಭೂತ-ಭವಿಷ್ಯಗಳ ಕಾಲ ಬೇಡಿಗಳನ್ನು ಕತ್ತರಿಸುವ ಉಪಾಯಕ್ಕಾಗಿ ಹಾತೊರೆಯುತ್ತಾರೆ. ಹಿಂದಣ- ಮುಂದಣ ಸಂದನಳಿದು, ಹಿಂದು-ಮುಂದುಗಳ ಹಂಗ ಹರಿದು, ಹಿಂದು-ಮುಂದುಗಳ ದಂದುಗ ಇಲ್ಲದಂದು- ಹೀಗೆ ಹಲವಾರು ವಚನಗಳಲ್ಲಿ ಶರಣರು ಆಗಿ ಹೋದ ದಿನಗಳಲ್ಲಿ ಮತ್ತು ಮುಂಬರುವ ನಾಳೆಗಳಲ್ಲಿ ಮನಸ್ಸು ಸಿಲುಕದಂತೆ ಎಚ್ಚರವಹಿಸಬೇಕಾದ ಅಗತ್ಯವನ್ನು ಹೇಳುತ್ತಾರೆ. ವಾಸ್ತವವಾಗಿ ನಮ್ಮ ಗುರುತನ್ನು ವ್ಯಾಖ್ಯಾನಿಸಿಕೊಳ್ಳಲು ಭೂತಕಾಲದ ಅಗತ್ಯವಿಲ್ಲ ಮತ್ತು ನೆರವೇರಿಕೆಯನ್ನು ಈಡೇರಿಸಿಕೊಳ್ಳಲು ಭವಿಷ್ಯದ ಅಗತ್ಯವಿಲ್ಲ. ಆದರೆ ವರ್ತಮಾನಕ್ಕೆ ಬರುವ ಮೂಲಕ ನಮ್ಮನ್ನು ನಾವು ಹೊಸದಾಗಿ, ಸದಾ ನವನವೀನವಾಗಿ ಕಂಡುಕೊಳ್ಳಲು ಸಾಧ್ಯವಿದೆ.

ಕೂಟವ ಕೂಡಿಹೆನೆಂದಡೆ ಸಮಯದವನಲ್ಲ.
ಮಾಟವ ಮಾಡಿಹೆನೆಂದಡೆ ಹಿಂದು ಮುಂದಣ ದಂದುಗದವನಲ್ಲ.
ಸಮಯಕ್ಕೆ ಮುನ್ನವೆ ಅಲ್ಲ, ಆರಾದಡೂ ಎನಲಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ. (ಘಟ್ಟಿವಾಳಯ್ಯ)

ಗೋಸುಂಬೆ ಹುಳದಂತೆ ಬಹುವೇಷಧಾರಿಯಲ್ಲ ಶರಣ.
ಇಂದ್ರಧನುವಿನಂತೆ ಚಂದದ ಬಣ್ಣಕ್ಕೆ ಮೋಹಿಯಲ್ಲ ಶರಣ.
ಹಿಂದು ಮುಂದಣ ನೆನೆವ ಹಾರುವನಲ್ಲ ಶರಣ.
ಆನಂದಭರಿತ ಶರಣನ ಏನೆಂದುಪಮಿಸಬಹುದಯ್ಯಾ ಅಖಂಡೇಶ್ವರಾ. (ಷಣ್ಮುಖಸ್ವಾಮಿ)

ಮನುಷ್ಯ ಗತಕಾಲದ ಬಗ್ಗೆ ಪಶ್ಚಾತ್ತಾಪಪಡುವುದು ಮಾತ್ರವಲ್ಲ, ಭವಿಷ್ಯದ ಬಗ್ಗೆಯೂ ಭಯಪಡುತ್ತಾನೆ, ಏಕೆಂದರೆ ಸಮಯದ ಹರಿವು ತನ್ನನ್ನು, ತನ್ನವರನ್ನು ಸಾವಿನ ಕಡೆಗೆ ಗುಡಿಸಿ ಹಾಕುತ್ತದೆನ್ನುವ ಭಯ. ಭೂತಕಾಲವನ್ನು ಎಷ್ಟೇ ನೆನಪಿಸಿಕೊಂಡರೂ ಅಥವಾ ಭವಿಷ್ಯವನ್ನು ಎಷ್ಟೇ ಊಹಿಸಿಕೊಂಡು ನಿರೀಕ್ಷಿಸಿದರೂ ನಾವು ವರ್ತಮಾನದಲ್ಲಿಯೇ ಜೀವಿಸುತ್ತಿರುತ್ತೇವೆ. ಆದರೆ ಆ ಪ್ರಜ್ಞೆಯೇ ಇಲ್ಲದಿರುವುದರಿಂದ ಈ ಕ್ಷಣದ ಮಹತ್ವ ನಮಗೆ ಗೊತ್ತಾಗದೇ ಹೋಗುತ್ತಿರುತ್ತದೆ.

