ಶಿವಾಚಾರ
ಹಿಂದಿನ ಸಂಚಿಕೆಯಲ್ಲಿ ಶರಣರು ತೋರಿದ ಆಚಾರಗಳು ಲೇಖನದಲ್ಲಿ ಸದಾಚಾರದ ವಚನಗಳನ್ನು ಸಂಕ್ಷಿಪ್ತವಾಗಿ ಅಧ್ಯಯನ ಮಾಡಿದ್ದೆವು. ಪ್ರಸ್ತುತ ಸಂಚಿಕೆಯಲ್ಲಿ ಶಿವಾಚಾರದ ವಚನಗಳನ್ನು ಅಧ್ಯಯನ ಮಾಡೋಣ. ಸಂಕ್ಷಿಪ್ತ ಅರ್ಥದಲ್ಲಿ ಶಿವಾಚಾರವೆಂದರೆ “ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ” ಎಂದು ಚಿನ್ಮಯಜ್ಞಾನಿ ಚನ್ನಬಸವಣ್ಣನವರು ತಿಳಿಸಿದ್ದಾರೆ. ಇನ್ನೂ ಸರಳವಾಗಿ ಹೇಳುವುದಾದರೆ ಶರಣರ ಪ್ರಕಾರ ಮಾನವರಲ್ಲಿ ಎರಡು ಜಾತಿಗಳು ಒಂದು ಭವಿ ಮತ್ತೊಂದು ಭಕ್ತ. ಭವಿ ಎಂದರೆ ಕೇವಲ ಲೌಕಿಕವನ್ನು ಮಾತ್ರ ತನ್ನ ಜೀವನದುದ್ದಕ್ಕೂ ಹಾಸಿ ಹೊದ್ದು ಅದರೊಳಗೆಯೇ ಮುಳುಗೇಳುತ್ತಾ ಸತ್ಯವನ್ನು ಅರಿಯದ ಅಜ್ಞಾನಿ ಮನುಜರು. ಭಕ್ತ ಎಂದರೆ ಅರಿವಿನ ಪ್ರಜ್ಞೆಯನ್ನು ಹಾಸಿ ಹೊದ್ದು ಸತ್ಯಸದಾಚಾರವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡಾತ. ಶರಣರು ಅಜ್ಞಾನಿಗಳ ಸಂಗವನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತಾರೆ. ಪ್ರವಾದಿ ಬಸವೇಶ್ವರರು ತಮ್ಮ ಒಂದು ವಚನದಲ್ಲಿ “ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ, ದೂರ ದುರ್ಜನರ ಸಂಗವದು ಭಂಗವಯ್ಯಾ. ಸಂಗವೆರಡುಂಟು: ಒಂದ ಹಿಡಿ, ಒಂದ ಬಿಡು, ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ” ಎನ್ನುತ್ತಾರೆ. ಇಲ್ಲಿ ಸಜ್ಜನರೇ ಭಕ್ತರು ಹಾಗೂ ದುರ್ಜನರೇ ಭವಿಗಳು. ಸಜ್ಜನರ ಸಂಗವು ಲೇಸುಂಟುಮಾಡುವುದು ಹಾಗೂ ದುರ್ಜನರ ಸಂಗವು ಮುಂದೆ ಅನಿಷ್ಟಕ್ಕೆ (ಭಂಗ) ದಾರಿ ಮಾಡಿಕೊಡುತ್ತದೆ. ಈ ಎರಡು ಸಂಗಗಳಲ್ಲಿ ದುರ್ಜನರ ಸಂಗವನ್ನು ಬಿಟ್ಟು ಜ್ಞಾನಿಗಳ ಸಂಗವನ್ನು ಮಾತ್ರ ಮಾಡುವುದು. ಹೀಗೆ ಸದಾಚಾರವನ್ನಳವಡಿಸಿಕೊಂಡ ಸಜ್ಜನರು ತಮ್ಮ ಉಪಜೀವನಕ್ಕಾಗಿ ಯಾವುದೇ ಕಾಯಕದಲ್ಲಿ ಅದರಲ್ಲಿ ತಾರತಮ್ಯವನ್ನರಸದ, ಮೇಲು ಕೀಳು ಎಂದೆಣಿಸದೆ ಎಲ್ಲಾ ಕಾಯಕಗಳನ್ನು ಸಮಾನ ಭಾವದಿಂದ ನೋಡಿ ಎಲ್ಲರೂ ತನ್ನವರೆಂದು ಅರಿತು ನಡೆಯುವುದು ಶಿವಾಚಾರ.
ಶರಣರ ಶಿವಾಚಾರ ಬೋಧೆಯ ಕೆಲವು ವಚನಗಳನ್ನು ಅರಿಯಲು ಪ್ರಯತ್ನಿಸುವಾ-
ಶರಣ ಉರಿಲಿಂಗಪೆದ್ದಿ ಶಿವಾಚಾರ ಕುರಿತು “ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ? ಅಕಟಕಟಾ, ಈ ಹೀಂಗೆ ಶಿವಾಚಾರ? ಈ ಹೀಂಗೆ ಭೃತ್ಯಾಚಾರ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.” ಸಮಾಜವನ್ನು ಕಡೆಗಣಿಸಿ ಕೇವಲ ತನ್ನ ಕುಟುಂಬದ ಸ್ವಾರ್ಥಕ್ಕಾಗಿ ದುಡಿಯುವವನು ಹೇಗೆ ಶಿವಾಚಾರಿಯಾಗಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಅಂದರೆ ಶಿವಾಚಾರವು ಸ್ವಾರ್ಥವನ್ನು ವಿರೋಧಿಸುತ್ತದೆ.
