Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನುಭವ ಮಂಟಪದ ವಿನ್ಯಾಸ…
Share:
Articles February 16, 2026 ಡಾ. ಎಸ್.ಎಮ್ ಜಾಮದಾರ

ಅನುಭವ ಮಂಟಪದ ವಿನ್ಯಾಸ…

ಅನುಭವ ಮಂಟಪದ ಗಾತ್ರದ ಬಗ್ಗೆ ಮೂಲ ಕಟ್ಟಡ ಎಷ್ಟು ಉದ್ದ ಅಗಲ ಎತ್ತರ ಇದ್ದಿರಬಹುದು, ದುಂಡೋ, ಚೌಕೋ, ಆಯತವೋ, ಬಹುಕೋನದ್ದೋ ಯಾವ ಆಕಾರದ್ದು ಇದ್ದಿರಬಹುದು ಎಂಬೆಲ್ಲ ಅಂಶಗಳ ಬಗ್ಗೆ ತಜ್ಞರ ಸಮಿತಿಯಲ್ಲಿ ದೀರ್ಘ ಚರ್ಚೆ ನಡೆಯಿತು. ಆಗ ವಚನಗಳಲ್ಲಿ ಏನಾದರೂ ಅನುಭವ ಮಂಟಪದ ಕಟ್ಟಡದ ಸುಳಿವು ಸಿಗಬಹುದೇ ಎಂಬ ಪ್ರಶ್ನೆಗೆ ಡಾ. ಕಲಬುರ್ಗಿಯವರು, ಶೂನ್ಯ ಸಂಪಾದನೆಯಲ್ಲಿ ಕೆಲವು ವಚನಗಳಿವೆ, ಹುಡುಕಿ ಕಳಿಸುವುದಾಗಿ ಹೇಳಿದರು. ಅದೇ ರೀತಿ ಅವರು ಐದು ಪುಟ ಉದ್ದದ ಒಂದು ವಚನವನ್ನು ಕಳಿಸಿದರು.

ಎರಡನೆಯದಾಗಿ, ಗದುಗಿನ ಮುರಿಗೆಪ್ಪ ಚೆಟ್ಟಿ ಎಂಬ ಹೆಸರಿನ ಓರ್ವ ಪ್ರಸಿದ್ಧ ಚಿತ್ರಕಾರರು ಚಿತ್ರಿಸಿದ ಅನುಭವ ಮಂಟಪದ ಒಂದು ವರ್ಣಚಿತ್ರ ಪಂಚಕಮಿಟಿಯ ಕಚೇರಿಯಲ್ಲಿ ಇತ್ತು. ಇನ್ನೊಂದು ಹಳೆಯ ವರ್ಣಚಿತ್ರವು ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ದೊರೆಯಿತು. ಅವೆರಡೂ ಚಿತ್ರಗಳಲ್ಲಿ ಯಾವುದೇ ಸಾಮ್ಯತೆ ಇರಲಿಲ್ಲ. ಅವು ಕಲಾಕಾರರ ಕಲ್ಪಿತ ಪರಿಕಲ್ಪನೆಗಳಾಗಿದ್ದವು. ಆದಾಗ್ಯೂ ಕಲಾಕಾರರ ಕಲ್ಪನೆಗಳಿಗೆ ನಾಲ್ಕು ಬೇರೆ ಬೇರೆ ಶೂನ್ಯ ಸಂಪಾದನೆಗಳಲ್ಲಿ ಬರುವ ಶರಣರ ಸಂಭಾಷಣಾತ್ಮಕ ವಚನ ಸಂವಾದಗಳು ಆಧಾರವಾಗಿದ್ದವು.

ಅನುಭವ ಮಂಟಪಕ್ಕೆ ಸಂಬಂಧಿಸಿದ ಯಾವುದೇ ಐತಿಹಾಸಿಕ ಕಟ್ಟಡ ಅಥವಾ ಅಂತಹ ಕಟ್ಟಡದ ಯಾವುದೇ ಅವಶೇಷಗಳೂ ಬಸವ ಕಲ್ಯಾಣದಲ್ಲಿ ಸಿಗಲಿಲ್ಲ. ಕಲಬುರ್ಗಿಯವರು ಕಳಿಸಿದ ಅನುಭವ ಮಂಟಪಕ್ಕೆ ಸಂಬಂಧಿಸಿದ ವಚನವು ‘ಪ್ರಭುದೇವರ ಶೂನ್ಯ ಸಂಪಾದನೆ’ಯಲ್ಲಿನದು. ಅದು ಹದಿನಾರನೆಯ ಶತಮಾನದಲ್ಲಿ ಸಂಗ್ರಹಿಸಲ್ಪಟ್ಟ ಗ್ರಂಥ. ಅದರಲ್ಲಿನ ಐದು ಪುಟದಷ್ಟು ಉದ್ದವಾದ 1731ನೆಯ ವಚನದ 37ನೆಯ ಪಾದದಿಂದ 54ನೆಯ ಪಾದಗಳಲ್ಲಿ ಬಸವಣ್ಣನವರ ‘ಮಹಾಮನೆ’ಯ ವರ್ಣನೆಯಿದೆ. ಅದನ್ನು ‘ಬಸವರಾಜದೇವರ ದಾಸೋಹ ಮಠ’ ಮತ್ತು ‘ಅರಮನೆ’ ಎಂದು ಕರೆದು ಅದರ ವಿಸ್ತೀರ್ಣವನ್ನು ಈ ಕೆಳಗಿನಂತೆ ಬಣ್ಣಿಸಲಾಗಿದೆ:

ಯೋಜನವರಿಯ ಬಿನ್ನಾಣದ ಕಲುಗೆಲಸದ ಪೌಳಿ:
ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು
ಅವಕ್ಕೆ ಪಂಚಾಕ್ಷರಿ ಶಾಸನ,
ಮಿಸುನಿಯ ಕಂಭದ ತೋರಣಗಳಲ್ಲಿ ರುದ್ರಾಕ್ಷಿಯ ಸೂಸಕ
ಆ ಬಾಗಿಲವಾಡದಲ್ಲಿ ಒಪ್ಪುತ್ತಿರ್ಪುವಯ್ಯಾ,
ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ
ಒಪ್ಪುತಿರ್ಪುವಯ್ಯಾ,
ಆ ಮಧ್ಯದಲ್ಲಿ ಬಸವರಾಜದೇವರ
ಸಿಂಹಾಸನದ ವಿಸ್ತೀರ್ಣದ ಪ್ರಮಾಣ:
ಸಹಸ್ರಕಂಭದ ಸುವರ್ಣದುಪ್ಪರಿಗೆ;
ಆ ಮನೆಗೆತ್ತಿದ ಹೊನ್ನ ಕಳಸ ಸಾವಿರ,
ಗುರುಲಿಂಗ ಜಂಗಮಕೆ ಪಾದಾರ್ಚನೆಯ ಮಾಡುವ
ಹೊಕ್ಕರಣೆ ನಾಲ್ಕು ಪುರುಷ ಪ್ರಮಾಣದ ಘಾತ.
ಅಲ್ಲಿ ತುಂಬಿದ ಪಾದೋದಕದ ತುಂಬನಿಚ್ಚಲು
ಬೆಳೆದ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ,
ಆ ಯೋಜನವರಿ ಬಿನ್ನಾಣದ ಅರಮನೆಯ
ವಿಸ್ತೀರ್ಣದೊಳಗೆ ಲಿಂಗಾರ್ಚನೆಯ ಮಾಡುವ ಮಠದ ಕಟ್ಟಳೆ
ಲಕ್ಷದ ಮೇಲೆ ತೊಂಬತ್ತಾರು ಸಾವಿರ…

