ಸುಂದರ, ಸೂಕ್ಷ್ಮ ದ್ವೀಪ ಜಪಾನ್
ವಚನಗಳ ಓದಿ ಬೆಳೆದ ನಾನು ಎಲ್ಲಾ ಕಡೆ ಶರಣರನ್ನು ಹುಡುಕುತ್ತೇನೆ, ವಿಪರ್ಯಾಸವೆಂದರೆ ನನ್ನಲ್ಲಿ ಹುಡುಕುವುದ ಮರೆತು! ಈ ದೇಶದ ನೆಲದಲ್ಲಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧ ಗುರು ಹುಟ್ಟಿ, ಧ್ಯಾನ ಕಲಿಸಿ, ಶಾಂತಿಯ ಬೋಧನೆ ಮಾಡಿದ. ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಅದ್ಭುತ ಸಂದೇಶ ಕೊಟ್ಟು ಹೋಗಿ ನಮ್ಮನ್ನು ಆಸೆ ಬುರುಕರನ್ನಾಗಿ ಮಾಡಿದರಾ? ‘ದಯವೇ ಧರ್ಮದ ಮೂಲವಯ್ಯ’ ಎಂದ ಬಸವಣ್ಣನವರು ಸತ್ಯ ಶುದ್ಧ ಕಾಯಕ-ದಾಸೋಹ-ಅನುಭಾವದ ನೀತಿ ಕಲಿಸಿ, ಅವುಗಳನ್ನು ಮರೆಸಿಬಿಟ್ಟರಾ? ಸತ್ಯ, ಅಹಿಂಸೆ ಎಂದು ಸಾರುತ್ತಾ ಹಿಂಸೆ ಅನುಭವಿಸಿ ಗಾಂಧಿ ನಮ್ಮಿಂದ ಕೊಲೆಯಾದರಾ? ಬುದ್ಧ ಗುರು ಈಗ ಭಾರತದಲ್ಲಿ ಇಲ್ಲವೇ ಇಲ್ಲ, ಇರುವ ವಾತಾವರಣವೂ ಇಲ್ಲ ಬಿಡಿ.
ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ಇಲ್ಲಿಂದ ಮಾಯವಾದ ಹೊತ್ತಲ್ಲಿ, ಅವರನ್ನು ಇನ್ನೆಲ್ಲೋ ಹುಡುಕುವ ಪ್ರಯತ್ನ ಅಪ್ರಸ್ತುತವಾದರೂ, ವಿದೇಶ ಯಾತ್ರೆಯಲಿ ಅವರ ಮೌಲ್ಯಗಳು ಬೇರೆಬೇರೆ ರೀತಿಯಲ್ಲಿ ಕಾಣಿಸುತ್ತಲೇ ಇರುವುದು ವಿಪರ್ಯಾಸ. ದೇಶ ಸುತ್ತುವುದು ಎಂದರೆ ಒಂದು ನಾಗರಿಕತೆಯಲ್ಲಿ ಬೆಳೆದವರು ಮತ್ತೊಂದು ನಾಗರಿಕತೆಯನ್ನು ಹೊಕ್ಕ ಅನುಭವ! ಪಯಣವೆಂದರೆ ಅದು ಪ್ರತಿಯೊಬ್ಬರ ಅಂತರಂಗದ ಪಯಣವೂ ಹೌದು. ನಮ್ಮ ನಾಡಿನಲ್ಲಿ ದೇಶ ಪ್ರೇಮದ ಮಾತುಗಳಿಗೆ ಲೆಕ್ಕವಿಲ್ಲ. ಆದರೆ ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ನಮ್ಮ ನಾಲಿಗೆ ಮೇಲೆ ಥೈ ಥೈ ಎಂದು ಕುಣಿಯುತ್ತಲಿದ್ದಾರೆ, ಎದೆಯ ಪಸೆಯಿಂದ ಆರಿಹೋಗಿ!
ಭ್ರಷ್ಟಾಚಾರ, ಮೋಸ, ವಂಚನೆ, ಚುನಾವಣಾ ರಾಜಕೀಯ, ದ್ವೇಷ, ಅಸೂಯೆ ಇವುಗಳನ್ನು ಯಾರೂ ಹೇಳಿ ಕೊಡಲಿಲ್ಲ. ಆದರೂ ನಾವು ಹೀಗೇಕೆ? ನಾವು, ನಮ್ಮ ಕುಟುಂಬ, ನಮ್ಮ ನೆರೆಯವರು, ನಮ್ಮ ಬೀದಿ, ನಮ್ಮ ಊರು… ನರಳುತ್ತಿರುವುದಕ್ಕೆ, ನಮ್ಮ ಪರಿಸರ ದಿನದಿಂದ ದಿನಕ್ಕೆ ಹದಗೆಡುತ್ತಿರುವುದಕ್ಕೆ ನಾವೇ ಕಾರಣವಲ್ಲವೇ? ಬರೀ ಮುಖವಾಡಗಳ ಮಧ್ಯೆ ಬದುಕಿ, ಬದುಕಿ ಮುಖಗಳೇ ಮಂಗಮಾಯವಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಾವೇಕೆ ಹೀಗೆ ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತಿದ್ದೇವೆ? ಕಾಯಕ-ದಾಸೋಹ-ಅನುಭಾವಗಳು ಆಚರಣೆಯಲ್ಲಿ ಬರದೇ, ಅವುಗಳನ್ನು ನಮ್ಮೊಳಗೆ ನಿಜವಾಗಿಸಿ ಬದುಕಲು ಸಾಧ್ಯವಾಗುತ್ತಿಲ್ಲ? ಎದೆಯ ಮುಳ್ಳಾಗಿರುವ ಈ ನೋವು ಕಾಡುವ ಹೊತ್ತಿನಲ್ಲಿ, ಪ್ರಾಮಾಣಿಕವಾದ ಹುಡುಕಾಟವೇ ಪ್ರವಾಸಗಳಾದಲ್ಲಿ ನಿಜವಾದ ಕಾರಣಗಳು ಗೋಚರಿಸುತ್ತಾ ಹೋಗುತ್ತವೆನ್ನುವುದು ನನ್ನ ಅನುಭವ.
