ಸ್ತ್ರೀ ಸ್ವಾತಂತ್ರ್ಯ ಕುರಿತು…
ಲಿಂಗಾಯತ ಧರ್ಮವು ಸ್ವತಂತ್ರವಾದರೆ ಮದುವೆಯಾದ ಹೆಣ್ಣುಮಕ್ಕಳು “ಕುಂಕುಮ ಹಚ್ಚಬಾರದು, ಮಂಗಳಸೂತ್ರ ಕಟ್ಟಬಾರದು, ಕಾಲುಂಗುರ ಹಾಕಿಕೊಳ್ಳಬಾರದು” ಎಂದು ಸ್ವಾಮಿಗಳೊಬ್ಬರು ಭಾಷಣ ಮಾಡಿದ್ದಾರೆ. ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಆ ಅವಿವೇಕದ ಮಾತಿನ ಮುಖ್ಯ ಉದ್ದೇಶ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ವಿರೋಧಿಸುವುದೆ ಆಗಿದೆಯೆಂದು ಬೇರೆ ಹೇಳಬೇಕಿಲ್ಲ. ಅದಕ್ಕೆ ಸಂಬಂಧಿಸಿದ ಲಿಂಗಾಯತದಲ್ಲಿನ ಸ್ತ್ರೀಪರವಾದ ಸಮಾನತೆಯ ಅಂಶಗಳನ್ನು ವಿಶ್ಲೇಷಿಸುವ ಪ್ರಯತ್ನವೇ ಈ ಲೇಖನ.
ಹಣೆಗೆ ಕುಂಕುಮ, ಕೊರಳಲ್ಲಿ ಮಂಗಳಸೂತ್ರ, ಕೈಯಲ್ಲಿ ಹಸಿರು ಗಾಜಿನ ಬಳೆ, ಕಾಲ್ಬೆರಳಲ್ಲಿ ಬೆಳ್ಳಿಯ ಕಾಲುಂಗುರ ‘ಮುತ್ತೈದೆ’ಯ ಲಕ್ಷಣ – ವಿವಾಹಿತ ಸ್ಥಾನದ ವೈಭವೀಕರಣ! ಉತ್ತರ ಭಾರತದಲ್ಲಿ ಬೋತಾಲಿಯಲ್ಲಿ ಸಿಂಧೂರ ಇಟ್ಟುಕೊಳ್ಳುತ್ತಾರೆ. ಅನೇಕ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹೆಣ್ಣುಮಕ್ಕಳೂ ಈ ದೇಶದಲ್ಲಿ ಅದನ್ನೇ ಅನುಸರಿಸುತ್ತಾರೆ. ಸಂಸ್ಕೃತಿಯನ್ನು ವ್ಯಾಪಾರೀಕರಿಸುವ ಮಾರುಕಟ್ಟೆಯಿಂದಾಗಿ ಅಂದವಾದ ಬಹುಮಾದರಿಯ ಮಂಗಳಸೂತ್ರಗಳು, ಬಣ್ಣ ಬಣ್ಣದ ಬಿಂದಿಗಳ ಮೂಲಕ ಈ ಸಂಪ್ರದಾಯಗಳು ಈಗ ಫ್ಯಾಶನ್ ಆಗಿಬಿಟ್ಟಿವೆ! ಲಿಂಗಾಯತ ಧರ್ಮದಲ್ಲಿ ಈ ಸಂಪ್ರದಾಯವನ್ನು ಎಲ್ಲಿಯೂ ವಿರೋಧಿಸಿಲ್ಲ. ಆದ್ದರಿಂದ ಆ ಸ್ವಾಮಿಗಳು ಹೇಳಿದ್ದು ಅಪ್ಪಟ ಸುಳ್ಳು!
ತದ್ವಿರುದ್ಧವಾಗಿ ಲಿಂಗಾಯತರಲ್ಲಿ ಗಂಡ ಸತ್ತರೆ ವಿಧವೆಯ ತಲೆಯನ್ನು ಬೋಳಿಸುವುದಿಲ್ಲ, ಮಂಗಳಸೂತ್ರವನ್ನು ಹರಿಯುವುದೂ ಕಡಿಮೆ. ಕಾಲುಂಗುರ ತೆಗೆಯುವುದಿಲ್ಲ! ಅಂತಹ ಅವಮಾನ ವಿಧುರ ಗಂಡಸರಿಗೆ ಇಲ್ಲದಾಗ ಮಹಿಳೆಗೆ ಮಾತ್ರ ಏಕೀ ಅವಹೇಳನ, ‘ವೈಧವ್ಯದ ಸ್ಥಿರೀಕರಣ?’ ಹಳ್ಳಿಗಳಲ್ಲಿ ಅಜ್ಞಾನಿಗಳು ಒಮ್ಮೊಮ್ಮೆ ಬ್ರಾಹ್ಮಣರ ಪ್ರಭಾವದಿಂದ ವಿಧವೆಯರಿಗೆ ಇಂಥ ಅವಹೇಳನ ಮಾಡುತ್ತಿರಬಹುದು.
