Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನುಭವ ಮಂಟಪದ ಸುತ್ತ (ಭಾಗ-1)
Share:
Articles January 15, 2026 ಡಾ. ಎಸ್.ಎಮ್ ಜಾಮದಾರ

ಅನುಭವ ಮಂಟಪದ ಸುತ್ತ (ಭಾಗ-1)

ಬಹುಜನರ ಬಹುದಿನಗಳ ಬೇಡಿಕೆ ಮತ್ತು ಒತ್ತಾಯಕ್ಕೆ ಮಣಿದ ಕರ್ನಾಟಕ ಸರ್ಕಾರವು ಬಸವ ಕಲ್ಯಾಣದಲ್ಲಿನ ಶರಣ ಸ್ಮಾರಕಗಳ ಅಭಿವೃದ್ಧಿಗಾಗಿಯೇ 2006ರಲ್ಲಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಕಾಯ್ದೆಯನ್ನು ರಚಿಸಿತು. 880 ವರ್ಷಗಳ ನಂತರ ಅಳಿದುಳಿದ ಅನೇಕ ಶರಣರ ಪವಿತ್ರ ಸ್ಥಳಗಳನ್ನು ಪುನರುಜ್ಜೀವನ ಮಾಡುವುದರೊಂದಿಗೆ ಅನುಭವ ಮಂಟಪವನ್ನೂ ಅಲ್ಲಿ ಕಟ್ಟಬೇಕು ಎನ್ನುವುದು ಅದರ ಮುಖ್ಯ ಉದ್ದೇಶವಾಗಿತ್ತು.

ಬಸವಕಲ್ಯಾಣದಲ್ಲಿ ದೊರೆತ ಅಳಿದುಳಿದ 28 ಪ್ರಮುಖ ಶರಣ ಸ್ಥಳಗಳನ್ನು ಮತ್ತು ಬಸವಕಲ್ಯಾಣ ಪಟ್ಟಣದ ಕೆಲವು ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಪ್ರಥಮ ಹಂತದಲ್ಲಿ ಮಾಡಿ ಮುಗಿಸಲಾಯಿತು. 2010ರಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯು ಅನುಭವ ಮಂಟಪ ನಿರ್ಮಾಣದ ಕಾರ್ಯವನ್ನು ಕೈಗೆ ಎತ್ತಿಕೊಳ್ಳಲು ಮುಂದಾಯಿತು. ಅದಕ್ಕಾಗಿ ಒಂದು ತಜ್ಞರ ಸಮಿತಿಯನ್ನು ಮಂಡಳಿಯು ತನ್ನ ಅಧಿಕಾರದ ಮಿತಿಯೊಳಗೆ ರಚಿಸಿಕೊಂಡಿತು.

ಈ ತಜ್ಞರ ಸಮಿತಿಗೆ ನಾಡೋಜ ಪಾಟೀಲ ಪುಟ್ಟಪ್ಪ ಅವರು ಅಧ್ಯಕ್ಷರಾಗಿದ್ದರು. ಡಾ.ಎಂ.ಎಂ. ಕಲಬುರ್ಗಿ, ಪ್ರಾಚ್ಯಶಾಸ್ತ್ರ ತಜ್ಞ ಡಾ.ಅ.ಸುಂದರ, ಇತಿಹಾಸ ತಜ್ಞ ಡಾ. ಷಡಕ್ಷರಿ ಶೆಟ್ಟರ, ಭೂಗರ್ಭಶಾಸ್ತ್ರ ತಜ್ಞ ಡಾ. ಎಚ್.ಚಂದ್ರಶೇಖರ ಮತ್ತು ಇನ್ನೂ ಹತ್ತು ಜನ ತಜ್ಞರು ಇದ್ದರು. ಆಗ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಎಲ್ಲ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದ ಲೇಖಕರು (ಎಸ್.ಎಂ. ಜಾಮದಾರ್) ಅದರ ವಿಶೇಷಾಧಿಕಾರಿಯಾಗಿದ್ದರು ಮತ್ತು ತಜ್ಞರ ಸಮಿತಿಯ ಕಾರ್ಯದರ್ಶಿಯಾಗಿದ್ದರು.
‘ಅನುಭವ ಮಂಟಪ’ ಎನ್ನುವ ಯಾವುದೇ ಕಟ್ಟಡದ ಅವಶೇಷಗಳು ಬಸವಕಲ್ಯಾಣದಲ್ಲಿ ಎಲ್ಲಿಯೂ ಸಿಗಲಿಲ್ಲ್ಲ. ಅನುಭವ ಮಂಟಪ ಇತ್ತು ಎನ್ನುವುದಕ್ಕೆ ಶರಣರ ಅನೇಕ ವಚನಗಳಲ್ಲಿ ಮತ್ತು 13ನೆಯ ಶತಮಾನದ ಕೆಲವು ಗ್ರಂಥಗಳಲ್ಲಿ- ವಿಶೇಷವಾಗಿ ಕ್ರಿಸ್ತ ಶಕೆ 1210ರ ಸುಮಾರಿಗೆ ಹರಿಹರನು ಬರೆದ ಬಸವರಾಜ ದೇವರ ರಗಳೆ, ಕ್ರಿ.ಶ. 1230ರ ಸುಮಾರಿನ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನು ಆಧರಿಸಿದ ಭೀಮ ಕವಿಯ ಬಸವ ಪುರಾಣದಲ್ಲಿಯೂ ಕಾಲಜ್ಞಾನದ ವಚನಗಳಲ್ಲೂ ಅನುಭವ ಮಂಟಪದ ಬಗ್ಗೆ ಉಲ್ಲೇಖಗಳಿವೆ. ಆ ನಂಬಿಕೆಯನ್ನು ಸತ್ಯವೆಂದು ಸಿದ್ದ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.

ಹೀಗಾಗಿ ಐದು ಅತೀ ಮಹತ್ವದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿತ್ತು, ಅವೆಂದರೆ:
ಅ) ‘ಅನುಭವ ಮಂಟಪ’ ಎನ್ನುವ ಕಟ್ಟಡವು ಬಸವಕಲ್ಯಾಣದಲ್ಲಿ ಇತ್ತೇ?
ಬ) ಅದು ಇದ್ದಿದ್ದರೆ, ಬಸವ ಕಲ್ಯಾಣದಲ್ಲಿ ಎಲ್ಲಿ ಇತ್ತು?
ಕ) ಅನುಭವ ಮಂಟಪದ ಕಟ್ಟಡದ ಗಾತ್ರ ಅಥವಾ ಪ್ರಮಾಣ ಎಷ್ಟಿತ್ತು?
ಡ) ಅನುಭವ ಮಂಟಪ ಕಟ್ಟಡದ ವಾಸ್ತುಶಿಲ್ಪ ಹೇಗಿತ್ತು?
ಇ) ಅನುಭವ ಮಂಟಪದಲ್ಲಿ ಎಂಥೆಂಥ (ಏನೇನು) ಭಾಗಗಳಿದ್ದವು?
ಈ ಐದು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ತಜ್ಞರ ಸಮಿತಿಯು ಮಾಡಿದ ಪ್ರಯತ್ನಗಳನ್ನು ಇಲ್ಲಿ ಸಾರಾಂಶದ ರೂಪದಲ್ಲಿ ನೀಡಲಾಗಿದೆ.

(ಅ) ‘ಅನುಭವ ಮಂಟಪ’ ಎಂಬ ಸಂಸ್ಥೆ ಮತ್ತು ಕಟ್ಟಡವು ಇತ್ತೇ?

ಬಸವ ಕಲ್ಯಾಣದಲ್ಲಿ ಬಸವಣ್ಣನವರ ಕಾಲದಲ್ಲಿ ‘ಅನುಭವ ಮಂಟಪ’ ಎಂಬ ಹೆಸರಿನ ಸಂಸ್ಥೆ ಮತ್ತು ಕಟ್ಟಡ ಇತ್ತೇ? ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ 1932 ರಿಂದ 1945ರ ವರೆಗೆ ಅತ್ಯಂತ ಮಹತ್ವದ ಚರ್ಚೆ ನಡೆದಿತ್ತು. ಆ ಚರ್ಚೆಯನ್ನು ಹುಟ್ಟುಹಾಕಿದವರು ಕಲಬುರ್ಗಿಯ ಅಂದಿನ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಕೃಷ್ಣರಾವ ಕಪಟ್ರಾಳ ಅವರು. ಅದರ ಹಿನ್ನೆಲೆಯನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ.
1932ರಲ್ಲಿ ರೆವರಂಡ ಉತ್ತಂಗಿ ಚೆನ್ನಪ್ಪನವರು ಇಂಗ್ಲಿಷ ಭಾಷೆಯಲ್ಲಿ ‘ಅನುಭವ ಮಂಟಪ’ದ ಬಗ್ಗೆ ಸಂಶೋಧನಾತ್ಮಕವಾದ ಒಂದು ಪುಸ್ತಕವನ್ನು ಹಾವೇರಿಯ ಬಸವರಾಜ ಮುದ್ರಣಾಲಯಲ್ಲಿ ಮುದ್ರಿಸಿ ಪ್ರಕಟಿಸಿದ್ದರು. 1933ರಲ್ಲಿ ಅದನ್ನು ಕನ್ನಡಕ್ಕೆ ಅನುವಾದಿಸಿ ಅದೇ ಮುದ್ರಣಾಲಯದಿಂದ ಮುದ್ರಿಸಿ ಪ್ರಕಟಿಸಿದವರು ‘ಕನ್ನಡದ ಕುಲಪುರೋಹಿತ’ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಗೂ ‘ಕರ್ನಾಟಕದ ಗತವೈಭವ’ ಎಂಬ ಅತ್ಯಂತ ಜನಪ್ರಿಯ ಗ್ರಂಥವನ್ನು ಬರೆದ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದವರೂ ಆದ ಶ್ರೀ ಆಲೂರ ವೆಂಕಟರಾವ ಅವರು.

ತದನಂತರ ರೆ.ಉತ್ತಂಗಿಯವರು ‘ವೀರಶೈವ ಸಾಹಿತ್ಯ ಸಮಿತಿ ಪತ್ರಿಕೆ’ಯ (ಸಂಪುಟ 3, ಸಂಚಿಕೆ 2), ಜುಲೈ 1943ರಲ್ಲಿ ‘ಅಲೇಖನಾದ ಶೂನ್ಯ ಕಲ್ಲಿನೊಳಗಾದ’ ಎಂಬ ಲೇಖನ ಬರೆದು ಶರಣರು ಬಳಸಿದ ಅಂಕಿತನಾಮಗಳನ್ನು ವಿಶ್ಲೇಷಿಸಿದ್ದರು ಮತ್ತು ಅನುಭವ ಮಂಟಪದ ಬಗ್ಗೆಯೂ ಚರ್ಚಿಸಿದ್ದರು.

ಚೆನ್ನಪ್ಪನವರ ಆ ಲೇಖನವನ್ನು ಶ್ರೀ ಕೃಷ್ಣರಾವ ಕಪಟ್ರಾಳ ಅವರು ವಿರೋಧಿಸಿದರು. (1) ಅವರು ಅನುಭವ ಮಂಟಪ ಹೆಸರಿನ ಸಂಸ್ಥೆ ಹನ್ನೆರಡನೆಯ ಶತಮಾನದಲ್ಲಿ ಇರಲೇ ಇಲ್ಲ. (2) ಅದನ್ನು ಹದಿನೈದು ಹದಿನಾರನೆಯ ಶತಮಾನದಲ್ಲಿ ಶರಣ ಧರ್ಮವನ್ನು ಪುನಃ ಸ್ಥಾಪಿಸುವ ಸಮಯದಲ್ಲಿ ನಾಲ್ಕು ಜನ ಶೂನ್ಯ ಸಂಪಾದನಾಕಾರರು ಕಾಲ್ಪನಿಕವಾದ ಇಂತಹ ಸಂಸ್ಥೆಯನ್ನು ಹುಟ್ಟು ಹಾಕಿದರೆಂದು ವಾದಿಸಿ ಒಂದು ದೀರ್ಘ ಲೇಖನವನ್ನು ಜಯಂತಿ ಮಾಸ ಪತ್ರಿಕೆ (ಜನೆವರಿ 1944 ಸಂಚಿಕೆ)ಯಲ್ಲಿ ಪ್ರಕಟಿಸಿದರು. ಕಪಟ್ರಾಳರಿಗೆ ಪ್ರತ್ಯುತ್ತರವಾಗಿ, ಉತ್ತಂಗಿ ಚೆನ್ನಪ್ಪನವರು ಮತ್ತೊಂದು ದೀರ್ಘ ಲೇಖನವನ್ನು ‘ಜಯಕರ್ನಾಟಕ’ ಮಾಸಪತ್ರಿಕೆಯಲ್ಲಿ (ಮಾರ್ಚ್ 1944) ಬರೆದರು.

ಕಪಟ್ರಾಳ ಅವರಷ್ಟೇ ಅಲ್ಲ, ಅವರಂಥ ಕೆಲವೇ ಕೆಲವು ಬ್ರಾಹ್ಮಣ ಪಂಡಿತರು ಇದೇ ರೀತಿಯ ಆಧಾರವಿಲ್ಲದ ಟೀಕೆ ಟಿಪ್ಪಣಿ ಚರ್ಚೆಗಳನ್ನು ಶರಣರ ಮತ್ತು ಶರಣ ಚಳುವಳಿಯ ವಿರುದ್ಧ 1880 ರಿಂದ ಮಾಡುತ್ತಲೇ ಬಂದಿದ್ದಾರೆ. ಬ್ರಾಹ್ಮಣ ವಿದ್ವಾಂಸರ ಮುಂದುವರೆದ ಸಂಚಿತ ಪ್ರಯತ್ನಗಳಲ್ಲಿ ಕಪಟ್ರಾಳ ಅವರ ಈ ಲೇಖನವೂ ಒಂದಾಗಿತ್ತು. ಇದೇ ವರ್ಗದ ಜನರಿಂದ ಬಸವಣ್ಣನವರ ಕ್ರಾಂತಿಗೆ 12ನೇ ಶತಮಾನದಲ್ಲಿ ಚ್ಯುತಿಯಾಗಿತ್ತು. ಈಗಲೂ ಸಕ್ರಿಯವಾಗಿ ಅವರು ಬಸವ ತತ್ವಗಳನ್ನು ವಿರೋಧಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕವಾಗಿ ಗೊತ್ತಿರುವ ಸಂಗತಿ.