ಹಾಗೆಯೇ ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ಪ್ರತಿನಿಧಿಯಾಗಿ ಬೇರೆ ದೇಶಗಳಿಗೆ ಹೋಗಲು ಹೆಮ್ಮೆ. ಆದರೆ ನಮ್ಮೊಂದಿಗೆ ಅವರಾಗಲಿ, ಅವರ ತತ್ವಗಳಾಗಲಿ ನೆಲೆಗೊಂಡಿಲ್ಲ ಎಂಬ ಅಪ್ಪಟ ಸತ್ಯ ಅರ್ಥವಾದ ಅಸಹಾಯಕ ಗಳಿಗೆಯಲ್ಲಿ ನಾವು ದೇಶ ಸುತ್ತಿ ವ್ಯಥೆಪಡುತ್ತೇವೆ. ಅಂಥದೊಂದು ಅಂತರಂಗ ಮತ್ತು ಬಹಿರಂಗಗಳ ಹುಡುಕಾಟಕ್ಕೆ ಸಾಕ್ಷಿಯಾಗಿದ್ದು ನನ್ನ ಇತ್ತೀಚಿನ ಜಪಾನ್ ಪ್ರವಾಸ. ಬುದ್ಧನ ಆಶಯಗಳನ್ನು ಉಳಿಸಿಕೊಂಡು, ಬಹುಮಟ್ಟಿಗೆ ಅಂತೆಯೇ ಬದುಕುತ್ತಿರುವ ಜಪಾನ್ ಇತಿಹಾಸ ಕೇಳಿದರೆ ಮೈ ಜುಂ ಎನ್ನುತ್ತದೆ. ನಮ್ಮ ನೆಲದ ಬುದ್ಧ ಅಲ್ಲಿ ನೆಲೆಗೊಂಡಿದ್ದಾನೆ. ಅಪ್ಪಟ ದೇಸಿ, ಗ್ರಾಮೀಣ ಹುಡುಗನಾದ ನನಗೆ ವಿದೇಶ ಯಾತ್ರೆ ನಿರಂತರ ಬೆರಗು. ಜಪಾನ್ ಪಯಣದುದ್ದಕ್ಕೂ ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್ ನನಗೆ ಗೋಚರವಾದರು ಎಂಬುದೇ ಜಪಾನಿನ ವಿಶೇಷ. ಅವರು ಅಲ್ಲಿ ಎಲ್ಲಿ? ಹೇಗೆ? ಯಾವಾಗ? ಭೇಟಿಯಾದರು ಎಂಬುದೆ ಈ ಬರಹದ ಮೂಲ ಆಶಯ. ಬನ್ನಿ ನನ್ನೊಂದಿಗೆ ಜಪಾನ್ ಪಯಣಕೆ!
‘ದೇಶ ನೋಡು ಕೋಶ ಓದು’ ಇದು ತುಂಬಾ ಜನಪ್ರಿಯ ಮಾತಾದರೂ ಸದಾ ಪ್ರಸ್ತುತ. ಸೇವಾ ನಿವೃತ್ತಿಯ ಸಮಯದಲ್ಲಿ ಪ್ರವೃತ್ತಿಗೆ ವಿಭಿನ್ನ ಚಾಲನೆ ಕೊಡುವ ಇರಾದೆ. ಅದರ ಅಂಗವಾಗಿ ನಾಡಿನ ಸಾಂಸ್ಕೃತಿಕ ಸಂಗಾತಿಗಳ ಒಟ್ಟಾಗಿ ಸೇರಿಸುವ ‘ಸಮಕಾಲೀನರ ಸಮಾಗಮ’ದ ಕನಸು. ಕನಸು ಕಾಣುವುದು, ಕಂಡ ಕನಸುಗಳ ನನಸಾಗಿಸಲು ತುಡಿಯುವುದು ನನ್ನ ಹುಚ್ಚು ದೌರ್ಬಲ್ಯ. I’m a man of very much unplanned and indiscipline. ಮನಸಿಗೆ ತೋಚಿದ್ದನ್ನು ಮಾಡಿಯೇ ತೀರಬೇಕೆನ್ನುವ ಗುಣಧರ್ಮ. ದೊಡ್ಡ ಪ್ರಮಾಣದ ಸಮಾಗಮದಲ್ಲಿ ಮೂವತ್ತು ಜನ ಅತಿಥಿಗಳು, ಸಾವಿರ ಸಂಖ್ಯೆಯ ಸಾಹಿತ್ಯಾಸಕ್ತರು