“ಸಜ್ಜನಶುದ್ಧ ಶಿವಾಚಾರಸಂಪನ್ನರಪ್ಪ ಸದ್ಭಕ್ತರು ತಮ್ಮ ಲಿಂಗಕ್ಕೆ ಗುರುಮಂತ್ರೋಪದೇಶದಿಂದ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಸಕಲ ಪದಾರ್ಥವೆಲ್ಲವ ಪ್ರಮಾಣಿನಲ್ಲಿ ಭರಿತವಾಗಿ ಗಡಣಿಸಿ, ತನು ಕರಗಿ ಮನ ಕರಗಿ ನಿರ್ವಾಹ ನಿಷ್ಪತ್ತಿಯಲಿ ಗಟ್ಟಿಗೊಂಡು ತಟ್ಟುವ ಮುಟ್ಟುವ ಭೇದದಲ್ಲಿಯೇ ಚಿತ್ತವಾಗಿ ಲಿಂಗಾರ್ಪಿತವ ಮಾಡೂದು ಆ ಪ್ರಸಾದವ ತನ್ನ ಪಂಚೇಂದ್ರಿಯ ಸಪ್ತಧಾತು ತೃಪ್ತವಾಗಿ ಭೋಗಿಸೂದು. ಲಿಂಗಪ್ರಸಾದ ಗ್ರಾಹಕನ ಪರಿಯಿದು, ಕೊಡಲಚೆನ್ನಸಂಗಮದೇವಾ.”
ಶಿವಾಚಾರ ಸಂಪನ್ನರು ಸಕಲಪದಾರ್ಥವ ಭಕ್ತಿಯಿಂದ ಲಿಂಗಾರ್ಪಿತವ ಮಾಡಿ ಭೋಗಿಸಬೇಕು. ಹೀಗೆ ಭೋಗಿಸುವಾತನ ತನು ಸತ್ಯಶುದ್ಧ ಕಾಯಕದಲ್ಲಿ ನಿರತವಾಗಬೇಕು ಹಾಗೂ ಮನವು ಕರುಣಾಮೃತದ ಸಾಗರವಾಗಿ ಹರಿಯಬೇಕೆಂದು ಚನ್ನಬಸವಣ್ಣನವರು ತಿಳಿಸುತ್ತಾರೆ. ಶಿವಾಚಾರ ಸಂಪನ್ನನಾದವಂಗೆ ಅಹಂಕಾರ ವಿಮುಕ್ತಿಯಾಗಿರಬೇಕು ಯಾವ ವಿಧದಲ್ಲೂ ಅಹಂಕಾರ ನಮ್ಮಲ್ಲಿ ಎಡೆಯಾಡಕೂಡದೆಂದು ಚನ್ನಬಸವಣ್ಣನವರು ನಿರೂಪಿಸುತ್ತಾರೆ. “ಬ್ರಹ್ಮೋಪದೇಶವಾಯಿತ್ತೆಂದು ಬ್ರಹ್ಮದೊಡನೆ ಧಿಕ್ಕಾರ ಬೇಡ. ಶಿವಜ್ಞಾನದೀಪ್ತಿ ತೋರಿತ್ತೆಂದು ಶಿವಶರಣರೊಡನೆ ಧಿಕ್ಕರಿಸಬೇಡ. ಕಾಲಜ್ಞಾನವಾಯಿತ್ತೆಂದು ಕರ್ಮವ ಹಳಿಯಬೇಡ. ಈ ತ್ರಿವಿಧೋತ್ಪಾತ ಸಲ್ಲದು. ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಇವರೆಲ್ಲರೂ ಸಜ್ಜನ ಶುದ್ಧ ಶಿವಾಚಾರಕ್ಕೆಸಲ್ಲರು.”
ಬಸವಣ್ಣನವರು “ಶಿವಾಚಾರವೆಂಬುದೊಂದು ಬಾಳಬಾಯ ಧಾರೆ, ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು, ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು. ಬಿಚ್ಚಿ ಬೇರಾದಡೆ ಮೆಚ್ಚ ನಮ್ಮ ಕೂಡಲಸಂಗಮದೇವ” ವಚನದಲ್ಲಿ ಶಿವಾಚಾರವನ್ನು ಬಾಳಬಾಯಧಾರೆ ಎಂದು ವರ್ಣಿಸಿರುವರು. ಅಂದರೆ ಶರಣರ ಶಿವಾಚಾರದ ನಡೆ ಖಡ್ಗದ ಮೊನೆಯಷ್ಟು ಹರಿತವಾದದ್ದು, ಅಲ್ಲಿ ಯಾವ ರಿಯಾಯತಿಗಳೂ ಇಲ್ಲ. ಜೀವನ ಪರ್ಯಂತರ ನಿರಂತರವಾಗಿ ಗುರು ಲಿಂಗ ಜಂಗಮ ಪ್ರಸಾದ ತತ್ವಗಳನ್ನು ಅರಿತು ಅಳವಡಿಸಿಕೊಂಡು, ಶಿವಾಚಾರದ ಪಥದಲ್ಲಿ ಸಾಗಬೇಕೆಂದು ಮನದಟ್ಟು ಮಾಡಿಕೊಡುತ್ತಾರೆ.