ದುರ್ದೈವವೆಂದರೆ, ಅಂದು (93 ವರ್ಷಗಳ ಹಿಂದೆಯೂ) ಇದ್ದ ಇಂದಿಗೂ ಪ್ರಮುಖ ವಿರಕ್ತಮಠಗಳಾಗಿರುವ ಚಿತ್ರದುರ್ಗದ ಮುರುಘಾ ಮಠದವರು, ತುಮಕೂರಿನ ಸಿದ್ದಗಂಗಾ ಮಠದವರು, ಸಿರಿಗೆರೆಯ ಮಠದವರು, ಸುತ್ತೂರಿನ ಮಠದವರು, ಗದಗಿನ ತೋಂಟದಾರ್ಯ ಮಠದವರು ಇತ್ಯಾದಿ ಒಂದು ಸಾವಿರಕ್ಕಿಂತಲೂ ಹೆಚ್ಚಿರುವ ಮಠಾಧೀಶರಲ್ಲಿ ಒಬ್ಬರೂ ಶ್ರೀ ಕಪಟ್ರಾಳರ ಲೇಖನವನ್ನು ವಿಮರ್ಶಿಸಲಿಲ್ಲ, ವಿರೋಧಿಸಲಿಲ್ಲ, ಅದಕ್ಕೆ ಉತ್ತರಿಸಲಿಲ್ಲ. ವಚನ ಸಾಹಿತ್ಯದ ಆಳವಾದ ಅಧ್ಯಯನ, ವಿಶ್ಲೇಷಣೆ, ತುಲನಾತ್ಮಕ ಅಧ್ಯಯನ ಮಾಡುತ್ತಿರುವ ಸ್ವಾಮಿಗಳು ಈಗಲೂ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಆಗ ಅಂಥವರೂ ಇರಲಿಲ್ಲ. ಹೀಗಾಗಿ ಯಾವುದೇ ಲಿಂಗಾಯತ ಸ್ವಾಮಿಗಳು ಕಪಟ್ರಾಳ ಅವರ ವಾದಕ್ಕೆ ಉತ್ತರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅಷ್ಟೇ ದುರ್ದೈವವೆಂದರೆ, ಅಂದು ಲಿಂಗಾಯತರಲ್ಲಿ ಪ್ರಸಿದ್ಧ ವಿದ್ವಾಂಸರೆನಿಸಿಕೊಂಡಿದ್ದ ಡಾ. ಶಿ.ಚೆ. ನಂದಿಮಠರು 1928ರಲ್ಲಿಯೇ ಲಂಡನ್ ವಿಶ್ವವಿದ್ಯಾಲಯದಿಂದ ವೀರಶೈವ ಬಗ್ಗೆ ಸಂಸ್ಕೃತದಲ್ಲಿ ಬರೆದು ಡಾಕ್ಟರೇಟ್ ಪಡೆದಿದ್ದರು. ಅವರೂ ಕಪಟ್ರಾಳ ಅವರ ವಾದಕ್ಕೆ ಯಾವುದೇ ಉತ್ತರ ನೀಡಲಿಲ್ಲ. ಶ್ರೀ ಹರ್ಡೇಕರ ಮಂಜಪ್ಪ, ಶ್ರೀ ಶಿ.ಶಿ.ಬಸವನಾಳ, ಎಂ.ಆರ್. ಸಾಖರೆ, ಫ.ಗು. ಹಳಕಟ್ಟಿಯವರೂ ಕಪಟ್ರಾಳ ಅವರ ವಾದಕ್ಕೆ ಉತ್ತರಿಸಲಿಲ್ಲ.

ಇಂತಹ ಸನ್ನಿವೇಶದಲ್ಲಿ ಅನುಭವ ಮಂಟಪದ ಬಗ್ಗೆ ಅಕಸ್ಮಾತ್ ಕೃಷ್ಣರಾವ ಕಪಟ್ರಾಳ ಅವರ ಅಭಿಪ್ರಾಯವೇ ಮುಂದುವರೆದಿದ್ದರೆ ಏನಾಗಬಹುದಿತ್ತು?

ಸುದೈವದಿಂದ, ಲಿಂಗಾಯತರಲ್ಲದ ಓರ್ವ ಪ್ರಸಿದ್ಧ ಸಂಶೋಧಕ ಮತ್ತು ಲೇಖಕರೆನಿಸಿಕೊಂಡಿದ್ದ ಬಾಸೆಲ್ ಮಿಶನ್ನಿನ ಕ್ರಿಸ್ತಿಯನ್ ಧರ್ಮ ಪ್ರಚಾರಕರಾಗಿದ್ದ ಧಾರವಾಡದ ಸುಪ್ರಸಿದ್ದ ಕ್ರೈಸ್ತ ಪಾದ್ರಿ ರೆವರಂಡ್ ಉತ್ತಂಗಿ ಚೆನ್ನಪ್ಪನವರು ಕಪಟ್ರಾಳರ ವಾದಕ್ಕೆ ಉತ್ತರವನ್ನು ಸಮರ್ಥವಾಗಿ ನೀಡಲು ಮುಂದಾದರು. ಇದು ಸೂಚಿಸುವುದು ಏನನ್ನು? ಲಿಂಗಾಯತರು ಮತ್ತು ಅವರ ಮಠಗಳು ತಮ್ಮ ಧರ್ಮ, ಅದರ ಸ್ಥಾಪನೆ, ಸ್ಥಾಪಕರು, ಅದರ ಸುದೀರ್ಘ ಇತಿಹಾಸ, ಅದರ ಶ್ರೇಷ್ಠತೆಯ ಬಗ್ಗೆ ಎಷ್ಟು ಅಜ್ಞಾನಿಗಳಾಗಿದ್ದಾರೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೆ? ಬೇರೆ ಧರ್ಮದವರಿಂದ ತಮ್ಮ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕಾದ ಸ್ಥಿತಿ ಬಹುತೇಕ ಲಿಂಗಾಯತರು ಮತ್ತು ಬಹುತೇಕ ಲಿಂಗಾಯತ ಮಠಾಧೀಶರದಾಗಿತ್ತು ಎಂಬುದನ್ನು ನೋಡಿ ಬೇರೆಯವರು ನಗುವಂತಾಗಿದೆ!

ಉತ್ತಂಗಿ ಚೆನ್ನಪ್ಪನವರು ಅನುಭವ ಮಂಟಪವು ಕೇವಲ ಕಲ್ಪನೆಯ ಕೂಸಲ್ಲ. ಅದಕ್ಕೆ ಸಾಕಷ್ಟು ಐತಿಹಾಸಿಕ ಆಧಾರಗಳಿವೆ ಎಂಬುದನ್ನು ವಿವರಿಸಿ ಮೂರು ನಾಲ್ಕು ಸಂಶೋಧನಾತ್ಮಕ ಲೇಖನಗಳನ್ನು ಬರೆದರು. ಆ ಮೂಲಕ ಉತ್ತಂಗಿಯವರು ನೀಡಿರುವ ಉತ್ತರಕ್ಕೆ ಯಾವುದೇ ಪ್ರತ್ಯುತ್ತರ ನೀಡದೇ ಕಪಟ್ರಾಳ ಅವರು ಬಾಯಿ ಮುಚ್ಚಿಕೊಂಡರು, ಇತರರೂ ತೆಪ್ಪಗಾದರು.

ಸಾರ್ವಜನಿಕರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಸಲುವಾಗಿ ಉತ್ತಂಗಿ ಚೆನ್ನಪ್ಪನವರು ತಮ್ಮ ಲೇಖನಗಳನ್ನು ಸಮಗ್ರವಾಗಿ ಸಂಗ್ರಹಿಸಿ ‘ಅನುಭವ ಮಂಟಪದ ಐತಿಹಾಸಿಕತೆ’ ಎಂಬ 183 ಪುಟಗಳ ಒಂದು ಗ್ರಂಥವನ್ನೇ ಬರೆದರು. ಅದು ಮೊದಲು ಧಾರವಾಡದ ಮುರುಘಾಮಠದಿಂದ ಪ್ರಕಟವಾಯಿತು. ನಂತರ ಶರಣ ಸಾಹಿತ್ಯ ಪರಿಷತ್ತು ಕೂಡ ಅದರ ಮರು ಮುದ್ರಣ ಮಾಡಿ ಪ್ರಕಟಿಸಿದೆ. ಅಲ್ಲಿಗೆ “ಅನುಭವ ಮಂಟಪ ಇತ್ತೇ?” ಎನ್ನುವ ಪ್ರಶ್ನೆ ನಿಂತು ಹೋಯಿತು. ಇದಾದ ನಂತರ ಅನೇಕರು ಅನುಭವ ಮಂಟಪದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು 1971ರಲ್ಲಿ, ‘ಅನುಭವ ಮಂಟಪ’ ಎಂಬ ಪುಸ್ತಕವನ್ನು ಬರೆದು ಮೈಸೂರಿನ ಡಿ.ವಿ.ಕೆ ಮೂರ್ತಿ ಪ್ರಕಾಶನದಲ್ಲಿ ಪ್ರಕಟಿಸಿದ್ದಾರೆ. ವಿ.ಎಸ್.ಚರಂತಿಮಠ ಅವರು ಬಸವ ಸಮಿತಿಯ ಮುಖಾಂತರ ‘ಅನುಭವ ಮಂಟಪ ಮತ್ತು ವೀರಶೈವ ಸಂಸ್ಕೃತಿ’ ಎಂಬ ಇಂಗ್ಲಿಷ್ ಗ್ರಂಥವನ್ನು 1995ರಲ್ಲಿ ಬರೆದಿದ್ದಾರೆ. ಅದೇ ರೀತಿ, ಶ್ರೀ ಬಿ. ವಿರುಪಾಕ್ಷಪ್ಪನವರು ‘ಅನುಭವ ಮಂಟಪ ಇನ್ ಸೈಂಟಿಫಿಕ್ ಪರ್‍ಸ್ಪೆಕ್ಟಿವ್’ ಎಂಬ ಇಂಗ್ಲಿಷ ಗ್ರಂಥವನ್ನು 2002ರಲ್ಲಿ ಬಸವ ಸಮಿತಿಯ ಮೂಲಕ ಪ್ರಕಟಿಸಿದ್ದಾರೆ. 2007ರಲ್ಲಿ ನೀಲಾವರ ಸುರೇಂದ್ರ ಅಡಿಗರು ‘ಅನುಭವ ಮಂಟಪ’ ಹೆಸರಿನ ಒಂದು ಕನ್ನಡ ಪುಸ್ತಕವನ್ನು ಬರೆದಿದ್ದಾರೆ. 2012ರಲ್ಲಿ ಶ್ರೀ ಎಸ್.ಆರ್. ಗುಂಜಾಳರು ಚೆನ್ನಪ್ಪ ಉತ್ತಂಗಿಯವರ ಮೂಲಗ್ರಂಥವನ್ನು ಆಧರಿಸಿ ‘ಅನುಭವ ಮಂಟಪ ದಿ ಹಾರ್ಟ್ ಆಫ್ ದ ಲಿಂಗಾಯತ ರಿಲಿಜನ್’ ಎಂಬ ಒಂದು ಚಿಕ್ಕ 46 ಪುಟಗಳ ಇಂಗ್ಲಿಷ್ ಗ್ರಂಥವನ್ನು ರಚಿಸಿದ್ದಾರೆ. 2007ರಲ್ಲಿ ಬಸ್ರೂರು ಸುಬ್ಬಾರಾವ ಎಂಬ ಹೆಸರಿನ ಇನ್ನೊಬ್ಬ ವಿದ್ವಾಂಸರು ಅನುಭವ ಮಂಟಪ ಮತ್ತು ಶೂನ್ಯ ಸಂಪಾದನೆ ಬಗ್ಗೆ ಹಾಗೂ ಅಲ್ಲಮ ಪ್ರಭುಗಳ ಬಗ್ಗೆ ಎರಡು ಗ್ರಂಥಗಳನ್ನು ಬರೆದಿದ್ದಾರೆ. ಅನುಭವ ಮಂಟಪದ ಬಗ್ಗೆ ಸಾಮಾನ್ಯ ಜನರು ತಿಳಿಯಬೇಕಾದ ಎರಡು ಅಂಶಗಳನ್ನು ವಿಶದಪಡಿಸುವುದು ಅಗತ್ಯವೆನಿಸುತ್ತದೆ :

