ಶರಣೆಯರ ಸ್ಮಾರಕಗಳು
ಕಲ್ಯಾಣ ಕ್ರಾಂತಿಯ ನಂತರ ಅದು ವಿಸ್ತೃತವಾಗಿ ವ್ಯಾಪಿಸಿಕೊಂಡಿದ್ದು ಇಂದಿನ ಸೊಲ್ಲಾಪೂರ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಜಮಖಂಡಿ ತೇರದಾಳ ಚಿಮ್ಮಡ ಅಂಕಲಗಿ ಹಿರೇ ಬಾಗೇವಾಡಿ ಚಿಕ್ಕಬಾಗೇವಾಡಿ ಮುಗುಟಖಾನ ಹುಬ್ಬಳ್ಳಿ ಕಾದ್ರೊಳ್ಳಿ ಹುಣಶೀಕಟ್ಟಿ ಮುರುಗೋಡ ಸೊಗಲ ನಾಗಲಾಪುರ ಕಕ್ಕೇರಿ ತಿಗಡಿ ಗೊಡಚಿ ಮುನವಳ್ಳಿ ಸವದತ್ತಿ ಮುಂತಾದ ಕಡೆಗೆ. ಕಲ್ಯಾಣದಿಂದ ಹೊರಟ ಶರಣ ಮಾರ್ಗ ಇದಾಗಿದ್ದು ಅಲ್ಲಿ ನೂರಾರು ಶರಣರು ತಂಗಿದ್ದಾರೆ, ಐಕ್ಯವಾಗಿದ್ದಾರೆ. ಇಂತಹ ವಿರಳ ಕ್ಷೇತ್ರಗಳ ಪರಿಚಯ ಮಾಡುವುದು ಈ ಲೇಖನದ ಉದ್ಧೇಶ.
ಗಂಗಾಂಬಿಕಾ ಐಕ್ಯಸ್ಥಳ:
ಬಸವಣ್ಣನವರ ಮೊದಲನೆಯ ಪತ್ನಿ ಗಂಗಾಂಬಿಕಾ. ಇವರು ಸಹೋದರಿ ನೀಲಮ್ಮನವರ ಮಗನಾದ ಬಾಲ ಸಂಗಯ್ಯನ ಜೊತೆ ಕಾದ್ರೊಳ್ಳಿಯ ಕಾಳಗವಾದ ನಂತರ
ಮುಗುಟಖಾನ ಹುಬ್ಬಳ್ಳಿಯ ಮಲಪ್ರಭಾ ನದಿಯಲ್ಲಿ ಐಕ್ಯವಾಗಿದ್ದಾರೆ. ಈಗ ಅತ್ಯಂತ ಸುಂದರ ಸ್ಮಾರಕ ಅಲ್ಲಿ ನಿರ್ಮಾಣಗೊಂಡಿದ್ದು ಬಸವ ಭಕ್ತರಿಗೆ ಸಾಧಕರಿಗೆ ಪೂಜ್ಯ ಸ್ಥಳವಾಗಿದೆ. ಶರಣೆ ಗಂಗಾಂಬಿಕೆ ಸೋವಿದೇವನ ಸೈನಿಕರೊಂದಿಗೆ ಯುದ್ಧ ಮಾಡಿ ದಾರಿಯಲ್ಲಿಯೇ ಮಡಿದರು.
ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮ:
ಬಯಲುಹೊಂಗಲ ತಾಲ್ಲೂಕಿನ ಇನ್ನೊಂದು ಅತಿ ಪ್ರಮುಖ ಪ್ರದೇಶ ತಿಗಡಿ. ಇಲ್ಲಿ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಸಮಾಧಿಯು ಅತ್ಯಂತ ಶಿಥಿಲಾವಸ್ಥೆಯಲ್ಲಿದೆ. ಕಲ್ಯಾಣ ಕ್ರಾಂತಿಗೆ ಕಾರಣವಾದ ವರ್ಣಸಂಕರ ಎಂಬ ಆರೋಪದಡಿ ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆಯಾಗುತ್ತದೆ. ಅವರೀರ್ವರ ಕಣ್ಣು ಕಿತ್ತು, ಆನೆ ಕಾಲಿಗೆ ಹಾಕಿ ತುಳಿಸಿ ಕೊಂದದ್ದು ದುರಂತ ಇತಿಹಾಸ. ಆನೆಕಾಲಿಗೆ ಕಟ್ಟಿ ಎಳೆದೊಯ್ದ ಪ್ರದೇಶ ಈಗಲೂ ಎಳೆಹೂಟಿ ಪ್ರದೇಶವೆಂದು ಬಸವಕಲ್ಯಾಣದಲ್ಲಿ ಗುರುತಿಸಲ್ಪಟ್ಟಿದೆ.
