Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವಿಗೆ ಬಂದ ಆರು ಸ್ಥಲಗಳು
Share:
Articles August 11, 2025 ಮಹಾದೇವ ಹಡಪದ

ಅರಿವಿಗೆ ಬಂದ ಆರು ಸ್ಥಲಗಳು

(ಇಲ್ಲಿಯವರೆಗೆ: ಇತ್ತ ಗುಡ್ಡಕ್ಕೆ ಹೋದ ಮಗನನ್ನು ತ್ರೈಲೋಕ್ಯ ಮತ್ತು ಮಹಾಲೇಖೆಯರು ಹುಡುಕಿ ಅಲೆಯುತ್ತಿದ್ದರೆ, ಅತ್ತ ಸಿದ್ಧಸಾಧುವಿನ ಕೊನೆಯ ದಿನಕ್ಕೆ ಸಾಕ್ಷಿಯಾಗುವ ಭಾಗ್ಯ ವಸೂದೀಪ್ಯನದಾಗಿತ್ತು. ಗುರುವಿನ ಅಂತಿಮ ಕ್ರಿಯೆ ಮುಗಿಸಿ, ಗುಡ್ಡವನ್ನೇರಿ ಅಯ್ಯಾಹೊಳೆಯತ್ತ ಹೊರಟ… ಮುಂದೆ ಓದಿ-)

ಕಣ್ಣುಗಳು ಊದಿಕೊಂಡು ಕೆಂಡವಾದ ಹಾಗೆ ತಲೆಯ ಸಿಡಿತವು ಧಿಗ್ಗನೆದ್ದಿತ್ತು. ಆ ತಲೆಸಿಡಿತ, ಉರಿಯುವ ಕಂಗಳ ಹೊತ್ತು ಕಪ್ಪಡಿಸಂಗಮ ತಲುಪಿದಾಗ ದಿನಗಳೆರಡು ಉರುಳಿದ್ದವು. ಅಲ್ಲಿ ಆಶ್ರಮದ ಮಕ್ಕಳಲ್ಲಿ ಅನೇಕರು ಭಾವುಕರಾಗಿ ಈಶಾನ್ಯ ಗುರುವಿನ ಕಾಲಿಗೆರಗಿ ತಮ್ಮಗಳ ಮನೆತನದಿಂದ ತಂದಿದ್ದ ಕಾಳುಕಡಿ, ದನಕರು, ಬೆಳ್ಳಿಬಂಗಾರ, ತಾಳೆಗರಿ ಇತ್ಯಾದಿ ಉಡುಗೊರೆಯನ್ನು ಗುರುವಿನ ಪಾದಕ್ಕೂ, ಉಗ್ರಾಣಕ್ಕೂ ಒಪ್ಪಿಸಿ ಆಶ್ರಮದ ಕಡೆಯ ದಿನವನ್ನು ದುಃಖಿತರಾಗಿ ಅನುಭವಿಸುತ್ತಿದ್ದರು. ಅವರವರ ಯೋಗ್ಯತಾನುಸಾರ ಎತ್ತಿನಗಾಡಿಯಲ್ಲಿ, ಕುದುರೆಗಾಡಿಯಲ್ಲಿ ಕತ್ತೆಗಳ ಮೇಲೆ ತಮ್ಮ ಸಾಮಾನು ಸರಂಜಾಮು ಹೊರೆಸಿಕೊಂಡು ಊರ ದಾರಿ ಹಿಡಿಯುವಾಗ ಆ ಹುಡುಗರ ಕಣ್ಣಾಲಿಗಳು ತುಂಬಿಬಂದಿದ್ದವು. ರಾಜಪರಿವಾರ ಮಾಂಡಲಿಕ, ಗೊಂಡ, ಗೌಡ, ದೇಸಗತಿ, ದಳಪತಿಗಳ ಮಕ್ಕಳೂ ಎಂಬ ಯಾವ ದುರಭಿಮಾನವಿಲ್ಲದ ವಿನಯವನ್ನು ಒಬ್ಬೊರಿಗೊಬ್ಬರು ತಲೆಬಾಗಿ ಹಂಚಿಕೊಳ್ಳುತ್ತಾ ಕಲಿಕೆಯನ್ನು ಪೂರೈಸಿದ ಮಕ್ಕಳು ಆಶ್ರಮ ತೊರೆಯುತ್ತಿದ್ದರು. ಅವರಲ್ಲಿ ಬಸವರಸನೂ ಹೊರಟಿದ್ದಾನೆಯೇ..? ಆ ತೇಜಸ್ವಿ ಮುಖ ಯಾವುದು ಇದರಲ್ಲಿ ಎಂಬ ಕುತೂಹಲದಿಂದ ನೋಡುತ್ತ ವಸೂದೀಪ್ಯ ನಿಂತಿದ್ದ.

ಕಣ್ಣೊಳಗಿಂದ ಇನ್ನೇನು ರಕ್ತವೇ ಹೊರಬಿದ್ದು ಗುಡ್ಡೆಗಳೆರಡೂ ಸೀಳಿಕೊಂಡಷ್ಟು ನೋವಾದಾಗ ತೆರೆದ ಕಣ್ಣ ಸಮೇತ ನದಿಯ ನೀರೊಳಗೆ ತಲೆಯನ್ನು ಹುದುಗಿಸಿದ. ಅಲ್ಲಿ ಗೋಲಾಕಾರದ ನುಣುಪಾದ ಕಲ್ಲುಗಳ ಕಂಡು ಒಂದೆರಡು ಕಲ್ಲುಗಳನ್ನೆತ್ತಿಕೊಂಡು ನದಿಯಿಂದ ಹೊರಗೆ ಬಂದಾಗ ತಲೆಯ ಭಾರವೆಲ್ಲ ಹಗೂರಾಗಿತ್ತು. ಅಶಾಂತವಾದ ಮನಸ್ಸನ್ನು ಹೊತ್ತು ಚಡಪಡಿಸುತ್ತಿದ್ದ ಇವನ ಚಲನವಲನವನ್ನು ಬೆಳಗಿನಿಂದ ಗಮನಿಸುತ್ತಿದ್ದ ಈಶಾನ್ಯ ಗುರುಗಳು ಕಲಿತ ಅಭ್ಯಾಸಿಗಳನ್ನೆಲ್ಲ ಬೀಳ್ಕೊಟ್ಟು, ಕಲಿಯುವ ಕಾತರದಲ್ಲಿದ್ದ ಹೊಸ ಮಕ್ಕಳ ಬಳಿ ಬಂದು ಆಶ್ರಮದ ನೇಮನೀತಿಗಳನ್ನು ಬೋಧಿಸುತ್ತಿದ್ದರು. ಹೊಳೆಯಿಂದೆದ್ದು ಬಂದ ಈ ಅಶಾಂತ ಹುಡುಗ ಬೇವಿನ ಮರವೊಂದರ ಕೆಳಗೆ ಕುಳಿತು ತದೇಕಚಿತ್ತದಿಂದ ಆ ನುಣುಪಾದ ಕಲ್ಲುಗಳಲ್ಲಿ ದೃಷ್ಟಿ ನೆಟ್ಟಿರುವುದನ್ನು ಕಂಡ ಗುರುಗಳು ಹತ್ತಿರಕ್ಕೆ ಬಂದು ಮಾತಾಡಿಸಿದರು. ಅವರು ಮಾತಾಡಿಸಿದಾಗಲೂ ಆತ ಕೈಯಲ್ಲಿ ಹಿಡಿದಿದ್ದ ನುಣುಪಾದ ಗೋಲಾಕಾರದ ಕಲ್ಲುಗಳಲ್ಲೇ ದೃಷ್ಟಿ ನೆಟ್ಟು ಮಾತಾಡಿದ. ಅವನ ಮಾತಿಗೂ ಮನಸ್ಸಿನ ನಿಲುವಿಗೂ ಏನಕೇನೋ ವ್ಯತ್ಯಾಸಗೊಂಡು ಅಸ್ಪಷ್ಟ ಉತ್ತರಗಳೇ ಬರತೊಡಗಿದ್ದವು.

“ಯಾವ ಸೀಮೆಯವರು ನೀವು.”
“ಶಿವನಕೊಳ್ಳದವನು”
“ಅಂಥದ್ದೊಂದು ಸೀಮೆ ಇದೆಯೇ?”
“ಇಲ್ಲವೆಂದಾದಲ್ಲಿ ನಾನೇಕೆ ಇಲ್ಲಿ ಬರುತ್ತಿದ್ದೆ…”
“ಮಗು, ಮನಸ್ಸನ್ನು ಘಾಸಿಮಾಡಿಕೊಂಡು ಸಾಧಿಸುವುದು ಏನೂ ಇಲ್ಲ…”
“ಘಾಸಿಗೊಳ್ಳದಿದ್ದರೆ ಸಾಧಿಸುವುದೂ ಏನೂ ಇರುವುದಿಲ್ಲ.”
“ನಿನ್ನ ಹಠದ ಸಾಧನಾಮಾರ್ಗ ತಪ್ಪಾಗಿದೆ ಮಗು. ನೋಡಲ್ಲಿ ನಿನ್ನ ಕಣ್ಣುಗಳು ಊದಿಕೊಂಡಿವೆ.”

