Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
Share:
Articles March 6, 2024 ಮಲ್ಲಿಕಾರ್ಜುನ ಕಡಕೋಳ

ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ

ನಮ್ಮೂರು ಕಡಕೋಳದ ಪ್ರತಿಯೊಂದು ಓಣಿಯಲ್ಲೂ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳನ್ನು ಲೋಕ ಸಂವೇದನೆಯ ಜವಾರಿ ದನಿಯಲ್ಲಿ ಹಾಡುವವರಿದ್ದಾರೆ. ಅದೊಂದು ನೈಸರ್ಗಿಕ ಪ್ರಕ್ರಿಯೆಯಂತೆ ಬೆಳೆದುಬಂದ ಪರಂಪರೆಯೇ ಆಗಿದೆ. ಯಾವುದೇ ಸಂಗೀತ ಶಾಲೆ, ಕಾಲೇಜು, ಶಾಸ್ತ್ರೀಯ ಶಿಸ್ತು ನೆಲೆಗಳಲ್ಲಿ ಅಕಾಡೆಮಿಷಿಯನ್ ತರಹ ಅವರು ವ್ಯಾಸಂಗ ಮಾಡಿ ಬಂದವರಲ್ಲ.

ಅದು ಅಗ್ದೀ ಸಹಜವಾಗಿ ಹೂವು ಅರಳಿದಂತೆ, ಸೂರ್ಯಚಂದ್ರರ ಬಿಸಿಲು ಬೆಳದಿಂಗಳು ಮತ್ತು ಸೃಷ್ಟಿಯ ಗಾಳಿ ಬೆಳಕುಗಳು ಹರಡಿದಂತೆ. ಒಂದು ಖುಷಿಯ ವಿಷಯವೆಂದರೆ, ನಿಸರ್ಗ ಸುಬಗದಂತಹ ಜನಸಂಸ್ಕೃತಿಯ ಈ ಹಾಡುಗಾರಿಕೆ ಎಲ್ಲ ಜಾತಿ, ಮತ, ಪಂಥ, ಪಂಗಡ, ಧರ್ಮದವರನ್ನು ತಮ್ಮ ನಿತ್ಯ ಬದುಕಿನ ಉಸಿರಿನ ಭಾಗದಂತೆ ಬಿಗಿದಪ್ಪಿಕೊಂಡಿದೆ. ನಮ್ಮೂರಿನ ದಲಿತರಾದಿಯಾಗಿ ಮುಸ್ಲಿಮರು ಅದಕ್ಕೆ ಹೊರತಲ್ಲ.

ಮತ್ತೊಂದು ವಿಶೇಷವೆಂದರೆ ಬಹುಪಾಲು ಅವರೆಲ್ಲ ಅನಕ್ಷರಸ್ಥರು. ಯಾರೊಬ್ಬರೂ ಸಂಗೀತ ಪರಿಕರಶಾಸ್ತ್ರ ಅಭ್ಯಾಸದ ಎಲೈಟ್ ಸ್ಕೂಲ್ ಆಫ್ ಥಾಟ್ಸ್ ಸಿಸ್ಟಮ್ ಗಳಲ್ಲಿ ರೂಪುಗೊಂಡವರಲ್ಲವೇ ಅಲ್ಲ. ಆದರೆ ಯಾವೊಬ್ಬ ಸಂಗೀತ ಸೆಲೆಬ್ರಿಟಿಗಿಂತ ಕಮ್ಮೀ ಇಲ್ಲದಂತೆ ಹಾರ್ಮೋನಿಯಂ, ಕ್ಯಾಸಿಯೋ, ತಬಲಾ, ದಮಡಿ, ಕಂಜರಾ, ಚಿನ್ನಿ, ಚಳ್ಳಮ ನುಡಿಸುವುದರಲ್ಲಿ ಪರಿಣಿತರು. ನೆನಪಿರಲಿ ಅವರು ಏಕತಾರಿ ನುಡಿಸುವುದರಲ್ಲೂ ಅಷ್ಟೇ ಜಾಣರು. ಅವರೆಲ್ಲರೂ ಅಕ್ಷರಶಃ ಏಕಲವ್ಯರು. ಹಾಡುಗಾರಿಕೆಯಲ್ಲಿ ಯಾವುದೇ ಸಂಗೀತ ವಿದ್ವಾಂಸರು, ಗವಾಯಿಗಳಿಗೆ ಎಳ್ಳರ್ಧ ಕಾಳಿನಷ್ಟು ಕಮ್ಮೀ ಇಲ್ಲದ ಮಹಾನ್ ಪ್ರತಿಭೆಗಳು. ಅದು ಭಜನೆಯೆಂಬ ತತ್ವಪದ ಗಾಯನ ಮಾತ್ರವಲ್ಲದೇ ಜಾನಪದದ ಹತ್ತಾರು ಪ್ರಾಕಾರಗಳಲ್ಲಿಯೂ ನಿಪುಣರು.