ಅವರಿಬ್ಬರ ಹತ್ಯೆಯ ಮೊದಲೇ ಶೀಲವಂತ ಹಾಗೂ ಲಾವಣ್ಯ ಕಲ್ಯಾಣ ತೊರೆದಿರುತ್ತಾರೆ. ಈಗ ಇವರ ಕುಟುಂಬದಲ್ಲಿ ಉಳಿದವರು ಕಲ್ಯಾಣಮ್ಮನವರು ಮಾತ್ರ .
ಕಲ್ಯಾಣಮ್ಮ ದುಃಖವನ್ನು ಅದುಮಿಟ್ಟುಕೊಂಡು, ವಚನ ಸಾಹಿತ್ಯವನ್ನು ಉಳಿಸಲೆಂದು ಅಕ್ಕನಾಗಮ್ಮ, ಗಂಗಾಂಬಿಕಾ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಸತ್ಯಕ್ಕ ಮುಂತಾದವರೊಂದಿಗೆ
ಸೋವಿದೇವನ ಸೈನಿಕರೊಂದಿಗೆ ಯುದ್ಧಮಾಡುತ್ತಾರೆ. ಕಾದ್ರೊಳ್ಳಿಯ ಯುದ್ಧ ನಂತರ ಅತಿಯಾಗಿ ಗಾಯಗೊಂಡ ಕಲ್ಯಾಣಮ್ಮನವರು ತಿಗಡಿ ಗ್ರಾಮದಲ್ಲಿ ಐಕ್ಯವಾಗುತ್ತಾರೆ.
ಡೋಹರ ಕಕ್ಕಯ್ಯನವರ ಧರ್ಮಪತ್ನಿ ಭೀಷ್ಟಾದೇವಿ:
ಮಾಳವ ದೇಶದವನೆಂತಲೂ ಮತ್ತು ಆಂಧ್ರ ಮೂಲದ ಕಕ್ಕಯ್ಯನೆಂತಲೂ ಅಧ್ಯಯನದಲ್ಲಿ ಬರುವ ಅತ್ಯಂತ ಕೆಳ ಸ್ತರದ ಕುಲದಲ್ಲಿ ಹುಟ್ಟಿದ ಡೋಹರ ವೃತ್ತಿಯ ಅಂದರೆ ಚರ್ಮವನ್ನು ಹದಮಾಡುವ ಕಾಯಕದವರು ಶರಣ ಕಕ್ಕಯ್ಯ. ಇವರ ಆರು ವಚನಗಳು ನಮಗೆ ಲಭ್ಯ ಇವೆ. ಇವರ ಧರ್ಮಪತ್ನಿಯೇ ಭೀಷ್ಟಾದೇವಿ. ಕಾದ್ರೊಳ್ಳಿಯ ಯುದ್ಧದ ನಂತರ ಲಿಂಗನ ಮಠ ಮಾರ್ಗವಾಗಿ ಉಳವಿಗೆ ಹೋಗಬೇಕೆನ್ನುವ ದಾರಿಯಲ್ಲಿ ಡೋಹರ ಕಕ್ಕಯ್ಯ ಹಾಗೂ ಭೀಷ್ಟಾದೇವಿ ಐಕ್ಯವಾಗುತ್ತಾರೆ.