(ಮುಂದುವರಿಯುವುದು…)

Previous post ಅನುಭವ ಮಂಟಪ
ಅನುಭವ ಮಂಟಪ
Next post ಶಾಂತಿ
ಶಾಂತಿ

Related Posts

  ಅವಿರಳ ಅನುಭಾವಿ-3
Share:
Articles

  ಅವಿರಳ ಅನುಭಾವಿ-3

May 6, 2020 ಮಹಾದೇವ ಹಡಪದ
ಇಲ್ಲಿಯವರೆಗೆ: ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ ಬಾಲಕ ಚನ್ನಬಸವ ಮಹಾಮನೆಯ ಕಣ್ಮಣಿಯಾದ. ಆತನ ಪ್ರಬುದ್ಧತೆ, ಚುರುಕುತನ ಹೀಗೊಮ್ಮೆ...
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
Share:
Articles

ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್

June 14, 2024 ಡಾ. ಕೆ. ಎಸ್. ಮಲ್ಲೇಶ್
ಎಳೆಯನಾಗಿದ್ದಾಗಲೇ ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧಿಸಿದ ಬಸವಣ್ಣನವರು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ. ತನ್ನ ಹುಟ್ಟಿನ ಧರ್ಮ ಬಿಟ್ಟು, ಕೂಡಲಸಂಗಮದಲ್ಲಿ ಅಧ್ಯಯನ ಮಾಡಿ...

Comments 8

  1. ಬಸವರಾಜ ಹಂಡಿ
    Apr 14, 2025 Reply

    ಈ ಲೇಖನವು ‘ಕಾಲ’ ಎಂಬ ಅತಿದೊಡ್ಡ ತತ್ವದ ಬಗ್ಗೆ ಅಚ್ಚುಕಟ್ಟಾಗಿ ಮತ್ತು ತತ್ವಜ್ಞಾನದ ಸಂಗತಿಗಳೊಂದಿಗೆ ಪರಿಚಯಿಸುತ್ತಿದೆ. ಶರಣರ ವಚನಗಳಿಂದ ಹಿಡಿದು, ಜಿಡ್ಡು ಕೃಷ್ಣಮೂರ್ತಿ, ಪ್ಲೇಟೋ, ಐನ್‌ಸ್ಟೈನ್, ಸಂತ ಆಗಸ್ಟೀನ್‌ವರೆಗೆ ಉದಾಹರಣೆ ನೀಡಿರುವದು ಲೇಖನದ ಆಳವಾದ ಅಧ್ಯಯನ ಮತ್ತು ದೃಷ್ಠಿಕೋನವನ್ನು ಬಹಳ ವ್ಯಾಪಕಗೊಳಿಸಿದೆ. ಇದು ಓದುಗರನ್ನು ಆಳವಾಗಿ ಆಲೋಚನೆಗೆ ತಳ್ಳುತ್ತದೆ.
    ತತ್ವಜ್ಞಾನದ ವಿಷಯಗಳ ಪರಿಚಯವೂ ಓದುಗರಿಗೆ ಸ್ವಲ್ಪ “heavy” ಅನ್ನಿಸಬಹುದು. ಶರಣರ ವಚನಗಳಿಂದ ಆರಂಭಿಸಿ, ವೈಜ್ಞಾನಿಕ ತತ್ವಗಳ ತನಕ ಸಾಗಿರುವದು ತುಂಬಾ ಚೆನ್ನಾಗಿದೆ. ಜಿಡ್ಡು ಕೃಷ್ಣಮೂರ್ತಿಯವರ ಆಲೋಚನೆಗಳ ಉಲ್ಲೇಖದ ಭಾಗವು ಲೇಖನದ ತಾತ್ತ್ವಿಕ ಗಂಭೀರತೆಯನ್ನು ಹೆಚ್ಚಿಸಿದೆ.
    ಶರಣರು ಕಾಲವನ್ನು ನಿರಾಕರಿಸಿದ ಭಾಗ ಮತ್ತು ವಿಜ್ಞಾನವು ಕಾಲವನ್ನು ಹೇಗೆ ವ್ಯಾಖ್ಯಾನಿಸುತ್ತದೆಯೆಂಬ ಅಂಶಗಳನ್ನ ಸಮನ್ವಯಗೊಳಿಸಿದ ಪಾಠವು ಅತ್ಯುತ್ತಮವಾಗಿದೆ.
    ಲೇಖನದ ಕೊನೆಗೆ “ಕಾಲದ ಭಾವನೆ ಶರಣರ ದೃಷ್ಟಿಯಿಂದ ಒಮ್ಮೆ ಮುಕ್ತವಾಗಿದೆ ಮತ್ತು ನಮ್ಮ ದೈನಂದಿನ ಬದುಕಿನಲ್ಲಿ ನಿಯಂತ್ರಕವಾಗಿದೆ” ಎಂಬ ಎರಡೂ ಆಲೋಚನೆಗಳನ್ನು ಸಮರ್ಪಕವಾಗಿ ಸಮೀಕರಣ ಮಾಡುವ ಒಂದು ಸ್ವಲ್ಪ ಹೆಚ್ಚು ಸ್ಪಷ್ಟ ‘conclusion’ ಭಾಗವಿದ್ದರೆ ಓದುಗರಿಗೆ ಇನ್ನೂ ಹೆಚ್ಚು ಅರ್ಥವಾಗುತ್ತಿತ್ತು ಅಂತ ಅನಿಸುತ್ತದೆ.
    ಲೇಖನವು ದಾರ್ಶನಿಕ ಪ್ರಜ್ಞೆಯನ್ನ ತುಂಬಾ ಆಳವಾಗಿ ಪ್ರೇರೇಪಿಸುತ್ತದೆ. ಭಾವಪೂರ್ಣ ಬರವಣಿಗೆಯೊಂದಿಗೆ ತತ್ತ್ವಜ್ಞಾನ ಮತ್ತು ವಿಜ್ಞಾನವನ್ನು ಸೌಂದರ್ಯವಾಗಿ ಒಗ್ಗೂಡಿಸಲಾಗಿದೆ. ನಾನು ಇನ್ನು 2-3 ಸಲ ಈ ಲೇಖನವನ್ನು ಓದುತ್ತೇನೆ. ಸಮಯ ಸಿಕ್ಕಾಗ ಇದರ ಬಗ್ಗೆ ಚಿಂತನೆ ಮಾಡುತ್ತೇನೆ..
    ಮಂಗಳಾ ಶರಣೆಯರ ಅತಿ ವಿರಳವಾದ ಜ್ಞಾನ ದಾಸೋಹಕ್ಕೆ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು. ಬಯಲು ತಂಡದ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದಗಳು.