(1) ‘ಅನುಭವ ಮಂಟಪ’ವನ್ನು 12ನೆಯ ಶತಮಾನದ ಶರಣರು ಬೇರೆ ಬೇರೆ ಹೆಸರುಗಳಿಂದಲೂ ಕರೆದಿದ್ದಾರೆ. 13 ನೇ ಶತಮಾನದಿಂದ 16ನೇ ಶತಮಾನದವರೆಗೆ ಬರೆಯಲ್ಪಟ್ಟ ಬಹುತೇಕ ಶರಣ ಸಂಬಂಧಿ ಗ್ರಂಥಗಳಲ್ಲಿ ಆ ಹೆಸರುಗಳನ್ನು ನೀಡಲಾಗಿದೆ ಎಂಬುವುದನ್ನು ಮೊಟ್ಟ ಮೊದಲು ಉತ್ತಂಗಿ ಚೆನ್ನಪ್ಪನವರು ಸಂಶೋಧಿಸಿ ವಿವರ ನೀಡಿದ್ದಾರೆ.
ಆ ಪ್ರಕಾರ : ಅ) ಪಾಲ್ಕುರಿಕೆ ಸೋಮನಾಥನ ತೆಲುಗು ‘ಬಸವ ಪುರಾಣಮು’ದಲ್ಲಿ ಅನುಭವ ಮಂಟಪವನ್ನು ‘ತತ್ವಗೋಷ್ಠಿ’ (ಸಂಧಿ 28 ವ7) ಎಂದು, ‘ಮಹಾಒಡ್ಡೋಲಗ’ವೆಂದು (ಸಂಧಿ 36 ವ50) “ಮುಂದೆ ಏಳೆಂಟು ಕಡೆಗಳಲ್ಲಿ ‘ಪುರಾತನರ ಸಮಿತಿ’, ‘ಓಲಗ’, ‘ಒಡ್ಡೋಲಗ’ ಮುಂತಾದ ಬೇರೆ ಬೇರೆ ಪರ್ಯಾಯ ನಾಮಗಳು ಅದೇ ಬಸವ ಪುರಾಣದಲ್ಲಿ ಬಂದಿವೆ” (‘ಅನುಭವ ಮಂಟಪದ ಐತಿಹಾಸಿಕತೆ’ ಪುಟ 42)
ಬ) ಹರಿಹರನ “ರಗಳೆಗಳಲ್ಲಿ ‘ಗೀತಗೋಷ್ಟಿ’ ಎಂದೂ, ಚೆನ್ನಬಸವ ಪುರಾಣದಲ್ಲಿ ‘ಶಿವತತ್ವ ಗೋಷ್ಟಿ’ ಎಂದೂ ಅಬ್ಬಲೂರಿನ ಶಾಸನದಲ್ಲಿ ‘ಧರ್ಮಗೋಷ್ಟಿ’ಯೆಂದೂ ಕೆಲವು ಪಾರಿಭಾಷಿಕ ಶಬ್ದಗಳು ಪ್ರಯೋಗವಾಗಿವೆ”(ಅನುಭವ ಮಂಟಪದ ಐತಿಹಾಸಿಕತೆ ಪುಟ 44).
(2) ಇಂದಿನ ಕಲುಷಿತ ಮತ್ತು ಪ್ರಾಚೀನ ಸಾಹಿತ್ಯದ ಅಜ್ಞಾನದ ಸನ್ನಿವೇಶದಲ್ಲಿ ಬಹುತೇಕ ಜನರು ತಿಳಿಯಲೇಬೇಕಾದ ಎರಡನೆಯ ಮಹತ್ವದ ಅಂಶವೆಂದರೆ ‘ಅನುಭವ ಮಂಟಪ’ ಕ್ಕೆ ಪ್ರತ್ಯೇಕವಾದ ಕಟ್ಟಡ ಇರಲಿಲ್ಲ. ಉತ್ತಂಗಿ ಚೆನ್ನಪ್ಪನವರು ಹೇಳುವ ಪ್ರಕಾರ: “ಅನುಭವ ವಿನಿಮಯಕ್ಕಾಗಿ ಶಿವಾನುಭವಿಗಳು ಯಾವ ಸ್ಥಳದಲ್ಲಿ ಸಭೆಯಾಗಿ ಕೂಡಿ ಬರುವರೋ ಅದೇ ಅನುಭವ ಮಂಟಪವೆನಿಸುವುದು” (ಪುಟ 26). ಅಂದು ಬಸವಣ್ಣನವರು ವಾಸವಾಗಿದ್ದ ‘ಮಹಾಮನೆ’, ಅಥವಾ ‘ಅರಮನೆ’ ಅಥವಾ ‘ದಾಸೋಹದಮಠ’ ದಲ್ಲಿಯೇ ಅನುಭವ ಮಂಟಪ ನಡೆಯುತ್ತಿತ್ತು. ಈ ಸಂಗತಿಯನ್ನು ಸಿದ್ಧಮಾಡಲು ಉತ್ತಂಗಿಯವರು ಅನೇಕ ಪುರಾವೆಗಳನ್ನು ನೀಡಿದ್ದಾರೆ.
ಪ್ರಮುಖವಾಗಿ: ಅ) ಹರಿಹರನ ‘ಬಸವರಾಜ ದೇವರ ರಗಳೆ’ಯಲ್ಲಿ ಆರು ಕಡೆಗಳಲ್ಲಿ ಮಹಾಮನೆಯನ್ನು ಅನುಭವ ಮಂಟಪದ ಸ್ಥಳವೆಂದು ಹೆಸರಿಸಲಾಗಿದೆ. (ಸ್ಥಲ 6, ವ.30; ಸ್ಥಲ 11,ವ.174 ಮತ್ತು 180; ಸ್ಥಲ 10, ವ.120; ಸ್ಥಲ 12,ವ.30 ಮತ್ತು 101). ಬ) ಅದೇ ರೀತಿ, ಬಸವ ಪುರಾಣದಲ್ಲಿ ಮೂರು ಕಡೆಗಳಲ್ಲಿ ಮಹಾಮನೆಯ ಪ್ರಸ್ತಾಪವಿದೆ (ಸಂಧಿ 37, ವ.69 ಮತ್ತು 70).
ಕ) ಬಸವಣ್ಣನವರ ವಚನಗಳಲ್ಲಿ ನಾಲ್ಕಾರು ವಚನಗಳು ಮಹಾಮನೆಯ ಅನುಭವ ಗೋಷ್ಟಿಯನ್ನು ಸೂಚಿಸುತ್ತವೆ.
ಡ) ನೀಲಮ್ಮನವರ 5 ವಚನಗಳಲ್ಲಿ, ಅಕ್ಕ ನಾಗಮ್ಮನವರ ಒಂದು ವಚನದಲ್ಲಿ ಮತ್ತು ಆಯ್ದಕ್ಕಿ ಲಕ್ಕಮ್ಮನವರ ಒಂದು ವಚನದಲ್ಲಿ ಮಹಾಮನೆಯ ನೇರ ಪ್ರಸ್ತಾಪವಿದೆ.
ಇ) ಅಲ್ಲಮಪ್ರಭುಗಳು ಮಾತ್ರ ಅನೇಕ ವಚನಗಳಲ್ಲಿ ಮಹಾಮನೆಯ ಅನುಭವ ಮಂಟಪದ ಬಗ್ಗೆ ನೇರವಾಗಿ ಪ್ರಸ್ತಾಪಿಸಿದ್ದಾರೆ. ಆದ್ದರಿಂದಲೇ ಮತ್ತು ಆಗಿನಿಂದಲೇ ‘ಅನುಭವ ಮಂಟಪ’ ಎಂಬ ಹೆಸರು ಪ್ರಸಿದ್ಧವಾಯಿತು.
ಈ) ಕಾಲಜ್ಞಾನದ ವಚನಗಳು ನೇರವಾಗಿ ‘ಅನುಭವ ಮಂಟಪ’ ವು ಮಹಾಮನೆಯಲ್ಲಿ ನಡೆಯುತ್ತಿದ್ದ ಬಗ್ಗೆ ಹೇಳುತ್ತ ಅದನ್ನು ಏಳು ಹೆಸರುಗಳಿಂದ ಬಣ್ಣಿಸಿದೆ: “1. ವಿಚಾರ ಮಂಟಪ (ಪು.2), 2.ವಿಶಾಲ ಮಂಟಪ (ಪು.3), 3.ಆಚಾರ ಸಂಪನ್ನರ ಅನುಭವ ಮಂಟಪ (ಪು.3), 4. ಪ್ರಕಾಶ ಮಂಟಪ (ಪು.4), 5.ಜ್ಞಾನ ಪ್ರಕಾಶ ಮಂಟಪ (ಪು.4), 6.ಪ್ರಸಾದ ಮಂಟಪ (ಪು.12), 7. ಎಲ್ಲ ದೇವರ ಮಂಟಪ (ಪು.8), (ಅನುಭವ ಮಂಟಪದ ಐತಿಹಾಸಿಕತೆ ಪು.49).
ಉತ್ತಂಗಿಯವರು ಇನ್ನು ಕೆಲವು ಅಂಶಗಳನ್ನು ಶರಣ ಸಾಹಿತ್ಯದ ಹಿನ್ನೆಲೆಯಲ್ಲಿ ಹೀಗೆ ವಿವರಿಸಿದ್ದಾರೆ: “ಭಕ್ತರು ಇರುವ ಸ್ಥಳಕ್ಕೆ ‘ಮನೆ’ ಎಂದು ಮಾಹೇಶ್ವರರು ವಾಸಿಸುವ ಸ್ಥಳಕ್ಕೆ ‘ಮಠ’ವೆಂದು ಬಸವಣ್ಣನನವರ ವಾಸಗೃಹಕ್ಕೆ ‘ಅರಮನೆ’ ಎಂದೂ ಹೆಸರುಗಳು ಬಂದಿವೆ. ಬಸವಣ್ಣನ ಮನೆಯಲ್ಲಿ ಶಿವಾನುಭವ ನಡೆಯುತ್ತಿದ್ದುದರಿಂದಲೇ ಅದಕ್ಕೆ ‘ಮಹ’ ಇಲ್ಲವೆ ‘ಮಹಾಮನೆ’ ಎಂದು ಹೆಸರು ಇರುವುದು ತಿಳಿದುಬರುತ್ತದೆ. ಬಸವೇಶ್ವರನ ಮನೆಯು ಇತರ ಮನೆಗಳಿಗಿಂತ ಸಹಜವಾಗಿ ದೊಡ್ಡದಾಗಿರಬೇಕಾದ್ದರಿಂದ ಇದು ಗೌರವಕ್ಕಾಗಿ ಇಟ್ಟ ಒಂದು ಹೆಸರಲ್ಲ” (ಪುಟ47). ಈ ಎಲ್ಲ ಅಂಶಗಳನ್ನು ತಿಳಿದ ನಂತರ ಈಗ ಕರ್ನಾಟಕ ಸರ್ಕಾರವು ಕಟ್ಟಿಸುತ್ತಿರುವ ಅನುಭವ ಮಂಟಪವು ಬಸವಣ್ಣನವರ ಮಹಾಮನೆಯ ಕಟ್ಟಡವೆಂಬುದನ್ನು ನೆನಪಿಡಬೇಕು.

ಬ) ಬಸವ ಕಲ್ಯಾಣದಲ್ಲಿ ‘ಅನುಭವ ಮಂಟಪ’ ಎಲ್ಲಿ ಇತ್ತು?

“ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಎಲ್ಲಿ ಇತ್ತು?” ಎನ್ನುವುದಕ್ಕೆ ಈವರೆಗೂ ನಂಬಲರ್ಹವಾದ ಯಾವುದೇ ಸ್ಥಳ ದೊರೆತಿಲ್ಲ. ಅಲ್ಲಿನ ಕೆಲವು ಸಂಭಾವ್ಯ ಸ್ಥಳಗಳಲ್ಲಿ ವೈಜ್ಞಾನಿಕ ಉತ್ಖನನ ನಡೆಸಿದರೆ ಮಹಾಮನೆಯ ಕಟ್ಟಡದ ಅವಶೇಷಗಳು ದೊರೆಯಬಹುದೇನೋ ಎಂದು ಉತ್ತಂಗಿ ಚೆನ್ನಪ್ಪನವರು ಸೂಚಿಸಿದ್ದರು. ಅಂತಹ ಸಂಭಾವ್ಯ ಸ್ಥಳಗಳೆಂದರೆ:
1) ಪಕ್ಕಪಕ್ಕದಲ್ಲಿರುವ ಅಕ್ಕನಾಗಮ್ಮನ ಗವಿ, ಬಸವಣ್ಣನವರ ಅರಿವಿನ ಮನೆ ಮತ್ತು ಗಂಜೀಕೆರೆಗೆ ಸಮೀಪವಿರುವ ತ್ರಿಪುರಾಂತಕ ದೇವಸ್ಥಾನದ ಎದುರಿನ ಅಥವಾ ಅದರ ಎಡಗಡೆಯ ಖಾಲಿ ಸ್ಥಳ, ಅರಿವಿನಮನೆಯ ಎದುರಿನ ಖಾಲಿ ಭೂಮಿ, ಗಂಜಿಕೆರೆಗೆ ಹೊಂದಿಕೊಂಡಿರುವ (ಈಗ ಬಾಬಣ್ಣ ವಾರದ ಅವರ ಸಮಾಧಿ ಇರುವ) ಸ್ಥಳದ ಸುತ್ತಮುತ್ತಲಿನ ಖಾಲಿ ಸ್ಥಳ.
2) ಅರಮನೆಯ ಎದುರಿನ ಈಗಿನ ಮ್ಯೂಜಿಯಮ್ ಇರುವ ಜಾಗದ ಸುತ್ತಮುತ್ತಲಿನ ಖಾಲಿ ಸ್ಥಳಗಳು ಪ್ರಮುಖವಾಗಿವೆ. ಆದರೆ ಅಂತಹ ಉತ್ಖನನವು ಈವರೆಗೆ ನಡೆದಿಲ್ಲ. ಕರ್ನಾಟಕದ ಕೆಲವು ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಉತ್ಖನನ ನಡೆಸಿ ನಿರ್ದಿಷ್ಟ ಸ್ಥಳವನ್ನು ಕಂಡುಹಿಡಿದು ಅಭಿವೃದ್ಧಿಗೊಳಿಸಿದ ಕೆಲವು ಉದಾಹರಣೆಗಳಿವೆ. 1) ಹಾವೇರಿ ಜಿಲ್ಲೆಯ ಬಾಡದಲ್ಲಿ ಕನಕದಾಸರ ಮನೆ ಇದ್ದ ಸ್ಥಳದಲ್ಲಿ ಉತ್ಖನನ ನಡೆಸಿ ಅಲ್ಲಿ ದೊರೆತ ಕಟ್ಟಡದ ತಳಪಾಯದ ಆಧಾರದ ಮೇಲೆ ಈಗಿನ ಬಾಡದಲ್ಲಿ ಕನಕದಾಸರ ಅರಮನೆಯನ್ನು ಕಟ್ಟಲಾಗಿದೆ. (ಅದು ಈ ಲೇಖಕರ ಉಸ್ತುವಾರಿಯಲ್ಲಿ ನಡೆದಿತ್ತು); 2) ಬಸವನ ಬಾಗೆವಾಡಿಯಲ್ಲಿ ಬಸವೇಶ್ವರ ದೇವಾಲಯದ ಆವರಣದೊಳಗೆ ಉತ್ಖನನ ನಡೆಸಿದ್ದಾಗ 6ನೆಯ ಶತಮಾನದ ಅದೇ ಗುಡಿಯ ಹಳೆಯ ತಳಪಾಯವು ದೊರೆಯಿತು. ಅದನ್ನೇ ಭದ್ರಪಡಿಸಿ ಅದರ ಮೇಲೆಯೇ ಈಗಿನ ಗುಡಿಯನ್ನು 2009-12ರಲ್ಲಿ ಕಟ್ಟಲಾಗಿದೆ (ಈ ಲೇಖಕರೆ ಅದರ ಉಸ್ತುವಾರಿ ನಡೆಸಿದ್ದರು); 3) ಕಲಬುರ್ಗಿ ಜಿಲ್ಲೆಯ ಸನ್ನತಿಯಲ್ಲಿ 1980ರ ದಶಕದಲ್ಲಿ ಬಿದ್ದಿದ್ದ ಚಂದ್ರಕಲಾ ಪರಮೇಶ್ವರಿಯ ದೇವಾಲಯವನ್ನು ತಿರುಗಿ ಕಟ್ಟಲು ತಳಪಾಯವನ್ನು ಅಗೆಯುತ್ತಿದ್ದಾಗ ಅಲ್ಲಿ ಮೂಲತಃ ಬೌದ್ಧ ಧರ್ಮದ ತಾರಾ ಭಗವತಿಯ ಗುಡಿಯೆ ಬಿದ್ದು ಹೋದ ಚಂದ್ರಲಾಂಬಾ ದೇವಾಲಯವಾಗಿತ್ತೆಂದೂ, ಅದು ಕಾಲಾಂತರದಲ್ಲಿ 8ನೇ ಶತಮಾನದ ಶಂಕರಾಚಾರ್ಯರ ಕಾಲದಲ್ಲಿ ನಡೆದ ಹಿಂದೂ ಧರ್ಮದ ಉತ್ಥಾನ ಕಾಲದಲ್ಲಿ ಅದನ್ನು ‘ಚಂದ್ರಕಲಾ ಪರಮೇಶ್ವರಿ’ ದೇವಾಲಯವೆಂದು ನಾಮಕರಣ ಮಾಡಿದ್ದು ತಿಳಿದುಬಂತು. ನಂತರ ಅದರ ಸಮೀಪದ ಕಣಗಿನಹಾಳದಲ್ಲಿ ನಡೆದ ಉತ್ಖನನದಿಂದ ಬೃಹತ್ ಗಾತ್ರದ ಒಂದು ಸ್ತೂಪ, ಮಧ್ಯಮ ಗಾತ್ರದ 2 ಸ್ತೂಪಗಳು ಅಪಾರ ಪ್ರಮಾಣದ ಬೌದ್ಧ ಕಟ್ಟಡಗಳು ಪತ್ತೆಯಾದವು. ಅವುಗಳನ್ನು ಆಧರಿಸಿ ಅಲ್ಲಿನ ಹೊಸ ಕಟ್ಟಡಗಳನ್ನು 2007 ರಿಂದ 2012 ರವರೆಗಿನ ಅವಧಿಯಲ್ಲಿ ಕಟ್ಟಲಾಗಿದೆ (ಆ ಕಾರ್ಯದ ಜವಾಬ್ದಾರಿಯು ಈ ಲೇಖಕರ ಮೇಲಿತ್ತು). 4) ಹಂಪಿಯಲ್ಲಿ ಭಾರತ ಸರ್ಕಾರದ ಪ್ರಾಚ್ಯವಸ್ತು ಸರ್ವೇಕ್ಷಣವು ನಡೆಸಿದ ಉತ್ಖನನದಿಂದ ಮಹಾನವಮಿ ದಿಬ್ಬದ ಎದುರಿನ ವಿಶಾಲವಾದ ಕ್ಷೇತ್ರದಲ್ಲಿ ನಾವೀಗ ಕಾಣುವ ಅನೇಕ ಐತಿಹಾಸಿಕ ಸಂಗತಿಗಳು ಬೆಳಕಿಗೆ ಬಂದಿವೆ ಮತ್ತು ಅಳಿಯ ರಾಮರಾಯನ ಹಾಗೂ ಕೃಷ್ಣದೇವರಾಯನ ಮೂರು ಅರಮನೆಗಳ ತಳಪಾಯಗಳನ್ನೂ ಕಂಡುಹಿಡಿಯಲಾಗಿದೆ. ಈ ಸಂದರ್ಭದಲ್ಲಿ ಕೆಲವು ಐತಿಹಾಸಿಕ ಸಂಗತಿಗಳನ್ನು ಗಮನಿಸಬೇಕು:
ಅ) ಭಾರತದಲ್ಲಿ ಬಹುತೇಕ ರಾಜ ಮಹಾರಾಜರು ದೇವಸ್ಥಾನಗಳನ್ನು, ಕೋಟೆಗಳನ್ನು ಕೆಲವು ಸೇತುವೆಗಳನ್ನು ಬಹುಭದ್ರವಾಗಿ ಕಲ್ಲಿನಲ್ಲಿ ಮಾರ್ಟರ್ ಬಳಸದೇ ಕಟ್ಟುತ್ತಿದ್ದರು. ಹಾಗಾಗಿ ಅಂತಹ ಅನೇಕ ಗುಡಿಗುಂಡಾರಗಳ ಕೋಟೆ ಕೊತ್ತಲುಗಳ ಕಟ್ಟಡಗಳ ಕೆಲ ಭಾಗಗಳು ಇಂದಿಗೂ ಉಳಿದಿವೆ.
ಆ) ಕಲ್ಲಿನ ಕಟ್ಟಡಗಳನ್ನು ಕಟ್ಟುವಾಗ ಗಾರೆಯ ಬಳಕೆ ವಿಶೇಷವಾಗಿ ಮುಸ್ಲಿಮರ ಕಾಲದಲ್ಲಿ (12ರಿಂದ 19 ಶತಮಾನಗಳಲ್ಲಿ ನಡೆಯಿತು. (ಕುತುಬ್ ಮಿನಾರ, ಗೋಲ್ ಗುಂಬಜ, ಬೀದರ ಕೋಟೆ, ಗುಲಬರ್ಗದ ಜಾಮಾ ಮಸೀದ ಇತ್ಯಾದಿ).
ಇ) ಕಲ್ಲಿನ ಬದಲಿಗೆ ಇಟ್ಟಿಗೆಯ ಉಪಯೋಗವು ಮುಸ್ಲಿಮರ ಕಾಲದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದರೂ 5000 ವರ್ಷಗಳ ಹಿಂದಿನ ಮೋಹೆಂಜೊದಾರೊ ಮತ್ತು ಹರಪ್ಪಗಳಲ್ಲಿನ ಕಟ್ಟಡಗಳು ಇಟ್ಟಿಗೆ ಬಳಸಿ ಕಟ್ಟಲ್ಪಟ್ಟಿವೆ. ಬಸವಣ್ಣನವರು ಇದ್ದ ಕಾಲದಲ್ಲಿ ಮಹಮ್ಮದ ಘಜನಿಯಂತಹ ಮುಸ್ಲಿಮ್ ದರೋಡೆಕೋರರು ಬಂದು ಲೂಟಿ ಮಾಡಿಕೊಂಡು ಹೋಗುತ್ತಿದ್ದರು, ಆದರೆ ಆಗ ಯಾವ ಮುಸ್ಲಿಮರೂ ಭಾರತದಲ್ಲಿ ನೆಲೆಯೂರಿರಲಿಲ್ಲ.
ಇ) ಸಾಮಾನ್ಯವಾಗಿ ಅರಮನೆಗಳ ಕಟ್ಟಡಗಳನ್ನು ಕಲ್ಲಿನ ತಳಪಾಯದ ಮೇಲೆ ಇಟ್ಟಿಗೆ, ಗಾರೆ, ಅಥವಾ ಸಣ್ಣ ಗಾತ್ರದ ಕಲ್ಲುಗಳನ್ನು ಬಳಸಿ ಗೋಡೆಗಳನ್ನು ಕಟ್ಟುತ್ತಿದ್ದರು. ಛತ್ತುಗಳಿಗೆ ಕಟ್ಟಿಗೆ, ಸುರ್ಕಿ ತೆಳುವಾದ ಕಲ್ಲಿನ ಹಾಸಿಗೆ ಬಳಸುತ್ತಿದ್ದರು. ಹಾಗಾಗಿ 100ಕ್ಕೆ 95 ರಷ್ಟು ಪ್ರಾಚೀನ ಅರಮನೆ, ಸಿರಿಮನೆ, ಇತ್ಯಾದಿಗಳು ದೀರ್ಘಕಾಲದಲ್ಲಿ ನಶಿಸಿ ಹೋಗಿವೆ.
ಈ) ಆದ್ದರಿಂದ ಕ್ರಿಸ್ತ ಪೂರ್ವದ ಸಾಮ್ರಾಟ ಚಂದ್ರಗುಪ್ತ, ಅಶೋಕ, ಶಾತವಾಹನರು, ಕನಿಷ್ಕ, ಬುದ್ಧನ ಅರಮನೆ ಕಟ್ಟಡಗಳು ಸಿಗಲಿಲ್ಲ. ತದನಂತರದ ಭೋಜರಾಜ, ಗುರ್ಜರ ಪ್ರತಿಹಾರರು, ಹರ್ಷವರ್ಧನ, ಚಾಲುಕ್ಯ ಪುಲಕೇಶಿಗಳು, ರಾಷ್ಟ್ರಕೂಟರ ದಂತಿದುರ್ಗ, ಕೃಷ್ಣ, ಇತ್ತೀಚಿನ ವಿಜಯನಗರದ ಅರಸರು ಇತ್ಯಾದಿಯವರು ವಾಸವಿದ್ದ ಅರಮನೆಗಳು ಎಲ್ಲಿಯೂ ಸಿಕ್ಕಿಲ್ಲ. ಅದೇ ರೀತಿ 900 ವರ್ಷ ಪೂರ್ವದ ಬಸವಣ್ಣನವರ ಮಹಾಮನೆಗೂ ಆಗಿರಬಹುದು.
ಉ) ಗ್ರೀಸ್ ದೇಶದ ಇತಿಹಾಸಕಾರರನ್ನು ಕುರಿತು ಬರೆದ ‘ಇಂಡಿಕಾ’ ಗ್ರಂಥದ ಆಧಾರದ ಮೇಲೆ ವಿಲಿಯಮ್ ಜೋನ್ಸ್ ಮತ್ತು ಅಲೆಕ್ಸಾಂಡರ್ ಕನಿಂಗಹ್ಯಾಮ ಅವರು ಪಾಟಲಿಪುತ್ರ, ಕಳಿಂಗ ಹಾಗೂ ಅಶೋಕನ 14 ಪ್ರಮುಖ ಶಾಸನಗಳನ್ನು ಪತ್ತೆ ಹಚ್ಚಿದರು. ಆ ರೀತಿಯ ಕೆಲಸ ಬಸವಣ್ಣನವರ ಬಗ್ಗೆ ಈವರೆಗೆ ನಡೆದಿಲ್ಲ. ಅಕಸ್ಮಾತ್ ಆ ಕಾರ್ಯವನ್ನು ಕೈಗೆತ್ತಿಕೊಂಡರೆ ಇಲ್ಲಿರುವ ನಗರದ ಬಹುಭಾಗವನ್ನು ಕೆಡವುದು ಅಗತ್ಯವಾಗುತ್ತದೆ. ಆದ್ದರಿಂದ ಸ್ಥಳೀಯರ ವಿರೋಧದಿಂದಾಗಿ ಆ ಕೆಲಸ ಪ್ರಾರಂಭವಾಗುವುದು ಕಷ್ಟ.
ಸ್ಥಳೀಯರು ಹೇಳುವಂತೆ ಪೀರಪಾಶಾ ಬಂಗಲೆಯಲ್ಲಿ ಅನುಭವ ಮಂಟಪವಿತ್ತು ಎನ್ನುವ ಅನೇಕರ ನಂಬಿಕೆಗೆ ಹೆಚ್ಚು ಆಧಾರವಿಲ್ಲ. ಏಕೆಂದರೆ ಪೀರಪಾಶಾ ಬಂಗಲೆಯ ಬಹುತೇಕ ಕಟ್ಟಡಗಳು ಇತ್ತೀಚಿನವು. ಅದಾಗ್ಗಿಯೂ ಅದರೊಳಗಿನ ಮಝಾರದ, ಮಸೀದೆಯ ಮತ್ತು ಅನೇಕ ಗೋರಿಗಳಲ್ಲಿನ ಕಂಭಗಳು, ತೊಲೆಗಳು, ಬಾಗಿಲ ಮತ್ತು ಕಿಟಕಿಗಳ ಚೌಕಟ್ಟುಗಳು ಪ್ರಾಚೀನ ಹಿಂದೂ ಶೈಲಿಯಲ್ಲಿವೆ. ಬಹುಶಃ ಅವುಗಳನ್ನು ಪ್ರಾಚೀನ ಹಿಂದೂ ಕಟ್ಟಡಗಳಿಂದ ತರಲಾಗಿದ್ದು ಕಂಡುಬರುತ್ತದೆ. ಆ ಬಗ್ಗೆ ಪಿ.ಬಿ. ದೇಸಾಯಿಯವರು (‘ಬಸವಣ್ಣ ಮತ್ತು ಅವನ ಕಾಲ’ ಎಂಬ ಗ್ರಂಥದಲ್ಲಿ), ಉತ್ತಂಗಿ ಚೆನ್ನಪ್ಪನವರು (‘ಅನುಭವ ಮಂಟಪದ ಐತಿಹಾಸಿಕತೆ’ ಎಂಬ ಗ್ರಂಥದಲ್ಲಿ, ಫ.ಗು. ಹಳಕಟ್ಟಿಯವರು (‘ಶಿವಾನುಭವ’ ಮಾಸ ಪತ್ರಿಕೆಯ ಸಂ.10, ಸಂಚಿಕೆ 5 ಪುಟ 190ರಲ್ಲಿ) ಕೆಲವು ಸ್ಥಳೀಯ ಜನರು ಈ ನಂಬಿಕೆಯನ್ನು ಹೊಂದಿದ್ದಾರೆಂದು ಬರೆದರೂ ಅದರ ಬಗ್ಗೆ ಸಂಶಯ ವ್ಯಕ್ತಮಾಡಿದ್ದಾರೆ.
ಪೀರಪಾಶಾ ಬಂಗಲೆಯು ಅನುಭವ ಮಂಟಪದ ಕಟ್ಟಡವಾಗಿತ್ತೇ? ಎಂಬುದನ್ನು ಸತ್ಯಾಪನೆ ಮಾಡಲು 2010ರಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮಾರ್ಗದರ್ಶಿ ಸಮಿತಿಯು ಮುಂದಾಯಿತು.