ಈ ವಚನದ ಪ್ರಕಾರ, ಕಲ್ಯಾಣದಲ್ಲಿ ‘ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ, ಆ ಶಿವಾಲಯಂಗಳೊಳಗೆ ಮುಖ್ಯವಾದ ತ್ರಿಪುರಾಂತಕ ಶಿವಾಲಯ’ಗಳಿದ್ದವು ಎಂದಿದೆ. ಆದರೆ ಅಲ್ಲಿ ಈಗ ಉಳಿದಿರುವುದು ತ್ರಿಪುರಾಂತಕ ದೇವಾಲಯ ಒಂದೇ. ಅಲ್ಲದೇ, ‘ಎರಡು ಲಕ್ಷದ ಎಂಬತ್ತೈದು ಸಾವಿರ ಏಳುನೂರೆಪ್ಪತ್ತು ದಾಸೋಹದ ಮಠಗಳು’ ಬಸವಕಲ್ಯಾಣದಲ್ಲಿ ಇದ್ದವು ಎಂದು ಹೇಳಿದೆ. ಅವುಗಳಲ್ಲಿ ‘ಬಸವರಾಜ ದೇವರ ಮಠ’ ಬಹುಮುಖ್ಯವಾದದ್ದು ಎಂದಿದೆ. ಈ ವಚನವು ಅತ್ಯಂತ ಉತ್ಪ್ರೇಕ್ಷೆಯಿಂದ ಕೂಡಿದೆ ಎಂಬುದು ಸ್ಪಷ್ಟ. ಆದರೆ ಅದರಲ್ಲಿನ ಕೆಲವು ಅಂಶಗಳನ್ನು ಸ್ವೀಕರಿಸುವುದು ತಪ್ಪಾಗಲಿಕ್ಕಿಲ್ಲ. ಉದಾಹರಣೆಗೆ:

ಅ) ಮನೆಗೆ ಒಂದು ತಲೆಬಾಗಿಲು (ಬಾಗಿಲುವಾಡ) ಇರುವುದು ಸಹಜವಾಗಿದೆ, ಅದರ ಬಗ್ಗೆ ಇತರ ಉತ್ಪ್ರೇಕ್ಷಿತ ವಿವರಗಳು ಅನಗತ್ಯ. ದೊಡ್ಡದಾದ ಒಂದು ಸುಂದರವಾದ ತಲೆಬಾಗಿಲನ್ನು ಕಟ್ಟಬಹುದು. ಅದು ಅಲ್ಲಿನ ಕಲ್ಲಿನದಾಗಿದ್ದರೆ ಬಾಗಿಲದ ಚೌಕಟ್ಟುಗಳ ಮೇಲೆ ಈ ವಚನದಲ್ಲಿ ಹೇಳಿದ ರುದ್ರಾಕ್ಷಿಯ ಸೂಸಕದ ಕೆಲವು ಲಕ್ಷಣಗಳನ್ನು ಕೆತ್ತಬಹುದು.
ಆ) ಪೂಜಾ ಸ್ಥಳ (ಲಿಂಗಾರ್ಚನೆ ಮಾಡುವ ಮಠ) ಮತ್ತು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗುರು ಜಂಗಮರಿಗೆ ಊಟದ ಸ್ಥಳಗಳು ಮನೆಗಳಲ್ಲಿ ಬೇರೆ ಬೇರೆ ಇರುವುದು ಸಾಮಾನ್ಯ. ಅವುಗಳನ್ನು ಒಂದೊಂದು ಭಾಗಗಳನ್ನಾಗಿ (‘ಇಷ್ಟಲಿಂಗಾರ್ಚನೆಯ ಸ್ಥಳ’ವೆಂದು) ಮತ್ತು ‘ಪ್ರಸಾದ ನಿಲಯ’ವೆಂದು ತೆಗೆದುಕೊಳ್ಳುವುದು ತಪ್ಪಲ್ಲ.
ಇ) ಮನೆಗೆ ಸುತ್ತು ಆವರಣ ಗೋಡೆಗಳು ಈಗಲೂ ಇರುತ್ತವೆ. ಹಾಗೆ ಒಂದು ದೊಡ್ಡದಾದ (ಯೋಜನವರಿ ಬಿನ್ನಾಣದ) ಸುಂದರವಾದ (ಕಲುಗೆಲಸದ) ಆವರಣ ಗೋಡೆಯನ್ನು ಮಹಾಮನೆಗೆ ಕಟ್ಟುವುದು ಸರಿಯೆನಿಸುತ್ತದೆ. ಅದರ ಒಳಬದಿಗೆ ಹೊಂದಿಕೊಂಡು ಸುಂದರವಾದ ಪೌಳಿಗಳನ್ನು ಕಟ್ಟಬಹುದು.
ಈ) ಆವರಣ ಗೋಡೆಯ ಒಳಗಡೆ ಪೌಳಿಗಳಿರುವುದು ಒಂದು ವಿಶೇಷ ಲಕ್ಷಣವೆನ್ನಬಹುದು ಮತ್ತು ಆವುಗಳನ್ನು ನೂತನ ಕಟ್ಟಡದೊಳಗೆ ಅಳವಡಿಸಿಕೊಳ್ಳಬಹುದು. ಯಾತ್ರಿಕರು ಪೌಳಿಗಳಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತದೆ.
ಉ) ಮನೆಯೊಳಗೆ ಪ್ರವೇಶಿಸುವ ಮುನ್ನ ಕೈಕಾಲು ಸ್ವಚ್ಛಮಾಡಿಕೊಳ್ಳಲು ನೀರು ತುಂಬಿದ ಒಂದೊಂದು ಕೊಳಗಗಳು ಇತ್ತೀಚಿನವರೆಗೂ ಅನೇಕ ಸಂಪ್ರದಾಯಸ್ತರ ಮನೆಗಳಲ್ಲಿ ಇರುತ್ತಿದ್ದವು. ಗುರು ಲಿಂಗ ಜಂಗಮಕೆ ಪಾದಗಳನ್ನು ತೊಳೆದುಕೊಳ್ಳಲು ಒಂದು ಹೊಂಡವನ್ನು (ಹೊಕ್ಕರಣೆ) ನೂತನ ಕಟ್ಟಡಕ್ಕೆ ಅಳವಡಿಸಿಕೊಳ್ಳಬಹುದು.
ಊ) ಮನೆಯ ಎದುರು ಮತ್ತು ಸುತ್ತಮುತ್ತಲು ಒಂದು ಉದ್ಯಾನ (ರಾಜಶಾಲಿಯ ಗದ್ದೆ) ಇತ್ತೆಂದು ಆ ವಚನವು ಹೇಳುತ್ತದೆ. ಆದ್ದರಿಂದ ಅದನ್ನೂ ಒಪ್ಪಿ ಅಂದವಾದ ವಿಶಾಲವಾದ ಉದ್ಯಾನವನ್ನು ಬೆಳೆಸಿದರೆ ನೂತನ ಕಟ್ಟಡಕ್ಕೆ ಹೆಚ್ಚು ಮೆರುಗು ಬರುತ್ತದೆ.
ಎ) ಮಹಾಮನೆಯಲ್ಲಿದ್ದ ಮತ್ತು ಬಸವಣ್ಣನವರು ಕುಳಿತುಕೊಳ್ಳುತಿದ್ದ (ಸಿಂಹಾಸನ) ಅಂದರೆ ಅನುಭವ ವಿನಿಮಯ ನಡೆಯುವ ನಕ್ಷಕ್ಕೆ ಸಾವಿರದಷ್ಟು ಹೊನ್ನಕಳಸಗಳಿದ್ದವೆಂದು ಹೇಳಲಾಗಿದೆ. ಅದು ಪ್ರಧಾನ ಮಂತ್ರಿಯ ಮಹಾಮನೆಯೂ ಆಗಿದ್ದರಿಂದ ಅದಕ್ಕೆ ಒಂದು ಪ್ರಕಾರದ ಕಳಸವಿದ್ದಿರಬಹುದಾಗಿದೆ. ಅಂತಹ ಒಂದು ಕಳಸವನ್ನು ಅಳವಡಿಸಿಕೊಳ್ಳುವುದು ಅಪಭ್ರಂಶವೆನಿಸಲಾರದು.
ಏ) ನಂದಿ ಧ್ವಜ ಮತ್ತು ವ್ಯಾಸ ಪತಾಕೆಗಳು ಎಂಬ ಲಕ್ಷಣಗಳು ಬಸವಣ್ಣನ ಕಾಲದವುಗಳಲ್ಲ. ಅವು ನಂತರದಲ್ಲಿ ಶಿವಪುರಾಣಗಳ ದಂತ ಕಥೆಗಳಿಂದ ಆಯ್ದುಕೊಂಡವು. ಅವುಗಳನ್ನು ಕೈಬಿಡಬಹುದು.
ಐ) ಇಲ್ಲಿನ ಪ್ರತಿಯೊಂದು ಭಾಗದ ವಿಸ್ತೀರ್ಣ ಮತ್ತು ವಿಶೇಷ ಅಲಂಕಾರಿಕ ಲಕ್ಷಣಗಳು ಅತ್ಯಂತ ಉತ್ಪ್ರೇಕ್ಷೆಯಿಂದ ಕೂಡಿವೆ ಅವುಗಳನ್ನು ಕಡಿಮೆ ಮಾಡಬಹುದು.
ಈ ಎಲ್ಲ ಅಂಶಗಳನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯು ನೇಮಿಸಿದ ತಜ್ಞರ ಸಮಿತಿ 12-11-2010 ರಂದು ನಡೆದ ಸಭೆಯಲ್ಲಿ ಒಪ್ಪಿಕೊಂಡಿತು. ಮೇಲೆ ವಿವರಿಸಿದ ಎಲ್ಲ ವಿವರಗಳನ್ನು ಒಳಗೊಂಡ ವರದಿಯನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಸಲ್ಲಿಸಿತು. ಸದರಿ ಮಂಡಳಿಯು ತಜ್ಞರ ಸಮಿತಿಯ ವರದಿಯನ್ನು ಅನುಮೋದಿಸಿತು. ಅದರ ಪ್ರಕಾರ ಒಂದು ನೀಲನಕ್ಷೆ ಹಾಗೂ ವೆಚ್ಚದ ಅಂದಾಜು ಪತ್ರಿಕೆಯು ಸಿದ್ದವಾಗಿತ್ತು. 2010ರಲ್ಲಿ ಮಂಡಳಿಯು ಅನುಮೋದಿಸಿದ ನೀಲನಕ್ಷೆಯ ಪ್ರಕಾರ ಕೇವಲ ಐದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಭವ ಮಂಟಪದ ಕಟ್ಟಡವನ್ನು ಕಟ್ಟುವ ಯೋಜನೆ ತಯಾರಿಸಲಾಗಿತ್ತು.