  2. Shraddhananda swamiji, Vijayapura
    Apr 17, 2025 Reply

    What a wonderful article about time I am happy after reading thank you so much…

  3. PANCHAKSHARI H V
    Apr 28, 2025 Reply

    ಕಾಲ ಕಲ್ಪಿತವೋ ಭ್ರಮೆಯೋ ವಾಸ್ತವವೋ, ವಿಜ್ಞಾನ ಆತ್ಮಜ್ಞಾನಗಳ ಸಮನ್ವಯದೊಂದಿಗೆ ಲೇಖನ ಅಚ್ಚುಕಟ್ಟಾಗಿ ಸಮಯದ ವ್ಯಾಪಕತ್ವವನ್ನು ಓದುಗರಿಗೆ ತೆರೆದಿಟ್ಟಿದೆ. ಮನುಷ್ಯನಿಗಷ್ಟೆ ಕಾಲದ ಗಣನೆ. ಪ್ರಾಣಿಗಳಿಗಿಲ್ಕ, ಅವು ವಾಸ್ತವದಲ್ಲಿ ಬದುಕಿದರೆ ಮನುಷ್ಯ ಹಿಂದೆ – ಮುಂದೆ ಬದುಕುವ ಹವಣಿಕೆಯಲ್ಲಿರುತ್ತಾನೆ, ವಾಸ್ತವದಲ್ಲಿ ಬದುಕುವುದಿಲ್ಕ.
    ಬಹಳ ಅರ್ಥಪೂರ್ಣ ಲೇಖನ
    ಶರಣು