ನುಣುಪಾದ ಕಲ್ಲುಗಳಿಂದ ತಲೆಯನ್ನು ಮೇಲಕ್ಕೆತ್ತಿ ನೋಯುವ ನೋವನ್ನು ಉಸಿರೊಳಗೆ ಉಗ್ಗಡಿಸಿದಾಗ ಈಶಾನ್ಯ ಗುರುಗಳು ಅವನ ತಲೆಯ ಮೇಲೆ ಕೈಯಿಟ್ಟು ಹದವಾಗಿ ನೀವಿದರು. ಆ ಸ್ಪರ್ಶದಲ್ಲಿ ತಾನೆಲ್ಲೋ ಕಳೆದುಕೊಂಡ ಮಮತೆಯ ಮಮಕಾರ ತುಂಬಿತ್ತು. ಮೃದುವಾಗಿ ಅವರ ಕೈಮುಟ್ಟಿ ಕಾಲುಗಳಿಗೆ ತಲೆಬಾಗಿದವನು ರೊಪ್ಪೆಂದು ನೆಲಕ್ಕುರುಳಿಬಿದ್ದ. ರೆಪ್ಪೆಗಳು ಮುಚ್ಚಿಕೊಳ್ಳಲಾರದಷ್ಟು ಊದಿಕೊಂಡಿದ್ದ ಕಣ್ಣುಗಳು ಅವನೊಳಗೆ ಹೇಳಿಕೊಳ್ಳಲಾರದಷ್ಟು ಸಂಕಟದ ಬೆಟ್ಟವನ್ನು ಕಟ್ಟಿದ್ದವು. ಗುರುಕುಲದ ಮಕ್ಕಳೆಲ್ಲ ಸೇರಿ ಅವನನ್ನು ಎತ್ತಿಕೊಂಡು ತಂದು ಸಂಗಮನಾಥನ ಗುಡಿಯ ಮುಂದಿನ ಜಗುಲಿಯ ಮೇಲೆ ಅಂಗಾತ ಮಲಗಿಸಿದರು. ಊರೊಳಗಿನ ಬಾಣಂತಿ ಹೆಂಗಸೊಬ್ಬಳ ಎದೆಹಾಲು ತರಿಸಿ ಕಣ್ಣುಗಳಿಗೆ ಹನಿಹನಿ ಹಾಲು ಬಿಟ್ಟು ಆರೈಕೆ ಮಾಡಿದರು. ಔಡಲೆಣ್ಣೆಯ ನೆತ್ತಿಗೆ ತಟ್ಟಿ ತಂಪು ಮಾಡಿದರು. ಮೂರ್ಛಾವಸ್ತೆಯಲ್ಲಿ ಬಿದ್ದವನ ಕಣ್ಣುಗಳು ನಿಧನಿಧಾನಕ್ಕೆ ರೆಪ್ಪೆಗಳ ಮರೆಯಲ್ಲಿ ಹೊಕ್ಕು ಶಾಂತ ಸ್ಥಿತಿ ತಲುಪಿದಾಗ ಮೂರು-ನಾಲ್ಕು ದಿನಗಳ ಆಯಾಸವು, ನಿದ್ದೆಯು ದಿನಕಳೆದು ದಿನಮೂಡಿದರೂ ಎಚ್ಚರವಿಲ್ಲದ ಸ್ಥಿತಿಯಲ್ಲಿ ಮಲಗಿಸಿತ್ತು. ಎಚ್ಚರವಾದಾಗ ಮಕ್ಕಳು ಶಿವ ಸ್ತೋತ್ರವೊಂದನ್ನು ಗಟ್ಟಿದನಿಯಲ್ಲಿ ಕಂಠಪಾಠ ಮಾಡುತ್ತಿದ್ದರು. ಕಣ್ಣುಗಳ ನೊವೆಯು ಇಲ್ಲದಾಗಿ, ಎದ್ದು ಕುಳಿತು ಸುತ್ತಲೂ ನೋಡಿದ. ತಾನೆಲ್ಲಿದ್ದೇನೆಂದು ಸಂಗಮನಾಥನ ಗುಡಿ ಆವರಣವನ್ನು ಹೊಸಕಣ್ಣುಗಳಿಂದ ನೋಡಿದಾಗ ಅಲ್ಲಿ ದೂರದಲ್ಲಿ ತೇಜಸ್ವಿ ಮುಖದ ಹುಡುಗ ಮಕ್ಕಳಿಗೆ ಶಿವ ಸ್ತೋತ್ರದ ಸ್ವರ ಉಚ್ಚಾರ, ಮತ್ತು ಅದರ ಅರ್ಥವನ್ನು ಹೇಳುತ್ತಿರುವುದು ಕಾಣಿಸಿತು. ಆತ ಕರುಣೆಯಿಂದ ನೋಡಿ ನಿಷ್ಕಲ್ಮಶವಾದ ಮಂದ ನಗೆ ನಕ್ಕಾಗ ಈಟಿಯಿಂದ ಎದೆಗೆ ಇರಿದಂತಾಯ್ತು.

“ಅಣ್ಣಾ ಹಿಡಿ ಅಂಬಲಿ ಕುಡಿ.”
“ನಾನೆಲ್ಲಿದ್ದೇನೆ..? ಇಲ್ಲಿಗೆ ಹೇಗೆ ಬಂದೆ…”
“ಕಪ್ಪಡಿಸಂಗಮದಲ್ಲಿದ್ದೀರಿ ಅಣ್ಣಾ.. ನೀವು ದಣಿದು ಆಯಾಸಗೊಂಡಿದ್ದೀರಿ. ಗುರುಗಳೇ ಖುದ್ದ ಆರೈಕೆ ಮಾಡಿದರು.”
“ಯಾವ ಗುರುಗಳು..?”
“ಈಶಾನ್ಯ ಗುರುಗಳು. ನಮ್ಮ ಗುರುಕುಲದ ಪ್ರಮಥರು.”
“ನನ್ನ ಕಣ್ಣುಗಳ ಮುಚ್ಚಿದವರು ಯಾರು..?”
“ಇದು ಗುರುಕುಲ… ಇಲ್ಲಿ ಯಾರೂ ಯಾರ ಕಣ್ಣನ್ನು ಮುಚ್ಚುವುದಿಲ್ಲ, ಮುಚ್ಚಿರುವ ಕಣ್ಣ ತೆರೆಸುತ್ತಾರೆ ಅಣ್ಣಾ”
“ಗುರುಗಳೆಲ್ಲಿದ್ದಾರೆ..?”
“ಗಡಿಗಳ ವ್ಯಾಜ್ಯವೊಂದನ್ನು ಬಗೆಹರಿಸಲು ಹೋಗಿದ್ದಾರೆ. ಇನ್ನೇನು ಬರುತ್ತಾರೆ. ನೀವು ಎರಡು ದಿನದಿಂದ ಏನನ್ನೂ ತಿಂದಿಲ್ಲ. ಅಂಬಲಿ ಕುಡಿದು ಸ್ವಸ್ತರಾಗಿರಿ ಅಣ್ಣಾ…”
“ಇಲ್ಲಿ ದನಕರುಗಳಿದ್ದಾವೆಯೇ..?”
“ಇದ್ದಾವೆ ಅಗೋ ಅಲ್ಲಿ…”

ಜಗುಲಿಯಿಂದೆದ್ದವನು ನೆಟ್ಟನೆ ಹೊಳೆಯೊಳಗೆ ಮುಳುಗಿ ಎತ್ತಿನ ಇನಿಯೊಂದನ್ನು ಮುಟ್ಟಿ ನಮಸ್ಕರಿಸಿ ಬಂದು, ಸಂಗಮನಾಥನ ಸನ್ನಿಧಾನದಲ್ಲಿ ಕೈಮುಗಿದು ಅಂಬಲಿಯನ್ನು ಕುಡಿದ. ಗುರುವಿಗೆ ಗೂಡುಕಟ್ಟಿ ಕೈಮುಗಿದ ಮೇಲೆ ತಾನು ಎಲ್ಲಿಂದ ಎಲ್ಲಿಗೆ ಹೊರಟೆ ಮುಂದೆ ಏನೇನಾಯ್ತು ಎಂದೆಲ್ಲ ಯೋಚಿಸಿದನಾದರೂ ಈ ಕಪ್ಪಡಿ ಸಂಗಮಕ್ಕೆ ಹೇಗೆ ಬಂದೆ ಎಂಬುದು ಮಾತ್ರ ಅವನ ಅರಿವಿಗೆ ಬಾರದಂತೆ ನಡೆದು ಹೋಗಿತ್ತು. ಅಸಾಧ್ಯ ಕಣ್ಣುರಿಯಲ್ಲಿ ಏನೆಲ್ಲ ಕಂಡೆ, ಯಾರನ್ನೋ ಹುಡುಕುತ್ತಿದ್ದರು. ಹುಡುಕುತ್ತಿರುವುದು ಯಾರನ್ನ ಎಂಬುದು ಮರೆತಂತಾಗಿತ್ತು. ಈಗ ಕಣ್ಣುರಿ ಇಲ್ಲವಾದರೂ ಗುರುವಿನ ಆಜ್ಞೆಯನ್ನು ಪಾಲಿಸದಾದೆನಲ್ಲ ಎಂಬ ಕೊರಗಿನಲ್ಲೇ ಹೊಳೆಯ ದಂಡೆಯ ಕಲ್ಲಹಾಸಿನ ಮೇಲೆ ಕುಳಿತ. ಎರಡಾದ ನದಿಗಳು ಒಂದಾಗುವ ಸಂಗಮಸ್ಥಾನದ ನಡುವೆ ಸುಳಿಯೊಂದು ಸುರುಳಿ ಸುತ್ತಿ ಏಳುತ್ತಿರುವುದನ್ನು ಕಂಡಾಗ ಥಟ್ಟನೇ ಬಸವರಸನ ನೆನಪಾಯ್ತು. ಗುರುಕುಲದ ಕಡೆಗೆ ನೋಡಿದ. ಅಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಬಸವರಸ ಯಾರಿದ್ದಿರಬಹುದು..? ಅಂಬಲಿಯನ್ನು ಕೊಟ್ಟವನ ಮುಖದಲ್ಲಿ ಅಪ್ಪ ಹೇಳಿದ್ದ ತೇಜಸ್ಸಿದೆಯಲ್ಲವೇ..! ಅಣ್ಣಾ ಗುರುಗಳು ಕರೆಯುತ್ತಿದ್ದಾರೆ ಆಶ್ರಮದ ಹುಡುಗನೊಬ್ಬ ಕೂಗಿ ಕರೆದಾಗ ಎದ್ದು ಸಂಗಮನಾಥನ ಗುಡಿ ಪೌಳಿಗೆ ಬಂದ.

