Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಲ್ಯಾಣದ ಮಹಾಮನೆ
Share:
Articles June 12, 2025 ಡಾ. ಎನ್.ಜಿ ಮಹಾದೇವಪ್ಪ

ಕಲ್ಯಾಣದ ಮಹಾಮನೆ

ಅನುಭವ ಮಂಟಪದಲ್ಲಿ ನಡೆಯಲೇ ಬೇಕಾದ ಕಾರ್ಯಗಳನ್ನು ಹೀಗೆ ಸ್ಪಷ್ಟವಾಗಿ ಊಹಿಸಬಹುದು. 1. ಎಲ್ಲರೂ ಇಷ್ಟಲಿಂಗದ ಅರಿವು ಮೂಡಿಸಿಕೊಳ್ಳಬೇಕು, 2. ಸಾಮೂಹಿಕ ಪ್ರಸಾದ (ಜಾತಿಭೇದವಿಲ್ಲದ ದಾಸೋಹ). 3. ಶರಣರ ಗೋಷ್ಠಿ – ಅನುಭವ – ಅನುಭಾವಿಗಳ ಸಂವಾದ. 4. ಲಿಂಗಾಯತ ತತ್ವಗಳ ಅನುಷ್ಠಾನ ಮತ್ತು ಇತರರಿಗೆ ಅದನ್ನು ಹೇಳುವುದು, 5. ವಚನಗಳ ಪರಿಷ್ಕರಣೆ (ಅಗತ್ಯವಿದ್ದರೆ).

ಈ ಕಾರ್ಯಗಳು ಎಲ್ಲಿ ನಡೆಯುತ್ತಿದ್ದವೊ ಆ ಸ್ಥಳಗಳೆಲ್ಲ ಅನುಭವ ಮಂಟಪಗಳೆ. ಅನುಭವ ಮಂಟಪ ಎಂದರೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಇದ್ದ ಒಂದು ಕಟ್ಟಡ ಎಂದರ್ಥವಲ್ಲ. ಮೊದಲಿಗೆ ಅನುಭವ ಮಂಟಪಕ್ಕೆ ‘ಮಹಾಮನೆ’ ಎಂಬ ಹೆಸರಿತ್ತು, ಎಂಬುದು ಹರಿಹರನ ರಗಳೆಗಳಲ್ಲೂ, ಭೀಮಕವಿಯ ಬಸವಪುರಾಣದಿಂದಲೂ ಕೆಲವು ವಚನಗಳಿಂದಲೂ ಗೊತ್ತಾಗುತ್ತದೆ.

ಕಪಟರಾಳ ಕೃಷ್ಣರಾಯರೆಂಬ ಸುಪ್ರಸಿದ್ಧ ಕಲಬುರಗಿಯ ವಕೀಲರು ಅನುಭವ ಮಂಟಪ ಬಸವಣ್ಣನವರ ಕಾಲದಲ್ಲಿ ಇರಲಿಲ್ಲ, ಇತ್ತೆಂದು ಆ ಮೇಲಿನ ವಚನಕಾರರು, ಅದರಲ್ಲೂ ಶೂನ್ಯ ಸಂಪಾದನೆಕಾರರು, ಬರೆದಿದ್ದಾರೆ, ಎಂಬ ವಾದವನ್ನುಳ್ಳ ಒಂದು ಲೇಖನವನ್ನು ಬರೆದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಯಾವ ಲಿಂಗಾಯತ ವಿದ್ವಾಂಸರೂ ಮುಂದೆ ಬಾರದಿದ್ದಾಗ ರೆವೆರೆಂಡ್ ಚನ್ನಪ್ಪ ಉತ್ತಂಗಿ ಎಂಬ ಧಾರವಾಡದ ಕ್ರೈಸ್ತ ಪಾದ್ರಿಗಳು ಅನುಭವ ಮಂಟಪ ಇತ್ತೆಂದೂ ಅದು ಹೇಗೆ ನಿಧಾನವಾಗಿ ರೂಪುಗೊಂಡಿತೆಂದೂ ಚಾರಿತ್ರಿಕ ಸಾಕ್ಷ್ಯಾಧಾರಗಳ ಮೂಲಕ ಉತ್ತರ ನೀಡಿದರು.

