
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಪ್ರಸ್ತುತ ಲೇಖನದಲ್ಲಿ ‘ವಚನ ಗುಮ್ಮಟ’ವೆಂದು ಪ್ರಶಂಸಿಸಲ್ಪಟ್ಟ ಫ.ಗು. ಹಳಕಟ್ಟಿಯವರ (1880-1964) ಜೀವನ ಚರಿತ್ರೆಯನ್ನು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ. ಅವರ ಜೀವನ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಹಲವು ಮಾರ್ಗಗಳಿವೆ. ಅದರಲ್ಲಿ ಪ್ರಮುಖವಾಗಿ ಅವರ ಬಗ್ಗೆ ಬೇರೆಯವರು ಬರೆದ ಬಯೋಗ್ರಫಿಗಳು ಮತ್ತು ತಾವೇ ಬರೆದ ಆತ್ಮ ಚರಿತ್ರೆ/ಸ್ವಚರಿತ್ರೆ. ಪ್ರಸ್ತುತ ಲೇಖನದಲ್ಲಿ ಹಳಕಟ್ಟಿಯವರೇ ಬರೆದ ತಮ್ಮ ಜೀವನದ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. ಹಳಕಟ್ಟಿಯವರು ತಮ್ಮ ಚರಿತ್ರೆಯನ್ನು ಸುಮಾರು 90 ಪುಟಗಳಾಗುವಷ್ಟು ಬರೆದಿದ್ದಾರೆ. ಈ ಸ್ವಚರಿತ್ರೆಯನ್ನು ಶಾಂತರಸವರು ಸಂಪಾದಿಸಿರುವ ಹಳಕಟ್ಟಿ ‘ನುಡಿಪುರುಷ’ದಲ್ಲಿ ನೋಡಬಹುದು. ಇದನ್ನು ಪ್ರಕಟಕರು ಆತ್ಮ ಚರಿತ್ತೆಯೆಂದು ಪ್ರಕಟಗೊಳಿಸಿದ್ದಾರೆ. ಆದರೆ ವಚನಕಾರರಿಗೆ ಹಾಗು ವೈಯಕ್ತಿಕವಾಗಿ ನನಗೆ ಆತ್ಮ/ಮರುಜನ್ಮ ಇಂತಹ ವಿಷಯಗಳಲ್ಲಿ ನಂಬಿಕೆ ಇರದೆ ಇರುವುದರಿಂದ ನಾನು ಈ ಲೇಖನದಲ್ಲಿ ಆ ಪದವನ್ನು ಬಳಸದೆ, ‘ಸ್ವ ಚರಿತ್ರೆ’ಯೆಂದು ಬಳಸಿದ್ದೇನೆ. ಅವರ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಅವರ ಚರಿತ್ರೆಯನ್ನು ಓದುತ್ತಿದ್ದೇವೆಯೋ ಅಥವಾ ಆಧುನಿಕ ಕಾಲಘಟ್ಟದಲ್ಲಿ 12ನೇ ಶತಮಾನದ ವಚನಗಳು ಅಥವಾ ಪುರಾತನ ಲಿಂಗಾಯತ ಸಾಹಿತ್ಯ ಹಾದು ಬಂದ ಚರಿತ್ರೆಯನ್ನು ನೋಡುತ್ತಿದ್ದೇವೆಯೋ ಎಂಬ ಅನುಮಾನ ಉಂಟಾಗುತ್ತದೆ. ಏಕೆಂದರೆ ಹಳಕಟ್ಟಿಯವರು ತಮ್ಮ ಜೀವನವೇ ವಚನಗಳ ಅಧ್ಯಯನ ಎಂದು ಭಾವಿಸಿರುವಂತಿದೆ.
ನವೋದಯ ಕನ್ನಡ ಸಾಹಿತ್ಯದಲ್ಲಿ (1900-1950) ಆತ್ಮ/ಸ್ವಚರಿತ್ರೆಗಳು ವಿಫುಲವಾಗಿವೆ. ಇವು ಆಧುನಿಕ, ಪಾಶ್ಚಾತ್ಯ ಮಾದರಿಯಲ್ಲಿ ಬರೆಯಲ್ಪಟ್ಟಿರುವಂತವು. ಪಾಶ್ಚಾತ್ಯ ಮಾದರಿಯ ‘ವ್ಯಕ್ತಿತ್ವ’ ಈ ಪ್ರಕಾರದ ಬರವಣಿಗೆಯನ್ನು ರೂಪಿಸಿರುತ್ತದೆ. ಸಮುದಾಯದಿಂದ ಅಂತರ ಕಾದುಕೊಳ್ಳುವ ವ್ಯಕ್ತಿತ್ವವು ಸ್ವಚರಿತ್ರೆಯನ್ನು ರೂಪಿಸಿದೆ ಎಂದು ಅನೇಕರು ವಾದಿಸುತ್ತಾರೆ. ಈ ವ್ಯಕ್ತಿತ್ವ ಪಾಶ್ಚಾತ್ಯರಲ್ಲಿ ಉಂಟಾದ ವ್ಯಕ್ತಿ-ಸಮುದಾಯದ ವಿಭಜನೆಯ ಫಲವಾಗಿದೆ ಎಂದು ಅನೇಕರು ತೋರಿಸಿದ್ದಾರೆ . ಸ್ವಚರಿತ್ರೆಯ ಮೂಲಕ ತಮ್ಮತನ, ತಮ್ಮ ಗುರುತನ್ನು ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ನವೋದಯದ ಡಿ.ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನರಾಮ ರಾಯರು ಈ ಪಾಶ್ಚಾತ್ಯ ಮಾದರಿಯ ಸ್ವಚರಿತ್ರೆಯ ರೂವಾರಿಗಳು. ಆಧುನಿಕ, ಪಾಶ್ಚಾತ್ಯ ‘ವ್ಯಕ್ತಿತ್ವ’ದ ವಿಚಾರಧಾರೆಗೆ ಪೂರಕವಾಗಿ ಇವರ ಸ್ವಚರಿತ್ರೆಗಳು ಬರೆಯಲ್ಪಟ್ಟಿವೆ. ತಾವು ಯಾವ ಸಮಾಜ/ಸಮುದಾಯದಿಂದ ಬಂದಿದ್ದರೋ ಆ ಸಮುದಾಯದಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನವನ್ನು ತಮ್ಮ ಸ್ವಚರಿತ್ರೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮಾಡುತ್ತಾರೆ. ತಮ್ಮ ವ್ಯಕ್ತಿತ್ವದ ಕಡೆಗೆ ಹೆಚ್ಚು ಗಮನ ಕೊಡುವ ಈ ಸ್ವಚರಿತ್ರಾಕಾರರು, ತಮ್ಮ ಸಮಾಜ/ ಸಮುದಾಯದಿಂದ, ಅದರ ಸಾಂಪ್ರದಾಯಿಕತ್ವದಿಂದ ದೂರ ಇದ್ದೇವೆ ಎಂಬ ಭಾವನೆಯನ್ನು ಓದುಗರಲ್ಲಿ ಮೂಡಿಸುವ ಹಾಗೆ ತಮ್ಮ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಪ್ರಮುಖವಾಗಿ ಎರಡು ವಿಷಯಗಳನ್ನು ಈ ಸ್ವಚರಿತ್ರಾಕಾರರಲ್ಲಿ ಕಾಣಬಹುದು: 1. ಬಾಲ್ಯ, ಯೌವ್ವನ ಹಾಗು ಮದುವೆಯ ಹಂತದವರೆಗೆ ಈ ಸ್ವಚರಿತ್ರಾಕಾರರು ತಮ್ಮ ಸಮಾಜ/ಸಮುದಾಯದ ಜೊತೆಗೆ ಸಂಬಂಧವಿದೆಯೆಂಬಂತೆ ಬರೆಯುತ್ತಾರೆ. ನಂತರದ ಜೀವನ ಚರಿತ್ರೆ ಸಮುದಾಯದಿಂದ ಪ್ರಜ್ಞಾಪೂರ್ವಕವಾಗಿ ದೂರ ಸರಿಯುವ ಮತ್ತು ತಮ್ಮ ವ್ಯಕ್ತಿತ್ವವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. 