“ಬಾರಯ್ಯ ಶಿವನಕೊಳ್ಳದ ಶಿಶುಮಗುವೆ. ಈಗ ಕಣ್ಣುಗಳು ಹೇಗಿದ್ದಾವೆ. ಬಾ ಇಲ್ಲಿ ಕುಳಿತುಕೋ.. ಕಣ್ಣಿಗೆ ಎದೆಹಾಲ ಹಾಕಬೇಕು.”

ತಾವು ಉಟ್ಟಿದ್ದ ಪಂಜೆಯ ಚುಂಗಿನಿಂದ ಬಟ್ಟಲ್ಲಿನ ಹಾಲನ್ನು ತೆಗೆದು ಕಣ್ಣೊಳಗೆ ಎರಡೆರಡು ಹನಿಗಳ ಉದುರಿಸಿದರು. ಕಣ್ಣ ಮೇಲೆಬಿದ್ದ ಹಾಲನ್ನು ಬಾಯಿಂದ ಉರುಬಿ, “ಹಾಗೆ ಕುಳಿತಿರು ಸ್ವಲ್ಪ ಹೊತ್ತು. ಬಸವಣ್ಣ ಅಂಬಲಿ ಕೊಟ್ಟೆಯೇನಪ್ಪಾ?”
ಎಂದಾಗ ಅವನ ಕಣ್ಣುಗಳು ಟಪಕ್ಕನೆ ತೆರೆದುಕೊಂಡು ಹಾಲ್ದುಂಬಿದ ಕಣ್ಣುಗಳಲ್ಲಿ ಬಸವರಸನ ಮುಖ ಕಂಡ. ಅದೇ ಆ ತೇಜಸ್ವಿ ಮುಖ. ಗುರುಗಳು ತಮ್ಮ ಒಡಚೀಲ ಜೋಳಿಗೆಯಿಂದ ಕಲ್ಲುಗಳೆರಡನ್ನು ಅವನ ಕೈಗಿಟ್ಟು “ನೋಡಪ್ಪಾ ಇದು ನೀನು ಇಲ್ಲಿಗೆ ಬರುವಾಗ ಹಿಡಿದುಕೊಂಡಿದ್ದ ನಿನ್ನ ಆಸ್ತಿಗಳು. ಜೋಪಾನವಾಗಿ ನಿನ್ನ ಕೈಗೆ ಕೊಡುತ್ತಿದ್ದೇನೆ” ಎಂದು ಹೇಳಿ ಗುರುಗಳು ಮೀಯಲು ಹೊಳೆಗೆ ಹೊರಟರು.

ಕಣ್ಣುಗಳಲ್ಲಿ ಬಿಟ್ಟಿದ್ದ ಹಾಲಿನ ಹನಿಗಳು ನೀರಾಗಿ ಎರಡೂ ಬದಿಯ ಧಾರೆಗಳಲ್ಲಿ ಹರಿದಾಗ ಕಣ್ಣು ಪಿಳಕಿಸಿ ಅವರು ಕೊಟ್ಟ ಗೋಲಾಕಾರದ ಕಲ್ಲುಗಳನ್ನು ನೋಡಿದ. ಅವುಗಳಲ್ಲಿ ತನ್ನದೇ ಪ್ರತಿರೂಪ ಕಾಣುತ್ತಿತ್ತು.

“ಅಣ್ಣಾ ನೀವು ಮಹಾಕೂಟದ ಸೀಮೆಯವರಲ್ಲವೇ..!”
“ಹೌದು. ನೀವು ಬಸವರಸರಲ್ಲವೇ..!”
“ನನ್ನ ಗುರುತು ನಿಮಗಿದೆಯೇ..! ಆದರೆ ನಿಮ್ಮನ್ನು ನಾನು ಈ ಹಿಂದೆ ಎಲ್ಲೂ ನೋಡಿದ ನೆನಪಿಲ್ಲವಣ್ಣಾ…”
“ನಿಮ್ಮ ಚಿತ್ರವನ್ನು ನಾನು ಹೇಗೆ ಕಲ್ಪಿಸಿಕೊಂಡಿದ್ದೆನೋ ಅದರದ್ದೆ ಆಕಾರದಲ್ಲಿ ನೀವಿದ್ದೀರಿ ಬಸವರಸರೇ.. ನಾನು ಮಹಾಕೂಟದ ಸೀಮೆಯವನು ಎಂದು ಹೇಗೆ ಕಂಡುಕೊಂಡಿರಿ?”
“ಅಣ್ಣಾ ಈಗ್ಗೆ ತಿಂಗಳೊಪ್ಪತ್ತಿನ ಹಿಂದೆ ಇಲ್ಲಿಗೊಬ್ಬ ಹಿರಿಯರು ಬಂದಿದ್ದರು. ಅವರೂ ನಿಮ್ಮಂತೆ ಎತ್ತಿನ ಇನಿಯ ಮುಟ್ಟಿ ನಮಸ್ಕರಿಸಿ ಉಣ್ಣುತ್ತಿದ್ದರು. ಅವರ ಭಕ್ತಿಯ ಪರಿಯನ್ನು ನಿಮ್ಮಲ್ಲಿ ಕಂಡೆನಷ್ಟೆ.”
“ಆ ಹಿರಿಯರೇ ನನ್ನ ಜನ್ಮಕ್ಕೆ ಕಾರಣಕರ್ತರು ಗುರುವೇ.. ನಾನು ಹುಟ್ಟಿದಾಗಿನಿಂದ ದೂರವಾಗಿದ್ದ ಆ ತಂದೆಯೇ ನಿಮ್ಮ ಗುರುತಿನ ಚಹರೆಯನ್ನು ಹೇಳಿದ್ದರು. ನಿಮ್ಮನ್ನು ಕಾಣಲೆಂದೇ ಈ ಕಪ್ಪಡಿಸಂಗಮಕ್ಕೆ ಬಂದಿರುವೇ ಬಸವಣ್ಣ.”
“ನಿಮ್ಮ ಕಣ್ಣುಗಳು ಅಷ್ಟೊಂದು ದಣಿದಿದ್ದರೂ…”

ಅವರಿಬ್ಬರೊಳಗಿನ ಮಾತುಗಳು ಮಥಿಸಿ ನಾದದ ನವನೀತವೇ ಹೊಂಟಿತ್ತು. ಮನಸ್ಸನ್ನು ಹದಗೊಳಿಸುವ ಸಾಧನವೊಂದಕ್ಕಾಗಿ ಬಸವಣ್ಣ ಹಂಬಲಿಸುತ್ತಿದ್ದರೆ… ಗುರುವಿನ ಕಣ್ಣೊಳಗೆ ಅಡಗಿದ್ದ ಬೆಳಕೂ ಗುರುಗಳೂ ಒಂದಾದ ಆ ಸೋಜಿಗದ ದಾರಿಯನ್ನು ಕಂಡುಕೊಳ್ಳಲು ವಸೂದೀಪ್ಯ ಹವಣಿಸುತ್ತಿದ್ದ. ಒಬ್ಬರ ಭಾವ ಮತ್ತೊಬ್ಬರಿಗೆ ಸುಲಭವಾಗಿ ತಿಳಿಯುವ ಭಾಷೆಯಲ್ಲಿ ಇಬ್ಬರ ಮಾತುಕತೆಗಳು ನಿರಂತರ ಸಾಗಿದ್ದವು. ಅಂದಿನ ದಿನ ಕಳೆದು ಮರುದಿನ ಮೂಡಿದರೂ ಇವರ ಅರಿವಿನ ಮಾತುಗಳು ನಿಂತಿರಲಿಲ್ಲ. ಯಾರಿಗೂ ಅರ್ಥವಾಗದ ಸ್ತೋತ್ರಗಳು ಮನಸ್ಸಿಗೆ ಮುದ ನೀಡಬೇಕಲ್ಲದೆ ಕಠಿಣವಾಗಬಾರದು. ನಾವಾಡುವ ನುಡಿಯಲ್ಲೇ ನಮ್ಮ ಬೇಡಿಕೆಯು ಇರಬೇಕೆಂಬ ಸುದೀರ್ಘ ವಾದವೊಂದರ ಸುತ್ತ ದಿನವೆರಡು ಕಳೆದವು.

ಅಂದು ಸಂಜೆಯ ವಿರಾಮದಲ್ಲಿ ಗುರುಗಳು ಬಸವರಸನ್ನು ಕರೆದು ಬಾಗೇವಾಡಿಗೆ ಹೋಗುವೆಯಾ ಎಂದು ವಿಚಾರಿಸಿದರು.

