Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
‘ಅಲ್ಲಮ’ ಎಂಬ ಹೆಸರು
Share:
Articles August 6, 2022 ಡಾ. ಎನ್.ಜಿ ಮಹಾದೇವಪ್ಪ

‘ಅಲ್ಲಮ’ ಎಂಬ ಹೆಸರು

ಅಲ್ಲಮರ ವಚನಗಳಂತೆ ಅವರ ಹೆಸರೂ ವಿಚಿತ್ರ. ಅದರ ಅರ್ಥದ ಕುರಿತು ಅನೇಕ ಹೆಸರಾಂತ ಸಂಶೋಧಕರು ಚರ್ಚಿಸಿದ್ದಾರೆ. ಅಲ್ಲಮರ ತಂದೆತಾಯಿಗಳು ಮಗುವಿಗೆ ಅಲ್ಲಯ್ಯ ಎಂಬ ಹೆಸರಿಟ್ಟರು ಎಂದು ಹರಿಹರ ತನ್ನ ‘ಪ್ರಭುದೇವರ ರಗಳೆ’ಯಲ್ಲಿ ಹೇಳುತ್ತಾನೆ. ಈ ಹೆಸರು ಹತ್ತನೆಯ ಶತಮಾನದಿಂದಲೇ ಚಾಲ್ತಿಯಲ್ಲಿತ್ತು ಎಂದೂ ಶಾಸನಗಳಲ್ಲಿ ಪ್ರಯೋಗವಾಗಿರುವ ಅಲ್ಲಮನ್, ಅಲ್ಲಮರಸ, ಅಲ್ಲಗುಂದ, ಅಲ್ಲ ಗೌಡ, ಅಲ್ಲಪ್ಪ, ಅಲ್ಲೇಶ್ವರ, ಅಲ್ಲಮೇಶ್ವರ, ಅಲ್ಲಾಳ ಭಟ್ಟ, ಅಲ್ಲಸಾನಿ, ಅಲ್ಲಾಳಿಯಕ್ಕ, ಮುಂತಾದ ಹೆಸರುಗಳು ಆ ಹೆಸರಿನ ವಿವಿಧ ರೂಪಗಳು ಎಂದೂ ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ. ಅಲ್ಲ ಎಂಬುದು ಈ ಹೆಸರುಗಳ ಮೂಲ (ಧಾತು) ಎಂಬುದಂತೂ ಸ್ಪಷ್ಟ. ಹಾಗಾದರೆ ಅಲ್ಲಯ್ಯ ಅಲ್ಲಮ ಹೇಗಾದ? ಎಂಬ ಪ್ರಶ್ನೆ ಅನಿವಾರ್ಯ. ಇದಕ್ಕೂ ಚಿದಾನಂದಮೂರ್ತಿಯವರು ಒಂದು ಪರಿಹಾರವನ್ನು ನೀಡಿದ್ದಾರೆ: ಪುರುಷವಾಚಿ ಅಂಕಿತನಾಮಗಳಿಗೆ ಅಮ್ಮ ಅಥವಾ ಅಮ್ಮನ್ ಎಂಬ ಪ್ರತ್ಯಯ “ಸೇರಿ ಅಲ್ಲಮನ್ > ಅಲ್ಲಮ್ಮ > ಅಲ್ಲಮ ಎಂಬಂತಹ ನಾಮರೂಪಗಳು ನಿಷ್ಪನ್ನವಾಗುವುದು ನಮ್ಮಲ್ಲಿ ಬಹಳ ಕಾಲದಿಂದ ಬಳಕೆಯಲ್ಲಿದ್ದು – ಈಗಲೂ ಅದನ್ನು ಗುರುತಿಸಬಹುದು. ಕೃಷ್ಣಮಾಚಾರ್ (ಕೃಷ್ಣ+ಅಮ್ಮ+ಆಚಾರ್) ಎಂಬುದು ಅಂಥವುಗಳಲ್ಲಿ ಒಂದು”1. ಆದರೆ ಅಲ್ಲಯ್ಯ ಎಂದರೇನು, ಆ ಪದದ ಮೂಲ ಯಾವುದು, ಎಂಬುದು ಸಂಶೋಧಕರ ಪ್ರಶ್ನೆ. ಇದಕ್ಕೆ ಕೊಟ್ಟಿರುವ ಮುಖ್ಯವಾದ ಮೂರು ಉತ್ತರಗಳನ್ನು ಪರೀಕ್ಷಿಸೋಣ.