ಜಮಾಯಿಸಿ, ಪುಸ್ತಕ ಬಿಡುಗಡೆ ಕೂಡ ನಡೆಯಿತು. ಈ ಎಲ್ಲಾ ಯೋಜನೆಗಳ ಒತ್ತಡದ ಮಧ್ಯೆ, ಜಪಾನಿನಲ್ಲಿ ನೆಲೆಸಿ ಇಲ್ಲಿಗೆ ಮರಳಿದ ಸೋದರ ಬೆಂಜ್ ಕಂಪನಿಯ ಉದ್ಯೋಗಿ ಶಂಭು ಯಾಪಲಪರವಿ ನೆರವು ಕೇಳಿದೆ. ಅವರ ಪರಿಚಯದ ಇಬ್ಬರು ಮಹಿಳಾ ಸ್ಟಾರ್ಟಪ್ ಉದ್ಯಮಿಗಳಾದ ಸವಿತಾ ಹಾಗೂ ರಚನಾ INSARA ಹೆಸರಿನ ಕಂಪನಿ ಆರಂಭಿಸಿ, ಒಂದು ನಿಯೋಗ ಕರೆದೊಯ್ಯುವ ಯೋಜನೆ ರೂಪಿಸಿದ್ದಾರೆ. ‘ನೀನೂ ಹೋಗಬಹುದು’ ಎಂದಾಗ, ವಿಚಾರ ಜಾಗ್ರತವಾಯಿತು. ಆದರೆ ವಿದೇಶಿ ಪ್ರಯಾಣಕ್ಕೆ ಅಗತ್ಯವಿರುವ ಯಾವುದೇ ಪೂರ್ವ ತಯಾರಿ ಇರಲಿಲ್ಲ. ಈ ಯೋಜನೆಗೆ ಬೀದರ ಜಿಲ್ಲೆಯ ಭಾಲ್ಕಿಯ ಎಂಜಿನಿಯರ್ ಯುವ ಮಿತ್ರ ಚನ್ನಬಸವ ಬಳ್ತೆ ಕೈ ಜೋಡಿಸುವ ಭರವಸೆ ನೀಡಿದ್ದರು. ಇದಿಷ್ಟು ಪ್ರವಾಸದ ಹಿನ್ನೆಲೆ.
ಜಪಾನ್ ಏಕೆ?
SWOC ದೃಷ್ಟಿಯಿಂದ ನೋಡುವುದಾದರೆ ಈ ದೇಶದ S- Strength, ಸತ್ಯಶುದ್ಧ ಕಾಯಕ, ಸಮಯಪ್ರಜ್ಞೆ, ಪ್ರಾಮಾಣಿಕತೆ, ಸಿವಿಕ್ ಸೆನ್ಸ್, ಹೆಲ್ತ್ ಅವೇರ್‌ನೆಸ್, ತುಂಬು ಜೀವನ ಮತ್ತು ದೇಶಾಭಿಮಾನ.
Weakness- ಭೌಗೋಳಿಕ ಅಸುರಕ್ಷತೆ, ನಿರಂತರ ಪ್ರಕೃತಿ ವಿಕೋಪಗಳು, ಜನಸಂಖ್ಯಾ ಇಳಿಮುಖ, ಅಂತರರಾಷ್ಟ್ರೀಯ ಸಂಬಂಧಿತ ನಿರಾಸಕ್ತಿ, ಭಾಷಾ ಕೊರತೆ ಹಾಗೂ ಕನ್ಸರ್ವೇಟಿವ್ ಮನೋಭಾವ.
Opportunity- ಅಮೆರಿಕದ ನೆರವು, ಆರ್ಥಿಕ ಸಂಪನ್ಮೂಲ, ದುಡಿಯುವ ಯುವಕರು, ಮಾರ್ಗದರ್ಶನ ನೀಡುವ ಹಿರಿಯರು, ತಂತ್ರಜ್ಞಾನ ಬಳಕೆ, ಮೆಟ್ರೋ ಸಂಪರ್ಕ, ಗುಣಮಟ್ಟದ ಉತ್ಪಾದನೆ ಮತ್ತು ವಿದೇಶಿ ಬೇಡಿಕೆ.
Challenges- ಇಂಗ್ಲಿಷ್ ಕಲಿಕೆಯ ಅಗತ್ಯ, ಇತರ ದೇಶದ ಜನರಿಗೆ ಉದ್ಯೋಗ ನೀಡುವ ಅನಿವಾರ್ಯತೆ, ಸೀನಿಯರ್ ಸಿಟಿಜನ್ ರಕ್ಷಣಾ ಹೊರೆ, ಭೌಗೋಳಿಕ ವಿಕೋಪಗಳ ನಿಯಂತ್ರಣದ ಆರ್ಥಿಕ ಹೊರೆ,
ಆದರೂ ಎಲ್ಲವನ್ನೂ ಧೈರ್ಯದಿಂದ ಎದುರಿಸುವ ‘ಇಕಿಗೈ’ (IKIGAI) ಮನೋಭಾವ.