ಎರಡನೆಯದಾಗಿ, ಲಿಂಗಾಯತ ವಿಧವೆಯರು ವಿಧುರ ಗಂಡಸರಂತೆ ಮರುಮದುವೆಯಾಗುತ್ತಾರೆ. ಹಿಂದೂ ವಿಧವೆಯರಿಗೆ ಈ ಹಕ್ಕು ಬ್ರಿಟಿಷರ ಕಾಲದಲ್ಲಿ ದೊರೆಯಿತು!
ಮೂರನೆಯದಾಗಿ, ಸಂತಾನಭಾಗ್ಯವಿಲ್ಲದ ಲಿಂಗಾಯತ ವಿಧವೆ ಬೇರೆಯವರ ಮಕ್ಕಳನ್ನು ‘ದತ್ತಕ’ ಪಡೆಯುವ ಅಧಿಕಾರ ಹೊಂದಿದ್ದಾಳೆ. ಗಂಡಸರಂತೆ ಎಲ್ಲ ಆಸ್ತಿಯಲ್ಲಿ ಸಮಾನ ಹಕ್ಕು ಅವಳಿಗಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಮತ್ತು ದ್ವಿತೀಯ ಅಧ್ಯಕ್ಷರಾದ ದಾನವೀರ ಸಿರಸಂಗಿ ಲಿಂಗರಾಜರು ಅಂತಹ ದತ್ತಕ ಮಕ್ಕಳಲ್ಲಿ (1874ರಲ್ಲಿ) ಒಬ್ಬರು. ಈ ಹಕ್ಕು ಹಿಂದೂ ಮಹಿಳೆಯರಿಗೆ ಸಾಮಾನ್ಯ ಪರಿಸ್ಥಿತಿಯಲ್ಲಿ ಇಲ್ಲ.
ನಾಲ್ಕನೆಯದಾಗಿ, ಸ್ತ್ರೀಯು ತಿಂಗಳಿಗೊಮ್ಮೆ ಮುಟ್ಟಾಗುವುದು ಒಂದು ಸಹಜ ನೈಸರ್ಗಿಕ ಕ್ರಿಯೆ. ಕುಲೀನ ಹಿಂದೂ ಮಹಿಳೆಯನ್ನು ಅಸ್ಪೃಶ್ಯಳಂತೆ ಕಂಡು ಮನೆಯ ಹೊರಮೂಲೆಗೆ ತಳ್ಳುವ ಅಮಾನವೀಯ ಪದ್ಧತಿಯಿಂದ ಲಿಂಗಾಯತ ಮಹಿಳೆ ಮುಕ್ತಳು. ಅದು ಮೈಲಿಗೆಯಲ್ಲ, ಆಗ ಅವಳು ಅಸ್ಪೃಶ್ಯಳಲ್ಲ! ಇಂತಹ ಅಮಾನವೀಯ ಮಡಿವಂತಿಕೆಯನ್ನು ಶರಣರು ತಿರಸ್ಕರಿಸಿದರು.
ಧಾರ್ಮಿಕವಾಗಿ, ಲಿಂಗಾಯತ ಸ್ತ್ರೀಯರು ಗಂಡಸರಿಗೆ ಸರಿಸಮಾನರು: ಎಲ್ಲ ಗಂಡುಮಕ್ಕಳಂತೆ ಹುಟ್ಟಿದ ಮೊದಲ ವಾರದಲ್ಲಿ ಹೆಣ್ಣು ಕೂಸಿಗೆ ಲಿಂಗದೀಕ್ಷೆ ಮಾಡಲಾಗುತ್ತದೆ ಮತ್ತು ಸ್ತ್ರೀಯರೂ ದೇಹದ ಮೇಲೆ ಲಿಂಗ ಧರಿಸಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಾರೆ. ಈ ಧಾರ್ಮಿಕ ಸ್ವಾತಂತ್ರ್ಯವನ್ನು ಸ್ತ್ರೀಗೆ ನೀಡಿದ ಏಕೈಕ ಭಾರತದ ಧರ್ಮ ಲಿಂಗಾಯತರದ್ದು. ಪಿತೃಪೂಜೆ, ಪಿಂಡ-ಶ್ರಾದ್ಧಗಳು ಲಿಂಗಾಯತರಲ್ಲಿ ಇಲ್ಲ.
ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಸ್ತ್ರೀಯು ಪುರುಷನಿಗೆ ಸರಿಸಮಾನಳು: ಆದ್ದರಿಂದಲೇ ಲಿಂಗಾಯತರಲ್ಲಿ ಇಂದು ಅನೇಕ ಮಹಿಳಾ ಸನ್ಯಾಸಿನಿಯರುಂಟು. ಜೈನರಲ್ಲಿ ಪುರುಷ ದಿಗಂಬರಿಗಳಿರುತ್ತಾರೆ. ಹಿಂದೂಗಳಲ್ಲಿ ನಗ್ನರಾದ ಪುರುಷ ನಾಗಾ ಅಘೋರಿಗಳಿದ್ದಾರೆ. ಆದರೆ ಜಗತ್ತಿನ ಪ್ರಪ್ರಥಮ ನಗ್ನ ವಿರಾಗಿಣಿ ಮಾತ್ರ ಲಿಂಗಾಯತರಲ್ಲಿದ್ದಳು ಮತ್ತು ಆಕೆ ಪುರುಷರಷ್ಟೇ ಸ್ವತಂತ್ರಳಾಗಿ ಕ್ರಾಂತಿಕಾರಿ ತತ್ವಗಳನ್ನು ಅರುಹಿದಳು ಎನ್ನುವುದು ವಿಶೇಷ- ಆಕೆಯೇ ಅಕ್ಕಮಹಾದೇವಿ! ಅಕ್ಕ ನಾಗಮ್ಮ, ನೀಲಮ್ಮ, ಗಂಗಮ್ಮ, ಸತ್ಯಕ್ಕ, ಗೊಗ್ಗವ್ವೆ, ಲಿಂಗಮ್ಮ, ಸಂಕವ್ವೆಯರಂತಹ ಮೂವತ್ತೇಳು ಶರಣೆಯರು ಹನ್ನೆರಡನೆಯ ಶತಮಾನದ ಧಾರ್ಮಿಕ ಸಾಮಾಜಿಕ ಕ್ರಾಂತಿಯಲ್ಲಿ ಭಾಗವಹಿಸಿದರಲ್ಲದೇ ಅವರು ಬರೆದ ವಚನಗಳು ಇಂದಿಗೂ ಸ್ತ್ರೀ ಸ್ವಾತಂತ್ರ್ಯಕ್ಕೆ ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ.
ಪಾಶ್ಚಾತ್ಯದ ಬಹುತೇಕ ಆಧುನಿಕ ಸ್ತ್ರೀವಾದಿಗಳು ಮದುವೆಯೆಂಬ ಸಾಮಾಜಿಕ ಬಂಧನದಲ್ಲಿ ಪುರುಷ ಪ್ರಧಾನ ಸಮಾಜವು ಹೆಣ್ಣನ್ನು ದಾಸಿಯಂತೆ ಕಾಣುತ್ತದೆಯೆಂದು ಭಾವಿಸುತ್ತಾರೆ. ಗಂಡನ ಆಸ್ತಿಯಾಗಿ ಪರಿಗಣಿಸಿ ಹೆಂಡತಿಗೆ ಮಂಗಳಸೂತ್ರ, ಕಾಲುಂಗುರ, ಕುಂಕುಮಗಳನ್ನು ದಾಸ್ಯದ ಸಂಕೋಲೆಯೆಂದು ತಿಳಿಯುತ್ತಾರೆ. ತದ್ವಿರುದ್ಧವಾಗಿ, ಹನ್ನೆರಡನೆಯ ಶತಮಾನದ ಶರಣರು ವಿವಾಹದಲ್ಲಿ ಸಮಾನತೆಯನ್ನು ಕಂಡರು. ಅವರ ಕೆಲವು ವಚನಗಳನ್ನು ಇಲ್ಲಿ ಉದಾಹರಿಸುವುದು ಸೂಕ್ತವೆನಿಸುತ್ತದೆ. ಗಂಡ-ಹೆಂಡರ ನಡುವಿನ ಸಮಾನತೆಯನ್ನು ಶರಣೆ ಗೊಗ್ಗವ್ವೆಯ ಬಾಯಿಂದ ಕೇಳಿ: “ಗಂಡು ಮೋಹಿಸಿ ಹೆಣ್ಣ ಹಿಡಿದಡೆ, ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗ ಬಲ್ಲಡೆ, ನಾಸ್ತಿನಾಥನು ಪೂರ್ಣನೆಂಬೆ.” ಗಂಡ-ಹೆಂಡತಿಯ ನಡುವೆ ಮೇಲು-ಕೀಳೆಂಬುದಿಲ್ಲ, ಅವರಿಬ್ಬರೂ ಪರಸ್ಪರರ ಒಡವೆ, ಅವರಿಬ್ಬರೂ ಸಮಾನರು!