“ಗುರುವೇ ತೊರೆದು ಬರುವಾಗ ಇದ್ದ ದಿಟ್ಟತೆ ಈಗಲೂ ನನ್ನಲ್ಲಿದೆ. ಆಚಾರವೆಂಬುದು ಹೆಣ್ಣಿಗೊಂದು ತೆರನಾಗಿ ಗಂಡಿಗೊಂದು ತೆರನಾಗಿ ಇರುವುದಾದರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲು ನನ್ನ ನಿಲುವಿಗಲ್ಲದ ಸಂಗತಿ.”
“ಬಸವಣ್ಣ, ಮಡಿ-ಮೈಲಿಗೆ ಆರಂಭವೇ ಮುಟ್ಟಿನಿಂದಾದದ್ದು. ಆ ಮುಟ್ಟಿನ ಕುರಿತಾದ ಮೈಲಿಗೆ ಹೋಗುವ ಹಾಗೆ ಆಚರಣೆ ಬದಲಾಗುವುದು ಸುಲಭಸಾದ್ಯ ಎಂದುಕೊಂಡಿರುವೆಯಾ..? ಮುಟ್ಟಾಗದಿದ್ದರೆ ಗರ್ಭಚೀಲ ಹಸನಾಗುತ್ತಿದ್ದಿರಲಿಲ್ಲ. ಗರ್ಭಚೀಲ ಹಸನಾಗದಿದ್ದರೆ ಹುಟ್ಟು ಸಾಧ್ಯವಾಗುತ್ತಿರಲಿಲ್ಲ. ಹುಟ್ಟು ಎಂಬುದು ಕೂಡ ಮುಟ್ಟಿನಿಂದಲ್ಲದೆ ಮತ್ತೇನಿಲ್ಲ. ಆಚಾರದ ಅಪಚಾರಗಳು ಬದಲಾಗಲು ಅಪಾರ ತಿಳವಳಿಕೆ ಬೇಕಪ್ಪಾ… ನೀನೆ ಯೋಚನೆ ಮಾಡು. ಅಭ್ಯಾಸ ಮುಗಿದ ಮೇಲೆ ಗುರುಕುಲಾಶ್ರಮದಲ್ಲಿ ಹೆಚ್ಚು ದಿನ ನಿಲ್ಲುವುದು ಬೇಡ, ರಾಜಕಾರ್ಯದಲ್ಲಿ ತೊಡಗಿ ಅಭ್ಯಾಸದ ತಿಳವಳಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು.”

“ಆಯ್ತು ಗುರುವೇ ಇನ್ನೆರಡು ದಿನದಲ್ಲಿ ನನ್ನ ನಿಲುವು ತಿಳಿಸುವೆ.”
“ಈ ಅನಿಮಿಷದೇವನ ಕತೆ ಏನಂತೆ..?”
“ಯಾರು ಅನಿಮಿಷ..!”
“ಈತನೇ ಶಿವನಕೊಳ್ಳದ ಶಿಶುಮಗ. ಕಣ್ಣರೆಪ್ಪೆಯನ್ನು ಒಂದು ಚಣವೂ ಮುಚ್ಚದಂತೆ ತಪಸ್ಸು ಮಾಡಲು ಹವಣಿಸಿ ಹಣ್ಣಾದ ಅನಿಮಿಷಯೋಗಿ.. ಯಾರು ಹೇಳಿದರು ನಿನಗೆ ಅನಿಮಿಷ ಯೋಗದ ತಂತ್ರವನ್ನು ಅಭ್ಯಾಸ ಮಾಡಲು. ಕ್ರಮತಪ್ಪಿ ಅಭ್ಯಸಿಸುವುದು ಆರೊಗ್ಯದ ಮೇಲೆ ಪರಿಣಾಮ ಬೀರುವುದಪ್ಪಾ…”
“ಅನಿಮಿಷ ಯೋಗ..?”
“ಅದೊಂದು ತಂತ್ರ ಸಿದ್ದಿ ಬಸವಣ್ಣ. ನಿಧನಿಧಾನಕ್ಕೆ ನೋಡುವ ನೋಟವೂ, ದೇಹವೂ ಒಂದಾಗುವ ಪರಿ. ಕಣ್ಣುಗಳ ರೆಪ್ಪೆಯನ್ನೇ ಇಲ್ಲವಾಗಿಸಿ ಸಿದ್ಧಿಸಿಕೊಳ್ಳುವ ಒಂದು ಬಗೆಯ ಯೋಗ ವಿದ್ಯೆಯದು…”

“ಅಯ್ಯಾ ಅನಿಮಿಷದೇವ..” ಎಂದು ಈಶಾನ್ಯ ಗುರುಗಳು ಲಘುವಾದ ನಗೆಯಲ್ಲಿ ಹೆಸರಿಟ್ಟು ಕರೆದಾಗ “ಗುರುವೆ” ಎಂದು ವಿನಮ್ರವಾಗಿ ತಲೆಬಾಗಿ ಆ ಹೆಸರನ್ನು ವಸೂದೀಪ್ಯನೆಂಬ ಪ್ರೌಢನು ಅನಿಮಿಷದೇವನಾಗಿ ಸ್ವೀಕರಿಸಿದನು. ಗುರುಗಳು ಅನಿಮಿಷ ಯೋಗ ಕ್ರಮದ ಕುರಿತಾಗಿ ತಮಗೆ ತಿಳಿದ ಜ್ಞಾನಮಾರ್ಗವನ್ನು ಹೇಳಿ… ಕಟ್ಟಕಡೆಯದಾಗಿ ಬುದ್ಧನ ತದನಂತರ ಕವಲೊಡೆದ ಪಥ-ಪಂಥ, ಮಾರ್ಗಗಳಲ್ಲಿ ನಾಥಪಥದ ನಾಗಿಣಿಯಕ್ಕನ ಹೆಸರು ಹೇಳಿದಾಗ ಅನಿಮಿಷನ ಮೈ ಜುಮ್ಮೆಂದಿತು. “ನಿನ್ನ ಪಥದಲ್ಲಿ ನಿನಗೆ ನಂಬಿಕೆ ಇರುವುದಾದರೆ ಸರಿಯಾದ ಸಾಧನ ಹುಡುಕಿಕೊ, ಸರಿಯಾದ ಗುರುವನ್ನು ಹುಡುಕಿಕೊಂಡು ಸಾಧಿಸಯ್ಯ ಆಗ ಸಿದ್ಧಿಗೆ ಈಡಾಗುವೆ ಇಲ್ಲದೆ ಹೋದರೆ ಸಾವಿಗೀಡಾಗುವೆ” ಎಂದು ಗುರುಗಳು ತಲೆಯ ಮೇಲೆ ಕೈಯಿಟ್ಟು ಹರಸಿದರು.

ಅಂದು ರಾತ್ರಿಯಿಂದ ಮೂರನೆಯ ದಿನದ ರಾತ್ರಿಯವರೆಗೂ ಬಸವರಸ ಮತ್ತು ಅನಿಮಿಷ ಇಬ್ಬರೂ ಆಧ್ಯಾತ್ಮ ಸಿದ್ದಿಯ ಯೋಗ ಮಾರ್ಗಗಳದ್ದೆ ಮಾತುಕತೆಯಾಡಿದರು. ಅಂದು ಆಶ್ರಮಕ್ಕೆ ತಮಿಳು ನುಡಿಯಾಡುವ ಸಾತ್ವಿಕ ಶೈವರದ್ದೊಂದು ಗುಂಪು ಕಾಶಿಗೆ ಹೊರಟಿದ್ದವರು ಬಂದು ತಂಗಿದರು. ಪಶುಪತಿನಾಥನ ಉಗಾಭೋಗಗಳನ್ನು ಪಠಿಸುತ್ತ ಉಂಡು ಮಲಗಿದವರು ಮುಂಜಾವಿನ ಅರ್ತಿಯೊಳಗೆದ್ದು ಶಿವನಾಮಸ್ಮರಣೆ ಮಾಡುತ್ತಾ ಹೊಳೆಯೊಳಗೆ ಮಿಂದು ಬಂದು ತೊಯ್ದು ತಪ್ಪಡಿಯಾಗಿದ್ದ ಮಿಂದ ಬಟ್ಟೆಯಲ್ಲೆ ಪೂಜೆಗೆ ಕುಳಿತರು. ತಮ್ಮ ತೋಳ ರಟ್ಟೆಗೆ ಕಟ್ಟಿದ್ದ ಸಂಗಮನಾಥನ ಆಕಾರದ ಬೆಳ್ಳಿ ಮುರುಘಲಿಂಗಗಳನ್ನು ಪ್ರತಿಯೊಬ್ಬರು ತಮ್ಮ ಮುಂದೆ ಇಟ್ಟುಕೊಂಡು, ದೂಪ ದೀಪಾರತಿಗಳನ್ನು ಹೊತ್ತಿಸಿ, ಆ ಲಿಂಗವನ್ನು ಹೂಗಳಿಂದ ಅಲಂಕರಿಸಿ, ಮುರುಘನನ್ನು ಮನಸಾರೆ ನೆನೆದು ಹಾಡುತ್ತಾ ಪೂಜಿಸತೊಡಗಿದರು. ಆ ಮುರುಘಲಿಂಗಗಳಿಗೆ ಅರ್ಪಿತವಾದ ಪೂಜೆ ಮುಗಿದಾಗ ಭಸ್ಮವನ್ನು ತಮ್ಮ ಮೈಗೂ ಹಚ್ಚಿಕೊಂಡು ಮತ್ತದೆ ಬಟ್ಟೆ ತುಂಡುಗಳಲ್ಲಿ ಲಿಂಗಗಳನ್ನಿಟ್ಟು ತೋಳ ರಟ್ಟೆಗೆ ಕಟ್ಟಿಕೊಂಡೆದ್ದರು. ತಾವು ತಂದಿದ್ದ ಅರವತ್ತುಮೂರು ಪುರಾತನರ ಚರಿತ್ರೆಯುಳ್ಳ ತಾಳೆಗರಿಗಳನ್ನು ಈಶಾನ್ಯ ಗುರುಗಳ ಕೈಗಿತ್ತು “ತಂಪು ಹೊತ್ತಿನಲ್ಲಿ ದಾರಿ ಸಾಗುವುದು ಅಯ್ಯಾ, ನಾವು ಬರುವೆವು” ಎಂದು ಪಶುಪತಿ, ಮುರುಘರ ಕುರಿತಾದ ಹಾಡುಗಳನ್ನು ಹಾಡುತ್ತ ಉತ್ತರದ ಕಡೆಗೆ ಹೊರಟರು.