ಸಿದ್ಧಲಿಂಗೇಶ್ವರರು “ಶಿವಲಿಂಗದ ಸಂಗದಿಂದ ಅಗ್ನಿಯ ಪೂರ್ವಾಶ್ರಯವನಳಿದ ಶಿವಲಿಂಗಪ್ರೇಮಿಯಾದ ಶಿವಾಚಾರನಿಷ್ಠನ ನೋಡಾ” ಅಗ್ನಿಯ ಪೂರ್ವಾಶ್ರಯವನಳಿಯುವುದು ಎಂದರೆ ಅಗ್ನಿಯ ಮೂಲಗುಣಗಳಾದ ಹಸಿವು ತೃಷೆ, ವಿಷಯಾದಿಗಳು ಕಾಮಾದಿ ಅರಿಷಡ್ವರ್ಗಗಳನ್ನು ಪಲ್ಲಟಮಾಡಿ ಲಿಂಗಭೋಗೋಪಭೋಗಿಯಾಗಿ ಬದುಕುವುದೇ ಶಿವಾಚಾರನಿಷ್ಠೆ ಎಂಬುದಾಗಿ ತಿಳಿಸುತ್ತಾರೆ.
“ಅವರ ನಡೆಯೊಂದು ನುಡಿಯೊಂದಾದಡೆ ಶಿವಾಚಾರಕ್ಕವರು ಸಲ್ಲರಯ್ಯಾ! ಬಲ್ಲನು, ಸಾತ್ವಿಕರಲ್ಲದವರನೊಲ್ಲನು. ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು. ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವನು.” ನಡೆ-ನುಡಿಯೊಂದಾಗದ ಆಚಾರ ಶಿವಾಚಾರವಲ್ಲವೆಂದು ಬಸವಣ್ಣನವರು ಸ್ಪಷ್ಟಪಡಿಸುತ್ತಾರೆ.
ಶಿವಾಚಾರದ ಹೆಚ್ಚಿನ ವಚನಗಳು:
“ಅಯ್ಯ, ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಮತ್ತಾ ಗುರುಲಿಂಗಜಂಗಮಸ್ವರೂಪವಾಗಿ, ನಿಜಾಚರಣೆಯಲ್ಲಿ ನಿಂದು, ಅಸತ್ಯವನಳಿದು ಸುಸತ್ಯದಲ್ಲಿ ನಿಂದು, ಅನಾಚಾರವನುಳಿದು ಶಿವಾಚಾರ ಸನ್ಮಾರ್ಗದಲ್ಲಿ ನಿಂದು, ಭವಿ ನಡೆನುಡಿಗಳನುಳಿದು ಭಕ್ತನ ನಡೆನುಡಿಗಳಲ್ಲಿ ನಿಂದು, ಅಯೋಗ್ಯವಾದ ಭೋಗವನುಳಿದು ಯೋಗ್ಯವಾದ ಭೋಗದಲ್ಲಿ ನಿಂದು, ತನ್ನಾದಿ ಮಧ್ಯಾವಸಾನವ ತಿಳಿದು, ತನ್ನ ನಿಜಾಚರಣೆ ಲೀಲಾವಿನೋದದಿಂದ ತನ್ನ ತಾನರ್ಚಿಸುವ ನಿಲುಕಡೆಯ ವಿಚಾರವ ನೋಡ ಸಂಗನಬಸವೇಶ್ವರ” – ಗುರುಸಿದ್ಧದೇವರು.
“ಪಂಚಾಂಗ ಪಂಚಾಂಗವೆಂದು ಕಳವಳಗೊಂಡು ಜೋಯಿಸನ ಕರೆಯಿಸಿ, ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು, ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು, ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು?” – ನಿರಾಲಂಬ ಪ್ರಭುದೇವ
“ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು ತನ್ನ ಮಠಕ್ಕೆ ಬಂದ ಲಿಂಗಜಂಗಮದ ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯ. ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂಬ ಹಂದಿಗಳೆತ್ತ ಬಲ್ಲರಯ್ಯಾ ಸತ್ಯರ ನೆಲೆಯ. ಮುಂದಿರ್ದ ನಿಧಾನವ ಕಾಣಲರಿಯದೆ ಸಂದಿಗೊಂದಿಯ ಹೊಕ್ಕು ಅರಸಿ ಬಳಲುವ ಅಂಧಕನಂತೆ, ಎಂದಾದರೂ ತನ್ನ ವ್ಯಸನವೆತ್ತಿದಾಗ ಒಂದೊಂದು ಪರಿಯಲ್ಲಿ ಸಿದ್ಧಾನ್ನಂಗಳು ಮಾಡಿ ಚೆಂದ ಚೆಂದದಲಿ ಬೋನ ಪದಾರ್ಥಂಗಳಂ ಮಾಡಿ ತಮ್ಮ ಹಿಂದಣ ಮುಂದಣ ಹರಕೆಯನೊಡಗೂಡಿ ಬಂಧುಬಳಗವ, ಮುಯ್ಯೂಟವ ಕೂಡಿ ಆ ದಿನದಲ್ಲಿ ಚಂದ್ರಶೇಖರನ ಭಕ್ತರಿಗೆ ದಣಿ[ಯೆ] ಉಣಲಿಕ್ಕಿದೆನೆಂಬ ಅಂಧಕ ಮೂಳಹೊಲೆಯರಿಗೆ ಎಂದೆಂದಿಗೂ ಮುಕ್ತಿಯಿಲ್ಲವೆಂದಾತ ನಮ್ಮ ಅಂಬಿಗರ ಚೌಡಯ್ಯ” – ಅಂಬಿಗರ ಚೌಡಯ್ಯ
“ಲೋಕಮೆಚ್ಚೆ ನಡೆವರಯ್ಯ, ಲೋಕಮೆಚ್ಚೆ ನುಡಿವರಯ್ಯ. ಲೋಕಮೆಚ್ಚೆ ನಡೆಯೆ ಹೋಯಿತ್ತೆನ್ನ ಶಿವಾಚಾರ. ಲೋಕಮೆಚ್ಚೆ ನುಡಿಯೆ ಹೋಯಿತ್ತೆನ್ನ ಶಿವಜ್ಞಾನ. ಲೌಕಿಕವರ್ತನ ನಾಯಕನರಕವೆಂದಿತ್ತು ಗುರುವಚನ. ಇದು ಕಾರಣ ಲಿಂಗ ಮೆಚ್ಚೆ ನಡವೆ; ಲಿಂಗ ಮೆಚ್ಚೆ ನುಡಿವೆ ಲಿಂಗ ಲಿಂಗವೆಂಬ ಲಿಂಗಭ್ರಾಂತನಾಗಿ ವರ್ತಿಸುವೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ” – ತೋಂಟದ ಸಿದ್ಧಲಿಂಗ ಶಿವಯೋಗಿಗಳು.