ಪ್ರಾಯಶಃ ಅದು ಅನುಭಾವದ ಹರಿಕಾರ ನಮ್ಮ ಮುತ್ಯಾ ಮಡಿವಾಳಪ್ಪನ ಕಾಲದಿಂದಲೂ ನಡೆದುಬಂದ ಗುಡ್ ಹೆರಿಟೇಜ್. ನಮ್ಮ ಶ್ರೀಮಠದ ಹಿರಿಯ ಗುರುಗಳಾಗಿದ್ದ ಲಿಂ. ಶ್ರೀವೀರೇಶ್ವರ ಮಹಾದೇವರು ಮಠದ ಜೇಳಜಿ ಕಟ್ಟೆಯ ಸತ್ಸಂಗ ಮಾಡುತ್ತಿದ್ದರು. ಅಲ್ಲಿ ಮಡಿವಾಳಪ್ಪನ ಅಪರೂಪದ ಪದಗಳನ್ನು ಆನಂದಮಯ ಲಹರಿಯಲ್ಲಿ ಭಾವತುಂಬಿ ಹಾಡುತ್ತಿದ್ದುದನ್ನು ನಾನು ನೂರಾರು ಬಾರಿ ಕೇಳಿದ್ದೇನೆ. ಅದರಲ್ಲೂ ಅವರು ನಾ ಬರಬಾರದಿತ್ತು ಈ ಊರಿಗೆ/ ಬಂದು ಬಿದ್ದೇನ ಮಾಯದ ಬಲೆಯೊಳಗೆ// ಎಂಬ ತತ್ವಪದ ಹಾಡುತ್ತಿದ್ದರೆ ಮಡಿವಾಳಪ್ಪನೇ ಸಾಕ್ಷಾತುಗೊಂಡು ಹಾಡಿದಂತೆ ಕೇಳಿಸುತ್ತಿತ್ತು. ಹೀಗೆ ಮಡಿವಾಳಪ್ಪ ಅವರ ಅನುಭಾವಧಾರೆಯ ಪ್ರತೀಕದಂತೆ ಬಾಳಿ ಬದುಕಿದ ಇಬ್ಬರು ಭೀಮಾವಧೂತರು ನಮ್ಮೂರಿನಲ್ಲಿ ಆಗಿ ಹೋಗಿದ್ದಾರೆ.

ಒಬ್ಬರು ಮಠದ ಬಳಿಯ ಬೆಂಚಿಯೊಳಗಿನ ಭೀಮರಾಯ ಸಾಧು. ಬೆಂಚಿಯೊಳಗೆ ಸಿದ್ದಲಿಂಗಯ್ಯ ಮುತ್ಯಾ ಅವರ ಗದ್ದುಗೆ ಬಾಜೂಕೆ ಇವರ ಗದ್ದುಗೆ ಇದೆ. ಮತ್ತೊಬ್ಬರು ಮಠದ ಕೆಳಗಿನ ಗವಿ ಭೀಮಾಶಂಕರ ಅವಧೂತರು. ಇವರದು ನೆಲಗವಿಯೊಳಗೆ ಗದ್ದುಗೆ ಇದೆ. ಇವರ ಕಡೆಗಾಲದ ಜತೆಗಾರರಾದ ಇನ್ನೋರ್ವ ಪ್ರಾತಃಸ್ಮರಣೀಯರಿದ್ದಾರೆ. ಅವರು ಮಡಿವಾಳಪ್ಪ ಮತ್ತವರ ಶಿಷ್ಯರು ವಿರಚಿಸಿದ ತತ್ವಪದಗಳ ಸಂಗ್ರಹ ಮತ್ತು ಪ್ರಕಟಣೆಗೆ ತನ್ನ ಬದುಕನ್ನೇ ಮುಡಿಪಿಟ್ಟವರು. ಅವರೇ ಅಣಜಗಿ ಗೌಡಪ್ಪ ಸಾಧುಗಳು. ಇವರ ಗದ್ದುಗೆ ಜೆಂಬೇರಾಳದಲ್ಲಿದೆ. ಹೀಗೇ ತರುವಾಯ ತರುವಾಯದಂತೆ ನಡೆದು ಬಂದ ತತ್ವಪದಗಳ ಬಹುದೊಡ್ಡ ಹಾಡುಸರಣಿಯ ಹೊಳೆ ನಮ್ಮೂರಲ್ಲಿ ಹರಿಗಡಿಯದೇ ಹಿರೇಹಳ್ಳದಂತೆ ಹರಿದು ಬಂದಿದೆ. ಆಧುನಿಕತೆಯ ಭರಾಟೆಯಲ್ಲಿ ವಿಸ್ಮರಣೆಗೆ ಸರಿದು ಹೋಗುತ್ತಿರುವ ಕಡಕೋಳ ನೆಲದ ನೆನಪುಗಳನ್ನು ಪೂಜ್ಯರಾದ ಡಾ.ಷ.ಬ್ರ.ರುದ್ರಮುನಿ ಶಿವಾಚಾರ್ಯರ ಪಟ್ಟಾಧಿಕಾರ ರಜತ ಮಹೋತ್ಸವದ ನೆಪದಲ್ಲಿ ಪುಸ್ತಕದ ದಾಖಲೆಗೆ ಸೇರಿರುವುದು ಸಂತಸ. ಅದು ಅಕ್ಷರಶಃ ನಮ್ಮೂರಿನ ಮರೆತ ಹೆಜ್ಜೆ ಗುರುತುಗಳ ಗುಲ್ದಾಸ್ಥ.