ಎರಡನೇ ಮಹಾಯುದ್ಧದ ನಂತರ ಹಿರೋಷಿಮಾ- ನಾಗಾಸಾಕಿ ಅಣುಬಾಂಬ್ ದಾಳಿಗೆ ತುತ್ತಾದ ಜಪಾನ್, ಮೈ ಕೊಡವಿ ಮೇಲೆದ್ದ ಇತಿಹಾಸ ಒಂದೆಡೆಯಾದರೆ, ಒಂಬತ್ತು ವರ್ಷಗಳ ಹಿಂದೆ ರಾಯಚೂರು ಶಾಲೆಗೆ ಜಪಾನ್ ನಿಯೋಗವನ್ನು ಆಹ್ವಾನಿಸಲಾಗಿತ್ತು. ಆಗ ಅಲ್ಲಿಂದ ಬಂದಿದ್ದ ಕಿಂಡರ್‌ಗಾರ್ಟನ್ ಪ್ರಾಚಾರ್ಯರು, ಅವರ ಪತಿ ‘ಹಿರೋಕಿ ಇಫುಕು’ ಅಲ್ಲಿನ ಶೈಕ್ಷಣಿಕ ಶಿಸ್ತಿನ ಕುರಿತು ಆಸಕ್ತಿ ಮೂಡಿಸಿದ್ದರು. ಜಪಾನ್ ಬಾಗುವ ಸಂಸ್ಕೃತಿ (Bowing Culture) ಓದಿದಾಗ ‘ಮುಗಿದ ಕೈ ಬಾಗಿದ ತಲೆ’ ಎಂಬ ಶರಣರ ಅಪ್ಪಟ ಸಂಸ್ಕೃತಿಯೊಂದಿಗೆ ಹೋಲಿಕೆಯಾಗಿತ್ತು. ಊಟ ಮಾಡುವ ಮೊದಲು ಊಟ ಮಾಡಲು ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸುವ ‘ಇತದಾಕಿಮಾಸು’ ಎನ್ನುವ ಪ್ರಾರ್ಥನೆ ಅವರಲ್ಲಿನ ಕೃತಜ್ಞತಾ ಮನೋಭಾವಕ್ಕೆ ಸಾಕ್ಷಿ. ‘ಮೌನದಲಿ ಉಂಬುವುದು ಆಚಾರವಲ್ಲ, ಲಿಂಗಾರ್ಪಿತವ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವಶರಣು ಎನ್ನುತ್ತಿರಬೇಕು” ಎಂದು ಸಾಂಕೇತಿಕವಾಗಿ ಇಡೀ ಪ್ರಕೃತಿಯನ್ನು ಮನಸಾರೆ ಸ್ಮರಿಸಿಕೊಳ್ಳುವ ವಚನವೂ ನಮ್ಮಲ್ಲಿದೆ. ಊಟವಾದ ನಂತರ ‘ಗೋಚಿಸೌಸಾಮಾ ದೇಶಿತಾ’ ಎನ್ನುವ ಪದ್ದತಿ ಅಂದರೆ ಊಟ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ತಲೆಬಾಗುವ ವಿನಮ್ರತೆ. ನಮ್ಮಲ್ಲಿ ‘ಅನ್ನದಾತೋ ಸುಖೀಭವ’ ಇರುವ ಹಾಗೆ. ಹೀಗೆ ಅನೇಕ ಧಾರ್ಮಿಕ ವಿಷಯಗಳಲ್ಲಿ ಜಪಾನಿನ ಆಚಾರ-ವಿಚಾರಗಳು ನಮ್ಮೊಂದಿಗೆ ಸಾಮ್ಯತೆ ಹೊಂದುತ್ತವಾದರೂ ಜಪಾನೀಯರು ನಮಗೇಕೆ ಹತ್ತಿರವಾಗಿಲ್ಲ ಎಂಬ ಕುತೂಹಲವೂ ಇತ್ತು.