“ತನ್ನಂಗದ ಮೇಲೆ ಶಿವಲಿಂಗವಿದ್ದು ಸತ್ಕ್ರಿಯಾಮುಖದಿಂದ ಲಿಂಗಾರ್ಪಿತವ ಮಾಡಿ ಆ ಲಿಂಗ ಪ್ರಸಾದವ ಕೊಂಬುದೆ ಶಿವಾಚಾರಪದ ನೋಡಾ! ಆ ಸದ್ಭಕ್ತನಲ್ಲಿ ಶಿವನಿಪ್ಪನು. ಹೀಂಗಲ್ಲದೆ, ಅಂತರಂಗದಲ್ಲಿ ಆತ್ಮಲಿಂಗವುಂಟೆಂದು ಮನ ಭಾವಂಗಳಿಂದರ್ಪಿತವೆಂದು ಇಷ್ಟಲಿಂಗಾರ್ಪಣವಿಲ್ಲದ ಕರಕಷ್ಟಂಗೆ ಅವನಿಗೆ ಆವ ಸತ್ಯವು ಇಲ್ಲ; ಆವ ಸದಾಚಾರವು ಇಲ್ಲ; ಶಿವಜ್ಞಾನವೆಂಬುದು ಮುನ್ನವೆ ಇಲ್ಲ. ಶಿವಲಿಂಗಾರ್ಪಣಹೀನವಾಗಿ ಕೊಂಬುದು ಅದು ಶಿವಜ್ಞಾನವೆ? ಇಂತಪ್ಪ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ” – ತೋಂಟದ ಸಿದ್ಧಲಿಂಗ ಶಿವಯೋಗಿಗಳು.
“ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯಂಗಳೆಂಬವ ಮುಟ್ಟಲೀಯದೆ, ಆಚಾರವ ಶಿವಾಚಾರವ ಮಾಡುವೆ, ಭಯಭಕ್ತಿಯಿಂದ ತೋರುವೆ. ಮನದಲ್ಲಿ ವಂಚನೆಯಿಲ್ಲದೆ, ಭಾವಶುದ್ಧಪೂಜೆಯ ಮಾಡುವೆ. ಎನ್ನ ಪ್ರಾಣಶಕ್ತಿಯಿಂದ ಕೂಡುವೆ ಕೂಡಲಸಂಗಮದೇವಾ” – ಬಸವಣ್ಣ
“ಶಿವಾರ್ಚನೆಯಂ ಮಾಡಿ ಶಿವನವರಿಗೆ ಧನಸಹಿತ ತ್ರಿವಿಧವ ನಿವೇದಿಸುವುದು ಶಿವಾಚಾರ ಕೇಳಿರಣ್ಣಾ” – ಉರಿಲಿಂಗಪೆದ್ದಿ
“ಸ್ವಲ್ಪ ಅಮೃತಾನ್ನವನೊಯ್ದು ಹುತ್ತವೆಂದು ಬಿಲದ್ವಾರದಲ್ಲಿ ಹೊಯ್ವ ತೊತ್ತಿಂಗೆಲ್ಲಿಯದೊ ಶಿವಾಚಾರ! ಅದೆಂತೆಂದಡೆ- ಕಲ್ಲನಾಗರ ಕಂಡಡೆ ಹಾಲು ಹೊಯ್ಯೆಂಬಳು, ಬದುಕಿದ ನಾಗರ ಕಂಡಡೆ ಕೊಲ್ಲು ಕೊಲ್ಲೆಂಬಳು. ಉಂಬ ದೇವರು ಬಂದಡೆ ಇಲ್ಲವೆಂದಟ್ಟುವಳು, ಉಣ್ಣದ ಕಲ್ಲುಪ್ರತಿಮೆಯ ಮುಂದಿಟ್ಟು ಉಣ್ಣೆಂಬಳು. ಇಂತಹ ವೇಷದ ಡಂಬ ತೊತ್ತಿಂಗೆ ವಿಚಾರಿಸದೆ ಲಿಂಗವ ಕೊಡಲಾಗದೆಂದಾತನಂಬಿಗ ಚೌಡಯ್ಯ” – ಅಂಬಿಗರ ಚೌಡಯ್ಯ
“ಜಂಗಮದ ಮನ-ಭಾವದಲ್ಲಿ ಭಕ್ತನೆ ಭೃತ್ಯನೆಂದು, ಭಕ್ತನ ಮನ-ಭಾವದಲ್ಲಿ ಜಂಗಮವೆ ಕರ್ತನೆಂದು ಇದ್ದ ಬಳಿಕ, ಬಂದಿತ್ತು-ಬಾರದು, ಇದ್ದತ್ತು-ಹೋಯಿತ್ತೆಂಬ ಸಂದೇಹವಿಲ್ಲದಿರಬೇಕು. ಹೋಯಿತ್ತೆಂಬ ಗುಣವುಳ್ಳನ್ನಕ್ಕ ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ, ಶಿವಾಚಾರಕ್ಕಲ್ಲಿಂದತ್ತ ದೂರ. ಜಂಗಮದ ಹರಿದ ಹರಿವು, ಜಂಗಮದ ನಿಂದ ನಿಲವು, ಜಂಗಮದ ಗಳಗರ್ಜನೆ, ಜಂಗಮದ ಕೋಳಾಟಕ್ಕೆ ಸೈರಿಸದಿದ್ದಡೆ ನೀನಂದ ಮೂಗ ಕೊಯ್ ಕೂಡಲಸಂಗಮದೇವಾ.” – ಬಸವಣ್ಣ
