ಸಂಸ್ಕೃತ ಕೃತಿಗಳು
ಬಸವಣ್ಣನವರ ಪೂರ್ವದಲ್ಲೇ ಆಗಲಿ ಅವರ ಕಾಲದಲ್ಲೇ ಆಗಲಿ ಲಿಂಗಾಯತ ಧರ್ಮ ಕುರಿತ ಯಾವ ಸಂಸ್ಕೃತ ಗ್ರಂಥವು ರಚನೆಯಾಗಿರಲಿಲ್ಲ. ಆದರೆ ಬಸವೋತ್ತರ ಕಾಲದಲ್ಲಿ ಅನೇಕ ಪಾಂಡಿತ್ಯಪೂರ್ಣ ಸಂಸ್ಕೃತ ಗ್ರಂಥಗಳು ರಚಿಸಲ್ಪಟ್ಟವು. ಆದರೆ ಆ ಗ್ರಂಥಗಳು ಲಿಂಗಾಯತ ಧರ್ಮದ ಬಗೆಗಿನ ನಮ್ಮ ಜ್ಞಾನವನ್ನು ಹೆಚ್ಚಿಸುವುದರ ಬದಲು ಜಟಿಲಗೊಳಿಸಿದವು. ಅವುಗಳಲ್ಲಿ ಕೆಲವು ಮುಖ್ಯವಾದವುಗಳನ್ನು ಇಲ್ಲಿ ಪ್ರಸ್ತಾಪಿಸಬಹುದು.
ಶಿವಯೋಗಿ ಶಿವಾಚಾರ್ಯನ ಸಿದ್ಧಾಂತ ಶಿಖಾಮಣಿ: ಗ್ರಂಥದ ಮೊದಲನೆಯ ಅಧ್ಯಾಯದಲ್ಲಿ ಶಿವಯೋಗಿಯು ತಾನು ಸಿದ್ಧರಾಮನ ವಂಶದವನೆಂದು ಹೇಳಿಕೊಳ್ಳುತ್ತಾನೆ. ಪ್ರಾಯಶಃ ಅವನು 15ನೆಯ ಶತಮಾನದಲ್ಲಿ ಜೀವಿಸಿದ್ದಿರಬಹುದು. ಗ್ರಂಥದ ಶೀರ್ಷಿಕೆಯಲ್ಲಿನ ‘ಸಿದ್ಧಾಂತ’ ಪದವು ಶೈವ ಸಿದ್ಧಾಂತಕ್ಕೆ ಅನ್ವಯಿಸುವುದಲ್ಲದೆ ಶೈವ ಸಿದ್ಧಾಂತದ ಅನೇಕ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತದೆ. ಶೈವ ಸಿದ್ಧಾಂತಿಗಳಂತೆ ಶಿವಯೋಗಿಯು ಶಕ್ತಿಯನ್ನು ಶಿವನ ಹೆಂಡತಿ (‘ಧರ್ಮಚಾರಿಣೀ’) ಎಂದು ಕರೆಯುತ್ತಾನೆ; ಆದರೆ ಶಕ್ತಿಯನ್ನು ಪ್ರಕೃತಿಯೆಂದು ಕರೆಯುತ್ತಾನೆ. ರೇಣುಕ ಮತ್ತು ಅಗಸ್ತ್ಯರ ಸಂವಾದ ರೂಪದಲ್ಲಿರುವ ಈ ಕೃತಿಯು ಅನೇಕ ವೀರಶೈವ ಧರ್ಮದ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತದೆ. ನೂರೊಂದು ಸ್ಥಲಗಳಲ್ಲಿ ಅಡಗಿರುವ ವೀರಶೈವದ ದಾರ್ಶನಿಕ ಮತ್ತು ಧಾರ್ಮಿಕ ಸಿದ್ಧಾಂತಗಳನ್ನು ನಿರೂಪಿಸುವುದು ಕೃತಿಯ ಮೂಲ ಉದ್ದೇಶವಾದರೂ ರಾಮಾಯಣ ಕಾಲದಲ್ಲಿಯೇ ವೀರಶೈವ ಧರ್ಮ ಪ್ರಚಲಿತವಿತ್ತು ಎಂದು ಸಾಧಿಸುವ ದುರುದ್ದೇಶವೂ ಅದಕ್ಕೆ ಇದೆ. ಆದರೆ ಅದನ್ನು ಸಾಧಿಸುವ ಭರದಲ್ಲಿ ಕೃತಿಕಾರ ಅನೇಕ ತಾರ್ಕಿಕ ದೋಷಗಳನ್ನು ಎಸಗಿದ್ದಾನೆ. ಅವುಗಳಲ್ಲಿ ಕೆಲವು ಅತಿ ಮುಖ್ಯವಾದವುಗಳು ಈ ಕೆಳಗಿನಂತಿವೆ:
1. ರೇಣುಕರು ಮಾನವ ತಂದೆ ತಾಯಿಗಳಿಂದ ಜನಿಸದೆ ಕಲ್ಲಿನ ಲಿಂಗದಲ್ಲಿ ಹುಟ್ಟುತ್ತಾರೆ.
2. ರೇಣುಕರು ದ್ವಾಪರ ಯುಗದಲ್ಲಿ ಹುಟ್ಟಿದರೂ ಅನೇಕ ಸಾವಿರ ವರ್ಷಗಳ ಹಿಂದಿನ ತ್ರೇತಾಯುಗದಲ್ಲಿದ್ದ ಅಗಸ್ತ್ಯನಿಗೆ ಬೋಧಿಸುತ್ತಾರೆ.
3. ಅಲ್ಲದೆ ರೇಣುಕರು ರಾವಣನ ತಮ್ಮ ವಿಭೀಷಣನ ಆಮಂತ್ರಣದ ಮೇರೆಗೆ ಲಂಕೆಗೂ ಹೋಗಿ ಮೂರು ಕೋಟಿ ಸ್ಥಾವರ ಲಿಂಗಗಳನ್ನು ಪ್ರತಿಷ್ಠಾಪಿಸುತ್ತಾರೆ. ರಾಮಾಯಣ ಕಾಲದಲ್ಲಿ ಹುಟ್ಟಿದ್ದ ಅಗಸ್ತ್ಯ ಸಾವಿರಾರು ವರ್ಷಗಳ ಕಾಲ, ಅಂದರೆ, ರೇಣುಕ ಬರುವವರೆಗೂ ಜೀವಿಸಿದ್ದನೆಂಬ ತಾರ್ಕಿಕ ಸಾಧ್ಯತೆಯನ್ನು ವಾದಕ್ಕಾಗಿ ಒಪ್ಪಿಕೊಂಡರೂ ಮಹಾಭಾರತ ಕಾಲದಲ್ಲಿ ಹುಟ್ಟಿದ ರೇಣುಕರು ಸಾವಿರಾರು ವರ್ಷಗಳ ಹಿಂದಿನ ರಾಮಾಯಣ ಕಾಲಕ್ಕೆ ಹೋದರು ಎಂಬುದು ಎಲ್ಲ ತಾರ್ಕಿಕ ನಿಯಮಗಳನ್ನು ಕಸದ ಬುಟ್ಟಿಗೆ ಹಾಕುವ ಅವಿವೇಕವನ್ನು ತೋರಿಸುತ್ತದೆ.
4. ತಾನು ಬೌದ್ಧ, ಸಾಂಖ್ಯ ಮುಂತಾದ ದರ್ಶನಗಳನ್ನು ಖಂಡಿಸಲು ಅವತರಿಸಿದ್ದೇನೆ ಎಂದು ರೇಣುಕರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಆ ದರ್ಶನಗಳು ಇನ್ನೂ ಹುಟ್ಟಿರಲೇ ಇಲ್ಲ. ಅವು ಹುಟ್ಟುವುದು ಕಲಿಯುಗದಲ್ಲಿ.
5. ರೇಣುಕ ಅಗಸ್ತ್ಯನಿಗೆ ವೀರಶೈವ ಧರ್ಮವನ್ನು ಮೊಟ್ಟ ಮೊದಲು ಬೋಧಿಸಿದರು ಎಂಬುದು ಪಂಡಿತರ ವಾದ. ಈ ವಾದ ಅಸತ್ಯ. ಏಕೆಂದರೆ ಆಗಮಗಳಲ್ಲಿದ್ದುದನ್ನೆ ರೇಣುಕರು ಪುನರುಚ್ಚರಿಸುತ್ತಿದ್ದಾರೆ ಎಂಬುದು ಸಿದ್ಧಾಂತ ಶಿಖಾಮಣಿಯ ಅನೇಕ ಶ್ಲೋಕಗಳಿಂದ ಸಿದ್ಧವಾಗುತ್ತದೆ.
6. ಶಿವನೊಂದಿಗೆ ಏಕತ್ವ ಸಾಧಿಸುವುದೇ ಲಿಂಗಾಯತ ಧರ್ಮದ ಗುರಿ ಎಂದು ಬೋಧಿಸಿದ ರೇಣುಕರು ತಾವು ಮಾತ್ರ ಮತ್ತೆ ಕೈಲಾಸಕ್ಕೆ ಹೋಗಿ ಶಿವನಿಂದ ಭಿನ್ನವಾಗಿಯೇ ಉಳಿದುಕೊಳ್ಳುತ್ತಾರೆ.
7. ಗ್ರಂಥದ ಮೂರನೆಯ ಅಧ್ಯಾಯದಲ್ಲಿ ಕೈಲಾಸದಲ್ಲಿರುವ ಶಿವ ಜನಿವಾರಧಾರಿಯಾದ ಬ್ರಾಹ್ಮಣನಂತೆ ಚಿತ್ರಿತನಾಗಿದ್ದಾನೆ.