1.ಡಾ.ಎಲ್. ಬಸವರಾಜು ಈ ನಿಷ್ಪತ್ತಿ ಕ್ರಮವನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಮ ಅಥವಾ ಅಮ್ಮ ಪ್ರತ್ಯಯವನ್ನು ಚಂದ್ರಮ, ಸಂಗಮ ಪದಗಳಲ್ಲಿ ಹುಡುಕಲಾಗುವುದಿಲ್ಲ. ಆದುದರಿಂದ ಮೂರ್ತಿಯವರ ನಿಷ್ಪತ್ತಿ ಕ್ರಮ ಅವರಿಗೆ ಅಮಾನ್ಯ. ಅವರು ಅಲ್ಲಮ ಎಂಬ ಕನ್ನಡಿಗನ ಹೆಸರಿನ ಮೂಲವನ್ನು ಹುಡುಕಿಕೊಂಡು ಕನ್ನಡನಾಡಿನಿಂದ ಹೊರಗೆ ಹೋಗುತ್ತಾರೆ. ‘ಅಲ್ಲಾಮ’ ಎಂಬ ಪದಕ್ಕೆ ಅರಬ್ಬಿ ಭಾಷೆಯಲ್ಲಿ ಜ್ಞಾನಿ, ಸನ್ಯಾಸಿ, ಫಕೀರ ಎಂಬ ಅರ್ಥವಿದೆ. ಅಲ್ಲಮ್, ಅಲ್ಲಮ, ಎಂಬ ಪದವನ್ನು ಅನೇಕ ಜ್ಞಾನಿಗಳ ಹೆಸರುಗಳ ಜೊತೆಗೆ ಗೌರವ ಸೂಚಕವಾಗಿ ಬಳಸುತ್ತಿದ್ದರು ಎಂಬುದು ತಿಳಿದುಬರುತ್ತದೆ2 – ಇದು ಅವರಿಗೆ ಹಿಡಿಸುವ ಸಿದ್ಧಾಂತ. ಅಲ್ಲಮ ಎಂಬುದು ಅಲ್ಲಾಮ ಎಂಬ ಅರಬ್ಬೀ ಪದದ ಕನ್ನಡ ರೂಪಾಂತರವಿರಬಹುದು. ಇಸ್ಲಾಮ್ ಮತ್ತು ಲಿಂಗಾಯತ ಧರ್ಮಗಳು ಪರಸ್ಪರ ದೂರ ದೇಶಗಳಲ್ಲಿದ್ದರೂ ಪ್ರಭಾವ ಬೀರಬಲ್ಲವು ಎಂಬುದಕ್ಕೆ ಅಲ್ಲಮ ಎಂಬ ಹೆಸರು ಸಾಕ್ಷಿ.
ಆದರೆ ಅಲ್ಲಮನ ವಚನಗಳಲ್ಲಿ ಇಸ್ಲಾಂ ಧರ್ಮದ ಯಾವ ಪ್ರಭಾವವೂ ಕಾಣುವುದಿಲ್ಲ. ಬದಲಿಗೆ, ಮುಸ್ಲಿಮರು ವರ್ಷಕ್ಕೊಮ್ಮೆ ಮಕ್ಕಾ ಯಾತ್ರೆ (ಹಜ್) ಮಾಡಬೇಕು ಎಂದರೆ, ಅಲ್ಲಮ ದೇಹವೆ ದೇವಾಲಯ ಆಗಿರುವಾಗ ತೀರ್ಥಯಾತ್ರೆ ಏಕೆ ಬೇಕು ಎಂದು ಕೇಳುತ್ತಾನೆ. ಎರಡನೆಯದಾಗಿ, ಅಲ್ಲಾಮ ಎಂಬುದು ಒಂದು ರೀತಿಯ ಬಿರುದು ಆಗಿದ್ದರೆ, ಅಲ್ಲಮನ ಮೂಲ ಹೆಸರು ಏನಿತ್ತು ಎಂಬ ಪ್ರಶ್ನೆಗೂ, ಅಲ್ಲಾಮ ಎಂಬ ಬಿರುದನ್ನು ಅಲ್ಲಯ್ಯನಿಗೆ ಯಾರು, ಏಕೆ ಕೊಟ್ಟರು ಎಂಬ ಪ್ರಶ್ನೆಗೂ ಡಾ. ಬಸವರಾಜ್ ಉತ್ತರ ಹೇಳುವುದಿಲ್ಲ. ಪ್ರಾಯಶಃ ಅವರಿಗೆ ಈ ಸಮಸ್ಯೆಯ ಅರಿವೇ ಇರಲಿಲ್ಲ.