ಅವರು ಅತ್ತ ಹೊರಡುತ್ತಿದ್ದಂತೆ ಕಪ್ಪಡಿ ಸಂಗಮದ ಅಗ್ರಹಾರದ ಕಡೆಯಿಂದ ಒಬ್ಬ ಓಡಿ ಬಂದು ಬಸವಣ್ಣನ ಮುಂದೆ ನಿಂತು. “ಬಸವ ನನಗೆ ಸಾಕೆನಿಸಿದೆ ಈ ಭವಬಂಧನ, ಸಂಸಾರವೆಂಬುದು ಸಸಾರವಲ್ಲವೋ ಮಾರಾಯ, ನಿಮ್ಮಪ್ಪನಿಗೆ ಎಷ್ಟು ಹೇಳಿದರೂ ಕೇಳಲಿಲ್ಲ. ನನಗೆ ಶಿವನ ಮೇಲಿರುವಷ್ಟು ಮೋಹ ನಿನ್ನ ಅಕ್ಕನ ಮೇಲಿಲ್ಲ. ಇಗೋ ನಾನು ವಿಶ್ವನಾಥನ ಸನ್ನಿಧಿಗೆ ಈ ಶೈವರೊಡಗೂಡಿ ಹೋಗಿ ತಲುಪುವೆನು. ನಿನ್ನ ಅಕ್ಕ ನಾಗಲಾಂಬೆಯ ಸಾಕುವ ಜವಾಬ್ದಾರಿ ನಿನ್ನದಪ್ಪಾ ಬಸವ… ಮಾವನಿಗೆ ಸಿಟ್ಟಾಗಬೇಡವೆಂದು ಹೇಳು, ನಾಗಿಗೂ ನನ್ನ ಮನ್ನಿಸಲು ಹೇಳೋ ಮಾರಾಯಾ..” ಎಂದು ಏದುಸಿರು ಬಿಡುತ್ತಾ ಆಗಷ್ಟೆ ಹಾಕಿಕೊಂಡಿದ್ದ ಅಂಗಿಯ ಕಸಿಗಳನ್ನು ಕಟ್ಟಿಕೊಳ್ಳುತ್ತ ಗಡಿಬಿಡಿಯಲ್ಲಿ ಹೇಳಬೇಕಾದ ಮಾತುಗಳನ್ನೆಲ್ಲ ಹೇಳಿ ಓಡುತ್ತೋಡುತ್ತಾ ಆ ಕಾಶಿ ಯಾತ್ರಿಗಳ ದಂಡಿನೊಳಗೆ ಸೇರಿಬಿಟ್ಟ. ಬಸವಣ್ಣ ಅವಾಕ್ಕಾಗಿ ನೋಡುತ್ತ ನಿಂತವನು ನಿಂತೇ ಇದ್ದಾಗ ಈಶಾನ್ಯ ಗುರುಗಳು, “ಶಿವಸ್ವಾಮಿ ಏ ಶಿವಸ್ವಾಮಿ” ಎಂದು ಕೂಗಿದರೂ ಆತ ಗುರುಗಳ ಮಾತನ್ನೂ ತಲೆಗೆ ಹಾಕಿಕೊಳ್ಳದೇ ಹೊರಟೇಬಿಟ್ಟ.

ಆ ನಾಲ್ಕನೇ ದಿನವೆಂಬುದು ಬಸವಣ್ಣನಿಗೆ ಏಕಾಂತದ ದಿನವಾಯ್ತು. ನಡುನಡುವೆ ಸಂಗಮನಾಥನ ಒಲಿಸಿಕೊಳ್ಳುವ ಪರಿಪರಿ ವಿಧಾನಗಳ ಬಗ್ಗೆ ಮಾತಾಡಿದ. ವೈರಾಗ್ಯವೆಂಬುದು ಮನಸ್ಸಿನ ಭ್ರಾಂತಲ್ಲದೆ ಮತ್ತೇನು.. ಪೂಜೆಗೊಳ್ಳುವಾತ ಮತ್ತು ಪೂಜಿಸಿಕೊಳ್ಳುವಾತನ ಇರವು-ಅರಿವುಗಳು ಒಂದಾಗುವ ಪೂಜೆ ಮಾಡಬೇಕಲ್ಲದೆ ತೋರಿಕೆಯ ಪೂಜೆ, ಕಾಯಕದ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಯಾತ್ರೆಗಳು ಸಂಗಮನಾಥನಿಗೆ ಸಲ್ಲವು ಎಂದೇ ಚಿಂತಿಸಿದ. ಆ ದಿನವಿಡೀ ಅನಿಮಿಷದೇವ ತಾನು ಹೊಳೆಯಲ್ಲಿ ಆರಿಸಿ ತಂದ ಕಲ್ಲುಗಳನ್ನು ತದೇಕಚಿತ್ತದಿಂದ ನೋಡುವುದರಲ್ಲೆ ಕಳೆದ.

ಮರುದಿನ ಬೆಳಗಾಗೇ ಗುರುಕುಲದ ಮಕ್ಕಳೆಲ್ಲ ಕಲ್ಲಹಾಸಿನ ಮೇಲೆ ನಿಂತು ಏನನ್ನೋ ಕುತೂಹಲದಿಂದ ನೋಡುತ್ತಿರುವುದು ಕಾಣಿಸಿತು. ಆಶ್ರಮದ ಕೆಲಸಗಾರರು, ಉಗ್ರಾಣದ ಕಾವಲುಗಾರ, ಅಡುಗೆಯವರು, ದನಗಾಹಿಗಳು ಅಲ್ಲದೆ ಊರಿನ ಜನರೂ ನಿಂತು ನೋಡುತ್ತಿರುವುದೇನು..? ಕಲ್ಲಹಾಸಿನ ಮೇಲೆ ಹತ್ತಿಬಂದಾಗ ಬಸವರಸ ಹೊಳೆಯ ನಡುವೆ, ಎರಡೂ ನದಿಗಳು ಸೇರುವ ಸಂಗಮಸ್ಥಾನದಲ್ಲಿ ಎದ್ದಿದ್ದ ನೀರಿನ ಸುಳಿಯೊಳಗೆ ಗಪ್ಪನೇ ಮುಳುಗಿ ಮೇಲೆ ಏರಿ ಬಂದು ಈಜಾಡುವ ಸೋಜಿಗವನ್ನು ಅವರು ಕಣ್ಣಾರೆ ಕಂಡು ವಿಸ್ಮಿತರಾಗಿದ್ದರು. ದಿನವೂ ಈಜುವ ಈ ಬಸವರಸನ ಸಾಧನೆಯನ್ನು ಜನರೆಲ್ಲ ಯಾಕೆ ಇವತ್ತು ಈ ಬಗೆಯಲ್ಲಿ ನೋಡುತ್ತಿದ್ದಾರೆಂದು ಕಾವಲುಗಾರನ ಕೇಳಲಾಗಿ ಆತನು “ಅಯ್ಯಾ ಅನಿಮಿಷದೇವ ಈ ವಿನಮ್ರ ಬಸವಣ್ಣ ಇನ್ನೆರಡು ದಿನದಲ್ಲಿ ಮಂಗಳವೇಡೆಗೆ ಹೋಗುವವನಿದ್ದಾನೆ. ಅಲ್ಲಿನ ಆಳರಸರ ಆಸ್ಥಾನದಲ್ಲಿ ಕೆಲಸ ಸಿಕ್ಕಿದೆಯಂತೆ, ಈಗ ಈ ಕಪ್ಪಡಿ ಸಂಗಮದಿಂದ ಬಸವಣ್ಣ ಹೊರಟರೆ ಮುಂದೆ ಇನ್ಯಾವಾಗ ಬರುವನೋ ಯಾರು ತಿಳಿದವರು. ಅದಕ್ಕೆ ಅವನ ಈಜಾಟದ ಸಾಹಸದ ಸೊಗಸನ್ನು ಕೊನೆಯ ಬಾರಿ ಕಣ್ತುಂಬಿಕೊಳಲು ಬಂದೆವು” ಎಂದುತ್ತರಿಸಿದ.

ಬಸವರಸ ಕಪ್ಪಡಿಸಂಗಮ ತೊರೆಯುವನೇ..! ಬಸವಣ್ಣ ಹೊಳೆಯಿಂದೆದ್ದು ಬಂದು ಭಸ್ಮಭೂಷಿತನಾಗಿ ಸಂಗಮನಾಥನ ಮುಂದೆ ದಿನದ ರೂಢಿಯಂತೆ ಕುಳಿತು ಧ್ಯಾನಿಸಿದ. ಆ ದಿನವಿಡೀ ಬದುಕು ಮತ್ತು ಹೊಳೆಯ ಆಗಮನ ನಿರ್ಗಮನಗಳ ಬಗ್ಗೆಯೇ ಮಾತಾಡಿದರಾದರೂ…

“ಅಣ್ಣ ಅನಿಮಿಷದೇವ ನೀವು ಸದಾ ತನ್ನ ಹೆಗಲ ಮೇಲೆ ಹೊತ್ತು ತಿರುಗುವ ಎತ್ತಿನ ಇನಿಯನ್ನು ಶಿವನೆಂದು ಪೂಜಿಸುವಿರಲ್ಲ ಹಾಗೆ ನನ್ನೊಡನೇ ಈ ಸಂಗಮದೇವನನ್ನು ಒಯ್ಯುವ ಹಾಗಿದ್ದಿದ್ದರೆ.. ಎಷ್ಟು ಚೆನ್ನಿತ್ತಲ್ಲ.”
“ಬಸವರಸ ನಿಮ್ಮೊಳಗೆ ಸಂಗಮದೇವನಿದ್ದಾನೆ ಎಂದು ನೀವೆ ಭಾವಿಸಿಕೊಂಡರೆ ಮುಗಿಯಿತಲ್ಲ.”
“ಏನು ಮುಗಿಯಿತು. ನಾನು ದಿನವೂ ಕೂಡಲಸಂಗಮನ ಎದುರು ಕುಳಿತು ದೃಷ್ಟಿಸುವಾಗ ನನ್ನೊಳಗೆ ಅವನಿದ್ದಾನೆಂಬ ಅರಿವಿನ ಬೆಳಕು ನನ್ನೊಳಗೆ ಹೊಕ್ಕ ಅನುಭವವಾಗುತ್ತದೆ. ಆ ಸಂಗಮನಾಥನೂ ನಾನೂ ಒಂದಾಗುವ ಆ ಬೆರಗನ್ನು ಹೇಗೆ ಅನುಭವಿಸಲು ಸಾಧ್ಯವಾದೀತು?”