ಮರೆತು ಹೋಗುತ್ತಿರುವ ಅನುಭಾವದ ಈ ಹೆಜ್ಜೆ ಗುರುತುಗಳು ಕಡಕೋಳ ಪರಿಸರ ಮೀರಿ ದೂರದ ಮಹಾರಾಷ್ಟ್ರದ ಮಿರಜ, ಸಾಂಗ್ಲಿ, ಸೊಲ್ಲಾಪುರದವರೆಗೂ ಸಾಗಿ ಹೋಗಿವೆ. ಗವಿ ಭೀಮಾಶಂಕರರು ಅನುಭಾವದ ವಾರಸುದಾರರಂತೆ ಕನ್ನಡನಾಡಿನ ಗಡಿದಾಟಿ ಮಹಾರಾಷ್ಟ್ರದವರೆಗೂ ಅದನ್ನು ಕೊಂಡೊಯ್ದರು. ಸೊಲ್ಲಾಪುರದಲ್ಲಿ ಭೀಮಾಶಂಕರ ಅವಧೂತರು ಕಟ್ಟಿದ ‘ಕಡಕೋಳ ಮಡಿವಾಳಪ್ಪ’ ಹೆಸರಿನ ಮಠವೇ ಅದಕ್ಕೆ ಸಾಕ್ಷಿ. ಅಷ್ಟೇ ಯಾಕೆ ಖುದ್ದು ಭೀಮಾಶಂಕರ ಮಹಾರಾಜರೇ ತತ್ವಪದಗಳ ತವನಿಧಿಯೇ ಆಗಿದ್ದರು.

ಗವಿ ಭೀಮಾಶಂಕರರು ನಾದ ತನ್ಮಯತೆಯಿಂದ ಏಕತಾರಿ ನುಡಿಸುತ್ತಾ ಭಾವ ಪರವಶರಾಗಿ ತತ್ವಪದ ಹಾಡುವುದನ್ನು ಕೇಳುವುದು ಮತ್ತು ನೋಡುವುದೇ ಸಂಭ್ರಮ ಆಗಿತ್ತೆಂದು ಅವರ ಖಾಸಾ ಶಿಷ್ಯನಾಗಿದ್ದ ನನ್ನ ತಂದೆ ಸಾಧು ಶಿವಣ್ಣ ಹೇಳುತ್ತಿದ್ದರು. ಗವಿ ಭೀಮಾಶಂಕರರ ಸಿಸು ಮಕ್ಕಳಾಗಿದ್ದ ಪೂಜೇರಿ ನಿಂಗಪ್ಪ, ತತ್ವಪದಗಳ ಕಣಜವೇ ಆಗಿದ್ದ ಯತ್ನಾಳದ ನಿಂಗವ್ವ ಭೀಮಶಾ ದಂಪತಿಗಳು ತಮ್ಮ ಗುರುಮಾರ್ಗ ಪರಂಪರೆಯ ಒಡನಾಟದ ಮಾತುಗಳಿಂದಲೇ ಖುದ್ದಾಗಿ ಕೇಳಿದ್ದೇನೆ. ನಮ್ಮ ಭಾಗದ ಭೀಮಾಶಂಕರ ಹೆಸರಿನ ಅವಧೂತ ಪರಂಪರೆ ಬಗ್ಗೆಯೇ ಇನ್ನೊಮ್ಮೆ ವಿವರವಾಗಿ ಬರೆಯುವೆ.