2. ಬೌದ್ಧ ಗುರುಗಳಿಗೆ ಟಿಬೆಟನ್ ಭಾಷೆಯಲ್ಲಿ ಲಾಮಾ ಎನ್ನುತ್ತಾರೆ. ಪ್ರಾಯಶಃ ಅಲ್ಲಾಮ ಎನ್ನುವುದು ಟಿಬೆಟನ್ ಭಾಷೆಯ ಲಾಮಾ ಶಬ್ದದ ಕನ್ನಡ ರೂಪಾಂತರ ಇರಬಹುದು ಎಂಬುದು ಬಸವರಾಜು ಅವರ ಮತ್ತೊಂದು ಅಭಿಪ್ರಾಯ3. ಲಾಮಾನಿಗೂ ಅಲ್ಲಮನಿಗೂ ಸಂಬಂಧ ಕಲ್ಪಿಸುವುದು ತೀರಾ ಅತಾರ್ಕಿಕ. ಮೊದಲಿಗೆ, ಅಲ್ಲಮ ಗುರುವೇ ಅಲ್ಲ; ಸದಾ ತಿರುಗುವ ಜಂಗಮ. ಹಾಗಾದರೆ, ಅಲ್ಲಮನ ನಿಜವಾದ ಹೆಸರೇನಿತ್ತು, ಕರ್ನಾಟಕದಲ್ಲಿರುವ ಬೌದ್ಧರು ತಮ್ಮ ಗುರುಗಳಿಗೆ ಲಾಮ ಎನ್ನುತ್ತಾರೆಯೆ ಎಂಬ ಪ್ರಶ್ನೆಗೂ, ಅಲ್ಲಮ ಟಿಬೆಟ್ಟಿಗೆ ಹೋಗಿದ್ದನೆ ಎಂಬ ಪ್ರಶ್ನೆಗೂ ಡಾ.ಬಸವರಾಜು ಉತ್ತರಿಸಬೇಕಾಗುತ್ತದೆ. ಕೇವಲ ಪ್ರಾಸ ಇಂಥ ತರ್ಕಕ್ಕೆ ಆಧಾರವಾಗಿರುವುದು ಅತಾರ್ಕಿಕ. ಹಾಗೆಯೆ, ಲಾಮಾ ಎಂಬ ಬಿರುದನ್ನು ಅಲ್ಲಯ್ಯನಿಗೆ ಯಾರು, ಏಕೆ ಕೊಟ್ಟರು ಎಂಬ ಪ್ರಶ್ನೆಗೂ ಡಾ. ಬಸವರಾಜ್ ಉತ್ತರ ಹೇಳುವುದಿಲ್ಲ.