“ಎಂತು ಶಿವಭಕ್ತಿಯ ನಾನುಪಮಿಸುವೆನಯ್ಯಾ ಎಂತು ಶಿವಾಚಾರವೆನಗೆ ವೇದ್ಯವಪ್ಪುದೋ ಅಯ್ಯಾ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಂದ ಕಟ್ಟುವಡೆದೆನು. ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ. ಪಂಚೇಂದ್ರಿಯ, ಸಪ್ತಧಾತು ಹರಿಹಂಚುಮಾಡಿ ಕಾಡಿಹವಯ್ಯಾ, ಅಯ್ಯಾ, ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ ಕೂಡಲಸಂಗಮದೇವಾ, ನಾನೇವೆನೇವೆನಯ್ಯಾ” – ಬಸವಣ್ಣ
“ಜಾತಕರ್ಮ ಶುಭಕರ್ಮ ಪ್ರೇತಕರ್ಮವ ಮಾಡುವರು ಲೋಕದ ಮನುಜರು. ಅದೆಂತೆಂದಡೆ: ಈರಿಲು, ಮೂವಟ್ಟಲು; ಹಸೆ-ಹಂದರ ತೊಂಡಿಲು ಬಾಸಿಂಗ; ಹಣೆಯಕ್ಕಿ ಹೆಣನ ಸಿಂಗಾರ ಶ್ರಾದ್ಧಕೂಳು, ಈ ಪರಿಯ ಮಾಡುವನೆ ಶಿವಭಕ್ತ? ಅದೆಂತೆಂದಡೆ; ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ, ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ, ದೇವರಪಾದಕ್ಕೆ ಸಂದಲ್ಲಿ ಶಿವಭಕ್ತಂಗೆ ವಿಭೂತಿವೀಳೆಯಂಗೊಟ್ಟು ಸಮಾಧಿಪೂರ್ಣನಂ ಮಾಡುವುದೆ ಶಿವಾಚಾರ. ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ, ಲಿಂಗದೂರ ಅಘೋರನರಕಿಯಯ್ಯಾ, ಕೂಡಲಚೆನ್ನಸಂಗಮದೇವಾ” – ಚನ್ನಬಸವಣ್ಣ
“ಶರಣನ ಇಂದ್ರಿಯ ಕರಣಂಗಳು ಶಿವಾಚಾರದಲ್ಲಿ ವರ್ತಿಸುವ ಪರಿಯೆಂತೆಂದಡೆ: ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣ ಇಂತಿವು ಪಂಚಜ್ಞಾನೇಂದ್ರಿಯಂಗಳು, ಇವಕ್ಕೆ ವಿವರ: ಶ್ರೋತ್ರದಲ್ಲಿ ಗುರುವಚನ, ಶಿವಾಗಮ, ಶಿವಪುರಾಣ, ಆದ್ಯರ ವಚನವಲ್ಲದೆ ಅನ್ಯವ ಕೇಳದಿಹ. ತ್ವಕ್ಕಿನಲ್ಲಿ ಶ್ರೀವಿಭೂತಿರುದ್ರಾಕ್ಧಿ ಶಿವಲಿಂಗವಲ್ಲದೆ ಅನ್ಯವ ಧರಿಸದಿಹ. ನೇತ್ರದಲ್ಲಿ ಶಿವಲಿಂಗವಲ್ಲದೆ ಅನ್ಯವ ನೋಡದಿಹ. ಜಿಹ್ವೆಯಲ್ಲಿ ಶಿವಮಂತ್ರವಲ್ಲದೆ ಅನ್ಯವ ಸ್ಮರಿಸದಿಹ. ಘ್ರಾಣದಲ್ಲಿ ಶಿವಪ್ರಸಾದವಲ್ಲದೆ ಅನ್ಯವ ವಾಸಿಸದಿಹ. ಇನ್ನು ಶಬ್ದ ಸ್ಪರ್ಶ ರೂಪು ರಸ ಗಂಧ ಇಂತಿವು ಪಂಚವಿಷಯಂಗಳು, ಇವಕ್ಕೆ ವಿವರ: ಶಬ್ದವೆ ಗುರು, ಸ್ಪರ್ಶವೆ ಲಿಂಗ, ರೂಪೆ ಶಿವಲಾಂಛನ, ರಸವೆ ಶಿವಪ್ರಸಾದ, ಗಂಧವೆ ಶಿವಾನುಭಾವ, ಇನ್ನು ವಾಕು, ಪಾಣಿ, ಪಾದ, ಪಾಯು, ಗುಹ್ಯ ಇಂತಿವು ಪಂಚಕರ್ಮೇಂದ್ರಿಯಂಗಳು. ಇವಕ್ಕೆ ವಿವರ: ಶಿವಯೆಂಬುದೆ ವಾಕು, ಶಿವಾಚಾರಸದ್ಭಕ್ತಿವಿಡಿವುದೆ ಪಾಣಿ, ಗುರುಮಾರ್ಗಾಚಾರದಲ್ಲಿ ಆಚರಿಸುವುದೆ ಪಾದ, ಅಧೋಗತಿಗಿಳಿವ ಮಾರ್ಗವ ಬಿಡುವುದೆ ಪಾಯು, ಶಿವಾನುಭಾವಿಗಳ ಸತ್ಸಂಗದಲ್ಲಿ ಆನಂದಿಸುವುದೆ ಗುಹ್ಯ. ಇನ್ನು ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರ ಇಂತಿವು ಪಂಚಕರಣಂಗಳು, ಇವಕ್ಕೆ ವಿವರ: ಶಿವಜ್ಞಾನವೆ ಜ್ಞಾನ, ಶಿವಧ್ಯಾನವೆ ಮನ, ಶಿವಶರಣರಲ್ಲಿ ವಂಚನೆಯಿಲ್ಲದಿಹುದೆ ಬುದ್ಧಿ, ಶಿವದಾಸೋಹವೆ ಚಿತ್ತ, ಶಿವೋಹಂ ಭಾವವೆ ಅಹಂಕಾರ. ಇನ್ನು ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ ಇಂತಿವು ಪಂಚಕೋಶಂಗಳು. ಇವಕ್ಕೆ ವಿವರ: ಅನ್ನಮಯವೆ ಪ್ರಸಾದ, ಪ್ರಾಣಮಯವೆ ಲಿಂಗ, ಮನೋಮಯವೆ ಶಿವಧ್ಯಾನ, ವಿಜ್ಞಾನಮಯವೆ ಶಿವಜ್ಞಾನ, ಆನಂದಮಯವೆ ಶಿವಾನಂದಮಯವಾಗಿರ್ಪುದು, ಇಂತಿ ಸರ್ವತತ್ವಂಗಳೆಲ್ಲವು ಲಿಂಗತತ್ವಂಗಳಾದ ಕಾರಣ ಶಿವಶರಣಂಗೆ ಶಿವಧ್ಯಾನವಲ್ಲದೆ ಮತ್ತೊಂದ ಧ್ಯಾನವಿಲ್ಲವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ” – ಉರಿಲಿಂಗಪೆದ್ದಿ.
“ಇಷ್ಟಲಿಂಗವ ಮರೆದು ಬರಿಯ ಕಲ್ಲಿಗೆರಗುವ ಭ್ರಷ್ಟಂಗಿನ್ನೆಲ್ಲಿಯ ಶಿವಾಚಾರವಯ್ಯಾ ! ಖಡ್ಗವ ಬಿಟ್ಟು ಕೋಲುವಿಡಿದು ಕಾಳಗವ ಮಾಡಿದರೆ ತಲೆ ಹೋಗುವುದನರಿಯಾ ಮನುಜ. ಲಿಂಗವ ಬಿಟ್ಟು ಅನ್ಯಲಿಂಗವ ಪೂಜೆಮಾಡಿದರೆ ನರಕವೆಂಬುದನರಿಯಾ ಪಾಪಿ. ಎಂಬ ವಚನವನರಿಯದೆ ಮುಂದುಗಾಣದನ್ಯದೈವಕೆರಗುವ ಅಂಧಕರಿಗೆಂದೆಂದು ಭವಹಿಂಗದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ” -ಹೇಮಗಲ್ಲ ಹಂಪ.
“ಪಕ್ಷಿ ಜನಿಸಿ ಅಮೃತವನರಿಯದಂತೆ, ಶಿವನಲ್ಲದೆ ಅನ್ಯದೈವ ಭಜನೆಯುಳ್ಳವರೇತಕ್ಕೆ ಬಾತೆ? ಅನ್ಯಾಯಿತ ವಧೆಯ ಮಾಡುವ ಅರ್ತಿಕಾರ ದೋಷವನರಿಯ. ಪಾಪಿಯ ಕೈಯ ದಾರ, ಗಾಳದ ಕೊನೆಗೆ ಬಂದುಂಡ ಮತ್ಸ್ಯದ ಲಕ್ಷಣದಂತೆ, ಮನುಷ್ಯ ಜನ್ಮದಲ್ಲಿ ಹುಟ್ಟಿ, ಶಿವಾಚಾರವನರಿಯದೆ ದುರಾಚಾರಕ್ಕೆರಗುವರು, ಹಿರಿಯದೈವವನರಿಯದೆ, ಕಿರುಕುಳದೈವವಂ ಪಿಡಿವರು. ಕೇಶವಂಗೆ ದಾಸತ್ವಮಂ ಮಾಡಿದಡೆ ಪ್ರತ್ಯಕ್ಷ ಮುಡುಹ ಸುಡಿಸನೆ ? ಮೈಲಾರದೇವರೆಂಬವರ ನಾಯಾಗಿ ಬಗುಳಿಸನೆ? ಜಿನ ದೈವವೆಂಬವರ ತಲೆಯ ತರಿಸನೆ? ಹುಲುದೈವವ ಪೂಜಿಸಿದವರು ಕೈಲಾಸದ ಬಟ್ಟೆಯ ಹೊಲಬುದಪ್ಪಿದರು. ಮುನ್ನ ಮಾಡಿದವರಿಗಿದಿಯಾಯಿತ್ತು. ಇನ್ನು ಮಾಡುವರಿಗೆ ವಿಧಿಯಹುದೊ. ನಮ್ಮ ದೇವರಾಯ ಸೊಡ್ಡಳಂಗೆ ಒಂದರಳನೇರಸಿದವ, ಕೈಲಾಸಕ್ಕೆ ಹೋದನು” – ಸೊಡ್ಡಳ ಬಾಚರಸ.