“ಬಸವರಸ ನಾನು ಅಂದು ಊರುಬಿಟ್ಟು ಬರುವಾಗ ಚಂದ್ರಮೌಳೇಶನ ಕಳಸದ ತುದಿಯು ಸರಳಿನಂತೆಯೂ ಇಡೀ ನಭೋ ಮಂಡಲವು ಗೋಳಾಕಾರದಂತೆಯೂ ಈ ಭೂಮಿಯನ್ನು ಪೀಠವಾಗಿಸಿಕೊಂಡ ಸೋಜಿಗ ಕಂಡಿತ್ತು. ಮೊನ್ನೆ ನನ್ನ ಕಣ್ಣುಗಳು ಊದಿಕೊಂಡಾಗ ಈ ಸಂಗಮದಲ್ಲಿ ಮುಳುಗಿದ್ದೆನಲ್ಲ ಆಗಲೂ ಅದೇ ಆಕಾರದ ಕಲ್ಲುಗಳನ್ನೇ ಕಂಡ ಅನುಭವವಾಗಿ ಈ ನುಣುಪಾದ ಕಲ್ಲುಗಳನ್ನೆತ್ತಿಕೊಂಡೆ. ನೆನ್ನೆದಿನ ನಿನ್ನೊಡನೇ ಮಾತಾಡದಿದ್ದಾಗಲೂ ನಾನು ಇದೇ ಕಲ್ಲುಗಳನ್ನು ದಿಟ್ಟಿಸಿ ನೋಡುತ್ತಿದ್ದಾಗ ಚಂದ್ರಮೌಳೇಶನೇ ನನ್ನ ಕಣ್ಣೆವೆಗೆ ಬಂದ. ಆಗ ನನ್ನ ಅರಿವಿಗೆ ಬಾರದೆ ನಾನು ನಮಃ ಶಿವಾಯ ಎಂದು ಉಗ್ಗಡಿಸಿದೆ… ಥೇಟ್ ನನ್ನ ಗುರುವು ಬಯಲಾಗುವ ಮುನ್ನ ಹೊರಡಿಸಿದ ದನಿಯಲ್ಲಿ. ಆ ಕ್ಷಣದಲ್ಲಿ ಹೊರಟ ದನಿ ಮತ್ತೆ ಅದೆಷ್ಟು ಪ್ರಯತ್ನಿಸಿದರೂ ಬಾರದಾಗಿದೆ ಬಸವಸರೇ…”

“ನಿಮ್ಮ ಅನುಭವಕ್ಕೆ ಬಂದುದೆಲ್ಲವೂ ಸತ್ಯವಾಗಿದೆಯೇ ಅಣ್ಣ…”

“ಹೌದು ಬಸವಣ್ಣ ಹೌದು.”

ನಿಂತ ನಿಲುವಿನಲ್ಲೇ ಹೊಳೆಯ ಕಡೆಗೆ ಓಡಿದ ಬಸವಣ್ಣ ಸುಳಿಯ ಮಡುವಿನಲ್ಲಿ ಹಿಂದೆಮುಂದೆ ನೋಡದೆ ಜಿಗಿದ. ಹಾಗೆ ಜಿಗಿದ ಬಸವಣ್ಣ ಸುಳಿಯೊಳಗಿಂದ ಎಷ್ಟೊತ್ತಾದರೂ ಹೊರಬಾರದಿದ್ದಾಗ ಅನಿಮಿಷನ ಮನಸ್ಸಿನಲ್ಲಿ ಏನೋ ಒಂದು ಅನುಮಾನ ಮೂಡಿ ಕಲ್ಲಹಾಸಿನ ತುದಿಗೆ ಬಂದು ನಿಂತ. ಬಸವರಸ ಈ ಸುಳಿಯೊಳಗೆ ಸಿಲುಕಿಬಿಟ್ಟನಲ್ಲ.. ಇದು ನನ್ನಿಂದಲೇ ಆಯ್ತಲಾ.. ಇದನ್ನು ಯಾರಿಗೆ ಹೇಳಲಿ ಎಂದು ಚಡಪಡಿಸುತ್ತಿದ್ದಾಗ ಬಸವಣ್ಣ ದಿಗ್ಗನೆದ್ದು ಸುಳಿಯಿಂದ ಹೊರಗೆ ಬಿದ್ದ. ಅಯ್ಯಾ ಬಸವರಸ ಎಂದು ಹೋದ ಜೀವ ಬಂದಂತಾಗಿ ತನ್ನ ಕೈಯೊಳಗಿದ್ದ ಗೋಲಾಕಾರವನ್ನು ಎದೆಯ ಮೇಲಿಟ್ಟುಕೊಂಡು ಚಂದ್ರಮೌಳೇಶನನ್ನು ಮನದಲ್ಲೇ ನೆನೆದ. ಕಲ್ಲಹಾಸಿನ ಮೇಲೆ ಬಂದ ಬಸವಣ್ಣ ತನ್ನ ಕೈಯೊಳಗಿದ್ದ ನುಣುಪಾದ ಗೋಲಾಕಾರದ ಆಕೃತಿಯನ್ನು ಅನಿಮಿಷದೇವನಿಗೆ ತೋರಿದ.
“ಇದು ನೋಡು ಅಣ್ಣಾ ಆಗಲೇ ನಾನು ಸುಳಿಯೊಳಗೆ ಮುಳುಗಿದ್ದಾಗ ಕಂಡಿತ್ತು. ಏನೋ ಕಂಡೆನಲ್ಲಾ ಎಂದು ಮನಸ್ಸು ಹುಳ್ಳಗಾದರೂ ಸುಳಿಯೊಳಗೆ ಅತ್ತಿತ್ತ ಚಲಿಸಿದರೆ ಮತ್ತೆ ಬದುಕಿ ಬರಲಾರೆ ಎಂಬ ಅಂಜಿಕೆಯಿಂದ ಸುಮ್ಮನೇ ಬಂದಿದ್ದೆ. ಇಗೋ ಈಗ ನೋಡು… ಇಷ್ಟದ ಲಿಂಗಕ್ಕಾಗಿ ಹಂಬಲಿಸಿ ನೀರಿಗಿಳಿದಾಗ ಇದನ್ನು ತಂದುಬಿಟ್ಟೆ. ಈಗ ಹೇಳು ಅಣ್ಣಾ ಇದನ್ನು ದೃಷ್ಟಿಸುವ ಬಗೆ ಹೇಗೆ…”

“ಅಯ್ಯಾ ಬಸವರಸ.. ನಿನಗೆ ಶಾಸ್ತ್ರಗಳು ಗೊತ್ತು, ಅರಿವು ಇರುವುಗಳ ಮಹತ್ ಗೊತ್ತು. ಆ ಸಂಗಮನಾಥನೂ ನೀನು ಎಂಬಂಥ ದ್ವಯಗಳೆರಡೂ ಒಂದಾಗುವ ವಿದ್ಯೆ ತಿಳಿದಾತ ನೀನು. ನೀನಲ್ಲದೆ ಈ ಲಿಂಗವನ್ನು ನೋಡುವ ಯೋಗಾಯೋಗವನ್ನು ನನಗೆ ತಿಳಿಸುವವರು ಯಾರಿದ್ದಾರೆ. ದೃಷ್ಟಿಯೋಗವನ್ನು ನನಗೂ ಹೇಳಿಕೊಡು ಬಸವಣ್ಣ.”

ಆಗಲೀಗ ಬಸವಣ್ಣನೂ ಅನಿಮಿಷದೇವನೂ ಒಟ್ಟಾಗಿ ಆ ಲಿಂಗದೊಳಗೆ ತನ್ಮಯರಾಗಿ ತಾವು ಬೇರೆಯಲ್ಲ ಆ ಸಂಗಮನಾಥ ಬೇರೆಯಲ್ಲ ಎಂಬ ಏಕೋಭಾವವನ್ನು ನಿಶ್ಚಲಗೊಳಿಸಿಕೊಂಡು ದೃಷ್ಟಿಯೋಗಕ್ಕೆ ಕುಳಿತರು.