3. ಚಾಮರಸನ ಪ್ರಕಾರ ಪರವಸ್ತುವೇ ಆಗಿದ್ದ ಅಲ್ಲಮ ಹೊರಗೆ ಇರುವವನು ಅಲ್ಲ, ಭಾವಿಸಲು ಬರುವುದಿಲ್ಲ, ಎಲ್ಲ ಜಾಡ್ಯಗಳನ್ನು ಅಲ್ಲಗಳೆದ. ಹೀಗೆ ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವ ಅಲ್ಲಮನಿಗೆ ಅವನ ತಂದೆತಾಯಿಗಳು ಅಲ್ಲಯ್ಯ ಎಂದು ನಾಮಕರಣ ಮಾಡಿದುದು ಉಚಿತ. ಹರಿಹರನ ಪ್ರಕಾರ ಅಲ್ಲಮ ‘ನಿರ್ಮಾಯ’ ಎಂಬ ಗಣನ ಅವತಾರ. ಮಾಯೆಯನ್ನು ಗೆದ್ದ ಅವನು ನಾನು ಇಲ್ಲ, ಜಗತ್ತು ಇಲ್ಲ, ನನ್ನ ಹೊರಗಿನ ಲಿಂಗ ಇಲ್ಲ, ಎಂದು ಹೇಳುತ್ತಿದ್ದ. ಆದುದರಿಂದ ಅವನಿಗೆ ಅಲ್ಲಯ್ಯ ಎಂಬ ಹೆಸರು ಸೂಕ್ತ.
ದೊಡ್ಡವನಾದ ಮೇಲೆ ಅಲ್ಲಮ ಮಾಯೆಯನ್ನು ಗೆದ್ದ ಎಂಬುದು ನಿಜವಿರಬಹುದು. ಆದರೆ ಅವನ ತಂದೆತಾಯಿಗಳಿಗೆ ಈ ವಿಚಾರ ಮೊದಲೇ ಗೊತ್ತಿತ್ತು, ಆದುದರಿಂದಲೇ ಆ ಹೆಸರಿಟ್ಟರು, ಎಂಬುದು ಕವಿಗಳ ಅವೈಚಾರಿಕ ಕಲ್ಪನೆ ಅಥವಾ ಉತ್ಪ್ರೇಕ್ಷೆಯೇ ಹೊರತು ವಾಸ್ತವ ಅಲ್ಲ.
ಈ ಎಲ್ಲಾ ಸಿದ್ಧಾಂತಗಳನ್ನು ನೋಡಿದರೆ ಅಲ್ಲಯ್ಯ ಎಂಬ ಪದಕ್ಕೆ ಏನಾದರೂ ಅರ್ಥ ಕೊಡಲೇಬೇಕು ಎಂಬ ಹಠ ಸಂಶೋಧಕರಿಗೆ ಇರುವಂತೆ ಕಾಣುತ್ತದೆ. ಪ್ರಾಯಶಃ ಈ ಸಂಶೋಧಕರು ಒಂದು ಸರಳ ಸೂತ್ರವನ್ನು ಕಡೆಗಣಿಸಿರುವಂತೆ ಕಾಣುತ್ತದೆ. ಕನ್ನಡದ ಆಡುಮಾತಿನಲ್ಲಿ ‘ಹ’ ‘ಅ’ ಆಗುವುದು ಸರ್ವವಿದಿತ. ‘ಹರಳಿಟ್ಟು’ ‘ಅಳ್ಳಿಟ್ಟು’ಆಗುವಂತೆ, ‘ಹಂಸೆ’ ‘ಅಂಚೆ’ ಆಗುವಂತೆ, ‘ಹರಳಯ್ಯ’ ‘ಅಲ್ಲಯ್ಯ’ ಆಗುತ್ತದೆ (ಈಗಲೂ ಅನೇಕ ವಿದ್ಯಾವಂತರು ಹಾಸನ ಎನ್ನುವುದರ ಬದಲು ಆಸನ ಎನ್ನುತ್ತಾರೆ). ಅದೇ ರೀತಿ, ‘ಕರುಳು’ ‘ಕಳ್ಳು’ ಆದಂತೆ, ‘ಮರುಳ’ ‘ಮಳ್ಳ’ ಆದಂತೆ, ‘ಹರಳ’ ‘ಹಳ್ಳ’ ಆಗಿ, ಕೊನೆಗೆ ‘ಅಲ್ಲ’ ಆಗಿದೆ.