2. ಸಮಾಜ/ಸಮುದಾಯದ ಬಗ್ಗೆ ಬರೆದರೂ ಅದು ಪ್ರಾದೇಶಿಕ ಅಥವಾ ರಾಷ್ಟ್ರೀಯ ಮಟ್ಟದ್ದು ಎಂಬಂತೆ ಬಿಂಬಿಸುತ್ತಾ ಅವರ ಮೂಲ ಸಮುದಾಯದಿಂದ ಅಂತರ ಕಾಯ್ದುಕೊಳ್ಳುವ ಪ್ರಮೇಯವನ್ನು ಪ್ರದರ್ಶಿಸುತ್ತಾರೆ. ಅಂತರ ಕಾಯ್ದುಕೊಳ್ಳುವ ಈ ಪ್ರಕ್ರಿಯೆ ಸಾಮಾನ್ಯವಾಗಿ ತಮ್ಮ ಮತದ, ಸಮುದಾಯದ ಅಥವಾ ಜಾತಿಯ ಆಚಾರ-ವಿಚಾರಗಳಿಗೆ ಸಂಬಂಧಿಸಿದ್ದಿರುತ್ತದೆ. ಹಾಗಂತ ಈ ವಿಚಾರಗಳಿಂದ ಅವರು ಸಂಪೂರ್ಣವಾಗಿ ದೂರವಾಗಿರುತ್ತಾರೆ ಎಂದರ್ಥವಲ್ಲ. ತಮ್ಮ ಸಮಾಜದ/ಸಮುದಾಯದ ಆಚಾರ-ವಿಚಾರಗಳನ್ನು ಸಾಂಪ್ರದಾಯಿಕವಾಗಿ ಅರ್ಥೈಸದೆ, ಹೊಸ, ಪ್ರಗತಿಪರ ವ್ಯಾಖ್ಯಾನಗಳಿಗೆ ಒಳಪಡಿಸಿ, ಜಾತ್ಯಾತೀತಗೊಳಿಸುವ ಮತ್ತು ಸಾರ್ವಜನಿಕಗೊಳಿಸುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಇದು ಮೇಲ್ಮೈಯಲ್ಲಿ ತಮ್ಮ ಸಮಾಜ/ಸಮುದಾಯದ ಸಹಾಯದಿಂದ ಅಥವಾ ಹೆಸರಿನಿಂದ ಮಾಡುವ ಪ್ರಯತ್ನಗಳಾಗಿರದೆ ವೈಯಕ್ತಿಕ ಅಥವಾ ಆಧುನಿಕ ಸಂಘ/ಸಂಸ್ಥೆಗಳ ಸಹಾಯದಿಂದ ಮಾಡುವ ಪ್ರಯತ್ನಗಳಾಗಿರುತ್ತವೆ.
ಆದರೆ ಮೇಲೆ ಉಲ್ಲೇಖಿಸಲ್ಪಟ್ಟ ನವೋದಯ ಲೇಖಕರ ಸಮಕಾಲೀನರಾಗಿದ್ದ ಹಳಕಟ್ಟಿಯವರ ಸ್ವಚರಿತ್ರೆಯಲ್ಲಿ ಅವರು ಕಷ್ಟಪಟ್ಟು ಹುಡುಕಿ, ಸಂಶೋಧಿಸಿ, ಸಂಸ್ಕರಿಸಿ, ವ್ಯಾಖ್ಯಾನಿಸಿ, ಪ್ರಕಟಿಸಿ, ಪಸರಿಸಿದ ವಚನ/ಲಿಂಗಾಯತ ಸಾಹಿತ್ಯ ಚರಿತ್ರೆಯನ್ನು ನೋಡುತ್ತೇವೆಯೇ ಹೊರತು ಅವರ ಬಾಲ್ಯ, ಯೌವ್ವನ, ಸಂಸಾರ, ಕುಟುಂಬ, ಮಕ್ಕಳು, ಹುದ್ದೆ ಅಥವಾ ಮುಪ್ಪಿನ ವಿಷಯಗಳ ಬಗ್ಗೆ ಅಲ್ಲ. ಸಾಂಪ್ರದಾಯಿಕ ಸ್ವಚರಿತ್ರೆಯನ್ನು ಅವರು ಕಟ್ಟಿಕೊಡುವುದಿಲ್ಲ. ಅಲ್ಲಲ್ಲಿ ಖಾಸಗಿ ವಿಷಯಗಳನ್ನು ಪ್ರಸ್ತಾಪಿಸಿದರೂ ಅವರು ತಮ್ಮ ಸ್ವಚರಿತ್ರೆಯಲ್ಲಿ ಸಾಮುದಾಯಿಕವಾಗುವ ಪ್ರಮೇಯವನ್ನು ಪ್ರದರ್ಶಿಸುತ್ತಾರೆ. ಅಂದರೆ ಹಳಕಟ್ಟಿಯವರು ಲಿಂಗಾಯತ ಸಮುದಾಯದ ಸಾಹಿತ್ಯ, ಸಂಸ್ಕೃತಿ, ಧರ್ಮ ಹಾಗು ತಾತ್ವಿಕ ಚಿಂತನೆಗಳು, ಮಠಾಧೀಶರ ಸಖ್ಯ, ಅವರ ಜೊತೆಗೆ ಬೆಳೆಸಿಕೊಂಡಿದ್ದ ಒಡನಾಟ ಮತ್ತು ಭಿನ್ನಾಭಿಪ್ರಾಯಗಳು, ಲಿಂಗಾಯತ ಸಾಹಿತ್ಯವನ್ನು ಪ್ರಚಾರಗೊಳಿಸುವ ಪ್ರಯತ್ನಗಳು, ವಚನ ಸಾಹಿತ್ಯವನ್ನು ಲಿಂಗಾಯತರಲ್ಲಿ ಮತ್ತು ಸಾರ್ವಜನಿಕರಲ್ಲಿ ಪ್ರಸರಣ ಮಾಡುವ ಹುಮ್ಮಸ್ಸು, ಇತ್ಯಾದಿಗಳನ್ನೆ ತಮ್ಮ ಜೀವನ ಚರಿತ್ರೆಯಂತೆ ಬರೆಯುತ್ತಾರೆ.
ತಾವೇ ಶುರು ಮಾಡಿದ ಶಿವಾನುಭವ ಕನ್ನಡ ನಿಯತಕಾಲಿಕೆಯು 25 ವರ್ಷಗಳು ತುಂಬಿದ ಯಶಸ್ಸಿನ ಸಂದರ್ಭದಲ್ಲಿ (ಅಂದರೆ 1951ರಲ್ಲಿ) ಪತ್ರಿಕೆಯು ಹಾದು ಬಂದ ಪ್ರಯಾಣವನ್ನೇ ಗುರುತಿಸುತ್ತಾ ತಮ್ಮ ಚರಿತ್ರೆಯನ್ನು ಕಟ್ಟಿಕೊಡುತ್ತಾರೆ. ಹಾಗಾಗಿ ಇದು ಪತ್ರಿಕೆಯ ಚರಿತ್ರೆಯೋ ಅಥವಾ ತಮ್ಮ ಚರಿತ್ರೆಯೋ ಎಂಬ ಅನುಮಾನ ನಮ್ಮಲ್ಲಿ ಮೂಡುತ್ತದೆ. ಅವರ ಈ ಸ್ವಚರಿತ್ರೆಯನ್ನು ಗಮನಿಸಿದಾಗ ಅದು 20ನೇ ಶತಮಾನದ ಆದಿಯಲ್ಲಿದ್ದ ಲಿಂಗಾಯತರ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಬೌದ್ಧಿಕ ಚರಿತ್ರೆಗಳನ್ನು ತೆರೆದಿಡುತ್ತದೆ. ಹಳಕಟ್ಟಿಯವರ ಜೀವನ ಚರಿತ್ರೆಯಲ್ಲಿ ಕೆಲವೊಂದು ಆದರ್ಶಗಳು ಸಿಗಬಹುದು, ಅವು ನಮಗೆ ಮಾರ್ಗದರ್ಶಕವಾಗಬಹುದು ಎಂದು ತಿಳಿದುಕೊಂಡವರಿಗೆ ನಿರಾಶೆಯಾಗಬಹುದು. ಅಥವಾ ಲೇಖಕರ ಖಾಸಗಿ ಜೀವನದ, ಇದುವರೆಗು ಗೊತ್ತಿರದ ಗುಪ್ಪ ಮಾಹಿತಿಗಳು ಅಥವಾ ಅನುಭವಗಳು ನಮ್ಮ ಗಮನಕ್ಕೆ ಬರಬಹುದು ಎಂದು ಭಾವಿಸಿದರೆ ನಮಗೆ ನಿರಾಸೆಯಾಗಬಹುದು.