ಮೊದಲಿಗೆ ಬಸವಣ್ಣನವರ ದಾಸೋಹ ಪದ್ಧತಿಯನ್ನು ನಾವು ಪ್ರಸ್ತಾಪಿಸಬೇಕು. ಅವರದು ಮಹಾಮನೆ. ಮಹಾಮನೆ ಪರಿಕಲ್ಪನೆ ಬಸವಪೂರ್ವದಲ್ಲಿಯೇ ಇತ್ತು. ಬಸವಣ್ಣ ಬಾಲಕನಾಗಿದ್ದಾಗ ಉಪನಯನ ಸಂಸ್ಕಾರ ತಿರಸ್ಕರಿಸಿದಾಗ ಪ್ರಾಯಶಃ ಹಿರಿಯರು ಅವರನ್ನು ಬಹಿಷ್ಕರಿಸಿರಬೇಕು. ಬಸವಣ್ಣನವರು ಈ ಪ್ರಸಂಗವನ್ನು ‘ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು’1 ಎಂಬ ತಮ್ಮ ವಚನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅನಂತರ ಅವರು ಮನೆ ಬಿಟ್ಟು ಅಕ್ಕನೊಂದಿಗೆ ಸಮೀಪದಲ್ಲಿದ್ದ ಮಹಾಮನೆಗೆ ಹೋದರೆಂದು ಭೀಮಕವಿ ಹೇಳುತ್ತಾನೆ (‘ನಿಜ ಸಹೋದರಿಯೆನಿಪ ನಾಗಾಂಬಿಕೆಯುಂ ತಾನುಂ ತನಗೆ ಯಿಲ್ಲಿರಲಾಗದೆನುತೆಯ್ತಂದು ಮಹಾಮನೆಗೆ ಬರುತಿರೆ . . .’2. ಅದೇ ರೀತಿ ಕೇಶಿರಾಜ ಎಂಬ ಬಸವಣ್ಣನವರ ಹಿರಿಯ ಸಮಕಾಲೀನ ಶರಣ ಪೆರ್ಮಾಡಿ ರಾಯನ ಮಂತ್ರಿಯಾಗಿದ್ದಾಗ, ಆತನು ರಾಜ ಅಥವಾ ಮಂತ್ರಿಗಳೊಡನೆ ಕಾಲ ಕಳೆಯಲಿಚ್ಚಿಸದೆ, ಶರಣರ ಗೋಷ್ಠಿಯಲ್ಲಿ ಕಾಲ ಕಳೆಯಲು ಇಚ್ಚಿಸುತ್ತಾನೆ. ಅವನ ಇಚ್ಛೆ ಎಷ್ಟು ಸ್ಥಿರ ಮತ್ತು ಬಲವಾಗಿತ್ತು ಎಂಬುದನ್ನು ಒಂದು ಪ್ರಸಂಗ ಸ್ಪಷ್ಟಪಡಿಸುತ್ತದೆ: ಒಮ್ಮೆ ಅವನು ಶರಣ ಗೋಷ್ಠಿಯಲ್ಲಿದ್ದಾಗ ರಾಜನು ಅವನನ್ನು ಕರೆ ತರಲು ಭಟರನ್ನು ಕಳಿಸುತ್ತಾನೆ; ರಾಜನಲ್ಲಿಗೆ ಹೋಗಲು ಕೇಶಿರಾಜನಿಗೆ ಇಷ್ಟವಿಲ್ಲದೆ, ಆದರೂ ಸಿಡಿಮಿಡಿಗೊಂಡು ಅವನಲ್ಲಿಗೆ ಹೋದಾಗ ಮಾತಿಗೆ ಮಾತು ಬೆಳೆದು ತನ್ನ ಮಂತ್ರಿಪದವಿಯನ್ನು ತ್ಯಜಿಸಿ ಆ ಪದವಿಗೆ ಸಂಬಂಧಿಸಿದ ಉಂಗುರ ಪೋಷಾಕು ಮುಂತಾದ ಸೌಲಭ್ಯಗಳನ್ನೆಲ್ಲ ಹಿಂದಿರುಗಿಸಿ, ತನ್ನ ಸತಿಯೊಡನೆ ಸಮೀಪದಲ್ಲಿದ್ದ ವಂಶವರ್ಧನನೆಂಬ ಶಿವಭಕ್ತನ ಮನೆಗೆ ಹೋಗುತ್ತಾನೆ. ವಂಶವರ್ಧನನು ಮಹಾಮನೆ (ಶರಣರ ಗೋಷ್ಠಿ) ನಡೆಸುತ್ತಾ ಇರುತ್ತಾನೆ. ಅನೇಕ ಶಿವಭಕ್ತರೊಡನೆ ಕೇಶಿರಾಜ ತ್ರಿಪುರಾಂತಕ ದೇವಾಲಯಕ್ಕೆ ಹೋಗುತ್ತಿರುವಾಗ ಭಕ್ತರು ಊದುತ್ತಿದ್ದ ಕಹಳೆ, ಕೊಂಬು, ಬಾರಿಸಿದ ಕರಡಿಮಜಲು ಮುಂತಾದ ವಾದ್ಯಗಳ ಶಬ್ದವನ್ನು ಕೇಳಿದ ಪೆರ್ಮಾಡಿ ರಾಜನಿಗೆ ಈ ಗೌರವ, ಸತ್ಕಾರಗಳು ಯಾರಿಗೆ ಎಂದು ನೋಡಲು ಹೊರ ಬರುತ್ತಾನೆ. ಅದು ಕೇಶಿರಾಜನಿಗೆ ಎಂದು ಗೊತ್ತಾದಾಗ ಅವನಿಗೆ ಪಶ್ಚಾತ್ತಾಪವಾಗಿ, ಅವನು ಕೇಶಿರಾಜನನ್ನು ನನ್ನ ಅರಮನೆಯನ್ನೇ ‘ಮಹಾಮನೆ’ ಎಂದು ತಿಳಿದು ಹಿಂದಿರುಗಿ ಬಂದು ಮಂತ್ರಿ ಪದವಿಯನ್ನು ಒಪ್ಪಿಕೋ ಎಂದು ಬೇಡಿಕೊಳ್ಳುತ್ತಾನೆ3.

ಆದರೆ ಭೀಮಕವಿ ಬಸವ ಪುರಾಣದಲ್ಲಿ ‘ಮಹಾಮನೆ’ ಎಂಬ ಪದವನ್ನಾಗಲಿ, ‘ಅನುಭವ ಮಂಟಪ’ ಎಂಬ ಪದವನ್ನಾಗಲಿ ಅಥವಾ ಅವುಗಳಿಗೆ ಸಮಾನಾರ್ಥಕವಾದ ಮತ್ತಾವ ಪದವನ್ನಾಗಲಿ ಮತ್ತೆ ಉಪಯೋಗಿಸುವುದಿಲ್ಲ. ಆದರೆ ಬಸವಣ್ಣನವರು ಅನುಭವ ಮಂಟಪದಲ್ಲಿ ಶರಣ ಗೊಷ್ಠಿಯನ್ನು ನಡೆಸಿದರು ಎಂಬುದನ್ನು ಮತ್ತೊಂದು ರೀತಿಯಲ್ಲಿ ಅವನು ಹೇಳುತ್ತಾನೆ. ಮಂಗಳವೇಢೆಯಲ್ಲಿ ಕರಣಿಕರಾಗಿದ್ದಾಗ ಅವರ ಮಾವ ಬಲದೇವನು ತೀರಿಕೊಂಡಾಗ ಬಿಜ್ಜಳನು ಅವನ ಸ್ಥಾನದಲ್ಲಿ ಬಸವಣ್ಣನವರನ್ನು ದಂಡನಾಯಕರನ್ನಾಗಿ ನೇಮಿಸುತ್ತಾನೆ. ಆಗ ಬಸವಣ್ಣನವರು ತಾವು ಮುಂದೆ ಮಾಡಬೇಕಾದದ್ದನ್ನು ಪ್ರತಿಜ್ಞೆ ಮಾಡುತ್ತಾರೆ. ಮೊದಲನೆಯದು ನಿತ್ಯಮುಂ ಶಿವರಾತ್ರಿಯಂ ಮಾಳ್ಪುದು4. ಅವಿರತವಾಗಿ ದಾಸೋಹ ಮಾಡುವುದು5; ಹರ ಗಣಗಳಿಗೆ ಅರ್ಪಿಸದೆ ಏನನ್ನು ಸೇವಿಸದಿರುವುದು6. ಭೋಜನ ಸ್ವೀಕರಿಸುವ ಮೊದಲು ಎಲ್ಲರೂ ತಮ್ಮ ತಮ್ಮ ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ಅಂದರೆ ಅನುದಿನವೂ ಶಿವರಾತ್ರಿಯನ್ನು ಆಚರಿಸಬೇಕು. (ಶಿವರಾತ್ರಿ ಎಂದರೆ ಇಡೀ ರಾತ್ರಿಯನ್ನು ಶಿವನ ನೆನಹಿನಲ್ಲಿಯೇ ಕಳೆಯುವುದು). ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅನುಭವ ಮಂಟಪದ (ಮಹಾಮನೆಯ) ಕಾರ್ಯಕ್ರಮಗಳೆಲ್ಲವೂ ಜರುಗಬೇಕು ಎಂಬುದು ಅವರ ಪ್ರತಿಜ್ಞೆಗಳ ಸಾರಾಂಶ.