ಮಡಿವಾಳಪ್ಪನ ಮಠದ ಬಳಿಯ ಭೀಮಾಶಂಕರ ಅವಧೂತರ ಗವಿ. ಅದರ ಮುಂದಿರುವ ನಿಗಿನಿಗಿ ಕೆಂಡದಧುನಿ. ಅದೊಂದು ಪುಟ್ಟ ಅಗ್ನಿದಿವ್ಯದ ವಿಮಲ ಸರೋವರ. ಇವತ್ತಿಗೂ ಮಡಿವಾಳಪ್ಪನ ಜಾತ್ರೆಯ ಸಂದರ್ಭದಲ್ಲಿ ಬೃಹತ್ ವೃತ್ತಾಕಾರದ ಧುನಿಯ ಸುತ್ತಲೂ ಪರ ಊರುಗಳಿಂದ ಬಂದ ಜಟಾಧಾರಿ ಸಾಧು, ಸಂತರ ಏಕತಾರಿ ಪದ ನಾದ ಸಂವಾದಗಳ ಜೀವನದಿಯೇ ಉಕ್ಕುತ್ತದೆ. ಅದನ್ನು ಕಂಡು ಕೇಳಿಯೇ ಆನಂದಿಸಬೇಕು.

ಮೂವತ್ನಾಲ್ಕು ವರ್ಷಗಳ ಹಿಂದೆ ತೀರಿಹೋದ ನನ್ನಪ್ಪ ಸಾಧು ಶಿವಣ್ಣ ಮತ್ತು ಈಗ್ಗೆ ಎಂಟು ವರ್ಷಗಳ ಹಿಂದೆ ತೀರಿಹೋದ ನನ್ನವ್ವ ನಿಂಗಮ್ಮತಾಯಿ ಇಬ್ಬರೂ ಭೀಮಾಶಂಕರ ಅವಧೂತರ ಶಿಶು ಮಕ್ಕಳಾಗಿದ್ದರು. ಗುರು ಭೀಮಾಶಂಕರ ಅವಧೂತರ ಸಾಧನೆಯ ಗರಡಿಯಲ್ಲಿ ಪಳಗಿ ಗುರುವಿನಿಂದ ನೂರಾರು ತತ್ವಪದಗಳನ್ನು ಹಾಡಲು ಕಲಿತಿದ್ದರು. ಪ್ರತಿ ಪದಕ್ಕು ಟೀಕು (ಪದಾರ್ಥ) ಹೇಳುತ್ತಿದ್ದರು. ಟೀಕು ತಾರಕಕ್ಕೆ ಹೋಗಿ ಒಮ್ಮೊಮ್ಮೆ ಅವ್ವ ಟೀಕಾಬಾಯಿಯೇ ಆಗುತ್ತಿದ್ದಳು. ಆದರೆ ಅಪ್ಪ ಮಾತ್ರ ಟೀಕಾಚಾರ್ಯ ಆದ ನೆನಪು ನನಗಿಲ್ಲ. ಹೀಗೆ ನಾನು ಹುಟ್ಟಿ ಬೆಳೆದ ಬಾಲ್ಯದ ನಮ್ಮಮನೆ ತತ್ವಪದಗಳ ಹಾಡುಗಾರಿಕೆಯ ಜಾತ್ಯತೀತ ಗರಡಿಮನೆಯೇ ಆಗಿತ್ತು.

ಅವರ ವಾರಗೆಯ ಗುರ್ತಾಯಿ ಲಕ್ಷ್ಮೀದೇವಿ, (ಭೀಮಾಶಂಕರರು ಅವರನ್ನು ಪರಮಶಂಕರಿ ಎಂದು ಕರೆಯುತ್ತಿದ್ದರಂತೆ) ಮತ್ತು ಅವರದೇ ಕಿರು ತಲೆಮಾರಿನ ಮಹಾಂತಪ್ಪ ಸಾಧು, ನಿಂಗಪ್ಪ ಪೂಜೇರಿ, ಮಳ್ಳಿ ಗುರವ್ವ, ಹುಡೇದ ಭೀಂಬಾಯಿ, ಹುಡೇದ ಸಿದ್ಧಪ್ಪ ಮತ್ತು ಯಲ್ಲಪ್ಪ, ಮಾಲಿ ಮಾಂತಪ್ಪಗೌಡ, ಬಡಿಗೇರ ಇಮಾಮಸಾಬ, ಗುತ್ತೇದಾರ ಅಬ್ದುಲಸಾಬ, ಹಿರೇಗೋಳ ಹಣಮಂತರಾಯ, ಚಪರಾಶಿ ಸಾಯಿಬಣ್ಣ, ಮತ್ತು ನಮ್ಮ ನಡುವಿನ ಮುದ್ದಾ ಭೀಮರಾಯ ಇನ್ನೂ ಅನೇಕರು ಭೀಮಾಶಂಕರ ಅವಧೂತರು ಹಾಡುತ್ತಿದ್ದ ಪದಗಳ ಗಾಯನ ಸೊಗಸನ್ನು ಆರ್ದ್ರತೆ ತುಂಬಿ ಅನುಭಾವಿಸಿದವರು. ಗವಿ ಭೀಮಾಶಂಕರ ಗರಡಿಯಲ್ಲಿ ರೂಪುಗೊಂಡ ಒಬ್ಬೊಬ್ಬರು ನೂರಾರು ತತ್ವಪದಗಳನ್ನು ಜೀವತುಂಬಿ, ಭಾವತುಂಬಿ ಹಾಡುವ ಮೂಲಕ ಪದಗಳನ್ನೇ ಜೀವದ ಉಸಿರಾಗಿಸಿಕೊಂಡವರು. ಹೊಟ್ಟೆಪಾಡಿಪಾಗಿ ಊರುಬಿಟ್ಟು ಹೋದವರಲ್ಲಿ ಗುತ್ತೇದಾರ ಬಾದಶಾ ಪ್ರಮುಖರು.