ಇದೇ ಕಾರಣಕ್ಕೆ ನಾನು ಹಳಕಟ್ಟಿಯವರು ತಮ್ಮ ಸ್ನೇಹಿತರಿಗೆ ಬರೆದು ಪತ್ರ-ಗುಚ್ಛದ ಮೂಲಕ ಕೆಲವೊಂದು ಖಾಸಗಿ ವಿಷಯಗಳನ್ನು ಅರಿಯಲು ಪ್ರಯತ್ನಿಸುತ್ತೇನೆ. ತಾವು ಬರೆದಿರುವ ಸ್ವಚರಿತ್ರೆ ಮತ್ತು ಖಾಸಗಿ ಪತ್ರಗಳೆರಡರಲ್ಲು ಕೆಲವೊಂದು ವಿಷಯ-ಸಮಾನತೆಯನ್ನು ನೋಡಬಹುದು. ಅಂದರೆ ಸ್ವಚರಿತ್ರೆಯಲ್ಲಿ ವ್ಯಕ್ತಪಡಿಸಿರುವ ವಿಚಾರಗಳಿಗೂ ಪತ್ರಗಳಲ್ಲಿರುವ ವಿಚಾರಗಳಿಗೂ ಸಾಮ್ಯತೆಗಳಿವೆ. ಈ ಸಾಮ್ಯತೆಗಳು ಎರಡನ್ನು ಅಭ್ಯಸಿಸಲು ಈ ಲೇಖನಕ್ಕೆ ಪ್ರೇರಕವಾಗಿವೆ. ಉದಾಹರಣೆಗೆ ಅವರ ಖಾಸಗಿ ವಿಷಯಕ್ಕೂ ಮತ್ತು ಅವರ ಸಂಶೋಧನೆಗೂ ಏನಾದರು ಸಂಬಂಧವಿದೆಯೇ ಎಂದು ತಿಳಿದುಕೊಳ್ಳುವದಕ್ಕಾಗಿ. ಹಳಕಟ್ಟಿಯವರ ಸ್ವಚರಿತ್ರೆಯು ಖಾಸಗಿ ಜೀವನದ ಬಗ್ಗೆ ಅಷ್ಟೊಂದು ಬೆಳಕನ್ನು ಚೆಲ್ಲುವುದಿಲ್ಲವಾದ್ದರಿಂದ, ಅವುಗಳನ್ನು ಒಳಗೊಂಡ ಚರಿತ್ರೆಯೆ ನಿಜವಾದ ಸ್ವಚರಿತ್ರೆಯೆಂದು, ಅದು ಸಾಧ್ಯಾವಾಗದೇ ಇದ್ದಾಗ ಅವರು ಅನೇಕ ಸ್ನೇಹಿತರಿಗೆ ಬರೆದ ಪತ್ರಗಳ ಮೂಲಕ ಖಾಸಗಿ ಜೀವನವನ್ನು ಅರಿತುಕೊಳ್ಳುವ ಹಠವಿಲ್ಲ ಇಲ್ಲಿ. ಪತ್ರಗಳು ಸಹ ಅವರ ಸ್ವಚರಿತ್ರೆಯ ಭಾಗವೆಂದು ತಿಳಿದು, ಅವುಗಳನ್ನು ಸ್ವಚರಿತ್ರೆಯ ಅಧ್ಯಯನಗಳ ಭಾಗವಾಗಿ ಬೆಳೆಯಬೇಕು ಎಂಬ ಆಶಯ ಅಷ್ಟೆ. ಹಾಗಾಗಿ ಹಳಕಟ್ಟಿಯವರ ಸ್ವಚರಿತ್ರೆ ಮತ್ತು ಪತ್ರಗಳನ್ನು ಇಲ್ಲಿ ಅಧ್ಯಯನೊಕ್ಕಳಪಡಿಸಲಾಗಿದೆ.
ಪ್ರಸ್ತುತ ಲೇಖನದಲ್ಲಿ ಹಳಕಟ್ಟಿಯವರ ಸ್ವಚರಿತ್ರೆಯು ಕೇವಲ ತಮ್ಮ ಸ್ವಂತ ಜೀವನ ಚರಿತ್ರೆಯಾಗಿರದೆ ಆಗಿನ ಕಾಲವನ್ನು ವಿಶಾಲಾರ್ಥದಲ್ಲಿ ಅರ್ಥ ಮಾಡಿಕೊಳ್ಳಲು ಗೇಟ್ವೇಯಾಗಿದೆ ಎಂದು ತಿಳಿಯಬಹುದು. ಅದು ನಮ್ಮ ಸಂಶೋಧನಾ ಅಭಿಲಾಶೆ, ಇಚ್ಛೆಯನ್ನು ಜಾಗೃತಗೊಳಿಸುತ್ತದೆ. ತಮ್ಮ ಚರಿತ್ರೆಯನ್ನು ಇತಿಹಾಸದ ಪುಟಗಳೆಂಬಂತೆ ಹಳಕಟ್ಟಿಯವರು ಬರೆದಿದ್ದಾರೆ. ಇತಿಹಾಸವೆಂದು ಓದುತ್ತಿರುವವರಿಗೆ ಅದು ಸ್ವಚರಿತ್ರೆಯೂ ಹೌದು ಎಂಬ ಹೊಳಹುಗಳನ್ನು ಸಹ ನೀಡಲಾಗಿದೆ. ಶಿವಾನುಭವ ಪತ್ರಿಕೆಯನ್ನು ಯಾವ ಉದ್ದೇಶದಿಂದ ಶುರು ಮಾಡಿದ್ದು ಎಂದು ಪ್ರಾರಂಭಿಸುತ್ತಾ, ಅದನ್ನು ಪ್ರಾರಂಭಿಸುವ 20-30 ವರ್ಷಗಳ ಮೊದಲು ಲಿಂಗಾಯತ ಸಮಾಜದಲ್ಲಿ ಇದ್ದ ಸಾಮಾಜಿಕ-ಧಾರ್ಮಿಕ ಪರಿಸ್ಥಿತಿಗಳನ್ನು ವಿವರಿಸುತ್ತಾರೆ. ತಮ್ಮ ಸ್ವಚರಿತ್ರೆಯ ಪುಟಗಳು ಹೇಗೆ ಈ ಪರಿಸ್ಥಿತಿಗಳಲ್ಲಿ ಹುದುಗಿವೆ ಎಂದು ಅವರು ವಿವರಿಸುತ್ತಾ ಹೋಗುತ್ತಾರೆ. ಹಾಗಾಗಿ ಅವರು ಬರೆಯುವ ವಿಷಯಗಳಲ್ಲಿ ಪ್ರಮುಖವಾಗಿ ಈ ಕೆಳಗಿನವುಗಳನ್ನು ಕಾಣಬಹುದು:
1. ವೀರಶೈವ ವಾಜ್ಞಯದ ಬಗ್ಗೆ ಜನತೆಯಲ್ಲಿಯ ಅಜ್ಞಾನ
2. ಧಾರವಾಡ, ವಿಜಾಪುರ ಮತ್ತು ರಬಕವಿಯಲ್ಲಿ ಅವರು ಕೈಗೊಂಡ ಸಂಶೋಧನೆಗಳು
3. ವೀರಶೈವ ಸಮಾಜದಲ್ಲಿಯ ಮತಭೇದಗಳು
4. ಶಿವಶರಣರ ವಾಜ್ಞಯ ಸಂಶೋಧನೆಗಳು
5. ವೀರಶೈವ ಸಂಸ್ಕೃತಿಯ ಸ್ವರೂಪ
6. ವಚನ ಸಂಗ್ರಹಣೆ, ಕ್ರಮಗೊಳಿಸುವ ಮತ್ತು ಸಂಶೋಧಿಸುವ ಪ್ರಕ್ರಿಯೆ
7. ವಚನಗಳ ಪ್ರಪ್ರಥಮ ಪ್ರಕಟಣೆ (ವಚನ ಶಾಸ್ತ್ರ ಸಾರ 1)
8. ವೀರಶೈವ ಮಠಾಧೀಶರ ಜೊತೆ ಇದ್ದ ಸಂಬಂಧ
9. ಶಿವಾನುಭವದ ಪ್ರಾರಂಭ ಮತ್ತು ಅದರಲ್ಲಿ ಬರೆದಿರುವ ಲೇಖನಗಳು
10. ಶಿವಾನುಭವದ ತತ್ವಗಳು ಮತ್ತು ಚರ್ಚೆಗಳು.