ನೂತನ ಅನುಭವ ಮಂಟಪವನ್ನು ಎಲ್ಲಿ ಕಟ್ಟಬೇಕು?:

ನೂತನ ಅನುಭವ ಮಂಟಪವನ್ನು ಎಲ್ಲಿ ಕಟ್ಟಬೇಕು ಎನ್ನುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಮೂಲ ಮಂಟಪ ಎಲ್ಲಿತ್ತು ಎಂಬುದೇ ಗೊತ್ತಿಲ್ಲದಿರುವಾಗ ಹೊಸ ಕಟ್ಟಡವನ್ನು ಎಲ್ಲಿ ಬೇಕಾದರೂ ಕಟ್ಟಬಹುದಾಗಿದೆ. ಆದಾಗ್ಯೂ ಮೂರರಲ್ಲಿ ಒಂದು ಕಡೆ, ಅಂದರೆ (1) ಅರಿವಿನ ಮನೆ ಎದುರಿಗಿನ ಖಾಲಿ ಜಮೀನುಗಳಲ್ಲಿ ಇಲ್ಲವೆ, (2) ಕೋಟೆಯ ಎದುರಿಗಿನ ಹತ್ತು ಎಕರೆ ಖಾಲಿ ಜಾಗದಲ್ಲಿ ಇಲ್ಲವೆ, (3) ಪಟ್ಟಣದ ಮಧ್ಯದ ತೇರು ಮೈದಾನದಲ್ಲಿ ಕಟ್ಟುವ ಬಗ್ಗೆ ಸೂಚಿಸಲಾಗಿತ್ತು. ಈ ಮೂರು ಸ್ಥಳಗಳನ್ನು ಸೂಚಿಸಲು ಕೆಲವು ಐತಿಹಾಸಿಕ ಕಾರಣಗಳಿದ್ದವು (ಅವುಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ). ಕೆಲವರು ಊರ ಮಧ್ಯದಲ್ಲಿರುವ ಪೀರ ಪಾಶಾ ಬಂಗಲೆಯನ್ನು ವಶಪಡಿಸಿಕೊಂಡು ಅಲ್ಲಿ ಕಟ್ಟಬೇಕೆಂದು ಹಠ ಹಿಡಿದರು. ಇನ್ನೂ ಕೆಲವರು ಈಗಿನ ಬಸವಕಲ್ಯಾಣವನ್ನು ರಾಷ್ಟ್ರೀಯ ಹೆದ್ದಾರಿಗೆ ಕೂಡಿಸುವ ರಸ್ತೆಯ ಬದಿಗೆ ಖೂಬಾ ಅವರ ಮನೆಯ ಆಚಿನ ಜಾಗದಲ್ಲಿ ಕಟ್ಟಬೇಕೆಂದು ಹೇಳುತ್ತಿದ್ದರು. ಎಲ್ಲಾ ಗೊಂದಲಗಳ ನಡುವೆ ಸ್ಥಳ ನಿಗದಿಯೆ ದೊಡ್ಡ ಸಮಸ್ಯೆಯಾಗಿತ್ತು. ಅದು ಈಗಲೂ ಸಮಸ್ಯೆಯಾಗಿಯೆ ಉಳಿದಿದೆ. ಇದೇ ಸಮಯದಲ್ಲಿ ಮಂಡಳಿಯ ವಿಶೇಷ ಅಧಿಕಾರಿಯೂ (ಎಸ್ ಎಮ್ ಜಾಮದಾರ) ಸೇವೆಯಿಂದ ನಿವೃತ್ತರಾದ ನಂತರ ಆ ಎಲ್ಲಾ ಕೆಲಸಗಳು ನೇರವೇರಲಿಲ್ಲ. 2012 ರಿಂದ 2017ರವರೆಗಿನ 5 ವರ್ಷಗಳಲ್ಲಿ ಅನುಭವ ಮಂಟಪದ ನಿರ್ಮಾಣದ ಬಗ್ಗೆ ಯಾವುದೇ ನಿರ್ಣಯವಾಗಲಿ ಮತ್ತು ಪ್ರಗತಿಯಾಗಲಿ ಆಗಲಿಲ್ಲ.

ಅದೂ ಒಳ್ಳೆಯದೇ ಆಯಿತೆಂದು ಈಗ ಧಾರಾಳವಾಗಿ ಹೇಳಬಹುದು. ಏಕೆಂದರೆ, ಆ ಮೂಲ ನಕ್ಷೆಯ ಗಾತ್ರವು ಅತಿ ದೊಡ್ಡದಾಗಿರಲಿಲ್ಲ ಮತ್ತು ಹೆಚ್ಚಿನ ಖರ್ಚಿನದ್ದಾಗಿರಲಿಲ್ಲ. ಮಂಡಳಿಗೆ ಅಷ್ಟೊಂದು ಹಣಕಾಸು ಲಭ್ಯವಿರಲಿಲ್ಲ.