ಮಡಿವಾಳಪ್ಪನ ಭಜನೆಯ ಹಾಡುಗಾರಿಕೆ ಮೂಲಕ ಅವರೆಲ್ಲರೂ ಪರವಶಗೊಳ್ಳುವ ಸಾಧನ ಕ್ರಿಯೆ ನನ್ನನ್ನು ದಿಙ್ಮೂಢನನ್ನಾಗಿಸುತ್ತಿತ್ತು. ಹೌದು ಭೀಮಾಶಂಕರ ಅವಧೂತರ ಗವಿ ಪರಂಪರೆಗೆ ಅಂಥದೊಂದು ದಿವಿನಾದ ಶಕ್ತಿ ಇದೆ. ಅದು ಶಾಕ್ತ ಮತ್ತು ಸಾಧು ಸಂತರ ತತ್ವಪದಗಳ ಹಾಡುಗಾರಿಕೆಯ ಆರೂಢ ಮಾರ್ಗದ ಜಂಗಮ ನಡೆ. ಅದು ಅಚಲ ಸತ್ಸಂಗದ ಶಕ್ತಿಮೇಳ. ಅದರ ಹಾದಿ ಅನಾದಿಯು ಪರಾತ್ಪರ ಮತ್ತು ಅಪರಂಪಾರ. ತಾವು ಹಾಡಿದ ಹಾಡುಗಳ ಒಳಾಳಕ್ಕಿಳಿದು ನೋಡುವ, ಹಾಗೆ ನೋಡಿದ್ದನ್ನು ಒಡೆದು ಹೇಳುವ ನಿಗೂಢಾರ್ಥಗಳ ಅನುಸಂಧಾನ ಅಮೋಘವಾದುದು. ತನ್ನೊಳಗಿನ ಒಳಗನ್ನು ಹುಡುಕಿಕೊಳ್ಳುವ ಅಂತರಂಗದ ಅರಿವಿನ ಅನಂತ ಶೋಧನೆ.

ಅಂತಹ ಅರಿವನ್ನು ಆಗುಮಾಡುವ ಕ್ರಿಯಾನುಸಂಧಾನದ ಸಾಧು ಸಾಂಗತ್ಯ. ಅದು ತತ್ವಪದಗಳ ಲೋಕ ಮೀಮಾಂಸೆಯೂ ಹೌದು. ಇದು ಮೊನ್ನೆ ಮೊನ್ನೆವರೆಗೂ ನಮ್ಮೂರಿನ ಮಹಾಂತಪ್ಪ ಸಾಧುಗಳು ಕಾಲವಾಗುವವರೆಗೂ ನಡೆದುಬಂದ ಸಂಪ್ರದಾಯವೇ ಗಿದೆ. ಮಹಾಂತಪ್ಪ ಸಾಧು ಏಕಾಂತದಲಿ ಗವಿಯೊಳಗೆ ಸಿದ್ಧಾಸನದಲಿ ಕುಳಿತುಕೊಳ್ಳುತ್ತಿದ್ದ. ಹಾಗೆ ಕುಳಿತು ಸಿದ್ಧಪತ್ರಿ ಮತ್ತು ಪರಮಶಂಕರಿಯ ನಾದೋನ್ಮಾದದಲ್ಲಿ ತೇಲುವುದೇ ವಿಭಿನ್ನ ಪ್ರೀತಿ. ಗವಿಯ ಭೀಮಾಶಂಕರ ಅವಧೂತರ ಸಿದ್ಧ ಸಾಧನೆಯ ಗುರುಮಾರ್ಗದ ನಡೆಯಲ್ಲಿ ಈಗೀಗ ವ್ಯಕ್ತಿಗತ ಮಾದರಿ ಸ್ಥಿತ್ಯಂತರಗಳನ್ನು ಗುರುತಿಸ ಬಹುದಾಗಿದೆ.