ಮೇಲಿನ ವಿಷಯಗಳಲ್ಲಿ ಕೆಲವೊಂದು ಆಯ್ಕೆ ಮಾಡಿ ವಿಶ್ಲೇಷಣೆಗೆ ಒಳಪಡಿಸಬಹುದು. ಹಳಕಟ್ಟಿಯವರು ಪದೆ, ಪದೆ ತಮ್ಮ ಸ್ವಚರಿತ್ರೆಯಲ್ಲಿ ಬರೆಯುವ ವಿಷಯ ತಾವು ಬಾಲ್ಯದ ದಿನಗಳಲ್ಲಿ ಗಮನಿಸಿದ ವಿಷಯ. ಲಿಂಗಾಯತ ಮತ ಮತ್ತು ಸಾಹಿತ್ಯದ ಬಗ್ಗೆ ಇದ್ದ ಅನಾದಾರಗಳು ಮತ್ತು ಅದಕ್ಕೆ ಹಿನ್ನಲೆಯಾಗಿದ್ದ ಕಾರಣಗಳನ್ನು ಬಾಲ್ಯದ ದಿನಗಳಿಂದಲೇ ಗಮನಿಸಿದರು ಎಂದು ಬರೆಯುತ್ತಾರೆ. ಇದು ಹಳಕಟ್ಟಿಯವರ ಸಾಮುದಾಯಿಕ ಪ್ರಜ್ಞೆ ಮತ್ತು ಸಮಾಜದಲ್ಲಿ ಲಿಂಗಾಯತರಿಗೆ ಇದ್ದ ಕನಿಷ್ಟ ಗೌರವದ ಬಗ್ಗೆ ಇದ್ದ ಅಸಮಾಧಾನಕ್ಕೆ ಸಂಬಂಧಪಟ್ಟಿದ್ದು. ಲಿಂಗಾಯತರಿಗೆ ಸಮಾಜದಲ್ಲಿ ಸ್ವ-ಪ್ರಜ್ಞೆಯನ್ನು ಹೊಂದುವಂತೆ ಮಾಡುವ ಜರೂರತ್ತು ಹಳಕಟ್ಟಿಯವರನ್ನು ಲಿಂಗಾಯತ ಸಾಹಿತ್ಯಕ್ಕೆ ಒಂದು ಸೂಕ್ತ ಚೌಕಟ್ಟನ್ನು ಹಾಕಿಕೊಡಲು ಪ್ರಚೋದಿಸಿತು. ಅವರು ತಮ್ಮ ಸ್ವಚರಿತ್ರೆಯಲ್ಲಿ ಜ್ಞಾಪಿಸಿಕೊಳ್ಳುವ ಒಂದು ಘಟನೆಯು ಅವರ ಮನಸ್ಸಿನ ಮೇಲಾದ ಪರಿಣಾಮವನ್ನು ಮತ್ತು ಸಾಮುದಾಯಿಕ ಪ್ರಜ್ಞೆಯನ್ನು ಸೂಚಿಸುತ್ತದೆ.
ಕರ್ನಾಟಕದಲ್ಲಿ ಮತ ಮತಗಳಲ್ಲಿ ಪಂಗಡ ಪಂಗಡಗಳಲ್ಲಿ ನಾನಾ ತರದ ಕಲಹಗಳು ಯಾವಾಗಲೂ ಇದ್ದದ್ದು ಈಗಲೂ ಕಂಡು ಬರುತ್ತದೆ. ಈ ಸ್ಥಿತಿಯು ಶಾಲಾ ಶಿಕ್ಷಕರಲ್ಲಿಯೂ ಇದ್ದುದು ತಿಳಿಯುತ್ತದೆ. ನಮ್ಮ ಕ್ಲಾಸಿಗೆ ಬರುತ್ತಿದ್ದ ಒಬ್ಬ ಶಿಕ್ಷಕರು ತಮ್ಮ ಶಿಕ್ಷಣ ಕಾರ್ಯ ನಡೆಸುತ್ತಾ ಮಧ್ಯದಲ್ಲಿಯೇ ವೀರಶೈವ ಸಮಾಜದ ಮೇಲೆ ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಅವರು ವೀರಶೈವ ಸಮಾಜದಲ್ಲಿ ಪಂಡಿತರಾರೂ ಆಗಿ ಹೋಗಿಲ್ಲ, ವೀರಶೈವ ಸಮಾಜಕ್ಕೆ ವಾಜ್ಞಯವಿಲ್ಲ, ಅವರಲ್ಲಿ ಹಲಕೆಲ ಗ್ರಂಥಕಾರರು ಇದ್ದದ್ದು ಕಂಡು ಬಂದರೂ ಅವರು ಜನ್ಮತಃ ವೀರಶೈವರಿರದೆ ಹಿಂದುಗಡೆ ಅವರು ವೀರಶೈವರಾದರು, ವೀರಶೈವರು ಮರಾಠರಂತೆ ಶೂರರಲ್ಲ, ರಾಜಕಾರಣಿಗಳಲ್ಲ, ಅವರಲ್ಲಿ ರಾಜರಾಗಿಲ್ಲ ಎಂದು ಮೊದಲಾಗಿ ಬಹು ವೇಳೆ ಹೇಳುವದರಲ್ಲಿ ವೇಳೆಗಳೆಯುತ್ತಿದ್ದರು. (ಹಳಕಟ್ಟಿ, 1951 (1983), ಪು. 11)
ತಮ್ಮ ಬಾಲ್ಯದ ಬಗ್ಗೆ ಕೆಲವೇ ಕಲವು ಮಾಹಿತಿಗಳನ್ನು ಹಂಚಿಕೊಂಡಿದ್ದರೂ, ಅದನ್ನು ಅವರು ಸಾಮುದಾಯಿಕ ದಿಕ್ಕಿನೆಡೆಗೆ ಕೊಂಡೊಯ್ಯುತ್ತಾರೆ. ಮೇಲಿನ ಹೇಳಿಕೆಯಲ್ಲಿ ಲಿಂಗಾಯತ ಮತದ ಬಗ್ಗೆ ಅನಾದಾರ ಇರಿಸಿಕೊಂಡಿದ್ದ ಶಿಕ್ಷಕರು ಯಾರು ಎನ್ನುವ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಆದರೆ ಲಿಂಗಾಯತ ಧರ್ಮ ಮತ್ತು ಇತಿಹಾಸದ ಬಗ್ಗೆ ಆಧುನಿಕ ಶಿಕ್ಷಣ ಮತ್ತು ಅದರ ಮುಖ್ಯ ಭಾಗವಾಗಿರುವ ಶಿಕ್ಷಕರು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯುತ್ತಿರುವುದು ಹಳಕಟ್ಟಿಯವರಿಗೆ ಸರಿಬೀಳಲಿಲ್ಲ. ಅವರಿಗೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಲಿಂಗಾಯತ ಕೃತಿಗಳು ಸರಿಯಾದ ಮೌಲ್ಯ, ನಿಯಮ ಮತ್ತು ಕ್ರಮಬದ್ಧತೆಯನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡುತ್ತವೆಯೋ, ಇಲ್ಲವೋ ಎಂಬ ಅನುಮಾನ ಇತ್ತು. ಇಂತಹ ಅನೇಕ ಘಟನೆಗಳನ್ನು ಹಳಕಟ್ಟಿಯವರು ಜ್ಞಾಪಿಸಿಕೊಂಡು ಅದರ ಮೂಲಕ ಹೇಗೆ ತಾವು ವೀರಶೈವ ಮತದ ಸಾಹಿತ್ಯ, ಸಂಸ್ಕೃತಿ, ಧರ್ಮ ಮತ್ತು ತತ್ವದ ಬಗ್ಗೆ ಸತತ ಸಂಶೋಧನೆ ಮಾಡಿ, ಅವುಗಳನ್ನು ಪ್ರಕಟಗೊಳಿಸಲು ಪ್ರಚೋದಿಸಿದವು ಎಂದು ಬರೆಯುತ್ತಾರೆ. ಆಗಿನ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂದರ್ಭಗಳನ್ನು ಅಭ್ಯಸಿಸಿ ನೋಡಿದಾಗ ಹಳಕಟ್ಟಿಯವರ ಸ್ವಚರಿತ್ರೆಯ ಅಂಶಗಳಿಗೂ ಮತ್ತು ಈ ಸಂದರ್ಭಗಳಿಗೂ ತಾಳೆಯಿರುವುದು ಗೋಚರಿಸುತ್ತದೆ.