ಕಲ್ಯಾಣದಲ್ಲೊಮ್ಮೆ ಬಸವಣ್ಣನವರು ತಮ್ಮ ಮನೆಯಿಂದ ಬಿಜ್ಜಳನ ಅರಮನೆಗೆ ಕಾರ್ಯ ನಿಮಿತ್ತ ಹೋಗುವ ಸಂಧರ್ಭದಲ್ಲಿ ಡೋಹರ ಕಕ್ಕಯ್ಯನವರ ಧರ್ಮಪತ್ನಿ ಭೀಷ್ಟಾದೇವಿ ತಮ್ಮ ಚರ್ಮ ಹದ ಮಾಡುವ ಕಾಯಕ ಮುಗಿಸಿ ಜಂಗಮ ಸೇವೆಗೆ ಸಿದ್ಧವಾದರೂ ಯಾರೂ ಅಂದು ಅವರ ಮನೆಗೆ ಬಂದು ಪ್ರಸಾದ ಸ್ವೀಕರಿಸಿರಲಿಲ್ಲ. ಹಾದಿಯಲ್ಲಿ ಕುದುರೆಯನ್ನೇರಿ ಬರುವ ಬಸವಣ್ಣನವರನ್ನು ವಿಚಾರಿಸಿ, “ಅಣ್ಣ ತಮ್ಮ ಪ್ರಸಾದವಾಗಿದೆಯಾ?”ಎಂದು ಭೀಷ್ಟಾದೇವಿ ಕೇಳಿದರಂತೆ. ಅದಕ್ಕೆ ಬಸವಣ್ಣನವರು, “ತಾಯಿ ಇಲ್ಲ ನಾನು ಕಾರ್ಯ ನಿಮಿತ್ತ ಬಿಜ್ಜಳನ ಆಸ್ಥಾನಕ್ಕೆ ಹೋಗುತ್ತಿರುವೆನು ಎಂದರಂತೆ. ಆಗ ಭೀಷ್ಟಾದೇವಿಯು ಬಸವಣ್ಣನವರನ್ನೇ ಪ್ರಸಾದ ಸ್ವೀಕರಿಸಿ ಹೋಗಲು ಭಿನ್ನವಿಸಿದರಂತೆ. ಆಗ ಬಸವಣ್ಣನವರು ಕಾಯಕವು ಅತಿ ಮುಖ್ಯ ತಾಯಿ ಅದನ್ನು ಮುಗಿಸಿ ಹೋಗುವಾಗ ಬಂದು ಸ್ವೀಕರಿಸುವೆ ಎಂದು ವಿನಂತಿಸಿದರಂತೆ. ಅದಕ್ಕೆ ನಿರುತ್ಸಾಹದಿಂದ ಸಮ್ಮತಿ ಸೂಚಿಸಿದ ಭೀಷ್ಟಾದೇವಿಯು ನಂತರ ಕೆಲ ಕಾಲ ಕಾಯ್ದು ಬಂದ ಜಂಗಮನಿಗೆ ಪ್ರಸಾದ ವಿನಿಯೋಗ ಮಾಡಿ ತನ್ನ ಕಾಯಕ ಮಾಡಲು ಅಣಿಯಾಗುತ್ತಾಳೆ.
ಎಂದಿನಂತೆ ಬಸವಣ್ಣನವರು ತಮ್ಮ ಕಾಯಕ ಮುಗಿಸಿ ಮನೆಗೆ ಹೋಗುವ ಸಂಧರ್ಭದಲ್ಲಿ ಭೀಷ್ಟಾದೇವಿಯವರ ಆಮಂತ್ರಣದ ನೆನಪಾಗಿ ಕಕ್ಕಯ್ಯನವರ ಮನೆಗೆ ಬಂದು, “ತಾಯಿ ನಾನು ಬಸವಣ್ಣ ನಿಮ್ಮ ಮನೆಗೆ ಪ್ರಸಾದಕ್ಕೆ ಬಂದಿರುವೆನು”ಎಂದು ಬಾಗಿಲಿನ ಹೊರಗಿನಿಂದ ಕೂಗಿದರಂತೆ. ಬಾಗಿಲು ತೆಗೆಯಲು ಭೀಷ್ಟಾದೇವಿ ಬರಲಿಲ್ಲವಂತೆ, ಶರಣರ ಸಾತ್ವಿಕ ಕೋಪವನ್ನು ಅರಿತ ಬಸವಣ್ಣನವರು, ಬಾಗಿಲಿನಿಂದ ಹೊರಗೆ ಹೋಗುವ ಇರುವೆಯ ಸಾಲುಗಳಿಗೆ ಸ್ವಲ್ಪ ಸಕ್ಕರೆ ಹಾಕಿದರಂತೆ. ಆಗ ಇರುವೆಗಳು ಅನ್ನದ ಅಗಳುಗಳನ್ನು ಬಿಟ್ಟು ಸಿಹಿ ಸಕ್ಕರೆಗೆ ಮುತ್ತಿಕೊಂಡವಂತೆ. ಆಗ ಬಸವಣ್ಣನವರು ಶರಣರ ಮನ ನೋಯ ಬಾರದೆಂದು ಇರುವೆ ಬಿಟ್ಟ ಅನ್ನದ ಅಗಳುಗಳನ್ನು ಆಯ್ದು ಪ್ರಸಾದವಾಗಿ ಸ್ವೀಕರಿಸಿದರಂತೆ. ಬಸವಣ್ಣನವರ ವಿನಯ ಭಾವ ಹಾಗೂ ಭೀಷ್ಟಾದೇವಿಯ ಪ್ರಸಾದ ನಿಷ್ಠೆ ಎರಡೂ ಮೆಚ್ಚುವಂತದ್ದು. ಇದು ಒಂದು ದೃಷ್ಟಾಂತವಾದರೂ ಇಲ್ಲಿನ ಆಶಯಗಳು ಮುಖ್ಯವಾಗಿರುತ್ತವೆ.