ಏಶಿಯನ್ ವ್ಯಾಪ್ತಿಯ ಜಪಾನ್ ಎಲ್ಲಾ ದೃಷ್ಟಿಯಿಂದ ಅಮೆರಿಕ ದೇಶಕ್ಕೆ ತುಂಬಾ ಹತ್ತಿರವಿರಲು ಕಾರಣ, ಅಪಾರ ಶ್ರೀಮಂತಿಕೆ ಮತ್ತು ಮುಂದುವರೆದ ತಂತ್ರಜ್ಞಾನದ ವ್ಯಾಪಾರೋದ್ಯಮ. ತೃತೀಯ ರಾಷ್ಟ್ರವಾದ ಭಾರತ ಅನೇಕ ದಾಳಿಗಳಿಂದ ಮೇಲೇಳಲೇ ಇಲ್ಲ. ಅದಕ್ಕೆ ಕಾರಣ ನಮ್ಮ ರಾಷ್ಟ್ರಾಭಿಮಾನದ ಕೊರತೆ ಮತ್ತು ಭ್ರಷ್ಟ ರಾಜಕೀಯ ವ್ಯವಸ್ಥೆ. ನಮ್ಮ ಬಡತನ ದೂರಾಗಿಯೇ ಇಲ್ಲ ಎನ್ನುವ ಕಟು ವಾಸ್ತವ ಜಪಾನಿಯರಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನಾವೆಂದರೆ ಅವರಿಗೆ ಪ್ರೀತಿ, ಗೌರವ ಇದೆ, ಹಾಗೆಯೇ ಸಂಬಂಧ ಬೇಡ ಎಂಬ ಮನಸ್ಥಿತಿಯೂ! ಚೈನಾ, ದಕ್ಷಿಣ ಕೊರಿಯಾ, ರಶಿಯಾ, ಸಿಂಗಪುರ್, ಮಲೇಷಿಯಾದಂತಹ ರಾಷ್ಟ್ರಗಳು ದೇಶ ಕಟ್ಟಿದ ಮಾದರಿ ನಮಗೆ ಪ್ರೇರಣೆ ಆಗಲೇ ಇಲ್ಲ. ಇದು ನಮ್ಮ ದುರಾದೃಷ್ಟವೂ ಹೌದು. ಸಾಂಸ್ಕೃತಿಕ ವಿನಿಮಯದಡಿಯಲ್ಲಿ ರಶಿಯಾ, ಇಂಗ್ಲೆಂಡ್ ಹಾಗೂ ಅಮೆರಿಕ ಸುತ್ತುವ ನಾವು ಪ್ರವಾಸದ ಕಾರಣದಿಂದ ಜಪಾನಿನಿಂದ ದೂರ ಉಳಿಯಲು ಭಾಷಾ ತೊಡಕು ಪ್ರಮುಖ ಕಾರಣ. ಬ್ರಿಟಿಷ್ ಆಳ್ವಿಕೆಯಿಂದ ನಮಗೆ ಇಂಗ್ಲಿಷ್ ಹತ್ತಿರ, ಆದರೆ ಇತರ ಏಶಿಯನ್ ಭಾಷೆಗಳಲ್ಲ. ಭಾಷಾ ಮಾಧ್ಯಮದ ವಿಷಯ ಬಂದಾಗ ಜಪಾನ್, ರಶಿಯಾ, ಚೈನಾ ಹಾಗೂ ಜರ್ಮನ್ ದೇಶದ ಉದಾಹರಣೆ ತೆಗೆದುಕೊಳ್ಳುತ್ತೇವೆ. ಆದರೆ ಇಂಗ್ಲಿಷ್ ಮಾಧ್ಯಮದ ಅನಿವಾರ್ಯತೆಗೆ ಜೋತು ಬಿದ್ದಿದ್ದೇವೆ. ಇಷ್ಟೆಲ್ಲಾ ಬಗೆ ಬಗೆಯ ಕಾರಣಗಳಿದ್ದರೂ ನನ್ನ ಜಪಾನ್ ನೋಡುವ ವಾಂಛೆ ಮಾತ್ರ ಕಡಿಮೆಯಾಗಲಿಲ್ಲ. ಈ ಭಾಷಾ ತೊಡಕು ಮತ್ತು ಜಪಾನಿಗರ ‘ನಾನ್ ಇಂಗ್ಲಿಷ್’ ಭಾಷಾ ಧೋರಣೆಯಿಂದಾಗಿ ಪ್ರವಾಸಿಗರು ದೂರ ಸರಿಯುತ್ತಾರೆ. ತೀರಾ ಇತ್ತೀಚೆಗೆ ಟೊಯೋಟಾ ಕಂಪನಿ ನಮ್ಮ ರಾಜ್ಯಕ್ಕೆ ಕಾಲಿಟ್ಟ ಮೇಲೆ ಪರಿಸ್ಥಿತಿ ಬದಲಾಗಿದೆ, ಆಗಬೇಕು ಕೂಡ.
ಇನ್ಸಾರಾ ತಂಡದೊಂದಿಗೆ ಬೆಂಗಳೂರು – ಕೌಲಾಲಂಪುರ್ ಹಾಗೂ ಅಲ್ಲಿಂದ ಟೋಕಿಯೋ ತಲುಪಿದಾಗಿನಿಂದ ಎಲ್ಲಾ ಹೊಸ ಅನುಭವ. ಕನ್ನಡ ಮೂಲದ ಸಂತೋಷ ಗೋಲಗೇರಿ ದೊಡ್ಡದಾದ ಕಾರಿನಲ್ಲಿ ನಮ್ಮ ತಂಡದ ಏಳು ಜನರನ್ನು ಪ್ರೀತಿಯಿಂದ ಕರೆಯಲು ಬಂದಾಗ ತುಂಬಾ ಖುಷಿ. ಸಮಯ ಪ್ರಜ್ಞೆ ಹಾಗೂ ಪೂರ್ವ ನಿಯೋಜಿತ ಯೋಜನೆಯಂತೆ ಕೆಲಸ ಮಾಡುವಾಗ ಸಂತೋಷ ನಮಗಾಗಿ ‘ನರಿತಾ’ ಏರ್ ಪೋರ್ಟ್ ತಲುಪಿದ್ದರು. ಬೆಂಗಳೂರಿನಲ್ಲಿ ಸೇವೆಯಲ್ಲಿರುವ ಚಿಕ್ಕಮಕ್ಕಳ ವೈದ್ಯ ಡಾ.