ವಚನಗಳ ‘ಶೋಧ’
ಪ್ರತಿಕೂಲ ವಾತಾವರಣವನ್ನು ಎದುರಿಸುತ್ತಿರುವಾಗಲೇ, ಲಿಂಗಾಯತ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಕ್ಷೀಣತೆ ಮತ್ತು ಅಧೋಗತಿಯನ್ನು ಮನಗಂಡ ಹಳಕಟ್ಟಿಯವರಿಗೆ ಅದನ್ನು ಮತ್ತೆ ಕಟ್ಟುವ ಹಾಗು ಅದಕ್ಕೆ ಪುನರಜ್ಜೀವನವನ್ನು ನೀಡುವ ಉತ್ಕಟತೆ ಹೆಚ್ಚಾಯಿತು. 1910ರ ಸುಮಾರಿಗೆ ಅನೇಕ ಸಾರ್ವಜನಿಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ವಕೀಲಿ ವೃತ್ತಿ ಅವರ ಮೇಲೆ ಬಹಳ ಪ್ರಭಾವ ಬೀರಿ, ಹೊಸ, ಹೊಸ ಅನುಭವಗಳನ್ನು ನೀಡಿತು. ಆದರೂ ಕಾನೂನಿನ ಬಾಹುಗಳಲ್ಲಿ ಸಿಲುಕಿ, ಕಾನೂನಿನ ಪರಿಭಾಷೆಯಲ್ಲಿ ಲಿಂಗಾಯತ ಸಾಹಿತ್ಯ ಮತ್ತು ಗ್ರಾಂಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಗೋಜಿಗೆ ಹೋಗದೆ, ತಮ್ಮ ಧ್ಯೇಯವನ್ನು ಈಡೇರಿಸಿಕೊಳ್ಳುವ ಮಾರ್ಗೋಪಾಯವನ್ನು ವಚನಗಳಲ್ಲಿ ಕಂಡುಕೊಂಡರು. ಕಾನೂನಿನ ಕ್ಷೇತ್ರದಲ್ಲಿ ಸಾಧಿಸಲಾಗದ ವ್ಯೆಯಕ್ತಿಕ ಅಧಿಪತ್ಯವನ್ನು ವಚನಗಳ ಸಾಂಸ್ಕೃತಿಕ ಲೋಕದಲ್ಲಿ ಚಲಾಯಿಸಲು ಸಾಧ್ಯವಿತ್ತು. ಇದೇ ಸಮಯದಲ್ಲಿ (ಅಂದರೆ 1902) ತಮ್ಮ ಸ್ನೇಹಿತರಾದ ವೀರಭದ್ರಪ್ಪ ಹಾಲಭಾವಿಯವರಿಂದ ಪ್ರಥಮ ಬಾರಿಗೆ ಲಿಂಗಾಯತ ಸಾಹಿತ್ಯದ ಪರಿಚಯ ಮಾಡಿಕೊಂಡರು. ಒಮ್ಮೆ ಭೇಟಿಯ ಸಂದರ್ಭದಲ್ಲಿ ಹಾಲಭಾವಿಯವರು ಲಿಂಗಾಯತ ಸಾಹಿತ್ಯದ ಅನೇಕ ಕೃತಿಗಳನ್ನು ಹಳಕಟ್ಟಿಯವರ ಮುಂದೆ ಇಟ್ಟರು. ಇವುಗಳಲ್ಲಿ ಪ್ರಭುಲಿಂಗ ಲೀಲೆ ಮತ್ತು ಗಣ ಭಾಷ್ಯ ರತ್ನಮಾಲೆ ಎಂಬ ಲಿಂಗಾಯತ ಪುರಾಣಗಳು ಅವರ ಗಮನವನ್ನು ಎಷ್ಟೊಂದು ಸೆಳೆದವೆಂದರೆ ಅವುಗಳಲ್ಲಿನ “ವಿಚಾರಗಳು ಹೊಸ ತರಹದ ಶೈಲಿಯಲ್ಲಿದ್ದು, ಅವು ಹೊಸ ತರಹದ ಶ್ರೇಷ್ಟ ವಿಚಾರವುಳ್ಳವುಗಳಾಗಿದ್ದವು” (ಹಳಕಟ್ಟಿ, 1923: 15) ಎಂದು ಅವರು ಕಂಡುಕೊಂಡರು. ಕ್ರಮೇಣ ಲಿಂಗಾಯತ ಪುರಾಣ, ಕಾವ್ಯಗಳ ಅನೇಕ ಮೂಲ ಪ್ರತಿಗಳು, ಹಸ್ತಪ್ರತಿಗಳನ್ನು ಹುಡುಕುವಲ್ಲಿ ಹಳಕಟ್ಟಿಯವರು ಯಶಸ್ವಿಯಾದರು. ಭಾವಚಿಂತಾಮಣಿ, ಕವಿಕರ್ಣ ರಸಾಯನ, ಶಿವತತ್ವ ಚಿಂತಾಮಣಿ, ಏಕೋರಾಮೇಶ್ವರ ಪುರಾಣ, ಏಕೋತ್ತರ ಷಟ್ಸ್ಥಲ ಸಂಗ್ರಹಿಸುವಲ್ಲಿ ಅವರು ಯಶಸ್ಸನ್ನು ಕಂಡರು. ಇದೇ ಸಮಯದಲ್ಲಿ ಪ್ರಭುದೇವರ ಅನೇಕ ವಚನಗಳು ತಾಳೆಗರಿಯಲ್ಲಿ ದೊರಕಿದವು. ನೂರಾರು ಹಸ್ತ ಪ್ರತಿಗಳು ಹಾಗು ತಾಳೆಗರಿಯ ಪ್ರತಿಗಳನ್ನು ಹುಡುಕುವ ಮುಂದಿನ ಕಾರ್ಯಕ್ಕೆ ಇವು ನಾಂದಿಯಾದವು. ಸಂಗ್ರಹಿಸಿದ ಕೃತಿಗಳನ್ನು ಅವಲೋಕಿಸಿದಾಗ ಪ್ರಪ್ರಥಮ ಬಾರಿಗೆ ಹಳಕಟ್ಟಿಯವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೋಚರಿಸಿತು: ಲಿಂಗಾಯತ ಸಾಹಿತ್ಯವು ತನ್ನದೇ ಆದ ಸ್ವತಂತ್ರ ಸಿದ್ಧಾಂತ, ನಿಯಮ, ತತ್ವ, ಶೈಲಿ ಹಾಗು ಧಾರ್ಮಿಕ ಅಂಶಗಳನ್ನು ಹೊಂದಿದೆ. ಈ ಎಲ್ಲಾ ವಚನಗಳನ್ನು ಕ್ರಮಬದ್ಧವಾಗಿ ಜೋಡಿಸಿ, ಪ್ರಕಟಿಸುವ ಕಾರ್ಯವನ್ನು ಹಳಕಟ್ಟಿಯವರು ಸಾಧಿಸಿದ್ದು 1923ರಲ್ಲಿ. ಅವರು ವಚನಗಳನ್ನು “ಷಟ್ಸ್ಥಲಾತ್ಮಕ ಪದ್ಧತಿಯಂತೆ ವಿಂಗಡಿಸಿ” (ಹಳಕಟ್ಟಿ, 1951, 1983, ಪು. 34) ವ್ಯವಸ್ಥಿತಗೊಳಿಸಿ, 1923ರಲ್ಲಿ ವಚನಶಾಸ್ತ್ರಸಾರ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಪ್ರಪ್ರಥಮ ವಚನ ಸಂಕಲವನ್ನು ಪ್ರಕಟಿಸಿದರು. ತಾವೇ ಶುರುಮಾಡಿದ ಪ್ರಿಟಿಂಗ್ ಪ್ರೆಸ್ನ ಮೂಲಕ ಶಿವಾನುಭವ, ನವ ಕರ್ನಾಟಕ ಪತ್ರಿಕೆಗಳನ್ನು ಶುರು ಮಾಡಿದರು. ಅಸಂಖ್ಯಾತ ಶಿವಶರಣ ಚರಿತ್ರಾ ಕೃತಿಗಳನ್ನು ಮತ್ತು ಸಾಹಿತ್ಯವನ್ನು ಪ್ರಕಟಿಸಿದರು. ಈ ಎಲ್ಲಾ ಚಟುವಟಿಕೆಗಳಿಗೆ ಅವರು ಸಾಮುದಾಯಿಕ ಕಾಳಜಿಯನ್ನು ಇಟ್ಟುಕೊಂಡಿದ್ದೆ ಕಾರಣೀಭೂತವಾಯಿತು.