ಅನುಭವ ಮಂಟಪವು ಪೀರ ಪಾಶಾ ಬಂಗಲೆಯ ಸ್ಥಳದಲ್ಲಿತ್ತೇ?

ಉತ್ತಂಗಿ ಚೆನ್ನಪ್ಪನವರು ಮೇಲೆ ಹೆಸರಿಸಿದ ತಮ್ಮ ಪುಸ್ತಕದ ಪುಟ 50ರಲ್ಲಿ ಪೀರ ಪಾಶಾ ಬಂಗಲೆಯಲ್ಲಿ ಅನುಭವ ಮಂಟಪ ಇತ್ತೆಂಬ ಬಗ್ಗೆ ಸ್ಥಳೀಯರಲ್ಲಿರುವ ಪ್ರತೀತಿಯ ಕುರಿತು ಬರೆದಿರುವ ಉದ್ದರಣೆ ಹೀಗಿದೆ: “ಈಗಿನ ಕಾಲದ ಸಂದರ್ಶಕರೊಬ್ಬರು ಅಲ್ಲಿ ಪ್ರಚಾರದಲ್ಲಿರುವ ಪ್ರತೀತಿಯನ್ನು ಕುರಿತು ಈ ಪ್ರಕಾರವಾಗಿ ಬರೆದಿದ್ದಾರೆ. ‘ಇಂತರದೌಲಾ’ ಎಂಬ ಫಕೀರನಿಗೆ ಜಹಗೀರು ದೊರೆಯಿತು. ಇವನ ಗುರುವಾದ ವೀರಪಾಚ್ಛಾ ಎಂಬವನು ಈತನ ಗೋರಿಯನ್ನು ಕಲ್ಯಾಣದ ಶಿವಾನುಭವ ಮಂಟಪದ ಕಲ್ಲುಗಳಿಂದ ಮಾಡಿಸಿದ್ದು ಆ ಮಂಟಪಕ್ಕೆ 44 ಕಂಬಗಳಿದ್ದು ಖಬರಸ್ಥಾನದ ಮೇಲೆ ಕಾವಿಯ ಬಟ್ಟೆಯನ್ನು ಹಾಕಿರುತ್ತಾರೆ. ಇದರ ಮುಂದೆ ಕನ್ನಡ ಲಿಪಿ ಇದೆ. ಆದರೆ ಅದರ ಅಕ್ಷರಗಳು ಸವೆದು ಹೋಗಿರುವುದರಿಂದ ಅದು ಸ್ಪಷ್ಟವಾಗಿ ಕಾಣುವುದಿಲ್ಲ.”
ಈ ಮೇಲಿನ ಉದ್ಧರಣೆಯನ್ನು ಪೂರ್ಣ ತನಿಖೆಗೆ ಒಳಪಡಿಸಲಾಯಿತು. ಈ ಮಹತ್ವದ ಉದ್ಧರಣೆಯಲ್ಲಿ ಕೆಲವು ಸತ್ಯಾಂಶಗಳಿದ್ದರೂ ಅನೇಕ ತಪ್ಪುಗಳಿವೆ. ಅವು ಹೀಗಿವೆ:1) ‘ವೀರ ಪಾಚ್ಛಾ’ ಎಂಬ ಶಬ್ದವು ತಪ್ಪಾಗಿದ್ದು ಸರಿಯಾದ ಶಬ್ದವೆಂದರೆ ‘ಪೀರಪಾಶಾ’, ಬಹುಶಃ ಅವನು ಟರ್ಕಿ ದೇಶದ ಸೂಫಿ ಸಂತನಿದ್ದಂತೆ ಕಂಡುಬರುತ್ತದೆ.
2) ‘ಇಂತರದೌಲಾ’ ಅನ್ನುವ ಹೆಸರು ತಪ್ಪು, ಆ ವ್ಯಕ್ತಿಯ ಸರಿಯಾದ ಹೆಸರೆಂದರೆ ‘ಸೈಯದ್ ಮೊಹಮ್ಮದ್ ಬುರ್ಹಾನುದ್ದೀನ ಹುಸ್ಸೇನ್’ (ಉರ್ಫ್ ಕಲಾನ ಖಾನ್).
3) ಮೇಲಿನ ಹೇಳಿಕೆಯಲ್ಲಿ ಬುರ್ಹಾನುದ್ದೀನನು ಫಕೀರನಾಗಿದ್ದನು ಎನ್ನುವುದು ತಪ್ಪು. ಅವನು ಮೊದಲು ಮೊಗಲ ಬಾದಶಾಹ ಮೊಹಮ್ಮದ್ ಶಾಹನಿಂದ ಬೀದರ ಕೋಟೆಯ ಗ್ಯಾರಿಸನ್ ಕಮಾಂಡರನೆಂದು ನೇಮಿಸಲ್ಪಟ್ಟಿದ್ದನು. ಅವನ ಮಗ ಖಯಾಮುಲ್ ಮುಲ್ಕ ಸೈಯದ್ ಮೊಹಮ್ಮದನು ಹೈದರಾಬಾದಿನ ಪ್ರಥಮ ನಿಜಾಮನಾಗಿದ್ದ ಅಲ್ ಹಜರತ್ ನಿಜಾಮ ಉಲ್ ಮುಲ್ಕನ ಮಗಳಾದ ಮುಕರಮಾ ಬಾನು ಬೇಗಮ್ ಅವಳನ್ನು ಮದುವೆಯಾಗಿದ್ದನು.
4) ಕ್ರಿ.ಶ 1764ರ ಸುಮಾರಿಗೆ ನಿಜಾಮನು ಖಯಾಮುಲ್ ಸೈಯ್ಯದನಿಗೆ ಕಲ್ಯಾಣಿಯ 65 ಗ್ರಾಮಗಳನ್ನು ಜಹಗೀರಾಗಿ ನೀಡಿದನು.
5) ಪೀರ್ ಪಾಶಾನು ಜಹಗೀರದಾರನಾಗಿದ್ದ ಖಯಾಮ ಉಲ್ ಸೈಯ್ಯದನ ನಿಕಟ ಗೆಳೆಯನಾಗಿದ್ದ. ಅಷ್ಟರ ಮಟ್ಟಿಗೆ “ಜಹಗೀರು ದೊರೆಯಿತು” ಅನ್ನುವುದು ಸರಿಯಾಗಿದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಈ ಜಹಗೀರುದಾರನು ಪೀರಪಾಶಾ ಎಂಬ ಸೂಫಿ ಸಂತನ ಶಿಷ್ಯನಾಗಿದ್ದನು.
6) ಈ ಸಂತನು ಜಹಗೀರುದಾರ ನೀಡಿದ ಸ್ಥಳದಲ್ಲಿ ವಾಸವಾಗಿದ್ದನು. ಸಂತನು ಧರ್ಮಕಾರ್ಯಕ್ಕಾಗಿ ಮಹಾರಾಷ್ಟ್ರದ ನಿಲಂಗಾಕ್ಕೆ ಹೋದಾಗ ಅಲ್ಲಿಯೇ ಮರಣ ಹೊಂದಿದನು. ನಿಲಂಗಾದಲ್ಲಿ ಇದೇ ಜಹಗೀರುದಾರನು ಪೀರ ಪಾಶಾನ ದರ್ಗಾವನ್ನು ಸ್ಥಾಪಿಸಿದ್ದಾನೆ. ಅದು ಇಂದಿಗೂ ನಿಲಂಗಾದಲ್ಲಿ ಇದೆ.
7) ಪೀರ ಪಾಶಾನ ಬಗ್ಗೆ ಅತೀವ ಗೌರವ ಮತ್ತು ಭಕ್ತಿಹೊಂದಿದ್ದ ಬಸವಕಲ್ಯಾಣದ ನವಾಬನು (ಅಂದರೆ ಖಯಾಮುಲ್ ಸೈಯ್ಯದನು) ಪೀರಪಾಶಾನು ಬಸವ ಕಲ್ಯಾಣದಲ್ಲಿದ್ದಾಗ ಉಪಯೋಗಿಸಿದ್ದ ಬಟ್ಟೆ, ಊಟದ ತಟ್ಟೆ ಇತ್ಯಾದಿ ವಸ್ತುಗಳನ್ನು ಕೂಡಿಸಿಟ್ಟು ಅವುಗಳನ್ನು ತನ್ನ ಮನೆತನದ ಖಬರಸ್ಥಾನದಲ್ಲಿ ಹೂಳಿಸಿದನು ಮತ್ತು ಆ ಸ್ಥಳದಲ್ಲಿ ಮುಸ್ಲಿಮರ ಗೋರಿಯ ತರಹ ಒಂದು ಕಟ್ಟೆಯನ್ನು ಕಟ್ಟಿಸಿದನು. ಗೋರಿಯ ಸುತ್ತ ಈಗಿರುವ ಕಟ್ಟಡವನ್ನು ಕಟ್ಟಿಸಿದನು. ಹೀಗೆ ಈಗಿರುವ ಕಟ್ಟಡ ನಿಜವಾದ ಗೋರಿಯಲ್ಲ. ಪೀರ ಪಾಶಾನ ನಿಜವಾದ ಗೋರಿಯು ನಿಲಂಗಾದಲ್ಲಿದೆ. ಬಸವಕಲ್ಯಾಣದಲ್ಲಿರುವ ಗೋರಿಯು ಅದರ ಸ್ಮಾರಕವಷ್ಟೆ. ನವಾಬನ ವಂಶಜರು ಇಂದಿಗೂ ಅಲ್ಲಿ ಪ್ರಾರ್ಥನೆ ಮಾಡುತ್ತಾರೆ.
8) ಆ ಕಟ್ಟಡವನ್ನು ಚೌಕಾಕಾರದಲ್ಲಿ ವಿಶಿಷ್ಠ ಹಿಂದೂ-ಮುಸ್ಲಿಮ್ (ಇಂಡೊಸಾರಾಸೆನಿಕ್) ಶೈಲಿಯಲ್ಲಿ ನಿರ್ಮಿಸಲಾಗಿದೆ. ಆ ಕಟ್ಟಡಕ್ಕೆ 44 ಕಂಬಗಳಿವೆ ಎನ್ನುವುದು ಸತ್ಯ.
9) ಆ ಕಂಬಗಳನ್ನು ಮುಸ್ಲಿಮರು ನಾಶಮಾಡಿದ ಹಿಂದೂ ಗುಡಿಗಳಿಂದ ತಂದು ಈ ಕಟ್ಟಡಕ್ಕೆ ಬಳಸಲಾಗಿದೆ ಎಂಬುದೂ ಸತ್ಯ. ಆದರೆ ಅದು ಶಿವಾನುಭವ (ಅಥವಾ ಅನುಭವ ಮಂಟಪದ) ಕಟ್ಟಡ ಎಂದು ಹೇಳಿದ್ದು ಜನರ ಪ್ರತೀತಿಯನ್ನು ನಂಬಿ ಮಾಡಿದ ಅಂಶವೆನ್ನುವುದು ಕಂಡುಬರುತ್ತದೆ.
10) ಆ ‘ಗೋರಿ’ಯ ಮೇಲೆ ಹಾಕಿರುವ ಬಟ್ಟೆಯು ಬೇರೆ ಬೇರೆ ಬಣ್ಣದ್ದಾಗಿರುತ್ತದೆ. ಆ ಸಂದರ್ಶಕರು ಕಂಡಾಗ ಅದು ಕಾವಿ ಬಣ್ಣದ್ದಾಗಿರಬಹುದು. ಸಾಮಾನ್ಯವಾಗಿ, ಅದನ್ನು ‘ಛಾದರ’ ಅಥವಾ ‘ಥಡಗೆ’ ಅಥವಾ ‘ಗಲ್ಲೀಫ’ ಎಂದು ಕರೆಯುತ್ತಾರೆ, ಬೇರೆ ಕಡೆಗಳಲ್ಲು ಸೂಫಿ ಸಂತರ ಗೋರಿಗಳನ್ನು ಹಳದಿ, ಹಸಿರು, ನೀಲಿ ಇಲ್ಲವೆ ಬಿಳಿಯ ಬಣ್ಣದ ಬಟ್ಟೆಗಳಿಂದ ಮಾಡಿದ ಛಾದರಿನಿಂದ ಮುಚ್ಚಲಾಗುತ್ತದೆ. ‘ಕಾವಿ’ ಎಂದ ತಕ್ಷಣ ಅದಕ್ಕೆ ಹಿಂದೂ ಎಂಬ ಅರ್ಥ ಕಲ್ಪಿಸಬೇಕಿಲ್ಲ. ಅದಕ್ಕಾಗಿಯೇ ಉತ್ತಂಗಿ ಚೆನ್ನಪ್ಪನವರು, ಪಿ.ಬಿ. ದೇಸಾಯಿಯವರು ಮತ್ತು ಫ.ಗು. ಹಳಕಟ್ಟಿಯವರು ಆ ರೀತಿಯ ‘ಪ್ರತೀತಿ’ಯನ್ನು ನಂಬಲಿಲ್ಲ ಎಂಬುದನ್ನು ಅವರ ಬರಹಗಳಲ್ಲಿಯೇ ಕಾಣಬಹುದು.
11) ಪೀರಪಾಶಾ ಬಂಗಲೆಯ ತಪಾಸಣೆಯಲ್ಲಿ ಕಂಡುಬಂದ ಇತರ ಕೆಲವು ಅಂಶಗಳು ಈ ಕೆಳಗಿನಂತಿದ್ದವು.
ಅ) ಪೀರಪಾಶಾ ಬಂಗಲೆಯ ಸ್ಥಳವನ್ನು ಒಳಗೆ ಹೋಗಿ ಪರೀಕ್ಷೆ ಮಾಡಲಾಯಿತು. ಅದು ನಿಜಾಮನ ಮನೆತನದ ಖಾಸಗೀ ಖಬರಸ್ಥಾನವಾಗಿದೆ. ಇದೇ ರೀತಿಯ 4 ಎಕರೆ ಖಬರಸ್ಥಾನವು ಹೈದರಾಬಾದಿನ ಮೊಗಲಪುರ ಪ್ರದೇಶದಲ್ಲಿ ಇದೆ. ಅದನ್ನು ‘ಖುತಬ್‍ಶಾಹಿ ಕಲ್ಯಾಣಿ ಖಬರಸ್ಥಾನ’ ಎಂದು ಕರೆಯಲಾಗುತ್ತದೆ. ಇದೂ ಕಲ್ಯಾಣದ ನವಾಬನ ಕುಟುಂಬಕ್ಕೆ ಸೇರಿದೆ. ಔರಂಗಜೇಬನು ಕಲ್ಯಾಣಿಯನ್ನು ಕುತುಬ್‍ಶಾಹಿಯಿಂದ ವಶಪಡಿಸಿಕೊಂಡಿದ್ದರಿಂದ ಮತ್ತು ಕುತುಬ್‍ಶಾಹಿಯ ರಾಜಧಾನಿಯೂ ಹೈದರಾಬಾದೇ ಆಗಿತ್ತು. ಅದಕ್ಕಾಗಿಯೇ ‘ಕುತುಬಶಾಹಿ’ ಎಂಬ ಹೆಸರಿದೆ. ಅದರ ಸಮೀಪವೇ ‘ಕಲ್ಯಾಣಿ ನವಾಬಿ ಕಿ ದೇವದಿ’ ಎಂಬ ಹೆಸರಿನ ವಿಶಾಲವಾದ ಅರಮನೆ ಇತ್ಯಾದಿಗಳು ಈಗಲೂ ಇವೆ. ಆನಂತರದ ಕಲ್ಯಾಣಿಯ ನವಾಬನು ತನ್ನ ಪತ್ನಿ ಕಮಾಲ-ಉನ್-ನಿಸ್ಸಾ ಅವಳೊಂದಿಗೆ 1803ರ ಸುಮಾರಿಗೆ ಹೈದರಾಬಾದಿಗೆ ಸ್ಥಳಾಂತರಗೊಂಡು ಬಹು ಸಮಯ ಅಲ್ಲಿಯೇ ನಿಜಾಮನ ಇತರ ಸಂಬಂಧಿಗಳೊಡನೆ ಕಳೆಯುತ್ತಿದ್ದನು ಎಂಬುದು ಐತಿಹಾಸಿಕ ದಾಖಲೆಗಳಿಂದ ಕಂಡುಬರುತ್ತದೆ.
ಆ) ಪೀರಪಾಶಾ ಬಂಗಲೆಯು ಬಸವಕಲ್ಯಾಣದ ನವಾಬನ ಖಾಸಗೀ ಖಬರಸ್ಥಾನವಾಗಿದ್ದು ಅದು ವಿಶಾಲವಾದ ಎತ್ತರದ ಆವರಣ ಗೋಡೆಯಿಂದ ರಕ್ಷಿಸಲ್ಪಟ್ಟಿದೆ. ಪೂರ್ವದಿಕ್ಕಿನಲ್ಲಿ ಅದಕ್ಕೆ ಒಂದು ದೊಡ್ಡ ಪ್ರವೇಶ ದ್ವಾರವಿದೆ. ಅದರ ಹೊರಗಡೆಗೆ ಸುತ್ತಲೂ ಹೆಚ್ಚಾಗಿ ಮುಸ್ಲಿಮರ ಮನೆಗಳಿವೆ. ಎಚ್ಚರಿಕೆಯಿಂದ ಸ್ಥಳ ತನಿಖೆ ಮಾಡಲಾಯಿತು. ಇಲ್ಲದಿದ್ದರೆ 40 ಪ್ರತಿಶತ ಮುಸ್ಲಿಮ್ ಜನಸಂಖ್ಯೆಯುಳ್ಳ ಈ ಪಟ್ಟಣದಲ್ಲಿ ಕೋಮುಗಲಭೆಗೆ ಅವಕಾಶವಾಗುವ ಸಂಭವವಿತ್ತು. ಮೊದಲು ಬಸವಕಲ್ಯಾಣ ಕೋಟೆಯ ಒಳಗೆ ವಾಸಮಾಡುತ್ತಿದ್ದ ಕಲ್ಯಾಣದ ನವಾಬನ ಕುಟುಂಬವು ಸುಮಾರು 40 ವರ್ಷಗಳ ಹಿಂದೆ ಕೋಟೆಯಿಂದ ಹೊರಬಂದು ಪೀರಪಾಶಾ ಬಂಗಲೆಯ ಒಂದು ಭಾಗದಲ್ಲಿ ವಾಸವಾಗಿದೆ. 1948ರ ವರೆಗೆ ಆ ಕುಟುಂಬದವರೆ ಬಸವ ಕಲ್ಯಾಣದ ನವಾಬ ಅಥವಾ ಜಹಗೀರುದಾರರಾಗಿದ್ದರು. ಜಹಗೀರುದಾರನು 65 ಗ್ರಾಮಗಳಲ್ಲಿನ ಲಕ್ಷಾನುಗಟ್ಟಲೆ ಎಕರೆ ಜಮೀನಿನ ಮಾಲಿಕತ್ವ ಹೊಂದಿದ್ದನು. ಆದರೆ ಬಹುತೇಕ ಜಮೀನುಗಳು ಗೇಣಿದಾರರಿಗೆ ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ ಹೊರಟು ಹೋದವು. ಕೊನೆಯ ಜಹಗೀರದಾರ, ನವಾಬ ಕಮಾಲುದ್ದಿನ ಖಾನ, ಒಮ್ಮೆ ನಮ್ಮನ್ನು ಭೇಟಿಮಾಡಿದ್ದನು. ಅವನ ವರ್ತನೆಯಿಂದ ಅವನೊಬ್ಬ ಸುಸಂಸ್ಕೃತ ಸಭ್ಯ ವ್ಯಕ್ತಿಯೆಂದು ಕಂಡುಬಂತು. ನವಾಬನ ಈಗಿನ ವಂಶಸ್ಥರು ಪೀರಪಾಶಾ ಬಂಗಲೆಯಲ್ಲಿ ಮುಸೀದೆಯ ಪಕ್ಕದ ಸಣ್ಣ ಮನೆಯಲ್ಲಿ ಹೈದರಾಬಾದಿನಿಂದ ಆಗಾಗ ಬಂದು ಅಲ್ಲಿ ಉಳಿದುಕೊಳ್ಳುತ್ತಾರೆ. ಬಹುಶಃ ಪೀರಪಾಶಾನು ಅವನ ಜೀವಿತ ಕಾಲದಲ್ಲಿ ಅಲ್ಲಿ ವಾಸವಾಗಿದ್ದಿರಬಹುದು. ಕೊನೆಯ ನವಾಬನ ಪುತ್ರ ಅಸ್ರಾರ ಹುಸ್ಸೇನ ಅವರು ತನಿಖೆಯ ಸಮಯದಲ್ಲಿ ಹಾಜರಿದ್ದು ಕೆಲವು ಮಾಹಿತಿ ನೀಡಿದರು. ಆವರಣ ಗೋಡೆಯ ಒಳಬದಿಗೆ ಹೊಂದಿಕೊಂಡಿರುವ ಕೆಲವು ಚಿಕ್ಕಪುಟ್ಟ ಕಟ್ಟಡಗಳಲ್ಲಿ ನವಾಬನ ಕುಟುಂಬದ ಸೇವಕರು ವಾಸವಾಗಿದ್ದಾರೆ.
ಇ) ನವಾಬನ ವಾಸಸ್ಥಾನಕ್ಕೆ ಹೊಂದಿಕೊಂಡು ಒಂದು ಚಿಕ್ಕ ಮಸೀದಿಯೂ ಇದೆ. ಅದನ್ನು ನವಾಬನ ಕುಟುಂಬವು ಖಾಸಗಿ ನಮಾಜಿಗೆ ಬಳಸುತ್ತಿದೆ. ಆ ಕಟ್ಟಡವು ಇಂಡೋಸಾರಾಸೆನಿಕ್ ಶೈಲಿಯಲ್ಲಿ ಸುಂದರವಾಗಿ ಕಟ್ಟಲ್ಪಟ್ಟಿದೆ.
ಈ) ಆವರಣ ಗೋಡೆಯ ಉತ್ತರದ ಕಡೆ ಸುಂದರವಾಗಿ ಕಟ್ಟಲ್ಪಟ್ಟ ಒಂದು ಕಲ್ಯಾಣಿಯಿದೆ. ಅದರ ಒಳಗೋಡೆಗಳಲ್ಲಿ ಹಿಂದೂ ದೇವರುಗಳ ಮೂರ್ತಿಗಳಿವೆ. ಬಾವಿಯಲ್ಲಿ ನೀರಿದೆ. ಅದಕ್ಕೆ ಪ್ರವೇಶ ಮಾಡಲು ಸುಂದರವಾಗಿ ಕಟ್ಟಿದ ಭದ್ರವಾದ ಮೆಟ್ಟಲುಗಳಿವೆ. ಅದು ಹಿಂದೂ ದೇವಸ್ಥಾನಗಳಲ್ಲಿರುವ ಕಲ್ಯಾಣಿಯಂತೆ ಕಾಣುತ್ತದೆ. ಆದರೆ ಈಗ ವಿಶಾಲವಾಗಿರುವ ಆವರಣ ಗೋಡೆಯೊಳಗೆ ಯಾವುದೇ ದೇವಾಲಯದ ಕಟ್ಟಡಗಳಿಲ್ಲ.