ಸ್ವಪ್ರಭಾನಂದನ ಶಿವಾದ್ವೈತ ಮಂಜರಿ: ಸ್ವಪ್ರಭಾನಂದನ ಬಗ್ಗೆ ಯಾವ ವಿವರಗಳೂ ನಮಗೆ ಸಿಕ್ಕುವುದಿಲ್ಲ. ಆದರೆ ಗ್ರಂಥವನ್ನು ಪ್ರಕಾಶಿಸಿದ ಕಾಶೀನಾಥ ಶಾಸ್ತ್ರಿ ಎಂಬ ಬಸವದ್ವೇಷಿಯು ತನ್ನ ಮುನ್ನುಡಿಯಲ್ಲಿ ಸ್ವಪ್ರಭಾನಂದ ಕ್ರಿ.ಶ. 7ನೇ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಪಂಡಿತನೆಂದೂ ಆಗ ಕಾಶ್ಮೀರದಲ್ಲಿ ವೀರಶೈವ ಧರ್ಮವು ಪ್ರಚಲಿತವಿತ್ತೆಂದೂ ಊಹಿಸುತ್ತಾನೆ. ಆದರೆ ಶಾಸ್ತ್ರಿಯು ತನ್ನ ಊಹೆಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ. ಮೂಲ ಕೃತಿಯು ಕೇವಲ 36 ಪುಟಗಳನ್ನು ಒಳಗೊಂಡಿದ್ದರೆ, ಅದರ ಮೇಲಿನ ಭಾಷಾಂತರ ಮತ್ತು ವ್ಯಾಖ್ಯಾನದಲ್ಲಿ 1323 ಪುಟಗಳಿವೆ. ವ್ಯಾಖ್ಯಾನಕಾರನು ಶ್ರೀಕರ ಭಾಷ್ಯ, ಶ್ರೀಕಂಠ ಭಾಷ್ಯ, ಸಿದ್ಧಾಂತ ಶಿಖಾಮಣಿಗಳನ್ನು ಉದ್ಧರಿಸಿರುವುದರಿಂದ ಅವನು 19ನೇ ಶತಮಾನದವನಿರಬೇಕು ಎಂದು ತರ್ಕಿಸಬಹುದು.
ಈ ಗ್ರಂಥದಲ್ಲಿ ಮೂರು ಭಾಗಗಳಿವೆ. ಮೊದಲನೆಯದು ಶಂಕರರ ಅದ್ವೈತವನ್ನು ಮಂಡಿಸುತ್ತದೆ. ಎರಡನೆಯದು ಅದ್ವೈತಕ್ಕೆ ವಿರುದ್ಧವಾದ, ಉತ್ತರಿಸಲಾಗದಂಥ ಆಕ್ಷೇಪಣೆಗಳನ್ನು ಒಳಗೊಂಡಿದೆ. ಮೂರನೆಯದು ಶಿವಪಾರಮ್ಯವನ್ನೂ ಶಿವಾದ್ವೈತವನ್ನೂ (ವೀರಶೈವ ದರ್ಶನವನ್ನೂ) ಪ್ರತಿಪಾದಿಸುತ್ತದೆ. ಮೊದಲನೆಯ ಎರಡು ಭಾಗಗಳು ವಿಷಯ ಮಂಡನೆಗೆ ಬ್ರಹ್ಮ ಸೂತ್ರ, ರತ್ನಪಭಾ, ಭಾಮತೀ, ಕಲ್ಪತರು, ಶ್ರೀ ಭಾಷ್ಯ, ಶ್ರೀಕರ ಭಾಷ್ಯ, ಶ್ರೀಕಂಠ ಭಾಷ್ಯ, ಕ್ರಿಯಾಸಾರ, ಮುಂತಾದವುಗಳನ್ನು ಅವಲಂಬಿಸಿವೆ; ಮೂರನೇ ಭಾಗವು ವಿಷಯಮಂಡನೆಗೆ ಶ್ರೀಕರ ಭಾಷ್ಯ, ಶ್ರೀ ಭಾಷ್ಯ, ಶ್ರೀಕಂಠ ಭಾಷ್ಯ, ಕ್ರಿಯಾಸಾರ, ಸಿದ್ಧಾಂತ ಶಿಖಾಮಣಿಗಳನ್ನು ಅವಲಂಬಿಸಿದೆ.
ಈಗ ನಾವು ಮೂರನೆಯ ಭಾಗದ ಪರಿಶೀಲನೆ ಮಾಡೋಣ. ವೀರಶೈವ ಧರ್ಮ ಪ್ರಪಂಚವು ಮಾಯೆ ಎಂಬ ವಾದವನ್ನು ತಿರಸ್ಕರಿಸಿ ಅದು ಸತ್ಯವೆಂಬುದನ್ನು ಪ್ರತಿಪಾದಿಸುತ್ತದೆ. ಬ್ರಹ್ಮವು ಕೇವಲ ಚಿನ್ಮಯವಾಗಿದ್ದರೂ ಅದು ಅಚೇತನ ವಸ್ತುಗಳನ್ನು ಸಹ ಉತ್ಪಾದಿಸಬಲ್ಲದು – ಸಗಣಿಯು ಕ್ರಿಮಿಕೀಟಗಳನ್ನು ಉತ್ಪಾದಿಸಿದಂತೆ. ಅಲ್ಲದೆ, ಜಗತ್ತು ಶಿವನ ಅಪರಿಮಿತ ಶಕ್ತಿಯಿಂದ ಉತ್ಪಾದಿಸಲ್ಪಟ್ಟಿದೆ. ವಿಶೇಷಣವು ದ್ರವ್ಯವನ್ನು ಅವಲಂಬಿಸಿದಂತೆ ಶಕ್ತಿಯು ಶಿವನನ್ನು ಅವಲಂಬಿಸುತ್ತದೆ. ಅದು ಮೂಲದಲ್ಲಿ ಅವ್ಯಕ್ತವಾಗಿತ್ತೇ ಹೊರತು ನಾಸ್ತಿಯಾಗಿರಲಿಲ್ಲ.
ಗ್ರಂಥಕರ್ತೃ ಬೌದ್ಧ ಧರ್ಮದ ನಾಲ್ಕು ಪಂಥಗಳು, ಸಾಂಖ್ಯ, ಪೂರ್ವ ಮೀಮಾಂಸಾ, ಮುಂತಾದ ದರ್ಶನಗಳನ್ನು ಖಂಡಿಸಿ, ಸ್ವರ್ಗಕ್ಕಿಂತ ಮಿಗಿಲಾದ ಮೋಕ್ಷವನ್ನು ಪಡೆಯಲು ಬ್ರಹ್ಮಜಿಜ್ಞಾಸೆಯೇ ಮೊದಲ ಹೆಜ್ಜೆ ಎನ್ನುತ್ತಾನೆ. ವೀರಶೈವ ಧರ್ಮದಲ್ಲಿ ಬ್ರಹ್ಮನನ್ನು ಶಿವ ಅಥವಾ ಲಿಂಗ ಎಂದು ಕರೆಯಲಾಗಿದ್ದು ಅವನು ಉಪಾದಾನ ಕಾರಣವೂ ಹೌದು, ನಿಮಿತ್ತ ಕಾರಣವೂ ಹೌದು. ವೀರಶೈವರ ಶಿವನು ಕೇವಲ ನಿಮಿತ್ತ ಕಾರಣನಾದ ಪಾಶುಪತರ ಶಿವನಿಗಿಂತ ಭಿನ್ನ. ತರ್ಕ ಅಥವಾ ಅನುಮಾನದಿಂದ ಶಿವನನ್ನು ತಿಳಿಯಬಹುದು ಎಂಬ ವಾದವನ್ನು ತಿರಸ್ಕರಿಸುವ ಗ್ರಂಥಕರ್ತೃ ವೇದಗಳಿಂದ ಮಾತ್ರ ಅವನನ್ನು ತಿಳಿದುಕೊಳ್ಳಬಹುದು ಎಂದು ವಾದಿಸುತ್ತಾನೆ.
ಸ್ವಪ್ರಭಾನಂದನು ಶಿವಯೋಗಿಯಂತೆ ‘ವೀರ’ ಪದದ ರಂಜನೀಯ ವ್ಯುತ್ಪತ್ತಿ ಶಾಸ್ತ್ರೀಯ ಅರ್ಥ ಕೊಡುತ್ತಾನೆ:‘ವೀ’ ಎಂದರೆ ‘ವಿದ್ಯಾ’ ಅಥವಾ ‘ಶಿವಜೀವರ ಐಕ್ಯತೆ’ ಎಂದೂ ‘ರ’ ಎಂದರೆ ಆ ಐಕ್ಯತೆಯನ್ನು ಆನಂದಿಸುವವನು ಎಂದೂ ಅರ್ಥೈಸುತ್ತಾನೆ. ಅವನು ಶಂಕರ ಸಂಹಿತೆಯ ಈ ಪಾಠವನ್ನು ಉದ್ಧರಿಸುತ್ತಾನೆ:”ಮಾನವನು ಕ್ರಿಮಿ ಕೀಟಗಳಿಗಿಂತ ಮೇಲು; ದ್ವಿಜರು ಉಳಿದ ಮಾನವರಿಗಿಂತ ಮೇಲು; ಅವರಲ್ಲಿ ಬ್ರಾಹ್ಮಣರು ಉಳಿದ ದ್ವಿಜರಿಗಿಂತ ಮೇಲು; ಬ್ರಾಹ್ಮಣರಲ್ಲಿ ಯಜ್ಞಯಾಗಾದಿಗಳನ್ನು ಆಚರಿಸುವವರು ಮೇಲು; ಅವರಲ್ಲಿ ಸನ್ಯಾಸಿಗಳು ಮೇಲು; ಅವರಲ್ಲಿ ಬ್ರಹ್ಮಜ್ಞಾನ ಉಳ್ಳವರು ಮೇಲು; ಅವರಲ್ಲಿ ಶಿವಭಕ್ತರು ಮೇಲು; ಶಿವಭಕ್ತರಲ್ಲಿ ಅನುಭಾವಿಗಳು ಮೇಲು; ಅನುಭಾವಿಗಳಿಗಿಂತ ಶ್ರೇಷ್ಠರು ಯಾರೂ ಇಲ್ಲ.” ಈ ಗ್ರಂಥದಲ್ಲಿನ ಶಿವ, ಜಗತ್ತು, ಆತ್ಮ ಮತ್ತು ಮೋಕ್ಷಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ವಚನಗಳಿಗೆ ಅನುಗುಣವಾಗಿವೆ; ಆದರೆ ಗ್ರಂಥವು ಶಂಕರ ಸಂಹಿತೆ, ನಾರಾಯಣ ಉಪನಿಷತ್, ಪಾಣಿಮಂತ್ರ ಇವುಗಳನ್ನು ಉದ್ಧರಿಸುವುದನ್ನು ನೋಡಿದರೆ ಶಿವಾದ್ವೈತ ಮಂಜರಿಯ ಉದ್ದೇಶದ ಬಗೆಗೆ ಸಂದೇಹ ಬರುತ್ತದೆ. ಲಿಂಗಧಾರಣ ಚಂದ್ರಿಕಾ, ಶಿವಾದ್ವೈತ ಮಂಜರಿ, ವೀರಶೈವಾನಂದ ಚಂದ್ರಿಕಾ ಮುಂತಾದ ಗ್ರಂಥಗಳ ಉದ್ದೇಶವೊಂದೇ: ಲಿಂಗಧಾರಣ ಪದ್ಧತಿಯು ವೇದಗಳ ಕಾಲದಲ್ಲಿ ಇತ್ತೆಂದು ಸ್ಥಾಪಿಸುವುದು. ಒಂದು ವೇಳೆ ಅವುಗಳ ಪ್ರಯತ್ನ ಯಶಸ್ವಿಯಾದರೂ ಲಿಂಗಾಯತ ಅಥವಾ ವೀರಶೈವ ಧರ್ಮ ವೈದಿಕಧರ್ಮವೆಂಬುದು ಸಿದ್ಧವಾಗುವುದಿಲ್ಲ.