ಚೆನ್ನಬಸವಣ್ಣ ಮಹಾಮನೆಯ ಮಾಡಿ ‘ರುದ್ರಲೋಕವ ಮತ್ರ್ಯಲೋಕಕ್ಕೆ ತಂದಾತ ಬಸವಣ್ಣ”7 ಮತ್ತು ಕಲ್ಯಾಣದಲ್ಲಿ 28000 ಮಹಾಮನೆಗಳು ಇದ್ದವು ಎನ್ನುತ್ತಾನೆ. ಸಿದ್ಧರಾಮನು ತನ್ನ ವಚನಗಳಲ್ಲಿ ಮಹಾಮನೆಯನ್ನು ಪ್ರಸ್ತಾಪಿಸುತ್ತಾನೆ8.

ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಸತ್ಸಂಗಗಳು (ಶರಣರ ಗೋಷ್ಠಿಗಳು) ಅಲ್ಲಿ ಭಾಗವಹಿಸುತ್ತಿದ್ದ ಸಾಧಕರಿಗೆ ಆಧ್ಯಾತ್ಮಿಕವಾಗಿ ಅನುಕೂಲಕರವಾಗಿದ್ದವು. ಅನುಭವ ಮಂಟಪ ಸ್ಥಾಪನೆಯಾದುದೆ ಒಂದು ದೊಡ್ಡ ತತ್ವದ ಆಧಾರದ ಮೇಲೆ. ಬಸವಣ್ಣನವರ ಪ್ರಕಾರ ಪ್ರತಿ ಮನುಷ್ಯನು ಜಂಗಮ ಲಿಂಗವೇ. ಆದರೆ ಅದು ಬಹಳ ಜನರಿಗೆ ಗೊತ್ತಿಲ್ಲ. ಮರದಲ್ಲಿ ಅಗ್ನಿ ಅವ್ಯಕ್ತವಾಗಿರುವಂತೆ ಮನುಷ್ಯನಲ್ಲಿ ಪ್ರಾಣಲಿಂಗ ಅವ್ಯಕ್ತವಾಗಿದೆ. ಎರಡು ಮರದ ತುಂಡುಗಳನ್ನು ಮಥನಿಸಿದರೆ ಅವುಗಳಲ್ಲಿರುವ ಅಗ್ನಿ ಪ್ರಕಟವಾಗುವಂತೆ ಅನುಭವದ (ಸತ್ಸಂಗದ) ಮೂಲಕ (ಮತ್ತು ಇತರ ಆಧ್ಯಾತ್ಮಿಕ ಸಾಧನೆಯ ಮೂಲಕ) ಮಾನವನಲ್ಲಿ ಅಂತಸ್ಥವಾಗಿರುವ ಲಿಂಗ ಪ್ರಕಟವಾಗುತ್ತದೆ ಎಂದು ಅಕ್ಕಮಹಾದೇವಿ ಹೇಳುತ್ತಾರೆ.

ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.
ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ9

ಆದುದರಿಂದ ಅನುಭವ ಮಂಟಪ ಒಂದು ಉಪಷ್ಟಂಭಕ(catalyst)ವಾಗಿ ಕೆಲಸ ಮಾಡುತ್ತಿತ್ತು. ಮತ್ತು ಹಾಗೆ ಮಾಡುವುದು ಆವಶ್ಯಕವಾಗಿತ್ತು.
ಶೂನ್ಯಸಂಪಾದನೆಗಳನ್ನು ನಂಬುವುದಾದರೆ ಅದರಲ್ಲಿ ಬಸವಣ್ಣ ಚನ್ನಬಸವಣ್ಣ ಅಲ್ಲಮಪ್ರಭು ಸಿದ್ಧರಾಮಯ್ಯ ಮುಂತಾದವರೂ ಅಲ್ಲದೆ ಕೆಲವು ಸ್ತ್ರೀಯರೂ ಭಾಗವಹಿಸುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಇವರೆಲ್ಲರ ಆಧ್ಯಾತ್ಮಿಕ ಸಾಧನೆ ಎಷ್ಟು ಮುಂದುವರಿದಿತ್ತು ಎಂಬುದನ್ನು ಅಲ್ಲಿ ಭಾಗವಹಿಸಿದ್ದ ಅಕ್ಕಮಹಾದೇವಿಯ ಈ ಕೆಳಗಿನ ವಚನ ಪ್ರತಿಬಿಂಬಿಸುತ್ತದೆ.

ಬಸವಣ್ಣನ ಭಕ್ತಿ, ಚನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮ ಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣರ ಆರೂಢ ಸ್ಥಲ,
ಸಿದ್ಧರಾಮಯ್ಯನ ಸಮಾಧಿ ಸ್ಥಲ, ಇತ್ಯಾದಿ10

ಹಿರಿಯರ ಈ ಆಧ್ಯಾತ್ಮಿಕ ಮಾರ್ಗದರ್ಶನ ಕಿರಿಯ ಸಾಧಕರಿಗೆ ಬೇಕಾಗಿತ್ತು ಮತ್ತು ಅದು ಅನುಭವಮಂಟಪದಲ್ಲಿ ಮಾತ್ರ ಸಿಕ್ಕುತ್ತಿತ್ತು. ಅನುಭವ ಮಂಟಪದಲ್ಲಿ ಚರ್ಚೆ, ದಾಸೋಹಗಳ ಜೊತೆ ಅನುಭಾವದ ಬಗ್ಗೆ ವಿಚಾರ ವಿನಿಮಯ ಆಗಲೇಬೇಕು. ಇದರಿಂದ ಸಾಧಕರಿಗೆ ಒಂದು ದೊಡ್ಡ ಸಹಾಯವಾಗುತ್ತಿತ್ತು. ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿ ತನಗೆ ಅದರಿಂದಾದ ಪ್ರಯೋಜನವನ್ನು ಈ ಎರಡು ವಚನಗಳಲ್ಲಿ ಬಣ್ಣಿಸುತ್ತಾರೆ:

ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು.
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು.
ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನ್ನ ಅರಿವು ಸ್ವಯವಾಯಿತ್ತು.
ಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗೆ ಮತ್ತಾವುದಿಲ್ಲವಯ್ಯ ಪ್ರಭುವೆ11.

ಬಸವಣ್ಣನ ಮನೆಯ ಮಗಳಾದ ಕಾರಣ
ಭಕ್ತಿಪ್ರಸಾದವ ಕೊಟ್ಟನು.
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕಪ್ರಸಾದವ ಕೊಟ್ಟನು.
ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ
ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು.
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು.
ಮಡಿವಾಳಯ್ಯನ ಮನೆಯ ಮಗಳಾದ ಕಾರಣ
ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು.
ಇಂತೀ ಅಸಂಖ್ಯಾತ ಗಣಂಗಳೆಲ್ಲರು
ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ
ಶ್ರೀಪಾದಕ್ಕೆ ಯೋಗ್ಯಳಾದೆನು12.

ಇಂಥ ಪ್ರಯೋಜನವನ್ನು ಪಡೆಯಲೆಂದೇ ಇತರರೂ ಅನುಭವ ಮಂಟಪಕ್ಕೆ ಬರುತ್ತಿದ್ದರು.