ಇಂದು ಶರಣೆ ಭೀಷ್ಟಾದೇವಿಯವರ ಗುಡಿಯ ಮುಂದೆ ವರುಷಕ್ಕೊಮ್ಮೆ ಅಲ್ಲಿನ ಜನರು ಕುರಿ ಕೋಳಿ ಬಲಿ ಮಾಡುತ್ತಾರೆ.ಅದೊಂದು ಜಾಗೃತ ಸ್ಥಳ. ದೇವಿ ಭೀಷ್ಟಾದೇವಿ ಪಾರ್ವತಿಯ ಅವತಾರವೆಂದು ಜನ ನಂಬಿ ಶರಣ ಸಂಸ್ಕೃತಿಗೆ ತದ್ವಿರುದ್ಧವಾಗಿ ನಡೆದುಕೊಂಡರೂ ಸಹಿತ ಯಾರೊಬ್ಬರೂ ಇತ್ತ ಕಡೆಗೆ ಗಮನ ಹರಿಸದಿರುವುದು ನೋವಿನ ಸಂಗತಿಯಾಗಿದೆ.
ಮಡಿವಾಳ ಮಾಚಯ್ಯನವರ ಧರ್ಮಪತ್ನಿ ಕಾಳವ್ವ:
ಮಡಿವಾಳ ಮಾಚಿದೇವ ಅವರ ಧರ್ಮಪತ್ನಿ ಕಾಳವ್ವ ಎಂದು ಪುರಾಣ ಕಥೆಗಳು ಮತ್ತು ಜನಪದಿಗರ ತ್ರಿಪದಿಗಳಿಂದ ತಿಳಿದು ಬರುತ್ತದೆ. ಗದಗ ಜಿಲ್ಲೆಯ ಸಿಂಗಟಾಲೂರು ಮುಳಗುಂದ ಇಲ್ಲಿ ಮಡಿವಾಳ ಮಾಚಿದೇವ ಹಾಗೂ ಕಾಳವ್ವೆಯ ಮೂರ್ತಿಗಳು ಕಂಡು ಬರುತ್ತವೆ. ಮಡಿವಾಳ ಮಾಚಿದೇವರು ಮುರುಗೋಡ ಕಾಳಗದ ನಂತರ ಕಟಕೋಳ ಮಾರ್ಗವಾಗಿ ಬಂದು ಗೊಡಚಿಯಲ್ಲಿ ಐಕ್ಯವಾಗುತ್ತಾರೆ. ಅಲ್ಲಿಯೇ ಪಕ್ಕದಲ್ಲಿ ಕಾಳವ್ವನ ಗುಡಿಯಿದ್ದು ಅದು ಕಾಳವ್ವನ ಸಮಾಧಿ ಎಂದು ಊಹಿಸಬಹುದು.
ಮಾಚಿದೇವನವರು ಐಕ್ಯವಾದ ಹೊಸ್ತಿಲು ಹುಣ್ಣಿಮೆಯೆಂದು ಗೊಡಚಿ ವೀರಭದ್ರ ದೇವರ ಜಾತ್ರೆ ಜರಗುತ್ತದೆ.
ಅಕ್ಕನಾಗಮ್ಮ ವಿಶ್ರಮಿಸಿದ ಪುಣ್ಯಕ್ಷೇತ್ರ:
ಬಯಲುಹೊಂಗಲ ತಾಲ್ಲೂಕಿನ ಇನ್ನೊಂದು ಕ್ಷೇತ್ರ ನಾಗಲಾಪುರ. ಕಾದ್ರೊಳ್ಳಿ ಯುದ್ಧದ ನಂತರ ಅಕ್ಕನಾಗಮ್ಮ ನಾಗಲಾಪುರದಲ್ಲಿ ಒಂದು ಮರದ ಕೆಳಗೆ ತನ್ನ ಶರಣ ಸೈನಿಕರ ಜೊತೆ ಕೆಲ ಕಾಲ ತಂಗಿದ್ದರೆಂದು ಪ್ರತೀತಿ ಇದ್ದು ಅಲ್ಲಿ ಅಕ್ಕನಾಗಮ್ಮನ ಗುಡಿ ಇದೆ, ಅದನ್ನು ಜನರು ನಾಗಲಾಪುರವೆಂದು ಕರೆಯುತ್ತಾರೆ.