ಬೆಂಚಿಯೊಳಗಿನ ಭೀಮರಾಯ ಸಾಧು ಭಕ್ತಿಮಾರ್ಗದ ಸಾಧಕರಾಗಿದ್ದರು. ಅವರದು ಭಕ್ತಿಯೋಗ. ತನ್ನ ಜೀವಿತದ ಕಡೆಯ ಗಳಿಗೆವರೆಗೂ ಅವರು ಮಡಿವಾಳಪ್ಪನವರ ಕರ್ತೃಗದ್ದುಗೆ ಏರಿದವರಲ್ಲ. ಮಡಿವಾಳ ಶಿವಯೋಗಿಯ ಗುರುಮಾರ್ಗದ ಮೆಟ್ಟಿಲುಗಳನ್ನು ಏರುವ ಅರ್ಹತೆಗೆ ತಲುಪಬೇಕೆಂಬ ವಿನಮ್ರ ಹಾಗೂ ವಿನೀತ ಭಾವ ಅವರಲ್ಲಿತ್ತು. ಆ ಮೂಲಕವೇ ಅವರೊಳಗೆ ಮಡಿವಾಳಪ್ರಜ್ಞೆ ಅವತರಿಸಿತ್ತು. ಅದೇ ಕಾಲದ ಸೆರಗಿನಂಚಿಗೆ ಸೇರುವ ಗವಿ ಭೀಮಾಶಂಕರರದು ದೇವಿ ಆರಾಧನೆಯ ಶಾಕ್ತ ಸಂಪ್ರದಾಯ. ಪದತತ್ವಗಳ ತಾದಾತ್ಮ್ಯ ಮತ್ತು ಅನುಭೂತಿ ಪಂಥ ಅವರದು.

ಈ ಇಬ್ಬರಿಗೂ ಮನದೊಳಗೆ ಮಡಿವಾಳಪ್ರಭುವೇ ಮಹಾಗುರು. ಇಬ್ಬರೂ ಗುರುಪಂಥದ ಪರಮಾನುಯಾಯಿಗಳು. ಅನುಭಾವದಡಿಗೆ ಮಾಡಿದವರು. ಮಾಡಿದ್ದನ್ನು ಇತರರಿಗೂ ನೀಡಿದವರು. ತತ್ವಗಳನ್ನು ಉಣಬಡಿಸಿದವರು. ಗುರುಮಾರ್ಗದ ದಾರಿಯಲಿ ಗುರುತರ ಹೆಜ್ಜೆಗಳನ್ನಿಡುತ್ತಾ ಗಂಭೀರ ನಡೆಗಳನ್ನು ನಡೆದು ಬಂದವರು. ಸೋಹಂ ಅನ್ನದೇ ದಾಸೋಹಂ ಅಂದವರು. ಹೀಗೆ ತತ್ವಪದಗಳನ್ನು ನೆಲಮೂಲದ ಬೇರುಸಂಸ್ಕೃತಿ ನೆಲೆಯಾಗಿಸಿ ನಿತ್ಯಬದುಕಿನೊಂದಿಗೆ ತಳಕು ಹಾಕಿ ಕೊಂಡವರು ಇವರು.

ವರ್ತಮಾನದಲ್ಲಿ ಈ ಹಾಡು ಪರಂಪರೆ ನವ ಸ್ಥಿತ್ಯಂತರದ ರೂಪ ತಾಳಿದೆ. ಅದಕ್ಕೆ ಆಧುನಿಕತೆಯ ನವಿರು ಸ್ಪರ್ಶ‌. ಅಷ್ಟು ಸುದೀರ್ಘ ಹಾದಿಯನ್ನು ನಡೆದು ಬಂದ ಪದಗಳು ಅಲ್ಲೆಲ್ಲೋ ನಿಂತು ಕೊಂಡಂತೆ ಭಾಸವಾಗುತ್ತಿದೆ. ಸಹಜವಾಗಿ ಐಡೆಂಟಿಟಿ ಕ್ರೈಸಸ್ ಗಳು ಆದ್ಯತೆಯಂತೆ ಭಜನೆಕಾರರನ್ನು ಕಾಡಿವೆ. ಲೋಕ ಸಂಸ್ಕೃತಿಯೊಂದು ವ್ಯಕ್ತಿನೆಲೆಯ ಅಸ್ಮಿತೆಯ ಹುಡುಕಾಟದಲಿ ಕಳೆದು ಹೋಗುವ ದಿನಮಾನಗಳಿವು. ಕಳೆದೆರಡು ದಶಕಗಳಿಂದ ನಮ್ಮೂರ ತತ್ವಪದ ಭಜನೆಗಳ ತಂಡದಲ್ಲಿ ಅನೇಕ ಹೊಸ ಮನ್ವಂತರದ ಮುಖಗಳು. ಹುಡೇದ ನರಸಪ್ಪ, ಮಾಲಿ ರೇವಣ್ಣಗೌಡ, ಪೊಲೀಸ್ ಗೌಡಪ್ಪಗೌಡ, ಮಾಲಿ ಶಿವರಾಯಗೌಡ, ಹಿರೇಗೋಳ ಯಂಕಣ್ಣ, ಬಡಿಗೇರ ಮಾನಯ್ಯ. ಪೊಲೀಸ್ ಶಿವನಗೌಡ, ದುದ್ದಣಗಿ ಮಹಾಂತೇಶ, ನಾಯ್ಕೋಡಿ ಬಸವರಾಜ, ಹೊಸಮನಿ ಮಲಕಪ್ಪ ಅದರಲ್ಲೂ ಮಹಾಂತಪ್ಪ ಮತ್ತು ಸಾಯಿಬಣ್ಣ ಎಂಬ ಕಟ್ಟೀಮನಿ ದಲಿತ ಸೋದರರ ವಿನೂತನ ಶೈಲಿಯ ಭಜನೆ ಜನ ಮನ್ನಣೆ ಗಳಿಸಿದೆ.