ಅನಾರೋಗ್ಯ ಮತ್ತು ಲಿಂಗಾಯತ ಸಾಹಿತ್ಯ ಸಂಶೋಧನೆ
ಹಳಕಟ್ಟಿಯವರ ಸ್ವಚರಿತ್ರೆ ಮತ್ತು ಅವರು ಬರೆದ ಪತ್ರಗಳಲ್ಲಿ ಒಂದು ವಿಷಯ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಅವರ ಅನಾರೋಗ್ಯಕ್ಕೆ ಸಂಬಂಧಿಸಿದ್ದು. ಅವರು ಅನೇಕ ಬಾರಿ ಅನಾರೋಗ್ಯಕ್ಕೆ ಈಡಾಗುತ್ತಾರೆ. ತಮ್ಮ ಆತ್ಮೀಯರಾಗಿದ್ದ ಎಸ್. ಆರ್. ಮಲ್ಲಪ್ಪನವರಿಗೆ ಅವರು ಬರೆದಿರುವ ಪತ್ರಗಳಲ್ಲಿ ಈ ವಿಷಯ ತಿಳಿಯುತ್ತದೆ. ಅನಾರೋಗ್ಯದ ನಡುವೆಯು ಅವರು ತಮ್ಮ ಸಂಶೋಧನೆಯನ್ನು ನಿರಂತರವಾಗಿ ಮುಂದುವರೆಸುತ್ತಾರೆ. ಅವರದೇ ಮಾತುಗಳಲ್ಲಿ ಹೇಳುವುದಾದರೆ,
ನಾನು 1921ರಲ್ಲಿ ವಿಷಮ ಜ್ವರದಿಂದ ಪೀಡಿತನಾಗಿ ಮೂರು ತಿಂಗಳುಗಳವರೆಗೆ ಹಾಸಿಗೆಯನ್ನು ಹಿಡಿಯಬೇಕಾಯಿತು. ಈ ಕಾಲದಲ್ಲಿ ನಾನು ಮನೆಬಿಟ್ಟು ಹೋಗುವುದು ಶಕ್ಯವಿರಲಿಲ್ಲ. ಈ ಕಾಲದಲ್ಲಿ ಕೆಲಸವಿಲ್ಲದೆ ಹೋಗಲು ನಾನು ಸಂಗ್ರಹಿಸಿದ ಅವತರಣಗಳನ್ನೂ ಟಿಪ್ಪಣಿಗಳನ್ನೂ ನಾನು ಷಟ್ಸ್ಥಲಾತ್ಮಕ ಪದ್ಧತಿಯಂತೆ ವಿಂಗಡಿಸಿದೆನು. ಹೀಗೆ ವ್ಯವಸ್ಥೆಗೊಳಿಸಲಿಕ್ಕೆ ಕೆಲವು ದಿವಸಗಳು ಹಿಡಿದವು (ಹಳಕಟ್ಟಿ, 1951, 1983, ಪು. 34).
ಅವರ ಸ್ವಚರಿತ್ರೆ ಮತ್ತು ಪತ್ರಗಳಲ್ಲಿ ಅನಾರೋಗ್ಯದ ಬಗ್ಗೆ ಬರೆದುಕೊಂಡಿರುವ ಹಳಕಟ್ಟಿಯವರು ಇಂತಹ ಸಂದಿಗ್ದತೆಯಲ್ಲು ತಮ್ಮ ಸಾಹಿತ್ಯ ಸಂಶೋಧನಾ ಮತ್ತು ಪ್ರಕಟಣೆಯ ಹಸಿವು ಕಡಿಮೆಯಾಗಲಿಲ್ಲ ಎಂದು ಪದೆ, ಪದೆ ಹೇಳುತ್ತಾರೆ. ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ನವೋದಯವಾಗಿದ್ದ ಆ ಕಾಲಘಟ್ಟದಲ್ಲಿ ಹಳಕಟ್ಟಿಯವರು ತಮ್ಮನ್ನು ಸಂಶೋಧನಾ ಜಂಗಮವೆಂದು ಪ್ರತಿಬಿಂಬಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅವರು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರವಾಸ ಮಾಡಿ, ಎಲ್ಲೆಲ್ಲಿ ಲಿಂಗಾಯತ ಸಾಹಿತ್ಯದ ಮಾಹಿತಿಗಳಿರುತ್ತವೆಯೋ ಅಲ್ಲಿ ಹೋಗಿ ಅನೇಕ ಹಸ್ತಪ್ರತಿಗಳು, ತಾಳೆಗರಿಗಳು ಮತ್ತು ಲಭ್ಯವಿರುವ ಯಾವುದೇ ಪ್ರಕಾರದ ಮೂಲ ಆಕರಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರಕಟಿಸಿದ್ದಾರೆ. ಲಿಂಗಾಯತ ಸಾಹಿತ್ಯ ಮತ್ತು ಮತದ ಪ್ರಚಾರ ಕಾರ್ಯಗಳಿಗೂ ಊರೂರು ಅಲೆದಿರುವ ಅನೇಕ ಮಾಹಿತಿಗಳನ್ನು ಅವರು ತಮ್ಮ ಸ್ವಚರಿತ್ರೆ ಮತ್ತು ಪತ್ರಗಳಲ್ಲಿ ಬರೆದುಕೊಂಡಿದ್ದಾರೆ.
ಸಂಘ-ಸಂಸ್ಥೆಗಳು ಮತ್ತು ಮಠ-ಮಾನ್ಯಗಳ ಜೊತೆಗೆ ಒಡನಾಟ
ಸಾಮುದಾಯಿಕ ಒಲವುಗಳನ್ನು ಹೊಂದಿದ್ದ ಹಳಕಟ್ಟಿಯವರು ತಮ್ಮ ಸ್ವಚರಿತ್ರೆಯಲ್ಲಿ ಸಂಘ-ಸಂಸ್ಥೆಗಳು ಮತ್ತು ಲಿಂಗಾಯತ ಮಠ-ಮಾನ್ಯಗಳ ಜೊತೆಗೆ ಇರಿಸಿಕೊಂಡಿದ್ದ ಒಟನಾಟವನ್ನು ಹೇಳಿಕೊಂಡಿದ್ದಾರೆ. ಇದರ ಸಾರಾಂಶವನ್ನು ನಾವು ಹೀಗೆ ಗಮನಿಸಬಹುದು: ತಮ್ಮ ವೈಚಾರಿಕ ದೃಷ್ಟಿಕೋನದಿಂದ ವಚನಗಳಿಗೆ ಒಂದು ರೂಪವನ್ನು ಕೊಟ್ಟ ಮೇಲೆ ತಮ್ಮ ಪ್ರಯತ್ನಗಳು ಸಂಘ, ಸಂಸ್ಥೆಗಳಿಂದ ಪ್ರೋತ್ಸಾಹಿಸಲ್ಪಟ್ಟರೆ ಬಹಳ ಅನುಕೂಲವಾಗುತ್ತದೆಂದು ಹಳಕಟ್ಟಿಯವರು ಬಹು ಬೇಗ ಅರಿತರು. ಇದು ಚಾರಿತ್ರಿಕವಾಗಿ ಅತ್ಯವಶ್ಯಕವಾಗಿತ್ತು. ಏಕೆಂದರೆ ತಮ್ಮ ಪ್ರಯತ್ನಗಳನ್ನು ಟೀಕಿಸುವವರಿಗೆ ಸಾಂಸ್ಥಿಕ ಮತ್ತು ಸಂಘಟನಾತ್ಮಕ ಪ್ರೋತ್ಸಾಹವಿದ್ದುದು ಹಳಕಟ್ಟಿಯವರನ್ನು ಚಿಂತಾಕ್ರಾಂತರನ್ನಾಗಿ ಮಾಡಿತ್ತು. ಇದಕ್ಕೆ ಉತ್ತರವಾಗಿ ಹಳಕಟ್ಟಿಯವರು ತಮ್ಮ ನಂಬಿಕೆಗಳಿಗೆ ಹತ್ತಿರವಿರುವ ಮತ್ತು ತಮ್ಮ ವಿಚಾರಗಳನ್ನು ಒಪ್ಪಿಕೊಳ್ಳುವ ಸಮಾನ ಮನಸ್ಕರ ವಿದ್ವಾಂಸರ ಗುಂಪನ್ನು ಸೃಷ್ಟಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಿದರು. ಇದನ್ನು ಸಾಧಿಸಲು ಸಾರ್ವಜನಿಕ ಕಾರ್ಯಕ್ರಮಗಳು, ಪ್ರಕಟಣೆ, ನಿಯತಕಾಲಿಕೆಗಳು ಮತ್ತು ಶೈಕ್ಷಣಿಕ ಸಂಘ-ಸಂಸ್ಥೆಗಳನ್ನು ಹುಟ್ಟಿಹಾಕಿದರು. 1941-1950ರ ನಡುವೆ ತಮ್ಮ ಆಪ್ತ ಸ್ನೇಹಿತ ಮಲ್ಲಪ್ಪನವರೊಡನೆ ನಡೆಸಿದ ಪತ್ರ ವ್ಯವಹಾರಗಳನ್ನು ಗಮನಿಸಿದರೆ ಹಳಕಟ್ಟಿಯವರು ಬಿಜಾಪುರದಲ್ಲಿ ಸ್ಥಾಪಿಸಿದ ಶಿವಾನುಭವ ಮಂದಿರದಿಂದ ವಚನ ಸಾಹಿತ್ಯವನ್ನು ಪ್ರಸಾರಗೊಳಿಸುವದಕ್ಕೊಸ್ಕರ ಎಷ್ಟೊಂದು ಉತ್ಸಾಹ ಮತ್ತು ಆಸಕ್ತಿಯುಳ್ಳವರಾಗಿದ್ದರೆಂದು ತಿಳಿಯುತ್ತದೆ.