ಬಸವಣ್ಣನವರು ಬಯಲಾದ ನಂತರ ಅಕ್ಕನಾಗಮ್ಮನವರು ಅತ್ಯಂತ ಖಿನ್ನರಾಗಿದ್ದರೂ ತಮ್ಮ ಶರಣ ಚಳುವಳಿ ಹಾಳಾಗಬಾರದೆಂದು ಶರಣರನ್ನು ಹುರಿದುಂಬಿಸಿ, ವಚನಗಳ ಕಟ್ಟುಗಳನ್ನು ಶರಣರ ಜೊತೆ ಸಾಗಿಸಿ ಉಳಿಸಿಕೊಟ್ಟ ಮಹಾತಾಯಿ.
ಸತ್ಯಕ್ಕನ ಹೊಂಡ ಸವದತ್ತಿ:
ಶರಣರ ಒಂದು ತಂಡವು ಮುರುಗೋಡ ಕಟಕೋಳ ತೊರಗಲ್ಲು ಮುನವಳ್ಳಿ ಮಾರ್ಗವಾಗಿ ಸವದತ್ತಿಗೆ ಬಂದು ಕೆಲ ಕಾಲ ತಂಗಿದ್ದರು. ಅಲ್ಲಿ ಏಕನಾಥ ಮತ್ತು ಜೋಗನಾಥ ಎಂಬ ಶರಣರ ಜೊತೆಗೆ ಸತ್ಯಕ್ಕನವರು ಉಳಿದ ಶರಣರ ಸೇವೆಗೆ ಅಣಿಯಾಗುತ್ತಾರೆ.
ಈ ತಂಡದಲ್ಲಿ ಚೆನ್ನಬಸವಣ್ಣನವರು ಇದ್ದರೆಂದು ಇಲ್ಲಿ ಉಳವಿಯ ಚೆನ್ನಬಸವಣ್ಣನವರ ಗುಡಿಯಿದೆ. ಅದಕ್ಕೆ ಕೇವಲ ಎರಡು ಕಿಲೋಮೀಟರು ಅಂತರದಲ್ಲಿ ಜೋಗುಳಭಾವಿ ಸತ್ಯಕ್ಕನ ಹೊಂಡವಿದೆ. ಅಲ್ಲಿ ಶರಣರು ಉಳಿದ ಕಾರಣ ಅವರೆಲ್ಲರ ಸ್ನಾನ ಪೂಜೆಯ ವ್ಯವಸ್ಥೆಯನ್ನು ಸತ್ಯಕ್ಕ ಮಾಡುತ್ತಿದ್ದ ಕಾರಣ ಅದಕ್ಕೆ ಸತ್ಯಕ್ಕನ ಹೊಂಡವೆಂದು ಹೆಸರು ಬಂದಿರಬಹುದು.
ಮುರುಗೋಡದಲ್ಲಿ ಮತ್ತು ಸೊಗಲದಲ್ಲಿ ನೂರಾರು ಶರಣ ಶರಣೆಯರ ಸ್ಮಾರಕಗಳು, ಸಮಾಧಿಗಳು ಅನಾಥವಾಗಿ ನಿಂತಿವೆ.
ವಚನ ಅಧ್ಯಯನಕಾರರು ಶರಣರ ಆಶಯಗಳನ್ನು, ಅವರ ತ್ಯಾಗ ಬಲಿದಾನಗಳನ್ನು ಗಂಭೀರವಾಗಿ ಗಮನಿಸಿದಲ್ಲಿ, ಮೂಕಸಾಕ್ಷಿಗಳಂತೆ ನಿಂತ ಈ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ತಲೆಮಾರುಗಳಿಗೆ ಕಾಯ್ದಿರಿಸಬಹುದು.
Comments 2
Amar Patil
May 4, 2018ಅತ್ಯುತ್ತಮ ವಿಷಯ ಸಂಗ್ರಹಣೆ. ಒಂದಕ್ಕಿಂತ ಒಂದು ಲೇಖನಗಳು ಅದ್ಭುತ.
“ಬಯಲು” u r wonderful
Suryaprakash dh
Sep 14, 2024ಡಾ. ಶಶಿಕಾಂತ ಪಟ್ಡಣ ರವರೇ
ಈ ಲೇಖನ ಜನರ ಮನಸ್ಸಿನ ಅಚ್ಚಳಿಯದ ನೆನಪುಗಳು ಎಂದು ತಿಳಿಯುತ್ತದೆ. ಆದರೆ ಈ ಬಗ್ಗೆ ವಚನ ಉಲ್ಲೇಖಗಳಿವೆಯೇ..