ಶೇಖರ್ ಸುಬ್ಬಯ್ಯ, ಡಾ. ಚೇತನ್ ಗಿಣಿಗೇರಿ ಹಾಗೂ ಹೈಕೋರ್ಟ್ ವಕೀಲ, ವೃತ್ತಿಯ ಜೊತೆಗೆ ಸಮಾಜೋ ಸಾಂಸ್ಕೃತಿಕ ಕಾರ್ಯದಲ್ಲಿ ಆಸಕ್ತಿ ಹೊಂದಿದ ಶಿವಕುಮಾರಗೌಡ, ಭಾಲ್ಕಿಯ ಎಂಜಿನಿಯರ್ ಹಾಗೂ ಕೃಷಿಕ ಚನ್ನಬಸವ ಬಳ್ತೆ ಹಾಗೂ ಸಾಹಿತ್ಯ-ಶಿಕ್ಷಣ ಕ್ಷೇತ್ರದ ಆಸಕ್ತನಾದ ನಾನು! ಐದು ಜನರ ನಿಯೋಗಕ್ಕೆ ಸವಿತಾ ಹಾಗೂ ರಚನಾ ನಾಯಕರು. ಜಪಾನ್ ದೇಶದ ಸಂಸ್ಕೃತಿ ಹಾಗೂ ಭಾಷಾಜ್ಞಾನ ಹೊಂದಿದ್ದ ಇವರು ಒಂದು ವಾರದ ಅರ್ಥಪೂರ್ಣ ಯೋಜನೆ ರೂಪಿಸಿದ್ದರು. ತಲುಪಿದ ಕೂಡಲೇ ಹೋಮ್ಲಿ ಭಾವನೆ ಮೂಡಲು ವೆಜ್ ಕರಿ ಹಾಗೂ ಅನ್ನದ ಊಟ ಸವಿದೆವು. ನಿಯೋಗದ ತಂಡದ ಸದಸ್ಯರ ಪರಿಚಯದ ಜೊತೆಗೆ ಜಪಾನ್ ದೇಶದ ಸಮಯಪ್ರಜ್ಞೆ ಕುರಿತು ಬೆಳಿಗ್ಗೆ ಬೇಗ ಏಳುವ ಹಾಗೂ ಸಮಯ ಪಾಲಿಸುವ ಆದೇಶ ಎಚ್ಚರಿಕೆಯ ರೂಪದಲ್ಲಿ ಸಿಕ್ಕಿತ್ತು. ಇಲ್ಲಿ ಇದು ಎಷ್ಟು ಮಹತ್ವದ್ದು ಎಂಬುದು ನಿತ್ಯ ಅರ್ಥವಾಗುತ್ತ ಹೋಯಿತು.
ರಾತ್ರಿ ಕೋಣೆ ಸೇರುವ ಮೊದಲು ವಸತಿ ಹೋಟೆಲಿನ ಹದಿನಾಲ್ಕನೆಯ ಮಹಡಿಯ ಬಿಸಿ ನೀರು ಸ್ನಾನದ ಕುತೂಹಲ ಸಂಗತಿ ತಿಳಿಯಿತು, ಈ ಸ್ನಾನದ ಅನಿರೀಕ್ಷಿತ ಅನುಭವಗಳನ್ನು ಮುಂದೆ ವಿವರವಾಗಿ ಹೇಳುವೆ. ಪಾಸ್‌ಪೋರ್ಟ್ ಹಾಗೂ ಅಗತ್ಯ ಸಾಮಗ್ರಿಗಳನ್ನು ಜೋಪಾನವಾಗಿ ಕಾಪಾಡುವ ಆಂತರಿಕ ಎಚ್ಚರಿಕೆಯಿಂದ ‘ಆ ಹೊಸ ಬಗೆಯ ಸ್ನಾನ’ ಮುಗಿಸಿ ನಿದ್ರೆಗೆ ಜಾರಿದ ‘ಮೊದಲ ರಾತ್ರಿ’ ಸುಂದರವಾಗಿತ್ತು. ನಮಗೂ ಅಲ್ಲಿಗೂ ಸಮಯದ ಅಂತರ ಸುಮಾರು ಮೂರುವರೆ ತಾಸು. ಅತ್ಯಾಧುನಿಕ ಬಾತ್ ರೂಮ್ ಕಲ್ಚರ್, ಪ್ರತಿಕ್ಷಣ ಸಮಯಕ್ಕೆ ಸರಿಯಾಗಿ ಹಿಡಿಯಬೇಕಾದ ಮೆಟ್ರೋ ರೈಲುಗಳು, ಹೆಗಲೇರುವ ಪುಟ್ಟ ಬ್ಯಾಗು, ಸುರಕ್ಷಿತ ಜಾಗದಲ್ಲಿ ನೆಲೆಗೊಂಡ ಪಾಸ್‌ಪೋರ್ಟ್, ಸುಂದರ ತಾಣಗಳನ್ನು ಸೆರೆ ಹಿಡಿಯಲು ಅಗತ್ಯವಿರುವ ಮೊಬೈಲ್ ಸಲಕರಣೆಗಳು… ಪ್ರತಿನಿತ್ಯ ಕನಿಷ್ಟ ಹತ್ತಾರು ಕಿಲೋಮೀಟರ್ ಓಡಾಟದ ಸೂಚನೆಯನ್ನು ಮೊದಲೇ ತಿಳಿಸಲಾಗಿತ್ತು. ಅರವತ್ತರ ಹರೆಯದ ನನಗೆ ಇದು ಭಾರವಾಗಬಹುದು ಎಂಬ ಅಳುಕು ನನ್ನನ್ನು ಕಾಡಲಿಲ್ಲ. ಸಮಯಕ್ಕೆ ಸರಿಯಾಗಿ ಸಿದ್ಧವಾಗಿ, ಇನ್ಸಾರಾ ತಂಡದ ಟೀ ಶರ್ಟ್ ಧರಿಸಿ ಮೊದಲ ದಿನದ ಯಾತ್ರೆ ಆರಂಭವಾಯಿತು.