ಲಿಂಗಧಾರಣ ಚಂದ್ರಿಕಾ: ಲಿಂಗಧಾರಣ ಚಂದ್ರಿಕಾದ ಮೊದಲನೆಯ ಭಾಗದಲ್ಲಿ ಗ್ರಂಥಕರ್ತೃ ತಾನು ಪಂಡಿತಾರಾಧ್ಯರ ವಂಶದವನೆಂದೂ ಶ್ರೀಕರ ಭಟ್ಟಾರಾಧ್ಯರ ಮಗನೆಂದೂ ಹೇಳಿಕೊಳ್ಳುತ್ತಾನೆ. ಆದರೆ ಆತ ತನ್ನ ಹೆಸರನ್ನು ಎಲ್ಲಿಯೂ ಹೇಳುವುದಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಗ್ರಂಥವು ವಿಶ್ವಾಸನೀಯವಲ್ಲ ಎನ್ನಬೇಕಾಗುತ್ತದೆ. ಈ ಗ್ರಂಥಕ್ಕೆ ನಂದಿಕೇಶ್ವರ ಎಂಬುವವನು ವ್ಯಾಖ್ಯಾನ ಬರೆದಿದ್ದಾನೆ. ಈ ಗ್ರಂಥದಲ್ಲಿ ಸಿದ್ಧಾಂತ ಶಿಖಾಮಣಿಯ ಶ್ಲೋಕಗಳು ಉಧೃತವಾಗಿರುವುದರಿಂದ ಅದು 15ನೇ ಶತಮಾನಕ್ಕಿಂತ ಹಿಂದಿನದಿರಲಾರದೆಂದು ತರ್ಕಿಸಬಹುದು. ಲಿಂಗಧಾರಣೆಯೊಂದೇ ವೀರಶೈವಧರ್ಮದ ಲಕ್ಷಣವೆಂದು ನಂಬಿರುವ ಗ್ರಂಥಕರ್ತೃ ಲಿಂಗಧಾರಣ ಪದ್ಧತಿಯನ್ನು ವೇದಗಳು, ಉಪನಿಷತ್ತುಗಳು, ಕಾಮಿಕಾದಿ ಆಗಮಗಳು, ಅಲಂಕಾರ ಮತ್ತು ಇತರ ಶಾಸ್ತ್ರಗಳು, ಮನು ಮತ್ತು ಇತರ ಸ್ಮೃತಿಗಳು, ಮಹಾಭಾರತ ಎಂಬ ಇತಿಹಾಸ ಅನುಮೋದಿಸುತ್ತವೆ ಎನ್ನುತ್ತಾನೆ. ಅವನ ಪ್ರಕಾರ ಮಹಾಭಾರತ ಪಂಚಮವೇದ!
ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ “ಪರಮ ತತ್ವ, ಸೂಕ್ಷ್ಮ, ಶಾಂತ, ಆನಂದ, ಹೃತ್ಕಮಲದಲ್ಲಿ ವಾಸಿಸುವ” ಮುಂತಾದ ವಿಶೇಷಣಗಳು ಶಿವ ಅಥವಾ ಮಹೇಶ್ವರ ಎಂಬ ಜ್ಯೋತಿರ್ಲಿಂಗಕ್ಕೆ ಅನ್ವಯಿಸುತ್ತದೆ ಎಂಬುದು ಕೃತಿಕಾರನ ವಾದ. ಉಪನಿಷತ್ತಿನಲ್ಲಿ ಬರುವ ‘ಸಹಸ್ರ ಶೀರ್ಷ’ ಮುಂತಾದ ವಿಶೇಷಣಗಳು ನಾರಾಯಣನಿಗೆ ಅನ್ವಯವಾದರೂ ನಮ್ಮ ಕೃತಿಕಾರನ ಪ್ರಕಾರ ಅವೆಲ್ಲವೂ ಶಿವನಿಗೇ ಅನ್ವಯವಾಗುತ್ತವೆ, ಏಕೆಂದರೆ ಅಥರ್ವಶಿರ, ಕೈವಲ್ಯೋಪನಿಷತ್ ಮತ್ತು ಕಠೋಪನಿಷತ್ತುಗಳಲ್ಲಿ ಶಿವನನ್ನು ಸೂಕ್ಷ್ಮ, ಹೃದಯ ಕಮಲದಲ್ಲಿ ವಾಸಿಸುವವನು, ಅಕಳಂಕ ಎಂದು ವರ್ಣಿಸಲಾಗಿದೆ. ಅವನ ಮತ್ತೊಂದು ವಿಚಿತ್ರ ವಾದ ಹೀಗಿದೆ: ಈ ಉಪನಿಷತ್ತುಗಳು ನಾರಾಯಣನನ್ನು ಸ್ತುತಿಸಿದರೂ ಆ ಸ್ತುತಿಗಳೆಲ್ಲ ಶಿವನಿಗೇ ಅನ್ವಯವಾಗುವುದೇಕೆಂದರೆ ಒಬ್ಬ ಶ್ರೇಷ್ಠ ಶಿವಭಕ್ತನಾಗಿದ್ದ ನಾರಾಯಣನು ಶಾಶ್ವತ ಶಿವಸಾಯುಜ್ಯವನ್ನು ಪಡೆದ!
ಅದೇ ರೀತಿ ಕಠ ಉಪನಿಷತ್ತಿನಲ್ಲಿ ಬರುವ ದಹರೋಪಾಸನೆಯ ವರ್ಣನೆಯು ಶಿವಾರಾಧನೆಗೆ ಅನ್ವಯಿಸುತ್ತದೆ, ಏಕೆಂದರೆ ಶಿವನು ಅಪರಿಮಿತ ಬಯಲು, ಅವನೇ ಹೃದಯದಲ್ಲಿ ಸಣ್ಣ ಬಯಲು (‘ದಹರ’) ಎನಿಸಿಕೊಂಡು ಹೃದಯದಲ್ಲಿದ್ದಾನೆ ಎಂಬುದು ಅವನ ವಾದ. ಕಠ, ಹಂಸೋಪನಿಷತ್, ವಾಮನ ಪುರಾಣ ಸಿದ್ಧಾಂತ ಶಿಖಾಮಣಿಗಳು ಸಹ ಹೃತ್ಕಮಲವಾಸಿಯಾದ ಶಿವನನ್ನು ಉಪಾಸಿಸಲು ಹೇಳುತ್ತವೆ. ನಾರಾಯಣನು ಉಪಾಸಕನೇ ಹೊರತು ಉಪಾಸ್ಯನಲ್ಲ. ನಾರಾಯಣ ಎಂದರೆ ವಿಷ್ಣು ಎಂಬುದು ಸಾಮಾನ್ಯ ನಂಬಿಕೆಯಾದರೂ ವ್ಯುತ್ಪತ್ತಿಶಾಸ್ತ್ರದ ಪ್ರಕಾರ ನಾರಾಯಣ ಎಂದರೆ ಶಿವ! ಅಲ್ಲದೆ ವಾಮನ ಪುರಾಣದಲ್ಲಿ ಹರಿಯು (ನಾರಾಯಣನು) ತನ್ನ ಹೃದಯದಲ್ಲಿ ಲಿಂಗವಿರುವುದನ್ನು ಎಲ್ಲ ದೇವತೆಗಳಿಗೆ ತೋರಿಸಿದ ಎನ್ನಲಾಗಿದೆ. ‘ಶುಭಕರನೂ ಸರ್ವಾಂತರ್ಯಾಮಿಯೂ ಸರ್ವಸಮಾವೇಶಿಯೂ ಆಗಿರುವ ದೇವನು ನಮ್ಮ ಕಣ್ಣು, ತಲೆ ಮತ್ತು ಕುತ್ತಿಗೆಗಳನ್ನು ಬಳಸಿಕೊಳ್ಳುತ್ತಾನೆ’ ಎಂಬ ಶ್ವೇತಾಶ್ವತರ ಉಪನಿಷತ್ತಿನ ಪಾಠವು (III, 11) ಅವನಿಗೆ ‘ಲಿಂಗವನ್ನು ಮುಖ, ಕುತ್ತಿಗೆ ಮತ್ತು ತಲೆಯಲ್ಲಿ ಧರಿಸಬೇಕು’ ಎಂದು ತೀರ್ಮಾನಿಸಲು ಪ್ರಚೋದಿಸುತ್ತದೆ. ಅಷ್ಟೇ ಅಲ್ಲ, ಅವನ ಪ್ರಕಾರ ವಚನಕಾರರು ಬಳಸುವ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗ ಎಂಬ ಹೆಸರುಗಳು ಪಾಣಿಮಂತ್ರಂ ಪವಿತ್ರಂ ನಲ್ಲಿರುವ 11 ಲಿಂಗಗಳ ಹೆಸರುಗಳಲ್ಲಿ, ಅಂದರೆ, ಸುವರ್ಣಲಿಂಗ, ದಿವ್ಯಲಿಂಗ, ಭಾವಲಿಂಗ, ಶರ್ವಲಿಂಗ, ಶಿವಲಿಂಗ, ಜ್ವಲಲಿಂಗ, ಆತ್ಮಲಿಂಗ ಮತ್ತು ಪರಮಲಿಂಗಗಳಲ್ಲಿ ಆರಕ್ಕೆ ಅನ್ವಯಿಸುತ್ತವೆ ಎಂಬುದು ಅವರ ವಾದ. ಪ್ರಾಣಲಿಂಗ, ಭಾವಲಿಂಗ ಮುಂತಾದ ಹೆಸರುಗಳು ಸ್ಥಾವರಲಿಂಗಕ್ಕೆ ಅನ್ವಯವಾಗುವುದಿಲ್ಲ, ಆದುದರಿಂದ ಅವು ಮೈಮೇಲೆ ಧರಿಸುವ ಇಷ್ಟಲಿಂಗಕ್ಕೆ ಮಾತ್ರ ಅನ್ವಯವಾಗುತ್ತದೆ ಎಂಬುದು ಅವನ ಸಮರ್ಥನೆ.