ಬಸವಣ್ಣನವರ ಮಹಾಮನೆಯ ಶರಣಗೋಷ್ಠಿಯಲ್ಲಿ ಮತ್ತೊಂದು ಕಾರ್ಯಕ್ರಮ ರೂಪುಗೊಂಡಿತು. ಯಾವುದೇ ಶರಣಗೋಷ್ಠಿಯಲ್ಲಿ ಸಂಗೀತ ಇದ್ದಂತೆ ಬಸವಣ್ಣನವರ ಮಹಾಮನೆಯಲ್ಲಿಯೂ ಇತ್ತು. ಆದರೆ ಅಲ್ಲಿ ಹಳೆಯ ಹಾಡುಗಳನ್ನು ಬಳಸದೆ ಹೊಸ ಹಾಡುಗಳನ್ನು, ಅಂದರೆ ಶರಣರು ರಚಿಸಿದ ವಚನಗಳನ್ನು ಹಾಡಲಾಗುತ್ತಿತ್ತು. ಪ್ರತಿ ವಚನವು ಭಜನೆಯ ಗೀತದಂತೆ ಲಿಂಗವನ್ನು ಕುರಿತಾದುದಾಗಿಯೇ ಇರುತ್ತಿತ್ತು. ಪ್ರತಿ ವಚನವು ಆಯಾ ವಚನಕಾರರ ಪ್ರತಿಜ್ಞೆಯ ಜೊತೆಗೆ ಆತನ ಸ್ವಂತ ಅನುಭವವಾಗಿದ್ದು ಅದು ಇತರರಿಗೆ ಮಾರ್ಗದರ್ಶನದಂತೆ ಇರುತ್ತಿತ್ತು. ಇದರ ಪರಿಣಾಮ ಅಗಾಧವಾದದ್ದು. ಭಾಗವಹಿಸಿದ ಪ್ರತಿ ಶರಣನು ಈ ಹಾದಿಯಲ್ಲಿ ತನ್ನ ಸಾಧನೆಯನ್ನು ಮುಂದುವರಿಸಲು ನೆರವಾಗುತ್ತಿತ್ತು. ಶರಣರು ಹಾಡಿದ ವಚನಕ್ಕೆ ಗೀತ ಮಾತು ಎಂಬ ಪದವು ಬಳಕೆಯಾಯಿತು. ಇದರಿಂದಾಗಿ ಪ್ರತಿ ವಚನಕಾರನೂ ಗುರುವಾದನು. ಅವನು ರಚಿಸಿದ ವಚನವು ಲಿಂಗಾಯತ ಧರ್ಮದ ಸಿದ್ಧಾಂತವನ್ನು ಸಾರಬೇಕು, ಧರ್ಮದ ತಿಳಿವು ಹರಡಬೇಕು, ಏಕೆಂದರೆ ಅವನಿಗೆ ವೇದ್ಯವಾದುದು ಉಳಿದ ಶರಣರಿಗೆ ಗೊತ್ತಾಗಬೇಕು, ಎಂಬುದು ಬಸವಣ್ಣನವರ ನಿಯಮವಾಗಿರಬೇಕು. ಅಲ್ಲದಿದ್ದರೆ ಅಷ್ಟೊಂದು ಜನ, ಸಾವಿರಾರು ವಚನಗಳನ್ನು ಬರೆಯುವ ಅಗತ್ಯವಿರಲಿಲ್ಲ. ಬೈಬಲ್ ಮತ್ತು ಕುರಾನ್‍ನಲ್ಲಿರುವ ಮಾತುಗಳು ಬಹಳ ಜನರ ಮಾತುಗಳಲ್ಲ. ಆದರೆ ಲಿಂಗಾಯತ ಧರ್ಮವನ್ನು ಸಾರುವ ವಚನಗಳು 12ನೇ ಶತಮಾನದ ಸುಮಾರು 200 ಜನರ ಮಾತುಗಳು ಎಂಬುದನ್ನು ಗಮನಿಸಬೇಕು. ಏಸು, ಬುದ್ಧ ಮುಂತಾದವರು ತಮ್ಮ ಧರ್ಮ ಪ್ರಚಾರ ಮಾಡಲು ಊರೂರು ತಿರುಗಿದರು. ಆದರೆ ಬಸವಣ್ಣನವರು ಮಂತ್ರಿ ಆಗಿದ್ದುದರಿಂದ ಊರೂರು ತಿರುಗುವುದು ಸಾಧ್ಯವಿರಲಿಲ್ಲ. ಹೊಸ ಧರ್ಮದ ಆಶಯವನ್ನು ಎಲ್ಲೆಡೆ ಪಸರಿಸಲು ಇತರರನ್ನು ಕಳಿಸುವ ಅಗತ್ಯವಿತ್ತು. ಶಾಂತರಸ ಎನ್ನುವ ಶರಣ ವಚನಗಳ ಗ್ರಂಥ ಪಾಲಕನಾಗಿದ್ದ ಎಂಬ ವಿಷಯ ಇಲ್ಲಿ ಪ್ರಸ್ತುತ.