ಇದು ನನ್ನ ನಿರಾಧಾರಿತ ಊಹೆಯಲ್ಲ. ನನ್ನ ಊಹೆಗೆ ಒಂದು ನಂಬಲರ್ಹವಾದ ಆಧಾರವಿದೆ. ಸೋಮನಾಥನ ತೆಲುಗು ಬಸವ ಪುರಾಣದ ಕೊನೆಯ ಅಧ್ಯಾಯದಲ್ಲಿ ಬಿಜ್ಜಳನು ಹರಳಯ್ಯ ಮತ್ತು ಮಧುಪಯ್ಯಗಳ ಕಣ್ಣು ಕೀಳಿಸುವ ಪ್ರಸಂಗವಿದೆ. ಅಲ್ಲಿ ಕವಿಯು ‘ಹರಳಯ್ಯ’ ಎಂಬ ಪದದ ಬದಲು ‘ಅಲ್ಲಯ್ಯ’ ಎಂಬ ಪದವನ್ನು ಬಳಸುತ್ತಾನೆ. ‘ಹ’ ‘ಅ’ ಆಗಿದೆ. ‘ಹರಳು’ ಎಂದರೆ ಸಾಧಾರಣ ಕಲ್ಲಿನ ಹರಳೂ ಆಗಬಹುದು, ವಜ್ರ ಮುಂತಾದ ಬೆಲೆ ಬಾಳುವ ಹರಳೂ ಆಗಬಹುದು. ಅಲ್ಲಮನ ತಂದೆತಾಯಿಗಳು ತಮ್ಮ ಮಗುವಿಗೆ ವಜ್ರ ಅಥವಾ ರತ್ನ ಎಂಬರ್ಥದ ಹೆಸರು ಇಟ್ಟಿರಬಹುದು (ರತ್ನ, ವಜ್ರ ಹರಳುಗಳು). ಅಲ್ಲಮನ ‘ಅಲ್ಲಯ್ಯ’ ಎಂಬ ಹೆಸರು ‘ಹರಳಯ್ಯ’ ಹೆಸರಿನ ರೂಪಾಂತರ.
ಈಗ ನಮಗೆ ಎರಡು ಪ್ರಶ್ನೆಗಳು ಎದುರಾಗುತ್ತವೆ. 1. ಅವರ ಹೆಸರು ಅಲ್ಲಯ್ಯ ಆಗಿದ್ದರೆ ಯಾವಾಗ ಅವರು ‘ಅಲ್ಲಮ’ ಆದರು? 2. ಒಂದು ವೇಳೆ ಅವರ ಹೆಸರು ‘ಹರಳಯ್ಯ’ ಆಗಿದ್ದರೆ ಅವರ ಹೆಸರು ‘ಹರಳಮ’ ಯಾಕಾಗಲಿಲ್ಲ?
ಇವುಗಳಿಗೆ ಉತ್ತರ ಕೊಡುವುದು ಸುಲಭ. ‘ಅಲ್ಲಯ್ಯ’ ಎಂಬುದು ಅವರ ಹುಟ್ಟು ಹೆಸರು. ಅವರು ದೊಡ್ಡ ಯೋಗಿ ಎಂದು ಪ್ರಸಿದ್ಧರಾದ ಮೇಲೆ ಅವರಿಗೆ ಕವಿಗಳು ಮ ಪ್ರತ್ಯಯ ಸೇರಿಸಿರಬೇಕು. ಆಗ ಅವರು ಅಲ್ಲಮ ಆದರು. ಅವರ ಹೆಸರು ಅಲ್ಲಯ್ಯನೇ ಹೊರತು ಹರಳಯ್ಯ ಅಲ್ಲವೇ ಅಲ್ಲ. ಆದುದರಿಂದ ಅವರು ಹರಳಮ ಆಗಬೇಕಾಗಿಲ್ಲ.
ಒಟ್ಟಿನಲ್ಲಿ ‘ಅಲ್ಲಯ್ಯ’ ದೇಸೀ ಹೆಸರು. ಅದಕ್ಕೂ ಮುಸ್ಲಿಮರ ‘ಅಲ್ಲಾಮ’ ಪದಕ್ಕೂ, ಬೌದ್ಧರ ‘ಲಾಮಾ’ ಪದಕ್ಕೂ ಸಂಬಂಧವಿಲ್ಲ.
***************
1.ಡಾ.ಎಲ್. ಬಸವರಾಜು: ಅಲ್ಲಮನ ವಚನಗಳು, ಸಪ್ನಾ ಬುಕ್ ಹೌಸ್, ಬೆಂಗಳೂರು, ಒಂಭತ್ತನೆಯ ಮುದ್ರಣ, 2017, ಪು.38-39.
2.ಎನ್ಸೈಕ್ಲೋಪೀಡಿಯಾ ಆಫ್ ಇಸ್ಲಾಮ್, ಸಂಪುಟ 1.
3.ಡಾ.ಎಲ್. ಬಸವರಾಜು: ಪೂರ್ವೋಕ್ತ, ಪು. 39-40.