ಅದೇ ರೀತಿ ‘ನಾನು ಓಂ ಮಂತ್ರದಿಂದ ಪ್ರತ್ಯೇಕವಾಗದಿರಲಿ’ (III ಅಧ್ಯಾಯ) ಎಂಬುದನ್ನು ಅವನು ‘ನಾನು ಇಷ್ಟಲಿಂಗದಿಂದ ಪ್ರತ್ಯೇಕವಾಗದಿರಲಿ’ ಎಂದು ಅರ್ಥೈಸುತ್ತಾನೆ; ಏಕೆಂದರೆ ಓಂ ಪದವೂ ಲಿಂಗ ಪದವೂ ಶಿವನಿಗೆ ಅನ್ವಯಿಸುತ್ತವೆ, ಎಂಬುದು ಅವನ ಸಮರ್ಥನೆ. ಅದೇ ರೀತಿ, ‘ಅಮೃತಸ್ಯ ದೇವಧಾರಣೋ ಭೂಯಾಸಂ’ (ತೈತ್ತಿರೀಯ ಉಪನಿಷತ್ತು, I,4) ಎಂಬ ಸ್ತುತಿಯು ಅವನ ಪ್ರಕಾರ ‘ನಾನು ಶಿವನನ್ನು (ಲಿಂಗವನ್ನು) ಧರಿಸುವವನಾಗಲಿ’ ಎಂಬ ಅರ್ಥ ಕೊಡುತ್ತದೆ; ಏಕೆಂದರೆ ಜನರು ಲಿಂಗ(ಶಿವ)ವನ್ನಲ್ಲದೆ ಮತ್ತಾವ ದೇವರನ್ನೂ ಧರಿಸುವುದಿಲ್ಲ. ಆದರೆ ವಾಸ್ತವದಲ್ಲಿ ಆ ಸ್ತುತಿಗೆ “ನಾನು ಬ್ರಹ್ಮವನ್ನು ಹೊಂದುವಂತಾಗಲಿ” ಎಂಬ ಅರ್ಥವಿದೆ. ಋಗ್ವೇದದ ‘ಬ್ರಹ್ಮಣಸ್ಪತೆ’ ಎಂಬ ಮಂತ್ರಕ್ಕೆ ‘ವೇದಾಧ್ಯಯನಕ್ಕೆ ಇಷ್ಟಲಿಂಗಧಾರಿಯಾಗಿರುವ ಆವಶ್ಯಕತೆ ಇದೆ’ ಎಂಬ ಅರ್ಥ ಕೊಡುತ್ತಾನೆ. ಆದರೆ ಎಲ್ಲ ಪಂಡಿತರಿಗೂ ಮಾನ್ಯವಾದುದು ‘ಬ್ರಹ್ಮನು ಎಲ್ಲ ಶರೀರಗಳಲ್ಲಿಯೂ ವಾಸಿಸುತ್ತಾನೆ’ ಎಂಬ ಅರ್ಥ. ಅದೇ ರೀತಿ, ಕೃತಿಕಾರರು ಈ ಕೆಳಗಿನ ಋಗ್ವೇದ ಮಂತ್ರವನ್ನು ಉದ್ಧರಿಸಿ ಋಗ್ವೇದ ಕಾಲದಲ್ಲಿಯೇ ಲಿಂಗಧಾರಣ ಪದ್ಧತಿ ಪ್ರಚಲಿತವಿತ್ತು ಎಂದು ಸ್ಥಾಪಿಸಲು ಪ್ರಯತ್ನಿಸುತ್ತಾನೆ:
ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ|
ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ||
ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಾಗಮತ್|
ಇದಂ ತವ ಸಮರ್ಪಣಂ ಸುಬಂಧವೇ ನಿರೀಹಿ|| (ಇ.)
[ಈ ನನ್ನ ಹಸ್ತವೇ ಭಗವಂತ, ಈ ಹಸ್ತವೇ ಪವಿತ್ರವಾದುದು, ಈ ಹಸ್ತವೇ ಭವರೋಗ ನಿವಾರಕ, ಈ ಹಸ್ತವೇ ಶಿವದರ್ಶನ ನೀಡುವಂತಹದ್ದು, ಈ ಹಸ್ತವೇ ತಾಯಿ ತಂದೆ, ಈ ಹಸ್ತವೇ ಎಲ್ಲ ಜೀವ ರಾಶಿ, ಸುಬಂಧುವೇ, ಇದನ್ನು ನಿನಗೆ ಅರ್ಪಿಸುತ್ತಿದ್ದೇನೆ ಸ್ವೀಕರಿಸು]
ಕೃತಿಕಾರನು ‘ಹಸ್ತ’ ಎಂಬುದಕ್ಕೆ ‘ಹಸ್ತದಲ್ಲಿ ವಾಸಿಸುವ’ ಅರ್ಥ ಕೊಡುತ್ತಾನಲ್ಲದೆ, ‘ಹಸ್ತ’ ಮತ್ತು ‘ಹಸ್ತದಲ್ಲಿ ವಾಸಿಸುವ’ ಎಂಬ ಎರಡು ಪದಗಳೂ ಶಿವನಿಗೆ ಅನ್ವಯಿಸುತ್ತವೆ ಎಂದೂ ವಾದಿಸುತ್ತಾನೆ. ಈ ಮಂತ್ರದಲ್ಲಿ ‘ಇಷ್ಟಲಿಂಗ’ ಎಂಬ ಪದ ಇಲ್ಲದಿದ್ದರೂ ‘ಹಸ್ತದಲ್ಲಿ ವಾಸಿಸುವ’ ಎಂಬ ವಿಶೇಷಣವು ಇಷ್ಟಲಿಂಗಕ್ಕಲ್ಲದೆ ಮತ್ತಾವುದಕ್ಕೆ ಅನ್ವಯಿಸಲು ಸಾಧ್ಯ? ಆದರೆ ಈ ಮಂತ್ರದಲ್ಲಿರುವ ನಾಲ್ಕನೇ ಸಾಲನ್ನು (‘ಸುಬಂಧುವೇ ಇದನ್ನು ನಾನು ನಿನಗೆ ಅರ್ಪಿಸುತ್ತಿದ್ದೇನೆ, ಸ್ವೀಕರಿಸು’) ಅವನು ಉದ್ಧರಿಸುವುದಿಲ್ಲ; ಏಕೆಂದರೆ ಇಷ್ಟಲಿಂಗವನ್ನು ಯಾರೂ ಅರ್ಪಿಸುವುದಿಲ್ಲ; ಹಾಗೆ ಅರ್ಪಿಸುವುದು ಇಷ್ಟಲಿಂಗದಿಂದ ದೂರವಾದಂತೆ ಮತ್ತು ಇಷ್ಟಲಿಂಗದಿಂದ ದೂರವಾಗುವುದು ಲಿಂಗಾಯತ ಧರ್ಮಕ್ಕೆ ವಿರುದ್ಧ.
‘ಅಹಂ ಬ್ರಹ್ಮಾಸ್ಮಿ’ (ನಾನು ಬ್ರಹ್ಮ) ಮತ್ತು ‘ತತ್ ತ್ತ್ವಂ ಅಸಿ’ (ಅದು ನೀನೇ ಆಗಿದ್ದೀಯ) ಎಂಬ ಉಪನಿಷತ್ತುಗಳ ಮಹಾವಾಕ್ಯಗಳು ಅಂಗ ಮತ್ತು ಲಿಂಗಗಳ ಐಕ್ಯತೆಯನ್ನು ಬೋಧಿಸುತ್ತವೆ ಎಂಬುದು ಕೃತಿಕಾರನ ವಾದ. ಒಂದು ವೇಳೆ ಅವರ ವಾದ ಸರಿಯಾದರೆ ವೇದಾಂತಿಗಳೆಲ್ಲರೂ ಲಿಂಗಾಯತರಾದಂತೆಯೇ ಸರಿ.
ಈ ಕೃತಿಕಾರ ಸಂಸ್ಕೃತ ಪದಗಳನ್ನೂ ವಾಕ್ಯಗಳನ್ನೂ ತನಗೆ ಬೇಕಾದ ರೀತಿಯಲ್ಲಿ ಅರ್ಥೈಸುವ ಸಲುವಾಗಿ ತನ್ನ ಪಾಂಡಿತ್ಯವನ್ನೂ ವ್ಯುತ್ಪತ್ತಿ ಶಾಸ್ತ್ರವನ್ನೂ ದುರುಪಯೋಗಪಡಿಸಿಕೊಂಡಿದ್ದಾನೆ.