ಶರಣ ಸಿದ್ಧರಾಮರ ವಚನದಲ್ಲಿ ಸ್ತ್ರೀಯ ಸ್ಥಾನವನ್ನು ಹೀಗೆ ವಿವರಿಸಲಾಗಿದೆ: “ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು, ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು, ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆ ಏರಿತ್ತು, ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು, ಅದು ಕಾರಣ, ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!” ಇದು ಶರಣರು ಶಿವ, ಬ್ರಹ್ಮ, ವಿಷ್ಣುಗಳು ಗಂಗೆ-ಗೌರಿ, ಲಕ್ಷಿ, ಸರಸ್ವತಿಯರನ್ನು ಇಟ್ಟುಕೊಂಡ ರೀತಿಯನ್ನು ಪರೋಕ್ಷವಾಗಿ ಟೀಕಿಸಿ ಹೆಣ್ಣನ್ನು ಸಾಕ್ಷಾತ್ ದೇವರ ಸ್ಥಾನಕ್ಕೆ ಏರಿಸಿದ ಪರಿ!
ಗಂಡ-ಹೆಂಡತಿ ಹೇಗಿರಬೇಕೆಂಬುದಕ್ಕೆ ಅಲ್ಲಮರು ಹೇಳಿದ್ದು: “ಸತಿ ಭಕ್ತೆಯಾದೆಡೆ ಹೊಲೆಗಂಜಲಾಗದು, ಪತಿ ಭಕ್ತನಾದೆಡೆ ಕುಲಕಂಜಲಾಗದು, ಸತಿಪತಿ ಅಂಗಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ, ಸತಿಗೆ ಪತಿಯುಂಟೇ? ಪತಿಗೆ ಸತಿಯುಂಟೆ?” ಸತಿ-ಪತಿಗಳಿಬ್ಬರೂ ಲಿಂಗಭಕ್ತರಾದೊಡನೆ ಅವರ ನಡುವೆ ಮೈಲಿಗೆಯಿಲ್ಲ, ಕುಲವಿಲ್ಲ, ಕೇವಲ ಅಂಗಸುಖವಿಲ್ಲ. ಅವರಿಬ್ಬರೂ ಶಿವಭಕ್ತರಾಗಿ ಸಮಾನರು.
ಹೆಣ್ಣು ಮಾಯೆ, ಸಂಸಾರ ಮಾಯೆಯೆಂಬ ಶಂಕರಾಚಾರ್ಯರ ವಾದವನ್ನು ತಿರಸ್ಕರಿಸಿದ ಶರಣರಿಗೆ ಅವಾವೂ ಮಾಯೆಯಲ್ಲ: “ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ. ಗಂಡು ಗಂಡಾದಡೆ ಹೆಣ್ಣಿನ ಸೂತಕ. ಮನದ ಸೂತಕ ಹಿಂಗಿದಡೆ, ತನುವಿನ ಸೂತಕಕ್ಕೆ ತೆರಹುಂಟೆ?” (ಅಕ್ಕಮಹಾದೇವಿ). ಬೇರೊಂದು ವಚನದಲ್ಲಿ ಮಾಯೆಯೆಂದರೆ ಮನದ ಮುಂದಿನ ಆಸೆ ಎಂದೂ ಶರಣರು ಹೇಳುತ್ತಾರೆ. ಆಧ್ಯಾತ್ಮಿಕವಾಗಿ ಹೆಣ್ಣು-ಗಂಡೆಂಬ ದ್ವಿತ್ವವನ್ನು ಜೇಡರ ದಾಸಿಮಯ್ಯ, ಅಕ್ಕಮಹಾದೇವಿಯ ಹಾಗೆ ಅಲ್ಲಗಳೆಯುವ ರೀತಿ ಮಾರ್ಮಿಕವಾದದ್ದು: “ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಗಡ್ಡಮೀಸೆ ಬಂದೆಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ, ಕಾಣಾ ರಾಮನಾಥಾ.”