ನಂತರದ ಬೆಳವಣಿಗೆಗಳು:

1) 2017ರಲ್ಲಿ ಸಿದ್ಧರಾಮಯ್ಯನವರು ಅನುಭವ ಮಂಟಪವನ್ನು ಕಟ್ಟುವ ಸಲುವಾಗಿ ಇನ್ನೊಂದು ಸಮಿತಿಯನ್ನು ರಚಿಸಲು ದಿನಾಂಕ 31-01-2017 ರಂದು ಆದೇಶ ಹೊರಡಿಸಿ ಆ ಕಾರ್ಯಕ್ಕೆ ಚಾಲನೆ ನೀಡಿದರು.
2) ಆದರೆ ಸರ್ಕಾರ ನೇಮಿಸಿದ ‘ತಜ್ಞರ’ ಸಮಿತಿಯ ಸದಸ್ಯರೆಲ್ಲರೂ ಸಾಹಿತಿಗಳು ಮಾತ್ರ ಆಗಿದ್ದರು. ಶರಣ ಸಾಹಿತ್ಯದ ಬಗ್ಗೆ ಅವರಲ್ಲಿ ಹೆಚ್ಚಿನ ಜ್ಞಾನವಿತ್ತಾದರೂ ಅವರಲ್ಲಿ ಯಾರೂ ಇತಿಹಾಸ ತಜ್ಞರಾಗಲಿ, ಪುರಾತತ್ವ ಶಾಸ್ತ್ರಜ್ಞರಾಗಲಿ, ವಾಸ್ತುಶಿಲ್ಪಿಗಳಾಗಲಿ, ಕಟ್ಟಡ ನಿರ್ಮಾಣದ ತಾಂತ್ರಿಕ ಜ್ಞಾನವುಳ್ಳವರಾಗಲಿ ಇರಲಿಲ್ಲ (ಅದೇ ಕಾರಣಕ್ಕಾಗಿ, ಮಂಡಳಿಯ ಹಿಂದಿನ ವಿಶೇಷಾಧಿಕಾರಿಯಾಗಿದ್ದವರು ಎರಡನೆಯ ಹೊಸ ಸಮಿತಿಯ ಸಭೆಗಳಲ್ಲಿ ಭಾಗವಹಿಸಲು ಒಪ್ಪಲಿಲ್ಲ.)
3) ಗೊ.ರು.ಚ. ನೇತೃತ್ವದ ಹೊಸ ‘ತಜ್ಞರ’ ಸಮಿತಿಯು ಮೇಲೆ ಹೆಸರಿಸಿದ ಮುಖ್ಯವಾದ (1) ಅನುಭವ ಮಂಟಪ ಎಂಬ ಹೆಸರಿನ ಕಟ್ಟಡ ಇತ್ತೇ? (2) ಅದು ಎಲ್ಲಿ ಇತ್ತು, (3) ಹೇಗಿತ್ತು ಎಂಬೆಲ್ಲ ಪ್ರಶ್ನೆಗಳ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವೆ ಇರಲಿಲ್ಲ. ಆ ಪ್ರಶ್ನೆಗಳಿಗೆ ಹಿಂದಿನ ತಜ್ಞರ ಸಮಿತಿಯ ವರದಿಯೇ ಇದ್ದಿದ್ದರಿಂದ ಆ ಬಗ್ಗೆ ಯಾವುದೇ ತರಹದ ವಿಚಾರಣೆ, ಸಂಶೋಧನೆ, ಚಿಂತನ ಮಂಥನವನ್ನು ನಡೆಸುವ ಅಗತ್ಯವಿರಲಿಲ್ಲ. ಆದ್ದರಿಂದ ಆ ಪ್ರಯತ್ನವನ್ನು ಗೊರುಚ ಸಮಿತಿಯು ಕೈ ಬಿಟ್ಟಿತು.
4) ಈ ಹಿಂದೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯು ಅನುಮೋದಿಸಿದ್ದ ಡಾ. ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ ತಜ್ಞರ ಸಲಹಾ ಸಮಿತಿಯು ನೀಡಿದ್ದ (ಡಾ.ಎಸ್ ಎಮ್ ಜಾಮದಾರ ಅವರು ಕಾಯ್ದಿರಿಸಿದ್ದ) ಟಿಪ್ಪಣಿಯನ್ನೆ ಸಾರಾಸಗಟಾಗಿ ಒಪ್ಪಿಕೊಳ್ಳಲು ಸದರಿ ಸಮಿತಿಯು ಮೊದಲನೆಯ ನಿರ್ಣಯ ಮಾಡಿತು (ಸಮಿತಿಯ ವರದಿಯ ಪುಟ 8 ಮೊದಲ ಕಂಡಿಕೆ, ಪುಟ 13 ಮೂರನೆಯ ಕಂಡಿಕೆ, ಪುಟ 18 ಮೊದಲ ಕಂಡಿಕೆ ನೋಡಿ ಮತ್ತು ಗೊರುಚ ಸಮಿತಿಯ ವರದಿಯ ಅನುಬಂಧ 2ರಲ್ಲಿ ನೋಡಿ).
5) ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯು ನೇಮಿಸಿದ್ದ ತಜ್ಞರ ಸಮಿತಿಯು ತಯಾರಿಸಿದ ಹಿಂದಿನ ವರದಿಯನ್ನೇ ಸ್ವೀಕರಿಸುವ ನಿರ್ಣಯವನ್ನೆ ಒಪ್ಪಿಕೊಂಡ ನಂತರ ಗೊರುಚ ಸಮಿತಿಯು ಕೆಲವು ಸಾರ್ವಜನಿಕ ಸಭೆಗಳನ್ನು ನಡೆಸಿ ನೇರವಾಗಿ ತನ್ನ ಶಿಫಾರಸುಗಳನ್ನು ಕರ್ನಾಟಕ ಸರ್ಕಾರಕ್ಕೆ ಮಾಡಿತು.
6) ಮಹಾಮನೆ ಅಥವಾ ಅನುಭವ ಮಂಟಪವು ತ್ರಿಪುರಾಂತಕ ಕೆರೆಯ ಆಚೆ ಇರಲಿಕ್ಕೆ ಆಗ ಸಾಧ್ಯವಿರಲಿಲ್ಲ. ಏಕೆಂದರೆ ಆ ಸ್ಥಳವು ಅರಮನೆಯಿಂದ ನಾಲ್ಕಾರು ಕಿ.ಮೀ ದೂರದಲ್ಲಿದೆ. ಮಹಾಮಂತ್ರಿಗಳಾಗಿದ್ದ ಬಸವಣ್ಣನವರ ಮಹಾಮನೆಯು ಊರು ಬಿಟ್ಟು ರಾಜನ ಅರಮನೆಯಿಂದ ನಾಲ್ಕೈದು ಕಿಲೋ ಮೀಟರ ದೂರವಾದ ಊರ ಹೊರಗಿನ ಸ್ಥಳದಲ್ಲಿ ಇರುವುದು ಆಗ ಸಹಜವಾಗಿತ್ತು. ಸ್ವಯಂ ಚಾಲಿತ ವಾಹನಗಳಿರಲಿಲ್ಲದ ಆ ಕಾಲದಲ್ಲಿ ಸಾಧುವೂ, ಸುರಕ್ಷಿತವೂ, ಅನುಕೂಲಕರವೂ ಆಗಿರಲಿಲ್ಲ. ಮಹಾಮಂತ್ರಿಯ ಮನೆಯು ಅರಮನೆಯ ಸಮೀಪವೆ ಇರಬೇಕಾದದ್ದು ಅಗತ್ಯ. (ಫತೇಹಪುರ ಸಿಕ್ರಿಯಲ್ಲಿ ಮಂತ್ರಿ ಬೀರಬಲ್ಲನ ಅರಮನೆ ಅಕ್ಬರ ಬಾದ್‍ಶಾಹನ ಅರಮನೆಯ ಪಕ್ಕದಲ್ಲಿರುವಂತೆ). 12 ನೇ ಶತಮಾನದಲ್ಲಿ ತ್ರಿಪುರಾಂತಕ ಪ್ರದೇಶದಲ್ಲಿ ಒಂದೆರಡು ಗುಹೆಗಳನ್ನು ಹೊರತುಪಡಿಸಿ ಇತರ ಯಾವುದೆ ಮಹತ್ವದ ಕಟ್ಟಡಗಳು ಇರಲಿಲ್ಲ.
ಬಸವಣ್ಣನವರ ಮಹಾಮನೆಯಲ್ಲಿಯೇ ಅನುಭವ ಮಂಟಪ ನಡೆಯುತ್ತಿತ್ತೆಂದು ಈಗ ಶತಸಿದ್ದವಾದ ಸಂಗತಿ. ಹಾಗಾಗಿ, ಮಹಾಮನೆಯು ಅರಮನೆಯ ಸಮೀಪದ ಒಂದು ಸ್ಥಳದಲ್ಲಿ ಇದ್ದಿರಬಹುದೆಂಬುದೋ ಒಂದು ಊಹೆ. ಅದು ಬಸವಣ್ಣನವರ ‘ಅರಿವಿನ ಮನೆಯ ಗುಹೆ’ಯ ಹತ್ತಿರವೂ ಇರಬಹುದಾಗಿದೆ ಎಂಬುದು ಮತ್ತೊಂದು ಊಹೆ. ಬಂದವರ ಓಣಿಯಿಂದ ಪಟ್ಟಣದ ಕೆಳಗಿನ ಸ್ಥಳದಲ್ಲಿ ಇರಬೇಕೆಂಬುದು ಮೂರನೆಯ ಊಹೆ. ಪೀರ ಪಾಶಾ ಬಂಗಲೆಯೇ ಮಹಾಮನೆ ಆಗಿತ್ತೆಂಬುದು ನಾಲ್ಕನೇ ಊಹೆ. ಈ ನಾಲ್ಕು ಊಹೆಗಳು ಈಗಲೂ ಬಸವಕಲ್ಯಾಣದ ಅನೇಕರಲ್ಲಿ ಇವೆ.
7) ಆದಾಗ್ಯೂ, ತ್ರಿಪುರಾಂತಕ ಕೆರೆಯಾಚೆಗಿನ ಸ್ಥಳದಲ್ಲಿ ನೂತನ ಅನುಭವ ನಿರ್ಮಾಣವಾಗುತ್ತಿರುವ ಸ್ಥಳವು ಕೆಲವು ಕಾರಣಗಳಿಂದ ಉತ್ತಮವಾಗಿದೆ: ಅದು ಬಸವ ಕಲ್ಯಾಣ ಪಟ್ಟಣದಿಂದ ಐದು ಕಿಲೋಮಿಟರ್ ದೂರದಲ್ಲಿದೆ ಮತ್ತು ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮಿಟರನಷ್ಟು ದೂರದಲ್ಲಿದೆ. ಇದರಿಂದ ಪಟ್ಟಣಕ್ಕೆ ಹೆಚ್ಚು ತೊಂದರೆಯಾಗುವುದಿಲ್ಲ ಮತ್ತು ಈ ಸ್ಮಾರಕಕ್ಕೂ ತೊಂದರೆಯಾಗುವುದಿಲ್ಲ. ಅದು 360 ಎಕರೆಯಷ್ಟು ದೊಡ್ಡದಾದ ಕೆರೆಯ ಪಕ್ಕದಲ್ಲಿರುವುದರಿಂದ ಬೃಹತ್ ಕಟ್ಟಡಕ್ಕೆ ಹೆಚ್ಚು ಮೆರಗು ಬರುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಸಮೀಪವಿರುವುದರಿಂದ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುತ್ತದೆ. ಕಲ್ಯಾಣ ಪಟ್ಟಣವೂ ಈಗ ಇದೇ ಕಡೆ ಬೆಳೆಯುತ್ತದೆ. ಹಾಗಾಗಿ, ಪ್ರವಾಸಿಗರಿಗೆ ಅಗತ್ಯವಾದ ಊಟ, ವಸತಿ, ತಿಂಡಿ ಇತ್ಯಾದಿ ಸೌಕರ್ಯಗಳು ಬೆಳೆಯಬಹುದು.