Previous post ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
Next post ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ

Related Posts

ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
Share:
Articles

ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3

December 6, 2020 ಡಾ. ಎಸ್.ಆರ್. ಗುಂಜಾಳ
“ಬಸವೇಶ್ವರರ ಜೀವನ ಚರಿತ್ರೆಗೆ ಶಾಸನಗಳು, ರಾಜಕೀಯ ಅವಶೇಷಗಳು, ಶರಣರ ಚರಿತ್ರೆಗಳು, ಪುರಾಣಗಳು, ಅವರವೇ ಆದ ವಚನಗಳು, ಜನಪದ ಸಂಪ್ರದಾಯಗಳು ಮತ್ತು (ಆಧುನಿಕ ಲೇಖಕರ) ಕೆಲವು...
ಪದ, ಬಳಕೆ ಮತ್ತು ಅರ್ಥ
Share:
Articles

ಪದ, ಬಳಕೆ ಮತ್ತು ಅರ್ಥ

November 9, 2021 ಡಾ. ಎನ್.ಜಿ ಮಹಾದೇವಪ್ಪ
ನಾವು ಕೆಲವು ಪದಗಳನ್ನು ಕಾಲಕ್ಕೆ ಅಥವಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥಗಳಲ್ಲಿ ಬಳಸುತ್ತೇವೆ. ಉದಾಹರಣೆಗೆ, ಗುರು, ಲಿಂಗ, ಜಂಗಮ. ಪ್ರಸಾದ, ಮುಂತಾದ ಪದಗಳ ಬಳಕೆಯನ್ನು...

Comments 11

  1. VIJAYAKUMAR KAMMAR
    Aug 8, 2022 Reply

    ಅಲ್ಲಮ ಅಚ್ಚುಕಟ್ಟಾದ ಲೇಖನ. 👌👌

  2. K.P. Gaurishankar
    Aug 8, 2022 Reply

    ಅಲ್ಲಮ ಎನ್ನುವ ಹೆಸರಿನ ಜಿಜ್ಞಾಸೆ ಕುತೂಹಲಕರವಾಗಿದೆ, ಹಾಗೆಯೇ ಅದರೊಂದಿಗೆ ಪ್ರಭುದೇವ ಎಂಬ ಹೆಸರು ಸೇರಿಕೊಂಡಿದ್ದು ಹೇಗೆ ಸರ್?

  3. Mahadev H
    Aug 8, 2022 Reply

    It’s really a wonderful post, thanks to the professor.

  4. ಮಧುಕರ್ ಕುಲಕರ್ಣಿ
    Aug 10, 2022 Reply

    ಅಲ್ಲಮರ ಹೆಸರಿನ ಮೂಲಾರ್ಥವನ್ನು ಹುಡುಕುವ ಕೆಲಸವನ್ನು ನಾನೂ ಕುತೂಹಲಕ್ಕೆ ಮಾಡಿದ್ದೆ, ನಿಜಕ್ಕೂ ಇದೊಂದು ವಿಶಿಷ್ಟ ಹೆಸರು. ಎಲ್ಲ ಮನುಷ್ಯ ಕಲ್ಪಿತ ದೇವರುಗಳನ್ನು, ಶಾಸ್ತ್ರಗಳನ್ನು, ಪುರಾಣಗಳನ್ನು, ನಂಬಿಕೆಗಳನ್ನು ಅಲ್ಲಗಳೆದವನು ಅಲ್ಲಮ!!

  5. ಜಯರಾಜ್ ನಾಲತ್ವಾಡ
    Aug 16, 2022 Reply

    ಪ್ರಭುದೇವರಿಗೆ ಸೇರಿಕೊಂಡ ಬಿರುದು ‘ಅಲ್ಲಮ’ ಎಂದು ನಮ್ಮ ಗುರುಗಳು ಶಾಲೆಯಲ್ಲಿ ಹೇಳಿದ ನೆನಪು. ಬೌದ್ಧರ ಪ್ರಭಾವ ಶರಣರ ಮೇಲೆ ಇದ್ದೇ ಇದೆ. ಲಾಮಾ ಅಲ್ಲಮ ಆಗಿರಲಿಕ್ಕಿಲ್ಲ, ಹಾಗೆಯೇ ಅಲ್ಲಾ ಕೂಡ ಅಲ್ಲಮ ಆಗಿರಲಿಕ್ಕಿಲ್ಲ- ಮಹಾದೇವಪ್ಪ ಸರ್ ಅವರ ಲಾಜಿಕಲ್ ವಿವರಣೆ ಸರಿಯಾಗಿದೆ ಎನಿಸಿತು.