ಆಧುನಿಕ ಪೂರ್ವ ಧಾರ್ಮಿಕ ಸಂಸ್ಥೆಗಳಾದ ಲಿಂಗಾಯತ ಮಠಗಳ ಸಂಬಂಧವನ್ನು ಹಳಕಟ್ಟಿಯವರು ಬಿಡಲಿಲ್ಲ. ಮಠಗಳ ನಡುವಿನ ವೈಮನಸ್ಯದ ಬಗ್ಗೆ ಅಸಮಾಧಾನವಿದ್ದರೂ, ಅವುಗಳ ವಿರುದ್ಧ ಸೈದ್ಧಾಂತಿಕ ಸಮರವನ್ನೆನು ಅವರು ಸಾರಲಿಲ್ಲ. ಬದಲಾಗಿ ಅವುಗಳ ಸಹಕಾರವನ್ನು ಬಯಸಿದ್ದರು. ಅದಕ್ಕಾಗಿ ಮಠ-ಮಾನ್ಯಗಳು ಮತ್ತು ಮಠಾಧೀಶರ ಜೊತೆಗೆ ಸಕ್ರೀಯವಾದ ಮತ್ತು ಉತ್ತಮವಾದ ಸಂಬಂಧವನ್ನು ಇರಿಸಿಕೊಂಡಿದ್ದರು. ಅನೇಕ ಮಠಾಧೀಶರು ಮತ್ತು ಲಿಂಗಾಯತ ನಾಯಕರ ಜೊತೆಗೆ ನಡೆದ ವಚನ-ಚರ್ಚೆಗಳನ್ನು ತಮ್ಮ ಸ್ವಚರಿತ್ರೆಯಲ್ಲಿ ಸವಿಸ್ತಾರವಾಗಿ ಜ್ನಾಪಿಸಿಕೊಂಡಿದ್ದಾರೆ. ಮಠಾಧೀಶರು ವಚನಗಳಲ್ಲಿ ಅಡಗಿರುವ ಮೌಲ್ಯವನ್ನು ಅರಿತು, ಹಳಕಟ್ಟಿಯವರ ಬೆನ್ನು ತಟ್ಟಿ ಅವರ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದರು. ನಿಧಾನವಾಗಿ ಇತರ ಲಿಂಗಾಯತ ಮಠಗಳು ವಚನಗಳ ಮಹತ್ತನ್ನು ಅರಿತು, ಅವುಗಳ ಧಾರ್ಮಿಕ ಪ್ರಾಮುಖ್ಯತೆಯ ಬಗ್ಗೆ ಆಸಕ್ತಿ ವಹಿಸಿದರು.
ನಾನೀಗಾಗಲೆ ಹೇಳಿದ ಹಾಗೆ ಹಳಕಟ್ಟಿಯವರ ಸ್ವಚರಿತ್ರೆಯನ್ನು/ಪತ್ರಗಳನ್ನು ನಾವು ಐತಿಹಾಸಿಕ ದಾಖಲೆಗಳೆಂದು ಗುರುತಿಸಬಹುದು. ಲಿಂಗಾಯತ ಸಮುದಾಯದ ಸಾಹಿತ್ಯ, ತತ್ವ ಮತ್ತು ಇತಿಹಾಸಕ್ಕೆ ಅಷ್ಟೊಂದು ಸಾರ್ವತ್ರಕತೆ ಇಲ್ಲದ ಸಮಯದಲ್ಲಿ ಹಳಕಟ್ಟಿಯವರ ಪ್ರಯತ್ನಗಳು ಐತಿಹಾಸಿಕವೆಂಬಂತೆ ತೋರುತ್ತವೆ. ಏಕೆಂದರೆ ಅವರು ಬರೆದಿರುವ ಅನೇಕ ವಿಷಯಗಳು ಆಗಿನ ಕಾಲದ ಲಿಂಗಾಯತರ ಇತಿಹಾಸವನ್ನು ಬಯಲುಗೊಳಿಸುತ್ತವೆ. ಜೊತೆಗೆ ತಮ್ಮ ಸಮುದಾಯಕ್ಕೆ ಇರುವ ಅಡ್ಡಿ-ಆತಂಕಗಳನ್ನು ನಿವಾರಿಸುವ ಪ್ರಯತ್ನಗಳನ್ನು ಸಹ ಮಾಡುತ್ತಾರೆ. ಹಾಗಂತ ಅವರು ತಮ್ಮ ಸಮುದಾಯಕ್ಕೆ ಮಾತ್ರ ಅಂಟಿಕೊಂಡಿರಲಿಲ್ಲ. ಅವರು ಕರ್ನಾಟಕ ಏಕೀಕರಣಕ್ಕೆ, ಸ್ವಾತಂತ್ರ್ಯ ಹೋರಾಟಕ್ಕೆ, ಅನೇಕ ಸಂಘ/ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ಹಳಕಟ್ಟಿಯವರು ಇತಿಹಾಸದ ಜೊತೆಗೆ, ಅದರಲ್ಲಿ ಭಾಗವಹಿಸುವ ಪ್ರತಿನಿಧಿಯಾಗಿ ಮತ್ತು ಇತಿಹಾಸವನ್ನು ಕಟ್ಟಿಕೊಡುವ ಸ್ವಚರಿತ್ರಾಕಾರರಾಗಿ ನಮಗೆ ಕಾಣಿಸಿಕೊಳ್ಳುತ್ತಾರೆ. ಇಂತಹ ಸ್ವಚರಿತ್ರೆಗಳಿಂದ ಸಾಹಿತ್ಯಕ್ಕು ಮತ್ತು ಇತಿಹಾಸಕ್ಕು ಇರುವ ಸಂಬಂಧವನ್ನು ಅರಿತುಕೊಳ್ಳುವ ಅವಕಾಶ ದೊರೆಯುತ್ತದೆ. ಆದ್ದರಿಂದ ಹಳಕಟ್ಟಿಯವರ ಸ್ವಚರಿತ್ರೆಯನ್ನು ಮತ್ತು ಅಂದಿನ ಇತಿಹಾಸವನ್ನು ಒಂದಕ್ಕೊಂದು ಸಂಬಂಧವಿರುವಂತ ಪ್ರಮೇಯಗಳನ್ನಾಗಿ ಚರ್ಚಿಸುವ ಅವಶ್ಯಕತೆ ಇದೆ. ಸ್ವಚರಿತ್ರೆಗಳು ಕೇವಲ ಸಾಹಿತ್ಯದ ಪ್ರಕಾರವೆಂದು, ಅವುಗಳು ಲೇಖಕರ ಅನುಭವಗಳಿಂದ ಬರೆಯಲ್ಪಟ್ಟಿರುವುದರಿಂದ ಮೂಲಭೂತವಾಗಿ ಸತ್ಯವನ್ನು ಹೊಂದಿರುತ್ತವೆಯೆಂದು ತಿಳಿದು, ಅವುಗಳ ಅಂತರ್ ಪಠ್ಯ ಅಂಶಗಳನ್ನು ನಾವು ಗಮನಿಸದಿದ್ದರೆ ಹಳಕಟ್ಟಿಯವರ ಸ್ವಚರಿತ್ರೆಯನ್ನು “ಸ್ವ”ದ ವ್ಯಕ್ತಿತ್ವಕ್ಕೆ ಕುಗ್ಗಿಸುವ ಮಿತಿಗಳುಂಟಾಗುತ್ತವೆ.