8) ಅಲ್ಲದೇ ಮೂಲ ಸ್ಥಳ ಎಲ್ಲಿತ್ತು ಎನ್ನುವುದೇ ಗೊತ್ತಿರಲಿಲ್ಲದಾಗ ಅನುಭವ ಮಂಟಪದ ನೂತನ ಕಟ್ಟಡವನ್ನು ಅನುಕೂಲವಾದ ಯಾವುದೇ ಸ್ಥಳದಲ್ಲಿ ಕಟ್ಟಿದರೂ ತಪ್ಪಲ್ಲ.
9) ಗೊರುಚ ಸಮಿತಿಯ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿತು. ಅದರ ಅಂದಾಜು ವೆಚ್ಚ ಸುಮಾರು 600 ಕೋಟಿ ರೂಪಾಯಿಗಳೆಂದು ಲೆಕ್ಕ ಹಾಕಲಾಯಿತು.
10) ಗೊರುಚ ವರದಿ ಒಪ್ಪಿಕೊಂಡ ನಂತರ ಸಿದ್ಧರಾಮಯ್ಯನವರ ಸರ್ಕಾರ ಬಿದ್ದುಹೋಯಿತು. ಅದಕ್ಕೆ ಲಿಂಗಾಯತರೇ ಕಾರಣರೆಂದು ಲಿಂಗಾಯತ ಸಮುದಾಯದ ಮೇಲೆ ಗೂಬೆ ಕೂಡ್ರಿಸುವ ರಾಜಕೀಯ ತರಹದ ಟೀಕೆ ಟಿಪ್ಪಣಿಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದವು.
11) 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪರಾಭವಗೊಂಡು ಜಂಟಿ ಸರ್ಕಾರದ ಕೆಲವು ತಿಂಗಳ ನಂತರ ಬಿಜೆಪಿ ಪಕ್ಷ ಅಧಿಕಾರ ಚುಕ್ಕಾಣೆ ಹಿಡಿಯಿತು. ಬಿಜೆಪಿಯ ಧುರೀಣ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ಆಗ ಅವರ ಮುಂದೆ ಇದ್ದದ್ದು ಕೇವಲ ಹಿಂದಿನ ಸರ್ಕಾರವು ತಾತ್ವಿಕವಾಗಿ ಒಪ್ಪಿಕೊಂಡಿದ್ದ ಗೊರುಚ ಸಮಿತಿಯ ವರದಿ ಮಾತ್ರ. ಯಾವುದೇ ರೀತಿಯ ನಕ್ಷೆಗಳು, ಅಂದಾಜುಗಳು ಇನ್ನೂ ತಯಾರಾಗಿರಲಿಲ್ಲ. ಟೆಂಡರ್ ಕರೆದಿರಲಿಲ್ಲ. ಕೆಲಸದ ಆದೇಶ ನೀಡಿರಲಿಲ್ಲ. ಅವು ತಯಾರಾಗಲು ಕನಿಷ್ಟ ಒಂದು ವರ್ಷದ ಅವಧಿಯಾದರೂ ಬೇಕಾಗಿತ್ತು.
12) ಆದರೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗುವುದಕ್ಕೆ ಕೆಲವೇ ದಿನಗಳು ಬಾಕಿ ಇದ್ದವು. ಯಡಿಯೂರಪ್ಪನವರು ರಾಜಕೀಯ ಲಾಭಕ್ಕಾಗಿ ಅನುಭವ ಮಂಟಪ ಯೋಜನೆಯನ್ನು ಬಳಸಿಕೊಳ್ಳಲು ಮುಂದಾದರು. ಅದಕ್ಕೆ ಕಾರಣ ಬಸವಕಲ್ಯಾಣ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ತುಂಬ ಗಣನೀಯ ಪ್ರಮಾಣದಲ್ಲಿವೆ. ಅದೇ ಸಮಯದಲ್ಲಿ ಲಿಂಗಾಯತ ಮತ್ತು ಮರಾಠಾ ಸಮುದಾಯಗಳಿಗೆ ಪ್ರತ್ಯೇಕವಾಗಿ ಎರಡು ಅಭಿವೃದ್ಧಿ ನಿಗಮಗಳನ್ನು ನಿರ್ಮಿಸಿದರು.
13) ತರಾತುರಿಯಲ್ಲಿ ಉಪಚುನಾವಣೆಯ ಕಾಲದಲ್ಲಿ ಆರುನೂರು ಕೋಟಿ ರೂಪಾಯಿಯ ಕಚ್ಚಾ ಅಂದಾಜಿಗೆ ಇನ್ನೂರು ಕೋಟಿ ರೂಪಾಯಿಗಳನ್ನು ಅನುಭವ ಮಂಟಪದ ಕಾರ್ಯ ಪ್ರಾರಂಭಿಸಲು ಬಿಡುಗಡೆ ಮಾಡಿದರು. ಬಹು ಅದ್ದೂರಿಯಿಂದ ಅನುಭವ ಮಂಟಪದ ಕಟ್ಟಡದ ಶಂಕುಸ್ಥಾಪನೆಯನ್ನು ಯಡಿಯೂರಪ್ಪನವರು ನೆರವೇರಿಸಿ ಬಿಟ್ಟರು. ಸರಿಯಾದ ನಕ್ಷೆಗಳು, ಅಂದಾಜು ಪತ್ರಿಕೆಗಳು, ಟೆಂಡರ್ ಪೇಪರುಗಳು ತಯಾರಾಗಿ ಟೆಂಡರ್ ಕರೆಯಲು ಮುಂದೆ ಎರಡು ವರ್ಷ ಸಮಯ ಬೇಕಾಯಿತು. ಅಂತೂ ಇಂತು ತಡವಾಗಿಯಾದರೂ ನೂತನ ಅನುಭವ ಮಂಟಪದ ನಿರ್ಮಾಣ ಕಾರ್ಯಗಳು ಪ್ರಾರಂಭವಾದವು.
14) ಈ ಸಂದರ್ಭದಲ್ಲಿ ಬಸವ ಕಲ್ಯಾಣದ ಶರಣ ಸ್ಥಳಗಳ ಪುನರ್ ನಿರ್ಮಾಣ ಮತ್ತು ಅನುಭವ ಮಂಟಪದ ಅಭಿವೃದ್ಧಿ ಕುರಿತಾದ ರಾಜಕೀಯ ಘಟನಾವಳಿಗಳನ್ನು ನೆನಪಿಸಿಕೊಳ್ಳುವುದು ಮುಂದಿನ ಮಾರ್ಗಕ್ಕೆ ಸೂಕ್ತವೆನಿಸುತ್ತದೆ.
ಅ) ಪ್ರಪ್ರಥಮವೆಂದರೆ ಬಹಳ ದಿನಗಳಿಂದ ಬಸವಕಲ್ಯಾಣದ ಜನರು ಅಲ್ಲಿನ ಶರಣ ಸ್ಥಳಗಳ ಅಭಿವೃದ್ಧಿ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಾಯಿಸುತ್ತಲೇ ಇದ್ದರು. 2003ರಲ್ಲಿ ನಡೆಯಲಿದ್ದ ಬಸವ ಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಸಮಯದಲ್ಲಿ ಸ್ಥಳೀಯ ಜನರು ಬಸವ ಕಲ್ಯಾಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶರಣ ಸ್ಥಳಗಳ ಅಭಿವೃದ್ಧಿ ಮಾಡಲು ಮತ್ತು ಅದಕ್ಕೆ ತಕ್ಷಣ ಸಮಯ ನಿಗದಿ ಮಾಡುವ ಘೋಷಣೆ ಮಾಡದಿದ್ದರೆ ಆ ಚುನಾವಣೆಯನ್ನು ಬಹಿಷ್ಕರಿಸಲು ಚಳುವಳಿ ಹೂಡಿದರು. ಆಗ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಶ್ರೀ ಎಸ್.ಎಂ. ಕೃಷ್ಣ ಅವರು ಹಿರಿಯ ಐ.ಎ.ಎಸ್. ಅಧಿಕಾರಿಯಾಗಿದ್ದ ಡಾ. ಎಸ್.ಎಂ.ಜಾಮದಾರ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನವೆಂಬರ 2003ರಲ್ಲಿ ನೇಮಿಸಿದರು. ಅದರ ವರದಿ ತಯಾರಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಫೆಬ್ರುವರಿ 2004ರಲ್ಲಿ. ವರದಿ ಸಲ್ಲಿಕೆಯಾದ ಒಂದೇ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ಘೋಷಣೆಯಾದವು. ಅದರಿಂದ ಯಾವ ಕ್ರಮವನ್ನೂ ತೆಗೆದುಕೊಳ್ಳಲು ಆಗಿನ ಶ್ರೀ ಎಸ್.ಎಂ.ಕೃಷ್ಣ ಅವರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.
ಆ) 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಯಿತು. ಶ್ರೀ ಧರ್ಮಸಿಂಗ್ ಅವರ ನೇತೃತ್ವದಲ್ಲಿ ಜನತಾದಳ (ಎಸ್) ಮತ್ತು ಕಾಂಗ್ರೆಸ್ ಪಕ್ಷಗಳ ಸಂಯುಕ್ತ ಸರ್ಕಾರ ರಚನೆಯಾಯಿತು. ಸುದೈವದಿಂದ ಬಸವಕಲ್ಯಾಣ ಅಭಿವೃದ್ಧಿಗೆ ವಿಶೇಷ ಅಧಿಕಾರಿಯಾಗಿದ್ದವರೇ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದರು. ತಾವೇ ಸಲ್ಲಿಸಿದ್ದ ಮತ್ತು ನಿರ್ಣಯವಾಗದೆ ಇದ್ದ ವರದಿಯನ್ನು ಅವರು ಸಚಿವ ಸಂಪುಟಕ್ಕೆ ಸಲ್ಲಿಸುವಲ್ಲಿ ಅನೇಕ ತರಹದ ರಾಜಕೀಯ ಸನ್ನಿವೇಶಗಳನ್ನು ಎದುರಿಸಬೇಕಾಯಿತು (ಪ್ರಮುಖವಾಗಿ, ಬೇರೆ ಪಕ್ಷದ ಸರ್ಕಾರ ಘೋಷಿಸಿದ್ದನ್ನು ತಮ್ಮ ಪಕ್ಷ ಏಕೆ ಕೈಗೆತ್ತಿಕೊಳ್ಳಬೇಕು ಎನ್ನುವುದು ಮುಖ್ಯ ಕಾರಣವಾಗಿತ್ತು). ಅದರಿಂದ ಐದು ತಿಂಗಳು ತಡವಾದರೂ ಆ ವರದಿ ಸಚಿವ ಸಂಪುಟದಿಂದ ಅನುಮೋದನೆ ಪಡೆದದ್ದು 2004ರ ನವೆಂಬರದಲ್ಲಿ.