ಇತ್ತೀಚೆಗೆ ನಿಧನರಾದ ನಮ್ಮೂರಿನ ಮತ್ತು ನನ್ನ ವಾರಗೆಯ ತಿಪ್ಪಣ್ಣ ಗವಾಯಿ ಅಂತಹ ಹುಡುಕಾಟದಲ್ಲಿದ್ದರು. ಅವರೊಬ್ಬ ಪ್ರತಿಭಾವಂತ ಗಾಯಕ. ಆಲಾಪನೆ ಮಾಡಿ ಶಾಸ್ತ್ರೀಯ ಲೆವೆಲ್ಲಿನಲ್ಲಿ, ಮತ್ತಿತರೆ ಟೀವಿಗಳಲ್ಲಿ ಬರುವ ಜನಪ್ರಿಯ ಮಾದರಿಯಲ್ಲಿ ಹಾಡುವ ಕ್ಲಾಸಿಕ್ ಲೆವೆಲ್ ತವಕ. ಬಹುದೊಡ್ಡ ಮಾನ್ಯತೆ ದಕ್ಕಬಹುದೆಂಬ ಹುಸಿ ಪ್ರತಿಷ್ಟೆಯ ಪ್ರಭಾವ ಜಾಲದಲ್ಲಿ ಅನೇಕರು ಬಂಧಿಯಾಗುತ್ತಿದ್ದಾರೆ. ಆ ಮೂಲಕ ನೆಲಮೂಲದ ಬೇರು ಸಂಸ್ಕೃತಿಯ ಹಾಡುಗಾರಿಕೆ ಮತ್ತು ಸಂಗೀತ ಪರಿಕರಗಳು ಕಾರ್ಪೊರೇಟ್ ತೆಕ್ಕೆಗೆ ಈಡಾಗುತ್ತಿರುವುದು ಮಾತ್ರ ಖೇದಕರ.

Previous post ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
Next post ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ

Related Posts

ಬಯಲು ಮತ್ತು ಆವರಣ
Share:
Articles

ಬಯಲು ಮತ್ತು ಆವರಣ

March 6, 2024 ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ
ಈ ಎರಡು ಪರಿಕಲ್ಪನೆಗಳು ಕೆಲವು ದಿನಗಳಿಂದ ನನ್ನನ್ನು ಕಾಡುತ್ತಿವೆ, ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತಿವೆ. ಈ ಬರಹದಲ್ಲಿ ಆ ಪ್ರಶ್ನೆಗಳನ್ನು ಓದುಗರ ಗಮನಕ್ಕೆ ತರುವುದು...
ಬೆಳಗಾವಿ ಅಧೀವೇಶನ: 1924
Share:
Articles

ಬೆಳಗಾವಿ ಅಧೀವೇಶನ: 1924

December 13, 2024 ಮಹೇಶ ನೀಲಕಂಠ ಚನ್ನಂಗಿ
“ಹನ್ನೆರಡನೆಯ ಶತಮಾನದಲ್ಲಿ ಆಗಿಹೋದ ಬಸವಣ್ಣನವರು ಈ ಕಾಲದಲ್ಲಿ ಇರುತ್ತಿದ್ದರೆ ಜಗತ್ತಿಗೇ ಪೂಜ್ಯವ್ಯಕ್ತಿಯಾಗಿ ಪರಿಣಮಿಸುತ್ತಿದ್ದರು. ಅವರು ಉಪದೇಶಿಸಿದ ತತ್ವಗಳಲ್ಲಿ...