ಮರಿತೋಂಟದಾರ್ಯರ ವೀರಶೈವಾನಂದಚಂದ್ರಿಕಾ: ಮರಿ ತೋಂಟದಾರ್ಯರ ಗುರುಗಳಾದ ಸಿದ್ಧವೀರೇಶ ಶಿವಾಚಾರ್ಯ ತುಮಕೂರು ಜಿಲ್ಲೆಯ ಗೂಳೂರಿನಲ್ಲಿ ಇದ್ದರು. ತರ್ಕಶಾಸ್ತ್ರ, ವ್ಯಾಕರಣಶಾಸ್ತ್ರ, ಪೂರ್ವ ಮತ್ತು ಉತ್ತರ ಮೀಮಾಂಸಾ ದರ್ಶನಗಳಲ್ಲಿ ಪರಿಣತರಾಗಿದ್ದರು. ಅವರು ಸಿದ್ಧಾಂತ ಶಿಖಾಮಣಿಗೆ ಸಂಸ್ಕೃತದಲ್ಲಿಯೂ ಮನೋವಿಜಯ ಮತ್ತು ಶತಕತ್ರಯಕ್ಕೆ ಕನ್ನಡದಲ್ಲಿಯೂ ವ್ಯಾಖ್ಯಾನವನ್ನು ಬರೆದಿದ್ದಾರೆ. ಮರಿತೋಂಟದಾರ್ಯರ ವೀರಶೈವಾನಂದ ಚಂದ್ರಿಕಾ ಎಂಬ ಸಂಸ್ಕೃತ ಗ್ರಂಥಕ್ಕೆ ಗುರುಶಾಂತ ಶಾಸ್ತ್ರಿ ಎಂಬುವವರು ಕನ್ನಡದಲ್ಲಿ ವ್ಯಾಖ್ಯಾನ ಬರೆದಿದ್ದಾರೆ. ಮೂಲ ಕೃತಿಕಾರರು 1740 ರಿಂದ 1755ರಲ್ಲಿ ಆಳಿದ ಬೂದಿಬಸಪ್ಪನ ರಾಜಾಶ್ರಯವನ್ನು ಅನುಭವಿಸಿದರು.
ಈ ಗ್ರಂಥದಲ್ಲಿ ಕ್ರಿಯಾಕಾಂಡ, ವಾದಕಾಂಡ, ಕಥಾಕಾಂಡ ಎಂಬ ಮೂರು ಭಾಗಗಳಿವೆ. 24 ಅಧ್ಯಾಯಗಳನ್ನು ಒಳಗೊಂಡ ವಾದಕಾಂಡವು ಮಾತ್ರ ಪ್ರಕಟವಾಗಿದೆ. ಅದರಲ್ಲಿ ವಿವಿಧ ಧಾರ್ಮಿಕ ಮತ್ತು ದಾರ್ಶನಿಕ ಸಿದ್ಧಾಂತಗಳಿವೆ. ಉಳಿದೆರಡು ಭಾಗಗಳಲ್ಲಿ ವೀರಶೈವ ಧರ್ಮದ ಆಚರಣೆಗಳೂ ಶರಣರ ಕಥೆಗಳೂ ಇವೆ. ಗ್ರಂಥದ ಈ ಭಾಗಕ್ಕೆ ಚಾರ್ವಾಕ, ಸೌತ್ರಾಂತಿಕ, ವೈಭಾಷಿಕ, ಯೋಗಾಚಾರ, ಮಾಧ್ಯಮಿಕ ಎಂಬ ಅವೈದಿಕ ಪಂಥಗಳ ವಾದಗಳನ್ನೂ ಲಾಕುಳ, ಭೈರವ, ಕಾಪಾಲಿಕ, ಕಾಳಾಮುಖ, ಪಾಂಚರಾತ್ರಾಗಮಗಳ ಅನುಯಾಯಿಗಳು, ಗೌತಮ, ನಿರೀಶ್ವರ ವಾದಿಗಳಾದ ಸಾಂಖ್ಯ, ವೈಶೇಶಿಕ, ಪೂರ್ವ ಮೀಮಾಂಸಕ ಮತ್ತು ಯೋಗ ಪಂಥದ ಪ್ರತಿಪಾದಕರು ಮತ್ತು ವೈದಿಕ ಬ್ರಹ್ಮಾದ್ವೈತಿಗಳ ವಾದಗಳನ್ನೂ ಖಂಡಿಸುವ ಉದ್ದೇಶವಿದೆ.
ಇಂದ್ರಿಯ ಸುಖವು ಎಷ್ಟೇ ಮಹತ್ವದ್ದೆನಿಸಿದರೂ ಅದು ಕ್ಷಣಿಕ ಮತ್ತು ಭವದುಃಖಕ್ಕೆ ಕಾರಣವಾಗುತ್ತದೆ. ಅವೈದಿಕ ಪಂಥಗಳನ್ನು ಅನುಸರಿಸುವವರು ಭವದುಃಖಕ್ಕೊಳಗಾಗುವುದು ನಿಶ್ಚಿತ. ಗುರುವಿನ ಹಿತವಚನವನ್ನು ಪಾಲಿಸುವ ವೀರಶೈವ ಭವದುಃಖದಿಂದ ಪಾರು ಮಾಡುವ ಜ್ಞಾನವನ್ನು ಪಡೆಯುತ್ತಾನೆ.
ಈ ಗ್ರಂಥವು ಯಾವುದೇ ಭಾರತೀಯ ದಾರ್ಶನಿಕ ಕೃತಿಯಂತೆ ವಾದ-ಪ್ರತಿವಾದಗಳಿಂದ ತುಂಬಿದೆ. ಗ್ರಂಥಕರ್ತೃವಿನ ಪ್ರಕಾರ ಪರಮಾತ್ಮ ನಿರ್ಗುಣನಾಗಿರಲು ಸಾಧ್ಯವಿಲ್ಲ. ಅವನಿಗೆ ಶಕ್ತಿ ಇರಲೇಬೇಕು. ಅಲ್ಲದೆ ಅವನಿಗೆ ಸರ್ವಶಕ್ತಿತ್ವ, ಸರ್ವಸಮಾವೇಶಿತ್ವ, ಸೃಷ್ಟಿಕರ್ತೃತ್ವ, ಮುಂತಾದ ಆದರ್ಶ ಗುಣಗಳು ಇರಬೇಕು. ಆದರೆ ರಾಮಾನುಜರಿಗೆ ವಿರುದ್ಧವಾಗಿ ಆತ್ಮ ಬ್ರಹ್ಮರ ಐಕ್ಯತೆಯನ್ನು ಬೋಧಿಸುತ್ತಾನೆ. ಅವನ ಪ್ರಕಾರ ಶಿವನೇ ಪ್ರಪಂಚವಾಗಿ ರೂಪಾಂತರಗೊಂಡರೂ ಶಿವ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ. ಅನೇಕ ವರ್ಣನೆಗಳು ವಿಷ್ಣುವಿಗೆ ಅನ್ವಯವಾದರೂ ಕೃತಿಕಾರರ ಪ್ರಕಾರ ಅವೆಲ್ಲವೂ ಶಿವನಿಗೆ ಅನ್ವಯಿಸುತ್ತದೆ, ಏಕೆಂದರೆ ವಿಷ್ಣು ಶಿವ ಭಕ್ತ!
ಸಿದ್ಧಾಂತ ಶಿಖಾಮಣಿಯ ಕರ್ತೃವಿನಂತೆ ನಮ್ಮ ಕೃತಿಕಾರನು ಲಿಂಗಧಾರಣೆಯು ಅವೈದಿಕವಲ್ಲ, ವೈದಿಕ. ಏಕೆಂದರೆ, ಶಿವ ರಹಸ್ಯ, ಶಂಕರ ಸಂಹಿತಾ, ಗರುಡ ಪುರಾಣ ಮತ್ತು ಸ್ಕಂದ ಪುರಾಣಗಳು ಲಿಂಗಧಾರಣೆಯನ್ನು ವಿಧಿಸುತ್ತವೆ. ಇಂದ್ರ ಮತ್ತು ಇತರ ದೇವತೆಗಳು ಲಿಂಗವನ್ನು ಧರಿಸಿದ್ದಕ್ಕಾಗಿ ಸೂಕ್ತ ಪದವಿಗಳನ್ನು ಪಡೆದರು. ಲಿಂಗಧಾರಣಚಂದ್ರಿಕಾದಿಂದ ಎತ್ತಿಕೊಂಡ ಅನೇಕ ವಾದಗಳು ಈ ಗ್ರಂಥದಲ್ಲಿವೆ. ಕೃತಿಕಾರನ ಪ್ರಕಾರ, ಬ್ರಾಹ್ಮಣರು ಹಸುಗಳ ಬೆರಣಿಯಿಂದ ಮಾಡಿದ ವಿಭೂತಿಯನ್ನು ಧರಿಸಬೇಕು; ಇತರರು ಒಲೆಯ ಬೂದಿಯನ್ನು ಧರಿಸಿದರೆ ಸಾಕು.
ವೈದಿಕರು ವೇದಗಳಿಗೆ ನೀಡಿದ ಪ್ರಾಮಣ್ಯವನ್ನು ಆಗಮಗಳಿಗೆ ನಿರಾಕರಿಸುತ್ತಾರೆ. ಆದರೆ ನಮ್ಮ ಕೃತಿಕಾರನ ಪ್ರಕಾರ ಶಿವನೇ ವೇದ ಮತ್ತು ಆಗಮಗಳೆರಡನ್ನು ಬೋಧಿಸಿದುದರಿಂದ ಎರಡಕ್ಕೂ ಸಮಾನ ಪ್ರಾಮಾಣ್ಯವಿದೆ ಮತ್ತು ಅವುಗಳಲ್ಲಿ ಪರಸ್ಪರ ವಿರೋಧವಿಲ್ಲ.