ಈ ಯಾತ್ರೆಯ ಮೂಲ ಆಶಯ ಅಧ್ಯಯನವೇ ಹೊರತು ಮೋಜಿನ ಸುತ್ತಾಟ ಅಲ್ಲ ಎಂಬ ಅರಿವು ಸದಾ ಎಚ್ಚರಿಸುತ್ತಿತ್ತು. ಜಪಾನ್ ದೇಶದ ಪ್ರತಿಷ್ಠಿತ ಕಂಪನಿಯ ಎಂ.ಡಿ. ಹಾಗೂ ಸಿ.ಇ.ಓ.ಗಳು, ಮುಖ್ಯವಾಗಿ ಆರೋಗ್ಯ ಸಂಬಂಧಿಸಿದ ಆಸ್ಪತ್ರೆಗಳು, ಕೃಷಿ ಇಲಾಖೆಯ ಅಧಿಕಾರಿಗಳ ವಿವರ ಅರಿತಿದ್ದೆವು. SWOC ಆಧಾರದಿಂದ ಈ ದೇಶವನ್ನು ಅಳೆಯುವುದು ಅಸಾಧ್ಯ ಎನಿಸಿತು. ನಾಗರಿಕ ಪ್ರಜ್ಞೆ, ಕಾಯಕ ಸಂಸ್ಕೃತಿ, ಸ್ವಚ್ಚ ಪರಿಸರ, ಸೂಕ್ಷ್ಮಾತಿ ಸೂಕ್ಷ್ಮ ಬಾಡಿ ಲ್ಯಾಂಗ್ವೇಜ್, ಸಾರ್ವಜನಿಕ ದಿವ್ಯ ಮೌನ, ನಂಬಲಸಾಧ್ಯವಾದ ಸಮಯಪ್ರಜ್ಞೆ, ಪ್ರತಿಕ್ಷಣ ನಮ್ಮನ್ನು ಆಕ್ರಮಿಸಲಾರಂಭಿಸಿದವು. ಯುರೋಪ್ ಹಾಗೂ ಅಮೆರಿಕಾ ದೇಶಗಳು ಕೂಡ ಬೆಚ್ಚಿ ಬೀಳುವ ಅಪರೂಪದ ಸಂಸ್ಕೃತಿಗಳ ಬೀಡು ಈ ನಾಡು. ಅಭದ್ರತೆ ಹಾಗೂ ಅಸುರಕ್ಷಿತ ಎಂಬ ಭೀತಿ ಇವರನ್ನು ಕಾಡುವುದಿಲ್ಲ, ಆದರೆ ಸದಾ ಎಚ್ಚರಿಸುತ್ತದೆ. ಇವೆರಡೂ ನಕಾರಾತ್ಮಕ ವಿಷಯಗಳೇ ಇವರ ಬಲ (Strength). ಅಂಗೈಯಲ್ಲಿ ಜೀವ ಹಿಡಿದು ಬದುಕುವವರಿಗೆ ಬದುಕಿನ ಬೆಲೆ ಚೆನ್ನಾಗಿ ಗೊತ್ತಿರುತ್ತದೆ, ಇವರು ಹೆಚ್ಚು ಪ್ರಾಮಾಣಿಕ ಮತ್ತು ಪಾರದರ್ಶಕವಾಗಿರಲು ಇದೂ ಕಾರಣ. ‘Necessity is the mother of invention’ ಸೂತ್ರ ಹಿಡಿದುಕೊಂಡು ಅನೇಕ ಸುರಕ್ಷತಾ ವಿಧಾನಗಳ ಮೂಲಕ ಎಚ್ಚರಿಕೆಯಿಂದ ಬದುಕುವ ಇವರು ಇಡೀ ಜಗತ್ತಿಗೆ ಆದರ್ಶವಾಗಿದ್ದು ಹೇಗೆ? ಮುಂದೆ ನೋಡೋಣ.
(ಮುಂದುವರಿಯುವುದು)
Comments 9
Bhagya Tammanna
Sep 19, 2024ಸಿದ್ದು ಯಾಪಲಪರಿಯವರ ಜಪಾನ್‌ನ ಪ್ರವಾಸ ಕಥನ interesting ಆಗಿದೆ.
Suresh G. P
Sep 19, 2024ನನಗೂ ಜಪಾನೀಯರ ಬಗೆಗೆ ವಿಶೇಷ ಆಸಕ್ತಿ ಇದೆ. ಕಾಯಕಪ್ರೇಮಿಗಳಾದ ಅವರು ತಮ್ಮ ದೇಶವನ್ನು ಕಟ್ಟಿದ ರೀತಿಯೇ ಅದ್ಭುತವಾದದ್ದು. ನೀವು ಜಪಾನಿನ ಅನುಭವಗಳನ್ನು ಬುದ್ಧನ ಹಿನ್ನೆಲೆಯಲ್ಲಿ ಅವಲೋಕಿಸುತ್ತಿರುವುದು ಉತ್ತಮವಾದ ಪ್ರಯತ್ನ.