ಉ) ಐತಿಹಾಸಿಕ ದಾಖಲೆಗಳ ಪ್ರಕಾರ, ಕಲ್ಯಾಣದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಮತ್ತು ಮುಸ್ಲಿಮರ ಆಳ್ವಿಕೆಯ ಪೂರ್ವದಲ್ಲಿ ಮಧುಕೇಶ್ವರ, ಮಹಾಕಾಲೇಶ್ವರ, ಪಂಪೇಶ್ವರ, ಭೀಮೇಶ್ವರ, ಹಟ್ಟಕೇಶ್ವರ, ರಾವಣ ಶಿವಾಲಯ, ಚಂದ್ರಪ್ರಭಾ ಇತ್ಯಾದಿ ಹಿಂದೂ ಮಂದಿರಗಳೂ ಮತ್ತು ಚಾಲುಕ್ಯ ಶೈಲಿಯ ಜೈನ ಮಂದಿರಗಳು ಇದ್ದವೆಂದು ಕಂಡುಬರುತ್ತದೆ. ಶಿವಕುಮಾರ ಗೆಪ್ಪೆ ಎಂಬವರು ತಮ್ಮ ಡಾಕ್ಟರಲ್ ಪ್ರಬಂಧದಲ್ಲಿ ಪೀರಾಪಾಶಾ ಬಂಗಲೆಯ ಸ್ಥಳದಲ್ಲಿ ಹಿಂದೆ ಮಧುಕೇಶ್ವರ ಮತ್ತು ಭೀಮೇಶ್ವರರ ದೇವಾಲಯಗಳು ಇದ್ದವೆಂದು ಬರೆದಿದ್ದಾರೆ. ಅದು ನಮ್ಮ ಊಹೆಯೂ ಆಗಿತ್ತು. ಈಗ ಆ ಯಾವ ದೇವಾಲಯಗಳೂ ಬಸವಕಲ್ಯಾಣದಲ್ಲಿ ಎಲ್ಲಿಯೂ ಇಲ್ಲ.
ಊ) ಪರಧರ್ಮಗಳನ್ನು ಸಹಿಸದ ಮುಸ್ಲಿಮ್ ದಾಳಿಕೋರರು ಬಸವಕಲ್ಯಾಣದಲ್ಲಿನ ಗುಡಿಗುಂಡಾರಗಳನ್ನು ನಾಶಮಾಡಿದರು. ಅವರಲ್ಲಿ ಗುಲಬರ್ಗದ ಬಹಮನ ಶಾಹಿ, ಬೀದರಿನ ಬರೀದ ಶಾಹಿ, ಬಿಜಾಪುರದ ಆದಿಲ್ ಶಾಹಿ ಅಲ್ಲದೆ ಗೋಲಕೊಂಡದ ಕುತುಬ್‍ಶಾಹಿ ಅಷ್ಟೇ ಅಲ್ಲದೆ ದಿಲ್ಲಿಯ ಸುಲ್ತಾನ ಅಲ್ಲಾವುದ್ದೀನ ಖಿಲ್ಜಿ (ಕ್ರಿ.ಶ. 1310) ಮತ್ತು ಮಹಮ್ಮದ ತುಘಲಕ್ (ಕ್ರಿ.ಶ. 1324), ಮೊಗಲರ ಕೊನೆಯ ಸಾಮ್ರಾಟ ಔರಂಗಜೇಬ (1654) ಮತ್ತು ಹೈದರಾಬಾದ ನಿಜಾಮರು ಈ ಪ್ರದೇಶವನ್ನು ಗೆದ್ದುಕೊಂಡು ಕೆಲವು ಕಾಲ ಬಸವಕಲ್ಯಾಣದಲ್ಲಿ ಆಡಳಿತ ನಡೆಸಿದ್ದರು. ಯಾರ್ಯಾರು ಯಾವಾಗ ಏನೇನು ಕೆಡವಿದರು ನಾಶಮಾಡಿದರು ಎಂಬುದನ್ನು ಈಗ ಕಂಡುಹಿಡಿಯಲು ಸಾಧ್ಯವಿಲ್ಲ. ಇತರ ಧರ್ಮಗಳ ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಿದವರಿಗೆ ‘ಘಾಜಿ’ ಎಂಬ ಬಿರುದು ನೀಡಲಾಗುತ್ತಿತ್ತು. ಅದನ್ನು ಪುಣ್ಯದ ಕಾರ್ಯವೆಂದು ನಂಬಲಾಗುತ್ತಿತ್ತು. ಹಾಗಾಗಿ, ಒಬ್ಬರಿಗೊಬ್ಬರು ನಾ ಮುಂದೆ ನೀ ಮುಂದೆ ಎಂಬಂತೆ ಪೈಪೋಟೆಯಿಂದ ದೇವಾಲಯಗಳನ್ನು ಕೆಡವಿ ಅಲ್ಲಿರುವ ಬೆಲೆಬಾಳುವ ಬೆಳ್ಳಿ ಬಂಗಾರವನ್ನು ಲೂಟಿ ಮಾಡುತ್ತಿದ್ದರು. ಇವರೆಲ್ಲರೂ ಮೊಹಮ್ಮದ ಘಜ್ನಿ (1000 ದಿಂದ 1030 ವರೆಗೆ)ಯಂತೆಯೇ ವರ್ತಿಸಿದ್ದು ಕಂಡುಬರುತ್ತದೆ.
ಋ) ನಾಶಮಾಡಿದ ದೇವಾಲಯಗಳ ಬಿಡಿಭಾಗಗಳನ್ನು ಹೊತ್ತುಕೊಂಡು ಹೋಗಿ ತಮ್ಮ ಈದಗಾ, ದರ್ಗಾ, ಮಸೀದಿಗಳ ಕಟ್ಟಡಗಳಲ್ಲಿ ಬಳಸಿಕೊಂಡದ್ದನ್ನು ಇಂದಿಗೂ ನಾವು ಬಸವಕಲ್ಯಾಣದ ಶೇರ್ ಸವಾರ ದರ್ಗಾ ಇತ್ಯಾದಿಗಳಲ್ಲಿ ಮತ್ತು ಪೀರ ಪಾಶಾ ಬಂಗಲೆಯಲ್ಲಿನ ಕುರುಹುಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಈಗ ನಮಗೆ ಕಾಣುವ ಪೀರಪಾಶಾ ಬಂಗಲೆಯು ಅಲ್ಲಿಯ ಕಲ್ಯಾಣಿಯು ಸೂಚಿಸುತ್ತಿರುವಂತೆ ಮೇಲೆ ಹೆಸರಿಸಿದ ಮತ್ತು ಇಂದು ಕಾಣೆಯಾದ ಯಾವುದಾದರೊಂದು ದೇವರ ಅಥವಾ ಬಹು ದೇವರುಗಳ ಮಂದಿರದ ಅಥವಾ ಮಂದಿರಗಳ ಸಂಕೀರ್ಣವಾಗಿರಬಹುದು. ಆ ಬಗ್ಗೆ ಶಿವಕುಮಾರ ಗೆಪ್ಪೆಯವರ ಡಾಕ್ಟರಲ್ ಪ್ರಬಂಧದಲ್ಲಿ ಪೀರ ಪಾಶಾ ಬಂಗಲೆಯ ಸ್ಥಳದಲ್ಲಿ ಮೊದಲು ಮಧುಕೇಶ್ವರ ಮತ್ತು ಭೀಮೇಶ್ವರ ದೇವಾಲಯಗಳಿದ್ದವೆಂದು ಹೇಳಿದ್ದು, ಹೇಗೆ ಮತ್ತು ಯಾವ ಆಧಾರದಿಂದ ತಿಳಿಯಿತು ಎಂಬುದು ಗೊತ್ತಿಲ್ಲ. ಅದೇ ಮಂದಿರದ ಸುತ್ತಮುತ್ತಲಿನ ಸಣ್ಣಪುಟ್ಟ ಇತರ ದೇವರ ಮಂದಿರಗಳನ್ನು ನವಾಬನ ಹಿಂದಿನ ಪೂರ್ವಜರು ತಮ್ಮ ಸಂಬಂಧಿಕರ ಗೋರಿಗಳಿಗೆ ಉಪಯೋಗಿಸಿಕೊಂಡದ್ದು ಕಂಡುಬರುತ್ತದೆ.
ಎ) ಆವರಣದೊಳಗೆ ಸುಮಾರು 300 ರಷ್ಟು ಚಿಕ್ಕಪುಟ್ಟ ಮತ್ತು ಕೆಲವು ದೊಡ್ಡ ಮುಸ್ಲಿಮ ಗೋರಿ (ಸಮಾಧಿ)ಗಳಿವೆ. ಅವು ನವಾಬನ ಕುಟುಂಬದವರ, ಸಂಬಂಧಿಕರ ಸಮಾಧಿಗಳೆಂದು ನಾವು ನೋಡಲು ಹೋದ ಸಮಯದಲ್ಲಿ ನಮಗೆ ಭೆಟ್ಟಿಯಾದ ಹಿಂದಿನ ನವಾಬನ ಮಗ ಶ್ರೀ ಅಸ್ರಾರ ಹುಸ್ಸೇನ್ ಅವರು ಹೇಳಿದರು. ಕೆಲವು ಗೋರಿಗಳನ್ನು ನಾಲ್ಕು ಕಂಬಗಳ ಹಿಂದೂ ಮಂಟಪಗಳಂತಹ ಕಟ್ಟಡದೊಳಗೆ ಇರಿಸಲಾಗಿದೆ. ಅವು ಬಹುಶಃ ಮಹತ್ವದ ಸಂಬಂಧಿಗಳ ಸಮಾಧಿಗಳಾಗಿರಬಹುದು. ಒಂದೆರಡು ಗೋರಿಗಳನ್ನು ಹಿಂದೂ ಶೈಲಿಯ ಚಿಕ್ಕ ಚಿಕ್ಕ ಮಂದಿರಗಳಲ್ಲಿ ಕಟ್ಟಲಾಗಿದೆ. ಆವರಣದ ಮಧ್ಯ ಭಾಗದಲ್ಲಿ ಪೀರ ಪಾಶಾನ ದೊಡ್ಡ ಮಝಾರ ಇದೆ. ಅಲ್ಲಿ ನಿತ್ಯ ಮುಸ್ಲಿಮ ತರಹದ ಧಾರ್ಮಿಕ ಕಾರ್ಯಗಳನ್ನು, ನಮಾಜಗಳನ್ನು ನಡೆಸಲಾಗುತ್ತಿದೆ.
ಏ) ಪೀರಪಾಶಾ ಬಂಗಲೆಯು ಮಹಾಮನೆ (ಅನುಭವ ಮಂಟಪ)ವಾಗಿರಲು ಸಾಧ್ಯವಿಲ್ಲ ಎಂಬುದಕ್ಕೆ ಈ ಕೆಳಗಿನ ಕಾರಣಗಳನ್ನು ನೀಡಲಾಯಿತು :
1) ಬಸವಣ್ಣ ಮತ್ತು ಶರಣರು ಕಲ್ಯಾಣದಲ್ಲಿ ಇದ್ದದ್ದು ಕೇವಲ 12ರಿಂದ 18 ವರ್ಷಗಳ (1150 ರಿಂದ 1167ರ ವರೆಗಿನ) ಅವಧಿಯಲ್ಲಿ ಮಾತ್ರ. ಮೂವತ್ತಾರು ವರ್ಷ ಕಲ್ಯಾಣದಲ್ಲಿ ಶರಣರು ಇದ್ದರೆಂಬ ಒಂದು ವಚನವು ಐತಿಹಾಸಿಕವಾಗಿ ಸರಿಯೆನಿಸುವುದಿಲ್ಲ. ಇತಿಹಾಸದ ಪ್ರಕಾರ ಬಿಜ್ಜಳ ರಾಜ್ಯಭಾರ ತ್ಯಜಿಸಿದ್ದು ಅಥವಾ ಹತ್ಯೆಯಾಗಿದ್ದು 1167ರಲ್ಲಿ ಎಂಬುದು ಹೆಚ್ಚು ಖಚಿತವಾಗಿದೆ. ಅವನ ಆಳ್ವಿಕೆಯ ಕಾಲ ಹೆಚ್ಚೆಂದರೆ (1150 ರಿಂದ 1167ರ ವರೆಗೆ ಮಾತ್ರ). ಅದು ಒಂದು ರೀತಿಯಲ್ಲಿ ಉದ್ವಿಘ್ನತೆಯಿಂದ ಕೂಡಿದ್ದ ಸಮಯವಾಗಿತ್ತು. ಮೋಸದಿಂದ ಚಾಲುಕ್ಯ ಮೂರನೆಯ ತೈಲಪ (ಸೋಮೇಶ್ವರ)ನನ್ನು ಪದಚ್ಯುತಗೊಳಿಸಿ ಬಿಜ್ಜಳನು ಸಿಂಹಾಸನವನ್ನು ಏರಿದ್ದರಿಂದ ಸಾಕಷ್ಟು ವೈರಿಗಳನ್ನು ಹೊಂದಿದ್ದನು. ಅದೇ ಸಮಯದಲ್ಲಿ ಬಸವಣ್ಣನವರು ಕಲ್ಯಾಣಕ್ಕೆ ಮಹಾಮಂತ್ರಿಗಳಾಗಿ ಬಂದರು. ಅನುಭವ ಮಂಟಪ ಈಗ ದೊಡ್ಡದಾಗಿ ಬೆಳೆಯಿತು. ಕ್ರಮೇಣ ಅವರನ್ನು ಕಾಣಲು ಮತ್ತು ಅನುಭವ ಮಂಟಪದಲ್ಲಿ ಭಾಗವಹಿಸಲು ಹೊರನಾಡುಗಳಿಂದ ನೂರಾರು ಶರಣರು ಕಲ್ಯಾಣಕ್ಕೆ ಬರತೊಡಗಿದರು. ಮೊದಲು ಮಂಗಳವೇಡೆಯಲ್ಲಿ ಪ್ರಾರಂಭವಾದ ಅನುಭವ ಮಂಟಪವು ಬಸವಣ್ಣನವರು ಕಲ್ಯಾಣಕ್ಕೆ ಬಂದ ಮೇಲೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತೆಂದು ಉತ್ತಂಗಿ ಚೆನ್ನಪ್ಪನವರು ಅಭಿಪ್ರಾಯ ಪಟ್ಟಿದ್ದಾರೆ.
2) ಖಚಿತವಾದ ಇತಿಹಾಸದ ಪ್ರಕಾರ ಬಸವಣ್ಣನವರ ವಾಸಸ್ಥಾನವನ್ನು ಮಹಾಮನೆಯೆಂದು ಕರೆದು ಅದರಲ್ಲಿಯೇ ‘ಅನುಭವ ಮಂಟಪ’ ಚರ್ಚೆಗಳು ನಡೆಯುತ್ತಿದ್ದವು ಎಂಬುದನ್ನು ಸಾಕ್ಷ್ಯಾಧಾರ ಸಹಿತ ಉತ್ತಂಗಿ ಚೆನ್ನಪ್ಪನವರು ಸಿದ್ದಪಡಿಸಿದ್ದಾರೆ. ಅದನ್ನು ಅವರ ಟೀಕಾಕಾರರೂ (ಕಪಟ್ರಾಳ ಕೃಷ್ಣರಾವ) ಕೂಡ ಅಲ್ಲಗಳೆದಿಲ್ಲ. ಈವರೆಗೆ ಸಂಶೋಧನೆ ಮಾಡಿದ ಬಹುತೇಕ ಲೇಖಕರೂ ಅಲ್ಲಗಳೆದಿಲ್ಲ.
ಮೇಲೆ ವಿವರಿಸಿದ ಅಂಶಗಳ ಮೇಲಿಂದ ಪೀರ ಪಾಶಾ ಬಂಗಲೆಯಲ್ಲಿ ಬಸವಣ್ಣನವರ ‘ಮಹಾಮನೆ’ ಇತ್ತು ಎನ್ನುವುದಕ್ಕೆ ಹೆಚ್ಚು ಆಧಾರಗಳಿಲ್ಲ.
3) ಇಂದು ನಮ್ಮ ಕಲ್ಪನೆಗೆ ಸರಿಹೋಗುವಂತಹ ಬೃಹತ್‍ಕಟ್ಟಡವು ಪ್ರತ್ಯೇಕವಾಗಿ ಅನುಭವ ಮಂಟಪಕ್ಕೆ ಮಾತ್ರ ಇತ್ತು ಎನ್ನುವುದು ವಚನಗಳಿಂದ ಕಂಡುಬರುವುದಿಲ್ಲ. ಅಂತಹ ಕಟ್ಟಡವನ್ನು ಕಟ್ಟಲು ಅಷ್ಟು ಸಮಯವು ಶರಣರಿಗೂ ಇರಲಿಲ್ಲ. ಸ್ಥಾವರಕ್ಕೆ ಹೆಚ್ಚು ಆದ್ಯತೆ ನೀಡದ ಶರಣರು ಕಟ್ಟಡಗಳಿಗೆ ಸೀಮಿತವಾಗಿಲ್ಲ.
4) ಉತ್ತಂಗಿ ಚೆನ್ನಪ್ಪನವರು ಹೀಗೆ ಹೇಳಿದ್ದಾರೆ: “ಅನುಭವ ವಿನಿಮಯಕ್ಕಾಗಿ ಶಿವಾನುಭವಿಗಳು ಯಾವ ಸ್ಥಳದಲ್ಲಿ ಸಭೆಯಾಗಿ ಕೂಡಿ ಬರುವರೋ ಅದೇ ‘ಅನುಭವ ಮಂಟಪ’ವೆನಿಸುತ್ತದೆ. ಇದಕ್ಕೆ ಕಲ್ಲಿನಿಂದ ಕಟ್ಟಿದ ನಾಲ್ಕು ಗೋಡೆಗಳಾಗಲಿ, ಭವ್ಯವಾದ ಮಂದಿರವಾಗಲಿ, ಆದರ ಮುಂದೆ ‘ಅನುಭವ ಮಂಟಪ’ ಎಂದು ದೊಡ್ಡ ಅಕ್ಷರಗಳಿಂದ ಕೆತ್ತಿದ ಒಂದು ಬೋರ್ಡಾಗಲಿ ಇರುವ ಅಗತ್ಯವಿಲ್ಲ” (ಪುಟ 26).
5) ಸ್ಥಾವರಕ್ಕೆ ಮಹತ್ವ ನೀಡದ ಶರಣರು ತಮಗೆ ಅನುಕೂಲವಾದ ಸ್ಥಳದಲ್ಲಿ ಚರ್ಚೆ ನಡೆಸುತ್ತಿದ್ದರು. ಅದು ಬಸವಣ್ಣನವರ ಮನೆಯಲ್ಲೇ ನಡೆಯುತ್ತಿತ್ತು. ಅಲ್ಲಿಗೆ ಬಂದವರಿಗೆಲ್ಲ ಆದರ ಆತಿಥ್ಯ, ‘ಆರೋಗನೆ’ಯನ್ನು ಬಸವಣ್ಣನವರ ಕುಟುಂಬದವರೆ (ಅಕ್ಕ ನಾಗಮ್ಮ, ನೀಲಾಂಬಿಕೆ, ಗಂಗಾಂಬಿಕೆಯರು) ಮಾಡುತ್ತಿದ್ದರು ಎಂಬುದಕ್ಕೆ ಅನೇಕ ವಚನಗಳೆ ಸಾಕ್ಷಿಯಾಗಿವೆ.
6) ಬಸವ ಕಲ್ಯಾಣದಲ್ಲಿ ಬಸವಣ್ಣನವರ ಕಾಲದಲ್ಲಿ ಸಾವಿರಾರು ವಿವಿಧ ತರಹದ ಮಠಗಳು 12ನೆಯ ಶತಮಾನದಲ್ಲಿ ಇದ್ದವೆಂದೂ ಅವುಗಳ ಹೆಸರುಗಳನ್ನೂ ಶೂನ್ಯ ಸಂಪಾದನೆಗಳಲ್ಲಿ ಹೇಳಲಾಗಿದೆ. ‘ಪ್ರಭುದೇವರ ಶೂನ್ಯ ಸಂಪಾದನೆ’ ವಚನ 1731 ಹೇಳಿದ ಪ್ರಕಾರ ಅವು ಹೀಗಿವೆ:
“ಇನ್ನು ಬಸವರಾಜದೇವರು ಮುಖ್ಯವಾದ ಅಸಂಖ್ಯಾತರ ಮಠಗಳು ಆ ಕಲ್ಯಾಣದೊಳಗೆ ಎಷ್ಟು ಎಂದಡೆ:
ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು,
ಇಪ್ಪತ್ತೆಂಟು ಸಾವಿರ ಮಹಾಮನೆಗಳು;
ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು.
ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ತರ ಮಠಂಗಳು
ಐದು ಸಾವಿರ ವೀರವೃತನೇಮಿಗಳ ಕಟ್ಟಳೆಯ ಮಠಂಗಳು
ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು
ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು
ನಿತ್ಯ ಸಾವಿರ ಜಂಗಮಕೆ ಆರೋಗಣೆಯ ಮಾಡಿಸುವ
ದಾಸೋಹಿಗಳ ಮಠಂಗಳು ಮೂವತ್ತೆರಡು ಸಾವಿರ.
ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ
ಸತ್ಯಸದಾಚಾರಿಗಳ ಮಠಗಳು ಐವತ್ತೆಂಟು ಸಾವಿರ.
ನಿತ್ಯ ಸಾವಿರದೈನೂರು ಜಂಗಮಕ್ಕೆ ಒಲಿದ ದಾಸೋಹವ ಮಾಡುವ
ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ
ನಿತ್ಯ ಆವಾರಿಯಿಂದ ಮಾಡುವ
ಮಾಟಕೂಟದ ಸದ್ಬಕ್ತರ ಮಠಂಗಳು ಲಕ್ಷ
ಜಂಗಮಸಹಿತ ಸಮಯಾಚಾರದಿಂದ
ಲಿಂಗಾರ್ಚನೆಯ ಮಾಡುವ ಜಂಗಮಭಕ್ತರ
ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು
ಅಂತು ಎರಡು ಸಾವಿರದೇಳ್ನೂರೆಪ್ಪತ್ತು
ಅಂತು ಎರಡು ಲಕ್ಷವು ಎಂಬತ್ತೈದು ಸಾವಿರ ಏಳುನೂರೆಪ್ಪತ್ತು
ಇಂತಿಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದ ಇಳಿತಂದ
ಪ್ರಮಥ ಗಣಂಗಳ ಮಠಂಗಳು ಏಳನೂರೆಪ್ಪತ್ತು.”