ಅನುಭವ ಮಂಟಪವನ್ನು ಕೆಲವರು ಧಾರ್ಮಿಕ ಸಂಸತ್ ಎಂದು ವರ್ಣಿಸುವುದು ಉಂಟು. ಇದು ಸ್ವಲ್ಪ ಉತ್ಪ್ರೇಕ್ಷಾತ್ಮಕ ಪ್ರಶಂಸೆ ಎನಿಸುತ್ತದೆ. ಅನುಭವ ಮಂಟಪ (ಹೆಸರೇ ಸೂಚಿಸುವಂತೆ) ಧಾರ್ಮಿಕ ಅಥವಾ ಆಧ್ಯಾತ್ಮಿಕ ಅನುಭವಗಳ ವಿನಿಮಯ ಕೇಂದ್ರವಷ್ಟೇ ಆಗದೆ ಸಮಾಜದ ಅನೇಕ ಸಂಗತಿಗಳು ಅಲ್ಲಿ ಚರ್ಚೆಗೆ ಒಳಗಾಗುತ್ತಿದ್ದವು. ಅಲ್ಲಿ ಸೇರುತ್ತಿದ್ದವರಲ್ಲಿ ಮೋಳಿಗೆ ಮಾರಯ್ಯನಂಥ ರಾಜರೂ ಇದ್ದರು, ನುಲಿಯ ಚಂದಯ್ಯನಂಥ ಹಗ್ಗ ಮಾಡಿ ಮಾರುತ್ತಿದ್ದ ಶ್ರಮದ ಕಾಯಕದವರೂ ಇದ್ದರು; ಬ್ರಾಹ್ಮಣರೂ ಇದ್ದರು, ಶೂದ್ರರೂ ಪಂಚಮರೂ ಇದ್ದರು; ಪುರುಷರಂತೆ ಸ್ತ್ರೀಯರೂ ಇದ್ದರು. ಆದರೆ ಅಲ್ಲಿ ಸೇರುತ್ತಿದ್ದ ಶರಣರೆಲ್ಲಾ ಒಂದೇ ಧರ್ಮದ ಭಕ್ತರು ಮತ್ತು ಅನುಭಾವಿಗಳು ಎಂಬುದು ಗಮನಾರ್ಹ. ವಿಶ್ವ ಧಾರ್ಮಿಕ ಸಂಸತ್ತಿನಲ್ಲಿ (Parliament of World Religions) ಭಾಗವಹಿಸಿದವರು ಕ್ರೈಸ್ತರು, ಯಹೂದಿಗಳು, ಮುಸ್ಲಿಮರು, ಹಿಂದುಗಳು, ಬೌದ್ಧರು, ಮುಂತಾದವರು ಇದ್ದರು. ಈ ಧರ್ಮದವರೆಲ್ಲ ತಮ್ಮ ತಮ್ಮ ಧರ್ಮದ ಬಗೆಗೆ ಮಾತನಾಡುವ ಪ್ರತಿನಿಧಿಗಳನ್ನು ಕಳುಹಿಸಿದ್ದರು. ಆ ಪ್ರತಿನಿಧಿಗಳು ತಮ್ಮ ತಮ್ಮ ಧರ್ಮದ ನಿಲವುಗಳನ್ನೂ ಶ್ರೇಷ್ಠತೆಯನ್ನೂ ಪ್ರತಿಪಾದಿಸುತ್ತಿದ್ದರೆ ಹೊರತು ಇತರ ಧರ್ಮಗಳಲ್ಲಿ ಪಾಲಿಸುತ್ತಿದ್ದ ಆಧ್ಯಾತ್ಮಿಕ ಸಾಧನೆಯನ್ನು ತಮ್ಮ ಧರ್ಮದಲ್ಲಿ ಅಂತರ್ಗತ ಮಾಡಿಕೊಳ್ಳಬೇಕೆಂಬ ಉದ್ದೇಶ ಉಳ್ಳವರಾಗಲಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಇತರರಿಂದ ಆಧ್ಯಾತ್ಮಿಕ ಮಾರ್ಗದರ್ಶನ ಬಯಸಿ ಬಂದವರಾಗಲಿ ಆಗಿರಲಿಲ್ಲ. ಅಂದರೆ ಆ ಪ್ರತಿನಿಧಿಗಳು ಇತರ ಧರ್ಮಗಳಿಂದ ಕಲಿಯುವುದೇನೂ ಇರಲಿಲ್ಲ. ಹೀಗಾಗಿ ಅಲ್ಲಿ ಭಾಷಣಗಳಿದ್ದವು, ಸಂವಾದಗಳಿದ್ದವು, ಆದರೆ ಮಾರ್ಗದರ್ಶನದ ಬೇಡಿಕೆ ಇರಲಿಲ್ಲ. ಆದರೆ ಅನುಭವ ಮಂಟಪದಲ್ಲಿ ಭಾಗಿಯಾಗಿದ್ದವರು ತಮ್ಮ ಅನುಭವಗಳನ್ನು ಇತರರಿಗೆ ತಿಳಿಸಿ, ಇತರರ ಅನುಭವಗಳಿಂದ ತಾವು ಕಲಿತು, ತಮ್ಮ ಆಧ್ಯಾತ್ಮಿಕ ಸಾಧನೆಯು ಇನ್ನೂ ಹೆಚ್ಚು ಫಲಕಾರಿಯಾಗುವಂತೆ ಮಾಡಿಕೊಳ್ಳುತ್ತಿದ್ದರು. ಅವರು ಇತರರು ಮಾಡಿದ ಭಾಷಣಗಳನ್ನು ಕೇಳಲು ಬಂದವರಲ್ಲ. ತಾವು ಕಲಿತು ಇತರರಿಗೂ ಕಲಿಸುವ ಗುರುಗಳಾಗುತ್ತಿದ್ದರು.

ಮತ್ತೆ ಕೆಲವರು ಅನುಭವ ಮಂಟಪದಲ್ಲಿ ಅಲ್ಲಮರೊಡನೆ ಇತರ ಶರಣರು ಮಾಡಿದ ಸಂವಾದಗಳನ್ನು ಪ್ಲೇಟೋವಿನ ಸಂವಾದಗಳಿಗೆ ಹೋಲಿಸುತ್ತಾರೆ. ಇದೂ ಉತ್ಪ್ರೇಕ್ಷಾತ್ಮಕ ಪ್ರಶಂಸೆಯೇ. ಪ್ಲೇಟೋವಿನ ಸಂವಾದಗಳಲ್ಲಿ ಸಾಕ್ರೆಟೀಸನೇ ಕೇಂದ್ರ ವ್ಯಕ್ತಿ. ಅವನ ಪದ್ಧತಿ ಸ್ವಲ್ಪ ವಿಚಿತ್ರವಾದರೂ ಬಹಳ ಪರಿಣಾಮಕಾರಿಯಾಗಿತ್ತು. ಅವನ ಸಂವಾದಗಳಲ್ಲಿ ಕಾಣುವ ವಿಷಯಗಳು ವೈವಿಧ್ಯಪೂರ್ಣವಾಗಿದ್ದವು. ಅವುಗಳಲ್ಲಿ ರಾಜಕೀಯ, ಕಳ್ಳತನ, ಸುಳ್ಳು ಹೇಳುವುದು, ಸೌಂದರ್ಯ, ಆತ್ಮ, ದೈವ, ಜ್ಞಾನ ಮತ್ತು ನಂಬಿಕೆ, ನ್ಯಾಯ ಮುಂತಾದ ವಿಷಯಗಳಿದ್ದವು. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ನಂಬಿಕೆ ಮತ್ತು ಸಿದ್ಧಾಂತಗಳನ್ನು ತಾರ್ಕಿಕವಾಗಿ ಪರೀಕ್ಷಿಸಿ ಅವುಗಳ ದೋಷಗಳನ್ನು ತೋರಿಸಿ, ಅವುಗಳನ್ನು ತ್ಯಜಿಸಿ, ಒಂದು ಸರಿಯಾದ ತೀರ್ಮಾನಕ್ಕೆ ಬರುತ್ತಿದ್ದ. ಇದು ಅವನ ಪದ್ಧತಿಯಾಗಿತ್ತು. ಉದಾಹರಣೆಗೆ, ಅವನು ಕಳ್ಳತನ ಮಾಡುವುದು ಒಳ್ಳೆಯದೇ ಎಂಬ ಪ್ರಶ್ನೆ ಕೇಳುತ್ತಾನೆ. ಜನಸಾಮಾನ್ಯರ ನಂಬಿಕೆಯಂತೆ ಕಳ್ಳತನ ಕೆಟ್ಟದ್ದು. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಒಬ್ಬ ತಂದಿದ್ದ ವಿಷದ ಸೀಸೆಯನ್ನು ಅವನ ಸ್ನೇಹಿತ ಕರುಣೆಯಿಂದ ಕದ್ದರೆ ಅದು ಅನೈತಿಕವಲ್ಲ. ಇಂಥ ಅನೇಕ ಲೌಕಿಕ ವಿಷಯಗಳ ಬಗ್ಗೆ ಚರ್ಚಿಸಿ, ಒಂದು ತೀರ್ಮಾನಕ್ಕೆ ಬರುವುದು ಅವನ ಪದ್ಧತಿಯಾಗಿತ್ತು. ಆದರೆ ಅಲ್ಲಿನ ಸಂವಾದಗಳಲ್ಲಿ ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ಧಿಯಂತಹ ಸ್ವ-ಪರಿವರ್ತನೆಯ ಸಂಗತಿಗಳು ಇರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಸ್ವತಃ ಅನುಭಾವಿಯಾದ ಆತ ಯಾರಿಗೂ ಆಧ್ಯಾತ್ಮಿಕ ಪ್ರಗತಿಗೆ ಮಾರ್ಗದರ್ಶನ ನೀಡಲಿಲ್ಲ. ಆದರೆ ಅನುಭವ ಮಂಟಪದ ಸದಸ್ಯರಿಗೆ ಅಧ್ಯಕ್ಷರಾಗಿದ್ದ ಅಲ್ಲಮರು ಆಧ್ಯಾತ್ಮಿಕ ಪ್ರಗತಿಗೆ ಮಾರ್ಗದರ್ಶನ ನೀಡಬಲ್ಲವರಾಗಿದ್ದರು. ಆಧ್ಯಾತ್ಮಿಕ ಪ್ರಗತಿಗೆ ಬೇಕಾದ ಮಾರ್ಗದರ್ಶನ ಬಯಸದ ಸಾಧಕರು ಅಲ್ಲಿಗೆ ಬರುತ್ತಿರಲಿಲ್ಲ. ಇದನ್ನು ಪರಿಶೀಲಿಸಿದರೆ ವಿದ್ಯೆಯನ್ನು ಪಡೆಯುವುದು ದ್ವಿಜರಿಗೆ ಮಾತ್ರ ಸಾಧ್ಯ ಎಂಬ ಮಾತು ಅಲ್ಲಿ ತಿರಸ್ಕೃತವಾಗಿರುವುದು ಸ್ಪಷ್ಟವಾಗುತ್ತದೆ.
ಮಹಾಮನೆಯಲ್ಲಿ ಮಾದಾರ ಚೆನ್ನಯ್ಯನೂ ಭಾಗವಹಿಸುತ್ತಿದ್ದ13.