ಅವನು ಶಿವ ಮತ್ತು ಜೀವರುಗಳು ಭಿನ್ನವೆಂಬ ನೀಲಕಂಠನ ಸಿದ್ಧಾಂತವನ್ನು ಮತ್ತು ಜಗತ್ತು ಮಾಯೆ ಎಂಬ ಶಂಕರರ ವಾದವನ್ನು ತಿರಸ್ಕರಿಸುತ್ತಾನೆ. ಈ ಗ್ರಂಥದ ಕೊನೆಯ ಅಧ್ಯಾಯವು ವೀರಶೈವ ಧರ್ಮದ ಶ್ರೇಷ್ಠತೆಯನ್ನು ಸಾಧಿಸಲು ಮೀಸಲಾಗಿದೆ. ಯಜ್ಞಯಾಗಾದಿಗಳ ಆಚರಣೆ, ಜಾತಿತಾರತಮ್ಯ, ಮುಂಡನ, ನಾಮಕರಣ ಮುಂತಾದ ಶಾಸ್ತ್ರಗಳ ನಿಯಮಗಳು ವೀರಶೈವರಿಗೆ ಅನ್ವಯವಾಗುವುದಿಲ್ಲ; ಆದರೂ ವೀರಶೈವರು ವೇದಾನುಯಾಯಿಗಳು.
ಈ ಗ್ರಂಥಕರ್ತನ ಕೆಲವು ಅಭಿಪ್ರಾಯಗಳು ಗಮನಾರ್ಹವಾಗಿವೆ:
1. ಸ್ಕಂದಪುರಾಣದ ಈ ಮುಂದಿನ ಮಾತನ್ನು ಅವನು ಅನುಮೋದಿಸುತ್ತಾನೆ:
ಜೀವಿಗಳಲ್ಲೆಲ್ಲ ಮಾನವನೇ ಶ್ರೇಷ್ಠ; ಮಾನವರಲ್ಲಿ ದ್ವಿಜರು ಶ್ರೇಷ್ಠರು; ದ್ವಿಜರಲ್ಲಿ ಬ್ರಾಹ್ಮಣರು ಶ್ರೇಷ್ಠರು; ಬ್ರಾಹ್ಮಣರಲ್ಲಿ ಶಾಸ್ತ್ರ ಬಲ್ಲವರು ಶ್ರೇಷ್ಠರು; ಶಾಸ್ತ್ರಬಲ್ಲ ಬ್ರಾಹ್ಮಣರಲ್ಲಿ ಯಜ್ಞಯಾಗಾದಿಗಳನ್ನು ಮಾಡುವವರು ಶ್ರೇಷ್ಠರು; ಅಂತಹ ಬ್ರಾಹ್ಮಣರಲ್ಲಿ ಸನ್ಯಾಸಿಗಳು ಶ್ರೇಷ್ಠರು; ಸನ್ಯಾಸಿಗಳಲ್ಲಿ ಬ್ರಹ್ಮಜ್ಞಾನಿಗಳು ಶ್ರೇಷ್ಠರು; ಬ್ರಹ್ಮಜ್ಞಾನಿಗಳಲ್ಲಿ ಲಿಂಗಧಾರಿಗಳು ಶ್ರೇಷ್ಠರು; ಲಿಂಗಧಾರಿ ಬ್ರಾಹ್ಮಣರಲ್ಲಿ ಆರು ಲಿಂಗಗಳನ್ನು ಸಾಕ್ಷಾತ್ಕರಿಸಿಕೊಂಡವರು ಶ್ರೇಷ್ಠರು.
2. ಪರಶಿವನಿಂದ ನೇರವಾಗಿ ಸೃಷ್ಟಿಸಲ್ಪಟ್ಟ ರೇಣುಕ ಮತ್ತಿತರರು ವೀರಶೈವ ಧರ್ಮದ ಸ್ಥಾಪಕರು; ಆದರೆ ಬಸವಣ್ಣ, ಶಂಕರಾಚಾರ್ಯ ಮುಂತಾದವರೆಲ್ಲ ಮಾನವ ಜನ್ಯರು. ವೀರಶೈವರು ವೈದಿಕ ವಿಧಿಗಳನ್ನು ಪಾಲಿಸುವುದಿಲ್ಲ, ಏಕೆಂದರೆ ಅವರಿಗೆ ತಮ್ಮದೇ ಆದ ವಿಧಿಗಳು, ಮಂತ್ರಗಳು, ಯೋಗ ಮುಂತಾದ ಆಚರಣೆಗಳಿವೆ.
ಮಗ್ಗೆಯ ಮಾಯಿದೇವನ ಅನುಭವ ಸೂತ್ರಂ: ಶಿವಾನುಭವ ಸೂತ್ರಂ ಎಂದೂ ಕರೆಯಲಾಗುವ ಈ ಕೃತಿಯ ಕರ್ತೃ ಮಗ್ಗೆಯ ಮಾಯಿದೇವ (1420). ಈ ಕೃತಿಯಲ್ಲಿ ವೀರಶೈವ ಅಥವಾ ಲಿಂಗಾಯತ ಎಂಬ ಪದವಿಲ್ಲದಿದ್ದರೂ ವೀರಶೈವ ಧರ್ಮದ ಎಲ್ಲಾ ಪ್ರಮುಖ ಸಿದ್ಧಾಂತಗಳನ್ನು ಅದು ಬೋಧಿಸುತ್ತದೆ. ಮಾಯಿದೇವನು ಏಕೋತ್ತರ ಶತಸ್ಥಲ (ಷಟ್ಪದಿ), ಷಟ್‍ಸ್ಥಲ (ಗದ್ಯ) ಶತಕತ್ರಯ ಎಂಬ ಗ್ರಂಥಗಳನ್ನೂ ರಚಿಸಿದ್ದಾನೆ.
ಜಕ್ಕಣ್ಣ (ಜಕ್ಕಣಾರ್ಯ): ಮಾಯಿದೇವನ ಸಮಕಾಲೀನರಾದ ಜಕ್ಕಣ್ಣ ಏಕೋತ್ತರ ಶತಸ್ಥಲಿ (ಸಂಸ್ಕೃತ) ಮತ್ತು ಏಕೋತ್ತರ ಶತಸ್ಥಲ (ಕನ್ನಡ) ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ವೀರಶೈವನು ಲಿಂಗಾಂಗ ಸಾಮರಸ್ಯ ಪಡೆಯಲು ನೂರೊಂದು ಸ್ಥಲಗಳ ಸಿದ್ಧಾಂತವನ್ನು ಆಚರಿಸಬೇಕೆಂಬುದು ಈ ಕನ್ನಡ ಮತ್ತು ಸಂಸ್ಕೃತ ಕೃತಿಗಳ ಆದೇಶ. ಇದುವರೆಗೂ ಈ ಗ್ರಂಥಗಳನ್ನು ಮಹಾಲಿಂಗ ರಚಿಸಿದ್ದಾನೆಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಡಾ.ಎಂ.ಎಂ. ಕಲಬುರ್ಗಿ ಮತ್ತು ಡಾ.ವಿ.ಬಿ. ರಾಜೂರ ಅವರು ಇವೆರಡು ಗ್ರಂಥಗಳನ್ನೂ ಜಕ್ಕಣ್ಣನೇ ರಚಿಸಿದ್ದಾನೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲಮಪ್ರಭುವಿನ ವಚನಗಳಿಗೂ ಈತ ವ್ಯಾಖ್ಯಾನ ಬರೆದಿದ್ದಾನೆ.
ಶ್ರೀಕರ ಭಾಷ್ಯ: ಶ್ರೀಕರ ಭಾಷ್ಯ, ಗ್ರಂಥಕರ್ತನೆ ಹೇಳುವಂತೆ, ಬ್ರಹ್ಮಸೂತ್ರದ ಮೇಲೆ ವೀರಶೈವ ದೃಷ್ಟಿಯಿಂದ ಬರೆದ ಭಾಷ್ಯ. 11ನೇ ಶತಮಾನದ ಶ್ರೀಪತಿ ಪಂಡಿತ ಇದನ್ನು ಬರೆದನೆಂಬುದು ಒಂದು ವಾದ. 1891ರಲ್ಲಿ ಸಿಕಂದರಾಬಾದಿನಲ್ಲಿ ತೆಲುಗು ಲಿಪಿಯಲ್ಲಿ ಪ್ರಕಟವಾದಾಗಿನಿಂದ ಈ ಗ್ರಂಥದ ಕರ್ತೃ, ಅವನ ಕಾಲ ಮತ್ತು ಸಿದ್ಧಾಂತಗಳ ಬಗೆಗೆ ಅನೇಕ ವಾದ-ವಿವಾದಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಕೆಲವು ಮುಖ್ಯವಾದವಾದವುಗಳು ಹೀಗಿವೆ:
1. ಆಂಧ್ರ ದೇಶದ ವಿಜಯವಾಡವನ್ನು ಅನಂತ ಭೂಪಾಲನು ಆಳುತ್ತಿದ್ದಾಗ (1199-1279) ಶ್ರೀಪತಿ ಪಂಡಿತ ಇದ್ದುದು ಸತ್ಯ. ಈ ಶ್ರೀಪತಿ ಪಂಡಿತ ಒಬ್ಬ ದೊಡ್ಡ ವಿದ್ವಾಂಸನಾಗಿದ್ದು ಅವನಿಗೆ ಬೆಂಕಿ ಪವಾಡವನ್ನು ಆರೋಪಿಸಲಾಗಿದೆ. ಬಸವಣ್ಣನವರಂತೆ ಈತನು ಒಬ್ಬ ಶೂದ್ರನ ಮನೆಯಲ್ಲಿ ಪ್ರಸಾದ ಸ್ವೀಕರಿಸಿದ್ದಕ್ಕಾಗಿ ಉಳಿದ ಬ್ರಾಹ್ಮಣರು ಅವನಿಗೆ ಬಹಿಷ್ಕಾರ ಹೇರಿದರು. ಇದರಿಂದ ಕುಪಿತನಾದ ಶ್ರೀಪತಿಯು ವಿಜಯವಾಡದ ಬೆಂಕಿಯನ್ನೆಲ್ಲ ಒಂದು ರೇಷ್ಮೆ ವಸ್ತ್ರದಲ್ಲಿ ಕಟ್ಟಿ ಮರವೊಂದಕ್ಕೆ ನೇತು ಹಾಕಿದ. ವಿಜಯವಾಡದ ಯಾರ ಮನೆಯಲ್ಲಿಯೂ ಬೆಂಕಿ ಇಲ್ಲದಾದಾಗ ಬ್ರಾಹ್ಮಣರಿಗೆ ಬುದ್ಧಿ ಬಂದು ಪಶ್ಚಾತ್ತಾಪವಾಯಿತು. ಅವರ ಬೇಡಿಕೆಯ ಮೇರೆಗೆ ಶ್ರೀಪತಿಯು ಮತ್ತೆ ಅವರಿಗೆ ಬೆಂಕಿಯನ್ನು ಕರುಣಿಸಿದ. ಆದರೆ ಶ್ರೀಪತಿಯು ಹನ್ನೊಂದನೆಯ ಶತಮಾನದಲ್ಲಿದ್ದನೆಂದು ಇತಿಹಾಸ ಹೇಳುವುದಿಲ್ಲ.