ಹೊರಗಿನ ಬೇರೆ ಬೇರೆ ಕಡೆಗಳಿಂದ ಕಲ್ಯಾಣಕ್ಕೆ ಬಂದಿದ್ದ ಶರಣರು ಆಗ ಇದ್ದ ವಿವಿಧ ತರಹದ ಸಾವಿರಾರು ಮಠಗಳಲ್ಲಿ ಆಶ್ರಯ ಪಡೆಯುತ್ತಿದ್ದರು ಎಂಬುದನ್ನೂ ಮೇಲೆ ಹೆಸರಿಸಿದ ವಚನವೇ ತಿಳಿಸುತ್ತದೆ.
ಐ) ಬಸವಣ್ಣನವರ ವಾಸಸ್ಥಾನವೇ ಅನುಭವ ಮಂಟಪ ನಡೆಯುತ್ತಿದ್ದ ಸ್ಥಳವಾಗಿದ್ದರೆ, ಅವರ ಮಹಾಮಂತ್ರಿಯ ಸ್ಥಾನಕ್ಕೆ ಸರಿಹೋಗುವ ಹಾಗೆ ಅದು ಒಂದು ದೊಡ್ಡ ಕಟ್ಟಡವಾಗಿರಲು ಸಾಧ್ಯವಿದೆ. ಅದರ ವಿನ್ಯಾಸವನ್ನು ಶೂನ್ಯ ಸಂಪಾದನೆಗಳಲ್ಲಿ ವಿವರಿಸಲಾಗಿದೆ. ಅದನ್ನು ದಾಸೋಹದ ಮಠವೆಂದೂ ಅರಮನೆಯೆಂದೂ ಬಣ್ಣಿಸಲಾಗಿದೆ. ಆದರೆ ಅಂತಹ ಕಟ್ಟಡಕ್ಕೆ ಸರಿಹೊಂದುವ ಯಾವುದೇ ಲಕ್ಷಣಗಳು ಪೀರ ಪಾಶಾ ಬಂಗಲೆಯಲ್ಲಿ ಇಲ್ಲ. ಇತ್ತು ಎಂದು ಹೇಳಲು ಯಾವುದೇ ಭೌತಿಕ ಆಧಾರಗಳಿಲ್ಲ. ಆದ್ದರಿಂದ ಪೀರ ಪಾಶಾ ಬಂಗಲೆಯಲ್ಲಿ ಅನುಭವ ಮಂಟಪದ ಬಗ್ಗೆ ಇದ್ದ ನಂಬಿಕೆಯನ್ನು ಸಮಿತಿಯು ಒಪ್ಪಲಿಲ್ಲ.