ಸಿರಿಯಾಳ, ದಾಸಿಮಯ್ಯ, ಸಿಂಧು ಬಲ್ಲಾಳ, ಗಂಗೆ ವಾಳುಕರೆಲ್ಲ ಲಿಂಗವನ್ನರಿಯದೆ ಚತುಷ್ಪದ ಪದವಿಯನ್ನು ಪಡೆದರು. ಅದಕ್ಕಿಂತ ಹೆಚ್ಚಿನ ಲಿಂಗಾಂಗ ಸಾಮರಸ್ಯವನ್ನು ಪಡೆಯಲಿಲ್ಲ. ಅಂಥ ಹೆಚ್ಚಿನ ಧ್ಯೇಯವೊಂದಿದೆ ಎಂಬುದು ಸಹ ಅವರಿಗೆ ಗೊತ್ತಿರಲಿಲ್ಲ; ಏಕೆಂದರೆ ಅವರು ಪ್ರಾಯಶಃ ಬಸವಣ್ಣನವರು ಸ್ಥಾಪಿಸಿದ್ದ ಅನುಭವಮಟಪದಲ್ಲಿ ಭಾಗವಹಿಸಿರಲಿಲ್ಲ. ಸಿದ್ಧರಾಮೇಶ್ವರರು ಅದನ್ನು ಹೀಗೆ ಹೇಳುತ್ತಾರೆ: ಸಂಗನ ಬಸವಣ್ಣ “ಕಲ್ಯಾಣದಲ್ಲಿ ಮನೆಯ ಕಟ್ಟಿದರೆ ಮತ್ರ್ಯಲೋಕವೆಲ್ಲವೂ ಭಕ್ತಿಸಾಮ್ರಾಜ್ಯವಾಯಿತ್ತು. ಆ ಮನೆಯ ತಲೆವಾಗಿ ಹೊಕ್ಕವರೆಲ್ಲರೂ ನಿಜಲಿಂಗ ಫಲವ ಪಡೆದರು. ಸಂಗನ ಬಸವನ ಮಹಾಮನೆಗೆ ನಮೋ ನಮೋ”14.

ಈ ಮೇಲಿನ ವಚನಗಳು ಎರಡು ಹೊಸ ಸಿದ್ಧಾಂತಗಳನ್ನು ವ್ಯಕ್ತಪಡಿಸುತ್ತವೆ: 1.ಮತ್ರ್ಯಲೋಕದ ಮಹಾಮನೆ ಹಾಳಾಗಬಾರದು ಎಂದರೆ ಮೊದಲೇ ಮಹಾಮನೆ ಇತ್ತು, ಅದು ನಾಶವಾಗಬಾರದು ಎಂದು ಬಸವಣ್ಣನವರು ಮತ್ರ್ಯಕ್ಕೆ ಬಂದರು. 2. ಆದರೆ ಬಸವಣ್ಣ ಕೇವಲ ಮೊದಲಿನ ಮಹಾಮನೆಯನ್ನು ಉಳಿಸಿಕೊಂಡರಷ್ಟೇ ಅಲ್ಲ, ಅದಕ್ಕೆ ಹೊಸ ಜೀವ ತುಂಬಿದರು. ಅದು ಹಳೆಯ ಮಹಾಮನೆಯೇ ಆಗಿದ್ದರೆ ಸ್ವಾಭಾವಿಕವಾಗಿಯೇ ನಾಶವಾಗುತ್ತಿತ್ತು. ಅದರ ನಾಶಕ್ಕೆ ಯಾರೂ ಪ್ರಯತ್ನ ಮಾಡುವ ಅಗತ್ಯವಿರಲಿಲ್ಲ. ಹಿಂದಿದ್ದ ಮಹಾಮನೆಗಳು: ಉದಾಹರಣೆಗೆ: ಕೊಂಡುಗುಳಿ ಕೇಶಿರಾಜ ವಂಶವರ್ಧನನ ಮನೆಯಲ್ಲಿ ಶರಣರ ಗೋಷ್ಠಿ ನಡೆಸಿದ. ಆದರೆ ಈ ಕೇಶಿರಾಜ ಬ್ರಾಹ್ಮಣ. ದೇಗುಲಗಳಿಗೆ ದತ್ತಿ ಕೊಟ್ಟವನು. ಪ್ರಾಯಶಃ ದೇಗುಲಗಳನ್ನು ಕಟ್ಟಿಸಿದವನು. ವೇದಶಾಸ್ತ್ರಪುರಾಣತರ್ಕಗಳನ್ನು ಕಲಿಯುವವರಿಗೆ ಅನುಕೂಲ ಮಾಡಿಕೊಟ್ಟವನು. ಈ ಪದ್ಧತಿಯೇ ಮುಂದುವರಿಯುವುದಾಗಿದ್ದರೆ ಬಸವಣ್ಣನವರು ಮತ್ರ್ಯಕ್ಕೆ ಬರುವ ಅಗತ್ಯವೇ ಇರಲಿಲ್ಲ. ಲಿಂಗಾಯತ ಧರ್ಮವನ್ನು ಅರುಹುವ, ಆ ಅರುಹನ್ನು ಅನುಷ್ಠಾನಕ್ಕೆ ತರುವ ಅಗತ್ಯವಿರಲಿಲ್ಲ. ಆದರೆ ದೇಗುಲ ಪದ್ಧತಿ, ದತ್ತಿ ಪದ್ಧತಿ, ಬ್ರಾಹ್ಮಣ ಅಥವಾ ವೈದಿಕ ಪಾರಮ್ಯ ಇವುಗಳನ್ನು ಜನರು ವಿರೋಧಿಸುತ್ತಿದ್ದರು. ಪ್ರಾಯಶಃ ತಮ್ಮ ವಿರೋಧವನ್ನು ಅವರು ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಲಿಲ್ಲ. ಅಂಥವರಿಗೆ ಬಾಯಾದರು ಬಸವಣ್ಣನವರು. ಆಗ ಮಹಾಮನೆಯನ್ನು ಸುಧಾರಿಸುವ ಅಗತ್ಯವುಂಟಾಯಿತು.