2. ವೇದಾಂತ ಸಂಪ್ರದಾಯವು ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದಿರುವವರ ಹೆಸರುಗಳನ್ನು ಕಾಲಾನುಕ್ರಮದಲ್ಲಿ ಪಟ್ಟಿಮಾಡಿದೆ. ಶಂಕರ (778-820), ಭಾಸ್ಕರ (ಸು. 1000), ರಾಮಾನುಜ (1017-1137), ನಿಂಬಾರ್ಕ (1250), ನೀಲಕಂಠ (1270), ವಲ್ಲಭ (1476-1544), ವಿಜ್ಞಾನ ಭಿಕ್ಷು (1600) ಮತ್ತು ಬಲದೇವ (1725). ಪ್ರತಿ ಭಾಷ್ಯಕಾರನೂ ತನ್ನ ಹಿಂದಿನವರ ಸಿದ್ಧಾಂತಗಳನ್ನು ಖಂಡಿಸಿ ತನ್ನ ಸಿದ್ಧಾಂತಗಳನ್ನು ಮಂಡಿಸುವುದು ರೂಢಿ. ಒಂದು ವೇಳೆ ಶ್ರೀಪತಿ ಪಂಡಿತನೆಂಬ ಭಾಷ್ಯಕಾರ ಇದ್ದಿದ್ದರೆ ಅವನ ಹೆಸರನ್ನೂ ಸಿದ್ಧಾಂತಗಳನ್ನೂ ಯಾರಾದರೂ ಒಬ್ಬರು ಖಂಡಿಸಲೇ ಬೇಕಾಗಿತ್ತು. ಆದರೆ ಯಾವೊಬ್ಬ ಭಾಷ್ಯಕಾರನೂ ಶ್ರೀಕರ ಭಾಷ್ಯವನ್ನಾಗಲಿ, ಅದರ ಸಿದ್ಧಾಂತಗಳನ್ನಾಗಿ ನಿರೂಪಿಸಿಲ್ಲ ಮತ್ತು ಖಂಡಿಸಿಲ್ಲ. ಆದುದರಿಂದ ಶ್ರೀಕರ ಭಾಷ್ಯ ಒಂದು ಇತ್ತೀಚಿನ ಕೃತಿ ಎಂಬುದು ಸಿದ್ಧವಾಗುತ್ತದೆ.
3. ಶ್ರೀಕರ ಭಾಷ್ಯ ಮಾಧ್ವರ ನಿಲುವನ್ನು ಖಂಡಿಸುತ್ತದೆ. ಒಂದು ವೇಳೆ ಮಧ್ವ ಎಂಬ ಹೆಸರನ್ನು ಅನಂತರದವರು ಯಾರೋ ಸೇರಿಸಿರಬೇಕು ಎಂಬ ಆಕ್ಷೇಪಣೆಯನ್ನು ವಾದಕ್ಕಾಗಿ ಒಪ್ಪಿಕೊಂಡರೂ ‘ಅತ್ಯಂತ ಭೇದವಾದಿನಃ’ ಎಂಬ ವಿಶೇಷಣವು ಅತ್ಯಂತ ಭೇದವಾದಿಗಳಾದ ಮಾಧ್ವರಿಗಲ್ಲದೆ ಮತ್ತಾರಿಗೂ ಅನ್ವಯವಾಗುವುದಿಲ್ಲ. ಗ್ರಂಥಕರ್ತೃವು ಅದ್ವೈತ ಮತ್ತು ದ್ವೈತಕ್ಕಿಂತ ತನ್ನ ದ್ವೈತಾದ್ವೈತ ಶ್ರೇಷ್ಠ ಎಂದು ಹೇಳುವುದರಿಂದ 13 ಮತ್ತು 14ನೇ ಶತಮಾನದಲ್ಲಿ ಪ್ರಚಲಿತವಿದ್ದ ಮಾಧ್ವರ ದ್ವೈತ ದರ್ಶನವು ಅವನಿಗೆ ಪರಿಚಿತವಿರಲೇ ಬೇಕು. ಅಲ್ಲದೆ, ಸಿದ್ಧಾಂತ ಶಿಖಾಮಣಿಯ ಅನೇಕ ಶ್ಲೋಕಗಳು ಶ್ರೀಕರಭಾಷ್ಯದಲ್ಲಿ ಇರುವುದರಿಂದ ಅದು 11ನೇ ಶತಮಾನದ ಕೃತಿಯಾಗಿರಲು ಸಾಧ್ಯವೇ ಇಲ್ಲ. ಸವೈದಿಕವಾದ ವೀರಶೈವ ಧರ್ಮವೊಂದೇ ಪ್ರಪಂಚದಲ್ಲಿ ವೇದಾನುಸಾರಿಯಾಗಿರುವ ಧರ್ಮ ಎಂಬುದು ಶ್ರೀ ಪತಿಯ ನಿಲವು. ವೀರಶೈವರು ಇಷ್ಟಲಿಂಗದ ಜೊತೆಗೆ ಜನಿವಾರವನ್ನು ತೊಡಬೇಕು, ಪಂಚಾಕ್ಷರಿಯ ಜೊತೆಗೆ ಗಾಯತ್ರೀ ಮಂತ್ರವನ್ನೂ ಜಪಿಸಬೇಕು, ವೀರಶೈವರು ಜುಟ್ಟು ಬಿಡಬೇಕು, ಎಂಬುದು ಅವನ ಬೋಧನೆ; ವೀರಶೈವರಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಇದ್ದಾರೆ; ಬ್ರಾಹ್ಮಣರು ಮಾತ್ರ ಗುರುಗಳಾಗಬೇಕು; ವೀರಶೈವರು ಯಜ್ಞಯಾಗಾದಿಗಳನ್ನೂ ಸೂತಕಗಳನ್ನೂ ಆಚರಿಸಬೇಕು; ವೇದಾಧ್ಯಯನಕ್ಕೆ ಅರ್ಹರಲ್ಲದ ವೀರಶೈವ ಸ್ತ್ರೀಯರು ಮೋಕ್ಷಕ್ಕೂ ಅನರ್ಹರು ಎಂದು ಅವನು ಗಟ್ಟಿಯಾಗಿ ನಂಬುತ್ತಾನೆ. ಈ ಎಲ್ಲ ವಿಷಯಗಳು ಶ್ರೀಕರಭಾಷ್ಯವು ಬಸವಣ್ಣನವರ ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿದೆ ಎಂಬುದು ನಿಶ್ಚಿತವಾಗುತ್ತದೆ.
1890ರಲ್ಲಿ ಆಂಧ್ರದಲ್ಲಿ ನ್ಯಾಯಾಧೀಶರಾಗಿದ್ದ ಶ್ರೀ ಟಿ.ಎಚ್.ಎಂ. ಸದಾಶಿವಯ್ಯ ಎಂಬುವವರು ಶ್ರೀಕರಭಾಷ್ಯದ ಕರಾಳ ಚರಿತ್ರೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಪಂಡಿತ ಸ್ವಾಮಿ ಎಂಬ ಸಿಕಂದರಾಬಾದಿನವನು ತಾನು ಶ್ರೀಪತಿ ಪಂಡಿತನ ವಂಶದವನೆಂದು ಹೇಳಿಕೊಂಡು ಕೆಲವು ಸಂಸ್ಕೃತ ವಿದ್ವಾಂಸರಿಗೆ ವೀರಶೈವ ದೃಷ್ಟಿಯಿಂದ ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆಯಲು ಹೇಳಿದ. ಆ ವಿದ್ವಾಂಸರಲ್ಲಿ ಒಬ್ಬನು ರಾಮಾನುಜರ ಶ್ರೀಭಾಷ್ಯದಿಂದ ಕೆಲವು (ಸು. 150) ಭಾಷ್ಯಗಳನ್ನು ಕದ್ದು ಶ್ರೀಕರ ಭಾಷ್ಯಕ್ಕೆ ಸೇರಿಸಿದ (ಒಂದು ಶತಮಾನ ಯಾರಿಗೂ ಗೊತ್ತಾಗದ ಈ ಸತ್ಯವನ್ನು ಮೈಸೂರಿನ ಡಾಕ್ಟರ್ ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಸಂಶೋಧಿಸಿದ್ದಾರೆ). ಈ ಗ್ರಂಥವನ್ನು ಸಿಕಂದರಾಬಾದಿನಲ್ಲಿ 1891ರಲ್ಲಿ ತೆಲುಗು ಲಿಪಿಯಲ್ಲಿ ಪ್ರಕಟಿಸಲಾಯಿತು.