“ವಿಭೂತಿಯನಿಟ್ಟು, ರುದ್ರಾಕ್ಷಿಯಂ ಧರಿಸಿ, ಪಂಚಾಕ್ಷರಿಯಂ ಜಪಿಸಿ, ಕೃತಾರ್ಥರಾದೆವೆಂಬ ಪಂಚಮಹಾಪಾತಕರು ನೀವು ಕೇಳಿರೊ. ಅದೆಂತಂದಡೆ, ವಿಭೂತಿಯನಿಟ್ಟು ವಿಶ್ವಾಸವಿಲ್ಲವಾಗಿ, ರುದ್ರಾಕ್ಷಿಯ ಧರಿಸಿ ರುದ್ರಗಣಂಗಳನರಿಯರಾಗಿ, ಪಂಚಾಕ್ಷರಿಯ ಜಪಿಸಿ ಪಂಚಮಹಾಪಾತಕವ ಬಿಡರಾಗಿ, ಅವಾವೆಂದಡೆ: ಹುಸಿ, ಕೊಲೆ, ಕಳವು, ಪಾರದ್ವಾರ, ತಾಮಸ ಭಕ್ತಸಂಗ, ಇಂತಿವ ಬಿಡದನ್ನಕ್ಕರ ಶಿವಭಕ್ತನೆನಿಸಿಕೊಳಬಾರದು ನೋಡಾ, ಕಸಗೊಂಡ ಭೂಮಿಯಲ್ಲಿ ಸಸಿ ಪಲ್ಲವಿಸುವುದೆ? ಹುಸಿಯಿದ್ದಲ್ಲಿ ಶಿವಭಕ್ತಿ ನೆಲೆಗೊಂಬುದೆ? ಬಸವಗತಿಯೆನುತ ಹಿರಿದಾಗಿ ಭಸಿತವ ಪೂಸಿಕೊಂಡಿರ್ದ ಕುನ್ನಿಗಳೆಲ್ಲರೂ ಸದ್ಭಕ್ತರಾಗಬಲ್ಲರೆ? ಅಶನ ಭವಿಪಾಕ ತಿಂಬುದೆಲ್ಲವೂ ಅನ್ಯದ್ಯೆವದೆಂಜಲು. ಮತ್ತೆ ಮರಳಿ ವ್ಯಸನಕ್ಕೆ ದಾಸಿ ವೇಸಿ ಹೊಲತಿ ಮಾದಗಿತ್ತಿ ಡೊಂಬತಿ ಮೊದಲಾದವರಿಗೆ ಹೇಸದೆ ಆಶೆಯ ಮಾಡುವವರ ಭಕ್ತಿಯ ತೆರನೆಂತೆಂದಡೆ: ಸೂಕರನ ದೇಹವ ತೊಳೆದಡೆ, ಅದು ಕೂಡ ಅಶುದ್ಧದೊಳಗೆ ಹೊರಳಿದ ತೆರನಾಯಿತ್ತೆಂದ, ಕಲಿದೇವರದೇವ” -ಮಡಿವಾಳ ಮಾಚಿದೇವ
Comments 8
Paramashivappa Patil
Apr 11, 2021ಪಂಚಾಚಾರಗಳನ್ನು ತಿಳಿದುಕೊಳ್ಳಲು ನೆರವಾಗುವ ಲೇಖನ ಪ್ರಕಟಿಸುತ್ತಿರುವುದಕ್ಕೆ ಥ್ಯಾಂಕ್ಸ್.
Kiran Varad
Apr 13, 2021ಸದಾಚಾರಕ್ಕೂ, ಶಿವಾಚಾರಕ್ಕೂ ಅಂತಹ ವ್ಯತ್ಯಾಸಗಳು ಗೊತ್ತಾಗಲಿಲ್ಲ. ಇವು ಸರಿಯಾದ ಬದುಕುವ ಕ್ರಮಗಳನ್ನು ತೋರಿಸುತ್ತವೆ ಎಂಬ ಅಂಶ ಸ್ಪಷ್ಟವಾಯಿತು. ಅಲ್ಲಲ್ಲಿ ವಚನಗಳಿಗೆ ವಿವರಣೆ ಕೊಟ್ಟಿದ್ದರೆ ಸಹಾಯವಾಗುತ್ತಿತ್ತು.
Girija K.P
Apr 15, 2021ಶಿವಾಚಾರದ ವಚನಗಳನ್ನು ಓದುತ್ತಾ ಶರಣರು ಆ ಮೂಲಕ ನಮಗೇನು ಹೇಳುತ್ತಿದ್ದಾರೆಂಬುದು ಸ್ಪಷ್ಟವಾಯಿತು. ಕೆಲವೊಮ್ಮೆ ಸದಾಚಾರವೇ ಶಿವಾಚಾರವೆನಿಸುತ್ತದೆ.