ಸುಧಾರಿಸುವುದು ಎಂದರೇನು? ಲಿಂಗಾಯತ ಧರ್ಮವನ್ನು ಅನುಷ್ಠಾನಕ್ಕೆ ತರುವುದು. ವಚನ ಬರೆದವರೆಲ್ಲ ನಡೆಯನ್ನು ಆಚರಿಸಿಯೇ ಬರೆದರು; ಮೊದಲು ನಡೆದು ಆಮೇಲೆ ನುಡಿದವರು. ಚೆನ್ನಬಸವಣ್ಣ ಹೇಳುವಂತೆ “ಕ್ರಿಯೆಯೇ ಜ್ಞಾನ, ಜ್ಞಾನವೇ ಕ್ರಿಯೆ”.
ಬಸವಣ್ಣನವರು ಕಲ್ಯಾಣದಲ್ಲಿದ್ದಾಗ ಅವರು ಬಿಜ್ಜಳನ ದಂಡಾಧಿಕಾರಿಯಾಗಿದ್ದರು. ಅವರು ಹೊಸ ಧರ್ಮದ ತತ್ವಗಳನ್ನು ಜನಮಾನಸದಲ್ಲಿ ಬಿತ್ತ ತೊಡಗಿದ್ದರು. ಅದು ಅನುಭವ ಮಂಟಪ ಅಥವಾ ಮಹಾಮನೆಯಲ್ಲಿ ನಡೆಯುತ್ತಿತ್ತು. ಆ ಹೊಸ ಧರ್ಮದ ಸಿದ್ಧಾಂತಗಳನ್ನು ಕೇಳಲು ಒರಿಸ್ಸಾ, ಗುಜರಾತ್, ಕಾಶ್ಮೀರ, ಕೇರಳ, ಪಾಂಡ್ಯ, ಬಂಗಾಳ, ಮುಂತಾದ ದೇಶಗಳಿಂದ ಜನರು ಬರುತ್ತಿದ್ದರು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಿಂದಲೂ ಅಲ್ಲದೆ ಬೇರೆ ರಾಜ್ಯಗಳಿಂದಲೂ ಬರುತ್ತಿದ್ದರು.
ಬಸವಣ್ಣನವರು ಅನುಭವ ಮಂಟಪ ಮಾಡಿದಂತೆ ತುಕಾರಾಮನು ದಿಂಡಿ(ಭಕ್ತರ ಗೋಷ್ಠಿ)ಯನ್ನು ಮಾಡಿದ; ಅವರು ವಚನ ಬರೆದಂತೆ ಅವನು ಅಭಂಗಗಳನ್ನು ಬರೆದ. ಆದರೆ ವೇದಶಾಸ್ತ್ರಪುರಾಣಗಳನ್ನು ವಿರೋಧಿಸಲಿಲ್ಲ. ಬಸವಣ್ಣನವರ ಅನುಭವ ಮಂಟಪ ಸಮಾಜದ ಎಲ್ಲ ಸ್ತರದವರನ್ನು ಒಳಗೊಂಡಿದ್ದು, ವ್ಯಕ್ತಿಗತ ಬದುಕಿಗೆ ಮತ್ತು ಸಮಾಜಕ್ಕೆ ಅಗತ್ಯವಾದ ಸಂಗತಿಗಳೆಲ್ಲವೂ ಅಲ್ಲಿ ಚರ್ಚೆಗೆ ಬರುತ್ತಿದ್ದವು.

ಗ್ರಂಥಋಣ
1. 1/449
2. ಡಾ.ಆರ್.ಸಿ.ಹಿರೇಮಠ(ಸಂ): ಬಸವ ಪುರಾಣ (ಶ್ರೀ ಮುರುಘಾ ಮಠ ಧಾರವಾq, 2010), ಸಂ. ಸಂಧಿ 3, ಪ. 84.
3. ಎಂ.ಎಂ.ಕಲಬುರ್ಗಿ (ಸಂ): ಹರಿಹರನ ರಗಳೆಗಳು (ಕನ್ನಡ ವಿಶ್ವವಿದ್ಯಾಲಯ, ಹಂಪಿ, 1999), ಪು. ಕೇಶಿರಾಜ ದಣ್ಣಾಯಕರ ರಗಳೆ, ಸ್ಥಲ 2, ಕೊನೆಯ ಪ್ಯಾರಾ.
4. ಡಾ.ಆರ್.ಸಿ.ಹಿರೇಮಠ (ಸಂ): ಪೂರ್ವೋಕ್ತ, ಸಂ.6, ಪ.1.
5. ಅದರಲ್ಲೇ, ಪ.3. 6. ಅದರಲ್ಲೇ, ಪ. 5.
7. 3/1743 8. 4/843
9. 5/378. 10. 5/293
11. 5/292 12. 5/294
13. 1/135. 14. 4/1378.

Previous post ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
Next post ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ

Related Posts

ಗುರುವಂದನೆ
Share:
Articles

ಗುರುವಂದನೆ

October 13, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕರ್ನಾಟಕದ ಮಠ-ಪೀಠಗಳ ಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ-ಮಾನ ಗಳಿಸಿದ ಮಹಾನ್ ಚೇತನ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಇಂದು ಅವರನ್ನು ಬಹುವಾಗಿ...
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
Share:
Articles

ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ

April 6, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ವಿಶ್ವದಲ್ಲಿಯೇ ಆಗದ ಧಾರ್ಮಿಕ, ಸಾಮಾಜಿಕ ಪರಿವರ್ತನೆಯಾಗಿದ್ದು ಹನ್ನೆರಡನೆ ಶತಮಾನದಲ್ಲಿ. ಅಂದಿನ ಸನಾತನ ಧರ್ಮ ಮತ್ತು ಸಮಾಜದಲ್ಲಿದ್ದ ಅಸಮಾನತೆ, ಜಾತೀಯತೆ, ಮೌಢ್ಯ,...