ಆಗಮಗಳು: 1902 ರಿಂದೀಚೆಗೆ ಸೋಲಾಪುರದ ಲಿಂಗೀಬ್ರಾಹ್ಮಣ ಸಂಸ್ಕೃತ ಗ್ರಂಥಮಾಲಾ ಪ್ರಕಟಿಸಿದ ಪಾರಮೇಶ್ವರ, ಚಂದ್ರಜ್ಞಾನ, ಮುಕುಟ, ಸೂಕ್ಷ್ಮ, ಮುಂತಾದ ಆಗಮಗಳಿಗೆ ವೀರಶೈವವೆಂದು ನಂಬಲಾಗಿರುವ ಕೆಲವು ಸಿದ್ಧಾಂತಗಳನ್ನು ಸೇರಿಸಿ ಅವುಗಳನ್ನು ಭ್ರಷ್ಟಗೊಳಿಸಲಾಗಿದೆ. ಆದರೆ ಈ ಭ್ರಷ್ಟ ಆಗಮಗಳ ಸಿದ್ಧಾಂತಗಳು ಬಸವಣ್ಣನವರ ಲಿಂಗಾಯತ ಧರ್ಮಕ್ಕೆ ತೀರ ವಿರುದ್ಧವಾಗಿವೆ. (ವಿವರಗಳಿಗೆ ನೋಡಿ: ಆಗಮಗಳಲ್ಲಿ ಲಿಂಗಾಯತ ಮುಂದಿನ ಸಂಚಿಕೆಯಲ್ಲಿ).
Comments 11
Danappa R
Oct 15, 2023ಸಂಸ್ಕೃತ ಗ್ರಂಥಗಳು ಲಿಂಗಾಯತಕ್ಕೆ ವಿರುದ್ಧವಾಗಿ ಹರಿದ ಪ್ರವಾಹಗಳು. ಅವು ಯಾವುವು ವಚನಗಳನ್ನು ಮುಟ್ಟದೆ ಕೇವಲ ಹೆಸರಿನಿಂದ ತಮ್ಮ ಸ್ವಾರ್ಥವನ್ನು ಸಾಧಿಸಿಕೊಂಡವು. ವಿದ್ವತ್ ಪೂರ್ಣ ಲೇಖನಕ್ಕಾಗಿ ಶರಣು.
Manohar Jevargi
Oct 15, 2023ನಾವು ಹುಡುಕಿ ಓದಲು ಸಾಧ್ಯವೇ ಇಲ್ಲದ ಮುಖ್ಯವಾದ ಗ್ರಂಥಗಳನ್ನು ಸಂಕ್ಷಿಪ್ತರೂಪದಲ್ಲಿ ನೀಡಿದ ಅತ್ಯುತ್ತಮ ಲೇಖನ. ಲಿಂಗಾಯತ ಸ್ವತಂತ್ರಧರ್ಮಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬರೂ ನಮ್ಮ ಇತಿಹಾಸದ ಏಳುಬೀಳುಗಳನ್ನು ತಿಳಿಯಲು ಈ ಲೇಖನ ಓದಲೇ ಬೇಕು.
ಮಹಾಂತೇಶ ಗದ್ದಿಗೆ
Oct 18, 2023ಜಟಿಲವಾದ ಸಂಸ್ಕೃತ ಭಾಷೆ ಜನಪದರ ವಚನಗಳ ತಿರುಳನ್ನು ಹಿಡಿದಿಡುತ್ತದೆನ್ನುವ ನಂಬಿಕೆ ನನಗಿಲ್ಲ. ಸರ್ ಸುಭಗ ತತ್ವಗಳನ್ನು ಸಂಸ್ಕೃತ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ನನ್ನ ಅಭಿಮತವನ್ನು ತಮ್ಮ ಲೇಖನ ಪುಷ್ಠಿನೀಡುತ್ತದೆ. ಹಾಗಂತ ನಾನು ಸಂಸ್ಕೃತ ದ್ವೇಷಿಯಲ್ಲ ಸರ್, ಆ ಭಾಷೆಯ ಮಿತಿಯನ್ನು ಹೇಳಿದೆ ಅಷ್ಟೇ.
ರೇಣುಕಯ್ಯ ಚರಂತಿಮಠ
Oct 18, 2023ವೀರಶೈವ ಮತ್ತು ಶೈವಗಳೇ ಬೇರೆ, ಲಿಂಗಾಯತವೇ ಬೇರೆ ಎನ್ನುವುದು ಇಂತಹ ಲೇಖನಗಳನ್ನು ಓದುವಾಗ ಮತ್ತಷ್ಟು ಮತ್ತಷ್ಟು ಸಾಬೀತಾಗುತ್ತದೆ.
ಆದರೆ ಲಿಂಗಾಯತೀಯರಲ್ಲಿ ಈ ನಂಬಿಕೆಗಳು ಬಿಚ್ಚಲಾಗದಂತೆ ಬೆರೆತು ಹೋಗಿವೆ.
VIJAYAKUMAR KAMMAR
Oct 23, 2023ಅದ್ಭುತ ಅಧ್ಯಯನ ಹಾಗು ಚಿಂತನೆ ಇದೆ ಇವರ ಲೇಖನಗಳಲ್ಲಿ.
ಪೆರೂರು ಜಾರು, ಉಡುಪಿ
Oct 23, 2023ಸಂಸ್ಕೃತದ ಬರವಣಿಗೆ ಮತ್ತು ಕಾವ್ಯ ರಚನೆ ಕ್ರಿಶ 4ನೇ ಶತಮಾನದ ಬಳಿಕದ್ದು. ಭಗವದ್ಗೀತೆ ಸಹಿತ ಎಲ್ಲ ಸಂಸ್ಕೃತ ಕ್ಲೀಷೆಗಳು. 9ನೇ ಶತಮಾನದಿಂದ 18ನೇ ಶತಮಾನದ ನಡುವೆ ಬರೆದವುಗಳಾಗಿವೆ.
ಡಾ. ಮೈತ್ರ ಗದಿಗೆಪ್ಪಗೌಡರ
Oct 29, 2023ಬಯಲಿನಲ್ಲಿ ಬರುವ ಲೇಖನವನ್ನು ತಪ್ಪದೇ ಓದತಿನಿ ಎಲ್ಲಾ…ಕೆಲವೊಂದು ಕಾಪಿ ಮಾಡಿ ಮೇಲ್ ನಲ್ಲಿ ಇಟಕೊಂಡಿದಿನಿ.
ಅಂಬಾರಾಯ ಬಿರಾದಾರ
Oct 29, 2023ಲಿಂಗಾಯತ ತತ್ವ ಹಾಳು ಮಾಡಲು ಯತ್ನಿಸಿದವು ಈ ಗ್ರಂಥಗಳು.
Ravishankara S
Nov 2, 2023ಸಂಸ್ಕೃತ ಗ್ರಂಥಗಳು ತಮ್ಮೊಳಗೆ ಶೈವವನ್ನು ತುಂಬಿಕೊಂಡು ಲಿಂಗಾಯತವೆಂದು ಸಾಧಿಸಲು ನಡೆಸಿದ ಪ್ರಯತ್ನದಲ್ಲಿ ಸಫಲವಾಗಿದ್ದುದಕ್ಕೆ ಜನರಲ್ಲಿರುವ ಅಜ್ಞಾನವೇ ಕಾರಣ. ಎಷ್ಟು ಶತಮಾನಗಳಿಂದ ನಡೆದ ಈ ಕುಪ್ರಯತ್ನ ಇವತ್ತು ಲಿಂಗಾಯತ ಸಮುದಾಯವನ್ನೇ ಗೊಂದಲಕ್ಕೆ ದೂಡಿಬಿಟ್ಟಿದೆ. ಹಿಂದಿನವರ ಅಪರಾಧ ನಡೆ ಇವತ್ತಿನವರಿಗೆ ಶಿಕ್ಷೆ, ಬಲುದೊಡ್ಡ ಶಿಕ್ಷೆ. ಲೇಖನ ಬಹಳ ಚೆನ್ನಾಗಿದೆ. ವೀರಶೈವ ಮಹಾಸಭೆಯವರಿಗೆ ಇದನ್ನು ಕಳಿಸಿಕೊಡಿ.
ಗಿರೀಶ್ ಹುಳ್ಯಾಳ
Nov 26, 2023ಲೇಖನದಲ್ಲಿ ನಮೂದಿಸಲಾದ ಈ ಎಲ್ಲಾ ಸಂಸ್ಕೃತ ಗ್ರಂಥಗಳು ಬಸವಾದಿ ಶರಣರ ಲಿಂಗಾಯತ ಧರ್ಮಕ್ಕೆ ಸಂಬಂಧಪಟ್ಟವುಗಳು ಅಲ್ಲವೇ ಅಲ್ಲಾ. ಹೀಗಿದ್ದೂ ಈ ಬುಟ್ಟಿಯಲ್ಲೇ ಲಿಂಗಾಯತವನ್ನು ತುರುಕಲು ನಡೆಸಿದ ರಾಜಕೀಯ ಯಾಕೆ ಯಾರಿಗೂ ಗೊತ್ತಾಗುತ್ತಿಲ್ಲ? ಇಷ್ಟು ಸ್ಪಷ್ಟವಾಗಿ ಹಿಂದೆ ನಡೆದ ಅನಾಹುತಗಳನ್ನು ಉಲ್ಲೇಖಿಸಿರುವ ಪ್ರೊಫೆಸರ್ ಮಹಾದೇವಪ್ಪಾ ಅವರಿಗೆ ಧನ್ಯವಾದ.
ಜಗದೀಶ ರಾಮದುರ್ಗ
Nov 26, 2023ಮಾಯಿದೇವನ ಸಮಕಾಲೀನರಾದ ಜಕ್ಕಣ್ಣ ವಚನಗಳನ್ನು ರಚಿಸಿದ್ದಾರೆಂದ ಎಲ್ಲೋ ಓದಿದ ನೆನಪು. ಏಕೋತ್ತರ ಸ್ಥಲವು ಷಟಸ್ಥಲದಂತೆ ಇರುವ ಸಾಧನಾ ಮಾರ್ಗವೇ ಎಂಬುದು ನನ್ನ ಕುತೂಹಲ. ಆರು ಸ್ಥಲಗಳಲ್ಲಿರುವುದನ್ನು ನೂರೊಂದು ಸ್ಥಲಗಳಿಗೆ ವಿಸ್ತರಿಸಿ ಸುಲಭಗೊಳಿಸಿರಬಹುದೆ? ಈ ಕೃತಿ ಎಲ್ಲಿ ಸಿಗುತ್ತದೆ, ದಯವಿಟ್ಟು ತಿಳಿಸಿ.