ಇ) ವಿಶೇಷಾಧಿಕಾರಿಯ ಅಂಗೀಕೃತ ವರದಿಗೆ ಕಾನೂನಿನ ರೂಪ ನೀಡುವಾಗ ಲಿಂಗಾಯತರ ಪರವಾಗಿದ್ದ ಓರ್ವ ಸಚಿವರ ಅಸಹಕಾರದಿಂದ ಆ ಪ್ರಯತ್ನಕ್ಕೆ ಮತ್ತೆ ಆರು ತಿಂಗಳು ತಡವಾಯಿತು. (ಈಗ ಅವರು ಜೀವಂತವಾಗಿಲ್ಲ, ಆದ್ದರಿಂದ ಅವರ ಬಗ್ಗೆ ಬರೆಯುವುದು ಸೂಕ್ತವಲ್ಲ) ಆದಾಗ್ಯೂ ಆ ಕರಡು ವಿಧಾನ ಮಂಡಲದಲ್ಲಿ ಚರ್ಚೆಗೆ ಬಂದಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅದು 2005ರಲ್ಲಿ ಸರ್ವಾನುಮತದಿಂದ ಅನುಮೋದನೆ ಪಡೆಯಿತು.
ಈ) 2005-2006ರ ಆಯವ್ಯಯದಲ್ಲಿ ದಿವಂಗತ ಶ್ರೀ ಧರ್ಮಸಿಂಗ್‍ರ ಸಚಿವ ಸಂಪುಟದಲ್ಲಿ ಅಂದು ಹಣಕಾಸು ಸಚಿವರಾಗಿದ್ದ ಈಗಿನ ಮುಖ್ಯಮಂತ್ರಿಗಳಾಗಿರುವ ಶ್ರೀ ಸಿದ್ಧರಾಮಯ್ಯನವರು ಪ್ರಪ್ರಥಮವಾಗಿ ರೂಪಾಯಿ ಐದು ಕೋಟಿಗಳನ್ನು ಆಯವ್ಯಯದಲ್ಲಿ ಒದಗಿಸಿದರು. ತಡವಾಗಿ ಕೆಲಸಗಳು ಪ್ರಾರಂಭವಾದ್ದರಿಂದ 2005- 2006ನೆಯ ವರ್ಷದಲ್ಲಿ ಕೇವಲ 50 ಲಕ್ಷ ರೂಪಾಯಿಗಳು ಮಾತ್ರ ಖರ್ಚಾಗಿ ಉಳಿದ ಹಣ ಲ್ಯಾಪ್ಸ್ ಆಯಿತು. ಅಷ್ಟರೊಳಗೆ ಕಾಂಗ್ರೆಸ್-ಜೆಡಿಎಸ್ ಸಂಯುಕ್ತ ಸರ್ಕಾರ ಬಿದ್ದು ಹೋಯಿತು.
ಉ) ಎರಡನೆಯ ಜೆಡಿಎಸ್-ಬಿಜೆಪಿ ಸಂಯುಕ್ತ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕುಮಾರಸ್ವಾಮಿಯವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಶ್ರೀ ಯಡಿಯೂರಪ್ಪನವರು 2006-2007ರ ಆಯವ್ಯಯದಲ್ಲಿ ರೂ 20 ಕೋಟಿ ಹಣ ಒದಗಿಸಿದರು. 2007 ರಿಂದ ಬಸವಕಲ್ಯಾಣದಲ್ಲಿನ ಬಹುತೇಕ ಶರಣ ಸ್ಥಳಗಳ ಅಭಿವೃದ್ಧಿ ಕೆಲಸಗಳು ಚುರುಕುಗೊಂಡವು. ಆ ಕೆಲಸಗಳು ನಡೆಯುತ್ತಿರುವಾಗಲೇ ಬಿಜೆಪಿ-ಜೆಡಿಎಸ್ ಎರಡನೆಯ ಸಂಯುಕ್ತ ಸರ್ಕಾರವೂ ಬಿದ್ದು ಹೋಯಿತು. ಕೆಲ ಸಮಯ ರಾಷ್ಟ್ರಪತಿಗಳ ಅಧಿಕಾರವಿತ್ತು.
ಊ) 2009ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀ ಯಡಿಯೂರಪ್ಪನವರು ಬಿಜೆಪಿ ಪಕ್ಷದ ಪ್ರಥಮ ಸ್ವತಂತ್ರ ಸರ್ಕಾರ ರಚಿಸಿದರು. ಅವರು ಬಸವಕಲ್ಯಾಣದ ಶರಣ ಸ್ಥಳಗಳ ಅಭಿವೃದ್ಧಿಗೆ ಮತ್ತೆ ರೂಪಾಯಿ 20 ಕೋಟಿ ಹಣಕಾಸು ಒದಗಿಸಿದರು.
ಋ) 2012ರ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡು ಕಾಂಗ್ರೆಸ್ ಮತ್ತೆ ಕರ್ನಾಟಕದಲ್ಲಿ ಅಧಿಕಾರ ಪಡೆಯಿತು. ಇದೇ ಅವಧಿಯ ಕೊನೆಯ ವರ್ಷದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಮತ್ತೆ ಪ್ರಾರಂಭವಾಯಿತು. ರಾಜಕೀಯ ಕಾರಣಗಳಿಗೆ ಸಿದ್ಧರಾಮಯ್ಯನವರು ಗೊರುಚ ಸಮಿತಿಯ ರಚನೆ ಮಾಡಿ ಅನುಭವ ಮಂಟಪದ ಕಟ್ಟಡ ಕಟ್ಟುವ ಕುರಿತು ವರದಿ ಪಡೆದು ಒಪ್ಪಿಕೊಂಡರು, ಆದರೆ ಅವರ ಸರ್ಕಾರವೂ ಬಿದ್ದು ಹೋಯಿತು.
ಎ) ನಂತರ ನಡೆದ ಚುನಾವಣೆಯಲ್ಲಿ ಮತ್ತೇ ಅಧಿಕಾರಕ್ಕೆ ಬಂದ ಬಿಜೆಪಿಯ ಶ್ರೀ ಯಡಿಯೂರಪ್ಪನವರು ರೂಪಾಯಿ 200 ಕೋಟಿ ನೀಡಿ ಅನುಭವ ಮಂಟಪದ ಕೆಲಸಕ್ಕೆ ಚಾಲನೆ ನೀಡಿದರು. ಆದರೆ ಎರಡು ವರ್ಷಗಳ ನಂತರ ಆ ಕೆಲಸಗಳು ಪ್ರಾರಂಭವಾಗುವ ವೇಳೆಗೆ ಯಡಿಯೂರಪ್ಪನವರು ಮತ್ತೆ ಅಧಿಕಾರ ಕಳೆದುಕೊಂಡರು.
ಏ) 2024ರಲ್ಲಿ ಅಧಿಕಾರವನ್ನು ಮತ್ತೆ ಪಡೆದುಕೊಂಡ ಕಾಂಗ್ರೆಸ್ ಸರ್ಕಾರ 2025 ಸೆಪ್ಟೆಂಬರ್ ವರೆಗೆ ರೂ. 90 ಕೋಟಿ ಹಣಕಾಸು ಒದಗಿಸಿದೆ. ಈಗಿರುವ ಕೆಲಸಗಳು ಮುಗಿಯಲು ಇನ್ನೂ 452 ಕೋಟಿ ರೂಪಾಯಿಗಳ ಅಗತ್ಯವಿದೆ. ಬಿಡುಗಡೆಯಾದ ಹಣವೆಲ್ಲ ಖರ್ಚಾಗಿ ಹೋಗಿದೆ. ಮುಂದೆ ಯಾವಾಗ, ಎಷ್ಟು ಹಣ ದೊರೆಯುವುದೋ ಬಸವಣ್ಣನಿಗೇ ಗೊತ್ತು!
ಕಳೆದ 20 ವರ್ಷಗಳಲ್ಲಿ ನಡೆದ ಈ ಎಲ್ಲ ರಾಜಕೀಯ ಸ್ಥಿತ್ಯಂತರಗಳು ಸೂಚಿಸುವ ಮಹತ್ವದ ಅಂಶವೆಂದರೆ ಈ ಎರಡು ದಶಕಗಳಲ್ಲಿ ನಡೆದ ಕರ್ನಾಟಕದ ರಾಜಕೀಯದ ಏರುಪೇರುಗಳಲ್ಲಿ ಸಿಲುಕಿ 12ನೆಯ ಶತಮಾನದ ಬಸವಣ್ಣನವರ ಅನುಭವ ಮಂಟಪದ ನೂತನ ಕಟ್ಟಡದ ಕೆಲಸಗಳು ಏದುಸಿರು ಬಿಡುತ್ತಾ ನಿಧಾನವಾಗಿ ಸಾಗುತ್ತಾ ರಾಜ್ಯ ರಾಜಕೀಯ ಚದುರಂಗದಾಟದಲ್ಲಿ ಲಿಂಗಾಯತ ಮತಗಳನ್ನು ಓಲೈಸುವ ಎಲ್ಲ ರಾಜಕೀಯ ಪಕ್ಷಗಳ ರಾಜಕೀಯ ಆಟಕ್ಕೆ ಅದು ದಾಳವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
15) ಅನುಭವ ಮಂಟಪದ ಶಂಕುಸ್ಥಾಪನೆಯ ದಿನ ಅಂದಿನ ರಾಜ್ಯ ಬಿಜೆಪಿ ಸರ್ಕಾರವು ಪತ್ರಿಕೆಗಳಿಗೆ ನೀಡಿದ ಜಾಹೀರಾತುಗಳಲ್ಲಿ ನೂತನ ‘ಅನುಭವ ಮಂಟಪವು ಸನಾತನ ಧರ್ಮದ ಪುನರುತ್ಥಾನ’ವೆಂದು ಬಣ್ಣಿಸಲಾಗಿತ್ತು. ವಿಚಿತ್ರವೇನೆಂದರೆ ವಾಸ್ತವಿಕ ಸತ್ಯ ಅದರ ವಿರುದ್ಧವಾದದ್ದು! ಅದು ಮುಂಬರುವ ದಿನಗಳ ಮುನ್ಸೂಚನೆಯಂತೆ ಭಾಸವಾಗುತ್ತದೆ. ಇದನ್ನು ಎಲ್ಲ ಬಸವಾಭಿಮಾನಿಗಳೂ ಹಾಗೂ ಲಿಂಗಾಯತರು ಎಂದೂ ಮರೆಯಕೂಡದು. ಮರೆತರೆ ಮತ್ತು ಸಕಾಲದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಮುಂದೊಂದು ದಿನ ನೂತನ ಅನುಭವ ಮಂಟಪದ ಭವ್ಯ ಕಟ್ಟಡವು ‘ಸನಾತನಿಗಳ ಕಾರ್ಯಾಚರಣೆಯ ಕೇಂದ್ರ’ವಾಗಿ ಮಾರ್ಪಟ್ಟರೆ ಸೋಜಿಗವೇನೂ ಅಲ್ಲ.