  4. Shubha
    Apr 28, 2025 Reply

    ಕಾಲ ಎಂಬ ಭ್ರಮೆಯ ವಿವರಣೆ ನೀಡಿದ ಈ ಲೇಖನ ತುಂಬಾ ಮನಸ್ಸಿನಲ್ಲಿ ಚರ್ಚೆ ಹುಟ್ಟುಹಾಕಿದೆ

  5. Manohar Achar
    May 1, 2025 Reply

    ಕಾಲ ಕಲ್ಪಿತವೆ? ಸುಪರ್ಬ್. ಗ್ರೇಟ್👍

  6. ಶೈಲಜಾ ಹೂಗಾರ, ಧಾರವಾಡ
    May 3, 2025 Reply

    ಸಮಯವು ಭೌತಿಕ ಪ್ರಪಂಚಕ್ಕೆ ಸಂಬಂಧಿಸಿದ ಅಂಶವಲ್ಲವಾದ್ದರಿಂದ ಅಂತಹ ಅಂಗವೊಂದು ನಮ್ಮೊಳಗೆ ವಿಕಸನಗೊಂಡಿಲ್ಲ. Best fact that I found. So wonderfully and smoothly woven in sarala sahaja sundara bhashe, as usual. 👊
    Curious to know what the 2nd part of it carries.

  7. Dr. K.S. Mallesh, Mysuru
    May 10, 2025 Reply

    Kayla kalpitave- My views Your article has held the bull by its horns. You have digressed a lot on four aspects 1. The worldly meaning of time by the mass and dependence on it 2. The evolution of the meaning of time as perceived by philosophers and scientists 3. An attempt to detach the notion that time is a physical entity 4. The way sharanas had incorporated the non- existence of time in their lives or the way they had perceived and pursued the true path of life that was independent of the notion or need of time. An excellent beginning (quite eager to read the next part) that makes a convincing attempt and appeal to shed light on the notion of time. It clearly follows a logical and a scientific approach to prove the intended goal that time is not physical entity but is only a human construct. The constant nature of the Universe is to change continuously and the doctrinated minds think that all this is happening as if guided by the illusory time. The reality as you have emphasized is the change that continuously is happening about which the mind perceives those that happened as past, one that is happening as present and that which follows as future. These three aspects intimately connected with worldly life, subject every doctrined and prejudiced mind to attach the labels of good, bad, ugly and so on to them and hence cling to time, expecting it will, with Devine blessing, bring pleasure, happiness, wealth and what not from outside!
    While I went through your article, I felt there were some slightly stronger and also weaker statements. I therefore give below those statements about which I have included my perceptions. Please note that I am not an expert on these. As a reader, and as a person interested in science, I have commented about some sentences. Please don’t give too much of weightage to them. Also kindly correct me if I am wrong.
    I must appreciate that writing about such a notion as “time” needs good scholarship, vast study and lot of courage. All that is reflected in your article. I wish to strongly assert here that it is in this article, the true meanings of relevant vachanas have been captured and presented. If the same vachanas were read or explained in any other context, I very much doubt, if the intention of the sharanas could be brought out so clearly. My pranams to you.

  8. ಮಹಾದೇವ
    May 14, 2025 Reply

    ಕಾಲ ದೇಶ ಕ್ರಿಯೆ…. ಈ ಮೂರು ಅರಿಸ್ಟಾಟಲ್ ಮಹಾಶಯನ ಅತೀ ಮಹತ್ವದ ಸಂಗತಿಗಳು. ಇದರ ಸುತ್ತಲೇ ಸಮಾಜ, ಬದುಕು ಬವಣೆ ಕಲೆ ಸಾಹಿತ್ಯಗಳ ವಿಮರ್ಶೆಯ ಕೇಂದ್ರವನ್ನು ಹೇಳಿದಾತ ಅರಿಸ್ಟಾಟಲ್. ಈಗ ನಾವು ನಮ್ಮ ಶರಣ ತತ್ವದ ಹಿನ್ನೆಲೆಯಲ್ಲಿ ಈ ಸಂಗತಿಗಳನ್ನು ಮರು ವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿದೆ. ಆತ್ಮಜ್ಞಾನದ ಬೆಳಕಿನಲ್ಲಿಯೇ ಶರಣರು ಜಗದ ಸೋಜಿಗಗಳನೆಲ್ಲ ಅರಿಯಲು ಹಂಬಲಿಸಿದರು. ಆ ಶರಣ ಸಂದೋಹದ ಕೌತುಕದ ಜಿಜ್ಞಾಸೆಯನ್ನು ಇಂದಿನ ಅಗತ್ಯದ ಕಾಲವನ್ನು ಗ್ರಹಿಸಿ ಆ ಎರಡರ ಅರಿವಿನ ಸಿಹಿ ನೀಡಿದ್ದೀರಿ ಅಕ್ಕ‌.

Leave a Reply to Manohar Achar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಈ  ದಾರಿ…
ಈ ದಾರಿ…
May 10, 2023
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಈ ಬಳ್ಳಿ…
ಈ ಬಳ್ಳಿ…
October 21, 2024
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
Copyright © 2025 Bayalu