ಅದೆಷ್ಟು ಹೊತ್ತು ಕುಳಿತರೂ ತಾನು ಬೇರೆ ಲಿಂಗ ಬೇರೆ ಎಂಬ ಭಾವದ ಹೊರತಾಗಿ ಎರಡೂ ಒಂದಾಗುವ ಚಿದ್‍ಆನಂದ ಸಿದ್ಧಿಸಲೇ ಇಲ್ಲ. ಆ ದಿನ ಸಂಜೆಯ ಹೊತ್ತಿಗೆ ಮಾವ ಬಲದೇವರಸರು ನಾಳೆ ಬರುತ್ತಿದ್ದಾರೆಂದು ಓಲೇಕಾರ ಸುದ್ದಿ ಮುಟ್ಟಿಸಿದ. ಅವರು ಒಂದು ದಿನದ ಮಟ್ಟಿಗೆ ಇಲ್ಲಿದ್ದು ಹೊರಡುವವರಿದ್ದಾರೆ. ಹೊರಡುವಾಗ ಬಸವರಸನನ್ನು ಅರಸರ ಸನ್ನಿಧಾನಕ್ಕೆ ಕರೆದೊಯ್ಯಲಿದ್ದಾರೆಂಬ ಸುದ್ದಿಯನ್ನು ಗುರುಕುಲದ ಗುರುಗಳಿಗೆ ಮುಟ್ಟಿಸಿದ್ದ. ಆಶ್ರಮದ ಹುಡುಗರು, ಊರಿನ ಮುದುತದುಕರು, ಆಳುಕಾಳುಗಳೆಲ್ಲ ಮಾತಾಡಿಸುವುದಕ್ಕಾಗಿ ಬಸವರಸನನ್ನು ಹುಡುಕಿಕೊಂಡು ಬರತೊಡಗಿದರು. ಬಂದು ಹೋಗುವವರ ಸಂಖ್ಯೆ ಹೆಚ್ಚಾದ್ದರಿಂದ ಐದು ದಿನಗಳ ಕಾಲ ಬಸವಣ್ಣನ ಸಖ್ಯದಲ್ಲಿ ಸಹಜವಾಗಿ ಕಂಡಿದ್ದ ಅರಿವಿನ ಮಾರ್ಗಗಳು ಆರನೇ ದಿನಕ್ಕೆ ಸಿಗಲಾರವೇನೋ ಎಂಬ ಕೊರಗು ಅನಿಮಿಷನಲ್ಲಿ ಉಳಿದಿತ್ತು. ಮಲಗುವ ಮುನ್ನ ಗುರುಗಳು ಬಸವಣ್ಣನನ್ನು ಹತ್ತಿರಕ್ಕೆ ಕರೆದು ಮನಸ್ಸು ತುಂಬಿ ಮಾತಾಡಿದರು. ಅದೆಷ್ಟೋ ಹೊತ್ತಿನವರೆಗೆ ರಾತ್ರಿಯ ಒಂದು ಪ್ರಹರ ಕಳೆಯುವವರೆಗೂ ಅವರಿಬ್ಬರೂ ಮಾತಾಡುತ್ತಾ ಆಶ್ರಮದ ತುಂಬೆಲ್ಲ ಓಡಾಡುತ್ತಿದ್ದರು. ಬಸವರಸನನ್ನು ಇಡೀ ಕಪ್ಪಡಿಸಂಗಮವೇ ಬಿಟ್ಟುಕೊಡಲಾರದಷ್ಟು ಅವನ ವ್ಯಕ್ತಿತ್ವ ಸೆಳೆದಿತ್ತು.

ಬೆಳಕು ಮೂಡುವ ಮುನ್ನವೇ ಬಸವಣ್ಣ ಅನಿಮಿಷ ಮಲಗಿದ್ದಲ್ಲಿಗೆ ಬಂದು ಮೆಲುವಾಗಿ ಅಣ್ಣಾ ಎಂದು ಮೈದಡವಿ ಎಚ್ಚರಿಸಿದ. ಬಸವರಸ ನಿದ್ದೆ ಬರಲಿಲ್ಲವೇ ಎಂದು ಕೇಳುತ್ತಿದ್ದ ಹಾಗೆ ತುಟಿಗಳ ಮೇಲೆ ಬೆರಳಿಟ್ಟು ಸುಮ್ಮನಿರಲು ಹೇಳಿದ. ಬಾ ಅಂಗಲಿಂಗ ಸಂಯೋಗಗೊಳ್ಳುವ ಸಹಜ ಯೋಗವನ್ನು, ಐಕ್ಯಸ್ಥಲವನ್ನು ಅಭ್ಯಸಿಸೋಣ ಎಂದು ಮೆಲುವಾಗಿ ಹೇಳಿದಾಗ ಅನಿಮಿಷ ಅರ್ತಿಯೊಳಗೆದ್ದು ಅವನನ್ನು ಹಿಂಬಾಲಿಸಿದ. ಇಬ್ಬರೂ ಹೊಳೆಯೊಳಗೆ ಮುಳುಗಿ, ಹೂ ಪತ್ರೆಗಳನ್ನು ಆಯ್ದು ತಂದು ಸಂಗಮನಾಥನ ಮುಖಮಂಟಪದಲ್ಲಿ ಭಸ್ಮಭೂಷಿತರಾಗಿ ಕುಳಿತರು. ಉಡಿಯೊಳಗೆ ಕಟ್ಟಿಕೊಂಡಿದ್ದ ಲಿಂಗವನ್ನು ಹೊರತೆಗೆದು, ಲಿಂಗಕ್ಕೆ ಮಜ್ಜನವ ಮಾಡಿಸಿ, ಎಡ ಅಂಗೈ ಮಧ್ಯದಲ್ಲಿ ಗೋಲಾಕಾರದ ಲಿಂಗವನ್ನಿಟ್ಟು, ವಿಭೂತಿಯಿಂದ ಅಲಂಕರಿಸಿ, ಪುಷ್ಪಪತ್ರೆಯನ್ನು ಲಿಂಗಕ್ಕರ್ಪಿಸಿ ಕಣ್ಣಿನ ಹುಜರಾ ಅಂಗೈಯನ್ನು ಇಟ್ಟುಕೊಂಡು ದೃಷ್ಟಿಯೋಗದಲ್ಲಿ ನಿರತರಾದರು. ಬೆಳಗಿನ ಪ್ರಹರ ಮುಗಿಯುವ ಮುನ್ನವೇ ಅನಿಮಿಷದೇವ ದೃಷ್ಟಿಯೋಗದಿಂದ ಹೊರಗೆ ಬಂದು ಆ ಲಿಂಗುವನ್ನು ಮತ್ತೊಮ್ಮೆ ಪೂಜಿಸಿ ಮಡಿಲೊಳಗಿಟ್ಟುಕೊಂಡು ಬಸವರಸನ ಪೂಜೆಯ ನಿಶ್ಚಲತೆಯನ್ನು ನೋಡುತ್ತಾ ದಂಗಾಗಿ ಕುಳಿತರು. ಅರ್ತಿಯೊಳಗೆ ಆರಂಭವಾದ ಲಿಂಗಾಂಗ ಸಾಮರಸ್ಯ ಚುಮುಚುಮು ಬೆಳಕು ಮೂಡಿದರೂ ಕಣ್ಣು ಕಿತ್ತಲಾರದಷ್ಟು ತಾದಾತ್ಮ್ಯ ಸಾಧಿಸಿ ಐಕ್ಯಯೋಗದ ಮಾರ್ಗವನ್ನು ಕಂಡರು ಬಸವಣ್ಣ. ಅವರ ಕಣ್ಣೊಳಗಿನ ತೇಜಸ್ಸು ಲಿಂಗದೊಳಗೂ ಲಿಂಗದೊಳಗಿನ ನಿಶ್ಚಲತೆ ಬಸವಣ್ಣನೊಳಗೂ ಸೇರಿ ಒಂದಾಗಿದ್ದವು. ಬಸವಣ್ಣ ದೃಷ್ಟಿಯೋಗ ಮುಗಿಸಿ ಎದ್ದಾಗ ಬೆಳಗಾಗಿತ್ತು. “ಅಣ್ಣ ಸಾಕ್ಷಾತ್ ಸಂಗಮನಾಥನನ್ನೇ ಇಂದು ಕಂಡೆನು.. ಈ ದಿವ್ಯಾನುಭವಕ್ಕೆ ಸಾಕ್ಷಿಯಾದ ನಿಮಗೆ ಶರಣು.”

“ಅಯ್ಯ ಬಸವರಸ ನಿಮ್ಮಿಂದಲೇ ನನಗೂ ಒಂದು ಸಾಧನಾ ಮಾರ್ಗ ಸಿಕ್ಕಿತು.”