ಈಗಿನ ಸ್ಥಿತಿ:

ನೂತನ ಅನುಭವ ಮಂಟಪ ಯೋಜನೆಯು ಸಂಪೂರ್ಣವಾಗಿ ಸರ್ಕಾರದ ಹಣದಿಂದ ಪ್ರಾರಂಭವಾಗಿ ಕೊನೆಯವರೆಗೂ ಸರ್ಕಾರದ ಮೇಲೆಯೇ ಅವಲಂಬಿತವಾಗಿದೆ. ಅನೇಕಾನೇಕ ರಾಜಕೀಯ ತಿರುವುಗಳನ್ನು ಅನುಭವಿಸುತ್ತ ಈ ಕೆಲಸಗಳು ಪ್ರಾರಂಭವಾಗಿ ಈ ವರೆಗೆ ಸುಮಾರು ನಾಲ್ಕು ವರ್ಷಗಳು ಸಂದಿವೆ. ಸರ್ಕಾರದಿಂದ ಬಿಡುಗಡೆಯಾಗಿರುವ ಎರಡು ನೂರು ತೊಂಬತ್ತು ಕೋಟಿಗಳಷ್ಟು ಮಾತ್ರ ಈವರೆಗೆ ಖರ್ಚಾಗಿದೆ. ಈಗ ಪರಿಷ್ಕೃತ ಅಂದಾಜಿನ ವೆಚ್ಚ 742 ಕೋಟಿ ರೂಪಾಯಿಗಳು. ಅದರ ಜೊತೆಗೆ ಬಿಟ್ಟು ಹೋದ ಕೆಲವು ಕೆಲಸಗಳಿಗೆ ಇನ್ನೂ ಅನುಮೋದನೆ ದೊರೆತಿಲ್ಲ. ಆ ಖರ್ಚನ್ನೂ ಸೇರಿಸಿದರೆ ಸರಿಸುಮಾರು 800 ಕೋಟಿ ರೂಪಾಯಿಗಳು ಅಗತ್ಯ. ಸರ್ಕಾರವು ಈವರೆಗೆ ಅನುಮೋದನೆ ನೀಡಿದ ಮೊತ್ತ 612 ಕೋಟಿ ರೂಪಾಯಿಗಳು ಮತ್ತು ಬಿಡುಗಡೆ ಮಾಡಿದ್ದು ಕೇವಲ 290 ಕೋಟಿ ರೂಪಾಯಿಗಳು. ಅಂದರೆ ಇನ್ನೂ ಸರ್ಕಾರದಿಂದ ಬರಬೇಕಾದ ಮೊತ್ತ ರೂಪಾಯಿ 322 ಕೋಟಿ. ಬಿಟ್ಟುಹೋದ ಕೆಲಸಗಳನ್ನು ಅನುಮೋದಿಸಿ ಹೆಚ್ಚುವರಿಯಾಗಿ ಇನ್ನೂ 145 ಕೋಟಿ ಒಟ್ಟಾರೆ ರೂ. 800 ಕೋಟಿ ಆಗಬಹುದು. ಅಂದರೆ ಈಗ ಬಿಡುಗಡೆಯಾಗಿದ್ದನ್ನು ಬಿಟ್ಟು 510 ಕೋಟಿ ರೂಪಾಯಿಗಳು ಸರ್ಕಾರದಿಂದ ಬಿಡುಗಡೆಯಾದರೆ ಪೂರ್ಣ ಯೋಜನೆ ಮುಗಿಯಬಹುದು. ಅವೆಲ್ಲ ಮುಗಿಯಲು ಕನಿಷ್ಟ ಇನ್ನೂ ಎರಡು ಮೂರು ವರ್ಷಗಳಾದರೂ ಅಗತ್ಯ. ಆವರೆಗೆ ಮುಂದಿನ ಖರ್ಚಿಗೆ ಅಗತ್ಯವಾದ ಹಣಕಾಸು ಸಕಾಲಕ್ಕೆ ಬಿಡುಗಡೆಯಾಗಬೇಕು. ಆ ವರೆಗೆ ಈಗಿರುವ ಸರ್ಕಾರ ಅಧಿಕಾರದಲ್ಲಿರಬೇಕು. ಇಲ್ಲವಾದರೆ ಕೆಲಸಗಳು ಇನ್ನೂ ವಿಳಂಬವಾಗಬಹುದು.
(ಮುಂದುವರಿಯುತ್ತದೆ)