ಡಿ. ಉಮಾಪತಿ, ಬೆಂಗಳೂರು
Sep 19, 2024ಬುದ್ಧ ಗಾಂಧಿ ಅಂಬೇಡ್ಕರ್ ಅವರನ್ನು ಉಲ್ಲೇಖಿಸುವ ಪ್ರೊ ಯಾಪಲಪರವಿ ಭಾರತ ಹಿಂದುಳಿಯಲು ಬಹುಮುಖ್ಯ ಕಾರಣವಾದ ಮೇಲುಕೀಳಿನ ಏಣಿಶ್ರೇಣಿಯ ಜಾತಿವ್ಯವಸ್ಥೆಯನ್ನು ಪ್ರಸ್ತಾಪಿಸದೆ ಬಿಟ್ಟದ್ದು ನಿರಾಶಾದಾಯಕ…
ರಾಜೀವ್ ಬರಗೂರು
Sep 22, 2024ಜಪಾನಿನಲ್ಲಿ ಬುದ್ಧ ಕಾಣಬಹುದು, ತಾತ್ವಿಕವಾಗಿ ಬಸವಣ್ಣನವರೂ ಕಾಣಬಹುದು. ಭಾರತದಲ್ಲಿ ಇವರ ನೆರಳೂ ಇಲ್ಲವಾಗಿದೆ.
ಜಗದೀಶ್, ಶಿವಮೊಗ್ಗ
Sep 24, 2024ಪ್ರವಾಸಗಳು ಅಂತರಂಗದ ಹುಡುಕಾಟಗಳೂ ಹೌದು ಎನ್ನುವುದು ಒಪ್ಪುವಂತಹ ಮಾತು… ವಿದೇಶಗಳ ಪ್ರವಾಸ ನಮ್ಮನ್ನು ನಮ್ಮ ಮೂರ್ಖತೆಯಿಂದ ಬಿಡುಗಡೆಗೊಳಿಸಬೇಕು.
ಗಿರಿಬಾಬು, ಗದಗ
Sep 29, 2024ಬುದ್ಧ ಇನ್ನೂ ಜೀವಂತ ಇದ್ದರೆ ಅದು ಭೂತಾನ್ ಮತ್ತು ಜಪಾನಿನಲ್ಲಿ ಅಂತಾರೆ… ಈ ಎರಡೂ ದೇಶಗಳನ್ನು ತುಲನೆ ಮಾಡಿ ನೋಡಿದರೆ ಹೇಗೆ?
vanajakshi S
Sep 30, 2024ಜಪಾನ್ ಪ್ರವಾಸ ಅಧ್ಯಯನಕ್ಕಾಗಿ ನಡೆಸಿದ್ದು ಎಂದು ಲೇಖಕರು ಹೇಳಿದ್ದು ಅವರ ಮಾತು ಹಾಗೂ ಅನುಭವಗಳನ್ನು ಆಸಕ್ತಿಯಿಂದ ಗಮನಿಸುವಂತೆ ಮಾಡಿವೆ. ಜಪಾನಿನ ಸಿನೆಮಾಗಳು, ಇಕಿಗಾಯ್ ಅವರ ಕುರಿತಾಗಿ ನನ್ನ ಆಸಕ್ತಿಯನ್ನು ಹುಟ್ಟಿಸಿದ್ದವು. ಪ್ರವಾಸನುಭವದ ಆರಂಭ ಚೆನ್ನಾಗಿದೆ. ಮುಂದೇನು ಬರೆಯುವರು ಎಂದು ಕುತೂಹಲ ಮೂಡಿದೆ.
ನರಸಿಂಹಮೂರ್ತಿ ಸಂಕೇಶ್ವರ
Oct 3, 2024ನಾಗರಿಕ ಪ್ರಜ್ಞೆ, ಕಾಯಕ ಸಂಸ್ಕೃತಿ, ಸ್ವಚ್ಚ ಪರಿಸರ, ಸೂಕ್ಷ್ಮಾತಿ ಸೂಕ್ಷ್ಮ ಬಾಡಿ ಲ್ಯಾಂಗ್ವೇಜ್, ಸಾರ್ವಜನಿಕ ದಿವ್ಯ ಮೌನ, ನಂಬಲಸಾಧ್ಯವಾದ ಸಮಯಪ್ರಜ್ಞೆ- ಜಪಾನಿಯರು ಹೇಗೆಂದು ಅರಿಯಲು ಇಷ್ಟು ಸಾಕು👌👌
ಮಹೇಶ ಗುರಳಿ
Oct 13, 2024ಜಪಾನ್ ಜನರು ಗಂಭೀರ ಮತ್ತು ತಮ್ಮ ಪಾಡಿಗೆ ತಾವು ಇರೋರು. ಜನಬಳಕೆ ಮಾತ್ರ ತೀರಾ ಕಡಿಮೆ, ಯಾಕೆ ಸರ್?