Comments 6

  1. ಶಿವಾನಂದ ಪಾಟೀಲ್
    Mar 11, 2024 Reply

    ತತ್ವಪದದ ದಾರಿಯಲ್ಲಿರುವವರ ಹೆಸರುಗಳನ್ನು ಓದುತ್ತಾ ಮನಸ್ಸು ತುಂಬಿ ಬಂದಿತು. ನಮ್ಮೊಡನೆ, ನಮ್ಮೊಳಗೆ, ನಮ್ಮೊಂದಿಗೆ ಈ ಹಾಡು, ಈ ಒಡಪು ಬೆರೆತು ಹೋಗಲಿ… ಕಡಕೋಳದ ನೆನಪು ಅಜರಾಮರ.

  2. ಉಮಾಪತಿ, ಶಿವಮೊಗ್ಗ
    Mar 11, 2024 Reply

    ನಿಗೂಢ ಅರ್ಥಗಳುಳ್ಳ ತತ್ವಪದಗಳಲ್ಲಿ, ಸಂಸ್ಕೃತ ಶ್ಲೋಕಗಳಿಗಿಂತಲೂ ಹೆಚ್ಚಿನ ಆಳ ಇರುತ್ತದೆಂದು ಬಲ್ಲವರು ಹೇಳಿದ್ದನ್ನು ಕೇಳಿದ್ದೇನೆ. ಜೀವನದ ಮರ್ಮ ತಿಳಿಸಲು ಆಡುಮಾತನ್ನು ಹಾಡಾಗಿ ಹಾಡುವ ಅವರ ಜೀವನಾನುಭವದಲ್ಲಿ ಅವಿರಳ ಮಾರ್ಗದರ್ಶನ ಸಿಗುವುದು ಖಂಡಿತ.

  3. ದೇವರಾಜ್ ಜಮಖಂಡಿ
    Mar 14, 2024 Reply

    ಮಡಿವಾಳಪ್ಪನವರ ತತ್ವಪದಗಳು ರೆಕಾರ್ಡ್ ಆಗಿವೆಯೆಂದು ಕೇಳಲ್ಪಟ್ಟೆ, ಅವು ಎಲ್ಲಿ ಸಿಗಬಹುದು, ತಿಳಿಸುವಿರಾ?

  4. ಶಶಿಕಿರಣ ಕಲಾದಗಿ
    Mar 14, 2024 Reply

    ತತ್ವಪದ ಮನೆತನದ ಹಿನ್ನೆಲೆಯುಳ್ಳ ನೀವು ನಿಜಕ್ಕೂ ಭಾಗ್ಯವಂತರು. ಹಾಗೆ ನಿಮ್ಮನ್ನು ಕಾಡಿದ ಮತ್ತು ಯೋಚಿಸಲು ಹಚ್ಚಿದ, ಜೀವನದ ನಿಗೂಢಾರ್ಥವನ್ನು ತಿಳಿಸುವ ಪದಗಳನ್ನು ಅವುಗಳ ವ್ಯಾಖ್ಯಾನದೊಂದಿಗೆ ವಿವರಿಸುವಿರಾ?

  5. ಗಜಪತಿ ಶಿಗ್ಗಾಂವಿ
    Mar 19, 2024 Reply

    ಜನಸಂಸ್ಕ್ರತಿಯ ಹಾಡುಗಾರಿಕೆಯಲ್ಲಿ ಸರಳವಾಗಿ, ಯಾವ ಜಂಜಡವೂ ಇಲ್ಲದೇ ಬಾಳಿ ಬದುಕಬೇಕಾದ ವಿವೇಕ ಇದೆ. ಕಡಕೋಳು ಹೆಸರಲ್ಲೇ ಆ ನೆಲದ ವಿಶಿಷ್ಟತೆ ತುಂಬಿಕೊಂಡಿರುವ ಸತ್ಯವನ್ನು ಲೇಖನ ಬಿಚ್ಚಿ ತೋರಿದೆ.

  6. Jayashree G.N
    Mar 28, 2024 Reply

    ನನಗೂ ತತ್ವಪದಗಳ ಗುಂಪುಗಳಲ್ಲಿ ಕಾಲ ಹಾಕುವ ಅವಕಾಶ ಹಲವಾರು ಸಲ ಕೂಡಿ ಬಂದಿತ್ತು. ಅವರ ಮಾತು-ಹಾಡುಗಾರಿಕೆ ಎಲ್ಲವೂ ಚೇತೋಹಾರಕವಾಗಿರುತ್ತವೆ. ಆದರೆ ಯುವಜನರನ್ನು ಅಲ್ಲಿ ಎಲ್ಲೂ ನಾನು ಕಾಣಲಿಲ್ಲ. ಈ ಹಾಡುಗಬ್ಬದ ಸಂಪ್ರದಾಯ ಮುಂದಿನ ಜನಾಂಗವನ್ನು ತಲುಪುವುದೇ?

Leave a Reply to Jayashree G.N Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
Copyright © 2025 Bayalu