ಜಯ ಹೆಚ್ ವಿ
Apr 17, 2021ವಿಶ್ವಗುರು ಬಸವಣ್ಣನವರು ಕೊಟ್ಟಿರುವ ತತ್ವಗಳಲ್ಲಿ ಪಂಚಾಚಾರಗಳು ಬಹಳ ಮುಖ್ಯವಾದವುಗಳು.
ಲಿಂಗವಲ್ಲದೆ ಅನ್ಯವನರಿಯದಿಹುದೇ ಲಿಂಗಾಚಾರ,ಕಾಯಕದಲ್ಲಿ ಬಂದುದನ್ನು ತಂದು ಗುರು ಲಿಂಗ ಜಂಗಮಕ್ಕೆ ನೀಡಿ ಸತ್ಯ ಶುಧ್ದನಾಗಿರುವುದೇ ಸದಾಚಾರ (economic equality) ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಿಯದೆ ಅವರೊಕ್ಕುದ ಕೊಂಬುದೆ ಶಿವಾಚಾರ (social equality) ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ, ಶಿವ ಶರಣರೆ ಹಿರಿಯರಾಗಿ ತಾನೇ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೇ ಭೃತ್ಯಾಚಾರ.
ಈ ಲೇಖನದಲ್ಲಿ ಶಿವಾಚಾರದ ಬಗ್ಗೆ ಬಹಳ ವಿವರವಾಗಿ ಶಿವಾಚಾರಕ್ಕೇ ಸಂಭಂಧಿಸಿದ ವಚನಗಳನ್ನು ಆಧಾರವಾಗಿಟ್ಟುಕೊಂಡು ಶಿವಾಚಾರದ ಬಗ್ಗೆ ವಿವರವಾಗಿ ತಿಳಿಸಿರುವ ಶರಣ ಡಾ : ಪಂಚಾಕ್ಷರಿಯವರಿಗೆ ಶರಣಾರ್ಥಿಗಳು.
ಅಕ್ಷಯ್ ಗಿರಿನಗರ
Apr 20, 2021ಪಂಚಾಚಾರಗಳು ಬದುಕುವ ದಾರಿಯನ್ನು ತೋರಿಸುವ ಸೂತ್ರಗಳು. ಅವುಗಳನ್ನು ಅಳವಡಿಸಿಕೊಂಡರೆ ಮಾತ್ರ ಶರಣ ಪಥಕ್ಕೆ ಸಲ್ಲುತ್ತೇವೆ. ಪಂಚಾಚಾರಗಳು ದಿನನಿತ್ಯದ ಅಭ್ಯಾಸವಾಗಬೇಕು.
Gurunath Kusthi
Apr 20, 2021ಎಂತು ಶಿವಾಚಾರವೆನಗೆ ವೇದ್ಯವಪ್ಪುದೋ ಅಯ್ಯಾ… ಎಂದು ಬಸವಣ್ಣನವರು ಹೇಳುವುದನ್ನು ನೋಡಿದರೆ ಶಿವಾಚಾರದ ಅಗತ್ಯ ಮಹತ್ವ ಎರಡೂ ವೇದ್ಯವಾಗುತ್ತದೆ. ವಚನಗಳಲ್ಲಿ ಶಿವಾಚಾರದ ಮಹತ್ವ ಸಾರುವ ನೀತಿಯನ್ನು ತೋರಿಸಿದ ಲೇಖನ ಚೆನ್ನಾಗಿದೆ.
Lingaraj Patil
Apr 25, 2021ಶರಣರು ಶಿವಾಚಾರಿಗಳು ಹೇಗೆಂಬುದನ್ನು ವಚನಗಳಲ್ಲಿ ತೋರಿಸುವ ಮಹತ್ವದ ಲೇಖನ. ಶಿವಾಚಾರಕ್ಕೆ ಪ್ರಸ್ತುತ ವ್ಯಾಖ್ಯಾನವನ್ನು ಹೇಗೆ ಕೊಡಬಹುದೆಂದು ಯೋಚಿಸುತ್ತಿದ್ದೇನೆ.
H V Jaya
Jun 2, 2021ವರ್ಣಾಶ್ರಮ ವ್ಯವಸ್ಥೆ,ಜಾತಿಪದ್ದತಿಯಂತಹ ಅಂಧಕಾರ ತುಂಬಿ ತುಳುಕುತ್ತಿದ್ದ ಆ ಕಾಲದಲ್ಲಿ ಗುರು ಬಸವಣ್ಣನವರು ಪಂಚಾಚಾರಗಳಲ್ಲಿ ಒಂದಾದ ಶಿವಾಚಾರ ತತ್ವವನ್ನು ಕೊಟ್ಟು ಅಜ್ಞಾನದ ಕತ್ತಲೆ ತುಂಬಿದ್ದ ಮನಗಳಿಗೆ ಸುಜ್ಞಾನದ ಬೆಳಕು ಚೆಲ್ಲಿದರು . ಅಂತಹ ದಿವ್ಯ ಸಂದೆಶವನ್ನುವನ್ನು ವಚನಾಧಾರಗಳ ಮೂಲಕ ಜನ ಮನ ಮುಟ್ಟವಂತೆ ವಿವಾಹ ಇಸಿರುವ ಡಾ;ಪಂಚಾಕ್ಷರಿಯವರಿಗೆ ಶರಣು ಶರಣಾರ್ಥಿಗಳು