“ನಿಮ್ಮೊಡನೆ ಒಡನಾಡಿದ ಈ ಆರು ದಿನಗಳೂ ಒಂದೊಂದು ಸ್ಥಲಗಳಾಗಿ ನನ್ನ ಅರಿವಿನ ಮಾರ್ಗ ವಿಸ್ತರಿಸಿದವು. ಈ ಸಾಧನಾ ಮಾರ್ಗ ಇಷ್ಟದ ದೈವವೇ ಆಗಿದೆ. ಇಷ್ಟದ ಲಿಂಗಯ್ಯನೀತ ಸಂಗಮನಾಥ.. ಎಂದು ಲಿಂಗವನ್ನು ಕಣ್ಣಿಗೊತ್ತಿಕೊಂಡು ಇದು ಆ ಎತ್ತಿನ ಇನಿಯಂತೆ ಸದಾವಕಾಲವು ನನ್ನೊಂದಿಗಿರಲಿ” ಎನ್ನುತ್ತ ಬಸವರಸ ಆ ಲಿಂಗವನ್ನು ಮಡಿಲೊಳಗೆ ಕಟ್ಟಿಕೊಂಡರು. ತುಸುಹೊತ್ತಾದ ಮೇಲೆ ಬಸವಣ್ಣ ರಾಜರ ಆಸ್ಥಾನಕ್ಕೆ ಹೋಗುತ್ತಾರೆಂದು ತಿಳಿದ ಊರಿನ ಜನ ಒಬ್ಬೊಬ್ಬರಾಗಿ ಬಂದು ಮಾತಾಡಿಸುವವರ ಸಂಖ್ಯೆ ಹೆಚ್ಚುತ್ತಾ ಹೋಯ್ತು. “ನಿಮ್ಮ ಅರಿವಿನ ಜ್ಞಾನ, ವಿನಮ್ರ ನಡೆನುಡಿಗಳು, ಅಪಾರ ತಿಳವಳಿಕೆ ನಮ್ಮನ್ನು ಒಂದಲ್ಲ ಒಂದು ಬಗೆಯಲ್ಲಿ ಪ್ರಭಾವಿಸಿವೆ ಬಸವರಸರೇ, ನಿಮ್ಮ ನಡೆನುಡಿಗಳು ಒಂದಾದ ಭಕ್ತಿಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ರಾಜ್ಯವೆಂಬುದು ಸಾಗರದೋಪಾದಿ ಜನಗಳು, ವಾಸಿಸುವ ಜಾಗ ಅಲ್ಲಿ ನಿಮಗೆ ಬದುಕಲು ಸಹ್ಯವೆನಿಸದಿದ್ದರೆ ಇಲ್ಲಿಗೆ ಮರಳಿ ಬಂದು ಬಿಡಿ. ನಮ್ಮದೇ ಸಾಮ್ರಾಜ್ಯ ಕಟ್ಟೋಣ” ಎನ್ನುತ್ತ ಬಸವರಸರನ್ನು ಹಾರೈಸುತ್ತಿದ್ದರು. ರಾಜ ಓಲಗದ ದಂಡು ಕಪ್ಪಡಿ ಸಂಗಮಕ್ಕೆ ಬಂದಾಗ ಬಸವರಸರು ಹೊರಡುವ ತಯ್ಯಾರಿ ನಡೆಸಿದರು. ಏನೂ ಇಲ್ಲದೆ ಬರಿಗೈಯಲ್ಲಿ ಬಂದಿದ್ದ ಅನಿಮಿಷದೇವನಿಗೂ ಬಸವರಸ ಹೊರಟ ಮೇಲೆ ಕಪ್ಪಡಿಸಂಗಮದಲ್ಲಿ ತಾನುಳಿಯಬಾರದು… ಅವರು ಇಲ್ಲಿದ್ದಾಗಲೇ ತಾನು ಬನವಸೆಯತ್ತ ಹೊರಡಬೇಕೆಂದು ಅನಿಸಿದ್ದರಿಂದ ಹೇಗೆ ನಿಂತು ನೋಡುತ್ತಿದ್ದರೋ ಹಾಗೇ ಮಲಪ್ರಹರಿ ದಂಡೆಗುಂಟ ಹಿಂದಿರುಗಿ ನಡೆದುಬಿಟ್ಟ…
(ಮುಂದುವರಿಯುವುದು)

Previous post ಕಲಿಸು ಗುರುವೆ…
ಕಲಿಸು ಗುರುವೆ…
Next post ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?

Related Posts

ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
Share:
Articles

ಲಿಂಗಾಂಗ ಸಮರಸವೆಂಬ ಮಹಾಪ್ರಸಾದ

August 2, 2019 ಪದ್ಮಾಲಯ ನಾಗರಾಜ್
ತೀರಾ ಇತ್ತೀಚೆಗೆ ‘ಮಂಗಳಾ’ ಎನ್ನುವ ಕೂಸೊಂದು ನನ್ನ ಕೈಕಾಲುಗಳನ್ನು ಬಿಗಿದು ಬಲಾತ್ಕಾರವಾಗಿ ‘ಬಯಲು ಬ್ಲಾಗಿ’ನಲ್ಲಿ ಕೂಡಿ ಹಾಕಿ ‘ಶರಣಪಥ’ದ ಕುರಿತು ಮಾತನಾಡಬೇಕೆಂದು ನನ್ನನ್ನು...
ಮಹಾಮನೆಯ ಕಟ್ಟಿದ ಬಸವಣ್ಣ
Share:
Articles

ಮಹಾಮನೆಯ ಕಟ್ಟಿದ ಬಸವಣ್ಣ

December 8, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಮನೆಯೂ ಒಂದು. ಹಕ್ಕಿ-ಪಕ್ಷಿಗಳು ಸಹ ತಮ್ಮದೇ ಆದ ಮನೆ ಕಟ್ಟಿಕೊಳ್ಳುತ್ತವೆ. ಒಂದು ಗುಬ್ಬಿ ಎಲ್ಲೆಲ್ಲಿಂದಲೋ ತೆಂಗಿನ ನಾರು, ಕಡ್ಡಿ, ಗರಿಕೆ...

Comments 10

  1. ಜಯಪ್ರಕಾಶ್ ಬಗಲೂರು
    Aug 17, 2025 Reply

    ಕತೆಯ ಗಾಂಭೀರ್ಯ ತೀವ್ರವಾಗಿ ಸೆಳೆಯುತ್ತದೆ.

  2. ರಾಜು ಎಸ್.ಟಿ
    Aug 18, 2025 Reply

    ಬಸವಣ್ಣ ಹಾಗೂ ಅನಿಮಿಷರ ಭೇಟಿಯ ಪ್ರಸಂಗ ಓದಿ ಆಟಕ್ಕಾಗಿ!!!!! ಹೀಗೂ ನಡೆದುದುಂಟೆ?

  3. ಭರತ್ ಬಿ.ಕೆ
    Aug 22, 2025 Reply

    ಸಮಗ್ರ ಕತೆಯ ಈ ಭಾಗವನ್ನು ಎರಡು ಸಲ ಓದಿದೆ…. ಸತ್ಯದ ಬೆಂಬತ್ತಿದ ಇಬ್ಬರು ಯುವಕರು, ಆ ನದಿ, ಈಜಾಟ, ಗುರುಕುಲ, ಅಲ್ಲಿನ ಚಿತ್ರಣ… ನಿರೂಪಣೆಯು ಸೂಜಿಗಲ್ಲಿನಂತೆ ಸೆಳೆಯುತ್ತದೆ…… 🤝

  4. Jayanna P
    Aug 26, 2025 Reply

    Wow… wonderful story🥰

  5. Avinash Jingade
    Aug 29, 2025 Reply

    ಹಿಂದಿನ episode ಗಳನ್ನು ತೆಗೆದು ಒಟ್ಟಿಗೆ ಓದಿದೆ… ಕತೆ ನಿಜಕ್ಕೂ ಆಸಕ್ತಿ ಹುಟ್ಟಿಸುತ್ತದೆ. ಹೆಸರುಗಳು, ಊರ ಚಿತ್ರಣ, ಈಗ ಯುವ ಬಸವನ ಬೇಟಿ, ಬಹಳ ಸೊಗಸಾಗಿ ಬರೆದಿದ್ದಾರೆ, ಮಹಾದೇವ ಅವರು.

  6. ನರಸಪ್ಪ ಎಂ
    Aug 29, 2025 Reply

    ಸರ್, ಈಶಾನ್ಯ ಗುರುಗಳು ಯಾರು? ಜಾತವೇದ ಮುನಿಗಳಿಗೆ ಇನ್ನೊಂದು ಹೆಸರೇ?

  7. Sharath B
    Aug 31, 2025 Reply

    ಅಕ್ಕಾ, ಈ ಕತೆ ತುಂಬಾ ಚೆನ್ನಾಗಿದೆ. ಮಹಾದೇವಣ್ಣಾ ಅವರ ಒಪ್ಪಿಗೆ ತೆಗೆದುಕೊಂಡು ಇದನ್ನ ಖಂಡಿತವಾಗಿ ಒಂದು web series ಮಾಡಬೇಕು. ಎಲ್ಲರೂ ಜೊತೆಯಲ್ಲಿ ಕೈಹಾಕೋಣ.

  8. ಜಯಣ್ಣ ಗಿರಿನಗರ
    Sep 1, 2025 Reply

    ಬಸವಣ್ಣನ ದಾರಿ, ಅನಿಮಿಷನ ದಾರಿ ಹೀಗೆ ಡಿಕ್ಕಿ ಹೊಡೆದು, ಹಾಗೆ ದೂರಾದ ಗಳಿಗೆಗೆ ನಾವೂ ಸಾಕ್ಷಿ ಆದಂತಾಯಿತು… ಸತ್ಯದ ಅನ್ವೇಷಣೆಯಲ್ಲಿರುವ ಎರಡು ಜೀವಗಳ ಎದೆಬಡಿತ ಒಂದೇ ಎನ್ನುವಂತೆ ತೋರಿಸಿದ್ದೀರಿ.

  9. ಶ್ರೀದೇವಿ ಜಿ
    Sep 1, 2025 Reply

    ನದಿಯಲ್ಲಿ, ಸುಳಿಯಲ್ಲಿ ಸಿಕ್ಕ ಅಪರೂಪದ ಶಿಲೆಗಳೇ ಇಷ್ಟಲಿಂಗಕ್ಕೆ ಪ್ರೇರಣೆಯಾಗಿದ್ದು ನಿಜನಿಜ ಎನಿಸಿತು. ಅರಿವು, ಕುರುಹು, ಲಿಂಗ, ಸಾಮರಸ್ಯ… ಎಲ್ಲವೂಗಳ ಬೀಜಮೂಲ ಈ ಕಥನದಲ್ಲಿದೆ.

  10. Ashakiran, BENGALURU
    Sep 2, 2025 Reply

    Convey my namaskara to shri mahadeva hadapada
    His artistic way of creating narrating the scenes in writing is excellent.
    I am waiting for next episode…

Leave a Reply to ಜಯಣ್ಣ ಗಿರಿನಗರ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
June 12, 2025
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
Copyright © 2025 Bayalu