  6. RAVIKIRAN, ULLAL
    Aug 16, 2022 Reply

    I am regular reader. This post posted at this website is really fastidious. Awesome blog article. Much thanks again. Much obliged.

  7. Arun Raichur
    Aug 16, 2022 Reply

    I reckon something genuinely special in this site. I like all the points you have made in this article sir.

  8. Karibasappa
    Aug 22, 2022 Reply

    ಚಾಮರಸ ಹೇಳಿದ್ದು ಸತ್ಯವೇ. ಎಲ್ಲವನ್ನೂ ಅಲ್ಲಗಳೆದು ಅನಂತರೂಪಿಯಾಗಿ ಬೆಳೆದು ನಿಂತ ಅಲ್ಲಮನಿಗೆ ಅಲ್ಲಮ ಎನ್ನುವ ಹೆಸರೇ ಅತಿ ಸೂಕ್ತ. ಹೀಗಿದ್ದಾಗಲೂ ಆ ಹೆಸರು ಅವರಿಗೆ ಬಂದದ್ದು ಮಾತ್ರ ಹೇಗೆಂದು ತರ್ಕಿಸುವ ವಿದ್ವತ್ಪೂರ್ಣ ಲೇಖನ ಇದು. ಸರ್, ಥ್ಯಾಂಕ್ಯೂ.

  9. ಹಾಲಪ್ಪ ಜೇವರಗಿ
    Aug 22, 2022 Reply

    ಅಲ್ಲಯ್ಯ ಎನ್ನುವುದು ದೇಸೀ ಹೆಸರು- ವಾದಸರಣಿಯ ಅಂತಿಮ ತೀರ್ಪು ಸರಿಯಾಗಿದೆ.

  10. ತಿಪ್ಪೇಸ್ವಾಮಿ ಜಿ
    Aug 22, 2022 Reply

    ಅಲ್ಲಮ ಅನ್ನೋ ಹೆಸರೇ ವಿಶೇಷ! ಅತಿ ವಿಶೇಷ!! ಆ ಹೆಸರಿನಲ್ಲಿಯೇ ಅವರ ಸಂಪೂರ್ಣ ಸಾಧನೆಯ ಮರ್ಮ ಅಡಗಿದೆ.

  11. Renukaiah R
    Sep 9, 2022 Reply

    ಅಲ್ಲಮಪ್ರಭುದೇವರಂತೆ ಅವರ ತಾಯಿ-ತಂದೆಯರ ಹೆಸರುಗಳೂ ಭಿನ್ನವಾಗಿವೆ. ಕವಿಗಳ ಸೃಷ್ಟಿಯಲ್ಲಿ ಅವರ ನಿಜವಾದ ಹೆಸರುಗಳು ಬದಲಾಗಿರಬಹುದೆನಿಸುತ್ತದೆ. ಅಲ್ಲಮರ ಹೆಸರನ್ನು ಹೀಗೆ ತರ್ಕದಲ್ಲಿ ಹುಡುಕಲು ತೊಡಗಿದಂತೆ ಅವರ ತಾಯಿ-ತಂದೆಯರ ಮೂಲ ಹೆಸರನ್ನು ಗುರುತಿಸುವುದು ಬಹುಶಃ ಬಹಳ ಕಷ್ಟವಾಗಬಹುದು. ಶರಣರು ತಮ್ಮ ಪಾಲಕರ ಹೆಸರುಗಳನ್ನು ಯಾಕೆ ನಮೂದಿಸಿಲ್ಲ? ತಮ್ಮ ವಯಕ್ತಿಕ ವಿವರಗಳನ್ನು ಯಾಕೆ ವಚನಗಳಲ್ಲಿ ಬರೆದಿಡಲಿಲ್ಲಾ ಸರ್?

Leave a Reply to Arun Raichur Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
January 4, 2020
ಶಿವಾಚಾರ
ಶಿವಾಚಾರ
April 9, 2021
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಎರವಲು ಮನೆ…
ಎರವಲು ಮನೆ…
August 10, 2023
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
Copyright © 2025 Bayalu