Comments 11
Veeresh S. Belgavi
Jul 5, 2021ಆತ್ಮಕತೆ ಎನ್ನುವುದಕ್ಕಿಂತ ಸ್ವಚರಿತೆ ಎನ್ನುವುದು ಹೆಚ್ಚು ಪರಿಣಾಮಕಾರಿಯಾದ ಸೂಕ್ತ ಪದ ಎನ್ನುವ ನಿಮ್ಮ ಅಭಿಮತವನ್ನು ನಾನು ಅನುಮೋದಿಸುತ್ತೇನೆ ಸರ್.
ಹರೀಶ್ ಪಾವಗಡ
Jul 6, 2021ಹಳಕಟ್ಟಿಯವರ ಕುರಿತಾದ ಸಮಯೋಚಿತ ಲೇಖನ. ಅವರ ವೈಯಕ್ತಿಕ ವಿಷಯಗಳ ಬಗೆಗೆ ನನಗೆ ತಿಳಿಯುವ ಕುತೂಹಲವಿತ್ತು.
ramesh Dharwad
Jul 7, 2021ಹಳಕಟ್ಟಿಯವರ ತ್ಯಾಗ ಅವಿಸ್ಮರಣೀಯ. ಅವರು ವಚನಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದರಿಂದ ನಾವಿಂದು ಶರಣರ ಜೀವನವನ್ನು ಅರಿಯಬಹುದಾಗಿದೆ. ಒಳ್ಳೆಯ ಲೇಖನ ಸರ್.
Ganesh A.P
Jul 7, 2021I found your weblog using msn. That is an extremely smartly written article.
Thanks for the post.
Pratibha r
Jul 12, 2021ಆತ್ಮಚರಿತ್ರೆಗಳ ಹಿನ್ನೆಲೆಯಲ್ಲಿ ಹಳಕಟ್ಟಿಯವರ ಸ್ವಚರಿತ್ರೆಯನ್ನು ಚರ್ಚಿಸಿದ್ದು ಅವರ ಆದ್ಯತೆ ಮತ್ತು ತ್ಯಾಗವನ್ನು ತೋರಿಸುತ್ತದೆ. ಲೇಖನ ಚೆನ್ನಾಗಿ ಮೂಡಿಬಂದಿದೆ.
Harsha Dodderi
Jul 15, 2021ಹಳಕಟ್ಟಿಯವರ ಜೀವನ ಕಥೆಯನ್ನು ಓದುತ್ತಿದ್ದರೆ ಗಂಧದ ಕೊರಡಿನಂತೆ ಅನಿಸುತ್ತದೆ. ತಮ್ಮನ್ನು ಪ್ರತಿಕ್ಷಣ ತೇಯ್ದು ತೇಯ್ದು ವಚನಗಳನ್ನು ಲೋಕಕ್ಕೆ ಕೊಟ್ಟು ಅವುಗಳೊಂದಿಗೆ ಸುವಾಸನೆಯಾಗಿ ಇಲ್ಲಿಯೇ ಉಳಿದುಕೊಂಡರು.
ರವೀಶ್ ತಿಪಟೂರು
Jul 17, 2021ನೂರು ವರ್ಷಗಳ ಹಿಂದೆ ಪೂಜ್ಯರಾದ ಹಳಕಟ್ಟಿಯವರು ವಚನಗಳ ಸಂಗ್ರಹಕ್ಕಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದರು ಎನ್ನುವುದನ್ನ ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಬಸವಾದ ಶರಣರ ಭಾವಚಿತ್ರದ ಜೊತೆಗೆ ಇಂಥ ಹಿರಿಯರ ಭಾವಚಿತ್ರವೂ ಪ್ರತಿ ಮಠದಲ್ಲೂ, ಪ್ರತಿ ಲಿಂಗಾಯತ ಮನೆಯಲ್ಲೂ ಇರಬೇಕು.
Rajashekhar N
Jul 18, 2021ವಚನಗಳನ್ನು ಮುದ್ರಿಸಲು ಹಳಕಟ್ಟಿಯವರು ಪಟ್ಟ ಪರಿಪಾಟಲುಗಳನ್ನು ನೋಡಿದರೆ ಮಠಮಾನ್ಯಗಳ ಜೊತೆಗೆ ಮತ್ತು ಸಂಘಸಂಸ್ಥೆಗಳ ಜೊತೆಗೆ ಎಷ್ಟೆಲ್ಲಾ ಒಡನಾಟ ಇಟ್ಟುಕೊಂಡಿದ್ದರೂ ಅವರಿಂದ ನಿರೀಕ್ಷಿತ ಸಹಾಯ ಹಳಕಟ್ಟಿಯವರಿಗೆ ಸಿಗಲಿಲ್ಲವೇನೋ ಎಂದು ನೋವಾಗುತ್ತದೆ.
Kavyashree
Jul 21, 2021ವಚನ ಶೋಧದ ಜೊತೆಗೆ ಶರಣರಾದ ಹಳಕಟ್ಟಿಯವರು ಕರ್ನಾಟಕ ಏಕೀಕರಣಕ್ಕೆ, ಸ್ವಾತಂತ್ರ್ಯ ಹೋರಾಟಕ್ಕೆ ದುಡಿದವರು. ಹಿಂದಿನ ತಲೆಮಾರಿನ ಹಿರಿಯರು ಕೀರ್ತಿಗೆ ಅಂಟಿಕೊಳ್ಳದೆ ಸೇವೆ ಸಲ್ಲಿಸಿದವರು, ಸಂಶೋಧನಾತ್ಮಕ ಬರಹ.
ವಿದ್ಯಾಧರ ಸ್ವಾಮಿ, ಗೋಕಾಕ್
Jul 21, 2021ಹಳಕಟ್ಟಿಯವರು ಇತಿಹಾಸದ ಜೊತೆಗೆ, ಅದರಲ್ಲಿ ಭಾಗವಹಿಸುವ ಪ್ರತಿನಿಧಿಯಾಗಿ ಮತ್ತು ಇತಿಹಾಸವನ್ನು ಕಟ್ಟಿಕೊಡುವ ಸ್ವಚರಿತ್ರಾಕಾರರಾಗಿ ನಮಗೆ ಕಾಣಿಸಿಕೊಳ್ಳುತ್ತಾರೆ- ಹೀಗೆ ಹಳಕಟ್ಟಿ ಸಾಹೇಬರನ್ನು ಹೊಸ ದೃಷ್ಟಿಕೋನದಲ್ಲಿ ಗ್ರಹಿಸಬೇಕಾಗಿದೆ. ಶಾಲಾ- ಕಾಲೇಜುಗಳ ಪಠ್ಯದಲ್ಲಿ ಇವರ ಕುರಿತು ಪರಿಚಯಾತ್ಮಕ ಪಾಠವನ್ನು ಇಡಬೇಕು. ನಮ್ಮ ಯುವಜನರಿಗೆ ಅವರ ಕೊಡುಗೆ ತ್ಯಾಗಗಳನ್ನು ತಿಳಿಸಬೇಕು. ವಂದನೆಗಳು.
Manjunath, Delhi
Aug 5, 2021Admiring the commitment you put into your site and detailed information you provide. It is awesome to come across a blog every month, that is not the same outdated, rehashed material. Wonderful read!