ಮತೀಯ ಗಲಭೆಗೆ ಪ್ರಚೋದನೆ:
ನಾಲ್ಕೈದು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಬೆಂಬಲಿಗರಾದ ಇಬ್ಬರು ಲಿಂಗಾಯತ ಸ್ವಾಮಿಗಳು ಮತ್ತು ಈ ಸಂಘಟನೆಗಳ ಅನುಯಾಯಿಗಳು ಪೀರಪಾಶಾ ಬಂಗಲೆಯಲ್ಲಿ ಅನುಭವ ಮಂಟಪ ಇತ್ತು ಎಂದು ಹೇಳುತ್ತ, ಈಗ ಮುಸ್ಲಿಮರಿಗೆ ಸೇರಿದ ಪೀರಪಾಶಾ ಬಂಗಲೆಯನ್ನು ಸರ್ಕಾರವು ತೆಗೆದುಕೊಂಡು ಅಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂದು ದೊಡ್ಡ ರಾದ್ಧಾಂತವನ್ನೇ ಮಾಡಿದರು. ಪೊಲೀಸರ ಸಕಾಲಿಕ ಕ್ರಮದಿಂದ ಅಲ್ಲಿ ಸಂಭವಿಸಬಹುದಾದ ದುರ್ಘಟನೆ ನಡೆಯಲಿಲ್ಲ. ಮೊನ್ನೆ ಅದೇ ಸಂಘಟನೆಗಳ ವಕ್ತಾರರಾಗಿರುವ ಬೆಂಗಳೂರಿನ ಓರ್ವ ಸಂಸದರು ಅದೇ ಪ್ರಶ್ನೆಯನ್ನು ಸಂಸತ್ತಿನಲ್ಲಿ ಎತ್ತಿದ್ದಾರೆ. ಮತ್ತೆ ಗಲಭೆ ಹೂಡಲು ಅವಕಾಶ ಮಾಡಿಕೊಡುವ ಸಂಭವ ಎದ್ದುಕಾಣುತ್ತದೆ.
(ಮುಂದುವರಿಯುತ್ತದೆ)

Previous post ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ
Next post ಹುಡುಕಾಟ
ಹುಡುಕಾಟ

Related Posts

ಆಫ್ರಿಕಾದ ಸೂರ್ಯ
Share:
Articles

ಆಫ್ರಿಕಾದ ಸೂರ್ಯ

December 13, 2024 ಕೆ.ಆರ್ ಮಂಗಳಾ
“ದೇವರು ನಮಗೆ ನೀಡಿದ ಉತ್ಕೃಷ್ಟ ಕೊಡುಗೆ ನೆಲ್ಸನ್ ಮಂಡೇಲಾ. ಅವರು ನನಗೆ ಹೃದಯ ವೈಶಾಲ್ಯತೆಯ ಆದರ್ಶ. ಇಂಥ ಹಿರಿಯ ಬದುಕನ್ನು ಪ್ರಭಾವಿಸಿದ ಶ್ರೇಯ ಮಹಾತ್ಮ ಗಾಂಧೀಜಿಗೆ...
ಕಡಕೋಳ ನೆಲದ ನೆನಪುಗಳು
Share:
Articles

ಕಡಕೋಳ ನೆಲದ ನೆನಪುಗಳು

August 10, 2023 ಮಲ್ಲಿಕಾರ್ಜುನ ಕಡಕೋಳ
ಕಷ್ಟಪಟ್ಟು ಕಡಕೋಳಕ್ಕೆ ಹೋದರ/ ಕಡಿಮೇನವ್ವ ಅಲ್ಲಿ ತೊಡಕೇನವ್ವ// ಮೃಡ ಮಹಾಂತೇಶನ ಪಾದವ ಹಿಡಿಬೇಕವ್ವ ಅಲ್ಲಿ ದುಡಿಬೇಕವ್ವ// ಇದು ಶ್ರಮಸಂಸ್ಕೃತಿ ಪ್ರತೀಕದ ಮಡಿವಾಳಪ್ಪನವರ...

Comments 3

  1. ಜಯಪ್ರಕಾಶ ಜಗಳೂರು
    Jan 20, 2026 Reply

    ಬಸವ ಕಲ್ಯಾಣದ ಅನುಭವ ಮಂಟಪದ ಇತಿಹಾಸವನ್ನು ಡಾ. ಜಾಮದಾರ್ ಅವರು ಬರೆಯುತ್ತಿರುವುದು ಅತ್ಯಂತ ಸಮುಚಿತ. ಅವರ ದೀರ್ಘ ಅಧ್ಯಯನದ ಫಲವನ್ನು ಲೇಖನದ ಮೂಲಕ ನಮಗೆ ನೀಡುತ್ತಿರುವುದು ನಮ್ಮ ಭಾಗ್ಯ🙏

  2. ನೀಲಕಂಠ ಎ.ಪಿ
    Jan 20, 2026 Reply

    ಅನುಭವ ಮಂಟಪದ ಐತಿಹಾಸಿಕತೆಯ ಕುರಿತು ಎದ್ದ ದುರುದ್ದೇಶದ ಅನುಮಾನಗಳಿಗೆ ಉತ್ತಂಗಿ ಚನ್ನಪ್ಪನವರು ನೀಡಿದ ಉತ್ತರವನ್ನು ಓದಿ ಕಣ್ಣು ತೇವಗೊಂಡವು. ನೀವು ಹೇಳಿದಂತೆ ನಮ್ಮ ಸಮಾಜದ ಸ್ವಾಮಿಗಳಲ್ಲಿ ಇವತ್ತಿಗೂ ಆಳ ಅಧ್ಯಯನದ ಕೊರತೆ ಇದೆ. ಪೂಜೆ, ಪ್ರವಚನಗಳಲ್ಲೇ ತಮ್ಮ ಜೀವನ ವ್ಯರ್ಥ ಮಾಡಿಕೊಳ್ಳುವ ಈ ಪೂಜ್ಯರುಗಳಿಂದ ಯಾವ ಮಾರ್ಗದರ್ಶನವನ್ನೂ ನಿರೀಕ್ಷಿಸಲಾಗದು.

  3. ಗಂಗಾಧರ ಮೊದಲಿಯಾರ್
    Jan 20, 2026 Reply

    ಈಗ ಓದಿದೆ. ಒಳ್ಳೆಯ ಲೇಖನ, ವಿವರವಾದ ಸಂಶೋಧನಾತ್ಮಕ ವಿಶ್ಲೇಷಣೆ. ರೆಫರೆನ್ಸ್ ಗಳಂತೂ ಬಹಳ ಚೆನ್ನಾಗಿವೆ. ಮುಂದಿನ ಕಂತಿನ ಕುತೂಹಲವನ್ನು ಹುಟ್ಟಿಸಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
Copyright © 2026 Bayalu