ಮಾಯಾವಾದವನ್ನು ತಿರಸ್ಕರಿಸಿದ ಶರಣರು ದಾಂಪತ್ಯ ಜೀವನಕ್ಕೆ ಹೆಚ್ಚು ಮಹತ್ವ ನೀಡಿದರು. ಸತಿಪತಿಗಳ ನಡುವಿನ ಸಂಬಂಧವು ಬಸವಣ್ಣನವರು ಹೇಳಿದಂತೆ: “ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಟೆ ಇಲ್ಲದ ಭಕ್ತ, ಇದ್ದೊಡೇನು ಶಿವ ಶಿವಾ ಹೋದೊಡೇನೋ ಕೂಡಲಸಂಗಮ ದೇವಯ್ಯ” ಮತ್ತೊಂದು ವಚನದಲ್ಲಿ: “ಸತಿಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ” ಎಂದು ಸ್ಪಷ್ಟಪಡಿಸುತ್ತಾರೆ.
ಶರಣರ ಸ್ತ್ರೀಪರ ನಿಲುವುಗಳು ಬಹುತೇಕ ಪ್ರಗತಿಪರ ಚಿಂತಕರ ಪ್ರಶಂಸೆಗೆ ಪಾತ್ರವಾಗಿವೆ. ಎನ್.ಮನು ಚಕ್ರವರ್ತಿ, ಡಿ.ಆರ್.ನಾಗರಾಜ, ಗೇಲ್ ಓಮ್ವೆಡ್ತ, ಸೂಸಿ ತಾರು, ಕೆ.ಲಲಿತಾ, ಗಾಯತ್ರಿ ಸ್ಪಿವಾಕರಂತಹ ವಿದ್ವಾಂಸರು ಲಿಂಗಾಯತರಲ್ಲಿನ ಪ್ರಗತಿಪರ ಸ್ತ್ರೀವಾದಿ ನೆಲೆಗಳನ್ನು ಕೊಂಡಾಡಿದ್ದಾರೆ. 1840ರ ಸುಮಾರಿಗೆ ಪಿ.ಸಿ.ಬ್ರೌನ್, ಎಮ್.ಸಿ ಕಾರ್, ಎಂಥೋವೆನ್ರಂತಹ ಪಾಶ್ಚಾತ್ಯರು ಕೂಡ ಈ ಸಂಗತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೀಗಿರುವ ಪ್ರಗತಿಪರವಾದ ಲಿಂಗಾಯತ ಧರ್ಮದ ಮೂಲ ತತ್ವಗಳನ್ನು ತಿರುಚಿ ಶಿವಪ್ರಕಾಶರಂಥ ಸ್ವಾಮಿಗಳು ಅಮಾಯಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ತದ್ವಿರುದ್ಧವಾಗಿ, ಅದೇ ಸಮಾರಂಭದಲ್ಲಿ ಅವರ ಗುರುಗಳಾದ ಉಜ್ಜಯಿನಿಯ ಪೀಠಾಚಾರ್ಯರು “ಅಡ್ಡ ಪಲ್ಲಕ್ಕಿಯಿಂದ ದಾರಿದ್ರ್ಯ ನಿವಾರಣೆಯಾಗುತ್ತದೆ. ಆದ್ದರಿಂದ ಈ ಆಚರಣೆಯನ್ನು ಟೀಕಿಸುವುದು ಸರಿಯಲ್ಲ. ಇಂತಹ ಉತ್ಸವಗಳು ನಿರಂತರವಾಗಿ ನಡೆಯಬೇಕು” ಎಂದು ಹೇಳಿರುವುದು ಮೂಢನಂಬಿಕೆಗಳನ್ನು ಮುಂದುವರೆಸಿ ತಮ್ಮ ಹಿತ ರಕ್ಷಣೆ ಮಾಡಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ದಾಖಲೆಯಾಗಿದೆಯೆಂದರೆ ಎಂತಹ ವಿಪರ್ಯಾಸ! ಇಂತಹ ಸ್ವಾರ್ಥಸಾಧಕರ ಉದ್ದೇಶವನ್ನು ಸಾರ್ವಜನಿಕರು ಅರಿತಷ್ಟು ಸಮಾಜಕ್ಕೆ ಹಿತ.
Comments 1
G.B.Patil
Jan 10, 2019Equality of women:
It is interesting to read Dr Jamadar article with beautiful and mind-blowing VACHANAS.the language and mixture of text with Vachan is really appreciated.I have not noticed Dr Jamadar quoting Vachan while speaking, but in this article HE has useD the Vachans to prove his point.
Let your blog contains more of this kind of articles.