Comments 9

  1. ಶೋಭಾದೇವಿ, ಧಾರವಾಡ
    Jun 19, 2025 Reply

    ಶರಣರ ವಿಚಾರಧಾರೆಗಳನ್ನು ಪ್ರೊ. ಎನ್.ಜಿ.ಮಹಾದೇವಪ್ಪನವರ ಕಲ್ಯಾಣದ ಮಹಾಮನೆ ಲೇಖನ ಎಳೆಎಳೆಯಾಗಿ ತೋರಿಸುತ್ತದೆ🙏🙏

  2. ಗಂಗಾಧರ ಹುಬ್ಬಳ್ಳಿ
    Jun 22, 2025 Reply

    ಅನುಭವ ಮಂಟಪ ಹೇಗೆ ಆ ವೇಳೆಗೆ ಪ್ರಚಲಿತದಲ್ಲಿ ಇದ್ದ ಇತರ ಭಕ್ತಿ ಗೋಷ್ಠಿಗಳಿಗಿಂತ ಭಿನ್ನವಾಗಿತ್ತು ಎಂಬುದನ್ನು ಇತಿಹಾಸದ ಹಿನ್ನೆಲೆಯಲ್ಲಿ ತೋರಿಸಿಕೊಟ್ಟಿದ್ದಾರೆ.

  3. ಚಿಕ್ಕವೀರಯ್ಯ, ನರಸಿಂಹರಾಜಪುರ
    Jun 25, 2025 Reply

    ಮಹಾಮನೆ ಮತ್ತು ಅನುಭವ ಮಂಟಪ ಎರಡೂ ಬೇರೆಬೇರೆಯಲ್ಲ…. ಶರಣರು ಕುಳಿತು ಮಾತನಾಡಿದ, ಬಾಯಿ ಬದುಕಿದ ಆ ತಾವನ್ನು ಇಲ್ಲವೆನ್ನುವ ಬುದ್ದಿಗೇಡಿಗಳಿಗೆ ವಿವೇಕ ಮೂಡಲಿ.

  4. Savitri N
    Jun 25, 2025 Reply

    ವಿದ್ವತ್ಪೂರ್ಣ ಲೇಖನ.

  5. ಶಿವಪುತ್ರ ಬೆಂಗಳೂರು
    Jun 25, 2025 Reply

    ಧಾರ್ಮಿಕ ಸಂಸತ್, ಭಕ್ತರ ಗೋಷ್ಠಿ, ಶರಣ ಗೋಷ್ಠಿ- ಎನ್ನುವ ಹೆಸರುಗಳಿಗಿಂತ ಅನುಭವ ಮಂಟಪ, ಮಹಾಮನೆ ಹೆಸರುಗಳು ಬಹಳ ಚೆನ್ನಾಗಿ ನಮ್ಮ ಶರಣರಿಗೆ ಹೊಂದುತ್ತವೆ. ಹೆಸರಿನ ಸುತ್ತ ಹಲವಾರು ಮಗ್ಗಲುಗಳನ್ನು ತೋರಿಸಿದ ಮಹಾದೇವಪ್ಪ ಶರಣರಿಗೆ ಶರಣುಗಳು🙏

  6. Anil A.G
    Jun 26, 2025 Reply

    ಕಲ್ಯಾಣದಲ್ಲಿ 28000 ಮಹಾಮನೆಗಳಿದ್ದವೆಂದು ಚನ್ನಬಸವಣ್ಣನವರ ವಚನಗಳಲ್ಲಿ ದಾಖಲಾಗಿದ್ದರೆ, ಪ್ರತಿಯೊಬ್ಬ ಶರಣನ ಮನೆಯೂ ಮಹಾಮನೆಯೇ ಆಗಿರಬಹುದು….. ಸಂಶಯವೇ ಇಲ್ಲ, ಅಲ್ಲವಾ ಸರ್?

    • ಹರೀಶ್ ಕುಮಾರ್, ಸಣ್ಣೇಹಳ್ಳಿ
      Jul 4, 2025 Reply

      ಅನುಭವ ಮಂಟಪದ ತಂಟೆಗೆ ಬರುವವರು ಕೈಸುಟ್ಟು ಕೊಳ್ಳುತ್ತಾರೆ….. ಬಸವಾದಿ ಶರಣರು ಬೆಂಕಿಯಂತೆ, ತಂಗಾಳಿಯಂತೆ, ಹದವಾದ ಮಳೆಯಂತೆ.

  7. ನಾಗರಾಜ ಸೊಲ್ಲಾಪುರ
    Jul 1, 2025 Reply

    ಅನುಭವ ಮಂಟಪ ಕರ್ನಾಟಕ ಇತಿಹಾಸದ ಹೆಮ್ಮೆ. ಅದು ನಮ್ಮ ಅಸ್ಮಿತೆ. ಅದರ ಆಶಯ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ.

  8. ಶೇಖರ್ ಬೆಳಗಾವಿ
    Jul 4, 2025 Reply

    “ಬಸವಣ್ಣನವರು ಅನುಭವ ಮಂಟಪ ಮಾಡಿದಂತೆ ತುಕಾರಾಮನು ದಿಂಡಿ(ಭಕ್ತರ ಗೋಷ್ಠಿ)ಯನ್ನು ಮಾಡಿದ; ಅವರು ವಚನ ಬರೆದಂತೆ ಅವನು ಅಭಂಗಗಳನ್ನು ಬರೆದ. ಆದರೆ ವೇದಶಾಸ್ತ್ರಪುರಾಣಗಳನ್ನು ವಿರೋಧಿಸಲಿಲ್ಲ. ಬಸವಣ್ಣನವರ ಅನುಭವ ಮಂಟಪ ಸಮಾಜದ ಎಲ್ಲ ಸ್ತರದವರನ್ನು ಒಳಗೊಂಡಿದ್ದು, ವ್ಯಕ್ತಿಗತ ಬದುಕಿಗೆ ಮತ್ತು ಸಮಾಜಕ್ಕೆ ಅಗತ್ಯವಾದ ಸಂಗತಿಗಳೆಲ್ಲವೂ ಅಲ್ಲಿ ಚರ್ಚೆಗೆ ಬರುತ್ತಿದ್ದವು.”
    ಲೇಖನ ಓದಿದೆ, ಹೊಸ ವಿಷಯಗಳನ್ನು ನೀಡಿತು…

Leave a Reply to ಶಿವಪುತ್ರ ಬೆಂಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಹಾಯ್ಕುಗಳು
ಹಾಯ್ಕುಗಳು
November 10, 2022
ತುತ್ತೂರಿ…
ತುತ್ತೂರಿ…
June 10, 2023
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
Copyright © 2025 Bayalu