Previous post ಅಲ್ಲೀ ಸಾಹೇಬರು
ಅಲ್ಲೀ ಸಾಹೇಬರು
Next post ಗಜಲ್…
ಗಜಲ್…

Related Posts

ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
Share:
Articles

ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ

April 29, 2018 ಡಾ. ಎಸ್.ಎಮ್ ಜಾಮದಾರ
ಕಳೆದ ಜುಲೈ ತಿಂಗಳಿಂದ ನಡೆಯುತ್ತಿರುವ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ದಿನೆ ದಿನೆ ಪ್ರಬಲಗೊಳ್ಳುತ್ತಿದೆ. ಬೇರೆ ಪಕ್ಷಗಳವರೂ ಈ ಹೊರಾಟವನ್ನು ಸೇರುತ್ತಿದ್ದರಿಂದ ಇದು...
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
Share:
Articles

ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ

October 13, 2022 ಡಾ. ಬಸವರಾಜ ಸಬರದ
ಅಮುಗೆ ರಾಯಮ್ಮ 116 ವಚನಗಳನ್ನು ರಚಿಸಿರುವ ಮಹತ್ವದ ವಚನಕಾರ್ತಿ. ಇವರ ವಚನಗಳಲ್ಲಿ ವಸ್ತು ವೈವಿಧ್ಯತೆಯಿದೆ. ಸರಳ ಮಾತುಗಳಲ್ಲಿ, ನೇರ ನುಡಿಗಳಲ್ಲಿ ಶರಣರ ತತ್ವಗಳನ್ನು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಇದ್ದಷ್ಟೇ…
ಇದ್ದಷ್ಟೇ…
January 10, 2021
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
Copyright © 2026 Bayalu